ಪ್ರಕಾಶ್, ತನ್ನ ಪುಟ್ಟ ನಾದಿನಿಯರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ “ನಿಮಗೆ ಗೊತ್ತೇನ್ರೋ? ಎಲ್ಲಾ ಬಗೆಯ ಜೀವಿಗಳಲ್ಲೂ ಗಂಡುಗಳು ತುಂಬಾ ಪಾಪದವು. ಸೇಮ್ ನನ್ನ ಥರಾನೇ! ಸೊಳ್ಳೆಗಳಲ್ಲೂ ಅಷ್ಟೇ!” ಅಂತ ನಾಟಕ ಮಾಡಿ ನಗಿಸಿದ. ಆಮೇಲೆ ಸೊಳ್ಳೆಗಳ ಬಗ್ಗೆ ವಿವರಿಸುತ್ತಾ “ಆದ್ರೆ ಇದು ತಮಾಷೆಯಲ್ಲ! ಗಂಡು ಸೊಳ್ಳೆಗಳು ನಮ್ಮನ್ನು ಕಚ್ಚಲ್ಲ; ಅವು ಹೂವುಗಳ ಮಕರಂದದಂತಹ ಆಹಾರದ ಮೇಲೆ ಡಿಪೆಂಡ್ ಆಗಿರತ್ವೆ; ಹೆಣ್ಣು ಸೊಳ್ಳೆಗಳು ಪಾಪ, ಮೊಟ್ಟೆ ಇಡೋಕೆ, ಮರಿಗಳಿಗೆ ಶಕ್ತಿ ನೀಡೋಕೆ ನಮ್ಮ ರಕ್ತದಲ್ಲಿರುವ ಪ್ರೋಟೀನ್ ಮೇಲೆ ಅವಲಂಬಿತ. ಅದಕ್ಕಾಗಿ ಅವು ಕಚ್ಚಲೇಬೇಕು, ರಕ್ತ ಹೀರಲೇಬೇಕು, ನಮ್ಮ ಕೈಯಲ್ಲಿ ಸಿಕ್ಕಿ ಸಾಯಲೂ ಬೇಕು”
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿಮೂರನೆಯ ಕತೆ
ಮಳೆಗಾಲವು ಹತ್ತಿರ ಬಂದ ಸೂಚನೆಯನ್ನು ಹೊತ್ತು ತಂದಿತ್ತು, ತಂಗಾಳಿ; ಥೇಟ್ ‘ಎಲ್ಲೋ ಮಳೆಯಾಗಿದೆಯೆಂದೂ.. ತಂಗಾಳಿಯು ಹೇಳುತಿದೇ..’ ಹಾಡಿನ ಅನುಭವ. ಇದನ್ನೇ ಮಾತಾಡುತ್ತಾ, ಗುನುಗುತ್ತಾ ಗಾಂಧಾರಿ ಮೆಣಸಿನಕಾಯನ್ನು ತೋಟದ ಒಂದು ಬದಿಯಲ್ಲಿ ಬೆಳೆದಿದ್ದ ಎರಡು ಹಳೆಯ ಗಿಡಗಳಿಂದ ಬಿಡಿಸುತ್ತಿದ್ದರು, ವಿಭಾ ಮತ್ತು ವರ್ಣ. ಕಾವ್ಯಳ ತಂಗಿ ವಿಭಾ ನಿಮಗೀಗಾಗಲೇ ಗೊತ್ತು. ಹೈಸ್ಕೂಲು ವಿದ್ಯಾರ್ಥಿನಿ ವಿಭಾ, ವಿಜ್ಞಾನದ ಬಗ್ಗೆ ಪರಿಸರದ ಬಗ್ಗೆ ಅಕ್ಕ ಕಾವ್ಯ, ಬಾವ ಪ್ರಕಾಶರೊಂದಿಗೆ ಚರ್ಚಿಸಲು ಸದಾ ಆಸಕ್ತಳಾಗಿರುವ ಚುರುಕು ಹುಡುಗಿ. ಕಾವ್ಯಳ ಮತ್ತೊಬ್ಬ ತಂಗಿ ವರ್ಣ ಮೈಸೂರಿನಿಂದ ಈ ಬಾರಿ ಬೇಸಿಗೆ ರಜೆಗೆ ಕಾವ್ಯಕ್ಕನ ಮನೆಗೆ ಬಂದಿದ್ದಳು. ವರ್ಷಪೂರ್ತಿ ಎಲ್ಲರೂ ಎದುರು ನೋಡುವ ಸಮಯವಿದು. ಮೂರು ಜನ ಅಕ್ಕ-ತಂಗಿಯರು, ಜೊತೆಗೆ ಪ್ರಕಾಶ್ ಬಾವ ಮತ್ತು ಅವರ ಮಗ ತುಂಟ ಸಮುದ್ರ – ಬೇಸಿಗೆ ರಜೆಯೆಂದರೆ ಇವರದ್ದೇ ಕಾರುಬಾರು. ವರ್ಣ ಕೂಡ ಹೈಸ್ಕೂಲು ವಿದ್ಯಾರ್ಥಿನಿಯೇ. ಅವಳಿಗೆ ಕೇಕ್ ಬೇಕ್ ಮಾಡೋದು, ಚಾರಣ, ಬೈಕುಗಳೆಂದರೆ ಪಂಚಪ್ರಾಣ.
ವರ್ಣ ಮತ್ತು ವಿಭಾ, ಕಾವ್ಯಕ್ಕನ ಮಾತಿನ ಮೇರೆಗೆ ಗಾಂಧಾರಿ ಮೆಣಸನ್ನು ಕೀಳುತ್ತಿದ್ದಾಗ, ಸೊಳ್ಳೆಗಳ ಹತ್ತಿರ ಕಚ್ಚಿಸಿಕೊಳ್ಳುತ್ತಾ ‘ತಕ ಥೈ’ ಮಾಡುತ್ತಿದ್ದರು. ಆಗ ವರ್ಣ ವಿಭಾಳೆಡೆಗೆ ತಿರುಗಿ, “ಅಲ್ಲ ವಿಭಕ್ಕ, ಈ ಸೊಳ್ಳೆಗಳಿಗೆ ನಮ್ಮ ಬ್ಲಡ್ ಗ್ರೂಪ್ ಗೊತ್ತಾಗತ್ತಂತೆ ಅಲ್ವಾ? ‘ಓ+’ ಬ್ಲಡ್ ಗ್ರೂಪ್ ಇದ್ದವರನ್ನೇ ಹೆಚ್ಚು ಕಚ್ಚತ್ತಂತೆ?” ಎಂದಳು. ಆಗ ವಿಭಾ, “ಹೂಂ ವರ್ಣ; ಕೆಲವೇ ಸಂಶೋಧನಾ ಪ್ರಬಂಧಗಳು ಹೀಗೆ ಹೇಳತ್ವೆ; ಆದ್ರೆ ಅವರ ‘ಸ್ಯಾಂಪಲ್ ಸೈಝ್’ ತುಂಬಾ ಕಡಿಮೆ. ಕೆಲವೇ ರಕ್ತದ ಸ್ಯಾಂಪಲ್’ಗಳನ್ನ ತೊಗೊಂಡು ಪ್ರಯೋಗ ನಡೆಸಿದಾಗ, ಕೆಲವು ಫಲಿತಾಂಶಗಳು ಮಾತ್ರ ಇದನ್ನ ಪ್ರೂವ್ ಮಾಡಿವೆ; ಇದು ನಿಜಕ್ಕೂ ‘ಫ್ಯಾಕ್ಟ್’ ಅಂತ ಅಥವಾ ‘ಸೊಳ್ಳೆಗಳಿಗೆ ಓ ಬ್ಲಡ್ ಗ್ರೂಪ್ ಇಷ್ಟ’ ಅಂತ ಖಡಾಖಂಡಿತವಾಗಿ ಹೇಳೋಕೆ ಇನ್ನೂ ಬಹಳಾ ಪ್ರಯೋಗಗಳು ನಡೀಬೇಕು” ಎಂದಳು.
ಆಗ ವರ್ಣ, “ಹಾಗಾದ್ರೆ, ಅದರ ವಿಷ್ಯನೂ ನಮ್ಮ ಗಾಂಧಾರಿ ಮೆಣಸಿನ ಹಾಗೆ” ಎಂದಳು. ಅದಕ್ಕೆ ವಿಭಾ ಕೊಂಚ ಸಂದಿಗ್ದಗೊಂಡು, “ಏನೋ ವರ್ಣ ಹಾಗಂದ್ರೆ?” ಎಂದು ಕೇಳಿದಳು. ಆಗ ವರ್ಣ ನಗುತ್ತಾ “ಅಂದ್ರೆ, ಸೊಳ್ಳೆಗಳಿಗೆ ‘ಓ ಬ್ಲಡ್ ಗ್ರೂಪ್ ಇಷ್ಟ’ ಎನ್ನುವ ಜೊತೆಗೆ ಸಾಕಷ್ಟು ಮಾಹಿತಿ, ಮಿಥ್, ಫ್ಯಾಕ್ಟ್ ಎಲ್ಲಾ ಸೇರಿಕೊಳ್ಳುವ ಹಾಗೆ ನಮ್ಮ ಗಾಂಧಾರಿ ಮೆಣಸಿನಕಾಯಿಯ ಬಗ್ಗೆಯೂ ಅನೇಕ ಸತ್ಯ, ಸುಳ್ಳು, ಅರ್ಧಸತ್ಯಗಳು ಮಿಕ್ಸ್ ಆಗಿವೆ. ಈ ಪುಟಾಣಿ ಮೆಣಸಿನ ಕಾಯಿಗೆ ‘ಬರ್ಡ್ಸ್ ಐ’ ಚಿಲ್ಲಿ ಅಂತಾರೆ ಕೂಡ. ‘ಈ ಮೆಣಸಿನಕಾಯಿ ಗಿಡವನ್ನ ನಾವೇ ಬಿತ್ತಿ ಬೆಳೆಯೋಕಾಗಲ್ಲ, ಅವುಗಳನ್ನ ಪಕ್ಷಿಗಳು ತಿಂದು ಬೀಜವನ್ನು ತನ್ನ ಮಲದ ಜೊತೆ ಮಣ್ಣಿಗೆ ಹಾಕಿದಾಗ ಮಾತ್ರ ಚಿಗುರುತ್ತದೆ’ ಅಂತ ನಂಬಿಕೆ ಇದೆ. ಆದರೆ, ಅದು ಅರ್ಧ ಸತ್ಯ!” ಎಂದು ವಿವರಿಸಿದಳು.
ಸೊಳ್ಳೆ ಕಾಟಕ್ಕೆ ತಮ್ಮ ‘ತಕ ಥೈ’ ನೃತ್ಯವನ್ನು ಮುಂದುವರೆಸುತ್ತಾ ಈ ಪುಟ್ಟ ಅಕ್ಕ ತಂಗಿ ಜೋಡಿ ಮಾತಿನಲ್ಲಿ ಮುಳುಗಿದ್ದರು. ತನ್ನ ವಿವರಣೆಯನ್ನು ಮುಂದುವರೆಸುತ್ತಾ “ನಾವೇ ಈ ಗಿಡವನ್ನು ಬೀಜ ಬಿತ್ತಿ ಬೆಳೀಬಹುದು ವಿಭಕ್ಕ! ಗಾಂಧಾರಿ ಮೆಣಸನ್ನ, ಅದರ ಹುಡಿಯನ್ನ ಮಾರೋವ್ರು, ಪಕ್ಷಿಯೇ ಗಿಡ ಹಾಕ್ಲಿ ಅಂತ ಕಾಯ್ತಾರೆ ಅಂದುಕೊಂಡ್ಯಾ? ಆದ್ರೆ, ಪಕ್ಷಿಗಳಿಗೆ ಈ ಮೆಣಸಿನಕಾಯಿ ಇಷ್ಟ; ಅವಕ್ಕೇನು ನಮ್ಮ ಹಾಗೆ ಇದನ್ನ ತಿಂದಾಗ ಖಾರ ಆಗಲ್ಲ; ಯಾಕಂದ್ರೆ ಮೆಣಸಿನ ಕಾಯಿಯಲ್ಲಿರೋ ಖಾರದ ಅನುಭವ ನೀಡೋ ‘ಕ್ಯಾಪ್ಸೈಸಿನ್’ ಅನ್ನೋ ‘ಕೆಮಿಕಲ್’ನ ಗುರುತಿಸೋಕೆ, ನಮ್ಮ ನಾಲಿಗೆಯಲ್ಲಿ ಇರುವ ಹಾಗೆ ಅವಕ್ಕೆ ‘ರಿಸೆಪ್ಟರ್’ ಅಂದ್ರೆ ಸಂವೇದಕಗಳು ಇರೋಲ್ಲ” ಎಂದಳು.
ಆಗ ವಿಭಾ, “ಹಾಗಿದ್ರೆ, ಪಕ್ಷಿಗಳು ಈ ಗಾಂಧಾರಿ ಮೆಣಸಿನಕಾಯಿಯನ್ನ ತಿನ್ನೋದ್ರಿಂದ ನಮಗೆ ಏನೂ ಪ್ರಯೋಜನ ಇಲ್ವಾ?” ಎಂದಳು. ಆಗ ಅಲ್ಲಿಗೆ ಬಂದ ಪ್ರಕಾಶ್ ಬಾವ, ಇವರ ಮಾತನ್ನೇ ಆಲಿಸುತ್ತಾ ನಿಂತಿದ್ದು, ಉತ್ತರ ನೀಡೋಕೆ ದನಿಗೂಡಿಸಿದ. “ವಿಭಾ, ವರ್ಣ – ನಿಜಕ್ಕೂ ಒಳ್ಳೆ ಮಕ್ಳಪ್ಪ ನೀವಿಬ್ರೂ; ಈಗಿನ ಮಕ್ಳು ಉಪಯೋಗವಿಲ್ಲದ ಮೇಕಪ್, ಫ್ಯಾಶನ್, ಕೆ-ಪಾಪ್ ಅಂತ ಮಾತಾಡ್ತಾ ಇರ್ತಾರೆ. ನೀವು ಜಾಣರ ಹಾಗೆ ವಿಜ್ಞಾನ, ಫ್ಯಾಕ್ಟ್, ಮಿಥ್ ಅಂತ ಚರ್ಚೆ ಮಾಡ್ತಾ ಇದಿರಾ. ವೆರಿ ಗುಡ್. ಹಾಗಂತ ನಾನು ಮೇಕಪ್ ಬಗ್ಗೆ, ಕೆ ಪಾಪ್ ಸಂಗೀತದ ಬಗ್ಗೆ ತಿಳುವಳಿಕೆ ಇರಬಾರದು ಅಂತಾ ಇಲ್ಲ; ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡರೆ ತಪ್ಪೇನಿಲ್ಲ; ಆದ್ರೆ, ಮಕ್ಳು ಅದರಲ್ಲೇ ಮುಳುಗಿ, ಹುಚ್ಚು ಟ್ರೆಂಡ್ ಫಾಲೊ ಮಾಡ್ತಾರಲ್ಲ; ಅದು ಎಂಥ ಟೈಮ್ ಮತ್ತು ಎನರ್ಜಿಯ ವೇಸ್ಟೇಜ್ ಅನ್ಸತ್ತೆ.” ಎಂದ.
ಆಗ ವರ್ಣ, “ನಿಜಾ ಬಾವ, ಆದ್ರೆ ಈ ಸೊಳ್ಳೆ ಕಚ್ಚಿಸ್ಕೊಂಡು ಡ್ಯಾನ್ಸ್ ಮಾಡ್ತಾ ಇದೀವಲ್ಲ, ಇದಕ್ಕೆ ನಿಜ್ವಾಗ್ಲೂ ಹೊಸ ಕೆ-ಪಾಪ್ ಹಾಡು ಸಖತ್ತಾಗಿ ಮ್ಯಾಚ್ ಆಗತ್ತೆ” ಎಂದಳು ನಗುತ್ತಾ. ಆಗ ಕೆಲವು ನಿಮಿಷಗಳ ಮುನ್ನ ಈ ಗುಂಪನ್ನು ಸೇರಿಕೊಂಡಿದ್ದ ಕಾವ್ಯ ನಗುತ್ತಾ, “ಅಲ್ಲ ವರ್ಣ! ಕೆ ಪಾಪ್ ಬಗ್ಗೆ ನಿನ್ನ ಮಾತಲ್ಲಿದ್ದಿದ್ದು ಸತ್ಯವಾ, ಸುಳ್ಳಾ, ಅರ್ಧಸತ್ಯವಾ ಪ್ರಕಾಶ್‌ಗೆ ಗೊತ್ತಾಗ್ಲಿಲ್ಲ ಅನ್ಸತ್ತೆ” ಎಂದಳು ನಗಾಡುತ್ತಾ.

ಜೊತೆಗೆ ಪ್ರಕಾಶ್ ಕೂಡ ನಗುತ್ತಾ, “ಅದೂ ನಿಜಾನೇ! ಅದಿರ್ಲಿ; ಈ ಪಕ್ಷಿಗಳು ಗಾಂಧಾರಿ ಮೆಣಸನ್ನು ತಿನ್ನತ್ವಲ್ಲಾ? ಅವು ಬೀಜವನ್ನೂ ಜೀರ್ಣಿಸಿಕೊಂಡುಬಿಟ್ರೆ, ಗಿಡದ ‘ಪ್ರೊಪೊಗೇಶನ್’ ಹೇಗಾಗತ್ತೆ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಈ ಗಿಡ ಹಬ್ಬೋದು ಹೇಗೆ ಅಲ್ವಾ? ಅದಕ್ಕೇ ಗಿಡಗಳು ತಮ್ಮ ಬೀಜಗಳನ್ನ ಗಟ್ಟಿಯಾದ ಹೊರಕವಚದಿಂದ ಮಾಡಿರತ್ವೆ. ಅದನ್ನ ಸುಲಭವಾಗಿ ಯಾವ ಪ್ರಾಣಿಗಳೂ ಜೀರ್ಣಿಸಿಕೊಳ್ಳಲ್ಲ; ನಾವು ಕೂಡ ಹಣ್ಣಿನ ಜೊತೆ ಅಕಸ್ಮಾತ್ ಬೀಜವನ್ನೂ ನುಂಗಿದರೆ, ಮರುದಿನ ಅದು ಮಲದಲ್ಲಿ ಹೊರಗೆ ಬರತ್ತೆ. ಈ ಪಕ್ಷಿಗಳ ಹೊಟ್ಟೆಯಲ್ಲಿರೋ ಆಸಿಡ್, ಈ ಬೀಜಗಳ ಹೊರಕವಚವನ್ನ ಮೆತ್ತಗಾಗಿಸಿ ಹೊರಹಾಕತ್ತೆ; ಆಗ ಮಣ್ಣಿಗೆ ಬಿದ್ದಾಗ ಸುಲಭವಾಗಿ ಬೀಜ ಗಿಡವಾಗಿ ಚಿಗುರತ್ತೆ; ಜೊತೆಗೆ ಪಕ್ಷಿಯ ಮಲದ ಗೊಬ್ಬರ ಬೇರೇ ಇರತ್ತಲ್ಲಾ? ಇನ್ನೂ ಚೆನ್ನಾಗಿಯೇ ಬೆಳೆಯತ್ತೆ” ಎಂದು ವಿವರಿಸಿದ.
ಹೀಗೇ ಎಲ್ಲರೂ ಮಾತಾಡುತ್ತಾ ಜೊತೆಯಾಗಿ ಮೆಣಸಿನಕಾಯನ್ನು ಬಿಡಿಸಿ ಮನೆಗೆ ಕೊಂಡೊಯ್ದರು. ಮನೆಗೆ ಹೋಗುವಷ್ಟರಲ್ಲಿ ಕಾವ್ಯಳ ಮೈಯೆಲ್ಲಾ ದದ್ದು ಎದ್ದಿತ್ತು; ಮೊದಲೇ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುವ ಕಾವ್ಯಳಿಗೆ, ಕಾಡುಸೊಳ್ಳೆಗಳು ಕಚ್ಚಿದಾಗ ಹೆಚ್ಚೇ ಗುಳ್ಳೆಗಳು ಏಳುತ್ತವೆ, ತುರಿಕೆ, ಕಿರಿಕಿರಿ ಹೆಚ್ಚು; ಅವಳ ಅಪ್ಪನಿಗೂ ಹಾಗೇ. ಅವಳಮ್ಮ ಆಗಾಗ ಕೇಳುತ್ತಿದ್ದುದುಂಟು, ‘ಅದೇಕೆ ನಿಮ್ಮಿಬ್ಬರಿಗೂ ಹೆಚ್ಚು ಸೊಳ್ಳೆ ಕಚ್ಚತ್ತೆ, ನಂಗೆ ಕಚ್ಚೋದೇ ಇಲ್ಲ’ ಅಂತ! ಆಗೆಲ್ಲಾ ಕಾವ್ಯ ಕೆಲವರು ಮಾತ್ರ ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುವುದಕ್ಕೆ ಕಾರಣಗಳನ್ನು ಅವಳಮ್ಮನಿಗೆ ವಿವರಿಸುತ್ತಿದ್ದಳು.
ಮನೆಗೆ ಬಂದು ಅದೇ ಯೊಚಿಸುತ್ತಾ, ಕೈಕಾಲಿಗೆಲ್ಲಾ ಕೊಬ್ಬರಿ ಎಣ್ಣೆ ಸವರಿಕೊಳ್ಳುತ್ತಿದ್ದ ಕಾವ್ಯಳಿಗೆ, ಹಿಂದಿನಿಂದ ಬಂದ ಮಗ ಸಮುದ್ರ ‘ಸೊಳ್ಳೆ ಮ್ಯಾಗ್ನೆಟ್’ ಎಂದು ಕೂಗಿ ಹೆದರಿಸಿದ! ಬೆಚ್ಚಿಬಿದ್ದ ಕಾವ್ಯ, ನಂತರ ಸುಧಾರಿಸಿಕೊಂಡು ನಗಾಡಿದಳು. ಆಗ ಉಳಿದವರೂ ಜೊತೆಗೂಡಿದರು. ಆಗ ವರ್ಣ, “ಇದೇನು ಕಾವ್ಯಕ್ಕಾ? ಅಯ್ಯಪ್ಪಾ! ನಿನಗ್ಯಾಕೆ ಇಷ್ಟು ಸೊಳ್ಳೆ ಕಚ್ಚತ್ತೆ?” ಎಂದು ಕೇಳಿದಳು. ಆಗ ಕಾವ್ಯ “ನಾನು ನಿಮ್ಮೆಲ್ಲರಿಗಿಂತಾ ಹೆಚ್ಚೇ ಶಾಖವನ್ನ ಹೊರಹಾಕ್ತೀನಿ ಅನ್ಸತ್ತೆ; ಜೊತೆಗೆ ನನ್ನ ಬೆವರಲ್ಲಿರುವ ಕೆಮಿಕಲ್ಸ್ ನಿಮ್ಮ ಬೆವರಲ್ಲಿರುವ ರಾಸಾಯನಿಕಗಳಿಗಿಂತ ಭಿನ್ನವಾಗಿರ್ಬಹುದು. ನಾನು ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಹೊರಹಾಕ್ತಿರಬಹುದು ಅನ್ಸತ್ತೆ” ಅಂತ ವಿವರಣೆ ಕೊಟ್ಟಳು.
ಆಗ ವಿಭಾ, “ಈ ಪುಟಾಣಿ ಸೊಳ್ಳೆಗಳಿಗೆ ಅದೆಷ್ಟೇ ಕತ್ತಲಿದ್ರೂ ನಾವೆಲ್ಲಿದೀವಿ ಅಂತ ಹೇಗೆ ಗೊತ್ತಾಗತ್ತೆ ಕಾವ್ಯಕ್ಕಾ?” ಅಂತ ಕೇಳಿದಳು. ಆಗ ಕಾವ್ಯ “ಅವುಗಳು, ನಾವು ಉಸಿರಾಡ್ತಾ ಹೊರಹಾಕೋ ಇಂಗಾಲದ ಡೈ ಆಕ್ಸೈಡನ್ನ ಗುರುತಿಸತ್ವೆ; ಆಗ ಅವಕ್ಕೆ ಇಲ್ಲೊಂದು ‘ಸಸ್ತನಿ’ ಅಂದ್ರೆ ‘ಮ್ಯಾಮಲ್’ ಇದೆ ಅಂತ ಗೊತ್ತಾಗತ್ತೆ; ಆಮೇಲೆ ನಮ್ಮ ಬೆವರಿನ ವಿಶೇಷವಾದ ರಾಸಾಯನಿಕಗಳು, ಇಲ್ಲೊಬ್ಬ ಮನುಷ್ಯ ಇದ್ದಾನೆ/ಳೆ ಅಂತ ತಿಳ್ಸತ್ತೆ. ಇನ್ನು ಅವುಗಳ ಮೂತೀಲಿ, ಆಂಟೆನಾದಲ್ಲಿ ‘ಹೀಟ್ ಸೆನ್ಸರ್ಸ್’ ಇರತ್ವೆ. ಒಂಥರಾ ಅತ್ಯಂತ ಚಿಕ್ಕ ಥರ್ಮಾಮೀಟರ್ ಥರಾ! ನಮ್ಮಿಂದ ಹೊರ ಬರ್ತಾ ಇರೋ ಶಾಖದಿಂದ ಅವಕ್ಕೆ ಎಕ್ಸಾಕ್ಟ್ ಆಗಿ ನಾವೆಲ್ಲಿದೀವಿ ಅಂತ ಗೊತ್ತಾಗಿ, ನಮ್ಮ ಮೇಲೆ ಈ ಸೊಳ್ಳೆ ಅನ್ನೋ ಪ್ಲೇನ್ ಲ್ಯಾಂಡ್ ಆಗತ್ತೆ. ಆಮೇಲೆ ಚೆನ್ನಾಗಿ ನಮ್ಮ ರಕ್ತ ಹೀರಿ, ಹೊಟ್ಟೆ ತುಂಬಿಸಿಕೊಳ್ಳತ್ವೆ!” ಎಂದು ವಿವರಿಸಿದಳು.
ಇದನ್ನು ಕೇಳಿದ ಪ್ರಕಾಶ್, ತನ್ನ ಪುಟ್ಟ ನಾದಿನಿಯರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ “ನಿಮಗೆ ಗೊತ್ತೇನ್ರೋ? ಎಲ್ಲಾ ಬಗೆಯ ಜೀವಿಗಳಲ್ಲೂ ಗಂಡುಗಳು ತುಂಬಾ ಪಾಪದವು. ಸೇಮ್ ನನ್ನ ಥರಾನೇ! ಸೊಳ್ಳೆಗಳಲ್ಲೂ ಅಷ್ಟೇ!” ಅಂತ ನಾಟಕ ಮಾಡಿ ನಗಿಸಿದ. ಆಮೇಲೆ ಸೊಳ್ಳೆಗಳ ಬಗ್ಗೆ ವಿವರಿಸುತ್ತಾ “ಆದ್ರೆ ಇದು ತಮಾಷೆಯಲ್ಲ! ಗಂಡು ಸೊಳ್ಳೆಗಳು ನಮ್ಮನ್ನು ಕಚ್ಚಲ್ಲ; ಅವು ಹೂವುಗಳ ಮಕರಂದದಂತಹ ಆಹಾರದ ಮೇಲೆ ಡಿಪೆಂಡ್ ಆಗಿರತ್ವೆ; ಹೆಣ್ಣು ಸೊಳ್ಳೆಗಳು ಪಾಪ, ಮೊಟ್ಟೆ ಇಡೋಕೆ, ಮರಿಗಳಿಗೆ ಶಕ್ತಿ ನೀಡೋಕೆ ನಮ್ಮ ರಕ್ತದಲ್ಲಿರುವ ಪ್ರೋಟೀನ್ ಮೇಲೆ ಅವಲಂಬಿತ. ಅದಕ್ಕಾಗಿ ಅವು ಕಚ್ಚಲೇಬೇಕು, ರಕ್ತ ಹೀರಲೇಬೇಕು, ನಮ್ಮ ಕೈಯಲ್ಲಿ ಸಿಕ್ಕಿ ಸಾಯಲೂ ಬೇಕು; ಆನ್ ಅ ಸೀರಿಯಸ್ ನೋಟ್, ಎಲ್ಲಾ ಪ್ರಭೇದಗಳಲ್ಲೂ ಸಾಮಾನ್ಯವಾಗಿ ಬಹಳ ಕಷ್ಟಪಡೋದು ಹೆಣ್ಣುಜೀವಿಯೇ. ಮನುಷ್ಯರಲ್ಲೂ.” ಎಂದನು.
ಆಗ ಸಮುದ್ರ, “ಅಪ್ಪಾ, ನನ್ನ ಸೈನ್ಸ್ ಅಸೈನ್ಮೆಂಟಲ್ಲಿ ಸೊಳ್ಳೆಗಳ ಬಗ್ಗೆ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಬರೆದಿದ್ದೆ. ಹೇಳ್ಲಾ?” ಎಂದು ತನ್ನ ಪುಸ್ತಕ ತೊಗೊಂಡು ಬಂದು ಓದೋಕೆ ಪ್ರಾರಂಭಿಸಿದ. “ಸೊಳ್ಳೆಗಳು ನಮ್ ಕಿವಿ ಹತ್ರ ಬಂದಾಗ ಸುಂಯ್ ಶಬ್ದ ಕೇಳತ್ತಲ್ಲ? ಅದು ಅವುಗಳ ಬಾಯಿಂದ ಬರೋ ಹಾಡಲ್ಲ; ಅವುಗಳ ರೆಕ್ಕೆ ಬಡಿಯೋದ್ರಿಂದ ಉಂಟಾಗೋ ಶಬ್ದ. ಅವು ಎಷ್ಟು ಫಾಸ್ಟಾಗಿ ಹಾರತ್ವೆ ಗೊತ್ತಾ? ೧-೨.೫ ಕಿಲೋಮೀಟರ್ ಪರ್ ಅವರ್ ಸ್ಪೀಡ್! ಅಂದ್ರೆ ಒಂದು ಸೆಕೆಂಡಲ್ಲಿ ೨೫೦ರಿಂದ ೭೦೦ ಸಲ ರೆಕ್ಕೆ ಬಡಿಯತ್ವೆ! ಅದಕ್ಕೇ ಹಾಗೆ ಶಬ್ದ ಬರತ್ತೆ.” ಎಂದ ತಾನೂ ಏನೋ ಒಂದು ಮುಖ್ಯವಾದ ಮಾಹಿತಿಯನ್ನು ಹಂಚಿಕೊಂಡಂತಹ ಹೆಮ್ಮೆಯಿಂದ.
ಇದನ್ನರಿತ ಕಾವ್ಯ, ಮಗನ ಬೆನ್ನು ತಟ್ಟಿ “ಜಾಣಮರಿ. ಸೊಳ್ಳೆಗಳ ಬಗ್ಗೆ ಇನ್ಯಾವ ಫ್ಯಾಕ್ಟ್ ಬರೆದಿದ್ದಿಯ ಕಂದ?” ಎಂದು ಕೇಳಿದಳು. ಆಗ ಸಮುದ್ರ, “ಇನ್ನೂ ಎಷ್ಟೊಂದು ಇದೆ ಅಮ್ಮಾ. ನಿಮ್ಗೆ ಗೊತ್ತಾ? ಸೊಳ್ಳೆಗಳು ಭೂಮಿಗೇನು ನೆನ್ನೆ, ಮೊನ್ನೆ ಬಂದಿದ್ದಲ್ಲ; ಅವು ಡೈನೋಸಾರ್ ಇದ್ದ ಕಾಲದಲ್ಲೇ ಇದ್ವಂತೆ. ಅದಕ್ಕೆ ಒಂದು ಹಳೆಯ ಮರದ ರಾಳದಲ್ಲಿ ಪಳೆಯುಳಿಕೆಯಾಗಿ ಸಿಕ್ಕಿಹಾಕಿಕೊಂಡ ಒಂದು ಸೊಳ್ಳೆಯೇ ಸಾಕ್ಷಿ. ಅದನ್ನ ಸ್ಟಡಿ ಮಾಡಿದ ಮೇಲೆ ಸೈಂಟಿಸ್ಟ್ ಇದನ್ನ ಸಾಬೀತು ಪಡ್ಸಿದಾರೆ. ಮತ್ತೆ ಇನ್ನೊಂದು ವಿಷ್ಯ, ಸೊಳ್ಳೆಗಳನ್ನ ಡೇಂಜರಸ್ ಜೀವಿಗಳ ಲಿಸ್ಟಲ್ಲಿ ಸೇರಿಸ್ತಾರೆ ಗೊತ್ತಾ?” ಎಂದು ಕೇಳಿದ.
ಇದಕ್ಕೆ ವರ್ಣಾ, “ಹೇ ಹೋಗೋ! ಇದ್ಯಾವ ಡೇಂಜರಸ್ ಜೀವಿ? ಚಟ್ ಅಂತ ಚಪ್ಪಾಳೆ ಹೊಡೆದ್ರೆ ಫಟ್ ಅಂತ ಸತ್ತು ಬೀಳತ್ತೆ” ಎಂದು ನಗಾಡಿದಳು. ಇದಕ್ಕೆ ವಿಭಾಳೂ ನಗುತ್ತಾ, “ಹೇ ಪಾಪ, ನಮ್ ಸಮುದ್ರ ಹೇಳಿದ್ದು ಹಂಗಲ್ಲ ಕಣೇ; ಅದು ನೇರವಾಗಿ ಹುಲಿಯಂತೆಯೋ, ಚಿರತೆಯಂತೆಯೋ, ಆನೆಯಂತೆಯೋ ಅಪಾಯ ಮಾಡಲ್ಲ, ಸರೀ. ಆದ್ರೆ, ಮಲೇರಿಯಾ, ಡೇಂಗೀ, ಚಿಕುನ್ ಗುನ್ಯಾ ತರಹ ಮಾರಣಾಂತಿಕ ರೋಗಗಳಿಗೆ ಕಾರಣವಾಗತ್ತೆ; ಈ ಕಾಯಿಲೆ ಬಂದಾಗ ತಕ್ಷಣ ಚಿಕಿತ್ಸೆ ಸಿಕ್ಕರೆ ಸರಿ; ಇಲ್ಲದಿದ್ದರೆ ಪ್ರಾಣಕ್ಕೆ ತೊಂದರೆಯಾಗಿರೋ ಎಷ್ಟೋ ಕೇಸ್ ನೋಡಿರ್ತೀವಿ, ಕೇಳಿರ್ತೀವಿ ಅಲ್ವಾ? ಕರೆಕ್ಟಾ ಸಮುದ್ರ?” ಎಂದಳು.

ವಿಭಾ ಚಿಕ್ಕಿಯ ಮಾತಿಗೆ ತಲೆದೂಗುತ್ತಾ ಸಮುದ್ರ “೧೦೦% ಕರೆಕ್ಟ್! ಈ ಸೊಳ್ಳೆಗಳು ಬಹಳ ಇಂಟರೆಸ್ಟಿಂಗ್ ಅಲ್ವಾ? ಇನ್ನೂ ಒಂದಷ್ಟು ಮಾಹಿತಿ ಹುಡುಕಿ ಬರೀಬೇಕು. ಇದು ನನ್ನ ಸಮ್ಮರ್ ಹಾಲಿಡೇಸ್ ಹೋಮ್ವರ್ಕ್. ಇನ್ನೂ ಮುಗಿಸೋಕೆ ತುಂಬಾ ಟೈಮಿದೆ” ಅಂತ ಎತ್ತಿಟ್ಟ. ಆಗ ವರ್ಣ “ಟೈಮ್ ಅಂದಿದ್ದೇ ನೆನಪಾಯ್ತು! ಈಗ ‘ಸ್ನ್ಯಾಕ್ಸ್ ಟೈಮ್’ ಅಲ್ವಾ? ಕಾವ್ಯಕ್ಕಾ, ಏನಾದ್ರೂ ತಿನ್ಬೇಕು ಅನ್ಸ್ತಾ ಇದೆ. ಪಾನಿಪೂರಿ ಮಾಡೋಣ್ವಾ?” ಅಂತ ಎದ್ದಳು. ಮನೆಯಲ್ಲಿ ಎಲ್ಲರಿಗೂ ಪಾನಿಪೂರಿ ಪಂಚಪ್ರಾಣ. “ನಾನು ಹಿಟ್ಟು ಕಲ್ಸ್ತೀನಿ”, “ನಾನು ಪೂರಿ ಮಾಡ್ತೀನಿ”, “ನಾನು ಈರುಳ್ಳಿ ಹೆಚ್ತೀನಿ” “ನಾನು ಟೇಸ್ಟೀ ಪಾನೀ ಮಾಡ್ತೀನಿ” ಅಂತ ಎಲ್ರೂ ಕೆಲಸ ಹಂಚಿಕೊಂಡು ಪಾನಿಪೂರಿ ಪಾರ್ಟಿಗೆ ರೆಡಿಯಾದ್ರು. ಪಾನಿಪೂರಿ ತಿನ್ನುತ್ತಾ ಏನು ಮಾತಾಡಿದರು ಗೊತ್ತೇ? ಅವರು ನಿಧಾನವಾಗಿ ಪಾನಿಪೂರಿ ಎಂಜಾಯ್ ಮಾಡಲಿ; ನಾವೆಲ್ಲಾ ಅವರ ಮಾತನ್ನು ಮುಂದಿನ ಸಂಚಿಕೆಯಲ್ಲಿ ಓದೋಣವಂತೆ. ಏನಂತೀರಿ?
(ಹಿಂದಿನ ಕಂತು: ನೀ ನನಗಾದರೆ ನಾ ನಿನಗೆ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.


