ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ
ಒಮ್ಮೆ ನನ್ನನ್ನು ಶಿಕ್ಷಕ ತರಬೇತಿಗೆ ನಿಯೋಜಿಸಿದ್ದರು. ಆ ತರಬೇತಿಯನ್ನು ಮುಗಿಸಿ ನಾನು ಶಾಲೆಗೆ ಹೋದೆ. ಆಗ 5 ನೇ ತರಗತಿಯ ಮಕ್ಕಳು ನನಗೆ “ಯಾಕೆ ಸರ್ 3 ದಿನದಿಂದ ಶಾಲೆಗೆ ಬಂದಿರಲಿಲ್ಲ?” ಎಂದು ಕೇಳಿದರು. ಆಗ “ನಾನು ತರಬೇತಿಗೆ ಹೋಗಿದ್ದೆ ಅದಕ್ಕೆ ಬರಲಾಗಲಿಲ್ಲ” ಎಂದೆ. ಆಗ ಅವರು “ಯಾವ ತರಬೇತಿ?” ಎಂದು ಕೇಳಿದರು. ನಾನು ತಕ್ಷಣ ತಮಾಷೆಗಾಗಿ “ಬುದ್ಧಿ ಪರೀಕ್ಷೆ ಮಾಡುವ ತರಬೇತಿ” ಎಂದೆ. ಅದಕ್ಕೆ ಮಕ್ಕಳು “ಬುದ್ಧಿ ಪರೀಕ್ಷೇನಾ! ಅದು ಹೇಗೆ?” ಎಂದು ಕೇಳಿದರು.
ಆಗ “ನಾನು ಒಬ್ಬ ಹುಡುಗನಿಗೆ ಒಂದು ಖಾಲಿ ಲೋಟ, ಮತ್ತೊಬ್ಬನಿಗೆ ತುಂಬಿದ ಲೋಟ ತರಲು ತಿಳಿಸಿದೆನು… ” ಆಗ ಆ ಹುಡುಗರು ತಂದರು, ನಾನು ಆಗ ಖಾಲಿ ಲೋಟವನ್ನು ಬಡಿದೆ. ಅದೇ ರೀತಿ ತುಂಬಿದ ಲೋಟವನ್ನೂ ಸಹ ಬಡಿದೆ. ಮಕ್ಕಳಿಗೆ “ನೀವು ಏನು ವೀಕ್ಷಣೆ ಮಾಡಿದಿರಿ?” ಎಂದು ಪ್ರಶ್ನಿಸಿದೆ. ಅದಕ್ಕೆ ಮಕ್ಕಳು “ಸರ್ ಖಾಲಿ ಲೋಟವು ಹೆಚ್ಚು ಶಬ್ದ ಉಂಟು ಮಾಡಿತು. ಆದರೆ ತುಂಬಿದ ಲೋಟವು ಕಡಿಮೆ ಶಬ್ದವನ್ನು ಉಂಟು ಮಾಡಿತು” ಎಂದರು. ಆಗ ನಾನು ಮಕ್ಕಳಿಗೆ “ಮಕ್ಕಳೇ ಇದೇ ಆಧಾರದಲ್ಲಿ ನಾನು ನಿಮಗೆ ಬುದ್ಧಿಶಕ್ತಿ ಹೇಳುವುದನ್ನು ಕಲಿತಿದ್ದೇನೆ” ಎಂದೆ. ಆಗ ಮಕ್ಕಳು ನನ್ನ ಮಾತು ನಂಬಿದವರಂತೆ ಕಂಡರು.
ಒಬ್ಬ ಹುಡುಗ ನನ್ನ ಬಳಿ ಬಂದು “ಸರ್, ನನ್ನ ಬುದ್ಧಿ ಶಕ್ತಿ ಎಷ್ಟಿದೆ? ಹೇಳಿ” ಎಂದು ಕೇಳಿದ. ಆಗ ನಾನು ಅವನ ತಲೆ ಬಡಿದಂತೆ ನಟಸಿ ಅವನ ಬುದ್ಧಿ ಶಕ್ತಿ ಹೇಳಿದೆ. ಇದನ್ನು ಅವರು ಓದುವ ಆಧಾರದ ಮೇಲೆ ನಾನು ಹೇಳಿದೆ!! ಉದಾಹರಣೆಗೆ ಚೆನ್ನಾಗಿ ಓದುವ ವಿದ್ಯಾರ್ಥಿಯಾಗಿದ್ದರೆ ತುಸು ಹೆಚ್ಚು, ಕಡಿಮೆ ಓದುವ ಮಗುವಾಗಿದ್ದರೆ ಕಡಿಮೆ ಹೇಳುತ್ತಿದ್ದೆ.
ಆಗ ಇದೇ ತರಗತಿಯ ಮಕ್ಕಳು ಸರತಿಯ ಸಾಲಿನಲ್ಲಿ ನಿಂತು ತಮ್ಮ ತಮ್ಮ ಬುದ್ಧಿ ಶಕ್ತಿ ಎಷ್ಟಿದೆ ಎಂದು ಕೇಳಲು ಶುರು ಮಾಡಿದರು, ನಾನು ತಲೆ ಬಡಿದಂತೆ ನಟಿಸುತ್ತಾ ಅವರ ಬುದ್ಧಿಶಕ್ತಿ ಎಷ್ಟಿದೆ ಎಂದು ಹೇಳ ತೊಡಗಿದೆ. ಮಕ್ಕಳು ಅನುಕರಣೆ ಮಾಡುವುದು ಜಾಸ್ತಿ, ಈಗ ಮಕ್ಕಳು ನನ್ನಂತೆ ಅನುಕರಣೆ ಮಾಡಲು ಶುರು ಮಾಡಿದರು.
ಆಗ ನಾನು, “ನಿಮಗೆ ಹೇಳಲು ಬರುವುದಿಲ್ಲ, ಅದಕ್ಕೆಂದೇ ತರಬೇತಿ ಇದೆ” ಎಂದೆ. ಆಗ ಮಕ್ಕಳು ನನ್ನ ಮಾತನ್ನು ನಂಬಿದರು. ನಾನು ತರಗತಿಯ ಎಲ್ಲ ಮಕ್ಕಳಿಗೂ ಹೇಳುವುದನ್ನು ಮುಗಿಸಿದಾಗ ಒಬ್ಬ ಹುಡುಗ ಎದ್ದು ನಿಂತು “ಮತ್ತೆ ಯಾವಾಗ ಬುದ್ಧಿ ಶಕ್ತಿ ಪರೀಕ್ಷೆ ಮಾಡುತ್ತೀರಿ?” ಎಂದು ಕೇಳಿದ. ಅದಕ್ಕೆ ನಾನು “ಪ್ರತಿ ಶುಕ್ರವಾರ ಮಾಡುತ್ತೇನೆ” ಎಂದೆ. ಮತ್ತೊಬ್ಬ ಎದ್ದು ನಿಂತು “ಸರ್, ಬುದ್ಧಿ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆ?” ಎಂದು ಕೇಳಿದ. ಅದಕ್ಕೆ ನಾನು ಪ್ರತಿದಿನವೂ ತಪ್ಪದೇ ಶಾಲೆಗೆ ಬಂದು ಗುರುಗಳು ಕೊಟ್ಟ ಹೋಂ ವರ್ಕನ್ನು ಮಾಡಿದರೆ ಬುದ್ಧಿ ಶಕ್ತಿ ಜಾಸ್ತಿ ಆಗುತ್ತದೆ. ಅದೇ ರೀತಿ ಹೆಚ್ಚು ಓದಬೇಕು ಎಂದು ತಿಳಿಸಿದೆ. ಆಗ ಮತ್ತೊಬ್ಬ ವಿದ್ಯಾರ್ಥಿ ಎದ್ದು ನಿಂತು “ಸರ್ ಯಾರ ಬುದ್ಧಿ ಶಕ್ತಿ ಹೆಚ್ಚು ಇರುತ್ತದೆ?” ಎಂದು ಕೇಳಿದ. ನಾನು ಆಗ ನಮ್ಮ ಶಾಲೆಯ ಗೋಡೆಯ ಮೇಲೆ ತೂತು ಹಾಕಿದ್ದ ವಿಜ್ಞಾನಿಗಳ ಫೋಟೋ ತೋರಿಸಿ “ಇವರ ಬುದ್ಧಿ ಶಕ್ತಿಯು ಹೆಚ್ಚು ಇರುತ್ತದೆ” ಎಂದೆ. ಆಗ ಅವನು ಎಷ್ಟು ಇದೆ? ಎಂದು ಮರು ಪ್ರಶ್ನಿಸಿದ. ನಾನು ಅದಕ್ಕೆ 140 ಅಥವಾ ಅದಕ್ಕಿಂತಲೂ ಹೆಚ್ಚು ಇರಬಹುದು ಎಂದೆ. ಹುಡುಗರು ತುಂಬಾ ಆಶ್ಚರ್ಯ ಪಟ್ಟರು. ಏಕೆಂದರೆ ನಾನು ಆ ಹುಡುಗರ ಬುದ್ಧಿ ಶಕ್ತಿಯನ್ನು 90 ನ್ನು ಮೀರುವಂತೆ ಹೇಳಿರಲಿಲ್ಲ! ಕೆಲ ಹುಡುಗರಂತೂ “ಸರ್, ಮುಂದಿನ ವಾರ 100 ಅನ್ನು ದಾಟಿಸುವಂತೆ ನಮ್ಮ ಬುದ್ಧಿ ಶಕ್ತಿ ಹೆಚ್ಚು ಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದರು.
ಈ ಮಾತಿಗೆ ನಾನು ಮನದಲ್ಲೇ ನಗುತ್ತ “ನೀವು ಖಂಡಿತ ಮಾಡಿಕೊಳ್ಳಬಹುದು, ಆದರೆ ಒಂದು ದಿನವೂ ಶಾಲೆ ತಪ್ಪಿಸಬಾರದು” ಎಂದೆ. ಅದಕ್ಕೆ ಮಕ್ಕಳು ಒಪ್ಪಿದರು.
ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಕೆಲವರಂತೂ ನಾನು ಸ್ಟಾಫ್ ರೂಂ ನಲ್ಲಿ ಕುಳಿತಿದ್ದಾಗಲೂ ಬುದ್ಧಿ ಶಕ್ತಿ ಪರೀಕ್ಷಿಸಿ ಹೇಳಿ ಎಂದು ಕೇಳಿಕೊಂಡು ಬರುತ್ತಿದ್ದರು. ಆಗ ಬೇರೆ ಶಿಕ್ಷಕರಿಗೆ “ಮಕ್ಕಳಿಗೆ ಇದು ಸುಳ್ಳು ಎಂದು ಹೇಳಬೇಡಿ” ಎಂದು ಕೇಳಿಕೊಂಡೆ. ಅವರು ಇದಕ್ಕೆ ಒಪ್ಪಿದರು.
ಈ ವಿಷಯವನ್ನು ನಾನು ಮರೆತಿದ್ದೆ, ಮಾರನೇ ಶುಕ್ರವಾರ ಶಾಲೆಯಲ್ಲಿ ಶಾರದ ಪೂಜೆಯನ್ನು ಮುಗಿಸಿದ ನಂತರ ತರಗತಿಯ ಹೊರಗಡೆ ಬಂದರೆ ಮಕ್ಕಳೆಲ್ಲಾ ಉದ್ದನೆಯ ಸಾಲಿನಲ್ಲಿ ನಿಂತಿದ್ದರು. ನಾನು “ಏಕೆ ನಿಂತಿದ್ದೀರಿ?” ಎಂದಾಗ ಅವರು “ಸರ್, ಕಳೆದ ವಾರ ಹೇಳಿದ್ದೀರಲ್ಲಾ ಅದೇ ರೀತಿ ಈ ವಾರವೂ ಬುದ್ಧಿ ಶಕ್ತಿ ಹೇಳಿ. ನಮಗೆ ನಮ್ಮ ಬುದ್ಧಿಶಕ್ತಿ ತಿಳಿಯಲು ಕುತೂಹಲವಿದೆ” ಎಂದರು. ನನಗೆ ಇದೊಳ್ಳೇ ಪೀಕಲಾಟ ಶುರುವಾಯ್ತಲ್ಲ ಎಂದೆನಿಸಿತು.
ಆದರೂ ಇದನ್ನು ತೋರ್ಪಡಿಸದೇ ಅವರಿಗೆ ತರಗತಿಯ ಒಳಗೆ ಹೋಗಬೇಕೆಂದು ತಿಳಿಸಿದೆ. ಮಕ್ಕಳು ತಮ್ಮ ಬುದ್ಧಿ ಶಕ್ತಿ ಹೇಳಲು ಬಂದಾಗ ಅವರಿಗೆ ಈ ಹಿಂದೆ ಹೇಳಿದ್ದು ನನಗೆ ಮರೆತು ಹೋಗಿತ್ತು. ಇದರ ಬಗ್ಗೆ ಮಕ್ಕಳಿಗೇ ಕೇಳಿದೆ!! ಅವರು ಇದನ್ನು ಬರೆದುಕೊಂಡಿದ್ದರು! ಇಡೀ ವಾರ ಪ್ರತೀ ದಿನವೂ ಶಾಲೆಗೆ ಬಂದ ವಿದ್ಯಾರ್ಥಿಗೆ ಒಂದೆರಡು ಹೆಚ್ಚು ಮಾಡಿ ಬುದ್ಧಿ ಶಕ್ತಿ ಹೇಳಿದೆ. ಸರಿಯಾಗಿ ಹೇಳಿದ ಗೃಹಪಾಠ ಬರೆಯದಿದ್ದವರಿಗೆ ಒಂದೆರಡು ಕಮ್ಮಿ ಹೇಳಿದೆ. ಮಕ್ಕಳೇ ಈಗ “ಸರ್, ಇವನು, ಸರಿಯಾಗಿ ಬರೆದಿರಲಿಲ್ಲ. ಅದಕ್ಕೆ ಇವನದ್ದು ಕಮ್ಮಿಯಾಗಿದೆ ಎಂದು ಹೇಳತೊಡಗಿದರು. ನಾನು ‘ಹೌದು’ ಎಂದು ತಲೆಯಾಡಿಸಿದೆ. ಜಾಸ್ತಿ ಹೇಳಿದವರ ಮುಖದಲ್ಲಿ ಖುಷಿಯು ಎದ್ದು ಕಾಣುತ್ತಿತ್ತು. ಕಮ್ಮಿ ಆದವರು ಈ ವಾರ ಹೆಚ್ಚು ಮಾಡಿಕೊಳ್ಳುತ್ತೇನೆ ಎಂದು ತಮ್ಮ ತಮ್ಮ ಲ್ಲೇ ಮಾತಾಡಿಕೊಳ್ಳುತ್ತಿದ್ದುದನ್ನು ನೋಡಿದೆ. ಮಕ್ಕಳು ಇದರಿಂದ ಪ್ರೋತ್ಸಾಹಿತರಾದಂತೆ ಕಂಡುಬಂದಿದ್ದನ್ನು ನೋಡಿ ನನಗೆ ಈ ಸತ್ಯ ಮಕ್ಕಳಿಗೆ ಗೊತ್ತಾಗಬಾರದು ಎಂದು ನಿರ್ಧರಿಸಿಕೊಂಡೆ.

ಮಕ್ಕಳಿಗೆ ಒಂದು ದಿನವೂ ಶಾಲೆಯನ್ನು ನಾವು ತಪ್ಪಿಸಬಾರದು ಎಂಬ ಭಾವನೆ ಮೂಡಿಸುವಲ್ಲಿ ಇದು ನೆರವಾಯ್ತು!!
ಕೆಲ ಹುಡುಗರಂತೂ ಸೇವಂತಿಗೆ ಹೂವನ್ನು ಕೊಯ್ಯಲು ಹೋಗುತ್ತಿದ್ದರು. ಇದರಿಂದಾಗಿ ಶಾಲೆಯನ್ನು ತಪ್ಪಿಸುತ್ತಿದ್ದರು. ಈ ಮಕ್ಕಳಿಗೆ ನಾವು “ಶಾಲೆ ತಪ್ಪಿಸಬಾರದು” ಎಂದು ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ. ಆದರೆ ಈ ಒಂದು ಬುದ್ಧಿಶಕ್ತಿಯ ಪ್ರಯೋಗ ಅವರನ್ನು ಪ್ರತಿದಿನವೂ ಶಾಲೆಗೆ ಬರುವಂತೆ ಬದಲಾಯಿಸಿತ್ತು!!
ನಿಮಗೆಲ್ಲಾ ಅನಿಸಬಹುದು. ಶಿಕ್ಷಕರಾಗಿ ಸುಳ್ಳು ಹೇಳೋದು ಸರಿಯಾ? ಅಂತ. ಆದರೆ ಕೆಲವೊಮ್ಮೆ ಅನಿವಾರ್ಯ. ಹಾಗಂತ ಒಂದು ಸುಳ್ಳನ್ನು ದುರುದ್ದೇಶಕ್ಕೆ ಹೇಳಿದರೆ ಅದು ತಪ್ಪು ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
“ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂಚ ನಾನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ ||”
ಇದರರ್ಥ ಹೀಗಿದೆ:
ಯಾವಾಗಲೂ ಸತ್ಯವಾದ ಮತ್ತು ಎಲ್ಲರಿಗೂ ಪ್ರಿಯವಾದ (ಹಿತವಾದ) ಮಾತುಗಳನ್ನೇ ಆಡಬೇಕು.
ನಾವು ಆಡುವ ಸತ್ಯವಾದ ಮಾತಿನಿಂದ ಬೇರೆಯವರಿಗೆ ತೀವ್ರವಾದ ನೋವು ಅಥವಾ ಅಪ್ರಿಯವಾಗುವುದಾದರೆ, ಅಂತಹ ಸತ್ಯವನ್ನು ಹೇಳಬಾರದು (ಅಂದರೆ ಮೌನವಾಗಿರಬೇಕು ಅಥವಾ ಹಿತವಾಗಿ ನುಡಿಯಬೇಕು).
ಹಾಗೆಯೇ, ಬೇರೆಯವರಿಗೆ ಸಂತೋಷವಾಗುತ್ತದೆ ಎಂಬ ಕಾರಣಕ್ಕಾಗಿ ಯಾವುದೇ ಸುಳ್ಳು (ಅನೃತ) ಮಾತನ್ನು ಪ್ರಿಯವೆಂದು ಹೇಳಬಾರದು.
ಮನುಷ್ಯನು ಅನುಸರಿಸಬೇಕಾದ ಸದಾಚಾರ ಮತ್ತು ಸತ್ಯ-ಧರ್ಮದ ಮಾರ್ಗ ಇದೇ ಆಗಿದೆ ಎಂದು ಹೇಳುತ್ತಾರೆ. ಈ ಮಾತನ್ನು ಪಾಲಿಸಬೇಕು.ಆದರೆ ಪರರಿಗೆ ಒಳಿತಾಗುವುದಾದರೆ ಪರರಿಗೆ ಮೋಸ ಮಾಡದ ಯಾವುದೇ ಸುಳ್ಳು ತಪ್ಪಲ್ಲ ಎಂಬುದು ನನ್ನ ಭಾವನೆ.
ಈ ಬುದ್ಧಿಶಕ್ತಿಗೆ ಸಂಬಂಧಿಸಿದಂತೆ ಇನ್ನೂ ತಮಾಷೆಯ ಪ್ರಸಂಗವಿದೆ. ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ…

ಲಾಸ್ಟ್ ಬಟ್ ನಾಟ್ ಲೀಸ್ಟ್ ಮಾತು:
ನಮ್ಮ ಹಿರಿಯರು ನಾವು ಒಂದೊಮ್ಮೆ ತಪ್ಪು, ಮೋಸ ಮಾಡಿದರೆ ನಾವು ಸತ್ತ ನಂತರ ನಮ್ಮನ್ನು ಸುಟ್ಟ ಎಣ್ಣೆಯಲ್ಲಿ ಕರಿಯುತ್ತಾರೆ. ಪಕ್ಷಿಗಳಿಂದ ಕುಕ್ಕಿಸುತ್ತಾರೆ ಎಂಬಿತ್ಯಾದಿ ಮಾತುಗಳಿಂದ ನಾವು ತಪ್ಪು ಮಾಡದಂತೆ ನಮ್ಮ ಹಿರಿಯರು ನಮ್ಮಲ್ಲಿ ಜಾಗೃತಿ ಮೂಡಿಸಲು ಹೇಳುತ್ತಿದ್ದರು… ಆ ಪಾಠಗಳು ಇಂದಿಗೂ ನಮ್ನ ಸ್ಮೃತಿ ಪಟಲದಲ್ಲಿ ಹಾಗೇ ಕೂತು ನಮ್ಮನ್ನು ತಪ್ಪು ಮಾಡದಂತೆ ತಡೆದಿವೆ. ಹಾಗಂತ ಇದನ್ನು ನಮ್ಮ ಹಿರಿಯರಿಗೆ ಇದರ ಬಗ್ಗೆ ಸಾಕ್ಷಿ ಕೇಳಿದರೆ ಅವರು ಕೊಡಲು ಸಾಧ್ಯವೇ…!!

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

