ಹುಲಿಗೆ ಆಕ್ರಮಣದ ನಖಗಳಿವೆ. ಆದರೆ ಹುಲ್ಲೆಗೆ ಸಂರಕ್ಷಣೆಯ ಕೊಂಬು ಮತ್ತು ವೇಗಶಕ್ತಿ ಇವೆ. ಇದೆಲ್ಲ ಇರುವಂಥದ್ದೆ. ಏಕೆಂದರೆ ಪ್ರಕೃತಿಯಲ್ಲಿನ ಹುಲಿ ಹುಲ್ಲೆಗಳು ಜೀವಜಾಲದಲ್ಲಿನ ಆಹಾರ ಸರಪಳಿಯ ನಿಯಮದಂತೆಯೆ ಬದುಕುತ್ತಿವೆ. ಆದರೆ ಆಂತರ್ಯದಲ್ಲಿ ಹುಲಿ, ಹುಲ್ಲೆಗಳಂತಿರುವ ಮಾನವರೂ ಇದ್ದಾರೆ. ಅವರಿಗೆ ಈ ಪ್ರಕೃತಿಯ ನಿಯಮ ಅನ್ವಯಿಸುವುದಿಲ್ಲ. ಆದ್ದರಿಂದ ಅವರು ಬದಲಾಗುಂಥ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಅದಕ್ಕಾಗಿ ಎಲ್ಲ ರೀತಿಯಿಂದಲೂ ತುಳಿತಕ್ಕೊಳಗಾದವರು ಮತ್ತು ಅಸಹಾಯಕರು ಕ್ರೌರ್ಯವನ್ನು ಸದೆಬಡಿಯುವ ಶಕ್ತಿಯನ್ನು ಹೊಂದಲೇಬೇಕು ಎಂಬ ಸಂಕಲ್ಪದೊಂದಿಗೆ ಕ್ರಿಯಾಶೀಲವಾಗಬೇಕಿದೆ, ಬರೆಯಬೇಕಿದೆ ಮತ್ತು ಬದುಕಬೇಕಿದೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಇಪ್ಪತ್ತೆರಡನೆ ಕಂತು

ನಾವು ನಾವಿಗಲ್ಲಿಯ ಆ ಚಿಕ್ಕ ಬಾಡಿಗೆ ಮನೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಇದ್ದೆವು. ಅದು ಎಲ್ಲವೂ ಆಗಿತ್ತು. ಬಚ್ಚಲು ಮನೆ, ಅಡುಗೆ ಮನೆ, ಹಾಲ್, ಬೆಡ್ ರೂಂ, ಸ್ಟೋರ್ ರೂಂ, ಸ್ಟಡಿ ರೂಂ ಮತ್ತು ಮಳೆ ಬಂದರೆ ಆಡುಗಳ ದೊಡ್ಡಿ ಹೀಗೆ ಎಲ್ಲವೂ ಅದೇ ಆಗಿತ್ತು. ಮನೆ ಮುಂದೆ ಬಾತುಕೋಳಿ ಗೂಡು, ನಾವೇ ಕಟ್ಟಿಸಿದ ಕಟ್ಟೆ, ಧೂಳಿನಿಂದ ತುಂಬಿದ ಪುಟ್ಟ ಅಂಗಳ, ಅದರಲ್ಲಿ ಬೀದಿನಾಯಿ ಮತ್ತು ಹಂದಿಗಳ ಜೊತೆ ನಮ್ಮದೂ ಪಾಲು.

ಅದೇನೇ ಇದ್ದರೂ ನನ್ನ ಮುಂದೆ ಒಂದು ಅದ್ಭುತ ವಿಶ್ವವಿದ್ಯಾಲಯವಿತ್ತು. ಅದುವೇ ಸುತ್ತಮುತ್ತಲಿನ ಪ್ರದೇಶ ಸಮೇತ ‘ನಾವಿಗಲ್ಲಿ’ ಎಂಬ ನನ್ನ ಮೊದಲ ವಿಶ್ವವಿದ್ಯಾಲಯ. ನಾನು ಬಾಲ್ಯದಲ್ಲೇ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದೆ. ತ್ಯಾಗಿ ಕಾಕಾ ಕಾರಖಾನೀಸ ಮತ್ತು ಅವರ ಬೋರ್ಡಿಂಗ್, ಮಾನವೀಯ ಸ್ಪಂದನದ ಜಿ.ಬಿ. ಸಜ್ಜನ ಸರ್ (ಗಣಪತಿ ಮಾಮಾ), ಆಲದಮರದಿಂದ ಬೇವಿನ ಮರದವರೆಗಿನ ಸಂತಸೇನಾ ರಸ್ತೆ, ಬೋಧರಾಚಾರಿ ದೊಡ್ಡಿ, ಹರಿತಾಬೂತ್, ವಿವಿಧ ಜಾತಿ ಧರ್ಮಗಳ ದುಡಿಯುವ ಜನರು, ಕನ್ನಡ, ಮರಾಠಿ, ಹಿಂದಿ, ಉರ್ದು ಭಾಷಿಕರು, ನಾವಿಗಳು (ಮರಾಠಿ ಭಾಷಿಕ ಕ್ಷೌರಿಕರು), ಹಡಪದರು, ಗಾಣಿಗರು, ಗೌಳಿಗರು, ಮಾಟಗಾರರು, ವೇಶ್ಯೆಯರು, ಜೋಗತಿಯರು, ಆಡು, ಕುರಿ ಸಾಕುವವರು, ಕುಳ್ಳು ಕಟ್ಟಿಗೆ ಮಾರುವವರು, ಮನೆಗೆಲಸದವರು, ಡಬ್ಬಿ ಬೆಸೆಯುವವರು, ಛತ್ರಿ ರಿಪೇರಿ ಮಾಡುವವರು, ಗೊಂದಲಿಗರು, ‘ಗುರು ಸೈಪಾಕದಲ್ಲಿ ಭಿಕ್ಷೆ’ ಎಂದು ಹೇಳುತ್ತ ಪೂಜೆಗಾಗಿ ಕೇಳಿದವರಿಗೆ ಬಿಲ್ವಪತ್ರೆ ಕೊಟ್ಟು ಹಿಟ್ಟು ಪಡೆಯುವ ಅಯ್ನಾರರು. ಪೈಲವಾನರು, ತೇಲಮಾಲಿಷ್ ಮಾಡುವವರು, ಕೂಲಿನಾಲಿಗಾಗಿ ಬಂದ ಮೊಗಲಾಯಿ (ರಾಯಚೂರು) ಕಡೆಯ ಜನರು, ಪ್ರೇಮ, ಕಾಮ, ನೈತಿಕತೆ, ಅನೈತಿಕತೆ, ಜಗಳ, ಭಾವೈಕ್ಯ ಮುಂತಾದ ಮನಸ್ಥಿತಿಯುಳ್ಳವರು, ಸ್ವಾಭಿಮಾನಿಗಳು, ಲಜ್ಜೆಗೆಟ್ಟವರು, ಮಾನವಂತರು, ಧೂರ್ತರು, ಅಸಹಾಯಕರು, ಉದಾರಚರಿತರು, ಜೂಜುಕೋರರು, ಮೋಸಗಾರರು, ಸಾಲಗಾರರು, ಸುಳ್ಳರು, ಕಳ್ಳರು, ದುಂದುವೆಚ್ಚ ಮಾಡುವವರು, ಹಾಸಿಗೆ ಇದ್ದಷ್ಟು ಕಾಲುಚಾಚುವವರು, ಓದುವ ಹಂಬಲದವರು, ಶಾಲೆಗೆ ಚಕ್ಕರ್ ಹೊಡೆಯುವವರು, ಕಠಿಣ ಶ್ರಮಜೀವಿಗಳು, ಕೂತುಣ್ಣುವವರು, ಕುಡುಕರು, ಅವರ ಕರ್ತವ್ಯನಿಷ್ಠ ಹೆಂಡಿರು, ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುವವರು. ಸಂಪ್ರದಾಯಗಳಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧರು, ಮೂರ್ಖರು, ಚಾಣಾಕ್ಷರು, ಬೆಳ್ಳನೆಯ ಹೂವು ತುಂಬಿದ ದುಂಡನೆಯ ಸುಂದರ ಹಸಿರು ಬೇವಿನ ಮರ.

ವಸಂತ ಋತುವಿನ ಸ್ವಾಗತಕ್ಕೆ ಸಿದ್ಧವಾದ ಗುಡಿಪಾಡ್ಯದ ರಂಗುರಂಗಿನ ‘ಧ್ವಜ’ಗಳು, ದುರಂತಗಳ ಕಥೆ ಹೇಳುವ ಸೇದುವ ಬಾವಿ. ಅದರ ಬಳಿ ಇರುವ ತ್ರಿವರ್ಣಧ್ವಜದ ಸ್ತಂಭ. ಅಲ್ಲಿ ಸ್ವಾತಂತ್ರ್ಯತೋತ್ಸವ ಮತ್ತು ಗಣರಾಜ್ಯೋತ್ಸವಗಳಂದು ಧ್ವಜಾರೋಹಣ ಮಾಡುವ ಸ್ವಾರ್ಥಿ, ಹೀಗೆ ಬದುಕಿನ ವಿವಿಧ ಆಯಾಮಗಳ ರಹಸ್ಯವನ್ನು ತಿಳಿಸುವ ವಿಶ್ವವಿದ್ಯಾಲಯ ನಮ್ಮ ನಾವಿಗಲ್ಲಿ ಆಗಿತ್ತು.

ಒಳ್ಳೆಯವರೋ-ಕೆಟ್ಟವರೋ, ದೋಷಿಗಳೋ-ನಿರ್ದೋಷಿಗಳೋ, ಮೋಸಗಾರರೋ-ಪ್ರಾಮಾಣಿಕರೋ, ಶಿಷ್ಟರೋ-ದುಷ್ಟರೋ, ಮೂರ್ಖರೋ-ಬುದ್ಧಿವಂತರೋ, ಮುಗ್ಧರೋ-ಜಾಣರೋ, ನೀತಿವಂತರೋ-ನೀತಿರಹಿತರೋ ಎಲ್ಲರೂ ಜೀವನಾನುಭವಕ್ಕೆ ಸಹಾಯಕವಾದವರೇ ಆಗಿದ್ದಾರೆ. ಮನುಷ್ಯನ ವಿವಿಧ ರೂಪಗಳನ್ನು ಇಲ್ಲಿ ನೋಡಿದೆ ಮತ್ತು ಬದುಕಿನ ಬಹಳಷ್ಟು ರಹಸ್ಯಗಳನ್ನು ಅರಿತುಕೊಂಡೆ. ಮನುಷ್ಯನನ್ನು ಆತನ ಎಲ್ಲ ದೌರ್ಬಲ್ಯಗಳ ಮಧ್ಯೆಯೂ ಸಹಿಸಿಕೊಳ್ಳುತ್ತ ಅಂತಃಕರಣದ ಸೆಲೆಯನ್ನು ಬತ್ತದಂತೆ ನೋಡಿಕೊಳ್ಳುವ ಕಲೆಯನ್ನು ಕೂಡ ಇಲ್ಲೇ ಕಲಿತೆ. ವೈರುಧ್ಯಗಳಿಂದ ಕೂಡಿದ ಬದುಕಿನಲ್ಲಿ ಯಾರು ಏನೇ ಹೇಳಿದರೂ ತಲೆಯಲ್ಲಿ ಕಸ ಸೇರದಂತೆ ನೋಡಿಕೊಂಡೆ. ಜೀವಕಾರುಣ್ಯದ ನಿಜ ಸ್ವರೂಪವನ್ನು ಅರಿತೆ. ನನಗೆ ತೊಂದರೆಕೊಟ್ಟವರನ್ನು ಕ್ಷಮಿಸುತ್ತ, ಆಕಸ್ಮಿಕವಾಗಿ ಆದ ತಪ್ಪಿಗೆ ನಾಚಿಕೆಪಡುತ್ತ, ನನ್ನಿಂದ ತೊಂದರೆಯಾದವರ ಕ್ಷಮೆ ಕೇಳುತ್ತ ಬದುಕು ಸಾಗಿಸಿದೆ. ಹೀಗೆ ಎಲ್ಲ ಕಷ್ಟಕಾರ್ಪಣ್ಯಗಳ ಮಧ್ಯೆಯೂ ಬದುಕನ್ನು ಸಹನೀಯಗೊಳಿಸಿಕೊಂಡೆ. ಸತ್ಯವಂತರು, ತ್ಯಾಗಿಗಳು ಮತ್ತು ನತದೃಷ್ಟರಿಗಾಗಿ ಸಮರ್ಪಣಾ ಭಾವದಿಂದ ದುಡಿಯುವವರು ನನ್ನ ಬದುಕಿಗೆ ಬೆಳಕಾದರು. ಮುಗ್ಧತೆಯಿಂದ ಪ್ರಜ್ಞಾಪೂರ್ಣ ಮುಗ್ಧತೆಯೆ ಕಡೆಗೆ ಸಾಗಿದೆ.

ಈ ಜಗತ್ತು ಅಹಿಂಸೆಯಿಂದ ಹುಟ್ಟಿದೆ; ಆದರೆ ಹಿಂಸೆಯಿಂದ ಬದುಕಿದೆ. ಜೀವಜಾಲದಲ್ಲಿ ಜೀವಗಳು ಒಂದನ್ನೊಂದು ತಿಂದು ಬದುಕುತ್ತಿವೆ. ಆದರೆ ಪ್ರೀತಿ ಮತ್ತು ತ್ಯಾಗ ಭಾವಗಳ ಜೊತೆಗೆ ಸಂರಕ್ಷಣಾ ವಿಧಾನಗಳನ್ನು ಕೂಡ ಪ್ರಕೃತಿಯೇ ನೀಡಿದೆ. ಇಂಥವುಗಳಿಂದಾಗಿ ಹಿಂಸೆಯ ಮಧ್ಯೆ ಕೂಡ ಜೀವರಾಶಿ ಮುಂದೆ ಸಾಗುತ್ತಲೇ ಇರುತ್ತದೆ.

ಹುಲಿಗೆ ಆಕ್ರಮಣದ ನಖಗಳಿವೆ. ಆದರೆ ಹುಲ್ಲೆಗೆ ಸಂರಕ್ಷಣೆಯ ಕೊಂಬು ಮತ್ತು ವೇಗಶಕ್ತಿ ಇವೆ. ಇದೆಲ್ಲ ಇರುವಂಥದ್ದೆ. ಏಕೆಂದರೆ ಪ್ರಕೃತಿಯಲ್ಲಿನ ಹುಲಿ ಹುಲ್ಲೆಗಳು ಜೀವಜಾಲದಲ್ಲಿನ ಆಹಾರ ಸರಪಳಿಯ ನಿಯಮದಂತೆಯೆ ಬದುಕುತ್ತಿವೆ. ಆದರೆ ಆಂತರ್ಯದಲ್ಲಿ ಹುಲಿ, ಹುಲ್ಲೆಗಳಂತಿರುವ ಮಾನವರೂ ಇದ್ದಾರೆ. ಅವರಿಗೆ ಈ ಪ್ರಕೃತಿಯ ನಿಯಮ ಅನ್ವಯಿಸುವುದಿಲ್ಲ. ಆದ್ದರಿಂದ ಅವರು ಬದಲಾಗುಂಥ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಅದಕ್ಕಾಗಿ ಎಲ್ಲ ರೀತಿಯಿಂದಲೂ ತುಳಿತಕ್ಕೊಳಗಾದವರು ಮತ್ತು ಅಸಹಾಯಕರು ಕ್ರೌರ್ಯವನ್ನು ಸದೆಬಡಿಯುವ ಶಕ್ತಿಯನ್ನು ಹೊಂದಲೇಬೇಕು ಎಂಬ ಸಂಕಲ್ಪದೊಂದಿಗೆ ಕ್ರಿಯಾಶೀಲವಾಗಬೇಕಿದೆ, ಬರೆಯಬೇಕಿದೆ ಮತ್ತು ಬದುಕಬೇಕಿದೆ.

ಒಳ್ಳೆಯವರು ಇದ್ದಾರೆಂದರೆ ಕೆಟ್ಟವರೂ ಇದ್ದಾರೆ ಎಂದೇ ಅರ್ಥ. ಮಾನವನ ವಿವಿಧ ಅವತಾರಗಳ ಹಿಂದೆ ಆತನ ದೇಶ, ಭಾಷೆ, ಜಾತಿ, ಧರ್ಮ, ಅಂತಸ್ತು, ಬಡತನ, ಶ್ರೀಮಂತಿಕೆ, ಒಳ್ಳೆಯತನ ಮತ್ತು ಕೆಟ್ಟತನ ಹೀಗೆಲ್ಲ ಇರುತ್ತವೆ. ಇವೆಲ್ಲ ಅವತಾರಗಳನ್ನು ಕಳಚಿಕೊಂಡ ನಂತರ ಉಳಿಯುವ ಮನುಷ್ಯ ಸಹಜ ಮಾನವನಾಗಿರುತ್ತಾನೆ. ಅದಕ್ಕಾಗಿ ಎಲ್ಲ ಮಾನವರೊಳಗೆ ಇರುವ ಅಂಥ ಮನುಷ್ಯನ ಹುಡುಕಾಟ ಅವಶ್ಯವಾಗಿದೆ.

ದೈಹಿಕ, ಮಾನಸಿಕ ಹಿಂಸೆ ಮತ್ತು ಶೋಷಣೆಯಿಂದ ಮಾನವರು ಮುಕ್ತರಾಗಬೇಕಿದೆ. ನರರು ನರಭಕ್ಷಕರಾಗುವುದು ಅನೈಸರ್ಗಿಕವಾದದು. ಬಡವರಿರುವ ಸಮಾಜದಲ್ಲಿ ಬಹುಪಾಲು ಶ್ರೀಮಂತರು ‘ನರಭಕ್ಷಕರೇ’ ಆಗಿರುತ್ತಾರೆ. ಶ್ರೇಣೀಕೃತ ಸಮಾಜದಿಂದಾಗಿ ತುಳಿತಕ್ಕೊಳಗಾದ ಅನೇಕರು ಕೂಡ ಕ್ರೂರಿಗಳಾಗುತ್ತಾರೆ. ‘ನಾವು ಮಾನವರೊಳಗಿನ ಹುಲಿಗಳ ಪರವೋ ಹುಲ್ಲೆಗಳ ಪರವೋ’ ಎಂಬುದನ್ನು ನಿರ್ಧರಿಸಿ ಬದುಕಬೇಕಿದೆ. ಮಾನವೀಯತೆಯಿಂದ ಮಾತ್ರ ಹಿಂಸೆಯನ್ನು ಹತೋಟಿಯಲ್ಲಿಡಲು ಸಾಧ್ಯವಿದೆ. ಮರೆಯಾಗುತ್ತಿರುವ ಮಾನವೀಯತೆಯ ಪುನರುತ್ಥಾನವೇ ನಮ್ಮ ಜೀವನಾನುಭವದ ಉದ್ದೇಶವಾಗಬೇಕಿದೆ.

ನಾವಿಗಲ್ಲಿಯಲ್ಲಿನ ಮನೆಗೆ ನಾವು ಬಾಡಿಗೆಗೆ ಬಂದ ಸಂದರ್ಭದಲ್ಲಿ ನಮ್ಮ ಮನೆಯ ಎದುರುಗಡೆ ಸ್ವಲ್ಪ ದೂರದಲ್ಲಿ ವಾಸವಾಗಿದ್ದ ಪತ್ತಾರ ಸಮಾಜದ ತಾಯಿ ಮಗಳ ಕೊನೆಯ ದಿನಗಳು ನನ್ನ ಮನಸ್ಸನ್ನು ಘಾಸಿಗೊಳಿಸಿದವು. ಆ ಗಾಯ ಇಂದಿಗೂ ಮಾಯವಾಗಲಿಲ್ಲ. ಮನುಷ್ಯರ ಅಸಹಾಯಕತೆಯ ಅತ್ಯುನ್ನತ ಮಟ್ಟವನ್ನು ನಾನಲ್ಲಿ ಕಂಡೆ.

ಮದುವೆ ವಯಸ್ಸು ಮೀರುತ್ತಿದ್ದ ಮಗಳು ಮದುವೆಯಾಗಿ ತನ್ನ ರೋಗಗ್ರಸ್ತ ತಾಯಿಯನ್ನು ಬಿಟ್ಟು ಹೋಗುವ ಸಾಧ್ಯತೆ ಇರಲಿಲ್ಲ. ತಾಯಿ ಕ್ಷಯರೋಗದಿಂದ ಬಳಲುತ್ತಿದ್ದಳು. ಆರೈಕೆ ಮಾಡುತ್ತಿದ್ದ ಮಗಳಿಗೂ ಕ್ಷಯರೋಗ ತಗುಲಿತು. 60 ವರ್ಷಗಳಷ್ಟು ಹಿಂದೆ ಕ್ಷಯರೋಗ ನಿವಾರಣೆಗೆ ಈಗಿರುವಂಥ ಪರಿಣಾಮಕಾರಿ ಔಷಧಿ ಇರಲಿಲ್ಲ. ಒಂದಿಷ್ಟು ಇದ್ದರೂ ಬಡವರಿಗೆ ಮತ್ತು ನಿರಕ್ಷರಿಗಳಿಗೆ ತಲುಪುವಂಥ ವಾತಾವರಣ ಇರಲಿಲ್ಲ. ಆ ತಾಯಿ ಮಕ್ಕಳು ಇಬ್ಬರೇ ಇದ್ದರು. ಕ್ಷಯರೋಗದಿಂದಾಗಿ ಬಹಳ ಕೃಶರಾಗಿದ್ದರು. ನಾವು ನಾವಿಗಲ್ಲಿಗೆ ಬರುವ ಮೊದಲೇ ಅವರ ಮನೆಯವರೆಲ್ಲ ತೀರಿಕೊಂಡಿದ್ದರು.

ಮೂರಂಕಣದ ಎರಡು ಮನೆಗಳು, ಮುಂದೆ ಬೀದಿಯವರೆಗಿನ ಸ್ವಲ್ಪ ಉದ್ದನೆಯ ಅಂಗಳ. ಬೀದಿಗೆ ಹತ್ತಿಕೊಂಡಂತೆ ಒಂದು ಚಿಕ್ಕ ಕಿರಾಣಿ ಅಂಗಡಿ. ಅಂಗಡಿ ಮುಂದೆ ನಾಲ್ಕು ಜನ ಮಲಗುವಷ್ಟು ಮುಂಗಟ್ಟು. ಅದರ ಹಿಂದೆ ಒಂದಂಕಣದಷ್ಟು ಚಿಕ್ಕದಾದ ಕೋಣೆ. ಇಷ್ಟನ್ನು ಬಿಟ್ಟರೆ ಅವರಿಗೆ ಯಾವುದೇ ಆದಾಯದ ಮೂಲ ಇರಲಿಲ್ಲ. ಒಂದು ಮನೆಯಲ್ಲಿ ಅವರಿದ್ದರು. ಅವರು ಕ್ಷಯರೋಗಿಗಳಾಗಿದ್ದ ಕಾರಣ ಇನ್ನೊಂದು ಮನೆಗೆ ಜನ ಬಾಡಿಗೆಗೆ ಬರಲಿಲ್ಲ.

ಒಳ್ಳೆಯವರೋ-ಕೆಟ್ಟವರೋ, ದೋಷಿಗಳೋ-ನಿರ್ದೋಷಿಗಳೋ, ಮೋಸಗಾರರೋ-ಪ್ರಾಮಾಣಿಕರೋ, ಶಿಷ್ಟರೋ-ದುಷ್ಟರೋ, ಮೂರ್ಖರೋ-ಬುದ್ಧಿವಂತರೋ, ಮುಗ್ಧರೋ-ಜಾಣರೋ, ನೀತಿವಂತರೋ-ನೀತಿರಹಿತರೋ ಎಲ್ಲರೂ ಜೀವನಾನುಭವಕ್ಕೆ ಸಹಾಯಕವಾದವರೇ ಆಗಿದ್ದಾರೆ.

ಕಿರಾಣಿ ಅಂಗಡಿ ಮತ್ತು ಆ ಒಂದಂಕಣದ ಕೋಣೆಯನ್ನು ಬಾಡಿಗೆ ಕೊಟ್ಟಿದ್ದರು. ಎರಡೂ ಕೂಡಿ ಒಟ್ಟು ಬಾಡಿಗೆ ಬಹಳವೆಂದರೆ 10 ರೂಪಾಯಿ. ತಾಯಿ ಮಗಳು ಅಷ್ಟರಲ್ಲೇ ಬದುಕಬೇಕು ಮತ್ತು ಔಷಧಿಗೆ ಹಣ ಹೊಂದಿಸಿಕೊಳ್ಳಬೇಕು. ಅವರಿಬ್ಬರೂ ಕ್ಷಯರೋಗದಿಂದಾಗಿ ನರಪೇತಲರಾಗಿದ್ದರು. ಅವರು ಬೇರೆಯವರೊಂದಿಗೆ ಮಾತನಾಡುವುದನ್ನು ನಾನೆಂದೂ ನೋಡಲಿಲ್ಲ. ತಾವು ಕ್ಷಯರೋಗಿಗಳಾಗಿರುವುದರಿಂದ ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದಲೋ ಅಥವಾ ಬೇರೆಯವರು ಮುಖ ತಿರುಗಿಸಿಕೊಂಡು ಹೋಗಬಹುದು ಎಂಬ ಅಳುಕಿನಿಂದಲೋ ಅವರು ಹಾಗೆ ಬದುಕುತ್ತಿದ್ದರೆಂದು ತೋರುತ್ತದೆ.

ಮಧ್ಯ ವಯಸ್ಸಿನ ಕಿರಾಣಿ ಅಂಗಡಿ ಮಾಲಿಕ ನಿಷ್ಕರುಣಿಯಾಗಿದ್ದು ಸಿಡುಕು ಸ್ವಭಾವದವನಾಗಿದ್ದ. ಅವರಿಗೆ ಸಕ್ಕರೆ ಚಹಾಪುಡಿ ಸ್ವಲ್ಪ ಅಕ್ಕಿ ಮುಂತಾದವುಗಳನ್ನು ಉದ್ರಿ ಕೊಡುತ್ತಿದ್ದ. ಹೀಗೆ ಆತ ಎಷ್ಟು ಲೆಕ್ಕ ಹಚ್ಚಿದನೆಂದರೆ ಮುಂದೊಂದು ದಿನ ಅವರ ಇಡೀ ಆಸ್ತಿಯನ್ನು ಬರೆದುಕೊಂಡ. ತಾಯಿ ಮಗಳು ನರಳಿ ನರಳಿ ಸತ್ತುಹೋದರು.

ಆತನೂ ಒಬ್ಬ ದೇಶಭಕ್ತನಾಗಿದ್ದ. ನಮ್ಮ ಮನೆ ಸಮೀಪದ ಧ್ವಜಸ್ತಂಭದ ಧ್ವಜ ಅವನ ಬಳಿಯೆ ಇರುತ್ತಿತ್ತು. ಅವನ ದೈನಂದಿನ ಡ್ರೆಸ್ ಅಂಗಿ ಧೋತರ. ಆದರೆ ಧ್ವಜಾರೋಹಣದ ದಿನಗಳಂದು ಡ್ರೆಸ್ ಜೊತೆ ಜಾಕೆಟ್ ಮತ್ತು ಗಾಂಧಿಟೋಪಿ ಸೇರುತ್ತಿದ್ದವು. ಪತ್ತಾರ ತಾಯಿ ಮಗಳು ಇರುತ್ತಿದ್ದ ಮನೆಯನ್ನು ಒಬ್ಬ ಹಮಾಲಿ ಮಾಡುವ ವ್ಯಕ್ತಿಗೆ ಆತ ಬಾಡಿಗೆಗೆ ಕೊಟ್ಟಿದ್ದ. ಇನ್ನೊಂದು ಮನೆಯಲ್ಲಿ ಒಬ್ಬ ದೇವರು ಹೇಳುವ ಮುಸ್ಲಿಮನಿದ್ದ. ಕಿರಾಣಿ ಅಂಗಡಿಯ ಹಿಂದಿನ ಒಂದಂಕಣದ ಕೋಣೆಯನ್ನು ಮದ್ರಾಸಿಯೊಬ್ಬನಿಗೆ ಬಾಡಿಗೆಗೆ ಕೊಟ್ಟಿದ್ದ. ಆತ ಒಂದು ಚಿಕ್ಕ ಟೇಬಲ್ ಮತ್ತು ಕುರ್ಚಿ ಇಟ್ಟುಕೊಂಡು ಬಡ್ಡಿ ವ್ಯವಹಾರ ಮಾಡುತ್ತಿದ್ದ.

ಅದೊಂದು ವಿಚಿತ್ರ ಬಡ್ಡಿ ವ್ಯವಹಾರವಾಗಿತ್ತು. ಬೆಳಿಗ್ಗೆ 10 ರೂಪಾಯಿಗೆ ಸಹಿ ಮಾಡಿ 9 ರೂಪಾಯಿ ಒಯ್ದವರು ಮರುದಿನ ಬೆಳಿಗ್ಗೆ 10 ರೂಪಾಯಿ ತಂದು ಕೊಡಬೇಕಾಗಿತ್ತು. ರಸ್ತೆ ಬದಿ ಹಣ್ಣು ಹಂಪಲ ತರಕಾರಿ ಮುಂತಾದವುಗಳನ್ನು ಮಾರುವವರು. ತಮ್ಮಲ್ಲಿರುವ ಒಂದಿಷ್ಟು ಹಣದಲ್ಲಿ ಈ 9 ರೂಪಾಯಿ ಸೇರಿಸಿ ಹೋಲ್‌ಸೇಲ್‌ನಲಿ ಕಡಿಮೆ ದರದ ಹಣ್ಣು ತರಕಾರಿ ತಂದು ಮಾರಿ ಮರುದಿನ ಬೆಳಿಗ್ಗೆಯೆ ಬಂದು 9 ರೂಪಾಯಿ ಜೊತೆ ಒಂದು ರೂಪಾಯಿ ಬಡ್ಡಿಯನ್ನೂ ಕೂಡಿಸಿ 10 ರೂಪಾಯಿ ಕೊಡುತ್ತಿದ್ದರು. ಅತೀ ಅವಶ್ಯಕತೆ ಇದ್ದಾಗ ಮಾತ್ರ ಜನ ಈ ರೀತಿಯ ಬಡ್ಡಿಯ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ ಅತೀ ಅವಶ್ಯಕತೆ ಇರುವ ಬಡವರೇ ಬಹಳ ಜನ ಇದ್ದರು. ಹೀಗೆ ಹತ್ತು ರೂಪಾಯಿ ಸಾಲ ಪಡೆಯಲು ವಶೀಲಿ ಬೇರೆ ಬೇಕಾಗಿತ್ತು!

ಹಣ್ಣು ತರಕಾರಿ ಮಾರುವ ಬಡ ಬಾಗವಾನ ಹೆಣ್ಣು ಮಕ್ಕಳೇ ಹೆಚ್ಚಾಗಿ ಇಂಥ ಶೋಷಣೆಗೆ ಒಳಗಾಗುತ್ತಿದ್ದರು. ಹೀಗೆ ಬಡ್ಡಿ ಪಡೆಯುವವರಿಗೆ ಅದು ಹೇಗೆ ಲಾಭವಾಗುತ್ತದೆ ಮತ್ತು ಹೇಗೆ ಶೋಷಣೆಯಾಗುತ್ತದೆ ಎಂಬುದಕ್ಕೆ ಒಂದು ನೈಜ ಉದಾಹರಣೆ ಕೊಡಬೇಕೆನಿಸುತ್ತದೆ. ಆ ಕಾಲದಲ್ಲಿ ಸಕ್ರಿಗುಟ್ಲಿಯಂಥ ಮಾವಿನ ಕಾಯಿಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಅವು ರುಚಿಯಾಗಿದ್ದರೂ ಬಹಳ ಚಿಕ್ಕ ಹಣ್ಣುಗಳಿರುವುದರಿಂದ ಎಷ್ಟು ತಿಂದರೂ ತೃಪ್ತಿಯಾಗುತ್ತಿರಲಿಲ್ಲ. ಕಡಿಮೆ ಬೆಲೆಗೆ ಸಿಗುವುದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಬಡವರು ಇದಕ್ಕೆ ಹೆಚ್ಚಿನ ಗಿರಾಕಿಗಳಿದ್ದರು. ಮಾವಿನ ಅಡಿಗಳಲ್ಲಿ ಹೋಗಿ ಹೋಲ್‌ಸೇಲ್‌ ರೇಟಲ್ಲಿ ತೆಗೆದುಕೊಂಡರೆ. ಆ ಕಾಲದಲ್ಲಿ ರೂಪಾಯಿಗೆ ನೂರು ಹಣ್ಣುಗಳು ಸಿಗುತ್ತಿದ್ದವು! ಹತ್ತು ರೂಪಾಯಿಗೆ ಹೆಬ್ಬೆಟ್ಟು ಒತ್ತಿ ಒಂಬತ್ತು ರೂಪಾಯಿ ತೆಗೆದುಕೊಂಡು ಹೋಗುವ ಈ ಬಾಗವಾನ ಹೆಣ್ಣುಮಕ್ಕಳು ಒಂಬತ್ತು ರೂಪಾಯಿ ಕೊಟ್ಟು ಹೋಲ್‌ಸೇಲ್‌ನಲ್ಲಿ 900 ಸಕ್ರಿಗುಟ್ಲಿ ಪಡೆಯುತ್ತಿದ್ದರು. ಅವುಗಳನ್ನು ದುಡ್ಡಿಗೆ ಒಂದರಂತೆ ಮಾರುತ್ತಿದ್ದರು. 64 ದುಡ್ಡಿಗೆ ಒಂದು ರೂಪಾಯಿ. 640 ದುಡ್ಡಿಗೆ ಹತ್ತು ರೂಪಾಯಿ. 640 ಹಣ್ಣುಗಳನ್ನು ಮಾರಿದರೆ ಬಡ್ಡಿ ಸಮೇತ ಸಾಲ ಕೊಟ್ಟವನ ಹಣ ಮುಟ್ಟಿದಂತಾಯಿತು. ಮುಂದೆ ಉಳಿಯುವ 360 ಹಣ್ಣುಗಳನ್ನು ಮಾರಿದರೆ 360 ದುಡ್ಡು ಸಿಗುತ್ತಿದ್ದವು. ಅಂದರೆ ಸುಮಾರು ಐದೂವರೆ ರೂಪಾಯಿಗಳಷ್ಟು ಲಾಭವಾಗುತ್ತಿತ್ತು. ಇಷ್ಟೆಲ್ಲ ಮಾವಿನಕಾಯಿಗಳು ಒಂದೇ ದಿನಕ್ಕೆ ಮಾರಾಟವಾಗುತ್ತಿದ್ದಿಲ್ಲ. ಮರುದಿನ ಹಾಗೂ ಹೀಗೂ ಹತ್ತು ರೂಪಾಯಿ ಕೂಡಿಸಿ ಕೊಟ್ಟಮೇಲೆ ಉಳಿದ ಮಾವಿನ ಕಾಯಿಗಳನ್ನು ಮಾರಲು ಒಂದೆರಡು ದಿನ ಬೇಕಾಗುತ್ತಿತ್ತು. ಹೀಗಾಗಿ ದಿನವಿಡೀ ರಸ್ತೆ ಬದಿ ವಿಜಾಪುರದ ಸುಡು ಬಿಸಿಲಲ್ಲಿ ಕುಳಿತು ಮಾರುವವಳ ಕೂಲಿ ದಿನಕ್ಕೆ ಎರಡು ರೂಪಾಯಿಗಿಂತ ಕಡಿಮೆ ಆಗುತ್ತಿತ್ತು. ಸಾಲ ಕೊಡುವಾತನ 9 ರೂಪಾಯಿ ಒಂದೇ ದಿನದಲ್ಲಿ ಒಂದು ರೂಪಾಯಿ ಗಳಿಸಿ ಕೊಡುತ್ತಿತ್ತು! (ಅಂದಿನ ಕಾಲದಲ್ಲಿ ಒಂದು ರೂಪಾಯಿಗೆ ಎರಡು ಕಿಲೋಗಳಷ್ಟು ಜೋಳ ಸಿಗುತ್ತಿತ್ತು.) ಇದೊಂದು ವಿಚಿತ್ರ ಬಡ್ಡಿ ವ್ಯವಹಾರವಾಗಿತ್ತು. ಈ ಕ್ರಮದಲ್ಲಿ ಆತನ ಹಣ ಪ್ರತಿ ಹತ್ತು ದಿನಕ್ಕೆ ಡಬಲ್ ಆಗುತ್ತಿತ್ತು!

ಇದನ್ನು ಗಮನಿಸಿದ ಕಿರಾಣಿ ಅಂಗಡಿ ಮಾಲೀಕ, ಬಾಡಿಗೆಗೆ ಇದ್ದ ಆ ಹಮಾಲನಿಗೆ ಒಂದು ದಿನ ಕುಡಿಸಿ, ಈ ಮದ್ರಾಸಿಗೆ ಹೊಡಿಸಿ ಓಡಿಸಿದ. ಆತ ಗಾಬರಿಯಿಂದ ಲುಂಗಿ ಹಿಡಿದುಕೊಂಡು ಓಡಿ ಹೋದದ್ದು ಇನ್ನೂ ನೆನಪಿದೆ. ಆ ಮದ್ರಾಸಿಗೆ ಸ್ಥಳೀಯರಾರೂ ಪರಿಚಿತರಾಗಿರಲಿಲ್ಲ. ಅಲ್ಲದೆ ಆ ಕಿರಾಣಿವಾಲಾನನ್ನು ಎದುರು ಹಾಕಿಕೊಳ್ಳುವ ಶಕ್ತಿ ಕೂಡ ಯಾರಿಗೂ ಇರಲಿಲ್ಲ. ಆ ಮದ್ರಾಸಿ ಓಡಿಹೋದಮೇಲೆ ಈ ಕಿರಾಣಿವಾಲಾನೇ ಬಡ್ಡಿ ದಂಧೆ ಶುರು ಮಾಡಿದ.

ಆತ ನಮ್ಮ ಜೊತೆ ಮಾತ್ರ ಚೆನ್ನಾಗಿದ್ದ. ಏಕೆಂದರೆ ನಾವು ರಾತ್ರಿ ಆತನ ಕಿರಾಣಿ ಅಂಗಡಿ ಕಾಯುವ ವಾಚಮನ್ ಹಾಗೆ ಇದ್ದೆವು. ನಮಗೂ ಅದು ಅನಿವಾರ್ಯವಾಗಿತ್ತು. ಆತನಿಗೋ ಬಿಟ್ಟೀ ವಾಚಮನ್‌ಗಳು ಸಿಕ್ಕಂತಾಗಿತ್ತು. ನನ್ನ ಅಜ್ಜಿಯಂತೂ ಮುಂಗಟ್ಟಿನಲ್ಲೇ ಮಲಗುತ್ತಿದ್ದಳು. ನನ್ನ ತಮ್ಮಂದಿರಲ್ಲಿ ಕೆಲವರು ಆಕೆಯ ಬಳಿ ಮಲಗುತ್ತಿದ್ದರು. ಬೆಳಿಗ್ಗೆ ಅಂಗಡಿ ಮಾಲೀಕ ಬರುವುದರೊಳಗಾಗಿ ಎಲ್ಲ ಹಾಸಿಗೆ ಸುತ್ತಿಕೊಂಡು ಬಹಳ ಸಮೀಪದಲ್ಲೇ ಇರುವ ನಮ್ಮ ಮನೆಗೆ ಬರಬೇಕಾಗಿತ್ತು. ನಾನು ಮತ್ತು ಕೆಲ ತಮ್ಮಂದಿರು ಅಂಗಳದಲ್ಲಿ ಮಲಗುತ್ತಿದ್ದೆವು. ಮಳೆ ಬಂದಾಗ ಇಲ್ಲವೇ ಬಹಳೇ ಚಳಿ ಇದ್ದಾಗ ನಾನು ಕೂಡ ಅದೇ ಮುಂಗಟ್ಟಿನಲ್ಲಿ ಮಲಗುತ್ತಿದ್ದೆ.

ಹೀಗೇ ಒಂದೆರಡು ವರ್ಷಗಳು ಕಳೆದವು. ಒಂದು ದಿನ ಮಧ್ಯಾಹ್ನದ ಊಟಕ್ಕಾಗಿ ಶಾಲೆಯಿಂದ ಮನೆಗೆ ಬಂದೆ. ಕಿರಾಣಿ ಅಂಗಡಿ ಮುಂದೆ ಜನ ಸೇರಿದ್ದರು. ಸಿಂಗಾರಗೊಂಡ ಸಿದ್ಧೇಶ್ವರ ವಿಮಾನದಲ್ಲಿ ಆ ಕಿರಾಣಿ ಅಂಗಡಿ ಮಾಲೀಕನ ಹೆಣ ಕೂಡಿಸಿದ್ದರು. (ಗರ್ಭಗುಡಿಯ ಹಾಗೆ ಇರುವ ಅದು ಹೆಣ ಹೊರುವ ಸಾಧನ. ಅದಕ್ಕೆ ವಿಜಾಪುರದಲಿ ‘ಸಿದ್ಧೇಶ್ವರ ವಿಮಾನ’ ಎಂದು ಕರೆಯುತ್ತಾರೆ. ಈ ವಿಮಾನಗಳನ್ನು ಸಿದ್ಧೇಶ್ವರ ಗುಡಿಯ ಹಿಂಭಾಗದಲ್ಲಿ ಇಟ್ಟಿರುತ್ತಿದ್ದರು.) ಬೇರೆ ಸ್ವಲ್ಪ ದೂರದ ಚಂದಾಬಾವಡಿ ಓಣಿಯಲ್ಲಿನ ಮನೆಯಲ್ಲೇ ಆತ ಕೊನೆ ಉಸಿರು ಎಳೆದಿದ್ದ. ಬಹಳ ದಿನಗಳಿಂದ ಆತ ಬೇನೆ ಬಿದ್ದಿದ್ದರಿಂದ ಅಂಗಡಿ ಬಂದೇ ಇತ್ತು. ಆತ ಬೇನೆ ಬಿದ್ದದ್ದು ಗೊತ್ತಿತ್ತು. ಆದರೆ ಸತ್ತದ್ದು ಹೆಣ ನೋಡಿದ ಮೇಲೆಯೆ ಗೊತ್ತಾಯಿತು. ಅಸಹಾಯಕರಾಗಿ ಸತ್ತುಹೋದ ಆ ಮುಗ್ಧ ಪತ್ತಾರ ತಾಯಿ ಮಗಳು ಆ ಕ್ಷಣದಲ್ಲಿ ನೆನಪಾದರು. ಇಂದು ಈತನಿಗೂ ಅದೇ ಗತಿ ಬಂದಿತು. ಆ ದಪ್ಪ ಮನುಷ್ಯನ ಕೃಶ ಪಾರ್ಥಿವ ಶರೀರ ನೋಡಿ ಮನಸ್ಸು ಮುದುಡಿತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)