ತುಂಬಾ ಹತ್ತಿರಕ್ಕೆ ಹೋಗಿ ನಿಂತು ಕತ್ತೆತ್ತಿ ನೋಡಿ `ನಮಸ್ತೆ ಸರ್’ ಅಂದೆ. ಮುಗುಳ್ನಕ್ಕರು. ನಂತರ ಅವರು ತಮ್ಮೆದುರಿಗೆ ರಸ್ತೆ ಪಕ್ಕದಲ್ಲಿದ್ದ ಚರಂಡಿಯ ಬಳಿ ಬಂದು ನಿಂತು `ಇಲ್ಲೊಬ್ರು ಎಳ್ನೀರು ಕೊಚ್ತಾ ಇದ್ರಲ್ಲ, ಅವ್ರು ಇವತ್ತು ಬಂದಿಲ್ವೇನಪ್ಪ’ ಅಂತ ಆ ವ್ಯಕ್ತಿಯ ಹೆಸರಿಡಿದು ಕೇಳಿದರು. ಅವರು ಕೇಳಿದ ವ್ಯಕ್ತಿಯ ಹೆಸರು ನನಗೀಗ ಮರೆತುಹೋಗಿದೆ. ಹೌದು ನಾನೂ ನೋಡಿದ್ದೆ. ಅಲ್ಲೊಬ್ಬರು ಹಳ್ಳಿಯಿಂದ ಎಳನೀರು ತಂದು ಮಾರಾಟ ಮಾಡುತ್ತಿದ್ದರು. ಕಳೆದೆರಡು ದಿನದಿಂದ ಯಾಕೋ ಅವರು ಬಂದಿರಲಿಲ್ಲ. ಅವರು ಕೊಚ್ಚಿ ಬಿಸಾಕಿದ್ದ ಎಳನೀರಿನ ಬುರುಡೆ ಹಾಗೂ ಕೊಚ್ಚಿದ್ದ ಮುಂಗಣ್ಣಿನ ಸಿಪ್ಪೆಗಳು ಬಿಸಿಲಿಗೆ ಹಾರೊಡೆದುಕೊಂಡಿದ್ದವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನಾರನೆಯ ಕಂತು
ಅದು1982ನೇ ಇಸವಿ. ಜನವರಿ ತಿಂಗಳು. ನಾನಾಗ ಚಿಕ್ಕನಾಯಕನಹಳ್ಳಿಯ ಕಾಲೇಜಿನಲ್ಲಿ ಪಿ.ಯೂ.ಸಿ ಮೊದಲನೇ ವರ್ಷದಲ್ಲಿದ್ದೆ. ಕಾಲೇಜು ಡಿ.ವಿ.ಪಿ. ಹೈಸ್ಕೂಲಿನ ಕಟ್ಟಡದಲ್ಲಿತ್ತು. ಆಗ ಬೆಳಗಿನ ಎಂಟಕ್ಕೆಲ್ಲಾ ಕಾಲೇಜು ಪ್ರಾಂಭವಾಗಿಬಿಡುತ್ತಿತ್ತು. ಹನ್ನೊಂದುವರೆಗೆಲ್ಲಾ ಮುಗಿಯುತ್ತಿತ್ತು. ಆ ನಂತರ ಹೈಸ್ಕೂಲ್ ಸರದಿ. ನನ್ನ ಊರಿನ ಗೇಟಿನಿಂದ ಏಳೂ ಮುಕ್ಕಾಲಿಗೆ ಎಸ್.ಎಂ.ಎಸ್ ಅನ್ನುವ ಖಾಸಗಿ ಬಸ್ ಬರುತ್ತಿತ್ತು. ಬಸ್ ಚಾರ್ಜ್ ಎಂಟಾಣೆ. ಸ್ಟೂಡೆಂಟ್ಸ್ಗೆ ನಾಲ್ಕಾಣೆ. ಅದರಲ್ಲೂ ಚೌಕಾಸಿ. ಕೆಲವೊಮ್ಮೆ ಹದಿನೈದು ಪೈಸೆಗೆಲ್ಲಾ ಹೋಗುತ್ತಿದ್ದೆವು. ಆ ಬಸ್ ತಪ್ಪಿದರೆ ಮತ್ತೊಂದು ಬಸ್ ಹಿಡಿದು ಹೋಗುವ ಹೊತ್ತಿಗೆ ಎರಡು ತರಗತಿಗಳು ತಪ್ಪಿ ಹೋಗುತ್ತಿದ್ದವು. ಹಂಗಾಗಿ ಕೆಲವೊಮ್ಮೆ ಎಂಟು ಕಿ.ಮೀ.ದೂರವಿರುವ ಚಿಕ್ಕನಾಯಕನಹಳ್ಳಿಗೆ ಸೈಕಲ್ಲಿಯೇ ಹೋಗಬೇಕಾಗುತ್ತಿತ್ತು.
ಅಚ್ಯುತ ಮೆನನ್ ಮತ್ತು ವೈಕಂ ಮಹಮ್ಮದ್ ಬಷೀರ್
ಇದು ಮೂರು ವರ್ಷಗಳ ಅಂತರದಲ್ಲಿ ಪಿ.ಯೂ. ಕಾಲೇಜಿಗೆ ನನ್ನ ಎರಡನೇ ಸಲದ ದಾಖಲಾತಿಯಾಗಿತ್ತು. ಇಲ್ಲಿಗೆ ಸೇರುವ ಮುನ್ನ ತಿಪಟೂರಿನ ಕಲ್ಪತರು ಕಾಲೇಜಿಗೆ ಸೇರಿದ್ದೆ. ಆಗ ಇಷ್ಟವಿಲ್ಲದಿದ್ದರೂ ಅಣ್ಣನ ಒತ್ತಾಯಕ್ಕೆ ಮಣಿದು ಪಿ.ಸಿ.ಎಂ.ಬಿ. ತಗಂಡಿದ್ದೆ. ಅಣ್ಣ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಬಿ.ಎಸ್ಸಿ.ಅಗ್ರಿಕಲ್ಚರ್ ಓದಬೇಕೆಂಬುದು ಅವರ ಆಸೆಯಾಗಿತ್ತು. ತಗಂಡ ಮೊದಲ ದಿನದಿಂದಲೂ ಎಷ್ಟೇ ಕೇಳಿಸಿಕೊಂಡರೂ ಜಪ್ಪಯ್ಯ ಅಂದರೂ ವಿಜ್ಞಾನದ ವಿಷಯಗಳು ಸುತರಾಂ ತಲೆಗೆ ಹೋಗುತ್ತಿರಲಿಲ್ಲ. ಜತೆಗೆ ಕಲಾ ವಿಭಾಗದ ಗೆಳೆಯರೆಲ್ಲಾ ಮಧ್ಯಾಹ್ನಕ್ಕೇ ಕ್ಲಾಸು ಮುಗಿಸಿಕೊಂಡು ಜುಮ್ ಅಂತ ಮನೆಗೆ ಹೋಗುತ್ತಿದ್ದ ದೃಶ್ಯ ನನಗೆ ಸಂಕಟ ತರುತ್ತಿತ್ತು. ಅವೆರೆಲ್ಲಾ ಮನೆಯ ಕಡೆ ಹೋಗುತ್ತಿದ್ದರೆ ನಮಗೆ ಮಧ್ಯಾಹ್ನದಿಂದ ಸಾಯಂಕಾಲದವರೆಗೂ ಹಾಳಾದ ಪ್ರಾಕ್ಟಿಕಲ್ಸ್ ಇರುತ್ತಿದ್ದವು. ಅಲ್ಲಿನ ಪ್ರಯೋಗಗಳು, ಕಪ್ಪೆ ಕುಯ್ಯುವ ಕ್ರಿಯೆ ಮುಂತಾದವುಗಳು ದಿನದಿಂದ ದಿನಕ್ಕೆ ಸುಸ್ತು ಮಾಡತೊಡಗಿದ್ದವು. ಇತ್ತ ಕ್ಲಾಸಿನಲ್ಲೂ ಏನೂ ಅರ್ಥವಾಗುತ್ತಿಲ್ಲ ಅತ್ತ ಈ ಪ್ರಾಕ್ಟಿಕಲ್ಸ್ ಯಮಯಾತನೆಯ ಸಂಗತಿಗಳಾಗಿದ್ದವು. ತರಗತಿಗಳಿಗೆ ಹೋದರೆ ತಾನೆ ಈ ಎಲ್ಲಾ ಫಜೀತಿಗಳು ಅಂತ ಒಂದು ತೀರ್ಮಾನಕ್ಕೆ ಬಂದಿದ್ದೆ. ಊರಿಂದ ಮಾಮೂಲಿ ಬರುತ್ತಿದ್ದೆ. ಆದರೆ ಕಾಲೇಜಿನತ್ತ ಹೋಗುತ್ತಿರಲಿಲ್ಲ. ಇರುತ್ತಿದ್ದ ಆಟೋ ಈಟೋ ಪುಡಿ ಕಾಸಿನಲ್ಲಿ ಯಾವುದಾದರೊಂದು ಸಿನೇಮಾ ನೋಡಿಕೊಂಡೋ ಅಲ್ಲಿ ಇಲ್ಲಿ ಸುತ್ತಾಡಿಕೊಂಡೋ ಕಾಲ ಹಾಕುತ್ತಿದ್ದೆ. ಸಾಯಂಕಾಲ ಮತ್ತೆ ಮಾಮೂಲಿ ಮನೆಗೆ ಹೋಗುತ್ತಿದ್ದೆ. ಈ ಆಟ ಬಲು ದಿನ ನಡೆಯಲಿಲ್ಲ. ಅದೊಂದು ದಿನ ನನ್ನ ಸಹಪಾಠಿಯೊಬ್ಬ ನನ್ನ ಈ ಇಡೀ ಕಳ್ಳಾಟವನ್ನು ಅಯ್ಯನ ಕಿವಿಗೆ ಹಾಕಿದ್ದ. ಅಯ್ಯ ಹೇಳುವಷ್ಟು ಬುದ್ಧಿ ಹೇಳಿತ್ತು. ಹೆಂಗೂ ಇಷ್ಟು ದಿನ ಕಳೆದೈತೆ ಹೆಂಗಾರ ಮಾಡಿ ಪರೀಕ್ಷೆ ಬರೆದುಬಿಡು ಮುಂದಿನ ವರ್ಷಕ್ಕೆ ನೋಡಿಕೊಳ್ಳೋಣ ಅಂತ ಹುರಿದುಂಬಿಸಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಪರೀಕ್ಷೆ ಕೇವಲ ಒಂದೂವರೆ ತಿಂಗಳು ಮಾತ್ರ ಉಳಿದಿತ್ತು. ಹೆಂಗಾರಾ ಏನಾರಾ ಬರೆದುಬಿಡೋಣ ಅಂದರೆ ಕಾಲೇಜಿನಲ್ಲಿ ಕನಿಷ್ಠ ಹಾಜರಾತಿಯೂ ಇರಲಿಲ್ಲ. ಒಂದು ಪಕ್ಷ ಅಯ್ಯ ಅವತ್ತು ಚೆನ್ನಾಗಿ ಬೈದೋ ಹೊಡೆದೋ ಮಾಡಿದ್ದರೆ ಅಲ್ಲಿಗೆ ಲೆಕ್ಕ ಚುಕ್ತ ಆಯ್ತು ಅಂತ ಸುಮ್ಮನಾಗಿಬಿಡುತ್ತಿದ್ದೆ. ಅವರಿಗೆ ನನ್ನ ಮೇಲಿಟ್ಟಿದ್ದ ಅಂಥ ನಂಬಿಕೆ ನನಗೆ ನುಂಗಲಾರದ ತುತ್ತಾಗಿಹೋಗಿತ್ತು. ಜತೆಗೆ ಅಯ್ಯನಿಗೆ ಈ ವಿಚಾರದಲ್ಲಿ ಮನಸ್ಸಿಗೆ ನೋವು ಮಾಡುವುದೂ ನನ್ನಿಂದ ಆಗದ ಮಾತಾಗಿತ್ತು. ಹಂಗಾಗಿ ಅದೊಂದು ದಿನ ಹೇಳದೇ ಕೇಳದೆ ಪುಡಿಗಾಸನ್ನು ಇಟ್ಟುಕೊಂಡು ಬೆಂಗಳೂರು ಬಸ್ ಹತ್ತಿಬಿಟ್ಟಿದ್ದೆ.
ನಾನು ಆವರೆವಿಗೂ ಬೆಂಗಳೂರು ಇರಲಿ ತುಮಕೂರನ್ನೂ ನೋಡಿರಲಿಲ್ಲ. ಯಾರ ಪರಿಚಯವೂ ಇಲ್ಲದ ಜೇಬು ತುಂಬಾ ಕಾಸು ಇಲ್ಲದ ಬೆಂಗಳೂರಿನ ಮೊದಲ ಎರಡು ದಿನಗಳನ್ನು ನೆನೆದರೆ ಈಗಲೂ ಮೈ ನಡುಗುತ್ತೆ. ಜೇಬಲ್ಲಿ ಬಿಡಿಗಾಸಿಲ್ಲ. ಹೊಟ್ಟೆ ಹಸುಕಂಡು ಇರುವುದು ರೂಢಿಯಿಲ್ಲ. ಇದು ಆಗುವ ಮಾತಲ್ಲ ತಿರುಗಿ ಊರಿಗೆ ಹೋಗಿಬಿಡಬೇಕು ಅನಿಸುತ್ತಿತ್ತು. ಹೋಗೋದಾದರೂ ಹೆಂಗೆ ನಯಾಪೈಸೆಯಿಲ್ಲದೆ! ಮೂರನೆಯ ದಿನ. ಅತ್ತೂ ಅತ್ತೂ ಸಾಕಾಗಿ ಮೆಜೆಸ್ಟಿಕ್ನ ರೈಲ್ವೇ ಸ್ಟೇಷನ್ನಿನ ಮುಂಭಾಗದ ಗಿಡವೊಂದರ ಅಡಿಯಲ್ಲಿ ಕೂತಿದ್ದೆ. ಮಟಮಟ ಮಧ್ಯಾಹ್ನ. ಬಿಸಿಲು ನೋಡಿದರೆ ಸಾಕು ತಲೆ ಸುತ್ತಿ ಸುತ್ತಿ ಬರುತ್ತಿತ್ತು. ಹಿಂದೆಯೇ ಸಂಕಟ ಮತ್ತು ಅಳು ಜತೆ ಜತೆಯಾಗಿ ಮುಗಿಬೀಳುತ್ತಿದ್ದವು. ಗದ್ದಕ್ಕೆ ಕೈಕೊಟ್ಟುಕೊಂಡು ಕೂತಿದ್ದೆ. ಆಗ ಎರಡೂ ಕೈಗಳಲ್ಲಿ ಬಟ್ಟೆಯ ಎರಡು ದೊಡ್ಡ ಬ್ಯಾಗುಗಳನ್ನು ಹಿಡುಕಂಡು ನನ್ನೆದುರು ದಡೂತಿ ವ್ಯಕ್ತಿಯೊಬ್ಬರು ನಿಂತರು. ಕತ್ತೆತ್ತಿ ಅವರನ್ನೇ ದಿಟ್ಟಿಸಿದೆ. ಅರೆ ತೋಳಿನ ಬಿಳೀ ಖಾದಿಯ ಅಂಗಿ. ಅಂಥದೇ ಲುಂಗಿ. ಕಣ್ಣುಗಳಿಗೆ ದಪ್ಪ ಗಾಜಿನ ಕನ್ನಡಕ. ಎಲ್ಲೂ ಎಂದೂ ಕಂಡ ಮುಖವಂತೂ ಅಲ್ಲ. ಮುಂದೆ ನಾನು ಮಹಾರಾಜ ಕಾಲೇಜಿನಲ್ಲಿ ಓದುವಾಗ ಎಸ್. ಅನಂತನಾರಾಯಣ ಅನ್ನವ ಇಂಗ್ಲಿಷ್ ಮೇಷ್ಟ್ರಿದ್ದರು. ಇವರೂ ಥೇಟ್ ಅವರಂಗೇ ಇದ್ದರು. `ಏನಪ್ಪ ಈ ಒಂದು ಬ್ಯಾಗ್ನ ಅಲ್ಲಿ ಬಸ್ಸ್ಟ್ಯಾಂಡ್ವರ್ಗೂ ತಂದು ಕೊಡ್ತೀಯ?’ ಅಂತ ಕೇಳಿದರು. ಹೂಂಗುಟ್ಟಿದೆ. ಮೇಲೇಳಲು ನೋಡಿದೆ. ಹಸಿವಿಗೆ ತಲೆ ಸುತ್ತು ಬಂದು ಕೂತೆ. ಅವರಿಗೆ ಏನು ಅರ್ಥವಾಯ್ತೋ ಏನೋ, ಅದೆಂಗೆ ಅವರು ನನ್ನನ್ನು ನಂಬಿದರೋ, ಆ ಎರಡು ಬ್ಯಾಗುಗಳನ್ನು ನನ್ನ ಬಳಿಯೇ ಇಟ್ಟು `ಈಗ ಬಂದುಬಿಡ್ತೀನಿ’ ಅಂತ ಹೋದರು. ಹತ್ತು ನಿಮಿಷಕ್ಕೆಲ್ಲಾ ಬಂದರು. ಅವರ ಕೈಯ್ಯಲ್ಲಿ ಕಾಗದದ ಪೊಟ್ಟಣವೊಂದಿತ್ತು. ನನ್ನ ಪಕ್ಕ ಕೂತರು. ಪೊಟ್ಟಣವನ್ನು ಬಿಚ್ಚಿ ಕೈಗಿಟ್ಟು `ಮೊದ್ಲು ತಿನ್ನು’ ಅಂದರು. ಕಣ್ಣುಗಳು ತುಂಬಿ ಬಂದವು. ಕಣ್ಣ ಹನಿಗಳು ನಾನು ತಿನ್ನುತ್ತಿದ್ದ ಇಡ್ಲಿ, ಒಡೆಗಳ ಮೇಲೆಲ್ಲಾ ಬೀಳುತ್ತಿದ್ದವು. ಎಲ್ಲ ವಿಚಾರಿಸಿದರು. ಬಾ ನನ್ನ ಜತೆ ಅಂದರು. ಸೀದಾ ಫ್ರೇಜರ್ ಟೌನ್ನಲ್ಲಿದ್ದ ಹೊಟೇಲೊಂದನ್ನು ಹೊಕ್ಕರು. ಅವರನ್ನು ಕಾಣುತ್ತಲೇ ಹೊಟೇಲಿನ ಯಜಮಾನ ಮತ್ತು ಕೆಲಸಗಾರರು ಅವರತ್ತ ಬಂದರು. ಅವರು ಆ ಹೊಟೇಲಿನಲ್ಲಿ ಅಡುಗೆ ಭಟ್ಟರಾಗಿದ್ದರು. ಮುಂದಿನ ದಿನಗಳು ನನ್ನ ವಾಸ್ತವ್ಯ ಅಲ್ಲೇ ಆಯಿತು. ಅವರ ಹೆಸರು ಅಚ್ಯುತ ಮೆನನ್. ಕೇರಳದವರು. ಆಗಲೇ ಅರವತ್ತರ ಆಸುಪಾಸಿನಲ್ಲಿದ್ದರು. ವೈಕಂ ಸಮೀಪದ ಹಳ್ಳಿಯವರು. ಜತೆಗೆ ಕೇರಳದ ಮಹಾ ಲೇಖಕ ವೈಕಂ ಮಹಮ್ಮದ್ ಬಷೀರರ ನೇರ ಗೆಳೆಯರಾಗಿದ್ದವರು. ಹೊಟೇಲಿಗೆ ಬರುತ್ತಿದ್ದ ಮ್ಯಾಗಝಿನ್ಸ್ ಮತ್ತು ಪತ್ರಿಕೆಗಳನ್ನು ಬಿಡುವಾದಾಗಲೆಲ್ಲಾ ತಿರುವಿ ಹಾಕುತ್ತಿದ್ದ ನನ್ನನ್ನು ಕಂಡು ನನ್ನ ಸಾಹಿತ್ಯದ ಒಲವು ಅವರಿಗೆ ಅರ್ಥವಾಗಿತ್ತು. ಅವರು ಕೇರಳದ ಮಹಾ ಲೇಖಕರನ್ನೆಲ್ಲಾ ಓದಿಕೊಂಡಿದ್ದರು. ಅವರಿಗೆ ತುಂಬಾ ಒಳ್ಳೆಯ ಕನ್ನಡವಿತ್ತು. ಹಂಗಾಗಿ ಅದೊಂದು ದಿನ ಅವರು ರಾತ್ರಿ ಮಲಗುವ ಹೊತ್ತಲ್ಲಿ ವೈಕಂ ಬಷೀರರ ಬಗ್ಗೆ ಮಾತನಾಡಿದರು. ನಾನು ಅವರ ಬಾಯಿಂದಲೇ `ಪಾತುಮ್ಮನ ಆಡು’ `ಬಾಲ್ಯಕಾಲ ಸಖಿ’ `ಗೋಡೆಗಳು’ ಮುಂತಾದ ಕಥೆಗಳನ್ನು ಕೇಳಿದ್ದೆನು. ವೈಕಂ ಮತ್ತು ತಕಳಿ ಶಿವಶಂಕರ ಪಿಳೈಯವರ ಪುಸ್ತಕಗಳು ಅವರೊಂದಿಗಿದ್ದವು. ಆದರೆ ಅವೆಲ್ಲಾ ಮಲೆಯಾಳಂನಲ್ಲಿದ್ದವು. ಹಂಗಾಗಿಯೇ ಮುಂದೊಂದು ದಿನ ಗೆಳೆಯ ಭರತೇಶ್ `ಪೂವನ್ ಬನಾನ ಅಂಡ್ ಅದರ್ ಸ್ಟೋರೀಸ್’ ಎಂಬ ವೈಕಂ ಕಥೆಗಳ ಇಂಗ್ಲಿಷ್ ಅನುವಾದದ ಪುಸ್ತಕವನ್ನು ಕೊಡುತ್ತಲೇ ಅಲ್ಲಿನ ಕಥೆಗಳನ್ನು ಕನ್ನಡಕ್ಕೆ ತರಲು ಪ್ರಯತ್ನ ಮಾಡಿದ್ದು. ಅಚ್ಯುತ ಮೆನನ್ ಸಿಗದಿದ್ದರೆ ನನಗೆ ವೈಕಂ ಬಷೀರರ ಬಗ್ಗೆ ಅಷ್ಟೊಂದು ಮೋಹ ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ನಾನು ತಿರುಗಿ ಊರಿಗೆ ಬರುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಅಥವಾ ಬದುಕಿರುತ್ತಿದ್ದೆನೋ ಇಲ್ಲವೋ ಅದೂ ಗೊತ್ತಿಲ್ಲ. ಅಲ್ಲಿಂದ ಬಂದ ಮೇಲೆ ಮತ್ತೆ ಅವರನ್ನು ನೋಡಲಾಗಲಿಲ್ಲ. ಅವರೀಗ ಬದುಕಿರಲು ಸಾಧ್ಯವೇ ಇಲ್ಲ. ಅಂಥ ಬಲು ದೊಡ್ಡ ಮನಸ್ಸಿನ, ಅಪಾರ ಜೀವನ ಪ್ರೀತಿಯ ಆ ಜೀವ ನನ್ನ ಜೀವವಿರುವವರೆಗೂ ನನ್ನೊಳಗೆ ಜೀವಿಸುತ್ತಿರುತ್ತದೆ.
ಊರಿಗೆ ವಾಪಸ್ಸು ಬರುವ ಹೊತ್ತಿಗೆ ಆ ಪರೀಕ್ಷೆಯೂ ಮುಗಿದು ಎರಡನೆಯ ವರ್ಷವೂ ಅರ್ಧ ಕಳೆದುಹೋಗಿತ್ತು. ಅಯ್ಯ ಈ ವಿಚಾರದಲ್ಲಿ ಪೂರಾ ಮೆತ್ತಗಾಗಿ ಹೋಗಿತ್ತು. ಹಂಗಾಗಿ ಓದಲು ನಿಂಗೆ ಇಷ್ಟ ಇಲ್ಲದಿದ್ರೆ ಬೇಡ ಬಿಡು. ಮನೆ ಕಡೇನೇ ಇದ್ದು ಕೆಲಸ ಮಾಡಿಕಂಡು ಹೋಗು ಅಂತು. ಒಂದಷ್ಟು ದಿನ ವ್ಯವಸಾಯದ ಕೆಲಸ ಮಾಡುವ ಹೊತ್ತಿಗೆ ಮತ್ತೆ ಓದಬೇಕು ಅನಿಸಿತು. ಒಂದು ಸಂಜೆ ಇಬ್ಬರೂ ಜಗಲಿಯಲ್ಲಿ ಆನೆ ಮನೆ ಆಡುತ್ತಾ ಕುಳಿತಾಗ ಅಯ್ಯನಿಗೆ ಹಂಗಂದಿದ್ದೆ. ಆದರೆ ತಿಪಟೂರಿಗೆ ಮತ್ತೆ ಹೋಗಲ್ಲ. ಮತ್ತೆ ವಿಜ್ಞಾನ ಓದಲ್ಲ ಅಂದಿದ್ದೆ. ನಿಂಗೆ ಯಾವುದು ಇಷ್ಟಾನೋ ಅದನ್ನೇ ಓದು ಅಂದಿತ್ತು ಅಯ್ಯ. ಹಂಗಾಗಿ ಚಿಕ್ಕನಾಯಕನಹಳ್ಳಿಯ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಸೇರಿಕಂಡಿದ್ದೆ. ತಲ್ಲಣಿಸುತ್ತಿದ್ದ ಮನಸ್ಸು ರವಷ್ಟು ತಮಣೆಗೆ ಬಂದಿತ್ತು. ಓದು ಇಷ್ಟವಾಗತೊಡಗಿತ್ತು. ಮಧ್ಯಾಹ್ನಕ್ಕೆಲ್ಲಾ ತರಗತಿಗಳು ಮುಗಿಯುತ್ತಿದ್ದರಿಂದ ಮಧ್ಯಾಹ್ನದ ಮೇಲೆ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದೆ. ಅಯ್ಯ ನಿರಾಳವಾಗತೊಡಗಿತ್ತು. ಅವರಿಗೆ ಕೃಷಿ ಕೆಲಸದಲ್ಲಿ ಸಣ್ಣ ನೆರವೂ ಸಿಕ್ಕಂತಾಗಿತ್ತು.
ಈ ಕಾಲೇಜು ಒಂದು ರೀತಿಯಲ್ಲಿ ನನ್ನ ಆಲೋಚನಾ ಕ್ರಮವನ್ನು ಬದಲಿಸಿತ್ತು. ಇಲ್ಲಿ ಅಂಥ ಇಬ್ಬರು ಮೇಷ್ಟ್ರು ಸಿಕ್ಕಿದ್ದರು. ಒಬ್ಬರು ಆರ್. ಬಸವರಾಜ್. ಕನ್ನಡ ಮೇಷ್ಟ್ರು. ಮತ್ತೊಬ್ಬರು ಜೆ. ಅರುಣ್ದೇವ್. ರಾಜ್ಯಶಾಸ್ತ್ರ ಹೇಳಿಕೊಡುತ್ತಿದ್ದರು.
ಚಿ.ನಾ.ಹಳ್ಳಿ ನೆಹರೂ ಸರ್ಕಲ್ಲಿನಲ್ಲಿ ದೇವರಾಜ ಅರಸು
ಅವತ್ತು ಎಂದಿನಂತೆ ಕಾಲೇಜು ಹನ್ನೊಂದೂವರೆಗೆಲ್ಲಾ ಮುಗಿದಿತ್ತು. ನಾನು ಮತ್ತು ನನ್ನ ಊರಿನ ಕಡೆಯಿಂದ ಬರುತ್ತಿದ್ದ ಇಬ್ಬರು ಗೆಳೆಯರು ಚಿಕ್ಕನಾಯಕನಹಳ್ಳಿಯ ನೆಹರೂ ಸರ್ಕಲ್ನಲ್ಲಿ ಬಸ್ ಕಾಯುತ್ತಾ ನಿಂತಿದ್ದೆವು. ಅವರು ವಿಜ್ಞಾನದ ವಿಷಯ ತಗಂಡಿದ್ದರು. ಮಧ್ಯಾಹ್ನಕ್ಕೇ ಬಿಸಿಲು ತದುಕುತ್ತಿತ್ತು. ಪಕ್ಕದಲ್ಲಿ ಪುಟ್ಟ ಮೈದಾನದಲ್ಲಿ ಪುಟ್ಟ ಗಿಡವೊಂದಿತ್ತು. ಅದರ ನೆರಳಿನಾಸರೆಯಲ್ಲಿ ನಿಂತಿದ್ದೆವು. ಅರ್ಧ ಗಂಟೆ ಕಾದರೂ ಹೊಸದುರ್ಗ ರೋಡ ಟು ತಿಪಟೂರು ಗೆ ಹೋಗುವ ವಿಜಯ ಬಸ್ ಆ ಹೊತ್ತಿಗೆ ಬರಬೇಕಾಗಿತ್ತು. ಇನ್ನೂ ಬಂದಿರಲಿಲ್ಲ. ಹೊಟ್ಟೆ ಭಯಂಕರ ಚುರುಗುಟ್ಟುತ್ತಿತ್ತು. ಬಸ್ ಚಾರ್ಜಿಗೆ ನಾಲ್ಕಾಣೆ ಬಿಟ್ಟರೆ ಒಂದು ಕಾಸೂ ಹೆಚ್ಚಿಗೆ ಇರಲಿಲ್ಲ. ಆ ದಿನದ ಖರ್ಚಿನ ಬಾಬ್ತನ್ನು ನಿನ್ನೆಯೇ ಕಲಾಸು ಮಾಡಿಕಂಡಿದ್ದೆ. ಎಲ್ಲರ ಮಾರೆಗಳೂ ಯಾಪೆಯಾಗಿದ್ದವು. ಅಷ್ಟರಲ್ಲಿ ಅಂಬಾಸಿಡರ್ ಕಾರೊಂದು ನಾವು ನಿಂತಿದ್ದ ಜಾಗಕ್ಕೆ ಸರಿಯಾಗಿ ಎದುರಿನಲ್ಲಿ ನಿಂತುಕೊಂಡಿತು. ಕಾರು ಅಂದರೆ ನಮಗಾಗ ತುಂಬಾ ಅಪರೂಪದ ವಸ್ತು. ಒಂದೆರಡು ನಿಮಿಷ ಕಳೆದ ಮೇಲೆ ಕಾರಿನ ಹಿಂಬದಿಯ ಕಿಟಕಿಯನ್ನು ಇಳಿಸಿ ವ್ಯಕ್ತಿಯೊಬ್ಬರು ಏನನ್ನೋ ಕೇಳಿದರು. ನಮಗದು ಸರಿಯಾಗಿ ಕೇಳಿಸಲಿಲ್ಲ. ಮೊದಲೇ ಬಿಸಿಲಿಗೆ ಬಳಲಿ ಹಸಿದ ಹೊಟ್ಟೆಯಲ್ಲಿ ಮರದಡಿ ನಿಂತಿದ್ದ ನಾವು ಯಾರೋ ಏನೋ ಕೇಳ್ತಾರೆ ಅಂತ ಯಾರೊಬ್ಬರೂ ಆ ಕಾರಿನತ್ತ ಹೋಗಲಿಲ್ಲ. ಕಡೆಗೆ ಅವರೇ ಕಾರಿನಿಂದ ಇಳಿದರು. ನನಗೆ ಅಚ್ಚರಿಯೋ ಅಚ್ಚರಿ. ಹೆದ್ದಾಳು. ದುಂಡು ಮುಖ. ಒಪ್ಪವಾಗಿ ಕೂರಿಸಿದ್ದ ತೆಳು ತಲೆಗೂದಲು. ಕಚ್ಚೆ ಪಂಚೆ. ತುಂಬು ತೋಳಿನ ಜುಬ್ಬ. ಚಕ್ಕನೆ ಹತ್ತಿರ ಓಡಿದೆ. ನನ್ನ ಜತೆ ನಿಂತಿದ್ದವರಿಗೆ ಅವರು ಯಾರೆಂದು ಗೊತ್ತಾಗಲಿಲ್ಲ. ಹಂಗಾಗಿ ಅವರು ಅತ್ತ ಬರುವ ಮನಸ್ಸು ಮಾಡಲಿಲ್ಲ. ನೋಡುತ್ತಿರುವುದು ನಿಜವಾ ಅಂತ ನಾನು ಪಕ್ಕಾ ಮಾಡಿಕೊಳ್ಳಬೇಕಿತ್ತು. ನನ್ನ ಊಹೆ ಸರಿಯಾಗಿತ್ತು. ಹಂಗೆ ಕೆಳಗಿಳಿದು ನಿಂತು ನಮ್ಮತ್ತ ನೋಡುತ್ತಿದ್ದವರು ಮತ್ಯಾರೂ ಅಲ್ಲ. ಕರ್ನಾಟಕದ ಅತ್ಯಂತ ಪ್ರಭಾವಿ, ಸಮಾಜಮುಖಿ ಹಾಗೂ ಅನೇಕ ಜನಪರ ನಿಲುವುಗಳನ್ನು ಯಾರ ಮುಲಾಜಿಗೂ ಒಳಗಾಗದೆ ಬಡವರ, ದೀನ ದಲಿತರ ಪರವಾಗಿ ತೆಗೆದುಕೊಂಡಿದ್ದವರು. ಉಳುವವನೇ ಭೂಮಿಯ ಒಡೆಯ, ಹಾವನೂರ್ ವರದಿಗಳಿಂದ ಮೇಲ್ವರ್ಗದ ಜನರ ನಿದ್ದೆಗೆಡಿಸಿದ್ದವರು. ಹೌದು ಅವರೇ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು. ತುಂಬಾ ಹತ್ತಿರಕ್ಕೆ ಹೋಗಿ ನಿಂತು ಕತ್ತೆತ್ತಿ ನೋಡಿ `ನಮಸ್ತೆ ಸರ್’ ಅಂದೆ. ಮುಗುಳ್ನಕ್ಕರು. ನಂತರ ಅವರು ತಮ್ಮೆದುರಿಗೆ ರಸ್ತೆ ಪಕ್ಕದಲ್ಲಿದ್ದ ಚರಂಡಿಯ ಬಳಿ ಬಂದು ನಿಂತು `ಇಲ್ಲೊಬ್ರು ಎಳ್ನೀರು ಕೊಚ್ತಾ ಇದ್ರಲ್ಲ, ಅವ್ರು ಇವತ್ತು ಬಂದಿಲ್ವೇನಪ್ಪ’ ಅಂತ ಆ ವ್ಯಕ್ತಿಯ ಹೆಸರಿಡಿದು ಕೇಳಿದರು. ಅವರು ಕೇಳಿದ ವ್ಯಕ್ತಿಯ ಹೆಸರು ನನಗೀಗ ಮರೆತುಹೋಗಿದೆ. ಹೌದು ನಾನೂ ನೋಡಿದ್ದೆ. ಅಲ್ಲೊಬ್ಬರು ಹಳ್ಳಿಯಿಂದ ಎಳನೀರು ತಂದು ಮಾರಾಟ ಮಾಡುತ್ತಿದ್ದರು. ಕಳೆದೆರಡು ದಿನದಿಂದ ಯಾಕೋ ಅವರು ಬಂದಿರಲಿಲ್ಲ. ಅವರು ಕೊಚ್ಚಿ ಬಿಸಾಕಿದ್ದ ಎಳನೀರಿನ ಬುರುಡೆ ಹಾಗೂ ಕೊಚ್ಚಿದ್ದ ಮುಂಗಣ್ಣಿನ ಸಿಪ್ಪೆಗಳು ಬಿಸಿಲಿಗೆ ಹಾರೊಡೆದುಕೊಂಡಿದ್ದವು. ಅವರಿಗೆ ಅವನು ಸಿಗದಿದ್ದರಿಂದ ಕೊಂಚ ನಿರಾಸೆ ಆದಂತೆನಿಸಿತು. ಇನ್ನೇನು ಹೊರಡಬೇಕು ಮಂದಹಾಸದಿಂದ ನನ್ನತ್ತ ನೋಡಿದರು. ಅಥವಾ ಖುಷಿಗೆ ನನಗೆ ಹಂಗನ್ನಿಸಿತ್ತೋ ಗೊತ್ತಿಲ್ಲ. ಹೊರಡುವಾಗ ಮತ್ತೆ ಮುಗುಳ್ನಕ್ಕರು. ನಂತರ ಹೋಗಿ ಕಾರು ಹತ್ತಿದರು. ಆ ಮುಗುಳ್ನಗೆಗೋ ಅವರನ್ನು ಅಷ್ಟು ಹತ್ತಿರದಿಂದ ನೋಡಿದ ಧನ್ಯತಾ ಭಾವಕ್ಕೋ ಏನೋ ನನ್ನ ಮೈ ಒಮ್ಮೆಗೇ ಕಂಪಿಸಿತು. ಅವರು ಬರುವ ವಿಚಾರ ಯಾರಿಗೂ ತಿಳಿದಿರಲಿಲ್ಲ ಅನಿಸುತ್ತೆ. ಎಲ್ಲಿಗೋ ಹೋದವರು ಈ ಮಾರ್ಗವಾಗಿ ಬಂದಿದ್ದರು. ಇಲ್ಲಿ ಎಳನೀರು ಮಾರುವ ಗೆಳೆಯನನ್ನು ಮಾತನಾಡಿಸುವ ಸಲುವಾಗಿ ಕಾರು ನಿಲ್ಲಿಸಿದ್ದರು. ಈಗ ನೆನಪಿಸಿಕೊಂಡರೆ ಇದು ಅರಸು ಅಂಥವರಿಗೆ ಮಾತ್ರ ಸಾಧ್ಯ ಅನಿಸುತ್ತೆ. ಅಷ್ಟೊತ್ತಿಗೆ ಒಂದಷ್ಟು ಜನ ಕಾರಿನತ್ತ ಬಂದಿದ್ದರು. ಅವರಿಗೆಲ್ಲಾ ವಂದಿಸಿದರು. ಕಾರು ಹೊರಟಿತು. ಆ ಕಾರು ತಾತಯ್ಯನ ಗೋರಿಯನ್ನು ದಾಟುವವರೆಗೂ ನೋಡುತ್ತಾ ನಿಂತಿದ್ದೆ. ಆ ಚಿತ್ರ ಎಂದಿಗೂ ಮರೆಯಲಾಗದ ಚಿತ್ರವಾಗಿ ಮನದ ಗೋಡೆಯ ಮೇಲೆ ಶಾಶ್ವತವಾಗಿ ತೂಗುಬಿದ್ದಿದೆ. ಅದೇ ಒಂದೆರಡು ತಿಂಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಗುಂಡುರಾವ್ ಚಿಕ್ಕನಾಯಕನಹಳ್ಳಿಗೆ ದಾಂದೂಂ ಅಂತ ಬಂದು ಹೋಗಿದ್ದರು. ಅವರನ್ನು ನೋಡಲು ಜನವೋ ಜನ. ಅಲ್ಲಿಗೆ ನಾನೂ ಹೋಗಿದ್ದೆ. ಅವರನ್ನು ನೋಡಲಾಗಲಿಲ್ಲ. ಅವರು ಕೂತಿದ್ದ ಹೆಲಿಕಾಪ್ಟರನ್ನು ನೋಡಿದ್ದೆ. ಅದು ನಾನು ನೋಡಿದ್ದ ಮೊಟ್ಟ ಮೊದಲ ಹೆಲಿಕಾಪ್ಟರ್.
ಅರುಣ್ದೇವ್ ಎಂಬ ಜೀವಪರ ಮೇಷ್ಟ್ರು
ಅರುಣ್ದೇವ್ ರಾಜ್ಯಶಾಸ್ತ್ರದ ಮೇಷ್ಟ್ರಾಗಿದ್ದರೂ ಸಾಹಿತ್ಯ, ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ ಮುಂತಾದವುಗಳ ಬಗ್ಗೆ ಅಗಾಧವಾದ ಓದಿನ ವಿಸ್ತಾರವಿತ್ತು. ಹಾಗೂ ಅದರಿಂದ ದಕ್ಕಿಸಿಕೊಂಡಿದ್ದ ಗಾಢ ತಿಳುವಳಿಕೆ ಇತ್ತು. ಇವು ಅವರ ರಾಜ್ಯಶಾಸ್ತ್ರದ ಪಾಠದ ನಡುವೆ ಬಂದು ಹೋಗುತ್ತಿದ್ದವು. ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಬಗ್ಗೆ ಅಪಾರ ಹಿಡಿತವಿತ್ತು. ಬಳಸುವ ರೀತಿ ಕೂಡಾ ಸೊಗಸಾಗಿತ್ತು. ಜತೆಗೆ ನಾನವರಿಗೆ ತುಂಬಾ ಮೆಚ್ಚಿ ವಿದ್ಯಾರ್ಥಿಯಾಗಿದ್ದೆ. ಆ ಕಾರಣಕ್ಕೆ ಅನೇಕ ಬಾರಿ ತಮ್ಮ ಊರಾದ ಜೆ.ಸಿ.ಪುರಕ್ಕೆ ಕರೆದುಕೊಂಡು ಹೋಗಿದ್ದರು. ಆಗೆಲ್ಲಾ ಅಲ್ಲಿನ ಕನ್ನಡ, ಇಂಗ್ಲಿಷ್ ಪತ್ರಿಕೆಗಳು, ಲೈಪ್ ಮ್ಯಾಗಝಿನ್ ಮತ್ತು ನ್ಯಾಷನಲ್ ಜಿಯೋಗ್ರಫಿಯ ಸಂಪುಟಗಳು, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಪಾರ ಪುಸ್ತಕಗಳನ್ನು ನೋಡಿ ನಾನು ನಿಬ್ಬೆರಗಾಗುತ್ತಿದ್ದೆ. ಒಮ್ಮೆ ಹೋದಾಗ ಟಿಪಾಯಿಯ ಮೇಲೆ ಪುಸ್ತಕವೊಂದನ್ನು ಎಲ್ಲಿಯವರೆಗೆ ಓದಲಾಗಿತ್ತೋ ಅಲ್ಲಿಯವರೆಗೆ ಮತ್ತೆ ಮಾಮೂಲಿ ಮಡಚದೆ ಹಂಗೇ ದಬ್ಬಾಕಲಾಗಿತ್ತು. ನಾನದನ್ನು ಒಮ್ಮೆ ತಗಂಡು ಅದರ ಮೇಲೆ ಕಣ್ಣಾಡಿಸಿ ಅದು ಹೆಂಗಿತ್ತೋ ಹಂಗೇ ಮತ್ತೆ ಅಲ್ಲಿಯೇ ಇಟ್ಟಿದ್ದೆ. ಜತೆಗೆ ಅದರ ಹೆಸರನ್ನು ಕನ್ನಡ ಪಠ್ಯ ಪುಸ್ತಕದ ಹಿಂಬದಿಯ ಪುಟದಲ್ಲಿ ಬರೆದುಕೊಂಡಿದ್ದೆ. ಅದರ ಹೆಸರು`Twilight of the idols’ -Friedrich Nietzsche. ಆ ಲೇಖಕನ ಹೆಸರನ್ನು ಕೇಳುವುದಿರಲಿ ಅವನ ಹೆಸರನ್ನು ಹೆಂಗೆ ಹೇಳಬೇಕೆಂಬುದೇ ನನಗೆ ಗೊತ್ತಿರಲಿಲ್ಲ. ಅದನ್ನು ಕೇಳಲು ಧೈರ್ಯವೂ ಬಂದಿರಲಿಲ್ಲ. ಆದರೆ ಆ ಪುಸ್ತಕ ಕಾಲೇಜಿಗೆ ಬಂದಾಗ ಕೆಲವೊಮ್ಮೆ ಅವರ ಕೈಯ್ಯಲ್ಲಿರುತ್ತಿತ್ತು. ನಾನು ಈ ಪುಸ್ತಕವನ್ನು ಎತ್ತಿಕೊಂಡಿದ್ದನ್ನು ಹಾಗೂ ಅದರ ಹೆಸರನ್ನು ಬರೆದುಕೊಂಡದ್ದನ್ನು ಯಾವುದೋ ಮ್ಯಾಗಝಿನ್ನನ್ನು ಕಣ್ಣಾಡಿಸುತ್ತಿದ್ದ ಮೇಷ್ಟ್ರು ಗಮನಿಸಿದ್ದಾರೆ. `ನೀನು ನೋಡಿದ್ಯಲ್ಲ ಆ ಬುಕ್ಕು ಅದನ್ನು ಬರ್ದಿರೋನೋ ಫ್ರೆಡ್ರಿಕ್ ನೀಷೆ ಅಂತ. ಗ್ರೇಟ್ ಫಿಲಾಸಫರ್. ಜರ್ಮನಿಯವ್ನು’ ಅಂದರು. ಮುಂದೊಂದು ದಿನ ಈ ನೀಷೆಯನ್ನು ಆಟೋ ಈಟೋ ಓದಲು ಅವರ ಈ ಮಾತುಗಳು ಸಹಕಾರಿಯಾಗಿದ್ದವು. ಅರುಣ್ದೇವ್ ಕಲ್ಪತರು ವಿದ್ಯಾ ಸಂಸ್ಥೆಯ ಸಂಸ್ಥೆಯ ರುವಾರಿ ಹಾಗೂ ಸ್ಥಾಪಕ ಪ್ರಾಂಶುಪಾಲರಾಗಿದ್ದ ಜೆ.ಆರ್. ಮಹಾಲಿಂಗಯ್ಯ ಅವರ ಖಾಸಾ ತಮ್ಮ. ಮಾಜಿ ಮಂತ್ರಿಗಳಾದ ಜೆ.ಸಿ. ಮಾಧುಸ್ವಾಮಿಯವರ ಸೋದರ ಸಂಬಂಧಿ. ಮಾಧುಸ್ವಾಮಿಯವರ ಮನೆಯಲ್ಲಿನ ಆ ಅದ್ಭುತ ಲೈಬ್ರರಿಯನ್ನು ನೋಡಿದಾಗಲೆಲ್ಲಾ ಮೇಷ್ಟ್ರು ನೆನಪಾಗುತ್ತಾರೆ. ಬಹುಶಃ ಕರ್ನಾಟಕದ ಯಾವೊಬ್ಬ ರಾಜಕಾರಣಿಯ ಮನೆಯಲ್ಲೂ ಈ ಪ್ರಮಾಣದ ಪುಸ್ತಕ ಸಂಗ್ರಹ ಹಾಗೂ ಆ ಸಂಗ್ರಹದಲ್ಲಿನ ವೈವಿದ್ಯತೆ ಇರಲಾರದು.
ಮಾರನೆಯ ದಿನ ಕಾಲೇಜಿಗೆ ಹೋದಾಗ ಅರುಣ್ದೇವ್ ಅವರಿಗೆ ಅರಸು ಚಿ.ನಾ.ಹಳ್ಳಿಗೆ ಬಂದಿದದ್ದು ಹಾಗೂ ಅವರನ್ನು ಕಂಡಿದ್ದ ವಿಚಾರ ತಿಳಿಸಿದ್ದೆ. `ಹೌದೇನಯ್ಯ’ ಅಂತ ಅಚ್ಚರಿಗೊಂಡಿದ್ದರು. ಏಕೆಂದರೆ ಅವರಿಗೆ ಅರಸು ಅಂದರೆ ತುಂಬಾ ಇಷ್ಟದ ರಾಜಕಾರಣಿಯಾಗಿದ್ದರು. ಅರಸು ಅವರ ಬಗ್ಗೆ ಮಾತನಾಡುವಾಗ ಮೈದುಂಬಿ ಮಾತನಾಡುತ್ತಿದ್ದರು. ಅವರು ತಂದ ಕ್ರಾಂತಿಕಾರಿ ಸುಧಾರಣೆಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿ ಹೇಳುತ್ತಿದ್ದರು. ಈ ದರಿದ್ರ ಫ್ಯೂಡಲ್ ವ್ಯವಸ್ಥೆ, ಜಾತೀಯತೆ ಹಾಗೂ ಅಸ್ಪೃಶ್ಯತೆಗಳ ಬಗ್ಗೆ ಅವರಿಗೆ ಅಗಾಧ ಸಿಟ್ಟಿತ್ತು. ಈ ಬಗ್ಗೆ ಕೊಂಚವೂ ಯೋಚಿಸದ ರಾಜಕಾರಣಿಗಳ ಬಗ್ಗೆ ಕೂಡಾ. `ಇವ್ರೆಲ್ಲಾ ಯೂಸ್ಲೆಸ್ ಫೆಲೋಸ್’ ಅಂತ ನೇರವಾಗಿ ತರಗತಿಯಲ್ಲೇ ಬೈಯ್ಯುತ್ತಿದ್ದರು. `ಅರಸು ಅಂಥವ್ರು ಬರದಿದ್ರೆ ಇವೆಲ್ಲಾ ಆಗಾಕೆ ಎಷ್ಟು ಶತಮಾನ ಕಾಯಬೇಕಾಗುತ್ತಿತ್ತೋ?’ ಅಂತ ಅನ್ನುತ್ತಿದ್ದರು. ಆಗ ಅವರು ಹೇಳುತ್ತಿದ್ದ ವಿಚಾರಗಳು ತುಂಬಾ ಮಾನವೀಯವಾಗಿವೆ ಹಾಗೂ ಹೊಸದಾಗಿವೆ ಅಂತ ಅನಿಸುತ್ತಿತ್ತೇ ಹೊರತು ಅವುಗಳ ಒಳನೋಟಗಳನ್ನಾಗಲಿ ಮತ್ತು ಕಾಳಜಿಗಳನ್ನಾಗಲಿ ಅರ್ಥ ಮಾಡಿಕೊಳ್ಳಲು ನನಗಾಗ ಶಕ್ತಿ ಇರಲಿಲ್ಲ. ಅಷ್ಟೊತ್ತಿಗೆ ನನಗೆ ಅಂಬೇಡ್ಕರ್ ಮತ್ತು ಗಾಂಧಿಯ ಬಗ್ಗೆ ಕೇಳಿ ಗೊತ್ತಿತ್ತು. ಏಕೆಂದರೆ ಅವರಿಬ್ಬರೂ ಪಠ್ಯಕ್ಕೆ ಬಂದಿದ್ದರು. ಅದರಾಚೆಗೆ ಅವರಿಬ್ಬರದ್ದು ಏನನ್ನೂ ಓದಿರಲಿಲ್ಲ. ಬಹುಶಃ ಅರುಣ್ದೇವ್ ಪೆರಿಯಾರ್, ಲೋಹಿಯಾ, ಮಾರ್ಕ್ಸ್, ಲೆನಿನ್ ಬಗ್ಗೆ ಹೇಳದೇ ಹೋಗಿದ್ದರೆ ಅವರ ಹೆಸರುಗಳನ್ನು ಕೇಳಲು ಮತ್ತೆ ಸುಮಾರು ವರ್ಷ ಕಾಯಬೇಕಾಗುತ್ತಿತ್ತು.
1982ರ ಎರಡನೆಯ ವರ್ಷದ ಪಿ.ಯೂ.ಸಿಯಲ್ಲಿ ನನಗೆ ತುಂಬಾ ಒಳ್ಳೆಯ ಅಂಕಗಳು ಬಂದಿದ್ದವು. ಅದೇ ವರ್ಷ ಜೂನ್ನಲ್ಲಿ ದೇವರಾಜ ಅರಸರು ತೀರಿಕೊಂಡಿದ್ದರು. ರಿಸಲ್ಟ್ ನೋಡಲು ಹೋದ ದಿನ ಅಪಾರ ಖುಷಿಯಿಂದ ಮನೆಗೆ ಕರಕಂಡು ಹೋಗಿದ್ದರು. ಅವರ ಶ್ರೀಮತಿ ನಳಿನಕ್ಕ ಒಳ್ಳೆಯ ಪಾಯಸದ ಊಟ ಹಾಕಿತ್ತು. ಮೇಷ್ಟ್ರು ಹೇಳದಿದ್ದರೆ ನಾನು ಮೈಸೂರಿನತ್ತ ಮುಖ ಮಾಡುತ್ತಿರಲಿಲ್ಲ. ಮಹಾರಾಜ ಕಾಲೇಜಿಗೆ ಸೇರುತ್ತಲೂ ಇರಲಿಲ್ಲ. ಆ ಕಾಲೇಜಿನ ಹೆಸರು ಕೂಡಾ ಕೇಳಿರಲಿಲ್ಲ. ಅಷ್ಟೊತ್ತಿಗೆ ತಿಪಟೂರಿನ ಕಲ್ಪತರು ಕಾಲೇಜು ಸೇರಲು ತೀರ್ಮಾನಿಸಿದ್ದೆ. ಅಪ್ಲಿಕೇಶನ್ ಕೂಡಾ ತಂದಿಟ್ಟಿದ್ದೆ. ಮೇಷ್ಟ್ರು ಮೈಸೂರು ಅನ್ನುತ್ತಲೇ ಈ ವಿಷಯ ತಿಳಿಸಿದೆ. `ಲೇ ದಡ್ಡ ಇಲ್ಲಿ ಇರಾದು ಮೂರು ಮತ್ತೊಂದು ಕಾಂಬಿನೇಷನ್, ಮಹಾರಾಜ ಕಾಲೇಜಿನಲ್ಲಿ ನಲವತ್ತಕ್ಕೂ ಹೆಚ್ಚು ಕಾಂಬಿನೇಷನ್ಸ್ ಇದಾವೆ ಹೋಗು’ ಅಂತ ಗದರಿದ್ದರು. ಮನೆಯಲ್ಲಿ ಅಯ್ಯನಿಗೆ ಈ ವಿಷಯ ತಿಳಿಸಿದೆ. ಏಕೆಂದರೆ ಆಗ ನಮ್ಮ ಮನೆಯ ಪರಿಸ್ಥಿತಿ ಅಲ್ಲಿಗೆ ಕಳಿಸುವಷ್ಟು ಉತ್ತಮವಾಗಿರಲಿಲ್ಲ. ಆದರೂ ಅಯ್ಯ `ಅವ್ರು ಹೇಳಿದ್ದು ಸರ್ಯಾಗೈತೆ. ಸುಮ್ಕೆ ಹೋಗು ಮುಂದಿನ್ದು ನೋಡ್ಕೆಣಾನ’ ಅಂದರು.
ಮೈಸೂರಿನಿಂದ ಊರಿಗೆ ಬಂದಾಗಲೆಲ್ಲಾ ಅವರನ್ನು ನೋಡಲು ತಪ್ಪದೇ ಹೋಗುತ್ತಿದ್ದೆ. ಕಾಲೇಜು ಮುಗಿದ ಮೇಲೆ ಅವರು ಸಿಗುತ್ತಿದ್ದ ಜಾಗಗಳು ನನಗೆ ಗೊತ್ತಿದ್ದವು. ಹಂಗಾಗಿ ಅಲ್ಲಿಗೇ ಹುಡುಕಿಕೊಂಡು ಹೋಗುತ್ತಿದ್ದೆ. ಹಂಗೆ ಒಮ್ಮೆ ಹೋದಾಗ ಅವರಿಗೆ `ವಿಮುಕ್ತಿ’ ಅನ್ನುವ ಮ್ಯಾಗಝಿನ್ ಕೊಟ್ಟಿದ್ದೆ. ಇದು ಒಂದು ರೀತಿಯಲ್ಲಿ ನಕ್ಸಲ್ ಚಳುವಳಿಯ ಮುಖವಾಣಿಯಂತಿತ್ತು. ಆ ಹೊತ್ತಿಗಾಗಲೇ ಸಾಕೇತ್ ರಾಜನ್ ಗೆಳೆಯನಾಗಿದ್ದ. ಆಗ ಗೆಳೆಯ ಅಬ್ದುಲ್ ರಶೀದ ಅದನ್ನು ಸಂಪಾದಿಸುತ್ತಿದ್ದ. ನಾನೂ ಅದರಲ್ಲಿ ಬರೆಯುತ್ತಿದ್ದೆ. ಅದನ್ನು ತಿರುವಿ ಹಾಕಿದ ಅರುಣ್ದೇವ್ `ಹೇಯ್ ತುಂಬಾ ಸಂತೋಷ ಕಣೋ. ಈಗಲಾದ್ರೂ ಗೊತ್ತಾಗೈತಲ್ಲ. ಮಕ್ಕಿಕಾಮಕ್ಕಿ ಓದಾದ್ರಿಂದ ಏನೂ ಪ್ರಯೋಜ್ನ ಇಲ್ಲ ಅಂತಾವ ಓದಲ್ಲ’ ಅಂದು ನಕ್ಕರು.
ಇಂಥ ಅರುಣ್ದೇವ್ ನಾನು ಡಿಗ್ರಿಯಲ್ಲಿದ್ದಾಗ ಬೈಕ್ ಅಪಘಾತದಲ್ಲಿ ತೀರಿಕೊಂಡರು. ಅಪಾರ ಬುದ್ಧಿವಂತಿಕೆಯ ಹಾಗೂ ಜನಪರ ಆಲೋಚನೆಯ ಮನಸ್ಸೊಂದು ಅಷ್ಟು ಬೇಗ ತೀರಿಹೋಗಿದ್ದು ನನಗೆ ಈ ಚಣಕ್ಕೂ ಅರಗಿಸಿಕೊಳ್ಳಲಾಗದ ಸಾವುಗಳಲ್ಲಿ ಒಂದಾಗಿದೆ.
ಪ್ರೋಫೆಸರ್ ಎಂ.ಡಿ.ಎನ್ ಕೊಟ್ಟಿದ್ದ ದೇವನೂರರ `ದ್ಯಾವನೂರು’
ಈ ಮೇಷ್ಟ್ರು ಹಾಕಿಕೊಟ್ಟಿದ್ದ ತಳಪಾಯ ಓದಿನಲ್ಲಿ ಬರೀ ಪಠ್ಯಗಳಷ್ಟೇ ಅಂದುಕೊಂಡಿದ್ದ ನನಗೆ ಪಠ್ಯದಾಚೆಗೂ ತುಡಿಯುವಂತೆ ಮಾಡಿತ್ತು. ಮೈಸೂರಿನಲ್ಲಿ ತೇಜಸ್ವಿಯರ ಕಾದಂಬರಿಯ ಶುರುವಿನಲ್ಲಿ ಪಾತ್ರವೊಂದು ಹೇಳುವಂತೆ `ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪ’ ಅನ್ನುವ ಉತ್ಸಾಹದಲ್ಲಿದ್ದ ನಮ್ಮದೊಂದು ಗುಂಪಿತ್ತು. ಅದು ರೈತ ಚಳವಳಿ ಹಾಗೂ ದಲಿತ ಚಳವಳಿಗಳು ಬೆಂಕಿ ಉಗುಳುತ್ತಿದ್ದ ಕಾಲವಾಗಿತ್ತು. ಅತ್ತ ಮುಖ ಮಾಡುತ್ತಲೇ ಒಂದು ದಿನ ಗೆಳೆಯ ಕೇಶವಪ್ರಸಾದನ ನೇತೃತ್ವದಲ್ಲಿ ನಡೆಯುತ್ತಿದ್ದ `ರೈತ ವಿದ್ಯಾರ್ಥಿ ಒಕ್ಕೂಟ’ದ ಸಭೆಯೊಂದರಲ್ಲಿ ರೈತ ಚಳುವಳಿಯಲ್ಲಿದ್ದ ವೀರರಾಜ ಗೆಳೆಯನಾಗಿದ್ದ. ಆ ಕಾಲಕ್ಕೇ ಜೆ.ಸಿ.ಇ ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ವೀರ ಓದುವುದನ್ನು ಬಿಟ್ಟು ಚಳುವಳಿಗೆ ಬಂದಿದ್ದ. ಈ ವೀರ ಪ್ರೋಫೆಸರ್ ನಂಜುಂಡಸ್ವಾಮಿಯವರ ಅಣ್ಣನ ಮಗ ಕೂಡಾ ಆಗಿದ್ದ. ನಾನು ನೋಡಿದಂತೆ ಎಂ.ಡಿ.ಎನ್ ಗೆ ಏನು ಹೇಳಬೇಕೋ ಅದನ್ನು ನೇರಾನೇರಾ ಹೇಳುತ್ತಿದ್ದವನು ಆಗ ಅವನೊಬ್ಬನೇ. ವೀರನ ಗೆಳೆತನವಾದ ಮೇಲೆ ಅದೊಂದು ದಿನ `ಲೇ ಗಂಗು ಬಾ ಚಿಕ್ಕಪ್ಪನ್ನ ಪರಿಚಯ ಮಾಡಿಸ್ತೀನಿ’ ಅಂತ ಅವರ ಮನೆಗೆ ಕರಕಂಡು ಹೋಗಿದ್ದ. ತೇಜಸ್ವಿ ಮತ್ತು ಸ್ಕೂಟರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಹಾಗೆ ಆಗ ಪ್ರೊಫೆಸರ್ ಮತ್ತು ಅವರ ಕಾರು ರಿಪೇರಿಯ ಬಗ್ಗೆ ಮಾತಾನಾಡಿಕೊಳ್ಳುವುದೂ ಚಾಲ್ತಿಯಲ್ಲಿತ್ತು. ಅವತ್ತು ಕೂಡಾ ಅದೇ ದೃಶ್ಯ ಕಣ್ಣಿಗೆ ಬಿತ್ತು. ಬನಿಯನ್ ಮತ್ತು ಪೈಜಾಮದಲ್ಲಿದ್ದ ಪ್ರೊಫೆಸರ್ ಮನೆಯ ಮುಂದೆ ಕಾರಿನ ಬಾನೆಟ್ ಎತ್ತಿ ಏನೋ ಮಾಡುತ್ತಿದ್ದರು. `ಚಿಕ್ಕಪ್ಪ, ಇವ್ನು ಗಂಗಾ ಅಂತ. ನನ್ನ ಫ್ರೆಂಡು’ ಅಂದ. ಕತ್ತೆತ್ತಿ ನೋಡಿದ ಅವರು `ಹೋಗ್ರಪ್ಪ ಒಳ್ಗಡೆ ಕೂತಿರಿ ಬರ್ತೀನಿ’ ಅಂದರು. ಎಂದಿನ ತಮ್ಮ ಮೆಲು ದನಿಯಲ್ಲಿ. ಅದಾದ ಹತ್ತು ನಿಮಿಷಕ್ಕೆ ಒಳಗೆ ಬಂದರು. `ಯಾವೂರಿಂದ ಬಂದಿದೀಯಾ?’ ಅಂತ ನನ್ನ ಕೇಳಿದರು. `ಚಿಕ್ಕನಾಯಕನಹಳ್ಳಿಯಿಂದ ಸರ್’ ಅಂದೆ. `ಹೌದಾ?’ ಅಂದವರು ಸೀದಾ ಒಳಗೆ ಹೋದರು. ತಿರುಗಿ ಬರುವಾಗ ಅವರ ಕೈಯ್ಯಲ್ಲೊಂದು ಪುಟ್ಟ ಪುಸ್ತಕವಿತ್ತು. `ಹಳ್ಳಿಯಿಂದ ಬಂದಿದೀನಿ ಅಂತೀಯಾ. ಇದನ್ನ ಓದಿದೀಯಾ?’ ಅನ್ನುತ್ತಾ ಆ ಪುಸ್ತಕವನ್ನು ನನ್ನ ಕೈಗೆ ಕೊಟ್ಟರು. ಅದು ದೇವನೂರು ಮಹಾದೇವ ಅವರ `ದ್ಯಾವನೂರು’ ಕಥಾ ಸಂಕಲನದ ಪ್ರಪ್ರಥಮ ಆವೃತ್ತಿಯಾಗಿತ್ತು. ನಾನು ಆ ಪುಸ್ತಕವನ್ನು ಅತ್ತ ಇತ್ತ ತಿರುಗಿಸಿ ನೋಡಿ ` ಓದಿಲ್ಲ ಸರ್’ ಅಂದೆ. `ಹಾಂ ನೋಡು ಮತ್ತೆ ಓದ್ಬೇಕು ಕಣಪ್ಪ ಇಂಥಔನ’ ಅಂದರು. ಪುಸ್ತಕವನ್ನು ಒಂದಷ್ಟೊತ್ತು ಕೈಯ್ಯಲ್ಲಿ ಹಿಡುಕಂಡು ಮತ್ತೆ ಅವರಿಗೆ ಕೊಡಲು ಹೋದೆ. `ಬೇಡ ನೀನೇ ಇಟ್ಕ ಇದುನ್ನ. ಓದಿ ಚೆನಾಗಿ ಅರ್ಥ ಮಾಡ್ಕ’ಅಂದರು. ಅದು ಅವರ ಖಾಸಗಿ ಲೈಬ್ರರಿಯಿಂದ ಕೊಟ್ಟ ಪುಸ್ತಕವಾಗಿತ್ತು. ಅದರಲ್ಲಿ ಅವರ ಮುದ್ದಾದ ಸಹಿ ಕೂಡಾ ಇತ್ತು. ಆ ಮೂಲಕ ನಾನು ದೇವನೂರರ ಬರವಣಿಗೆಯ ಲೋಕಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದೆ. ಅದು ಸುಮಾರು ವರ್ಷ ನನ್ನ ಜತೆಯಲ್ಲಿತ್ತು. ಆದರೆ ಅದಾವ ಮಾಯದಲ್ಲೋ ಯಾರೋ ಪುಣ್ಯಾತ್ಮ ಅದನ್ನು ನನ್ನ ಲೈಬ್ರರಿಯಿಂದ ಎಗರಿಸಿಬಿಟ್ಟಿದ್ದ. ಅದೊಂದು ದಿನ ಅದಕ್ಕಾಗಿ ಹುಡುಕಿ ಸುಸ್ತಾಗಿ ಸಿಗಲ್ಲಿಲ್ಲವಾದ್ದರಿಂದ ತುಂಬಾ ಬೇಸರವಾಗಿತ್ತು. ಆ ನಂತರ ದೇವನೂರರ ಸಮಗ್ರ ಬರಹಗಳ ಪುಸ್ತಕ ಬಂತು. ಆದರೂ ಅವತ್ತು ಪ್ರೊಫೆಸರ್ ಕೊಟ್ಟಿದ್ದ ಪುಸ್ತಕ ಕಾಣೆಯಾಗಿದ್ದರ ಬಗೆಗಿನ ಬೇಸರ ಇಂದಿಗೂ ಹೋಗಿಲ್ಲ.

ನಾನು ಕೊನೆಯ ಸಾರ್ತಿ ಪ್ರೊಫೆಸರ್ರನ್ನು ನೋಡಿದ್ದು ಫೆಬ್ರವರಿ 28,2002ರಂದು. ತಿಪಟೂರು ತಾಲ್ಲೂಕಿಗೆ ಸೇರಿದ ಕೆ.ಬಿ.ಕ್ರಾಸ್ನಲ್ಲಿ. ಅಂದು ಅಲ್ಲಿ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಪ್ರಜಾಪ್ರಭುತ್ವದಲ್ಲಿ ಪೊಲೀಸರ ವರ್ತನೆ ಹೆಂಗಿರಬೇಕು ಹಾಗೂ ವಿದ್ಯುತ್ಕರ ನಿರಾಕರಣೆಯ `ಟಾಂ ಟಾಂ’ ಚಳುವಳಿಯನ್ನು ಹಮ್ಮಿಕೊಂಡು ದಮಡಿ ಮುಂತಾದವುಗಳನ್ನು ಬಡಿದುಕೊಂಡು ಹಾಡುಗಳನ್ನು ಹಾಡುತ್ತಾ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ಮಾಡುತ್ತಿದ್ದರು. ಆಗ ಎಸ್.ಎಂ ಕೃಷ್ಣ ಅವರ ಸರ್ಕಾರವಿತ್ತು. ತಿಪಟೂರಿನಲ್ಲಿ ಎ.ಎಸ್ಪಿಯಾಗಿ ಹೇಮಂತ್ ನಿಂಬಾಳ್ಕರ್ ಎಂಬ ಐ.ಪಿ.ಎಸ್ ಅಧಿಕಾರಿ ಇದ್ದರು. ರೈತರ ಘೋಷಣೆಗಳು ಅವರಿಗೆ ಉದ್ಧಟತನದಂತೆ ಕಂಡು ಹಾಡು ಮತ್ತು ಘೋಷಣೆಗಳನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಅದಕ್ಕೆ ಕವಡೆ ಕಿಮ್ಮತ್ತೂ ಕೊಡದ್ದರಿಂದ ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ಮಾಡಿಸಿದ್ದರು. ಅವತ್ತು ಆ ಎಎಸ್ಪಿಯೇ ಕೊಂಚದರಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದರು. ಅದು ಅವರ ಅಹಂಗೆ ಪೆಟ್ಟು ಬಿದ್ದಿತ್ತು. ಸಿಕ್ಕ ಸಿಕ್ಕವರ ಮೇಲೆಲ್ಲಾ ಕೇಸುಗಳನ್ನು ಹಾಕಿ ಬಂಧಿಸಿದ್ದರು. ಈ ಸಂಬಂಧ ಸದರಿ ಅಧಿಕಾರಿಯನ್ನು ಕೆ.ಬಿ.ಕ್ರಾಸ್ನ ಐ.ಬಿ.ಗೆ ಕರೆಸಿಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪಾಠ ಮಾಡಿ ನಿಂತಲ್ಲೇ ಬೆವರುವಂತೆ ಎಚ್ಚರಿಸಿದ್ದರು. ಇದು ಎಂ.ಡಿ.ಎನ್ ಅವರಿಗಿದ್ದ ತಾಕತ್ತು. ಇಂಥ ಎಂ.ಡಿ.ಎನ್. 2004, ಫೆಬ್ರವರಿ 3ರಂದು ತೀರಿಕೊಂಡರು. ಆ ಮೂಲಕ ರೈತಪರ ಚಳವಳಿಯ ಮಹಾ ದನಿಯೊಂದು ಶಾಶ್ವತವಾಗಿ ಮಾತು ನಿಲ್ಲಿಸಿತ್ತು.
(ಹಿಂದಿನ ಕಂತು: ಒಬ್ಬರು ಕೊನೆಕಾರರು ಮತ್ತೊಬ್ಬರು ಡಾಕ್ಟರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

