ಮುಂದೆ ಬುಡುಗೊಚ್ಚ ತಮಗೆ ಬೇಕಾದಾಗಲೆಲ್ಲಾ ಎಡಬಿಡದೆ ಹಾಗೇ ಮಾಡಿದರಂತೆ. ಅದರಂತೆ ಸಾವಿರಾರು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಂಡರಂತೆ. ಒಂದು ದಿನ ಹೀಗೆ ಅಜ್ಜ ಹತ್ತಾರು ಹೂಗಳನ್ನು ಒಟ್ಟಿಗೇ ಬೊಗಸೆಯಲ್ಲಿ ಹಿಡಿದುಕೊಂಡು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಳ್ಳುತ್ತಿರಬೇಕಾದರೆ, ಆ ಹೂಗಳು `ಇನ್ನು ನಿನ್ನ ಹಿತ್ತಲಿನಲ್ಲಿ ನಮ್ಮ ಸರದಿ ಮುಗಿಯಿತು, ನಾವಿನ್ನು ಹೊರಡುತ್ತೇವೆ,’ ಅಂದವಂತೆ. ಅಜ್ಜನಿಗೆ ವಿಪರೀತ ದುಃಖವಾಗಿ ಪರಿ ಪರಿಯಾಗಿ ಬೇಡಿಕೊಂಡರಂತೆ. ಅಜ್ಜನ ಯಾವ ಬೇಡಿಕೆಗೂ ಸೊಪ್ಪು ಹಾಕದೆ ಆ ಹೂಗಳು, ಅವುಗಳ ಬಳ್ಳಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಬಿಟ್ಟವಂತೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತನೆಯ ಕಂತು
ಒಂದು ಕಾಲದ ಎಲ್ಲ ಹಳ್ಳಿಗಳಲ್ಲೂ ಇದ್ದಂತೆ ನನ್ನೂರು ಮಾಕಳ್ಳಿಯಲ್ಲೂ ಕಥೆಗಾರರು, ಹಾಡುಗಾರರೂ, ತತ್ವಪದ ದಾಹಿಗಳು ಇದ್ದರು. ನಾಟಿ ಮಾಡುವಾಗ, ಕುಯ್ಲು ಮಾಡುವಾಗ, ಕಣಗಾಲ ಮತ್ತಿತರೆ ರೈತಾಪಿನ ಬದುಕಿನ ಹೊತ್ತಲ್ಲಿ ಹಾಡುಗಳು ಯಾವ ಪರಿಯಲ್ಲಿ ಹುಟ್ಟಿಕೊಳ್ಳುತ್ತಿದ್ದವೋ, ಅಮಾಸ್ಯೆ ಪೌರ್ಣಿಮೆ, ಹಬ್ಬ ಹರಿದಿನಗಳಲ್ಲಿ ಭಜನೆಗಳ ಹೊಳೆ ಹರಿಯುತ್ತಿತ್ತೋ ಹಂಗೆ, ಈ ಕಥಿಕರು ತಮ್ಮನ್ನು ಎಡತಾಕುತ್ತಿದ್ದ ಮಕ್ಕಳನ್ನು ದಣಿವರಿಯದೆ ತಮ್ಮ ಕಥೆಗಳ ಕಣಿವೆಗಳೊಳಗೆ ಅಡ್ಡಾಡಿಸುತ್ತಿದ್ದರು. ಅವರುಗಳ ಆ ಚಣದ ತನ್ಮಯತೆ, ಕಲ್ಪನಾ ಶಕ್ತಿ ಹಾಗೂ ನಿರೂಪಿಸುವ ಬಗೆ ಮಕ್ಕಳಾದ ನಮ್ಮನ್ನು ಬೆಕ್ಕಸ ಬೆರಗುಗೊಳಿಸುತ್ತಿದ್ದವು. ಆ ಚಣಗಳಲ್ಲಿ ನಮ್ಮೊಳಗಾಡುತ್ತಿದ್ದ ಆ ವಿಸ್ಮಯ, ಆ ಆವರಿಕೆಯ ಮೋಡಿ ಈ ಚಣಕ್ಕೂ ಹಂಗೇ ಮೈ ಜುಮ್ಮೆನಿಸುತ್ತದೆ. ನನಗೆ ಹೆಚ್ಚು ಒಡನಾಟವಿದ್ದ ಹಾಗೂ ಯಾವ ಚಣದಲ್ಲಿ ಹೋಗಿ ಕೆದಕಿದರೂ ಕಥೆಗಳ ಮಾಂತ್ರಿಕ ಚಾಪೆಯ ಮೇಲೆ ಕೂರಿಸಿ ತೇಲಿಸುತ್ತಿದ್ದ ಮೂವರು ಕಥಿಕರ ಬಗ್ಗೆ ನನಗೆ ಈಗಲೂ ಇನ್ನಿಲ್ಲದ ಅಕ್ಕರೆ. ಇವರಾರೂ ಸ್ಕೂಲುಗಳ ಮೆಟ್ಟಿಲು ಹತ್ತಿದವರಲ್ಲ. ಅಕ್ಷರಗಳ ನಂಟಿದ್ದವರಲ್ಲ. ಒಬ್ಬರು ಕುಂಟಜ್ಜಿ ಅಂತ. ಮತ್ತೊಬ್ಬರು ಬುಡುಗೊಚ್ಚ. ಉಳಿದವರು ಕೆಂಪ್ಲಿಂಗಜ್ಜ. ಕಥಾ ಧಾರೆಯಲ್ಲಿ ಈ ಮೂವರ ಪಯಣ ಭಿನ್ನ ಭಿನ್ನ. ಕುಂಟಜ್ಜಿಯ ಕಥನ ರಾಜ, ರಾಣಿ, ರಾಜಕುಮಾರ, ರಾಜಕುಮಾರಿ, ಮಂತ್ರವಾದಿಗಳ ರಮ್ಯ ಲೋಕದ ಸುತ್ತ ಸುತ್ತುತ್ತಿತ್ತು. ಬುಡುಗೊಚ್ಚನ ಕಥೆಗಳಲ್ಲಿ ವಾಸ್ತವದ ಕಾಡು ಮೇಡು, ಗಿಡಮರ, ಪ್ರಾಣಿ ಪಕ್ಷಿಗಳೇ ಪಾತ್ರಗಳಾಗಿರುತ್ತಿದ್ದವು. ಇನ್ನು ಕೆಂಪ್ಲಿಂಗಜ್ಜ ಪೀಡೆ ಪಿಶಾಚಿಗಳ ಲೋಕದಲ್ಲಿ ಖುದ್ದು ನಡೆದಾಡಿದವರಂತೆ ವರ್ಣಿಸುತ್ತಾ ನಡುಕ ಹುಟ್ಟಿಸುತ್ತಿದ್ದರು. ನಾನು ಇವರುಗಳ ಈ ಕಥಾಲೋಕದ ಖಾಯಂ ಕೇಳುಗನಾಗುವ ಹೊತ್ತಿಗಾಗಲೇ ಕುಂಟಜ್ಜಿ ಮತ್ತು ಕೆಂಪ್ಲಿಂಗಜ್ಜ ಎಂಭತ್ತನ್ನು ದಾಟಿದ್ದರು. ಬುಡುಗೊಚ್ಚ ತೊಂಭತ್ತರ ಆಸುಪಾಸಿನಲ್ಲಿದ್ದರು.
ಕುಂಟಜ್ಜಿಯ ಹೆಸರು ಲಕ್ಷ್ಮಮಜ್ಜಿ ಅಂತ ಇದ್ದರೂ ಎಲ್ಲರೂ ಕುಂಟಜ್ಜಿ ಅಂತಲೇ ಕರೆಯುತ್ತಿದ್ದರು. ಕಾರಣ ಅವರು ನಡೆಯುವ ಸ್ಥಿತಿಯಲ್ಲಿ ಇರಲೇ ಇಲ್ಲ. ಎರಡು ಕಾಲು, ಎರಡು ಕೈಗಳು ಬಿಲ್ಲಿನಂತೆ ಬಾಗಿಕೊಂಡಿದ್ದವು. ತೆವಳಿಕೊಂಡೇ ಪಡಸಾಲೆ ಅಥವಾ ಮನೆಯ ಮುಂಭಾಗದ ಅಂಗಳಕ್ಕೆ ಬರುತ್ತಿತ್ತು. ಇಲ್ಲಾ ಮನೆಯವರೇ ಕೆಲವೊಮ್ಮೆ ಎತ್ತಿ ತಂದು ಕೂರಿಸುತ್ತಿದ್ದರು. ಪೂರಾಂದರೆ ಪೂರಾ ಬೋಡು ಬಾಯಿ. ದುಂಡು ಮುಖ. ಆ ಮುಖದಲ್ಲಿ ಸದಾ ಮಾಸದ ನಗು. ಬಲು ಚುರುಕು ಕಂಗಳು. ಗಡುಸು ದನಿ. ಆ ವಯಸ್ಸಿನಲ್ಲೂ ಅಜ್ಜಿ ಅವರ ಮನೆಯ ಹಿಂಭಾಗದಲ್ಲಿ ಒಂದು ಫಾರ್ಲಾಂಗಿನಷ್ಟು ದೂರದಲ್ಲಿದ್ದ ಹಲಸಿನ ಮರದತ್ತ ಯಾರೇ ಸುಳಿದಾಡಿದರೂ `ಎಲಾ ಯಾರ್ಲ ಅಪ್ಪಣ್ಣಿ ಅದು’ ಅಂತ ಕೂಗಿಕೊಳ್ಳುತ್ತಿತ್ತು. ಈ ಕುಂಟಜ್ಜಿಯ ಕಥೆ ಒಮ್ಮೆ ಶುರುವಾದರೆ ಮುಗಿಯಲು ತಿಂಗಳುಗಟ್ಟಲೆ ಬೇಕಾಗುತ್ತಿತ್ತು. ಬುಡುಗೊಚ್ಚ ಇದಕ್ಕೆ ತದ್ವಿರುದ್ಧ. ಅವತ್ತು ಶುರು ಮಾಡಿದ ಕಥೆ ಅವತ್ತೇ ಮುಗಿಯುತ್ತಿತ್ತು. ಅದೂ ಆ ಅಜ್ಜನ ತಾಳ್ಮೆ ಹಾಗೂ ಲಹರಿಯನ್ನು ಆಸರಿಸಿ. ಆದರೆ ತುಂಬಾ ಮಾರ್ಮಿಕವಾಗಿ ಮನಸ್ಸಿನಲ್ಲಿ ಉಳಿದುಬಿಡುವಂಥವು. ಅಂದರೆ ಕೆಂಪ್ಲಿಂಗಜ್ಜನ ಹುರುಪು ಆಗಾಗ ಹಳುಪುರಿ ಹೊಸೆಯುತ್ತಿತ್ತು.
ಸಿದ್ದಪ್ಪನಾದ ರಾಜಕುಮಾರ
ಒಂದು ಸಾರ್ತಿ ಕುಂಟಜ್ಜಿ ಮಂತ್ರವಾದಿಯೊಬ್ಬ ರಾಜಕುಮಾರಿಯನ್ನು ಅಪಹರಿಸಿದ ಕಥೆಯನ್ನು ಪ್ರಾರಂಭಿಸಿತ್ತು. ಹತ್ತಿರತ್ತಿರ ತಿಂಗಳಾಗುತ್ತಾ ಬಂದರೂ ಅದು ಮುಗಿಯುತ್ತಲೇ ಇಲ್ಲ. ರಾಜಕುಮಾರ ರಾಜಕುಮಾರಿಯ ಸಲುವಾಗಿ ಏಳು ಪರ್ವತಗಳನ್ನೂ ಏಳು ಸಮುದ್ರಗಳನ್ನೂ ದಾಟಿ ಮಂತ್ರವಾದಿಯನ್ನು ಕೊಂದು ರಾಜಕುಮಾರಿಯನ್ನು ವಾಪಸ್ಸು ಕರೆತರುವ ಪಯಣವೇ ಎಂಟತ್ತು ದಿನ ಹಿಡಿಯಿತು. ನಾನು ರಾಜಕುಮಾರಿ ವಾಪಸ್ಸು ಬಂದ ಮೇಲೆ ಅಲ್ಲಿಗೆ ಕಥೆ ಮುಗಿಯುತ್ತೆ ಅನ್ನುವುದು ಗೊತ್ತಿದ್ದರಿಂದ ಅವತ್ತೊಂದು ದಿನ `ಅಜ್ಜಿ ಮುಗಿತಲ್ವ ಕಥೆ’ ಅಂದಿದ್ದೆ. `ಅದ್ಯಾಕಲ ಮಗ ಹಂಗೆ ಅವುಸ್ರ ಮಾಡ್ತೀಯ? ಅಯ್ಯೋ ಇನ್ನೂ ಮುಗ್ದುಲ್ಲ ವಸಿ ತಡ್ಕ’ ಅಂದಿತ್ತು. ಯಾಕೋ ಆ ಅಜ್ಜಿಗೆ ಆ ಕಥೆಯನ್ನು ಮುಗಿಸುವ ಮನಸ್ಸಿರಲಿಲ್ಲ. ಹಿಂಗೆ ಮುಂದುವರೆದ ಆ ಕಥೆ ತುಂಬಾ ಅಪರೂಪ ಎಂಬಂತೆ ಭಿನ್ನ ದಾರಿ ಹಿಡಿದಿತ್ತು. ಹಂಗೆ ರಾಜಕುಮಾರಿಯನ್ನು ಕರೆತರುತ್ತಿದ್ದ ರಾಜಕುಮಾರ ಅವಳಿಗೆ ಮುಂದಿನ ದಾರಿಯನ್ನು ಅರುಹಿ ಆಕಾಶ ಮಾರ್ಗದಿಂದ ಸೀದಾ ಭೂಮಿಗಿಳಿದಿದ್ದ. ಅದೂ ನನ್ನ ಊರಿನಲ್ಲಿ! ಆಗ ಊರಿನಲ್ಲಿ ಕೆಲವೇ ಕೆಲವು ಮನೆಗಳು ಮಾತ್ರ ಇದ್ದವಂತೆ. ಆಗವನಿಗೆ ಆ ಮಂತ್ರವಾದಿ, ಆ ಏಳು ಸಮುದ್ರ, ಆ ಏಳು ಪರ್ವತಗಳು, ಆ ಹೊಡೆದಾಟ ಬಡಿದಾಟಗಳು ಸಾಕಾಗಿ ಹೋಗಿದ್ದವಂತೆ. ಹಂಗಾಗಿ ಭೂಮಿಗಿಳಿದವನೇ ತನ್ನ ಸಂಗಡವಿದ್ದ ಕತ್ತಿ ಗುರಾಣಿ, ಧಿರಿಸುಗಳನ್ನೆಲ್ಲಾ ಯಾರಿಗೂ ಸಿಕ್ಕದಂತೆ ದೊಡ್ಡದೊಂದು ಕೊರಕಲೊಳಕ್ಕೆ ಹಾಕಿ ಅವುಗಳನ್ನು ಮಣ್ಣಿನಿಂದ ಮುಚ್ಚಿ ಸಾಮಾನ್ಯನೊಬ್ಬನ ಧಿರಿಸಿನಲ್ಲಿ ಊರಿನಿಂದ ಪಡುವ ದಿಕ್ಕಿಗೆ ನಡೆಯತೊಡಗಿದನಂತೆ. ಹಂಗೆ ನಡೆಯುತ್ತಾ ಊರಿನಿಂದ ಒಂದೆರಡು ಮೈಲಿ ದೂರದಲ್ಲಿ ಪುಟ್ಟ ಕಾಡಿನ ನಡುವಲ್ಲಿದ್ದ ದೊಡ್ಡದೊಂದು ಮುತ್ತುಗದ ಮರದಡಿಯಲ್ಲಿ ನೆಲೆ ನಿಂತನಂತೆ. ಹಂಗೆ ನೆಲೆ ನಿಂತ ಅಲ್ಲಿಗೆ ದನ ಕುರಿಗಳನ್ನು ಮೇಸಲು ಬರುತ್ತಿದ್ದ ಜನರ ಗೆಣೆಕಾರನಾಗಿ ಅವರುಗಳನ್ನೆಲ್ಲಾ ಕಟ್ಟಿಕೊಂಡು ಪುಟ್ಟದೊಂದು ಕೆರೆಯನ್ನು ತೋಡತೊಡಗಿದನಂತೆ. ಹೆಸರು ಕೇಳಿದರೆ ಸಿದ್ದಪ್ಪ ಅಂತ ಹೇಳುತ್ತಿದ್ದನಂತೆ. ಅಷ್ಟೊತ್ತಿಗೆ ಅವನು ನೆಲೆ ನಿಂತಿದ್ದ ಆ ಮುತ್ತುಗದ ಮರ ಅದೊಂದು ದಿನ ಜೋರಾದ ಮಳೆಗಾಳಿಯಲ್ಲಿ ನೆಲಕ್ಕುರುಳಿಬಿಟ್ಟಿತಂತೆ. ಆಗ ಆ ಹೊತ್ತಿಗೆ ಅವನ ಸಂಗಡಿಗರು ಅವನಿಗಾಗಿ ನಾಲ್ಕು ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ ಅವುಗಳ ಮೇಲೆ ಮತ್ತೆ ನಾಲ್ಕು ಚಪ್ಪಡಿ ಕಲ್ಲುಗಳನ್ನು ಹಾಸಿ ಪುಟ್ಟದೊಂದು ಕಲ್ಲು ಮಂಟಪವನ್ನು ಮಾಡಿಕೊಟ್ಟರಂತೆ. ಅಲ್ಲಿಗೆ ಸುಮಾರು ವರ್ಷಕ್ಕೆ ಕೆರೆಯ ಕೆಲಸ ಮುಗಿಯಿತಂತೆ. ಒಂದು ಬಿರುಸು ಮಳೆ ಬಿದ್ದರೂ ಸಾಕು ಆ ಕೆರೆ ತುಂಬಿ ತುಳುಕಾಡುತ್ತಿತ್ತಂತೆ. ಬೆಳಗು ಬೈಗಿನಲ್ಲಿ ಆ ಸಿದ್ದಪ್ಪ ಕೆರೆಯ ತಡಿಯಲ್ಲಿ ನಿಂತು ಕೆರೆಯೊಳಗಿನ ಅಲೆಗಳನ್ನೂ, ಆ ಅಲೆಗಳ ನಡುವೆ ಮಿಂದೇಳುತ್ತಿದ್ದ ಥರಾವರಿ ಹಕ್ಕಿಗಳನ್ನೂ ದಿಟ್ಟಿಸುತ್ತಾ ನಿಂತುಬಿಡುತ್ತಿದ್ದನಂತೆ. ಆ ಹೊತ್ತಿಗೆ ಸಿದ್ದಪ್ಪನಾಗಿದ್ದ ಆ ರಾಜಕುಮಾರ ಹಣ್ಣಣ್ಣು ಮುದುಕನಾಗಿಬಿಟ್ಟಿದ್ದನಂತೆ. ಗೇಣುದ್ದದ ಜಡೆ ಗಡ್ಡಗಳು ಬೆಳೆಯುತ್ತ ಆಜಡೆಮುನಿಯಂತಾದನಂತೆ. ದಿನದಿಂದ ದಿನಕ್ಕೆ ಜನರ ಮನದಲ್ಲಿ ಸಿದ್ದಪ್ಪನ ಬಗ್ಗೆ ಅದೊಂದು ರೀತಿಯ ಗೌರವ ಮತ್ತು ದೈವೀ ಭಾವನೆ ಮೂಡತೊಡಗಿತಂತೆ. ಯಾರು ಎಷ್ಟು ಕರೆದರೂ ಊರ ಮುಖ ನೋಡಲು ತಯಾರಿರಲಿಲ್ಲವಂತೆ. ಹಂಗಾಗಿ ಜನರು ಅವನಿದ್ದ ಆ ಕಲ್ಲು ಮಂಟಪಕ್ಕೇ ಊಟ ತಿಂಡಿಗಳನ್ನು ತಂದು ಕೊಡುತ್ತಿದ್ದರಂತೆ. ಹಂಗೆ ಮುಪ್ಪಿಗೊಳಗಾಗಿದ್ದ ಸಿದ್ದಪ್ಪ ಅದೊಂದು ದಿನ ಮಲಗಿದ್ದಲ್ಲೇ ಈ ಲೋಕವನ್ನು ಬಿಟ್ಟಿದ್ದನಂತೆ. ಸಿದ್ದಪ್ಪನನ್ನು ಆ ಕಲ್ಲು ಮಂಟಪದೊಳಗೇ ಸಮಾಧಿ ಮಾಡಿದ್ದರಂತೆ. ಮುಂದೆ ಆ ಸಮಾಧಿಗೆ ಜನ ನಡೆದುಕೊಳ್ಳತೊಡಗಿದರಂತೆ. ಬರಬರುತ್ತಾ ಆ ಸಮಾಧಿಯೇ ಸಿದ್ದಪ್ಪನ ಗುಡಿ ಆಯ್ತು. ಸಿದ್ದಪ್ಪ ಕಟ್ಟಿಸಿದ್ದ ಕೆರೆ ಸಿದ್ದಪ್ಪನ ಕೆರೆ ಆಯ್ತು. ಇಲ್ಲಿಗೆ ಈ ಕಥೆ ಮುಗೀತು ಅಂತು ಕುಂಟಜ್ಜಿ. ಈ ಕಥೆ ಮಿಕ್ಕೆಲ್ಲಾ ಕಥೆಗಳಿಂತ ಬೇರೆ ಥರವೇ ಇದ್ದದ್ದರಿಂದ, `ಮುಗ್ದೋತೇನಜ್ಜಿ’ ಅಂದಿದ್ದೆ. `ಅದೆಲ್ಲಿ ಮುಗ್ದದು ಹೇಳು. ಹಿಂಗೇ ಹೇಳ್ತಾ ಹೋದ್ರೆ ಹೋಗಂದೋಗಂದ ಹೋಗ್ತಲೇ ಇರುತ್ತೆ’ ಅಂದ ಕುಂಟಜ್ಜಿ ಮುಂದುವರೆದು `ಅದ್ಸರಿ ಹಂಗೆ ಆಕಾಸ್ದಾಗೆ ಹೋಗ್ತಿದ್ದ ಆ ರಾಜ್ಕುಮಾರ ಹೆಂಗೆ ನೆಲಕ್ಕೆ ಇಳ್ದು ಬಂದ ಅಂತ ಕೇಳ್ಲೇ ಇಲ್ವಲ್ಲ ಮಗಾ’ ಅಂತು. `ಹೆಂಗಿಳ್ದ ಮತ್ತೆ’ ಅಂದೆ ನಾನು. `ಅಗಾ ನೋಡು ಅಲ್ಲಿ ಆ ಕೊಯ್ಮೂಲೇಲಿ ಅತ್ತಿ ಮರ ಐತಲ್ಲ ಅದ್ರ ತುದ್ಯಾಗಾಸಿ ಇಳ್ಕಂಡು ಬಂದ’ ಅಂತ ಕುಂಟಜ್ಜಿ ತನ್ನೆದುರಿಗೆ ಕೊಪ್ಪಲ ಮೂಲೆಯೊಂದರಲ್ಲಿದ್ದ ಮೈ ತುಂಬಾ ಕೆಂಪು ಹಣ್ಣುಗಳನ್ನು ಹೊತ್ತು ನಿಂತಿದ್ದ ಅತ್ತಿಯ ಮರವನ್ನು ಕೈಮಾಡಿ ತೋರಿಸಿತು. ಧೂಳ್ಸಂಜೆಯ ಕೆಂಬೆಳಕಲ್ಲಿ ಆ ಹಣ್ಣುಗಳಿಗೆ ಬಂಗಾರದ ಬಣ್ಣ ಬಂದಿತ್ತು. ಆ ಮರದ ಪಕ್ಕದಲ್ಲಿ ಕರಿಬೇವಿನ ಗಿಡವೊಂದಿತ್ತು. ಅದರಲ್ಲಿ ಕೂತಿದ್ದ ಹಕ್ಕಿಯೊಂದು ಅಜ್ಜಿಯ ಕೈಯ್ಯನ್ನೇ ದಿಟ್ಟಿಸುತ್ತಿತ್ತು. ಆ ಗುಡಿ, ಆ ಕೆರೆಗಳು ಈಗಲೂ ಇವೆ. ಆದರೆ ಸಿದ್ದಪ್ಪನ ಗುಡಿಯ ಅವತಾರ ಬದಲಾಗಿದೆ. ಈ ಕೆರೆ, ಇವುಗಳ ಬಗ್ಗೆ ವಚನಕಾರ ಸಿದ್ದರಾಮನ ಕಾಲದಲ್ಲಿ ಆಗಿದ್ದೆಂದೂ, ಆ ನೆನಪಿನಲ್ಲಿ ಜನ ಸಿದ್ದಪ್ಪನ ಗುಡಿಯನ್ನು ಕಟ್ಟಿಸಿದ್ದರೆಂಬ ಪ್ರತೀತಿ ಇದೆ. ಈ ವಚನಕಾರ ಸಿದ್ದರಾಮ ಅಜ್ಜಿಯ ಕಥೆಯಲ್ಲಿ ಸಿದ್ದಪ್ಪನಾಗಿದ್ದ. ನನಗಾಗ ಯಾವ ವಚನಕಾರರ ಹೆಸರು ಕೂಡಾ ಗೊತ್ತಿರಲಿಲ್ಲ. ಆದರೆ ಅದೇಗೆ ಆ ಅಜ್ಜಿಗೆ ಸಿದ್ದರಾಮನ ಬಗ್ಗೆ ತಿಳಿದಿತ್ತೋ ಗೊತ್ತಿಲ್ಲ. ಆದರೆ ರಾಜಕುಮಾರನನ್ನು ಸಾಮಾನ್ಯ ಮನುಷ್ಯನನ್ನಾಗಿಸಿ ಅವನಿಂದ ಕೆರೆಯನ್ನು ಕಟ್ಟಿಸುವ ಅಜ್ಜಿಯ ಆ ಕಲ್ಪನಾ ಶಕ್ತಿ, ಆ ತುಡಿತ ಸಿದ್ದಪ್ಪನ ಕೆರೆಯತ್ತ ಹೋದಾಗಲೆಲ್ಲಾ ಈ ಕಥೆ ಮತ್ತು ಆ ಕುಂಟಜ್ಜಿ ನೆನಪಾಗುತ್ತವೆ.
ಮಲ್ಲಿಗೆ ಹೂಗಳು ಬೆಳ್ಳಿ ನಾಣ್ಯಗಳಾದವು
ಇನ್ನು ಬುಡುಗೊಚ್ಚ. ಇವರಿಗೆ ಬುಡುಗೊಚ್ಚ ಅಂತ ಯಾಕೆ ಹೆಸರು ಬಂತೋ ಗೊತ್ತಿಲ್ಲ. ನನಗೆ ತಿಳಿದಂತೆ ಯಾರೊಬ್ಬರೂ ಇವರ ಹೆಸರಿಡಿದು ಮಾತನಾಡಿಸಿದ್ದನ್ನು ಕಂಡಿಲ್ಲ. ಅಷ್ಟೇ ಯಾಕೆ ಹಿರಿಯರು ಅಂತ ಅನಿಸಿಕೊಂಡ ಯಾರೊಬ್ಬರೂ ಇವರನ್ನು ಗಂಭೀರವಾಗಿ ಪರಿಗಣಿಸಿದ್ದು ಗೊತ್ತಿಲ್ಲ. ಯಾಕೆಂದರೆ ಇವರು ಸದಾ ತಮ್ಮದೇ ಲೋಕದಲ್ಲಿರುತ್ತಿದ್ದರು. ಇಲ್ಲವೇ ಮಕ್ಕಳೊಂದಿಗೆ ಕೂಡಿ ಕಾಲ ಹಾಕುತ್ತಿದ್ದರು. ಈ ಅಜ್ಜನ ಮೊಮ್ಮಗ ಶಂಕರ ನನ್ನ ವಾರಿಗೆಯವನು ಹಾಗೂ ಜೀವದ ಗೆಳೆಯನಾಗಿದ್ದ ಕಾರಣಕ್ಕೆ ಈ ಅಜ್ಜನೊಂದಿಗೆ ನನ್ನ ಒಡನಾಟ ಜಾಸ್ತಿ ಇತ್ತು.
ಊರ ಮಧ್ಯದಲ್ಲಿ ಇವರ ಮನೆಯಿತ್ತು. ಅದೊಂದು ಹಳೆಯ ಮಾಳಿಗೆ ಮನೆ. ಅದಕ್ಕೆ ಒಂದೇ ಒಂದು ರೂಮು. ಕಿಂಡಿಯಂಥ ಮರದ ಕಡ್ಡಿಗಳನ್ನು ಅಡ್ಡ ಹಾಕಿದ್ದ ಒಂದು ಪುಟಾಣಿ ಕಿಟಕಿ. ಇಲ್ಲಿ ಬುಡುಗೊಚ್ಚ ಮಲಗುತ್ತಿದ್ದರು. ಇವರು ಮನೆಯಲ್ಲಿ ಇದ್ದಾಗ ಬಿಟ್ಟರೆ ಉಳಿದಂತೆ ಅದರ ಬಾಗಿಲಿಗೆ ಕರಡಿ ಬೀಗ ಬಿದ್ದಿರುತ್ತಿತ್ತು. ಮೊಮ್ಮಗ ಶಂಕರ ಅಸಾಧ್ಯ ಸುಳ್ಳು ಹೇಳುತ್ತಿದ್ದುದ್ದರಿಂದಲೋ ಇಲ್ಲಾ ಬುಡುಗೊಚ್ಚನವರ ಮೊಮ್ಮಗನಾಗಿದ್ದರಿಂದಲೋ ಇವನನ್ನು ನಾವೆಲ್ಲಾ `ಕೊಚ್ಚ’ ಅಂತ ಕರೆಯುತ್ತಿದ್ದೆವು. ಇವನು ಅಜ್ಜನ ಅಕ್ಕರೆಯ ಮೊಮ್ಮಗ. ಹಂಗಾಗಿ ಆ ಮನೆಯಲ್ಲಿ ಅವನನ್ನು ಬಿಟ್ಟರೆ ಮತ್ಯಾರನ್ನೂ ಆ ರೂಮೊಳಕ್ಕೆ ಕೂಡುತ್ತಿರಲಿಲ್ಲ ಅಜ್ಜ. ಈ ಶಂಕರ ಅದೆಂಗೋ ಅಜ್ಜ ಇಲ್ಲದಾಗ ಆ ರೂಮಿನ ಬೀಗವನ್ನು ಸಣ್ಣದೊಂದು ಮೊಳೆಯಿಂದ ತೆಗೆಯುವುದನ್ನು ಕಲಿತಿದ್ದ. ಅವತ್ತೊಂದು ದಿನ. ನಾನವನ ಮನೆಗೆ ಹೋಗಿದ್ದೆ. ಶಂಕರ ಅವತ್ತೂ ಆ ರೂಮಿನ ಬಾಗಿಲನ್ನು ಮೊಳೆಯೊಂದರಿಂದ ತೆಗೆದು ನನ್ನನ್ನೂ ಅದರೊಳಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕತ್ತಲು ಗವ್ವೆನ್ನುತ್ತಿತ್ತು. ಅಲ್ಲೇ ಮೂಲೆಯೊಂದರಲ್ಲಿದ್ದ ದೀಪಕ್ಕೆ ಬೆಂಕಿಕಡ್ಡಿ ಗೀರಿ ಹಚ್ಚಿದ. ಅದರ ಕುಲ್ಡು ಬೆಳಕಲ್ಲಿ ರೂಮಿನ ಮೂಲೆಯೊಂದರಲ್ಲಿದ್ದ ಹಳೆಯ ಮರದ ಪೆಟ್ಟಿಗೆಯೊಂದು ಗೋಚರಿಸಿತ್ತು. ಶಂಕರ ದೀಪವನ್ನು ನನ್ನ ಕೈಗೆ ಕೊಟ್ಟು ಪೆಟ್ಟಿಗೆ ಬಾಗಿಲನ್ನು ತೆರೆದ. ಕಿರುಗುಟ್ಟುತ್ತಾ ತೆರೆದುಕೊಂಡ ಅದರೊಳಕ್ಕೆ ಕೈ ಹಾಕಿ ತನ್ನ ಹಿಡಿಗೆ ಸಿಕ್ಕಿದಷ್ಟು ಏನನ್ನೋ ತೆಗೆದುಕೊಂಡು ದೀಪದ ಬೆಳಕಿನ ಹತ್ತಿರಕ್ಕೆ ತಂದ. ನೋಡಿದರೆ ಅವನ ಕೈ ತುಂಬಾ ಬೆಳ್ಳಿ ರೂಪಾಯಿಗಳಿದ್ದವು. ಆ ಪೆಟ್ಟಿಗೆಯೊಳಕ್ಕೆ ಕಣ್ಣಾಕಿದರೆ ಅದರೊಳಗೊಂದು ಮಣ್ಣಿನ ಮಡಕೆಯಿತ್ತು. ಅದರೊಳಗೆ ಬೆಳ್ಳಿ ನಾಣ್ಯಗಳಿದ್ದವು. ಅವನು ಆಗಾಗ ಕಡ್ಲೆ ಬೆಲ್ಲವನ್ನು ಕೊಂಡುಕೊಂಡು ನನಗೂ ಆಟೋ ಈಟೋ ಧಾರಾಳವಾಗಿ ಕೊಡುತ್ತಿದ್ದುದರ ಗುಟ್ಟು ಅವತ್ತು ಗೊತ್ತಾಗಿತ್ತು. ಅಲ್ಲಿಂದ ಮುಂದಕ್ಕೆ ಹಂಗೆ ಕದ್ದ ಬೆಳ್ಳಿ ರೂಪಾಯಿಗಳನ್ನು ಮಾರಲು ಬೇರೆ ಊರಿಂದ ಬಂದು ನನ್ನೂರಿನಲ್ಲಿ ತೋಟ ಕಾಯುವ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಬಳಿ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದ.
ಸಾಮಾನ್ಯವಾಗಿ ಆ ಮನೆಗೆ ಹೋಗುತ್ತಿದ್ದದ್ದು ನಾನು ಮತ್ತು ಮತ್ತೊಬ್ಬ ತಪಲ ಎಂಬ ಗೆಳೆಯ ಮಾತ್ರ. ಹಂಗೆ ಮೊಮ್ಮಗನನಿಗೆ ಬೇಕಾದವರು ಅನ್ನುವ ಕಾರಣಕ್ಕೋ ಏನೋ ಬುಡುಗೊಚ್ಚ ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದರು. ಊರಿನಲ್ಲಿ ನನ್ನ ವಾರಿಗೆಯ ಬಹತೇಕ ಮಕ್ಕಳು ಬುಡುಗೊಚ್ಚ ಅವರನ್ನು ಕಂಡರೆ ಭಯ ಬೀಳುತ್ತಿದ್ದರು. ಏಕೆಂದರೆ ಮಕ್ಕಳನ್ನು ಕಾಣುತ್ತಲೇ ನಾಲಿಗೆಯನ್ನು ಉದ್ದಕ್ಕೆ ಹೊರಕ್ಕೆ ಹಾಕಿ, ಕಣ್ಣುಗಳನ್ನು ತೇಲ್ಗಣ್ಣು ಮೇಲ್ಗಣ್ಣು ಮಾಡಿಕೊಂಡು ಹೆದರಿಸಿಬಿಡುತ್ತಿದ್ದರು. ಹಂಗೆ ಹೆದರಿದ ಮಕ್ಕಳು ಕೈಗೆ ಸಿಕ್ಕರೆ ತನ್ನ ಮಾಸಿ ಕಿಮುಟಾಗಿರುತ್ತಿದ್ದ, ನೂರಾರು ತ್ಯಾಪೆಗಳಿದ್ದ ಕೋಟಿನ ಜೇಬಿನೊಳಗಿಂದ ಶುಂಠಿ ಪೆಪ್ಪರುಮೆಂಟುಗಳನ್ನು ಕೊಟ್ಟು ತಾಜಾ ಮಾಡುತ್ತಿದ್ದರು. ಆದರೆ ನನಗಾಗಲಿ ತಪಲನಿಗಾಗಗಲಿ ಅಜ್ಜನನ್ನು ಕಂಡರೆ ಒಂಚೂರೂ ಭಯವಿರಲಿಲ್ಲ. ಏಕೆಂದರೆ ಅಜ್ಜ ಪೆಪ್ಪರಮೆಂಟುಗಳ ಜೊತಗೆ ಮರೆಲಾರದಂಥ ಕಥೆಗಳ ಕಣಿವೆಯಲ್ಲಿ ನಮ್ಮನ್ನು ನಡೆದಾಡಿಸುತ್ತಿದ್ದರು. ಹಿಂಗೆ ಥರಾವರಿ ಕಥೆಗಳ ಲೋಕದಲ್ಲಿ ಸುತ್ತಿಸುತ್ತಿದ್ದ ಬುಡಗೊಚ್ಚನವರನ್ನು ಒಂದು ದಿನ ಮಕ್ಕಳಾದ ನಾವು ಕೇಳಿದ್ದೆವು: `ಅಜ್ಜಾ, ನಿಂಗೆ ಇಂಥ ಕಥೆಗಳೆಲ್ಲಾ ಹೆಂಗೆ ಹೊಳೀತವೆ,’ ಅಂತ. ಅದಕ್ಕವರು ನಕ್ಕು ಹೇಳಿದ್ದರು, ` ನನ್ನ ಎದೆಯೊಳಗೊಂದು ಕಥೆ ಹೇಳೋ ಹಕ್ಕಿ ಗೂಡು ಕಟ್ಟಿಕೊಂಡೈತೆ ಕಣ್ರಪ್ಪ, ಅದುಕ್ ಬೇಕಾದಾಗ ಪುರ್ ಪುರ್ ಅಂತ ರೆಕ್ಕೆ ಬಡ್ಕಂಡು ಹಾರಾಡುತ್ತೆ. ಹಂಗೆ ಒಂದೊಂದ್ ಸಾರ್ತಿ ರೆಕ್ಕೆ ಬಡ್ದಾಗ್ಲೂ ಒಂದೊಂದು ಕಥೆ ಹಾರ್ಕೊಂಡು ಬರುತ್ತೆ.’ ಅಂತ ಹೇಳಿತ್ತು. ಅಬ್ಬಾ ಹಂಗೆ ಕಥೆ ಹೇಳುವ ಹಕ್ಕಿ ನನ್ನ ಎದೆಯೊಳಗೂ ಇದ್ದರೆ ಎಷ್ಟು ಚಂದ ಇರ್ತಿತ್ತು ಅಂತ ನನಗಾಗ ಅನಿಸುತ್ತಿತ್ತು.
ರಜಾ ದಿನಗಳಲ್ಲಿ ಅಂತೆಯೇ ಸ್ಕೂಲು ಬಿಟ್ಟ ಮೇಲೆ ಅದೆಷ್ಟೋ ಸಂಜೆಗಳಲ್ಲಿ ಇವರ ಕಥೆಗಳನ್ನು ಕೇಳಿಕೊಂಡು ಕತ್ತಲೆಯಲ್ಲಿ ಭಯ, ಸಂತೋಷಗಳೆರಡನ್ನೂ ತುಂಬಿಕೊಂಡು ಮನೆಯ ದಾರಿಯಲ್ಲಿ ನಡೆಯುವುದರ ಬದಲು ಒಂದೇ ಉಸುರಿಗೆ ಓಡಿ ಮನೆ ಸೇರಿಕೊಳ್ಳುತ್ತಿದ್ದೆ. ಮನೆಯಲ್ಲಿ ಇದಕ್ಕಾಗಿ ನಾನೂ ಬೈಸಿಕೊಳ್ಳುತ್ತಿದ್ದೆ ಹಂಗೇನೇ .`ಅವನೊಬ್ಬ ಕೇವಿಲ್ಲದವ್ನು’ ಅಂತ ಬುಡುಗೊಚ್ಚ ಅವರನ್ನೂ ಬೈಸುತ್ತಿದ್ದೆ. ಯಾರು ಎಷ್ಟೇ ಅಂದರೂ ಆ ಅಜ್ಜನ ಸಾಂಗತ್ಯ ಮತ್ತು ಕಥೆಗಳ ಲೋಕದಿಂದ ದೂರವಾಗುತ್ತಿರಲಿಲ್ಲ. ಅಜ್ಜ ಹೇಳಿದ್ದ ಅದೆಷ್ಟೋ ಕಥೆಗಳಲ್ಲಿ ಇಂದಿಗೂ ಒಂದಷ್ಟು ನನ್ನೊಳಗೆ ಪಿಟ್ಟಾಗಿ ಕೂತಿವೆ. ಅವುಗಳಲ್ಲಿ ಒಂದು.
ಅವತ್ತು. ಸ್ಕೂಲು ಬಿಟ್ಟ ಕೂಡಲೇ ಅದು ಇದು ಆಟ ಆಡಿಕೊಂಡು ಇನ್ನೇನು ಸಂಜೆಯಾಗುತ್ತಿದೆ ಅನ್ನುವ ಹೊತ್ತಲ್ಲಿ ನಾನು, ತಪಲ ಗೆಳೆಯ ಶಂಕರನ ಜತೆಗೂಡಿ ಬುಡುಗೊಚ್ಚ ಅವರ ಮನೆಗೆ ಹೋಗಿದ್ದೆವು. ಎಂದಿನಂತೆ ಕಥೆ ಹೇಳುವಂತೆ ಕೇಳಿದೆವು. ಅಜ್ಜ ತನ್ನ ಕುಟ್ಟಣಿಗೆಯಲ್ಲಿ ಎಲೆ ಅಡಿಕೆಯನ್ನು ಹಾಕಿ ಕುಟ್ಟುತ್ತಾ ಕಥೆ ಹೇಳಲು ತಯಾರಿ ನಡೆಸುತ್ತಿದ್ದರು. ನಾನು ಇವರ ಮೊಮ್ಮಗ ಶಂಕರನ ಜೊತೆ ಕದ್ದು ಬೆಳ್ಳಿ ರೂಪಾಯಿಗಳನ್ನು ನೋಡಿದ ಮೇಲಂತೂ ನಮ್ಮ ಯಾರ ಮನೆಯಲ್ಲೂ ಇಲ್ಲದ ಅವುಗಳು ನಿಮ್ಮ ಮನೆಯಲ್ಲಿ ಹೇಗೆ ಬಂದವು ಅಂತ ಕೇಳ ಬೇಕು ಅಂತ ತುಂಬಾ ಸಲ ಅಂದುಕೊಂಡಿದ್ದೆ. ಅದರೆ ಶಂಕರನ ಗೆಳೆತನಕ್ಕೆ ಮಣಿದು ಸುಮ್ಮನಿರುತ್ತಿದ್ದೆ. ನನಗೊಬ್ಬನಿಗೇ ಗೊತ್ತಿದ್ದ ಆ ಗುಟ್ಟನ್ನು ಅದೊಂದು ದಿನ ತಪಲನ ಕಿವಿಗೆ ಉಸುರಿದ್ದೆ. `ನೀವಿಬ್ರೆ ತಿಂತೀರಾ ಕದ್ದು ನೋಡ್ಕಂತಿಣಿ…’ ಅಂತ ಮುನಿಸು ತೋರಿದ್ದ. ಹಂಗೆ ಮಾಡದಂತೆ ದುಂಬಾಲು ಬಿದ್ದು ಕೇಳಿಕೊಂಡಿದ್ದೆ. ಇನ್ನ ಯಾವತ್ತೂ ಅವನನ್ನು ಬಿಟ್ಟು ತಿನ್ನಲ್ಲ ಅಂತ ಆಣೆ ಮಾಡಿದ್ದೆ. ಆದರೆ ಅವತ್ತು ನನ್ನ ಆಣೆಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂಬಂತೆ `ಅಜ್ಜ ಅಷ್ಟೊಂದು ಬೆಳ್ಳಿ ರೂಪಾಯಿ ನಿಂಗೆ ಎಲ್ಲಿ ಸಿಕ್ಕಿದ್ವು?ʼ ಅಂತ ಕೇಳಿಯೇ ಬಿಟ್ಟಿದ್ದ. ಕುಟ್ಟಣಿಗೆಯನ್ನು ಚಕ್ಕನೆ ನಿಲ್ಲಿಸಿ ಅಜ್ಜ ಮೊಮ್ಮಗ ಶಂಕರನತ್ತ ನೋಡಿದರು. ಕದಿಯುತ್ತಿದ್ದ ಆ ಬೆಳ್ಳಿ ರೂಪಾಯಿಗಳನ್ನು ಮಾರಲು ಅವನೊಡನೆ ಹೋಗುತ್ತಿದ್ದುದು ಅಜ್ಜನಿಗೆ ಗೊತ್ತಾಗಿರಬಹುದು ಅಂತ ನನಗೆ ಒಳಗೊಳಗೇ ಹೆದರಿಕೆಯಾಗಿ, ಇನ್ನೇನು ಆ ಹೆದರಿಕೆ ಅಳುವಿಗೆ ತಿರುಗಿ ಬಿಡಬೇಕು ಅನ್ನುವಷ್ಟರಲ್ಲಿ ಅಜ್ಜನಿಗೆ ಏನನ್ನಿಸಿತೋ ಏನೋ ನನ್ನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು ತಮಗೆ ಬೆಳ್ಳಿ ರೂಪಾಯಿಗಳು ಸಿಕ್ಕಿದ್ದ ಕಥೆ ಹೇಳಿದ್ದರು.

ಬೆಳದಿಂಗಳು ಚೆಲ್ಲಿದ ಒಂದು ಸಂಜೆ. ಅದು ಅಜ್ಜ ಮದುವೆಯಾಗುವುದಕ್ಕೂ ತುಂಬಾ ಹಿಂದಿನ ಮಾತಂತೆ. ಅಂಥ ಸಂಜೆಯಲ್ಲಿ ಅವರು ತಮ್ಮ ಮನೆಯ ಹಿಂದೆ ಹಿತ್ತಲಿನಲ್ಲಿದ್ದ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದರಂತೆ. ದುಂಡಂತ ದುಂಡನೆಯ ಚಂದ್ರ ಆಗಲೇ ಆಕಾಶದ ನೆತ್ತಿಗೆ ಬಂದಿದ್ದನಂತೆ. ಆಕಾಶದ ತುಂಬಾ ನಕ್ಷತ್ರಗಳು ಮಿನುಗುತ್ತಿದ್ದವಂತೆ. ಆಗ ಇದ್ದಕ್ಕಿದ್ದಂತೆ ಬೆಳ್ಳನೆಯ ಬೆಳಕೊಂದು ಬೆಳಗಿಕೊಂಡು ಬಿರುಸಾಗಿ ಇವರೆದುರಿನ ಹಿತ್ತಲಿನ ಬೇಲಿಯನ್ನು ಹೊಕ್ಕಂತಾಯಿತಂತೆ. ಅವರು ಗಾಬರಿಗೊಂಡು ಹುಲ್ಲು ಹಿರಿಯುವುದನ್ನು ಬಿಟ್ಟು ಅದನ್ನೇ ನೋಡತೊಡಗಿದರಂತೆ. ಅವರು ಅದನ್ನು ಹಂಗೆ ನೋಡ ನೋಡುತ್ತಿದ್ದಂತೆಯೇ ಬೇಲಿಯನ್ನು ಹೊಕ್ಕ ಆ ಬೆಳಕು ಆ ಹಿತ್ತಲಿನ ಬೇಲಿಯಂಥ ಬೇಲಿಯನ್ನೆಲ್ಲಾ ಹಬ್ಬಿಕೊಂಡು ಆ ಇಡೀ ಬೇಲಿ ಫಳ ಫಳಾಂತ ಫಳಾರಿಸಿಕೊಂಡು ಮಿಂಚಲು ತೊಡಗಿತಂತೆ. ಕೊಂಚ ಹೊತ್ತಿನ ಬಳಿಕ ಆ ಮಿಂಚು ಮಂಗಳಮಾಯವಾಗಿ ಬಿಟ್ಟಿತಂತೆ. ಎಲಾ ಇದರ ಇದೇನು ಸೋಜಿಗ ಅಂತ ಅವರು ಬೆಚ್ಚಿ ಆ ಬೇಲಿಯನ್ನೇ ದಿಟ್ಟಿಸ ತೊಡಗಲು ಆ ಮಂಗಳ ಮಾಯವಾದಂಥ ಬೆಳಕು ಮೆಲ್ಲಗೆ ಪುಟ್ಟ ಪುಟ್ಟ ಹಸಿರು ಎಲೆಗಳಾಗತೊಡಗಿದವಂತೆ. ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಎಲೆಗಳು ಬೇಲಿಯ ಉದ್ದಗಲಕೂ ಹಾಸಿದಂತೆ ಹಬ್ಬಿಕೊಂಡು ಬಿಟ್ಟವಂತೆ. ಇನ್ನೂ ನೋಡುತ್ತಿರಲು ಹಂಗೆ ಹಬ್ಬಿಕೊಂಡ ಎಲೆಗಳ ನಡುವಿಂದ ಮಲ್ಲಿಗೆಯ ಮೊಗ್ಗುಗಳು ಬೆಳೆದು ನಿಂತು ಆ ಇಡೀ ಬೇಲಿ ದೊಡ್ಡದೊಂದು ಚಂದದ ಮೊಗ್ಗಿನ ಹಾರದಂತೆ ಕಾಣತೊಡಗಿ ಮರುಚಣಕ್ಕೇ ಆ ಮೊಗ್ಗುಗಳೆಲ್ಲಾ ಹೂವಾಗಿ ಅರಳಿ ಬಿಟ್ಟವಂತೆ. ಅಂಥ ಹೂಗಳ ಪರಿಮಳ ಬೀಸುತ್ತಿದ್ದ ಗಾಳಿಯಲ್ಲಿ ಹಿತ್ತಲಂಥ ಹಿತ್ತಲನ್ನೆಲ್ಲಾ ಕವುಚಿಕೊಂಡಿತಂತೆ. ಆಗ ಈ ಅಜ್ಜನಿಗೆ ಅದೇನು ಕನಸೋ ನನಸೋ ಎಂಬುದೊಂದೂ ಅರಿಯದೆ ಭಯದಿಂದ ಕಂಪಿಸ ತೊಡಗಿದರಂತೆ. ಅವರ ಇಂಥ ಸ್ಥಿತಿಯನ್ನು ಕಂಡ ಆ ಅರಳಿದ ಹೂಗಳು ಹೇಳಿದವಂತೆ, `ಹೇ ಹುಡುಗಾ, ಹಿಂಗ್ಯಾಕೆ ಬೆಚ್ಚಿ ಬೆಪ್ಪಾಗಿ ನಿಂತಿದ್ದೀಯಾ? ಇನ್ನು ಮುಂದೆ ಹಿಂಗೇ ಇದೇ ಹಿತ್ತಲಿನಲ್ಲಿ ಇಂಥ ಚಂದದ ತಿಂಗಳ ಬೆಳಕಿನ ರಾತ್ರಿಯಲ್ಲಿ ನಾವು ಅರಳುತ್ತೇವೆ,’ ಅಂದವಂತೆ.
ಮೊದಲೇ ಭಯಗೊಂಡಿದ್ದ ಅಜ್ಜನಿಗೆ ಹೂಗಳು ಮಾತನಾಡಿದ್ದರಿಂದ, ಗಿಡ ಮರಗಳು ಎಂದೂ ಮಾತನಾಡಿದ್ದನ್ನು ಕೇಳರಿಯದಿದ್ದರಿಂದ, ಇದು ಯಾವುದೋ ದೆವ್ವ ಇಲ್ಲವೆ ರಾಕ್ಷಸನ ಕೈವಾಡವೇ ಇರಬೇಕೆಂದು ಮತ್ತೂ ಭಯಗೊಂಡು ಕೂಗಲು ಬಾಯಿ ಬರದೆ ಓಡಲು ಕಾಲು ಬರದೆ ನಿಂತಲ್ಲೇ ನಡುಗತೊಡಗಿದ್ದನ್ನ ಕಂಡು ಮತ್ತೆ ಆ ಹೂಗಳೇ ಮಾತನಾಡಿ, `ಎಲೈ ಹುಡುಗನೇ, ನೀನಂದುಕೊಂಡಂತೆ ನಾವು ದೆವ್ವಗಳೂ ಅಲ್ಲ, ರಾಕ್ಷಸರೂ ಅಲ್ಲ, ನೀನು ಈ ಪರಿ ಹೆದರಬೇಕಾಗಿಯೂ ಇಲ್ಲ,’ ಅಂದವಂತೆ. ಆಗ ಕೊಂಚ ಧೈರ್ಯ ಕೂಡಿಸಿಕೊಂಡ ಅಜ್ಜ, `ಹಂಗಾದ್ರೆ ಥೇಟ್ ಮನುಷ್ಯರಂತೆಯೇ ಮಾತನಾಡುವ ನೀವ್ಯಾರು,’ ಅಂತ ಕೇಳಿದರಂತೆ.
ಆಗ ಆ ಹೂವಂಥ ಹೂಗಳಿಗೆಲ್ಲಾ ನಗು ಬಂದು ಅದ ತಡೆಯಲಾರದೆ ನಗಾಡುತ್ತಾ ಹೇಳಿದವಂತೆ:
`ಒಂದಾನೊಂದು ದಿನ ಪಾರ್ವತಿ ಪರಮೇಶ್ವರರು ಆಕಾಶದಲ್ಲಿ ನಡೆಯುತ್ತಾ ಈ ಭೂಲೋಕವನ್ನೆಲ್ಲಾ ವೀಕ್ಷಿಸುತ್ತಿರುವಾಗ ಅಕಸ್ಮಾತ್ತಾಗಿ ಪಾರ್ವತಿ ಮಾತೆಯ ಮುಡಿಯಲ್ಲಿದ್ದ ಹೂಗಳಲ್ಲಿ ಒಂದು ಹೂ ಜಾರಿ ಕೆಳಕ್ಕೆ ಬೀಳ ತೊಡಗಿತ್ತಂತೆ. ಅದನ್ನು ಕಂಡ ಆ ದೇವಿಯು ಆ ಒಂದು ಹೂ ನೂರಾಗಿ ಆ ನೂರು ಸಾವಿರವಾಗಿ ಆ ಸಾವಿರ ಲಕ್ಷವಾಗಿ ಭೂಲೋಕದಲ್ಲಿ ತುಂಬಾ ಬಡವನೂ, ಸದ್ಗುಣ ಸಂಪನ್ನನೂ ಆಗಿರುವ ನರ ಮನುಷ್ಯನೊಬ್ಬನ ಹಿತ್ತಲಿನ ಬೇಲಿಯಲ್ಲಿ ಬೆಳೆದು, ಆ ಬಡವನನ್ನು ಮತ್ತೂ ಸದ್ಗುಣ ಸಂಪನ್ನನನ್ನಾಗಿ ಮಾಡಬೇಕೆಂದೂ ಅಂತೆಯೇ ಅಲ್ಲಿನ ಗಿಡಮರಗಳನ್ನು ಮರೆತ ನರ ಮನುಷ್ಯರಿಗೆ ಆಗಾಗ ಎಚ್ಚರಿಸುತ್ತಿರಬೇಕೆಂದೂ, ಆ ಕಾರಣಕ್ಕಾಗಿಯೇ ನಮಗೆ ಮಾತುಗಳನ್ನು ಕರುಣಿಸಿದ್ದಾಳೆ ಆ ತಾಯಿ. ಹಿಂಗೆ ನೂರಾರು ಸಾವಿರಾರು ವರ್ಷಗಳಿಂದ ನಾವು ಈ ಭೂಲೋಕದ ಒಬ್ಬೊಬ್ಬ ಬಡವನ ಹಿತ್ತಲಿನಲ್ಲಿ ಒಂದಷ್ಟಷ್ಟು ದಿನ ಇದ್ದು ಈಗ ನಿನ್ನ ಹಿತ್ತಲಿಗೆ ಬಂದಿದ್ದೇವೆ.’
ಅಂದಿನಿಂದ ಬುಡುಗೊಚ್ಚ ತಿಂಗಳ ಬೆಳಕಿನ ರಾತ್ರಿಗಳಲ್ಲಿ ಮಲ್ಲಿಗೆಯ ಹೂಗಳೊಂದಿಗೆ ಮಾತನಾಡ ತೊಡಗಿದರಂತೆ. ಹಂಗೆ ಸುಮಾರು ವರ್ಷಗಳೇ ಕಳೆದವಂತೆ. ಅವರ ಪ್ರೀತಿಯನ್ನು ಕಂಡು ಒಂದು ತಿಂಗಳ ಬೆಳಕಿನ ರಾತ್ರಿ, `ನಾವು ನಿನ್ನ ಪ್ರೀತಿಗೆ ಮನಸೋತಿದ್ದೇವೆ. ನಿನಗೆ ಏನು ಬೇಕು ಕೇಳು,’ ಅಂದವಂತೆ ಆ ಹೂಗಳು. ಆಗ ಅಜ್ಜನಿಗೆ ಅಪಾರ ಖುಷಿಯಾಗಿ ಏನು ಕೇಳಬೇಕು ಏನು ಬಿಡಬೇಕು ಅನ್ನುವುದೊಂದೂ ಹೊಳೆಯದೆ ಪೇಚಾಡುತ್ತಿರಲು ಆಗ ಮತ್ತೆ ಆ ಹೂಗಳೇ ಮಾತನಾಡಿ, `ಅಯ್ಯೋ ಅದ್ಯಾಕೆ ಇಷ್ಟು ಪೇಚಾಡುತ್ತಿದ್ದೀಯಾ, ಇಗಾ ನೋಡು ನಿನ್ನ ಎರಡೂ ಕೈಗಳನ್ನು ಕೂಡಿಸಿ ಬೊಗಸೆ ಮಾಡಿಕೊಂಡು, ಆ ಬೊಗಸೆಯಲ್ಲಿ ನಮ್ಮಲ್ಲಿ ಯಾರನ್ನೇ ಆಗಲಿ ಅದರೊಳಕ್ಕೆ ಹಾಕಿಕೊಂಡು `ಮಾತಾಡ್ ಮಾತಾಡ್ ಮಲ್ಲಿಗೆ ದಂಟೇ’ ಅಂದರೆ ಸಾಕು, ನಿನ್ನ ಕೈಯ್ಯಲ್ಲಿರುವ ಹೂ ಬೆಳ್ಳಿಯ ರೂಪಾಯಿಯಾಗುತ್ತೆ.’
ಮುಂದೆ ಬುಡುಗೊಚ್ಚ ತಮಗೆ ಬೇಕಾದಾಗಲೆಲ್ಲಾ ಎಡಬಿಡದೆ ಹಾಗೇ ಮಾಡಿದರಂತೆ. ಅದರಂತೆ ಸಾವಿರಾರು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಂಡರಂತೆ. ಒಂದು ದಿನ ಹೀಗೆ ಅಜ್ಜ ಹತ್ತಾರು ಹೂಗಳನ್ನು ಒಟ್ಟಿಗೇ ಬೊಗಸೆಯಲ್ಲಿ ಹಿಡಿದುಕೊಂಡು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಳ್ಳುತ್ತಿರಬೇಕಾದರೆ, ಆ ಹೂಗಳು `ಇನ್ನು ನಿನ್ನ ಹಿತ್ತಲಿನಲ್ಲಿ ನಮ್ಮ ಸರದಿ ಮುಗಿಯಿತು, ನಾವಿನ್ನು ಹೊರಡುತ್ತೇವೆ,’ ಅಂದವಂತೆ. ಅಜ್ಜನಿಗೆ ವಿಪರೀತ ದುಃಖವಾಗಿ ಪರಿ ಪರಿಯಾಗಿ ಬೇಡಿಕೊಂಡರಂತೆ. ಅಜ್ಜನ ಯಾವ ಬೇಡಿಕೆಗೂ ಸೊಪ್ಪು ಹಾಕದೆ ಆ ಹೂಗಳು, ಅವುಗಳ ಬಳ್ಳಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಬಿಟ್ಟವಂತೆ. ಅವುಗಳು ಹಂಗೆ ಹೋದ ಮೇಲೆ ಅವುಗಳ ನೆನಪಿಗಾಗಿ ಹಿತ್ತಲಿನಲ್ಲಿ ಈಗಿರುವ ಮಲ್ಲಿಗೆಯ ಗಿಡವನ್ನು ನೆಟ್ಟಿದ್ದೇನೆ ಅಂದರು.
ಈ ಕಥೆ ನಮ್ಮೊಳಗೆ ಅಪಾರ ಅಚ್ಚರಿಯನ್ನೂ ಅಷ್ಟೇ ಆಸೆಯನ್ನೂ ಮೂಡಿಸಿತು. ನಾವು ಹೋಗಿ ಹಂಗೆ ಕೇಳಿಕೊಂಡು ಬಿಡಬಹುದು ಅಂತ ಈ ಅಜ್ಜ ಸುಳ್ಳು ಹೇಳುತ್ತಿದ್ದಾರೆ ಅನಿಸಿತು. ಮರು ದಿನ. ಅಜ್ಜ ಇಲ್ಲದ ಹೊತ್ತಲ್ಲಿ ನಾವು ಮೂವರು ಯಾರಿಗೂ ಕಾಣದಂತೆ ಬುಡುಗೊಚ್ಚ ಅವರ ಮನೆಯ ಹಿಂದಿದ್ದ ಹಿತ್ತಲಿಗೆ ಹೋದೆವು. ಹಿತ್ತಲಿನ ಬೇಲಿಯಲ್ಲಿ ಹಸಿರು ಕಕ್ಕುವಂತೆ ಬೆಳೆದಿದ್ದ ಮಲ್ಲಿಗೆಯ ದಂಟುಗಳಲ್ಲಿ ಮೈ ತುಂಬಾ ಹೂ ಅರಳಿದ್ದವು. ಮೂವರೂ ಮೆಲ್ಲಗೆ ಅವುಗಳ ಹತ್ತಿರ ಹೋಗಿ ದಂಟುಗಳಲ್ಲಿ ಅರಳಿದ್ದ ಹೂಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಅಜ್ಜ ಹೇಳಿದಂತೆ `ಮಾತಾಡ್ ಮಾತಾಡ್ ಮಲ್ಲಿಗೆ ದಂಟೇ’ ಅಂದೆವು. ಹೂಗಳು ಹೂಗಳಾಗಿ ಇದ್ದವೇ ಹೊರತು ಬೆಳ್ಳಿಯ ನಾಣ್ಯಗಳಾಗಲಿಲ್ಲ. ಮತ್ಮತ್ತೆ ಕೇಳಿಕೊಂಡೆವು. ಮತ್ಮತ್ತೆ ನಿರಾಸೆಗೊಂಡೆವು. ಆ ಚಣ ಅಜ್ಜನ ಮಾತುಗಳು ನಿಜ ಅನಿಸಿ ಅಲ್ಲಿಂದ ಹೊರಟೆವು. ಅಂದಿನಿಂದ ಗುಟ್ಟಾಗಿದ್ದ ಸಂಗತಿಯನ್ನು ರಟ್ಟು ಮಾಡಿದ್ದಕ್ಕಾಗಿ ಶಂಕರ ನನಗೆ ಕಡ್ಲೆ ಬೆಲ್ಲವನ್ನು ಕೊಡುವುದನ್ನು ಪೂರಾ ನಿಲ್ಲಿಸಿಬಿಟ್ಟಿದ್ದ.
ಕುರಿಮರಿ ರೂಪದ ದೆವ್ವ
ಮತ್ತೊಬ್ಬ ಕಥಿಕ ಕೆಂಪ್ಲಿಂಗಜ್ಜ ನನ್ನ ಅಜ್ಜನ ಪರಮಾಪ್ತ ಗೆಳೆಯ. ನಮ್ಮ ಭೌತ ಕುಟುಂಬದಲ್ಲಿ ಕುರಿ ಮೇಕೆಗಳು ಇದ್ದಂಥ ಹೊತ್ತಲ್ಲಿ ಅವುಗಳ ಪೂರಾ ಜವಾಬ್ದಾರಿ ಕೆಂಪ್ಲಿಂಗಜ್ಜನ ಮೇಲಿತ್ತು. ಹಂಗಂತ ಯಾರ ಮುಲಾಜಿಗೂ ಬೀಳುತ್ತಿರಲಿಲ್ಲ. ಜುಟ್ಟು ಬಿಟ್ಟುಕೊಂಡು, ಆ ಜುಟ್ಟಿಗೆ ಎಣ್ಣೆ ಹಾಕಿ ಸದಾ ಅಚ್ಚುಕಟ್ಟಾಗಿ ತುರುಬು ಕಟ್ಟಿಕೊಳ್ಳುತ್ತಿದ್ದ ಕೆಂಪ್ಲಿಂಗಜ್ಜನ ಎರಡೂ ಕಿವಿಗಳಲ್ಲಿ ಓಲೆಗಳಿರುತ್ತಿದ್ದವು. ಎಲೆ ಅಡಿಕೆಯಿಂದ ಬೊಚ್ಚು ಬಾಯಿ ಸದಾ ಕೆಂಪಗಿರುತ್ತಿತ್ತು. ಹೆಗಲಿಗೊಂದು ಕರಿ ಕಂಬಳಿಯನ್ನು ಹಾಕಿಕೊಂಡು, ಕೈಯ್ಯಲ್ಲಿ ಕುರಿಯ ಕೋಲನ್ನು ಹಿಡಿದು ಕುರಿ ಗೂಡಿನತ್ತ ಹೊರಟರೆ ಸಾಕು ಕುರಿ ನಾಯಿಗಳೆರಡು ಭಂಟರಂತೆ ಹಿಂಬಾಲಿಸುತ್ತಿದ್ದವು. ಮಳೆಗಾಲವಿರಲಿ, ಬೇಸಿಗೆ ಕಾಲವಾಗಿರಲಿ ಬೆಳಗ್ಗೆ ಒಂಭತ್ತಕ್ಕೆಲ್ಲಾ ಗೂಡಿನಿಂದ ಕುರಿಗಳನ್ನು ಹೊರಡಿಸಿಕೊಂಡು ಬಾರೆಯತ್ತ ಹೋಗುತ್ತಿದ್ದ ಕೆಂಪ್ಲಿಂಗಜ್ಜ ಮತ್ತೆ ಗೂಡಿಗೆ ಹಿಂದಿರುಗುತ್ತಿದ್ದದ್ದು ಸಂಜೆಗೇ. ಮಧ್ಯಾಹ್ನ ಊಟಕ್ಕಾಗಿ ಹೆಗಲ ಮೇಲಿರುತ್ತಿದ್ದ ತುಂಡುಗಂಬಳಿಯೊಳಗೆ ಸದಾ ರೊಟ್ಟಿಯ ಗಂಟು ಇರುತ್ತಿತ್ತು. ಕುರಿಗಳನ್ನೆಲ್ಲಾ ಗೂಡಿಗೆ ಕೂಡಿ, ರೊಪ್ಪದಲ್ಲಿರುತ್ತಿದ್ದ ಮರಿಗಳನ್ನು ಅವುಗಳ ಅವ್ವಂದಿರ ಕೆಚ್ಚಲುಗಳಿಗೆ ಹೂಡಾಕಿ ಎಂಟು ಗಂಟೆಯ ಹೊತ್ತಿಗೆ ಊಟಕ್ಕೆಂದು ಮನೆಗೆ ಬರುತ್ತಿದ್ದರು. ನನಗೆ ಆ ಕುರಿ ಗೂಡು, ಅದರೊಳಗಿನ ಮಂಚಿಗೆ, ಆ ಗೂಡೊಳಗಿನ ಕಮ್ಮನೆಯ ಘಮಲು ಹಾಗೂ ಕುರಿ ಮತ್ತು ಮರಿಗಳ ಅರುಚುವಿಕೆಯ ಸದ್ದು ತುಂಬಾ ಇಷ್ಟವಾಗುತ್ತಿತ್ತು. ಹಂಗಾಗಿ ಕೆಂಪ್ಲಿಂಗಜ್ಜ ತಿರುಗಿ ಗೂಡಿನತ್ತ ಹೋಗುವಾಗ ನನ್ನನ್ನೂ ಕರಕಂಡು ಹೋಗುವಂತೆ ಪೀಡಿಸುತ್ತಿದ್ದೆ. ಗೂಡಿಗೆ ಬರುತ್ತಲೇ ಮತ್ತೊಮ್ಮೆ ಎಲ್ಲಾ ಕುರಿ ಮತ್ತು ಮರಿಗಳ ಮೇಲೆ ಒಮ್ಮೆ ಕಣ್ಣಾಡಿಸಿ ಮಂಚಿಗೆ ಹತ್ತುತ್ತಿದ್ದಂತೆ ನಾನು ಕಥೆ ಕೇಳಲು ತುದಿಗಾಲಲ್ಲಿ ನಿಂತಿರುತ್ತಿದ್ದೆ. `ಅಯ್ಯೋ ಹಗ್ಲೆಲ್ಲಾ ಕುರಿ ಹಿಂದೆ ಸುತ್ತಾಡಿ ಮೈ ಕೈ ಎಲ್ಲಾ ಪದ ಹೇಳ್ತಾವೆ, ಅಂತದ್ರಾಗೆ ನೀನು ಕತೆ …’ ಅಂತ ಅನ್ನುತ್ತಾ ನನ್ನ ಮೇಲಿನ ಮಮಕಾರಕ್ಕೆ ಕೆಂಪ್ಲಿಂಗಜ್ಜ ಕಥೆ ಹೇಳಲು ಅಣಿಯಾಗುತ್ತಿತ್ತು.

ಕೆಂಪ್ಲಿಂಗಜ್ಜನ ಕಥೆಗಳಲ್ಲಿ ದೆವ್ವಗಳದ್ದೇ ಮೇಲುಗೈ. ಕೇಳಲು ತುಂಬಾನೇ ಭಯವಾದರೂ ಕಥೆಗಳೊಳಗಿನ ಅತಿ ಮಾನುಷ ಅಂಶಗಳು ನನ್ನನ್ನು ವಿಚಿತ್ರವಾಗಿ ಸೆಳೆಯುತ್ತಿದ್ದವು. ಹಂಗಾಗಿ ಎಷ್ಟೇ ಭಯವಾದರೂ ಹೂಗುಡುತ್ತಿದ್ದೆ. `ಲೋ ಕೆಂಪ್ಲಿಂಗ ಅದ್ಯಾಕಲಾ ಅಂಥ ಕಥೆಗುಳ್ನ ಹೇಳ್ತೀಯಾ. ನಿನ್ ಕಥೆ ಕೇಳಿದ್ ಮ್ಯಾಲೆ ದಿನಾನೂ ಹಾಸ್ಗೇಲಿ ವಂದ ಮಾಡ್ಕಂತಾನೆ’ ಅಂತ ಅಜ್ಜ ಕೆಂಪ್ಲಿಂಗಜ್ಜನಿಗೆ ಅನ್ನುತ್ತಿತ್ತು. ಹಂಗಂತ ನಾನು ಕೆಂಪ್ಲಿಗಜ್ಜನ ಜತೆ ಕುರಿಗೂಡಿಗೆ ಹೋಗುವ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ದೆವ್ವಗಳನ್ನು ಕಂಡರೆ ತನಗೆ ಒಂಚೂರೂ ಭಯವಿಲ್ಲವೆಂದೂ ಅವುಗಳೇ ನನ್ನನ್ನು ಕಂಡರೆ ಹೆದರುತ್ತವೆಂದೂ ಹೇಳುತ್ತಿದ್ದ ಕೆಂಪ್ಲಿಂಗಜ್ಜನ ಬಗ್ಗೆ ನನಗೆ ವಿಶೇಷ ಗೌರವ ಮೂಡುತ್ತಿತ್ತು. ಒಂದು ದಿನ ಕೆಂಪ್ಲಿಂಗಜ್ಜ ಕೆರೆ ಸಿದ್ದಪ್ಪನ ಗುಡಿಗೆ ಪೂಜೆಗೆಂದು ಹೋಗಿ ಸಂಜೆಯನ್ನು ಮೈಗಾಕಿಕೊಂಡು ಬರುತ್ತಿತ್ತಂತೆ. ಇನ್ನೇನು ಎರೆನೆತ್ತಿಯ ಇಳುಕಲು ಮುಗಿಯಾಕೆ ಬಂತು ಅನ್ನುವಷ್ಟರಲ್ಲಿ ಹಿಂದಿನಿಂದ ಕುರಿ ಮರಿಯೊಂದು ಅರಚಿದ್ದು ಕೇಳಿಸಿತ್ತಂತೆ. ಅಯ್ಯೋ ಯಾರೋ ಕುರಿಯವ್ರು ಮರೀನ ಬಿಟ್ಟೋಗಿದಾರೆ ಅಂತ ಅಂದುಕೊಂಡ ಕೆಂಪ್ಲಿಂಗಜ್ಜ ಆ ಮರಿಯ ಹತ್ತಿರಕ್ಕೆ ಹೋಗಿ ಅದನ್ನು ಎತ್ತಿಕೊಂಡು ಅದರ ಮೈದಡವುತ್ತಾ ಹೊರಟರಂತೆ. ಒಂದಷ್ಠ ಅಷ್ಟು ದೂರ ನಡೆಯುವುದರೊಳಗೆ ಆ ಪುಟ್ಟ ಮರಿ ಭಾರವಾಗತೊಡಗಿತಂತೆ. ಎಲ್ಲೋ ತನಗೇ ಕೈ ಸೋತಿರಬೇಕು ಅಂತ ಆ ಮರಿಯನ್ನು ಹೆಗಲಿಗೇರಿಸಿಕೊಂಡಿತಂತೆ. ಮತ್ತೊಂದಷ್ಟು ದೂರ ನಡೆಯೋದರೊಳಗೆ ಕುರಿ ಮರಿ ಮತ್ತಷ್ಟು ಭಾರವಾಗತೊಡಗಿ ಕಡೆಗೆ ಕಷ್ಟಪಟ್ಟು ನಡೆದು ಇನ್ನೇನು ಎರೆನೆತ್ತಿಯ ಇಳುಕಲು ಮುಗಿಯಕೆ ಬಂತು ಅನ್ನುವಷ್ಟರಲ್ಲಿ ಹೊತ್ತಿದ್ದ ಕುರಿ ಮರಿ ಯಮಭಾರವಾಗಿ ಹೊರಲು ಸಾಧ್ಯವೇ ಇಲ್ಲ ಅನ್ನುವಂತಾಗಿ ಕೆಂಪ್ಲಿಂಗಜ್ಜ ಆ ಮರಿಯನ್ನು ಕೆಳಕ್ಕಿಳಿಸಿ ರವಷ್ಟು ಸುಧಾರಿಸಿಕೊಳ್ಳುವ ಸಲುವಾಗಿ ಬೀಡಿಯೊಂದನ್ನು ಹಚ್ಚಿಕೊಂಡಿತಂತೆ. ಅಷ್ಟೊತ್ತಿಗೆ ಅದೆಲ್ಲಿದ್ದನೋ ಏನೋ ಯಾರೋ ದಾರಿಹೋಕನೊಬ್ಬ ಕೆಂಪ್ಲಿಂಗಜ್ಜನ ಹಿಂದೆ ನಿಂತು `ನಂಗೊಂದು ಬೀಡಿ ಇದ್ರೆ ತತಾ ಇಲ್ಲಿ’ ಅಂದನಂತೆ. ಕೆಂಪ್ಲಿಂಗಜ್ಜನಿಗೆ ಅಚ್ಚರಿಯಾಗಿ `ಅಯ್ಯೋ ಅದೆಲ್ಲಿ ಇದ್ದೋ ಅಪ್ಪಣ್ಣಿ ಈಟೊತ್ತಿನ ತನ್ಕ ಕಣ್ಗೇ ಬೀಳ್ಲುಲ್ಲ’ ಅಂದರಂತೆ. `ನಿನ್ನ ಹಿಂದ್ಗುಂಟ ನೆಡ್ಕಂಡು ಬರ್ತಿದ್ದೆ’ ಅಂದ ಆ ಅಪರಿಚಿತ ಕೆಂಪ್ಲಿಂಗಜ್ಜ ಕೊಟ್ಟ ಬೀಡಿಯನ್ನು ಸೇದುತ್ತಾ ಪಕ್ಕವೇ ಕೂತನಂತೆ. ಒಂದಷ್ಟು ಹೊತ್ತಾದ ಮೇಲೆ ಎದ್ದು ಪಕ್ಕದಲ್ಲಿದ್ದ ಕುರಿ ಮರಿಯನ್ನು ಮತ್ತೆ ಹೆಗಲಿಗೇರಿಸಿಕೊಂಡು ಹೊರಟ ಕೆಂಪ್ಲಿಂಗಜ್ಜನ ಹಿಂದೆ ಆ ಅಪರಿಚಿತನೂ ಹೊರಟನಂತೆ. `ಬಂದ್ರೆ ಬರ್ಲಿ ಪಾಪ. ಯಾವೂರೋ ಏನು ಕಥೇನೋ. ಇವತ್ತ ಬೇಕಾರೆ ನನ್ ಗುಡ್ನಾಗೆ ಇದ್ದು ವತಾರಿಕೆ ಎದ್ದು ಹೋಗ್ಲಿ’ ಅಂತ ಅಂದುಕೊಂಡು ಕೆಂಪ್ಲಿಗಜ್ಜ ನಡೆಯತೊಡಗಿದರಂತೆ. ಈಗ ಆ ಕುರಿ ಮರಿ ದಡಿ ಮರಿಯಾಗಿ ಹೊರಾಕೆ ಆಗಲ್ಲ ಅನ್ನುವಷ್ಟು ಭಾರವಾಗಿ ಹೋಯ್ತಂತೆ. ಆಗ ವಿದಿಯಿಲ್ಲದೆ ಕೆಂಪ್ಲಿಂಗಜ್ಜ ದೊಪ್ಪಂತ ಅದನ್ನು ನೆಲಕ್ಕೆ ಎಸೆದು ಬಿಟ್ಟರಂತೆ. ಹಂಗೆ ಎಸೆಯುತ್ತಲೇ ಆ ಮರಿ ಕೆಂಪ್ಲಿಂಗಜ್ಜನ ಎದುರಿಗೆ ಉದ್ದಂ ಉದ್ದಕ್ಕೆ ಬೆಳ್ಳಂ ಬೆಳ್ಳಗೆ ಬೆಳೆದು ನಿಂತು `ಬದಿಕ್ಕಂಡೆ ಹೋಗು ಬಡಜೀವ’ ಅಂತ ಕೂಗುತ್ತಾ ಓಡಿ ಹೋಯ್ತಂತೆ. ಪಕ್ಕಕ್ಕೆ ತಿರುಗಿ ನೋಡಿದರೆ ಜತೇಲಿ ಬರುತ್ತಿದ್ದ ಆ ಅಪರಿಚಿತನೂ ಮಾಯವಾಗಿದ್ದನಂತೆ. ಮರು ಚಣಕ್ಕೆ ಆ ಅಪರಿಚಿತನೂ ಮೊದಲಿನ ದೆವ್ವದಂಗೆ ಉದ್ದಕ್ಕೆ ಬೆಳೆದು ನಿಂತು `ನಿನ್ ಗ್ರಾಚಾರ ಚೆನಾಗಿತ್ತು ಇವತ್ತು. ಇಲ್ಲಾಂದ್ರೆ…’ ಅನ್ನುತ್ತಾ ಮೊದಲ ದೆವ್ವದ ಜತೆ ಕೀಕಾಕಿಕೊಂಡು ಹೊರಟು ಹೋದನಂತೆ. ಆಗ ಕೆಂಪ್ಲಿಂಗಜ್ಜನಿಗೆ ಅವುಗಳು ದೆವ್ವ ಅಂತ ಗೊತ್ತಾಗಿ `ನಂಗೇನಾರಾ ಮೊದ್ಲೇ ಗೊತ್ತಾಗಿದ್ರೆ ನಿಮ್ಗೊಂದು ಗತಿ ಕಾಣುಸ್ದೆ ಬಿಡ್ತಿರಲಿಲ್ಲ ಬಾಂಚೋದ್‌ಗಳ’ ಅಂತ ಕೆಂಪ್ಲಿಂಗಜ್ಜ ದೆವ್ವಗಳತ್ತ ಕೂಗುತ್ತಾ ಎಡಗಾಲಿನ ಮೆಟ್ಟನ್ನು ತಗಂಡು ಅವುಗಳತ್ತ ಹೊಗೆದನಂತೆ. ಇಂಥ ಅನೇಕ ಕಥೆಗಳನ್ನು ಹೇಳುತ್ತಿದ್ದ ಕೆಂಪ್ಲಿಂಗಜ್ಜ `ನೋಡ್ಲಾ ಅಪ್ಪಣ್ಣಿ ದೆವ್ವಗಳು ಇದಾವಲ್ಲ ಅವು ಯಾವ ವೇಷ ಬೇಕಾದ್ರೂ ಹಾಕ್ಕಂಡು ಬರ್ತಾವೆ ತಿಳ್ಕ. ಹಕ್ಕಿಗಳು ಕೂಗ್ದಂಗೆ ಕೂಗ್ತವೆ, ಮನುಷ್ಯರಂಗೇ ಮಾತಾಡ್ತವೆ. ಕುರಿ ಮರಿಯಂಗೆ, ನಾಯಿ ಕುನ್ನಿಯಂಗೆ, ಎಮ್ಮೆ ಕರೀನಂಗೆ ಹಿಂಗೇ …’ ಅಜ್ಜನ ಈ ಕಥೆಯನ್ನು ಕೇಳಿದ ಮೇಲೆ ನನಗೆ ಸಂಜೆಯಲ್ಲಿ ಇಲ್ಲಾ ಕತ್ತಲಲ್ಲಿ ಯಾವುದೇ ಪ್ರಾಣಿ ಪಕ್ಷಿ, ಮನುಷ್ಯರು ಕಂಡರೂ ಅದು ದೆವ್ವವೇ ಇರಬೇಕು ಅಂತ ಅನುಮಾನಕ್ಕೊಳಗಾಗಿ ನಡುಗಿಬಿಡುತ್ತಿದ್ದೆ. ಕೆಂಪ್ಲಿಂಗಜ್ಜನ ದೆವ್ವದ ಬಗ್ಗೆ ಹೇಳುತ್ತಿದ್ದವುಗಳೆಲ್ಲಾ ಕಟ್ಟು ಕಥೆಗಳು ಅಂತ ಗೊತ್ತಾಗುವ ಹೊತ್ತಿಗೆ ನಮ್ಮ ಮನೆಯಲ್ಲಿ ಕುರಿಗಳು ಇಲ್ಲವಾಗಿದ್ದವು. ಕುರಿ ಗೂಡೂ ಮಾಯವಾಗಿತ್ತು. ಹಣ್ಣಣ್ಣು ಮುದುಕನಾಗಿದ್ದ ಕೆಂಪ್ಲಿಂಗಜ್ಜನೂ ನಮ್ಮ ಮನೆಯನ್ನು ಬಿಟ್ಟು ಯಾವುದೋ ಹಳ್ಳಿಯಲ್ಲಿದ್ದ ಸಂಬಂಧಿಕರ ಮನೆ ಸೇರಿಕೊಂಡಿತ್ತು.

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

