Advertisement
‘ಮಹಿಳೆ ಹೊಸ್ತಿಲ ಮೇಲಿಟ್ಟ ದೀಪ’ ಸ್ತ್ರೀ ಗೃಹಂ ರಕ್ಷತಿ…: ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

‘ಮಹಿಳೆ ಹೊಸ್ತಿಲ ಮೇಲಿಟ್ಟ ದೀಪ’ ಸ್ತ್ರೀ ಗೃಹಂ ರಕ್ಷತಿ…: ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

ನಾವು ಓದಿದ ಓದು ಶುಷ್ಕವೆನಿಸುತ್ತಿದೆ, ನಾವು ಪಡೆದ ಅಂಕಗಳಿಗೆ ಜಾಗವಿಲ್ಲವೇ ಎಂದೆಲ್ಲಾ ಕೊರಗುವ ಮಹಿಳೆಯರ ಪ್ರತಿನಿಧಿಯಾಗಿ ಏಕಪಾತ್ರ ಬಹುಮುಖಿಯಾಗಿ ಪ್ರತಿರೋಧ ತೋರುವುದು. ಮದುವೆಯ ನಂತರ ಓದಲು ಆಸಕ್ತಿ ಇರುವ ಮಹಿಳೆಯರಿಗೆ ಸ್ವಾತಂತ್ರ್ಯ ನೀಡದ ಅತ್ತೆ, ಮಾವಂದಿರು. ಇಲ್ಲ ಸಲ್ಲದ ಮಾತು ಕೇಳಿ ಪ್ರತಿಭಟಿಸದೆ ತನ್ನ ಓದಿನ ಕನಸಿಗೆ ಎಳ್ಳು -ನೀರು ಬಿಡುವ ಅನೇಕ ಹೆಣ್ಣು ಮಕ್ಕಳು ನಮ್ಮ ನಡುವಿದ್ದಾರೆ.
‘ಸ್ತ್ರೀ ಗೃಹಂ ರಕ್ಷತಿ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

ಹೆಣ್ಣು ಭಾವನೆಗಳ ಜೀವಸ್ವರ. ನಿಸರ್ಗದ ಕಳಶ, ಪ್ರಕೃತಿಯ ಉಸಿರು, ಹಸಿರು. ಹೆಣ್ಣು ಮಗು ಹುಟ್ಟಿದ ಮನೆ ತಣ್ಣಗೆ, ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು  ತೆರೆದಂತೆ ಎಂಬ ನುಡಿಗಳನ್ನು ಸಮಾಜ ಹೇಳುತ್ತಲೇ ಇರುವುದು. ಆದರೆ ಇವೆಲ್ಲವೂ  ಬೇಲಿಯನ್ನು ಸೃಷ್ಟಿಸುವ ಹೇಳಿಕೆಗಳು. ಈ ಬೇಲಿಗಳು ಯಾವವು? ಏಕೆ ಹಾಕಲಾಗಿದೆ? ಇದನ್ನು ದಾಟುವುದು ಹೇಗೆ? ಮೀರುವುದು ಹೇಗೆ? ಇದನ್ನು ಒಳಗೊಂಡು ಬಿಡುಗಡೆಗೊಳ್ಳುವುದು ಹೇಗೆ? ಎಂಬ ಆಲೋಚನೆಯುಳ್ಳ  ನಾಟಕ ‘ಸ್ತ್ರೀ ಗೃಹಂ ರಕ್ಷತಿ’. ಮಗಳು ತಾನು ತಾಯಿಯಾಗುವ ಸಂದರ್ಭದಲ್ಲಿ ತನ್ನ ಅಮ್ಮನ ಕಥೆ ಹೇಳುವ ಕ್ರಮ ವಿಭಿನ್ನವಾಗಿದೆ. ತನ್ನ ಗಂಡನು ಬರೆದ ಕಾಗದಗಳನ್ನು ಓದುವುದರ ಮೂಲಕ ನಾಟಕ ತೆರೆದುಕೊಳ್ಳುವುದು. ತನ್ನ ಗಂಡನಿಗೆ ಹೆಣ್ಣು ಮಗು ಬೇಕೆಂಬ ಆಸೆ. ಆದರೆ ಹೆಂಡತಿಗೆ ತನಗೆ ಹೆಣ್ಣು ಮಗು ಬೇಡ, ಗಂಡು ಮಗು ಬೇಕೆಂಬ ಬಯಕೆ. ತನ್ನ ಗಂಡನಿಗೆ, ಹೆಣ್ಣು ಮಗು ಹೆತ್ತು ಕೊಡಬೇಕೆಂಬ ಹಂಬಲ ಏಕೆ? ಹೆಣ್ಣಾಗಿ  ಹುಟ್ಟಿ ತನ್ನ ಅಮ್ಮ ಅನುಭವಿಸಿದ ಬಂಧನ, ಕಷ್ಟ, ಸಂಕಷ್ಟ, ದೌರ್ಜನ್ಯ, ನೋವುಗಳ ಸೆರೆಮನೆ ವಾಸ ತನ್ನ ಮಗಳಿಗೆ ಆಗಬಾರದೆಂಬ ಕಾಳಜಿವುಳ್ಳ ಚಲನೆ ನಾಟಕದಲ್ಲಿ ವ್ಯಕ್ತವಾಗಿದೆ. ಆರಂಭದಲ್ಲಿ ಹೆಣ್ಣು ಮಗು ಬೇಡ ಎಂದವಳು ನಾಟಕದ ಕೊನೆಗೆ ಹೆಣ್ಣು ಮಗು ಬೇಕು ಎನ್ನುವಳು.  ಏಕೆ ಬೇಕು ಎಂಬುವುದರ ಸ್ವಾರಸ್ಯದ ಮುನ್ನೋಟವಿದೆ. ತಂದೆ, ತಾಯಿ, ಅಜ್ಜಿ, ಗೆಳತಿ, ಗಂಡ, ತಮ್ಮ ನೆರೆ ಹೊರೆಯವರಲ್ಲಿ ಹೆಣ್ಣು ಮಗುವಿನ ಕುರಿತಾದ ಒಡಕಲು ಬಿಂಬಗಳನ್ನು  ಏಕಪಾತ್ರದ ಅಭಿನಯ ಮೂಲಕ ಪ್ರತಿಬಿಂಬಿಸುವಲ್ಲಿ ನಟಿಯ  ಪ್ರಯತ್ನ ಕಾಣುತಿತ್ತು.

ಮಹಿಳೆ ಕೇಳಿಕೊಳ್ಳುವ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು  ಸಮಾಜದಿಂದ ಸಾಧ್ಯವೇ? ಗಂಡು-ಹೆಣ್ಣು ನಡುವಿನ ಭೇದ ಅಳಿಸಿ ಸಮಾನತೆ  ಗುಣಿಸುವುದು ಹೇಗೆ? ಕೇವಲ ಬರವಣಿಗೆಯಲ್ಲಿ, ಬಾಯಿ ಮಾತಿನಲ್ಲಿ ಸಮಾನತೆ ಕೊಟ್ಟರೆ ಹೆಣ್ಣು ಜೀವ ಬದುಕುವುದೇ? ಸಮಾಜ ಮಹಿಳೆಯರಿಗೆ ಕೆಲವು ಮಾತುಗಳಿಂದ ಕಟ್ಟಿ ಹಾಕಿ, ನಗುತ್ತಿದೆ. ಅವಳ ಸಂಭ್ರಮ, ಸಂತೋಷ ಎಲ್ಲವೂ ನಾಲ್ಕು ಗೋಡೆಗಳ ಮಧ್ಯೆ ಉಸಿರುಗಟ್ಟಿದೆ ಎಂಬ ಛಾಯೆ ನಾಟಕದಲ್ಲಿ ಮಡುಗಟ್ಟಿದೆ.

ನಿರಾಸೆ, ಅವಮಾನಗಳನ್ನು ನಡುವೆ ಅಪ್ಪನ ಪ್ರೀತಿ ಸ್ವಲ್ಪಮಟ್ಟಿಗೆ ಪಡೆದ ನನ್ನಮ್ಮ. ಬೇಲಿಯ ದಾರಿ ಬಿಟ್ಟು ಬರಲೇ ಇಲ್ಲ ಎಂಬ ಕೊರಗು ಮಹಿಳೆಗೆ ಕಾಡುತ್ತಿರುತ್ತದೆ. ತಮ್ಮ ಹುಟ್ಟಿದಾಗ ಸಂಭ್ರಮ, ನಾನು ಹುಟ್ಟಿದಾಗ ಇರಲಿಲ್ಲ. ಹೆಣ್ಣು ಹುಟ್ಟಿದರೆ ಅಪಶಕುನ ಎಂಬ ರೀತಿಯಲ್ಲಿ  ಹೆಣ್ಣನ್ನು  ಶಂಕಿಸುವ ಸಮಾಜ. ನನ್ನಮ್ಮ ತನ್ನ ತಮ್ಮನ ಆರೈಕೆಯಲ್ಲಿ ಬಾಲಕಾರ್ಮಿಕಳಾಗಿ ದುಡಿದು ಚಾಕರಿ ಮಾಡಿದಳು. ಮಾನಸಿಕವಾಗಿ ನನ್ನಮ್ಮ  ಕುಗ್ಗಿ ಹೋದಳು. ಸೂರ್ಯ ಹುಟ್ಟುವ ಮುಂಚೆ ಎದ್ದು ಮನೆ ಕೆಲಸ ನಿರ್ವಹಿಸುವ ನನ್ನಮ್ಮ, ಸೂರ್ಯ ಮುಳುಗಿದ ಎಷ್ಟೋ ಗಂಟೆಗಳ ಕಾಲ ಕೆಲಸ ಮಾಡಿ ನಿದ್ದೆಗೆ ಜಾರುವಳು ನನ್ನಮ್ಮ. ಮಹಿಳೆಗೆ ಎಲ್ಲಿದೆ ನಿದ್ದೆ, ವಿಶ್ರಾಮ. ಹೆಣ್ಣು ಸದಾಕಾಲ ದುಡಿಯುವ ಗಾಣದ ಎತ್ತಿನಂತೆ ಎಂಬ ಕನವರಿಕೆಯಲಿ ನೋಡುಗರ ಕಣ್ಣುಗಳು ತೇವವಾಗುತ್ತವೆ.

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ಥಾನಮಾನವಿಲ್ಲ. ಹೆಣ್ಣು ಮತ್ತೆ ಪುರುಷನ ಗಂಡಾಳ್ವಿಕೆಗೆ ಒಳಪಡುತ್ತಾಳೆ. ಹೆಣ್ಣನ್ನು ದ್ವೀತೀಯ ಪ್ರಜೆ ಎಂದು ಅವಮಾನಿಸಲಾಗುವುದು. ಬೈಗುಳಗಳೆಲ್ಲವೂ ಮಹಿಳೆಯನ್ನು  ಅವಮಾನಿಸುವ ನಿಟ್ಟಿನಲ್ಲಿಯೇ ರೂಪಗೊಂಡಿವೆ. ಹಾಗಾಗಿ ಹೆಣ್ಣಿಗೆ ಸ್ವಾತಂತ್ರ್ಯವಿದೆಯೇ? ಹೆಣ್ಣಿನ ವಿಚಾರಗಳಿಗೆ ಮೌಲ್ಯವಿದೆಯೇ? ಹೆಣ್ಣನ್ನು ಬಲಿಷ್ಠ ಮಾಡದ ಸಮಾಜ ಉತ್ತಮ ಸಮಾಜವೇ ಎಂಬ ಹಲವು ಪ್ರಶ್ನೆಗಳನ್ನು ಕೇಳುತ್ತದೆ.

ಹೆಣ್ಣು ದುಡಿಮೆಗೆ ಸೀಮಿತವೇ? ಹೆಣ್ಣು ಇನ್ನೊಬ್ಬರ ಅಡಿಯಾಳೆ? ಹೆಣ್ಣು ಪರದೆಯ ಹಿಂದಿನ ಶಿಲ್ಪವೇ? ಹೀಗೆ ಹಲವು ಆಲೋಚನೆಗಳನ್ನು ಬಿತ್ತುವ ಮಹಿಳಾ  ಪ್ರಧಾನವಾದ ಏಕವ್ಯಕ್ತಿಯ ರಂಗ ಪ್ರಯೋಗ. ನಿಜ ಜೀವನದಲ್ಲಿಯೂ ಮಹಿಳೆ ಒಂಟಿಯಾಗಿದ್ದಾಳೆ ಎಂಬ ಧ್ವನಿ  ಅಂತರ್ಜಲವಾಗಿದೆ. 

 ‘ಸದ್ದು ಕೇಳದಿಹ ಹೆಜ್ಜೆಯೊಂದಿಗೆ ಭಾರದ ನಡಿಗೆ, ಕಣ್ಣಿನೊಳಗಡೆ ಬಚ್ಚಿಕೊಂಡಿರೋ? ಸತ್ಯ ನಿತ್ಯಯಗಳಿಗೆ
ಗೆಜ್ಜೆ ಮೌನ ಮನ ಕಾಳ ಕತ್ತಲವೇ’ ಹಾಡಿನ  ಸಾಲುಗಳು ಮನ ಮುಟ್ಟುತ್ತಿದ್ದವು.

ಆದರೆ ಮಹಿಳೆಯ ಅಭಿಪ್ರಾಯಕ್ಕೆ ಇಲ್ಲಿ ಮನ್ನಣೆ ಇಲ್ಲ, ಎಲ್ಲವೂ ಗಂಡಿನಾಳ್ವಿಕೆಯಲ್ಲಿದೆ. ಇದನ್ನು ಮುರಿದು ಕಟ್ಟಲು ಹೆಣ್ಣಿಗೆ ಸ್ವಾತಂತ್ರ್ಯ ಬೇಡವೇ? ಎಲ್ಲವೂ ವಿಧಿಯ ಹಣೆಬರಹವೆಂದು ಸುಮ್ಮನೆ ಕುಳಿತರೆ ಮಹಿಳೆಯರ ಕನಸುಗಳು ನೆರವೇರುತ್ತವೆಯೇ? ಬಾಲ್ಯದಲ್ಲಿ ತಂದೆ, ವಿವಾಹದ ನಂತರ ಗಂಡ, ವಯಸ್ಸಾದಾಗ ಮಗನ ಆಶ್ರಯದಲ್ಲಿ  ಇರಬೇಕೆಂಬ ನಿಯಮವನ್ನು ಮೀರಿ ನಾವು ನಿಲ್ಲುವುದಕ್ಕೆ ಸಾಧ್ಯವಿಲ್ಲವೆ? ನಾವು ಓದಿದ ಓದು ಶುಷ್ಕವೆನಿಸುತ್ತಿದೆ, ನಾವು ಪಡೆದ ಅಂಕಗಳಿಗೆ ಜಾಗವಿಲ್ಲವೇ ಎಂದೆಲ್ಲಾ ಕೊರಗುವ ಮಹಿಳೆಯರ ಪ್ರತಿನಿಧಿಯಾಗಿ ಏಕಪಾತ್ರ ಬಹುಮುಖಿಯಾಗಿ  ಪ್ರತಿರೋಧ ತೋರುವುದು. ಮದುವೆಯ ನಂತರ ಓದಲು ಆಸಕ್ತಿ ಇರುವ ಮಹಿಳೆಯರಿಗೆ ಸ್ವಾತಂತ್ರ್ಯ ನೀಡದ ಅತ್ತೆ, ಮಾವಂದಿರು. ಇಲ್ಲ ಸಲ್ಲದ ಮಾತು ಕೇಳಿ ಪ್ರತಿಭಟಿಸದೆ ತನ್ನ ಓದಿನ ಕನಸಿಗೆ ಎಳ್ಳು -ನೀರು ಬಿಡುವ ಅನೇಕ ಹೆಣ್ಣು ಮಕ್ಕಳು ನಮ್ಮ ನಡುವಿದ್ದಾರೆ. ಹೆಣ್ಣು ಮಕ್ಕಳನ್ನು ಅರ್ಧದಲ್ಲಿ ಶಾಲೆ ಬಿಡಿಸಿ ಮದುವೆ ಮಾಡಿರುವ  ಉದಾಹರಣೆಗಳಿವೆ. ಹೆಣ್ಣು ಮಗುವಿಗೆ ಕನ್ನಡ ಶಾಲೆ, ಗಂಡು ಮಗುವಿಗೆ ಇಂಗ್ಲಿಷ್ ಶಾಲೆಯಲ್ಲಿ ಪ್ರವೇಶ ಕೊಡಿಸುವ ತಂದೆ ತಾಯಿಂದರು ಕೂಡ ಇದ್ದಾರೆ. ವಂಶೋದ್ಧಾರಕ ಎಂಬ ಹಣೆ ಪಟ್ಟಿಯಲ್ಲಿ ಗಂಡು ತನ್ನ ಸ್ವಾತಂತ್ರವನ್ನು ವಿಸ್ತರಿಸಿಕೊಳ್ಳುತ್ತಾನೆ.  ಹೆಣ್ಣು, ವಂಶದ ಕುಡಿಯಲ್ಲ ಎಂಬ ಜಾಯಮಾನ ಬದಲಾಗಬೇಕಿದೆ. ಹಾಗಾಗಿ ಹೆಣ್ಣು ತನ್ನನ್ನು ತಾನು ಸ್ವತಂತ್ರಳಾಗಿರಲು ಇಚ್ಚಿಸುತ್ತಿದ್ದಾಳೆ. ರಾಣಿ ಚೆನ್ನಮ್ಮನ ರೀತಿಯಲ್ಲಿ ತನ್ನ ಆವೇಶವನ್ನು ಪ್ರಕಟಿಸುವ ಹುಮ್ಮಸ್ಸು ಮಹಿಳೆಯರಿಗಿದೆ ಎಂಬ ಸಂದೇಶವಿದೆ. ಗೆಜ್ಜೆಯ ಸದ್ದು ,ಮೌನ ಹಾಗೂ ಗಂಟೆಯ ನಿನಾದ  ಹೆಣ್ಣಿನ ಮನಸ್ಸಿನ ಅಂತರಂಗದ ವೈರುಧ್ಯಗಳನ್ನು ಪ್ರತಿಬಿಂಬಿಸುವಂತೆ ಬಳಸಿಕೊಂಡಿರುವುದು ನಾಟಕದ ಅಕ್ಷಾಂಶ, ರೇಖಾಂಶ. ಹೆಣ್ಣು ಕೇವಲ ಮನೆಯ ಒಳಗೆ ಮಾತ್ರವಲ್ಲ ಹೊರಗೂ ಕೂಡ ಬೆಳಕಾಗಿದ್ದಾಳೆ. ಆದರೆ ತನ್ನ ಅಂತರಂಗದಲ್ಲಿ  ಕತ್ತಲೆಯನ್ನು ಬೆಳಕಾಗಿ ಪರಿವರ್ತಿಸಿಕೊಂಡು ನಗುತ್ತಿದ್ದಾಳೆ. ಹಾಗಾಗಿ ಹೆಣ್ಣು ಮಗು ಅವಶ್ಯವಾಗಿ ನನಗೆ ಬೇಕೆಂದು ಮಹಿಳೆ ಒಪ್ಪಿಕೊಳ್ಳುತ್ತಾಳೆ. ಏಕೆಂದರೆ ವ್ಯವಸ್ಥೆಯ ಬದಲಾವಣೆಗೆ ಹೆಣ್ಣು ಮಗುವನ್ನು  ಬೆಳೆಸಲೇಬೇಕೆಂಬ ಮನವರಿಕೆಗೆ ನಾಟಕ ವೇದಿಕೆ ಕಲ್ಪಿಸುತ್ತದೆ. ಹಾಗಾಗಿ ಹೆಣ್ಣು ಹೊಸ್ತಿಲು ಮೇಲಿಟ್ಟ  ದೀಪವಾಗಿ ನಮ್ಮೊಂದಿಗೆ ಇದ್ದಾಳೆ ಎಂಬ  ಆಪ್ತತೆಯ ಭಾವ ಬಿತ್ತುವ ರೂಪಕಗಳಿವೆ. ಆರಂಭದಲ್ಲಿ , ಸಮಾಜ   ಮೃಗೀಯ ರೀತಿಯಲ್ಲಿ  ಹೆಣ್ಣಿನ ಮೇಲೆ ಬಲತ್ಕಾರದ  ನಿಯಮಗಳನ್ನು ಹಾಕುತ್ತಿದೆ ಎಂಬ ಸಿಂಹಾಕೃತಿಯ  ನಟನಾ ಶೈಲಿ ವಿಶಿಷ್ಟವಾಗಿತ್ತು. ಹೆಣ್ಣಿನ ಹೆಜ್ಜೆಗಳಿಗೆ ಬೇಡಿ ಹಾಕಿದ ಚಿತ್ರ, ಮಹಿಳೆಯ ಮುಖದಲ್ಲಿ ನಗುವಿಲ್ಲದ ಗಂಭೀರತೆಯ ಮುಖಭಾವ  ಮನಸ್ಸನಿಂದ ಮಾಯವಾಗುವುದಿಲ್ಲ. ಹೊಸ್ತಿಲು ಮಹಿಳೆಯರ ದೃಷ್ಟಿಯಲ್ಲಿ ಸ್ವರ್ಗದ ಬಾಗಿಲು. ಸಂಸ್ಕೃತಿಯ ತವರಾಗಿದೆ. ದಿವ್ಯಾ ಶ್ರೀಧರ್ ರಾವ್  ರಚನೆಯ ಈ ನಾಟಕವನ್ನು  ಭಾವಭೂಮಿ ಕುಂದಾಪುರ ತಂಡ ಕಲಬುರ್ಗಿಯ ರಂಗಾಯಣದಲ್ಲಿ  ಪ್ರದರ್ಶಿಸಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ರಂಗದ ಮೇಲೆ ಪ್ರೀತಿಯನ್ನು ಬಹುಶಿಸ್ತಿನಿಂದ  ಭೂಮಿಕಾ ರಾವ್ ಏಕಪಾತ್ರ ಅಭಿನಯದ ಮೂಲಕ ಹೆಣ್ಣಿನ ಒಳ ಸಂಘರ್ಷಗಳನ್ನು ಮನಮುಟ್ಟುವಂತೆ ನಟಿಸಿದರು. ಗೀತಾ ಅರಳಿ ಅವರ ವಸ್ತ್ರ ವಿನ್ಯಾಸ  ಸನ್ನಿವೇಶಕ್ಕೆ ಪಾತ್ರಕ್ಕೆ ತಕ್ಕಂತೆ ಕಟ್ಟಲಾಗಿತ್ತು. ಪಲ್ಲವಿರಾವ್ ಅವರ ಕಲೆ ನೂರಾರು ಚಿತ್ರಣಗಳ ಆಶಯವಾಗಿದೆ.  ನಾಗೇಶ್ ಕಡೂರವರ ನಿರ್ದೇಶನ ಶೈಲಿ ಹೆಣ್ಣಿನ ನಾಡಿಮಿಡಿತವನ್ನು ಸಂಕಥನಗೊಳಿಸಿದೆ.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ