Advertisement
ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿ

ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿ

ಮಕ್ಕಳ ಮುಂದೆ ಇವನ್ನೆಲ್ಲಾ ಹೇಳಿದರೆ ಬರೀ ಕೇಳುತ್ತಾರಷ್ಟೇ ಆದರೆ ಈ ಕಷ್ಟದ ತೀವ್ರತೆ ಅವರಿಗೆ ಅರಿವಾಗುವುದಿಲ್ಲ. ಮೊದಲು ಅನ್ನಕ್ಕೆ ಭಾರಿ ಬೆಲೆಯಿತ್ತು. ನಮ್ಮ ಊರಲ್ಲಿ ಕೆಲ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಅನ್ನ ಮಾಡುತ್ತಿದ್ದರು. ಆದರೆ ಈಗ ಇಂತಹ ಪರಿಸ್ಥಿತಿ ಯಾರಿಗೂ ಇಲ್ಲ. ಮಕ್ಕಳಲ್ಲಿ ಮೊದಲು ಇದ್ದ ಕಮಿಟ್‌ಮೆಂಟ್, ಗುರು ಶಿಷ್ಯರ ಬಾಂಧವ್ಯ, ತಮ್ಮ ಹೆತ್ತವರ ಬಗ್ಗೆ ಇರುವ  ಪ್ರೀತಿಯ ಬಂಧ ತುಸು ಬಿರುಕು ಬಿಡುತ್ತಿದೆ! ಒಂದು ಹಂತದವರೆಗೂ ಬಾಂಧವ್ಯ ಇದ್ದರೂ ಅದು ಬರೀ ಮೆಟೀರಿಯಲಿಸ್ಟಿಕ್ ಆಗಿದೆ!
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆಂಟನೆಯ ಕಂತು ನಿಮ್ಮ ಓದಿಗೆ

ತೀರಾ ಇತ್ತೀಚೆಗೆ ನಡೆದ ಒಂದು ಘಟನೆ ನನ್ನ ಮನಸ್ಸನ್ನು ಕಲಕಿತು. ಪಕ್ಕದ ರಾಜ್ಯವೊಂದರಲ್ಲಿ ಮಗನೊಬ್ಬನು ತನ್ನ ತಂದೆ ತಾಯಿಯ ಬಳಿ ಐಫೋನ್ ಕೊಡಿಸಲು ಕೇಳಿದ್ದಾನೆ. ಅವರು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ, ಇದಕ್ಕಾಗಿ ಬೇಸರಗೊಂಡ ಅವನು ದೊಡ್ಡ ಬೆಟ್ಟವೊಂದರ ತುದಿಗೆ ಹೋಗಿ ತನಗೆ ಮೊಬೈಲ್ ಕೊಡಿಸದಿದ್ದರೆ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಪೋಷಕರು ಎಷ್ಟೇ ಹೇಳಿದರೂ ಕೂಡ ಅವನು ವಾಪಸ್ ಬಂದಿಲ್ಲ, ತಂದೆಯೇ ಅವನ ಬಳಿ ಹೋಗಿ ವಾಪಸ್ ಕರೆತರಲು ಹೋದಾಗ ತಂದೆಯನ್ನೂ ಎಳೆದುಕೊಂಡು ಮಗ ಮೇಲಿನಿಂದ ಕೆಳಗೆ ಹಾರಿ ಜೀವ ಬಿಟ್ಟಿದ್ದಾನೆ. ಇದನ್ನು ನೋಡುತ್ತಿದ್ದ ಅವನ ತಾಯಿಯೂ ಕೂಡ ತಾನೂ ಅಲ್ಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ. ಮಗನ ಐಫೋನ್ ಆಸೆ ಇಡೀ ಕುಟುಂಬದ ನಾಶಕ್ಕೆ ಕಾರಣವಾಯಿತು!! ಅವನ ಅಕ್ಕ ಮಾತ್ರ ಉಳಿದಿದ್ದಾಳಂತೆ! ಇದು ಒಂದು ಉದಾಹರಣೆಯಷ್ಟೇ! ಇಂತಹ ಅನೇಕ ಘಟನೆಗಳನ್ನು ನಾವು ಇಂದು ಕಾಣುತ್ತಿದ್ದೇವೆ!! ಇಂತಹ ಎಷ್ಟೋ ಉದಾಹರಣೆಗಳಲ್ಲಿ ಹಣಕ್ಕಾಗಿ, ಮೊಬೈಲ್ ಫೋನ್‌ಗಾಗಿ ತಮ್ಮ ಆಪ್ತರ, ಸಂಬಂಧಿಕರ, ಹೆತ್ತವರ, ತಮಗೆ ಕಲಿಸಿದವರ ಜೀವ ತೆಗೆದ ಘಟನೆಗಳೂ ಇಂದು ಕಾಣ ಸಿಗುತ್ತವೆ!

​ಆಂಧ್ರವೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಿನ್ಸಿಪಾಲ್ ಹತ್ಯೆಯನ್ನು ಮಾಡಿರುವ ಘಟನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಓದಿದಾಗ ಮನಸ್ಸಿಗೆ ತುಂಬಾ ನೋವೆನಿಸಿತು. ಎತ್ತ ಸಾಗುತ್ತಿದೆ ನಮ್ಮ ಯುವ ಜನತೆ?! ಎಂಬ ಪ್ರಶ್ನೆಯು ಕಾಡಿತು. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವಾಗ ಮನದಲ್ಲಿ ಕಾಡುವ ಪ್ರಶ್ನೆ ಇದೇ! ಇಲ್ಲಿ ತಪ್ಪುಗಳಿಗೆ  ಯಾರು ಹೊಣೆಗಾರರು? ಪೋಷಕರೋ? ಸಮಾಜವೋ?  ಕಾಲವೋ? ಅವರ ಮೇಲೆ ಪ್ರಭಾವಿಸುವ ಅಂಶಗಳೋ? ಅಂಗೈಯಲ್ಲೇ ಜಗವ ತೋರಿಸುವ ಸಾಮಾಜಿಕ ಜಾಲತಾಣಗಳೋ??  ಇದಕ್ಕೆ ಉತ್ತರ….. ‘ಕೋಳಿ ಮೊದಲೋ, ಮೊಟ್ಟೆ ಮೊದಲೋ’ ಎಂಬ ಪ್ರಶ್ನೆಗೆ ಉತ್ತರಿಸಿದಂತೆಯೇ ಸರಿ.

​ಒಮ್ಮೆ ಒಬ್ಬ ವ್ಯಕ್ತಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಅಂಗಡಿಯೊಂದರಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದನಂತೆ. ಅವನ ಬಳಿ ಹೋಗಿ ಮತ್ತೊಬ್ಬ “ನೀವು ಈ ವಯಸ್ಸಿನಲ್ಲಿಯೂ ಈ ರೀತಿ ದುಡಿಯುತ್ತಿದ್ದೀರಲ್ಲ, ನೀವು ತುಂಬಾ ಗ್ರೇಟ್” ಎಂದರಂತೆ. ಅದಕ್ಕೆ ಆ ವ್ಯಕ್ತಿ “ವಯಸ್ಸಿಗೆ ಬಂದ ನನ್ನ ಮಗ ದುಡಿಯದೇ ಸೋಮಾರಿಯಾಗಿ ತಿರುಗಾಡುತ್ತಿದ್ದಾನೆ, ಅದಕ್ಕಾಗಿಯೇ ನನಗೆ ಈ ವಯಸ್ಸಿನಲ್ಲಿಯೂ ದುಡಿಯುವ ಕರ್ಮ ನನ್ನದು” ಎಂದರಂತೆ. ಅಲ್ಲದೇ ಅವರು “ನನ್ನ ಮಗನನ್ನು ನಾನು ಸರಿಯಾಗಿ ಬೆಳೆಸಿದ್ದರೆ ನನಗೆ ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದರಂತೆ!

​ನಿಜ… ನಾವು ನಮ್ಮ ಮಕ್ಕಳಿಗೆ ಹೇಗೆ ಬೆಳೆಸುತ್ತಿದ್ದೇವೆ? ಅವರು ಕೇಳಿದ್ದನ್ನೆಲ್ಲವನ್ನೂ ಕೊಡಿಸುತ್ತಿದ್ದೇವೆ. “ನಾವು ಕಷ್ಟ ಅನುಭವಿಸಿದ್ದು ಸಾಕು.  ನಮ್ಮ ಮಕ್ಕಳು ಆ ಕಷ್ಟ ಅನುಭವಿಸಬಾರದು” ಎಂದು ಅವರಿಗೆ ಕಷ್ಟ ತೋರಿಸದೆಯೇ ಬೆಳೆಸುತ್ತಿದ್ದೇವೆ. ಮಕ್ಕಳಿಗೆ ಹಣದ ಮಹತ್ವವನ್ನು ಕಲಿಸದೇ ಬೆಳೆಸುತ್ತಿದ್ದೇವೆ. ಅವರು ಪಡೆವ ಅಂಕಗಳ ಆತಂಕದಲ್ಲಿಯೇ ನಾವು ಇದ್ದೇವೆ. ಫಾರಂ ಕೋಳಿಗಳ ತರಹ ಮಕ್ಕಳಿಗೆ ಆರೈಕೆ ನೀಡುತ್ತಿದ್ದೇವೆ. “ಹುಟ್ಟಿರುವುದೇ ಗೆಲ್ಲಲಿಕ್ಕೆ” ಎಂಬ ಭಾವನೆಯಿಂದ ಬೆಳೆಸುತ್ತಿದ್ದೇವೆ. ಹೀಗೇ ಮಾಡುತ್ತಾ ಅವರಿಗೆ ಕಂಡದ್ದನ್ನು ತಕ್ಷಣ ಪಡೆಯುವ ಮನೋಭಾವ ಬೆಳೆಸುತ್ತಿದ್ದೇವೆ. ಅವರಲ್ಲಿ ಸಮಾಧಾನ, ತಾಳ್ಮೆ ಇಲ್ಲದೇ ಇರುವಂತಹ, ಹೇಳಿದ್ದನ್ನು ಕೇಳೋ ವ್ಯವಧಾನವೇ ಇಲ್ಲದ ಮನೋಸ್ಥಿತಿಗೆ ತರುತ್ತಿದ್ದೇವೆ. ಜೀವನದಲ್ಲಿ ಯಶಸ್ಸಿಗೆ ಮಾತ್ರ ಬೆಲೆ ಎಂಬ ಭಾವನೆಯನ್ನು ತಲೆಯಲ್ಲಿ ತುಂಬಿ ಸೋಲಿನ ರುಚಿಯನ್ನು ಅನುಭವಿಸುವುದನ್ನು ಕಲಿಸುತ್ತಿಲ್ಲ. “ಸೋತನೆಂದರೆ ಅದು ಸತ್ತಂತೆ” ಎಂದು ತಲೆಯಲ್ಲಿ ತುಂಬಿ ತುಂಬಿ  ಒಂದು ಪರೀಕ್ಷೇಲೀ ಯಶಸ್ಸು ಪಡೆಯದೇ ಹೋದರೂ ಸಾಯುವಂತಹ ಹೇಡಿತನವನ್ನು ಅವರಲ್ಲಿ ಅಪರೋಕ್ಷವಾಗಿ  ಬಿತ್ತುತ್ತಿದ್ದೇವೆ. ಇದರ ಪರಿಣಾಮ ಸಾವಿರ ಬಾರಿ ಸೋತರೂ ಗೆದ್ದು ಗೆಲ್ಲುವನೆಂಬ ಛಲ, ಧೈರ್ಯ, ಆತ್ಮವಿಶ್ವಾಸ ಮಕ್ಕಳಲ್ಲಿ ಬೆಳೆಯುತ್ತಿಲ್ಲ.

ಈಗೀಗ ಮಕ್ಕಳನ್ನು ಪೋಷಕರ ಆಸೆಯನ್ನು ಈಡೇರಿಸುವ ಯಂತ್ರಗಳಂತೆ ಬೆಳೆಸುತ್ತಿದ್ದೇವೆ. ಪರಿಣಾಮ ಈಗಿನ ಮಕ್ಕಳು ರೋಬೋಗಳಂತಾಗುತ್ತಿದ್ದಾರೆ!!  ಮಕ್ಕಳಿಗೆ ಹಣದ ಮಹತ್ವವನ್ನು ಬೆಳೆಸುತ್ತಿಲ್ಲ. ಡಿಗ್ರಿ ಮುಗಿದು ಕೆಲಸ ಸೇರುವವರೆಗೂ ಹಣ ಗಳಿಕೆಯ ಬಗ್ಗೆ ಮಕ್ಕಳು ಕಲಿಯುವುದಿಲ್ಲ. ಎಲ್ಲೋ ಕೆಲವರು ಗಳಿಸುತ್ತಾ ಕಲಿಯುತ್ತಿರಬಹುದು. ಆದರೆ ಅಂತಹವರ ಸಂಖ್ಯೆ ವಿರಳ. ಅಮೇರಿಕಾದಂತಹ ದೇಶಗಳಲ್ಲಿ ಮಕ್ಕಳಿಗೆ ಉದ್ಯಮಶೀಲತೆಯ ಬಗ್ಗೆ ತಿಳಿಸಿದರೆ ನಾವು ಮಾತ್ರ ಸಂಬಳದ ನೌಕರಿಯ ಮೇಲೆ ಅವಲಂಬಿತರಾಗುವಂತೆ ಓದಿಸುತ್ತಿದ್ದೇವೆ. ಸ್ವಾವಲಂಬಿಯಾಗಿ ದುಡಿಮೆ ಮಾಡುವ ಅರಿವನ್ನು ಅವರಲ್ಲಿ ಮೂಡಿಸುತ್ತಿಲ್ಲ.

​ಆರ್ಥಿಕ ಸಾಕ್ಷರತೆಯ ಕಲ್ಪನೆಯನ್ನು ನಮಗೆ ನಮ್ಮ ಹಿರಿಯರು ತುಂಬಾ ಚೆನ್ನಾಗಿ ಮೂಡಿಸಿದ್ದರು. ಚಿಕ್ಕಂದಿನಿಂದಲೂ  ನಮಗೆ ಉಳಿತಾಯದ ಕಲ್ಪನೆಯನ್ನು ಬೆಳೆಸಿದ್ದರು. ಈಗಿನಂತೆ ‘ಪಿಗ್ಗಿ ಬಾಕ್ಸ್’ ನಲ್ಲಿ ಹಣ ಇರಿಸುವ ಡಬ್ಬಿ ಇಲ್ಲದಿದ್ದರೂ ಕೂಡ ಮನೆಯಲ್ಲಿದ್ದ ಹಳೆಯ ಡಬ್ಬಿಗಳಲ್ಲಿ ಹಣ ಕೂಡಿಡಲು ಹೇಳುತ್ತಿದ್ದರು. ನನಗೆ ಯಾರಾದರೂ ನಮ್ಮ ಸಂಬಂಧಿಕರು ಹಣ ಕೊಟ್ಟರೆ ಅದನ್ನು ತೆಗೆದುಕೊಂಡು ಹೋಗಿ ಡಬ್ಬಿಯಲ್ಲಿ ಇಡುತ್ತಿದ್ದೆ. ಇಲ್ಲಿ ಸಂಗ್ರಹವಾದ ಹಣದಲ್ಲಿ ನಮಗೆ ಬೇಕಾದ ಪೆನ್ಸಿಲ್, ನೋಟ್ ಬುಕ್, ಪೆನ್ನು ತೆಗೆದುಕೊಳ್ಳುತ್ತಿದ್ದೆ. ಕೆಲವೊಮ್ಮೆ ಹಣ ಉಳಿದರೆ ಆ ವರ್ಷದ ಟೂರ್ ಹೋಗಲು ಸಹ ಈ ಹಣವನ್ನು ಬಳಸುತ್ತಿದ್ದೆ. ಅಂಗಡಿಗೆ ಹೋಗಿ ಈ ಹಣವನ್ನು ನೀಡಿದರೆ ಚಾಕೋಲೆಟ್ ಇತ್ಯಾದಿ ಖರೀದಿಸಿ ತಿನ್ನುವ ಅಭ್ಯಾಸ ಮಾಡಿಕೊಂಡಿರಲಿಲ್ಲ. “ಉಳಿಸಿದ ಒಂದು ರೂಪಾಯಿ ಗಳಿಸಿದ ನೂರು ರೂಪಾಯಿಗೆ ಸಮ” ಎಂಬ ತತ್ವವನ್ನು ಇವು ನಮಗರಿವಿಲ್ಲದಂತೆಯೇ ಕಲಿಸಿದವು.

​ತೀರಾ ಇತ್ತೀಚೆಗೆ ಹಲವು ಮಕ್ಕಳು IPL  ಬೆಟ್ಟಿಂಗ್‌ನಲ್ಲಿ ಸಾಲ ಮಾಡಿಕೊಂಡು ಮನೆ ಬಿಟ್ಟು ಓಡಿಹೋದ ಅನೇಕ ಉದಾಹರಣೆಗಳ ಬಗ್ಗೆಯೂ ಕೇಳಿದ್ದೇವೆ. ಮಕ್ಕಳು ದಿಢೀರ್ ಶ್ರೀಮಂತರಾಗಲು ಹೋಗಿ ಈ ರೀತಿಯಾಗುತ್ತಿದ್ದಾರೆ. ಸುಖಕರ ಜೀವನವನ್ನು ಅಡ್ಡದಾರಿಯಲ್ಲಿ ಪಡೆಯಲು ಬಯಸಿ ಈ ರೀತಿ ಮಾಡುತ್ತಿರುವುದು ಕಳವಳಕಾರಿಯಾಗಿದೆ. ‘Short cut will cut you short’ ಎಂಬಂತೆ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ ಎಂಬುದನ್ನು ಮರೆತು ಹಣ ಕಳೆದುಕೊಂಡು ಕೆಲವರು ಸಾಲಗಾರರಾಗುತ್ತಿದ್ದಾರೆ. ಆ ಸಾಲಕ್ಕೆ ಹೆದರಿ ಮನೆ ಬಿಟ್ಟು ಹೋಗುತ್ತಿದ್ದಾರೆ. ಈ ಮೂಲಕ ತಮ್ಮ ಪೋಷಕರಿಗೆ ಸಾಲಕ್ಕೆ ಹೊಣೆಗಾರರನ್ನಾಗಿಸುತ್ತಿದ್ದಾರೆ!!

​ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಬ್ರಾಂಡ್‌ ಬಟ್ಟೆಗಳು, ಮೊಬೈಲ್‌ಗಳು, ಶೂಗಳು ಬಂದು ಇವನ್ನು ಧರಿಸಿದರೆ ಮಾತ್ರ ಸಮಾಜದಲ್ಲಿ ಬೆಲೆ ಸಿಗುತ್ತದೆ ಎಂದು ಬಿಂಬಿಸುತ್ತಿದ್ದಾರೆ. ಇದೇ ಮನಃಸ್ಥಿತಿಗೆ ಬಿದ್ದ ಯುವಕ/ಯುವತಿಯರು ತಾವು ತಮ್ಮ ಮನೆಯಲ್ಲಿ ಯಾವ ಆರ್ಥಿಕ ಸ್ಥಿತಿ ಇದೆ ಎಂಬುದನ್ನು ಮರೆತು ವರ್ತಿಸುತ್ತಿದ್ದಾರೆ. ತಮ್ಮ ತಂದೆ-ತಾಯಿಯ ಬೆವರು ಹರಿಸಿ ಗಳಿಸಿದ ಹಣವನ್ನು ತಾವೂ ಸ್ಥಿತಿವಂತರು ಎಂದು ತೋರಿಸಿಕೊಳ್ಳುವ ಭರದಲ್ಲಿ  ಹಠ ಮಾಡಿ ಅವರಿಂದ ಕೊಡಿಸಿಕೊಂಡು ಶೋಕಿ ಮಾಡುತ್ತಿದ್ದಾರೆ. ಹಾಗಂತ ಇವನ್ನು ತರಿಸಿಕೊಳ್ಳುವುದು ತಪ್ಪು ಅಂತಲ್ಲ, ಆದರೆ ‘ಹಾಸಿಗೆಯಿದ್ದಷ್ಟೇ ಕಾಲು ಚಾಚು’ ಎಂಬಂತೆ ವರ್ತಿಸುವುದು ಸರಿ ಎಂದು ತಿಳಿಯಬೇಕು.

​ಒಂದೊಮ್ಮೆ ನಮಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳುವ ಆಸೆಯಿದ್ದರೆ ತಾವೇ ದುಡಿಯುವ ಸಮಯದಲ್ಲಿ ಈ ಆಸೆಗಳನ್ನು ತೀರಿಸಿಕೊಳ್ಳಬೇಕು.

ನಾನು ಹೈಸ್ಕೂಲ್ ಓದುತ್ತಿದ್ದಾಗ ತಿಂಗಳಿಗೆ ಖರ್ಚಿಗೆಂದು 10 ರೂಪಾಯಿ ಸಿಗುವುದೂ ಕಷ್ಟವಿತ್ತು. ಹಾಸ್ಟೆಲ್‌ನಲ್ಲಿದ್ದಾಗ ಎಷ್ಟೋ ವೇಳೆ ಹೊರಗಡೆ ತಿಂಡಿಯನ್ನು ತಿನ್ನಬೇಕು ಎಂದೆನಿಸಿದರೂ ತಿನ್ನಲು ನನ್ನ ಬಳಿ ಹಣವಿರುತ್ತಿರಲಿಲ್ಲ. ಪಿ.ಯು.ಸಿ ಯಲ್ಲೂ ಅಷ್ಟೇ, ಬರೀ ಎರಡೇ ಹೊತ್ತು ಊಟವಿದ್ದರೂ ಮಧ್ಯಾಹ್ನ ಬರೀ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನಗಳನ್ನು ಅನುಭವಿಸಿದ್ದೇನೆ. ಅಪರೂಪಕ್ಕೆ ಯಾವಾಗಾದ್ರೂ ಹಣ ಇದ್ದಾಗ ಆಗ ಬೆಂಗಳೂರಿನ ಮೆಜೆಸ್ಟಿಕ್ ಬಳಿ ನಮ್ಮ ಹಾಸ್ಟೆಲ್ ಇದ್ದುದರಿಂದ ಹೋಟೆಲ್‌ನಲ್ಲಿ ಮಧ್ಯಾಹ್ನದ ತಿಂಡಿಯಾಗಿ 2 ಇಡ್ಲಿ ತೆಗೆದುಕೊಂಡು ಸಾಂಬಾರನ್ನು ಹೊಟ್ಟೆ ತುಂಬಾ ಕುಡಿದು ಬರುತ್ತಿದ್ದೆ!! ಎಷ್ಟೋ ವೇಳೆ ಇಡ್ಲಿ ತಿನ್ನಲು (ಆಗ 2 ಇಡ್ಲಿ ಬೆಲೆ 5 ರೂ) ಹಣ ಸಾಲದಿದ್ದಾಗ ಕ್ರೀಂ ಬನ್ ತಿಂದೇ ಮಧ್ಯಾಹ್ನದ ಹಸಿವನ್ನು ನೀಗಿಸಿಕೊಳ್ಳುತ್ತಿದ್ದೆ.

​ಇನ್ನು ಬಟ್ಟೆಯ ವಿಷಯಕ್ಕೆ ಬಂದರೆ ನನ್ನ ಬಳಿ ಇದ್ದದ್ದು ಹೈಸ್ಕೂಲ್ ಓದುವಾಗ ಬರೀ ಒಂದು ಪ್ಯಾಂಟು! ಪಿ.ಯು.ಸಿ ಓದುವಾಗ ಬರೀ 2 ಪ್ಯಾಂಟು! ಇಂಥ ಕಷ್ಟದ ದಿನಗಳಲ್ಲಿ ಓದುವಾಗ ನನಗೆ ಯಾವತ್ತೂ ನೋವು ಎನಿಸಿರಲಿಲ್ಲ. ಏಕೆಂದರೆ ನಾನು ಯಾವತ್ತೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿರಲಿಲ್ಲ…

“ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ; ಆದರೆ ಬಡವನಾಗಿ ಸಾಯುವುದು ನಿನ್ನ ತಪ್ಪು” ಎಂಬ ಪ್ರಸಿದ್ಧ ವಾಕ್ಯವೊಂದನ್ನು ನಾನು ಯಾವಾಗಲೂ ನೋಟ್ ಬುಕ್‌ನ ಮೊದಲ ಪುಟದಲ್ಲಿ ಬರೆದುಕೊಳ್ಳುತ್ತಿದ್ದೆ. ಬರೀ ನಾನೊಬ್ಬನೇ ಅಲ್ಲ, ನನ್ನ ಹಾಸ್ಟೆಲ್ ಮೇಟ್‌ಗಳು ಸಹ ತುಂಬಾ ಕಷ್ಟಪಟ್ಟು ಓದುತ್ತಿದ್ದರು. ಓದುವುದರಲ್ಲಿ ಕಷ್ಟಪಡುವುದಷ್ಟೇ ಮಾತ್ರವಲ್ಲ ತಮಗೆ ಬೇಕಾದ ಖರ್ಚಿನ ಹಣಕ್ಕೆ ತಾವೇ ಗಳಿಸಿ ಹೊಂದಿಸಿಕೊಳ್ಳುತ್ತಿದ್ದರು. ನನಗೂ ಸಹ ಇದೇ ರೀತಿಯ ಆಸೆ ಇತ್ತಾದರೂ ಆದರೆ ಪಿ.ಯು.ಸಿ ಸೈನ್ಸ್ ತೆಗೆದುಕೊಂಡಿದ್ದರಿಂದ ಈ ರೀತಿಯ ಪಾರ್ಟ್‌ ಟೈಮ್ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.

​ಮಕ್ಕಳ ಮುಂದೆ ಇವನ್ನೆಲ್ಲಾ ಹೇಳಿದರೆ ಬರೀ ಕೇಳುತ್ತಾರಷ್ಟೇ ಆದರೆ ಈ ಕಷ್ಟದ ತೀವ್ರತೆ ಅವರಿಗೆ ಅರಿವಾಗುವುದಿಲ್ಲ. ಮೊದಲು ಅನ್ನಕ್ಕೆ ಭಾರಿ ಬೆಲೆಯಿತ್ತು. ನಮ್ಮ ಊರಲ್ಲಿ ಕೆಲ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಅನ್ನ ಮಾಡುತ್ತಿದ್ದರು. ಆದರೆ ಈಗ ಇಂತಹ ಪರಿಸ್ಥಿತಿ ಯಾರಿಗೂ ಇಲ್ಲ. ಮಕ್ಕಳಲ್ಲಿ ಮೊದಲು ಇದ್ದ ಕಮಿಟ್‌ಮೆಂಟ್, ಗುರು ಶಿಷ್ಯರ ಬಾಂಧವ್ಯ, ತಮ್ಮ ಹೆತ್ತವರ ಬಗ್ಗೆ ಇರುವ  ಪ್ರೀತಿಯ ಬಂಧ ತುಸು ಬಿರುಕು ಬಿಡುತ್ತಿದೆ! ಒಂದು ಹಂತದವರೆಗೂ ಬಾಂಧವ್ಯ ಇದ್ದರೂ ಅದು ಬರೀ ಮೆಟೀರಿಯಲಿಸ್ಟಿಕ್ ಆಗಿದೆ!

​ಪೋಷಕರೂ ಬದಲಾಗುತ್ತಿದ್ದಾರೆ. ಇದನ್ನು ಗಮನಿಸಿದ ಮಕ್ಕಳು ಹಾಗೆಯೇ ಆಗುತ್ತಿದ್ದಾರೆ. ಇದಕ್ಕೆ ಪೂರಕವಾದ ಘಟನೆ ಹೇಳುವುದಾದರೆ –

ಒಂದು ಮನೆಯಲ್ಲಿ ತನ್ನ ವಯಸ್ಸಾದ ತಾಯಿಗೊಂದು ಇಟ್ಟಿದ್ದ ಹಳೇ ತಟ್ಟೆಯೊಂದನ್ನು ಅವಳು ತೀರಿ ಹೋದ ಬಳಿಕ ಎಸೆಯಲು ಅವನ ಅಪ್ಪ  ಹೋದರಂತೆ. ಆದರೆ ಆ ಮನೆಯ ಚಿಕ್ಕ ಮಗನೊಬ್ಬ ‘ಅಪ್ಪ ಅದನ್ನು ಎಸೆಯಬೇಡ’ ಎಂದನಂತೆ. ಯಾಕೆ ಎಂದು ಕೇಳಿದಾಗ  ಆ ಮಗ ‘ನಿಮಗೆ ವಯಸ್ಸಾದಾಗ ಬೇಕಲ್ವಾ?’ ಎಂದು ಹೇಳಿದನಂತೆ. ಕರ್ಮ ಫಲದ ನಿಯಮದಂತೆ ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ಅವರೂ ಈ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಈ ಘಟನೆ ತಿಳಿಸುತ್ತದೆ.

​ಇತ್ತೀಚೆಗೆ ತನ್ನ ತಂದೆಯ ಶವಸಂಸ್ಕಾರವನ್ನು ಅವರ ಮಕ್ಕಳು ವೃದ್ಧಾಶ್ರಮದವರ ಕೈಯಿಂದ ಮಾಡಿಸಿ ಅದನ್ನು ವಾಟ್ಸಾಪ್ ಮೂಲಕ ನೋಡಿದರಂತೆ. ಅದರಲ್ಲಿ ಒಬ್ಬ ಮಗಳು ‘ಬೇಗ ಬೇಗ ಕಾರ್ಯ ಮುಗಿಸಿ’ ಎಂದು ಪದೇ ಪದೇ ಹೇಳುತ್ತಿದ್ದಳಂತೆ!

​Values are not taught, but they can be caught ಎಂಬ ಮಾತಿದೆ. ನಾವು ಮಕ್ಕಳಿಗೆ ಮೌಲ್ಯಗಳನ್ನು ಬರೀ ಬೋಧಿಸದೇ, ಯಾವ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಬಯಸುತ್ತೇವೆಯೋ ಅದೇ ರೀತಿ ನಾವು ನಡೆದುಕೊಳ್ಳಬೇಕು. ಭೋದನೆ ಎನ್ನುವುದು ಪ್ರಜ್ಞಾಪೂರ್ವಕವಾಗಿ ನಮಗೆ ಗೊತ್ತಿರುವುದನ್ನು ಮಾತ್ರ ತಿಳಿಸುವುದು. ಆದರೆ ನಮ್ಮ ಚಟುವಟಿಕೆಗಳಿಂದ ನಾವೇನು, ನಮ್ಮ ವ್ಯಕ್ತಿತ್ವ ಎಂತಹದ್ದು ಎಂದು ಅಪ್ರಜ್ಞಾಪೂರ್ವಕವಾಗಿ ಮಕ್ಕಳಿಗೆ ತಾನೇ ತಿಳಿಯುವಂತೆ ಮಾಡುತ್ತೇವೆ. ಆದ್ದರಿಂದ ಮಕ್ಕಳ ಮುಂದೆ ನಾವು ಸಣ್ಣತನ ತೋರುವುದು ಬೇಡ. ಅದು ಹೆತ್ತವರೇ ಆಗಲಿ, ಶಿಕ್ಷಕರೇ ಆಗಲಿ!

​ಹಿರಿಯರಾಗುವುದು ಹಿರಿತನದಿಂದಲೇ ಹೊರತು ವಯಸ್ಸಿನಿಂದಲ್ಲ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ