ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳ ಕಾಲ ದುಡಿಮೆ ಮಾಡಿದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ- ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸೀಮ.
ರಾಘವೇಂದ್ರ ಸಿ.ವಿ. ಕವನ ಸಂಕಲನ “ದೇವರ ಬಿಕ್ಕಳಿಕೆಗಳು” ವಿಕಾಸ್ ನೇಗಿಲೋಣಿ ಮುನ್ನುಡಿ
ಕವಿತೆಗಳು ಯಾವತ್ತೂ ಪೂರ್ವಯೋಜಿತವಲ್ಲ, ಅದು ಆ ಕ್ಷಣವನ್ನು ಹಿಡಿವ ಅಪೂರ್ವ ಬೆರಳುಗಳು. ಕೈಗೆ ಸಿಕ್ಕು ಕೊಂಚ ಬಣ್ಣವನ್ನು ಮೆತ್ತಿಸಿ ಪರಾರಿಯಾಗುವ ಚಿಟ್ಟೆಗಳ ಹಾಗೆ. ಕೈಗೆ ತಾಗಿದ ಬಣ್ಣದ ಹುಡಿಯಷ್ಟೇ ಪ್ರಾಪ್ತಿ. ಹಾಗಂತ ಅವಿಷ್ಟೇ ಕವಿತೆ ಆಗುವುದಿಲ್ಲ, ಒಂದು ಕ್ಷಣಭಂಗುರವನ್ನು ನಾಜೂಕಾಗಿ ಹಿಡಿಯುತ್ತಲೇ ಅದಕ್ಕೊಂದು ದರ್ಶನದ ಕೊನೆ ಮುಟ್ಟಿಸಬೇಕು. ಬೇಂದ್ರೆ ಅವರ ‘ಪಾತರಗಿತ್ತಿ ಪಕ್ಕ’ ಕವಿತೆ, ಕವನ ಹೇಗಿರಬೇಕು ಅನ್ನುವುದಕ್ಕೆ ಒಂದು ಕೈಪಿಡಿಯಂತಿದೆ. ‘ರೇಷಿಮೆ ಪಕ್ಕ ನಯ ಮುಟ್ಟಲಾರೆ ಭಯ’ ಎಂಬ ಅದರೊಂದು ಸಾಲಲ್ಲಿ ಬೇಂದ್ರೆ, ಕವಿತೆ ಆಕರ್ಷಣೆಯೂ ಹೌದು, ಆಕಸ್ಮಿಕವೂ ಹೌದು, ಸೆಳೆವ ನಯವೂ ಹೌದು, ಹಿಡಿಯಲಾರೆನೆಂಬ ಭಯವೂ ಹೌದು ಅಂತ ಬಣ್ಣಿಸುತ್ತಾರೆ.

(ರಾಘವೇಂದ್ರ ಸಿ.ವಿ.)
ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳ ಕಾಲ ದುಡಿಮೆ ಮಾಡಿದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ- ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸೀಮ. ಈ ಸಂಕಲನದ ಕೆಲವು ಸಾಲುಗಳನ್ನು ಓದಿದರೆ ನಿಮಗೂ ಪುಳಕ ನೀಡದೇ ಇರುವುದಿಲ್ಲ.
ನಾನು ಸಂತೆಯಲ್ಲಿ ಸೆಳೆಯುತ್ತಿರುವ
ಆಟಿಕೆಯಾಗಿದ್ದೆ
ಇದೀಗ, ಕಳೆದು ಹೋಗುವ ಸಂಭ್ರಮ!
ಅವಳಲ್ಲಿರುವ ನನ್ನನ್ನು ಯಾರೂ ಹುಡುಕಬೇಡಿ!
*
ಅವಳಿ ಕಂಗಳು ಹಡೆದ ಗಾಯಾಳು
ಕಂಬನಿಗೆ ಪ್ರೀತಿ ಎಂದು ಹೆಸರಿಟ್ಟಿದ್ದೇನೆ !
*
ಅವಳ ತುದಿಮೂಗು ಮುಡಿದ ಮುಂಗೋಪದಲ್ಲಿ
ಸೂರ್ಯ ಸಾಲುದೀಪ ಹಚ್ಚುತ್ತಿದ್ದಾನೆ!
*
ಅಜ್ಜನ ಮನೆಯ ಅಟ್ಟದಲ್ಲಿ
ಜೇಡ ವೀಣೆ ನುಡಿಸುತ್ತಿದೆ
*
ಸುಮ್ಮನಿದ್ದು ಛಿದ್ರಗೊಂಡಿರುವ
ಕನ್ನಡಿಯಲ್ಲಿ ಸಂತೆ ಅನಾಥ ಬಿಂಬವಾಗಿದೆ!
*
(ಮೆಟ್ರೋದಲ್ಲಿ ಪುಸ್ತಕ ಓದುತ್ತಿರುವ ಹುಡುಗಿಯ ಕುರಿತು)
ಅವಳು ಹಿಡಿದಿರುವ ಪುಸ್ತಕದಲ್ಲಿ
ನಾನಿರಬಹುದೇ?
ಅಥವಾ ಹಾಡಿನಲ್ಲಿ?
ಇಡೀ ಸಂಕಲನವನ್ನು ಓದುತ್ತಾ ಹೋದರೆ ಇಂಥ ಹಲವಾರು ರೂಪಕಗಳು, ಆಹ್ ಅನ್ನಿಸುವ ಸಾಲುಗಳು ನಿಮಗೆ ಸಿಗುತ್ತವೆ. ಪ್ರೇಮದ ಗುಂಗು, ಸೌಂದರ್ಯದ ಬೇಟೆ, ಕನಸಿನಂಥ ಓಡಾಟದಲ್ಲಿ ಈ ಕವಿ ಸದಾ ಮಗ್ನ, ಕವಿತೆ ಬರೆಯಲು ಕೂತರೆ ತಮ್ಮೆಲ್ಲಾ ಭಾವನೆಗಳೂ ಅಕ್ಷರದ ಎದುರು ನಗ್ನ.
ರಾಘು ಇಂಥ ಕ್ಷಣಭಂಗುರವನ್ನು ರಸವತ್ತಾಗಿ ಹಿಡಿಯುತ್ತಾರಾದರೂ ಹಲವಾರು ಸಲ ಅದಕ್ಕೊಂದು ದರ್ಶನವನ್ನು ದಯಪಾಲಿಸಲು ಸೋಲುತ್ತಾರೆ. ಅದಕ್ಕೆ ಕಾರಣ, ಕವಿಯ ಲಂಪಟತ್ವ, ಚಾಂಚಲ್ಯ. ಅವರು ಒಂಥರ ಕುಣಿಕೆ ಬಿಡಿಸಿಕೊಂಡ ಹುಚ್ಚು ಕರು. ಕಿವಿಗೆ ಗಾಳಿಹೊಕ್ಕು ಅಡ್ಡಾದಿಡ್ಡಿ ಓಡಾಡುವ ಮಣಕದಂತೆ ಚಂಚಲತೆಯನ್ನ ಆವಾಹಿಸಿಕೊಂಡು ಅಡ್ಡಾಡುತ್ತಾರೆ, ಮೈಮರೆಯುತ್ತಾರೆ, ಅದರಿಂದಾಗಿ ನಿಶ್ಚಲತೆಯನ್ನು ಮರೆಯುತ್ತಾರೆ.

ಉದಾಹರಣೆ ನೋಡಿ:
ಗುಡಿ ಗೋಪುರದ
ತುದಿಯಲ್ಲಿ ದೀಪ ಉರಿಯುತ್ತಿದೆ
ದೇವರು ಪತ್ರ ಬರೆದಂತಿದೆ
ನಾವಿಬ್ಬರೂ ಸಂಧಿಸಲು!
ಇಲ್ಲಿ ಗುಡಿಗೋಪುರದ ತುದಿಯಲ್ಲಿ ಉರಿವ ದೀಪ ದೇವರು ಬರೆದ ಪತ್ರದಂತೆ ಕವಿಗೆ ಕಾಣಿಸುತ್ತದೆ, ಅದು ಯಾವುದೇ ಒಬ್ಬ ಒಳ್ಳೆಯ ಕವಿ ಹಿಡಿಯಬಹುದಾದ ಅದ್ಭುತ ಕಿಡಿ. ಆದರೆ ಮುಂದಿನ ಸಾಲಲ್ಲಿ ‘ನಾವಿಬ್ಬರೂ ಸಂಧಿಸಲು…’ ಅಂತ ಬರೆಯುವ ಮೂಲಕ ಮೊದಲ ದಾರ್ಶನಿಕ ಕಿಡಿಗೆ ನೀರು ಸೋಕಿಸಿದಂತಾಗುತ್ತದೆ. ಹಾಗಂತ ಓದುಗ ನಿರಾಶನಾದ ಮರುಕ್ಷಣ,
ಬಣ್ಣದ ಕೊಡೆಯಡಿ
ಕೊಂಚ ದೂರ ನಡೆಯೋಣ
ಯುದ್ಧ ನಡೆದ ಹೃದಯದಲ್ಲಿ
ಜೋರು ಮಳೆಯಾಗಲಿ!
ಅಂತ ಬರೆದು ಮತ್ತೆ ದರ್ಶನಕ್ಕೆ ಮರಳುತ್ತಾರೆ.
ರಾಘು ಸಶಕ್ತ ಕವಿಯಾಗುವ ಹಲವು ಲಕ್ಷಣಗಳನ್ನು ಬಿಡಿಬಿಡಿ ಸಾಲಲ್ಲಿ ಹಿಡಿದಿಡುತ್ತಾರೆ. ಉದಾಹರಣೆಗೆ:
ಬಸ್ಸಿಳಿದ ಅವಳು
ಅನೇಕಗಳನ್ನು ಬಿಟ್ಟು
ಹೋಗುತ್ತಿದ್ದಾಳೆ.
-ಒಬ್ಬರು ನಮಗೆ ಅಚಾನಕ್ ಸಿಕ್ಕಿ, ಹಾಗೇ ಕಣ್ಮರೆಯಾಗುವಾಗ ನಮ್ಮೊಳಗೆ ಅನೇಕಗಳನ್ನು ಬಿಟ್ಟು ಹೋಗಿರುತ್ತಾರೆ ಅನ್ನುವ ಕಲ್ಪನೆಯೇ ಅಪೂರ್ವವಾದದ್ದು.
ಮನಸ್ಸು ಓಡುತ್ತಿರುತ್ತದೆ, ಕುದುರೆಯ ಹಾಗೆ, ಆದರೆ ಯಾವುದೋ ಕ್ಷಣ ಬಕದಂತೆ ನಿಂತಾಗ, ಧ್ಯಾನಸ್ಥವಾದಾಗ ಕವಿತೆ ದರ್ಶನವಾಗುತ್ತದೆ. ಓದುಗ ಗಾಳ ಹಾಕಿ ಕೂತರೆ ರಾಘು ಕವನ ಸಂಕಲನದಲ್ಲಿ ಅಂಥ ಹಲವಾರು ಅತ್ಯುತ್ತಮ ಸಾಲುಗಳೂ ಗೋಚರವಾಗುತ್ತದೆ.

(ವಿಕಾಸ್ ನೇಗಿಲೋಣಿ)
ವಿರಹದ ಬಿಸಿಯುಸಿರು, ಅವಳ ತಿರಸ್ಕಾರದ ನೋವು, ವಯೋಸಹಜ ಕಳ್ಳ ಆಸೆಗಳು, ಪ್ರೇಮಕಾಮದ ಕನವರಿಕೆಗಳು, ಪ್ರಕೃತಿಯ ವಿಸ್ಮಯಗಳು, ಅಪೂರ್ಣ ಬದುಕಿನ ಅತೃಪ್ತ ನೋವುಗಳು- ಇವೆಲ್ಲವನ್ನೂ ಉದ್ದಕ್ಕೂ ರಾಘು ಕವಿತೆಯಾಗಿಸುತ್ತಾ ಹೋಗಿದ್ದಾರೆ. ಎಷ್ಟೋ ಸಲ ಪದಗಳ ಅಲಂಕಾರದಲ್ಲಿ, ರೂಪಕಗಳಲ್ಲಿ ಕಳೆದು ಹೋಗದೇ ಆಕರ್ಷಕ ಸಾಲುಗಳಾಚೆ ಕೂಡ ಕವಿತೆಯನ್ನು ಹೊಳೆಸುವ ಶಕ್ತಿ, ಯೋಗ್ಯತೆ ಇರುವ ರಾಘು ಅವರನ್ನು ಕನ್ನಡ ಕಾವ್ಯಲೋಕಕ್ಕೆ ಸ್ವಾಗತಿಸೋಣ. ಕವಿತೆ ಬಹಳ ಸಲ ವೈಯಕ್ತಿಕ ಅಂದುಕೊಳ್ಳುತ್ತೇವೆ, ಆದರೆ ಕವಿತೆ ಎನ್ನುವುದು ಒಬ್ಬರ ವೈಯಕ್ತಿಕ ಅನುಭವವನ್ನು ಏಕಕಾಲಕ್ಕೆ ಸಾರ್ವಜನಿಕವಾಗಿಸುವ ಪ್ರಕಾರ ಕೂಡ.
ವೈಯಕ್ತಿಕವಾಗಿ ಇಷ್ಟವಾದ ರಾಘು ಅವರ ಹಲವು ಸಾಲುಗಳಲ್ಲಿ ಇದು ಅತ್ಯುತ್ತಮ. ಈ ಅವರದೇ ಸಾಲಿನೊಂದಿಗೆ ಅವರ ಕಾವ್ಯ ಹಣತೆಯ ಬೆಳಕು ಪ್ರಜ್ವಲಿಸಲಿ ಅಂತ ಆಶಿಸುತ್ತೇನೆ.
ಹೂವಿನ ಬುಟ್ಟಿಗೆ
ಕವಿತೆ ಕಲ್ಲೆಸೆದು ಹೋಗಿದೆ
ಕಡಿದ ಮಾಲೆಯ ಕಣ್ಣೀರಿಗೆ
ಹೆಸರು ಹುಡುಕುತ್ತಿದೆ ಪರಿಮಳ
ಸಂಕಲನದ ಕೆಲವು ಕವಿತೆಗಳು
1.
ಪಾಳು ಬಿದ್ದಿರುವ
ಅಜ್ಜನ ಮನೆಯ ಅಟ್ಟದಲ್ಲಿ
ಜೇಡ ವೀಣೆ ನುಡಿಸುತ್ತಿದೆ
ಪಕ್ಕದಲ್ಲಿರೋ ಆ ಊರುಗೋಲಿಗೂ
ಈಗ ನೂರು ವರ್ಷ!
ಜಾತ್ರೆಯಲ್ಲಿ ತಂದಿದ್ದ ಕೊಳಲು
ಪೆಟ್ಟಿಗೆಯ ಅಡಿಯಲ್ಲಿ
ಇನ್ನೂ ಉಸಿರಾಡುತ್ತಿದೆ
ಅಜ್ಜನ ನಡುಕದ ದನಿಯ ಹಾಡು
ಈಗಲೂ ರಿಂಗಣಿಸುತ್ತಿದೆ ಕೇಳಿ
ಊರೂರು ಸುತ್ತಿದ ಇತಿಹಾಸವಿರುವ
ಮದ್ದಳೆ ಕೌದಿಯೊಳಗೆ
ಕೈಕಟ್ಟಿ ನಿಶ್ಯಬ್ಧವಾಗಿ ಕೂತಿದೆ
ವಿಷಾದಕ್ಕೆ ವಿರಾಮ ಕೊಡೊರ್ಯಾರು?
ಶನಿವಾರದ ಸತ್ಸಂಗದಲ್ಲಿ
ಜೀವಂತಿಕೆ ಪ್ರದರ್ಶನವಿದೆ
ತಲೆಸವರಿ ಒಮ್ಮೆ ನೋಡಿ
ವಾದ್ಯಗಳಿನ್ನೂ ವಿಧೇಯವಾಗಿವೆ!
2.
ಬೋರಲು ಮಲಗಿದೆ ಆಕಾಶ
ಅಜ್ಜಿ ಹೇಳಿದ
ಒಂದಾನೊಂದು ಕಾಲದ ಕತೆಗೆ ಹೂಗುಡುತ್ತ!
ಕೌತುಕದ ಛಾಯೆಯಲ್ಲಿ
ಅವಳೇ ನಾಯಕಿ!
ಮಂಡಿಯೂರಿದ ಮೋಡಕ್ಕೆ
ಚಿಟ್ಟೆ ಬಣ್ಣ ಬಳಿಯುತ್ತಿದೆ
ಮಳೆ ಸುರಿದ ದಾರಿಯಲ್ಲೀಗ
ಅವಳು ಚಿಗುರುತ್ತಿದ್ದಾಳೆ!
ನೈರುತ್ಯದಲ್ಲೊಂದು ನಾಚಿಕೆ
ತಿರುಗಿ ನೋಡುತ್ತಿದೆ
ಸುಮಾರಾಗಿರುವ ಅವಳ ಸನ್ನೆಯಲ್ಲಿ
ನಾನು ಮುಳುಗೇಳುತ್ತಿದ್ದೇನೆ
ಕಾಗದದ ದೋಣಿ ಏರಿ
ಹೊರಟಿರುವ ಸಂಜೆ
ಅಂಬಿಗನನ್ನು ಅರಸುತ್ತಿದೆ
ಪ್ರೇಮದ ಸುಳಿಯಲ್ಲಿ
ಬೆನ್ನಿಗೊರಗಿ ಅವಳೊಟ್ಟಿಗೆ
ಮಾತನಾಡುತ್ತಿದ್ದೇನೆ
ದಯವಿಟ್ಟು ಕಣ್ಮುಚ್ಚಿ
3.
ಪೇಟೆಯ ಮಧ್ಯೆ
ದೇವರು ಕಣ್ಣೀರಿಡುತ್ತ ನಿಂತಿದ್ದಾನೆ
ನನ್ನದೇ ದುಃಖಕ್ಕೆ ಕಿವಿಯಾಗುತ!
ಅರ್ಧ ಸುಟ್ಟ ಚಂದಿರ ಎದೆಯಲ್ಲುಳಿದಿರುವಾಗ
ಬಿದ್ದು ಹೋದ ಮಳೆ
ದೂರದಲ್ಲೆಲ್ಲೋ ದಾರಿ ತಪ್ಪಿದಂತಿದೆ!
ಕಣ್ಣೊಳಗೆ ದೀಪ ಹಚ್ಚಿದ
ಆ ಕೈಬೆರಳುಗಳಲ್ಲಿ ಮಸಿ ಇನ್ನೂ ಹಸಿಯಾಗಿದೆ
ಕೋಟಿ ಹಗಲುಗಳನ್ನು ತುಂಬಿಕೊಂಡಿದ್ದ
ಎಳೆ ಹೃದಯಕ್ಕೆ ಈಗ
ಒಂಟಿ ರಾತ್ರಿಗಳೇ ಸಹಪಾಠಿ!
ಬುಟ್ಟಿಯಿಂದ ಕಾಲ್ಜಾರಿದ
ಹೂವಿನ ಮೇಲೆ ಹೆಜ್ಜೆಗಳು
ಗುರುತು ಬಿಟ್ಟು ಸಾಗುತ್ತಿವೆ!
ಧೂಳಿಗೂ ಅಂಟಿದ ಪರಿಮಳ
ಪರಿಚಿತ ಪದ್ಯದ ಅಪರಿಚಿತ
ಭಾವನೆಯಂತಾಗಿದೆ!
ಒಳಗೊಳಗೆ ಕವಿತೆಯ ಸಾವಾಗುತ್ತಿರುವಾಗ
ಸಮೀಪಿಸಿದ ಕಂಬನಿ ಹೊರಲಾರಾದ ಭಾರವಾಗಿದೆ!
ಪೂರ್ಣವಾಗದ ವಾಕ್ಯ ನಿಂತಲ್ಲೇ ನಿಂತಿದೆ
ವಿಸ್ಮಿತ ತಿರುವು ಕೈತಾಕುವುದನ್ನೇ
ಎದುರುಗಾಣುತ್ತ!
ಹಳೆಯ ಸಂಜೆಗಳನ್ನು ತುಂಬಿಕೊಂಡಿರುವ
ತುಂಡು ನಕ್ಷತ್ರವೊಂದು ಚೂಪಾಗಿ ಹೊಳೆವಾಗ
ಸುಡು ಬಿಸಿಲ ಸಾವಿರ ನದಿಗಳು
ಎದೆಯೊಳಗೆ ಹರಿಯುತ್ತಿವೆ!
ಸೀಟಿ ಊದುತ್ತಾ ದೇವರು ಅಲ್ಲೇ ನಿಂತಿದ್ದಾನೆ
ದುಃಖಕ್ಕೆ ದೃಷ್ಟಿ ತೆಗೆಯುತಾ!
4.
ಕಿಸೆಯೊಂದು ಕಣ್ಣೀರಿಡುತ್ತಿದೆ
ಮೊದಲ ಸಂಬಳ ಕಂಡ ಖುಷಿಗೀಗ
ಸೂರ್ಯೋದಯದ ಸಮಯ
ಹೊಸ್ತಿಲು ದಾಟುವ ಜವಾಬ್ದಾರಿಗಳಿಗೆ
ಸದ್ದಿಲ್ಲದೆ ಸುತ್ತುವರಿದಿದೆ
ನಾಜೂಕುಗಳು!
ನನ್ನಂತವನೇ ನೇಯ್ದ
ಹಸಿ ರೇಷ್ಮೆ ಸೀರೆಗೆ
ಅಮ್ಮ ಜೀವ ತುಂಬುತ್ತಿದ್ದಾಳೆ
ಸುಕ್ಕು ಸುಕ್ಕು ನಗುವನ್ನು
ಇಸ್ತ್ರೀ ಮಾಡುತ್ತಿದ್ದಾನೆ ಅಪ್ಪ
ಹಳಸುಗಳನ್ನು ಅಂಟಿಸಿಕೊಂಡಿರುವ
ಕುಕ್ಕರು
ಸೀಟಿ ಹೊಡೆಯುವುದನ್ನೇ ಮರೆತಂತಿದೆ
ಸಂತಾಪ ಸೂಚಿಸುತ್ತಿವೆ
ಬೆಂದ ಅಗಳು
ಹೊಸದಾಗಿ ಎದುರು ನಿಲ್ಲುತ್ತಿವೆ
ಅದೇ ಹಳೇ ಹಸಿವುಗಳು!
ಪಾಚಿಕಟ್ಟಿದ ಬಾತ್ರೂಮಿನಲ್ಲಿ
ಸ್ನಾನಗಳು ಜಾರಿಬೀಳುತ್ತಿವೆ
ಪೂರ್ತಿಯಾಗುವ ತವಕದಲ್ಲಿದೆ ನೋಡಿ
ತುಂಡು ಸಾಬೂನುಗಳು
ಸಂತ್ರಸ್ತರಂತಾಗಿದೆ
ಕುಬೇರ ಮೂಲೆಯ ಜೇಡ!!
ರಿಮೋಟಿನ ಬೆನ್ನಿಗೆ
ಏಟು ಬೀಳುತ್ತಲೇ ಇದೆ
ಪಿಂಚಣಿ ಕೇಳುತ್ತಿರುವಾಗ
ವೃದ್ಧಾಪ್ಯದ ಟಿವಿ!
5 .
ಎರಡು ತುದಿಗಳ ನಡುವೆ
ಬೆರಗುಗಣ್ಣಿನಿಂದ
ಅಲೆಯುತ್ತಿರುತ್ತೇನೆ
ಗದ್ದಲದಲ್ಲೂ ಸೌಮ್ಯವಾಗಿ
ಸೆಳೆಯುತ್ತಿರುವ
ಗಾಂಧಿಬಜಾರಿನ ರಸ್ತೆ
ನನ್ನ ಪಾಲಿಗೆ
ಸದಾ ಶೃಂಗಾರಗೊಂಡಿರುವ
ಅಪರೂಪದ ಸುಂದರಿ
ಕಣ್ಣು ಹಾಯಿಸಿದಷ್ಟು ಕಾಣುವ ಬಣ್ಣ
ಪ್ರೇಮಿಗಳನ್ನು , ವಿರಹಿಗಳನ್ನು
ತನ್ನೊಳಗಿರಿಸಿಕೊಂಡಿದೆ
ಬೈಟು ಕಾಫಿ ಹೀರಿ ಹೇಳುವ
ತಾತನ ಪೋಲಿ ಜೋಕಿನ ನಗು
ವಿದ್ಯಾರ್ಥಿ ಭವನದ ದೋಸೆ ಸವಿದು
ನಾಲಿಗೆ ಚಪ್ಪರಿಸುತ್ತಿರುವ ಮಗು
ಇದು ಈ ಬಜಾರಿನಲ್ಲಿ
ಬಿಕ್ಕಳಿಸುವ ಪುರಾತನ ಅನಿಸುವ
ತಾಜಾ ಕವಿತೆ
ಅಕ್ಕಪಕ್ಕದಲ್ಲಿ ಶಿಸ್ತಿನಿಂದ ನಿಂತು
ಬಂದು ಹೋದವರೆಲ್ಲರಿಗೂ
ಬದುಕನು ಪರಿಚಯಿಸುತ್ತಿದೆ
ಹೂ ಲೋಕ
ಗುಂಡಪ್ಪನ ಕಗ್ಗದ ಹಾಗೆ
ನೆಲಮಳಿಗೆಯ ಅಂಕಿತಾಕ್ಕೆ ಹೋಗಿ
ಕಥೆಗಳೊಳಗೆ ಕಳೆದುಹೋಗಿ
ತುದಿ ಪೇಜನ್ನು ಮಡಚಿಟ್ಟು
ಪರಿಮಳವನ್ನು ಜೇಬಿನಲ್ಲಿರಿಸಿಕೊಂಡು
ಹೊರಬರುವುದಿದೆಯಲ್ಲ
ಹಾಂ ಅಲ್ಲೇ
ಭರ್ಜರಿ ಭೋಜನವೊಂದು
ಬಾಯಾರಿ ಕಾಯುತ್ತಿದೆ
ಇಡೀ ಕರ್ನಾಟಕವನ್ನು ಒಂದು ಮಾಡಿ
ಹಸಿವಿಗೊಂದು ಆಶ್ರಯ ನೀಡುತ್ತ
ಕಾಲೇಜು ಕನ್ಯೆಯರ
ಭುಜ ಸೋಕಿಸಲೆಂದೆ
ಇರುವ ಪುಟ್ಟ ಪುಟ್ಪಾತು
ಖಾಲಿಯಾಗಿರುವವರನ್ನು
ಪೂರ್ತಿಯಾಗಿಸುತ್ತಿದೆ
ಥೇಟು ತನ್ನಂತೆ
ಅದೇ ಗಾಂಧಿಬಜಾರಿನಂತೆ
6.
ಕೈಚೀಲ ಹೊತ್ತು
ಮೊದಲ ಬಸ್ಸನ್ನು ಹತ್ತಿ
ಗೆಳೆಯ ಬರುತ್ತಿದ್ದಾನಂತೆ ,
ಕಾಲಿಡುತ್ತಿದ್ದಂತೆ
ನಗರ ಅವನಿಗೆ ನಗ್ನವಾಗಿ
ಕಂಡರೂ ಅಚ್ಚರಿಯಿಲ್ಲ!
ಬೂಟು ತೊಟ್ಟ ಕಾಲುಗಳಿಗೆ
ಸೂರ್ಯ ಪಾಲೀಶು ಮಾಡುತ್ತಿರುವ
ಬೈತಲೆಯಂತ ಬೀದಿಗಳಲ್ಲಿ
ಅವನು ಮುಗ್ಧತೆಯನ್ನು ಬಿಟ್ಟು
ಬರುತ್ತಿರುವ ಖಾಲಿ ಕಾಗದದಂತಾಗಿದ್ದಾನೆ!
ಕೈಕಟ್ಟಿ ನಿಂತಿರುವ
ಮುಗಿಲೆತ್ತರದ ಕಟ್ಟಡಗಳ
ಕಾಲಡಿಗೆ ಕಚಗುಳಿ ಇಡುತ್ತಿದ್ದಾನೆ ಪಾಪ
ಟ್ರಾಫಿಕ್ಕಿನ ವಾಹನಗಳ ಸಂತೆಯಲ್ಲಿ
ಇವನು , ಬೆರಗು ತುಂಬಿಕೊಂಡ ಆಟಿಕೆ
ದುಬಾರಿತನಗಳಿಗೆ ಆಗಾಗ
ಮಾತುಗಳಲ್ಲೇ ತಪರಾಕಿ ಕೊಡುತ್ತಾನೆ
ಅವನೂರಿನ ಚಂದ್ರ
ಇಲ್ಲಿ ಶ್ರೀಮಂತ ಸರಕು!
7.
ನನ್ನೂರಿನ ಗ್ರಾಮಾಫೋನು
ಜಿರಳೆ ಮೀಸೆಯಂಥ ಹುಡುಗಿಯ
ಹಾಡು ಗುನುಗುತ್ತಿದೆ
ರಂಗೋಲಿಯಾಗಿ ರೂಪಾಂತರಗೊಳ್ಳುತ್ತಿದೆ
ಕೆಳಗೆ ಬಿದ್ದ ಬೆಳಗಿನಜಾವದ ನಕ್ಷತ್ರ!
ಅಂಗಳದಲ್ಲಿ ಉದುರುತ್ತಿರುವ
ಪಾರಿಜಾತವನ್ನು ಹೆಕ್ಕುತ್ತಿದ್ದಾನೆ ಸೂರ್ಯ
ಘಮಿಸುವ ಸಗಣಿಯ ನೆಲದ ಮೇಲೆ
ನಡೆದು ಬರುತ್ತಿದೆ ಬೆಳಗು
ಮೈನೆರೆಯುತ್ತಿದೆ ನೋಡಿ ಮುಂಜಾವು!
ತುಳಸಿಕಟ್ಟೆ ಸುತ್ತುತ್ತಿರಲು
ಅಗ್ರಹಾರದ ಸುಪ್ರಭಾತ
ಊರಿನ ಮೊದಲ ಬಸ್ಸನ್ನು
ಹತ್ತುತ್ತಿದ್ದಾನೆ ಪಶ್ಚಿಮದ ಚಂದಿರ
ಗೋಪುರದ ದೀಪ ಬೆಳಗುತ್ತಿದೆ
ನಂದಿಬಟ್ಟಲ ನಗು!

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


