ಆಮೇಲೆ ನನಗೆ ಏನಾಯಿತೋ ಯಾರಿಗೆ ಗೊತ್ತು; ನಾನು ಪಟಕ್ಕನೆ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಅವನ ಐದಾರು ಫೋಟೋ ತೆಗೆದೆ. ರಿಯಾನನು ನನ್ನ ಕಡೆ ನೋಡಿದ. ಅವನ ಉದ್ದನ್ನ ಮುಖ ಶಾಂತವಾಗಿತ್ತು. ನೇರ ಮೂಗಿನ ತುದಿ ನೆನೆದು ಕೆಂಪಾಗಿ ಹೋಗಿತ್ತು. ಆತನ ಕಪ್ಪು ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ. ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ಗಾಢವಾಗಿ ತೋರುತ್ತಿತ್ತು. ಸಿಗರೇಟ್ ಎಳೆದು ಕಪ್ಪಾಗಿದ್ದ, ಒಣಗಿದ್ದ ತುಟಿಗಳು ಈಗ ಮಳೆಯಲ್ಲಿ ನೆನೆದು ಮೃದುವಾಗಿ ಹೋಗಿದ್ದವು.
 ರೋಹಿತ್‌ ರಾಮಚಂದ್ರಯ್ಯ ಅನುವಾದಿಸಿದ ಪ್ರಣವ್ ಸಖದೇವ್  ಬರೆದ ಮರಾಠಿ ಕತೆ “ಮುಖ”

 

ಮನುಷ್ಯರ ಮನಸ್ಸಿನಲ್ಲಿ ಏನು ಓಡುತ್ತಾ ಇರುತ್ತದೆ ಎಂಬುದು ಯಾವಾಗಲಾದರೂ ತಿಳಿಯುತ್ತದೆಯೇ ನಮಗೆ? ಒಂದು ವೇಳೆ ಮನುಷ್ಯನೊಬ್ಬ ನಮಗೆ ಬಹಳ ಹತ್ತಿರದಲ್ಲಿ ಕುಳಿತಿದ್ದರೂ, ಮತ್ತೆ ನಮಗೆ ಆತನ ಸ್ಪರ್ಶವಾಗುತ್ತಿದ್ದರೂ ಕೂಡ, ಕೇವಲ ಸನಿಹವಿರುವ ಕಾರಣಕ್ಕೆ ಆತನ ಮನಸ್ಸಿನಲ್ಲಿನ ತಳಮಳಗಳು ಹೇಗೆ ತಿಳಿಯುತ್ತವೆ ನಮಗೆ? ನಾವು ಸುಮ್ಮನೆ ಅಂದಾಜು ಮಾಡುತ್ತಾ ಏನನ್ನಾದರೂ ಹೇಳುತ್ತಿರುತ್ತೇವೆ ಮತ್ತೆ ಒಂದು ದಿನ ಅಚಾತುರ್ಯ ನಡೆಯುತ್ತದೆ! ನಾವು ಗಾಬರಿಯಿಂದ ಎಚ್ಚರಗೊಳ್ಳುತ್ತೇವೆ ಮತ್ತು ಈ ಎಚ್ಚರದ ಅವಸ್ಥೆಯು ಕಾಯಂ ಆಗಿ ನಮ್ಮ ಮನಸ್ಸಿನ ಒಂದು ಚೂರನ್ನು ಗಟ್ಟಿಯಾಗಿ ಹಿಡಿದು ಕೂರುತ್ತದೆ; ನೆನಪಾಗಿ ಅಂಟಿಕೊಂಡು ಬಿಡುತ್ತದೆ…

ಮನೆಯ ಮಾಳಿಗೆಯಿಂದ ದೂರದಲ್ಲಿ ಕಾಣುವ ಕೊಲ್ಲಿಯ ನೀರು ಹೊಳೆಯುತ್ತಿತ್ತು. ಕೊಲ್ಲಿಯ ಮೇಲೆ ಕಟ್ಟಲಾಗಿದ್ದ ಸೇತುವೆಯ ಮೇಲಿನ ದೀಪಗಳ ಪ್ರಕಾಶವು ನೀರಿನಲ್ಲಿ ಕಲೆಯುತ್ತಿತ್ತು ಮತ್ತು ಉಕ್ಕುತ್ತಲಿದ್ದ ಕಪ್ಪು ನೀರಿನ ಮೇಲೆ ಹಳದಿ ಹೊಳಪಿನ ಆಟ ನಡೆದಿತ್ತು.

ಬೇಸಗೆಯ ಕೊನೆಯ ದಿನಗಳಾಗಿದ್ದವು. ಮಳೆ ಎಂದಾದರೂ ಶುರುವಾಗುವ ಲಕ್ಷಣಗಳಿದ್ದವು. ಭಯಂಕರವಾಗಿ ಕುದಿಯುತ್ತಲಿತ್ತು.

ಮೈ ಬೆವರಿನಿಂದ ಅಂಟಂಟಾಗಿತ್ತು. ಅದರ ನಡುವೆಯೇ ನಾವು ಒಂದೂವರೆ ಕ್ವಾರ್ಟರ್ ರಮ್ ಏರಿಸಿದ್ದೆವು. ಕಡೆಗೆ ರಿಯಾನ್ ಅಸಹ್ಯಗೊಂಡು ಟಿಶರ್ಟ್ ತೆಗೆದು ಮೈ ತೆರೆದು ಕುಳಿತ. ಮಾಳಿಗೆಯ ಮೇಲಿನ ಬಿಳಿಯ ಎಲ್ ಇ ಡಿ ಬೆಳಕಿನಲ್ಲಿ ಆತನ ಕಪ್ಪು ದೇಹ ಹೊಳೆಯುತ್ತಿರುವ ಹಾಗೆ ಅನಿಸುತ್ತಿತ್ತು. ನಾನೂ ಟಿಶರ್ಟ್ ತೆಗೆದೆನಾದರೂ, ಎದೆ ತೆರೆದು ಕೂರಲು ಒಂಥರಾ ಅನಿಸಿ ಒಳಗೆ ಹೋಗಿ ಒಂದು ಬನಿಯನ್ ಧರಿಸಿ ಬಂದೆ.

ಸುಮಾರು ಹತ್ತರ ಸಮಯ. ವಾತಾವರಣ ಸ್ತಬ್ಧವಾಗಿತ್ತು. ಜೆಲ್ಲಿಯಂತೆ. ನಡುವೆಯೇ ಕಟ್ಟಡಕ್ಕೆ ಆತುಕೊಂಡಿರುವ ಮುಖ್ಯರಸ್ತೆಯಲ್ಲಿ ಒಂದು ಬೈಕ್ ಸಾಗಿ ಈ ಜೆಲ್ಲಿ ತರಗುಟ್ಟಿತು. ಒಂದು ಟ್ರಕ್ಕೋ ಇಲ್ಲಾ ಕಾರೋ ಹೋದರಂತೂ ಈ ತರಗುಟ್ಟೋದು ಹೆಚ್ಚಾಗುತ್ತಿತ್ತು. ಹಾಗೇ ಸ್ವಲ್ಪ ಸಮಯದಲ್ಲೇ ಈ ಜೆಲ್ಲಿ ಮತ್ತೆ ಸ್ಥಿರವಾಗುವುದು.

ನಾನು ಮಾಳಿಗೆಯ ಗೋಡೆಗೆ ಒರಗಿಕೊಂಡು ಕುಳಿತಿದ್ದೆ. ಗೋಡೆಯ ಒರಟು ಮೇಲ್ಮೈ ಚುಚ್ಚುತ್ತಿತ್ತು. ಆದರೆ ಅದು ಅಸಹನೀಯವೆನಿಸದೆ ಬೇಕು ಎನಿಸುತ್ತಿತ್ತು. ರಿಯಾನ್ ನನ್ನ ಎದುರು ಕೂತಿದ್ದ. ನಮ್ಮ ನಡುವೆ ಅರ್ಧ ತುಂಬಿದ ಗ್ಲಾಸುಗಳು, ಸ್ವಲ್ಪ ನಾರಾದ ಮಾಂಸ ಅಂಟಿದ ಚಿಕನ್ ಲಾಲಿಪಾಪ್ಸಿನ ಮೂಳೆ, ಲೇಸ್, ಈರುಳ್ಳಿ-ಟೊಮೊಟೊ ಹಾಕಿದ ಕುರುಕಲು ತಿಂಡಿ ಜೊತೆಗೆ, ಅರ್ಧ ತಿಂದ, ಇದೀಗ ತಣ್ಣಗಾಗಿದ್ದ ಟ್ರಿಪಲ್ ಶೆಜವಾನ್ ರೈಸ್ ಇತ್ಯಾದಿಗಳು ಹರಡಿದ್ದವು.

ನಾನು ಅವನಿಗೆ ಹೇಳಿದೆ, ‘ನನಗೆ ಸ್ವಲ್ಪ ಗುಡುಗುಡು ಎನ್ನುವ ಹಾಗೆ, ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತಿದೆ.’
‘ನನಗೆ ಮಸ್ತ್ ಅನ್ನಿಸುತ್ತಿದೆ. ಕಿಕ್ ಹೊಡೆಯಲು ಶುರುವಾಗಿದೆ ಈಗ.’ ಅವನಂದ, ‘ಇಷ್ಟರಲ್ಲೇ ಮುಗಿಯಿತಾ? ಲೇ ಇನ್ನೂ ಈಗ ತಾನೆ ಶುರುವಾಗಿದೆ.’

ರಿಯಾನ್ ಜಿಮ್ ಗೆ ಹೋಗುವವ. ಅದರಿಂದ ಅವನ ದೇಹ ಶೇಪಲ್ಲಿ ಇತ್ತು. ಹೊಟ್ಟೆ ಸಪಾಟಾಗಿತ್ತು ಹಾಗೂ ತೋಳುಗಳ ಸ್ನಾಯುಗಳು ಬಿಗಿಯಾಗಿದ್ದವು. ತನ್ನ ಗುಂಗುರು ಕೂದಲಿನ ಕೆಲವು ಸುರುಳಿಗಳನ್ನು ಅವನು ಮಾಲಿಂಗನಂತೆ ಬಂಗಾರದ ಬಣ್ಣ ಮಾಡಿಸಿಕೊಂಡಿದ್ದ. ಅವನೂ ಒಬ್ಬ ಕ್ರಿಕೆಟ್ ಆಟಗಾರನಾಗಿದ್ದ. ಶಾಲೆಯಲ್ಲೂ, ನಂತರ ಕಾಲೇಜಿನಲ್ಲೂ ಅವನು ಕ್ರಿಕೆಟ್ ಆಡುತ್ತಿದ್ದವ. ಕ್ರಿಕೆಟ್ ಕೋಚಿಂಗ್ ಕ್ಲಬ್ಬೊಂದರಲ್ಲಿ ಮೊದಲಬಾರಿಗೆ ನಮ್ಮಿಬ್ಬರ ಪರಿಚಯವಾಯಿತಾದರೂ, ನಾನು ಕೆಲಕಾಲದ ನಂತರ ಆ ಆಸಕ್ತಿಯನ್ನು ಕೈಬಿಟ್ಟೆ. ಆದರೆ ಅವನು ಮಾತ್ರ ಆಡುತ್ತಲೇ ಇದ್ದ. ಯಾವ್ಯಾವುದೋ ಟೂರ್ನಮೆಂಟುಗಳಲ್ಲಿ ಅವನು ಸೆಂಚುರಿಗಳನ್ನು ಮಾಡಿದ್ದ. ಅವುಗಳ ಬಗ್ಗೆ ಪೇಪರುಗಳಲ್ಲಿ ಸುದ್ದಿಗಳೂ ಬಂದಿದ್ದವು, ಜೊತೆಗೆ ಪ್ರಶಸ್ತಿಗಳೂ ದೊರೆತಿದ್ದವು. ಅವನು ನನಗಿಂತಲೂ ಒಂದು ವರ್ಷ ದೊಡ್ಡವನಾಗಿದ್ದ. ನಾನು ಸೆಕೆಂಡ್ ಇಯರ್ನಲ್ಲಿದ್ದೆ ಮತ್ತವ ಲಾಸ್ಟ್ ಇಯರ್ನಲ್ಲಿ. ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್ಮಾನ್ ಆಗಬೇಕು ಎಂಬುದು ಅವನ ಕನಸಾಗಿತ್ತು. ಹಾಗಾಗಿಯೇ ಅವನು ವಿರಾಟ್ ನ ಹಾಗೆಯೇ ಗಡ್ಡ ಬಿಟ್ಟಿದ್ದ. ‘ಏನಿಲ್ಲ ಎಂದರೂ, ಐಪಿ ಎಲ್ ನಲ್ಲಿಯಾದರೂ ಆಡಬೇಕು ನಾನು. ಇಲ್ಲಿ ಕಲ್ಯಾಣದಲ್ಲಿ ಏನೂ ಸ್ಕೋಪ್ ಇಲ್ವೋ ಕ್ರಿಕೆಟ್ – ಗಿಕೆಟ್ ಗೆಲ್ಲ. ಮುಂಬೈ ಅಂದರೆ ಮುಂಬೈಯೇ.’ ಅವನು ಹೇಳುತ್ತಿದ್ದ, ‘ಒಂದು ಬಾರಿ ನಾನು ಐಪಿಎಲ್ ಆಡಿದೆನೋ, ಕೂಡಲೇ ಕೋಚಿಂಗ್ ಅಕಾಡೆಮಿ ತೆರೆಯುವೆ ಇಲ್ಲಿ. ಶಿವಾಜಿ ಪಾರ್ಕ್ ನಲ್ಲಿ, ಆಜಾದ್ ಮೈದಾನದಲ್ಲಿ ಇರುತ್ತಾವಲ್ಲ ಹಾಗೆ.’

‘ಗ್ರೇಟ್ ಐಡಿಯಾ,’ ನಾನಾಗ ಅವನಿಗೆ ಹೇಳಿದ್ದೆ. ‘ಇಲ್ಲಿ ನಮ್ಮಲ್ಲಿ ತುಂಬಾ ಟ್ಯಾಲೆಂಟ್ ಇದೆ ಕಣೋ.’

******

‘ಅಬ್ ಆಯೇಗಾ ಅಸಲೀ ಮಜಾ,’ ಎನ್ನುತ್ತಾ ರಿಯಾನ್ ಒಳಗೆ ಹೋಗಿ ತನ್ನ ಸ್ಯಾಕನ್ನು ತಂದನು. ಅದರಿಂದ ಸಿಗರೇಟ್ ಪ್ಯಾಕ್ ಜೊತೆಗೆ ಒಂದು ಬಿಳಿಯ ಸಣ್ಣ ಡಬ್ಬಿಯನ್ನು ಹೊರತೆಗೆದ. ‘ಕನರಾದ ಏಕ್ದಮ್ ತಾಜಾ ಮಾಲು, ಪ್ರತಿಬಾರಿ ಒದಗಿಸುವ ಮುದುಕಿಯ ಕಡೆಯಿಂದ ತಂದಿದ್ದೇನೆ. ಒಂದೇ ಪಫ್ನಲ್ಲಿ ಡೈರೆಕ್ಟ್ ಹೆವನ್!’ ಹೆಬ್ಬೆಟ್ಟು ಮತ್ತು ತೋರುಬೆರಳನ್ನು ಚಿಮಟದಂತೆ ಬಳಸಿ ಡಬ್ಬಿಯಲ್ಲಿನ ಒಂದು ಹಸಿರು-ಕಪ್ಪು ಉಂಡೆಯನ್ನು ಹಿಡಿದು, ಅದನ್ನು ನನ್ನ ಮುಂದೆ ಕುಣಿಸುತ್ತ ಅವನು ಹೇಳಿದ. ನಂತರ ಅವನು ಸಿಗರೇಟಿನಲ್ಲಿನ ತಂಬಾಕನ್ನು ಸಾವಕಾಶವಾಗಿ ಒಂದು ಕಾಗದದ ಮೇಲೆ ತೆಗೆದಿಟ್ಟ. ಹೇಳಿದ, ‘ಸಾವಧಾನವಾಗಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬಾಂಚತ್ ಹರಿದು ಹೋಗುತ್ತದೆ.’ ನಂತರ ಅವನು ಆ ಉಂಡೆಯನ್ನು ತನ್ನ ಅಂಗೈಯಲ್ಲಿ ಹೊಸಕಿ ಅದನ್ನು ತಂಬಾಕಿನೊಂದಿಗೆ ಬೆರೆಸಿದ. ಮತ್ತೆ ಕಾಳಜಿಪೂರ್ಣವಾಗಿ ತಂಬಾಕನ್ನು ಸಿಗರೇಟಿನಲ್ಲಿ ತುಂಬಿದ.

ಮೊದಲಿದ್ದಂತೆ ಎಲ್ಲಾ ತಂಬಾಕನ್ನು ಸಿಗರೇಟಿನೊಳಕ್ಕೆ ತುಂಬಲಾಗದೆ ಹೋಯಿತು. ಸ್ವಲ್ಪ ತಂಬಾಕು ಉಳಿದುಬಿಟ್ಟಿತು. ಆದರೆ ಅದರ ಕಡೆ ಅವನು ಗಮನ ಕೊಡಲಿಲ್ಲ. ಸಿಗರೇಟಿನ ಫಿಲ್ಟರನ್ನು ನೆಲದ ಮೇಲೆ ಒಂದು ಬಾರಿ ತಟ್ಟಿ, ಸಿಗರೇಟಿನ ತುದಿಯ ಕಾಗದವನ್ನು ಮುದುರಿ ಅದನ್ನು ಮುಚ್ಚಿದ. ಆ ಸಿಗರೇಟನ್ನು ನೋಡಿದಾಗ ನನಗೆ, ಚಿಕ್ಕವನಿದ್ದಾಗ ಪಾರ್ಕಿಗೆ ಹೋದಾಗ, ಅಲ್ಲಿ ಕಡಲೆಬೀಜ ವ್ಯಾಪಾರಿ ಕಡಲೆಬೀಜವನ್ನು ಕಾಗದದ ಕೋನಿನಲ್ಲಿ ಸುತ್ತಿಕೊಡುತ್ತಿದ್ದ ನೆನಪಾಯಿತು.

‘ಯೆಸ್, ಈಗ ತಯಾರಾಯಿತು ನಮ್ಮ ಅಂತರಿಕ್ಷ ನೌಕೆ!’ ಎಂದು ಹೇಳಿ ರಿಯಾನ್ ನಕ್ಕ. ಅವನ ಹಳದಿಗಟ್ಟಿದ್ದ ಹಲ್ಲುಗಳು ಬೆಳ್ಳನೆಯ ಬೆಳಕಿನಲ್ಲಿ ಹೊಳೆದುವು.

‘ನೀನು ಸಾಮಾನ್ಯವಾಗಿ ಎಷ್ಟು ಬಾರಿ ಏರಿಸಿಕೊಳ್ಳುತ್ತೀಯ?’, ನಾನು ಕೇಳಿದೆ.

‘ತಿಂಗಳಿನಲ್ಲಿ ಮೂರು, ಹೆಚ್ಚೆಂದರೆ ನಾಲ್ಕು ಬಾರಿ. ಆದಷ್ಟೂ ಗ್ಯಾಪ್ ಇಡುತ್ತೇನೆ. ಅಡಿಕ್ಷನ್ ಆಗುವುದಿಲ್ಲ ಅದರಿಂದ.’ ರಿಯಾನ್ ಹೇಳಿದ, ‘ನಾನು ಗೂಗಲ್ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿಯೂ ಇಡುತ್ತೇನೆ ತಾರೀಖುಗಳನ್ನು.’

‘ಓಕೆ.’ ನಾನು ಕೇಳಿದೆ, ‘ಮತ್ತೆ ಯಾವಾಗಿನಿಂದ ತೆಗೆದುಕೊಳ್ಳುತ್ತಿದ್ದೀಯ?’

‘ಒಂದೆರಡು ವರ್ಷ ಆಗಿರಬಹುದು. ನಮ್ಮ ಮನೆಯ ಹತ್ತಿರ ಒಂದು ಗುಡಿ ಇದೆ. ಅಲ್ಲಿ ಭಜನೆ ಮಾಡುವ ಮಂಡಳವಿದೆ, ಒಂದು. ರಾತ್ರಿಪೂರ್ತಿ ಹಾಡುತ್ತಾ-ನುಡಿಸುತ್ತಾ ಇರುತ್ತಾರೆ. ಒಂದು ಸರ್ತಿ ನಾನು ಅಲ್ಲಿನ ಒಬ್ಬ ಮುದುಕಿಗೆ ಇಷ್ಟೊಂದು ಸ್ಟೆಮಿನಾ ಹೇಗೆ ನಿಮಗೆ? ಎಂದು ವಿಚಾರಿಸಿದಾಗ ಅವಳು ನನಗೆ ಈ ಸಣ್ಣ ಉಂಡೆಯನ್ನು ಕೊಟ್ಟಳು. ಮೊದಲ ಬಾರಿ ತೆಗೆದುಕೊಂಡಾಗ ನನ್ ಕತೆ ಹ್ಯಾಂಗಿತ್ತಪ್ಪ ಅಂದ್ರೆ, ನಶೆ ಪೂರ್ತಿ ತಲೆಗೆ ಏರಿತ್ತು…. ಏನೂ ತಿಳೀತಿರ್ಲಿಲ್ಲ. ಆದರೆ ಬೆಳಗ್ಗೆ ಪೂರ್ತಿ ಬೇರೆ ತರಾನೇ ಅನಿಸ್ತು, ಫ್ರೆಶ್! ಮತ್ತೆ ಹಾಗೇ ತಗೋತಾ ಇದ್ದೆ. ನನ್ನಂತಹವರು ಬಹಳಷ್ಟು ಜನ ಇದ್ದಾರೆ, ಅಂತ ನಂತರ ಗೊತ್ತಾಯ್ತು. ಲಿಂಕ್ ಸಿಗ್ತಾ ಹೋದ್ವು, ಎಲ್ಲಿ ಒಳ್ಳೆ ಮಾಲು ಸಿಗುತ್ತೆ ಅದೂ ತಿಳೀತು. ಈಗ ನಾನು ಸ್ಟಾಕ್ ಕೂಡ ಮಾಡಿಡ್ತೇನೆ. ಇಲ್ನೋಡು…’ ಅವನು ನನಗೆ ಆ ಬಿಳಿ ಡಬ್ಬಿಯನ್ನು ತೆರೆದು ತೋರಿಸಿದ. ಅದರಲ್ಲಿ ಆರೇಳು ಉಂಡೆಗಳಿದ್ದುವು. ‘ನಿನಗೆ ಯಾವಾಗಲಾದರೂ ಬೇಕಾದರೆ ಹೇಳು. ಹಾ ಬೈ ದಿ ವೇ ನೀನು ಮೊದ್ಲು ಸಾರಿ ತೆಗೆದುಕೊಳ್ಳುತ್ತಿದ್ದೀಯಾ ಅಲ್ವಾ?’

ನಾನಂದೆ, ‘ಯಪ್. ಆದರೆ ನಾನೀಗ ಕೇವಲ ಟ್ರೈ ಮಾಡೋದು. ಕೇವಲ ಒಂದು ಸಲ.’

‘ಹಾ! ನಾನೂ ಮೊದಲ್ನೇ ಸಲ ಹಾಗೇ ಅಂದಿದ್ದೆ.’ ರಿಯಾನ್ ನಕ್ಕ. ಮತ್ತಂದ, ‘ನಿನಗೆ ಹೇಳ್ತೇನೆ, ಇದು ನನ್ನ ಗೇಮನ್ನು ಮಾತ್ರ ಬಹಳಷ್ಟು ಸುಧಾರಿಸಿತು. ಗೇಮಿನ ಮುಂಚಿನ ರಾತ್ರಿ ನಾನು ಒಂದು ಅರ್ಧ ಉಂಡೆ ಏರಿಸಿದೆ ಅಂದ್ಕೋ, ಮಾರನೇ ದಿವಸ ಕಡಿಮೆ ಅಂದ್ರೂ ನಲವತ್ತೊಂದು ರನ್ಸ್ ಆದ್ರೂ ಮಾಡ್ತೇನೆ. ಮತ್ತೆ ಫೀಲ್ಡಿಂಗ್ ಅಂತೂ ಕೇಳಲೇ ಬೇಡ. ಒಂದು ಸಾರಿ ನಾನು ಆಟ ಆಡಲು ತೂಕಡಿಕೆಯಲ್ಲೇ ಹೋದೆ, ಮೂರು ರನ್ ಔಟ್ ಮಾಡಿದೆ ಮತ್ತೆ ಇಪ್ಪತ್ತು ಬಾಲಿನಲ್ಲಿ ಫಿಫ್ಟಿ-ಟೂ. ಮ್ಯಾನ್ ಆಫ್ ದಿ ಮ್ಯಾಚ್! ನಮ್ಮ ಟೀಮಿನ ಕ್ಯಾಪ್ಟನ್ ಕೂಡ ತಗೋತಾನೆ ಯಾವಾಗಲಾದರೂ ಒಮ್ಮೊಮ್ಮೆ.’

‘ಆದ್ರೆ ಯಾರಿಗೂ ಗೊತ್ತಾಗಲ್ವಾ…?’

‘ಹ.. ಯಾರಿಗೆ ಗೊತಾಗುತ್ತೆ? ಲೋಕಲ್ ಲೆವೆಲ್ಲಲ್ಲಿ ಯಾರ್ ಮಾಡ್ತಾರೋ ಟೆಸ್ಟ್ – ಗಿಸ್ಟ್ ಎಲ್ಲ.’

‘ಆದ್ರೆ ಮುಂದೆ… ನ್ಯಾಶನಲ್ ಲೆವೆಲ್ಲಲ್ಲಿ..’

‘ಆವಾಗಿಂದು ಆವಾಗ. ಮತ್ತೆ ನ್ಯಾಶನಲ್ ಗೆ ಹೋದಾಗ ತಾನೆ! ಎಷ್ಟು ಪೊಲಿಟಿಕ್ಸ್ ಇರುತ್ತೆ ಗೊತ್ತಾ ಅದರಲ್ಲಿ. ಸೆಲೆಕ್ಟರ್ಸ್ಗೆ ದುಡ್ಡಿನ ಮೇವು ತಿನ್ಸೋದು.. ಅದರಲ್ಲೂ ನಾವು ಕಲ್ಯಾಣ್ ನವರು! ಬಹಳ ಹಪ್ಪಳ ಹೊಸೀಬೇಕಾಗುತ್ತೆ.. ಲೀವ್ ಇಟ್.’

ರಿಯಾನ್ ಸಿಗರೇಟ್ ತುಟಿಗಿಟ್ಟಿಕೊಂಡು ಲೈಟರಿನಿಂದ ಹೊತ್ತಿಸಿದ. ಒಂದು ದಮ್ ಎಳೆದ. ಚರ್ ಅಂತ್ ಸದ್ದಾಯಿತು. ಮೂಗಿನಿಂದ ಹೊಗೆ ಹೊರಬಿಟ್ಟ. ಸುಡುಸುಡು ಕಹಿ ಹೊಗೆ ನನ್ನ ಮೂಗಿನಿಂದ ಒಳಗೆ ಹೋಯಿತು. ಆಗ ಮೂಗಿನ ಹೊಳ್ಳೆಯೊಳಗಿನ ಕೂದಲುಗಳು ಸುಟ್ಟು ಹೋಗುತ್ತವೇನೋ ಎಂಬಂತನಿಸಿತು.

ನನಗೇ ತಿಳಿಯದಂತೆ ನನ್ನ ಮುಖ ಸ್ವಲ್ಪ ಗಾಬರಿಗೊಂಡಂತಾಗಿರಬೇಕು. ಹಾಗಾಗೇ ನನ್ನ ಮುಂದೆಯೇ ಸಿಗರೇಟ್ ಹಿಡಿಯುತ್ತ, ರಿಯಾನ್ ಹೇಳಿದ, ‘ಡೋಂಟ್ ಬೀ ಅಫ್ರೇಡ್. ಏನೂ ಆಗೋಲ್ಲ. ಹೊಡಿ ಬಿಂದಾಸ್. ಬಂ ಬಂ ಬೋಲೆ!’

ಅದಕ್ಕೂ ಮೊದಲು ನಾನು ಯಾವಾಗಲಾದರೂ ಆಗೊಮ್ಮೆ ಈಗೊಮ್ಮೆ ಸಿಗರೇಟ್ ಸೇದುತ್ತಿದ್ದೆ. ಆದರೆ ಭಯ ಪಡುತ್ತಲೇ. ಅಮ್ಮಾ-ಅಪ್ಪನಿಗೆ ತಿಳಿದರೆ ಏನಾಗುವುದೋ, ಅವರಿಗೆ ಏನನ್ನಿಸುವುದೋ, ಅವರು ಏನು ಮಾಡುವರೋ ಎಂಬುದರ ಭಯ ನನ್ನನ್ನು ಕಾಡುತ್ತಿತ್ತು. ಹಾಗಾಗಿ ಅನೇಕಸಾರಿ ಎಲ್ಲಾದರೂ ದೂರ ಹೋಗಿ ಕದ್ದುಮುಚ್ಚಿ, ಅರ್ಧ ಸಿಗರೇಟ್ ಹೊಡೆಯುತ್ತಿದ್ದೆ ಮತ್ತೆ ಹೋಟೆಲ್ಲಿಗೆ ಹೋಗಿ ಮಿಸಳ್ ಇತ್ಯಾದಿ ತಿಂದೇ ಮನೆಗೆ ಹೋಗುತ್ತಿದ್ದೆ. ಸಾಧಾರಣಕ್ಕಿಂತ ಹೆಚ್ಚೇ ಉಳ್ಳಾಗಡ್ಡಿ ತಿನ್ನುತ್ತಿದ್ದೆ. ಈಗಲೂ ಒಂದು ಮನಸ್ಸು ತಯಾರಾಗಿತ್ತು, ‘ತಗೋ, ಏನೂ ಆಗುವುದಿಲ್ಲ’ ಅಂತ ಹೇಳುತ್ತಿತ್ತು, ಆದರೆ ಇನ್ನೊಂದು ಹೆದರಿಸುತ್ತಿತ್ತು, ಗಾಬರಿಗೊಳಿಸುತ್ತಿತ್ತು.

ನಾ ಹೇಳಿದೆ, ‘ನನಗೆ ತಿಳಿಯುತ್ತಿಲ್ಲ, ನಾನು ಇದನ್ನೇನು ಮಾಡಲೆಂದು. ನಿನಗೆ ಗುಗ್ಗು ಅನಿಸ್ತಿರಬಹುದಲ್ವಾ ನಾನು, ಯೂಸ್ ಲೆಸ್!’
ರಿಯಾನ್ ಹೇಳಿದ, ‘ನಿನಗೆ ಒಂದು ಮಾತು ಹೇಳಲಾ? ನನಗೆ ನಿನ್ನ ಗರ್ಲ್ ಫ್ರೆಂಡೇ ಹೆಚ್ಚು ಯೂಸ್ ಲೆಸ್ ಅನ್ಸ್ತಾಳೆ. ಏನ್ ನಡೀತಿದೆ ನಿಮ್ಮಿಬ್ಬರ ಮಧ್ಯೆ. ನಿನ್ನ ಹೊಂದಿಕೊಂಡೇ ಇರೋದೇನು, ಯಾವಾಗಲೂ ಜೊತೆಯಲ್ಲಿರುವವಳ ಹಾಗೆ. ಒಂದು ನಿಮಿಷನೂ ಆ ಕಡೆ ಈ ಕಡೆ ಹೋಗಲ್ಲ. ಕಾಯಂ ಆಗಿ ಅಂಟಿಕೊಂಡಿರುತ್ತಾಳೆ!’ ಅವನು ಒಂದು ದಮ್ ಎಳೆದ. ‘ಬೋರ್ ಆಗೋಲ್ವಾ ನಿನಗೆ? ನಿಜ ಹೇಳು, ಆರ್ ಯೂ ಇನ್ ಲವ್? ಆ ತರ ಇದ್ರೆ ಕಷ್ಟ ಮತ್ತೆ.’

‘ಇಲ್ಲ, ಇಲ್ಲ,’ ನಾನು ಸಂಕೋಚ ಪಡುತ್ತಾ ಹೇಳಿದೆ, ‘ಏನೂ ಇಲ್ಲ. ಮೀನಲ್ ಮತ್ತು ನಾನು ಶಾಲೆಯಲ್ಲಿದ್ದಾಗಿನಿಂದಲೂ ಒಂದೇ ಕಡೆಯೇ ಇದ್ದೇವೆ. ಹಾಗೇ ನಮ್ಮ ಮನೆಯವರೂ ಸಾಕಷ್ಟು ಪರಿಚಿತರು. ಸೋ, ಹಾಗನ್ನಿಸುತ್ತೆ ಎಲ್ಲರಿಗೂನೂ. ಆದರೆ ನಾವು ಒಳ್ಳೆಯ ಸ್ನೇಹಿತರು ಅಷ್ಟೇ.’ ಮಾತು ಹೊರಳಿಸಲು ನಾನೇ ಅವನನ್ನು ತಿರುಗಿ ಕೇಳಿದೆ ‘ನಿನಗೆ ಯಾರಾದರೂ ಗರ್ಲ್ ಫ್ರೆಂಡ್ ಇದ್ದಾಳೋ ಇಲ್ಲವೋ?’

‘ಗರ್ಲ್ ಫ್ರೆಂಡ್? ನೋ ವೇ. ಇನ್ನೂ ನನ್ನ ಅನುಷ್ಕಾ ಭೇಟಿಯಾಗಿಲ್ಲ ನನಗೆ.’ ಮತ್ತೆ ತನ್ನ ಬಗ್ಗೆಯೇ ಖುಷಿ ಪಡುತ್ತಾ ಅವನು ನಕ್ಕ. ಹೇಳಿದ, ‘ಆದರೆ ಜೂನಿಯರ್ ಕಾಲೇಜಿನಲ್ಲಿನ ಒಬ್ಬ ಶೂಟಿಂಗ್ ಮಾಡುವವಳು ನನಗೆ ಇಷ್ಟವಾಗಿದ್ದಳು. ನಾನು ಮತ್ತು ಅವಳು ಒಂದು ಸಾರಿ ಅವಳ ಮನೆಯಲ್ಲಿ ಯಾರೂ ಇಲ್ಲದಾಗ ಭೇಟಿಯಾಗಿದ್ದೆವು….’

‘ಮತ್ತೆ? ಏನಾಯ್ತು?’ ನಾನು ಉತ್ಸುಕತೆಯಿಂದ ಕೇಳಿದೆ.

‘ಕಿಸ್ಸಿಂಗ್ವಿಸ್ಸಿಂಗಿನ ಡ್ರೈ ಮಜೆ ಆಯ್ತು, ಆದರೆ ಒದ್ದೆ ಪಾರ್ಟಿಗೆ ಇಲ್ಲ ಅಂದಳು. ಗಪ್ಪಂತ ಮನೆಗೆ ಬಂದೆ. ಆಮೇಲೆ ಅವಳ ಸುದ್ದಿ ಬಿಟ್ಟಾಕಿದೆ. ನೇರವಾಗಿ ಅನುಭವಿ ಭಾಭೀಯ ಜೊತೆಗೆ ಸೇರಿದೆ. ನಮ್ಮ ಫ್ಪ್ಲಾಟ್ ಎದುರಿನವರು.’ ನನ್ನ ಕೈಗೆ ಸಿಗರೇಟ್ ಕೊಡುತ್ತಾ ಅವನು ಹೇಳಿದ,
‘ನೀನಿನ್ನೂ ವರ್ಜಿನ್, ಅಲ್ಲವಾ?’

ನನ್ನದೇನೋ ಭಾರೀ ದೊಡ್ಡ ತಪ್ಪು ಆದಂತೆ ನಾನು ನಾಚಿಕೆಯಿಂದ ನನ್ನ ಮೋರೆ ಕೆಳಗೆ ಮಾಡಿದೆ. ‘ಆದರೆ, ನಿನಗೆ ಹೇಗೆ ಗೊತ್ತಾಯಿತು?’
‘ನೀನು ಯಾವ ಎಕ್ಸೈಟ್ಮೆಂಟ್ನಿಂದ ನನ್ನನ್ನ, ನಂತರ ಮುಂದೆ ಏನಾಯಿತು ಎಂದು ಕೇಳಿದೆಯೋ ಅದರಿಂದ!’ ಎಂದು ಅವನು ಜೋರಾಗಿ ನಗಲು ಪ್ರಾರಂಭಿಸಿದ. ನನ್ನ ಕಡೆ ಬೆರಳು ತೋರಿಸುತ್ತಾ ‘ಮಗನೆ ವರ್ಜಿನ್ ಘೋಡಾ!’ ಎಂದು ನಗುತ್ತಲೇ ಇದ್ದ. ಈಗ ಅವನ ಕಣ್ಣುಗಳು ಬೇರೆಯಾಗಿಯೇ ಕಾಣುತ್ತಿದ್ದು ಅವನ ಮಾತನಾಡುವ ಲಯವೇ ಬದಲಾಗಿತ್ತು.

ನಾನು ಅವನೆದುರು ಗರಬಡಿದಂತಾದೆ. ನನಗೆ ತುಂಬಾನೆ ಅಪಮಾನಿತನಾದಂತೆ ಅನಿಸಿತು. ನನಗೆ ಅವನ ನಗುವಿನ ಬಗೆಗೆ ಸಿಟ್ಟು ಬರಲು ಪ್ರಾರಂಭವಾಯಿತು. ಮತ್ತೆ ನನಗೆ ನನ್ನ ಮೇಲೇ ಸಿಟ್ಟು ಬಂದಿತು. ನಾನು ಚಿಕ್ಕವನಿಂದಲೂ ಸುರಕ್ಷಿತ ವಾತಾವರಣದಲ್ಲಿ ಬೆಳೆದಿದ್ದೆ. ನನಗೆ ಯಾವತ್ತೂ ಯಾವುದೇ ವಿಷಯಕ್ಕಾಗಿಯೂ ಸ್ಟ್ರಗಲ್ ಮಾಡಬೇಕಾಗಿ ಬಂದಿರಲಿಲ್ಲ. ನನಗೆ ಯಾವುದೇ ಧ್ಯೇಯಗೀಯ ಇರಲಿಲ್ಲ. ನಾನು ಕೇವಲ ಡಿಗ್ರಿ ಪಡೆಯಬೇಕಿತ್ತು, ಹಾಗೂ ಪಪ್ಪನ ಬಿಸಿನೆಸ್ ನನಗಾಗಿ ತಯಾರಾಗಿತ್ತು. ಐಫೋನಿನ ಲ್ಯೂಸಿಡ್ ಸ್ಕ್ರೀನಿನಂತೆ ನನ್ನ ಸಂಪೂರ್ಣ ಜೀವನ ಸ್ಮೂತ್ ಆಗಿ ಸಾಗಿಹೋಗಿತ್ತು. ಆದರೆ ಈಗ ನನಗೆ ಅದರ ಬಗೆಗೇ ಜಿಗುಪ್ಸೆ… ನನಗೆ ಏನಾದರೂ ಹ್ಯಾಪನಿಂಗ್ ಆದದ್ದು ಬೇಕಿತ್ತು, ಎಕ್ಸೈಟ್ ಮೆಂಟ್ ಬೇಕಾಗಿತ್ತು. ನಾನು ಕೈಯಲ್ಲಿನ ಸಿಗರೇಟ್ ತುಟಿಗೆ ತಾಗಿಸಿಕೊಂಡು ಎರಡು ಮೂರು ಧಮ್ ಹೊಡೆದೆ. ಚೆನ್ನಾಗಿ ಒಳಗಿನವರೆಗೆ ಎಳೆದುಕೊಂಡೆ. ಮತ್ತೆ ಒಂದೇ ಗುಟುಕಿನಲ್ಲಿ ಟಾಪ್ ಟು ಬಾಟಮ್ ರಮ್ಮಿನ ಕಚ್ಚಾ ಪೆಗ್ ಹೊಡೆದೆ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಮಾಳಿಗೆಯ ಮೇಲಿನ ಬಿಳಿಯ ಎಲ್ ಇ ಡಿ ಬೆಳಕಿನಲ್ಲಿ ಆತನ ಕಪ್ಪು ದೇಹ ಹೊಳೆಯುತ್ತಿರುವ ಹಾಗೆ ಅನಿಸುತ್ತಿತ್ತು. ನಾನೂ ಟಿಶರ್ಟ್ ತೆಗೆದೆನಾದರೂ, ಎದೆ ತೆರೆದು ಕೂರಲು ಒಂಥರಾ ಅನಿಸಿ ಒಳಗೆ ಹೋಗಿ ಒಂದು ಬನಿಯನ್ ಧರಿಸಿ ಬಂದೆ.

‘ಇದಲ್ವಾ ಮಾತು..’ ರಿಯಾನ್ ನ ಧ್ವನಿ ನನಗೆ ಈಗ ದೂರದಲ್ಲೆಲ್ಲಿಂದಲೋ ಕೇಳಿ ಬರತೊಡಗಿತು.

******

ನಾನು ಜೈಂಟ್ ವ್ಹೀಲಿನಲ್ಲಿ ಕುಳಿತೆ. ಅದು ತಿರುಗಲು ಪ್ರಾರಂಭಿಸಿತು. ನಾನು ಗರಗರ ತಿರುಗಲು ಪ್ರಾರಂಭಿಸಿದೆ. ಮೇಲೆ ಹೋದೆ, ಕೆಳಗೆ ಬಂದೆ. ಕೆಳಗೆ ಬರುವಾಗ ನನ್ನ ಹೊಟ್ಟೆ ತೊಳಸಲು ಶುರುವಾಯಿತು. ನಾನು ಅರಚಿದೆ. ಯಾರದ್ದೋ ನಗುವ ಧ್ವನಿ ಬರುತ್ತಲೇ ಇತ್ತು. ನಾನು ಜೋರಾಗಿ ತಿರುಗಲು ಪ್ರಾರಂಭಿಸಿದೆ.

ಹಾಗೇ ಒಂದೇ ಕ್ಷಣಕ್ಕೆ, ಎಲ್ಲವೂ ತಿರುಗುವುದು ನಿಲ್ಲಿಸಿತು. ಕೆಲವು ಕ್ಷಣ ಸ್ಥಬ್ದತೆ. ನಾನು ನನ್ನನ್ನೇ ನೋಡುತ್ತಿದ್ದೆ. ಸ್ಥಿರವಾಗಿ. ಮತ್ತೆ ಮರಳಿ ನನ್ನ ಸುತ್ತಲಿನ ಪೂರ್ತಿ ಜಗತ್ತು ತಿರುಗಲು ಪ್ರಾರಂಭಿಸಿತು. ನಾನು ಸ್ಥಬ್ದನೇ. ಜಗತ್ತು ತಿರುಗುತ್ತಿತ್ತು.

ಮತ್ತೆ ಏಕಾ ಏಕಿ ವ್ಯಾಕ್ಯೂಮ್ ಕ್ಲೀನರಿನ ಕೊಳವೆಯಿಂದ ಎಲ್ಲ ಧೂಳು ಜಟಕ್ಕೆಂದು ಒಳಗೆ ಎಳೆಯಲ್ಪಡುವಂತೆ, ನನ್ನ ಸುತ್ತಲಿನ ಎಲ್ಲ ಜಗತ್ತು ನನ್ನ ಒಳಕ್ಕೆ ಸೆಳೆಯಲ್ಪಟ್ಟಿತು. ನಾನು ಎಲ್ಲವನ್ನೂ ತಟಸ್ಥತೆಯಿಂದ ನೋಡುತ್ತಾ ಇದ್ದೆ. ಆಮೇಲೆ ನಾನು ತುಂಡು ತುಂಡಾದೆ…

******

ನನಗೆ ಪ್ರಜ್ಞೆ ಬಂದಾಗ ಮುಂಜಾವಿನ ಮೂರು ಮುಕ್ಕಾಲು ಆಗುತ್ತಿತ್ತು. ನಾನು ಕುಳಿತಿದ್ದ ಜಾಗದಲ್ಲಿಯೇ ಅಡ್ಡವಾಗಿದ್ದೆ. ನನ್ನ ಎದುರು ರಿಯಾನ್ ಕುಳಿತಿದ್ದ. ನನ್ನ ಕಡೆ ಎವೆಯಿಕ್ಕದೆ ನೋಡುತ್ತಿದ್ದ. ‘ಏನು, ಹೇಗಾಯ್ತು ಟ್ರಿಪ್?’ ಅವನು ನಗುತ್ತಾ ನಗುತ್ತಾ ನನ್ನನ್ನು ವಿಚಾರಿಸಿದ. ಹೇಳಿದ, ‘ಸಾಯುವ ಮೊದಲು ಪ್ರತಿಯೊಬ್ಬರೂ ಒಮ್ಮೆಯಾದರೂ ಇದರ ಅನುಭವ ಪಡೆಯಬೇಕು.’ ಅವನು ನನ್ನ ಕೈಯನ್ನು ತನ್ನ ಕೈಯಲ್ಲಿ ಹಿಡಿದ. ಅವನ ಅಂಗೈಗಳು ಒದ್ದೆ ಹಾಗೂ ತಂಪಾಗಿದ್ದವು. ಆ ಸ್ಪರ್ಶ ನನಗೆ ತಾಯಿ ತನ್ನ ಮಗುವಿನ ಕೈಯನ್ನು ಕೈಯಲ್ಲಿ ಹಿಡಿದಂತೆ ಅನಿಸಿತು.

ರಿಯಾನ್ ಸಿಗರೇಟಿನ ಧಮ್ ಎಳೆಯುತ್ತ ಹೇಳಿದ, ‘ನೀನು ಈ ಎಕ್ಸ್ಪೀರಿಯನ್ಸ್ ಯಾವತ್ತೂ ಮರೆಯುವುದಿಲ್ಲ, ಜೀವನಪೂರ್ತಿ. ಇದರ ನಂತರದ ನೀನು ಮತ್ತು ಇದರ ಮುಂಚಿನ ನೀನು ಇದರಲ್ಲಿ ಬಹಳಷ್ಟು ವ್ಯತ್ಯಾಸ ಇರಲಿದೆ. ನಿನಗೆ ಅದನ್ನು ನಿರ್ವಹಿಸುವುದು ಬರಬೇಕು ಮಾತ್ರ…’ ಅವನು ಏಕ್ ದಂ ಸುಮ್ಮನಾಗಿಬಿಟ್ಟ. ಅವನಿಗೆ ಮುಂದೆ ಏನೋ ಹೇಳುವುದಿತ್ತು. ಆದ್ರೆ ಅವನಿಗೆ ಅದನ್ನು ಶಬ್ದಗಳಲ್ಲಿ ಹೇಳಿಕೊಳ್ಳಲು ಬಾರದಾಯಿತು.

ನಾನು ಹೇಳಿದೆ, ‘ನನಗೀಗ ಬಹಳ ಹಸಿವಾಗುತ್ತಿದೆ.’

‘ಮೊಟ್ಟೆ ಇದ್ದಾವಾ?’

‘ಹೌದು, ಫ್ರಿಜ್ ನಲ್ಲಿ ಇದ್ದಾವೆ.’

‘ವಾವ್! ನಾನು ಆಮ್ಲೆಟ್ಸ್ ಮಾಡುತ್ತೇನೆ. ಈ ಚಖಣಾ ಅಗಿಯುತ್ತಾ ಕೂತು ಜಿಗುಪ್ಸೆ ಆಗಿದೆ.’ ಅವನು ತೂರಾಡುತ್ತಾ ಒಳಗೆ ಹೋದ.
ನಾನು ಬಿದ್ದುಕೊಂಡಲ್ಲೇ ಬಿದ್ದುಕೊಂಡು ಆಕಾಶದ ಕಡೆ ನೋಡಿದೆ. ಅದು ಬೂದು ಗಪ್ಪಾಗಿ ಕಾಣುತ್ತಿತ್ತು. ಒದ್ದೆ ಗಾಳಿ ಬೀಸುತ್ತಿತ್ತು. ಎಲ್ಲಿಯೋ ಮಳೆ ಬೀಳುತ್ತಿತ್ತು. ಯಾರಾದರೂ ನೋಡುತ್ತಾರೆ ನಮ್ಮ ಕಡೆ ಎಂದು ಅನಿಸಿತು. ಅಷ್ಟರಲ್ಲಿಯೇ ಮಿಂಚೊಂದು ಮಿಂಚಿ, ಜೋರಾಗಿ ಗುಡುಗಿತು. ಮಳೆ ಬೀಳಲು ಪ್ರಾರಂಭವಾಯಿತು. ಮೊದಮೊದಲು ಸ್ವಲ್ಪ ತುಂತುರು ಸುರಿಯಿತು ನಂತರ ದೊಡ್ಡ ದೊಡ್ಡ ನೀರಿನ ಹನಿಗಳು ಮೈಯ ಮೇಲೆ ಬೀಳ ತೊಡಗಿದವು. ನಾನು ಹಾಗೇ ಬಿದ್ದುಕೊಂಡೇ ಇದ್ದೆ, ನೆನೆಯುತ್ತಾ ಇದ್ದೆ. ಗ್ಲಾಸಿನಲ್ಲಿ ನೀರು ತುಂಬಿಕೊಳ್ಳುತ್ತಿತ್ತು, ಅದರಲ್ಲಿ ನಾನು ಸ್ವಲ್ಪ ಸ್ವಲ್ಪ ರಮ್ ಸುರಿದೆ…

‘ದಿಸ್ ಈಸ್ ಫಾರ್ ಯೂ ಸರ್, ಟೂ ಎಗ್ಸ್ ಆಮ್ಲೆಟ್.’

ನಾನು ಗ್ಲಾಸ್ ತೆಗೆದುಕೊಂಡು ಒಳಗೆ ಹೋದೆ. ಹಾಗೇ ಒದ್ದೆ ಮೈಯಲ್ಲೇ ಮಳೆಯ ನೀರಿನಿಂದ ತುಂಬಿದ ಪೆಗ್ ಕುಡಿಯುತ್ತಾ ಕುಡಿಯುತ್ತಾ ನಾವು ಆಮ್ಲೆಟ್ಸ್ ತಿಂದೆವು.

*****

ಪ್ಲೇಟ್ಸ್ ಇಡಲು ನಾನು ಕಿಚನ್ನಿನೊಳಗೆ ಹೋಗಿ ಹೊರಗೆ ಬಂದೆ. ಹೊರಗೆ ಬಂದು ನೋಡಿದರೆ, ರಿಯಾನ್ ತಾರಸಿಯ ಗೋಡೆಯ ಮೇಲೆ ನೆನೆಯುತ್ತಾ ನೆನೆಯುತ್ತಾ ಕುಣಿಯುತ್ತಿದ್ದ. ಬೆತ್ತಲೆ!

‘ಪ್ಲೀಸ್, ರಿಯಾನ್ ಒಳಗೆ ಬಾ. ಪಕ್ಕದ ಮನೆಯವರು ನೋಡುತ್ತಾರೆ ನಿನ್ನನ್ನು ಬಡ್ಡಿಮಗನೆ. ನನ್ನ ಮಾನ ತೆಗೀತೀಯ ನೀನು’ ಎಂದು ಕೂಗಿದೆ.

‘ಯಾರು ನೋಡೋವ್ರು? ಈಗ ಎಲ್ಲ ಮಲಗಿದ್ದಾರೆ ಸುಖವಾಗಿ. ಮತ್ತೆ ನೋಡಿದ್ರೆ ನೋಡಲಿ ಬಿಡು. ಎಲ್ಲರೂ ಹೀಗೇ ತಾನೇ ಇರ್ತಾರೆ.’

‘ಪ್ಲೀಸ್, ನನ್ನ ಅಮ್ಮ-ಅಪ್ಪನಿಗೆ…’

‘ಕಮಾನ್ ಹರ್ಷ್, ಏನು ಅಮ್ಮ-ಅಪ್ಪ ಅಂತ ಶುರು ಮಾಡ್ತೀಯಾ? ನನ್ನ ಜೊತೆಗೆ ಡಾನ್ಸ್ ಮಾಡೋಕೆ ಬಾ, ಅದರ ಬದಲು. ಮೊದಲನೇ ಮಳೆ ಇದು. ಎಷ್ಟು ಸ್ವಚ್ಛ ಹಾಗೂ ಚೆನ್ನ ಅನಿಸುತ್ತೆ ನೋಡು.’ ರಿಯಾನ್ ಹೇಳಿದ, ‘ಒಳಗಿನಿಂದ ತೊಳೆದು ತೆಗೆದ ಹಾಗೆ ಕ್ಲೀನ್.’
ಮಿಂಚು ಅಬ್ಬರಿಸಿ ದೊಡ್ಡ ಕೋಲಾಹಲದಂತೆ ಗುಡುಗಿತು. ಈಗ ಅವನು ಕುಣಿಯುವುದನ್ನು ನಿಲ್ಲಿಸಿದ. ಅವನು ನನ್ನಕಡೆ ನೋಡುತ್ತಾ ಇದ್ದ, ಎವೆಯಿಕ್ಕದೆ. ನನ್ನ ಕಡೆ ನೋಡಿ ಅಂವ ತುಸುವೇ ನಕ್ಕ. ಅವನ ನಗುವಿನಲ್ಲಿ ಒಂದು ತೆರನಾದ ಹುಚ್ಚುತನದ ಇಣುಕು ಇತ್ತು. ನಾನು ಅವನನ್ನು ಒಳಕ್ಕೆ ಎಳೆದುಕೊಳ್ಳುವುದಕ್ಕಾಗಿ ಅವನ ಹತ್ತಿರ ಹೋದೆ. ಆದರೆ ಅವನು ದೂರ ಸರಿದ. ಅವನು ಇನ್ನೂ ನಗುತ್ತಲೇ ಇದ್ದ. ನನಗೆ ಏನೋ ಒಂಥರ ಆಯಿತು. ಹೊಟ್ಟೆಯಲ್ಲಿ ಕಿವುಚಿದಂತೆ. ಬಹುಷಃ ಅದು ಸೇಂದಿಯ ಅಥವಾ ನೋಡದೆ ಮಾಡದೆ ಏನೇನೋ ತಿಂದ ಮತ್ತು ಆ ಮಾತ್ರೆಯ ಪರಿಣಾಮ ಇರಬೇಕು. ನನಗೆ ವಾಂತಿ ಬರುವಂತಾಗುತ್ತಿತ್ತು. ನಾನು ಜಟಕ್ಕನೆ, ವಾಶ್ಬೇಸಿನ್ ಬಳಿ ಹೋದೆ ಮತ್ತೆ ವಾಕ್ ವಾಕ್ ಎಂದು ಕಕ್ಕಿಬಿಟ್ಟೆ.

ವಾಶ್ ಬೇಸಿನ್ ನಲ್ಲಿ ಹಳದಿಯ ಆಮ್ಲೆಟ್, ಚಿಕನ್, ಕಾಳು, ಮತ್ತು ಎಂಜಲು ಹೀಗೆ ಎಲ್ಲಾ ರಾಡಿ ಆಯಿತು. ನನಗೆ ಪುನಃ ಮತ್ತೊಮ್ಮೆ ವಾಂತಿ ಬಂದಿತು. ನಾನು ಜೋರಾಗಿ ನೀರು ಬಿಟ್ಟೆ, ಹಾಗಾಗಿ ಎಲ್ಲಾ ಭಸಕ್ಕನೆ ಹರಿದು ಹೋಯಿತು. ಮುಖದ ಮೇಲೆ ಎರಡು-ಮೂರು ಸರ್ತಿ ನೀರು ಎರಚಿಕೊಂಡು ನಾನೂ ತಾರಸಿಯ ಗೋಡೆಯ ಕಡೆ ಹೋದೆ.

ಈಗ ರಿಯಾನ್ ತಾರಸಿಯ ಗೋಡೆಯ ಅಂಚಿನ ಮೇಲೆ ನಿಂತಿದ್ದ. ಆಗ ನನಗವನು ಸಾಧುವಿನಂತೆಯೇ ಕಂಡ. ಅವನು ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡಿದ್ದ. ಅವನ ಕಪ್ಪು ದಾಡಿ ನೆನೆದಿತ್ತು ಹಾಗೂ ಕೂದಲು ನೆನೆನೆನೆದು ಒದ್ದೆಯಾಗಿ, ನೀರು ಸುರಿಯುತ್ತಿತ್ತು. ಅವನು ಕೈಗಳನ್ನು ಹರಡಿದ್ದ. ಅವನು ಮೇಲೆ ಆಕಾಶದಕಡೆ ನೋಡುತ್ತಿದ್ದ. ತಲೆಯಮೇಲಿಂದ ಹರಿಯುತ್ತಿದ್ದ ಮಳೆಯ ನೀರು ಅವನ ಮುಖದ ಮೇಲಿಂದ, ಕುತ್ತಿಗೆಯ ಮೇಲಿಂದ, ಎದೆ-ಹೊಟ್ಟೆ-ತೊಡೆ ಹೀಗೆ ಪ್ರವಹಿಸುತ್ತ ಗೋಡೆಯ ಔಟ್ಲೆಟ್ ನಲ್ಲಿ ಹರಿದು ಹೋಗುವ ನೀರಿನಲ್ಲಿ ಬೆರೆತು ಹೋಗುತ್ತಿತ್ತು.

ನಾನು ನನ್ನಲ್ಲೆ ಬಡಬಡಿಸಿದೆ, ‘ಈ ನೀರು ನಂತರ ನದಿಯಲ್ಲಿ, ಆಮೇಲೆ ಸಮುದ್ರದೊಳಕ್ಕೆ ಹೋಗುತ್ತೆ.’ ಆಮೇಲೆ ನನಗೆ ಏನಾಯಿತೋ ಯಾರಿಗೆ ಗೊತ್ತು; ನಾನು ಪಟಕ್ಕನೆ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಅವನ ಐದಾರು ಫೋಟೋ ತೆಗೆದೆ.

ರಿಯಾನನು ನನ್ನ ಕಡೆ ನೋಡಿದ. ಅವನ ಉದ್ದನ್ನ ಮುಖ ಶಾಂತವಾಗಿತ್ತು. ನೇರ ಮೂಗಿನ ತುದಿ ನೆನೆದು ಕೆಂಪಾಗಿ ಹೋಗಿತ್ತು. ಆತನ ಕಪ್ಪು ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ. ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ಗಾಢವಾಗಿ ತೋರುತ್ತಿತ್ತು. ಸಿಗರೇಟ್ ಎಳೆದು ಕಪ್ಪಾಗಿದ್ದ, ಒಣಗಿದ್ದ ತುಟಿಗಳು ಈಗ ಮಳೆಯಲ್ಲಿ ನೆನೆದು ಮೃದುವಾಗಿ ಹೋಗಿದ್ದವು.

ನಾನು ಇನ್ನೂ ಒಂದು ಸಾರಿ ಕ್ಲಿಕ್ ಮಾಡುತ್ತಲಿದ್ದೆ ಅಷ್ಟರಲ್ಲೇ ರಿಯಾನ್ ನೀರಿನಲ್ಲಿ ಡೈವ್ ಮಾಡುವ ಹಾಗೆ ತನ್ನ ಅಂಗವನ್ನು ನೇರವಾಗಿ ಕೆಳಗೆ ಇಳಿಯಬಿಟ್ಟ. ಎಂಟನೆ ಮಜಲೆಯಿಂದ ನೇರ ಕೆಳಗೆ…

ನಾನು ನೋಡುತ್ತಲೇ ಇದ್ದೆ. ಆಗ ಅಂವ ಅಲ್ಲಿ ಇದ್ದ, ಅವನ ಫೋಟೋ ನನ್ನ ಮೊಬೈಲ್ ಪೋನಿನಲ್ಲಿದ್ದವು, ಆದರೆ ಈಗ ಅವನು ಅಲ್ಲಿ ಇರಲಿಲ್ಲ.

ನಾನು ಓಡುತ್ತಾ ತಾರಸಿಯ ಗೋಡೆಯಂಚಿನ ಬಳಿಗೆ ಹೋದೆ. ‘ರಿಯಾನ್…’ ಕೂಗಿದೆ.

ನನ್ನ ಹೊಟ್ಟೆಯಲ್ಲಿ ಮತ್ತೊಮ್ಮೆ ಕಿವುಚಿದಂತಾಯಿತು. ಆದರೆ ನಾನು ಹಾಗೇ ಓಡುತ್ತಾ ಬಾಗಿಲು ತೆರೆದು ಲಿಫ್ಟಿನಲ್ಲಿ ಕೆಳಗೆ ಹೋದೆ.

*****

ರಿಯಾನ್ ಕೆಳಗೆ ನಿಶ್ಚೇಷ್ಟವಾಗಿ ಬಿದ್ದಿದ್ದ. ನನಗೆ ಅಲ್ಲೇ ವಾಂತಿಯಾಯಿತು.

ಸೊಸೈಟಿಯ ವಾಚ್ ಮನ್ ಬಂದು ಕೇಳಿದ, ‘ಬಾಬುಜಿ ಯೇ ಕೈಸೆ ಹುವಾ? ಕ್ಯಾ ಹುವಾ?’ ಆದರೆ ನನಗೆ ಅವನ ಮಾತುಗಳು ಕೇಳಿಸಲೇ ಇಲ್ಲ. ನಾನು ಆ ಸ್ವಚ್ಛ ತೊಳೆಯಲ್ಪಟ್ಟಿದ್ದ ಶರೀರವನ್ನು ಉರುಳಿಸಿದೆ.

ಆ ಮುಖ ನಾನು ಎಂದೂ ಮರೆಯಲು ಸಾಧ್ಯವಿಲ್ಲ. ಆ ಮುಖದ ಮೇಲೆ ಆನಂದವಿತ್ತೋ, ಇಲ್ಲಾ ದುಃಖವಿತ್ತೋ ಅದು ನನಗೆ ತಿಳಿಯಲಿಲ್ಲ. ಯಾವತ್ತೂ ತಿಳಿಯಲೇ ಇಲ್ಲ.

*****

ಪ್ರಣವ್ ಸಖದೇವ್ 
ಪ್ರಣವ್ ಮರಾಠಿಯ ಉದಯೋನ್ಮುಖ ಯುವ ಲೇಖಕರು. ಕುಸುಮಾಗ್ರಜ ಪ್ರತಿಷ್ಟಾನದ ಪ್ರತಿಷ್ಟಿತ ಫೆಲೋಶಿಪ್ ಗೆ ಅವರು ಭಾಜನರಾಗಿದ್ದಾರೆ. ೯೬ ಮೆಟ್ರೊಮಾಲ್, ಕಾಳೆಕರಡೆ ಸ್ಟ್ರೋಕ್ಸ್, ನಾಭೀತೂನ್ ಉಗವಲೆಲ್ಯಾ ವೃಕ್ಷಾಚಂ ರಹಸ್ಯ, ಇವು ಇದುವರೆಗೆ ಪ್ರಕಟವಾಗಿರುವ ಅವರ ಕೆಲವು ಜನಪ್ರಿಯ ಕೃತಿಗಳು.