ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ದಂಪತಿಯ ಮಗನಾಗಿ ಜನಿಸಿದ ವರಕವಿ ಮಹಾ ಮಾನವತಾವಾದಿ ಸಂತಶ್ರೇಷ್ಠ ಪರಿಪೂರ್ಣ ಶಿವಯೋಗಿ ಶರೀಫರು ರಾಮಾಯಣ ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆ, ಬಸವ, ಅಲ್ಲಮ ಅಕ್ಕರನ್ನು ಮೈಗೂಡಿಸಿಕೊಂಡಿದ್ದವರು. ಮಾಸ್ತರರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿದ್ದವರು. ಕಳಸದ ಗೋವಿಂದ ಭಟ್ಟರನ್ನು ಸಂಧಿಸಿದಾಗ, ಗೋವಿಂದಭಟ್ಟರು ತಮ್ಮ ಅನುಭಾವದ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಶರೀಫರನ್ನೇ ಉತ್ತರಾಧಿಕಾರಿಯಾಗಿಸುತ್ತಾರೆ.  ಚಂದ್ರಪ್ರಭಾ ಬರೆದ  ‘ತಗಿ ನಿನ್ನ ತಂಬೂರಿ, ಷರೀಫರ ತತ್ವ ಭಾಷ್ಯ’ ಪುಸ್ತಕದ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

 

“ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ” ಎಂಬಂತೆ ವಿರಳಾತಿವಿರಳ ಸಾಧಕರಾದ ಲೋಕ ಸಂಚಾರಿ ದಾರ್ಶನಿಕ ಕವಿ ಶರೀಫ ಶಿವಯೋಗಿಗಳು ತಮ್ಮ ಅನುಭಾವದ ಆಳ ಅಗಲಗಳನ್ನು, ಸತ್ಯ ದರ್ಶನವನ್ನು ತಮ್ಮ ಆಶುಕವಿತ್ವದಲ್ಲಿ ಹಿಡಿದಿಟ್ಟಿರುವವರು. ಉಪನ್ಯಾಸಕಿ ಹಾಗೂ ಲೇಖಕಿ, ಕವಯಿತ್ರಿ ಚಂದ್ರಪ್ರಭಾರವರ “ತಗಿ ನಿನ್ನ ತಂಬೂರಿ-ಶರೀಫರ ತತ್ವ ಭಾಷ್ಯ” ಕೃತಿಯು ಶರೀಫರ ಕುರಿತ ಗಂಭೀರವಾದ ಅಧ್ಯಯನದೊಂದಿಗೆ ಸಂತ ಶಿಶುನಾಳ ಶರೀಫರ ದ್ವಿಶತಮಾನೋತ್ಸವ ಸಂದರ್ಭದಲ್ಲಿ ಅಜಬ್ ಪಬ್ಲಿಕೇಶನ್ ನಿಂದ 2020ರಲ್ಲಿ ಪ್ರಕಟವಾಗಿದೆ.

ಶರೀಫರ ಮೌಖಿಕವಾದ ತತ್ವ ಪದಗಳು ಅಸಾಧಾರಣ ಚೆಲುವು ಹೊರಹೊಮ್ಮಿಸುತ್ತಲೇ ಕಾವ್ಯ ಮೀಮಾಂಸೆ, ತರ್ಕ, ತಂತ್ರ ವಿನ್ಯಾಸಗಳೆಲ್ಲಾ ಅನಾಯಾಸವಾಗಿ ಇವರ ಪದ್ಯಗಳಲ್ಲಿ ಮೈದಾಳಿರುವುದನ್ನು ಲೇಖಕಿ ಪ್ರಸ್ತಾಪಿಸುತ್ತಾರೆ. ಮುಂದೆ ಕಾವ್ಯ ಪ್ರಪಂಚದ ವಿಸ್ತಾರ, ಅದರ ತಾತ್ವಿಕ ಒಲವು ನಿಲುವುಗಳ ಕುರಿತು, ಪ್ಲೇಟೋ , ಕುವೆಂಪು, ಕೋಲೆರಿಜ್ ತೀನಂಶ್ರೀ, ಫಿಲಿಪ್, ಸಿಡ್ನಿ, ಜಿಎಸ್ಎಸ್ ಡಾ.ಎಚ್.ಎಸ್.ಅನುಪಮಾ ಇವರೆಲ್ಲರ ಕವಿತೆಯ ಕುರಿತ ಮಾತುಗಳು, ಹೇಳಿಕೆಗಳನ್ನು ಉದಾಹರಿಸುತ್ತಾ, ಅವುಗಳ ಹಿನ್ನೆಲೆಯಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಮೀಮಾಂಸೆಗಳ ವ್ಯತ್ಯಾಸವನ್ನು ಗುರ್ತಿಸುತ್ತಾ, ಭಾರತೀಯ ಕಾವ್ಯ ಮೀಮಾಂಸೆಯು ಆನಂದಾನುಭೂತಿಯತ್ತ ಚಲಿಸುವುದನ್ನು, ಬೆಳಕಿನೆಡೆ ಸಾಗುತ್ತಾ ಬೆಳಕೇ ತಾನಾಗುತ್ತಾ ಆನಂದಮಯ ಜಗದಲ್ಲಿ ನೆಲೆಸುವ ವಿಶಿಷ್ಟತೆಯನ್ನು ಪ್ರಸ್ತಾಪಿಸುತ್ತಾರೆ. ಇದನ್ನು ಓದುವಾಗಲೇ ಓದುಗರಿಗೆ ತಾವೂ ಒಂದು ಆನಂದಮಯ ಕೋಶವನ್ನು ಹೊಗುವ ಅನುಭವದ ಸೆಳಕನ್ನು ಹೊಮ್ಮಿಸಲು ಲೇಖಕಿಗೆ ಸಾಧ್ಯವಾಗುವುದು ಅವರ ಆಳವಾದ ಅಧ್ಯಯನದ, ಸೃಜನಶೀಲತೆಯ ಫಲಶ್ರುತಿ.

ಮುಂದಿನ ಯೋಗಾನುಸಂಧಾನ ಅಧ್ಯಾಯದಲ್ಲಿ ಧ್ಯಾನ ಮತ್ತು ಯೋಗಗಳನ್ನು ನಿರ್ವಚಿಸುತ್ತಾ ಆಸ್ತಿಕತೆಗೆ ಒತ್ತು ನೀಡಿದ ಪುರೋಹಿತಶಾಹಿಯು ಲೌಕಿಕ ಉತ್ಕರ್ಷಗಳ ದಾರಿಯನ್ನಾಯ್ದುಕೊಂಡರೆ, ಸಾಮಾಜಿಕ ಸ್ವಾಸ್ಥ್ಯ ಉಳಿಸಿ ಬೆಳೆಸುವತ್ತ ಮುಖ ಮಾಡಿದ ನಾಸ್ತಿಕರು ಹಾಗೂ ಇವೆರಡರೆಡೆಗೂ ಒಲೆಯುತ್ತಾ ಅನುಕೂಲಸಿಂಧುತ್ವದ ಮೂರನೇ ಗುಂಪನ್ನು ಪ್ರಸ್ತಾಪಿಸುತ್ತಾರೆ. ವಿಜ್ಞಾನ, ಆತ್ಮಜ್ಞಾನದ ಪರಿ, ಶರಣರ ವಿಚಾರ ಧಾರೆಯ ಶಿವಯೋಗ, ಉಪನಿಷತ್ತು, ಮಹಾಸ್ಫೋಟ ಸಿದ್ಧಾಂತಗಳ ವಿಶ್ವಸೃಷ್ಟಿಯ ಬಗೆ, ಇವುಗಳ ವಿಶ್ಲೇಷಣೆಯೊಂದಿಗೆ ಅಲ್ಲಮಪ್ರಭುಗಳ ಷಟ್ ಸ್ಥಲಗಳ ಕುರಿತ ವಚನ ಇವೆಲ್ಲದರ ಅಧ್ಯಯನಪೂರ್ವಕ ವಿಶ್ಲೇಷಣೆಯನ್ನು ತರ್ಕಬದ್ಧವಾಗಿ ಪ್ರತಿಪಾದಿಸುತ್ತಾರೆ. ಶರಣಮಾರ್ಗದ ಶಿವಯೋಗಾಚರಣೆಯಲ್ಲಿ ಸರ್ವೋತ್ತಮವಾದುದನ್ನು ಸಾಧಿಸಿದ್ದ ಸಂತ ಶ್ರೇಷ್ಠರಾದ ಶರೀಫರ ಒಂದೊಂದು ತತ್ವಪದಗಳಲ್ಲೂ ಅವರು ಕಂಡುಂಡ ಅನುಭವ ಹರಳುಗಟ್ಟಿರುವುದನ್ನು ಕಾಣಬಹುದು ಎನ್ನುವ ಲೇಖಕಿ ಮುಂದೆ ಅವರ ಹಲವು ಪದ್ಯಗಳನ್ನು ಅರಿಯುವ ರೋಚಕ ಅನುಭವದೆಡೆಗೆ ಓದುಗರನ್ನು ಕರೆದೊಯ್ಯುತ್ತಾರೆ.

ಭಾರತೀಯ ಕಾವ್ಯ ಮೀಮಾಂಸೆಯು ಆನಂದಾನುಭೂತಿಯತ್ತ ಚಲಿಸುವುದನ್ನು, ಬೆಳಕಿನೆಡೆ ಸಾಗುತ್ತಾ ಬೆಳಕೇ ತಾನಾಗುತ್ತಾ ಆನಂದಮಯ ಜಗದಲ್ಲಿ ನೆಲೆಸುವ ವಿಶಿಷ್ಟತೆಯನ್ನು ಪ್ರಸ್ತಾಪಿಸುತ್ತಾರೆ.

ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ದಂಪತಿಯ ಮಗನಾಗಿ ಜನಿಸಿದ ವರಕವಿ ಮಹಾ ಮಾನವತಾವಾದಿ ಸಂತಶ್ರೇಷ್ಠ ಪರಿಪೂರ್ಣ ಶಿವಯೋಗಿ ಶರೀಫರು ರಾಮಾಯಣ ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆ, ಬಸವ ಅಲ್ಲಮ ಅಕ್ಕರನ್ನು ಮೈಗೂಡಿಸಿಕೊಂಡಿದ್ದವರು. ಮಾಸ್ತರರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿದ್ದವರು. ಕಳಸದ ಗೋವಿಂದ ಭಟ್ಟರನ್ನು ಸಂಧಿಸಿದಾಗ, ಗೋವಿಂದಭಟ್ಟರು ತಮ್ಮ ಅನುಭಾವದ ಅಧ್ಯಾತ್ಮ ಸಾಮ್ರಾಜ್ಯಕ್ಕೆ ಶರೀಫರನ್ನೇ ಉತ್ತರಾಧಿಕಾರಿಯಾಗಿಸುತ್ತಾರೆ.

ಲೇಖಕಿ ಚಂದ್ರಪ್ರಭಾ ಲಭ್ಯವಿರುವ ಸುಮಾರು ನಾಲ್ಕುನೂರು ತತ್ವಪದಗಳಲ್ಲಿ ಸೋರುತಿಹುದು ಮನೆಯ ಮಾಳಿಗಿ, ಬಿದ್ದಿಯಬೇ ಮುದುಕಿ, ತರವಲ್ಲ ತಗಿ ನಿನ್ನ ತಂಬೂರಿ, ಹೋಗುವಿಯಾ ವಾಯು ವ್ಯರ್ಥ ಮುಂತಾದ ಇಪ್ಪತ್ತೈದು ಜನಪ್ರಿಯ ಹಾಗೂ ಕೆಲವು ಅಪರೂಪದ ಪದ್ಯಗಳನ್ನೂ ಆಯ್ದುಕೊಂಡು ಒಂದೊಂದನ್ನೂ ಅಧ್ಯಯನದ ಹಿನ್ನೆಲೆಯಲ್ಲಿ, ತಮ್ಮ ವೈಚಾರಿಕ ಆಧ್ಯಾತ್ಮಿಕ ಒಳನೋಟದಲ್ಲಿ ಒಂದೊಂದನ್ನೂ ವಿಶ್ಲೇಷಿಸಿರುವ ರೀತಿ ಅನನ್ಯವಾದುದು. ಈ ವಿಶ್ಲೇಷಣೆಯಲ್ಲಿ, ವಚನಗಳು, ಉಪಮೆಗಳು, ರೂಪಕಗಳು, ಕೆಲವೊಂದು ರಸಪ್ರಸಂಗಗಳನ್ನು ಕೂಡ ಬಳಸಿಕೊಂಡಿದ್ದಾರೆ. ಉಲ್ಲೇಖಗಳು, ಉದಾಹರಣೆಗಳು, ಆಧಾರಗಳ ಮೂಲಕ ತತ್ವಪದಗಳೊಂದೊಂದರ ವಿಶ್ಲೇಷಣೆ ಮಾಡಿರುವ ವಿಧಾನ- ಒಂದೊಂದರ ಓದೂ ಒಂದೊಂದು ರಸಗಟ್ಟಿಯೇ ಸರಿ! ಅನುಭಾವಿ ಯೋಗಿ ಶರೀಫರು ತಮ್ಮ ಗೇಯತೆ ಮಾಧುರ್ಯಗಳ ತತ್ವಪದಗಳಲ್ಲಿ ಯೌಗಿಕ ಅನುಭವಗಳನ್ನು ನೇರವಾಗಿ ಹೇಳದೆ, ಗೂಢಾರ್ಥದ ಸುಳಿವನ್ನೂ ಬಿಟ್ಟುಕೊಡದೆ, ಒಗಟಿನ ರೂಪದಲ್ಲಿ ನಿರೂಪಿಸಿರುವ ಬೆಡಗಿನ ತಂತ್ರ ಆತನ ಅದ್ಭುತ ಕಲೆಗಾರಿಕೆಗೆ ಸಾಕ್ಷಿ ಎನ್ನುವ ಲೇಖಕಿ ಆ ತತ್ವಪದಗಳ ಒಂದೊಂದು ಸಾಲಿನ ಒಂದೊಂದು ಪದದ ಹಿಂದಿರುವ ಅನಂತ ಆಧ್ಯಾತ್ಮಿಕ ಚಿಂತನೆಯ ಅರ್ಥವನ್ನು ಓದುಗರ ಮುಂದೆ ಕಿತ್ತಳೆ ತೊಳೆ ಬಿಡಿಸಿ ಇಟ್ಟಂತೆ ಆಸ್ವಾದನೆಗೆ ಮನ ಕೊಡುವಂತಹ ಮನಮೋಹಕ ಕಲೆಗಾರಿಕೆ ತೋರಿದ್ದಾರೆ. ಶರೀಫರು ರಚಿಸಿದ ತತ್ವಪದಗಳು ತನ್ನ ಒಡನಾಡಿಗಳ ಬದುಕನ್ನು ಉನ್ನತಿಯೆಡೆಗೆ ಮೇಲೆತ್ತಬೇಕೆಂಬ ತಹತಹವನ್ನು ಹೊಂದಿದ್ದರಿಂದಾಗಿಯೇ ಅವು ಕಾಲಾತೀತವಾಗಿಯೂ ಬದುಕನ್ನು ಹಸನಾಗಿಸುವ ಸಂದೇಶ ನೀಡಬಲ್ಲವಾಗಿವೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ.

“ಬೇಕು ಎಂದು ಬಯಸುವುದರಲ್ಲಿ ಇರದ ಅಪೂರ್ವವಾದೊಂದು ಸಂತೃಪ್ತಿ ಬೇಡ ಎನ್ನುವ ನಿರಾಕರಣೆಯಲ್ಲಿದೆ” ಎಂಬಂತಹ ಬೆಳಕಿನ ಕೋಲುಗಳಂತಹ ವಾಕ್ಯಗಳು ಅಲ್ಲಲ್ಲಿ ಮಿನುಗುತ್ತಾ ಓದಿನ ಸುಖಕ್ಕೆ ಪೂರಕವಾಗಿವೆ.

‘ಥಳಥಳಿಸುವ ಶಶಿಸೂರ್ಯ ಕೋಟಿ’ ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾದ ಮಹಾ ಬೆಳಕು ‘ಕೋಟಿ ಸೂರ್ಯ ಪ್ರಭೆ’ಯ ಪ್ರಸ್ತಾಪ ಕೃತಿಯಲ್ಲಿ ಅಲ್ಲಲ್ಲಿ ಬರುತ್ತದೆ. ಈ ಪ್ರಥಮ ಕೃತಿಯಲ್ಲಿಯೇ ಮಿನುಗುತ್ತಿರುವ ಚಂದ್ರಪ್ರಭಾರ ಸಾಹಿತ್ಯಿಕ ಪ್ರತಿಭೆಯು ಇನ್ನು ಮುಂದಿನ ಕೃತಿಗಳಲ್ಲಿ ಉಜ್ವಲವಾಗಿ ಬೆಳಗಲಿದೆ ಎಂಬುದರ ಮುನ್ಸೂಚಿಯಾಗಿದೆ ಈ ಕೃತಿ.

(ಕೃತಿ: ತಗಿ ನಿನ್ನ ತಂಬೂರಿ, ಲೇಖಕಿ: ಚಂದ್ರಪ್ರಭಾ, ಷರೀಫರ ತತ್ವ ಭಾಷ್ಯ, ಪ್ರಕಾಶನ: ಅಜಬ್ ಪಬ್ಲಿಕೇಷನ್ಸ್ )