ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.
ಮೌಲ್ಯ ಸ್ವಾಮಿ ಬರೆದ ಹೊಸ ಕವನ ಸಂಕಲನ ʼಸುಮ್ಮನೆ ಬಿದ್ದಿರುವ ಬಿಕ್ಕುಗಳುʼ ಪುಸ್ತಕದ ಕುರಿತು ಆರ್.‌ ವಿಜಯರಾಘವನ್‌ ಬರಹ

 

ಬಿಡುಗಡೆಯ ಹಾಡಿನ ಹಕ್ಕಿ

ಸೆರೆಸಿಕ್ಕ ಹಕ್ಕಿ ಹಾಡುವುದೇಕೆ.. ಎಂಬ ಮೌಲ್ಯ ಅವರ ನಿವೇದನೆಯೇ ನನಗೆ ನೆನಪಿಗೆ ತರುವುದು ಕೇಜ್‌ಡ್ ಬರ್ಡ್ ಎಂಬ ಶೀರ್ಷಿಕೆಯ ಮಾಯಾ ಏಂಜಲೂ ಅವರ ಕವಿತೆಯನ್ನು. ಆ ಕವಿತೆಯ ಮೂರನೇ ಚರಣ ಹೀಗಿದೆ:

The caged bird sings
with a fearful trill
of things unknown
but longed for still
and his tune is heard
on the distant hill
for the caged bird
sings of freedom.

ಮೌಲ್ಯ ಬರೆದಿರುವುದು ಅಥವಾ ಬರೆಯಬಯಸಿರುವುದು ‘ಚರ್ಮದ ಪದರ ಪದರಗಳೊಳಗೆ ಸುಪ್ತ ಪ್ರವಾಹವಾಗಿ ಹರಿಯುತ್ತಲೇ ಇರುವ ನಿಗಿ ನಿಗಿ ಖಾಲೀತನದ ಅನೂಹ್ಯ ನಿಸ್ಸಹಾಯಕ ಅವಸ್ಥೆಯ ಪಿಸು ಮಾತುಗಳನ್ನು. ಈ ಜಗದ ಮೂಲೆ ಮೂಲೆಗಳೂ ಹೊಂಚಿ ಹೊಂಚಿ ತನ್ನಂಥವರನ್ನು ಸ್ತಬ್ಧಗಳಿಗೆ ಹಂಚಿ ಅಮೂರ್ತ ಹಗ್ಗದಲ್ಲಿ ಬಿಗಿದು ಮುಚ್ಚಲ್ಪಟ್ಟ ಗಾಜಿನ ಜಾಡಿಯಿಂದೆದ್ದ ಪ್ರತಿರೋಧದ ಪಲುಕುಗಳು ಉಂಟಲ್ಲ –ಇವನ್ನು. ಈ ಬಂಧನಗಳನ್ನು ಮೌಲ್ಯ ಅರ್ಥಮಾಡಿಕೊಂಡಿರುವುದು ಹೇಗೆ? ಅಭಿವ್ಯಕ್ತಿಗೆ ಆರಿಸಿಕೊಂಡ ಮಾರ್ಗ ಯಾವುದು? ಅವರ ದೃಷ್ಟಿಯಲ್ಲಿ ಕಾವ್ಯವೆಂದರೆ ಏನು?

ತನ್ನ ಕವಿತೆಯ ವಿವರಣೆಯೆಂಬಂತೆ ಮೌಲ್ಯ ಕೋಟ್ ಮಾಡುವುದು ಈ ಕವಿತೆಯನ್ನು:

There is no poetry
I don’t write poetry
I sit face to face with the executioner:
The white paper
And it cuts me in pieces
And I don’t write
I bleed

– Unknown
ಎಂದರೆ, ಎದೆಯಭಾವವನ್ನೇ ಕಾವ್ಯವಾಗಿಸಿದ್ದೇನೆ ಎಂದು ಅವರು ಹೇಳುತ್ತಿರುವುದು ಪೂರ್ವಪೀಠಿಕೆಯಂತಿದೆ.

ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ. ಹಾಗಿರುವುದರಿಂದಲೇ ‘ಪತಂಗಗಳ ರೆಕ್ಕೆ ಸುಡುವ ವ್ಯಾಧಿ’ ಪ್ಯಾಂಡೆಮಿಕ್ ಆಗಿರುವುದು. ಅದರಿಂದಲೇ ಬದುಕುವುದು ಮತ್ತು ಬೇಯುವುದು ಎರಡೂ ಬದುಕಿನ ಭಾಗವೇ ಆಗಿದೆ; ಮೌನ ಮತ್ತು ಸದ್ದುಗಳಂತೆ. ಹೆಣ್ಣು ಹೆಣ್ಣಾಗಿಯೂ ಒಂದು ಅಪ್ರೆಸ್ ಆದ ಮನುಷ್ಯರ ಪ್ರತಿನಿಧಿಯಾಗಿಯೂ ಇರುವವಳು. ಅವಳ ಕನಸಿಗೂ ಅವಳಲ್ಲಿ ಎಡೆಯಿಲ್ಲದಾದಾಗ ಅವಳೇನು ಮಾಡಬೇಕು?

ಜಂತಿ ಜಂತಿಗಳಲ್ಲಿ ಕನಸುಗಳ ತುರುಕಿ
ನಿರಾಳವಾಗಿ ನಾವು ಜೀವ ಗುಟುಕುವ
ಸಾವನ್ನು ಭೇದವಿಲ್ಲದೆಯೇ
ಹೆಗಲ ಮೇಲೆ ಹೊತ್ತು ಮೆರೆಸುತ್ತೇವೆ

ಅವಳೇನೇ ಮಾಡಿದರು ಫಲಿತಾಂಶ ಒಂದೇ! ಅವಳ ಜೀವಸೆಲೆಯನ್ನು ಹುಡುಹುಡುಕಿ ಹೀರುವ ಮನುಷ್ಯನಿಗೆ ಆಹಾರವಾಗುವುದು. ಅದಕ್ಕೆಂದೇ ನೇರವಾಗಿ ಅವನಿಗೆ ಅವಳು ಆಹ್ವಾನ ಕೊಡುತ್ತಾಳೆ.

ಇನ್ನೂ ಉಳಿದಿರಬಹುದಾದ
ಈ ಹೆಣ್ಣು ಕುಲದ ಜೀವ ಸೆಲೆಯ ಅಂಚಿನಲಿ
ಕುಳಿತು ಬೇಕೆನಿಸಿದರೆ..
ಇಗೋ.. ಕುಡಿದುಬಿಡು ಪೂರಾ..
ನಮಗಿಷ್ಟು ಉಳಿಸು ಎಂದು ಬೇಡಿದರೆ ಕೇಳು..
ಜಗದ ಅಷ್ಟೂ ತಾಯಂದಿರ ಮಮತೆಯ ಮೇಲಾಣೆ

******

(ಮೌಲ್ಯ ಸ್ವಾಮಿ)

ಸಂಕಲನದ ಮ್ಯಾನಿಫೆಸ್ಟೋ ಆಗಿರುವ ಈ ಕವಿತೆ ತನ್ನ ವಸ್ತು, ವಿನ್ಯಾಸ, ನಿರೂಪಣೆಗಳಲ್ಲಿನ ತೀವ್ರತೆಯಿಂದಾಗಿ ಓದುಗನನ್ನು ಬೆಚ್ಚಿಬೀಳಿಸುತ್ತದೆ. ಅನುಭವಿಸುವ ನೋವಿಗೆ ಮಾತುಕೊಡುವಲ್ಲಿ ಎಷ್ಟು ಸಹನೆ ತಾಳ್ಮೆಗಳ ಅಗತ್ಯವಿದೆ ಎನ್ನುವುದನ್ನು ಅರಿತು ಬರೆದ ಕವಿತೆಗಳು ಇವು. ‘ತನ್ನ ಮಾತುಗಳಿಗೆ ಅತ್ಯಂತ ಸಂಕೋಚದಿಂದ ಪದಗಳ ಉಡುಗೆ ತೊಡಿಸುವ’ ಕವಿಯ ಅಭಿವ್ಯಕ್ತಿಕ್ರಮದ ಕುರಿತು ಬರೆದ ಜೋಗಿ ಅವರು ಮುಂದುವರಿದು ‘ಅರೆಗಣ್ಣ ಧ್ಯಾನದಲ್ಲಿ ಹುಡುಕಿದ್ದೇನು? ಕಂಡದ್ದೇನು? ಎಂಬುದನ್ನು ಸ್ಪಷ್ಟಪಡಿಸಿದರೆ ಕವಿತೆ ಮುಗಿದಂತೆ ಎಂಬುದನ್ನು ಬಲ್ಲ ಮೌಲ್ಯ ಕಿರುಬೆರಳ ದ್ರೋಹವನ್ನೂ ಹೊಸ್ತಿಲಾಗುವ ಉಮ್ಮಳಗಳನ್ನೂ ತಾನೇ ಕೊಂದುಕೊಂಡ ನಿದಿರೆಯ ಸೂತಕದ ಛಾಯೆಯನ್ನೂ ಕವಿತೆಯೊಳಗೆ ತರಬಲ್ಲ ಸೂಕ್ಷ್ಮತೆ ಉಳ್ಳವರು.’ ಎನ್ನುತ್ತಾರೆ. ಬಲು ಮುಖ್ಯವಾದ ನೋಟವಿದು. ಇದು ತಲ್ಲಣಗಳಿಗೆ ಮಾತು ಕೊಡುವಾಗ ಮೌಲ್ಯ ಎಷ್ಟು ಎಚ್ಚರದಿಂದ ಆ ಕೆಲಸವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ವಿವರಿಸುತ್ತದೆ.

ಕವಿತೆಯೆಂದರೆ ‘ಸಮುದ್ರ ಮೌನದ ಮಥನ’. ದಿವ್ಯ ವಿಷಾದದ ಕಲಮಲವನ್ನು ಮಾತು-ಮೌನಗಳ ಸಂಲಗ್ನದಲ್ಲಿ ಘನೀಕರಿಸುವುದು ಕಸುಬುದಾರಿಕೆಯ ಅರಿವಿದ್ದರಷ್ಟೇ ಸಾಧ್ಯ. ಇಲ್ಲದಿದ್ದರೆ ಕವಿತೆ ಕೂಗಿಬಿಡುತ್ತದೆ. ಪಕ್ವವಾಗುವ ಮುನ್ನವೇ ಉದುರಿಹೋಗುತ್ತದೆ. ಇದರ ಸೂಕ್ಷ್ಮಗಳು ಮೌಲ್ಯ ಅವರಿಗೆ ಅರ್ಥವಾಗಿವೆ. ‘ಇಲ್ಲಿಯ ನಲವತ್ತಕ್ಕೂ ಮಿಕ್ಕಿದ ಕವಿತೆಗಳಲ್ಲಿ ನಮಗೆ ಒಂದೇ ಒಂದು ನಿರ್ಲಜ್ಜ ಸಾಲು ಕೂಡ ಎದುರಾಗುವುದಿಲ್ಲ. ಕಾವ್ಯವು ನಿಜವಾಗುವುದು ಅವ್ಯಕ್ತದ ಆರಾಧನೆಯಲ್ಲಿ ಎಂಬಂತೆ ಅವರು ಕವಿತೆಯ ಸೂರ್ಯಕಾಂತಿ ಬೀಜಗಳನ್ನು ಹಾಳೆಯ ತುಂಬ ಬಿತ್ತುತ್ತಾ ಹೋಗಿದ್ದಾರೆ. ನಮ್ಮ ಕಣ್ಣಬೆಳಕು ಬಿದ್ದಾಗಲೇ ಅವು ಮೊಳಕೆಯೊಡೆದು ಗಿಡವಾಗಿ ಹೂವಾಗಿ ಅರಳುತ್ತಾ ಹೋಗುತ್ತವೆ. ಹೀಗೆ ನಮ್ಮೊಳಗೇ ಅರಳಿಕೊಳ್ಳಬಲ್ಲ ಅನೇಕ ಕವಿತೆಗಳು ಈ ಸಂಕಲನದಲ್ಲಿವೆ’ ಎಂಬ ಜೋಗಿಯವರ ಮಾತನ್ನು ಗಮನಿಸಬೇಕು.

ಮಾತು ನಮ್ಮೊಳಗೆ ನಿಜವಾಗಬೇಕಾದರೆ ವಾಗರ್ಥಗಳ ಸಂಯೋಗವೆಷ್ಟು ಮುಖ್ಯವೆನ್ನುವುದನ್ನು ಕವಿ ಅರಿತಿರಬೇಕು. ಭಾಷೆಯನ್ನು ಹರಳುಗಟ್ಟಿಸುವಂತೆ ಬಳಸಬಲ್ಲ ಛಾತಿ ಕವಿಗೆ ಇದೆ. ಉದಾಹರಣೆಗೆ ಈ ಕೆಲವು ಸಾಲುಗಳನ್ನು ಗಮನಿಸಿ:

ಮುಂಬಾಗಿಲ ಅಂಗಳದಲ್ಲಿ
ರಂಗೋಲಿಯ ರಟ್ಟೆಗಳನ್ನು
ನಿರೀಕ್ಷೆಯ ಕಸುವನೂ ಬೆರೆಸಿ ಹೆಣೆದಿದ್ದೆ

******

ಆ ನಗು ಪಟದ ಹಿಂದಿನ
ಹುಂಡಿಯಲ್ಲಿಷ್ಟು ನಾಳೆಗಳ
ಉಳಿಸಿದ್ದೆ
ಕುಲುಕಿ ನೋಡಿದರೆ
ಈಗ ಕತ್ತಲು, ಮೌನ
ಮುನಿಸಿದ ಸದ್ದು

******

‘ಮುಕ್ಕಾದ ಮೌನಕ್ಕೆ ಮಾತು ಬರುವ ಘಳಿಗೆ ಎಂದಾದರೂ ಬಂದೀತೇ ಎಂದು ಕಾಯುತ್ತಿರುವಂತೆ ತೋರುವ ಈ ಪದ್ಯಗಳಿಗೆ ಮೌಲ್ಯ ಆರಿಸಿಕೊಂಡಿರುವ ಲಯವೂ ವಿಶಿಷ್ಟವಾದದ್ದು. ಯಾವುದೇ ಕವಿತೆಯನ್ನು ಕೊಂಚ ಗಟ್ಟಿಯಾಗಿ ನಾಲ್ಕು ಸಾಲು ಓದಿಕೊಳ್ಳುವ ಹೊತ್ತಿಗೆ ಇಡೀ ಕವಿತೆಯ ಆಂತರಿಕ ಲಯ ನಮ್ಮ ನಾಲಗೆಯ ತುದಿಯಲ್ಲಿ ನಲಿದಾಡುತ್ತಿರುತ್ತದೆ. ಭಾಷೆ ಮತ್ತು ಕವಿತೆಯ ಪರಿಪೂರ್ಣ ಸಮಾಗಮ ಆದಾಗ ಮಾತ್ರ ಇಂಥ ಸಾಲುಗಳು ಹೊಮ್ಮುತ್ತವೆ’ ಎಂಬ ಬೆನ್ನುಡಿಯ ಮಾತಿಗೆ ಇದಕ್ಕಿಂತ ದೊಡ್ಡ ಸಮರ್ಥನೆ ಬೇಕಿಲ್ಲ.

‘ನಡೆದು ನಡೆದು, ಜಾಳುಜಾಳಾಗಿ, ಸವೆದು ಹೋದ ಸವಕಲು ಹಾದಿಯ ಕವಿತೆಗಳನ್ನೇ ಓದಿ ಓದಿ ಮಂಕಾದ ಮನಸ್ಸಿಗೆ ಇಲ್ಲಿನ ಕವಿತೆಗಳ ಚೇತೋಹಾರಿ ನಡೆ ಮುದನೀಡುತ್ತದೆ. ಯಾವುದೇ ಕವಿತೆಯ ಎದುರು ನಿಂತು ಕೈಗೆ ಸಿಗುವ ಯಾವುದೇ ನುಡಿಯನ್ನು ಎತ್ತಿಕೊಂಡರೂ ಇಲ್ಲಿ ಹೊಸತನ ಕಾಣಿಸುತ್ತದೆ. ಜೊಂಪೆ ಜೊಂಪೆ ರೂಪಕಗಳು, ಪ್ರತಿಮೆ, ಪ್ರತೀಕಗಳು ಸಿಕ್ಕುತ್ತವೆ.’ ಎನ್ನುವ ಜಿ ಪಿ ಬಸವರಾಜು ಅವರು ತಮ್ಮ ಮುನ್ನುಡಿಯಲ್ಲಿ ‘ಒಲೆಯ ಕೆಂಡಕೆ ಕೆಂಪು ಹಿಂಗಿ ಇದೀಗಷ್ಟೇ ಜೋಂಪು’ ರೀತಿಯ ಒಂದಿಷ್ಟು ಮಾತುಗಳನ್ನು ಹೆಕ್ಕಿ ಕೊಡುತ್ತಾ ‘ಮಾತು ಇಲ್ಲಿ ಗರಿಬಿಚ್ಚಿ ಕುಣಿಯುತ್ತದೆ; ರೂಪರೂಪಕಗಳನ್ನು ಕಟ್ಟುತ್ತದೆ. ಹೊಸ ರೀತಿಯ ತುಡಿತ, ಗ್ರಹಿಕೆ ಮತ್ತು ನೋಟಗಳಿಂದ ಮಾತ್ರ ಇಂಥ ಕಾವ್ಯ ಹುಟ್ಟುತ್ತದೆ.’ ಎನ್ನುತ್ತಾರೆ. ಪ್ರತಿ ಕವಿತೆಯಲ್ಲೂ ಎದ್ದುಕಾಣುವ ಸಾಲುಗಳನ್ನಿಟ್ಟೇ ಬರೆಯುವ ಮೌಲ್ಯ ಅಗತ್ಯವಾದ ಟೆನ್ಷನ್ ಅನ್ನು ನಿರ್ಮಾಣ ಮಾಡಿ ವಸ್ತುವಿನ ನಿರ್ವಹಣೆಯಲ್ಲಿ ತೊಡಗುತ್ತಾರೆ. ಹಾಗಾಗಿ ಭಾಷೆಗೊಂದು ಕಸುವು ದೊರೆಯುತ್ತದೆ.

ಈ ಕಾವ್ಯದ ನೋವು ವಂಚಿಸಲ್ಪಟ್ಟ ಸ್ತ್ರೀ ಸಮುದಾಯದ್ದು. ವಂಚಕ- ವಂಚಿತೆ ಇಲ್ಲಿನ ಕೇಂದ್ರ. ವಂಚನೆಯಲ್ಲಿಯೂ ಭ್ರಮೆಗಳ ಸೃಷ್ಟಿಸಿ ವಂಚಿಸುವವರ ಕೈಲಿ ನಲುಗುವ ಹೆಣ್ಣಿನಲ್ಲಿನ ಅಮಾಯಕತೆಯನ್ನು ಕುರಿತೂ ಸಹ ಇವರು ಬರೆಯುತ್ತಾರೆ. ಹಿಕ್ಮತ್ತಿಗೆ ತುತ್ತಾಗುವವರ ಪರಿಸ್ಥಿತಿಯ ಕುರಿತು ಅವರು ಹೇಳುವುದು:

ನಾವು ಹುಡುಗಿಯರಿಗೋ..
ಭ್ರಮೆಗಳ ಪೆಟ್ಟು ಬೇಗ ತಟ್ಟುವುದಿಲ್ಲ

ಆದ್ದರಿಂದ ತಮ್ಮ ನುಡಿಗಳಲ್ಲಿ, ತಮ್ಮ ಕಾವ್ಯವನ್ನು ಕುರಿತು ಅವರು ಹೇಳುವುದು ಹೀಗೆ: ‘ಇವು ಐಷಾರಾಮಿ ತೂಗುಯ್ಯಾಲೆಯ ಮೇಲೆ ಪವಡಿಸಿದಾಗಲೂ, ಅಮೃತಶಿಲೆಯ ತಣ್ಣನೆಯ ಅಂಗಳದಲ್ಲಿ ಪಾದ ಊರುತ್ತಾ ಜೀವಿಸುವಾಗಲೂ ಕೆಂಡಕ್ಕಂಟಿದ ಪತಂಗದಂತೆ ನಲುಗುವ ಈ ಒಡಲ ಅಸಂಬದ್ಧ ಬಡಿದಾಟಗಳಿಗೆ ನೀಡಿಕೊಂಡ ಸಮಜಾಯಿಷಿಗಳು. ಚರ್ಮದ ಪದರಪದರಗಳೊಳಗೆ ಸುಪ್ತಪ್ರವಾಹವಾಗಿ ಹರಿಯುತ್ತಲೇ ಇರುವ ನಿಗಿನಿಗಿ ಖಾಲೀತನದ ಅನೂಹ್ಯ ನಿಸ್ಸಹಾಯಕ ಅವಸ್ಥೆಯ ಪಿಸುಮಾತುಗಳು. ಈ ಜಗದ ಮೂಲೆ ಮೂಲೆಗಳೂ ಹೊಂಚಿ ಹೊಂಚಿ ನನ್ನನ್ನು ಸ್ತಬ್ಧಗಳಿಗೆ ಹಂಚಿ ಅಮೂರ್ತ ಹಗ್ಗದಲ್ಲಿ ಬಿಗಿದು ಮುಚ್ಚಲ್ಪಟ್ಟ ಗಾಜಿನ ಜಾಡಿಯಿಂದೆದ್ದ ಪ್ರತಿರೋಧದ ಪಲುಕುಗಳು.’ ಮುಂದುವರಿದು ಅವರು ಇನ್ನೂ ಹರಿತವಾದ ಮಾತುಗಳನ್ನು ತಮ್ಮ ಕವಿತೆಯ ವಿವರಣೆಗೆಂಬಂತೆ ಬರೆಯುತ್ತಾರೆ.

ಒಟ್ಟಾರೆಯಾಗಿ ಕಾವ್ಯದ ಕೇಂದ್ರವು ಉಲ್ಲೇಖಿತ ವಿಚಾರದ ಜೊತೆಗೆ ‘ಬಾಯಿ ಹೊಲಿದುಕೊಂಡ ಹನ್ನೆರಡು ವಯಸ್ಸಿನ ಬಾಲೆಯೊಬ್ಬಳ ಇಪ್ಪತ್ತು ಒಂಬತ್ತರ ದೇಹದೊಳಗಿನ ಬಲಿತ ಅಳುಗಳ’ ‘ಜಗತ್ತಿನ ಕಿವಿಗೆ ಅಪಥ್ಯವೆನಿಸಿದ ದೂರುಗಳನ್ನೆಲ್ಲಾ ಕತ್ತಲ ಚಾದರದೊಳಗೆ ಮೆಲುದನಿಯಲಿ ಒಪ್ಪಿಸುತ್ತಾ ನಿದಿರೆ ಹೋದ ಅಸಹಾಯಕತೆಗಳ’, ‘ನಿರಂತರ ಒಳಗತ್ತಲ ರಕ್ಕಸನೊಂದಿಗೆ ಸೆಣೆಸುತ್ತಲೇ ಬೆಳಗೆದ್ದು ಮೌನ ತಾಳುವ ತಪ್ತಗಳ’, ‘ಗಾಜಿನ ಗುಲಾಬಿಗಳನ್ನು ಗುಂಡಿಟ್ಟು ಉಡಾಯಿಸುವ ಸಂಚು ಹೂಡುತ್ತಲೇ ದಿನಗಳೆಯುತ್ತಿರುವ ಮೃತ್ಯು ತಪನೆಯ ತಾಪದ ಮೊಟ್ಟೆಗಳ’ – ಇನ್ನು ಮುಂತಾದವುಗಳ ಚಿತ್ರಣಗಳು. ಹಾಗಾಗಿ ಇಲ್ಲಿನ ಕಾವ್ಯಭಾಷೆ ತನ್ನ ಅಂತರ್ಲಯದ ಜೊತೆಗೆ ಗಡುಸನ್ನೂ ಒಳಗೊಂಡು ಗ್ರಾಮ್ಯದೇವಿಯ ಉತ್ಸವದ ಹಲಗೆ ದುಡುಮುಗಳ ಸದ್ದಿನಂತೆ, ಸದ್ದಿನೊಂದಿಗೆ ಮನದಾಕ್ರಂದನವೇ ಮೂಲವಾಗಿ ಹುಟ್ಟಿದ ಸಿಟ್ಟಿನ ಮಾರ್ದನಿಯಂತೆ ಎಚ್ಚರಿಕೆಯ ಮೊಳಗು ಗಂಟೆಯಂತೆ ದುಡಿಯುತ್ತದೆ. ಉದಾಹರಣೆಗೆ:

ನೆನಪಿರಲಿ, ಮರೆಯಬಾರದು ನೀವು..
ಈ ಗೀತೆ ಹೀಗೆಯೇ ಇರುವುದಿಲ್ಲ
ಎಲ್ಲವೂ ಬದಲಾಗುತ್ತದೆ

******

ಪೃಥ್ವಿಗೂ ನಮ್ಮ ಸಹನೆಯಲ್ಲಿ ಪಾಲು ಕೊಟ್ಟಾಗಿದೆ
ಅಲ್ಲಿಯವರೆಗೂ ಚೆಂಡು ನಿಮ್ಮದೆ ಅಂಗಳವೂ ನಿಮ್ಮದೆ

ಅರೆಗಣ್ಣ ಧ್ಯಾನದಲ್ಲಿ ಹುಡುಕಿದ್ದೇನು? ಕಂಡದ್ದೇನು? ಎಂಬುದನ್ನು ಸ್ಪಷ್ಟಪಡಿಸಿದರೆ ಕವಿತೆ ಮುಗಿದಂತೆ ಎಂಬುದನ್ನು ಬಲ್ಲ ಮೌಲ್ಯ ಕಿರುಬೆರಳ ದ್ರೋಹವನ್ನೂ ಹೊಸ್ತಿಲಾಗುವ ಉಮ್ಮಳಗಳನ್ನೂ ತಾನೇ ಕೊಂದುಕೊಂಡ ನಿದಿರೆಯ ಸೂತಕದ ಛಾಯೆಯನ್ನೂ ಕವಿತೆಯೊಳಗೆ ತರಬಲ್ಲ ಸೂಕ್ಷ್ಮತೆ ಉಳ್ಳವರು.

ಮೌಲ್ಯ ಅವರ ಪ್ರತೀಕಗಳನ್ನು ನಿರ್ಮಿಸುವ, ಭಾಷೆಯನ್ನದರ ಹದಕ್ಕೆ ಹೊಂದಿಸುವ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ಅವರ ನದಿ ಧ್ಯಾನ ಎಂಬ ಕವಿತೆಯ ಸಾಲುಗಳನ್ನು ನೋಡಬಹುದು:

ನಾಳೆಗಳ ಹಿತ್ತಲಿನಲ್ಲಿ ನವಿಲುಗರಿ ತೋಟವಿತ್ತು
ನಿನ್ನೆಗಳ ಹೆಬ್ಬೆರಳ ತುದಿಯ ಮಣ್ಣೆಲದಲಿ
ನಿಶಾಂತ ಅರೆ ಮೌನದ ತಬ್ಬಲಿ ಹಾಡು
ದುಗುಡಗಳ ಚಪ್ಪರದಡಿ
ನಸೀಬು ಎದೆ ಹಾಸಿ ಮಲಗಿದ ಈ ಹೊತ್ತು
ಅಂಗಳದ ಬೂದಿಯ ಹೂ ಎಷ್ಟೊಂದು ಭಾರ

******

ತಣ್ಣಗೆ ಉಳಿದ ತಾಜಾ ನಿರಾಸೆಗಳು
ನಿಟ್ಟುಸಿರುಗಳನ್ನು ರದ್ದು ಮಾಡಿವೆ
ಚಿತ್ತುಗಳ ಎದೆಯೊಳಗಿನ್ನೂ ಹಸಿ ಹಸಿ
ಅಸಲೀತನಗಳ ಖಾಸಗೀ ಪಿಸುಗುಗಳು

******

ಮೌಲ್ಯರ ಸಿಟ್ಟಿರುವುದು ಇನ್ನೂ ಹಲವು ಸಂಗತಿಗಳ ಕುರಿತು. ತನ್ನ ಸ್ತ್ರೀತ್ವವನ್ನು ಮಾನ್ಯಮಾಡದ ಹೆಣ್ಣುಗಳೂ ಅವರ ಕವಿತೆಯ ವಸ್ತುವಾಗುತ್ತಾರೆ. ಶೀರ್ಷಿಕೆ ಬೇಡದ ಬಿಕ್ಕು ಕವನವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಮಾತೃತ್ವ-ಸ್ವೇಚ್ಛೆಗಳ ಕುರಿತ ಅವರ ಚಿಂತನೆಗಳು ಇಂಥ ಕಡೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಒಂದು ಕಡೆ ಭಯ, ಇನ್ನೊಂದು ಕಡೆ ಅಸಹಾಯಕತೆಯನ್ನು ಮರೆತವರ ಕುರಿತ ಕಾಳಜಿ ಈ ಕವಿತೆಯಲ್ಲಿ ರೂಪತಾಳಿದೆ:

ನಡು ಬೀದಿಯಲಿ ನಿಂತು
ನಿನ್ನೆಯಷ್ಟೇ ಮೈನೆರೆದ
ನಮ್ಮ ಎಳೆತಾಯಂದಿರನ್ನು ಬಚ್ಚಿಟ್ಟುಕೊಳ್ಳಲು
ಸುತ್ತಲೂ ನೋಡುತ್ತಲಿದ್ದೇವೆ

ಅಪಾಯಗಳ ಕಲ್ಪಿಸಲು ಮತ್ತೆ ಸೋತು
ಕೆಂಡದ ಮೇಲೆ ನಿಂತವರಿಗೆ
ಬೆಂಕಿಯ ಮಳೆ ಬೀಳುವಾಗ
ಯಾರನ್ನು ನೆನೆಯಬೇಕೆಂಬುದೇ
ಗೊಂದಲ

******

ಮೌಲ್ಯರಲ್ಲಿರುವ ಕಾವ್ಯಶಕ್ತಿ ಹೊರಬರುವುದು ಅವರು ಪ್ರತಿಕ್ರಿಯಾತ್ಮಕಾಗಿ ಯೋಚಿಸಿದ ಘಳಿಗೆಗಿಂತಲೂ ಹೆಚ್ಚು ಅಂತರ್ಮುಖಿಯಾಗಿ ಚಿಂತಿಸಿದಾಗ. ತಾಯಿಯ ಬಗ್ಗೆ ಬರೆದ ಕವಿತೆ, ಮತ್ತೆ ಸಂಧಿಸುತ್ತೇನೆ ಎಂಬ ಕವಿತೆ, ಅಪ್ಪ, ಮತ್ತು ನಂತರದ ಕವಿತೆಗಳಲ್ಲಿ ಈ ಬಗೆಯ ವಿನ್ಯಾಸವನ್ನು ಕಾಣಬಹುದು.

ಕತ್ತಲಿನ ಎದೆಯಲ್ಲಿ
ಬೆಳಕ ಗೊಡವೆ ತೊರೆದು

ನಿಜವಾಗಿ ಕೈಗೆಟುಕುವ
ಮಂಜೂರಾಗದ ಮಾತುಗಳು
ಕುತೂಹಲದ ಬೆರಳುಗಳನ್ನು ತಬ್ಬಿ
ಮಂಜುಗಟ್ಟಿಸಿವೆ ಮರಗಟ್ಟಿಸಿವೆ – ಎಂಬ ಸಾಲುಗಳು,

ಹೇಳು
ಆಗಲೂ ನನ್ನೀ ಮೇರೆ ಮೀರುವ
ಉಮೇದಿಗೆ ನೀನು
ದೊನ್ನೆ ತುಂಬ ಜೇನು ಬಾಳೆ ತಂದು
ನನ್ನದೊಂದಿಂಚು ಗಮನಕ್ಕಾಗಿಯೇ ಕಾಯುತ್ತೀಯ?- ಎಂಬ ಪ್ರಶ್ನೆ

ಏನೆಲ್ಲ ಘಾತುಕತನಗಳ ಅಫೀಮು ಕುಡಿದ
ಸುಖದಮಲಿನ ಜಗತ್ತಿಗೆ ನಾವೆಂದೂ ಸಲ್ಲಲಿಲ್ಲ – ಎಂಬ ಮಾತು

ಮಳಲ ಹೊದಿಕೆಯಡಿ ಕತ್ತಿ ಮಸೆಯುವ
ಸದ್ದಿದೆ ಕೇಳಿದೆಯಾ?
ಜಾಗರೂಕತೆ ಎಂಬುದು ಬಲು ತುರ್ತಿನ
ಖಾಯಿಲೆಯಾಗಿರುವಾಗ
ನಮ್ಮ ನಮ್ಮ ಪ್ರಜ್ಞೆಯ ಹಂದರದಲ್ಲಿ
ಬುದ್ಧನಿನ್ನೂ ದೇವಮಾನವನೇ – ಎಂಬ ಎಚ್ಚರಿಕೆ – ಇವೆಲ್ಲ ಕವಿಯಲ್ಲಿನ ಪ್ರೌಢ ಚಿಂತನೆಯ ಮಾತಾಡುತ್ತವೆ.

******

ಮೌಲ್ಯರ ಕಾವ್ಯ ನಿರ್ಮಾಣದ ಶಕ್ತಿ ಬಹಳ ದೊಡ್ಡದಿದೆ. ಈ ರೂಪಕ ನೋಡಿ:

ಒತ್ತೆ ಇಟ್ಟು ರಸೀದಿ
ಕಳೆದ ಎಲ್ಲಾ ರುಜುವಾತುಗಳೂ
ಇಂದು ಈ ಪ್ರಚ್ಛನ್ನ ಬೆಳಗಿನಲ್ಲಿ
ನನ್ನ ಹರಾಜು ಕೂಗುತ್ತಿವೆ

ನಾನು ಕಂಡಂತೆ ನುಡಿಗಟ್ಟುಗಳ ನಿರ್ಮಾಣ ಮೌಲ್ಯ ಅವರಿಗೆ ದಕ್ಕಿದ ಕಲೆ, ಆದರೆ ಅವವೇ ಕಾವ್ಯಕ್ಕೆ ಸಲ್ಲಿಸುವ ಕೊಡುಗೆ ಅಲ್ಪ. ಹೊಸ ಕವಿಗಳಿಗೆ ತಂತ್ರಗಾರಿಕೆಯ ಕುರಿತು ಹೆಚ್ಚಿನ ಆಸಕ್ತಿ ಸಹಜವೇ. ಕವಿಯ ಕಾವ್ಯಯಾನದ ಮುಂದಿನ ಹೆಜ್ಜೆಗಳ ಕುರಿತು ಮುನ್ನುಡಿಕಾರರಾದ ಜಿ.ಪಿ ಬಸವರಾಜು ಅವರು ನೀಡಿರುವ ಸಲಹೆಗಳು ಬಹಳ ಮುಖ್ಯವಾದುವು. ನನಗೂ ಅದೇ ಹೇಳುವ ಅಗತ್ಯವಿರುವುದರಿಂದ ಅವರ ಮಾತುಗಳನ್ನಿಲ್ಲಿ ಕೊಡುತ್ತಿದ್ದೇನೆ:

‘ಸಂಬಂಧ ಸೂಕ್ಷ್ಮಗಳನ್ನು ಇನ್ನಷ್ಟು ಆಳಕ್ಕೆ ಹೋಗಿ ನೋಡಬಲ್ಲ ದಿಟ್ಟತನವೂ ಬೇಕು. ಆಗ ಕಾವ್ಯ ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಹೆಚ್ಚು ಹೆಚ್ಚು ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಸಂಗ್ರಹವಾಗಿ, ಮೊನಚಾಗಿ, ಭಾಷೆ ಮತ್ತು ಅರ್ಥ ಸಾಧ್ಯತೆಗಳ ಎಲ್ಲ ಆಯಾಮಗಳೂ ಕೂಡಿಕೊಳ್ಳುವಂತೆ ಕಾವ್ಯವನ್ನು ಕಟ್ಟುವ ಕಲೆಗಾರಿಕೆ ಇನ್ನೂ ಗಟ್ಟಿಯಾಗಬೇಕು. ಇವೆಲ್ಲವನ್ನೂ ಪಟ್ಟಿ ಮಾಡುತ್ತ ಹೋಗಿ ಮೌಲ್ಯಳ ದಿಗಿಲನ್ನು ಹೆಚ್ಚು ಮಾಡಲಾರೆ. ನಡೆಯುತ್ತ ನಡೆಯುತ್ತ ನೋಟ ನಿಚ್ಚಳವಾಗುತ್ತದೆ. ದಾರಿ, ನಡಿಗೆಯ ಗತಿ ಎಲ್ಲವೂ ತಕ್ಕ ಲಯವನ್ನು ಪಡೆದುಕೊಳ್ಳುತ್ತವೆ.’

ಇದು ಸ್ವಾಗತ ನುಡಿ, ವಿಮರ್ಶೆಯಲ್ಲ. ‘ಕನಸೆಂಬ ಖಳನ ಎದುರು ಮಂಡಿಯೂರಿದ ಪ್ರಾರ್ಥನೆಗಳು’ ಹೇಗಿವೆ ಎಂದು ಪರಿಚಯಿಸುವ ಪ್ರಯತ್ನ. ಮೌಲ್ಯ ಅವರಿಗೆ ನಾನು ಮೊದಲ ಸಂಕಲನದ ಪ್ರಬುದ್ಧತೆಗೆ ಮನಸೋತು ಹೇಳುತ್ತೇನೆ: ನಡೆ ಮುಂದೆ ಎಂದು.

(ಕೃತಿ: ಸುಮ್ಮನೆ ಬಿದ್ದಿರುವ ಬಿಕ್ಕುಗಳು(ಕವನ ಸಂಕಲನ), ಲೇಖಕರು: ಮೌಲ್ಯ ಸ್ವಾಮಿ, ಪ್ರಕಾಶಕರು: ವಾಗರ್ಥ ಪ್ರಕಾಶನ ಬೆಲೆ:೧೩೦)