ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ. ಸಣ್ಣಪುಟ್ಟ ಸಂಸ್ಥಾನಗಳ ರಾಜವಂಶವನ್ನು ಕುರಿತು ಮಾಸ್ತಿಯವರು ಬರೆದಿರುವುದು ವಿಶೇಷವಾಗಿದೆ. -ಮಾಸ್ತಿ ಅವರ ಐತಿಹಾಸಿಕ ಕಾದಂಬರಿಗಳ ಕುರಿತು  ಡಾ. ಎಸ್. ಸಿರಾಜ್ ಅಹ್ಮದ್ ನಡೆಸಿದ ವಿಶ್ಲೇಷಣೆ ಇಲ್ಲಿದೆ. 

 

ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಾದಂಬರಿಗಳನ್ನು ಓದುವಾಗ ಅವರು ಕನ್ನಡದ ಮೇಜರ್ ಲೇಖಕರಾಗಿರುವುದು ವೈವಿಧ್ಯಮಯ ಕತೆಗಳನ್ನು ಬರೆದದ್ದಕ್ಕೋ ಅಥವಾ ಎರಡು ದೀರ್ಘ ಐತಿಹಾಸಿಕ ಕಾದಂಬರಿಗಳನ್ನು ಬರೆದದ್ದಕ್ಕೋ ಎಂಬ ಪ್ರಶ್ನೆ ಸುಳಿದುಹೋಗುತ್ತದೆ. ಮಾಸ್ತಿಯವರ ಕತೆಗಳ ಬಗ್ಗೆ ವಿಸ್ತಾರವಾದ ಚರ್ಚೆ ನಡೆದ ಹಾಗೆ ಅವರ ಕಾದಂಬರಿಗಳ ಕುರಿತು ಆಳವಾದ ಚರ್ಚೆ ಕನ್ನಡದಲ್ಲಿ ನಡೆದ ಹಾಗೆ ಕಾಣುವುದಿಲ್ಲ. ಆದರೆ ಅವರ ಕಾದಂಬರಿಗಳನ್ನು ಗಮನಿಸಿದರೆ ಮಾಸ್ತಿಯವರನ್ನು ಕನ್ನಡದ ಪ್ರಮುಖ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲಿಸುವಷ್ಟು ಅವು ಶಕ್ತಿಯುತವಾಗಿವೆ. ‘ಮಾಸ್ತಿಯವರ ಕಾದಂಬರಿಗಳು-ಮುಖ್ಯವಾಗಿ ಅವರ ‘ಚಿಕವೀರರಾಜೇಂದ್ರ’ ಕಾದಂಬರಿಯ ಕಥಾವಿಸ್ತಾರ ಆಶಯಗಳನ್ನು ನೋಡಿದರೆ- ಯಾವುದೇ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳಲು ಯೋಗ್ಯವಾಗಿವೆ. ಅವು ಭಾರತೀಯ ಸಾಹಿತ್ಯಕ್ಕೆ ಮೌಲಿಕವಾದ ಕಾಣಿಕೆ ನೀಡುವಂತಿವೆ’ ಎಂದು ಶಾಂತಿನಾಥ ದೇಸಾಯಿಯವರು ಹೇಳುತ್ತಾರೆ.

ಮೇಲ್ನೋಟಕ್ಕೆ ಮಾಸ್ತಿಯವರ ಎರಡು ಕಾದಂಬರಿಗಳು ಸಣ್ಣ ದೇಶೀಯ ಸಂಸ್ಥಾನಗಳಾದ ಬಿದನೂರು (‘ಚೆನ್ನಬಸವನಾಯಕ’), ಕೊಡಗು (‘ಚಿಕವೀರರಾಜೇಂದ್ರ’) ರಾಜ್ಯಗಳನ್ನು ಕುರಿತಾಗಿದ್ದರೂ ಅವು ಭಾರತೀಯ ಇತಿಹಾಸದಲ್ಲಿ ಮುಖ್ಯವಾದ ಘಟ್ಟವನ್ನು ಚಿತ್ರಿಸುವ ಕೃತಿಗಳಾಗಿವೆ. ಅಷ್ಟೇ ಅಲ್ಲ ಭಾರತೀಯ ರಾಜಕೀಯ ವ್ಯವಸ್ಥೆಯ ಮುಖ್ಯ ಚಹರೆಯನ್ನು ತೋರಿಸುವಂತಿವೆ.

ಮಾಸ್ತಿಯವರು ಬರೆದ ಎರಡೂ ಕಾದಂಬರಿಗಳು ಐತಿಹಾಸಿಕ ಕಾದಂಬರಿಗಳೆಂದು ಪ್ರಸಿದ್ಧವಾಗಿವೆ. ‘ಚೆನ್ನಬಸವನಾಯಕ’, ‘ಚಿಕವೀರರಾಜೇಂದ್ರ’ ಗಳೆಂಬ ದೀರ್ಘ ಕಾದಂಬರಿಗಳ ಹೊರತಾಗಿ ‘ಸುಬ್ಬಣ್ಣ’, ‘ಶೇಷಮ್ಮ’ ಮತ್ತು ‘ಮಾತುಗಾರ ರಾಮಣ್ಣ’ ಎಂಬ ಎರಡು ನೀಳ್ಗತೆಗಳನ್ನು ಕಿರುಕಾದಂಬರಿಗಳೆಂದು ಪರಿಗಣಿಸಬೇಕೆಂಬ ಜಿಜ್ಞಾಸೆ ನಡೆದಿದೆ. ಈ ಕಿರುಕಾದಂಬರಿಗಳು ಸ್ಥೂಲವಾಗಿ ವ್ಯಕ್ತಿಗಳ ಏಳುಬೀಳಿನ ಕಥನಗಳಾಗಿರುವುದರಿಂದ ಅವು ಹಲವು ಪಾತ್ರ-ಘಟನೆಗಳು, ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳನ್ನು ಹೆಣೆದುಕೊಂಡು ವಿಸ್ತಾರವಾದ ಕಥನಗಳಾಗಿ ಬೆಳೆಯುವುದಿಲ್ಲ. ಆದರೆ ‘ಚೆನ್ನಬಸವನಾಯಕ’, ‘ಚಿಕವೀರರಾಜೇಂದ್ರ’ ಕಾದಂಬರಿಗಳು ಬಹಳ ದೊಡ್ಡ ಐತಿಹಾಸಿಕ ಕಥಾಭಿತ್ತಿಯನ್ನು ಒಳಗೊಂಡಿವೆ. ವಿಸ್ತಾರವಾದ ಅರ್ಥದಲ್ಲಿ ಕನ್ನಡನಾಡಿನ ಚರಿತ್ರೆಯನ್ನು ಮರುನಿರೂಪಣೆಗೆ ಒಡ್ಡುತ್ತವೆ.

ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಅವರೆದುರಿಗೆ ಇದ್ದ ಮಾದರಿ ಎಂಥದು? ಆ ಕಾಲಕ್ಕೆ ದೇವುಡು, ತರಾಸು ಅವರ ಕಾದಂಬರಿಗಳು, ಅನಕೃ ಅವರ ಮಯೂರ, ನೃಪತುಂಗ, ಪಲಕೇಶಿ, ಕಿತ್ತೂರು ಚೆನ್ನಮ್ಮರಂಥ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿಗಳು ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ. ಅವರು ತಮ್ಮ ಸ್ವಾರ್ಥ, ದೌರ್ಬಲ್ಯಗಳು, ಕ್ರೌರ್ಯ, ಕಾಮಪಿಪಾಸುತನ, ಸರ್ವಾಧಿಕಾರಿ ಗುಣಗಳಿಂದ ನಾಡಿನ ಸ್ವಾತಂತ್ರ್ಯಕ್ಕೆ, ಅಸ್ತಿತ್ವಕ್ಕೆ ಸಂಚಕಾರ ತರುವ ವ್ಯಕ್ತಿಗಳಾಗಿದ್ದಾರೆ. ಅಲ್ಲಿಯವರೆಗೆ ಬಂದ ಐತಿಹಾಸಿಕ ಕಾದಂಬರಿಗಳು ಪರೋಕ್ಷವಾಗಿ ನಾಡಿನ ಕಲ್ಪನೆಯನ್ನು, ರಾಷ್ಟ್ರದ ಬಗೆಗಿನ ಅಭಿಮಾನವನ್ನು ಗಟ್ಟಿಗೊಳಿಸುವ ಕೆಲಸದಲ್ಲಿ ನಿರತವಾಗಿದ್ದವು. ಹಾಗೆ ನೋಡಿದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಆಗ ತಾನೇ ರೂಪುಗೊಳ್ಳುತ್ತಿದ್ದ ರಾಷ್ಟ್ರದ ಕಲ್ಪನೆಯನ್ನು ನೆಲೆಗೊಳಿಸಲಿಕ್ಕೆ- ಸಮರ್ಥಿಸಲಿಕ್ಕೆ ಐತಿಹಾಸಿಕ ಕಾದಂಬರಿಗಳು ಬಹುದೊಡ್ಡ ಕಾಣಿಕೆಯನ್ನು ನೀಡಿವೆ. ಅಷ್ಟೇ ಅಲ್ಲ ಕಾದಂಬರಿಯ ವಿನ್ಯಾಸಕ್ಕೂ ರಾಷ್ಟ್ರ  ನಿರ್ಮಾಣಕ್ಕೂ ಇರುವ ಸೂಕ್ಷ್ಮ ಸಂಬಂಧವನ್ನು ಹಲವಾರು ಚಿಂತಕರು ಈಗಾಗಲೇ ಚರ್ಚಿಸಿದ್ದಾರೆ. (ವಿವರಗಳಿಗೆ ಶಿವರಾಮ ಪಡಿಕ್ಕಲ್ ಅವರ ‘ನಾಡುನುಡಿಯ ರೂಪಕ’ ಕೃತಿಯನ್ನು ನೋಡಬಹುದು). ಹೀಗಿರುವಾಗ ಭಾರತೀಯ ಇತಿಹಾಸದ ವೈವಿಧ್ಯಮಯ ಪುಟಗಳಿಂದ ಮಾಸ್ತಿಯವರು ನೀಚ, ದುರ್ಬಲ, ಕ್ರೂರ ಪಾತ್ರಗಳನ್ನು ಯಾಕೆ ಮುನ್ನೆಲೆಗೆ ತರುತ್ತಾರೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಸಾಂಪ್ರದಾಯಿಕವಾಗಿ ಪರಮ ಧೀರೋದಾತ್ತ ನಾಯಕ-ಅವನ್ನು ಸುತ್ತುವರಿದ ಕಿರಾತಕ ಖಳನಾಯಕ ಮತ್ತವನ ಪಡೆ- ಇರುವಂಥ ಐತಿಹಾಸಿಕ ಕಾದಂಬರಿಗಳ ನಡುವೆ ಕೆಡುಕುತನವೇ ಮೈವೆತ್ತು ನಿಂತಿರುವ ಚಿಕವೀರ ರಾಜೇಂದ್ರ, ವೀರಮ್ಮಾಜಿ, ನಂಬಯ್ಯ, ಬಸವನಂಥ ಪಾತ್ರಗಳು ಮಾಸ್ತಿಯವರ ಕಾದಂಬರಿಗಳ ಮುಖ್ಯಭೂಮಿಕೆಯಲ್ಲಿವೆ. ಇಂಥ ಪಾತ್ರಗಳು ಮುನ್ನೆಲೆಯಲ್ಲಿರುವ ಐತಿಹಾಸಿಕ ಕಾದಂಬರಿಗಳು ಹೆಚ್ಚಾಗಿ ಕನ್ನಡದಲ್ಲಿಲ್ಲ. ಸಂಸರ ಕೆಲವು ನಾಟಕಗಳು, ಕಾರ್ನಾಡರ ತುಘಲಕ್(?) ಲಂಕೇಶರ ನಾದಿರ್ ಶಾ  ಪಾತ್ರಗಳನ್ನು ಮಾಸ್ತಿಯವರ ಚಿಕವೀರನಂಥ ಪಾತ್ರಗಳಿಗೆ ಹತ್ತಿರ ತಂದು ಹೋಲಿಸಿನೋಡಬಹುದು. ವಿಶೇಷವೆಂದರೆ, ಮಾಸ್ತಿಯವರು ಕಾದಂಬರಿಗಳನ್ನು ಬರೆಯುತ್ತಿದ್ದ ಕಾಲಕ್ಕೆ ಸಂಸರಂಥವರು ಮೈಸೂರಿನ ಅರಸರ ಕುರಿತು ನಾಟಕ ಬರೆಯುತ್ತಿದ್ದರು. ರಾಜ್ಯಾಧಿಕಾರದ ಕೇಂದ್ರದಲ್ಲಿದ್ದ ಮೈಸೂರಿನ ಅರಸನ್ನು ಹೊರತುಪಡಿಸಿ, ಅಂಚಿನಲ್ಲಿದ್ದ ಕೊಡಗು-ಬಿದನೂರಿನ ಸಣ್ಣಪುಟ್ಟ ಸಂಸ್ಥಾನಗಳ ರಾಜವಂಶವನ್ನು ಕುರಿತು ಮಾಸ್ತಿಯವರು ಬರೆದಿರುವುದು ವಿಶೇಷವಾಗಿದೆ.

‘ಚೆನ್ನಬಸವನಾಯಕ’, ‘ಚಿಕವೀರರಾಜೇಂದ್ರ’ ಕಾದಂಬರಿಗಳು ಬಹಳ ದೊಡ್ಡ ಐತಿಹಾಸಿಕ ಕಥಾಭಿತ್ತಿಯನ್ನು ಒಳಗೊಂಡಿವೆ. ವಿಸ್ತಾರವಾದ ಅರ್ಥದಲ್ಲಿ ಕನ್ನಡನಾಡಿನ ಚರಿತ್ರೆಯನ್ನು ಮರುನಿರೂಪಣೆಗೆ ಒಡ್ಡುತ್ತವೆ.

ಗಮನಿಸಿ ನೋಡಿದರೆ, ಇತಿಹಾಸವನ್ನು ಗತವೈಭವದ ದೃಷ್ಟಿಯಿಂದ ನೋಡುವುದು ಮಾಸ್ತಿಯವರ ಉದ್ದೇಶವಾಗಿಲ್ಲ. ಸಾಂಪ್ರದಾಯಿಕವಾದ ಮನೋಭಾವದ ಬರಹಗಾರನೆಂದು ಜನಜನಿತವಾಗಿರುವ ಮಾಸ್ತಿಯವರು ಪರಮ ಕ್ರೂರಿ, ಕಾಮಪಿಪಾಸು, ನಿರ್ಲಜ್ಜತನದ ವ್ಯಕ್ತಿತ್ವವನ್ನು ಹೊಂದಿರುವ ಚಿಕವೀರ, ಅಧಿಕಾರಕ್ಕಾಗಿ ತನ್ನ ಮಗನನ್ನೇ ಕೊಲ್ಲಿಸುವ ಪ್ರಯತ್ನಮಾಡುವ ವೀರಮ್ಮಾಜಿಯಂಥ ಪಾತ್ರಗಳನ್ನು ಯಾಕೆ ಚಿತ್ರಿಸುತ್ತಿದ್ದಾರೆ ಎಂಬುದು ವಿವರವಾದ ಚರ್ಚೆಗೆ ಅರ್ಹವಾಗಿದೆ. ಇತಿಹಾಸದ ಭಿತ್ತಿಯನ್ನು ಬಳಸಿಕೊಂಡು ಸ್ವಾತಂತ್ರ್ಯ ಪೂರ್ವ ಭಾರತದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಈ ಕಾದಂಬರಿಗಳಲ್ಲಿ ಕಾಣಬಹುದು. ವಿಶಾಲವಾದ ಅರ್ಥದಲ್ಲಿ ಪರಕೀಯ ಆಳ್ವಿಕೆಯನ್ನು ವಿರೋಧಿಸುವ ವಸಾಹತುಶಾಹಿ ವಿರೋಧಿ ಆಶಯಗಳೂ ಸಹ ಕಾದಂಬರಿಗಳ ಒಳವಿವರಗಳಲ್ಲಿ ಕಾಣುತ್ತವೆ.

ಎರಡೂ ಕಾದಂಬರಿಗಳಲ್ಲಿ ಬಿದನೂರು ಮತ್ತು ಕೊಡಗಿನ ರಾಜವಂಶಗಳ ಅಂತರಿಕ ಕಲಹ-ವೈಷಮ್ಯಗಳ ಕಾರಣದಿಂದ ಬಿದನೂರು ಹೈದರಾಲಿಯ ಕೈಗೆ – ಕೊಡಗು ಬ್ರಿಟಿಷರ ಆಕ್ರಮಣಕ್ಕೆ ಒಳಗಾಗುತ್ತದೆ. ‘ಚೆನ್ನಬಸವನಾಯಕ’ ಕಾದಂಬರಿಯಲ್ಲಿ ನಡೆತಗೆಟ್ಟ ರಾಣಿ ವೀರಮ್ಮಾಜಿ ಇದ್ದರೆ, ಇನ್ನೊಂದು ಕಡೆ ‘ಚಿಕವೀರರಾಜೇಂದ್ರ’ ದ ರಾಜನೇ ನಡತೆಗೆಟ್ಟಿದ್ದಾನೆ. ತಾಯಿಮಕ್ಕಳ ಮತ್ಸರ ಸಿಂಹಾಸನಕ್ಕೆ ಹಕ್ಕುದಾರನಾಗಿದ್ದ ಚೆನ್ನಬಸವನಿಗೆ ಕಂಟಕವಾದರೆ, ಅಣ್ಣತಂಗಿಯರ ಮತ್ಸರ, ದಾಯಾದಿ ಕಲಹ ಸಿಂಹಾಸನಕ್ಕೆ ನಿಜವಾದ ವಾರಸುದಾರರಾಗಿರುವ ದೇವಮ್ಮಾಜಿ ಹಾಗೂ ಭಗವತಿಯರಿಗೆ ಕಂಟಕವಾಗಿರುವುದನ್ನು ‘ಚಿಕವೀರರಾಜೇಂದ್ರ’ ದಲ್ಲಿ ಕಾಣಬಹುದು. ಎರಡೂ ರಾಜ್ಯಗಳ ಆಂತರಿಕ ಕಲಹವನ್ನು ಬಳಸಿಕೊಂಡು ಹೈದರ್ ಬಿದನೂರನ್ನು, ಬ್ರಿಟಿಷರು ಕೊಡಗನ್ನು ಆಕ್ರಮಿಸುವಲ್ಲಿ ಸಫಲವಾಗುತ್ತಾರೆ. ಎರಡೂ ಕಡೆ ರಾಜ್ಯದ ನಿಜವಾದ ವಾರಸುದಾರರು ತಲೆಮರೆಸಿಕೊಂಡು ಸ್ವಾಮಿಗಳ ವೇಷದಲ್ಲಿ ತಿರುಗುತ್ತಿದ್ದಾರೆ. ‘ಚೆನ್ನಬಸವನಾಯಕ’ ಕಾದಂಬರಿಯಲ್ಲಿ ಹಿರಿಯ ರಾಜನ ಮರಣಾನಂತರ ಸಿಂಹಾಸನಕ್ಕೇರಬೇಕಾಗಿರುವ ಚೆನ್ನಬಸವನಾಯಕನಿಗೆ ಅವನ ತಾಯಿಯೇ ಅಡ್ಡಿಯಾಗಿದ್ದಾಳೆ. ಇದಕ್ಕೆ ಅವನ ತಾಯಿ ವೀರಮ್ಮಾಜಿ ಮನೆವಾರ್ತೆಯ ನಂಬಯ್ಯನ ಜೊತೆ ಇರುವ ಅನೈತಿಕ ಸಂಬಂಧವೇ ಕಾರಣವಾಗಿದೆ. ಚಿಕ್ಕಂದಿನಿಂದಲೇ ಅವರಿಬ್ಬರ ಸಂಬಂಧವನ್ನು ಇಷ್ಟಪಡದ ಮಗ ರಾಜನಾದರೆ ತನಗೆ ರಾಜಮಾತೆಯ ಪಟ್ಟ ಸಿಗುವುದು ಸಾಧ್ಯವಿಲ್ಲ ಎಂದು ವೀರಮ್ಮಾಜಿ ತನ್ನ ಮಗನನ್ನೇ ಕೊಲ್ಲುವ ಸಂಚಿಗೆ ಅಣಿಯಾಗಿದ್ದಾಳೆ. ಕೊಲೆಯ ಯತ್ನ ಫಲಿಸದೇ, ಇದರಿಂದ ಉಂಟಾಗುವ ದೈಹಿಕ ಅನಾರೋಗ್ಯದಿಂದ ಚೆನ್ನಬಸವನಾಯಕ ಅಕಾಲ ಮೃತ್ಯುವಿಗೆ ಈಡಾಗುವುದರಿಂದ ಹೈದರನ ಆಕ್ರಮಣ ಸುಲಭವಾಗುತ್ತದೆ. ಇದರೊಂದಿಗೆ ವೀರಮ್ಮಾಜಿ ತನ್ನ ಇಷ್ಟದ ವಿರುದ್ಧ ಮದುವೆಯಾದ ಮಗನ ಹೆಂಡತಿಯನ್ನೇ ದ್ವೇಷಿಸಲು ಆರಂಭಿಸುತ್ತಾಳೆ. ಮಗನ ಹೆಂಡತಿ ಜೈನಳಾಗಿರುವುದೇ ವೀರಮ್ಮಾಜಿಯ ದ್ವೇಷಕ್ಕೆ ಮುಖ್ಯ ಕಾರಣವಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ. ಇತ್ತ ಸಿಂಹಾಸನದಿಂದ ದೂರವಾಗಿರುವ ಚೆನ್ನಬಸವನಿಗೆ ಮೈಸೂರು ಅರಸರು ಸಹಾಯ ಮಾಡುತ್ತಿದ್ದರೂ ಅದರ ಮುಖ್ಯ ಉದ್ದೇಶ ಚೆನ್ನಬಸವನಿಗೆ ನ್ಯಾಯಯುತವಾಗಿ ದೊರಕಬೇಕಾದ ಸಿಂಹಾಸನ ಸಿಗಲಿ ಎಂಬುದಕ್ಕಿಂತ, ತಾವು ಹೈದರನ ಹಿಡಿತದಿಂದ ತಪ್ಪಿಸಿಕೊಳ್ಳಲು ಎಂದಾದರೂ ಬಿದನೂರಿನ ಸಹಾಯಕ್ಕೆ ಬರಬಹುದು ಎಂಬ ದೂರಾಲೋಚನೆಯೇ ಮುಖ್ಯವಾಗಿದೆ.

ಕಾದಂಬರಿಯ ಇಷ್ಟೊಂದು ದೀರ್ಘವಿವರಗಳು ನಮಗೆ ಬಹಳ ಮುಖ್ಯವಾದ ಒಳನೋಟವೊಂದನ್ನು ನೀಡುತ್ತವೆ. ವ್ಯಕ್ತಿಯ ನೆಲೆಯಲ್ಲಿರುವ ತಾಯಿ ಮಗನ ಸಂಬಂಧವನ್ನಾಗಲಿ, ರಾಜಕೀಯ ನೆಲೆಯಲ್ಲಿರುವ ಎರಡು ರಾಜ್ಯಗಳ ನಡುವಿನ ಸಂಬಂಧವನ್ನಾಗಲೀ ನಿಯಂತ್ರಿಸುತ್ತಿರುವುದು ನೈತಿಕ-ಸಾಮಾಜಿಕ ಮೌಲ್ಯಗಳು ಅಲ್ಲವೇ ಅಲ್ಲ. ತನಗೆ ಲಾಭವಾಗಬಹುದಾದ ರಾಜಕೀಯ ಲೆಕ್ಕಾಚಾರಗಳೇ ಎಲ್ಲ ಸಂದರ್ಭಗಳಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ಬಹಳ ಗಮನಾರ್ಹವಾದ ಸಂಗತಿಯಾಗಿದೆ.

‘ಚಿಕವೀರ ರಾಜೇಂದ್ರ’ ಕಾದಂಬರಿಯಲ್ಲಿ ‘ಚೆನ್ನಬಸವನಾಯಕ’ನಿಗಿಂತ ಕಥಾವಸ್ತು ಇನ್ನಷ್ಟು ಮುಂದಕ್ಕೆ ಹೋಗಿ ದೇಶೀಯ ಅರಸುಮನೆತನಗಳ ಒಳಜಗಳ ಕ್ರಮೇಣ ಬ್ರಿಟಿಷ್ ವಸಾಹತುಶಾಹಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿಸುತ್ತದೆ. ಕಾದಂಬರಿಯಲ್ಲಿ ಮೂಲತಃ ಮಹಾನ್ ಕಾಮಿಯೂ ಲಂಪಟನೂ ಕ್ರೂರಿಯೂ ಆಗಿರುವ ಚಿಕವೀರನ ದುಷ್ಕೃತ್ಯಗಳಿಂದ ಇಡೀ ನಾಡು ರೋಸಿ ಹೋಗಿದೆ. ತನ್ನ ದುರಾಚಾರದ ಕಾರಣದಿಂದ ಈಗಾಗಲೇ ಪತನದ ಅಂಚಿನಲ್ಲಿರುವ ಚಿಕವೀರನನ್ನು ಕೆಳಗಿಳಿಸಲು ಅವನ ದೊಡ್ಡಪ್ಪ ಅಪ್ಪಾಜಿಯ ಮಗ ವೀರಣ್ಣ, ತಂಗಿ ದೇವಮ್ಮಾಜಿಯ ಗಂಡ ಚನ್ನಬಸವಯ್ಯ, ತಂದೆ ಲಿಂಗರಾಜನ ಪ್ರೇಯಸಿಯಾಗಿ ರಾಜ್ಯಭ್ರಷ್ಟಳಾಗಿರುವ ಭಗವತಿ- ಮೂವರೂ ಸನ್ನದ್ಧರಾಗಿದ್ದಾರೆ. ಎಲ್ಲರಿಗಿಂತ ಮುಖ್ಯವಾಗಿ ಕೊಡಗಿನ ಅಂತಃಕಲಹದಿಂದ ಲಾಭ ಪಡೆದು ಆಕ್ರಮಣ ನಡೆಸಲು ಬ್ರಿಟಿಷರು ಸಿದ್ಧರಾಗಿದ್ದಾರೆ.

ಚಿಕವೀರನ ಕಾಮಪಿಪಾಸೆ, ಸರ್ವಾಧಿಕಾರಿ ಧೋರಣೆಯಿಂದ ಕೊಡಗು ಹೇಗೆ ಪತನಗೊಂಡಿತು ಎಂದು ಹೇಳುವಷ್ಟೇ ಕರಾರುವಾಕ್ಕಾಗಿ ಮಾಸ್ತಿಯವರು ರಾಜಮನೆತನದ ಒಳಗಿನ ದ್ವೇಷ-ಮತ್ಸರಗಳೂ ಸಹ ಕೊಡಗನ್ನು ವಿನಾಶದ ಅಂಚಿಗೆ ತಳ್ಳಿದವು ಎಂಬುದನ್ನು ಅಷ್ಟೇ ನಿಖರವಾಗಿ ಕಾಣಿಸುತ್ತಾರೆ. ಹಾಗೆ ನೋಡಿದರೆ, ಕೊಡಗಿನ ಅರಸು ಮನೆತನದ ಒಳಗಿರುವ ರಾಜಕೀಯ ಮತ್ಸರ-ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಬ್ರಿಟಿಷರ ರಾಜಕಾರಣ ಎಷ್ಟು ನೀಚವಾಗಿದೆಯೆಂದರೆ, ಒಂದು ವೇಳೆ ಚಿಕವೀರರಾಜೇಂದ್ರ ಪರಮಸತ್ಯಸಂಧನಾಗಿದ್ದರೂ ಕೊಡಗಿನ ಪತನವನ್ನು ತಪ್ಪಿಸಲು ಸಾಧ್ಯವಿರಲಿಲ್ಲ ಎಂಬ ಸೂಚನೆ ಕಾದಂಬರಿಯಲ್ಲಿ ದೊರಕುತ್ತದೆ. ಕೊಡಗಿನ ರಾಜಮನೆತನದ ಒಳಸಂಚುಗಳು ಹಾಗೂ ಬ್ರಿಟಿಷರ ನಯವಂಚಕತನ ಎರಡನ್ನೂ ಕಾದಂಬರಿ ಏಕಕಾಲಕ್ಕೆ ಪರಿಣಾಮಕಾರಿಯಾಗಿ ತೋರಿಸುತ್ತದೆ. ಇದೆಲ್ಲದರ ಪರಿಣಾವಾಗಿ ಉಂಟಾಗುವ ಕೊಡಗಿನ ರಾಜಕೀಯ ಅಧಃಪತನವನ್ನು ಪರಿಶೀಲಿಸಿದರೆ, ಮಾಸ್ತಿಯವರಿಗೆ ದೇಶೀಯ ರಾಜಕೀಯ ವ್ಯವಸ್ಥೆಯನ್ನು ಕುರಿತು ಎಂಥ ಪ್ರಬುದ್ಧ ಒಳನೋಟವಿತ್ತು ಎಂಬುದು ಗೊತ್ತಾಗುತ್ತದೆ. ಇದನ್ನು ಗಮನಿಸಿದರೆ, 18-19ನೇ ಶತಮಾನದಲ್ಲಿ ದೇಶೀಯ ಸಂಸ್ಥಾನಗಳು ಮತ್ತು ಬ್ರಿಟಿಷ್ ವಸಾಹತುಶಾಹಿಯ ನಡುವಿನ ಸಂಬಂಧದ ಸ್ವರೂಪ ನಮಗೆ ದೊರಕುತ್ತದೆ. ಅಷ್ಟೇ ಅಲ್ಲದೆ ಸುಮಾರು 600ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ದೇಶೀ ಸಂಸ್ಥಾನಗಳು ಬ್ರಿಟಿಷರ ಆಗಮನಕ್ಕೆ ಮುಂಚೆಯೇ ಎಷ್ಟು ಶಿಥಿಲಗೊಂಡಿದ್ದವು ಎಂಬುದರ ಸೂಚನೆಯೂ ಇದರಿಂದ ದೊರಕುತ್ತದೆ.
ಕಾದಂಬರಿಯಲ್ಲಿ ಚಿಕವೀರ ಕ್ರೂರಿಯೂ ಕಾಮಿಯೋ ಎಂಬ ಪ್ರಶ್ನೆಗಿಂತ, ಅವನು ಯಾಕಾಗಿ ದುರಾಚಾರಿಯಾದ ಎಂಬುದಕ್ಕಿಂತ, ಅವನ ದುರುಳತನದ ಸದ್ಬಳಕೆಗೆ ಕಾದುಕುಳಿತಿರುವ ರಾಜಕೀಯ ತಂತ್ರಗಾರಿಕೆಯ ಕಡೆಗೇ ಮಾಸ್ತಿಯವರ ಗಮನ ಹೆಚ್ಚಾಗಿದೆ. ಪಕ್ಕದ ಮೈಸೂರನ್ನು ಈಗಾಗಲೇ ಬ್ರಿಟಿಷರು ಆಕ್ರಮಿಸಿಕೊಂಡಿರುವ ಉದಾಹರಣೆ ಎದುರಿಗಿದ್ದರೂ ಕೊಡಗಿನ ಅರಸು ಮನೆತನದವರು ತಮ್ಮ ಸಿಂಹಾಸನ ಚಿಕವೀರನಿಗೆ ಸಿಗಬೇಕೋ ಬ್ರಿಟಿಷರಿಗೆ ಸಲ್ಲಬೇಕೋ ಎಂಬ ಪ್ರಶ್ನೆಗೆ ಉತ್ತರವನ್ನು ಅವರು ಕಂಡುಕೊಂಡಿಲ್ಲ. ಚಿಕವೀರನ ಜೊತೆಸೇರಿ ಕೊಡಗನ್ನು ಬ್ರಿಟಿಷರಿಂದ ಪಾರುಮಾಡಬೇಕು ರಾಜಕೀಯ ಮುತ್ಸದ್ಧಿತನಕ್ಕಿಂತ, ಬ್ರಿಟಿಷರ ಸಹಾಯ ಪಡೆದು ಚಿಕವೀರನನ್ನು ಪದಚ್ಯುತಗೊಳಿಸಬೇಕು ಎಂಬ ರಾಜಕೀಯ ತಂತ್ರಗಾರಿಕೆಗೇ ಕೊಡಗಿನ ರಾಜಮನೆತನ ಪ್ರಾಶಸ್ತ್ಯ ನೀಡಿದಂತಿದೆ.

ಚಿಕವೀರನ ತಂದೆಯಿಂದ ಲೈಂಗಿಕ ಶೋಷಣೆಗೊಳಗಾಗಿ ರಾಜಭ್ರಷ್ಟಳಾಗಿರುವ ಭಗವತಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತಾಳೆ ಎಂಬುದು ನಿಜವಾದರೂ, ಆಕೆಗೆ ತನ್ನನ್ನು ಬೀದಿಪಾಲು ಮಾಡಿದ ರಾಜಮನೆತನದ ವಿರುದ್ಧದ ದ್ವೇಷಕ್ಕಾಗಿ, ತನ್ನ ಮಗನನ್ನು ರಾಜನನ್ನಾಗಿಸುವುದಕ್ಕಾಗಿ ಶತ್ರುಗಳಾದ ಬ್ರಿಟಿಷರ ಸಹಾಯ ಪಡೆಯುವುದು ಅನೈತಿಕ ಎಂದು ಅನಿಸುವುದಿಲ್ಲ. ಇನ್ನೊಂದು ಕಡೆ ಚೆನ್ನಬಸವ-ಚಿಕವೀರನ ತಂಗಿ ದೇವಮ್ಮಾಜಿಯ ಗಂಡ ಉದ್ದಕ್ಕೂ ಚಿಕವೀರನ ವಿರುದ್ಧ ಕಂಪನಿ ಸರ್ಕಾರಕ್ಕೆ ದೂರು ಸಲ್ಲಿಸುತ್ತಾನೆ. ಇದೆಲ್ಲದರ ಸಾರಾಂಶವೇನೆಂದರೆ ಇಡೀ ರಾಜಮನೆತನವೇ ತನ್ನ ಒಳಜಗಳಗಳಿಂದ ಅಧೋಗತಿಗೆ ತಲುಪಿದೆ. ಚಿಕವೀರನ ವಿರೋಧಿಗಳಾದ ಭಗವತಿ, ಅಪ್ಪಾಜಿ ಮತ್ತು ಚನ್ನಬಸವಯ್ಯ ಮೊದಲಾದವರುಗಳೆಲ್ಲ ತಮ್ಮ ಸ್ವಾರ್ಥ ಸಾಧನೆಗಾಗಿ ಬ್ರಿಟಿಷರ ನೆರವನ್ನು ಕೋರುತ್ತ ವಸಾಹತುಶಾಹಿ ರಾಜಕೀಯಕ್ಕೆ ಪರೋಕ್ಷ ಆಹ್ವಾನ ನೀಡುತ್ತ ಕೊಡಗಿನ ರಾಜಕೀಯ ಪತನ ಆದಷ್ಟು ಬೇಗ ಘಟಿಸಲಿ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ. ಇವರಲ್ಲಿ ಯಾರಿಗೂ ಚಿಕವೀರನ ಹಸಿಹಸಿ ಕ್ರೌರ್ಯಕ್ಕಿಂತ ಬ್ರಿಟಿಷರ ನಯವಂಚಕ ರಾಜಕಾರಣ ನಾಡಿನ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಆತ್ಮಘಾತುಕವಾದದ್ದು ಎಂಬ ಮುನ್ನೋಟ ಕಾಣುವುದಿಲ್ಲ. ರಾಜ್ಯದ ಆಂತರಿಕ ವ್ಯವಹಾರಗಳಲ್ಲಿ ಬ್ರಿಟಿಷರಿಗೆ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದರೆ ಅದರಿಂದಾಗುವ ದೂರಗಾಮಿ ರಾಜಕೀಯ-ಆರ್ಥಿಕ ಪರಿಣಾಮಗಳನ್ನು ಊಹಿಸುವ ಶಕ್ತಿ ಚಿಕವೀರನ ವಿರೋಧಿಗಳಿಗಿಲ್ಲ.

ಕ್ತಿಯ ನೆಲೆಯಲ್ಲಿರುವ ತಾಯಿ ಮಗನ ಸಂಬಂಧವನ್ನಾಗಲಿ, ರಾಜಕೀಯ ನೆಲೆಯಲ್ಲಿರುವ ಎರಡು ರಾಜ್ಯಗಳ ನಡುವಿನ ಸಂಬಂಧವನ್ನಾಗಲೀ ನಿಯಂತ್ರಿಸುತ್ತಿರುವುದು ನೈತಿಕ-ಸಾಮಾಜಿಕ ಮೌಲ್ಯಗಳು ಅಲ್ಲವೇ ಅಲ್ಲ. ತನಗೆ ಲಾಭವಾಗಬಹುದಾದ ರಾಜಕೀಯ ಲೆಕ್ಕಾಚಾರಗಳೇ ಎಲ್ಲ ಸಂದರ್ಭಗಳಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ಬಹಳ ಗಮನಾರ್ಹವಾದ ಸಂಗತಿಯಾಗಿದೆ.

ಹಾಗೆ ನೋಡಿದರೆ ವಸಾಹತುಶಾಹಿಯ ಕಬಂಧ ಬಾಹುಗಳು ನಿಧಾನವಾಗಿ ಎಲ್ಲ ಕಡೆ ಸದ್ದಿಲ್ಲದೆ ಚಾಚಿಕೊಳ್ಳುತ್ತಿದೆ ಎಂದು ಸೂಚಿಸುವ ಈ ಕಾದಂಬರಿ ಆಳದಲ್ಲಿ ವಸಾಹತುಶಾಹಿ ಆಕ್ರಮಣವನ್ನು ವಿರೋಧಿಸುವ ಆಶಯವನ್ನು ಹೊಂದಿದೆ. ಹಾಗೆಯೇ ದೇಶೀಯ ರಾಜಕೀಯ ಸಂಸ್ಥಾನಗಳನ್ನು ಉದಾತ್ತೀಕರಿಸುವ ಕುರುಡು ಹಂಬಲ ಕಾದಂಬರಿಗಿಲ್ಲ. ಒಟ್ಟಾಗಿ ನೋಡಿದರೆ ಲಿಂಗರಾಜನ ಕ್ರೌರ್ಯ, ಚಿಕವೀರನ ವಿರೋಧಿಗಳ ರಾಜಕೀಯ, ಬ್ರಿಟಿಷ್ ಸಾಮ್ರಜ್ಯಶಾಹಿ ದುರಾಸೆಗಳ ವಿಸ್ತರಣೆಯಾಗಿ ಚಿಕವೀರ ಕಾಣಿಸುತ್ತಾನೆ. ಇವರೆಲ್ಲರ ನಡುವೆ ಸಿಲುಕಿದ ಕೊಡಗಿನ ಜನತೆಗೆ ನಿಜವಾದ ರಾಜ್ಯಾಡಳಿತ, ಮುನ್ನಡೆಸುವ ನಾಯಕರು ಸಿಗದೇ ಹೋಗುವುದು ನಿಜವಾದ ದುರಂತ ಎಂಬುದನ್ನು ಕಾದಂಬರಿ ಸೂಚಿಸುತ್ತದೆ.

ಬಹಳ ದೊಡ್ಡ ವ್ಯಂಗ್ಯವೇನೆಂದರೆ ಯಾವ ಬ್ರಿಟಿಷರ ಆಕ್ರಮಣಕ್ಕೆ ಚಿಕವೀರ ತುತ್ತಾಗುತ್ತಾನೋ ಅವರನ್ನೇ ಅವನ ಪೂರ್ವಿಕರು ಪೋಷಿಸಿಕೊಂಡು ಬಂದಿದ್ದಾರೆ. ತಲಚೇರಿಯಲ್ಲಿ ಟಿಪ್ಪೂ ಆಂಗ್ಲರನ್ನು ಹೊಡೆದೋಡಿಸಲು ಕೊಡಗಿನ ದೊಡ್ಡ ವೀರರಾಜನ ಸಹಾಯವನ್ನು ಕೇಳುತ್ತಾನೆ. ಎಷ್ಟಾದರೂ ನಾನುನೀನು ಒಂದೇ ದೇಶದವರು, ಆಂಗ್ಲರು ಹೊರಗಿನವರು ಅವರನ್ನು ಹೊಡೆದೋಡಿಸಲು ನಾವಿಬ್ಬರು ಒಂದಾಗಬೇಕು. ಗೆದ್ದ ರಾಜ್ಯದಲ್ಲಿ ನನಗರ್ಧ ನಿನಗರ್ಧ- ಎಂದು ಟಿಪ್ಪೂ ವೀರರಾಜನಿಗೆ ಹೇಳಿದರೂ ವೀರರಾಜ ಆಂಗ್ಲರಿಗೇ ಸಹಾಯ ಮಾಡುತ್ತಾನೆ. ಯಾಕೆಂದರೆ ಅವನ ಪ್ರಕಾರ ಆಂಗ್ಲರು ಸ್ನೇಹಿತರು- ಟಿಪ್ಪೂ ಅವನ ಶತ್ರು!! ಹೀಗಿರುವಾಗ ಬ್ರಿಟಿಷರು ಮೈಸೂರು, ಕೊಡಗು ಅಥವಾ ಇನ್ನಾವುದೇ ದೇಶೀಯ ಸಂಸ್ಥಾನವನ್ನಾಗಲೀ ಸುಲಭವಾಗಿ ಕಬಳಿಸಲು ಸಾಧ್ಯವಾಗಿದ್ದು ರಾಜಕೀಯ ಆಕಸ್ಮಿಕವಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದಲ್ಲಿ ಸ್ವತಃ ಚಿಕವೀರನಾಗಲಿ, ಇತರ ಕೊಡವ ರಾಜಮನೆತನದವರಾಗಲಿ ರಾಜಕೀಯ ಮುತ್ಸದ್ಧಿತನವನ್ನು ತೋರುವುದಿಲ್ಲ ಎಂಬ ವ್ಯಂಗ್ಯವನ್ನು ಕಾದಂಬರಿ ಸೂಚಿಸುತ್ತದೆ. ಹಾಗಾಗಿ ಬ್ರಿಟಿಷರ ಆಗಮನಕ್ಕೆ ಮುಂಚೆಯೇ ಚಿಕವೀರ ಪದಚ್ಯತನಾಗಿಬಿಟ್ಟಿದ್ದಾನೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ನಮ್ಮ ಒಳಜಗಳಗಳು, ಸ್ವಾರ್ಥ, ದ್ವೇಷಗಳ ಕಾರಣದಿಂದ ಕುಸಿದುಹೋಗಿದೆ ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಮಾಸ್ತಿಯವರ ಕಾದಂಬರಿಯ ಮಹತ್ವ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ  ರಾಜಕೀಯ ವ್ಯವಸ್ಥೆಗಳೆರಡಕ್ಕೂ ನಿರ್ಣಾಯಕವಾದ ವ್ಯತ್ಯಾಸಗಳಿಲ್ಲ ಎಂದು ತೋರಿಸುವುದೇ ಆಗಿದೆ. ಹಾಗೆಯೇ ‘ಚಿಕವೀರ ರಾಜೇಂದ್ರ’ ವಸಾಹತುಶಾಹಿ ನಿಧಾನ ಆಕ್ರಮಣದ ಪ್ರಕ್ರಿಯೆ ಮತ್ತು ದೇಶೀ ಸಂಸ್ಥಾನಗಳ ಎಡಬಿಡಂಗಿತನವನ್ನು ಸ್ವಾತಂತ್ರ್ಯಪೂರ್ವ ಕತೆಯ ಮೂಲಕ ತೊರಿಸುವ ಕಾರಣದಿಂದ ಕನ್ನಡದ ಬಹುಮಖ್ಯ ರಾಜಕೀಯ ಕಾದಂಬರಿಯಾಗಿದೆ.