ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ. ಇನ್ನು ಅಪಾಯಕ್ಕೆ ಸಿಲುಕಿದಾಗ ಹೊರಡಿಸುವ ಹಾಡೇ ಒಂದು ಬಗೆಯದ್ದಾದರೆ ಸಾಮೂಹಿಕವಾಗಿ ಒಂದು ಕುಟುಂಬದ ಸಿಕಾಡಗಳು ಹಾಡುವ ಹಾಡು ಮತ್ತೊಂದು ರೀತಿಯದ್ದು.
ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ವಿಜ್ಞಾನ ಲೇಖನಗಳ ಸಂಕಲನ “ಜೀವಿವಿಜ್ಞಾನ”ದಿಂದ ಆಯ್ದ ಲೇಖನ ನಿಮ್ಮ ಓದಿಗೆ

ಅಲ್ಪ ಸ್ವಲ್ಪ ಗಿಡಮರಗಳಿಂದ ಕೂಡಿರುವ ಪ್ರಶಾಂತ ಪ್ರದೇಶದ ಪ್ರಶಾಂತತೆಯನ್ನು ಗಮನಿಸಿದರೆ ಅಲ್ಲಿ ನೀರವತೆ ಇರುವುದಿಲ್ಲ; ಬದಲಿಗೆ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರುವ ಗುಮ್ ಎನ್ನುವ ಸದ್ದು ಅತ್ಯಂತ ಸಹಜವಾಗಿ ಕೇಳಿಬರುತ್ತದೆ. ಈ ಸದ್ದಿನ ಮೂಲವೇ, ಕೀಟಗಳ ಸಂಗೀತ ಸಾಮ್ರಾಟ ಎನಿಸಿಕೊಂಡಿರೋ ಸಿಕಾಡ ಎಂಬ ಜೀವಿ. ಎತ್ತರಿಸಿದ ಧ್ವನಿಯಲ್ಲಿ ಸದಾ ಹಾಡುತ್ತಿರುವ ಈ ಕೀಟಗಳದ್ದು ಒಂದು ವಿಶಿಷ್ಟ ವಿಚಿತ್ರ ಪ್ರಪಂಚ. ‘ಸಿಕಾಡಿಡೇ’ ಕುಟುಂಬಕ್ಕೆ ಸೇರಿದ ಈ ಕೀಟವು ಭಾರತದಲ್ಲಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಚೈನಾ, ಜಪಾನ್, ಯೂರೋಪ್‍ನಲ್ಲೂ ಅತೀ ಸಾಮಾನ್ಯವಾಗಿ ಕಂಡುಬರುತ್ತದೆ; ಸಮಶೀತೋಷ್ಣ ಪ್ರದೇಶದಲ್ಲಿ ಕಂಡುಬರುವ ಸಿಕಾಡಗಳಿಗೂ ಉಷ್ಣವಲಯದ ಸಿಕಾಡಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಆದರೆ ಯಾವ ಪ್ರದೇಶದ ಸಿಕಾಡವಾದರೂ ದನಿ ಎತ್ತರಿಸಿ ಹಾಡುವ ವಿಶೇಷತೆ ಇಲ್ಲದೇ ಇಲ್ಲ.

(ಕ್ಷಮಾ ವಿ. ಭಾನುಪ್ರಕಾಶ್‌)

ಇವುಗಳ ಹಾಡು ನಮ್ಮಂತೆ ಗಂಟಲಿನೊಳಗಿರುವ ಧ್ವನಿತಂತುವಿನಿಂದ ಹೊರಡುವುದಿಲ್ಲ; ಅದಕ್ಕಾಗೇ ವಿಶೇಷವಾದ ‘ಟಿಂಬಾಲ್’ಗಳೆಂಬ ಸ್ನಾಯುಗಳಿವೆ. ಇವು ಸಿಕಾಡದ ಕಿಬ್ಬೊಟ್ಟೆಯ ಪಕ್ಕದಲ್ಲಿರುತ್ತವೆ. ಇವುಗಳನ್ನು ಕುಗ್ಗಿಸಿದಾಗ ಒಂದು ‘ಕ್ಲಿಕ್’ ಶಬ್ದ ಮತ್ತು ಹಿಗ್ಗಿಸಿದಾಗ ಮತ್ತೊಮ್ಮೆ ಮತ್ತೊಂದು ಬಗೆಯ ‘ಕ್ಲಿಕ್’ ಶಬ್ದ ಉತ್ಪಾದನೆಯಾಗುತ್ತದೆ. ಈ ಸದ್ದು ಉತ್ಪಾದನೆಯಾದಾಗ ಎತ್ತರಿಸಿದ ಪಿಚ್‍ನಲ್ಲಿರುವುದಿಲ್ಲ; ಆದರೆ, ಸಾಮಾನ್ಯವಾಗಿ ಟೊಳ್ಳಾಗಿರುವ ಸಿಕಾಡಗಳ ಹೊಟ್ಟೆ, ಅದರಲ್ಲೂ ಗಂಡು ಸಿಕಾಡದ ಹೊಟ್ಟೆಯು ಅನುರಣನ ಕೊಠಡಿಯಂತೆ ವರ್ತಿಸಿ ಆ ಸದ್ದನ್ನು ಹಲವಾರು ಡೆಸಿಬಲ್‍ಗಳಷ್ಟು ಎತ್ತರಿಸುತ್ತದೆ. ಹೀಗೆ ಎತ್ತರಿಸಿದ ಸದ್ದನ್ನು ಹೊರಡಿಸುವ ಸಿಕಾಡಗಳು ಗುಂಪುಗುಂಪಾಗಿರುವ ಕಾರಣ, ಅವುಗಳ ವೈಯಕ್ತಿಕ ಹಾಡು ಸಾಮೂಹಿಕ ಹಾಡಾಗಿ ಪರಿವರ್ತನೆಗೊಂಡು, ಗುಮ್ ಎನ್ನುತ್ತಾ ಮರಗಿಡಗಳ ನಡುವೆ ಅನುರಣಿಸುತ್ತವೆ. ಹಾಗೆಂದು ಎಲ್ಲಾ ಸಿಕಾಡಗಳೂ ಒಂದೇ ಹಾಡನ್ನು ಹಾಡುತ್ತವೆ ಎಂದರ್ಥವಲ್ಲ. ನಮ್ಮಲ್ಲಿರುವಂತೆ ಇವುಗಳ ಪ್ರಪಂಚದಲ್ಲೂ ಸನ್ನಿವೇಶಕ್ಕೆ, ಭಾವನೆಗೆ ತಕ್ಕಂತೆ ಹಾಡುಗಳೂ ಬದಲಾಗುತ್ತವೆ.

ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ. ಇನ್ನು ಅಪಾಯಕ್ಕೆ ಸಿಲುಕಿದಾಗ ಹೊರಡಿಸುವ ಹಾಡೇ ಒಂದು ಬಗೆಯದ್ದಾದರೆ ಸಾಮೂಹಿಕವಾಗಿ ಒಂದು ಕುಟುಂಬದ ಸಿಕಾಡಗಳು ಹಾಡುವ ಹಾಡು ಮತ್ತೊಂದು ರೀತಿಯದ್ದು. ಕೆಲವೊಮ್ಮೆ ಸಿಕಾಡಗಳು ಹೊರಡಿಸುವ ಸದ್ದು ಎಷ್ಟು ಎತ್ತರದ ಪಿಚ್‍ನಲ್ಲಿರುತ್ತದೆಂದರೆ ಹತ್ತಿರದಲ್ಲಿ ಆ ಸದ್ದನ್ನು ಕೇಳಿದರೆ ಒಬ್ಬ ಮನುಷ್ಯನ ಕಿವಿಯು ಶಾಶ್ವತವಾಗಿ ಕಿವುಡಾಗುತ್ತದೆ. ಮತ್ತೂ ಕೆಲವು ಸಿಕಾಡಗಳ ಹಾಡು, ಮನುಷ್ಯನ ಕಿವಿಗಳು ಗುರುತಿಸಲಾಗದಷ್ಟು ಹೆಚ್ಚಿನ ಡೆಸಿಬಲ್‍ಗಳದ್ದಾಗಿರುತ್ತದೆ. ವಿಚಿತ್ರವೆಂದರೆ, ಇಂತಹಾ ಕಿವುಡುತನವು ಹಾಡುವ ಸಿಕಾಡಗಳನ್ನೂ ಕಾಡಬಹುದು. ಹಾಗಾಗಿ ತಮ್ಮ ಕಿವಿಯಂತಹಾ ‘ಟಿಂಪಾನ’ಗಳನ್ನು ಮುಚ್ಚಿಕೊಂಡ ನಂತರವಷ್ಟೇ ತಮ್ಮ ಹಾಡನ್ನು ಪ್ರಾರಂಭಿಸುತ್ತವೆ ಸಿಕಾಡಗಳು.

ಇವುಗಳ ಹಾಡಿನಷ್ಟೇ ವಿಶೇಷ ಇವುಗಳ ಜೀವನಚಕ್ರ ಕೂಡ. ಗಿಡಗಳಮೇಲೆ ಒಂದು ಸಣ್ಣ ಸೀಳನ್ನು ರಚಿಸಿ ಅದರಲ್ಲಿ ನೂರಾರು ಮೊಟ್ಟೆಗಳನ್ನಿಡುತ್ತದೆ ಹೆಣ್ಣು ಸಿಕಾಡ. ಅವುಗಳೊಡೆದು ಹೊರಬರುವ ಅಪಕ್ವ ಮರಿಗಳು ಗಿಡದಮೇಲಿನಿಂದ ನೆಲಕ್ಕೆ ಬೀಳುತ್ತವೆ. ಅವುಗಳಿಗಿರುವ ಚೂಪಾದ ಮತ್ತು ಬಲಿಷ್ಠವಾದ ಮುಂಗೈಗಳಿಂದ ನೆಲವನ್ನು ಅಗೆದು. ಬಿಲ ತೋಡಿ ಬಿಲದೊಳಗೆ ಮರೆಯಾಗುತ್ತವೆ. ಹೀಗೆ ಭೂಗತವಾಗಿ ವರ್ಷಾನುಗಟ್ಟಲೇ ಸಮಯ ದೂಡುವ ಮರಿಗಳು, ಗಿಡಗಳ ಬೇರಿನೊಳಗಿನ ರಸವನ್ನು ಹೀರುತ್ತಾ ಬೆಳೆಯುತ್ತವೆ. 2ರಿಂದ 17 ವರ್ಷಗಳವರೆಗೂ ಭೂಗತವಾಗಿರಬಲ್ಲ ಮರಿಗಳು ಪ್ರಬುದ್ಧ ಕೀಟಗಳಾಗಿ ಹೊರಬರುತ್ತವೆ. ಭೂಗತ ಅಪಕ್ವ ಸ್ಥಿತಿಯಿಂದ ಪ್ರಬುದ್ಧತೆಯ ಸ್ಥಿತಿಯೆಡೆಗೆ ತಲುಪುವ ಮುನ್ನ ಬಿಲದಿಂದ ಹೊರಕ್ಕೆ ಒಂದು ಸುರಂಗ ತೋಡಿ ಹೊರಬರುತ್ತವೆ. ಹೊರಬಂದ ತಕ್ಷಣ ಒಂದು ಗಿಡದ ತೊಗಟೆಗೆ ಅಂಟಿಕೊಂಡು ಪೊರೆ ಕಳಚಲು ಆರಂಬಿಸುತ್ತವೆ. ತನ್ನ ಬೆನ್ನಿನ ಭಾಗದ ಮಧ್ಯದಲ್ಲಿ ಹೊಸದಾಗಿ ಹುಟ್ಟುಹಾಕುವ ಒಂದು ಸೀಳುವಿಕೆಯ ಮುಖಾಂತರ ಹೊರಬರುವ ಪ್ರಬುದ್ಧ ಕೀಟವು ಹೊರಕವಚವನ್ನು ಗಿಡದ ಮೇಲೇ ಬಿಟ್ಟು ಹೊರಕ್ಕೆ ಹಾರುತ್ತವೆ. ಬಹಳ ಕೂಲಂಕುಷವಾಗಿ ಗಮನಿಸದಿದ್ದರೆ ಅದು ಸಿಕಾಡವೋ ಅಥವಾ ಅದರ ಹೊರಕವಚ ಮಾತ್ರವೋ ಎಂಬುದು ತಿಳಿಯುವುದು ಕಷ್ಟಸಾಧ್ಯ. ಹೀಗೆ ಹೊರಕವಚವನ್ನು ಕಳಚಿಕೊಂಡು ಹೊರಬರುವ ಸಿಕಾಡವು ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತವೆ.

ಕೆಲವು ಜಾತಿಯ ಸಿಕಾಡಗಳು ಪಾರಭಾಸಕ ಅಥವಾ ಅರೆಪಾರದರ್ಶಕ ರೆಕ್ಕೆಗಳನ್ನು ಹೊಂದಿರುವುದೂ ಉಂಟು. ಈ ಕೀಟವು ಪ್ರಬುದ್ಧತೆಯನ್ನು ಪಡೆದ ಸ್ಥಿತಿಯಲ್ಲಿ ಇದಕ್ಕೆ ಬಾಯಿಯೇ ಇರುವುದಿಲ್ಲ ಮತ್ತು ಇದು ಆಹಾರವನ್ನೇ ಸೇವಿಸುವುದಿಲ್ಲ ಎಂಬುದು ಒಂದು ಪುರಾಣ ಕಟ್ಟುಕಥೆಯಷ್ಟೇ; ಪ್ರಬುದ್ಧ ಸಿಕಾಡವು ಇತರ ಕೀಟಗಳಂತೆ ಬಾಯನ್ನು ಹೊಂದಿದ್ದು, ಬಾಯಿಯ ಮುಖಾಂತರವೇ ಸಸ್ಯರಸವನ್ನು ಹೀರುತ್ತವೆ. ಈ ಪ್ರಬುದ್ಧ ಸ್ಥಿತಿಯಲ್ಲಿ ಹಾಡನ್ನು ಆರಂಭಿಸಿ, ಸಂಗಾತಿಯನ್ನು ಆರಿಸಿ, ಸಂಗಾತಿ ಕೀಟದೊಡನೆ ಕೆಲವಾರು ದಿನಗಳು ಬದುಕಿ, ಹೆಣ್ಣು ಸಿಕಾಡವು ಮೊಟ್ಟೆಯಿಟ್ಟ ಬಳಿಕ ಅಲ್ಪ ಸಮಯದಲ್ಲಿ ಇವುಗಳ ಜೀವನಚಕ್ರ ನಿಲುಗಡೆಗೆ ಬರುತ್ತದೆ. ಯಾವುದಾದರೂ ಪ್ರಾಣಿಗೋ ಪಕ್ಷಿಗೋ ಆಹಾರವಾಗಿಯೋ, ಅಥವಾ ಸಹಜವಾಗಿಯೋ ಸಾವನ್ನಪ್ಪುತ್ತವೆ. ಹಲವಾರು ಪ್ರಾಣಿ ಪಕ್ಷಿಗಳ ನೆಚ್ಚಿನ ಆಹಾರವಾದ ಸಿಕಾಡವನ್ನು ಮನುಷ್ಯನೂ ಬಿಟ್ಟಿಲ್ಲ. ಚೀನಾ, ಮಲೇಷಿಯಾ, ಬರ್ಮಾ, ದಕ್ಷಿಣ ಅಮೇರಿಕಾ ದೇಶಗಳಲ್ಲಿ ಹಲವಾರು ಬಗೆಯಲ್ಲಿ ಸಿಕಾಡಗಳನ್ನು ಸೇವಿಸುತ್ತಾರೆ. ಪರಿಸರ ಪ್ರೇಮಿಗಳಿಗೆ ಸಿಕಾಡಗಳ ‘ಗುಮ್’ ಸದ್ದು ಇವುಗಳ ಇರುವಿಕೆಯ ಬಗ್ಗೆ ಪುಳಕಿತಗೊಳಿಸಿದರೆ ಮತ್ತೂ ಕೆಲವರ ಬಾಯಲ್ಲಿ ನೀರೂರಿಸುತ್ತದೆ ಎಂಬುದು ವೈಯಕ್ತಿಕತೆಯ ಆಚರಣೆಯ ನಿದರ್ಶನವಷ್ಟೇ.

(ಕೃತಿ: ಜೀವಿವಿಜ್ಞಾನ (ಪರಿಸರ ಮತ್ತು ಜೀವವಿಜ್ಞಾನದ ಸರಳ ಲೇಖನಗಳು), ಲೇಖಕರು: ಕ್ಷಮಾ ವಿ. ಭಾನುಪ್ರಕಾಶ್‌, ಪ್ರಕಾಶಕರು: ಸಹನಾ ಪಬ್ಲಿಕೇಷನ್, ಬೆಲೆ:  200/-)