ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ.
ಕೆ. ಸತ್ಯನಾರಾಯಣ  ಬರೆದ `ಸಾವಿನ ದಶಾವತಾರ’ ಕಾದಂಬರಿಯ ಕುರಿತು ಡಾ. ಸುಧಾ ಬರಹ

ಸಾವಿನ ದಶಾವತಾರ (ಅಭಿನವ ಪ್ರಕಾಶನ, 2017), ಕೆ. ಸತ್ಯನಾರಾಯಣ ಅವರ ಎಂಟನೇ ಕಾದಂಬರಿ. ಕಾದಂಬರಿಯ ಹೆಸರೇ ಸೂಚಿಸುವಂತೆ ಹತ್ತು ಹಲವು ಬಗೆಯ ಮೃತ್ಯು ದರ್ಶನ ಇಲ್ಲಿ ನಮಗಾಗುತ್ತದೆ. ಮೃತರ ಅಂತಿಮ ಪಯಣಕ್ಕಾಗಿ ಬೇಕಾದ ಎಲ್ಲ ಸೌಲಭ್ಯಗಳನ್ನು (ಅಪರ ಕ್ರಿಯಾ ಕರ್ಮಾದಿಗಳಿಂದ ಹಿಡಿದು, ಶವಾಗಾರದ ವ್ಯವಸ್ಥೆ, ಬಂಧು-ಬಳಗ/ಆಪ್ತರ ವಾಸ್ತವ್ಯ ಇತ್ಯಾದಿ) ಒದಗಿಸಿ ಕೊಡುವ Death services consultant (Event manager for death services) ಕಾದಂಬರಿಯ ಪ್ರಮುಖ ಪಾತ್ರವಾಗಿರುವುದರ ಜೊತೆಗೇ ಅದರ ನಿರೂಪಕ ಕೂಡಾ. ಸಾಂಪ್ರದಾಯಿಕವೆನ್ನಬಹುದಾದ ಕಥೆ ಇಲ್ಲಿಲ್ಲವಾದರೂ ಪ್ರತೀ ಸಾವಿನ ಸುತ್ತಲ ಘಟನಾವಳಿಗಳು, ಮೃತರ ಆಪ್ತರಷ್ಟೇ ಅಲ್ಲದೆ ಅಂತಿಮ ಕ್ರಿಯೆಯ ವಿವಿಧ ಹಂತಗಳಲ್ಲಿ ಭಾಗಿಯಾದವರನ್ನು ಒಳಗೊಂಡ ಕಥಾನಕಗಳು, ಮೇಲ್ನೋಟಕ್ಕೆ ಸ್ವತಂತ್ರವೆನಿಸಿದರೂ ದೊಡ್ಡ ಹಂದರವೊಂದರ ಅವಿಭಾಜ್ಯ ಅಂಗಗಳಾಗಿ ಬಂದಿರುವುದು ಕಾದಂಬರಿಯ ವಿಶೇಷ. ಹೊಸ ಬಗೆಯ ಪ್ರಯೋಗ ಕೂಡಾ.

(ಕೆ. ಸತ್ಯನಾರಾಯಣ)

ತಾವು ಕೆಲಸ ಮಾಡುವ ಸಂಸ್ಥೆಗೆ ಅಗತ್ಯವಾದ ವೃತ್ತಿ ಸಂಬಂಧಿತ ಸಮೀಕ್ಷೆಯೊಂದರ ಸಲುವಾಗಿ ಪುರುಷೋತ್ತಮ ಮತ್ತು ಅನುಪಲ್ಲವಿ (ಪಿ & ಎ,ಪಿ) ನಿರೂಪಕನನ್ನು (ಎಲ್ಲಿಯೂ ಆತನ ಹೆಸರು ಪ್ರಸ್ತಾಪವಾಗಿಲ್ಲ) ಸಂಪರ್ಕಿಸುವುದು ಕಥೆಯ ಆರಂಭ. ಆ ಸಮೀಕ್ಷೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಆಕರ್ಷಕ ವ್ಯಕ್ತಿತ್ವದ ಯುವತಿ ಅನುಪಲ್ಲವಿಯ ಸಂಪರ್ಕ/ಒಡನಾಟವನ್ನು ಉಳಿಸಿಕೊಳ್ಳುವ ಹಂಬಲದಿಂದ ಅವರು ತಯಾರಿಸಿದ ಪ್ರಶ್ನಾವಳಿಗಳಿಗೆ ಲಿಖಿತ ಉತ್ತರಗಳನ್ನು ನೀಡಲು ಆತ ಒಪ್ಪಿಕೊಳ್ಳುತ್ತಾನೆ. ಮಧ್ಯವಯಸ್ಸನ್ನು ಮೀರಿದ ಸಭ್ಯ ಗ್ರಹಸ್ಥ ಆತ: ಹೆಚ್ಚಿನೆಲ್ಲ ಗೃಹಿಣಿಯರಂತೆ ತನ್ನ ಮನೆ-ಗಂಡ-ಮಕ್ಕಳು, ಸಮಾಜದಲ್ಲಿನ ಸ್ಥಾನಮಾನ ಇತ್ಯಾದಿಗಳತ್ತ ಮಾತ್ರ ಆಸಕ್ತಿ ಇರುವ ಪತ್ನಿ, ತಮ್ಮ ಸಂಸಾರದಲ್ಲೇ ವ್ಯಸ್ತರಾದ ವಿವಾಹಿತ ಹೆಣ್ಣುಮಕ್ಕಳು, ಅವರ ಮಕ್ಕಳು; ಇವರೊಂದಿಗಿನ ಗಟ್ಟಿ ಭಾವನಾತ್ಮಕ ಸಂಬಂಧದ ಸುಳಿವು ಇಲ್ಲಿಲ್ಲ. ಸಾವಿಗೆ ಸಂಬಂಧಿಸಿದ ಆತನ ವೃತ್ತಿಯ ಕುರಿತು ಪತ್ನಿ ತೋರಿಸುವ ಅಸಮಾಧಾನ ದಂಪತಿಗಳ ನಡುವಿನ ಬಿರುಕನ್ನು ಸೂಚಿಸುತ್ತದೆ. ಯುವತಿ ಅನುಪಲ್ಲವಿಯೆಡೆಗೆ ಆತನಿಗೆ ಉಂಟಾಗುವ ಆಕರ್ಷಣೆ ಪ್ರಾಯಶಃ ಸಹಜವಾದದ್ದು. ಆದರೆ ಯಾವುದೇ ಅನುಚಿತ ಉದ್ದೇಶಗಳಿಲ್ಲದ್ದು. ಆಕೆಯಡೆಗೆ ಕೇಂದ್ರೀಕೃತವಾಗುವ ಮನಸ್ಸು, ಒಡನಾಟದಿಂದ ಅನುಭವಿಸುವ ಆಹ್ಲಾದ, ಇವೆಲ್ಲ ಆತ ತನ್ನೊಳಗನ್ನು ಕೂಲಂಕಷವಾಗಿ ಗಮನಿಸುವ ಬಗೆಯಲ್ಲಿ ಮೂಡಿಬಂದಿದೆಯೇ ಹೊರತು ಭಾವೋತ್ಕಟತೆಯಿಂದಲ್ಲ. ಒಂದು ಮಟ್ಟದ ಪ್ರಬುದ್ಧತೆಯ ಸಂಕೇತ ಕೂಡಾ ಎಂದು ಕಾದಂಬರಿ ಮುಂದುವರೆದಂತೆಲ್ಲ ಅನಿಸತೊಡಗುತ್ತದೆ.

ಅನುಪಲ್ಲವಿಯ ಸಲುವಾಗಿ ಒಪ್ಪಿಕೊಂಡಿದ್ದರೂ, ತನ್ನ ವೃತ್ತಿಯ ಬಗ್ಗೆ ಬರೆಯಲೇ ಬೇಕೆಂದು ಆತ ನಿರ್ಧರಿಸುವುದು ತನ್ನದೇ ವಯಸ್ಸಿನ, ತನ್ನದೇ ಹೆಸರು, ಪೂರ್ವನಾಮ ಹೊಂದಿ ತನ್ನದೇ ಜಾತಿಗೆ ಸೇರಿದ ಇನ್ನೊಬ್ಬ ವ್ಯಕ್ತಿಯ ಸಾವು ತನ್ನ ಆಸುಪಾಸಿನಲ್ಲೇ ಸಂಭವಿಸಿದಾಗ. ಹಲವಾರು ಅಂತ್ಯಕ್ರಿಯೆಗಳ ಮೇಲುಸ್ತುವಾರಿ ವಹಿಸಿ ನಡೆಸಿಕೊಟ್ಟ ಆತ ಈ ಸಾವಿಗೆ ಪ್ರತಿಕ್ರಿಯಿಸುವ ರೀತಿ ಸ್ವಲ್ಪ ವಿಚಿತ್ರವೇ. ತನ್ನ ಪತ್ನಿಗೆ ಈ ಸಾವಿನ ಬಗ್ಗೆ ತಿಳಿಯದಂತೆ ಆ ಸುದ್ದಿ ಇರುವ ದಿನಪತ್ರಿಕೆಯನ್ನು ಎಸೆದುಬಿಡುವುದು, ತನಗೆ ಆತನ ಅಂತಿಮ ಪಯಣದ ವ್ಯವಸ್ಥೆ ಮಾಡಲು ಕರೆ ಬಾರದಂತೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು, ಆತನ ಅಂತಿಮ ಕ್ರಿಯೆಗಳನ್ನು ದೂರದಿಂದ, ಮರೆಯಲ್ಲಿ ನಿಂತು ನೋಡುವುದು ಇತ್ಯಾದಿ. ತಲ್ಲಣಗೊಂಡ ಸುಪ್ತ ಮನಸ್ಸಿನ ಪ್ರತಿಕ್ರಿಯೆ ಬಾಹ್ಯರೂಪದಲ್ಲಿ ಪ್ರಕಟವಾದ ಬಗೆ ಅದು. ಈ ಚಿತ್ರಣ ಲೇಖಕರ ಮನಶ್ಯಾಸ್ತ್ರೀಯ ಒಲವನ್ನು ಸೂಚಿಸುತ್ತಿರಬಹುದೇನೋ!

ಸಮೀಕ್ಷೆಯ ಮೊದಲ ಪ್ರಶ್ನೆಯೇ `ಈ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣಗಳೇನು?’. ತೀರ ಹೆಚ್ಚಿನ ವಿವರಣೆಯ ಅಗತ್ಯವಿಲ್ಲದಿದ್ದರೂ, ಅದುವರೆಗಿನ ತನ್ನ ಜೀವನವನ್ನು ವಸ್ತುನಿಷ್ಠವಾಗಿ ಗಮನಿಸುವ ಮನಸ್ಥಿತಿಯಲ್ಲಿದ್ದ ನಿರೂಪಕ ಬ್ಯಾಂಕ್ ಆಫೀಸರ್ ಆಗಿ ಪ್ರಾರಂಭಗೊಂಡ ತನ್ನ ವೃತ್ತಿ ಜೀವನ, ವಿವಾಹ, ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡುವ ಆಸಕ್ತಿ ಬೆಳೆದ ಬಗೆ, ಗಳಿಸಿದ ಲಾಭದಿಂದ ಬದಲಾದ ಜೀವನ ಶೈಲಿ, ಹೆಸರಾಂತ investment consultant ಆದ ತನ್ನ ಹಿತೈಷಿಯೊಬ್ಬರೊಂದಿಗೆ ಪಾರ್ಟನರ್ ಆಗಿ ಸೇರಿ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಇತ್ಯಾದಿ ತನ್ನ ಈ ವೃತ್ತಿಯವರೆಗಿನ ಘಟ್ಟಗಳನ್ನು ವಿವರಿಸುತ್ತಾ ಹೋಗುತ್ತಾನೆ. ಹೊರ ದೇಶದಲ್ಲಿ ನೆಲೆಸಿದ್ದು ತನ್ನನ್ನು ಬಹಳಷ್ಟು ನೆಚ್ಚಿಕೊಂಡಿದ್ದ ಪ್ರಭಾವಿ ಶ್ರೀಮಂತ ವ್ಯಕ್ತಿಯೊಬ್ಬನ ನಿಧನ, ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡುವಂತೆ ಆತನ ಸಂಬಂಧಿಕರು ತನ್ನನ್ನು ಕೇಳಿಕೊಂಡದ್ದು, ತುಂಬ ವ್ಯವಸ್ಥಿತವಾಗಿ ಎಲ್ಲವೂ ನಡೆದದ್ದರಿಂದ ಅವರ ಪರಿಚಿತರು ಮುಂದೆ ತಮ್ಮ ಹತ್ತಿರದವರ ನಿಧನದ ಸಂಧರ್ಭಗಳಲ್ಲಿ ತನ್ನನ್ನೇ ಮತ್ತೆ ಮತ್ತೆ ಸಂಪರ್ಕಿಸಿದ್ದು.. ಹೀಗೆ ತಾನು ಈ ವೃತ್ತಿಯನ್ನು ಆಯ್ಕೆ ಮಾಡದೆಯೂ ಅದು ತನ್ನದಾದದ್ದನ್ನು ನಿರೂಪಕ ಹೇಳುತ್ತಾನೆ.

ಶೇರು ಪೇಟೆಯ ಏರುಗಾಲದಲ್ಲಿ, ಊಹಿಸಿದ್ದಕ್ಕಿಂತ ಹೆಚ್ಚು ಲಾಭ ಬರುತ್ತಿದ್ದ ದಿನಗಳಲ್ಲಿ, ತಮ್ಮ ಆಡಂಬರದ ಜೀವನ, ತಾನು ಹಾಗೂ ತನ್ನ ಪತ್ನಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಕೊಳ್ಳಬೇಕಾದ ಆಸ್ತಿ ಪಾಸ್ತಿಯ ಕುರಿತು ನಡೆಸುತ್ತಿದ್ದ ಮಾತುಕತೆ, ಸಂಬಂಧಿಕರಿಂದ ತಮ್ಮ ಶ್ರೀಮಂತಿಕೆಯನ್ನು ಮರೆ ಮಾಚುವ ತಂತ್ರಗಳು, ಜೊತೆಯಾಗಿ ಕಾಣುತ್ತಿದ್ದ ಭವಿಷ್ಯದ ಕನಸುಗಳು.. ಇವೆಲ್ಲದರಿಂದ ತಮ್ಮಿಬ್ಬರಲ್ಲಿ ಹುಟ್ಟಿದ ಆಪ್ತ ಭಾಂಧವ್ಯ ನಂತರದ ದಿನಗಳಲ್ಲಿ, ಅದರಲ್ಲೂ ತಾನು death services ಪ್ರಾರಂಭ ಮಾಡಿದ ನಂತರ, ಸಡಿಲವಾದ ರೀತಿಯನ್ನು ಗಮನಿಸಿದ್ದ ನಿರೂಪಕ ಅದನ್ನು ನಿರ್ವಿಕಾರವಾಗಿ ಒಪ್ಪಿಕೊಂಡಿದ್ದಾನೆ.

ವ್ಯಾವಹಾರಿಕವಾಗುತ್ತಿರುವ ಸಂಬಂಧಗಳು, ಮಧ್ಯಮ, ಮೇಲು ಮಧ್ಯಮ ವರ್ಗದ ಸಂಸಾರಗಳಲ್ಲಿನ ಒಳ ಸುಳಿಗಳನ್ನು ನಿರೂಪಕನ ಸಂಸಾರ ಹಾಗೂ ಮೃತರ ಸಂಬಂಧಿಕರ ವರ್ತನೆಗಳ ಮೂಲಕ ಪರಿಶೋಧಿಸುವ ಲೇಖಕರ ಉದ್ದೇಶ ಇಲ್ಲಿ ಸ್ಪಷ್ಟ: ಯಶಸ್ವಿ ಪ್ರಯತ್ನ ಕೂಡಾ. ಈ ಮನೋವ್ಯಾಪಾರಗಳ ಜೊತೆಗೇ death services ನಲ್ಲಿ ಒದಗಿಸಬೇಕಾದ ಸೇವೆಯ ವಿವರಗಳು; ಶವಾಗಾರ, ಚಿತಾಗಾರ, ಅಂತಿಮ ವಿಧಿಗಳಿಗಾಗಿ ಪುರೋಹಿತರ ನಿಯೋಜನೆ, ಅಗತ್ಯ ಸಾಮಗ್ರಗಳನ್ನು ಒದಗಿಸುವುದು, ವಿದೇಶದಿಂದ/ಪರ ಊರಿನಿಂದ ಈ ಕಾರ್ಯಕ್ಕಾಗಿ ಬರುವ ಆಪ್ತರು/ಸಂಬಂಧಿಕರು ಇದ್ದಲ್ಲಿ ಅವರನ್ನು ಕರೆತರಲು ವಾಹನ ವ್ಯವಸ್ಥೆ, ಅವರ ವಾಸ್ತವ್ಯ, ಊಟೋಪಚಾರ; ಅಂತಿಮ ಸಂಸ್ಕಾರದ ನಂತರ ಆಸ್ತಿ ಮಾರಾಟ/ಪರಭಾರೆ ಇದ್ದಲ್ಲಿ ಅದಕ್ಕೆ ಬೇಕಾದ ಅಗತ್ಯ ಸಹಾಯ ಹೀಗೆ,, ತಾನು ಕೈಗೆತ್ತಿಕೊಳ್ಳಬೇಕಾದ ಒಂದೆರಡು ಕೇಸ್‌ಗಳ ಮೂಲಕ ವಿಶದ ವಿವರಣೆ ನೀಡುತ್ತಾನೆ ನಿರೂಪಕ. ಈ ವೃತ್ತಿಯನ್ನು ಪ್ರಾರಂಭಿಸಲು ಬೇಕಾದ ಅಗತ್ಯ ವಿವರಗಳೆಲ್ಲ ಇಲ್ಲಿ handy ಆಗಿ ಸಿಗುತ್ತವೆ. ಈ ಕಾದಂಬರಿಯನ್ನು ಓದಿದ ನಂತರ ಯಾರಾದರೂ ಈ ವೃತ್ತಿಯನ್ನು ಕೈಗೆತ್ತಿಕೊಂಡಲ್ಲಿ ಖಂಡಿತ ಆಶ್ಚರ್ಯ ಪಡಬೇಕಾದ್ದಿಲ್ಲ. ಲೇಖಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಅಂತಹವರ ಧರ್ಮ. ಪ್ರಾಯಶಃ ತಪ್ಪಿಸಲಾರರು.

ತೀರ ಅಪರೂಪದ ಸಂದರ್ಭಗಳನ್ನು ಬಿಟ್ಟರೆ, ಶ್ರೀಮಂತ ಕುಟುಂಬಗಳಿಗೆ ಮಾತ್ರ ಈ ಬಗೆಯ ಸೇವೆಗಳ ಅಗತ್ಯವಿರುವುದರಿಂದ ಸಾಕಷ್ಟು ಆದಾಯ ಇರುವ ವೃತ್ತಿ ಇದು ಎಂದು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಹಲವು ಸುಶಿಕ್ಷಿತ ಯುವಕರು ಈ ವೃತ್ತಿಯೆಡೆಗೆ ಸೆಳೆಯಲ್ಪಡಬಹುದು ಎಂದು ನಿರೂಪಕ ಅಭಿಪ್ರಾಯ ಪಡುತ್ತಾನೆ. ಅಪರಕರ್ಮ, ಶ್ರಾದ್ಧ ಇತ್ಯಾದಿ ವಿಧಿ ವಿಧಾನಗಳನ್ನು ನಡೆಸಿಕೊಡುವ ವ್ಯಕ್ತಿಗಳ ಜೊತೆಗೇ ಇನ್ನಿತರ ಅಗತ್ಯ ಸೇವೆಗಳಿಗೆ ಸೂಕ್ತರಾದವರನ್ನು ನಿಯೋಜಿಸುವ ಏಜೆನ್ಸಿಗಳು ಆಗಲೇ ತಲೆ ಎತ್ತಿರುವುದರ ಪ್ರಸ್ತಾಪವೂ ಇಲ್ಲಿದೆ ಪ್ರತಿಷ್ಠಿತ ವಿದೇಶೀ ವಿದ್ಯಾಸಂಸ್ಥೆಯಲ್ಲಿ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದ ತನ್ನ ಸಂಬಂಧಿ ಯುವಕನೊಬ್ಬ ತುಂಬ ಆಧುನಿಕ ರೀತಿಯಲ್ಲಿ funeral service ಗಳನ್ನು hospital franchise ಒಂದರಲ್ಲಿ ಪ್ರಾರಂಭ ಮಾಡಿದ್ದು, ಶವಗಳು ಹಾಳಾಗದಂತೆ ಇರಿಸಲು ಬೇಕಾದ ದೊಡ್ಡ ದೊಡ್ದ ತಂಪು ಪೆಟ್ಟಿಗೆಗಳನ್ನು ಒದಗಿಸುವ ಕೆಲಸದಲ್ಲಿ ತನ್ನ ಇನ್ನೊಬ್ಬ ಸಂಬಂಧಿ ತೊಡಗಿಕೊಂಡದ್ದು ಹೀಗೆ ಉದಾಹರಣೆಗಳ ಮೂಲಕ ಈ ವೃತ್ತಿಯ ಇಂದಿನ ಮತ್ತು ಭವಿಷ್ಯದ ಆಯಾಮಗಳ ಕುರಿತು ನಿರೂಪಕ ಚರ್ಚಿಸುತ್ತಾನೆ. ತಮ್ಮ ಮುಂದಿನ ತಲೆಮಾರಿನವರು ಈ ವೃತ್ತಿಯನ್ನು ಆಯ್ದುಕೊಳ್ಳಲಿ ಎಂದು ಬಯಸುತ್ತೀರಾ? ಎಂಬ ಪ್ರಶ್ನೆಯ ಉತ್ತರ ರೂಪದ ಚಿತ್ರಣ ಇದು. ಅಂತಿಮ ವಿಧಿಗಳ ಶಾಸ್ತ್ರೋಕ್ತ ತರಬೇತಿ ಪಡೆದ ಬ್ರಾಹ್ಮಣೇತರ (ದಲಿತರನ್ನೂ ಒಳಗೊಂಡ) ವರ್ಗದವರನ್ನು ಈ ಸೇವೆಗಾಗಿ ನೇಮಿಸಿದಾಗ ಬಂದ/ಬರಬಹುದಾದ ವಿರೋಧ, ಇಂತಹ ವಿಧಿಗಳಲ್ಲಿ ನಂಬಿಕೆ, ಶ್ರದ್ಧೆ ಇದನ್ನು ನಡೆಸಿಕೊಡುವ ಬ್ರಾಹ್ಮಣ ಪುರೋಹಿತರಲ್ಲಿ ನಿಜಕ್ಕೂ ಇದೆಯೇ, ಅಂತಹ ಶ್ರದ್ಧೆ ಮತ್ತು ವಿಧಿಗಳನ್ನು ನೆರವೇರಿಸುವ ಕ್ಷಮತೆ ಮಾತ್ರ ಮುಖ್ಯವಾಗಬೇಕೇ ಹೊರತು ಜಾತಿ ಅಲ್ಲ ಎನ್ನುವ ಚಿಂತನೆಗಳು ಮಹತ್ವದ್ದು; ಇವು ಕೂಡ ಅಂತಹ ಸಂದರ್ಭಗಳ ಹಿನ್ನೆಲೆಯಲ್ಲಿ ಬಂದಿದ್ದು preachy ಆಗಿಲ್ಲದಿರುವುದು ಮೆಚ್ಚುಗೆಯ ಅಂಶ.

ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಯೊಂದರ ವಿವಾಹ ಸಮಾರಂಭಕ್ಕೆ ತಯಾರಾದ ಛತ್ರಗಳಲ್ಲಿ ಬ್ಲಾಕ್ ಆದ ಟಾಯ್ಲೆಟ್‌ಗಳು, ಸಂಬಂಧ ಪಟ್ಟ ಮ್ಯಾನ್ ಹೋಲ್‌ನಲ್ಲಿ ಇಳಿದು ಕೊಳೆ ನೀರಿನ ಹರಿದಾಟವನ್ನು ನಿಯಂತ್ರಿಸುತ್ತಿದ್ದ ಜಾಡಮಾಲಿಯ ಸಾವು, ರಾತ್ರೋ ರಾತ್ರಿ ಆತನ ಅಂತ್ಯ ಕ್ರಿಯೆಗಳನ್ನು ಮಾಡಲು ಕಮಿಷನರರಿಂದ ಆದೇಶ, ತನ್ನನ್ನು ಹುಡುಕಿಕೊಂಡು ಮನೆಗೆ ಬಂದ ನಗರ ಕಾರ್ಪೊರೇಶನ್‌ನ ಅಧಿಕಾರಿಗಳು, ತೀರ ಅಸಹಜ ಪರಿಸ್ಥಿತಿಯಲ್ಲಿ ನಡೆದ ವಿಧಿ ವಿಧಾನಗಳು; ಇವನ್ನೆಲ್ಲ ವಿಶದವಾಗಿ ವಿವರಿಸುತ್ತಾ, ತನ್ನ ವೃತ್ತಿಯಲ್ಲಿ ಎದುರಾದ ಸವಾಲಿನ ಸಂದರ್ಭ ಇದು ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ನಮ್ಮೆದುರಿಗೇ ಇದೆಲ್ಲ ನಡೆಯುತ್ತಿದೆಯೇನೋ ಎಂದು ಭ್ರಮೆಯಾಗುವಷ್ಟು ಚೆನ್ನಾಗಿ ಚಿತ್ರಿಸಿದ ಪ್ರಕರಣ ಕೂಡಾ. ಈ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂದೆಂದೂ ತನಿಖೆಗೆ ಒಳಗಾಗಬಾರದೆಂಬ ಉದ್ದೇಶದಿಂದ ನಡೆಸಲಾದ ಈ ಅಂತ್ಯ ಸಂಸ್ಕಾರದ ನಾಟಕದಲ್ಲಿ ತಾನು ಸಹಭಾಗಿಯಾಗಬೇಕಾಗಿ ಬಂದಂಥ ಪರಿಸ್ಥಿತಿ ಹಲವು ದಿನಗಳ ಕಾಲ ತನ್ನನ್ನು ಕಾಡಿತ್ತು ಎಂದು `ನಿಮ್ಮ ವೃತ್ತಿಯಲ್ಲಿ ಸವಾಲುಗಳು ಎದುರಾಗಿವೆಯೇ’ ಎಂಬ ಪ್ರಶ್ನೆಯ ಪ್ರತಿಕ್ರಿಯೆಯಲ್ಲಿ ಆತ ದಾಖಲಿಸುತ್ತಾನೆ. ವಿಮಾನ ಅಪಘಾತದಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಶವಗಳ ರಾಶಿಯಲ್ಲಿ ತಮ್ಮದಲ್ಲದ ವ್ಯಕ್ತಿಯ ಶವವೊಂದನ್ನು ತಮ್ಮದೆಂದು ತಪ್ಪಾಗಿ ಗುರುತಿಸಿದ್ದು, ತಿಳಿದಿದ್ದರೂ ಅದನ್ನು ಹೇಳಲಾರದ ಪರಿಸ್ಥಿತಿಯಲ್ಲಿ ಆ ಅಪರಿಚಿತ ಶವಕ್ಕೆ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ಮಾಡಬೇಕಾದ ವಿಚಿತ್ರ ಸನ್ನಿವೇಶ ಕೂಡಾ ತನ್ನನ್ನು ಕಂಗೆಡಿಸಿತ್ತು ಎಂದು ನಿರೂಪಕ ಉಲ್ಲೇಖಿಸುತ್ತಾನೆ. ಕಾದಂಬರಿಯಲ್ಲಿ ಬಂದ ಎಲ್ಲ ಸಾವುಗಳೂ ಬೇರೆ ಬೇರೆ ಬಗೆಯವು ಮತ್ತು ಪ್ರತಿಯೊಂದು ಕೂಡಾ ಸ್ವತಂತ್ರ ಕಥಾನಕಗಳಂತೆ ಓದಿಸಿಕೊಂಡು ಹೋಗುತ್ತದೆ. ಸ್ವಗತ ರೂಪದ ನಿರೂಪಕನ ಚಿಂತನೆಗಳು ಇವುಗಳನ್ನು ಹೊಂದಿಸುವ ಕೊಂಡಿಯಂತೆ ಕೆಲಸ ಮಾಡಿವೆ.

ಹಲವಾರು ಅಂತ್ಯಕ್ರಿಯೆಗಳ ಮೇಲುಸ್ತುವಾರಿ ವಹಿಸಿ ನಡೆಸಿಕೊಟ್ಟ ಆತ ಈ ಸಾವಿಗೆ ಪ್ರತಿಕ್ರಿಯಿಸುವ ರೀತಿ ಸ್ವಲ್ಪ ವಿಚಿತ್ರವೇ. ತನ್ನ ಪತ್ನಿಗೆ ಈ ಸಾವಿನ ಬಗ್ಗೆ ತಿಳಿಯದಂತೆ ಆ ಸುದ್ದಿ ಇರುವ ದಿನಪತ್ರಿಕೆಯನ್ನು ಎಸೆದುಬಿಡುವುದು, ತನಗೆ ಆತನ ಅಂತಿಮ ಪಯಣದ ವ್ಯವಸ್ಥೆ ಮಾಡಲು ಕರೆ ಬಾರದಂತೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು, ಆತನ ಅಂತಿಮ ಕ್ರಿಯೆಗಳನ್ನು ದೂರದಿಂದ, ಮರೆಯಲ್ಲಿ ನಿಂತು ನೋಡುವುದು ಇತ್ಯಾದಿ. ತಲ್ಲಣಗೊಂಡ ಸುಪ್ತ ಮನಸ್ಸಿನ ಪ್ರತಿಕ್ರಿಯೆ ಬಾಹ್ಯರೂಪದಲ್ಲಿ ಪ್ರಕಟವಾದ ಬಗೆ ಅದು.

ಈ ವೃತ್ತಿಯಿಂದ ನಿಮ್ಮ ಸ್ವಭಾವದ ಮಿತಿಗಳನ್ನು ಮೀರಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗೆ ನಿರೂಪಕನ ಪ್ರತಿಕ್ರಿಯೆ ಮನುಷ್ಯ ಸ್ವಭಾವದ ಕುರಿತಾದ ಲೇಖಕರ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ. ಇನ್ನೊಂದು ಅಸಹಜ ಸಾವಿನ ವಿಸ್ತೃತ ವಿವರ ಕೂಡಾ ಇಲ್ಲಿ ಸಿಗುತ್ತದೆ.

ಒಂದೇ ಜಾತಿಗೆ ಸೇರಿದ ಇಬ್ಬರು ಪ್ರಭಾವೀ ವ್ಯಕ್ತಿಗಳು; ಶ್ರೀಮಂತಿಕೆಯಲ್ಲೂ ಸರಿಸಾಟಿಯಾದವರು; ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಉತ್ತಮ ಪದವಿ ಪಡೆದ ಇವರಲ್ಲೊಬ್ಬರ ಮಗ, ಅದೇ ಮಟ್ಟದ ವಿದ್ಯಾವಂತೆಯಾದ ಇನ್ನೊಬ್ಬರ ಮಗಳ ವಿವಾಹದ ನಿರ್ಧಾರ: ಹಿಂದೆಂದೂ ಕಂಡು ಕೇಳಿ ಅರಿಯದಷ್ಟು ಅದ್ಧೂರಿಯಾಗಿ ನಡೆದ ವಿವಾಹ ಒಂದೆರಡು ತಿಂಗಳಲ್ಲಿ ಮುರಿದು ಬಿದ್ದು ತನ್ನ ತಂದೆಯ ಮನೆಗೆ ಹಿಂದಿರುಗಿದ ಯುವತಿ; ಈ ವಿಷಯದ ಗುಲ್ಲು ಇನ್ನೂ ಹಸಿಯಾಗಿರುವಾಗಲೇ ನೇಣಿಗೆ ಶರಣಾಗಿ ಆಕೆಯ ಆತ್ಮಹತ್ಯೆ; ಅಂತ್ಯ ಸಂಸ್ಕಾರದ ಎಲ್ಲ ವ್ಯವಸ್ಥೆ ಮಾಡಲು ನಿಯೋಜಿತನಾದ ನಿರೂಪಕ ಸುತ್ತಲಿನ ವಿದ್ಯಮಾನಗಳನ್ನು ಕಂಡ ರೀತಿ; ಈ ಪ್ರಮುಖರ ನಡುವೆ ಉಂಟಾದ ತೀವ್ರತರ ವೈಷಮ್ಯವನ್ನು ತಣಿಸಲು ಅಂತ್ಯಕ್ರಿಯೆಗಳ ನಡುವೆಯೇ ನಡೆಯುತ್ತಿದ್ದ ಸಂಧಾನ ಯತ್ನಗಳು; ಈ ಜಾತಿಯ ಮಠಾಧೀಶರು ಈ ಸಂಧಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಮುಂಬರುವ ಚುನಾವಣೆಯಲ್ಲಿ ಇವರಿಬ್ಬರ ನಡುವಿನ ಬಿರುಕು ಬೀರಬಹುದಾದ ಪರಿಣಾಮದ ಕುರಿತು ಮಠಾಧೀಶರ ಚಿಂತೆ ಇತ್ಯಾದಿ ಇಡೀ ಪ್ರಕರಣವನ್ನು ದಾಖಲಿಸಿದ ರೀತಿ ಅನನ್ಯ. ಸ್ವಭಾವ ಎನ್ನುವುದು ಶನಿಮಹಾತ್ಮನ ಹಾಗೆ, ಎಷ್ಟೇ ಪ್ರಯತ್ನ ಪಟ್ಟರೂ ಅದರ ಮಿತಿಗಳನ್ನು ಮೀರುವುದು ಕಷ್ಟಸಾಧ್ಯ ಎನ್ನುವ ನಿರೂಪಕ, ಈ ದುರಂತ ಸಾವಿನ ಪ್ರಕರಣದಲ್ಲಿ ಕೂಡ ಪ್ರತಿಯೊಬ್ಬ ವ್ಯಕ್ತಿಯೂ (ತನ್ನನ್ನೂ ಸೇರಿ) ತಮ್ಮ ಸ್ವಭಾವಕ್ಕೆ ಬದ್ಧರಾಗಿಯೇ ನಡೆದುಕೊಂಡಿದ್ದೇವೆ ಎಂದು ವಾದಿಸುತ್ತಾನೆ. ಇದೊಂದು ವ್ಯಕ್ತಿಗತ ಅಭಿಪ್ರಾಯ ಎಂದಷ್ಠೇ ಪರಿಗಣಿಸಲು ಸಾಧ್ಯ. ಈ ಪ್ರಕರಣದ ಮೂಲಕ ಆ ವಾದಕ್ಕೆ ನೀಡಿರುವ ಪುಷ್ಟೀಕರಣವೂ ಶಕ್ತವಾಗಿಲ್ಲ ಎನಿಸಿದರೂ ಅದು ಈ ಕಥಾನಕವನ್ನು, ಅದರ ನಿರೂಪಣೆಯ ರೀತಿಯನ್ನು ಮೆಚ್ಚುವಲ್ಲಿ ಯಾವ ಅಡ್ಡಿಯನ್ನೂ ಉಂಟು ಮಾಡುವುದಿಲ್ಲ.

ಸಿರಿವಂತ ಕುಟುಂಬಗಳು ಮಾತ್ರವೇ ವಾಸಿಸುತ್ತಿದ್ದ, ಎಲ್ಲ ಆಧುನಿಕ ಸೌಕರ್ಯಗಳನ್ನು ಹೊಂದಿದ್ದ ಹೆಸರುವಾಸಿ ವಸತಿ ಸಂಕೀರ್ಣ; ಹಿರಿಯರು ಕಿರಿಯರನ್ನು ಸೇರಿ ಎಲ್ಲ ವಯಸ್ಸಿನವರ ಸುರಕ್ಷತೆಗೆ ಆದ್ಯತೆ ಕೊಡುತ್ತಿದ್ದ ವ್ಯವಸ್ಥಾಪಕ ವರ್ಗ… ಇಂಥ ಕಡೆ, ಆಟದ ಭರದಲ್ಲಿದ್ದ ಏಳೆಂಟು ವರ್ಷದ ಬಾಲಕ ಆಕಸ್ಮಿಕವಾಗಿ ಟೆರೇಸ್‌ನಿಂದ ಬಿದ್ದು ಸ್ಥಳದಲ್ಲೇ ಮೃತನಾದದ್ದು ನಂಬಲಸಾಧ್ಯವಾದ ಸಂಗತಿಯೇ. ನಡೆದದ್ದಂತೂ ನಿಜ. ಜಗತ್ತನ್ನು ಕಣ್ತೆರೆದು ನೋಡುವ ಮುನ್ನವೇ ಆ ಎಳೆಯ ಜೀವದ ಅಂತಿಮ ಪಯಣ; ಈ ದಾರುಣ ಸಂದರ್ಭದಲ್ಲಿ, ಆ ನತದೃಷ್ಟ ತಂದೆ ತಾಯಿಯ ಇನ್ನಿಲ್ಲದ ದುಃಖದ ನಡುವೆ ಆ ಮಗುವಿನ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಾಗಿರುವುದು ಈ ವೃತ್ತಿಯಿಂದಷ್ಟೇ ಅಲ್ಲ, ಜೀವನದಿಂದಲೇ ವಿಮುಖನಾಗಿಸುತ್ತದೆ ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ. ದೇವರ ಮೇಲಿನ ನಂಬಿಕೆ, ಕ್ಷಣಭಂಗುರ ಜೀವನದಲ್ಲಿ ಸ್ಥಿತಪ್ರಜ್ಞೆಯನ್ನು ಭೋದಿಸುವ ಬುದ್ಧ ಮತ್ತಿತರ ದಾರ್ಶನಿಕರ ತತ್ವಗಳು ಇವೆಲ್ಲವೂ ಎಷ್ಟು ನಿರರ್ಥಕ ಎಂಬೆಲ್ಲ ಚಿಂತನೆಯಲ್ಲಿ ತನ್ನನ್ನು ಮುಳುಗಿಸಿದ್ದ ಈ ಸಂದರ್ಭಗಳನ್ನು ದಾಖಲಿಸುತ್ತಾ ಆತ ಕೊನೆಗೂ ಈ ವಿಮುಖತೆಗೇ ವಿಮುಖರಾಗಿ ತಂತಮ್ಮ ಜೀವನಕ್ಕೆ ಮರಳುವುದೇ ಜೀವನಧರ್ಮವೇನೋ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಸಮೀಕ್ಷೆಯ ಮಗದೊಂದು ಪ್ರಶ್ನೆಗೆ ವಿಸ್ತೃತ ಪ್ರತಿಕ್ರಿಯೆ ಇದು.

ಮೃತ್ಯುವನ್ನು ಯಾವ ಬಗೆಯಲ್ಲಿ ಸ್ವೀಕರಿಸುವುದು ಸೂಕ್ತ ಎಂಬ ಲೇಖಕರ ಚಿಂತನೆಗಳು ನಿರೂಪಕನ ಮೂಲಕ ಹೊರಬಂದದ್ದು ಈ ವೃತ್ತಿಯಲ್ಲಿದ್ದವರ, ಇವರಿಂದ ಸೇವೆ ಪಡೆದವರ ಮನೋಧರ್ಮವನ್ನು ಹೇಗೆ ಹೆಚ್ಚು ಮಾನವೀಯಗೊಳಿಸಬಹುದು ಎಂದು ಸಮೀಕ್ಷಕರು ಒಡ್ಡಿದ ಪ್ರಶ್ನೆಯಿಂದ. ಓದುಗರನ್ನೂ ಸೇರಿ ಪ್ರತಿಯೊಬ್ಬರೂ ತಮ್ಮನ್ನು ತಯಾರು ಮಾಡಿಕೊಳ್ಳ ಬೇಕಾದ ಅನಿವಾರ್ಯ ಸಂದರ್ಭ ಈ ಮೃತ್ಯು. ಇಲ್ಲಿಯ ಚಿಂತನಾ ಲಹರಿ ಹಲವರನ್ನು ತಟ್ಟುವುದಂತೂ ಸತ್ಯ. ಈ ಕಾದಂಬರಿಯ ಉದ್ದೇಶವೂ ಅದೇ ಇದ್ದೀತು.

ತನ್ನನ್ನು ಅತ್ಯಂತ ಪ್ರಭಾವಿಸಿದ ವ್ಯಕ್ತಿಯೆಂದೆನ್ನಲಾಗದಿದ್ದರೂ ತಾರುಣ್ಯದಲ್ಲಿ ಹಲವು ದುಷ್ಕೃತ್ಯಗಳನ್ನು ಎಸಗಿ ಪ್ರಸ್ತುತ ಯೋಗಿಯಂತಹ ಜೀವನ ನಡೆಸುತ್ತಿರುವ ತನ್ನ `ಚಿಕ್ಕಪ್ಪ’ ನ ಪ್ರಸ್ತಾಪ ಮಾಡುತ್ತಾನೆ ನಿರೂಪಕ. ಇಲ್ಲಿ ಈ ವ್ಯಕ್ತಿಯ ಕುರಿತಾದ ವಿಶ್ಲೇಷಣೆಯಲ್ಲಿ ಕಾಣ ಸಿಗುವ ಲೇಖಕರ ಚಿಂತನೆಗಳು-ಪರಿಸ್ಥಿತಿಗೆ ತಕ್ಕುದಾಗಿ ಬದಲಾಗುವ ಮನುಷ್ಯನ ವರ್ತನೆ, ಅಂತೆಯೇ ಪಡೆಯಬಹುದಾದ ಪ್ರಬುದ್ಧತೆ ಇತ್ಯಾದಿ-ಓದುಗರನ್ನೂ ಆ ಎಡೆಗೆ ಸೆಳೆದೀತು. ತಮ್ಮನ್ನು ಪ್ರಭಾವಿಸಿದ ವ್ಯಕ್ತಿ/ವ್ಯಕ್ತಿಗಳ ವಿಶ್ಲೇಷಣೆಯಲ್ಲಿ ತೊಡಗುವಂತೆಯೂ ಮಾಡಬಹುದು. ಜೀವನವೆಂಬ ಮಾಯೆಯಾಟದ ಕುರಿತು ತಾವೇ ಚಿಂತನೆಗೆ ತೊಡಗಿರುವ ಓದುಗ ವರ್ಗಕ್ಕೆ ಈ ಭಾಗವೂ ಪ್ರಿಯವಾಗುವುದು ಖಂಡಿತಾ. ಯಾವ ಸಾಲು, ಯಾವ ಸನ್ನಿವೇಶ ಯಾರಲ್ಲಿ ಯಾವ ಬಗೆಯ ಹೊಳಹನ್ನು ನೀಡಬಹುದೆಂದು ಖಚಿತವಾಗಿ ಯಾರೂ ಹೇಳಲಾರರು. ಅಂತೆಯೇ ಇಲ್ಲಿಯೂ.

ಕಾದಂಬರಿಯ ಕೊನೆಯ ಭಾಗದಲ್ಲಿ ಅನುಪಲ್ಲವಿಯ ಪಾತ್ರ ಮತ್ತೆ ಹಾಜರಾಗುತ್ತದೆ. ಸಮೀಕ್ಷೆಯ ಸಂಕ್ಷಿಪ್ತ ವರದಿ ತಯಾರಿಸಿ ಆಕೆಯನ್ನು ಭೇಟಿಯಾಗಲೆಂದು ಹೊರಡುವ ನಿರೂಪಕನಿಗೆ ಆಕೆಯನ್ನು ಮತ್ತೆ ಕಾಣುವ ಸಂಭ್ರಮ; ಆಕೆಯ ಪ್ರತಿಕ್ರಿಯೆಯ ಕುರಿತು ಆತಂಕ.. ಆ ಭೇಟಿಯ ವಿವರ, ನಂತರದ ವಿದ್ಯಮಾನಗಳು ಒಂದಷ್ಟು ನಾಟಕೀಯವೆನಿಸುತ್ತವೆ. ಆಕೆಯ ಪಾತ್ರ ಚಿತ್ರಣವೂ ಗಟ್ಟಿ ನೆಲೆಯಲ್ಲಿ ಮೂಡಿಲ್ಲ ಎನಿಸುತ್ತದೆ. ಹಾಗಿದ್ದೂ ನಿರೂಪಕನ ಒಳತೋಟಿಗಳು, ಚಿಂತನೆಗಳು ಈ ಅಂತಿಮ ಭಾಗದಲ್ಲೂ ಸಮರ್ಥವಾಗಿ ಮೂಡಿಬಂದಿವೆ.

ಮನುಷ್ಯ ಸಂಬಂಧಗಳ, ವರ್ತನೆಗಳ ಕುರಿತು ವಿಶ್ಲೇಷಣೆ, ಸಾವಿನ ವಿಷಣ್ಣತೆಯಿಂದ ಹೊರಬರುವ ಪ್ರಯತ್ನದಲ್ಲಿ ಮೂಡಿದ ಅನಿಸಿಕೆಗಳು, ಜೀವನ್ಮರಣದ ಹಲವು ತಲ್ಲಣಗಳ ಕುರಿತಾದ ಚಿಂತನಾ ಲಹರಿ `ಸಾವಿನ ದಶಾವತಾರ’ ಪ್ರಮುಖ take-home ಅಂಶಗಳು. ಇವುಗಳು ತುಂಬ ಪ್ರಾಮಾಣಿಕವಾಗಿ ಮೂಡಿಬಂದಿರುವುದು ಕಾದಂಬರಿಯ authenticity ಯನ್ನು ಹೆಚ್ಚಿಸುತ್ತದೆ. ಸಾಮಾನ್ಯ, ವ್ಯಾವಹಾರಿಕ ವ್ಯಕ್ತಿ ಎಂದೇ ಕಾಣುವ ನಿರೂಪಕ ತನ್ನ ಸುತ್ತ ಮುತ್ತಲಿನ ವಿದ್ಯಮಾನಗಳನ್ನು ಸಹಜ ಆಸ್ಥೆಯಿಂದ ಗಮನಿಸುವಂತೆ ತನ್ನ ಒಳಗನ್ನೂ ಅಷ್ಟೇ non judgemental ಆಗಿ ಗಮನಿಸಬಲ್ಲ ಸೂಕ್ಷ್ಮಜ್ಞ Introverted extrovert ಎನ್ನಬಹುದೇನೋ! ಸೊಗಸಾದ ಭಾಷೆ, ನಿರೂಪಣೆಯ ಶೈಲಿ, ಒಳಗೊಂಡ ವಿಚಾರಗಳು, ವಿವರಣೆಗೆ ನಿಲುಕದ ಆದರೆ ಆಪ್ತವೆನಿಸುವ ಹಲವಾರು ಆಂಶಗಳನ್ನು ಒಳಗೊಂಡ ಕಾದಂಬರಿ ಇದು. ಕಥಾವಸ್ತುವಂತೂ ನಿಜಕ್ಕೂ ಅಪರೂಪದ್ದು. ಒಂದು ಒಳ್ಳೆಯ ಕಲಾತ್ಮಕ ಸಿನೆಮಾವನ್ನು ನೋಡಿದ ಅನುಭವ ಕೊಡುವ ಈ ಕಾದಂಬರಿ, ಕನ್ನಡ ಕಾದಂಬರಿ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿ ನಿಲ್ಲ ಬಲ್ಲ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು.

(ಕೃತಿ: ಸಾವಿನ ದಶಾವತಾರ (ಕಾದಂಬರಿ), ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಅಭಿನವ ಪ್ರಕಾಶನ, ಬೆಲೆ:  150/-)