ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಆಸ್ಟ್ರೇಲಿಯದ ʻನಿತ್ರಮ್ʼ ಸಿನಿಮಾದ ವಿಶ್ಲೇಷಣೆ

ಆ ಭೀಕರ ಘಟನೆ ನಡೆದದ್ದು 1996ರಲ್ಲಿ. ಆಸ್ರೇಲಿಯಾದ ಪೋಸ್ಟ್‌ ಆರ್ಥರ್ ತಾಸ್ಮೇನಿಯ ದ್ವೀಪದಲ್ಲಿ ಮೂವತ್ತೈದು ಜನರು ಹತ್ಯೆಗೀಡಾಗಿದರು ಮತ್ತು ಇಪ್ಪತ್ಮೂರು ಜನರು ತೀವ್ರವಾಗಿ ಗಾಯಗೊಂಡರು. ಅದು ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಆ ಹೀನ ಕೃತ್ಯವನ್ನು ಪರಿಣಾಮದ ಬಗ್ಗೆ ಕಿಂಚಿತ್‌ ಯೋಚನೆಯಿಲ್ಲದೆ ಮಾಡಿದವನು ಮಾರ್ಟಿನ್‌ ಬ್ರಯಂಟ್. ಹಿಂದೆಂದೂ ಕಾಣದ ಘೋರ ಕೃತ್ಯವನ್ನು ಮಾಡಿದ್ದಕ್ಕಾಗಿ ದೇಶದ ಕಾನೂನಿನಂತೆ ಮೂವತ್ತೈದು ಜೀವ ಪರ್ಯಂತ ಶಿಕ್ಷೆಗೆ ಗುರಿಯಾದ. ಅವನು ಇನ್ನೂ ಶಿಕ್ಷೆ ಅನುಭವಿಸುತ್ತಿರುವನಾದರೂ ಅವನ ಕೃತ್ಯವನ್ನು ಆಧರಿಸಿ 2021ರಲ್ಲಿ ಬರಹಗಾರ ಶಾನ್‌ ಗ್ರಾಂಟ್‌ನ ಸಹಕಾರದೊಂದಿಗೆ ಜಸ್ಟಿನ್‌ ಕುರ್ಜೆ಼ಲ್ ನಿರ್ದೇಶನ ಚಿತ್ರ ಅಪಾರ ಯಶಸ್ಸು, ಕೀರ್ತಿ ಗಳಿಸಿತು. ಆ ವೇಳೆಗಾಗಲೇ 2011ರ ತನ್ನ ಮೊದಲ ಚಿತ್ರ ʻಸ್ನೋ ಟೌನ್‌ʼ ನಲ್ಲಿ ಜನರು ಹತ್ಯೆಗೆ ಒಳಗಾದದ್ದನ್ನು ಕುರಿತ ಚಿತ್ರವನ್ನು ನಿರ್ಮಿಸಿದ್ದ. ಹೀಗಿದ್ದರೂ ಎರಡು ಚಿತ್ರಗಳ ಆಶಯದಲ್ಲಿ ಅಗಾಧ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.

(ಜಸ್ಟಿನ್‌ ಕುರ್ಜಿ಼ಲ್‌)

ಆ ಚಿತ್ರದಲ್ಲಿ ದೇಶದಲ್ಲಿ ಪ್ರಚಲಿತವಿರುವ ರೈಫಲ್‌ ಕಾನೂನಿಗೆ ಸಂಬಂಧಿಸಿದ ನೈತಿಕ ವಿಷಯದ ವಿಶ್ಲೇಷಣೆ ಇದ್ದರೆ ಪ್ರಸ್ತುತ ಚಿತ್ರದಲ್ಲಿ ಅಂತಹ ಕೃತ್ಯಗೈದ ವ್ಯಕ್ತಿಯ ಮನೋನೆಲೆಯ ಬಗ್ಗೆ ಅತ್ಯಂತ ತೀಕ್ಷ ದೃಷ್ಟಿಯಿಂದ ವಿವೇಚಿಸಿ ನಿರೂಪಣೆ ಮಾಡಲಾಗಿದೆ. ಕೇವಲ ಕೊಲೆ ಮತ್ತು ಹಿಂಸೆಯ ವಿಷಯಗಳನ್ನು ವಿಜೃಂಭಿಸುವ, ರೋಚಕ ಹಾಗೂ ಮೈ ನವಿರೇಳಿಸುವ ಅಂಶಗಳನ್ನು ದೂರ ಮಾಡುವ ಅಭಿಲಾಷೆ ಹೊಂದಿರುವುದು ಪ್ರಧಾನವಾಗಿ ಕಾಣುತ್ತದೆ. ಚಿತ್ರದ ಕಥನದ ಚೌಕಟ್ಟಿಗೆ ಕೊಲೆಗಾರ ಮಾರ್ಟಿನ್‌ ಬ್ರಯಂಟ್‌ನ ಜೀವನವನ್ನೇ ನಿರ್ದೇಶಕ ಆಧಾರವಾಗಿರಿಸಿಕೊಂಡಿದ್ದಾನೆ. ಆದರೆ ಚಿತ್ರ ಅವನ ಜೀವನ ಚರಿತ್ರೆಯಲ್ಲ. ಚಿತ್ರದಲ್ಲಿ ವಿಲಕ್ಷಣ ಮನಸ್ಸಿನ ಕೊಲೆಗಾರನಿಗೆ ಎಷ್ಟು ಸಲೀಸಾಗಿ ರೈಫಲ್ಲುಗಳು ದೊರೆಯುತ್ತದೆ ಎನ್ನುವುದನ್ನು ಎತ್ತಿ ತೋರಿಸಲಾಗಿದೆ. ಈ ಚಿತ್ರಕ್ಕೆ ಕಾನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮ ನಿರ್ದೇಶನವಲ್ಲದೆ ಚಿತ್ರದ ನಾಯಕನಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

1974ರಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಗಾಲರ್‌ನಲ್ಲಿ ಜನಿಸಿದ ಜಸ್ಟಿನ್‌ ಕುರ್ಜಿ಼ಲ್‌ ಸಿಡ್ನಿಯ ನ್ಯಾಷನಲ್‌ ಡ್ರಮ್ಯಾಟಿಕ್‌ ಸ್ಕೂಲಿನಲ್ಲಿ ಅಭ್ಯಾಸ ಮಾಡಿದ್ದಾನೆ. ಅವನ ಮೊದಲ ಚಿತ್ರ ʻದ ಸ್ನೋ ಟೌನ್‌ ಮರ್ಡರರ್ಸ್‌ʼ ಅನೇಕ ಚಿತ್ರೋತ್ಸವಗಳಲ್ಲಿ ಖ್ಯಾತಿ ಗಳಿಸಿತು. ಅಲ್ಲದೆ ಆಸ್ಟ್ರೇಲಿಯನ್‌ ಅಕಾಡೆಮಿ ಆಫ್‌ ಸಿನಿಮಾ ಮತ್ತು ಟೆಲಿವಿಷನ್‌ ಆರ್ಟ್ಸ್ ಪ್ರಶಸ್ತಿಯಲ್ಲದೆ ಮತ್ತಿತರ ಚಿತ್ರೋತ್ಸವಗಳಲ್ಲಿಯೂ ಪ್ರಶಸ್ತಿ ಗಳಿಸಿತು. ಅವನ 2013ರ ʻದ ಟರ್ನಿಂಗ್‌ʼ ಚಿತ್ರವೂ ಆಸ್ಟ್ರೇಲಿಯಾದ ಇದೇ ಬಗೆಯ ಪ್ರಶಸ್ತಿಗೆ ಭಾಜನವಾಯಿತು. 2015ರಲ್ಲಿ ಶೇಕ್ಸ್‌ ಪಿಯರ್‌ನ ʻಮ್ಯಾಕ್ಬೆತ್‌ʼ ಆಧರಿಸಿದ ಅದೇ ಹೆಸರಿನ ಚಿತ್ರದಲ್ಲಿ ಖ್ಯಾತ ನಟರಾದ ಮೈಖೇಲ್‌ ಫಾಸ್‌ಬೈಂದರ್‌ ಮತ್ತು ಮರ್ಲಾನ್‌ ಕಾಟಿಲಾರ್ಡ್‌ ಅಭಿನಯಿಸಿದ್ದಾರೆ ಮತ್ತು ಚಿತ್ರ ಅಪಾರ ಮನ್ನಣೆಗೆ ಪಾತ್ರವಾಯಿತು. ಅವನ ಚಿತ್ರಗಳಿಗೆ ಅಡಾಮ್‌ ಆರ್ಕಪಾ ಛಾಯಾಗ್ರಾಹಕನಾಗಿರುವುದು ಕಂಡುಬರುತ್ತದೆ.

ಚಿತ್ರದ ಶಿರ್ಷಿಕೆಯಲ್ಲಿಯೂ ಸೋಜಿಗದ ಅಂಶವಿದೆ. ಪ್ರಧಾನ ಪಾತ್ರ ಮಾರ್ಟಿನ್ ಎನ್ನುವುದನ್ನು ಹಿಂದು-ಮುಂದು ಮಾಡಿದರೆ ನಿತ್ರಮ್‌ ಎಂದಾಗುವುದನ್ನು ಗಮನಿಸಬಹುದು. ಹೀಗೆ ಮಾಡಿರುವುದೂ ಕೂಡ ಮಾರ್ಟಿನ್ ಸಾಮಾನ್ಯ ಸ್ವರೂಪದವನಲ್ಲದೆ ಮೇಲು ಕೆಳಗಾದ ಮನೋನೆಲೆಯವನು ಎನ್ನುವುದನ್ನು ಸೂಚಿಸುತ್ತದೆ. ಇದಾವುದನ್ನೂ ಅರಿಯದ ಅವನ ತಂದೆ ಜೋಡಿ ಡೇವಿಸ್ ಮತ್ತು ತಾಯಿ ಅಂತೋನಿ ಫಿಲ್ಮ್ ಪ್ಲಗೀಲ ಅವನು ಸಾಮಾನ್ಯದವನೆಂದು ಬಾಲ್ಯದಿಂದಲೂ ಪರಿಭ್ರಮಿಸುತ್ತಾರೆ. ಬಾಲ್ಯದಲ್ಲಿ ಅವನು ನಾಲ್ಕೈದು ವರ್ಷದವನಾಗಿದ್ದಾಗ ಪಟಾಕಿ ಮದ್ದುಗಳಿಂದ ಉಂಟಾದ ಗಾಯಗಳಿಗೆ ಔಷಧಿ ಹೆಚ್ಚಿಸಿಕೊಳ್ಳಲು ಆಸ್ಪತ್ರೆಯಲ್ಲಿದ್ದಾಗ ಮಾರ್ಟಿನ್‌ನ ತಾಯಿ ಇನ್ನಾದರೂ ಪಟಾಕಿ, ಸಿಡಿಮದ್ದು ಮುಂತಾದವುಗಳಿಂದ ದೂರವಿರು ಎಂದು ಹೇಳಿದರೆ ಕೇಳುವುದಿಲ್ಲ. ಅಂಥವುಗಳೊಂದಿಗೆ ಆಟವಾಡಿದ್ದಕ್ಕಾಗಿ ಅಲ್ಲಲ್ಲಿ ಸುಟ್ಟುಕೊಂಡಿದೆ ಎನ್ನುವುದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಅದನ್ನು ತಾನು ಬಿಡುವುದಿಲ್ಲವೆಂದು ಕೊಂಚವೂ ಗಾಬರಿ ಇಲ್ಲದ ಮುಖ ಚಹರೆಯಿಂದ ಹೇಳುತ್ತಾನೆ. ಅದಾದ ನಂತರ ಮಾರ್ಟಿನ್ ನಮಗೆ ಕಾಣುವುದು ಯುವಕನಾಗಿ. ಎತ್ತರದ ಮೈಕೈ ತುಂಬಿಕೊಂಡ, ದೊಡ್ಡ ಕಣ್ಣುಗಳ, ಮುಖದ ಅಕ್ಕ-ಪಕ್ಕ ಇಳಿಬಿದ್ದ ಅರೆಕೆಂಚು ಬಣ್ಣದ ತಲೆಗೂದಲಿರುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವನು ಸಂಜೆಗತ್ತಲಿನಲ್ಲಿ ಮನೆಯಿಂದಾಚೆ ನಿಂತು ಮೈಮೇಲೆ ಪರಿವೇ ಇಲ್ಲದ ಹಾಗೆ ಪಟಾಕಿ, ಫ್ಲವರ್ ಪಾಟ್‌ ಮುಂತಾದವುಗಳನ್ನು ಸಿಡಿಸುವ ಕ್ರಿಯೆಯಲ್ಲಿ ತೊಡಗಿರುತ್ತಾನೆ. ಅಲ್ಲದೆ ತನ್ನ ಬಳಿ ಇರುವ ಪಟಾಕಿ ಮುಂತಾದವನ್ನು ಬೇರೆ ಹುಡುಗರಿಗೆ ಕೊಡುತ್ತಾನೆ. ಮಾರ್ಟಿನ್ ಮಾಡುತ್ತಿರುವುದನ್ನು ಬಿಟ್ಟು ಬರಲು ಅವನ ತಂದೆ ಬಹಳಷ್ಟು ಶ್ರಮಿಸುತ್ತಾರೆ. ಕೊನೆಗೂ ಬಲವಂತವಾಗಿ ಅವನನ್ನು ಎಳೆದು ಕಾರಿನಲ್ಲಿ ಕುಳಿತಿರುವಂತೆ ಹೇಳಿದರೆ ಅವನಿಗೆ ಅಳತೆ ಮೀರಿ ರೋಷ ಉಂಟಾಗುತ್ತದೆ. ಕೇಳಿಸಿಕೊಂಡವರ ಕಿವಿ ನುಜ್ಜಾಗುವಂತೆ ಹಾರ್ನ್‌ ಮಾಡಲು ತೊಡಗುತ್ತಾನೆ. ಅವನನ್ನು ತಹಬಂದಿಗೆ ತರಲು ಡೇವಿಸ್ ತುಂಬ ಕಷ್ಟ ಪಡಬೇಕಾಗುತ್ತದೆ. ಈ ಘಟನೆಯಿಂದ ಪ್ರಾರಂಭದಲ್ಲಿಯೇ ಯುವಕ ಮಾರ್ಟಿನ್‌ನ ಮನೋನೆಲೆಯ ಪರಿಚಯ ನಮಗಾಗುತ್ತದೆ.

ಅವನ ತಾಯಿಗೆ ಮಗನ ಮೇಲೆ ಇನ್ನಿಲ್ಲದಷ್ಟು ಮಮತೆ. ಹಾಗೆಯೇ ಅವನ ಬಗ್ಗೆ ಕಾಳಜಿ ಕೂಡ. ಯಾವುದೇ ಕಾರಣದಿಂದ ಅವನ ಮನಸ್ಸಿಗೆ ಘಾಸಿಯಾಗದಂತೆ ಹಾಗೆ ನೋಡಿಕೊಳ್ಳಬೇಕೆಂಬ ಮನಸ್ಸು ಅವಳದು. ಮಗ ಎಗ್ಗಿಲ್ಲದೆ ತೊಡಗಿಕೊಳ್ಳುವ ಅಪಾಯದ ಕ್ರಿಯೆಗಳನ್ನು ಕಂಡು ಅವಳಿಗೆ ಆತಂಕ. ಸಾವಧಾನದ ಅವಳ ಮನೋ ಇಂಗಿತವನ್ನು ಪರಿಣಾಮಕಾರಿಯಾಗಿ ಅತಿ ಸಮೀಪ ಚಿತ್ರಿಕೆಗಳಲ್ಲಿ ಕಾಣುತ್ತೇವೆ. ಅವಳಿಗೆ ವಿರುದ್ಧವಾಗಿ ತಂದೆ ಮಾರ್ಟಿನ್ ಆವೇಗದಿಂದ ರೋಷ, ಅಬ್ಬರದಿಂದ ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಸದ್ಯ ಸಾಮಾನ್ಯ ಮನೆಯಲ್ಲಿ ವಾಸಿಸುತ್ತಿರುವ ಮಾರ್ಟಿ‌ನ್‌ನ ತಂದೆ ಅಲ್ಲೊಂದು ವಿಸ್ತಾರ ಪ್ರದೇಶದಲ್ಲಿರುವ ದೊಡ್ಡ ಮನೆಯನ್ನು ಖರೀದಿಸಲು ಬ್ಯಾಂಕಿನವರೊಂದಿಗೆ ವ್ಯವಹರಿಸುವುದರಲ್ಲಿ ತೊಡಗಿರುತ್ತಾನೆ. ಇದು ಮಾರ್ಟಿನ್‌ ಬೆಳೆಯುತ್ತಿರುವ ಸಾಮಾನ್ಯ ಸಂಸಾರದ ಹಿನ್ನೆಲೆಯನ್ನು ತೆರೆದಿಡುತ್ತದೆ.

ಇನ್ನೊಬ್ಬರ ಗಮನ ತನ್ನ ಕಡೆ ಸೆಳೆಯುವುದೆಂದರೆ ಹಿಂಸಾತ್ಮಕ ಕ್ರಿಯೆಗಳಲ್ಲಿ ತೊಡಗುವುದರಿಂದ ಮಾತ್ರ ಎಂದು ಮಾರ್ಟಿನ್‌ ಭಾವಿಸಿರುತ್ತಾನೆ. ಇದು ವ್ಯಕ್ತವಾಗುವ ಕೆಲವು ಕ್ರಿಯೆಗಳನ್ನು ಕಾಣುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಅವನು ಬೇಸರದ ಮನಸ್ಸಿನಿಂದ ಎಚ್ಚರವಾಗಿಯೇ ಮಲಗಿದ್ದ ತಂದೆಯನ್ನು ಎಬ್ಬಿಸುವುದಕ್ಕೆ ಹಿಂದು ಮುಂದು ನೋಡದೆ ಮುಖ ಮೂತಿಗೆ ಹೊಡೆಯುವುದು ನಿಜಕ್ಕೂ ವಿಲಕ್ಷಣವೆನಿಸುತ್ತದೆ. ಆದರೆ ಇಂತಹ ಕ್ರಿಯೆಗಳಲ್ಲಿ ತೊಡಗಲು ಅವನ ತಂದೆ ತಾಯಿಯರು ಕಾರಣವಾಗುವುದಿಲ್ಲ. ಅವರು ಪ್ರೇರಣೆ ಒದಗಿಸುವುದಿಲ್ಲ. ಅದು ಅವನ ಮನೋ ಚೌಕಟ್ಟಿನ ರೀತಿ. ಹಿಂಸಿಸುವುದನ್ನು ಅತ್ಯಂತ ಸಹಜ ನಡವಳಿಕೆಯೆಂದು ಭಾವಿಸಿರುತ್ತಾನೆ. ಸ್ವಲ್ಪವೂ ಹಿಂಜರಿಕೆ ಇರುವುದಿಲ್ಲ. ಹಾಗಾಗಿ ಅದರ ಪರಿಣಾಮಗಳ ಅರಿವು ಮಾರ್ಟಿನ್‌ಗೆ ಆಗುವ ಸಂಭವವೇ ಇರುವುದಿಲ್ಲ.

ಕೊನೆಗೂ ಬಲವಂತವಾಗಿ ಅವನನ್ನು ಎಳೆದು ಕಾರಿನಲ್ಲಿ ಕುಳಿತಿರುವಂತೆ ಹೇಳಿದರೆ ಅವನಿಗೆ ಅಳತೆ ಮೀರಿ ರೋಷ ಉಂಟಾಗುತ್ತದೆ. ಕೇಳಿಸಿಕೊಂಡವರ ಕಿವಿ ನುಜ್ಜಾಗುವಂತೆ ಹಾರ್ನ್‌ ಮಾಡಲು ತೊಡಗುತ್ತಾನೆ. ಅವನನ್ನು ತಹಬಂದಿಗೆ ತರಲು ಡೇವಿಸ್ ತುಂಬ ಕಷ್ಟ ಪಡಬೇಕಾಗುತ್ತದೆ. ಈ ಘಟನೆಯಿಂದ ಪ್ರಾರಂಭದಲ್ಲಿಯೇ ಯುವಕ ಮಾರ್ಟಿನ್‌ನ ಮನೋನೆಲೆಯ ಪರಿಚಯ ನಮಗಾಗುತ್ತದೆ.

ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.

ಮಾರ್ಟಿನ್‌ನ ನಡತೆಗಳನ್ನು ಬಲ್ಲ ಅವನ ತಾಯಿ ಮಗನಿಗೆ ಏನಾದರೂ ಶುಶ್ರೂಷಣೆ ಒದಗಬಹುದೆಂದು ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗಿರುತ್ತಾಳೆ. ಆದರೆ ಮಾರ್ಟಿನ್‌ಗೆ ಅದರ ಬಗ್ಗೆ ಉಪೇಕ್ಷೆ. ತನಗಿದು ಸಂಬಂಧವಿಲ್ಲವೆಂಬಂತೆ ಸೋಫಾದಲ್ಲಿ ಕುಳಿತು ಅಷ್ಟುದ್ದ ಕಾಲು ಚಾಚಿಕೊಂಡು ಎತ್ತಲೋ ನೋಡುತ್ತಿರುತ್ತಾನೆ. ಕುತೂಹಲವೆಂದರೆ ಡಾಕ್ಟರ್ ಮಾರ್ಟಿನ್ ಜೊತೆಗೆ ಯಾವ ಸಂಭಾಷಣೆಯನ್ನು ಮಾಡದೆ ಅವನ ತಾಯಿಯೊಂದಿಗೆ ಮಾತ್ರ ಮಾತನಾಡುತ್ತಿರುತ್ತಾನೆ. ಮಾರ್ಟಿನ್ ಕಡೆ ಅವನ ದೃಷ್ಟಿ ಒಂದೆರಡು ಬಾರಿ ಹೋದರೂ ಅವನ ವಿಲಕ್ಷಣ ವರ್ತನೆಯ ಬಗ್ಗೆ ಏನೂ ಹೇಳಿದೆ ಅವನು ಸರಿಹೋಗುವ ಸಾಧ್ಯತೆಗಳ ಬಗ್ಗೆ ಮಾತನಾಡುತ್ತಾನೆ. ಮಾರ್ಟಿನ್ ಖಿನ್ನತೆಗೆ ಒಳಗಾಗಿದ್ದಾನೆಂದು ತಿಳಿಸಿ ಅದರಿಂದ ಗುಣ ಹೊಂದುವ ಔಷಧಗಳನ್ನು ತೆಗೆದುಕೊಳ್ಳಲು ಹೇಳುತ್ತಾನೆ.

ಚಿತ್ರದಲ್ಲಿ ಮಾರ್ಟಿನ್‌ ಏನಾದರೂ ಕೆಲಸ ಮಾಡಬೇಕೆಂದು ಮನೆಗಳ ಮುಂದಿನನ ಲಾನ್‌ನಲ್ಲಿ ಬೆಳೆದಿರುವ ಹುಲ್ಲನ್ನು ಮೆಷಿನ್‌ ಉಪಯೋಗಿಸಿ ಕತ್ತರಿಸಿ ಸಮನಾಗಿಸುವ ಕೆಲಸವನ್ನು ಕೈಗೊಳ್ಳುತ್ತಾನೆ. ಹೀಗೆ ಮಾಡುವಾಗಲೂ ಅವನದೇ ಹಠ. ಮನೆಯಯವರ ಜೊತೆ ವರ್ತಿಸುವುದೂ ಗಡುಸಾಗಿಯೇ. ಹಾಗಾಗಿಯೇ ಸುಲಭವಾಗಿ ಅವನಿಗೆ ಕೆಲಸ ಸಿಗುವುದಿಲ್ಲ.

ತನ್ನ ಪ್ರಯತ್ನ ಮುಂದುವರಿಸಿದ ಅವನಿಗೆ ದೊಡ್ಡ ಮನೆಯ ಒಡತಿ ಹೆಲೆನ್‌ಳ ಭೇಟಿಯಾಗುತ್ತದೆ. ಅನೇಕ ಅನುಕೂಲಗಳಿದ್ದರೂ, ಅಗಾಧ ಪ್ರಮಾಣದ ಆಸ್ತಿ ಮತ್ತು ಹಣ ಇದ್ದರೂ ಅವಳದು ಒಂಟಿ ಬಾಳು. ಅವಳ ಗಂಡ ಸತ್ತು ಎಷ್ಟೋ ವರ್ಷಗಳಾಗಿರುತ್ತದೆ. ಈಗವಳು ಮಾರ್ಟಿನ್‌ನಂತೆಯೇ ಒಂಟಿತನದ ಬೇಗೆಯಲ್ಲಿರುವವಳು.. ಅವಳಿಗೆ ಮನುಷ್ಯರ ಸಂಬಂಧಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಸಾಮಾನ್ಯ ಎತ್ತರದ ನಡು ವಯಸ್ಸಿನ, ಸಾವಧಾನ ಚಿತ್ತವಿರದ ಅವಸರ ಸ್ವಭಾವದ, ಮನುಷ್ಯರ ಸಂಪರ್ಕ, ಸಹವಾಸವಿರದೆ ಸೊರಗಿದವಳಂತೆ ಕಾಣುತ್ತಾಳೆ. ಅವಳ ಬಳಿ ಇರುವುದೆಲ್ಲ ಹತ್ತಾರು ನಾಯಿಗಳು ಮತ್ತು ಬೆಕ್ಕು. ಅವುಗಳೊಂದಿಗೆ ಅವಳ ಸಧ್ಯದ ಜೀವನ ಪಯಣ. ಹಲವೊಂದು ಬಗೆಯಲ್ಲಿ ಹೆಲೆನ್‌ ಮಾರ್ಟಿನ್‌ನ ಇನ್ನೊಂದು ರೂಪದಂತೆ, ಮನುಷ್ಯ ಸಂಪರ್ಕಕ್ಕೆ ಹಪಹಪಿಸುವ ವ್ಯಕ್ತಿಯಂತೆ ತೋರುತ್ತಾಳೆ. ಹಾಗಾಗಿ ಅವಳು ಮಾರ್ಟಿನ್‌ನಲ್ಲಿ ಆಸಕ್ತಿ ವಹಿಸುತ್ತಾಳೆ. ಅವನು ತೊಡಗಿಕೊಳ್ಳುವ ಕೆಲಸಕ್ಕೆ ಸಂಬಂಧಿಸಿದ ಹಾಗೆ ಸಮಾಧಾನದಿಂದ ವರ್ತಿಸುತ್ತಾಳೆ. ಆದರೂ ಆಂತರಿಕವಾಗಿ ಅವರಿಬ್ಬರೂ ತಮ್ಮದೇ ವೈಯಕ್ತಿಕ ವಿಲಕ್ಷಣ ವರ್ತುಲದಲ್ಲಿ ಸುತ್ತುತಿರುತ್ತಾರೆ.

ಮಾರ್ಟಿನ್‌ನ ತಂದೆ ತಾಯಿಯರಿಗೆ ಮಾರ್ಟಿನ್‌ ಹೆಲೆನ್ನಳ ಸಂಪರ್ಕದಲ್ಲಿರುವುದು ಕೆಲವು ದಿನಗಳವರೆಗೆ ತಿಳಿದಿರುವುದಿಲ್ಲ. ಮಾರ್ಟಿನ್‌ ಕೂಡ ತಿಳಿಸಿರುವುದಿಲ್ಲ. ಅವನ ಓಡಾಟ ಮತ್ತು ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡು ಅವನ ತಾಯಿ ಪ್ರಶ್ನಿಸುತ್ತಾಳೆ. ಅವನು ಹೆಲೆನ್‌ಳ ಬಗ್ಗೆ ತಿಳಿಸುವುದಲ್ಲದೆ ಅವಳ ಜೊತೆಗೇ ಇರುವುದಾಗಿ ಹೇಳಿ ಹೊರಡುತ್ತಾನೆ. ಅವನ ತಂದೆ ತಾಯಿಯರು ಅವಳನ್ನು ಭೇಟಿ ಮಾಡಲು ಏರ್ಪಾಡು ಮಾಡಿರುತ್ತಾನೆ. ಅವರಿಬ್ಬರ ಒಡನಾಟದ ಬಗ್ಗೆ ಬಹಳಷ್ಟು ಕುತೂಹಲವಿರುವ ಅವನ ತಾಯಿ ಹೆಲೆನ್‌ಳನ್ನು ನೇರವಾಗಿ ಕೇಳುತ್ತಾಳೆ. ಮಾರ್ಟಿನ್ನನ್ನು ಅವಳು ಮಗನ ಹಾಗೆ ಪರಿಭಾವಿಸಿರುವುದೋ ಅಥವ ಗಂಡನ ಹಾಗೆಯೋ ಎಂದು. ಹೆಲೆನ್ನಳ ನೋಟವೇ ಮಗನಂತೆ ಎನ್ನುವುದನ್ನು ಸೂಚಿಸುತ್ತದೆ. ತಮ್ಮ ಜೊತೆಗಲ್ಲದೆ ಬೇರೆಲ್ಲೂ ಅವನಿಗೆ ಇರಲು ಸಾಧ್ಯವಿಲ್ಲ ಎಂದು ನಂಬಿದ್ದರೂ ಬೇರೆ ಮಾರ್ಗವಿರದೆ ಹೆತ್ತವರು ಸುಮ್ಮನಾಗುತ್ತಾರೆ. ಮಾರ್ಟಿನ್‌ನ ವಿಲಕ್ಷಣ ಅಪೇಕ್ಷೆಗೆ ಅವನ ತಾಯಿ ನಂಬದೆ ಅಚ್ಚರಿ ವ್ಯಕ್ತಪಡಿಸುತ್ತಾಳೆ. ಅವಳ ಆಂತರ್ಯದ ಭಾವದ ಮುಖಮುದ್ರೆಯನ್ನು ಅತಿ ಸಮೀಪ ಚಿತ್ರಿಕೆಯಲ್ಲಿ ನಿರೂಪಿಸಲಾಗಿದೆ.

ಹೆಲೆನ್‌ ಮಾರ್ಟಿನ್‌ಗೆ ಅವಳ ಗಂಡನ ಓವರ್‌ ಕೋಟ್‌ ಕೊಡುತ್ತಾಳೆ. ಅವನು ತೊಟ್ಟಾಗ ಅವಳಿಗೆ ಹಿಗ್ಗು. ಜೊತೆಗೆ ಅವನಿಗೆ ಹೆಚ್ಚು ಬಾಳುವ ಕಾರು ಕೊಡಿಸುತ್ತಾಳೆ. ಇದಕ್ಕೆಲ್ಲ ತಾನು ಯಾವ ರೀತಿಯಲ್ಲಿ ಅರ್ಹ ಎನ್ನುವುದರ ಕಿಂಚಿತ್ ಸಂಕೋಚವಿಲ್ಲದೆ ಮತ್ತು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳದೆ ನಿರ್ಭಾವದಿಂದ ಸ್ವೀಕರಿಸುತ್ತಾನೆ. ತನ್ನ ಬಳಿ ಅಗಾಧ ಪ್ರಮಾಣದ ಆಸ್ತಿ ಮತ್ತು ಹೆಚ್ಚು ಹಣವಿರುವುದನ್ನೂ ತಿಳಿಸುತ್ತಾಳೆ. ಎಲ್ಲವನ್ನೂ ಕೇಳಿಸಿಕೊಳ್ಳುವ ಅವನು ಚಕಿತಗೊಳ್ಳುವುದಾಗಲಿ ಅಥವ ಇನ್ನಿತರ ರೀತಿಯ ಪ್ರತಿಕ್ರಿಯೆಯನ್ನಾಗಲಿ ವ್ಯಕ್ತಪಡಿಸುವುದಿಲ್ಲ. ಆದರೆ ಪ್ರಾರಂಭದಲ್ಲಿಯೇ ಅವನು ಏರ್‌ ಗನ್‌ ಹಿಡಿಯುವುದನ್ನು ಆಕ್ಷೇಪಿಸಿ ರೈಫಲ್ ಇತ್ಯಾದಿಗಳು ತನಗಿಷ್ಟವಿಲ್ಲವೆಂದು ತಾಕೀತು ಮಾಡಿರುತ್ತಾಳೆ.

ಮಾರ್ಟಿನ್‌ ಹೆಲೆನ್‌ಳ ಜೊತೆ ಮೊದಲಿಗಿಂತ ಭಿನ್ನ ವಾತಾವರಣದಲ್ಲಿ ಇರುವಂತೆ ಕಂಡರೂ ಅವನು ಆಂತರ್ಯದಲ್ಲಿ ಸಕಲ ರೀತಿಯಲ್ಲಿ ಮುದುಡಿದವನೇ. ಅವನ ವಿಲಕ್ಷಣತೆಯನ್ನು ಮಾರ್ಟಿನ್‌ನ ಗಡಸು ಮುಖ ಚಹರೆಯನ್ನಷ್ಟೇ ಅಲ್ಲದೆ ಅವನ ನೋಟದ ತೀಕ್ಷತೆ, ಅದರ ಕೋನಗಳನ್ನು ಉಪಯೋಗಿಸುವಾಗ ಅವನ ಸೊಂಪು ಕೂದಲ ಅಸಹಜ ವಿನ್ಯಾಸವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇವುಗಳನ್ನು ಸಮೀಪ ಚಿತ್ರಿಕೆಗಳಲ್ಲಿ ಕಾಣುತ್ತೇವೆ. ಇದಕ್ಕೆ ವ್ಯತಿರಿಕ್ತವೆನಿಸುವಂತೆ ದೂರ ಚಿತ್ರಿಕೆಗಳಲ್ಲಿ ಅವನು ಹೆಲೆನ್‌ಳ ಎಸ್ಟೇಟಿನಲ್ಲಿ ಓಡಾಡುವುದರಲ್ಲಿಯೂ ನಿರೂಪಿಸಲಾಗಿದೆ.

ಮಾರ್ಟಿನ್‌ನ ತಂದೆ ಡೇವಿಸ್‌ ತನ್ನ ಅಭಿಲಾಷೆಯನ್ನು ಪೂರೈಸಿಕೊಳ್ಳಲಾಗದೆ ತೀರಿಕೊಳ್ಳುತ್ತಾನೆ. ಅವನ ಶವ ಸಂಸ್ಕಾರಕ್ಕೆ ಅಸಂಗತವೆನಿಸುವಂತೆ ಭರ್ಜರಿಯಾಗಿ ಡ್ರೆಸ್ ಮಾಡಿಕೊಂಡು ಬಂದಾಗ ಅವನ ತಾಯಿ ಅವನ ಅವಿವೇಕಕ್ಕೆ ಛೀಮಾರಿ ಹಾಕಿ ಕಳಿಸುತ್ತಾಳೆ. ಜೊತೆಗೆ ಅವಳ ವೇದನೆ ಸುಕ್ಕುಗಟ್ಟಿದ ಅವಳ ಮುಖದಲ್ಲಿ ವ್ಯಕ್ತವಾಗುತ್ತದೆ. ಚಿತ್ರದ ಆರಂಭದಿಂದಲೂ ನಿರೂಪಿಸುವ ಅವನ ವರ್ತನೆಗಳು ಮಾರ್ಟಿನ್‌ನ ಒಟ್ಟಾರೆ ಅಸ್ಮಿತೆಗೆ ಹಿಡಿದ ಕನ್ನಡಿಯಾಗುತ್ತದೆ.

ಮಾರ್ಟಿನ್‌ ಹೆಲೆನ್‌ ಜೊತೆ ಕಾರಿನಲ್ಲಿ ಹೊರಟಾಗ ವಿನಾಕಾರಣ ಡ್ರೈವ್‌ ಮಾಡುತ್ತಿದ್ದ ಹೆಲೆನ್‌ಳಿಗೆ ತನ್ನ ಕೆಲಸ ಮಾಡಲು ಬಿಡದೆ ಕಾರು ಅಪಘಾತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ಹೆಲೆನ್‌ ತೀರಿಕೊಳ್ಳುತ್ತಾಳೆ. ಇದಾದ ಮೇಲೆ ಮಾರ್ಟಿನ್‌ ಸರ್ವ ಸ್ವತಂತ್ರನಾಗುತ್ತಾನೆ. ಹಾಲಿವುಡ್‌ ಇತ್ಯಾದಿ ಸ್ಥಳಗಳನ್ನು ಮನಸ್ಸು ಬಂದಂತೆ ತಿರುಗುತ್ತಾನೆ.

ಇದ್ದಕ್ಕಿದ್ದ ಹಾಗೆ ಮಾರ್ಟಿನ್‌ಗೆ ರೈಫಲ್ಲುಗಳನ್ನು ಕೊಳ್ಳಬೇಕೆಂದು ಮನಸ್ಸಾಗುತ್ತದೆ. ಅವನಿಗೆ ಅವುಗಳನ್ನು ಉಪಯೋಗಿಸಲು ಲೈಸೆನ್ಸ್‌ ಇರದಿದ್ದರೂ ಆಟೋಮ್ಯಾಟಿಕ್‌ ಗನ್ನುಗಳನ್ನು ಖರೀದಿಸುತ್ತಾನೆ. ಅವುಗಳನ್ನೆಲ್ಲ ತೆಗೆದುಕೊಂಡು ಹೆಸರಾಂತ ವಿಹಾರ ಕೇಂದ್ರಕ್ಕೆ ಹೋಗುತ್ತಾನೆ. ಅಲ್ಲಿ ಗಂಡಸರು, ಹೆಂಗಸರು, ಮಕ್ಕಳು ಸಂತೋಷದಿಂದ ಅತ್ತಿಂದಿತ್ತ ತಿಂಡಿ, ತಿನಿಸುಗಳನ್ನು ಹಿಡಿದು ಓಡಾಡುತ್ತಿರುತ್ತಾರೆ. ಯಾವ ಪ್ರೇರಣೆಯೂ ಇಲ್ಲದೆ ಮಾರ್ಟಿನ್‌ ಆಟೋಮ್ಯಾಟಿಕ್‌ ಗನ್‌ ಹಿಡಿದು ಹೊರಡುತ್ತಾನಷ್ಟೆ. ಆ ಕೂಡಲೇ ಗುಂಡುಗಳು ಹಾರಿದ ಶಬ್ದ ಕೇಳಿ ಬರುತ್ತದೆ.

ನಡೆದ ಘಟನೆಯ ಪರಿಣಾಮವನ್ನು ಮೂಡಿಸುವುದರ ಜೊತೆಗೆ ಆಸ್ಟ್ರೇಲಿಯ ಸರ್ಕಾರ ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದನ್ನು ತಿಳಿಸಲಾಗುತ್ತದೆ. ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಸೆಲಿಬ್‌ ಲ್ಯಾಂಡಿ ಜೋನ್ಸ್‌ರ ಅಭಿನಯ ನಿಜಕ್ಕೂ ಪ್ರಶಂಸನೀಯ. ಅದಕ್ಕೆ ಪೂರಕವಾಗಿ ಇತರರ ಸಮರ್ಥ ಅಭಿನಯವನ್ನು ಕಾಣುತ್ತೇವೆ. ಚಿತ್ರದ ಯಶಸ್ಸಿಗೆ ತಾಂತ್ರಿಕ ವರ್ಗದವರ ಕೊಡುಗೆಯನ್ನು ಮೆಚ್ಚಲೇಬೇಕು.