“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಅದೇ ನಾ ಬರೆದ ಮೊದಲ ಕತೆಯೆನ್ನಬಹುದು.”
ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
ನೆನ್ನೆಯಷ್ಟೇ ಸಾಹಿತ್ಯ ಅಕಾಡೆಮಿ ಕೊಡುವ ೨೦೨೩ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದ್ದು, ವಿಜಯಶ್ರೀ ಹಾಲಾಡಿಯವರ “ಸೂರಕ್ಕಿ ಗೇಟ್” ಮಕ್ಕಳ ಕಾದಂಬರಿಗೆ “ಬಾಲ ಸಾಹಿತ್ಯ ಪುರಸ್ಕಾರ” ಹಾಗೂ ಹೊಸ ತಲೆಮಾರಿನ ಕಥೆಗಾರ ಮಂಜುನಾಯಕ ಚಳ್ಳೂರರ “ಫೂ” ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದೆ.
ಮಂಜುನಾಯಕ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಳ್ಳೂರಿನವರು. ಪಿಯೂಸಿ ಓದಿಗೆ ಧಾರವಾಡಕ್ಕೆ ತೆರಳಿದಾಗ, ಅಲ್ಲಿನ ಸಾಹಿತ್ಯ ಸಂಸ್ಕೃತಿಯ ವಾತಾವರಣ ಹಾಗೂ ಗ್ರಂಥಾಲಯಗಳ ಸಹವಾಸದಿಂದ ಸಾಹಿತ್ಯದ ಸೆಳವಿಗೆ ಬಿದ್ದವರು, ಸಣ್ಣಕಥೆಯನ್ನು ಬರೆಯಲು ತೊಡಗಿದರು.
“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಅದೇ ನಾ ಬರೆದ ಮೊದಲ ಕತೆಯೆನ್ನಬಹುದು. ಆದರೆ ತುಂಬ ಬಾಲಿಶವೂ ಸಿನಿಮಿಯ ರೀತಿಯಲ್ಲಿಯೂ ಇದ್ದ ಕತೆ ಅದಾಗಿತ್ತು. ಹಾಗಾಗಿ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಅನ್ನಿಸುತ್ತೆ.” ಎಂದು ತಾವು ಬರೆದ ಮೊದಲ ಕಥೆಯ ಕುರಿತು ಹಾಗೂ ಕಥಾ ಲೋಕಕ್ಕೆ ಪ್ರವೇಶ ನೀಡಿದ್ದರ ಕುರಿತು ಹೇಳುತ್ತಾರೆ.
ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದ ಮಂಜುನಾಯಕ, ಬದುಕು ಕಟ್ಟಿಕೊಳ್ಳುವ ಸಲುವಾಗಿ, ಊರು ಬಿಟ್ಟು ಬೆಂಗಳೂರಿಗೆ ಬಂದು ಕೆಲ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸುವಾಗಲೇ, ಇವರ ಬರಹದ ಶೈಲಿ ಅನೇಕ ಜನರನ್ನು ಸೆಳೆದಿತ್ತು. ಅದೇ ಕನ್ನಡದ ಮನೋರಂಜನಾ ಚಾನೆಲ್ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಬರೆಯಲು ಹಾಗೂ ಸಂಭಾಷಣಾಕಾರರಾಗಿ ಕೆಲಸ ಮಾಡಲು ಕಾರಣವಾಗಿ, ಸಧ್ಯ ಈಗ ಅದೇ ವಾಹಿನಿಯ ಹೊಸ ಧಾರಾವಾಹಿಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. “ಫೂ” ಕಥಾಸಂಕಲನ ಪ್ರಕಟಗೊಳ್ಳುವ ಮೊದಲೇ ಅದರ ಬಿಡಿ ಕಥೆಗಳಿಗೆ ಟೋಟೋ ಪುರಸ್ಕಾರ ಹಾಗೂ ಕಾಜಾಣ ಯುವ ಪುರಸ್ಕಾರವೂ ದೊರೆತಿತ್ತು.
ಉದ್ದತೋಳನ್ನು ಮೊಣಕೈವರೆಗೆ ಮಡಚಿಕೊಂಡು ಓದು, ಬರಹದ ಗುಂಗಿನಲ್ಲೇ ಇರುವ ತುಂಬು ಕನಸಿನ ಕಣ್ಣುಗಳ ಈ ಹುಡುಗ ಮಂಜುನಾಯಕ. ಅವರದ್ದೇ ಕಥೆಗಳ ಕುರಿತು ಮಾತನಾಡಲು ವೇದಿಕೆಗೆ ಕರೆದಾಗಲೂ ಸಂಕೋಚದ ಮುದ್ದೆಯಾಗಿ, ಮುಗ್ಧನಗೆ ನಗುತ್ತ “ನನಗೆ ಮಾತಾಡೋಕೆ ಅಷ್ಟು ಬರಲ್ಲ…” ಅನ್ನುತ್ತಲೇ, ಬದುಕನ್ನು ಆಳವಾಗಿ ನೋಡುವ ಅವರ ದೃಷ್ಟಿಕೋನದ ಕುರಿತು ಮುಗ್ಧವಾಗಿ ಮಾತನಾಡುತ್ತಾರೆ. ಅವರ ಕಥೆಗಳೂ ಅಷ್ಟೇ ಮುಗ್ಧತೆಯಿಂದ ಕೂಡಿದ ಪಾರದರ್ಶಕ ಕಥೆಗಳು.
“ನನಗೆ ಓದಿನ ರುಚಿ ನಮ್ಮೂರಿನ ಲೈಬ್ರರಿಯಿಂದಲೇ ತುಸು ಹತ್ತಿತ್ತಾದರೂ ಸಾಹಿತ್ಯದ ಕುರಿತ ಆಸಕ್ತಿ ಗಂಭೀರವಾಗಿದ್ದು ಧಾರವಾಡದ ಲೈಬ್ರರಿಗಳಿಂದ, ಅಲ್ಲಿನ ಸಾಂಸ್ಕೃತಿಕ ವಾತಾವರಣದಿಂದ. ಕೇಶವ ಮಳಗಿಯವರ “ವೆನ್ನೆಲ ದೊರಸಾನಿ”, ಖಾಸನೀಸರ “ತಬ್ಬಲಿಗಳು” – ಆ ಸಮಯದಲ್ಲಿ ನನ್ನನ್ನ ಬಹುವಾಗಿ ಕಾಡಿದ್ದ ಕತೆಗಳು. ಮರಾಠಿಯ ಜಿ. ಎ. ಕುಲಕರ್ಣಿ, ಕನ್ನಡದ ಲಂಕೇಶ್, ತೇಜಸ್ವಿ, ದೇವನೂರು ಮಹಾದೇವ, ಅಲನಹಳ್ಳಿ ಕೃಷ್ಣ, ಶಾಂತಿನಾಥ ದೇಸಾಯಿ, ಅಮರೇಶ ನುಗಡೋಣಿ, ಜಯಂತ ಕಾಯ್ಕಿಣಿ – ಇವರೆಲ್ಲರ ಕತೆಗಳೇ ಕತೆ ಬರೆಯಲಿಕ್ಕೆ ಪ್ರೇರಣೆಯಾಗಿದ್ದು ಎನಿಸುತ್ತದೆ.” ಎಂದು ತಮಗೆ ಕತೆ ಬರೆಯಲು ಸಿಕ್ಕ ಪ್ರೇರಣೆಯ ಕುರಿತು ಹೇಳುತ್ತಾರೆ.
ಸ್ವಭಾವತಃ ಸಂಕೋಚದವರಾದ ಮಂಜುನಾಯಕರ ಜೊತೆ ಮಾತಿಗೆ ತೊಡಗಿಕೊಂಡರೆ ಸದಾ ಹೊಳೆಯುವ ಅವರ ಕಣ್ಣುಗಳಲ್ಲಿ ಕಥೆಗಳೂ, ಕನಸುಗಳೂ ಎರಡೂ ತುಂಬಿವೆ ಎನ್ನಿಸುತ್ತದೆ. ಲೋಕದ ಜಂಜಡಗಳ ಕುರಿತು ದೂರದೇ, ಇದ್ದದ್ದನ್ನು ಇದ್ದಹಾಗೇ ಸ್ವೀಕರಿಸುವ ಮಂಜುನಾಯಕ ಸಧ್ಯ ಧಾರಾವಾಹಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
(ಕೃತಿ: ಫೂ (ಕಥಾಸಂಕಲನ), ಪ್ರಕಾಶಕರು: ಅಹರ್ನಿಶಿ ಪ್ರಕಾಶನ (94491 74662), ಬೆಲೆ: 80/-)
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.
ಬರವಣಿಗೆ ಬಹಳ ಚೆನ್ನಾಗಿದೆ. ಯುವ ಪುರಸ್ಕಾರಕ್ಕೆ ಪಾತ್ರರಾದ ಮಂಜು ನಾಯಕ ಅವರಿಗೆ ಅಭಿನಂದನೆಗಳು. ಅವರನ್ನು ಆತ್ಮೀಯವಾಗಿ ಪರಿಚಯಿಸಿಕೊಟ್ಟ ರೂಪಶ್ರೀ ಮೇಡಂ ಅವರಿಗೂ ಅಭಿನಂದನೆಗಳು.