ಮುಟ್ಟಿಸಿಕೊಂಡವ…
ಅದೆಷ್ಟು ಬೆವರು
ಮೆತ್ತಿಸಿಕೊಂಡು ಹೊಕ್ಕ
ಗರಿ ಗರಿಯ ಗಾಂಧಿ…
ಮುಟ್ಟಿಸಿಕೊಂಡಿದ್ದಾನೆ..
ಮೀನು ಪೇಟೆಯಲಿ
ಇಡೀ ಸಮುದ್ರದ ಉಪ್ಪನ್ನ..
ಮಂಡಕ್ಕಿ ಭಟ್ಟಿಯಲಿ
ಸಾಬಿಯು ಕುಡಿದು ಉಗುಳಿದ ಕಪ್ಪು ಹೊಗೆಯನ್ನ…
ಹರಿದ ಚಪ್ಪಲಿ ಹೊಲೆದ
ಚಮ್ಮಾರನ ಕೈ ಸ್ಪರ್ಶವನ್ನ…
ಪತೀತವಾಗಿರುವ ಗಾಂಧಿ…
ಮುಟ್ಟಿಸಿಕೊಂಡಿದ್ದಾನೆ…
ಹಣ್ಣು ಹಣ್ಣಾದ ಮುದುಕಿ
ಮುಪ್ಪಡರದಂತೆ ಬಟ್ಟೆನೇಯ್ದ ಸೆರಗನ್ನ….
ಹೇಸಿಗೆ ಬಳಿದು ತೊಳೆದು..
ಮುದ್ದಾಡುವ ಮುದುಕಿಯ ಕುಪ್ಪಸವನ್ನ..
ಕಾಮಟಿ ಪುರದ ಕುವರಿಯ
ಎದೆಯ ಸುತ್ತಳತೆ ಬಲ್ಲ…
ಮೊಲೆಯ ಹಾಲು
ಹಾಲಾ ಹಲದ ಬೆವರನ್ನ…
ಅಂತರಂಗ ಹೊಕ್ಕು ಬಂದಾಗಲೇ
ಅಂಗಾತ ಕಳೆದಿದ್ದಾನೆ
ಲೋಕದ ಸೂತಕವನ್ನ ….
ಗಾಂಧಿ ಮುಟ್ಟಿಸಿಕೊಂಡಿದ್ದಾನೆ….
ಮುಟ್ಟಿಸಿ ಕೊಳ್ಳದವರ ನಾಡಲ್ಲಿ..
ಮುಟ್ಟಾದವರ
ಮುಟ್ಟಿ …
ಕಳೆದಿದ್ದಾನೆ ಹಟ್ಟಿಯ ಮೈಲಿಗೆಯನ್ನ…
ನಿತ್ಯದ ಮಾರುಕಟ್ಟೆಯಲಿ…
ಥೇಟ್
ಯುದ್ಧ..
ಉನ್ಮಾದ..
ಧರ್ಮ…
ತಪ್ಪಿಸಿಕೊಳ್ಳಲೆಂದೆ ಕಾಮ ಪುರಾಣದ…
ಹಿತ್ತಲ..
ಬೆತ್ತಲ..
ಕತ್ತಲ..ದ
ಕಥೆಯಿಂದ….
ಒಂದನೊಂದು ಡಿಕ್ಕಿ ಹೊಡೆದು..
ದಿಗಿಲುಗೊಂಡ..
ಬಣ್ಣ
ಗೇಡಿ
ವ್ಯಾಪಾರಿಯಿಂದ..
ಗಾಂಧಿ ಈಗಲೂ
ಮುಟ್ಟಿಸಿಕೊಂಡಿದ್ದಾನೆ….
ಗಂಗಾಳದ ಅನ್ನ
ಅಂಗಳದ ಬಿನ್ನ
ತಿಂಗಳದ ಬಿಳಿಪನ್ನ
ವ್ಯಾಪಾರಕ್ಕಿಟ್ಟ ಲೋಕದ…
ಅನೈತಿಕ ರಾಜಕಾರಣವನ್ನ…
ಈಗಲೂ…
ಗಾಂಧಿ ಅಂದ್ರೆ
ಬರೀ ನೋಟಲ್ಲ..
ಗುಂಡಿಗೆ ಒಡ್ಡಿದ ಎದೆ
ಧರ್ಮಾಂದರಿಗೆ ಕೊಟ್ಟ ಕನ್ನಡಕ…
ಸುಳ್ಳಿಗೆ ಎದುರಾದ ಪೂರ್ಣ ಸತ್ಯ…
ಇಷ್ಟೇ ಅಂದ್ರ್ ಇಷ್ಟೇ
ಗಾಂಧಿ ಅಂದ್ರ್ ಮುಟ್ಟಿಸಿಕೊಂಡವ….
ಬರೀ ಮುಟ್ಟಿಸಿಕೊಂಡವ….


ಸೂಕ್ಷ್ಮ ನೋಟದ ಪರಿಣಮಕಾರಿ ಕವಿತೆ.