ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು. ತಮ್ಮದೇ ವಿಶಿಷ್ಟ ಭಾವಸಂದರ್ಭ, ಶೈಲಿಗಳಿಂದಾಗಿ ಸಾಹಿತ್ಯಕ್ಷೇತ್ರದಲ್ಲಿ ಅನನ್ಯ ಸ್ಥಾನ ಗಳಿಸಿದವರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ
ಕೆಲವು ಪುಸ್ತಕಗಳು ನಮ್ಮ ಮನಸ್ಸನ್ನು ತುಸು ಕಾಲ ಹಿಡಿದಿಟ್ಟರೆ ಇನ್ನು ಕೆಲವು ದೀರ್ಘ ಕಾಲ ಕಾಡುತ್ತವೆ. ಪ್ರತಿ ಸಲ ಓದಿದಾಗಲೂ ಹೊಸ ಹೊಸ ಒಳನೋಟಗಳನ್ನು ಕೊಡುತ್ತಾ ನಿಜ ಬದುಕಿನ ಬಗ್ಗೆ ಒಂದು ವಿಶೇಷ ರೀತಿಯ ತಿಳುವಳಿಕೆ ಹಾಗೂ ಮಾನಸಿಕ ಸ್ಥೈರ್ಯವನ್ನು ಕೊಡುತ್ತವೆ. ವಿಖ್ಯಾತ ಮಲಯಾಳಂ ಲೇಖಕಿ ಕಮಲಾ ದಾಸ್(ಕಮಲಾ ಸುರಯ್ಯಾ) ಅವರ ಪುಸ್ತಕಗಳನ್ನು ನಾವು ಈ ಸಾಲಿಗೆ ಸೇರಿಸಬಹುದು.
ಲೇಖಕಿ ಕಮಲಾ ದಾಸ್ ಮಲಯಾಳಂ ಭಾಷೆಯಲ್ಲಿ ಬರೆದ, ಅಖಿಲ ಭಾರತೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಒಬ್ಬ ಮುಖ್ಯ ಲೇಖಕಿ. ಈ ತಿಂಗಳು(ಮಾರ್ಚ್) ಈ ಲೇಖಕಿಯ ಹುಟ್ಟಿದ ದಿನ ಬರುತ್ತದೆ. ಕಮಲ 31 ಮಾರ್ಚ್ 1934ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಪುನ್ನಯೂರ್ಕುಲಂ ಎಂಬ ಸ್ಥಳದಲ್ಲಿ ಜನಿಸಿದರು ಮತ್ತು ಕಲ್ಕತ್ತಾದಲ್ಲಿ ಬೆಳೆದರು. ಮಲಯಾಳಂ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಇವರು ಇವರು ಮಲಯಾಳಂನಲ್ಲಿ ಮೊದಲು `ಮಾಧವಿ ಕುಟ್ಟಿʼ ಎಂಬ ಕಾವ್ಯನಾಮದಲ್ಲಿ ಹಾಗೂ ಇಂಗ್ಲಿಷ್ನಲ್ಲಿ `ಕಮಲಾ ದಾಸ್’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದರು. 1999ರಲ್ಲಿ ಇಸ್ಲಾಂಗೆ ಮತಾಂತರಗೊಂಡಾಗ ತಮ್ಮ ಹೆಸರನ್ನು ಕಮಲಾ ಸುರಯ್ಯಾ ಎಂದು ಬದಲಿಸಿಕೊಂಡರು. ಕವಿತೆ, ಕಾದಂಬರಿ, ಸಣ್ಣ ಕಥೆಗಳು ಹಾಗೂ ಅಂಕಣ ಬರಹಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಅವರ ಆತ್ಮಕಥೆ `ಮೈ ಸ್ಟೋರಿ (ಎಂಡೆ ಕಥಾ)’ ಬಹು ಪ್ರಸಿದ್ಧವಾಯಿತು. ಸ್ತ್ರೀಯರ ಚಿತ್ರಣದಲ್ಲಿ ತೋರಿದ ದಿಟ್ಟತೆ, ಆಳವಾದ ಅನುಭವ ಪ್ರಮಾಣ ಹಾಗೂ ಆತ್ಮಶೋಧಕ ಗುಣಗಳು ಓದುಗರ ಹಾಗೂ ವಿಮರ್ಶಕರ ಮನಸ್ಸನ್ನು ಬಹುವಾಗಿ ಗೆದ್ದವು. ಮಲಯಾಳಂ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ ಕಮಲಾ ದಾಸ್ ನಮ್ಮ ದೇಶದ ಸ್ತ್ರೀಯರ ಸ್ವತಂತ್ರ ಹಾಗೂ ದಿಟ್ಟ ಚಿಂತನೆಗೆ ಒಂದು ಉಜ್ವಲ ಉದಾಹರಣೆ. ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ 31-05-2009ರಂದು ಈಕೆ ಪುಣೆಯಲ್ಲಿ ತೀರಿಕೊಂಡರು.
ಮಾರ್ಚ್ನಲ್ಲಿ, ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಮಹಿಳಾ ಮಾಸದಲ್ಲಿ ಮಹಿಳೆಯ ಅಸ್ಮಿತೆಯ ಪ್ರತೀಕ ಕಮಲಾ ದಾಸ್ರ ಹುಟ್ಟುಹಬ್ಬದ ನೆನಪಿನಲ್ಲಿ ಅವರ ಪುಸ್ತಕವೊಂದರ ಬಗ್ಗೆ ಬರೆಯುತ್ತಿದ್ದೇನೆ. ಈ ಕೃತಿ– ಕಮಲಾದಾಸ್ ಕಥೆಗಳು (ಕಥಾ ಸಂಕಲನ). ಮಲಯಾಳಂ ಮೂಲ – ಕಮಲಾದಾಸ್, ಕನ್ನಡಕ್ಕೆ – ಕೆ.ಕೆ.ಗಂಗಾಧರನ್ ಪ್ರಕಾಶಕರು–ಅಂಕಿತ ಪುಸ್ತಕ, ಬೆಂಗಳೂರು, ಪ್ರಕಟಣೆಯ ವರ್ಷ–2023.
ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು. ತಮ್ಮದೇ ವಿಶಿಷ್ಟ ಭಾವಸಂದರ್ಭ, ಶೈಲಿಗಳಿಂದಾಗಿ ಸಾಹಿತ್ಯಕ್ಷೇತ್ರದಲ್ಲಿ ಅನನ್ಯ ಸ್ಥಾನ ಗಳಿಸಿದವರು.
ಪ್ರಸ್ತುತ ಕಥಾ ಸಂಕಲನದಲ್ಲಿ ಕಮಲಾದಾಸ್ ಬರೆದ ಒಟ್ಟು 30 ಕಥೆಗಳಿವೆ, ಬದುಕು ಮೇಲ್ನೋಟಕ್ಕೆ ಕಾಣುವಂತೆ ಇರದು ಅಲ್ಲವೇ? ಅದರ ಒಳಸುಳಿಗಳನ್ನು ಆಳಗಳನ್ನು ಬಗೆದು ನೋಡುವ ಕ್ಷಕಿರಣದ ನೋಟವು ಈ ಲೇಖಕಿಯ ಸಂವೇದನೆಗೆ ಸಾಧ್ಯವಾಗಿವೆ. ಹೀಗಾಗಿ ಇಲ್ಲಿನ ಕಥೆಗಳನ್ನು ಓದುತ್ತಾ ಹೋದಂತೆ ಕೆಲವು ನಮ್ಮನ್ನು ಬೆಚ್ಚಿ ಬೀಳಿಸಿದರೆ ಇನ್ನು ಕೆಲವು ತೀವ್ರ ವಿಷಾದಕ್ಕೆದೂಡುತ್ತವೆ. ಬಡವರು, ಶ್ರೀಮಂತರು, ವಯಸ್ಸಾದವರು, ಯೌವನಿಗರು, ಅಧಿಕಾರಸ್ಥರು, ತೀರಾ ಪಾಪದವರು, ರಾಜಕಾರಣಿಗಳು, ಕವಿಗಳು, ಅಧ್ಯಾಪಕರು ಒಟ್ಟಿನಲ್ಲಿ ಮನುಷ್ಯತ್ವದ ಹಲವು ಮುಖಗಳು ಇಲ್ಲಿ ನಮಗೆ ಎದುರಾಗುತ್ತವೆ; ಆದರೆ ನಮಗೆ ಪರಿಚಿತವಾದ ಲಯಗಳಲ್ಲಿ ಅಲ್ಲ.
ಈಗ ಈ ಕೆಳಗಿನ ಉಪಶೀರ್ಷಿಕೆಗಳಲ್ಲಿ ಈ ಕಥಾಸಂಕಲನದ ಕೆಲವು ಮುಖ್ಯಾಂಶಗಳನ್ನು ಗಮನಿಸೋಣ.
1. ದಿಟ್ಟ ಹೆಣ್ಣುಗಳ ಚಿತ್ರಣ:- ಗಂಡು ಹೆಣ್ಣಿನ ಸಂಬಂಧದಷ್ಟು ಸಂಕೀರ್ಣ ಸಂಬಂಧ ಬಹುಶಃ ಇನ್ನೊಂದಿರಲಾರದು ಹಾಗೂ ಬಹುಶಃ ಕಮಲಾದಾಸ್ರಂತೆ ಇದನ್ನು ಯಾರೂ ಅಸಂಪ್ರದಾಯಿಕವಾಗಿ ಚಿತ್ರಿಸಲಾರರು. ಈ ಸನ್ನಿವೇಶಗಳಲ್ಲಿ ಅವರು ಅನೇಕ ಧೈರ್ಯಸ್ಥ ಸ್ತ್ರೀಪಾತ್ರಗಳನ್ನು ಚಿತ್ರಿಸಿದ್ದಾರೆ. ನಿಜ ಹೇಳಬೇಕೆಂದರೆ ದಿಟ್ಟ ಹೆಣ್ಣುಗಳು ಅಂದರೆ ಏನು, ಹೇಗಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಕಮಲಾದಾಸ್ರ ಕಥೆಗಳನ್ನು ಓದಬೇಕು. ಉದಾಹರಣೆಗೆ `ರೇಷ್ಮೆ ಸೀರೆಯ ತಿಕ್ಕಾಟ’ ಕಥೆಯ ಆನಂದವಲ್ಲಿಯಮ್ಮ ಪಾತ್ರದಚಿತ್ರಣವನ್ನು ನೋಡಬಹುದು. “ಸಂಬಂಧಿಕರ ಮದುವೆಯ ಸಂಭ್ರಮದಲ್ಲಿ ಭಾಗವಹಿಸಲು ಆನಂದವಲ್ಲಿಯಮ್ಮನಿಗೆ ಸದಾ ಉತ್ಸಾಹವಿರುತ್ತಿತ್ತು. ಇಂತಹ ಸಂದರ್ಭದಲ್ಲಿ ತನ್ನ ಬಾಲ್ಯಕಾಲದ ಗೆಳೆಯ ಗೆಳತಿಯರನ್ನು ಭೇಟಿಯಾಗಬಹುದು, ಯೌವನದಲ್ಲಿ ಆರಂಭಿಸಿದ ಪ್ರಣಯ ಸಂಬಂಧಗಳನ್ನು ನವೀಕರಿಸಬಹುದು….”. ಇದೇ ಪಾತ್ರ ಮುಂದೆ ಹೀಗೆ ಯೋಚಿಸುತ್ತದೆ – “ಅಪ್ಪಅಮ್ಮಂದಿರ ಬಲವಂತಕ್ಕೆ ಮಣಿಯದೆ ತಾನು ಅವಿವಾಹಿತೆಯಾಗಿಯೇ ಉಳಿದೆ. ಚಂದ್ರನಿಗೊಮ್ಮೆ ಸಮರ್ಪಿಸಿದ ದೇಹವನ್ನು ಮತ್ತೊಬ್ಬನ ಆಟದ ವಸ್ತುವನ್ನಾಗಿ ಮಾಡಲು ಸಿದ್ಧಳಾಗಲಿಲ್ಲ”. ಬಹಳ ವರ್ಷಗಳ ನಂತರ ತನ್ನ ಪ್ರೇಮಿಯನ್ನು ನೋಡುವಾಗ ಆತ ಸಂಪೂರ್ಣವಾಗಿ ಬದಲಾದದ್ದು ಆಕೆಗೆ ಕಂಡು ಬರುತ್ತೆ. ಆಗ ಕಮಲಾದಾಸ್ ಬರೆವ ಸಾಲುಗಳನ್ನು ನೋಡಿ – “ಸೂರ್ಯ ನಡುನೆತ್ತಿಯಲ್ಲಿ ಬಿಸಿ ಕಾವನ್ನು ಸುರಿಸುತ್ತಿರುವಾಗ ಬೆವರುವ ದೇಹಕ್ಕೆ ಅಂಟಿಕೊಂಡಿರುವ ಸಫಾರಿಯನ್ನು ಧರಿಸಿ ತನ್ನ ಸಮೀಪದಲ್ಲಿ ಏದುಸಿರು ಬಿಡುತ್ತಾ ನಿಂತಿರುವ ಈ ವೃದ್ಧ ಕೇವಲ ವಿದೂಷಕನಲ್ಲವೆ, ಆನಂದವಲ್ಲಿ ತನ್ನಷ್ಟಕ್ಕೇ ಕೇಳಿಕೊಂಡರು”. ಐಎಎಸ್ ಅಧಿಕಾರಿಯಾದ ಆನಂದವಲ್ಲಿ ಧನಿಕ ಹುಡುಗಿಗಾಗಿ ಹಿಂದೆ ತನ್ನನ್ನು ತಿರಸ್ಕರಿಸಿದ್ದ ಪ್ರೇಮಿ ಚಂದ್ರನನ್ನು ಮದುವೆ ಮನೆಯಲ್ಲಿ ಬಹಳ ಕಾಲದ ನಂತರ ಭೇಟಿ ಆದಾಗ ಅವರಲ್ಲಿ ಮೂಡುವ ಭಾವನೆ ಇದು.
ಇನ್ನು `ಪತಿವ್ರತೆ’ ಕಥೆಯ ನಾಯಕಿಯ ಮಾತುಗಳನ್ನು ನೋಡಿ – “ಪರಮ ಪಂಡಿತನಾದ ನನ್ನ ಪ್ರೀತಿಯ ವೃದ್ಧ ಪ್ರಿಯತಮ ಹೀಗೆಯೇ ಮಾತನಾಡುತ್ತ ಕೇಳಿದ್ದ. ನೀನು ನನ್ನವನೇನು? ನನ್ನ ದೇಹದ ಯಜಮಾನಿಕೆ ಯಾರಿಗೆ? ನನ್ನ ದೇಹವನ್ನು ದುರ್ಬಳಕೆ ಮಾಡುತ್ತಿರುವ ಗಂಡನೇ ಏನು ನನ್ನ ಯಜಮಾನ? ಅಥವಾ ಪರಿಸ್ಥಿತಿಗಳನ್ನು ಪ್ರೀತಿಯನ್ನು ಶರಣಾಗತಗೊಳಿಸಿದ ಆ ಪ್ರಿಯತಮನೇ ನನ್ನ ಯಜಮಾನ? ಅಥವಾ ಎಲ್ಲೋ ಬಚ್ಚಿಟ್ಟುಕೊಂಡಿರುವ ನನ್ನನ್ನು ತನ್ನ ಆಟದಲ್ಲಿ ಬೆಲೆ ಕಡಿಮೆ ಮಾಡಿರುವ ದೇವರೇನು?” ದಾಂಪತ್ಯದಲ್ಲಿನ ಇಂತಹ ವಿಷಮತೆಯ ವಸ್ತುವು ಕಮಲಾ ದಾಸ್ರಲ್ಲಿ ಮತ್ತೆ ಮತ್ತೆ ಶೋಧಕ್ಕೊಳಗಾಗಿದೆ. `ಕವಿಪತ್ನಿ’ಕಥೆ ಕೂಡ ಇದಕ್ಕೆ ಉತ್ತಮ ಉದಾಹರಣೆ.
ನಿಜ. ಹೆಣ್ಣನ್ನು ವೇಶ್ಯೆ ಮಾಡಿ ಅವಳನ್ನು ವಸ್ತುವೋ ಎಂಬಂತೆ ಕೊಳ್ಳುವ ಮಾರುವ ಗಂಡಾಳಿಕೆಯ ಸಮಾಜದಲ್ಲಿ, ಸ್ವತಃ ಗಂಡನೇ ಕಛೇರಿಯಲ್ಲಿನ ತನ್ನ ಬಡ್ತಿಗಾಗಿ ತನ್ನ ಹೆಂಡತಿಯನ್ನು ಮೇಲಧಿಕಾರಿಗೆ ಒಪ್ಪಿಸುವ ಸನ್ನಿವೇಶಗಳಿರುವಾಗ, ದೇವರ ಬಗ್ಗೆ ಹೆಣ್ಣುಗಳಿಗೆ ಅವನು ತನ್ನ ಆಟದಲ್ಲಿ ಹೆಣ್ಣಿನ ಬೆಲೆ ಕಡಿಮೆ ಮಾಡಿದ್ದಾನೆ ಎಂದು ಖಂಡಿತ ಅನ್ನಿಸುತ್ತದಲ್ಲವೇ?
ಕುತೂಹಲಕರ ವಿಷಯವೆಂದರೆ ಕಮಲಾದಾಸ್ರ ಪಾತ್ರಗಳು ಅವರಿಗಿಂತ ಹತ್ತು-ಹನ್ನೊಂದು ವರ್ಷ ಚಿಕ್ಕವರಾದ ಕನ್ನಡದ ಲೇಖಕಿ ವೀಣಾ ಶಾಂತೇಶ್ವರ ಅವರು ಕಟ್ಟಿಕೊಟ್ಟ ದಿಟ್ಟ ಸ್ತ್ರೀಪಾತ್ರಗಳನ್ನು ನೆನಪಿಸುತ್ತವೆ. ಇದರ ಅರ್ಥ ಕಮಲಾದಾಸ್ರು ತಮ್ಮ ಕಾಲಕ್ಕಿಂತ ಮುಂದಿದ್ದರು ಎಂದಲ್ಲವೇ? ಸ್ತ್ರೀಲೈಂಗಿಕತೆಯ ವಿಷಯವನ್ನು ನಿರ್ಬಿಢೆಯಿಂದ ನಿರ್ವಹಿಸಿದ್ದು ಕಮಲಾದಾಸ್ರನ್ನು ಭಾರತೀಯ ಸಾಹಿತ್ಯಕ್ಷೇತ್ರವು ಅನನ್ಯವೆಂದು ಗುರುತಿಸಲು ಕಾರಣವಾಗಿದೆ.

2. ಮನುಷ್ಯನ ಗಾಢ ಅಗತ್ಯದ ಶೋಧ:- ಮನುಷ್ಯನಿಗೆ ಕಡೆಗೂ ಬೇಕಾಗಿರುವುದೇನು? ಒಂದಿಷ್ಟು ಪ್ರೀತಿ ಹಾಗೂ `ತನಗಾಗಿ ಬದುಕುವ ಒಬ್ಬರಿದ್ದಾರೆ, ತಾನು ಒಬ್ಬರಿಗೆ ಬೇಕಾದ ವ್ಯಕ್ತಿಯಾಗಿದ್ದೇನೆ, ತನ್ನನ್ನು ಒಬ್ಬರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ’ ಎಂಬ ಭರವಸೆ. ಇಷ್ಟಕ್ಕಾಗಿ ಮನುಷ್ಯ ಎಷ್ಟೆಲ್ಲ ಪರಿತಪಿಸುತ್ತಾನೆ, ಏನೇನೆಲ್ಲ ಮಾಡುತ್ತಾನೆ, ಎಂತೆಂತಹ ಅಸಹಾಯಕ ಪರಿಸ್ಥಿತಿಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಈ ಕಥಾಸಂಕಲನದ ಕೆಲವು ಕಥೆಗಳು ಈ ಭಾವ ಸನ್ನಿವೇಶವನ್ನು ಮನೋಜ್ಞವಾಗಿ ಹಿಡಿದಿಟ್ಟಿವೆ. ಉದಾಹರಣೆಗೆ `ಅರುಣಾಚಲನ ಕಥೆ’ಯಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಒಬ್ಬ ವಕೀಲನ ಹಿರಿಯ ಮಗನಾಗಿ ಜನಿಸಿದ್ದ ಅರುಣಾಚಲನು, ತನ್ನ ಮನೆಯಲ್ಲಿ ಪ್ರೀತಿಯಿಲ್ಲದ ವಾತಾವರಣದಲ್ಲಿ ಬೆಳೆದಿರುತ್ತಾನೆ. ಅವನ ಬಗ್ಗೆ ಯಾರಿಗೂ ಸಹ ಹೇಳಿಕೊಳ್ಳುವಂತಹ ಅಕ್ಕರೆಯಾಗಲೀ ಭರವಸೆಯಾಗಲೀ ಇರುವುದಿಲ್ಲ. ಸದಾ ಕಾಲ “ಕ್ಲಾಸಿನಲ್ಲಿ ಮೊದಲಿಗನಾಗಬೇಕು, ಕುಟುಂಬದ ಅಭಿಮಾನ ಸ್ತಂಭವಾಗಬೇಕು, ಕುಟುಂಬದ ಬುದ್ಧಿಜೀವಿಯಾಗಬೇಕು, ಸಾಧಕನಾಗಬೇಕು” ಇಂತಹ ಒತ್ತಡಗಳನ್ನೇ ಅವನ ಮೇಲೆ ಹಾಕುತ್ತಿದ್ದುದರಿಂದ ಅವನು ಬರೇ ಸಾಧನೆಗಳನ್ನು ಮಾಡುತ್ತಾ ಯಾರೊಡನೆಯೂ ಬೆರೆಯದ ಏಕಾಂತಜೀವಿಯಾಗಿ, ಯಾರೊಡನೆಯೂ ಅರ್ಥಪೂರ್ಣವಾಗಿ ಸಂವಾದಿಸಲಾಗದ ಸ್ಥಿತಿಗೆ ತಲುಪುತ್ತಾನೆ. ಇಂತಹ ಅರುಣಾಚಲನಿಗೆ ತಾನು ಸಾಯುವ ಘಳಿಗೆಯಲ್ಲಿ ತನ್ನ ಬಗ್ಗೆಯೇ ಅನುಕಂಪ ಮೂಡುತ್ತದೆ! ತುಂಬ ದಾರುಣಜೀವನ ಅವನದು. ಇದೇ ರೀತಿಯಲ್ಲಿ ಈ ಕಥಾಸಂಕಲನದ ಕೊನೆಯಲ್ಲಿರುವ ಕಥೆಯಾದ “ನೇಯ್ಗೆಯ ಕುಂಜು ಮತ್ತು ಅವಳ ಮಗ” ಕಥೆಯಲ್ಲಿ ಎಂಬತ್ತೆರಡು ವರ್ಷದ ಕುಂಜು ಮನೆಯಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುವುದನ್ನು ನೋಡಬಹುದು. ಅಂಗಳದ ಹುಲ್ಲು ಕೀಳುವುದು, ಅನಗತ್ಯವಾಗಿ ಸೊಸೆಯನ್ನು ಬಯ್ಯುವುದು, ಮೊಮ್ಮಗಳ ಮೇಲೆ ನಿಯಂತ್ರಣ ಸಾಧಿಸಹೊರಡುವುದು, ಮಗನು ತನ್ನನ್ನು ನಿರ್ಲಕ್ಷಿಸುತ್ತಾನೆಂದು ಅಲವತ್ತುಕೊಳ್ಳುವುದು ಇವನ್ನೆಲ್ಲ ಈಕೆ ಮಾಡುತ್ತಿರುತ್ತಾಳೆ. ಇಲ್ಲಿಯೂ ಸಹ ಇನ್ನೊಂದು ಜೀವಿಯಿಂದ ತನಗೆ ಒಂದಿಷ್ಟು ಕಾಳಜಿ, ಪ್ರೀತಿ ಸಿಗಬೇಕೆಂಬ ತಹತಹ ಎದ್ದು ಕಾಣುತ್ತದೆ,
*****
ಈಗ ಇನ್ನೆರಡು ಅಂಶಗಳನ್ನು ಗಮನಿಸೋಣ.
ಕಮಲಾದಾಸ್ರ ಸಾಹಿತ್ಯದ ವಿಶಿಷ್ಟತೆ:- “ಅತ್ಯುತ್ತಮ ಸಾಹಿತ್ಯವು ಕ್ಷೋಭೆಗೊಳಗಾಗಿರುವವರನ್ನು ಶಾಂತಗೊಳಿಸುತ್ತದೆ ಮತ್ತು ಶಾಂತವಾಗಿರುವವರನ್ನು ಕ್ಷೋಭೆಗೀಡುವಾಡುತ್ತದೆ’’ ಎಂಬ ಒಂದು ಮಾತಿದೆ. ಈ ಮಾತು ಕಮಲಾದಾಸ್ ಅವರ ಸಾಹಿತ್ಯವನ್ನು ತುಂಬ ಕರಾರುವಾಕ್ಕಾಗಿ ವಿವರಿಸುತ್ತೆ ಅನ್ನಿಸುತ್ತದೆ. ನಮ್ಮ ಸಂಸಾರಗಳು, ಗಂಡು ಹೆಣ್ಣಿನ ಸಂಬಂಧ, ಪ್ರೀತಿ ಪ್ರೇಮ, ನಮ್ಮ ಬದುಕಿನ ಅರ್ಥ ಇವುಗಳ ಬಗೆಗಿನ ನಮ್ಮ ಈ ತನಕದ ಎಲ್ಲ ಊಹೆ, ನಂಬಿಕೆ, ಅನಿಸಿಕೆ, ಅಭಿಪ್ರಾಯಳಗನ್ನು ಒಮ್ಮೆ ಝಾಡಿಸಿ ಧೂಳು ಕೊಡವಿ ಪರಿಶೀಲಿಸುವಂತೆ, ಪ್ರಶ್ನಿಸುವಂತೆ ಮಾಡುತ್ತದೆ ಇವರ ಬರವಣಿಗೆ.

(ಕೆ.ಕೆ.ಗಂಗಾಧರನ್)
ಕೆ.ಕೆ.ಗಂಗಾಧರನ್ ಅವರ ಅನುವಾದ:- ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಭಾಷೆಗೆ ಅನುವಾದಕರ ಕೊಡುಗೆ ಅಪಾರ; ಆದರೆ ಈ ಕೊಡುಗೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ. ಅನುವಾದಗಳಿಲ್ಲದ ಕನ್ನಡ ಸಾಹಿತ್ಯವನ್ನು ಒಮ್ಮೆ ಊಹಿಸಿಕೊಂಡರೆ ಅದು ಎಷ್ಟು ಪೇಲವವಾಗಿ, ಬಡವಾಗಿ ಕಾಣತ್ತದೆ ಎಂಬುದು ಸಾಹಿತ್ಯಪ್ರಿಯರಿಗೆ ಅರ್ಥವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಕೆ.ಕೆ.ಗಂಗಾಧರನ್ ಅವರ ಕೊಡುಗೆ ಗಮನೀಯವಾದುದು. ಈಗಾಗಲೇ ಇವರು ತಮ್ಮ ಮೂರು ಕೃತಿಗಳಲ್ಲಿ ಕಮಲಾದಾಸ್ ಅವರ ನೂರಎಪ್ಪತೈದು ಕಥೆಗಳನ್ನು ಅನುವಾದಿಸಿದ್ದಾರೆ! ಈಗ ತಾವು ಅನುವಾದಿಸಿದ ಹಾಗೂ ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಈ ಲೇಖಕಿಯ ಕಥೆಗಳು ಮತ್ತು ಇನ್ನಷ್ಟು ಕಥೆಗಳನ್ನು ಸೇರಿಸಿ ಒಟ್ಟು ಮೂವತ್ತು ಕಥೆಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ. ಕಮಲಾದಾಸ್ ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ಬರೆದದ್ದು 245 ಕಥೆಗಳು. ಅದರಲ್ಲಿ ಇನ್ನೂರಕ್ಕೂ ಹೆಚ್ಚಿನ ಕಥೆಗಳನ್ನು ಕೆ.ಕೆ.ಗಂಗಾಧರನ್ ಅವರು ಕನ್ನಡಕ್ಕೆ ತಂದಿದ್ದಾರೆ ಅಂದರೆ, ಈ ಅನುವಾದಕರು ಕಮಲಾದಾಸ್ ಅವರಂತಹ ವಿಶಿಷ್ಟ ಲೇಖಕಿಯ ಸಾಹಿತ್ಯದ ಪ್ರಧಾನ ಭಾಗವೊಂದನ್ನು ಸಾಹಿತ್ಯಾಸಕ್ತ ಕನ್ನಡಿಗರಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂಬುದನ್ನು ನಾವು ನೆನೆಯಬೇಕು, ಮತ್ತು ಇದಕ್ಕಾಗಿ ಕನ್ನಡ ಸಾಹಿತ್ಯಕ್ಷೇತ್ರವು ಈ ಅನುವಾದಕರಿಗೆ ಆಭಾರಿಯಾಗಿರಬೇಕು.
ಗಂಗಾಧರನ್ ಅವರ ಕನ್ನಡ ಭಾಷಾ ಬಳಕೆಯನ್ನು ಕುರಿತು ಹೇಳುವುದಾದರೆ ಅದು ಸರಾಗವಾಗಿ ಓದಿಸಿಕೊಂಡು ಹೋಗುವ ಸುಗಮ ಕನ್ನಡ. ಎಷ್ಟಾದರೂ ಈ ಅನುವಾದಕರದು ಅನುವಾದದಲ್ಲಿ ಪಳಗಿದ ಕೈಯಲ್ಲವೇ. ಆದರೆ ಮಲಯಾಳಂ ಭಾಷೆಯ ಚಲನೆ, ಆ ನಾಡಿನ ಜೀವನಕ್ರಮ, ಇದಕ್ಕಿಂತ ಹೆಚ್ಚಾಗಿ ಕಮಲಾದಾಸ್ರು ಜೀವನವನ್ನು ಗ್ರಹಿಸುವುದರಲ್ಲಿ ಇರುವ ನಾವೀನ್ಯ ಇವುಗಳಿಂದಾಗಿ ಕನ್ನಡಕ್ಕೆ ಪರಿಚಿತವಲ್ಲದ ಕೆಲವು ಪದಪ್ರಯೋಗಗಳನ್ನು ಈ ಅನುವಾದಕರು ಮಾಡಿದ್ದಾರೆ. ಈ ಪದಗಳು ಕುತೂಹಲಕರವಾಗಿವೆ ಮತ್ತು ಕೆಲವೊಮ್ಮೆ ರೋಮಾಂಚ ಹುಟ್ಟಿಸುವಷ್ಟು ವಿಭಿನ್ನವಾಗಿವೆ. ಉದಾಹರಣೆಗೆ ಬುದ್ಧಿ ರಾಕ್ಷಸ, ಸಂಶಯಾಳು, ಪ್ರೇಮ ನೈರಾಶ್ಯ, ಸಮುನ್ನತರು, ಆಶ್ರಿತ ವತ್ಸಲಳು, ವಿವಾಹ ಘೋಷದ ಕಾರ್ಯಕರ್ತರು,… ಇಂತಹ ಪದಗಳು. ಒಂದು ರೀತಿಯ ಮಲಯಾಳೀ ರುಚಿಯುಳ್ಳ ಕನ್ನಡ ಪದಗಳು. ಕೇರಳದ ತೆಂಗಿನೆಣ್ಣೆ ಒಗ್ಗರಣೆಯ ಪಲ್ಯ-ಸಾರು ಹಾಗೂ ನೇಂದ್ರಬಾಳೆಯ ಖಾದ್ಯಗಳಿದ್ದಂತೆ. ಕನ್ನಡ ಶ್ರೀಮಂತವಾಗುವುದು ಇಂತಹ ಪದಪ್ರಯತ್ನಗಳಿಂದ ತಾನೇ. ಕನ್ನಡ ಸಾಹಿತ್ಯ ಖಜಾನೆಯ ಲೆಕ್ಕಪತ್ರ ಪರಿಶೀಲನೆ(ಆಡಿಟಿಂಗ್) ಮಾಡುವಾಗ ಅನುವಾದಕರ ಪಾಲು ಎಷ್ಟಿದೆ ಎಂದು ಎಣಿಸಲು ತುಂಬ ಸಮಯ, ವ್ಯವಧಾನ, ಪರಿಶ್ರಮ ಬೇಕಾಗುತ್ತವೆ, ಏಕೆಂದರೆ ಗಂಗಾಧರನ್ ಅವರಂತಹ ಅನುವಾದಕರ ಕೊಡುಗೆ ಅಷ್ಟು ಅಗಾಧವಾಗಿದೆ.
ಇಂತಹ ಒಳ್ಳೆಯ ಕೃತಿಯೊಂದನ್ನು ಪ್ರಕಟಿಸಿದ `ಅಂಕಿತ ಪುಸ್ತಕ’ ಸಂಸ್ಥೆಗೂ ಸಹ ನಮ್ಮ ಅಭಿನಂದನೆ ಸಲ್ಲಬೇಕು.

ಬರಹವೆಂಬುದು ಗಂಡಾಳಿಕೆಯ ಜಗತ್ತಿನಲ್ಲಿ ಹೆಣ್ಣಿನ ಮಟ್ಟಿಗೆ ಬಿಡುಗಡೆ. ಅನುವಾದವೆಂಬುದು ಏಕಭಾಷೆಯ ಸೆರೆಯಿಂದ ಪುಸ್ತಕಕ್ಕೆ ಬಿಡುಗಡೆ. ಕೆ.ಕೆ.ಗಂಗಾಧರನ್ರು ಅನುವಾದಿಸಿದ ಕಮಲಾದಾಸ್ರ ಪುಸ್ತಕಗಳು ಅಂತಹ ಎರಡೂ ಬಿಡುಗಡೆಗಳಿಗೆ ಸಂಕೇತವಾಗಿದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
