Advertisement
ಸಹಜಪ್ರಕೃತಿ ದರ್ಶನದ ಕವಿತೆಗಳು:  ಡಾ. ಬಿ. ಜನಾರ್ದನ ಭಟ್ ಬರಹ

ಸಹಜಪ್ರಕೃತಿ ದರ್ಶನದ ಕವಿತೆಗಳು: ಡಾ. ಬಿ. ಜನಾರ್ದನ ಭಟ್ ಬರಹ

ನಮ್ಮ ಕಾಲದ ದೊಡ್ಡ ದೊಡ್ಡ ಕವಿಗಳೆಲ್ಲ ಹೀಗೆ ನೇರವಾಗಿ ಧರ್ಮಬೋಧನೆ ಅಲ್ಲದಿದ್ದರೂ ಒಂದಲ್ಲ ಒಂದು ಜೀವನ ದರ್ಶನವನ್ನು – ಜೀವನ ಧರ್ಮವನ್ನು – ತಮ್ಮ ಕಾವ್ಯದ ಮೂಲಕ ಜನರಿಗೆ ನೀಡಿದವರೇ ಆಗಿದ್ದಾರೆ. ಮೊಗಸಾಲೆಯವರ ಕಾವ್ಯ ಯಾನವನ್ನೇ ಗಮನಿಸಿದರೆ ಅವರು ಪ್ರಾರಂಭದಲ್ಲಿ ನವ್ಯ ಸಾಹಿತ್ಯದ ಪ್ರೇರಣೆಯಿಂದ ಬರೆಯುತ್ತಿದ್ದರು. ನವ್ಯ ಸಾಹಿತ್ಯಕ್ಕೆ ಅಸ್ತಿತ್ವವಾದದ ಹಿನ್ನೆಲೆ ಇತ್ತು. ಆಮೇಲೆ ಮೊಗಸಾಲೆಯವರನ್ನು ಅಲ್ಲಮಪ್ರಭು ಪ್ರಭಾವಿಸಿದ. ಅಲ್ಲಮನ ಹೊಸ ರೂಪಕಗಳು, ಹೊಸತನವುಳ್ಳ ವಿಚಾರಗಳು ಅವರನ್ನು ಸೆಳೆದವು.
ಡಾ. ನಾ ಮೊಗಸಾಲೆಯವರ ಹೊಸ ಕವನ ಸಂಕಲನ “ಹೇ ರಾಮ್”‌ ಕುರಿತು ಡಾ. ಜನಾರ್ಧನ ಭಟ್‌ ಬರಹ ನಿಮ್ಮ ಓದಿಗೆ

ಡಾ. ನಾ. ಮೊಗಸಾಲೆಯವರು ಮೊದಲು ನವ್ಯ ಸಾಹಿತ್ಯ ಪಂಥದ ಸಾಹಿತಿಯಾಗಿದ್ದರು. ನಂತರ ಅಲ್ಲಮ ಪ್ರಭುವಿನ ಚಿಂತನೆಗಳಿಂದ ಆಕರ್ಷಿತರಾಗಿ ಅಲ್ಲಮಪ್ರಭು ಪೀಠವನ್ನು ಕಟ್ಟಿದರು. ನಂತರ ಆಸ್ತಿಕ ದರ್ಶನಗಳತ್ತ ಆಸಕ್ತಿ ಬೆಳೆಸಿಕೊಂಡರು. ಮೊಗಸಾಲೆಯವರ ಕಾವ್ಯದ ಬಗ್ಗೆ ಮಾತಾಡುವಾಗ ಅವರ ವೈಚಾರಿಕ ಪರಿಭ್ರಮಣದ ಕುರಿತು ಆಮೇಲೆ ಸ್ವಲ್ಪ ಹೇಳಿ, ಅವರ ಹೊಸ ಕವಿತೆಗಳನ್ನು ಅದಕ್ಕೆ ಜೋಡಿಸುವೆ.

ಸಾಮಾನ್ಯವಾಗಿ ನಮ್ಮ ಆಧುನಿಕ ಸಾಹಿತ್ಯದ ಕತೆ, ಕಾದಂಬರಿಗಳು ಸಮಾಜದ ಚಿತ್ರಣವನ್ನು ಮತ್ತು ವಿಶ್ಲೇಷಣೆಯನ್ನು ಮಾಡುತ್ತವೆ. ಸಣ್ಣ ಕವನಗಳು ಹಾಗೂ ಕವಿತೆಗಳ ರೂಪದಲ್ಲಿ ಸೃಷ್ಟಿಯಾಗುವ ಕಾವ್ಯವು ತಾತ್ತ್ವಿಕ ವಿಚಾರಗಳನ್ನು ಓದುಗರಿಗೆ ದಾಟಿಸುತ್ತದೆ. ವಚನಗಳನ್ನು ಮತ್ತು ದಾಸರ ಪದಗಳನ್ನು ಓದುವಾಗ ಅಥವಾ ಕೇಳುವಾಗ ಅವು ನಮ್ಮ ಜನರಿಗೆ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಮಾರ್ಗದರ್ಶನ ನೀಡಿವೆ ಎನ್ನುವುದು ಗೊತ್ತಾಗುತ್ತದೆ.

ನಮ್ಮ ಕಾಲದ ದೊಡ್ಡ ದೊಡ್ಡ ಕವಿಗಳೆಲ್ಲ ಹೀಗೆ ನೇರವಾಗಿ ಧರ್ಮಬೋಧನೆ ಅಲ್ಲದಿದ್ದರೂ ಒಂದಲ್ಲ ಒಂದು ಜೀವನ ದರ್ಶನವನ್ನು – ಜೀವನ ಧರ್ಮವನ್ನು – ತಮ್ಮ ಕಾವ್ಯದ ಮೂಲಕ ಜನರಿಗೆ ನೀಡಿದವರೇ ಆಗಿದ್ದಾರೆ. ಮೊಗಸಾಲೆಯವರ ಕಾವ್ಯ ಯಾನವನ್ನೇ ಗಮನಿಸಿದರೆ ಅವರು ಪ್ರಾರಂಭದಲ್ಲಿ ನವ್ಯ ಸಾಹಿತ್ಯದ ಪ್ರೇರಣೆಯಿಂದ ಬರೆಯುತ್ತಿದ್ದರು. ನವ್ಯ ಸಾಹಿತ್ಯಕ್ಕೆ ಅಸ್ತಿತ್ವವಾದದ ಹಿನ್ನೆಲೆ ಇತ್ತು. ಆಮೇಲೆ ಮೊಗಸಾಲೆಯವರನ್ನು ಅಲ್ಲಮಪ್ರಭು ಪ್ರಭಾವಿಸಿದ. ಅಲ್ಲಮನ ಹೊಸ ರೂಪಕಗಳು, ಹೊಸತನವುಳ್ಳ ವಿಚಾರಗಳು ಅವರನ್ನು ಸೆಳೆದವು. ನಾನು ಆಗ ಹೇಳಿದ ಹಾಗೆ ಅವೈದಿಕ ದರ್ಶನಗಳು ತಮ್ಮ ಹೊಸ ಹೊಸ ರೂಪಕಗಳಿಂದ ವೈಚಾರಿಕರನ್ನು ಹೀಗೆ ಸೆಳೆಯುವುದು ಸಹಜವಾಗಿದೆ – ಸಾಮಾನ್ಯವಾಗಿದೆ.

ಮುಂದೆ ಮೊಗಸಾಲೆಯವರು ಸಾಂಪ್ರದಾಯಿಕ ಆಸ್ತಿಕ ದರ್ಶನಗಳ ಕಡೆಗೆ ತಿರುಗಿದರು. ಅವರು ಉಪನಿಷತ್ತುಗಳ ಲೋಕಕ್ಕೆ ಅವರು ಪ್ರವೇಶಿಸಿದರು. ಇವೆಲ್ಲದರ ಜತೆಗೆ ಮೊಗಸಾಲೆಯವರಿಗೆ ಗಾಂಧೀಜಿಯ ಸರಳತೆ ಮತ್ತು ಅಹಿಂಸೆಗಳು ಇಷ್ಟವಾಗಿದ್ದವು. ಮೊಗಸಾಲೆಯವರು ಈ ಹಂತದಲ್ಲಿ ವೈಚಾರಿಕತೆಯ ಅತಿಯಿಂದ ಮುಕ್ತರಾಗಬೇಕೆಂದು ಬಯಸಿದ್ದಕ್ಕೂ ಗಾಂಧೀಜಿಯವರ ಸರಳ ಭಕ್ತಿ ಮಾರ್ಗಕ್ಕೂ ಒಂದು ಸಂಬಂಧವಿದೆ.

(ಡಾ. ನಾ ಮೊಗಸಾಲೆ)

`ಹೇ… ರಾಮ್!'(2026) ಮೊಗಸಾಲೆಯವರ ಹದಿನಾಲ್ಕನೇ ಕವನ ಸಂಕಲನವಾಗಿದೆ. ಇದರಲ್ಲಿ 65 ಕವನಗಳಿವೆ. ಅವರ ಹೊಸ ಸಂಕಲನದಲ್ಲಿ ನಾವು ಯಾವ ರೀತಿಯ ಜೀವನದರ್ಶನವನ್ನು ಕಾಣಬಹುದು ಮತ್ತು ಅವರ ಕಾವ್ಯಯಾನಕ್ಕೆ ಯಾವ ಬಗೆಯ ತಿರುವು ಸಿಕ್ಕಿದೆ ಎನ್ನುವುದನ್ನೀಗ ಪರಿಶೀಲಿಸಬಹುದು.

  1. ವೈಚಾರಿಕತೆಯ ತಿರಸ್ಕಾರ, ಭಾವನಾತ್ಮಕ ನೆಲೆ: ಮೊಗಸಾಲೆಯವರು ಈ ಕವಿತೆಗಳಲ್ಲಿ ವೈಚಾರಿಕತೆಯ ಅತಿಯನ್ನು ತಿರಸ್ಕರಿಸಿ ಅವೈಚಾರಿಕ ಮತ್ತು ವಿಚಾರೇತರ ಸಂಗತಿಗಳನ್ನು ಭಾವದ ನೆಲೆಯಲ್ಲಿ ಗ್ರಹಿಸಿ ಸ್ಪಂದಿಸುತ್ತಾರೆ. ಈ ಅಂಶವು ಇಂಗ್ಲಿಷಿನ ವರ್ಡ್ಸ್‌ವರ್ಥ್ ಕವಿಯು ಅತಿಯಾದ ಪ್ರಾಪಂಚಿಕತೆಯಿಂದ ಬೇಸತ್ತು ಪ್ರಕೃತಿ-ಪುರಾಣಗಳ ಬಹುದೇವೋಪಾಸಕ ಮತವೊಂದರ ಅನುಯಾಯಿ ತಾನಾಗಬೇಕಿತ್ತು ಎಂದು ಬಯಸಿದ್ದನ್ನು ನೆನಪಿಸುತ್ತದೆ. ವರ್ಡ್ಸ್‌ವರ್ಥ್ ತನ್ನ ಕಾಲದ ಉಪಭೋಗವಾದದ ಅತಿಯಿಂದ ಬೇಸತ್ತು, ಈ ಪ್ರಾಪಂಚಿಕ ವ್ಯಾಮೋಹ ಅತಿಯಾಯಿತು ಅನ್ನುತ್ತಾನೆ. ಪ್ರಕೃತಿಯಲ್ಲಿ ದೇವರನ್ನು ಕಾಣುವ ಬಹುದೇವತೋಪಾಸಕರಾದ ಪೇಗನ್‌ಗಳ ಹಾಗೆ ಆದರೂ ಆದೇನು; ಆದರೆ ಈ ವೈಶ್ಯ ಪಾರಮ್ಯದ ಲಾಭನಷ್ಟದ ಜಗತ್ತಿನಲ್ಲಿ ತಾನು ಕ್ರೈಸ್ತನಾಗಿ ಇರಲಾರೆ ಎನ್ನುವ ಚಿಂತನೆಯ ಅವನ ಪ್ರಸಿದ್ಧ ಕವಿತೆಯೊಂದಿದೆ. ಅದು ಹೀಗಿದೆ:

The world is too much with us; late and soon,
Getting and spending, we lay waste our powers;
Little we see in Nature that is ours;
We have given our hearts away, a sordid boon!
This Sea that bares her bosom to the moon;
The winds that will be howling at all hours,
And are up-gathered now like sleeping flowers;
For this, for everything, we are out of tune;
It moves us not. Great God! I’d rather be
A Pagan suckled in a creed outworn;
So might I, standing on this pleasant lea,
Have glimpses that would make me less forlorn;
Have sight of Proteus rising from the sea;
Or hear old Triton blow his wreathèd horn.

ನಾ. ಮೊಗಸಾಲೆಯವರು ಒಂದು ಕವನದಲ್ಲಿ ಹೀಗೆ ಹೇಳದಿದ್ದರೂ ಅವರ ಹಲವು ಕವನಗಳಲ್ಲಿ ಈ ಬಗೆಯ ಚಿಂತನೆ ಇದೆ. ಅವರು ಇಲ್ಲಿನ ಸಾಂಪ್ರದಾಯಿಕ ಬದುಕಿನ ಕ್ರಮಗಳು, ದೇವರ ಆರಾಧನೆಯ ಕ್ರಮಗಳು ಎಲ್ಲವನ್ನೂ ಬಿಟ್ಟುಕೊಟ್ಟು ಬೇರೊಂದು ರೀತಿಯಲ್ಲಿ ಸರಳವಾಗಿ, ನಿರುದ್ದಿಶ್ಯವಾಗಿ ಬದುಕಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ –

ಮುಂಜಾನೆಯ ವಾಕಿಂಗಿನಲ್ಲಿ
ಅನಾಥವಾಗಿ ಬಿದ್ದ ನವಿಲುಗರಿ
ಇದಿರಾಯಿತು ದಾರಿಯಲ್ಲಿ

ಎತ್ತಿಕೊಳಲೇ? ಅಥವಾ ಬಿಟ್ಟು ನಡೆಯಲೇ?
ದ್ವಂದ್ವದಿಂದ ಹೊರಬಂದು
ಎತ್ತಿಕೊಂಡೆ ಬಾಗಿ!

ದ್ವಾರಕಕ್ಕೆ ಮರಳಿದ ಅದು
ನನ್ನ ಮನಸ್ಸಿಗೆ ಬಾಲ್ಯವನ್ನು ತಂದು ……..

ವರ್ಡ್ಸ್‌ವರ್ಥ್ ಕವಿಗೆ ಕಲ್ಪನೆಯಲ್ಲಾದರೂ ಗ್ರೀಕ್ ಪುರಾಣಗಳ ಸಮುದ್ರ ವೃದ್ಧ ಪ್ರೋಟಿಯಸ್ ಸಮುದ್ರದಿಂದ ಮೇಲೆದ್ದು ಬರುವುದನ್ನು ನೋಡುವ, ಸಮುದ್ರರಾಜನ ಪುತ್ರ ಟ್ರೈಟಾನ್ ತನ್ನ ಶಂಖ ಊದುವುದನ್ನು ಕೇಳುವ; ಆಮೂಲಕ ಪ್ರಕೃತಿಯ ಜತೆಗೆ ತಾದಾತ್ಮ್ಯವನ್ನು ಸಾಧಿಸಿಕೊಳ್ಳುವ ಸುಖಕ್ಕಾದರೂ ಪೇಗನ್ ಆಗಬೇಕೆಂದು ಅನಿಸುತ್ತದೆ. ಆದರೆ ಮೊಗಸಾಲೆಯವರಿಗೆ ಎಲ್ಲ ಪುರಾಣಗಳು ನಿತ್ಯಜೀವನದ ಜತೆಗೆ ಬೆರೆತುಕೊಂಡಿರುವ ಸತ್ಯಗಳಾಗಿರುವ ಕಾರಣ `ಅದನ್ನು ನವಿಲುಗರಿಯನ್ನು ಎತ್ತಿಕೊಂಡಹಾಗೆ’ ಎತ್ತಿಕೊಂಡರೆ ಸಾಕು… ಪುರಾಣಲೋಕವೇ ಅವರ ಮನಸ್ಸಿನೊಳಗೆ ಬಂದುಬಿಡುತ್ತದೆ, ಅವರನ್ನು ದ್ವಾರಕೆಗೆ ಒಯ್ಯುತ್ತದೆ! ಭಾರತೀಯ ಕವಿಗಳಿಗೆ ಇರುವ ವಿಶೇಷ ಸವಲತ್ತು ನಮ್ಮ ಪುರಾಣಲೋಕ ನಮ್ಮ ಜತೆಗೆ ಜೀವಂತವಾಗಿರುವುದು.

  1. ಪ್ರಕೃತಿಕೇಂದ್ರಿತ ಅನಿಮಿಸ್ಟಿಕ್ ದರ್ಶನ: ಮೊಗಸಾಲೆಯವರ ಹೊಸ ಕವನಗಳಲ್ಲಿ ನಾವು ತಿಳಿಯಬಹುದಾದ ಹಾಗೆ ಅವರು ಯಾವುದೇ ಸಾಂಪ್ರದಾಯಿಕ ದರ್ಶನಗಳ ಜತೆಗೆ ನಿಲ್ಲದೆ ಅವುಗಳಿಂದ ಬಿಡಿಸಿಕೊಂಡು ತಮ್ಮದೇ ಆದ ಪ್ರಕೃತಿ ಕೇಂದ್ರಿತ ದರ್ಶನವೊಂದನ್ನು ಕಂಡುಕೊಂಡಿದ್ದಾರೆ.

ಈ ದರ್ಶನವು ಹೊಸದೇನೂ ಅಲ್ಲ. ಜಗತ್ತಿನಲ್ಲಿರುವ ಪ್ರಾಣಿ ಪಕ್ಷಿ, ಜಡವಸ್ತುಗಳು ಎಲ್ಲಕ್ಕೂ ಆತ್ಮಗಳಿವೆ ಎನ್ನುವ ಚಿಂತನೆ ಈ ಜೀವನದರ್ಶನದ ಹಿಂದಿದೆ. ಅನಿಮಾ ಅಂದರೆ ಆತ್ಮ ಅಥವಾ ಜೀವ ಎಂದರ್ಥ.

ಮೊಗಸಾಲೆಯವರ ಹೆಚ್ಚಿನ ಕವಿತೆಗಳಲ್ಲಿ ಪ್ರಕೃತಿಯ ಮೂಲಕ ನಾವು ದೇವರನ್ನು ಕಾಣಬಹುದು ಎನ್ನುವ ಭಾವವಿದೆ. ಎಲ್ಲ ಜಡ – ಜೀವಗಳಿಗೂ ಆತ್ಮ ಇರುವುದರಿಂದ ಅವುಗಳ ಜತೆಗೆ ಸಂವಾದ ಸಾಧ್ಯ ಎನ್ನುವುದನ್ನು ಅವರ ಕವಿತೆಗಳು ಅಭಿನಯಿಸಿ ತೋರಿಸುತ್ತವೆ.

  1. ಉದಾರ ಅನಾಗರಿಕ ನಾಯಕ: ಫ್ರೆಂಚ್ ತತ್ತ್ವಜ್ಞಾನಿ `ನೋಬ್ಲ್ ಸ್ಯಾವೇಜ್’ ಎನ್ನುವ ಪರಿಕಲ್ಪನೆಯನ್ನು ಬಳಸಿದ್ದ. ವರ್ಡ್ಸ್‌ವರ್ಥ್‌ನ ಕೊನೆಕೊನೆಯ ಕವಿತೆಗಳಲ್ಲಿ ಈ ದರ್ಶನ ಇದೆ ಎಂದು ಹೇಳುತ್ತಾರೆ. ಹಾಗೆಯೇ ಮೊಗಸಾಲೆಯವರೂ ವರ್ಡ್ಸ್‌ವರ್ಥ್‌ ಕವಿಯ ಹಾಗೆ ಈ ಬಗೆಯ ಜೀವನದರ್ಶನವೊಂದನ್ನು ರೂಪಿಸಿಕೊಂಡಿದ್ದಾರೆ. ನಾಗರಿಕತೆಯ ಬಂಧನದಿಂದ ಮುಕ್ತರಾಗಿ ಸಹಜವಾಗಿ ಬದುಕಲು ಸಾಧ್ಯ ಎನ್ನುವ ಚಿಂತನೆ ಇದು. ಅಮೇರಿಕದ ಹೆನ್ರಿ ಡೇವಿಡ್ ಥೋರೋ ತನ್ನ ಸಮಾಜದ ಯುದ್ಧಾಕಾಂಕ್ಷೆ ಇತ್ಯಾದಿಗಳಿಂದ ಬೇಸತ್ತು ಮಸಾಚುಸೆಟ್ಸ್ ರಾಜ್ಯದ ಕಾಡೊಂದಕ್ಕೆ ಹೋಗಿ, ಅಲ್ಲಿನ ವಾಲ್ಡನ್ ಎಂಬ ಕೆರೆಯ ತೀರದಲ್ಲಿ ಎರಡು ವರ್ಷ ಎರಡು ತಿಂಗಳು ಎರಡು ದಿನಗಳ ಕಾಲ ಏಕಾಂಗಿಯಾಗಿ ಬದುಕಿದ್ದ. ಅವನನ್ನು ನೋಬಲ್‌ ಸ್ಯಾವೇಜ್ ಎಂದು ಕರೆಯಬಹುದು.

ಅಂದ ಹಾಗೆ ಗಾಂಧೀಜಿಯವರನ್ನು ಪ್ರಭಾವಿಸಿದ ಒಬ್ಬ ಚಿಂತಕ ಈ ಥೋರೋ. ಮೊಗಸಾಲೆಯವರ `ಹೇ … ರಾಮ್!’ ಮತ್ತಿತರ ಕವನಗಳಲ್ಲಿ ಕೂಡ ಥೋರೋ ಪ್ರತಿಪಾದಿಸಿದ ಯುದ್ಧೋನ್ಮಾದ ಅಥವಾ ಅದರ ಸಣ್ಣಸಣ್ಣ ರೂಪಗಳಾದ ದೈನಂದಿನ ಹಿಂಸೆಗಳ ನಿರಾಕರಣೆ ಇದೆ.

ಅಡಿಗೆ ಮನೆಯಲ್ಲಿದ್ದ ಇಲಿಯನ್ನು
ಬಡಿದು ಕೊಲ್ಲಲು ಊರುಗೋಲನ್ನು ಹುಡುಕಿ ಒಳಗೆ ಒಯ್ದಳು ಅದನ್ನು ಸೊಸೆ
ಅದೇ ಹೊತ್ತಿಗೆ ಗೇಟು ದಾಟಿ ಒಳಗೆ ಬಂದ ಬೀದಿ ನಾಯಿಯನ್ನು
ಓಡಿಸಲು ಅವಳಿಂದ ಅದನ್ನು ಇಸಿದುಕೊಂಡ ನನ್ನ ಮಗ
– ಇಂತಹ ಹಿಂಸೆಗಳನ್ನೂ ಕವಿ ಗಮನಿಸುತ್ತಾರೆ.

  1. ಸರಳ ಬದುಕು, ಸಹಜ ಜ್ಞಾನ, ಸಹಜ ಆನಂದ:

ಮೇಲೆ ನಾವು ನೋಡಿದ ಉದಾಹರಣೆಯಲ್ಲಿ ತೀರಾ ವೈಚಾರಿಕವಾಗಿ, ಬುದ್ಧಿಪೂರ್ವಕವಾಗಿ ಹೀಗೆಯೆ ಬದುಕಬೇಕು ಎನ್ನುವ ನಿರ್ಧಾರ ಇಲ್ಲದೆ ಅವೈಚಾರಿಕವಾಗಿ ಬದುಕಬೇಕು ಎನ್ನುವ ನಿರ್ಧಾರವನ್ನು ನೋಡಿದೆವು. ಹಾಗೆ ಬದುಕಿದರೆ ದೊರಕುವ ಹೊಸ ಬಗೆಯ ಆನಂದವನ್ನು `ನಡೆತೇರನೇರಿ ಕುಳಿತುಕೊಳ್ಳದಿರಯ್ಯ’ ಕವಿತೆಯಲ್ಲಿ, ಅದರಲ್ಲೂ ಈ ಕೆಳಗಿನ ಸಾಲುಗಳಲ್ಲಿ ಕಾಣಬಹುದು.

ನಾನಡೆದ ದಾರಿ ತೀರ ಚಿಕ್ಕದು ಆದರದರ ಇಕ್ಕೆಲದಲ್ಲಿ
ನಾನು ನೋಡಿದ್ದೆಲ್ಲ ಗುಡಿಗೋಪುರಗಳಾಗಿ
ಈಗಲೂ ಇವೆ ಎದೆಯಲ್ಲಿ ಕರೆದಾಗ ಅವುಗಳೆ ಬಂದು
ನಿಲ್ಲುವುವು ತಾವಾಗಿ ರಥಬೀದಿಯಾಗಿ! (ನಡೆತೇರನೇರಿ ಕುಳಿತುಕೊಳ್ಳದಿರಯ್ಯ).

ಈಗ ಮೊಗಸಾಲೆಯವರಿಗೆ ಬದುಕಿನಲ್ಲಿ ಮುಖ್ಯವಾಗುವುದು, ಸಂತೆಯಲ್ಲಿ ವೀಳೆಯದೆಲೆ ಮಾರುವ ಮುದುಕಿ ನತ್ತಲಾ ಬಾಯಿಯೆ ಹೊರತು ಬೆಂಜಮಿನ್ ಮೊಲಾಯಿಸ್ ಆಗಲಿ, ಬಾಬೂ ಜಗಜೀವನರಾಮ್ ಎಂಬ ಸರಳ ರಗಳೆಯಾಗಲಿ ಅಲ್ಲ.

  1. ದೇವರು ಇರುವುದು ನಮ್ಮ ಒಳಗೆಯೆ ಹೊರತು ಹೊರಗಲ್ಲ:

ಮೊಗಸಾಲೆಯವರ ಈ ಹಂತದ ಕವನಗಳಲ್ಲಿ ದೇವರು ಗರ್ಭಗುಡಿಯೊಳಗೆ ಇರುವವನಲ್ಲ. ಅಂತಹ ದೇವರು ಶಿಲಾಯುಗದ ದೇವರ ಹಾಗೆ ಕಾಣಿಸುತ್ತಾನೆ. `ಆ ದೇವಸ್ಥಾನ’ ಕವನದಲ್ಲಿ ಹೀಗೊಂದು ಸ್ಟಾಂಜ ಇದೆ:

ಯಾಕೋ ಏನೋ ಭಕ್ತರ ಸುಳಿವೆ ಇಲ್ಲ ಎನ್ನುವಂತಾಗಿ
ದೇವಸ್ಥಾನದ ಗರ್ಭಗುಡಿ
ಶಿಲಾಯುಗದ ಗವಿಯಾಗಬಹುದೋ ಎಂಬ ಆತಂಕದಲ್ಲಿ
ತನ್ನ ಅಸ್ಮಿತೆಯನ್ನು ಉಳಿಸಲು ಹೋರಾಡುವಂತಿದೆ

`ಜಾತ್ರೆ’ ಕವನದಲ್ಲಿ ದೇವರು ರಥೋತ್ಸವದ ದಿನ ಜನರ ನಡುವೆ ಬಂದರೂ ಕವಿಗೆ ಆ ಜಾತ್ರೆಯಲ್ಲಿ ಮೊಮ್ಮಗನನ್ನು ತೊಟ್ಟಿಲು ಎಂಬ ರಥವನ್ನೇರಿಸಿ ಅವನ ಆನಂದದಲ್ಲಿ ಪಾಲುಗೊಳ್ಳುವುದು ಮುಖ್ಯವಾಗುತ್ತದೆ.

ಅನಿಮಿಸ್ಟಿಕ್ ಪಂಥದವರಂತೆ ಸಹಜೀವಿಗಳೊಡನೆ ಮತ್ತು ಪ್ರಕೃತಿಯ ಜಡವಸ್ತುಗಳ (ನವಿಲುಗರಿ, ವಾಕಿಂಗ್ ಸ್ಟಿಕ್, ಕತ್ತಿ ಇತ್ಯಾದಿ) ಲೋಕದಲ್ಲಿ ಅವುಗಳೊಡನೆ ಆತ್ಮಾನುಸಂಧಾನವೂ ಕವಿಯು ಈಗ ದೇವರನ್ನು ಕಂಡುಕೊಳ್ಳುವ ಒಂದು ವಿಧಾನವಾಗಿದೆ. ಆತ್ಮಸಂವಾದಕ್ಕಿಂತ ಹೊರತಾದ ಕಾನೂನು ಕಟ್ಟಲೆಗಳು, ಧರ್ಮ ಅಧರ್ಮಗಳು ಈ ಲೋಕದಲ್ಲಿಲ್ಲ ಎನ್ನುವ ಚಿಂತನೆಯನ್ನು ಈ ಕವನಗಳು ನಮ್ಮಲ್ಲಿ ಹುಟ್ಟಿಸುತ್ತವೆ.

  1. ಪ್ರಪಂಚವು ಇದ್ದ ಹಾಗೆಯೇ ಇರುತ್ತದೆ. ಕಾಲವು ಮಾತ್ರ ಸರಿಯುತ್ತದೆ:

ಈ ಹಂತದಲ್ಲಿ ಕವಿಯ ಜೀವನ ದರ್ಶನದ ಇನ್ನೊಂದು ಅಂಶವೆಂದರೆ ಪ್ರಪಂಚವು ಸಹಜವಾಗಿ ಸಾಗುತ್ತದೆ. ಎಲ್ಲವೂ ಇದ್ದಹಾಗೆಯೇ ಇರುತ್ತದೆ. ಆದರೆ ಕಾಲ ಮಾತ್ರ ಸರಿದುಹೋಗುತ್ತದೆ. ಕಾಲದ ಬಗೆಗೆ ಈ ಹೊಸ ದೃಷ್ಟಿಕೋನ ಇರುವ ಎರಡು ಕವನಗಳ ಸಾಲುಗಳಿವು:

(ಅ)
ಹೊತ್ತು ಹೋಗುತ್ತ ಹೋಗುತ್ತಾs ಹೋಯಿತು
ಹೊತ್ತನ್ನೇ ಹೊತ್ತುಕೊಂಡಂತೆ
ಮಧ್ಯಾಹ್ನ ಎನ್ನುವುದು ಅದೇ ಆಗಿ, ಅದೇ ಮತ್ತೆ ಸಂಜೆಯಾಗಿ
ಸಂಜೆ ಎನ್ನುವುದು ತನ್ನಿಂತಾನೇ ರಾತ್ರೆಯಾಗಿ
ಇಳಿಯಿತು ಇಳೆಗೆ ಇಟ್ಟಂತೆ ಕಿರೀಟ (ಕತ್ತಲೆ ಬೆಳಕಿನ ಆಟ).

(ಆ)
ಬಟ್ಟೆ ಬರೆ ಮೀನಿನ ಬಲೆ ಅಕ್ಕಿ ತೆಂಗಿನಕಾಯಿ
ಇಲ್ಲಿಯೇ ನಿಂತಂತೆ ಖಾಯಂ ಆಗಿ
ಹಾಗಾಗಿ ಇವಕ್ಕೆ ಸಮಾನ ಸ್ಥಾನಮಾನ
ಕಳೆದ ವಾರ ನೋಡಿದ್ದೇ
ಈ ವಾರವೂ ನೋಡು ಎಂಬಂತೆ ಕಣ್ಣಿಗೆ
ದಿನ ತಿಂಗಳು ಇಸವಿಗಳನ್ನ ಇದು ಬದಲಾಯಿಸಿ ಬದಲಾಯಿಸಿ
ಸಂತೆಯೇ ಆಗಿ ನಿಂತಿರುವುದು ಸಂತೆ! (ಸಂತೆ ಎನ್ನುವ ಸಂತೆ)

  1. ದೈನಂದಿನದ ಕ್ರಿಯೆಗಳು ಹೇಗಿರಬೇಕು? ಕ್ರಿಯೆಗೆ ಅರ್ಥವಿದೆಯೆ?

ಮೊಗಸಾಲೆಯವರ ಕಾವ್ಯದ ಹೊಸ ಜೀವನದರ್ಶನದ ಅಂಶಗಳನ್ನು ನೋಡುವಾಗ ಒಂದು ಪ್ರಶ್ನೆ ಹುಟ್ಟುತ್ತದೆ. ಹಾಗಾದರೆ, ದೈನಂದಿನದ ಜೀವನ ಹೇಗಿರಬೇಕು, ಯಾವುದಾದರೂ ಕ್ರಿಯೆಗೆ ಅರ್ಥವಿದೆಯೆ ಇಲ್ಲವೆ?

ಇದಕ್ಕೆ ಉತ್ತರವನ್ನು ಅನ್ವೇಷಿಸಲು ಅವರ ಈ ಸಂಕಲನದ ಕವನಗಳು ಪ್ರಯತ್ನಿಸುತ್ತಿವೆ. ಸಣ್ಣಪುಟ್ಟ ಚಲನೆಗಳ ಮೂಲಕವೇ ಚೈತನ್ಯವನ್ನು ಮರು ಗಳಿಸಬಹುದು ಎಂಬ ನಂಬಿಕೆಯಿಂದ ಅವರು ಈ ಕವನಗಳಲ್ಲಿಯ ಸಣ್ಣಪುಟ್ಟ ಚಲನೆಗಳು ಅರ್ಥಪಡೆದುಕೊಳ್ಳುವ ವಿಸ್ಮಯವನ್ನು ಚಿತ್ರಿಸುತ್ತಾರೆ. ಹೆಚ್ಚಿನ ಕವನಗಳಲ್ಲಿ ಪಂಚ್ ಲೈನ್‌ಗಳಂತೆ ಬರುವುದು ತೀರಾ ಸಾಮಾನ್ಯ ಕ್ರಿಯೆಗಳೇ ಆಗಿವೆ!

ತಮ್ಮ ಜೀವನದರ್ಶನದಲ್ಲಿ ಆಗಿರುವ ಈ ತಾತ್ತ್ವಿಕ ಬದಲಾವಣೆಯನ್ನು ಅವರೇ ಗುರುತಿಸಿದ್ದಾರೆ. ಮುನ್ನುಡಿಯ ಬರಹದಲ್ಲಿ ಅವರು ಹೀಗೆ ಹೇಳುತ್ತಾರೆ: “ಈ ವಿದ್ಯಮಾನವನ್ನು ಕವಿತೆ ನಮ್ಮೊಂದಿಗೆ ಸದಾ ಇರಬೇಕಾದರೆ ನಾವು ಎಲ್ಲವನ್ನೂ ನೋಡುವ ಮತ್ತು ಒಂದು ಮಿತಿಯಲ್ಲಿ ಅನುಭವಿಸುವ ಮನಸ್ಸನ್ನು ಹೊಂದಿರಬೇಕು” ಎಂದು ಮೊಗಸಾಲೆಯವರು ಗುರುತಿಸಿದ್ದಾರೆ. ಅದು ಅವರ ಕವನಗಳಲ್ಲಿ ಅಭಿವ್ಯಕ್ತವಾಗಿದೆ:

ಎದ್ದಾಗ ಬೆಳಗ್ಗೆ ಕಳೆದುಕೊಂಡಂತೆ ಏನನ್ನೋ
ಅನಿಸಿ ಏನೆನ್ನುವುದರ ಹುಡುಕ ಹೊರಟೆ:
ಇದಲ್ಲ ಅದು, ಅದಲ್ಲ ಇದು ಎನ್ನುವಂತಾಗಿ
ಅಮುಖ್ಯವಾದದ್ದೇ ಮುಖ್ಯವಾಗಿ
…… ಸ್ವಲ್ಪ ಹೊತ್ತಿನಲ್ಲಿ ಅನಿಸಿದ್ದು ಇದಲ್ಲ ಅನಿಸಿ
ಹುಡುಕುವುದು ಎನ್ನುವುದು
ಇದೆಯೇ? (ಕತ್ತಲೆ ಬೆಳಕಿನ ಆಟ)

– ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಇಲ್ಲ ಎನ್ನುವ ಕುವೆಂಪು ಅವರ ಮಾತಿನ ಹಾಗೆ ಬದುಕನ್ನು ನೋಡಬೇಕು ಎನ್ನುವ ನಿಲುವು ಈ ಕವಿತೆಗಳಲ್ಲಿ ಕಾಣಿಸುತ್ತದೆ.

ಹೀಗೆ ಮೊಗಸಾಲೆಯವರ `ಹೇ … ರಾಮ್!’ ಕವನ ಸಂಕಲನದಲ್ಲಿ ಅವರ ತಾತ್ತ್ವಿಕದರ್ಶನದಲ್ಲಿ ಆಗಿರುವ ಒಂದು ಬದಲಾವಣೆಯನ್ನು ಗುರುತಿಸಬಹುದು. ಈ ಮೂಲಕ ಮೊಗಸಾಲೆಯವರು ಎಲ್ಲ ಮುಖ್ಯ ಕವಿಗಳಂತೆ ಕಾವ್ಯ ಪ್ರಕಾರವನ್ನು ಗಂಭೀರವಾಗಿ ಸ್ವೀಕರಿಸಿ ತಮ್ಮ ತಾತ್ತ್ವಿಕಚಿಂತನೆಗಳ ಅಭಿವ್ಯಕ್ತಿಗೆ ಅದನ್ನು ಬಳಸಿಕೊಂಡಿರುವುದು ತಿಳಿಯುತ್ತದೆ.

(ಕೃತಿ: ಹೇ… ರಾಮ್‌ (ಕವನಸಂಕಲನ), ಕವಿ: ಡಾ. ನಾ. ಮೊಗಸಾಲೆ, ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಮೊದಲ ಮುದ್ರಣ.2026, ಪುಟಗಳು: 128. ಬೆಲೆ: ರೂ. 180/-)

About The Author

ಡಾ. ಬಿ. ಜನಾರ್ದನ ಭಟ್

ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ