ಸ್ವಂತ ಅವಳ ಮನೆದೇವ್ರು ಮಲ್ಲಮ್ಮನ ಪೂಜೆಯೊಳಗೆ, ಕಾರ್ತಿಕ್‌ಮಾಸದಲ್ಲಿ ನಡೀತಿದ್ದ ತಿಂಗಳ ಪೂಜೇಲಿ ಸಂಜೆಯೊಳಗೆ ಹಾಡೇಳಲು ಕುಂತುಕೊಳ್ಳುತ್ತಿದ್ದ ಸಂಕಮ್ಮ ಪೂಜೆ ಮುಗಿಯುವ ತನಕವು ಅವಳ ಗೆಳತಿಯರ ಜೊತೆ, ಶೃತಿ ಸೇರಸ್‌ಕೊಂಡು ಹೇಳ್‌ತಿದ್ದವಳನ್ನ, ಅಮ್ಮ ಸಾಕು ನಡೀರ್ರೆ ನಿದ್ದೆ ಬರ್‍ತೈತೆ ಅಂದ್ರು ನಿಲ್ಲಸ್ದಂಗೆ ಹೇಳಿ ಹೇಳಿ ದಣಿದು ಬಂದು ಮಲಗುತ್ತಿದ್ದವಳ ಹಾಡುಗಳನ್ನ ಈಗೀಗ ಅಷ್ಟಾಗಿ ಯಾರೂ ಕೇಳಿಸಿಕೊಳ್ಳದಾದರು, ಪೂಜಾರ್ರೆ ಬೆಳಕಿದ್ದಂಗೆ ಪೂಜೆ ಮುಗುಸ್ರಿ, ನಮ್ಮನೆವೊಳಗೆ ಟೀ ವಿ ನೋಡಾಕ್ ಹೋಗ್ ಬೇಕಂತ, ಇನ್ನು ಅಲ್ಲಿ ನೆಟ್ಟಗೆ ಮಂಗಳಾರತಿ ಆಗೆ ಇರಲ್ಲ, ಜನ ಒಬ್ಬೊಬ್ಬರೆ ಖಾಲಿ ಆಗಲು ಉನ್ನಾರ ಮಾಡ್‌ತಿದ್ರು. ಸದ್ಯ ನಾನು ಮಾಡಿಟ್ಟಿರೊ ಚರ್ಪುಗೆ (ಪ್ರಸಾ)ಜನಿಲ್ಲವಂದ್ರೆ?
ವಿಜಯಾ ಮೋಹನ್‌ ಬರೆದ ಹೊಸ ಕತೆ “ಹಾಡು” ಈ ಭಾನುವಾರದ ಓದಿಗೆ

ಸಂಕಮ್ಮ ಇಡೀ ಊರಿಗೆ ಊರೆ, ನಿಬ್ಬೆರಗಾಗುವಂತ ಹಾಡುಗಾರ್ತಿ. ಅವಳು ಹಾಡೇಳಾಕಂತ ಬಾಯಿ ತೆರೆದ್ಲು ಅಂದ್ರೆ, ನಾಯಿ ನರಿಗಳ, ಹುಡುಗರುಪ್ಪಡೆಗಳ ಸದ್ದು ಗದ್ದಲವೆಲ್ಲ ಇದ್ದಕ್ಕಿದ್ದಂಗೆ ಸತ್ತು ನಿತ್ರಾಣವಾಗ್‌ತಿತ್ತು. ಅಂತ ಸಿರಿ ಕಂಠದ ಹಾಡು, ಅವಳ ಬಾಯಿಂದ ಈಚೆ ನುಗ್ಗುವಾಗ, ಬೀದಿ ಬದಿಯ ಗಾಳಿಯೆಲ್ಲ ಬಿಂಕ್‌ವಾಗಿ ನಿಂತ್‌ಬಿಡುತ್ತಿತ್ತು. ಅವಳ ಬದುಕಿನೊಳಗೆ, ಅದು ಯಾವಾಗ ಹಾಡೇಳಾಕ್ ಶುರುವಚ್ಚಿಕೊಂಡ್ಲೊ ಏನೊ? ಯಾರಿಗು ಸರಿಯಾಗಿ ನಿಗವಿಲ್ಲ, ಆದರೆ ಊರಿನ ಯಾವುದಾದ್ರು ಕಾರ್ಯಕ್ರಮಗಳಿಗೆ. ಹಾಡೇಳಾಕಾಗಿ ಕುಂತುಕೊಂಡ್ರೆ ಮನೆಯ ಆಜು ಬಾಜೊಳಗೇನಾರ ಓಡಾಡೊವರು, ಮುಂದಕ್ಕೋಗ್‌ತ್ತಿದ್ದವರು ಅಕ್ಕ ಪಕ್ಕದವರು, ಕುಂತು ನಿಂತವರು, ಅಂಗೆ ಅಲುಗಾಡ್‌ದಂಗೆ ಒಂದು ಕ್ಷಣ ಕೇಳಿಸಿಕೊಳ್ಳಲು ನಿಂತು ಬಿಡುತ್ತಿದ್ರು. ಅಂಗೇನಾದ್ರು ಸಂಕಮ್ಮನ ಹಾಡು ನಿಂತೋಯಿತಂದ್ರೆ, ಯವ್ವ ಇನ್ನೊಂದೇಳುಡುಗಿ, ಯಾಕಮಣ್ಣಿ ನಿಲ್ಲುಸು ಬುಟ್ಟೆ? ಇನ್ನೊಂದೇಳಮ್ಮಯ್ಯ, ಎನುತ ದುಂಬಾಲು ಬೀಳ್‍ತಿದ್ರು.

ಯಣ ಆಮ್ಮಯ್ಯನಿಗೆ ಅದೆಂತ ಕಂಠ? ಅದೆಂತ ರಾಗ? ಭಗವಂತನಲ್ಲಿ ಆ ಹುಡುಗಿ, ಅದೆಂತ ಶಕ್ತಿ ಬೇಡ್ ಬಂದವಳೆ ನೋಡಣ. ಯಾತುಕ್ಕೊ ನಾವು ಇದ್ದೀವಿ? ಭೂಮಿ ಮ್ಯಾಲೆ ದಂಡ್‌ವಾಗಿ. ಅವಳೇಳೊ ನುಡಿಯೊಳಗೆ ಒಂದು ನುಡಿಯೇಳಾಕು, ನಮಗ್ ಬರಲ್ಲ ಕಣಣೊ. ನಾವೇನಾದ್ರು ಬಾಯಿ ತಗದ್ರೆ ಸಾಕು. ಬರಿ ಕತ್ತೆ ರಾಗ್‌ದವರು. ಅನುತ ಸಂಕಮ್ಮನ ಹಾಡಿಗಾಗಿ, ಮತ್ತು ಅವಳ ಕಂಠದ ಸಿರಿಗಾಗಿ, ಆನಂದ ಪಡೋವರು ಆಗಾಗ ಮಾತಾಡ್‌ಕಳತಿದ್ರು. ಅದ್ರ ಜೊತೇಲಿ, ಅಂಗೆ ಹೊಟ್ಟೆ ಉರಿ ಪಡೋವರು ಇದ್ರು. ಅಮ್ಮಣ್ಣಿ ಹೆಣ್ಣು ಮೊಗುವನ್ನ ರವಷ್ಟು ಅಡಕವಾಗಿ ಬೆಳsಸ್ರಿ ಯಾತುರುದು ಯಾವಾಗಲು, ಒಳ್ಳೆ ಬೊಂಬಲಾಟ್‌ದವರು ಪದಾ ಹೇಳಂಗೆ ಹೇಳ್‌ತಾಳೆ. ಅದ್ರಾಗು ಒಂದು ಹಾಡೇಳುಡುಗಿ ಅಂದ್ರೆ, ಕಂಡೋರ್ ಮನೆಗಳಿಗೋಗಿ ಸಂಜೆ ತಂಕ ಕುಂತುಬಿಡ್‌ತಾಳೆ, ಮನೇಲಿ ಹಿಟ್ಟೇನು? ಸಾರೇನು ಕಸವೇನು? ಮುಸುರೆಯೇನು? ಅನ್ನವ ವಕ್ಕಲುತನವನ್ನ ಕಲಿಸೋದ್ ಬಿಟ್ಟು, ಹೆಣ್ಣು ಮೊಗಾನ ಇಂಗೆ ಸಡ್ಲ ಬಿಟ್ರೆ, ಮುಂದೊಂದು ದಿನಾ ಕೈಯ್ಯಿಗೆ ಸಿಗದಂಗಾಗ್‌ತಾಳೆ. ಅನುತ ಸಂಕಮ್ಮನ ಅಮ್ಮ ಅಪ್ಪನಿಗೆ ಹೇಳಿಕೊಡುವಂತ ಮತ್ತು ಲೋಕವನ್ನು ಅರ್ಥೈಸಿಕೊಳ್ಳದ ಕಿತಾ ಪತಿ ಜನವು ಅವಳ ಕಾಲಗಟ್ಟದಲ್ಲಿ ಸಾಕಷ್ಟು ಜನರಿದ್ದರು.

ತಂದಿಗೆ ತಲೆ ಮಗಳಾದ ಸಂಕವ್ವನನ್ನು ಅವರ ಅಪ್ಪ ಅಮ್ಮ ಬಾಲ್ಯದೊಳಗೆ ಇದ್ದೂರಿನ ಇಸ್ಕೂಲಿಗೆ ಸೇರಿಸಿದ್ರು. ಸಂಕವ್ವ ಐದನೆ ಕ್ಲಾಸಿನಲ್ಲಿರುವಾಗ ಅವಳ ಅಮ್ಮ ನಾಲಕ್ಕನೆ ಮೊಗುವಿಗೆ ಬಾಣಂತಿಯಾಗಿ ಮೂಲೆ ಸೇರಿದ್ದು ನೋಡಿ ಅವರ ಅಪ್ಪ ಮನೇಲಿ ಹಿಟ್ಟು ಸೊಪ್ಪು, ಸಾರು ನೀರು, ಅಂತ ನೋಡೋವರು ಯಾರೆಂದು ಇಸ್ಕೂಲು ಬಿಡಿಸಿಬಿಟ್ಟಿದ್ದ. ಸ್ಕೂಲಿನಲ್ಲಿ ನೆಟ್ಟಗೆ ಓದದವಳು, ಈ ಹಾಡು ಪಾಡು ಎನ್ನುವ ಕಲೆಯನ್ನ, ಆ ಹುಡುಗಿ ಅದ್ಯಾವಾಗ್ ಕಲತ್ಲೊ? ಅದೆಂಗ್ ಕಲತ್ಲೊ? ಅದೆಲ್ಲಿ ಕಲತ್ಲೊ? ಅಂಗೇನಾದ್ರು ಅವಳು ಹಾಡೇಳಲು ಶುರವಚ್ಚಿಕೊಂಡ್ಲು ಅಂದರೆ, ಕುಂತ್ರು ಹಾಡೆ, ನಿಂತ್ರು ಹಾಡೆ, ಉಣ್ಣುವಾಗಲು ಹಾಡೆ, ತಿನ್ನುವಾಗಲು ಹಾಡೆ, ಮುನ್ನೂರು ಮೂವತ್ತುಗಳಿಗೇಲು ಬಾಯಿಗೆ ಬಂದಿದ್ದೆಲ್ಲ ವದರಾಡುತ್ತಿದ್ಲು. ಅಂಗೆ ವದರಿ ವದರಿ ಕಂಠವನ್ನ ಪಳಗಿಸಿಕೊಂಡಿದ್ದ ಸಂಕವ್ವ ನಮ್ಮ ಜಿಲ್ಲೆಯೊಳಗೆ ಸೊಬಾನೆ ಸಂಕವ್ವನೆಂದು ಪ್ರಸಿದ್ಧಿಯಾದಳು. ಅಂತ ಸೊಬಾನೆ ಸಂಕವ್ವ, ಹದಿನೈದು ವರುಷ ತುಂಬಿ ಹದಿನಾರು ವರುಷಕ್ಕೆ ಹೆಣ್ಣಾಗಿ ಕುಂತಾಗ, ಅವಳನ್ನು ಆರೆ ತಿಂಗಳಿಗೆ, ಅವರ ಅಪ್ಪ ಅಮ್ಮ, ಮಲ್ಲನಾಯಕನ ಹಳ್ಳಿ ಸಿದ್ದಪ್ಪನಿಗೆ ಕೊಟ್ಟು ಮದುವೆ ಮಾಡೀರು. ಅವನು ಬಲು ನಿಯತ್ತಿನ ಮನುಷ್ಯ. ಊರಲ್ಲಿ ಗಲಾಟೆ ಗದ್ದಲಗಳಾದ್ರೆ ಏಳೂರು ಸೈ ಅನ್ನಂಗೆ ನ್ಯಾಯಕ್ಕೆ ಕುಂತುಕೊಳ್ಳುತ್ತಿದ್ದ, ಆ ನ್ಯಾಯದೊಳಗೆ ಯಾರ ಮುಲಾಜಿಗು ಅಂಜದೆ, ನಿಷ್ಠುರವಾಗೆ ಮಾತಾಡ್‌ತಿದ್ದ, ಗಂಡು ಅಂದ್ರೆ ಗಂಡು, ಅವನ ಗತ್ತೇನು ಗಮ್ಮತ್ತೇನು? ಅವನ ಬುದ್ದಿಯೇನು? ಬಲವೇನು? ಅವನ ಪಿತ್ರಾರ್ಜಿತ ಹೊಲ, ಅವನೆ ಕಟ್ಟಿಸಿದ ಹತ್ತಂಕಣದ ಮನೆ, ಅವನೆ ಕುದ್ದು ಗಿಡ ಕಟ್ಟಿಸಿ ನೀರೋಯಿದು ಬೆಳೆಸಿದ ಮಾವಿನ ತೋಪು. ದನಕರ ದವಸ ಧಾನ್ಯ, ಬೀಜ ಬೇಸಾಯವೆಂಬ, ಸಕಲವು ಸಂಕವ್ವನೆನ್ನುವವಳ ಸಂಸಾರದೊಳಗೆ ತುಂಬಿ ತುಳುಕಾಡುವಂತೆ ಇರುವ ಆ ಮನೆಯ ಯಜಮಾನಿಗೆ ಅವಳ ಮನೆಯ ಕೆಲಸವೆ ಬಡುಕೊಳ್ಳುವಷ್ಟಿತ್ತು. ಈ ಬದುಕಿನ ಮದ್ಯೆ, ಮೂರು ಮುದ್ದಾದ ಗಂಡು ಮಕ್ಕಳನ್ನ ಹಡೆದಳು. ಆವತ್ತು ಹೆಣ್ಣು ಮಕ್ಕಳೆ ಜಾಸ್ತಿ ಹುಟ್ಟುತ್ತಿದ್ದ, ಮತ್ತು ಆ ಹೆಣ್ಣು ಮಕ್ಕಳಿಗೆ ಬೆಲೆ ಇರದಂತ ಕಾಲದಲ್ಲಿ, ಸಂಕವ್ವನಿಗೆ ಒಂದರಿಂದೆ ಒಂದರಂತೆ ಬರಿ ಗಂಡು ಮಕ್ಕಳೆ ಆಗಿದ್ದವು. ಅವರ ಬಂದು ಬಳಗವೆಲ್ಲ ಐಸೋಜುಗ ಪಟ್ಟುಕೊಂಡು. ಸಂಕವ್ವನ ಸಂಸಾರವನ್ನ ಹೊಗಳಿದ್ದೆ ಹೊಗಳಿದ್ದು. ಅಂಗೆ ಹೊಗಳಿಸಿಕೊಳ್ಳುತ್ತಿದ್ದ ಅವಳ ಬದುಕು, ನೋಡ ನೋಡುತ್ತಿದ್ದಂಗೆ ಮಾಯವಾಗಾಕಿಡಿಯಿತು.

ಅವಳ ಹಟ್ಟಿ ಬಯಲೊಳಗೆ, ಇನ್ನು ಮುಟ್ಟು ಮೂಡಿನ ಸಂಜೆ, ಅಲ್ಲಿ ಕುಂತವಳ ಕಣ್ಣು ರೆಪ್ಪೆ ಅದುಮುತ್ತಿತ್ತು. ಅದರಲ್ಲು ದಿನಾಲು ಸಂಜೆ ಹೊತ್ತಿಗಾಗ್ಲೆ ಮಲಗಿಬಿಡ್‌ತಿದ್ದ ಸಂಕವ್ವನಿಗೆ, ಎಂದು ಇಲ್ಲದಿದ್ದು ಆವತ್ತು ಅಗಾದ್‌ವಾದ ಗಾಳಿ ಬೀಸಾಕಿಡಿಯಿತು. ಅದು ಒಂದೇ ಮರದ ಗಾಳಿಯಲ್ಲ? ವಂಗೆ, ಬೇವು, ಉಣಸೆ, ಬ್ಯಾಲ, ಮಾವಿನ ಮರಗಳ ಕೊಂಬೆ ರೆಂಬೆಗಳೆನ್ನಲ್ಲ ತೂಗಿಸಿ, ತೂರಿ ಬಂದ ಗಾಳಿ, ಸಂಕವ್ವನ ಮುಖಕ್ಕೆ ಅಪ್ಪಳಿಸಿ, ಅವಳ ತೋಳು ಕತ್ತು ಸೊಂಟದೊಳಗೆ, ಸುಮಸುಮನೆಂದು ಕಚ್ಚುತ್ತಿದ್ದ ಸೆಕೆಯನ್ನೆಲ್ಲ ಸವರುವಾಗ, ತಲೆ ನೆಲಕ್ಕಾಕಿದವಳ ಕಣ್ಣು ರೆಪ್ಪೆ. ನಿದ್ದೆಯನ್ನ ತಡವಿಲ್ಲದೆ ತಬ್ಬಿಕೊಳ್ಳುತ್ತಿತ್ತು. ಇದ್ಯಾಕಮ್ಮಣ್ಣಿ? ಊರು ಕೇರಿ ಮಲಗಾಕ್ ಮುಂಚೇನೆ ನಿಸೂರಾಗಿ ಮಲಗ್‌ತ್ತಿದ್ದೀಯಲ್ಲಮ್ಮಣ್ಣಿ. ನಮಗೆ ಯಾವ್ ಕಡೆ ಒಳ್ಳಾಡೀರು ನಿದ್ದೆ ಬರಲ್ಲ. ನೀನ್ ನೋಡು, ಚಿಂತೆ ಇಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ ಅನ್ನುವಂತವಳು. ಎಂದು ಎದುರು ಮನೆಯ ನಿಂಗವ್ವ ನಿತ್ಯ ಬಿಚ್ಚುವ ಅಡಕೆಲೆ ಚೀಲವನ್ನ ತಗದು ಅದರೊಳಗಿದ್ದ ಸುಣ್ಣ ಒಣಗೈತೆ ಅನುತ ಸಂಕವ್ವನತ್ತಿರ ಸುಣ್ಣ ಕೇಳಲು ಬಂದವಳ ಪ್ರಶ್ನೆಗೆ, ಉತ್ತರ ಹೇಳಲಾರದ, ಸಂಕವ್ವನ ಕಣ್ಣುಗಳು ಮಳ್ಳಿಸಿ ಬಂದವು. ಅವಳ ತುಟಿ ದಾಟಿ ಬರದ ಮಾತುಗಳು ಅಲ್ಲೆ ಗಂಟಲಲ್ಲೆ ನಿಂತು ಮಕನಾಗಿ ನಿಂತಂತಾಗಿ ಇವಳ ಸುಣ್ಣಗಾಯಿಯ ಡಬ್ಬಿಯಿಂದ ಸುಣ್ಣ ಮಾತ್ರ ಕೊಟ್ಟು, ಯಾಕೊ ಕಣಮ್ಮಣ್ಣಿ? ಈ ಮೂರು ದಿವಸದಿಂದ, ಸೊಂಟ ಎಂಟಾಣಿ ಕೇಳಂಗೆ ನೋಯತಾ ಇರ್ತದೆ ಅನ್ನಂಗಾಗಿ ಸಂಜೆ ಹೊತ್ತಿಗಾಗ್ಲೆ ಮಲಿಗ್‌ಬಿಡತ್ತೀನಿ, ಎಂದ ಸಂಕವ್ವ, ಯಾವತ್ತು ಬೆಳಕರಿಯ ತನಕ, ಕಣ್ಣು ತುಂಬ ನಿದ್ದೆ ಮಾಡ್‌ದವಳೆ ಅಲ್ಲ. ಬೆಳಗಿನಿಂದ ಸಂಜೆತನಕ, ಊರ್‍ನವರ ಹೊಲಗಳಲ್ಲಿ, ಬಿಸಿಲು ಗಾಳಿಯೆನ್ನುವುದನ್ನ ಲೆಕ್ಕಿಸದೆ ಕಳೆ ಮಳೆ ಅಂತ ಬಡುಕೊಂಡು ಬರುವವಳು. ತನಗೆ ತಾನೆ ಇಟ್ಟೊ ಸೊಪ್ಪೊ ಬೇಯಿಸಿಕೊಂಡು ತಟ್ಟೆ ಮುಕ್ಕಾಗದಂತೆ ಉಣ್ಣುತ್ತಿದ್ದವಳ ಬದುಕು ಯಾವತ್ತು ಮುಕ್ಕಾಗಬಾರದೆನ್ನುವ ನಾಜೋಕಿನೊಳಗೆ ಸಂಸಾರವನ್ನ ನೀಚುತ್ತಿದ್ದವಳ ಬಾಳಿನಲ್ಲಿ ಒಂದಲ್ಲ ಎರಡಲ್ಲ, ನೂರಾರು ಚಿಂತೆಗಳು ತಲೆಯೊಳಗೆ ತೂರಿ ಸಂಜೆ ಹೊತ್ತಿಗೆ ಮಲಗಿದವಳ ಮನಸ್ಸನ್ನ, ಸರುವೊತ್ತಿಗಾಗಲೆ ಎಚ್ಚರಿಸಿ, ಅವಳ ಎದೆಯೊಳಗೆ ಪೆಂಡಿಂಗಾಗಿ ಪೇರಿಸಿಕೊಂಡಿದ್ದ, ಚಿಂತೆಗಳು ಕೊರಿಯಾಕಿಡಿಯುತ್ತಿದ್ದವು.

ಹೊಸ ಮದನಿಂಗಿಯಾಗಿ, ಈ ಊರಿಗೆ ಬಂದ್‌ಮ್ಯಾಲೆ ಸಂಕವ್ವನ ಗುಣವೆಂದರೆ, ಅವಳ ಹಾಡೆಂದರೆ, ಊರಾದ ಊರೆಲ್ಲ ಸೈ ಎನುತಿತ್ತು. ಯಾರ್ ಮನೇಲಿ ಮಕ್ಕಳು ಹೆಣ್ಣಾದ್‌ರು ಸರಿ, ಅವರ ಗುಡ್ಲು ಶಾಸ್ತ್ರದೊಳಗೆ, ಕಣ್ಣೆರೆಡು ಮುಚ್‌ದಂಗೆ, ಗುಡ್ಲು ಕಾಯುತ್ತ ಕುಂತವಳು ಜನಕರಾಯನ ಮಗಳು ಸೀತೆ ಋತುವನಾದಳು, ಆ ಮಾತ ಕೇಳಿ ರಾಮ ಲಕ್ಷಣರೋಡಿ ಬಂದರು, ಎಂದು ಹಾಡೇಳಲು ಶುರುವು ಮಾಡೀರೆ, ಗುಡ್ಲಿನೊಳಗೆ ಕುಂತಿದ್ದ ಹೆಣ್ಣಾದ ಹುಡುಗಿ, ನಾಚಿ ನೀರಾಗಿ ಬಿಡುತ್ತಿದ್ದಳು. ಸಿಗಳಿ ತೊಮುಟ ಬಾಳೆ ಹಣ್ಣು ತಟ್ಟೆಯಲ್ಲಿರಿಸಿರಿ, ಜನಕರಾಯನ ಮಗಳು ಸೀತೆಗೆ ಮಡಿಲ ತುಂಬಿರಿ ಎನ್ನುವ ತರ ತರದ ಹಾಡುಗಳನ್ನ ಹೇಳಲು ಬಾಯಿತೆರೆದ್ಲು ಅಂದ್ರೆ ಮನೆ ಮಕ್ಕಳೆಲ್ಲ, ಹಾದಿ ಬೀದಿಯ ಜನವೆಲ್ಲ ನಿಶಬುದರಾಗಿಬಿಡುತ್ತಿದ್ರು. ಅಂಗೆ ಹಾಡೇಳಲು ಕುಂತುಕೊಂಡ ಸಂಕವ್ವ ಸರುವೊತ್ತಾದ್ರು ಬಿಡದಂಗೆ, ಅವಳಿಗೆ ತೋಚಿದ ಅವಳ್‌ದೆ ದಾಟಿಯಲ್ಲಿ ಅವಳ್‌ದೆ ಪದಜೋಡಣೆಗಳಲ್ಲಿ ಹೇಳಿಕೊಂಡು ಕುಂತು ಬಿಡುತ್ತಿದ್ಲು. ಅಲ್ಲಿ ಗುಡ್ಲು ಸುಟ್ಟ ಹೆಣ್ಣು ಮೊಗುವಿಗೆ ಹದಿನಾರು ದಿನ ಹಾಕುವ ವಸಿಗೆಯಲ್ಲು ಸಂಕವ್ವನವೆ ಹಾಡುಗಳು. ಹುಡುಗಿ ಅಲಂಕಾರ ಮಾಡಿಕೊಂ, ಹಟ್ಟಿ ಬಯಲೊಳಗೆ ಕುರ್ಚಿ ಮೇಲೆ ಕುಂತರೆ, ಸಂಕವ್ವನ ಹಾಡುಗಳೆಲ್ಲ ಮುಗಿಯೊತನಕ, ಅಂದರೆ ಅವಳ ತಲೆಯೊಳಗೆ ಎಷ್ಟು ಕೂದಲಿದ್ದಾವೊ, ಅಷ್ಟೊಂದು ಪದ ಹೇಳ್‍ತ್ತಾಳೆ, ಎಂದು ಜನ ಜನಿತವಾಗಿರುವ ಸಂಕವ್ವನ ಪದಗಳನ್ನ ಕೇಳಿ ಕೇಳಿ ಕೊನಿಗೆ ಜಯ ಮಂಗಳ ನಿತ್ಯಾ ಸುಭ ಮಂಗಳ… ಎಂದು ಮುಗಿಸುವ ತನಕ, ಆ ಹುಡುಗಿ ಕದಲುವಂತಿರಲಿಲ್ಲ. ಆ ಹುಡುಗಿಯ ಮದುವೆ ಪ್ರಸ್ತ ಶಾಸ್ತ್ರ ದಲ್ಲಿ ಸಂಕಮ್ಮನವೆ ಹಾಡುಗಳು, ಆ ಹುಡುಗಿಯ ಬಸುರಿ ವಸಗೆಯಲ್ಲಿ, ದುಂಡು ಮಲ್ಲಿಗೆ ಮುಡಿಯಮ್ಮ ಗಂಡು ಮಗುವ ಪಡಿಯಮ್ಮ, ಸಣ್ಣ ಮಲ್ಲಿಗೆ ಮುಡಿಯಮ್ಮ, ಹೆಣ್ಣು ಮೊಗುವ ಹಡಿಯಮ್ಮ, ಎನ್ನುವ ಹಾಡು, ಅವಳ ಕಂಠ ಸಿರಿಯೊಳಗೆ ಬಂದೆ ಬರುತ್ತಿತ್ತು.

ಅವಳಿಗೆ ಹೆರಿಗೆಯಾಗಿ ಮಗುವಿನ ನಾಮಕರಣದಲ್ಲಾದರೆ, ಅದು ಹೆಣ್ಣಾಗಿರಬಹುದು, ಗಂಡಾಗಿರಬಹುದು. ತೂಗಿರೆ ರಂಗಯ್ಯನ, ತೂಗಿರೆ ಕೃಷ್ಣಯ್ಯನ, ತೂಗಿರೆ ಯದುಕುಲ ನಂದೈನ, ಎನ್ನುವಂತ ಹಾಡನ್ನ ಮೊದಲು ಮಾಡುತ್ತ, ಹಾಲು ಮಾರಿ ಬರ್ತಿನಿ, ಕಾಲಿಗೆ ಗೆಜ್ಜೆ ತರ್ತೀನಿ… ಅಳು ಬ್ಯಾಡವೊ ಕಂದಯೈನೆ… ಎನ್ನುವ ತರ ತರದ ಅನೇಕ ಹಾಡುಗಳು ಅವು ಸಂದರ್ಭಕ್ಕೊದಗಿದರು ಸರಿ, ಒದಗದಿದ್ದರು ಸರಿ, ಪ್ರತಿಯೊಂದು ಕಾರ್ಯಕ್ರಮದಲ್ಲು, ಸಂಕಮ್ಮನವೆ ಹಾಡುಗಳು. ಅಂಗೆ ಊರೊಂದು ಕಡೆಯಿಂದ, ಎಲ್ಲರ ಶುಭ ಕಾರ್ಯಗಳಿಗೆ ಎಲ್ಲರ ಮನೆಯ ಹೆಣ್ಣು ಮಕ್ಕಳ ಶಾಸ್ತ್ರಕ್ಕೆ, ಅವಳ ಹಾಡುಗಳು ಜನ ಜನಿತವಾಗಿದ್ದವು. ಅವಳು ಪ್ರಾಶಸ್ತವಾಗಿ ಹಾಡೆ ತೀರಬೇಕೆನ್ನುವ ಜನಗಳ ಬಯಕೆಯೊಳಗೆ ಕಾಯುತ್ತಿದ್ದವರ ಮುಂದೆ ಇವತ್ತ್ಯಾಕೊ ತಲೆ ಸಿಡಿತದೆ ಬುಜ ನೋಯಿತದೆ ಅಂದ್ರು ಬಿಡದೆ, ನೀನು ಹಾಡು ಹೇಳೇ ತೀರಬೇಕೆಂದು ಬಲವಂತವಾಗಿ ಕರೆದುಕೊಂಡು ಹೋಗ್‍ತಿದ್ರು. ಅವಳ ಬಾಯಿಂದ ಬರುತ್ತಿದ್ದ ಹಾಡುಗಳಲ್ಲಿ ಸಂಪ್ರದಾಯದ ಕಾರ್ಯ ಮಾಡುತ್ತಿದ್ದ ಊರಿನೊಳಗೆ ಕಾಲ ಕ್ರಮೇಣ ಸಂಕವ್ವನ ಬದುಕಲ್ಲಿ ಸೋಲುಗಳೆ ಜಾಸ್ತಿ ತುಂಬಿಕೊಳ್ಳಲಾರಂಬಿಸಿದ್ದವು. ಸಂಕವ್ವ ಬ್ಯಾರೆ ಯಾರ ಹೊಲದ ಕೆಲಸಗಳಿಗು ಅಷ್ಟಾಗಿ ಹೋಗುತ್ತಿರಲಿಲ್ಲ. ಅವಳ ಸ್ವಂತ ಹೊಲದೊಳಗಿನ ಮತ್ತು ಮನೆಯೊಳಗಿನ ಕೆಲಸಗಳೆ ಜಾಸ್ತಿಯಾಗಿರುತ್ತಿದ್ದವು. ಯಾರತ್ತಿರವು ಎಂದು ಬೆಟ್ಟು ಮೊಡುಚದಂಗೆ ಬದುಕುತ್ತಿದ್ದ ಸಂಕವ್ವನಿಗೆ ಊರಿನಲ್ಲಿ ಅಷ್ಟೆ ಬೆಲೆ ಗೌರವವಿತ್ತು. ಮನೇಲು ಅಷ್ಟೆ, ಗಂಡ ಹೆಂಡತಿ ಅಂದರೆ ಒಬ್ಬರನ್ನೊಬ್ಬರು ಬಿಟ್ಟಿರದಂತ ನಯಾ ನಾಜೋಕಿನಲ್ಲಿ ಸಂಸಾರ ನೀಚುತ್ತಿದ್ದವರ ಬದುಕಿನೊಳಗೆ ಬಿರುಗಾಳಿಯೆನ್ನುವುದು ಎಲ್ಲಿಂದ ಹುಡುಕಿಕೊಂಡು ಬಂತೊ ಏನೊ?

ಸಂಕಮ್ಮನ ಗಂಡ ಮಲ್ಲನಾಯಕನಹಳ್ಳಿ ಸಿದ್ದಪ್ಪನೆಂದರೆ ಸುತ್ತಲು ಏಳೂರಿಗು ಹೆಸರು ವಾಸಿಯಾದವನು. ತಾನಾಯಿತು ತನ್ನ ಬದುಕಾಯಿತು ಅನುತ ಯಾವತ್ತು ತಲೆ ತಪ್ಪಿಸಿಕೊಂಡು ಕೂತವನಲ್ಲ. ಊರಲ್ಲಿ ಯಾರ ಮನೆಯ ಸಂಕಟಗಳೇನಾದರು ಇರಲಿ, ಯಾರ ಎಡವಟ್ಟುಗಳಿರಲಿ, ಯಾರಿಗ್ಯಾವ ತಾಪತ್ರಾಯಗಳಿರಲಿ, ಯಾರ ಮನೆಯ ಗಂಡ ಹೆಂಡತಿಯ ಜಗಳವಿರಲಿ, ಅಣ್ಣ ತಮ್ಮಂದಿರ ಜಗಳವಿರಲಿ, ಎಲ್ಲರಿಗು ನಿರುವಂಚನೆಯಿಲ್ಲದಂಗೆ ನ್ಯಾಯ ಹೇಳುತ್ತಿದ್ದ. ಇಂತ ಮಲ್ಲನಾಕನಹಳ್ಳಿ ಸಿದ್ದಪ್ಪನೆಂದರೆ, ಸುತ್ತಲ ಏಳು ಹಳ್ಳಿಗು ಬೇಕಾದ, ನಿಯತ್ತಿನ ಮನುಷ್ಯನೆಂದೆ ಹೆಸರುವಾಸಿ ಪಡೆದಿದ್ದ. ಅವನ ಮೂರು ಗಂಡುಡುಗರು ಮೂತಿ ಮೂಗು ಬಲಿತಂತಾಗಿ, ಇನ್ನೇನು ಮೀಸೆ ಚಿಗುರ್ತಾವೆ ಅನ್ನಂಗಿದ್ದ ಹುಡುಗರ ಪೈಕಿ, ದೊಡ್ಡಮಗ ಆಗಲೆ ಮೇಷ್ಟ್ರು ಟ್ರೈನಿಂಗ್ ಮಾಡಿಕೊಂಡು ಬಂದಿದ್ದ. ಸಂಕಮ್ಮನ ಗಂಡನು ಅಷ್ಟೆ, ಆಸ್ತಿ ಅಡುವು ನೆಟ್ಟಗೆ ಮಾಡಿಟ್ಟು, ಯಾವುದನ್ನು ಕಳಿಯದೆ ಇದ್ದವನ ಮುಂದೆ ನಡುವಲ ಮಗ ನೆಟ್ಟಗೆ ಓದಲಿಲ್ಲ ಅನುತ ಒಂದು ಮೈಕ್‌ಸೆಟ್ಟು ತಂದುಕೊಟ್ಟಿದ್ದ. ಊರೊಳಗೆ ಒಂದು ಹಾಲಿನ ಡೈರಿ ಇಟ್ಟುಕೊಟ್ಟಿದ್ದ.

ಅನ್ನವ ವಕ್ಕಲುತನವನ್ನ ಕಲಿಸೋದ್ ಬಿಟ್ಟು, ಹೆಣ್ಣು ಮೊಗಾನ ಇಂಗೆ ಸಡ್ಲ ಬಿಟ್ರೆ, ಮುಂದೊಂದು ದಿನಾ ಕೈಯ್ಯಿಗೆ ಸಿಗದಂಗಾಗ್‌ತಾಳೆ. ಅನುತ ಸಂಕಮ್ಮನ ಅಮ್ಮ ಅಪ್ಪನಿಗೆ ಹೇಳಿಕೊಡುವಂತ ಮತ್ತು ಲೋಕವನ್ನು ಅರ್ಥೈಸಿಕೊಳ್ಳದ ಕಿತಾ ಪತಿ ಜನವು ಅವಳ ಕಾಲಗಟ್ಟದಲ್ಲಿ ಸಾಕಷ್ಟು ಜನರಿದ್ದರು.

ಇಂತ ಜವಬ್ದಾರಿಯೊಳಗೆ, ಇಷ್ಟು ದಿನ ಚೆಕ್ಕೆ ಚೆದರದಂಗೆ ಬದುಕುತ್ತಿದ್ದವನನ್ನು ಒಂದು ದಿನ ಮುತ್ತಗದಹಳ್ಳಿ ಮಲ್ಲಣ್ಣನೆಂಬೋನು ಬಂದು, ಯಣ ನಮ್ಮಣ್ಣಯ್ಯನ ಮನೆವೊಳಗೆ, ಗಲಾಟೆ ಗದ್ದಲವಾಗಿ ರಂಪವಿಡುಕೊಂಡು, ಅದು ಬೀದಿರಂಪ, ಹಾದಿರಂಪವಿಟ್ಟುಕೊಂಡು ಕುಂತೈತೆ ಕಣಣ. ಅಂಗಾಗೆ ಇವತ್ತುರಾತ್ರಿಕೆ ಎಲ್ಲಾರುನ್ನು ನ್ಯಾಯಕ್ಕೆ ಕುಂಡುರುಸ್‌ತೀವಿ, ಅದಿಕ್ಕೆ ನೀನು ಬಂದೇ ಬರ್‍ಬೇಕಂತಣ, ಅನುತ ಕರೆದು ಹೋದ. ಅವನ ಬೆನ್ನಿಂದೆ ಹೋಗಿದ್ದ ಸಿದ್ದಪ್ಪನಿಗೆ ಅರ್ಥವಾಗಿದ್ದು ಇಷ್ಟು. ಮುತ್ತುಗದ ಹಳ್ಳಿಯ ದಾಸಣ್ಣನ ದೊಡ್ಡಮಗ, ರಂಗನಾಥನೆಂಬೋನು, ಕಂಬಳಿ ವ್ಯಾಪಾರಕ್ಕೆಂದು ಹೋಗಿದ್ದಾಗ. ಯಾವುದೊ ಮಲ್ನಾಡು ಸೀಮೆಯಿಂದ, ಇವನಿಂದೆ ಓಡಿ ಬಂದ ಹುಡುಗಿಗು ಈ ರಂಗನಾಥನ ಹೆಂಡತಿಗು, ಪ್ರತಿ ದಿನವು ಜಗಳವಾಗುತ್ತಿದ್ದುದ್ದನ್ನ ನೋಡಿ ಅವನು ಆ ಇಬ್ಬರಿಗು ಬುದ್ದಿ ಹೇಳಿ ಹೇಳಿ ಸಾಕಾಗಿ ಸೋಲುತ್ತಿದ್ದ. ಅಂಗೆ ಸೋತು ಸುಣ್ಣವಾದ ರಂಗನಾಥ ನೆನ್ನೆ ದಿನ ಹೆಂಡತಿ ಸೀರೆಯೊಳಗೆ, ನೇಣಾಕಿಕೊಳ್ಳಲು ಹೋಗಿದ್ದನೆಂದು, ಇಂತದ್ದೊಂದು ವಿಷಯ, ಜೀವ ಕಳಕಣುವ ಮಟ್ಟಕ್ಕೆ ಹೋಗಿರುವುದೆಂದರೆ ಹುಡುಗಾಟವೆ? ಈಗ ಎಂಗಾದರು ಮಾಡಿ, ನ್ಯಾಯ ತೀರ್ಮಾನ ಮಾಡಬೇಕೆಂದು ಅಲ್ಲಿ ಕುಂತವರ ಮತ್ತು ನಿಂತವರ ಸಮ್ಮುಖದೊಳಗೆ, ನಾವು ಹೆಂಡಿರು ಮಕ್ಕಳು ಇರೊ ಸಂಸಾರದೊಳಗೆ ಇವಳ್ಯಾರೊ ಗೊತ್ತು ಗುರಿಯಿಲ್ಲದಿರೊ, ಅಡ್ನಾಡಿ ಬಂದು ಬುಟ್ಲು ಅನುತ ನಾವೆಂಗಿರ್ ಬೇಕಣ? ಇವಳು ಅರುಗೀಸಿ ನಮ್ಮನೆಯಾಗ್ ಇರಕೂಡುದಣ? ಅಂಗೇನಾದ್ರು ಇದ್ರೆ, ಇಲ್ಲ ಅವಳಿರ್‍ಬೇಕು, ಇಲ್ಲ ನಾನಿರ್‍ಬೇಕು, ಅನುತ ಪಟ್ಟಿಡುದು ಕೂತ ಹೆಂಡತಿ ಮಾತಿಗೆ ಯಣ ಇದು ನೆನ್ನೆ ಮೊನ್ನೆ ಸಂಬದವಲ್ಲಣ? ಈ ಆರೇಳು ವರ್ಸದಿಂದ್‍ಲು ನನ್ನುನ್ನ ಈವಯ್ಯ ಪ್ರೀತ್ಸವನೆ. ನನಗು ಯಾರು ದಿಕ್ಕು ದಿವಾಳಿಯಿಲ್ಲ ಕಣ್ರಣ್ಣ? ಈಗಿಂತ ನಡು ನೀರಲ್ಲಿ ಕೈ ಬಿಟ್ರೆ ನಾನೆಲ್ಲಿಗೋಗ್‌ಬೇಕರಣ್ಣ? ಎಂದು ಆ ಓಡಿ ಬಂದಿದ್ದ ಹುಡುಗಿ ಗಳ ಗಳನೆ ಅಳೋದಿಕ್ಕೆ ಶುರುವಚ್ಚಿಕೊಂಡಳು.

ಯಾರಿಗೆ ಯಾವತರಹದ ನ್ಯಾಯ ಹೇಳಿದರು ಯಾರು ಕುದುರ್‍ಲಿಲ್ಲ. ಲೇ ರಂಗನಾಥ ಈ ಹುಡುಗೀನ ಇದೇ ಊರಲ್ಲಿ ಇಟ್ಟು ಬುಟ್ರೆ ನಿನಗೆ ಗಂಡಾಂತ್ರ ತಪ್ಪಿದ್ದಲ್ಲ ಕಣಪ್ಪ. ಎಂಗೊ ಈ ಹುಡುಗೀನ ಕೆಡಸಿದ್ದೀಯ. ಕೈ ಬಿಡೋದು ಬ್ಯಾಡ? ಅಂಗಾಗಿ ಈ ಊರು ಬಿಡಿಸಿ, ಯಲ್ಲಾರ ಬ್ಯಾರೆ ಊರಲ್ಲಿ, ಒಂದು ಗುಡ್ಲು ಗಿಡ್ಲು ಕಟ್ಟಿ ಇಟ್ಟುಕೊ ಹೋಗಲ. ಅಂತ ಕಿವಿ ಮಾತಿನ ತೀರ್ಮಾನ ಕೊಟ್ಟವರ ಮಾತಿಗೆ, ಸಿದ್ದಪ್ಪನ ಮಖ ನೋಡ್‌ಕಂಡು, ಯಣ ಈಗ ಸದ್ಯಕ್ಕೆ ನೀನೆ ಕರ್‍ಕಂಡು ಹೋಗಣ. ನಾಳೆ ನಾಡಿದ್ದರಲ್ಲಿ ನಾನು ಬಂದು ಅಲ್ಲೆ ಎಲ್ಲಾದ್ರು ಒಂದು ರೂಮು ಮಾಡಿಡ್‌ತೀನಿ ಅನುತ ಸ್ವಂತ ಹೆಂಡತಿಯನ್ನು ಮರೆಮಾಚಿ, ಈ ಗಂಡಸರು ಮಾಡಿದ ತೀರ್ಮಾನದಂತೆ ಸಿದ್ದಪ್ಪ ಆ ಹುಡುಗಿಯನ್ನ ಕರೆದುಕೊಂಡೋದ. ಅಂಗೆ ಹೋದವನು, ಊರಲ್ಲಿ ಇದ್ದದ್ದು ಎರೆಡೆ ಎರಡು ದಿನ. ಮೂರನೆ ದಿನಕ್ಕಾಗಲೆ, ಆ ಹುಡುಗೀನು ಸಿದ್ದಪ್ಪನು, ಇಬ್ಬರು ಜೊತೆಯಾಗಿ, ಎಲ್ಲು ಕಾಣದಂತೆ ನಾಪತ್ತೆಯಾದರು, ಅಂಗೆ ಹೋದವರು ಇಲ್ಲಿಗೆ ಹದಿನೈದು ವರ್ಷವಾಗುತ್ತಾ ಬಂತು.

ಅದೆಲ್ಲಿದ್ರೊ? ಎಲ್ಲಿಗೋದ್ರೊ? ಅನ್ನುವುದೆ ಗೊತ್ತಾಗ್‌ದಂಗಾಯಿತು. ಆವತ್ತಿನಿಂದ ಈವೊತ್ತಿನ ತನಕ ಸಂಕವ್ವನೆದೆಯ ಸಂಕಟವೆನ್ನೋದುನ್ನ ಮರೀಬೇಕಾದ್ರೆ ಅವಳ ಅಗೇಸ್‍ತ್ರಿ ಗುಬ್ಯಾಡವಾದ್ದಂತ ಬಾದೆಯಾಗಿತ್ತು. ಅಂತದ್ದೊಂದು ನೋವು ನುಂಗುವ ಮುಲಾಮಿಗಾಗಿ, ಯಾವಾಗಲು ಸಣ್ಣ ದ್ವನಿಯಲ್ಲಿ ಹಾಡುತ್ತಿದ್ದ ಹಾಡುಗಳಿಗೆ ಕಾಲ ಕ್ರಮೇಣ ದೊಡ್ಡದ್ವನಿ ಕೂಡಿಸಿಕೊಂಡು ಹಾಡುತ್ತ ಹಾಡುತ್ತ ಗಟ್ಟಿತನ ಪಡೆದುಕೊಡ ಸಂಕವ್ವಳೀಗ ಯಾರು ಕರದ್ರು ಯಾವ ಗಳಿಗೇಲು ಕರೆದ್ರು ಆಗಲ್ಲ ಕಣವ್ವ ಅನ್ನದಂಗೆ ಅವಳ ಆತ್ಮದಲ್ಲಿರುವ ಪದಗಳಿಗೆ ಗಂಟಲೊಳಗಿನ ಸ್ವರದ ತಾಕತ್ತನ್ನು ಕೂಡಿಸಿಕೊಂಡು ಒಂದರ ಮೇಲೊಂದರಂತೆ ಅವಳ ಕಂಚಿನ ಕಂಠದೊಳಗೆ ಹಾಡೇಳಲು ಶುರುವಚ್ಚಿಕೊಂಡ ಸಂಕಮ್ಮಳತ್ತಿರ, ಊರೊಳಗೆ ಸಣ್ಣ ಕಾರ್ಯಕ್ರಮದಿಂದ ಹಿಡುಕೊಂಡು, ದೊಡ್ಡ ಕಾರ್ಯಕ್ರಮದವರೆಗು ಹಾಡೇಳಿಸುವವರು ಹುಟ್ಟಿಕೊಂಡರು, ಎಲ್ಲೋದರು ಸೋಬಾನೆ ಸಂಕಮ್ಮನಿಲ್ಲದ ಹೊರತು, ಅವಳ ಬಾಯಿಂದ ಪದ ಬರದ ಹೊರತು, ಅದು ಕಾರ್ಯಕ್ರಮವೆ ಅಲ್ಲ, ಅದಕ್ಕೆ ಕಳೆಯೆ ಇಲ್ಲ, ಅನ್ನುವಷ್ಟರ ಮಟ್ಟಿಗೆ ಅವಳನ್ನ ಪರಿಗಣಿಸುತ್ತಿರುವಾಗ, ಅವಳ ಸಮಾಧಾನದ ಮತ್ತು ಅವಳ ಬೇಡಿಕೆಯ ಕಾಲಘಟ್ಟ ಸವೆಯತೊಡಗಿತು. ಅದರ ಜೊತೇಲಿ ಅವಳ ಸಾಮರ್ಥ್ಯವನ್ನ ಸವೆಸುವಂತ ಸಂಕಷ್ಟಗಳು ಸಂಕವ್ವನಿಗೆ ಎದುರಾಗಿ ಬದುಕು ಬಿಕ್ಕಳಿಸುವಂತಾಯಿತು.

ಅವಳ ದೊಡ್ಡ ಮಗನಿಗೆ ಮೇಷ್ಟ್ರು ಕೆಲಸವು ಸಿಕ್ಕಿತು. ಆಮೇಲೆ ಅವನು ಯಾವುದೊ ಬಲ್ಲಿದರ ಮನೆಯ ಹೆಣ್ಣನ್ನ ಅವನೆ ಒಪ್ಪಿಕೊಂಡು ಮದುವೆಯಾದ. ಹುಡುಗಿ ಈ ಹಳ್ಳಿಗೆ ಸಟ್ಟಾಗಲ್ಲ ಕಣವ್ವ. ನಾವೆಲ್ಲಿರಬೇಕೊ ಅಲ್ಲೆ ಇರಬೇಕೆನುತ ಹೇಳಲು ಶುರುವಾದವನು ಅವನು ಕೆಲಸ ಮಾಡುತ್ತಿದ್ದ ಸಿಟೀಲಿ ಮನೆ ಮಾಡಿಕೊಂಡು ಮಡದೀನ ಕರೆದುಕೊಂಡು ಹೋದ. ಇನ್ನು ಎರಡನೆ ಮಗನಿಗೆ ಒಳ್ಳೆ ಕೈ ತೊಳೆದು ಮುಟ್ಟುವ ಗೊಂಬೆಯಂತ ಹುಡುಗಿ ಬಡವರ ಮನೆಯವಳು ಅನುತ ಆನಂದ್‌ವಾಗಿ ಮುಂದೆ ನಿಂತು, ಮದುವೆ ಮಾಡಿದ ಸಂಕಮ್ಮನ ಮೇಲೆಯೆ ಸೊಸೆಯಾದವಳು ಮೂರ್ ಮೂರು ದಿನಕ್ಕು ಮುನಿಸಿಕೊಳ್ಳಂಗಾದ್ಲು. ಇನ್ನೇನು ಮತ್ತೆ ಬೊಂಬಲಾಟ್‌ದೋರ್ ಹೇಳ್‌ದಂಗೆ ಬರಿ ಪದಾ ಹೇಳಕಂಡು ಬದುಕಿರೋಳ ಹತ್ರ ಯಂಗಿರ್ತಾಳೆ? ನನ್ನೆಣುತಿ ಮರ್ಯಾದಸ್ತರ ಮನೆ ಹುಡುಗಿ, ನಿನ್ನಂತವಳತ್ರ ಅದೆಂಗಿರ್ ಬೇಕು? ಅನುತ ಸಂಕವ್ವ ಎತ್ತಿಆಡಿಸಿದ ಸ್ವಂತ ಮಗನೆ, ಹೆಂಡತಿಯ ಪರವಾಗಿ ನಿಂತು. ಕಾಲು ಕೆರೆಕೊಂಡು ಜಗಳಕ್ಕೆ ಬರಂಗಾದ. ಈಗೀಗ ಸಂಕವ್ವನುಣ್ಣುವ ಒಂದು ತುತ್ತು ಹಿಟ್ಟಿಗು, ನೆಮ್ಮದಿಯಿಲ್ಲದಂಗಾದ್ರು ಬಿಡದೆ ಅವಳೆದೆಯ ಪದಗಳಿಗೆಲ್ಲ, ಗಂಟಲೊಳಗಿನ ಕಂಠ ಜೋಡಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಸಲವಾದ್ರು, ಅಂದ್ರೆ ಮಗ ಸೊಸೆ ಇಲ್ಲದಿದ್ದಾಗ, ಸಣ್ಣ ಸ್ವರದೊಳಗೆ ಹಾಡೀರೆ ಸರಿಯೊ? ದೊಡ್ಡ ಸ್ವರದೊಳಗೆ ಹಾಡೀರೆ ಸರಿಯೊ? ಎಂದು ಅವಳ ಸ್ವರ ಮತ್ತು ಅವಳ ಹಾಡುಗಳನ್ನು, ಪರೀಕ್ಷಿಸಿಕೊಳ್ಳುತ್ತಿರುವ ಗಳಿಗೆಯೊಗೆ, ಇತ್ತಿತ್ತಲಾಗಿ ಊರಿನಲ್ಲಿ, ಜನರೆಂಬೋರು ಇವಳನ್ನ ವಿಚಿತ್ರವಾಗಿ ನೋಡಲು ತಯಾರಾದ್ರು. ಅದು ಯಾಕೆಂದು ಸಂಕಮ್ಮನ ಮನಸ್ಸಿಗೆ ಬಂದಾಗಲೆಲ್ಲ ಕೈಯ್ಯಿಲ್ಲದ, ಕಾಲಿಲ್ಲದ, ಜೀವ ಬಾವವಿಲ್ಲ, ಅನ್ನುವಂತ ನಿರ್ಜೀವಿಗಳಾದ ಮೊಬೈಲು, ಟೀ ವಿ, ಕ್ಯಾಸೆಟ್ಟು, ಅನ್ನುವಂತ ತಬ್ಬಲಿ ನನಮಗನಾವು ಹುಟ್ಟಿಕೊಂಡು, ಊರೊಳಗೆ ಸಂಕಮ್ಮ ಮತ್ತು ಅವಳ ಹಾಡುಗಳು ದಿನ ಕಳೆದಂತೆ ದಿಕ್ಕು ತಪ್ಪುವಂತಾದುವು.

ಹೆಣ್ಣುಮಕ್ಕಳು ಹೆಣ್ಣಾದ್ರೆ ರಾತ್ರಿಯುದ್ದಕ್ಕು, ಗುಡ್ಲು ಕಾಯುವ ಶಾಸ್ತ್ರಕ್ಕೆ ಟೀ ವಿ ತರಿಸಿ ಕ್ಯಾಸೆಟ್ಟಾಕಿ, ಪಿಚ್ಚೇರ್ ಹಾಕಲು ಶುರುವಚ್ಚಿಕೊಂಡರು. ಜನಾದ್ ಜನವೆಲ್ಲ ನಿದ್ದೆ ನೀರೆಂಬೋದು ಬಿಟ್ಟು, ಸಿನಿಮಾಗಳನ್ನ ನೋಡಾಕ್ ನಿಂತುಬಿಟ್ರು. ಈಗೀಗ ಸಂಕವ್ವನ್ನ ಅಷ್ಟಾಗಿ, ಪದಾ ಹೇಳಾಕೆ ಕರೆಯೊ ಜನ ಕಡಿಮೆಯಾಗ್ತಾ ಬಂದ್ರು. ಅಂಗೇನಾದ್ರು ಬಂಗಕ್ಕೆ ಕರದ್ರೆ, ಅವಳ ಹಾಡುಗಳಿಗೆ ಕುಂತಿದ್ದ ಜನ, ನೆಟ್ಟಗೆ ಕಿವಿ ಕೊಡದಂಗಾದ್ರು. ಸ್ವಂತ ಅವಳ ಮನೆದೇವ್ರು ಮಲ್ಲಮ್ಮನ ಪೂಜೆಯೊಳಗೆ, ಕಾರ್ತಿಕ್‌ಮಾಸದಲ್ಲಿ ನಡೀತಿದ್ದ ತಿಂಗಳ ಪೂಜೇಲಿ ಸಂಜೆಯೊಳಗೆ ಹಾಡೇಳಲು ಕುಂತುಕೊಳ್ಳುತ್ತಿದ್ದ ಸಂಕಮ್ಮ ಪೂಜೆ ಮುಗಿಯುವ ತನಕವು ಅವಳ ಗೆಳತಿಯರ ಜೊತೆ, ಶೃತಿ ಸೇರಸ್‌ಕೊಂಡು ಹೇಳ್‌ತಿದ್ದವಳನ್ನ, ಅಮ್ಮ ಸಾಕು ನಡೀರ್ರೆ ನಿದ್ದೆ ಬರ್‍ತೈತೆ ಅಂದ್ರು ನಿಲ್ಲಸ್ದಂಗೆ ಹೇಳಿ ಹೇಳಿ ದಣಿದು ಬಂದು ಮಲಗುತ್ತಿದ್ದವಳ ಹಾಡುಗಳನ್ನ ಈಗೀಗ ಅಷ್ಟಾಗಿ ಯಾರೂ ಕೇಳಿಸಿಕೊಳ್ಳದಾದರು, ಪೂಜಾರ್ರೆ ಬೆಳಕಿದ್ದಂಗೆ ಪೂಜೆ ಮುಗುಸ್ರಿ, ನಮ್ಮನೆವೊಳಗೆ ಟೀ ವಿ ನೋಡಾಕ್ ಹೋಗ್ ಬೇಕಂತ, ಇನ್ನು ಅಲ್ಲಿ ನೆಟ್ಟಗೆ ಮಂಗಳಾರತಿ ಆಗೆ ಇರಲ್ಲ, ಜನ ಒಬ್ಬೊಬ್ಬರೆ ಖಾಲಿ ಆಗಲು ಉನ್ನಾರ ಮಾಡ್‌ತಿದ್ರು. ಸದ್ಯ ನಾನು ಮಾಡಿಟ್ಟಿರೊ ಚರ್ಪುಗೆ (ಪ್ರಸಾ)ಜನಿಲ್ಲವಂದ್ರೆ? ನಿನ್ನಾಡ್ ಕೇಳಾಕೆ ಇನ್ಯಾರ್ ಬತ್ತಾರ್ ಸಂಕಮ್ಮ, ಇವತ್ತಿನ ಕಾಲದ ಜನಕ್ಕೆ, ಅವೆಂತವೊ ಮೊಬೈಲು. ಟೀ.ವಿ. ವಾಟ್ಸಪ್ಪು, ಗೀಟ್ಸಪ್ಪು, ಅನ್ನೊ ತಬ್ಬಲಿ ನನಮಗನಾವು ಹುಟ್ಟಿಕೊಂಡು, ನಮ್ ಹಾಡು ಭಜನೆ ಕೋಲಾಟ, ಡೊಳ್ಳು ಕುಣಿತವೆಂಬೋವೆಲ್ಲ, ಮೂಲೆ ಸೇರಾಕಿಡದ್ವು ಸಂಕವ್ವ ಎಂದು ಹೇಳಾಕ್ ನಿಂತಿರುವ ಪೂಜಾರಪ್ಪನಂತ, ಸಂಕಟದ ಜನಗಳ ಮದ್ಯೆ, ಅವಳ ಅಣ್ಣ ತಮ್ಮಂದಿರ ಮನೆಯ ಪೈಕಿಯವನು, ಖಾಸ ಅವಳ ಭಾವನ ಮಗನ ಮಗಳು ಹೆಣ್ಣಾದ್‌ಲೆಂದು ಆ ಹುಡುಗಿಯ ತಂದೆ, ತಗಿ ಚಿಗಮ್ಮ, ನಿನ್ನಾಡಿನ್ ಮುಂದೆ ಇನ್ಯಾವುದು ಸಮವಿಲ್ಲ, ನಮ್ಮ ರೇಕಿ ಗುಡ್ಲು ದಿನ, ನಾನು ಯಾವ್ ಟೀವಿನು ಹಾಕ್ಸ್‌ಲ್ಲ, ಗೀವಿನು ಹಾಕ್ಸಲ್ಲ, ನೀನೆ ರಾತ್ರೆಲ್ಲ ಗುಡ್ಲು ಕಾಯ್‌ಬೇಕೆಂದವನು, ಅವನ ಮಗಳು ರೇಕಾ ಎಂಬೋಳ ಗುಡ್ಲಿನ ದಿನ, ಊರಿಗೆ ಮುಂಚೆ ಟೀವಿ ತರಿಸಿ ಹಾಕ್ಸಿದ್ದ.

ಊರಾಗು ಅಷ್ಟೆ ವರ್ಷಕ್ಕೊಂದು ಉಣ್ಣಿಮೆ ಬೆಳದಿಂಗಳೊಳಗೆ ಹಬ್ಬ ಮಾಡಿ, ಕೇರಿವೊಳಗೆ ಇದ್ದ ಬದ್ದೋರೆಲ್ಲ ಸೇರ್‍ಕೊಂಡು, ವರಸೆ ವಾಯಿಯಂತವರೆಲ್ಲ ಕಲತು ಸೆಕ್ಕಂದವಾಡುತ್ತಿದ್ರು. ಸರುವೊತ್ತಾದ್ರು ಸುಮ್ಮನಿರಸದೆ, ಸಂಕಮ್ಮನನ್ನು ಹಾಡೇಳಲು ಪುಸಲಾಯಿಸುತ್ತಿದ್ದರು. ಆದರೆ ಈಗೀಗ ಇದ್ದಕ್ಕಿದ್ದಂಗೆ ದೇವಸ್ತಾನಗಳಲ್ಲು ಯಾರಾದ್ರು ಸರಿ, ನೀನೊಂದು ಪದಾ ಹೇಳು ಸಂಕಮ್ಮ ಅನ್ನುವವರಿಲ್ಲದಂಗಾದ್ರು. ಅಂಗೆ ಪೂಜೆಗೋದಾಗಲೆಲ್ಲ ಅವಳ ಮನಸ್ಸಿನಲ್ಲಿ ಸಣ್ಣ ದ್ವನಿಯೊಳಗೆ, ಆ ತಾಯಿ ಮಲ್ಲವ್ವನ ಮ್ಯಾಲಿನ, ರಕ ರಕದ ಪದಗಳನ್ನೆಲ್ಲ ಹೇಳ್‍ಕೊಂಡು, ಸಮಾದಾನ ಮಾಡ್‍ಕಳತ ಬಂದು, ತೆಪ್ಪಗೆ ಮಲಗಾಕಿಡದ ಸಂಕವ್ವನ ಪದಗಳನ್ನ ಕೇಳೋರಿಲ್ಲದಂಗಾದ್ರು. ಅವಳಿಗವಳು ನನ್ನ ಈ ಪದಗಳು ಮೂಲೆ ಸೇರಿರೊವಂಗೆ, ನಾನು ಒಂದಿನ ಮೂಲೆ ಸೇರ್ ಬಿಡುತ್ತೀನೇನೊ? ಅನುತ ಅವಳಾಗವಳು ದುಃಖಿಸುವ ದಿನದೊಳಗೆ, ಎಷ್ಟೊ ರಾತ್ರಿಗಳು ಅವಳ ಕಣ್ಣಿಗೆ ನಿದ್ದೆ ಹತ್ತದಂಗಾಯಿತು.

ಅವಳ ಚಿಂತೆಗನುಗುಣವಾಗಿ, ಮನ್ನೆ ದಿನ ಮೇಷ್ಟ್ರಾಗಿರೊ ಮಗನ ಮನಿಗೆ, ಬೇಜಾರ್ ಆದಂಗೆ, ಒಂದೆರೆಡು ದಿನ ಇದ್ದು ಬರಾನ ಅನುತ ಹೋಗಿದ್ದ ಸಂಕಮ್ಮ ಮೇಷ್ಟ್ರಿಗಿದ್ದ ಒಬ್ಬಳೆ ಮಗಳನ್ನ, ಅಂದರೆ ಅವಳ ಮೂರು ವರ್ಷದ ಮೊಮ್ಮಗಳನ್ನ ಎತ್ತಿಕೊಂಡ್ಲು. ಅಪರೂಪದ ಆ ಮೊಗುವನ್ನ ಆಗಿನ್ನ ಎತ್ತಿಕೊಂಡು, ತೊಡೆ ಮ್ಯಾಲೆ ಕೂರಿಸಿಕೊಂಡು, ಗಲ್ಲ ಮಕವನ್ನೆಲ್ಲ ಸವರುತ್ತಾ ಕುಂತಿರುವಾಗ, ಒಳಗಿದ್ದ ಸೊಸೆ ಓಡ್‍ಬಂದು, ತಗಿ ತಗಿ, ನನ್ನ ಮಗಳು ನಿನ್ನಂಗೆ ಹಾಡೇಳಾದ್ ಬ್ಯಾಡ? ಈ ಲೋಕ ಮೆಚ್ಚಂಗೆ ನಾಕಕ್ಸರ ಕಲೀಲಿ. ನೀನ್ ಕೆಟ್ಟಿರೋದು ಅಲ್ದೆ ನನ್ ಮಗಳನ್ಯಾಕ್ ಕೆಡಸ್‍ತೀಯ? ಅನುತ ಸಂಕವ್ವನ ತೊಡೆ ಮ್ಯಾಲಿದ್ದ ಮಗುವನ್ನ, ಪಟ್ಟಂತ ಕಿತ್ತುಕೊಂಡ್ಲು. ಇಂತಹ ಸಂದರ್ಭವನ್ನ ನಿರೀಕ್ಷಿಸದ ಸಂಕವ್ವನ ಕಣ್ಣುಗಳಲ್ಲಿ ಸಳನೆ ಸಳನೆ ನೀರು ಸುರಯಾಕಿಡಿಯಿತು. ಏನೊಂದು ಮಾತಾಡದೆ ಸುಮ್ಮನೆ ಕುಂತವಳ ಮುಂದೆ ಎಷ್ಟೊತ್ತಾದ್ರು ಮಗ ಬರ್‍ದಿದ್ದಕ್ಕೆ ನೋಡಾತಂಕ ನೋಡಿ ತನ್ನ ಊರಿಗೋಗಲು ಎದ್ದು ಈಚೆ ಬಂದಾಗ, ಅವಳ ಮುಂದಿದ್ದ ಪರ್‍ಪಂಚವೆಲ್ಲ ಪಕ ಪಕನೆ ನಕ್ಕಂತಾಯಿತು.

ಅವಳಿಗೆ ಸೊಸೆಗಳು ಬರಾ ಮುಂಚೆಯೆ, ಹೊರಗಡೆ ಕಾರ್ಯಕ್ರಮದಲ್ಲಿ ಸೋಬಾನೆ ಸಂಕವ್ವನೆಂಬ ಬಿರುದು ಕೊಟ್ಟು, ಕೆಲವೊಂದು ಕಾರ್ಯಕ್ರಮಗಳಲ್ಲಿ ಶಾಲು ಹೊದಿಸಿ, ಬುಟ್ಟಿತುಂಬ ಹಣ್ಣು ಕೊಟ್ಟು ಸನ್ಮಾನಿಸಿದ್ರು. ಅಂತ ಘಳಿಗೆಯೊಳಗೆಲ್ಲ, ನಾನು ಹಾಡೇಳ್‌ತಿರುವ ಬದುಕು ಸಾರ್ಥಕವೇನೊ? ಅನ್ನುವಂತ ತೃಪ್ತಿ ಪಟ್ಟುಕೊಂಡಿದ್ದೋಳಿಗೆ, ಇವತ್ತು ಮನೆ ಸೊಸೆಯೆ ಅವಮಾನ ಮಾಡ್‌ಬುಟ್ಟಿದ್ದು ನೋಡಿ. ಚೇ ನಾನ್ಯಾಕಿದ್ದೀನೊ ಈ ಭೂಮಿಗೆ ಬಾರ್‍ವಾಗಿ ಅಂದುಕೊಳ್ಳುತ್ತ, ವಿಲ ವಿಲನೆ ಒದ್ದಾಡಿಕೊಂಡು ತನ್ನ ಊರು ಸೇರಿದ್ದಳು.

ಇದರ ಜೊತೆಗೆ ಊರಿನೊಳಗೆ ಅವಳು ಯಾವ ಕಾರ್ಯಕ್ರಮಕ್ಕೋದ್ರು, ಈಗೀಗ ಹಾಡೇಳಮ್ಮಣ್ಣಿ ಅನ್ನೋರಿಲ್ಲದಂಗಾದ್ರು. ಅಂಗೇನಾದ್ರು ಅವಳೆ ಮುಂದು ಬಿದ್ದು ಹಾಡೇಳಾಕೆ ಸುರುವಚ್ಚಿಕೊಂಡ್ರೆ, ಅಲ್ಲಿ ನೆಟ್ಟಗೆ ನಾಕು ಜನ ಕುಂತು ಕೇಳ್‌ದಂಗಾದ್ರು. ಯಾಕೊ ನಾನೇನಾದ್ರು ಮಹಾ ಅಪರಾದ ಮಾಡಿದ್ದೀನೇನೊ? ಅನ್ನುವಂತ ದಿಗಿಲಿಗೆ ಬೀಳ್‌ತ್ತಿದ್ದ ಸಂಕವ್ವನಿಗೆ ಇದ್ದಕ್ಕಿದ್ದಂಗೆ ಒಂದು ದಿನ ಪೋಸ್ಟಿನಿಂದ ಒಂದು ಕವರ್ ಬಂತು. ನೆಟ್ಟಗೆ ಅಕ್ಷರಗಳ ಅರಿವಿಲ್ಲದ ಸಂಕಮ್ಮನ ಮನೆ ಬಾಗ್‌ಲಿಗೆ, ಎಂದು ಯಾವತ್ತು ಕಾಣದ ಪತ್ರವೊಂದು ಬಂದಿರೋದು ಅಂದ್ರೆ. ಏನು? ಅದು ಆ ಪತ್ರ ಅಂತಿಂತವರಿಂದ ಬಂದಿರಲಿಲ್ಲ, ಅದು ನಮ್ಮ ಜಿಲ್ಲೆಯ ಡಿ.ಸಿ. ಸಾಯಾಬ್ರಿಂದ ಬಂದಿತ್ತು. ಅದರೊಳಗೆ ಗನಂದಾರಿ ಸುದ್ದಿ ಏನೈತೊ ಅನ್ನುವುದನ್ನ ಅವನ ಮನೆ ಮೊಗ್ಗುಲಿನ ಪಿ. ಯು. ಸಿ. ಓದಿದ್ದ ನಾಗನೆಂಬ ಹುಡುಗನತ್ರ, ಓದಿಸಿ ತಿಳುಕೊಂಡ್ಲು. ಆ ಹುಡುಗ ಹೇಳಿದ ಪ್ರಕಾರ ಅದು ಏನೆಂದ್ರೆ, ನಮ್ಮ ಜಿಲ್ಲೆಯೊಳಗೆ ಜಿಲ್ಲಾ ಉತ್ಸವವೆನ್ನುವುದು ಮಾಡ್‌ತ್ತಾರಂತೆ, ಅದರೊಳಗೆ ಈ ಜಿಲ್ಲೆಯ ವಿವಿದ ಕಲಾವಿದರನ್ನ ಕರೆಸಿ, ಅವರವರಿಗೆ ಗೊತ್ತಿರೊ ಕಲೆಗಳನ್ನ ಪ್ರದರ್ಶಿಸಲು ಆಹ್ವಾನಿಸಿದ್ದಾರಂತೆ. ಅದರಲ್ಲಿ ಸೊಬಾನೆ ಸಂಕವ್ವನಾದ ನೀವು ಜಾನಪದ ಹಾಡಿನಲ್ಲಿ ನುರಿತಿರುವಂತ ಕಲಾವಿದೆಯೆಂದು ನಾವು ಆರಿಸಿಕೊಂಡಿರುವುದರಿಂದ ತಾವು ತಮ್ಮ ಕಂಠಸಿರಿಯಿಂದ, ಸೋಬಾನೆ ಪದಗಳನ್ನು ಹಾಡಿ, ನಮ್ಮನ್ನು ರಂಜಿಸಿಬೇಕೆಂದು ಆ ಮೂಲಕ ತಮ್ಮ ಸೇವೆಯನ್ನು ಮಾಡುವುದರ ಜೊತೆಗೆ ಜಾನಪದ ಉತ್ಸವದಲ್ಲಿ ತಾವು ಕಡ್ಡಾಯವಾಗಿ ಭಾಗವಹಿಸಬೇಕೆಂದು, ನೀವು ನಮ್ಮಲ್ಲಿಗೆ ಬಂದುಹೋಗುವ ಪ್ರಯಾಣ ಭತ್ಯೆಯನ್ನು, ಮತ್ತು ನೀವು ಹಾಡಿರುವ ಸಂಭಾವನೆಯನ್ನು ಕೊಡಲಾಗುವುದೆಂದು ತಿಳಿಸಿ ಹೇಳಿದ. ಆ ಹುಡುಗನ ಮಾತಿಗೆ, ಅಪ್ಪಯ್ಯ ಎಷ್ಟು ದುಡ್ಡುಕೊಡತ್ತಾರಂತೊ? ಅನ್ನುತ್ತ ಸಂಕವ್ವ ಎತ್ತರದ ಧ್ವನೀಲಿ ಕೇಳಿದ್ದಳು. ಅದೇನ್ ಕೊಡುತ್ತಾರೊ ಕಣಜ್ಜಿ. ಇಲ್ಯಾಕೊ ಈ ಅಕ್ಷರವನ್ನ ತಿದ್ದುಬುಟ್ಟವರೆ, ಅವರು ಕೊಡೊ ದುಡ್ಡು ನನಗೆ ಅರ್ಥವಾಗುತ್ತಿಲ್ಲ. ಅನುತ ಆ ಹುಡುಗ ಹೇಳಿದ್ ಮೇಲೆ, ಏ ಬಿಡ್ಲ ಪಾಪ, ಅವರು ಕೊಡೊ ದುಡ್ಡು ಮುಖ್ಯ ಅಲ್ಲ? ಸದ್ಯ ಅಲ್ಲಿಗೆ ನನ್ನಂತ ಓದು ಬರಾ ಇಲ್ಲದಿರೊ, ಈ ತಿರುಬೋಕಿನ ಕರಿತಾ ಅವರಲ್ಲ. ನನಗೆ ಅದಕ್ಕಿಂತ ಬಹುಮಾನ ಬೇಕೇನಲ? ಎಂದು ಆನಂದ ಪಟ್ಟುಕೊಂಡು, ಅವಳ ಸೋಬಾನೆ ಪದಗಳಿಗೆ ಶೃತಿಯಿಕ್ಕುವ, ಇನ್ನು ಮೂರು ಜನ ಹೆಂಗಸರನ್ನ, ಊರೆಲ್ಲ ಅಲದಾಡಿ, ಹುಡುಕಿಕೊಂಡು ಬಂದಳು.

ಲೆ ಅಮ್ಮಯ್ಯ ನಾಳೆ ಬೇಸ್ತವಾರ, ನಮ್ಮ ಜಿಲ್ಲೆವೊಳಗೆ, ಏನೊ ದೊಡ್ಡ ಕಾರ್ಯಕ್ರಮ ಮಾಡ್‌ತಾರಂತೆ. ಅದ್ರೊಳಗೆ ನಾವು ಸೋಬಾನೆ ಪದಗಳನ್ನ ಹೇಳಬೇಕಂತೆ, ಅಲ್ಲಿ ಹೋಗಿ ಬರೊ ಚಾರ್ಜು ಕೊಟ್ಟು, ನಮಗು ದುಡ್ಡು ಕೊಡುತ್ತಾರಂತೆ. ಹೋಗಾನ ನಡೀರಮ್ಮಯ್ಯ, ನಾಳೆ ಬೇಸ್ತವಾರದೊತ್ತಿಗೆ ನೀರು ನಿಡಿ ಉಯ್ಯಿಕೊಂಡು, ಒಳ್ಳೆದೊಂದು ಸೀರೆ ಉಟ್ಟುಕೊಂಡು, ಹೋಗಾನ ಎಂದು ಅವಳ ವಾರಿಗೆಯವರನ್ನ ಹೊರಡಿಸಿಕೊಂಡು ಆ ಕಾರ್ಯಕ್ರಮಕ್ಕೆಂದು ಬಂದ ಸಂಕವ್ವ ಆ ಜಿಲ್ಲೆಯೊಳಗಿನ ಅದ್ದೂರಿ ಕಾರ್ಯಕ್ರಮವನ್ನ ನೋಡಿ ನಿಬ್ಬೆರಗಾಗೋದಳು.
ಕಲಾಕ್ಷೇತ್ರದಲ್ಲಿ ಜನ ಗಿಜಿ ಗಿಜಿಯೆನ್ನುತ್ತಿದ್ದರು, ಅಲ್ಲೊಂದು ಧ್ವಜ ಹಾರಿಸಿ, ಮೆರವಣಿಗೆಗೆಂದು ಶುರುವಾದ ಕಾರ್ಯಕ್ರಮದಲ್ಲಿ, ಗಣ್ಯಾತಿ ಗಣ್ಯರೆಲ್ಲ ಭಾಗವಹಿಸಿ, ಮೆರಣಿಗೆ ಹೊರಡುವಾಗ, ಪದಾ ಹೇಳಲು ಮಂದಾದರು ಸಂಕವ್ವ, ಮತ್ತು ಅವಳ ಸ್ನೇಹಿತೆಯರು… ಬೆಳಿಗ್ಗೆ ಹನ್ನೊಂದಕ್ಕೆ ಶುರುವಚ್ಚಿಕೊಂಡವರು, ಮದ್ಯಾನ ಎರಡು ಗಂಟೆಯವರಗು ಒಂದೇ ಸಮನೆ. ಆ ಸುಡು ಸುಡು ಬಿಸಿಲಲ್ಲಿ, ನೀರಿಗೆ ದಾಹವಾದರು ನಿಲ್ಲಸದಂಗೆ ಪದಗಳನ್ನ ಹೇಳಿದ್ದು ಹೇಳಿದ್ದೆ. ಮೈಯ್ಯಿ ಕಯ್ಯಿ ಕಾಲೆನ್ನುವವು ಸೋಲುತ್ತಿದ್ದರೂ ತಮ್ಮ ಗಂಟಲಿನ ದ್ವನಿಯನ್ನ ಸೋಲಿಸಿಕೊಳ್ಳದೆ… ಹಾಡಿ ಹಾಡಿ ದಣಿಯುತ್ತ, ಅಪಾರವಾದ ಸೇವೆಯನ್ನ ಮುಗಿಸಿ, ಎಲ್ಲರು ಕಲಾಕ್ಷೇತ್ರದೊಳಕ್ಕೋಗಿ ಕೂತರು. ಸಂಕವ್ವನ ಸಂಗಡಿಗರು ಕೂಡ, ಅಲ್ಲೆ ಒಂದು ಮೊಗ್ಗಲಿನ ಚೇರುಗಳಲ್ಲಿ ಕುಳಿತುಕೊಂಡರು. ಕಾರ್ಯಕ್ರಮ ಶರುವಾಗಿ. ಭಾಷಣ ಗೀಷಣಗಳು ಮುಗಿದ ಮೇಲೆ, ಯಾವುದೊ ಒಂದು ಪಿಚ್ಚೆರಿನ ಹುಡುಗಿ, ಅರ್ದಂಬರ್ದ ಅಂಗಿತೊಟ್ಟುಕೊಂಡು, ಒಂದೈದು ನಿಮಿಷ ಕುಣಿದು ಕೂತವಳಿಗೆ, ನೀರು ಕುಡಿಸೀರು, ಶ್ಯಾಲು ಹೊದಿಸೀರು, ಹಣ್ಣು ಪಣ್ಣು ಕೊಟ್ಟು ಸನ್ಮಾನ ಮಾಡಿ, ಹತ್ತು ಸಾವಿರ ರೂಗಳ ಚೆಕ್ಕು ಕೊಟ್ಟು ಕಳಿಸೀರು, ಕಾರ್ಯಕ್ರಮವಾದ ಎಷ್ಟೊವೊತ್ತಿಗೆ, ಅಲ್ಲೆ ಕುಂತಿದ್ದ ಸೋಬಾನೆ ಸಂಕವ್ವನ, ಸಂಗಡಿಗರನ್ನ ಯಾರು ಗಮನಿಸದಾದರು. ನೋಡಾತಂಕ ನೋಡಿ, ಸಂಕಮ್ಮನ ಜತೇಲಿ ಬಂದಿದ್ದ ಕಮಲಮ್ಮ ಎನ್ನುವ ಹುಡುಗಿ, ಸಾ ನಾವು ನಮ್ಮೂರಿಗೆ ಹೋಗ್ ಬೇಕ್‌ಸಾ. ರಾತ್ರಿ ಮೇಲೆ ಬಸ್ಸಿಲ್ಲ ಎಂದಾಗ, ಆ ಕಾರ್ಯಕ್ರಮದ ಕಾರ್ಯಕರ್ತರಲ್ಲಿ ಒಬ್ಬನಾದ ಯಾರೊ ಆವಯ್ಯ, ಈ ನಾಲ್ಕು ಜನರಿಂದ ಸೇರಿ, ಬರಿ ಎರಡು ಸಾವಿರದ ಚೆಕ್ಕನ್ನ ಕೊಟ್ಟು ಕಳಿಸಿದ.

ಊರಿಗೆ ಬರೊತನಕ ಸುಮ್ಮನಿದ್ದ ಸಂಕವ್ವನ ಸ್ನೇಹಿತೆಯರು, ಅಲ್ಲಮ್ಮಣ್ಣಿ ಮನೇಲಿ ಮಾಡೊ ಬದುಕು, ಬಾಳು ಬಿಟ್ಟು, ನಾವು ನೋಡದಂತ ಬಹುಮಾನ ಕೊಡುತ್ತಾರೆ ಅನ್ನಂಗೆ, ನಿನ್ನ ಮಾತು ನೆಚ್ಚಿಕೊಂಡ್‌ಬಂದು, ಗಂಟ್ಲು ನೋಯೊತಂಕ ಹಾಡೇಳೀರು ಬರಿ ಎರಡು ಸಾವಿರ ಕೊಟ್ಟವರೆ, ನೋಡು ಆ ಹುಡುಗಿ ನೆಟ್ಟಗೆ ಅಂಗಿ ತೊಟ್ಟುಕೊಂಡಿರಲಿಲ್ಲ, ಸಾಲು ಮೂಲಿಲ್ಲದಂಗೆ, ಒಂದೇ ಒಂದು ಗಳಿಗೆ ಕುಣಿಲಿಲ್ಲ, ಅಂತವಳಿಗೆ ಹತ್ತು ಸಾವರ ದುಡ್ಡು ಕೊಟ್ಟವರೆ, ನಾವು ನಾಲ್ಕುಜನ ಬೆಳಿಗ್ಗೆಯಿಂದ ಮದ್ಯಾನದ ತನಕ ನರ ಹರಿಯಂಗೆ ಬಡುಕೊಂಡ್ರು ಬರೆ ಎರಡು ಸಾವರ ಕೊಟ್ಟವರೆ, ಎಂದು ಕೆಂಡಾಮಂಡಲವಾದರು. ಇನ್ನು ಮ್ಯಾಲೆ ಇಂತ ಸೋಬಾನೆ ಗೀಬಾನೆಗೆಲ್ಲ ನಮ್ಮುನ್ನ ಕರೀಬ್ಯಾಡ ಕಣಮ್ಮಣ್ಣಿ? ನಿನಗಂದರೆ ಯಾರು ಹೇಳೋರು ಕೇಳೋರಿಲ್ಲ. ನಮಗೆ ಹೇಳೋವರು ಅವರೆ, ಕೆರಿನಾಗೆ ಹೊಡಿಯವರು ಅವರೆ, ಎಂದು ಅವಳ ಜತೇಲಿ ಬಂದಿದ್ದ ಇನ್ನು ಮೂವರು ಹೆಂಗಸರು ಸಂಕವ್ವನನ್ನ ಸರಿಯಾಗೆ ಬೈದು ಬಿಟ್ಟರು. ಸಂಕವ್ವ ತುಟಿ ಎರಡು ಮಾಡದಂಗೆ, ಅವಳ ಮನೆಯ ಬಾಗಿಲು ಬಿಚ್ಚಿ, ಒಳಗೋದವಳಿಗೆ ಅವಳೊಬ್ಬಳಿಗೆ ಹತ್ತು ಸಾವರ… ನಾವು ನಾಲ್ಲೋರಿಂದ ಬರಿ ಎರಡು ಸಾವರ, ಪರ್‍ಪಂಚದಲ್ಲಿ ಓದಿರೋರಿಂದ್ಲೆ ಇಂತಾ ಪರ್‍ಪಾಟಾಗತೈತ? ಅಂಬೊ ಗುಮಾನಿಯಲ್ಲಿ, ಲೋಕದ ಯಾವ ಮುಖವಾಡವು ಗೊತ್ತಿಲ್ಲದ ಸಂಕವ್ವನಿಗೆ, ಆವತ್ತು ರಾತ್ರಿ ನೆಟ್ಟಗೆ ಹಿಟ್ಟು ಸೇರಲಿಲ್ಲ, ನಿದ್ದೇನು ಬರಲಿಲ್ಲ….