ನಾಗಾಲ್ಯಾಂಡ್ ಚಿಕ್ಕ ರಾಜ್ಯವಾದರೂ ಬಹು ವೈವಿಧ್ಯಮಯ ನಾಡು. ಸುಮಾರು ೧೬ ವಿವಿಧ ಜನಾಂಗಗಳಿರುವ ಈ ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಾರೆ. ನಾಗಾ ಜನಾಂಗಗಳ ಜೀವನ-ಸಂಸ್ಕೃತಿ ವರ್ಣ ರಂಜಿತ. ಅವರ ಉಡುಗೆ ತೊಡುಗೆಯಿಂದ ಹಿಡಿದು ಊಟದವರೆಗೂ ವಿಶಿಷ್ಟತೆ ಎದ್ದು ಕಾಣುತ್ತದೆ. ಬಹಳ ಜನ, ‘ ನಾಗಾಗಳು ನಾಯಿ ತಿನ್ನುತ್ತಾರೆ. ಅರುಣಾಚಲದಲ್ಲಿ ಇಲಿ ತಿನ್ನುತ್ತಾರೆ’ ಎಂದು ಈಶಾನ್ಯ ರಾಜ್ಯದ ಜನರನ್ನು ಅಣಕಿಸುತ್ತಾರೆ. ಅದು ಶತಮಾನಗಳಿಂದ ಬೆಳೆದು ಬಂದ ಆಹಾರ ಪದ್ಧತಿ.
ಈಶಾನ್ಯ ಭಾರತದ ಕೊಹಿಮಾ ಪ್ರವಾಸ ಕುರಿತು ಬರೆದಿದ್ದಾರೆ ದೇವೇಂದ್ರ ಅಬ್ಬಿಗೇರಿ
ಯಾರಾದರೂ ಈಶಾನ್ಯ ಭಾರತದ ಬಗ್ಗೆ ಮಾತನಾಡಿದರೆ ಅದರಲ್ಲಿ ಹಾರ್ನ್ ಬಿಲ್ ಉತ್ಸವದ ಪ್ರಸ್ತಾಪ ಬಂದೇ ಬರುತ್ತದೆ. ಇದು ನಾಗಾಲ್ಯಾಂಡ್ ರಾಜ್ಯದ ನಾಡ ಉತ್ಸವ ಎನ್ನಬಹುದು. ನಾಗಾಲ್ಯಾಂಡ್ ರಾಜ್ಯ ಸರಕಾರ ಪ್ರವಾಸೋದ್ಯಮ ಬೆಳೆಸುವ ಸಲುವಾಗಿ ಈ ಹಬ್ಬವನ್ನು ೨೦೦೦ ದಿಂದ ಆಚರಿಸುತ್ತಿದೆ. ಹಾರ್ನ್ ಬಿಲ್ (ಮಂಗಟ್ಟೆ) ಪಕ್ಷಿ ನಾಗಾಲ್ಯಾಂಡ್ ನ ಎಲ್ಲ ಜನಾಂಗಗಳ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಪ್ರತಿ ವರುಷ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಹಬ್ಬವನ್ನ ಹಮ್ಮಿಕೊಳ್ಳಲಾಗುತ್ತದೆ. ನಾಗ ಸಂಸ್ಕೃತಿಯ ವಿವಿಧ ಮುಖಗಳಾದ ಅಡುಗೆ, ತೊಡುಗೆ, ಸಂಗೀತ ಎಲ್ಲವೂ ಪ್ರದರ್ಶಿಸಲ್ಪಡುತ್ತದೆ. ಸಾಮಾನ್ಯ ದಿನಗಳಲ್ಲಿ ಸಾಮಾನ್ಯನಾಗಿ ಹೋಗಿ ಜನರ ನಿತ್ಯದ ಜೀವನವನ್ನು ನೋಡುವುದರಲ್ಲಿ ಸುಖ ಹಾಗು ಅನುಭವ, ಈ ತರಹದ ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಸಿಗುವುದಿಲ್ಲ. ಸಮಯ ಕಡಿಮೆ ಇದ್ದಾಗ ಇಂತಹ ಕಾರ್ಯಕ್ರಮಗಳು ಒಳ್ಳೆಯ ಅನುಭವ ಕೊಡಬಹುದು ಎಂಬುದು ನನ್ನ ಅನಿಸಿಕೆ. ಸಂಸ್ಕೃತಿ ಪ್ರವಾಸದ ಮುಖವಾಡ ತೊಟ್ಟಾಗ ಅಲ್ಲಿ ಲಾಭ ಇಣುಕುತ್ತದೆ, ರೊಕ್ಕದ ಲೆಕ್ಕಾಚಾರವಾಗುತ್ತದೆ. ಅಜ್ಞಾತ ನಾಡಿನಲ್ಲಿ, ಅಜ್ಞಾತನಾಗಿ ಹೋಗಿ, ನನ್ನ ಭಾಷೆಯನ್ನು ಆಡದ ಜನರ ನಡುವೆ ಅವರು ತಮ್ಮ ದಿನ ನಿತ್ಯದ ಊಟಕ್ಕಾಗಿ ಮಾಡಿದ ಅಡುಗೆಯ ಪಾಲಿನಲ್ಲಿ ನಮಗೂ ನೀಡಿದಾಗ ಸಿಗುವ ಸುಖ ಸೊ ಕಾಲ್ಡ್ ಪ್ರತಿಷ್ಟಿತ ಹೋಟೆಲ್ ಆ ರಾಜ್ಯದ ಊಟ ಎಂದು ಬಡಿಸಿದಾಗಲೂ ಸಿಗುವುದಿಲ್ಲ.
ನಾನು ಕೆಲಸ ಮಾಡುತ್ತಿದ್ದ ಶಿಲೊಂಗ್ ನಿಂದ ನಾಗಾಲ್ಯಾಂಡ್ ರಾಜಧಾನಿ ಕೊಹಿಮಾಗೆ ನಾಗ ಜನರ ಸಂಸ್ಕೃತಿಯನ್ನು ಇಣುಕಿ ನೋಡಲು ಎರಡು ದಿನ ಹೋಗಿದ್ದೆ. ಸಮಯ ಕಡಿಮೆ ಇದ್ದುದರಿಂದ ಕೊಹಿಮಾ ಬಿಟ್ಟು ನಾಗಾಲ್ಯಾಂಡ್ ನ ಬೇರೆ ಕಡೆ ಹೋಗಲು ಸಾಧ್ಯವಾಗಲಿಲ್ಲ. ನಾನು ಶಿಲೊಂಗ್ ನಿಂದ ಗುವಾಹಟಿ ಗೆ ಟ್ಯಾಕ್ಸಿಯಲ್ಲಿ ಹೋಗಿ, ಗುವಾಹಟಿಯಿಂದ ದಿಮಾಪುರವರೆಗೆ ರೈಲಿನಲ್ಲಿ ಹೋಗಿ ಅಲ್ಲಿಂದ ರಸ್ತೆ ಮೂಲಕ ಕೊಹಿಮಾ ತಲುಪಿದೆ. ಗುವಾಹಟಿ ಮೂಲಕ ನಾಗಾಲ್ಯಾಂಡ್ ಹಾಗು ಮಣಿಪುರಕ್ಕೆ ರೈಲು ಮುಖಾಂತರ ಹೋಗಲು ದಿಮಾಪುರ ಕೊನೆಯ ಸ್ಟೇಷನ್ ಎನ್ನಬಹುದು. ದಿಮಾಪುರ ನಾಗಾಲ್ಯಾಂಡ್ ನ ಗಡಿ ಪಟ್ಟಣ. ಈ ಪಟ್ಟಣದ ಮೂಲಕವೇ ನಾಗಾಲ್ಯಾಂಡ್ ಗೆ ಪ್ರವೇಶ. ದಿಮಾಪುರಕ್ಕೆ ರೈಲು ಹಾಗು ವಿಮಾನದ ಸಂಪರ್ಕ ಎರಡೂ ಇವೆ.
ದಿಮಾಪುರ ಬಯಲು ಸೀಮೆಯಲ್ಲಿ ಇರುವುದರಿಂದ ಹಾಗು ಸಂಪರ್ಕ ಸಮರ್ಪಕವಾಗಿರುವುದರಿಂದ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಕೊಹಿಮಾದಲ್ಲಿ ಸರಕಾರದ ಎಲ್ಲ ಕಚೇರಿಗಳು ಇವೆ. ಕೊಹಿಮಾ ನಾಗಾಲ್ಯಾಂಡ್ ನ ರಾಜಕೀಯ ಹಾಗು ಸಾಂಸ್ಕೃತಿಕ ರಾಜಧಾನಿಯಾದರೂ ಆರ್ಥಿಕ ರಾಜಧಾನಿ ದಿಮಾಪುರ ಎಂದೇ ಹೇಳಬಹುದು.
ದಿಮಾಪುರದಿಂದ ಕೊಹಿಮಾವರೆಗಿನ ರಸ್ತೆ ಸ್ವಲ್ಪ ದುರ್ಗಮವಾಗಿದೆ. ಬಹುತೇಕ ಕಡೆ ಧೂಳಿನಿಂದ ಕೂಡಿದೆ. ಅದರಲ್ಲೂ ಮಳೆಗಾಲದಲ್ಲಿ, ಭೂ ಕುಸಿತದಿಂದಾಗಿ ಪ್ರಯಾಣ ದುಸ್ತರವಾಗುತ್ತದೆ. ದಿಮಾಪುರದಿಂದ ಕೊಹಿಮಾ ಹೋಗುವಾಗ ದೊಡ್ಡ ಹೆಬ್ಬಾಗಿಲಿನಂತಹ ಕಮಾನುಗಳು ಕಾಣುತ್ತವೆ. ನಮ್ಮ ಕಡೆ ಊರಿಗೆ ಪ್ರವೇಶಕ್ಕೆ ಕಟ್ಟುವ ಹೆಬ್ಬಾಗಿಲುಗಳಂತೆ. ನಾಗಾ ಜನಾಂಗಗಳಲ್ಲಿಯೂ ಕೂಡ ಊರಿಗೆ ಮೊದಲು ಕಮಾನು ಕಟ್ಟುವ ರೂಢಿಯಿದೆ. ದಿಮಾಪುರ – ಕೊಹಿಮಾ ಹೆದ್ದಾರಿ ಬ್ರಿಟಿಷರು ನಿರ್ಮಿಸಿದ್ದು. ಇದೆ ಹೆದ್ದಾರಿ ಮುಂದೆ ಕೊಹಿಮಾದಿಂದ ಮಣಿಪುರದ ರಾಜಧಾನಿ ಇಂಫಾಲ್ ದವರೆಗೂ ಸಾಗುತ್ತದೆ. ದಾರಿಯುದ್ದಕ್ಕೂ ಸುಂದರ ಹಸಿರು ನಾಗ ಬೆಟ್ಟಗಳು ಕಾಣಸಿಗುತ್ತವೆ.
ನನ್ನ ಸಹೋದ್ಯೋಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಹಾಗು ತಿರುಗಾಟಕ್ಕೆ ಸಾತ್ ಕೊಟ್ಟು ನಾಗಾಲ್ಯಾಂಡ್ ಅರಿಯಲು ಸಹಾಯ ಮಾಡಿದ. ಕೊಹಿಮಾದಲ್ಲಿ ನಾನು ಉಳಿದುಕೊಂಡಿದ್ದು ಬ್ರಿಟಿಷ್ ಕಾಲದ ನಮ್ಮದೇ ಡಿಪಾರ್ಟ್ಮೆಂಟ್ ನ ಅತಿಥಿ ಗೃಹದಲ್ಲಿ. ಬ್ರಿಟಿಷರು ೧೮೭೮ರಲ್ಲಿ ನಾಗಾ ಬೆಟ್ಟದ ರಾಜಧಾನಿಯಾಗಿ ಕೊಹಿಮಾವನ್ನು ಸ್ಥಾಪಿಸಿದರು. ಅಂಗಾಮಿ ನಾಗಾ ಜನಾಂಗದವರೇ ಹೆಚ್ಚು ಇರುವ ಈ ನಗರ ಕಿವಹಿರಾ ಎಂದು ಕರೆಯಲ್ಪಡುತ್ತಿತ್ತು. ಅದನ್ನು ಉಚ್ಚಾರಣೆ ಮಾಡಲಾಗದೆ ಬ್ರಿಟಿಷರು ಅದನ್ನು ಕೋಹಿಮಾ ಎಂದು ಕರೆಯತೊಡಗಿದರು. ಕಿವಹಿರಾ ಅಂದರೆ ಕೆವಹಿ ಹೂವು ಅರಳುವ ಭೂಮಿ ಎಂದು ಅರ್ಥವಂತೆ.
ನಾಗಾಲ್ಯಾಂಡ್ನ ಒಟ್ಟು ವಿಸ್ತೀರ್ಣ ಸುಮಾರು ೧೬೦೦೦ ಚದರ ಕಿಲೋಮೀಟರು. ಉದಾಹರಣೆಗೆ ನಮ್ಮ ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ ಒಟ್ಟು ವಿಸ್ತೀರ್ಣ ಸೇರಿಸಿದರೆ ನಾಗಾಲ್ಯಾಂಡ್ ರಾಜ್ಯದ ವಿಸ್ತೀರ್ಣಕ್ಕೆ ಸಮನಾಗಬಹುದು. ನಾಗಾಲ್ಯಾಂಡ್ ಚಿಕ್ಕ ರಾಜ್ಯವದರೂ ಬಹು ವೈವಿದ್ಯಮಯ ನಾಡು. ಸುಮಾರು ೧೬ ವಿವಿಧ ಜನಾಂಗಗಳಿರುವ ಈ ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಾರೆ. ನಾಗಾ ಜನಾಂಗಗಳ ಜೀವನ-ಸಂಸ್ಕೃತಿ ವರ್ಣ ರಂಜಿತ. ಅವರ ಉಡುಗೆ ತೊಡುಗೆಯಿಂದ ಹಿಡಿದು ಊಟದವರೆಗೂ ವಿಶಿಷ್ಟತೆ ಎದ್ದು ಕಾಣುತ್ತದೆ. ಬಹಳ ಜನ ನಾಗಾ ಗಳು ನಾಯಿ ತಿನ್ನುತ್ತಾರೆ. ಅರುಣಾಚಲದಲ್ಲಿ ಇಲಿ ತಿನ್ನುತ್ತಾರೆ ಎಂದು ಈಶಾನ್ಯ ರಾಜ್ಯದ ಜನರನ್ನು ಅಣಕಿಸುತ್ತಾರೆ. ಅದು ಶತಮಾನಗಳಿಂದ ಬೆಳೆದು ಬಂದ ಆಹಾರ ಪದ್ಧತಿ. ದುರ್ಗಮ ನೆಲದಲ್ಲಿ ವ್ಯವಸಾಯ ಮಾಡುವುದು ಬಲು ಕಷ್ಟ ಹಾಗು ಕಾಡು ಪ್ರಾಣಿಗಳು ಕಡಿಮೆ. ಹಾಗಾಗಿ ಮೊದಲಿನಿಂದ ಅವರು ನಾಯಿಯನ್ನು ತಿನ್ನುತ್ತಿರಬೇಕು. ಆಹಾರ ಪದ್ಧತಿ ಒಂದು ಭೌಗೋಳಿಕ ಪ್ರದೇಶ ನಿರ್ಧರಿಸುವ ಸಸ್ಯ ಹಾಗು ಪ್ರಾಣಿ ಸಂಕುಲದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ಶತಮಾನಗಳಿಂದ ರೂಪುಗೊಂಡಿರುವ ಒಂದು ಪ್ರದೇಶಕ್ಕೆ ಸೀಮಿತವಾಗಿರುವ ವಿಶಿಸ್ಟ ಆಹಾರ ಪದ್ಧತಿಯನ್ನು ತುಚ್ಚವಾಗಿ ಕಾಣುವುದು ಆ ಪ್ರದೇಶದ ಜನರಿಗೆ ಮಾಡುವ ಅವಮಾನವೇ ಸರಿ.
ಈಶಾನ್ಯ ಭಾರತವನ್ನು ನಾವು ಕೇವಲ ರಾಜಕೀಯವಾಗಿ ಅಪ್ಪಿಕೊಳ್ಳುವುದಲ್ಲ, ಸಾಂಸ್ಕೃತಿಕವಾಗಿಯೂ ಅದನ್ನು ಒಪ್ಪಿಕೊಳ್ಳಬೇಕು. ಬಹು ವೈವಿಧ್ಯಮಯ ನಮ್ಮ ದೇಶದಲ್ಲಿ ಎಲ್ಲ ಸಂಸ್ಕೃತಿಗಳನ್ನು ಒಪ್ಪಿಕೊಂಡಾಗ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ. ಇಲ್ಲದಿದ್ದರೆ ರಾಜಕೀಯ ಕಾರಣಕ್ಕಾಗಿ ಸಾಮಾನ್ಯ ಜನರ ರಕ್ತ ಚೆಲ್ಲುತ್ತಲೇ ಇರುತ್ತದೆ. ಆಹಾರದ ಮಾತು ಹೇಳುತ್ತಿರಬೇಕಾದರೆ ಇನ್ನೊಂದು ಮಾತು ಹೇಳಲೇಬೇಕು. ನಾಗಾಲ್ಯಾಂಡ್ ಪ್ರಪಂಚದ ಅತಿ ಹೆಚ್ಚು ಖಾರವಿರುವ ಮೆಣಸಿಗೆ ಪ್ರಸಿದ್ಧ. ಅದನ್ನು ರಾಜಾ ಮಿರ್ಚಿ ಎಂದು ಕರೆಯುತ್ತಾರೆ. ತುಂಬಾ ಚಿಕ್ಕವಿರುವ ಅದನ್ನು ರುಚಿ ನೋಡೋಣವೆಂದು ನಾನು ಸ್ವಲ್ಪ ಕಡಿದು ನೋಡಿದೆ. ಅಬ್ಬ! ಭಯಂಕರ ಖಾರ. ಇದರ ಉಪ್ಪಿನಕಾಯಿ ಮಾಡಿ ನಾಗಾ ಜನರು ಊಟದ ಜೊತೆಗೆ ತಿನ್ನುತ್ತಾರೆಂದರೆ ನಾಗಾ ಜನರು ಎಷ್ಟು ಗಟ್ಟಿಗರು!
ದಿಮಾಪುರದಿಂದ ಕೊಹಿಮಾ ಹೋಗುವಾಗ ದೊಡ್ಡ ಹೆಬ್ಬಾಗಿಲಿನಂತಹ ಕಮಾನುಗಳು ಕಾಣುತ್ತವೆ. ನಮ್ಮ ಕಡೆ ಊರಿಗೆ ಪ್ರವೇಶಕ್ಕೆ ಕಟ್ಟುವ ಹೆಬ್ಬಾಗಿಲುಗಳಂತೆ. ನಾಗಾ ಜನಾಂಗಗಳಲ್ಲಿಯೂ ಕೂಡ ಊರಿಗೆ ಮೊದಲು ಕಮಾನು ಕಟ್ಟುವ ರೂಢಿಯಿದೆ. ದಿಮಾಪುರ – ಕೊಹಿಮಾ ಹೆದ್ದಾರಿ ಬ್ರಿಟಿಷರು ನಿರ್ಮಿಸಿದ್ದು. ಇದೆ ಹೆದ್ದಾರಿ ಮುಂದೆ ಕೊಹಿಮಾದಿಂದ ಮಣಿಪುರದ ರಾಜಧಾನಿ ಇಂಫಾಲ್ ದವರೆಗೂ ಸಾಗುತ್ತದೆ. ದಾರಿಯುದ್ದಕ್ಕೂ ಸುಂದರ ಹಸಿರು ನಾಗ ಬೆಟ್ಟಗಳು ಕಾಣಸಿಗುತ್ತವೆ.
ನಾಗಾ ಜನರು ತಮ್ಮ ವೀರತನಕ್ಕೆ ಹೆಸರಾದವರು. ಶಸ್ತ್ರಸದ್ದ ಬ್ರಿಟಿಷರು ೧೮೪೦ ರಿಂದ ನಾಗಾ ಬೆಟ್ಟಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಪಟ್ಟರು. ಸ್ವತಂತ್ರ ಪ್ರಿಯ ನಾಗಾ ಜನರ ವೀರೋಧ ಹೇಗಿತ್ತೆಂದರೆ ಬ್ರಿಟಿಷರಿಗೆ ನಾಗಾ ಬೆಟ್ಟಗಳನ್ನು ವಶಪಡಿಸಿಕೊಳ್ಳಲು ಬರೋಬ್ಬರಿ ನಾಲ್ಕು ದಶಕಗಳು ಬೇಕಾದವು. ಅದಕ್ಕೂ ಮುಂಚೆ ಯಾವ ಸಾಮ್ರಾಜ್ಯವೂ ನಾಗಾ ಬೆಟ್ಟಗಳ ಮೇಲೆ ಅಧಿಪತ್ಯ ಸ್ಥಾಪಿಸಿರಲಿಲ್ಲ.
ಮೊದಲೇ ಹೇಳಿದ ಹಾಗೆ ಕೊಹಿಮದಲ್ಲೇ ಇರುವ ಕಿಸಾಮ ಹಳ್ಳಿಯಲ್ಲಿ ಪ್ರತಿ ವರುಷ ಹಾರ್ನ್ ಬಿಲ್ ಉತ್ಸವ ನಡೆಯುತ್ತದೆ. ಅಲ್ಲಿ ನಾಗಾ ಜನರ ವಿವಿಧ ಜನಾಂಗಗಳ ಮೊರಂಗ (ಮನೆ) ಗಳನ್ನು ಕಟ್ಟಿದ್ದಾರೆ. ಆ ಮನೆಗಳಲ್ಲಿ ಆ ಬುಡಕಟ್ಟು ಜನಾಂಗ ಬಳಸುವ ಅಡುಗೆ ಸಾಮಾನುಗಳಿಂದ ಹಿಡಿದು ಸಂಗೀತ ವಾದ್ಯಗಳನ್ನು ಇರಿಸಿದ್ದಾರೆ. ಹೀಗೆ ಮನೆಗಳನ್ನು ನೋಡುತ್ತಿರಬೇಕಾದರೆ ಕೊನ್ಯಾಕ್ ಜನಾಂಗದ ಮನೆಯ ಮೇಲೆ ಬಂದೂಕು ಹಿಡಿದ ಮನುಷ್ಯನ ಚಿತ್ರ ನೋಡಿ ಅಚ್ಚರಿಯಾಯಿತು. ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಬ್ರಿಟಿಷರು ನಾಗಾಲ್ಯಾಂಡ್ ಪ್ರವೇಶಿಸುವುದಕ್ಕಿಂತಲೂ ಮುಂಚೆಯೇ ಕೊನ್ಯಾಕ್ ಜನಾಂಗದವರ ಬಳಿ ಬಂದೂಕಿತ್ತಂತೆ. ಹಾಗಾಗಿ ಬ್ರಿಟಿಷರು ಅವರನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈ ವಿಷಯಕ್ಕೆ ಪುರಾವೆಯಿಲ್ಲ. ಜನರು ಆಡಿಕೊಳ್ಳುವ ಒಂದು ಕತೆ ಇರಬೇಕಷ್ಟೇ. ಮುಂದೆ ಬ್ರಿಟಿಷರು ಚೀನಾದಿಂದ ತಂದ ಆಫಿಮ್ ನ ಗೀಳನ್ನ ಈ ಜನರಿಗೆ ಹಚ್ಚಿ ಅವರ ಮೇಲೆ ವಿಜಯ ಸಾಧಿಸಿದರು ಎಂಬುದು ಕತೆಯ ಕ್ಲೈಮಾಕ್ಸ್.
ಕೊಹಿಮವನ್ನು ಹಿಡಿದು ನಾಗಾಲ್ಯಾಂಡ್ ನ ಪ್ರಮುಖ ಧರ್ಮ ಕ್ರೈಸ್ತ ಧರ್ಮ. ಬ್ರಿಟಿಷರು ಎಲ್ಲೇ ಹೋದರೂ ಮಾಡಿದ ಒಂದು ಕೆಲಸವೆಂದರೆ ಸ್ಥಳೀಯ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದು. ಅದರಲ್ಲೂ ಬುಡಕಟ್ಟು ಜನಾಂಗಗಳು ಅವರ ಪ್ರಮುಖ ಗುರಿ. ಹಾಗಾಗಿ ಈಶಾನ್ಯ ಭಾರತದಲ್ಲಿ ಈ ಜನಾಂಗಗಳ ಮೇಲೆ ವಿಜಯ ಸಾಧಿಸಿದ ಮೇಲೆ ಅವರು ಬಹು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದಾರೆ. ಪಶ್ಚಿಮಕ್ಕೆ ನೇಪಾಳ, ಭೂತಾನ ಬಾಂಗ್ಲಾದೇಶ, ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಮಯನ್ಮಾರ್ ದೇಶಗಳಿಂದ ಆವೃತವಾಗಿರುವ ಈಶಾನ್ಯ ಭಾರತದ ಜನರು ಆದಿ ಕಾಲದಿಂದಲೂ ಪ್ರಕೃತಿಯನ್ನೇ ಪೂಜಿಸುತ್ತಾ ಬಂದಿದ್ದಾರೆ. ಅಪತಾನಿಗಳ ದೊನಯಿ ಪೋಲೊ, ಮಿಥೈಗಳ ಸಾನಾಮಹಿ ಕೆಲವು ಉದಾಹರಣೆಗಳು. ಹಿಂದೂ, ಬೌದ್ಧ, ಕ್ರೈಸ್ತ ಧರ್ಮಗಳನ್ನು ಈ ಜನರು ಅಪ್ಪಿಕೊಂಡರೂ ಇವರ ಮೂಲಭೂತ ಪ್ರಕೃತಿ ಆರಾಧನೆಯನ್ನು ಬಿಟ್ಟಿಲ್ಲ. ಹಾಗಾಗಿ ಅವರನ್ನು ನಾವು ಹಿಂದೂ. ಮುಸ್ಲಿಂ, ಬೌದ್ಧ, ಕ್ರೈಸ್ತ ಎಂದು ನೋಡಿದರೆ ಅವರ ನಂಬಿಕೆಯನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಜೀವನದ ಪ್ರತಿ ಆಚರಣೆ, ದೈನಂದಿನ ಕಾರ್ಯಗಳಲ್ಲಿ ಪ್ರಕೃತಿಯ ಆರಾಧನೆ ಹಾಸು ಹೊಕ್ಕಿದೆ.
ಒಂದು ಸಣ್ಣ ಉದಾಹರಣೆ ಕೊಡಬೇಕೆಂದರೆ ಭಾರತದಲ್ಲಿ ಎಲ್ಲೇ ಹೋದರೂ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರ ಹೆಸರುಗಳ ನೋಡಿದರೆ ಅವು ಬೈಬಲ್ ನಿಂದ ಸ್ಫೂರ್ತಿ ಪಡೆದ ಹೆಸರುಗಳಾಗಿರುತ್ತವೆ, ಹಿಂದೂಗಳು ಪುರಾಣ – ಮಹಾಕಾವ್ಯಗಳಿಂದ ಹೆಸರು ಇಡುವಂತೆ. ಆದರೆ ಈಶಾನ್ಯ ಭಾರತದದಲ್ಲಿ ಬಹುತೇಕ ಕಡೆ ಯಾವ ಧರ್ಮಕ್ಕೆ ಸೇರಿದರೂ ಕೂಡ ಹೆಸರು ಮಾತ್ರ ಅವರ ಮೂಲ ನಂಬಿಕೆಯಿಂದ ಇಟ್ಟಿರುತ್ತಾರೆ. ಬಹುತೇಕ ಹೆಸರುಗಳು ಸುತ್ತ ಮುತ್ತಲಿನ ಸಸ್ಯ- ಪ್ರಾಣಿ- ಗಿಡಗಳಿಂದ ಸ್ಫೂರ್ತಿ ಪಡೆದಿರುತ್ತವೆ.
ನಾನು ಹೋದದ್ದು ಶನಿವಾರ ರವಿವಾರವಾದದ್ದರಿಂದ ಮ್ಯೂಸಿಯಂಗಳು ಮುಚ್ಚಿದ್ದವು. ಹಾಗಾಗಿ ಕೊಹಿಮಾ ಸುತ್ತುತ್ತಾ ವಾರ್ ಸಿಮೆಟ್ರಿ ತಲುಪಿದೆವು. ಇತ್ತೀಚಿಗೆ ಬಿ.ಬಿ.ಸಿ. ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ೧೯೪೪ರಲ್ಲಿ ನಡೆದ ಕೊಹಿಮಾ ಯುದ್ಧ ಜಾಗತಿಕ ಇತಿಹಾಸದಲ್ಲೇ ನಾಲ್ಕನೆ ಅತಿ ಹೆಚ್ಚು ರಕ್ತಸಿಕ್ತ ಯುದ್ಧವಂತೆ. ಎರಡನೆ ಮಹಾಯುದ್ಧದ ಸಮಯದಲ್ಲಿ ಪೂರ್ವದಿಂದ ಭಾರತವನ್ನು ಆಕ್ರಮಿಸಲು ಬರುತ್ತಿದ್ದ ಜಪಾನ್ ಹಾಗು ಬ್ರಿಟಿಷ್ ನೇತೃತ್ವದ ಅಲೈಡ್ ಸೈನ್ಯದ ನಡುವೆ ಕೊಹಿಮದಲ್ಲಿ ಭೀಕರ ಯುದ್ಧ ನಡೆಯಿತು. ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರು, ಸ್ಥಳೀಯ ನಾಗಾಗಳು ಹಾಗು ಕಾಮನ್ ವೆಲ್ತ್ ದೇಶಗಳ ಸೈನಿಕರಿದ್ದರು.
ಕೊಹಿಮಾ ಸಮರ ಎರಡನೆ ಮಹಾಯುದ್ಧದಲ್ಲಿ ಟರ್ನಿಂಗ್ ಪಾಯಿಂಟ್. ಅಲ್ಲಿಯವರೆಗೂ ನೈಋತ್ಯ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಿದ್ದ ಜಪಾನೀಯರು ಭಾರತವನ್ನು ವಶಪಡಿಸಿಕೊಳ್ಳಲು ಹಾತೊರೆಯುತಿದ್ದರು. ಬರ್ಮಾದಿಂದ ಬಂದ ಜಪಾನೀ ಸೈನ್ಯವನ್ನು ಅಲೈಡ್ ಸೈನಿಕರು ಗ್ಯಾರಿಸನ್ ಬೆಟ್ಟದ ಮೇಲೆ ಎದುರಿಸಿದರು. ಯುದ್ಧ ಸುಮಾರು ನಾಲ್ಕು ತಿಂಗಳು ಕಾಲ ನಡೆಯಿತು. ನೆಲಕ್ಕಾಗಿ ಎರಡು ಕಡೆ ಎಷ್ಟು ದಾಹವಿತ್ತೆಂದರೆ, ಯುದ್ಧ ಕೈ – ಕೈ ಮಿಲಾಯಿಸಿ ಹೋರಾಟದವರೆಗೆ ನಡೆಯಿತು. ಇಬ್ಬರಿಗೂ ಸೋಲಲು ಇಷ್ಟವಿರಲಿಲ್ಲ. ಈ ಯುದ್ಧ ನಡೆದಿದ್ದು ಗ್ಯಾರಿಸನ್ ಬೆಟ್ಟದ ಮೇಲೆ ಅಂದಿನ ಡೆಪ್ಯೂಟಿ ಕಮಿಷನರ್ ಮನೆಯ ಅಂಗಳದಲ್ಲಿ ಇದ್ದ ಟೆನ್ನಿಸ್ ಅಂಕಣದಲ್ಲಿ. ಹಾಗಾಗಿ ಇದು ‘ಬ್ಯಾಟಲ್ ಆಫ್ ಟೆನ್ನಿಸ್ ಕೋರ್ಟ್’ ಎಂದೂ ಪ್ರಸಿದ್ಧಿ ಪಡೆದಿದೆ. ಈ ಯುದ್ಧದಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳ ಎರಡು ಕಡೆಯ ಸೈನಿಕರು ಮಡಿದರು. ಕಾಮನ್ ವೆಲ್ತ್ ಸೈನಿಕರ ನೆನಪಿಗಾಗಿ ಯುದ್ಧ ನಡೆದ ಜಾಗದಲ್ಲಿ ವಾರ್ ಸಿಮೆಟ್ರಿ ನಿರ್ಮಿಸಲಾಗಿದೆ. ಸುಮಾರು ವಿಸ್ತಾರವಿರುವ ಈ ಸಿಮೆಟ್ರಿಯನ್ನು ಸುತ್ತುತ್ತಿರಬೇಕಾದರೆ ಕಂಡದ್ದು ಹರೆಯ ವಯಸ್ಸಿನಲ್ಲಿ ಮಡಿದ ಸೈನಿಕರ ಗೋರಿಗಳು. ಪ್ರತಿ ವರುಷ ನಾನಾ ದೇಶಗಳಿಂದ ಮಡಿದ ಸೈನಿಕರ ಸಂಬಂಧಿಗಳು ಇಲ್ಲಿಗೆ ಬರುತ್ತಾರೆ. ಯುದ್ಧವನ್ನು ಮರೆತರೂ, ಅದು ಬಿಟ್ಟುಹೋಗುವ ಗಾಯಗಳು ಮಾತ್ರ ಹಾಗೇ ಉಳಿಯುತ್ತವೆ.
ಕೊಹಿಮಾದಿಂದ ಶಿಲೊಂಗ್ ಗೆ ರಸ್ತೆ ಮೂಲಕ ಬಸ್ ಪ್ರಯಾಣ ಮಾಡಬೇಕೆಂದರೆ ಸುಮಾರು ೧೦ ಗಂಟೆ ಬೇಕು. ಮರಳುವಾಗ ಅಸ್ಸಾಂ ನ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಮನೆ ತಲುಪಬೇಕೆಂದು ಬಸ್ ಹಿಡಿದೆ. ಅದು ಸೂರ್ಯ ಮುಳುಗುವ ಸಮಯವಾದ್ದರಿಂದ ಆಗಸ ವರ್ಣರಂಜಿತವಾಗಿತ್ತು. ಬಸ್ಸು ಆ ಮುಸ್ಸಂಜೆಯಲ್ಲಿ ಸುಂದರವಾಗಿ ಕಾಣುತಿದ್ದ ಅಸ್ಸಾಮ್ನ ಟೀ ಗಾರ್ಡನ್ ಹಾಗು ಗದ್ದೆಗಳನ್ನು ಹಿಂದಿಕ್ಕಿ ಮುನ್ನುಗ್ಗುತಿತ್ತು. ಆದರೆ ಮನಸ್ಸು ಮಾತ್ರ ‘ವಾರ್ ಸಿಮೆಟ್ರಿ’ಯ ಸಾಲು ಸಾಲಾಗಿ ಒಪ್ಪವಾಗಿ ನಿಂತಿರುವ ಆ ಗೋರಿಗಳ ನಡುವೆ ನಿಂತು ಬಿಟ್ಟಿತು. ಏನೋ ಹೇಳತೀರದ ಸಂಕಟ. ಪ್ರಶ್ನೆಗಳ ಸರಮಾಲೆ ನನ್ನನ್ನ ಆಕ್ರಮಿಸಿತು. ಗೋರಿಗಳ ಕೆಳಗೆ ಮಲಗಿರುವ ಜೀವನವನ್ನೇ ಕಾಣದ ಯುವ ಸೈನಿಕರು ಸಾಯುವ ಮುಂಚೆ ಏನು ಯೋಚಿಸುತ್ತಿದ್ದಿರಬಹುದು? ತಮ್ಮದೇ ನೆಲದಲ್ಲಿ ತಮ್ಮದೇ ಜನರನ್ನ ಸದೆಬಡಿಯುತ್ತಿದ್ದ ಬ್ರಿಟಿಷರ ಪರವಾಗಿ ಹೋರಾಡಿದ ಭಾರತೀಯ ಸೈನಿಕನ ಯೋಚನೆ ಕೊನೆಯ ಗಳಿಗೆಯಲ್ಲಿ ಏನಿರಬಹುದು? ಅವರು ಮಡಿದದ್ದಾದರೂ ಯಾರಿಗೆ? ಇಂಗ್ಲೆಂಡ್ ರಾಣಿಗಾಗಿಯೇ ಅಥವಾ ಇನ್ನೂ ಸ್ವತಂತ್ರ ಕಾಣದ ಭಾರತಕ್ಕಾಗಿಯೇ? ಇಲ್ಲ ನಾಗಾ ಜನರ ಸ್ವತಂತ್ರಕ್ಕಾಗಿಯೇ? ಅಥವಾ ಅಂದಿನ ಪ್ರಬಲ ದೇಶಗಳ ರಾಜಕೀಯ ಆಟಕ್ಕೆ ದಾಳಗಳಾಗಿ ಅಜ್ಞಾತವಾಗಿ ಮಡಿದರೆ? ಒಂದಂತೂ ಸತ್ಯ… ಅವರು ಮಡಿದದ್ದು ತಾವು ನಂಬಿದ ಮೌಲ್ಯಕ್ಕೆ, ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಜೊತೆಗಾರರಿಗೆ. ಸಿಮೆಟ್ರಿಯಿಂದ ಮರಳಿ ಬರುವಾಗ ಕಂಡ ಗೋರಿ ಬರಹ ಕಣ್ಮುಂದೆ ಬಂತು.
“When you go home, tell them of us and say, for your tomorrow, we gave our Today”
(ಫೋಟೋಗಳು: ಲೇಖಕರವು)
ದೇವೇಂದ್ರ ಅಬ್ಬಿಗೇರಿ ಮೂಲತಃ ಕೊಪ್ಪಳ ಜಿಲ್ಲೆಯವರು. ೨೦೧೧ ಸಾಲಿನ ಕೇಂದ್ರೀಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, Indian Audit & Accounts Department ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.