Advertisement
 ಕಾ.ತ.ಚಿಕ್ಕಣ್ಣ ಎಂಬ ಕನ್ನಡ ಪರಿಚಾರಕ: ಡಾ. ಎಲ್.ಜಿ.ಮೀರಾ ಅಂಕಣ

 ಕಾ.ತ.ಚಿಕ್ಕಣ್ಣ ಎಂಬ ಕನ್ನಡ ಪರಿಚಾರಕ: ಡಾ. ಎಲ್.ಜಿ.ಮೀರಾ ಅಂಕಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಯಾಗಿ, ಸೃಜನಶೀಲ ಲೇಖಕರಾಗಿದ್ದುಕೊಂಡು ವಿವಿಧ ಪ್ರಕಾರಗಳ ಸುಮಾರು ಹದಿನಾರು ಸಾಹಿತ್ಯಕೃತಿಗಳನ್ನು ರಚಿಸಿ, ಅಷ್ಟೇ ಸಂಖ್ಯೆಯ ಮೌಲಿಕ ಕೃತಿಗಳನ್ನು ಸಂಪಾದಿಸಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚುಕ್ಕಾಣಿ ಹಿಡಿದವರಾಗಿ, ಸಂಘಟಕರಾಗಿ ಇವರು ನಾಡಿಗೆ ನೀಡಿದ ಕೊಡುಗೆ ಸ್ಮರಣೀಯ. ಜೊತೆಗೆ ತಮ್ಮ ಗ್ರಾಮೀಣ ಮೂಲವನ್ನು ಮರೆಯದೆ ಅದರ ಮೂಲಕವೇ ತಮ್ಮೊಳಗಿನ ಪ್ರೀತಿ ವಿಶ್ವಾಸಗಳ ಸೆಲೆಯನ್ನು ಬತ್ತದಂತೆ ಉಳಿಸಿಕೊಂಡು ನಮ್ಮಂತಹ ಕಿರಿಯರಿಗೆ ಸಾಹಿತ್ಯ-ಸಂಸ್ಕೃತಿಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟದ್ದಷ್ಟದ್ದೇ ಅಲ್ಲದೆ, ಹೇಗೆ ಕೆಲಸ ಮಾಡಬೇಕು, ಹೇಗೆ ಮುಂಚೂಣಿ ವಹಿಸಬೇಕು ಎಂಬುದಕ್ಕೂ ಒಂದು ಮಾದರಿ ಆದರು.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ನಾಲ್ಕನೆಯ ಬರಹ

ಕನ್ನಡ ತಾಯಿಯ ಮಡಿಲಲ್ಲಿ ಹುಟ್ಟಿ ಅವಳಿಗೆ ಅಕ್ಷರ ಹಾಗೂ ಸಾಹಿತ್ಯ ಸಂಘಟನೆಯ ಮೂಲಕ ಸೇವೆ ಸಲ್ಲಿಸಿದ ಅನೇಕ ಮಹನೀಯರಿದ್ದಾರೆ. ಇಂತಹವರನ್ನು ಕನ್ನಡ ಪರಿಚಾರಕರೆಂದು ನಮ್ಮ ನಾಡು ಅಭಿಮಾನದಿಂದ ನೆನೆಯುತ್ತದೆ, ಇಂತಹವರಲ್ಲಿ ಒಬ್ಬರು ಕಾ.ತ.ಚಿಕ್ಕಣ್ಣನವರು.

ಸರ್ಕಾರಿ ಅಧಿಕಾರಿಗಳು ತಮ್ಮ ಆರಾಮವಲಯದಿಂದ (ಕಂಫರ್ಟ್ ಝೋನ್‌ನಿಂದ) ಹೊರಗೆ ಬಂದು ಕೆಲಸ ಮಾಡುವುದು ಕಡಿಮೆ. ತಮ್ಮ ರೂಢಿಗತ ದೈನಂದಿನ ಲಯದಿಂದ ದೂರ ಹೋಗಿ ತಮ್ಮ ಅತ್ಯಾಸಕ್ತಿಯ ಕ್ಷೇತ್ರದಲ್ಲಿ ಶಿಸ್ತಿನ ದುಡಿಮೆ ಮಾಡುವುದು ಅದೂ ನಿಡುಗಾಲ ದುಡಿಯುವುದು ಅಂದರೆ ಅದಕ್ಕೆ ತುಂಬ ಪರಿಶ್ರಮ, ತ್ಯಾಗ, ಹಾಗೂ ಯೋಜಿತ ಕಾರ್ಯಾಭ್ಯಾಸ ಬೇಕು. ಕನಕದಾಸರನ್ನು ಹೃದಯಕ್ಕೆ ಹಚ್ಚಿಕೊಂಡು ದುಡಿದ, ಈಗ ನಿವೃತ್ತಿಯ ನಂತರವೂ ದುಡಿಯುತ್ತಿರುವ ಚಿಕ್ಕಣ್ಣನವರು ಇಂತಹ ಒಬ್ಬ ಅಪರೂಪದ ಅಧಿಕಾರಿ. ಬೇರೆ ಬೇರೆ ಊರುಗಳಿಗೆ ಮಾಡಬೇಕಾದ ಪ್ರಯಾಣದ ದಣಿವು, ಚಿಕ್ಕಪುಟ್ಟ ಹಾಗೂ ದೊಡ್ಡ ವಿಷಯಗಳನ್ನು ಯೋಜಿಸುವ-ಕ್ರೋಢೀಕರಿಸುವ ಜವಾಬ್ದಾರಿ, ಸಭೆಗಳ ನಿರ್ವಹಣೆ, ಅದಕ್ಕೆ ನೀಡಬೇಕಾದ ವಿಷಯ ಸಂಪನ್ಮೂಲದ ತಯಾರಿ, ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕಾರ್ಯಕ್ರಮಕ್ಕೆ ಕರೆಸುವುದು, ಅವರ ಆತಿಥ್ಯ-ದೇಖರೇಖಿ, ಇದರ ಮದ್ಯೆ ಮಧ್ಯೆ ಬರುವ ನೂರು ಸವಾಲುಗಳನ್ನು ಎದುರಿಸುವ ಗಟ್ಟಿತನ…….. ಒಂದೇ ಎರಡೇ…. ಇದನ್ನು ಮಾಡಿ ಮುಗಿಸುವುದೇನೂ ಸಾಮಾನ್ಯವಾದ ಕೆಲಸವಲ್ಲ. ಚಿಕ್ಕಣ್ಣನವರು ನನಗೆ ಪರಿಚಿತರಾದದ್ದು ಇಂತಹ ಅಹರ್ನಿಶಿ ದುಡಿಮೆಯ ಅವರ `ಕನಕಕಾಯಕ’ದ ಕಾಲಾವಧಿಯಲ್ಲಿ. ಚಿಕ್ಕಣ್ಣ ಅಂದರೆ ಕನಕದಾಸರ ನೆನಪಾಗುವಷ್ಟು ಅವರು ಈ ಸಂತಕವಿಯ ಅಧ್ಯಯನ ಹಾಗೂ ಸಾಹಿತ್ಯದ ಪ್ರಸಾರಕ್ಕೆ ಕೊಡುಗೆ ಕೊಟ್ಟಿದ್ದಾರೆ.

ಆದರೆ ಕನಕಮುಖವನ್ನು ಹೊರತು ಪಡಿಸಿಯೂ ಚಿಕ್ಕಣ್ಣನವರ ಬದುಕಿಗೆ, ದುಡಿಮೆಗೆ ಹಲವು ಮುಖಗಳಿವೆ, ಹಲವು ಆಯಾಮಗಳಿವೆ. ಕಾಳಮ್ಮನ ಕೊಪ್ಪಲು- ಹರದನಹಳ್ಳಿ-ಸಾಲಿಗ್ರಾಮಗಳ ಪರಿಸರದಲ್ಲಿ ಗ್ರಾಮೀಣ ಸೊಗಡನ್ನು ತನ್ನಲ್ಲಿ ಮೈಗೂಡಿಸಿಕೊಂಡು ಬೆಳೆದ ಈ ಹಳ್ಳಿಯ `ಹೈದ’ನ ಎದೆಮಿಡಿತದಲ್ಲಿ ದಿಣ್ಣೆ, ದೊಣೆ, ಕನ್ನೆಸೊಪ್ಪುಗಳು ಸೇರಿಹೋಗಿವೆ. ಇದರೊಂದಿಗೆ ಅನೇಕ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ, ತನ್ನ ಖರ್ಚಿನಲ್ಲೇ ಓದಬೇಕೆಂಬ ಸಾತ್ವಿಕ ಛಲದಲ್ಲಿ, ಸಿಕ್ಕಿದ ಸಣ್ಣಪುಟ್ಟ ಕೆಲಸಗಳನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಾ, ಮೈಸೂರಿನಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದಿದ ಇವರ, ಪ್ರಬುದ್ಧವಯಸ್ಕ ಜೀವನದ ಮೊದಲ ಹಂತದ ಜೀವನಕಥೆ ಮನ ಮಿಡಿಯುವಂಥದ್ದು. ಮೈಸೂರಿಗೆ ಬಂದ ಹೊಸದರಲ್ಲಿ ಇವರು `ಮನೆ ವ್ಯಸನ’(ಸ್ವತಃ ಚಿಕ್ಕಣ್ಣನವರೇ `ವಾರೆನೋಟ’ ಕೃತಿಯಲ್ಲಿ ಬಳಸಿದ ಪದ ಇದು. ಇಂಗ್ಲಿಷ್‌ನ ಹೋಮ್‌ಸಿಕ್‌ನೆಸ್ ಪದಕ್ಕೆ ಎಷ್ಟು ಸೂಕ್ತವಾದ ಸಂವಾದಿ ಪದ ಅಲ್ಲವೆ?)ದಿಂದ ಒದ್ದಾಡಿದ್ದು, ಆ ನೋವಿನಲ್ಲೇ ಇವರಲ್ಲಿ ಸೃಜನಶೀಲತೆ ಮೊಳಕೆಯೊಡೆದು ಇವರು ಕಥೆ, ಕವನ ಬರೆಯಲು ಪ್ರಾರಂಭಿಸಿದ್ದು, ನಂತರ ಸರ್ಕಾರಿ ಕೆಲಸ ಸಿಕ್ಕಿ ಅನುವಾದಕರಾಗಿದ್ದು, ಕನ್ನಡಕ್ಕೆ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ….. ಹೀಗೆ) ಸಂಬಂಧಿಸಿದ ಮುಖ್ಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದದ್ದು, ಭ್ರಷ್ಟತೆಯ ಕಬಂಧಬಾಹುಗಳಿಂದ ಸದಾ ದೂರವಿದ್ದದ್ದು, ಕನ್ನಡ ಭವನದ ನಿರ್ಮಾಣದ ಹಂತದಲ್ಲಿ ಅದರ ನಿರ್ಮಾಣದ ಹಾಗೂ ಅದರ ವಿವಿಧ ಮಹಡಿ, ವಿಭಾಗಗಳಿಗೆ ಹೆಸರಿಡುವ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿದ್ದು, `ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ನಾಟಕರೂಪದ ಅಹೋರಾತ್ರಿ ಪ್ರದರ್ಶನ- ವ್ಯವಸ್ಥೆಯ ನೇತೃತ್ವ ವಹಿಸಿದ್ದು… ಇವೆಲ್ಲ ಇವರ ವೃತ್ತಿಬದುಕಿನ ಆಗಸದ ಪ್ರಜ್ವಲ ನಕ್ಷತ್ರಗಳು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಯಾಗಿ, ಸೃಜನಶೀಲ ಲೇಖಕರಾಗಿದ್ದುಕೊಂಡು ವಿವಿಧ ಪ್ರಕಾರಗಳ ಸುಮಾರು ಹದಿನಾರು ಸಾಹಿತ್ಯಕೃತಿಗಳನ್ನು ರಚಿಸಿ, ಅಷ್ಟೇ ಸಂಖ್ಯೆಯ ಮೌಲಿಕ ಕೃತಿಗಳನ್ನು ಸಂಪಾದಿಸಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚುಕ್ಕಾಣಿ ಹಿಡಿದವರಾಗಿ, ಸಂಘಟಕರಾಗಿ ಇವರು ನಾಡಿಗೆ ನೀಡಿದ ಕೊಡುಗೆ ಸ್ಮರಣೀಯ. ಜೊತೆಗೆ ತಮ್ಮ ಗ್ರಾಮೀಣ ಮೂಲವನ್ನು ಮರೆಯದೆ ಅದರ ಮೂಲಕವೇ ತಮ್ಮೊಳಗಿನ ಪ್ರೀತಿ ವಿಶ್ವಾಸಗಳ ಸೆಲೆಯನ್ನು ಬತ್ತದಂತೆ ಉಳಿಸಿಕೊಂಡು ನಮ್ಮಂತಹ ಕಿರಿಯರಿಗೆ ಸಾಹಿತ್ಯ-ಸಂಸ್ಕೃತಿಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟದ್ದಷ್ಟದ್ದೇ ಅಲ್ಲದೆ, ಹೇಗೆ ಕೆಲಸ ಮಾಡಬೇಕು, ಹೇಗೆ ಮುಂಚೂಣಿ ವಹಿಸಬೇಕು ಎಂಬುದಕ್ಕೂ ಒಂದು ಮಾದರಿ ಆದರು. ಎಂಥದ್ದೇ ಒತ್ತಡದಲ್ಲೂ ಸಾಹಿತ್ಯ, ಸಂಗೀತ, ಕಲೆಗಳ ಮೇಲಿನ ಒಲವನ್ನು ಕಾಪಿಟ್ಟುಕೊಂಡ ಇವರು ಅಧಿಕಾರವರ್ಗದಲ್ಲಿ ಅಪರೂಪದವರು.

ಚಿಕ್ಕಣ್ಣನವರ ಓದುಗರು, ಅಭಿಮಾನಿಗಳು, ಮಿತ್ರರು ಸೇರಿ ಅವರಿಗೊಂದು ಅಭಿನಂದನ ಗ್ರಂಥಗೌರವವನ್ನು ಅರ್ಪಿಸಲು ಸಿದ್ಧತೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರ ಒಂದು ಕಥಾ ಸಂಕಲನವನ್ನು ಈ ಕೆಳಗೆ ಪರಿಚಯಿಸಿದ್ದೇನೆ.

ಗ್ರಾಮೀಣ ಸೊಗಡಿನ ಬನಿ ಮತ್ತು ನೆಲಮೂಲದ ಭಾಷಾರೂಪವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ತಂದವರಲ್ಲಿ ಕಾ.ತ.ಚಿಕ್ಕಣ್ಣನವರೂ ಒಬ್ಬರು. ಅವರ `ಒಡಲುರಿ’ ಕಥಾ ಸಂಕಲನವು ಗ್ರಾಮೀಣ ಜನರ ಮತ್ತು ಗ್ರಾಮಮೂಲವುಳ್ಳ ನಗರಿಗರ ತುಡಿತ ತಲ್ಲಣಗಳನ್ನು ಹಾಗೂ ಮಾನವೀಯ ಸನ್ನಿವೇಶವನ್ನು ಚಿತ್ರಿಸುತ್ತದೆ. ಎಂಟು ಕಥೆಗಳನ್ನು ಒಳಗೊಂಡ ಸಂಕಲನ ಇದು. ಕಥೆಗಳು ಅಂದರೆ ಅಪ್ಪಟ ಮನುಷ್ಯನನ್ನು ಕಾಣಿಸುವ ತೆರೆನಿವಾರಕಗಳು. ಅವು ಯಾವಾಗಲೂ ಮನುಷ್ಯ ಮನುಷ್ಯರ ನಡುವಿನ ಸಹಾನುಭೂತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿರುತ್ತವೆ. ಈ ಕಥೆಗಳಿಂದಾಗಿ ಕಥೆಗಾರರಂತೆ ನಾವೂ ಸಹ ಹೊಸ ಮನುಷ್ಯರಾಗುತ್ತೇವೆ. ಮನುಷ್ಯರನ್ನು ಈವರೆಗೂ ನೋಡದ ಮತ್ತು ಅರ್ಥೈಸದ ರೀತಿಯಲ್ಲಿ ನೋಡಲು ಮತ್ತು ಅರ್ಥೈಸಲು ಕಲಿಯುತ್ತೇವೆ.

`ಒಡಲುರಿ’ ಕಥಾಸಂಕಲನದ ಎಂಟು ಕಥೆಗಳಲ್ಲಿ ಹೆಚ್ಚಿನವು ಹಳ್ಳಿಯ ವಾತಾವರಣದಲ್ಲಿ ನಡೆಯುವಂಥವು. ಆದರೆ ಇಲ್ಲಿ ಆಧುನಿಕ ಪ್ರಜ್ಞೆಯು ನಗರಕ್ಕೆ ಹೋಗಿ ಬಂದವನ ರೂಪದಲ್ಲಿಯೋ ಅಥವಾ ಒಂದು ನಿರೂಪಕ ಪ್ರಜ್ಞೆಯಾಗಿಯೋ ಕೆಲಸ ಮಾಡುತ್ತದೆ. ಹಳ್ಳಿಯ ಭಾಗವಾದ ಅಂಧಶ್ರದ್ಧೆ, ಮೌಢ್ಯ, ಕುಟಿಲತೆಗಳನ್ನು ಪ್ರಶ್ನಿಸುವ, ವಿಮರ್ಶಿಸುವ ನಿರೂಪಕ ಪ್ರಜ್ಞೆಯು ಜೀವಪರವಾದದ್ದರ ಮತ್ತು ಆರೋಗ್ಯಕರವಾದದ್ದರ ಭಾಗವಾಗಿ ನಿಲ್ಲುತ್ತದೆ.

`ಕಪ್ಪು ಮನಸ್ಸಿನ ಮೇಲೆ ಬರೆದ ಬಿಳಿ ಅಕ್ಷರ’ ಕಥೆಯಲ್ಲಿ ನಗರದಿಂದ ಹಳ್ಳಿಯ ಮನೆಗೆ ಬಂದ ಮಗನು ತನ್ನ ತಂದೆಯನ್ನು ಮುಖಾಮುಖಿಯಾಗುವ ಸನ್ನಿವೇಶ ಇದೆ. ತಮ್ಮನ ಮದುವೆಗೆ ತಂದೆ ತನ್ನ ಬಳಿ ಹಣ ಕೇಳಲಿದ್ದಾನೆ ಎಂಬ ಭಾವನೆ ಮಗನಲ್ಲಿರುತ್ತದೆ. ಹಳ್ಳಿಯಲ್ಲಿದ್ದಾಗಿನ ಹಳೆಯ ನೆನಪುಗಳ ನಡುವೆ ಈ ವಿಚಾರ ಅವನನ್ನು ಕೊರೆಯುತ್ತಿರುತ್ತದೆ. ಆದರೆ ಕೊನೆಯಲ್ಲಿ ತಂದೆ ಯಾವುದೇ ನಿರೀಕ್ಷೆ ಮಾಡದೆ ಅದಕ್ಕೆ ಬದಲಾಗಿ ತನ್ನ ಹೆಂಡತಿಯ ಯೋಗಕ್ಷೇಮದ ಬಗ್ಗೆ ಮಾತಾಡಿದಾಗ ಮಗನಿಗೆ ತುಂಬ ನಾಚಿಕೆ ಅನ್ನಿಸುತ್ರದೆ. “ಮುದುಕ ಗಟ್ಟಿಯಾಗಿ ನಡೆಯುತ್ತಿದ್ದಂತ್ತಿತ್ತು. ನಾನು ಸುಮ್ಮನೆ ನೆರಳಿನಂತೆ ಹಿಂಬಾಲಿಸತೊಡಗಿದೆ” ಎಂಬ ಮಾತು ಧ್ವನಿಪೂರ್ಣವಾಗಿದೆ. ತಂದೆಯ ನಿರ್ವ್ಯಾಜ ಪ್ರೀತಿ ಮತ್ತು ತನ್ನ ಸಣ್ಣತನಕ್ಕಾಗಿ ಮಗನ ಮನಸ್ಸಿನಲ್ಲಿ ಹುಟ್ಟಿದ ಮುಜುಗರವನ್ನು ಒಟ್ಟಿಗೆ ಧ್ವನಿಸುವ ಮಾತು ಇದು.

ನಗರವಾಸ ಮನುಷ್ಯನಿಗೆ ಅನೇಕ ಹೊಸ ಅನುಭವಗಳನ್ನು ಕೊಡುವಂಥದ್ದು. ಈ ಸಂಕಲನದ `ಕವಲು’ ಕಥೆಯಲ್ಲಿ ಹಳ್ಳಿಯಿಂದ ಮೈಸೂರು ನಗರಕ್ಕೆ ಓದಲು ಬಂದ ನಿರೂಪಕನ ಜೊತೆ, ಮೂರು ವರ್ಷ ಹಾಸ್ಟೆಲಿನಲ್ಲಿದ್ದ ಗೋವಿಂದಶೆಟ್ಟಿ ಎಂಬವನ ಚಿತ್ರಣ ಇದೆ. ಓದುವುದರಲ್ಲಿ ತಾನು ಮುಂದಿರುವ ಬಗ್ಗೆ ಅಹಂಕಾರ ಪಡುತ್ತಾ, ತನ್ನ ಚುಚ್ಚು ಮಾತುಗಳಿಂದ ಜೊತೆಯಲ್ಲಿದ್ದವರನ್ನು ತುಂಬ ನೋಯಿಸುತ್ತ ಅವರ ಮನಸ್ಸುಗಳಲ್ಲಿ ಕಹಿ ನೆನಪಾಗಿ ಉಳಿದವನು ಗೋವಿಂದಶೆಟ್ಟಿ. ಪುಸ್ತಕದ ಹುಳುವಾಗಿದ್ದ ಅವನು ಕಾಲಾಂತರದಲ್ಲಿ ಪದವಿಯನ್ನೂ ಮುಗಿಸಲಾಗದೆ ಕುಟುಂಬದಲ್ಲಿನ ಸಾವು, ನೋವು, ಬಡತನಗಳಂತಹ ನಾನಾ ಕಷ್ಟಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. “ಪಠ್ಯ ಪುಸ್ತಕದ ಪಾಠಕ್ಕಿಂತ ಬದುಕು ಕಲಿಸಿದ ಪಾಠವೇ ದೊಡ್ಡದೆಂದು ಅರಿವಾಗುವ” ಸ್ಥಿತಿಗೆ ಅವನು ಬಂದು ತಲುಪಿರುತ್ತಾನೆ. ಮನುಷ್ಯ ಹೇಗಿದ್ದರೆ ಒಳ್ಳೆಯದು ಎಂದು ಚಿಂತಿಸುವ ಕಥೆಗಾರನ ಪ್ರಜ್ಞೆ ಇಲ್ಲಿ ಕೆಲಸ ಮಾಡಿರುವುದನ್ನು ಗಮನಿಸುತ್ತೇವೆ. ಮನುಷ್ಯನ ಅಹಂಕಾರವನ್ನು ಹೆಚ್ಚಿಸುವ ವಿದ್ಯೆ ಮತ್ತು ನಗರವಾಸ ಅವನನ್ನು ಕೊನೆಯವರೆಗೆ ಕಾಯುತ್ತವೆಯೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವಂತೆ ಈ ಕಥೆ ಇದೆ.

ಈ ಕಥಾ ಸಂಕಲನಕ್ಕೆ ಹೆಸರು ನೀಡಿರುವ `ಒಡಲುರಿ’ ಕಥೆಯಲ್ಲಿ ಬಡವರ, ಅಸಹಾಯಕರ ಒಡಲುರಿಯನ್ನು ಹಳ್ಳಿಯ ಪುರೋಹಿತಶಾಹಿ ಮತ್ತು ಪುರುಷ ಪ್ರಧಾನ ಪ್ರಜ್ಞೆಗಳು ಇನ್ನಷ್ಟು ಹೆಚ್ಚಿಸುವುದನ್ನು ತೋರಿಸಲಾಗಿದೆ. ಸಣ್ಣಿಂಗಿ ಎಂಬ ಹೆಂಗಸು ತನ್ನ ಕಾಣೆಯಾದ ಗಂಡನು ಮನೆಗೆ ಮರಳಲಿ ಎಂದು ಹಂಬಲಿಸುತ್ತಿರುತ್ತಾಳೆ. ಇದಕ್ಕಾಗಿ ಊರದೇವತೆಯನ್ನು ಪೂಜಿಸುವ ಪೂಜಾರಿಯ ಮೊರೆ ಹೋಗಿರುತ್ತಾಳೆ. ಅವನು ಪೂಜೆ, ಪರಿಹಾರಗಳ ನೆಪದಲ್ಲಿ ಅವಳನ್ನು ಲೈಂಗಿಕವಾಗಿ ಶೋಷಿಸಲು ಮುಂದಾದಾಗ ಅವಳಿಗೆ ತೀರ ಬೇಸರವಾಗುತ್ತದೆ. ಆದರೂ ದೇವಿಯ ಮೇಲಿನ ಭಕ್ತಿ, ನಂಬಿಕೆಗಳನ್ನು ಉಳಿಸಿಕೊಂಡು ಗಂಡನ ಮರಳುವಿಕೆಗಾಗಿ ಪೂಜೆ ಸಲ್ಲಿಸುತ್ತಲೇ ಇರುತ್ತಾಳೆ. ಜಾತ್ರೆಯ ದಿನ ದೇವತೆಯನ್ನು ತನ್ನ ಮೇಲೆ ಆವಾಹಿಸಿಕೊಂಡ ಆ ಪೂಜಾರಿಯು ತನ್ನ ಎದೆಯೊಡೆಯುವಂತೆ, ಶಾಪ ಕೊಡುವಂತೆ ಮಾತಾಡಿದಾಗ ಅವಳಿಗೆ ಇದೆಲ್ಲದರ ಮರ್ಮ ಗೊತ್ತಾಗಿ ಸಂಕಟದಿಂದ ತನ್ನ ಸಿಟ್ಟನ್ನು ಕಟುಮಾತುಗಳ ಮೂಲಕ ಪ್ರಕಟಿಸುತ್ತಾಳೆ. ಗಾಢವಾದ ಜೀವನಾನುಭವವೇ ಇಲ್ಲಿ ವಾಸ್ತವಿಕ ಪ್ರಜ್ಞೆಯ ಉಗಮಕ್ಕೆ ಕಾರಣವಾಗುವುದನ್ನು ನಾವು ಗಮನಿಸಬಹುದು. ವೈಚಾರಿಕತೆ, ವೈಜ್ಞಾನಿಕತೆ ಎಂದು ನಾವು ಕರೆಯುವ ವಿಚಾರಗಳು ಗಾಢ ನೋವುಗಳಿಂದ ಮೂಡಬಹುದು ಎಂಬ ಸಾಧ್ಯತೆಯು ಇಲ್ಲಿ ಮುಖ್ಯವಾದದ್ದು. ಸತ್ಯವು ಜೀವನದಲ್ಲಿ ಪ್ರಕಟಗೊಳ್ಳುವುದು ಹೀಗೆಯೇ ಅಲ್ಲವೆ?

`ನಿಶ್ಯಬ್ದವಾದವನು’ ಒಬ್ಬ ಬಸ್ ಡ್ರೈವರ್‌ನ ಕಥೆ. ಇಲ್ಲಿ ಜನರ ನಡವಳಿಕೆಯ ವಿಮರ್ಶೆ ಇದೆ. ಇದರಲ್ಲಿ ಕಛೇರಿಯ ಭ್ರಷ್ಟ ಗುಮಾಸ್ತ, ದಲ್ಲಾಳಿ ಮುಂತಾದವರ ಕುತಂತ್ರಕ್ಕೆ ಬಲಿಯಾಗಿ ಒದ್ದಾಡುವ ಒಬ್ಬ ವ್ಯಕ್ತಿಯ ಕಥೆ ಇದೆ. ಕೆಲಸದ ಆದೇಶ ಸಿಗದೆ ಒದ್ದಾಡುವ ವ್ಯಕ್ತಿಯ ಕಥೆ. ಮಾನವೀಯತೆ ಅನ್ನವುದು ಸರ್ಕಾರಿ ಸಂಸ್ಥೆಗಳ ಯಾಂತ್ರಿಕತೆಯಲ್ಲಿ ಮರೆಯಾಗಿ ಹೋಗುತ್ತದೆಯೇ? “ಯಾವ ತಪ್ಪನ್ನೂ ಮಾಡದೆ ಅನುಭವಿಸುವ ನಷ್ಟಕ್ಕೆ ಎರಡು ಸಹಾನುಭೂತಿಯ ಮಾತನ್ನಾದರೂ ಆಡುವಷ್ಟು ಮನುಷ್ಯತ್ವವನ್ನು ಕಳಕೊಂಡ ಸ್ಥಿತಿಯಲ್ಲಿ ಇವರೆಲ್ಲ ಬದುಕಿದ್ದಾರೆ”. ಆ ಡ್ರೈವರ್ ತಾನಿದ್ದ ಒತ್ತಡದ ಪರಿಸ್ಥಿತಿಯಲ್ಲಿ, ಕೆಲಸದ ಮರುಆದೇಶ ಅಂಚೆಯ ಮೂಲಕ ಬಂದಿರಬಹುದಾದದ್ದು ಸಿಗುತ್ತಿಲ್ಲ ಎಂಬ ಆತಂಕದಲ್ಲಿ, ತನ್ನ ಮಗುವನ್ನು ಹೊಡೆದು ಅದು ಸಾಯುವ ಸ್ಥಿತಿಗೆ ಬಂದಿರುತ್ತದೆ. ಇವನು ಬೇಸರ, ಹಸಿವು, ಆಯಾಸಗಳಲ್ಲೇ ಬಸ್ ಹತ್ತಿ ಕುಳಿತಾಗ ಸರಿಯಾಗಿ ಓಡಿಸಲು ಆಗದೆ ಅಪಘಾತ ಆಗುತ್ತದೆ. ಒಟ್ಟಿನಲ್ಲಿ ಒಂದು ನೋವಿನ ಸನ್ನಿವೇಶದ ಕಥೆ. ನಾವು ದಿನವೂ ಸೇವೆ ಬಯಸುವ ಆದರೆ ಎಂದೂ ಅವರ ಬಗ್ಗೆ ಯೋಚಿಸದ ಡ್ರೈವರ್, ಕಂಡಕ್ಟರ್‌ಗಳ ಬದುಕು ಹೇಗಿರಬಹುದು ಎಂದು ಯೋಚಿಸುವಂತೆ ಮಾಡುವ ಕಥೆ ಇದು. ಸಾಹಿತ್ಯವು ಮಾಡಬೇಕಾದ ಕೆಲಸ ಇದೇ ಅಲ್ಲವೇ. ಸಹ-ಅನುಭೂತಿಯನ್ನು ಹೆಚ್ಚಿಸುವುದು.

`ಪರೆ ಬಿಟ್ಟನು ಹುಡುಗ’ ಮತ್ತು `ಸಪ್ಪಳಗಳು’ ಕಥೆಗಳು ಹದಿಹರೆಯದ ಮತ್ತು ಯೌವನಾವಸ್ಥೆಯ ಗಂಡಿನ ತಲ್ಲಣ, ಲೈಂಗಿಕ ಬಯಕೆ, ಬೇಗುದಿಗಳನ್ನು ಚಿತ್ರಿಸುತ್ತವೆ. ಕಾಮ ಮೈಯ ಒಂದು ಅಭೀಪ್ಸೆಯಾಗಿ ಕಾಡುವ, ಏನೆಲ್ಲ ಮುಜುಗರ, ತಳಮಳಗಳಿಗೆ ವ್ಯಕ್ತಿಯನ್ನು ಒಳಗು ಮಾಡುವ ವಿಷಯವಾಗಿ ಇಲ್ಲಿ ಕಾಣಿಸಿಕೊಳ್ಳುತ್ತದೆ. ಇವು ನವ್ಯ ಶೈಲಿಯ ಕಥೆಗಳನ್ನು ನೆನಪಿಸುತ್ತವೆ. ಅದರಲ್ಲೂ `ಪರೆ ಬಿಟ್ಟನು ಹುಡುಗ’ ಕಥೆಯಂತೂ ಲೈಂಗಿಕ ಅನುಭವಗಳಿಗೆ ಹೊಸದಾಗಿ ತೆರೆದುಕೊಳ್ಳುತ್ತಿರುವ ದೈನೇಸಿ ಹುಡುಗನೊಬ್ಬನ ತೀವ್ರತೆಯನ್ನು ಕಣ್ಣಿಗೆ ಕಟ್ಟುವಂತೆ, ಮನಸ್ಸು ತಲ್ಲಣಗೊಳ್ಳುವಂತೆ ಚಿತ್ರಿಸುತ್ತದೆ. ಆ ಹಂತದ ಯುವಕರ ಬೇಗುದಿಗಳನ್ನು ಕುರಿತು ಓದುಗರಲ್ಲಿ ಓದುಗರಲ್ಲಿ ಸೂಕ್ಷ್ಮತೆ ಸಹಾನುಭೂತಿ ಹುಟ್ಟುವಂತೆ ಮಾಡುವ ಕಥೆಗಳಿವು. `ಮಂಡೆ ಬಿಟ್ಟವರು’ ಕಥೆ ಕೂಡ ಲೈಂಗಿಕತೆಯ ಕಾರಣದಿಂದ ಹಳ್ಳಿಯಲ್ಲಿ ನಡೆಯುವ ಸ್ವಾರ್ಥಸಾಧನೆಯ ಒಂದು ವೃತ್ತಾಂತ. ಈ ಕಥೆಯಲ್ಲಿ ಇದರ ವಿರುದ್ಧ ದನಿಯೆತ್ತುವ ನಾಯಕ ಇರುವುದು ಒಂದು ವಿಶೇಷ.

`ಅನ್ಯ’ ಈ ಸಂಕಲನದ ವಿಶಿಷ್ಟ ಕಥೆ. ಸಮಾಜವಾದಿ ಒಳನೋಟಗಳನ್ನು ಹೊಂದಿರುವ ಕಥೆ. ಗೌಡರ ತೋಟದಲ್ಲಿ ಸಾಕಷ್ಟು ಸಮಯದಿಂದ ಮೈಮುರಿದು ನಿಯತ್ತಾಗಿ ದುಡಿಯುತ್ತಿರುವ ಬಡ ನಿಂಗೀರನ ವೃತ್ತಾಂತ ಇದು. ತಾನು ಗೌಡರದಾದ ತೆಂಗಿನ ತೋಟದಲ್ಲೇ ಕೆಲಸ ಮಾಡುತ್ತಿದ್ದರೂ ಆಯಾಸವಾದಾಗ ಒಂದೇ ಒಂದು ಎಳನೀರನ್ನೂ ತಾನಾಗಿ ಎತ್ತಿಕೊಂಡು ಕುಡಿಯಲಾಗದ ಸ್ಥಿತಿ, ತನಗೆ ಜಮೀನು ಕೊಡಿಸುತ್ತೇನೆ ಎಂದು ಗೌಡರು ಆಸೆ ತೋರಿಸಿದ್ದರೂ ಅದು ಇಂದಿಗೂ ಕೈಗೂಡದಿರುವುದು, ತನ್ನ ನಿಷ್ಠೆಯ ದುಡಿಮೆಯನ್ನು ಯಾರೂ ಪ್ರಶಂಸೆ ಮಾಡದಿರುವುದು, ಮೌನವಾಗಿ ದುಡಿಯುವ ತನ್ನ ಕೆಲಸಕ್ಕೆ ಸಿಗಬೇಕಾದ ಹೆಗ್ಗಳಿಕೆಯನ್ನು ಚತುರ ಮಾತಿನ ಬೇರೆಯವರು ಪಡೆದುಬಿಡುವುದು, ಇದೆಲ್ಲದರಿಂದ ನಿಂಗೀರನಿಗೆ ಪರಕೀಯ ಪ್ರಜ್ಞೆ ಮೂಡುವುದು……ಹೀಗೆ ಸಾಗುತ್ತದೆ ಈ ಕಥೆ. ಇದನ್ನು ಓದುತ್ತಿರುವಂತೆ ಶಿವರಾಮ ಕಾರಂತರ ಚೋಮ, ಸಮಾಜವಾದದಲ್ಲಿ ಬರುವ ಏಲಿಯನೇಷನ್ ಪರಿಕಲ್ಪನೆ ಇದೆಲ್ಲ ನೆನಪಾಗುತ್ತವೆ. ಫ್ರೆಂಚ್ ಕಾದಂಬರಿಕಾರ ಆಲ್ಬರ್ಟ್ ಕಾಮೂನ `ಅನ್ಯ’ ಇಲ್ಲಿ ಬೇರೊಂದು ಆಯಾಮದಲ್ಲಿ ನಿಜಗೊಳ್ಳುತ್ತದೆ.

`ನಿಚ್ಚಯ’ ಮಡಿವಂತ ಕೇರಿಯ ಸ್ವತಃ ಗಂಡಸಿನಂತೆ ಹೊಲದಲ್ಲಿ ದುಡಿಯುವ ಗೀತ ಎಂಬ ಹೆಣ್ಣೊಬ್ಬಳ ಕಥೆ. ಚೆಲುವಾದಿ ಎಂಬ ಹೊಲಗೇರಿಯ ಹುಡುಗನ ದುಡಿಮೆ, ಧೈರ್ಯಗಳನ್ನು ಕಂಡು ಮನಸ್ಸಿನಲ್ಲೇ ಅವನನ್ನು ಇಷ್ಟ ಪಟ್ಟ ಹೆಣ್ಣು ಇವಳು. ಅವನು ಸಹ ಇವಳನ್ನು ಇಷ್ಟ ಪಟ್ಟು ಒಂದು ದಿನ ಹೊಲದಲ್ಲಿ ತೋಳು ಹಿಡಿದುಕೊಂಡಾಗ ಅದಕ್ಕೆ ಸಿದ್ಧವಾಗಿರದಿದ್ದರಿಂದ ಕಿರುಚಿ ಬಿಡಿಸಿಕೊಂಡು ಅದು ದೊಡ್ಡ ರಂಪವಾಗುತ್ತದೆ. ಇದು ಬ್ರಾಹ್ಮಣರು, ಗೌಡರು ಮತ್ತು ಹೊಲೆಯರ ನಡುವಿನ ಭಾರೀ ವೈಮನಸ್ಯಕ್ಕೆ ಕಾರಣವಾಗಿ ವಿಷಯ ಪೋಲೀಸರ ತನಕ ಹೋಗುತ್ತದೆ. ಪರಸ್ಪರ ದೂರು ಕೊಡುವುದು ಮುಂತಾದ ಅಹಿತಕರ ವಿಷಯಗಳು ನಡೆಯುತ್ತವೆ. ಚೆಲುವಾದಿ ತನ್ನನ್ನು ಕೆಡಿಸಿದ ಎಂದು ಹೇಳಿ ತಮ್ಮನ್ನು ಕಾಪಾಡು ಎಂದು ಊರ ಹಿರಿಯರು ಇವಳನ್ನು ಬಲವಂತಿಸುತ್ತಾರೆ. ತುಂಬ ತಳಮಳಕ್ಕೆ ಬಿದ್ದ ಗೀತಳಿಗೆ ಈ ಜನರಿಗೆ ತನ್ನ ಸುಖ ಸಂತೋಷಕ್ಕಿಂತ ತಮ್ಮ ಜಾತಿ, ಧರ್ಮಗಳ ಪ್ರತಿಷ್ಠೆಯೇ ಮುಖ್ಯ ಅನ್ನಿಸಿಬಿಡುತ್ತದೆ. ಅವಳು ಹಿರಿಯರು ಹೇಳಿದ್ದಕ್ಕೆ ವಿರುದ್ಧವಾಗಿ ಚೆಲುವಾದಿಯ ಪರವಾಗಿ ನಿಲ್ಲಲು ನಿರ್ಧರಿಸುತ್ತಾಳೆ. ಜಾತಿಯನ್ನು ಮೀರಿದ ಮಾನವೀಯ ಮೌಲ್ಯ ಇಲ್ಲಿ ಎದ್ದು ನಿಲ್ಲುತ್ತದೆ. ಒಂದು ಒಳ್ಳೆಯ ಸಿನಿಮಾ ಆಗುವ ಸಾಧ್ಯತೆ ಇರುವ ಕಥೆ ಇದು.

`ಒಡಲುರಿ’ ಕಥಾಸಂಕಲನವು ಚಿತ್ರಿಸುವುದು ಜಾಗತೀಕರಣದ ಮುಂಚಿನ ಹಳ್ಳಿ ಮತ್ತು ನಗರದ ಪರಿಸರಗಳನ್ನು. ಭೂಸುಧಾರಣೆ ಆದ ನಂತರದ ಹಾಗೂ ಮಾಹಿತಿ ತಂತ್ರಜ್ಞಾನ ಯುಗಕ್ಕಿಂತ ಹಿಂದಿನ ಕಾಲದ ಕಥೆಗಳು ಇವು. ಇಂದು ನಗರಗಳು ಜನಸಂಖ್ಯೆಯ ಭಾರದಿಂದ ತತ್ತರಿಸುತ್ತಿದ್ದರೆ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ನೇರ ಮುಖಾಮುಖಿಗಳ ಬದಲಾಗಿ ಜನರು ಸಂಚಾರಿ ದೂರವಾಣಿ, ಸಾಮಾಜಿಕ ಮಾಧ್ಯಮಗಳ ಮೂಲಕ ಸಂಭಾಷಿಸುವ ಪರೋಕ್ಷ ಸಂಪರ್ಕಗಳಲ್ಲಿ ಮುಳುಗಿರುತ್ತಾರೆ. ಇವತ್ತು `ಪರೆ ಬಿಡುವ ಹುಡುಗರು’ ಅಂತರ್ಜಾಲದ ಮೊರೆ ಹೋಗಿ ತಮ್ಮ ಕುತೂಹಲ ತೀರಿಸಿಕೊಂಡರೆ `ಒಡಲುರಿಸುವ’ ಜ್ಯೋತಿಷ್ಯ, ಮಾಟ ಇತ್ಯಾದಿಗಳು ದೂರದರ್ಶನದ ಮೂಲಕ ನಿಷ್ಕಿçಯ ಪ್ರೇಕ್ಷಕರ ಮೆದುಳನ್ನು ಕೊಲ್ಲುತ್ತಿವೆ. ಕಥೆಗಾರರು ಇವತ್ತು `ಒಡಲುರಿ’ಯ ಕಥೆಗಳನ್ನು ಬರೆದಿದ್ದರೆ ಅದರ ಸ್ವರೂಪ ಬೇರೆಯಾಗುತ್ತಿತ್ತು. ಬದುಕಿನ ಸನ್ನಿವೇಶ ಇವತ್ತು ಅಷ್ಟು ಬದಲಾಗಿದೆ.

ತಾವು ಕಂಡುಂಡ ಬದುಕಿನ ಒಳಸುಳಿಗಳನ್ನು ಮತ್ತು ತಮಗೆ ನಿಜಗೊಂಡ ಕಾಲದ ತಲ್ಲಣಗಳನ್ನು, ಒಂದು ಕಾಲದ ನಮ್ಮ ನಾಡಿನ ಜನರ ಸೂಕ್ಷ್ಮ ಭಾವನೆಗಳನ್ನು ಮಾನವೀಯ ಅನುಕಂಪದ ನೆಲೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಕಾ.ತ.ಚಿಕ್ಕಣ್ಣನವರು ಸಫಲರಾಗಿದ್ದಾರೆ. ಬದುಕು ಹೇಗಿತ್ತು, ಹೇಗಿದ್ದರೆ ಚೆನ್ನಾಗಿತ್ತು ಎಂಬ ಎರಡೂ ನೆಲೆಯ ಚಿಂತನೆಗಳು, ಭಾವನೆಗಳು ಇಲ್ಲಿವೆ. ಒಟ್ಟಿನಲ್ಲಿ ಗಂಭೀರ ಓದಿಗೆ ಒಳಪಡಬೇಕಾದ ಕಥೆಗಳಿವು.

ಹೀಗೆ ಗ್ರಾಮೀಣ ಸೊಗಡುಳ್ಳ ಅನೇಕ ಕೃತಿಗಳನ್ನು ನಾಡಿಗೆ ನೀಡಿ, ತಮ್ಮ ಪ್ರಬುದ್ಧ ಜೀವನದುದ್ದಕ್ಕೂ ಸಾಹಿತ್ಯರಚನೆ ಹಾಗೂ ಸಂಘಟನೆಗಳಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕನ್ನಡ ಪರಿಚಾರಕರೆಂಬ ಪ್ರೀತಿಯ ಬಿರುದಿಗೆ ಪಾತ್ರರಾಗುವ ಕಾ.ತ.ಚಿಕ್ಕಣ್ಣನವರ ವ್ಯಕ್ತಿತ್ವವು ಯುವ ಪೀಳಿಗೆಗೆ ಸ್ಫೂರ್ತಿ ನೀಡುವಂಥದ್ದು.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ