Advertisement
“ಕೊರವಂಜಿ” ಹಾಕಿಕೊಟ್ಟ ಹಾಸ್ಯೋತ್ಸವದ ಹಾದಿ…: ಎಚ್. ಗೋಪಾಲಕೃಷ್ಣ ಸರಣಿ

“ಕೊರವಂಜಿ” ಹಾಕಿಕೊಟ್ಟ ಹಾಸ್ಯೋತ್ಸವದ ಹಾದಿ…: ಎಚ್. ಗೋಪಾಲಕೃಷ್ಣ ಸರಣಿ

1996ರ ಹಾಸ್ಯೋತ್ಸವವನ್ನು ನಾ. ಕಸ್ತೂರಿ ಅವರ ನೆನಪಿಗೆ ಮಾಡಿದ್ದು. ನಾ. ಕ ಅವರನ್ನು ಕುರಿತ ಎರಡು ಪುಸ್ತಕಗಳು ಅಂದು ಕನ್ನಡ ಪ್ರಕಟಣಾ ಪ್ರಪಂಚದಲ್ಲಿಯೇ ಒಂದು ವಿನೂತನ ದಾಖಲೆ ನಿರ್ಮಿಸಿದವು. ಗೋಪಾಲಕೃಷ್ಣ (ನಾನು) ಮತ್ತು ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಕಸ್ತೂರಿ’ಹಾಗೂ ಶ್ರೀ ಚಂದ್ರ ಮೋಹನ್ ಜತೆಗೆ ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಶತಕಂ’  ಎರಡೇ ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಮಾರಾಟಗೊಂಡವು! ಇದರ ಮಹತ್ವ ನಮ್ಮ ಅರಿವಿಗೆ ಬಂದದ್ದು ತಡವಾಗಿ. ತಡವಾಗಿ ಅಂದರೆ ಕೆಲವು ವರ್ಷಗಳ ನಂತರ. ಅದರಿಂದ ಇಂತಹ ಮಹತ್ತರ ಸಾಧನೆ ಎಲ್ಲೂ ದಾಖಲೆ ಆಗಲಿಲ್ಲ.
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೧ನೇ ಬರಹ ನಿಮ್ಮ ಓದಿಗೆ

ಹಿಂದಿನ ಸಂಚಿಕೆಗೆ ಹೀಗೆ ಮುಕ್ತಾಯ ಹಾಡಿದ್ದೆ…

ಎಲ್ಲೆಲ್ಲಿಗೋ ಎಳೆದುಕೊಂಡು ಹೋಗ್ತಾ ಇದಾನೆ ಇಂವ ಅಂತ ನಿಮ್ಮ ಮನಸಿಗೆ ಬಂದಿದೆ ಅಂತ ಗೊತ್ತು. ಸದರಿ ಪೀಠಿಕೆ ಯಾಕೆ ಹಾಕಿದೆ ಅಂತ ಈಗ ವಿಷಯಕ್ಕೆ ಬರ್ತೀನಿ.

ಶ್ರೀ ಎಚ್ ಎಲ್ ಕೇಶವಮೂರ್ತಿ ಅವರ ಭೇಟಿ ಮತ್ತೊಮ್ಮೆ ಆಯಿತು ಅಂದೆ. ಇವರ ಭೇಟಿ ಮೊದಲೇ ಆಗಿತ್ತು. ಈ ಬಾರಿ ಸಿಕ್ಕಿದಾಗ ನಾ. ಕಸ್ತೂರಿ ಅವರ ವಿಷಯ ಬಂತು.  ಈ ವೇಳೆಗೆ ಹಾಸ್ಯಬ್ರಹ್ಮ ನಗೆ ಬರಹಗಾರರ ಒಕ್ಕೂಟವನ್ನು ಒಂದು ಟ್ರಸ್ಟ್ ಆಗಿ ನೋಂದಣಿ ಮಾಡಬೇಕಾದ ಯೋಚನೆ ಬಂದಿತು. ಅದರ ಸಂಬಂಧ ಶ್ರೀ ಅರಾ ಮಿತ್ರ ಅವರನ್ನು ಮಹಾ ಪೋಷಕರು ಎಂಬುದಾಗಿ ಒಪ್ಪಿಗೆ ಪಡೆದೆವು. ಶ್ರೀ ಮಿತ್ರಾ ಅವರು ಹಿಂದಿನoತೆಯೇ ಮುಂದೆ ಸಹ ನಮ್ಮೆಲ್ಲ ಚಟುವಟಿಕೆಗಳಿಗೆ ಸ್ಫೂರ್ತಿ ಆದರು. ಕೊರವಂಜಿ ಅಪರಂಜಿ ಟ್ರಸ್ಟ್ ಈಗಾಗಲೇ ನೋಂದಣಿ ಆಗಿತ್ತು. ಮುಂದೆ ಈ ಎರಡೂ ಟ್ರಸ್ಟ್‌ಗಳು ಸೇರಿ ಹಾಸ್ಯ ಸಾಹಿತ್ಯ ಲೋಕದಲ್ಲಿ ಇತಿಹಾಸ ಸೃಷ್ಟಿಸಿದವು. ಅದರ ಕೆಲವು ನೆನಪುಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ…

ಈಗ ಮುಂದಕ್ಕೆ

ಟ್ರಸ್ಟ್ ಮಾಡುವ ಯೋಚನೆ ಬಂದಿದ್ದು ಅದನ್ನು ಮುಂದೆ ಕೆಲ ವರ್ಷಗಳ ನಂತರ ಕಾರ್ಯರೂಪಕ್ಕೆ ತಂದೆವು. ಈ ನಡುವೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆವು. ಕಸ್ತೂರಿ ಅವರ ಸಾಹಿತ್ಯದ ಬಗ್ಗೆ ಕೇಶವಮೂರ್ತಿ ಅವರು ಕಾರ್ಯನಿರತರಾಗಿದ್ದರು.

ಕಸ್ತೂರಿ ಅವರ ಸಮಗ್ರ ಸಾಹಿತ್ಯ ಕುರಿತ ಹಾಗೆ ಸಾಹಿತ್ಯ ಅಕಾಡೆಮಿಗೆ ಶ್ರೀಎಚ್ ಎಲ್ ಕೇಶವಮೂರ್ತಿ ಅವರು ಕೆಲಸ ಮಾಡುತ್ತಿದ್ದರು. ಮಂಡ್ಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಕೇಶವ ಮೂರ್ತಿ ಅವರು ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದರು… ಇವರು ಹೊರತಂದ ನಾ. ಕಸ್ತೂರಿ ಅವರ ಸಂಕಲನದ ನೆರವು ಈಗಲೂ ನಾನು ಪಡೆಯುತ್ತೇನೆ. ಅದರ ವಿಷಯ ಹೇಳುತ್ತಾ ಡಿಸೆಂಬರ್ 25 ನಾ. ಕಸ್ತೂರಿ ಅವರು ಜನಿಸಿದ ದಿವಸ, ಅವತ್ತೇ ಹಾಸ್ಯೋತ್ಸವ ಮಾಡಿದರೆ ಹೇಗೆ ಎನ್ನುವ ಸಲಹೆ ನೀಡಿದರು. ಬಹುಶಃ ಇಂತಹ ಒಂದು ಸಲಹೆಗೆ ನಾವು ನಮ್ಮ ಅರಿವೇ ಇಲ್ಲದೇ ಕಾದಿದ್ದೆವು ಎಂದು ಕಾಣಿಸುತ್ತೆ. ನಾ.ಕಸ್ತೂರಿ ಅವರು ಹುಟ್ಟಿದ ದಿವಸವನ್ನೇ ಹಾಸ್ಯೋತ್ಸವ ದಿವಸ ಎಂದು ತೀರ್ಮಾನಿಸಿದೆವು.

ಕನ್ನಡದಲ್ಲಿ ರಾಶಿ (ಡಾ. ಎಂ ಶಿವರಾಮ್ )ಅವರು ಹಾಸ್ಯಮಾಸಪತ್ರಿಕೆ ಕೊರವಂಜಿ ಶುರುಮಾಡಿದಾಗ ಅವರ ನೆರವಿಗೆ ನಿಂತವರು ನಾ. ಕಸ್ತೂರಿ. ಅವರ ಮಗನ ಮೂಲಕ ರಾಶಿ ಅವರ ಪರಿಚಯವಾಯಿತು ಮತ್ತು ಕೊರವಂಜಿ ಪತ್ರಿಕೆಗೆ ನಾಕ ಅವರು ಸುಮಾರು ಗೂಢ ನಾಮಗಳಲ್ಲಿ ಲೇಖನ ಬರೆದರು. ಕೊರವಂಜಿ ಪತ್ರಿಕೆಯ ಇಪ್ಪತ್ತೈದು ವರ್ಷಗಳ ಸಂಚಿಕೆಯನ್ನು ಶ್ರೀ ಶಿವಕುಮಾರ್ (ಅಪರಂಜಿ ಸಂಪಾದಕರು, ರಾಶಿ ಅವರ ಮಗ) ವರ್ಷಕ್ಕೆ ಒಂದರಂತೆ ಬೈಂಡ್ ಮಾಡಿಸಿ ಇಟ್ಟಿದ್ದರು. ಅವರ ಮನೆಗೆ ಹೋದಾಗಲೆಲ್ಲ, ಶೋ ಕೇಸ್‌ನಲ್ಲಿ ಈ ಪುಸ್ತಕ ನೋಡಿದಾಗಲೆಲ್ಲ ಒಂದು ರೀತಿ ಪುಳಕ ಅನುಭವಿಸುತ್ತಿದ್ದೆ. ಕೊರವಂಜಿ ಡಿಜಿಟಲ್ ರೂಪದಲ್ಲಿ ಹೊರಬಂದಾಗ ಅದರ disc ಸುಮಾರು ಸಾಹಿತ್ಯಾಸಕ್ತರಿಗೆ ತಲುಪಿಸಿದ್ದೆ. ಇದಕ್ಕೂ ಹಿಂದೆ ಅಂದರೆ ಅರವತ್ತರ ದಶಕದ ಮಧ್ಯದಲ್ಲಿ ನಮ್ಮ ಮನೆಯಲ್ಲಿ ಕೊರವಂಜಿ ಸಂಚಿಕೆಗಳನ್ನು ನಮ್ಮ ಮೊದಲನೇ ಹಾಗೂ ಎರಡನೇ ಅಣ್ಣ ಬೈಂಡ್ ಮಾಡಿಸಿ ಜೋಪಾನವಾಗಿ ಇಟ್ಟಿದ್ದರು. ಕೊರವಂಜಿಯ ನಾಲ್ಕು ಬೈಂಡ್ ಪುಸ್ತಕ ಇತ್ತು ಮನೆಯಲ್ಲಿ. ನಮ್ಮ ನೆರೆಮನೆಗೆ ಬಾಡಿಗೆಗೆ ಬಂದಿದ್ದ ನಮ್ಮ ಅಣ್ಣನ ಗೆಳೆಯ ಓದಿ ಕೊಡುತ್ತೇನೆ ಎಂದು ಒಯ್ದರು. ಅದು ವಾಪಸ್ ಬರಲೇ ಇಲ್ಲ!

ಕೊರವಂಜಿ ಪತ್ರಿಕೆಗೆ ಮುಖಪುಟ ರಚಿಸಿದ್ದವರು ಆಗ ನಾಕ ಅವರ ಶಿಷ್ಯರಾಗಿದ್ದ ಶ್ರೀ ಆರ್ ಕೆ ಲಕ್ಷ್ಮಣ್ ಅವರು. ಮೊದಲ ಸಂಚಿಕೆಯಿಂದ ಕೊನೆಯ ಸಂಚಿಕೆವರೆಗೆ ಇದೇ ಚಿತ್ರ ಹೊತ್ತು ಪತ್ರಿಕೆ ಹೊರಬಂದಿದ್ದು ಬಹುಶಃ ಒಂದು ಅಂತಾರಾಷ್ಟ್ರೀಯ ದಾಖಲೆ ಇರಬಹುದೇನೋ, ನನಗೆ ತಿಳಿಯದು! ನಾಕ ಅವರ ಹಾಸ್ಯ ಕಚಗುಳಿ ಕೊಡುವ ನಂತರ ಯೋಚನೆಗೆ ಹಚ್ಚುವ ಹಾಸ್ಯ. ಯಾರನ್ನೂ ಲೇವಡಿ ಮಾಡದ ಯಾರ ಮನಸ್ಸನ್ನೂ ನೋಯಿಸದ ಸಭ್ಯ ಸುಸಂಸ್ಕೃತ ಹಾಸ್ಯ ಅವರದ್ದು. ಬಹುಶಃ ಈ ವಿಶೇಷಣದಿಂದಲೇ ಅವರ ಬರಹಗಳಿಗೆ ಈಗಲೂ ವ್ಯಾಪಕ ಓದುಗರಿದ್ದಾರೆ.

ಕನ್ನಡ ಹಾಸ್ಯ ಪ್ರಾಕಾರಕ್ಕೆ ತಮ್ಮ ಅಮೂಲ್ಯ ಕೃತಿಗಳ ಮೂಲಕ ಒಂದು ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ಕಸ್ತೂರಿ ಅವರ ಹುಟ್ಟಿದ ದಿವಸ ಹಾಸ್ಯೋತ್ಸವದ ದಿವಸ ಎಂದು ನಿರ್ಧಾರವಾಯಿತು.

1996ರ ಹಾಸ್ಯೋತ್ಸವವನ್ನು ನಾ. ಕಸ್ತೂರಿ ಅವರ ನೆನಪಿಗೆ ಮಾಡಿದ್ದು. ನಾ. ಕ ಅವರನ್ನು ಕುರಿತ ಎರಡು ಪುಸ್ತಕಗಳು ಅಂದು ಕನ್ನಡ ಪ್ರಕಟಣಾ ಪ್ರಪಂಚದಲ್ಲಿಯೇ ಒಂದು ವಿನೂತನ ದಾಖಲೆ ನಿರ್ಮಿಸಿದವು. ಗೋಪಾಲಕೃಷ್ಣ (ನಾನು) ಮತ್ತು ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಕಸ್ತೂರಿ'(ಇದರಲ್ಲಿ ನಾಕ ಅವರು ಕೊರವಂಜಿ ಪತ್ರಿಕೆಗೆ ಬರೆದಿದ್ದ ಲೇಖನಗಳನ್ನು ಆಯ್ದು ಸಂಗ್ರಹಿಸಲಾಗಿತ್ತು) ಹಾಗೂ ಶ್ರೀ ಚಂದ್ರ ಮೋಹನ್ ಜತೆಗೆ ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಶತಕಂ’ (ಅಂದು ಬಿಡುಗಡೆ ಆದ ಪುಸ್ತಕಗಳು) ಎರಡೇ ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಮಾರಾಟಗೊಂಡವು! ಇದರ ಮಹತ್ವ ನಮ್ಮ ಅರಿವಿಗೆ ಬಂದದ್ದು ತಡವಾಗಿ. ತಡವಾಗಿ ಅಂದರೆ ಕೆಲವು ವರ್ಷಗಳ ನಂತರ. ಅದರಿಂದ ಇಂತಹ ಮಹತ್ತರ ಸಾಧನೆ ಎಲ್ಲೂ ದಾಖಲೆ ಆಗಲಿಲ್ಲ. ಹಾಸ್ಯಬ್ರಹ್ಮ ಹತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಸ್ಯೋತ್ಸಾಹ ಎನ್ನುವ ಪುಸ್ತಕ ತಂದೆವು. ನಮ್ಮ ತಮ್ಮಟೆ ನಾವೇ ಬಜಾಯಿಸಿಕೊಳ್ಳುವಾಗ ಇದರ ಬಗ್ಗೆ ನಾನೇ ಕೆಲವು ಸಾಲು ಮಧ್ಯೆ ತುರುಕಿದೆ!

ಸಮಾರಂಭವಂತೂ ಒಂದು ಅದ್ಭುತ ಸಕ್ಸೆಸ್. ನಾಕ ಅವರ ಶಿಷ್ಯ ಲೋಕದ ಗಣ್ಯರುಗಳಾದ ಜಿಎಸೆಸ್, ಜೀವಿ, ಎಲ್ಲೆಸ್ಸೆಸ್, ಡಾ. ಪ್ರಭುಶಂಕರ, ಡಾ. ಪ್ರಭುಪ್ರಸಾದ, ಎಚ್ ಎಲ್ ಕೇಶವಮೂರ್ತಿ ಮೊದಲಾದ ಗಣ್ಯರು ಇಡೀ ದಿವಸ ಕುಳಿತು ಕಾರ್ಯಕ್ರಮ ಅವಲೋಕಿಸಿದರು. ಎಂದಿನ ಹಾಗೆ ನಮ್ಮ ಗರಡಿಯ ಉಸ್ತಾದ್ (ಇದು ಕೈಲಾಸಮ್ ಅವರ ಪೊಲೀಕಿಟ್ಟಿಯಿಂದ ಎತ್ತಿದ ಪದ. ಹಿಂದೆ ಯಾರೋ ಎತ್ತಿದ್ದು, ಈಗ ಎಲ್ಲರ ಸ್ವತ್ತು. ಯಾಕೆ ಅಂದರೆ ಪೇಟೆಂಟ್ ಇಲ್ಲ!) ಶ್ರೀ ಅರಾ ಮಿತ್ರ ಅವರು ಇಡೀ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು. ಇಡೀ ಜನ ಸಾಗರ ನಗೆಯ ಹುಚ್ಚು ಹೊಳೆಯಲ್ಲಿ ತೇಲಿಹೋದರು! ಇದು ಜಯನಗರದ ನ್ಯಾಷನಲ್ ಕಾಲೇಜಿನ ಡಾ ಎಚ್ಛೆನ್ ಸಭಾoಗಣದಲ್ಲಿ ನಡೆದ ಕಾರ್ಯಕ್ರಮ. ಸಭಿಕರು ಓವರ್ ಫ್ಲೋ ಆದರು. ನಿಲ್ಲಲು ಸಹ ಜಾಗ ಸಿಗದೇ ಪರದಾಡಿದರು. ಇದರ ರಿಸಲ್ಟ್ ಅಂದರೆ ಮಾರನೇ ವರ್ಷದಿಂದ ಹಾಸ್ಯೋತ್ಸವ ಕಾರ್ಯಕ್ರಮ ಸಭಾಂಗಣದಿಂದ ಹೊರ ಮೈದಾನಕ್ಕೆ ಬದಲಾಯಿತು. ಟಿವಿ ಸ್ಕ್ರೀನ್ ಅಳವಡಿಸಿ ಜನ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡುತ್ತಿದ್ದೆವು. ಸಭಿಕರಿಗೆ ಊಟ ಸಹ ಇರುತ್ತಿತ್ತು. ನಂತರ ಒಬ್ಬರು ಕೇಟೆರೇರ್ ಇದರ ಜವಾಬ್ದಾರಿ ಹೊತ್ತರು ಪೇ ಅಂಡ್ ಈಟ್ ವ್ಯವಸ್ಥೆ ಜಾರಿಯಾಯಿತು!

ನಮ್ಮ ಮುಖ್ಯ ಪ್ರಾಯೋಜಕರಾಗಿ ಎಚ್ ಎಂ ಟಿ ಸಂಸ್ಥೆ ಸುಮಾರು ವರ್ಷ ನೆರವು ನೀಡಿತು. ನಂತರ ಈ ನೆರವು ಹಲವು ಪ್ರಾಯೋಜಕರಿಂದ ಒದಗಿತು.

ಈ ವೇಳೆಗೆ ಶ್ರೀ ಬೇಲೂರು ರಾಮಮೂರ್ತಿ ಅವರು ನಮ್ಮ ತೆಕ್ಕೆಗೆ ಬಂದರು. ಇಬ್ಬರೂ ಉತ್ಸವದ ರಥ ಎಳೆಯಲು ಮುಂದೆ, ಹಿಂದೆ ನಮ್ಮ ಪಟಾಲಂ!

ಇದು ನಮ್ಮ ನೆತ್ತಿಗೇರಿದ ಮೊದಲ ಕಿರೀಟ ಅಥವಾ ನವಿಲುಗರಿ ಅನ್ನಿ. ಮುಂದೆ ಇಂತಹ ಹಲವಾರು ಗರಿಗಳು ಸೇರಿಕೊಂಡವು. ಇಷ್ಟೊಂದು ಚಟುವಟಿಕೆ ಮಾಡಿದೆವಾ ಎಂದು ಈಗ ಕೂತು ಮನಸ್ಸು ಹಿಂದಕ್ಕೆ ಓಡಿಸಿದರೆ ಈಗ ಆಶ್ಚರ್ಯವಾಗುತ್ತದೆ. ಚಟುವಟಿಕೆಗಳ ಬಗ್ಗೆ ಒಂದು ಪುಟ್ಟ ಹಿನ್ನೋಟ ಕೊಡಲೇ… ನೆನಪಿನಲ್ಲಿ ಇರುವ ಕೆಲವು.. ವ್ಯಂಗ್ಯ ಚಿತ್ರ ಪ್ರದರ್ಶನಗಳು, ಬಡಾವಣೆಗಳಲ್ಲಿ ವಿವಿಧ ಹಾಸ್ಯ ಕಾರ್ಯಕ್ರಮಗಳು, ಕೈಲಾಸಮ್ ಸ್ಮರಣೆ, ರಾಶಿ ಸ್ಮರಣೆ ಕನ್ನಡ ಹಾಸ್ಯಸಾಹಿತಿಗಳ ಸ್ಮರಣೆಗಳು, ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಹಾಸ್ಯ ಕಾರ್ಯಕ್ರಮ… ಇವು ಕೆಲವು. ಇನ್ನೊಂದು ನಮ್ಮಲ್ಲಿ ಕೋಡು ಮೂಡಿಸಿದ ಕಾರ್ಯಕ್ರಮ ಎಂದರೆ ಹಾಸ್ಯ ಪುಸ್ತಕಗಳ ಬಿಡುಗಡೆ ಮತ್ತು ಅದರ ಅವಲೋಕನ … ಪ್ರತಿಭೆಗಳನ್ನು ಹುಡುಕಲು ಕಿರಿಯರಿಗಾಗಿ ಶಿಬಿರ ನಡೆಸಿದ್ದು ಒಂದು ನೆನಪು. ಹಾಸ್ಯ ಬರಹಗಾರರು ಒಂದೇ ರೀತಿಯ ಬರಹಕ್ಕೆ ಬ್ರಾಂಡ್ ಆಗಬಾರದು, ಅವರು ಬಹುಶೃತರಾಗಬೇಕು ಎಂದು ನಮ್ಮ ಬೆಳವಣಿಗೆಯತ್ತ ಒಂದು ಕಟ್ಟುಪಾಡು ಹಾಕಿಕೊಂಡೆವು. ಇದಕ್ಕೆ ಪೂರಕವಾಗಿ ಲಲಿತ ಪ್ರಬಂಧ ಕಮ್ಮಟ ನಡೆಯಿತು. ಇದರ ವಿಶೇಷ ಎಂದರೆ ನಮ್ಮ ಅರಿವಿಗೆ ಬಾರದ ಹಾಗೆ ಅಂದೇ (ಜುಲೈ 27) ಕನ್ನಡ ಸಾಹಿತ್ಯದ ಪ್ರಬಂಧ ಪಿತಾಮಹ ಎಂದೇ ಹೆಸರಾಗಿದ್ದ ಪ್ರೊ. ಎ ಎನ್ ಮೂರ್ತಿರಾಯರು ಜನ್ಮ ತಳೆದದ್ದು. ಕಾಕತಾಳೀಯ ನೋಡಿ. ಅವತ್ತೇ ಮೂರ್ತಿರಾಯರ ಸಂದರ್ಶನಕ್ಕೆoದು ಮೊದಲೇ ದಿನ ನಿಗದಿಪಡಿಸಿಕೊಂಡು ದೂರದರ್ಶನ ಕೇಂದ್ರದವರು ಅವರ ಮನೆಗೆ ತೆರಳಿದ್ದಾರೆ. ಅಲ್ಲಿ ಸ್ವಲ್ಪ ಸಮಯ ಶೂಟಿಂಗ್ ಸಹ ಆಗಿದೆ. ಇದರ ನಡುವೆ ಮೂರ್ತಿರಾಯರು ನಮ್ಮ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡಿರುವುದನ್ನು ನೆನೆಸಿಕೊಂಡರಂತೆ! ಮುಂದಿನ ಶೂಟಿಂಗ್ ನಮ್ಮ ಕಾರ್ಯಕ್ರಮದ ಭಾಗವಾಯಿತು. ದೂರದರ್ಶನದವರಿಗೆ ಆಯಾಚಿತವಾಗಿ ಒಂದು ಬಂಪರ್ ಲಾಟರಿ ಹೊಡೆಯಿತು. ಸಾಹಿತ್ಯದ ಮಹಾದಿಗ್ಗಜರ ಲೈವ್ ಫೋಟೋಗಳು ಅಂದು ಸಿಕ್ಕವು. ದೂರದರ್ಶನದಲ್ಲಿ ಆಗಾಗ ಈ ಸಾಕ್ಷ್ಯ ಚಿತ್ರದ ವಿಡಿಯೋ ಪ್ರಸಾರವಾದಾಗಲೆಲ್ಲಾ ನಮ್ಮ ಮನಸ್ಸು ಜುಲೈ 27,1997ಕ್ಕೆ ಓಡುತ್ತದೆ (ನಮ್ಮ ಕಮ್ಮಟದ ದಿನ). ಸಮೂಹ ಮಾಧ್ಯಮಗಳು ಮತ್ತು ಹಾಸ್ಯ ಎನ್ನುವ ಒಂದು ಪ್ರಾಯೋಜಿತ ಕಾರ್ಯಕ್ರಮ ಸಹ ನಡೆಸಿದ್ದೆವು. ನಮ್ಮ ತಂಡದ ಮತ್ತೊಂದು ಕನಸು ಎಂದರೆ ಲೇಖಕ ಪ್ರಕಾಶಕ ಶೋಷಣೆಯನ್ನು ಆದಷ್ಟು ನಿವಾರಿಸುವುದು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ನಡೆಸಿದೆವು. ಲೇಖಕರಿಗೆ ಪುಸ್ತಕ ಮಾಡುವುದರಿಂದ ಮೊದಲುಗೊಂಡು ಅದರ ಮಾರಾಟದವರೆಗಿನ ಸೂಕ್ಷ್ಮತೆ ಪರಿಚಯಿಸಲು ಕೆಲವು ಕಾರ್ಯಕ್ರಮ ನಡೆಸಿದೆವು. ಪುಸ್ತಕ ಮಾರಾಟ, ಲೇಖಕ ಲೇಖಕಿಯರ ಸ್ನೇಹ ಸಂಗಮ ಮೊದಲಾದ ಸಭೆಗಳಲ್ಲಿ ಹಾಸ್ಯಬರಹಗಾರರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

ಹಾಸ್ಯ ಬರೆಯುವವರು ಬಹು ಶೃತರಾಗಿರಬೇಕು ಎನ್ನುವ ಆಶಯಕ್ಕೆ ಪೂರಕವಾಗಿ ಕಮ್ಮಟ, ವಿಚಾರ ಸಂಕಿರಣ, ಸೆಮಿನಾರ್, ಗೋಷ್ಠಿ ಮೊದಲಾದವುಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದ್ದು ಮತ್ತೊಂದು ನೆನಪು. ಬೇಂದ್ರೆ ಅವರ ಕಾವ್ಯ, ಕಾವ್ಯ ರಚನಾ ಕಮ್ಮಟ, ಅಣಕವಾಡು ಕುರಿತ ಗಂಭೀರ ಚಿಂತನೆ, pun ವರ್ಲ್ಡ್, ಹಾಸ್ಯದ ವಿವಿಧ ಮಜಲುಗಳು, ಅಡಿಗರನ್ನು ಹೇಗೆ ಓದಬೇಕು… ಇಂತಹ ವಿಶಿಷ್ಟ ಶೀರ್ಷಿಕೆಗಳು ನಮ್ಮವು!

ಬರೀ ಕನ್ನಡದವರದ್ದೇ ಕೇಳಿದರೆ ಹೊರಗಿನ ಗಾಳಿ ನಮಗೆ ಬೀಸುವುದು ಹೇಗೆ? ಈ ನಿಟ್ಟಿನಲ್ಲಿ ಪಿಜಿ ವೊಡ್ ಹೌಸ್ ಕುರಿತ ಒಂದು ವಿಶೇಷ ಕಾರ್ಯಕ್ರಮ ನಡೆಸಿದೆವು… ಹೀಗೆ ನಮ್ಮ ಬೆಳೆವಣಿಗೆ ಆಯಿತಾ? ನಮ್ಮ ಈ ಏರುಮುಖಕ್ಕೆ ಸದಾ ಬೆನ್ನೆಲೆಬು ಆಗಿ ಪ್ರೊ ಮಿತ್ರ ಅವರು ಇದ್ದರು. ತಮ್ಮ ನೂರೆಂಟು ಕೆಲಸಗಳ ನಡುವೆ ನಮ್ಮ ಸಭೆಗಳು, ವಿಚಾರ ಸಂಕಿರಣಗಳು, ಕಮ್ಮಟಗಳು, ಸಾಹಿತ್ಯದ ಕಾರ್ಯಕ್ರಮಗಳಿಗೆ ತಮ್ಮೆಲ್ಲಾ ಕೆಲಸವನ್ನು ಬದಿಗಿಟ್ಟು ನಮ್ಮನ್ನು ಮಾರ್ಗದರ್ಶನ ಮಾಡಿದರು. ಅವರ ಅನುಭವದ ಮತ್ತು ಜ್ಞಾನದ ಧಾರೆ ನಮಗೆ ಎರೆದಿದ್ದಾರೆ. ಹೆಗಲಿನ ಚೀಲದ ತುಂಬಾ ಅಂದಿನ ಕಾರ್ಯ ಕ್ರಮಕ್ಕೆ ಸಂಬಂಧಿಸಿದ ಹಲವಾರು ನೋಟ್ಸ್‌ಗಳು, ಪುಸ್ತಕಗಳು ತುಂಬಿ ತುಳುಕಾಡುತ್ತವೆ. ಸಭೆಯ ಮುಂದೆ ನಿಂತರಂತೂ ಇವರ ಅಗಾಧವಾದ ಪಾಂಡಿತ್ಯ ಓತ ಪ್ರೋತವಾಗಿ ಹರಿಯುತ್ತದೆ. ಸಭಿಕರು ನಿಬ್ಬೆರಗಾಗಿ ಇವರ ಭಾಷಣ ಕೇಳಿ ನಕ್ಕು ನಲಿದಾಡಿ ತಮ್ಮ ದುಗುಡ ಮರೆಯುತ್ತಾರೆ. ಬೆಂಗಳೂರಿನ ಒಂದು ತುದಿಯಿಂದ ಮತ್ತೊಂದು ತುದಿಗೆ ನಮ್ಮ ಕಾರ್ಯಕ್ರಮಕ್ಕಾಗಿಯೇ ಬಂದು ನಮ್ಮ ಸಂಗಡ ಸರಿರಾತ್ರಿಯವರೆಗೂ ಇರುತ್ತಾರೆ. ಅವರು ಹೊರಡುವಾಗ ನಮ್ಮ ಕಣ್ಣು ತೇವಗೊಳ್ಳುತ್ತವೆ..! ಇಂತಹ ಹಿರಿಯ ಚೇತನ ನಮ್ಮನ್ನು ಅಂದಿನಿಂದಲೂ ಕೈಹಿಡಿದು ಸರಿದಾರಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ.

ಇವು ಕೆಲವೇ ಕೆಲವು ಕಾರ್ಯಕ್ರಮಗಳ ಬಗ್ಗೆ ಪಕ್ಷಿನೋಟ. ಇದರಲ್ಲಿ ಆಳವಾಗಿ ವಿವರಣೆ ಕೊಟ್ಟಿಲ್ಲ. ಮುಂದೆ ಇದನ್ನು ಕುರಿತಾಗಿಯೇ ಒಂದು ಬರವಣಿಗೆಯ ದಾಖಲೆ ಮಾಡುವ ಯೋಜನೆ ಈಗ ತಲೆಯಲ್ಲಿ ಹುಟ್ಟಿದೆ.

ಈ ನಡುವೆ ಹಾಸ್ಯ ಬ್ರಹ್ಮ ನಗೆ ಬರಹಗಾರರ ಒಕ್ಕೂಟವು ಹಾಸ್ಯ ಬ್ರಹ್ಮ ಟ್ರಸ್ಟ್ ಅನ್ನು ನೋಂದಾಯಿಸಿತು. ಟ್ರಸ್ಟ್ ಏಳು ಸದಸ್ಯರನ್ನು ಹೊಂದಿತ್ತು. (ಪ್ರೊ. ಅ ರಾ ಮಿತ್ರ, ಮಾರ್ಗದರ್ಶಿ ಕೃಷ್ಣ ಸುಬ್ಬರಾವ್ ಕಾರ್ಯನಿರ್ವಾಹಕ ಟ್ರಸ್ಟಿ, ಬೇಲೂರು ರಾಮಮೂರ್ತಿ, ವೈ ವಿ ಗುಂಡೂರಾವ್, ಸೂರಿ ಹಾರ್ದಳ್ಳಿ, ಎಸ್. ರಾಮಮೂರ್ತಿ, ವೈ ವಿ ಗುಂಡೂರಾವ್ ಮತ್ತು ನಾನು ಗೋಪಾಲಕೃಷ್ಣ ಟ್ರಸ್ಟಿ ಆದೆವು) ಕಾನೂನಿನ ಚೌಕಟ್ಟಿನಲ್ಲಿ ದೊರೆಯಬಹುದಾದ ಕೆಲವು ನೆರವುಗಳಿಗಾಗಿ ಪ್ರಯತ್ನಿಸಲು ಇದು ಅಗತ್ಯ. ಅಪರಂಜಿ ಬಳಗದ ಜತೆ ಸೇರಿ ಸುಮಾರು ವರ್ಷ ಉತ್ಸವಗಳನ್ನು ನಡೆಸಿದೆವು ಎಂದು ಹೇಳಿದೆ. ಹಾಸ್ಯ ಬ್ರಹ್ಮ ಟ್ರಸ್ಟ್‌ನ ಮೆನೇಜಿಂಗ್ ಟ್ರಷ್ಟಿ ಆಗಿ ಕೃಷ್ಣ ಸುಬ್ಬರಾವ್ ಸುಮಾರು ವರ್ಷ ಕಾರ್ಯ ನಿರ್ವಹಿಸಿದರು. ಹಾಸ್ಯಕಾರ್ಯಕ್ರಮಗಳು ಪೇಲವವಾಗುತ್ತಿವೆ, ಮೊದಲಿನ ಹಾಗೆ ಪ್ರೇಕ್ಷಕರನ್ನು ಹಿಡಿದು ಇಟ್ಟುಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎನ್ನುವ ಭಾವನೆ ತೀವ್ರವಾಯಿತು. ಹಾಸ್ಯ ಭಾಷಣಗಳು ರಿಪೀಟ್ ಆಗ್ತಾಹೋಯಿತು. ಜನ ಸಂಪೂರ್ಣ ಬೇಸರ ಪಡುವ ಮೊದಲು ಉತ್ಸವ ನಿಲ್ಲಿಸಿದರೆ ಹೇಗೆ ಎಂದು ಒಂದೆರೆಡು ವರ್ಷ ಯೋಚಿಸಿದೆವು. ಜತೆಗೆ ಎಲ್ಲರೂ ಅರವತ್ತು ದಾಟಿದ್ದೆವು. ಬೆಂಗಳೂರು ಮೊದಲಿನ ರೂಪ ಕಳೆದುಕೊಂಡಿತ್ತು. ಟ್ರಾಫಿಕ್ ಹೆಚ್ಚಿತ್ತು, ಸುಲಭವಾಗಿ ಯಾವುದೇ ಸ್ಥಳ ಸೇರುವ ಹಾಗಿರಲಿಲ್ಲ…. ಹೀಗೆ ಪಟ್ಟಿ ಉದ್ದ ಆಯಿತಾ? ಕೆಲವು ಟ್ರಸ್ಟಿಗಳು ಕಾರ್ಯಕ್ರಮ ನಡೆಸೋಣ ಎಂದರು. ಟ್ರಸ್ಟ್ ಜವಾಬ್ದಾರಿ ಹೊರಲು ಹೊಸ ಪೀಳಿಗೆ ಹುಡುಕಿದೆವು, ನಮ್ಮಲ್ಲೇ ಒಬ್ಬರು ಜವಾಬ್ದಾರಿ ಹೊರಲು ಪುಸಲಾಯಿಸಿದೆವು. ನಂತರ ಟ್ರಸ್ಟ್‌ಅನ್ನು ಮುಕ್ತಾಯಗೊಳಿಸುವ ಯೋಚನೆ ಹುಟ್ಟಿದಾಗ ಹೊಸ ಯುವಕರನ್ನು ಜಾಲಾಡಿದೆವು. ಯಾರೂ ಆಸಕ್ತರು ಸಿಗಲಿಲ್ಲ. ಕೊನೆಗೆ ಟ್ರಸ್ಟ್ ಅನ್ನು ಮುಕ್ತಾಯಗೊಳಿಸಿದೆವು. ಟ್ರಸ್ಟ್ ಮುಕ್ತಾಯದ ಸಮಯದಲ್ಲಿ ನಾನು ಮೆನೇಜಿಂಗ್ ಟ್ರಸ್ಟಿ ಆಗಿದ್ದೆ!

ಬ್ರಹ್ಮರು ಮೊದಲಿಂದಲೂ ಅಪರಂಜಿ ಬಳಗದವರೇ ಆಗಿದ್ದೆವು. ಅಪರಂಜಿ ಬಳಗ ಮತ್ತಷ್ಟು ವರ್ಷ ಹಾಸ್ಯೋತ್ಸವ ನಡೆಸಿತು. ನಾವೂ ಉತ್ಸಾಹದಿಂದ ಭಾಗವಹಿಸಿದೆವು. ನಿಧಾನಕ್ಕೆ ಹಾಸ್ಯೋತ್ಸವವನ್ನು ಬೇರೆ ಬೇರೆ ಗುಂಪುಗಳು ನಡೆಸಿದವು. ಅಂಕಲ್ ಶಾಮ್ ಮುಂದಾಳತ್ವದಲ್ಲಿ ಹಾಸ್ಯೋತ್ಸವ ನಡೆಯಿತು.

ಈಗೊಂದೆರಡು ವರ್ಷಗಳಿಂದ ಯಾರೂ ಇದನ್ನು ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ.

ಹಾಸ್ಯೋತ್ಸವದಂತಹ ಕಾರ್ಯಕ್ರಮಗಳಿಂದ ಸಾಹಿತ್ಯಕ ಪ್ರಯೋಜನಗಳಿವೆಯೇ ಎನ್ನುವ ಪ್ರಶ್ನೆ ಮೊದಲಿಂದ ಕಾಡಿದೆ. ಬೌದ್ಧಿಕ ಮಟ್ಟ ಹೆಚ್ಚುತ್ತದೆ ಮತ್ತು ಹೊಸ ಯೋಚನೆಗಳು, ಚಿಂತನೆಗಳು ಹುಟ್ಟುತ್ತವೆ ಎಂದು ಸಾರಸ್ವತ ಲೋಕ ಗುರುತಿಸಿದೆ. ಹಾಸ್ಯ ಎನ್ನುವುದು ಹೊಟ್ಟೆ ತುಂಬಿದವರ ಉಸಾಬರಿ ಎನ್ನುವ ಲೇವಡಿ ಮಾತು ಮೊದಮೊದಲು ಕಿವಿಗೆ ಬೀಳುತ್ತಿತ್ತು. ಆದರೆ ಹಾಸ್ಯ ಬರೆಯಲು ಹೊರಟರೆ ಒಂದೇ ಒಂದು ಅಕ್ಷರವೂ ಜನ್ಮ ತಳೆಯದೆ ಕಕ್ಕಾಬಿಕ್ಕಿ ಆದವರು ನನಗೆ ಗೊತ್ತು. ಅಂತಹವರೂ ಸಹ ಅವರ ನಿಲುವಿನಿಂದ ಹೊರಬಂದಿದ್ದಾರೆ. ಒಟ್ಟಾರೆ ನಮ್ಮ ಶ್ರಮದಿಂದ ಈ ಪ್ರಾಕಾರಕ್ಕೆ ಹೊಸ ರಕ್ತ ತುಂಬಿದ ತೃಪ್ತ ಮನೋಭಾವ ನಮ್ಮ ಪೀಳಿಗೆಯವರಲ್ಲಿದೆ, ನಮಗಿದೆ!

ನಾಡಿನ ಪತ್ರಿಕೆಗಳು ನಮ್ಮ ಕಾರ್ಯಕ್ರಮಗಳಿಗೆ ಉತ್ತಮ ಪ್ರಚಾರ ಕೊಟ್ಟಿವೆ, ಕಾರ್ಯಕ್ರಮದ ಸುದ್ದಿ ಹರಡಿವೆ ಮತ್ತು ನಮ್ಮ ನೆರವಿಗೆ ಬಂದಿವೆ.

ವಾರಕ್ಕೊ ತಿಂಗಳಿಗೊ ಒಮ್ಮೆ ಹಾಸ್ಯ ಬರಹ ಪ್ರಕಟವಾಗುತ್ತಿದ್ದ ಕಾಲದಲ್ಲಿ ಮಹತ್ವವಾದ ಆಕಾಂಕ್ಷೆ ಇಲ್ಲದೇ ಈ ಪ್ರಾಕಾರವನ್ನು ಅಪ್ಪಿಕೊಂಡವರು ನಮ್ಮ ಪೀಳಿಗೆಯವರು. ಈಗ ಈ ಪ್ರಾಕಾರ ಹುಲುಸಾಗಿ ಬೆಳೆದಿರುವ ರೀತಿ ನೋಡಿದರೆ ನಮ್ಮ ಅರಿವಿಲ್ಲದೆ ನಾವು ಬಿತ್ತಿದ ಬೀಜ ಮರವಾಗಿರುವುದನ್ನು ನೋಡುವ ಸಂತೋಷ ಅಪ್ಪುತ್ತದೆ…..

ಮತ್ತಷ್ಟು ಮುಂದಿನ ಸಂಚಿಕೆಗೆ…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ