ಇಬ್ಬರ ನಾಗಾಲೋಟದ ಓಟ ರೇಸಿಗೆ ಬಿದ್ದಂತೆ ಸಾಗುತ್ತಿದೆ. ನಾನು ಮುಂದೆ ಅಪ್ಪ ಹಿಂದೆ. ಓಡಿದೆ ಓಡಿದೆ….. ಅಪ್ಪನೂ ನಿಲ್ಲಿಸಲಿಲ್ಲ… ಊರ ಹೊರಭಾಗದ ರಸ್ತೆಯನ್ನು ಒಂದು ಸುತ್ತು ಸುತ್ತಿಸಿದೆ. ಅಪ್ಪ ಸುಸ್ತಾದ ಅಂತ ಕಾಣುತ್ತದೆ. ಊರಿಗೆ ಹತ್ತಿರವಾಗಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಜೋಳದ ಹೊಲ ಇತ್ತು ಅದು ಗುಂಪು ಗುಂಪಾಗಿತ್ತು. “ನಿಲ್ಲು ಓಡ್ಬೇಡ… ಓಡ್ಬೇಡ…” ಅಪ್ಪ ಕೂಗುತ್ತಲೆ ಇದ್ದ. ನನಗೆ ಗೊತ್ತಿತ್ತು ಅಪ್ಪನಿಂದ ಬಾಸುಂಡೆಯ ಏಟುಗಳು ಬಿದ್ದೇ ಬೀಳ್ತವೆ ಅಂತ. ಅದಕ್ಕಾಗಿ ನಾನು ಓಡುವುದನ್ನು ನಿಲ್ಲಿಸಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

ನನಗೆ ಪ್ರತಿ ಬೇಸಿಗೆಯೂ ಸುಡುವ ಬಿಸಿಲೊಳಗೆ ನೆನಪ ಹನಿಗಳನ್ನು ಹೊತ್ತುತಂದು ಮನಸ್ಸಿಗೆ ಮುದ ನೀಡುತ್ತದೆ. ಅದು ಉರಿವ ಬೆಂಕಿಗೆ ಕುದಿವ ಅನ್ನ ಹಸಿವನ್ನು ನೀಗಿಸಿದಂತೆ, ಬಿಗಿದ ಮುಖದ ತುಂಬಾ ಒಂದು ನಗೆ ಅರಳಿದಂತೆ ಮನಸ್ಸು ಬೇಸಿಗೆಯಲ್ಲಿ ಹಿಂದಿನ ಬಾಲ್ಯದ ನೆನಪುಗಳ ಜಾಡು ಹಿಡಿದು ದಾಪು ಗಾಲು ಹಾಕಿ ನಡೆಯಲು ಪ್ರಾರಂಭಿಸುತ್ತದೆ. ಆಗ ಎರಡೊತ್ತು ಊಟ ಸಿಕ್ಕರೆ ಅಷ್ಟೆ ಸಾಕು ಊಟ ಮಾಡಿದ ಕೈ ಆರುವ ಮೊದಲೆ ಬೀದಿ ಮಣ್ಣಿನೊಂದಿಗೆ ಆಟವಾಡಲು ಅಣಿಯಾಗುತ್ತಿದ್ದೆವು. ಊರ ಹೊರಗಿನ ಭಾಗದಲ್ಲಿ ಒಂದು ಬಾವಿ ಇತ್ತು. ಊರಿಗೆ ಹತ್ತಿರವಾಗಿತ್ತು ಅದರಲ್ಲಿ ಯಾವಾಗಲೂ ಮೂರ್ನಾಲ್ಕು ಅಡಿಗಳಷ್ಟು ನೀರು ಯಾವಾಗಲೂ ಇರುತ್ತಿತ್ತು. ನಾವೆಲ್ಲ ಇಷ್ಟೊಂದು ನೀರು ಬರುವುದಕ್ಕೆ ಹೇಗೆ ಸಾಧ್ಯ ಎಂದೆಲ್ಲಾ ಯೋಚಿಸುತ್ತಿದ್ದೆವು. ಹಿರಿಯರನ್ನು ಕೇಳಿದಾಗ ಪಕ್ಕದಲ್ಲೆ ಕೆರೆ ಇರುವುದರಿಂದ ನೀರು ಬರುತ್ತದೆ ಎಂದು ಹೇಳುತ್ತಿದ್ದರು ಹೇಗೆ ಎಂಬುದು ಮಾತ್ರ ನಿಗೂಢವಾಗಿಯೆ ಇತ್ತು. ಮುಂದೆ ನನ್ನ ಓದು ಮತ್ತು ಗ್ರಹಿಕೆ ನನ್ನಲ್ಲಿ ತಿಳುವಳಿಕೆಯನ್ನು ಬುದ್ಧಿವಂತಿಕೆಯನ್ನು ಜಾಗೃತಗೊಳಿಸಿದಾಗಲೆ ಭೂಮಿಯ ಒಳಭಾಗದಲ್ಲಿ ನೀರಿನ ಒಳ ಹರಿವು ಇರುತ್ತದೆ ಅದರಿಂದ ನೀರು ತುಂಬಿಕೊಳ್ಳುತ್ತದೆ ಎಂದು ತಿಳಿದದ್ದು. ಅಂತು ಬಾವಿಯ ನೀರು ಸ್ವಚ್ಛ ಹಾಗೂ ವಿಶಾಲವಾದ ಬಾವಿಯಾದ್ದರಿಂದ ಎಲ್ಲರಿಗೂ ಅಚ್ಚುಮೆಚ್ಚಿನ ಬಾವಿಯಾಗಿತ್ತು.

ಬೇಸಿಗೆ ಬಂತೆಂದರೆ ಸಾಕು, ಉರಿ ಬಿಸಿಲಿಗೆ ನೀರಲ್ಲಿ ಮುಳುಗಿ ಹಾಕಿದರೆ ದೇಹಕ್ಕೊಂದು ಉಲ್ಲಾಸ, ಯಾವುದೊ ಹೊಸತನವೊಂದು ಮೈಹೊಕ್ಕು ಮನಸ್ಸೆಲ್ಲ ಹಗುರಾದಂತೆ. ಹಾಗಾಗಿ ಬೇಸಿಗೆಯಲ್ಲಿ ಬಹುಪಾಲು ಸಮಯವನ್ನು ನೀರಿನಲ್ಲಿಯೆ ನಾವೆಲ್ಲ ಈಜಾಡುತ್ತಲೆ ಕಳೆಯುತ್ತಿದ್ದೆವು. ಈಗಿನಂತೆ ಬೇಸಿಗೆ ಶಿಬಿರಗಳಲ್ಲಿ ಮಾತ್ರ ತರಬೇತಿ ಪಡೆಯುವ ಅವಶ್ಯಕತೆ ಇರಲಿಲ್ಲ. ಎಲ್ಲವೂ ಪ್ರಕೃತಿಯೊಂದಿಗೆ ಬೆರೆತು ಆಡುವ ಆಟಗಳೆ. ಇಲ್ಲಿ ನಾವೆ ಸ್ವತಂತ್ರರು. ಆದ್ದರಿಂದಲೇ ಬಹಳ ಚಿಕ್ಕ ವಯಸ್ಸಿಗೆ ನೀರಿನಲ್ಲಿ ಸಲೀಸಾಗಿ ಈಜುವುದನ್ನು ಕಲಿತುಕೊಂಡಿದ್ದೆ. ಊರಿನಲ್ಲಿ ನನ್ನ ವಾರಿಗೆಯ ಪ್ರತಿಯೊಬ್ಬರೂ ಈಜುವುದನ್ನು ಕಲಿತುಕೊಳ್ಳುತ್ತಿದ್ದೆವು. ಇಲ್ಲದಿದ್ದರೆ ಅದೊಂದು ಅವಮಾನ ಎಂದೆ ಭಾವಿಸಲಾಗಿತ್ತು.

ಬೇಸಿಗೆಯ ದಿನಗಳಲ್ಲಿ ಅದೆ ನಮ್ಮ ಕೆಲಸವೆಂಬಂತೆ ಒಮ್ಮೆ ಬಾವಿಗೆ ಬಿದ್ದರೆ ಸಾಕು ಎರಡ್ಮೂರು ಗಂಟೆಗಳು ಈಜಾಡುವುದರಲ್ಲೆ ಸಮಯ ಕಳೆದುಹೋಗುತಿತ್ತು. ಮನೆಯಲ್ಲಿಯೂ ಅದರ ಬಗ್ಗೆ ತಕರಾರು ಇರಲಿಲ್ಲ. ಮನೆಯಲ್ಲಿ ಮಾಡುವ ಕೆಲಸವನ್ನು ಬಹುಬೇಗನೆ ಮುಗಿಸಿ ಬಾವಿಯತ್ತ ಓಡುತ್ತಿದ್ದೆವು. ನಂತರವೆಲ್ಲ ಆಟಗಳಲ್ಲೆ ಮುಳುಗಿ ಮಧ್ಯಾಹ್ನದ ಊಟವನ್ನು ಮಾಡುತ್ತಿರಲಿಲ್ಲ. ಮನೆಗೆ ಬಂದು ಯಾವುದಾದರೂ ನೆಪ ಹೇಳಿ ತಪ್ಪಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು.

ನನಗೆ ಚೆನ್ನಾಗಿ ನೆನಪಿದೆ, ಬೇಸಿಗೆಯ ಅದೊಂದು ದಿನ ಕೆರೆಗಳಲ್ಲಿ ಏಡಿಕಾಯಿ ಸಿಗುತ್ತವೆ, ಅವುಗಳನ್ನು ಹಿಡಿದುಕೊಂಡು ಹೋದರೆ ಮನೆಯಲ್ಲಿ ಶಹಬ್ಬಾಸ್ ಗಿರಿ ಸಿಗಬಹುದು. ಊಟಕ್ಕೆ ಒಂದಿನದ ಸಾಂಬಾರಿನ ತಾಪತ್ರಯವೆ ತಪ್ಪುತ್ತದಲ್ಲ… ಆದ್ದರಿಂದ ಮನೆಯಲ್ಲಿ ಖುಷಿ ಪಡುತ್ತಾರೆ ಎಂಬ ಕಾರಣಕ್ಕೆ ದೊಡ್ಡ ಹುಡುಗರ ಜೊತೆಗೆ ಏಡಿಕಾಯಿ ಹಿಡಿಯುವುದಕ್ಕೆ ಹೋದರೆ ನನಗೂ ಏಡಿಕಾಯಿ ಸಿಗುತ್ತವೆ ಅನ್ನೊ ಕಾರಣಕ್ಕೆ ಅವರ ಜೊತೆಗೆ ಹೋಗಿದ್ದೆ. ಇದು ಮುಂದೆ ನನಗೆ ಅನಾಹುತವನ್ನೆ ತಂದೊಡ್ಡುತ್ತದೆ ಎಂಬುದು ನನಗಂತು ತಿಳಿದಿರಲಿಲ್ಲ. ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಕೆರೆಯ ನೀರು ಖಾಲಿಯಾಗಿರುತ್ತದೆ ಅಳಿದುಳಿದ ನೀರಿನ ದಡದಲ್ಲಿ ಏಡಿಗಳು ಸುರಂಗದಂತೆ ಕೊರೆದು ಅವುಗಳಲ್ಲಿ ಅವಿತಿರುತ್ತವೆ. ಇಂತಹ ಏಡಿಗಳ ಸಾಂಬಾರು ಬಹಳ ರುಚಿಯಾಗಿರುತ್ತದೆ ಅನ್ನೊ ಕಾರಣಕ್ಕೆ ಬೇಸಿಗೆಯಲ್ಲಿ ಅವುಗಳನ್ನು ಹಿಡಿಯುವುದಕ್ಕೆ ಹೋಗುತ್ತಾರೆ.

ಮೊದಲು ಸುರಂಗದಂಥ ಆ ಗುಂಡಿಯೊಳಗೆ ಇಷ್ಟಿಷ್ಟೆ ನೀರನ್ನು ಎರಚಿದರೆ ಏಡಿ ಮೇಲೆ ಬರುತ್ತಿತ್ತು. ಅದಕ್ಕೆ ಕೈ ಹಾಕಿ ಹಿಡಿಯಬೇಕು. ಕೆಲವೊಮ್ಮೆ ನೀರಾವು ಸಿಗುತ್ತಿದ್ದವು. ನಮಗೇನು ಅಂತಹ ಅನುಭವವೇನು ಆಗಿರಲಿಲ್ಲ. ನಾನು ಇಂತಹ ಕಾರ್ಯಕ್ಕೆ ಹೋಗುತ್ತಿದ್ದದ್ದೆ ಅಪರೂಪ. ಏಕೆಂದರೆ ಹಾವುಗಳನ್ನು ಕಂಡರೆ ವಿಪರೀತ ಭಯವಿತ್ತು. ಜೇಡಿಮಣ್ಣಿನಲ್ಲಿ ಕಾಲುಗಳನ್ನು ಜೋಪಾನವಾಗಿ ಎತ್ತಿಡುತ್ತ ಗುಂಡಿಯಿಂದ ಗುಂಡಿಗೆ ಹೋಗಿ ಕೈಯಿಂದ ಅವುಗಳನ್ನು ಹಿಡಿಯಬೇಕಾಗಿತ್ತು. ಅದೊಂದು ಖುಷಿ ನೀಡುವ ಸಂಗತಿಯೂ ಹೌದು. ಬೆಳಿಗ್ಗೆ ಹೋದವನು ಮಧ್ಯಾಹ್ನವಾದರೂ ಮನೆಗೆ ಹೋಗಿರಲಿಲ್ಲ. ಮೂರ್ನಾಲ್ಕು ಏಡಿಗಳಷ್ಟೆ ಸಿಕ್ಕಿದ್ದವು. ಅವುಗಳನ್ನು ಹಿಡಿಯುವ ಧಾವಂತದಲ್ಲಿ ಸಮಯ ಸರಿದದ್ದೆ ತಿಳಿದಿರಲಿಲ್ಲ. ಮಧ್ಯಾಹ್ನ ಮೂರು ಗಂಟೆಯ ಮೇಲಾಗಿದೆ; ನಾವು ಏಡಿ ಹಿಡಿಯುವ ಕೆಲಸದಲ್ಲಿ ತೊಡಗಿದ್ದಾಗ ಏರಿಯ ಮೇಲೆ ಹೋಗುತ್ತಿದ್ದ ಹಿರಿಯರೊಬ್ಬರು ನಮ್ಮಪ್ಪನಿಗೆ ಈ ವಿಷಯ ಮುಟ್ಟಿಸಿದ್ದಾರೆ. ಅಪ್ಪನಿಗೆ ಮೂಗಿನ ತುದಿಯಲ್ಲಿಯೆ ಕೋಪ. ಬರಲಿ ಇವತ್ತು ಮನೆಗೆ ಎಂದಿದ್ದಾರೆ. ಇದ್ಯಾವುದರ ಸುಳಿವು ಇಲ್ಲದ ನಾನು ನನ್ನ ಪಾಡಿಗೆ ಕೆರೆಯಲ್ಲಿ ಏಡಿ ಹಿಡಿಯುವುದರಲ್ಲೆ ಮಗ್ನನಾಗಿದ್ದೇನೆ. ಒಂದೊಂದು ಸಿಕ್ಕಾಗೆಲ್ಲಾ ಹೊಸ ಹುರುಪು ಉತ್ಸಾಹ. ಕೈಯೆಲ್ಲ ಜೇಡಿ ಮೆತ್ತಿಕೊಂಡಿದೆ. ಅಂಗಿಯ ತುದಿಯಲ್ಲಿ ಅಲ್ಲಲ್ಲಿ ಜೇಡಿ ಮಣ್ಣಿನ ಕಲೆಗಳು ಎದ್ದುಕಾಣುತ್ತಿವೆ. ನಾನು ಮಾತ್ರ ಏಡಿ ಹಿಡಿಯುತ್ತಿದ್ದೇನೆ. ಅರೆ ಇನ್ನೊಂದು ಸಿಕ್ಕಿತಲ್ಲ… ಮತ್ತಷ್ಟು ಸಿಗಬಹುದೆಂಬ ಆಸೆ ದುರಾಸೆಯ ಕಬಂಧ ಬಾಹು ಕೆರೆ ಬಿಟ್ಟು ಬರದಂತೆ ತಡೆದಿದೆ. ನಮ್ಮಪ್ಪ ಇನ್ನಷ್ಟು ಕಾದಿದ್ದಾನೆ. ನನ್ನ ಸುಳಿವೆ ಇಲ್ಲ.

ಕೊನೆಗೆ ಅಪ್ಪನೆ ಬಂದ! ಕೋಪದಲ್ಲಿ ಬ್ರಹ್ಮ ರಾಕ್ಷಸ ಅವನು. ನಾನೊ ಮುಗ್ಧತೆಯ ಬಾಲ, ಕೋಪಕ್ಕೆ ತುತ್ತಾದ ಯಾವ ಮನಸ್ಸು ಶಾಂತವಾಗಿರಲು ಸಾಧ್ಯ? ಕೆರೆಯ ಏರಿಯ ಮೇಲೆ ಗುಟುರು ಹಾಕಿದ ಅಪ್ಪನ ಧ್ವನಿ ನನ್ನಲ್ಲಿ ನಡುಕವನ್ನೆ ಉಂಟುಮಾಡಿದ್ದು ನಿಜ. ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುವುದಕ್ಕೂ ಸಮಯವಿಲ್ಲ. ಅಲ್ಲಿಂದ ಓಡಬೇಕಷ್ಟೆ. ಏರಿಯ ಇಳಿಜಾರಿನಲ್ಲಿ ನಿಧಾನಕ್ಕೆ ಇಳಿದುಬರುವಷ್ಟರಲ್ಲಿ ನಾನಾಗಲೆ ಅಪ್ಪನಿಂದ ಬಹಳಷ್ಟು ದೂರದಲ್ಲಿ ತಿರುಗಿ ನೋಡದೆ ಓಡುತ್ತಿದ್ದೆ. ಕ್ಷಣಾರ್ಧದಲ್ಲಿ ಅಲ್ಲಿಂದ ಕಣ್ಮರೆಯಾಗಿದ್ದೆ. ಮನೆಗೆ ಬರಲಿ ಅವನಿಗೆ ಸರಿಯಾಗಿ ಶಾಸ್ತಿ ಮಾಡುವೆ ಎಂದುಕೊಂಡ ಅಪ್ಪ ಹಿಂತಿರುಗಿದ. ಅವನಿಂದ ತಪ್ಪಿಸಿಕೊಂಡ ನಾನು ಓಡುತ್ತಲೆ ಇದ್ದೆ. ಯಾವ ಏಡಿಕಾಯಿ ಏನುಕತೆ…. ಯಾವುದೂ ನೆನಪಿಲ್ಲದವನಂತೆ ಓಡೋಡಿ ಬಂದು ಮನೆಯನ್ನು ಹೊಕ್ಕಿದ್ದೆ. ಅಪ್ಪ ಇನ್ನೂ ಬಂದಿರಲಿಲ್ಲ. ಅವನು ಬರುವುದು ತಡವಾಗಿರಬೇಕು. ಊರಮುಂದೆ ಯಾರು ಮಾತಿಗೆ ಸಿಕ್ಕರೊ.. ನನ್ನ ಮೇಲಿನ ಕೋಪ ಇಳಿದಿರಬೇಕು. ಮನೆಗೆ ಬಂದಾಗ ಬಾಯಿ ಮಾಡಿದ ನಾನು, ಅಮ್ಮನ ಸೆರಗಲ್ಲಿ ಅವಿತುಕೊಂಡಿದ್ದೆ ಅಳುತ್ತಿದ್ದೆ. ಏನನ್ನಿಸಿತೋ ಏನೋ ಅಪ್ಪ ಅವತ್ತು ಹೊಡೆಯಲಿಲ್ಲ.

ಬೆಳಿಗ್ಗೆ ಹೋದವನು ಮಧ್ಯಾಹ್ನವಾದರೂ ಮನೆಗೆ ಹೋಗಿರಲಿಲ್ಲ. ಮೂರ್ನಾಲ್ಕು ಏಡಿಗಳಷ್ಟೆ ಸಿಕ್ಕಿದ್ದವು. ಅವುಗಳನ್ನು ಹಿಡಿಯುವ ಧಾವಂತದಲ್ಲಿ ಸಮಯ ಸರಿದದ್ದೆ ತಿಳಿದಿರಲಿಲ್ಲ. ಮಧ್ಯಾಹ್ನ ಮೂರು ಗಂಟೆಯ ಮೇಲಾಗಿದೆ; ನಾವು ಏಡಿ ಹಿಡಿಯುವ ಕೆಲಸದಲ್ಲಿ ತೊಡಗಿದ್ದಾಗ ಏರಿಯ ಮೇಲೆ ಹೋಗುತ್ತಿದ್ದ ಹಿರಿಯರೊಬ್ಬರು ನಮ್ಮಪ್ಪನಿಗೆ ಈ ವಿಷಯ ಮುಟ್ಟಿಸಿದ್ದಾರೆ. ಅಪ್ಪನಿಗೆ ಮೂಗಿನ ತುದಿಯಲ್ಲಿಯೆ ಕೋಪ. ಬರಲಿ ಇವತ್ತು ಮನೆಗೆ ಎಂದಿದ್ದಾರೆ. ಇದ್ಯಾವುದರ ಸುಳಿವು ಇಲ್ಲದ ನಾನು ನನ್ನ ಪಾಡಿಗೆ ಕೆರೆಯಲ್ಲಿ ಏಡಿ ಹಿಡಿಯುವುದರಲ್ಲೆ ಮಗ್ನನಾಗಿದ್ದೇನೆ.

ಒಂದೆರಡು ದಿನ ಕಳೆದಿರಬೇಕು. ಮತ್ತದೆ ಬೇಸಿಗೆಯ ಆಟಗಳು ನಮ್ಮನ್ನು ಬಿಡುತ್ತಿರಲಿಲ್ಲ ಅಥವಾ ನಾವೆ ಅವುಗಳನ್ನು ಬಿಡುತ್ತಿರಲಿಲ್ಲವೋ ತಿಳಿಯದು. ಬುಗುರಿ ಚಿನ್ನಿದಾಂಡು ಈಜಾಡುವುದು ಜೇನನ್ನು ಕೀಳುವುದು ಇವು ನಮ್ಮ ಬಾಲ್ಯದ ಆಟಗಳು ಅವು ಕೊಡುತ್ತಿದ್ದ ಸಂತೋಷವೆ ಬೇರೆ ನಮ್ಮ ಓರಗೆಯವರದೆ ಒಂದು ಗುಂಪಿತ್ತು ಸದಾ ಇಂತಹ ಆಟಗಳನ್ನು ಆಡುವುದು ಯಾವಾಗಲೂ ನಡೆದಿತ್ತು. ಸ್ವಲ್ಪ ದೊಡ್ಡವರೆನಿಸಿಕೊಂಡವರು head and tail (ರಾಜ ರಾಣಿ) ಆಡುವುದು ಸಾಮಾನ್ಯವಾಗಿತ್ತು. ಹಣದ ಆಟವಿದು ನಾವೆಂದೂ ಅದರ ತಂಟೆಗೆ ಹೋದವರಲ್ಲ. ಆದರೆ ಕುತೂಹಲದಿಂದ ನೋಡುತ್ತಿದ್ದೆವು. ದುಡ್ಡನ್ನು ಕಟ್ಟಿ ಆಡುತ್ತಿದ್ದರಿಂದ ಅದು ಕೆಟ್ಟ ಆಟವೆಂದೆ ಕರೆಯಲಾಗಿತ್ತು. ಯಾರಿಗಾದರೂ ಗೊತ್ತಾದರೆ “ಈ ವಯಸ್ಸಿಗೆ ಅದನ್ನು ಆಡ್ತಾನ ಅವನು? ಉದ್ಧಾರಾದಂಗೆ” ಇದು ದೊಡ್ಡವರ ಉವಾಚ. ಇದನ್ನು ತಿಳಿಯದ ನಾವು ಕುತೂಹಲಕ್ಕೆ ಒಂದೊಂದು ಸಾರಿ ಹತ್ತು ಪೈಸೆ ಇಪ್ಪತ್ತು ಪೈಸೆ ಕಟ್ಟಿ ಆಡುತ್ತಿದ್ದೆವು. ಅದು ಯಾರಿಗೂ ತಿಳಿಯದ ಹಾಗೆ. ಮನೆಯಲ್ಲಿಯೂ ಅದರ ಬಗ್ಗೆ ಎಂದೂ ಮಾತನಾಡುತ್ತಿರಲಿಲ್ಲ. ಅದು ಗೌಪ್ಯವಾಗಿಯೆ ಇರುತ್ತಿತ್ತು.

ಒಂದಿನ ಜೇಬಿನಲ್ಲಿ ಪೈಸೆಗಳ ಜಣ ಜಣ ಸದ್ದು ಕೇಳಿ ಅಪ್ಪನಿಗೆ ಅನುಮಾನ ಬರುವಂತೆ ಮಾಡಿರಬೇಕು. ಅದರ ಬಗ್ಗೆ ನನ್ನನ್ನೇನೂ ಕೇಳಲಿಲ್ಲ. ಎಂದಿನಂತೆ ಬಾವಿಯಲ್ಲಿ ಈಜಾಡಿಕೊಂಡು ಕೂದಲನ್ನು ಒಣಗಿಸಿಕೊಂಡು ಊರ ಹೊರಗಿನ ಕೋಟೆಹಿಂದಲ ರೋಡಿನತ್ತ ಇದ್ದ ಹುಣಸೇಮರದ ಅಡಿಗೆ ಹೋಗಿದ್ದೆ. ವಿಶಾಲವಾದ ಮೈದಾನದಂತ ಪ್ರದೇಶವದು. ಅದನ್ನು ನಾವು ಛೇರಮೆನ್ರು ಕಣ ಎಂದೆ ಕರೆಯುತ್ತಿದ್ದೆವು. ಸಾಮಾನ್ಯವಾಗಿ ಮರದ ನೆರಳಿನಲ್ಲಿ ಆ ಆಟವನ್ನು ಆಡ್ತಿದ್ವಿ. ಅಲ್ಲಿ ಜನರು ಯಾರು ಜಾಸ್ತಿ ಓಡಾಡುತ್ತಿರಲಿಲ್ಲ. ಅಂದು ಸಹ ಈಗಾಗಲೆ ಈ ಆಟದಲ್ಲಿ ಆಡಿ ಒಂದಿಷ್ಟು ಹಣ ಗೆದ್ದುಕೊಂಡಿದ್ದು, ನನ್ನನ್ನು ಇನ್ನಷ್ಟು ಆಡುವಂತೆ ಪ್ರೇರೇಪಿಸಿತು ಅನ್ನಿಸುತ್ತೆ. ಗೆಳೆಯರೆಲ್ಲ ಆ ಆಟವನ್ನು ಆಡುವಾಗಲೆ ಒಂದಿಷ್ಟು ಹಣ ಆಗಲೆ ಸೋತಿದ್ದೆ. ಏನಾದರೂ ಮಾಡಿ ಗೆಲ್ಲಬೇಕಲ್ಲ ಅಂದುಕೊಂಡು ಗೆಳೆಯನ ಹತ್ತಿರ ಇಪ್ಪತ್ತು ಪೈಸೆ ಕಡ ತಗೊಂಡು ಆಡ್ತ ಆಡ್ತಾ ಹಣವೇನೊ ವಾಪಸ್ ಬರ್ತಾ ಇತ್ತು.

ಆಟದ ಬರದಲ್ಲಿ ಮನೆಗೆ ಮಧ್ಯಾಹ್ನ ಹೋಗುವುದನ್ನೆ ಮರೆತಿದ್ದೆ. ಪಕ್ಕದ ಮನೆಯ ಗೆಳೆಯ ದೊಡ್ಡೀರ ಮುಂಚೆಲೆ ಮನೆಗೆ ಹೋಗಿದ್ದಾನೆ. ನನ್ನ ಬಗ್ಗೆ ಅವನಲ್ಲಿ ಕೇಳಿದ್ದಾರೆ. ಅವನು ರಾಜ ರಾಣಿ ಆಡ್ತಿದ್ದ ಎಂದಿದ್ದಾನೆ. ಅಪ್ಪನಿಗೆ ನಖಶಿಖಾಂತ ಉರಿದುಹೋಗಿದೆ. ಇವತ್ತಿದೆ ಅವನಿಗೆ ಅಂದ್ಕೊಂಡು ಬರಬರನೆ ಪಂಚೆ ಕಟ್ಟಿಕೊಂಡು ಕೋಟೆ ಹಿಂದಲ ಜಾಗಕ್ಕೆ ಬಂದಿದ್ದಾರೆ. ಅಲ್ಲಿ ಹುಡುಗರು ಗುಂಪು ಗುಂಪಾಗಿ ಇದೇ ಆಟದಲ್ಲಿ ತೊಡಗಿಕೊಂಡಿರುವುದನ್ನು ನೋಡಿದ್ದಾರೆ, ಅದನ್ನು ನಾನು ಕಂಡಿಲ್ಲ. ನಾನು ಕುಳಿತು ಆಡುತ್ತಿದ್ದವನು ಯಾಕೋ ಮೇಲೆಕ್ಕೆದ್ದು ನೋಡುತ್ತೇನೆ. ಅಪ್ಪ ಬೆನ್ನು ತಿರುಗಿಸಿ ನಿಂತಿದ್ದಾನೆ. ಕ್ಷಣಾರ್ಧದಲ್ಲಿ ಮೈಯೆಲ್ಲ ಬೆವತು ನಾಲಿಗೆ ಒಣಗಿದ್ದು ನನ್ನ ಗಮನಕ್ಕೆ ಬಂತು. ಯಾಕೆಂದರೆ ಅಪ್ಪನದು ಬಲುಕೋಪ. ಬಹಳ ಶಿಸ್ತಿನ ಮನುಷ್ಯ ಕೋಪ ಬಂದಾಗ ಮಾತ್ರ ಮನುಷ್ಯನೆ ಅಲ್ಲ ಅನ್ನುವಷ್ಟು ಕ್ರೂರಿಯಾಗುತ್ತಿದ್ದ. ತಪ್ಪುಗಳಿಗೆ ಮಾತ್ರ ಈ ರೀತಿ ವ್ಯಘ್ರನಾಗುತ್ತಿದ್ದ. ಈ ಹಿಂದೆ ಅಂತಹ ಹೊಡೆತಗಳನ್ನು ತಿಂದ ನೆನಪು ನನ್ನನ್ನು ಬೆವರುವಂತೆ ಮಾಡಿತು. ಅದರಲ್ಲಿಯೂ ಇವತ್ತಿನ ಕೆಲಸ ಅತಿ ಕೆಟ್ಟದ್ದು, ಅದಕ್ಕೆ ಕ್ಷಮೆ ಎಲ್ಲಿದೆ. ನನಗೆ ಗೊತ್ತಾಯಿತು ನನಗೆ ಇವತ್ತು ಘೋರವಾದ ಶಿಕ್ಷೆಯಂತು ಖಾತ್ರಿ ಏನು ಮಾಡುವುದು “ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು” ಅನ್ನುವಂತೆ ಏನಾದರೂ ಆಗಲಿ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಅಂದುಕೊಂಡು ಅಪ್ಪ ನನ್ನ ಕಡೆ ತಿರುಗುವಷ್ಟರಲ್ಲಿ ಓಡುವುದಕ್ಕೆ ಶುರು ಮಾಡಿದ್ದೆ. ಅಪ್ಪ ಈ ಹಿಂದೆ ಏಡಿಕಾಯಿ ಹಿಡಿಯುವಾಗೇನೊ ಸುಮ್ಮನಾಗಿದ್ದ. ಆದ್ರೆ ಇವತ್ತು ನಾನು ದುಡ್ಡಿನ ಆಟವಾಡುತ್ತಿದ್ದದ್ದು ವಿಪರೀತ ಕೋಪ ತರಿಸಿತ್ತು. ಹಾಗಾಗಿ ಅಪ್ಪನೂ ನನ್ನ ಹಿಂದೆಯೆ ಓಡುವುದಕ್ಕೆ ಪ್ರಾರಂಭಿಸಿದ.

ಇಬ್ಬರ ನಾಗಾಲೋಟದ ಓಟ ರೇಸಿಗೆ ಬಿದ್ದಂತೆ ಸಾಗುತ್ತಿದೆ. ನಾನು ಮುಂದೆ ಅಪ್ಪ ಹಿಂದೆ. ಓಡಿದೆ ಓಡಿದೆ….. ಅಪ್ಪನೂ ನಿಲ್ಲಿಸಲಿಲ್ಲ… ಊರ ಹೊರಭಾಗದ ರಸ್ತೆಯನ್ನು ಒಂದು ಸುತ್ತು ಸುತ್ತಿಸಿದೆ. ಅಪ್ಪ ಸುಸ್ತಾದ ಅಂತ ಕಾಣುತ್ತದೆ. ಊರಿಗೆ ಹತ್ತಿರವಾಗಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಜೋಳದ ಹೊಲ ಇತ್ತು ಅದು ಗುಂಪು ಗುಂಪಾಗಿತ್ತು. “ನಿಲ್ಲು ಓಡ್ಬೇಡ… ಓಡ್ಬೇಡ…” ಅಪ್ಪ ಕೂಗುತ್ತಲೆ ಇದ್ದ. ನನಗೆ ಗೊತ್ತಿತ್ತು ಅಪ್ಪನಿಂದ ಬಾಸುಂಡೆಯ ಏಟುಗಳು ಬಿದ್ದೇ ಬೀಳ್ತವೆ ಅಂತ. ಅದಕ್ಕಾಗಿ ನಾನು ಓಡುವುದನ್ನು ನಿಲ್ಲಿಸಲಿಲ್ಲ. ಅಪ್ಪನಿಗೆ ಕೋಪ ಇನ್ನಷ್ಟು ಜಾಸ್ತಿಯಾಗಿ ರಸ್ತೆಯ ಪಕ್ಕದ ಗುಂಡುಗಳನ್ನು ಎಸೆಯಲು ಪ್ರಾರಂಭಿಸಿದ್ದಾನೆ. ಆತನು ಬೀಸಿದ ಗುಂಡೊಂದು ಇನ್ನೇನು ನನಗೆ ಬೀಳಬೇಕು ಅನ್ನುವಷ್ಟರಲ್ಲಿ ಜೋಳದ ಸೆಪ್ಪೆಗೆ ನುಗ್ಗಿ ಅವಿತುಕೊಂಡಿದ್ದೆ. ಒಂದೆ ನೆಗೆತಕ್ಕೆ ಹಾರಿ ಸೆಪ್ಪೆಯ ಮಧ್ಯೆ ಕುಳಿತೆ ಗುಂಡು ನನ್ನ ಪಕ್ಕದಲ್ಲಿ ಹಾದುಹೋಗಿತ್ತು. ಅಪ್ಪನ ಕೋಪ ಇನ್ನೂ ಕಡಿಮೆ ಆಗಿರಲಿಲ್ಲ. ಅಲ್ಲಿಯೆ ನಿಂತಿದ್ದಾನೆ. ಸುಮಾರು ಅರ್ಧಗಂಟೆಯವರೆಗೂ ಅಲ್ಲಿಯೆ ಕುಳಿತಿದ್ದೆ ಜೋಳದ ಸೆಪ್ಪೆಯಲ್ಲಿ. ಆದರೂ ಅಪ್ಪ ಕಲ್ಲನ್ನು ಬೀಸುತ್ತಲೆ ಇದ್ದ. ಹತ್ತಿರ ಬಂದು ನೋಡಿದರೆ, ನನ್ನ ಸುಳಿವಿರಲಿಲ್ಲ. ನಾನು ಮಧ್ಯದಲ್ಲಿ ಅವಿತುಕೊಂಡದ್ದು ಅಪ್ಪನಿಗೆ ಗೊತ್ತಾಗಲು ಸಾಧ್ಯವೇ ಇರಲಿಲ್ಲ. ಆದರೆ ನನಗೆ ಶಬ್ದ ಮಾತ್ರ ತಿಳಿಯುತ್ತಿತ್ತು. ಸುಮಾರು ಹೊತ್ತು ಆದಮೇಲೆ ನಿಧಾನವಾಗಿ ಹೊರಬಂದು ನೋಡಿದೆ. ಅಷ್ಟರಲ್ಲಿ ಅಲ್ಲಿ ಯಾರೂ ಇರಲಿಲ್ಲ.

ಕತ್ತಲಾಗುವುದನ್ನೆ ಕಾದು ಮನೆಗೆ ಹೋಗಿದ್ದೆ. ಅಪ್ಪನ ಕೋಪ ಅಷ್ಟು ಹೊತ್ತಿಗೆ ಸ್ವಲ್ಪ ಇಳಿದಿತ್ತು. ಆದರೂ ಇನ್ನೊಮ್ಮೆ ಇಂತಹ ತಪ್ಪು ಮಾಡಬಾರದೆಂದು ಅಡಿಗೆ ಮಾಡಲು ತಂದಿದ್ದ ಕಟ್ಟಿಗೆಯಿಂದಲೆ ಬಾರಿಸಿದ. ಒಂದೆರಡು ತಪ್ಪಿಸಿಕೊಂಡೆನಾದರೂ, ಇನ್ನೊಂದೆರೆಡು ಬಾಸುಂಡೆಗಳು ಬೆನ್ನು ಕೈಗಳ ಮೇಲೆ ಬಂದಿದ್ದವು. ಅತ್ತು ಅತ್ತು ಆ ರಾತ್ರಿಯನ್ನು ಹಾಗೆಯೇ ಕಳೆದಿದ್ದೆ. ಬಾಲ್ಯದಲ್ಲಿ ಎಲ್ಲವೂ ಕ್ಷಣಿಕವಷ್ಟೆ. ಬೆಳಿಗ್ಗೆ ಎದ್ದಾಗ ಎಲ್ಲರೂ ನೆನ್ನೆ ನಡೆದ ಘಟನೆಯನ್ನೆ ಮೆಲುಕು ಹಾಕಿ ನಗುತ್ತಿದ್ದರು. ಗುಂಡು ಎಸೆದ ಘಟನೆಯನ್ನು ವಿವರಿಸುವಾಗ ಮಾತ್ರ ಅಪ್ಪನ ಮುಖದಲ್ಲಿ ಆತಂಕವಿದ್ದುದನ್ನು ಗಮನಿಸಿದ್ದೆ. ಆ ಕಲ್ಗುಂಡೇನಾದರೂ ಬಿದ್ದಿದ್ದರೆ ಬಹುಶಃ ನಾನು ಇರುತ್ತಿರಲಿಲ್ಲ ಎಂದು ನೆನಸಿಕೊಂಡಾಗ ಮೈ ನಡುಗುತ್ತದೆ. ಅಪ್ಪನು ಮುಂದೆ ಇಂತಹ ತಪ್ಪುಗಳನ್ನು ಮಾಡಲಿಲ್ಲ. ಏನಾದರೂ ತಪ್ಪನ್ನು ಮಾಡಿದರೆ ಬಾಯಿ ಮಾತಿನಲ್ಲೆ ಗದರಿಸುತ್ತಿದ್ದ. ನಾನು ಸಹ ಅಂದೆ ಕೊನೆ, ದುಡ್ಡು ಕಟ್ಟಿ ಆಡುವ ಆಟವನ್ನು ಮತ್ತೆಂದೂ ಆಡಲಿಲ್ಲ. ಇಂದಿಗೂ ಆ ಕೆಲಸವನ್ನು ನಾನು ಮಾಡುವುದಿಲ್ಲ… ಅದೊಂದು ಬದುಕಿನ ಪಾಠವಾಗಿತ್ತು..

(ಮುಂದುವರಿಯುವುದು)