Advertisement
ಹಾರುತಾ ದೂರಾ ದೂರಾ…: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಹಾರುತಾ ದೂರಾ ದೂರಾ…: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಮೊದಲೇ ಸಾಹಸಗಳು ಇಷ್ಟ ನಮ್ಮ ವರ್ಣಳಿಗೆ. ಅವಳು ತಾನು ಬಿಡಿಸುತ್ತಿದ್ದ ಕೊತ್ತಂಬರಿ ಸೊಪ್ಪನ್ನು ಪಕ್ಕಕ್ಕೆಸೆದು, “ಸ್ಕೈ ಗ್ಲೈಡಿಂಗ್ ಆಆ…” ಎಂದಳು ಉತ್ಸಾಹದಿಂದ. ಆಗ ವಿಭಾ, “ಹೂಂ ವರ್ಣ, ನೆನಪಿದೆ, ನೆನಪಿದೆ! ನಮ್ಮ ಈ ಪ್ರವಾಸದ ಪ್ಯಾರಾ ಸೇಲಿಂಗ್, ನೆಕ್ಸ್ಟ್ ಟ್ರಿಪ್ ಅಲ್ಲಿ ಹೋಗ್ಬೇಕಿರೋ ಸ್ಕೈ ಗ್ಲೈಡಿಂಗ್ ಎಲ್ಲಾ ನೆನಪಿದೆ. ಕಾಮ್ ಡೌನ್! ಕಾಮ್ ಡೌನ್! ಆದ್ರೆ ಈಗ ರಜೆ ಮುಗಿದು ವಾಪಸ್ ಸ್ಕೂಲ್‌ಗೆ ಹೋಗ್ಬೇಕು, ಮತ್ತೆ ರಜೆ ಬಂದ್ಮೇಲೇನೇ… ಇನ್ನೊಂದು ಟ್ರಿಪ್, ಅದೂ ನೆನಪಿದೆ” ಎಂದಳು ನಗುತ್ತಾ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತೆರಡನೆಯ ಕತೆ

ಬೆಳಗಿನ ೧೦.೩೦ರ ಸಮಯ. ಕಾವ್ಯ ಮತ್ತು ಕುಟುಂಬ ಅಂಗಳದಲ್ಲಿ ಮಾತಾಡುತ್ತಾ ನಿಂತಾಗ ಒಳಗಿನಿಂದ ಸಮುದ್ರ ‘ಹಾವು.. ಹಾವು..’ ಎಂದು ಓಡಿಬಂದದ್ದು ನೆನಪಿದೆಯಲ್ಲವೇ? ಅವನ ಹಿಂದೆ ಓಡಿದ ವರ್ಣ, ವಿಭಾ, ಕಾವ್ಯ ಮತ್ತು ಪ್ರಕಾಶ್ ಎಲ್ಲರೂ ಎಲ್ಲಿ, ಏನು ಎಂದು ಹುಡುಕಾಡಿದರು. ಮಗನ ಕಡೆ ತಿರುಗಿ ಪ್ರಕಾಶ್, “ಯಾವ ಹಾವು ಅಂತ ನೋಡಿದ್ಯಾ? ಕಚ್ಲಿಲ್ಲ ತಾನೆ? ಎಂದು ವಿಚಾರಿಸಿದ. ಆಗ ಸಮುದ್ರ, ಮನೆಯ ಒಳಗೆ ಇಲ್ಲ, ಕಿಟಕಿಯಿಂದ ಕಾಣಿಸ್ತು ಹೊರಗೆ.. ಸರಿಯಾಗಿ ಗೊತ್ತಾಗ್ಲಿಲ್ಲ ಯಾವುದು ಅಂತ, ಅಲ್ಲಿ ನೋಡಿ ಮರಗಳ ಹತ್ತಿರ. ಅಲ್ಲೊಂದು ಹಾವು ಓಡೋಯ್ತು..” ಎಂದ. ಇದನ್ನು ಕೇಳಿ ಸುಮ್ಮಸುಮ್ಮನೆ ಹೆದರಿಸಿ ಓಡಿ ಬರುವ ಹಾಗೆ ಮಾಡಿದನಲ್ಲ ಎಂದು ವರ್ಣಳಿಗೆ ಕಿರಿಕಿರಿ ಆಯ್ತು. ಅವಳು, “ಹೂಂ, ತೆವಳೋ ಹಾವನ್ನ ಇವತ್ತು ಓಡಿಹೋಯ್ತು ಅಂತೀಯಾ, ನಾಳೆ ಹಾರಿಹೋಯ್ತು ಅಂತೀಯಾ… ಹೋಗೋ…ಸುಮ್ನೆ.. ತರ್ಲೆ ಮಾಡ್ತೀಯಾ.” ಎಂದಳು. ಆಗ ಪ್ರಕಾಶ್, ವರ್ಣಳ ಕಡೆಗೆ ತಿರುಗಿ, “ಹೇ! ಹಾರೋ ಹಾವು ಕೂಡ ಇದೆ, ಗೊತ್ತಾ ವರ್ಣ?” ಎಂದ.

ಆಗ ವಿಭಾ, ಪ್ರಕಾಶನ ಕಡೆಗೆ ತಿರುಗಿ “ಏನ್ ಹೇಳ್ತಾ ಇದೀರಾ ಬಾವಾ? ಹಾರೋ ಹಾವಾ? ಅವಕ್ಕೇನು ರೆಕ್ಕೆ ಇರತ್ತಾ ಹಾರೋಕೆ?” ಎಂದಳು. ಇದಕ್ಕೆ ದನಿಗೂಡಿಸುತ್ತಾ ಸಮುದ್ರ, “ಹಾರೋ ಹಾವಾ? ಅದು ಇಂಡಿಯಾದಲ್ಲೂ ಇದ್ಯಾ?” ಎಂದ. ಆಗ ಕಾವ್ಯಾ ನಗುತ್ತಾ, “ಇಲ್ಲೇ ನಮ್ಮ ಪಶ್ಚಿಮಘಟ್ಟಗಳಲ್ಲೇ ಇದೆ ಕಣೋ.” ಎಂದಳು.

ಬೆಂಗಳೂರಿಗೆ ಹೊರಡೋಕೆ ಇನ್ನೂ ಸಮಯವಿತ್ತಲ್ಲ.. ಎಲ್ಲರೂ ಮತ್ತೊಮ್ಮೆ ಜಗಲಿ ಮೇಲೆ ಕೂತರು. ಆಗ ಕಾವ್ಯ, “ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ಓದಿದೀರಾ?” ಎಂದು ಕೇಳಿದಳು. ಇರುವ ಮೂವರಲ್ಲಿ ದೊಡ್ಡವಳು ವಿಭಾ, “ನಾನು ಓದಿದೀನಿ. ಅದರಲ್ಲಿ ಹಾರುವ ಓತಿ ಇದ್ಯಲ್ಲ?” ಎಂದಳು ಹುರುಪಿನಿಂದ. ವರ್ಣ ಮತ್ತು ಸಮುದ್ರ, ಅದರ ಬಗ್ಗೆ ಕೇಳಿರುವುದಾಗಿ ಹೇಳಿದಾಗ, ಕಾವ್ಯ – “ವೆರಿ ಗುಡ್. ಜಾಣೆ. ನೀವೆಲ್ರೂ ಜಾಣ ಮಕ್ಕಳೇ. ಕನ್ನಡ ಪುಸ್ತಕಗಳನ್ನ, ಬಗೆಬಗೆಯ ಪುಸ್ತಕಗಳನ್ನ ಓದ್ತೀರಾ. ವರ್ಣ ಮತ್ತು ಸಮುದ್ರ ಕೂಡ ದೊಡ್ಡವರಾಗ್ತಾ, ಇಂತಹ ಒಳ್ಳೊಳ್ಳೇ ಪುಸ್ತಕಗಳನ್ನ ಓದ್ತಾ ಹೊಸ ಪ್ರಪಂಚಕ್ಕೆ ತೆರೆದುಕೋಬಹುದು. ನಿಜ್ವಾಗ್ಲೂ ಪುಸ್ತಕದಂತಹ ಫ್ರೆಂಡ್ ಇನ್ಯಾರೂ ಇರೋಕೆ ಸಾಧ್ಯವಿಲ್ಲ. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಹೈಸ್ಕೂಲಲ್ಲಿ ಇದ್ದಾಗ, ನಮ್ ಅಪ್ಪ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಪುಸ್ತಕ ತಂದುಕೊಟ್ಟಿದ್ರು. ಅದೆಷ್ಟು ಇಂಟರೆಸ್ಟಿಂಗ್ ಅಂದ್ರೆ, ಒಂದೇ ಗುಕ್ಕಲ್ಲಿ ಓದಿ ಮುಗಿಸಿದ್ದೆ. ಮತ್ತೆ ಮತ್ತೆ ಅದೆಷ್ಟು ಸಲ ಓದಿದೀನೋ? ಅದರಲ್ಲಿ ‘ಹಾರುವ ಓತಿ’ಯ ಹಿಂದೆ ಬಿದ್ದ ಎಲ್ಲರಿಗೂ, ಕಂಡೂಕಾಣದಂತೆ, ಕೈಗೆ ಸಿಕ್ಕದಂತೆ ಚಂಗನೆ ಮಾಯವಾಗೋ ಹಾರುವ ಓತಿ, ನಿಮ್ ಬಾವನ ಕ್ಯಾಮೆರಾಗೆ ಸಿಕ್ಕಿತ್ತು ಗೊತ್ತಾ?” ಎಂದಳು.

“ಹಾಂ!?” ಎಂದು ಮಕ್ಕಳೆಲ್ಲಾ ಕಣ್ಣರಳಿಸಿ ಪ್ರಕಾಶನ ಕಡೆಗೆ ತಿರುಗಿದಾಗ, ಇದನ್ನು ನಿರೀಕ್ಷಿಸಿದ್ದ ಪ್ರಕಾಶ್, ತನ್ನ ಕ್ಯಾಮೆರಾದಲ್ಲಿದ್ದ ಹಾರುವ ಓತಿಯ ಚಿತ್ರವನ್ನು ತೋರಿಸುತ್ತಾ, ಅದು ಹಾರುವ ರೀತಿಯನ್ನು ವಿವರಿಸಿದ. “ನೋಡಿ, ಈ ಚಿತ್ರವನ್ನ ‘ಹಾರುವ ಓತಿ’, ಮರದ ಮೇಲೆ ಕೂತಿದ್ದಾಗ ತೆಗೆದದ್ದು. ಇಲ್ಲಿ ಅದು ನಾರ್ಮಲ್ ಓತಿಯ ಹಾಗೇ ಕಾಣತ್ತೆ ಅಲ್ವಾ? ರೆಕ್ಕೆ-ಗಿಕ್ಕೆ ಏನೂ ಇಲ್ಲಾ ತಾನೆ? ಆದ್ರೆ, ಒಂದೇ ಕ್ಷಣಕ್ಕೆ ಅದು ಅಲ್ಲಿಂದ ಎಗರತ್ತೆ, ಅರೆಕ್ಷಣದಲ್ಲಿ ಅದರ ರಿಬ್ ಕೇಜ್ ಅಂದ್ರೆ ಪಕ್ಕೆಲುಬು ಇರತ್ತಲ್ಲ, ಅದನ್ನ ಹರಡಿಕೊಳ್ಳತ್ತೆ; ಆ extended ಅಂದ್ರೆ ವಿಸ್ತಾರಗೊಂಡ ಪಕ್ಕೆಲುಬಿನ ಮೇಲೆ ಒಂದು ಚರ್ಮದ ಪದರ ಇರತ್ತೆ. ಅದನ್ನ ‘ಪಟೇಜಿಯಮ್’ (Pategium) ಅಂತೀವಿ. ಅದು ಒಳ್ಳೆ ಕೊಡೆ ಅಥ್ವಾ ಛತ್ರಿಯ ಹಾಗೆ ಇರತ್ತೆ. ಅದ್ರಲ್ಲಿ ಗಾಳಿ ತುಂಬ್ಕೊಂಡು, ಈ ಓತಿ ‘ಹಾರೋ ಓತಿ’ಯಾಗಿ ಬದಲಾಗತ್ತೆ. ಒಂದು ಮರದಿಂದ ಮತ್ತೊಂದಕ್ಕೆ ಹಾರತ್ತೆ. ಈ ಇನ್ನೊಂದು ಫೋಟೋ ನೋಡಿ, ಇದು ಅದರ ‘ಪಟೇಜಿಯಮ್’ ಅಗಲಿಸಿಕೊಂಡು ಹಾರ್ತಾ ಇರೋದು ಕಾಣತ್ತೆ.” ಎಂದ ಪ್ರಕಾಶ್.

ಆಸಕ್ತಿಕರ ಹಾರುವ ಓತಿಯ ಚಿತ್ರವನ್ನು ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಮಕ್ಕಳನ್ನು ನೋಡಿ,

ಕಾವ್ಯ ಮತ್ತು ಪ್ರಕಾಶರಿಗೆ ಸಂತಸ. ಆಗ ಕಾವ್ಯ, ಸರಿ, ಇಂತಹ ‘ಪಟೇಜಿಯಮ್’ ಇರುವ ಮತ್ತೊಂದು ಪ್ರಾಣಿಯನ್ನ ನೀವು ನೋಡಿದ್ದೀರ. ಯಾವುದು ಅಂತ ಜ್ಞಾಪಿಸಿಕೊಂಡು ಹೇಳಬಲ್ಲಿರಾ?” ಎಂದು ಕೇಳಿದಳು. ಮಕ್ಕಳು ತಾವು ನೋಡಿದ ಎಲ್ಲಾ ಪ್ರಾಣಿಗಳ ಹೆಸರನ್ನ ಜ್ಞಾಪಿಸಿಕೊಳ್ಳುತ್ತಾ ಮೌನವಾದರು. ಒಂದು ನಿಮಿಷದ ನಂತರವೂ ಮೌನ ಮುರಿಯದ ಈ ಪುಟಾಣಿ-ಬಟಾಣಿಗಳನ್ನು ನೋಡಿ, ಕಾವ್ಯಳೇ ಮಾತು ಮುಂದುವರೆಸಿದಳು.

“ಹೇ ಪುಟಾಣಿಗಳಾ, ನೆನಪಾಗಲಿಲ್ವೇನ್ರೋ? ಬಾವಲಿಗಳೂ ಹೀಗೆ ಅಲ್ವಾ? ಬಾವಲಿ ನೋಡಿದೀರ ತಾನೇ?” ಎಂದಳು ಕಾವ್ಯ. ಆಗ ಮಕ್ಕಳು, “ಹೋ! ಹೌದಲ್ಲಾ! ನಾವು ಯಾವುದ್ಯಾವುದೋ ದೂರದೂರಿನ ಪ್ರಾಣಿಗಳ ಹೆಸರು ಜ್ಞಾಪಿಸಿಕೊಳ್ತಾ ಇದ್ವಿ. ಇಲ್ಲೇ ಹತ್ತಿರವೇ ನೋಡಿದ್ದು ಮರೆತು ಹೋಯ್ತಲ್ಲ!” ಎಂದರು. ಆಗ ಪ್ರಕಾಶ್, “ನಿಜಾ, ಹಾಗಾಗತ್ತೆ ಕೆಲವೊಮ್ಮೆ. ನಾವು ಯಾರಿಗಾದ್ರೂ wild life ಬಗ್ಗೆ ಕೇಳಿದ್ರೆ, ಹುಲಿ, ಸಿಂಹ, ಚಿರತೆ ಅಂತ ಪ್ರಾರಂಭಿಸಿ, ಬೇರೇ ಯಾವುದೋ ದೇಶದ ಎಂದೂ ಕಂಡಿರದ ಪ್ರಾಣಿಗಳ ಹೆಸರು ಹೇಳುವವರೇ ಸಾಮಾನ್ಯವಾಗಿ ಕಂಡುಬರ್ತಾರೆ. ಆದ್ರೆ, ನಾವು ಸಾಕದ ಪ್ರಾಣಿಗಳು, ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಬದುಕುವ ಮತ್ತು ನೇರವಾಗಿ ನಮ್ಮ ಮೇಲೆ ಅವಲಂಬಿತರಾಗದ ಜೀವಿಗಳೆಲ್ಲ ವೈಲ್ಡ್ ಲೈಫ್’ ಅಂತಾನೇ ಲೆಕ್ಕ!” ಎಂದ.

ಆಗ ವಿಭಾ, “ಈ ಹಾರುವ ಓತಿ ಇದ್ಯಲ್ಲ? ಬಾವಲಿ ಕೂಡ ಅದೇ ರೀತಿ ಹಾರೋದಾ? ಹೇಗೂ ಅವುಗಳ ರೆಕ್ಕೆ ಒಂದೇ ಥರಾ ಇದ್ಯಲ್ಲ?” ಎಂದಳು. ಆಗ ಕಾವ್ಯ, “ಇಲ್ಲ ವಿಭಚ್ಚು, ಮೂಲತಃ ಸ್ವಲ್ಪ ವ್ಯತ್ಯಾಸ ಇದೆ. ಬಾವಲಿಗಳು ತಮ್ಮ ಈ ಪೆಟೇಜಿಯಮ್ ರೂಪದ ರೆಕ್ಕೆಯನ್ನ, ಪಕ್ಷಿಗಳ ರೆಕ್ಕೆಯ ಹಾಗೆ ಬಡಿಯುತ್ತಾ ಹಾರತ್ವೆ. ಪಕ್ಷಿಗಳಿಗಿಂತ ಸ್ವಲ್ಪ ಭಿನ್ನವೇ, ಆದ್ರೂ ಸರಳವಾಗಿ ಅರ್ಥ ಆಗೋಕೆ, ಪಕ್ಷಿಗಳ ಥರಾ ಅಂದುಕೋಬಹುದು. ಆದ್ರೆ flying lizard ಅಂದ್ರೆ ನಮ್ಮ ಹಾರೋ ಓತಿ ಇದ್ಯಲ್ಲ? ಅದು ರೆಕ್ಕೆ ಬಡಿಯಲ್ಲ, ಗಾಳಿತುಂಬಿಕೊಂಡ ಕೊಡೆ ಹಿಡಿದಂತೆ ಗಾಳೀಲಿ ತೇಲತ್ತೆ, ಒಂದು ಎತ್ತರದ ಜಾಗದಿಂದ ಮತ್ತೊಂದು ಕಡೆಗೆ.” ಎಂದು ವಿವರಿಸಿದಳು. ಅಷ್ಟರಲ್ಲಿ ಸಮಯ ನೋಡಿ, “ಅಯ್ಯೋ ಬಸ್‌ಗೆ ಹೊತ್ತಾಗ್ತಾ ಇದೆ; ಬೇಗ ಅಡುಗೆ ಮಾಡಿಬಿಡೋಣ. ಊಟ ಮುಗಿಸಿ ಹೊರಡೋಣ” ಎಂದು ಕಾವ್ಯ ಅಡುಗೆ ಮನೆ ಕಡೆ ನಡೆದಳು. ಎಲ್ಲರೂ ಜೊತೆಗೂಡಿದರು.

ಅಡುಗೆ ಮಾಡುತ್ತಾ, ಎಲ್ಲರೂ ಒಂದೊಂದು ಜವಾಬ್ದಾರಿ ವಹಿಸಿಕೊಂಡು, ಅಡುಗೆಗೆ ಕೈಜೋಡಿಸಿದರು. ಇವರೆಲ್ಲಾ ಜೊತೆಗೂಡಿದರೆ, ಕೆಲಸದ ಪಾಡಿಗೆ ಕೆಲಸ, ಆಸಕ್ತಿಕರ ಚರ್ಚೆಯ ಪಾಡಿಗೆ ಚರ್ಚೆ ನಡೆಯುವುದು ಅವರಿಗೂ ಹೊಸದಲ್ಲ, ಇವರ ಬಗ್ಗೆ ಅನೇಕ ತಿಂಗಳುಗಳಿಂದಲೂ ಓದುತ್ತಿರುವ ನಿಮಗೂ ಹೊಸದಲ್ಲ. ಅಲ್ಲವೇ? ಅವರ ಮಾತು ಮತ್ತೆ ಹಕ್ಕಿಗಳಲ್ಲದೇ ಇದ್ರೂ ಹಾರುವ ಪ್ರಾಣಿಗಳ ಬಗ್ಗೆ ತಿರುಗಿತು.

ವರ್ಣ, ಕೊತ್ತಂಬರಿ ಸೊಪ್ಪು ಬಿಡಿಸುತ್ತಾ, “ಬಾವಲಿ, ಹಾರೋ ಓತಿ, ಇವೆರಡೂ ಅಲ್ದೇ, ಮತ್ಯಾವ್ದು ಹೀಗೆ ಹಾರತ್ತೆ?” ಎಂದಳು. ಆಗ ಕಾವ್ಯ, “ನಮ್ಮಲ್ಲೇ ಕಂಡು ಬರೋ ಕೆಲವು ವಿಶೇಷ ಹಾರೋ ಪ್ರಾಣಿಗಳು…ಹ್ಮ್…ಅದೇ ನಮ್ಮ ಹಾರೋ ಅಳಿಲುಗಳು!  ‘ಇಂಡಿಯನ್ ಜಯಂಟ್ ಫ್ಲೈಯಿಂಗ್ ಸ್ಕ್ವಿರಿಲ್’ (Indian Giant Flying Squirrel), ಟ್ರಾವಂಕೋರ್ ಹಾರುವ ಅಳಿಲು (Travancore Flying Squirrel) – ಇವೆಲ್ಲಾ ನಮ್ಮ ಹಾರೋ ಓತಿ ಥರಾ, ಪಟೇಜಿಯಮ್ ಅನ್ನೋ ಪದರಾನಾ ಅಗಲ ಮಾಡಿಕೊಂಡು ಹಾರತ್ವೆ. ನಾನೂ ನೋಡಿಲ್ಲ ಇವನ್ನ. ಪ್ರಕಾಶ್ ನೀನು ನೋಡಿದ್ಯಾ?” ಎಂದಳು.

ಅದಕ್ಕೆ ಉತ್ತರಿಸುತ್ತಾ ಪ್ರಕಾಶ್ “ಹೂಂ, ಒಂದ್ ಸಲ ನಮ್ಮ ಪಕ್ಷಿವೀಕ್ಷಣೆ ಗ್ರೂಪ್ ಜೊತೆ ಸುಳ್ಯಕ್ಕೆ ಹೋಗಿದ್ದಾಗ ಅಲ್ಲಿ ಕಂಡಿತ್ತು. ಒಂದು ಕ್ಷಣ ಸಡನ್ ಆಗಿ ಇಷ್ಟು ದೊಡ್ಡ ಪ್ರಾಣಿ ಹಾಗೆ ಹಾರೋ ಥರ ಮೂವ್ಮೆಂಟ್ ನೋಡಿ ಬೆಚ್ಚಿಬಿದ್ವಿ ನಾವೆಲ್ಲಾ! ಎಷ್ಟು ಮಜ ಇರತ್ತೆ ಗೊತ್ತಾ ನೋಡಕ್ಕೆ! ಸೇಮ್ ಸ್ಕೈ ಗ್ಲೈಡಿಂಗ್ (sky gliding) ಥರಾ ಕಾಣ್ಸತ್ತೆ!” ಎಂದ.

ಮೊದಲೇ ಸಾಹಸಗಳು ಇಷ್ಟ ನಮ್ಮ ವರ್ಣಳಿಗೆ. ಅವಳು ತಾನು ಬಿಡಿಸುತ್ತಿದ್ದ ಕೊತ್ತಂಬರಿ ಸೊಪ್ಪನ್ನು ಪಕ್ಕಕ್ಕೆಸೆದು, “ಸ್ಕೈ ಗ್ಲೈಡಿಂಗ್ ಆಆ…” ಎಂದಳು ಉತ್ಸಾಹದಿಂದ. ಆಗ ವಿಭಾ, “ಹೂಂ ವರ್ಣ, ನೆನಪಿದೆ, ನೆನಪಿದೆ! ನಮ್ಮ ಈ ಪ್ರವಾಸದ ಪ್ಯಾರಾ ಸೇಲಿಂಗ್, ನೆಕ್ಸ್ಟ್ ಟ್ರಿಪ್ ಅಲ್ಲಿ ಹೋಗ್ಬೇಕಿರೋ ಸ್ಕೈ ಗ್ಲೈಡಿಂಗ್ ಎಲ್ಲಾ ನೆನಪಿದೆ. ಕಾಮ್ ಡೌನ್! ಕಾಮ್ ಡೌನ್! ಆದ್ರೆ ಈಗ ರಜೆ ಮುಗಿದು ವಾಪಸ್ ಸ್ಕೂಲ್‌ಗೆ ಹೋಗ್ಬೇಕು, ಮತ್ತೆ ರಜೆ ಬಂದ್ಮೇಲೇನೇ… ಇನ್ನೊಂದು ಟ್ರಿಪ್, ಅದೂ ನೆನಪಿದೆ” ಎಂದಳು ನಗುತ್ತಾ. ವರ್ಣ ತರಲೆ ಮೂತಿ ಮಾಡುತ್ತಾ, ವಿಧ ವಿಧದ ಭಾವನೆಗಳನ್ನು ತೋರಿಸುತ್ತಿದ್ದುದನ್ನು ನೋಡಿ ಮತ್ತೆ ಎಲ್ಲರೂ ನಗಾಡಿದರು.

ಆಗ ಕಾವ್ಯ, “ಡೋಂಟ್ ವರಿ ವರ್ಣ ಪುಟ್ಟ! ಬೇಗ ಮತ್ತೆ ರಜೆ ಬರತ್ತೆ, ತಕ್ಷಣ ಮತ್ತೊಂದು ಟ್ರಿಪ್ ಹಾಕೋದೆ! ಸ್ಕೈ ಗ್ಲೈಡಿಂಗ್ ಮಾಡೋದೇ!” ಎಂದಳು.

ಆಗ ಪ್ರಕಾಶ್, “ಖಂಡಿತಾ! ಅಪ್ಪ ಅಮ್ಮಂಗೆ ಹೇಳಿ ರೆಡಿ ಮಾಡಿಟ್ಟಿರಿ. ಹೋಗೋಣ ನೆಕ್ಸ್ಟ್ ಮಂಥ್!” ಎಂದ. ತನ್ನ ಮಾತನ್ನು ಮುಂದುವರೆಸುತ್ತಾ, ಈ ‘ಹಾರ್ಬೆಕ್ಕು’ ಅಥ್ವಾ “ಹಾರೋ ಅಳಿಲು”ಗಳು ಇರತ್ವಲ್ಲಾ? ಅವು ನಮ್ಮ ಹಾರೋ ಓತಿ ಥರ ಅಲ್ಲ; ಸ್ವಲ್ಪ ಡಿಫರೆಂಟು. ಅವುಗಳ ರಿಬ್ ಕೇಜ್ ಮೇಲೆ ಚರ್ಮದ ಪದರ ಹರಡಿಕೊಂಡು ರೆಕ್ಕೆ ಆಗಲ್ಲ. ಅವುಗಳ ಮುಂಗೈ ಮತ್ತು ಪಾದಕ್ಕೆ ಹೊಂದಿಕೊಂಡಂತೆ ಈ ರೆಕ್ಕೆ ಥರ ಪದರ ಇರತ್ತೆ. ಸ್ಕೈ ಡೈವಿಂಗ್ ಸೂಟ್ ಇರತ್ತೆ ನೋಡಿ? ಆ ಥರ! ಅದನ್ನ ಹರವಿಕೊಂಡು ಸುಯ್… ಅಂತ ಗಾಳೀಲಿ ಹಾರತ್ತೆ… Actually, ಹಾರೋದೂ ಅನ್ನಬಾರ್ದು. ತೇಲೋದು ಅನ್ನೋದೇ ಸರಿ. ಅಂದ್ರೆ ಇಂಗ್ಲೀಶಲ್ಲಿ ಫ್ಲೈಯಿಂಗ್ ಅಲ್ಲ ಗ್ಲೈಡಿಂಗ್ ಪದ ಸರಿಯಾಗತ್ತೆ.” ಎಂದು ವಿವರಿಸಿದ.

ಆಗ ಕಾವ್ಯ, “ಅದಕ್ಕೇನಾ ಪ್ರಕಾಶ್ ಹಾರೋ ಹಾವುಗಳನ್ನ ಗ್ಲೈಡಿಂಗ್ ಸ್ನೇಕ್ ಅಂತಾರೆ ಇಂಗ್ಲೀಶಲ್ಲಿ?” ಎಂದಳು. ಆಗ ಪ್ರಕಾಶ್, “ಹೌದು ಕಾವ್ಯ, ಆದ್ರೆ ಎಷ್ಟೋ ಹಳೇ ಹೆಸರುಗಳೇ ಉಳ್ಕೊಂಡು ಬಿಡತ್ತೆ. ಜನರಿಗೂ ಅದೇ ಅಭ್ಯಾಸವಾಗಿ ಇನ್ನೂ ಫ್ಲೈಯಿಂಗ್ ಸ್ನೇಕ್, ಫ್ಲೈಯಿಂಗ್ ಸ್ಕ್ವಿರಿಲ್ ಅಂತಾನೇ ಕರೀತಾರೆ, ಕೆಲವು ಸೈಂಟಿಫಿಕ್ ಹೆಸರುಗಳೂ ಹಾಗೇ ಆಗತ್ತೆ.” ಎಂದ.

ಮಾತಾಡ್ತಾ ಮಾತಾಡ್ತಾ ಅಡುಗೆ ಮುಗಿದು ಊಟದ ಸಮಯ ಆಯ್ತು. ಆಗ ಸಮುದ್ರ, “ಹಾರೋ ಹಾವುಗಳ ಬಗ್ಗೆ ಹೇಳ್ಲೇ ಇಲ್ಲ!” ಎಂದ. ಆಗ ಪ್ರಕಾಶ್, “ಈಗ ಬೇಡ ಕಂದ. ಬೇಗ ಊಟ ಮಾಡಿ ಹೊರಟುಬಿಡೋಣ. ವಿಭಾ, ವರ್ಣ ಮತ್ತು ಅಮ್ಮನ್ನ ಬೆಂಗಳೂರು ಬಸ್ ಹತ್ತಿಸಿ ಬಂದು ಆಮೇಲೆ ಮಾತಾಡೋಣ. ನಿನಗೂ ನಾಳೆಯಿಂದ ಮತ್ತೆ ಸ್ಕೂಲ್ ಸ್ಟಾರ್ಟ್. ನಾವಿಬ್ರೂ ಯೂನಿಫಾರ್ಮ್, ಬ್ಯಾಗ್ ಎಲ್ಲಾ ರೆಡಿ ಮಾಡಿ ಇಡ್ಬೇಕಲ್ಲಾ?” ಎಂದ. ಸರಿ ಎಂದು ಎಲ್ಲರೂ ಊಟಕ್ಕೆ ಕುಳಿತರು.

ಬಿಸಿ ಬಿಸಿ ಊಟ ಮುಗಿಸಿ, ತಯಾರಾಗಿದ್ದ ಬ್ಯಾಗ್ ತೆಗೆದುಕೊಂಡು ಕಾರಿನಲ್ಲಿ ಬಸ್ ಸ್ಟಾಪಿಗೆ ಹೊರಟರು. ನಂತರ ಬೆಂಗಳೂರಲ್ಲಿ ಅಕ್ಕತಂಗಿಯರು ಏನು ಮಾಡಿದರು? ಊರಿನಲ್ಲಿ ಅಪ್ಪ ಮಗ ಏನು ಮಾಡಿದರು? ಮುಂದಿನ ಸಂಚಿಕೆಯಲ್ಲಿ ನೋಡೋಣ. ನಿಮ್ಮ ಊರಿನಲ್ಲಿ ಹೀಗೆ ಇನ್ಯಾವುದಾದರೂ ಹಾರುವ ಪ್ರಾಣಿ ಇದೆಯಾ? ವಿಚಾರಿಸಿ ನೋಡಿ. ನಮ್ಮ ಹಿರಿಯರು ತಮ್ಮ ದೈನಂದಿನ ಜೀವನದ ಭಾಗವಾಗಿ ಇಂತಹ ಪ್ರಾಣಿಗಳನ್ನು ನೋಡಿರಬಹುದು. ಅಂದ ಹಾಗೆ, ಅದು ಹಾರೋದಾ? ತೇಲೋದಾ? ವಿಚಾರಿಸಿ. ನಿಮಗೂ ಕಾಣಲು ಸಿಗಬಹುದಾ ಹುಡುಕಿ ನೋಡಿ. ಇಂತಹ ನಿಸರ್ಗದ ಅಚ್ಚರಿಗಳಿಗೆ ಕಣ್ಣುಮುಚ್ಚಿ ಮೊಬೈಲ್ ಹೊಕ್ಕು ಕೂರೋದು ಎಷ್ಟು ಸಮಂಜಸ? ಆಲೋಚಿಸಿ!

(ಹಿಂದಿನ ಕಂತು: ಕಣ್ಣಾಮುಚ್ಚೇ.. ಕಾಡೇಗೂಡೇ… ಐಸ್ಪೈಸ್!)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ