ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ. ರಸ್ತೆಯಲ್ಲಿ ನಡೆಯುತ್ತಿರುವವನು ಅರಿಕೇಸರಿ (ವಿಕ್ರಮಾರ್ಜುನ) ಆ ದಿನದ ಅವನ ಭಗ್ನ ಮನಸ್ಥಿತಿಯು ಇಲ್ಲಿ ಬಹುಮುಖ್ಯ ಅಂಶವಾಗುತ್ತದೆ. ಬೆಳಗ್ಗೆ ಸುಭದ್ರೆಯನ್ನು ನೋಡಿ ಮೋಹಗೊಂಡು, ಅವಳನ್ನು ಕೂಡಲಾರದ ವಿಪ್ರಲಂಭದ ಸ್ಥಿತಿ.
ಆರ್. ದಿಲೀಪ್ ಕುಮಾರ್ ಅಂಕಣ

 

ಪ್ರತಿಯೊಂದು ಸಮಾಜವೂ ಹಲವಾರು ಮೌಲ್ಯಗಳನ್ನು ಹೊಂದಿರುತ್ತದೆ. ಆ ಮೌಲ್ಯಗಳನ್ನೇ ಲಕ್ಷಣವಾಗಿ ಹೊಂದಿ ಸಾಮಾಜಿಕ ಕಟ್ಟು ಕಟ್ಟಳೆಯನ್ನು ನಿರ್ಮಾಣ ಮಾಡಿರುತ್ತದೆ. ಪ್ರತಿಯೊಂದು ಕಾಲಘಟ್ಟದ ಲಲಿತಕಲೆಗಳೂ ಅವುಗಳನ್ನು ಒಪ್ಪಿ ಮುನ್ನಡೆಸುವ ಅಥವಾ ಅದಕ್ಕೆ ಅದು ಸರಿ ಇಲ್ಲವೆಂದಾದರೆ ಪರ್ಯಾಯವಾಗಿ ಮತ್ತೊಂದನ್ನು ಕಟ್ಟುವ ಕ್ರಿಯಾತ್ಮಕ ಚಲನೆಗೆ ಹಾದಿ ಮಾಡುತ್ತಲೇ ಇರುತ್ತದೆ.

ಈ ಚಲನೆಯು ಆಂತರಿಕವಾಗಿದ್ದು ಕೆಲವೊಮ್ಮೆ ನೇರವಾಗಿ ಅಥವಾ ಪರೋಕ್ಷವಾಗಿ ಇದನ್ನು ಮೀರುವ ಬಯಕೆ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಅದೊಂದು ಒತ್ತಡದ ಸ್ಥಿತಿ. ಅಪೇಕ್ಷಿತ ಮೌಲ್ಯವನ್ನು ಮುಟ್ಟುವುದಕ್ಕಾಗಿಯೇ ಕೆಲವೊಮ್ಮೆ ತಹತಹಿಕೆಗಳು ಉಂಟಾದರೂ ಸಮಾಜ, ಅದರಲ್ಲಿನ ಕಟ್ಟು ಕಟ್ಟಳೆಗಳು ಮೀರಬೇಕು ಅನ್ನುವವನಿಗೆ ತಡೆಯಾಗಿ ನಿಂತಿರುತ್ತದೆ. ವಾಸ್ತವದಲ್ಲಿ ಮೀರಲಾರದವನು ಕನಸಿನಲ್ಲಿ ಮೀರುತ್ತಾನೆ ಎನ್ನುವ ಸಿಗ್ಮಂಡ್ ಫ್ರಾಯ್ಡ್ ನ ಮಾತು ಇಲ್ಲಿ ಮನನೀಯ. ಈ ಮೀರುವಿಕೆಯ ಹಂಬಲ ಬಲಿತು ಉತ್ಕಟವಾದಾಗ ಅವನೇನಾದರೂ ಕಲಾವಿದನಾಗಿದ್ದರೆ ತನ್ನಿಷ್ಟದ ಕಲಾ ಮಾಧ್ಯಮದಲ್ಲಿ ಕಲಾತ್ಮಕವಾಗಿ, ಸಾಂಕೇತಿಕವಾಗಿ, ಪ್ರತಿಮಾತ್ಮಕವಾಗಿ, ಧ್ವನಿಪೂರ್ಣವಾಗಿ ಅದನ್ನು ಅಭಿವ್ಯಕ್ತಿಸಿ ಮೀರಿ ಬಿಡುತ್ತಾನೆ. ಈ ಮೀರುವಿಕೆಯ ಆಶಯಗಳಂತೂ ಅವನ ಅಭಿವ್ಯಕ್ತಿಯಿಂದ ಬಂದೇ ಬರುತ್ತದೆ.

ಪಂಪನ ಕಾವ್ಯಗಳೂ ಈ ಮೀರುವಿಕೆಯನ್ನು ಬಯಸುವ ಅಂಶಗಳನ್ನೇ ಆಸೆಯಾಗಿ ಹೊಂದಿ ರಚನೆಯಾಗಿದೆ. ಜಿ ಹೆಚ್ ನಾಯಕರು ಹೇಳುವಂತೆ “ಕ್ರಮ ವಿಪರ್ಯ” ದ ಮೂಲ ಆಶಯವೇ ಆಗಿದೆ. ಸಂಸಾರದಲ್ಲಿದ್ದೂ ಅದನ್ನು ಮೀರಿಕೊಳ್ಳುವ, ಸಾಮಾಜಿಕವಾಗಿದ್ದೂ ಅದನ್ನು ಮೀರಿಕೊಳ್ಳುವ, ರಾಜನ ಆಸ್ಥಾನದಲ್ಲಿದ್ದೂ ಅದನ್ನು ಮೀರಿಕೊಳ್ಳುವ ಹೀಗೆ ಪ್ರತಿಯೊಂದರಲ್ಲೂ ಒಂದು ಚಲನೆ ಇದೆ. ಈ ಚಲನೆಯ ಆಶಯಗಳೇ ಅವನನ್ನು ಉನ್ನತವಾಗಿಟ್ಟು ನೋಡಲು ಇಂದಿಗೂ ಹಾದಿಯಾಗಿರುವುದು.

ಪ್ರತಿಯೊಂದು ಸಮಾಜಕ್ಕೂ ತನ್ನದೇ ಮೌಲ್ಯಗಳಿರುತ್ತದೆಂದು ಹೇಳಿದ ಮೇಲೆ ಅದನ್ನೇ ಪ್ರಬಲವಾಗಿಟ್ಟುಕೊಂಡು ಎಲ್ಲರೂ ಆ ಕಡೆಯೇ ಹೆಜ್ಜೆ ಹಾಕಿದರೆ ಅದನ್ನೊಂದು ಯುಗಧರ್ಮದ ಪ್ರಧಾನ ಲಕ್ಷಣವೆಂದು ಕರೆಯುತ್ತಾರೆ. ಕೆಲವೊಮ್ಮೆ ಯಾವುದಾದರೂ ಒಂದು ಮೌಲ್ಯ ಮುನ್ನೆಲೆಯಲ್ಲಿದ್ದು ಉಳಿದವುಗಳು ಅದಕ್ಕೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತದೆ. ವೀರತ್ವ ಅನ್ನುವ ಮೌಲ್ಯ (ಅದರಲ್ಲಿಯೂ ದಾನ ವೀರ, ಧರ್ಮ ವೀರ, ದಯಾವೀರ ಅನ್ನುವ ಅಂಶಗಳನ್ನು ಮರೆಯುವ ಹಾಗಿಲ್ಲ) ಮುನ್ನೆಲೆಯಲ್ಲಿ ಬಂದಾಗ ಉಳಿದ ಮೌಲ್ಯಗಳಾದ ತ್ಯಾಗ, ವೈರಾಗ್ಯ, ಅಧ್ಯಾತ್ಮ ಇವುಗಳೆಲ್ಲಾ ಅದಕ್ಕೆ ಸಹಾಯಕವಾಗಿ ನಿಲ್ಲುತ್ತದೆ.

ಸಮಾಜದಲ್ಲಿನ ಕೆಲವರು ಕ್ರಿಯಾತ್ಮಕವಾಗಿ, ರಚನಾತ್ಮಕವಾಗಿ ಅದನ್ನು ಮೀರುವಲ್ಲಿ ಮುನ್ನೆಲೆಯಲ್ಲಿ ನಿಂತಿರುತ್ತಾರೆ. ಸಮಾಜ ಶಾಸ್ತ್ರಜ್ಞರು ಸಮಾಜವನ್ನು ಎರಡು ಬಗೆಯಾಗಿ ವಿಂಗಡಿಸುತ್ತಾರೆ: ಒಂದು ಸ್ಥಿರ ಸಮಾಜ, ಮತ್ತೊಂದು ಸ್ಥಿತ್ಯಂತರ ಸಮಾಜ. ಸ್ಥಿರ ಸಮಾಜದ ಲಕ್ಷಣಗಳನ್ನು ನೋಡುವುದಾದರೆ (ಹೊಸತು ಹೊಸತು – ಡಾ. ಎಂ ಚಿದಾನಂದಮೂರ್ತಿ)

೧. ಸಂಪ್ರದಾಯಗಳಿಗೆ ಬೆಲೆಯುಂಟು, ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿರುವ ವ್ಯವಸ್ಥೆಯೇ ಒಳ್ಳೆಯದೆಂಬುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಸಾಮಾಜಿಕ ಪ್ರಯೋಗಗಳಿಗೆ, ಹೊಸ ವಿಧಾನಗಳಿಗೆ ಇಲ್ಲಿ ಬೆಲೆ ಇಲ್ಲ.

೨. ಯಶಸ್ವಿಯಾಗುವ ವ್ಯಕ್ತಿಗಳು ಶೀಲವಂತರಾಗಿರುತ್ತಾರೆ.

೩. ಕಾನೂನಿನ ಬಗೆಗೆ ಗೌರವವುಂಟು, ನೀತಿಯ ನಡತೆಯ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಆಚರಿಸುತ್ತಾರೆ.

೪. ಜನರಿಗೆ ಒಳ್ಳೆಯ ಸಭ್ಯ ಗುಣಗಳಿರುತ್ತವೆ.

೫. ಸಾಮಾಜಿಕ ಸಂಸ್ಥೆಗಳ ಬಗೆಗೆ ವ್ಯಾಮೋಹವಿರುತ್ತದೆ. ವಿಧಿ ಕ್ರಮಗಳು ಪ್ರಧಾನವಾಗಿರುತ್ತದೆ.

೬. ಪರಿಸ್ಥಿತಿಯು ಕಲೆ, ಧರ್ಮ, ವರ್ಗ ವ್ಯವಸ್ಥೆಗಳಿಗೆ ಬಹಳ ಅನುಕೂಲಕರವಾಗಿರುತ್ತದೆ. ಒಟ್ಟಿನಲ್ಲಿ ಸ್ಥಿರ ಸಮಾಜವು ಒಂದು ಸಮತೋಲನದ, ಸಾಮರಸ್ಯದ ಸಮಾಜವಾಗಿರುತ್ತದೆ.

(ಪಂಪ)

ಈ ಲಕ್ಷಣಗಳು ಎಲ್ಲಾ ಸಮಾಜಕ್ಕೂ ಅನ್ವಯವಾಗದೇ ಇದ್ದರೂ ಪಂಪನ ಕಾಲದ ಸಮಾಜಕ್ಕೆ ಹತ್ತಿರ ಬರುತ್ತದೆ. ಇದಕ್ಕೆ ಅವನ ಕಾವ್ಯಗಳಲ್ಲೆ ಸಾಕ್ಷಿಗಳು ಸಹ ದೊರೆಯುತ್ತದೆ.

ಈ ಹಿಂದಿನ ಅಂಕಣ ಬರಹ “ಅಲರ್ಗಣ್ಣೊಳ್ ಸ್ಮರನಿರ್ದನಕ್ಕುಂ” ಅನ್ನುವ ಲೇಖನದ ಮುಂದುವರೆದ ಭಾಗವಿದು. ನಾಲ್ಕನೆಯ ಆಶ್ವಾಸ ಸಂದರ್ಭದ ಮುಂದುವರೆದ ಒಂದು ಪದ್ಯವನ್ನು ಗಮನಿಸಿ…

ವಚನ : ಒಂದೆಡೆಯೊಳ್, ಮನಸಿಜನ ನಡಪಿದ ಜಂಗಮ ಲತೆಗಳಂತೆ, ಮನೋಜನ ಕಾಪಿನ ಕಲ್ಪಲತೆಗಳಂತೆ, ಮನೋಭವನೆಂಬ ದೀವಗಾಱನ ಪುಲ್ಲೆಗಳಂತೆ, ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ, ಮಣಿಮಯ ಮತ್ತ ವಾರಣಂಗಳೊಳುಂ, ಅಳವಿಗಱಿದ ವಿಳಾಸಂಗಳೊಳುಂ, ತಂಡತಂಡದೆ ನೆರೆದಿರ್ದ ಪೆಂಡವಾಸದ ಒಳ್ವೆಂಡಿರಂ ಕಂಡು

ಮನಸಿಜನ್ ಈಕೆಗಂಡು ರತಿಯಂ ಬಿಸುಟಂ
ಹರನ್ ಈಕೆಗಂಡು ನೂತನ ಗಿರಿಜಾತೆಯಂ ತೊಱೆದನ್
ಆ ನರಕಾಂತಕನ್ ಈಕೆಗಂಡು
ತೊಟ್ಟನೆ ನಿಜಲಕ್ಷ್ಮಿಯಂ ಮಱೆದನ್
ಎಂಬ ನೆಗಳ್ತೆಯನ್ ಅಪ್ಪುಕೆಯ್ದ ಯವ್ವನದ
ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ (೪.೮೫)

ವಿಕ್ರಮಾರ್ಜುನನು ಸುಭದ್ರೆಯನ್ನು ಕಂಡು ಮೋಹಗೊಂಡು, ಅವಳನ್ನು ಕೂಡಲಾರದೆ ತಾಳಲಾರದ ವಿರಹದಿಂದ ವೇಶ್ಯಾವಾಟಿಕೆಯ ರಸ್ತೆಯಲ್ಲಿ ನಡೆವಾಗ ರಸ್ತೆಯ ಇಕ್ಕೆಲದಲ್ಲೂ ನಿಂತು ನೋಡುತ್ತಿದ್ದ ಹೆಂಗಳೆಯರ ಬಗೆಗೆ ಆಡುವ ಮಾತಿದು. ಈ ಭಾಗದಲ್ಲಿಯೂ ಹಲವು ಪ್ರಕಾರದ ಸ್ತ್ರೀಯರು ಬರುತ್ತಾರೆ. ಪೆಂಡವಾಸದವರು, ಮಾಲೆ ಮಾಡುವವರು, ವೇಶ್ಯೆಯರು, ವೇಶ್ಯೆಯಂತೆ ನಟಿಸುವವರು, ಹೆಂಡದಲ್ಲಿಯೇ ಹುಟ್ಟಿದಂತೆ ಕಾಣುವ ಉನ್ಮತ್ತರಾದವರು.

ಪ್ರತಿಯೊಂದು ಸಮಾಜಕ್ಕೂ ತನ್ನದೇ ಮೌಲ್ಯಗಳಿರುತ್ತದೆಂದು ಹೇಳಿದ ಮೇಲೆ ಅದನ್ನೇ ಪ್ರಬಲವಾಗಿಟ್ಟುಕೊಂಡು ಎಲ್ಲರೂ ಆ ಕಡೆಯೇ ಹೆಜ್ಜೆ ಹಾಕಿದರೆ ಅದನ್ನೊಂದು ಯುಗಧರ್ಮದ ಪ್ರಧಾನ ಲಕ್ಷಣವೆಂದು ಕರೆಯುತ್ತಾರೆ. ಕೆಲವೊಮ್ಮೆ ಯಾವುದಾದರೂ ಒಂದು ಮೌಲ್ಯ ಮುನ್ನೆಲೆಯಲ್ಲಿದ್ದು ಉಳಿದವುಗಳು ಅದಕ್ಕೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತದೆ.

ಅವರೆಲ್ಲರಲ್ಲಿಯೂ ಒಂದೊಂದು ವಿಭಿನ್ನತೆ ಇದ್ದೇ ಇದೆ. ಮೊದಲೇ ಅವನು ವಚನದಲ್ಲಿ ಸ್ಪಷ್ಟ ಪಡಿಸುವಂತೆ ಅವರೆಲ್ಲರೂ ಮನೋಜನ ಕಾಪಿನ ಸೈನಿಕರು, ದೀಪಗಾರ ಮೃಗಗಳಂತೆ ಇರುವವರು, ಪೆಂಡವಾಸದ ಒಳ್ವೆಂಡಿರ್ (ಒಳ್ಳೆಯ ಹೆಂಗಸರು) ಮನೆಯ ಮುಂದಿನ ಪಚ್ಚೆಯ ಜಗುಲಿಯ (ಈ ಒಂದು ವಿಶೇಷಣವನ್ನು ಗಮನಿಸಿ – ಪಚ್ಚೆಯ ಜಗುಲಿ – ಸಾಮಾನ್ಯವಾಗಿ ಹಳ್ಳಿಗಳ ಕಡೆ ಕಟ್ಟಿದ ಮನೆಯ ಮುಂದೆ, ಜಗಲಿಗಳ ಮೇಲೆ ಹಸುವಿನ ಹಸಿಯಾದ ಸಗಣಿಯನ್ನು ನೀರಿನಲ್ಲಿ ಕಲಿಸಿ ಸಾರಿಸುವ ಕ್ರಮವೊಂದಿದೆ. ಇದು ಸೊಳ್ಳೆಗಳು ಬರದಂತೆ ತಡೆಯುತ್ತದೆ. ಹಸಿರು ಬಣ್ಣದ ಸಗಣಿಯನ್ನು ಅಲ್ಲಿ ಮನೆಯ ಮುಂದೆ ಸಾರಿಸಿರಬಹುದೇ?) ಮೇಲೆ ತಂಡ ತಂಡದಲ್ಲಿ ಕೂತು ನೋಡುತ್ತಿದ್ದವರು. ಹೀಗೆ ನೋಡುತ್ತಿದ್ದವರಲ್ಲಿನ ಒಬ್ಬಳನ್ನು ನೋಡಿ ಆಡಿದ ಮಾತುಗಳು ಚಂಪಕಮಾಲೆಯಲ್ಲಿ ಬಂದಿದೆ.

ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ. ರಸ್ತೆಯಲ್ಲಿ ನಡೆಯುತ್ತಿರುವವನು ಅರಿಕೇಸರಿ (ವಿಕ್ರಮಾರ್ಜುನ ) ಆ ದಿನದ ಅವನ ಭಗ್ನ ಮನಸ್ಥಿತಿಯು ಇಲ್ಲಿ ಬಹುಮುಖ್ಯ ಅಂಶವಾಗುತ್ತದೆ. ಬೆಳಗ್ಗೆ ಸುಭದ್ರೆಯನ್ನು ನೋಡಿ ಮೋಹಗೊಂಡು, ಅವಳನ್ನು ಕೂಡಲಾರದ ವಿಪ್ರಲಂಭದ ಸ್ಥಿತಿ. ಹೀಗೆ ನಡೆವಾಗ ಕಾಣುವುದು ಸಂಭೋಗಕ್ಕೆ ತಯಾರಾದ ಸ್ತ್ರೀಯರ ಚಿತ್ರ. ಇದೇ ಮೊದಲ ವಿರುದ್ಧ ಚಿತ್ರ. ನೋಡುವವನ ಒಳಗಿನ ಭಾವಕ್ಕೆ ವಿರುದ್ಧವಾದ ಮತ್ತೊಂದು ಇಲ್ಲಿದೆ. ಬೆಳಗ್ಗೆಯಿಂದ ರಾತ್ರಿಗೆ ಆದ ಬದಲಾವಣೆ, ಅವನ ಮನಸ್ಸಿನ ಭಾವ ಇಲ್ಲಿ ಮುಖ್ಯವಾಗುತ್ತಾ ಸಾಗುತ್ತದೆ.

ಬಹು ಮುಖ್ಯವಾಗಿ ಪಠ್ಯಭಾಗಕ್ಕೇ ಬರುವುದಾದರೆ. ಮೂರು ಪುರಾಣ ಪ್ರತೀಕಗಳ ಜೋಡಿಯನ್ನು ಪಂಪ ಕಾವ್ಯ ಭಾಗದಲ್ಲಿ ಬಳಸಿದ್ದಾನೆ. ಮನಸಿಜ – ರತಿ, ಹರ – ಗರಿಜಾತೆ ಮತ್ತು ನರಕಾಂತಕ ( ವಿಷ್ಣು ) – ಲಕ್ಷ್ಮಿ ಆದರೆ ಒಂದು ಬಹುಮುಖ್ಯ ಹೆಸರನ್ನು ಕೈ ಬಿಟ್ಟಿದ್ದಾನೆ. ಬ್ರಹ್ಮನ ಹೆಸರನ್ನು ಇಲ್ಲಿ ಹೇಳಿಲ್ಲ. ಅದಕ್ಕೆ ಕಾರಣ ಸ್ವಂತ ಮಗಳನ್ನೇ ಮದುವೆ ಆದ ಅನ್ನುವುದೂ ಇರಬಹುದು! “ಸರಸ್ವತೀ ಮಣಿಹಾರ” ನಾದ ಪಂಪ ಈ ಜೊಡಿಯನ್ನು ಮರೆತಿರಬೇಕಾದರೆ ಬಹುಮುಖ್ಯ ಕಾರಣ ಇದೇ ಇರಬೇಕು. ಇಲ್ಲಿನ ಪ್ರತಿಯೊಂದು ಜೋಡಿಯೂ ದೂರವಾಗುವ ಚಿತ್ರದ ರಚನೆಯಾಗಿದೆ. ಅದಕ್ಕೊಂದು ಕಾರಣವೂ ಇದೆ. ಈ ರಸ್ತೆಯಲ್ಲಿನ ಪೆಂಡವಾಸದ ಸ್ತ್ರೀಯನ್ನು ಕಂಡು ಆ ಮೇಲಿನ ಜೋಡಿಗಳು ಒಂದಕ್ಕೊಂದು ದೂರವಾಗುವ ಚಿತ್ರವಿದೆ.

ಇಲ್ಲೊಂದು ಕಥೆಯನ್ನು ನೆನಪಿಸುವ ಚಿತ್ರದ ಹಾಗೆ ಪುರಾಣದ ಪಾತ್ರಗಳು ಒಂದಕ್ಕೊಂದು ಹೆಣೆದುಕೊಂಡಿದೆ. ಬ್ರಹ್ಮನಿಂದ ಜಗತ್ತನೇ ಮೋಹಿಸುವ ಶಕ್ತಿಯುತ ವರವನ್ನು ಪಡೆದ ಮನಸಿಜನು ಅದನ್ನು ಪ್ರಯೋಗ ಮಾಡಿದ್ದು ಬ್ರಹ್ಮನ ಮೇಲೆ. ಅದರ ಪ್ರಭಾವ ಶಿವನ ಗಣಂಗಳ ಮೇಲೂ ಆಗಿದ್ದು. ಆ ವರದ ಕಾಟ ತಾಳಲಾರದೆ ಮತ್ತೆ ಮದನನಿಗೆ ಶಿವನ ಹಣೆಗಣ್ಣಿನಿಂದ ನಾಶವಾಗುವ ಶಾಪ ಕೊಟ್ಟಿದ್ದು ಇದೇ ಬ್ರಹ್ಮನೇ. ಈ ಕಥೆಯಲ್ಲಿನ ಒಂದು ಆಲೋಚನೆಯಿಲ್ಲದ ಮಾತಾಡಿದ ಬ್ರಹ್ಮನ ಕ್ರಮವೂ ಅವನ ಹೆಸರಿಲ್ಲದೆ ಇರುವುದಕ್ಕೆ ಕಾರಣ ಆಗಿರಬಹುದು. ಜೋಡಿಗಳಲ್ಲಿನ ಬೇರೆಯಾಗುವುದಕ್ಕೆ ಒಂದು ಕಾರಣವಂತೂ ಇದೆ ಅನ್ನುವುದಕ್ಕೆ ‘ಈಕೆಗಂಡು’ ಅನ್ನುವುದನ್ನು ಮೂರು ಜೋಡಿಗಳು ಬೇರೆಯಾಗುವುದಕ್ಕೂ ವೃತ್ತದ ಪ್ರತೀ ಸಾಲಿನಲ್ಲಿ ಪಂಪ ಬಳಸಿದ್ದಾನೆ. ಇದು ಅವಳ ಕಂಡ ಪ್ರಭಾವಕ್ಕೆ ಸಾಕ್ಷಿ. ಆ ಜೋಡಿಗಳಲ್ಲಿ ಮನ್ಮಥ ತನ್ನ ಪ್ರಿಯತಮೆಯಾದ ರತಿಯನ್ನು “ಬಿಸುಟಂ”, ಹರನು ತನ್ನ ಹೆಂಡತಿಯಾದ ಪಾರ್ವತಿಯನ್ನು (ಅರ್ಧಾಂಗಿ) “ತೊಱೆದನ್”, ನರಕಾಂತಕನು ತನ್ನ ಹೆಂಡತಿಯಾದ ಲಕ್ಷ್ಮಿಯನ್ನು “ಮಱೆದನ್” ಎಂದು ಮೂರು ಬೇರೆ ಬೇರೆ ಕ್ರಿಯಾಪದಗಳನ್ನು ಬಳಸಿದ್ದಾನೆ. ಪ್ರತಿಯೊಂದು ಬೇರೆ ಬೇರೆ ಸ್ಥತಿಯನ್ನು ತಿಳಿಸುವುದೇ ಆಗಿದೆ. ಮೊದಲು ಬೇಡವೆನಿಸಿದಾಗ ‘ಬಿಸುಡು’ವುದು, ಆ ನಂತರ ಅದರ ಮೇಲೆ ಉಳಿದ ಅಲ್ಪ ಸ್ವಲ್ಪದ ಮಮಕಾರವನ್ನೂ ‘ತೊರೆಯು’ವುದು.

ಹೀಗೆ ಮಮಕಾರ ಹೋದ ನಂತರ ಕೊನೆಗೆ ಅದಾಗದೇ ‘ಮರೆತು’ ಹೋಗುತ್ತದೆ. ಒಂದಕ್ಕೊಂದು ಸಂಬಂಧ ಕಲ್ಪಸಿ ಇಟ್ಟ ಮೂರು ಬೇರೆ ಬೇರೆ ಕ್ರಿಯಾಪದಗಳು ಇಲ್ಲಿ ಒಂದೇ ಕಡೆ ಒಂದೊಂದೇ ಮೆಟ್ಟಿಲುಗಳಾಗಿ ಮಾಡಿಕೊಂಡು ಉದ್ದೇಶದ ಕಡೆಗೆ ಏರಿದೆ. ಮನಸಿಜನ್, ಹರನ್, ನರಕಾಂತಕನ್ ಇದರಲ್ಲಿ ಪ್ರತಿಯೊಂದೂ ಏಕವಚನ ಪ್ರಯೋಗವೇ. ಕೊನೆಯಲ್ಲಿನ ನರಕಾಂತಕನ್ ಅನ್ನುವುದು ಹಿಂದೆ ನಡೆದ ಒಂದಿಡೀ ಕಥೆಯನ್ನು ನೆನಪಿಗೆ ತರುತ್ತದೆ. ಭೂದೇವಿಯು ನರಕಾಸುರನಿಗಾಗಿ ವಿಷ್ಣುವನ್ನು ಬೇಡಿ ಕೊಟ್ಟ ವೈಷ್ಣವಾಸ್ತ್ರ, ಅದರ ಹುಚ್ಚಿನಿಂದ ಆದ ಕಷ್ಟ ಕೋಟಲೆಗಳು, ಅದಕ್ಕೆ ಕಾರಣನಾದ ನರಕಾಸುರ ವಧೆ, ಅವನು ಅಪಹರಿಸಿದ್ದ ದೇವತೆಗಳ ಕುಂಡಲಗಳನ್ನು ಬಿಡಿಸಿದ್ದು, ಇಂದ್ರನ ಛತ್ರವನ್ನೂ ಬಿಳ್ಗೊಡೆಯನ್ನು ಮರಳಿ ಕೊಟ್ಟಿದ್ದೂ ಕೊನೆಗೆ ಅವನೊಂದಿಗಿನ ಯುದ್ಧ ಮುಗಿದು ಪಾರಿಜಾತವನ್ನು ಕೃಷ್ಣ ತಂದಿದ್ದು! ಇಲ್ಲಿನ ಎಲ್ಲಾ ಕ್ರಿಯೆಗಳನ್ನೂ ಮಾಡಿ ಗೆದ್ದವನು “ಈಕೆಗಂಡು” ಮರುಳಾಗಿದ್ದು ವಿಶೇಷ ಅನಿಸದೆ ಇರದು. ಅವಳು ಇವರಾರನ್ನೂ ನೋಡಿಲ್ಲ ಇವರು ಅವಳನ್ನು ನೋಡಿದ್ದಕ್ಕೆ ಇಷ್ಟಾಗಿದೆ! ಅಲ್ಲಿನ ಬೆಡಗಿನ, ವಿಳಾಸದ ಪೆಂಡಿರ ಕಂಡು ತಮ್ಮೆಲ್ಲಾ ನೆಗಳ್ತೆಯನ್ನೂ ಮರೆತು ಕೊನೆಗೆ ಬಂದ ಉದ್ಘಾರ “ಪೆಂಡಿರೇ ಪೆಂಡಿರಲ್ಲಿಯಾ” ಅನ್ನುವುದು ಕೊಡುವ ಭಾವ ಬಹಳ ಮುಖ್ಯವಾಗುತ್ತದೆ.

ಪುರಾಣ ಪ್ರತೀಕಗಳನ್ನು ಬಳಸಿ ಪಂಪ ಕಟ್ಟಿಕೊಡುವ ಅವರ ಸೊಬಗು, ಅದರೊಂದಿಗೆ ನಡೆವ ಮಹತ್ತರವಾದ ಯುದ್ಧಗಳು, ಅದಕ್ಕೆ ಕಾರಣವಾದ ಕೆಲವು ವರ ಶಾಪಗಳು, ಕೊನೆಗೆ ಶಾಂತ ಸ್ಥತಿಗೆ ಅಥವಾ ಮೊದಲ ಸ್ಥಿತಿಗೆ ತರಲು ಆಗುವ ನಾಶ ಇವೆಲ್ಲವೂ ಮುಖ್ಯವಾಗುತ್ತಲೇ ಅವೆಲ್ಲವನ್ನೂ ಮೀರಿಸುವ ಚೆಲುವು ಇವರಲ್ಲಿದೆ ಅನ್ನುವುದನ್ನು ಧ್ವನಿಸುವಲ್ಲಿ ಇಲ್ಲಿನ ಭಾಗ ಯಶಸ್ವಿಯಾಗಿದೆ. ಈ ಸಂದರ್ಭದ ನಂತರೂ ಒಂದು ಯುದ್ಧಕ್ಕೆ ಮುಂದಾಗುವ ಚಿತ್ರಣ ಬಂದು ಕೃಷ್ಣನ ಕಾರಣದಿಂದ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಇದೊಂದು ಶೃಂಗಾರದ ವರ್ಣನೆ. ಅದರಲ್ಲಿಯೂ ಆ ಒಬ್ಬಳನ್ನು ಕಂಡು ಶರಣಾಗತಿಯಾದ ಅವಳ ರೂಪ ವರ್ಣನೆ. ಇದಕ್ಕೆ ಬಳಸಿರುವುದೆಲ್ಲವೂ ಪುರಾಣ ಪ್ರತೀಕಗಳು, ಬಳಸುತ್ತಿರುವವನು ಅರ್ಜುನ.

ಮೊದಲೇ ಹೇಳಿದಂತೆ ಇಲ್ಲೊಂದು ಸದ್ಯದ ಕಟ್ಟು ಕಟ್ಟಳೆಯನ್ನು ಮೀರಿಕೊಳ್ಳುವ ಕ್ರಮದ ಕಡೆಗೆ ಮನಸ್ಸಿದೆ. ಕವಿ ಕಾವ್ಯದ ಶೃಂಗಾರದ ಭಾಗವನ್ನೇ ಬರೆಯುತ್ತಿದ್ದರೂ ಅದರಲ್ಲಿ ಅವನ ಪ್ರಜ್ಞೆ ಮಾಡಿದ ಕೆಲಸ ಮಹತ್ತರವಾದದ್ದು. ಅವನು ಇರುವುದನ್ನು ಕೆಡವಿ ಅಷ್ಟೇ ಸಶಕ್ತವಾಗಿ ಕಟ್ಟಿಕೊಡುವ ಕ್ರಮ ಬಹುಮುಖ್ಯವಾದದ್ದು. ಒಂದಿಡೀ ಸಂಪ್ರದಾಯದ ಪಲ್ಲಟವಾಗಿದೆ ಇಲ್ಲಿ. ಯಾವುದನ್ನು ದೈವ ಅನ್ನುವ ಮನಸ್ಥಿತಿಯಲ್ಲಿ ಆ ಕಾಲದ ಸಮಾಜ ಒಪ್ಪಿತವಾಗಿತ್ತೋ ಅವುಗಳನ್ನು ಅದೂ ಒಬ್ಬಳೇ ಒಬ್ಬ ಪೆಂಡವಾಸದ ಸ್ತ್ರೀಯ ಮುಂದೆ ಶರಣಾಗಿಸಿರುವುದು ಇಲ್ಲಿದೆ. ಸಾಮಾಜಿಕವಾಗಿಯಲ್ಲದಿದ್ದರೂ ಕಾವ್ಯದಲ್ಲಿ ಕಲಾತ್ಮಕವಾಗಿ ತನ್ನ ಬಿಡುಗಡೆಯನ್ನು ಮಾಡಿಕೊಳ್ಳಲು ಒಂದು ಬದಲಾವಣೆಯ ಚಿತ್ರವನ್ನು ಬಹುಸೂಕ್ಷ್ಮವಾಗಿ ಪಂಪ ಇಟ್ಟಿದ್ದಾನೆ.

ಕಾನೂನು ಕಟ್ಟಳೆಯ ಕ್ರಮದ ಪಲ್ಲಟಗೊಳಿಸಿ ಮತ್ತೊಂದು ಕ್ರಮದ ರಚನೆ ಇಲ್ಲಿದೆ. ಆ ಕಾಲದ ಒಪ್ಪಿತ ಸಾಮಾಜಿಕ ಸಂಸ್ಥೆಯಾದ ದೇವಾಲಯ ಮತ್ತದರ ಕೇಂದ್ರವಾದ ದೈವ ಇವುಗಳನ್ನು ಪ್ರಶ್ನಿಸಿ ಇವಳ ಮುಂದೆ ಶರಣಾಗತಿ ಮಾಡಿಸಿದ್ದಾನೆ. ಮತ್ತೆ ಇಷ್ಟೆಲ್ಲಾ ಮೀರುತಿರುವವನು ಆ ಕಾಲದ ಒಬ್ಬ ರಾಜ ಅನ್ನುವುದು ಬಹಳ ಮುಖ್ಯವಾದ ಅಂಶ. ಸದ್ಯದಲ್ಲಿದ್ದೂ ಅದನ್ನು ಬಹಳ ಪ್ರತಿಮಾತ್ಮಕವಾಗಿ ಮೀರಿಕೊಳ್ಳುತ್ತಲೇ ಸೂಕ್ಷ್ಮತೆಯ ಕಡೆಗೆ ಓದುಗರನ್ನು ಸೆಳೆಯುವ ಪಂಪನ ಕಾವ್ಯ ರಚನಾ ಶಕ್ತಿ ಮಹತ್ತರವಾದದ್ದು.