Advertisement
ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ. ಮಕ್ಕಳಂತೂ ನಿದ್ದೇಲೇ ಬೆಳೀತಾರೆ ಅಂತಾರಲ್ಲ ಹಿರಿಯರು? ಅದು ನಿಜಾನೇ. ನಿದ್ದೆಯ ಮೂರನೇ ಹಂತ ಇದ್ಯಲ್ಲ, ಆಗ ದೇಹದಲ್ಲಿ ಬೆಳವಣಿಗೆಗೆ ಬೇಕಾದ ಗ್ರೋಥ್ ಹಾರ್ಮೋನುಗಳು ಬಿಡುಗಡೆಯಾಗತ್ವೆ. ಅದರಿಂದಲೇ ನೀವು ಎತ್ತರವಾಗ್ತೀರ, ಅಂಗಾಂಗಗಳು ಬೆಳೆಯತ್ವೆ.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತನೆಯ ಕತೆ

ಗೋಕರ್ಣದಲ್ಲಿ ಇಳಿ ಮಧ್ಯಾಹ್ನವು ಸಂಜೆಯಾಗುವ ಸಮಯಕ್ಕೆ, ಕಾವ್ಯಳ ಕುಟುಂಬದ ಒಬ್ಬೊಬ್ಬರಿಗೇ ಸವಿನಿದ್ರೆಯಿಂದ ಎಚ್ಚರವಾಯ್ತು. ಪ್ರತಿದಿನ ಆಫೀಸ್ ಕೆಲಸ, ತೋಟದ ಕೆಲಸ, ಶಾಲೆಯ ತರಗತಿಗಳಲ್ಲಿ ವ್ಯಸ್ತರಾಗಿರುವ ಇವರಿಗೆ, ಪ್ರವಾಸದ ಪ್ರಯಾಣ ಕೊಂಚ ಆಯಾಸ ಮಾಡಿತ್ತು. ಭರ್ಜರಿ ಊಟದ ನಂತರ ಸುಮ್ಮನೆ ಮಾತಾಡುತ್ತಾ ಮಲಗಿದವರು, ಮೆಲ್ಲಗೆ ಆವರಿಸಿದ ಕಳ್ಳನಿದ್ರೆಗೆ ಶರಣಾಗಿ, ಮೈಮರೆತು ನಿದ್ರಿಸಿ ಎದ್ದರು. ಹಾಗೆ ಎದ್ದ ಸಮುದ್ರ ಸ್ವಲ್ಪ ಹೆಚ್ಚೇ ಹೊತ್ತು ಸುಮ್ಮನೆ ಕುಳಿತಿದ್ದ. ಆಗ ಪ್ರಕಾಶ್, “ಏನಾಯ್ತು ಕಂದ? ಯಾಕೆ ಹಾಗೆ ಕೂತಿದ್ದೀ?” ಎಂದ. ಆಗ ಸಮುದ್ರ, “ಒಂದು ಸೆಕೆಂಡ್ ನನಗೆ ಈಗ ಬೆಳಗ್ಗೇನೋ, ಸಂಜೇನೋ, ಯಾವ ದಿನ, ಎಲ್ಲಿದೀವಿ ಅಂತ ಅರ್ಥಾನೇ ಆಗ್ಲಿಲ್ಲ ಅಪ್ಪ! ಆಮೇಲೆ ಸರಿಯಾಯ್ತು” ಎಂದು ಅಚ್ಚರಿಪಟ್ಟ.

ಆಗ ಪ್ರಕಾಶ್, “ಹೌದು ಸಮುದ್ರ, ನಮ್ಮ ನಿದ್ರೆ ೨೫-೩೦ ನಿಮಿಷ ದಾಟಿಬಿಟ್ರೆ, ಸಾಮಾನ್ಯವಾಗಿ ನಮ್ಮ ಮೆದುಳು ಸ್ಟೇಜ್ ೩ Non-REM ನಿದ್ರೆಗೆ ಜಾರಿಬಿಡತ್ತೆ. ಆಗ, ಎಚ್ಚರ ಆದ್ರೆ, ‘ಸ್ಲೀಪ್ ಇನರ್ಶಿಯ’ ಅಂತೀವಿ, ಹಾಗೆ ಆಗ್ಬಿಡತ್ತೆ. ಅಂದ್ರೆ, ದೇಹಕ್ಕೆ ಎಚ್ಚರ ಆಗಿರತ್ತೆ, ಆದ್ರೆ ಮೆದುಳಿನ ಕೆಲವು ಭಾಗಗಳು ಇನ್ನೂ ಸರಿಯಾಗಿ ಎಚ್ಚರವಾಗಿರಲ್ಲ.” ಎಂದು ವಿವರಿಸಿದ.

ಇದನ್ನು ಕೇಳಿದ ವಿಭಾ, “ಅಲ್ಲಾ ಬಾವಾ! ನಿದ್ದೆ ಅಂದ್ರೆ ಏನು ಬನಶಂಕರೀನಾ, ನಾಗರಬಾವಿನಾ? ಫಸ್ಟ್ ಸ್ಟೇಜ್, ಸೆಕೆಂಡ್ ಸ್ಟೇಜ್ ಅನ್ನಕ್ಕೆ?” ಎಂದಳು ನಗುತ್ತಾ. ಆಗ ಪ್ರಕಾಶ್, “ಅಲ್ಲ ಕಣೋ ವಿಭಾ, ಕಣ್ಣಿಗೆ ಕಾಣುವ ಬೆಂಗಳೂರಿನ ಏರಿಯಾಗಳಲ್ಲೇ ಸ್ಟೇಜ್ ೧, ಸ್ಟೇಜ್ ೨ ಅಂತ ವಿಭಜನೆ ಮಾಡೋವಾಗ, ಕಣ್ಣಿಗೆ ಕಾಣದ, ಸುಲಭವಾಗಿ ಬುದ್ಧಿಗೆ ಗೋಚರಿಸದ ಬುದ್ಧಿಯ ಬಗ್ಗೆ, ಮನಸಿನ ಬಗ್ಗೆ, ನಿದ್ರೆಯಂಥಾ ವಿಶೇಷ ಸ್ಥಿತಿಗಳ ಬಗ್ಗೆ ಅರ್ಥ ಮಾಡಿಕೊಳ್ಳೋಕೆ  ಅದೆಷ್ಟು ವಿಭಜನೆ ಬೇಕು ಹೇಳು!” ಎಂದ. ಮಾತನ್ನು ಮುಂದುವರೆಸುತ್ತಾ, ಎಲ್ಲರೂ ಒಬ್ಬೊಬ್ಬರಾಗಿ ತಯಾರಾಗಲು ಶುರು ಮಾಡಿದರು. ಇನ್ನು ಮರುದಿನ  ಗೋಕರ್ಣದಿಂದ ಹೊರಡಬೇಕೆಂದರೆ, ಬೀಚ್ ಪ್ರಿಯರಿಗೆ, ಇಂದು ಸಂಜೆಯೇ ಸಮುದ್ರದಲ್ಲಿ ಆಡಲು ಕೊನೇ ದಿನ. ಇನ್ನು ಮತ್ತೆ ಸಮುದ್ರದಂಡೆಗೆ ಪ್ರವಾಸ ಬರುವವರೆಗೂ ಕಾಯಲೇಬೇಕಲ್ಲ? ಹಾಗಾಗಿ ಕಾಲಹರಣ ಮಾಡದೇ ಬೇಗ ಬೇಗ ತಯಾರಾಗಿ ಹೊರಟರು.

ಕಾರಿನಲ್ಲಿ ದಾರಿಯುದ್ದಕ್ಕೂ ನಿದ್ರೆಯ ಬಗ್ಗೆಯೇ ಚರ್ಚೆ. ಎಲ್ಲರಿಗೂ ಒಳ್ಳೆಯ ನಿದ್ದೆಯಾಗಿತ್ತು, ಕಾಫಿ ತಿಂಡಿಯ ಸೇವನೆಯೂ ಆಗಿತ್ತು. ಇನ್ನು ಮಾತುಕತೆಗೆಲ್ಲಿಯ ಬರ? ಮೊದಲು ಮಾತಿಗೆ ಶುರುವಿಟ್ಟವಳು ವರ್ಣ. “ನಮ್ಮ ನಿದ್ದೇಲಿ ಎಷ್ಟು ಸ್ಟೇಜ್ ಇರತ್ತೆ?” ಎಂದು ಕೇಳಿದಳು ಕುತೂಹಲದಿಂದ. ಆಗ ಕಾವ್ಯ, “ಮೂಲತಃ ೪ ಹಂತಗಳಿರತ್ವೆ ನಮ್ ನಿದ್ದೇಲಿ. ಮೊದಲ್ನೇದು ಜಸ್ಟ್ ನಿದ್ದೆಗೆ ಜಾರೋ ಹಂತ. ಅದನ್ನ NREM 1 ಅಂತೀವಿ. ಸಂಪೂರ್ಣವಾಗಿ ನಿದ್ದೇಲಿ ಮುಳುಗಿರಲ್ಲ ನಾವು. ಈ ಹಂತದಲ್ಲಿ ನಮ್ಮ ಮಾಂಸಖಂಡಗಳು ರಿಲ್ಯಾಕ್ಸ್ ಆಗಕ್ಕೆ ಶುರುವಾಗತ್ತೆ. ಹಾರ್ಟ್ ಬೀಟ್ ನಿಧಾನವಾಗತ್ತೆ. ನಿಂಗೆ ಯಾವಾಗಾದ್ರೂ, ನಿದ್ದೇಲೆ ಸಡನ್ ಆಗಿ ಕೆಳಗೆ ಬಿದ್ದ ಹಾಗಾಗಿ, ಎಚ್ಚರ ಆಗಿದ್ಯಾ?” ಎಂದು ಕೇಳಿದಳು.

ಪ್ರಶ್ನೆ ಕೇಳಿದ್ದು ವರ್ಣಳಿಗಾದರೂ, ವರ್ಣ, ವಿಭಾ ಮತ್ತು ಸಮುದ್ರ ಮೂರೂ ಜನರೂ “ಹೂಂ, ಹೂಂ, ಆಗಿದೆ, ನಂಗೂ ಆಗಿದೆ” ಎಂದರು. ಆಗ ವರ್ಣ, “ಹೂಂ ಕಾವ್ಯಕ್ಕಾ, ನಿಜ್ವಾಗ್ಲೂ ನಿದ್ದೇಲೆ ಬಿದ್ಬಿಟ್ಟೆ ಅಂತ ಎದ್ಬಿಟ್ಟೆ!” ಎಂದಳು. ಆಗ ಕಾವ್ಯ ನಗುತ್ತಾ, “ಹೂಂ, ಅದಿನ್ನೂ ನಿದ್ದೆಯ ಮೊದಲ ಹಂತ. ಆಗ ಸಡನ್ ಆಗಿ ಹಾಗೆ ಎಚ್ಚರ ಆದ್ರೆ, ‘ಹಿಪ್ನಿಕ್ ಜರ್ಕ್’ ಅಂತೀವಿ ಅದನ್ನ. ನಿದ್ರೆಯ ಮುಂದಿನ ಹಂತದ ಬಗ್ಗೇನೂ ಹೇಳ್ಲಾ?” ಎಂದಳು.

“ಇನ್ನೇನು ಬೀಚ್ ೫ ನಿಮಿಷದ ಹಾದಿ, ಬೇಗ ಬೇಗ ಹೇಳು ಕಾವ್ಯಕ್ಕಾ! ಆಮೇಲೆ ಸಮುದ್ರದಲ್ಲಿ ಜಂಪ್ ಮಾಡಿ ಆಡೋಕಿದೆ ಮತ್ತೆ” ಎಂದಳು ವಿಭಾ. ತನ್ನ ಮಾತನ್ನು ಮುಂದುವರೆಸಿದ ಕಾವ್ಯ, “ನಿದ್ರೆಯ ಎರಡನೇ ಹಂತ NREM 2. ಇಲ್ಲಿ ನಮ್ಮ ದೇಹದ ಮಾಂಸಖಂಡಗಳು ಸಂಪೂರ್ಣವಾಗಿ ರಿಲ್ಯಾಕ್ಸ್ ಆಗತ್ವೆ. ಅಂದ್ರೆ ಮುಖ್ಯವಾಗಿ ಕಾಲು, ಕೈ, ಕಣ್ಣು, ಕಿವಿ ಇವೆಲ್ಲಾ ಅರಾಮಾಗಿ ರೆಸ್ಟ್ ಮಾಡತ್ವೆ. ಪಾಪ ನಮ್ಮ ಹಾರ್ಟು, ಶ್ವಾಸಕೋಶ, ಮೆದುಳು – ಇವೆಲ್ಲಾ ಕೆಲ್ಸ ಮಾಡ್ಲೇಬೇಕಲ್ಲಾ! ಅವೆಲ್ಲಾ ತಮ್ಮ ನೈಟ್ ಶಿಫ್ಟ್ ಮಾಡತ್ವೆ. ಇದು ಕೂಡ ಮೊದಲ ಹಂತದ ಹಾಗೆ, NREM ಅಂದ್ರೆ Non Rapid Eye movement ನಿದ್ದೆ. ಕಣ್ಣಿನ ಗುಡ್ಡೆಗಳು ಕಣ್ಣ ರೆಪ್ಪೆಯ ಅಡಿಯಲ್ಲಿ ಚಲಿಸ್ತಾ ಇರಲ್ಲ.” ಎಂದಳು.

ಎಲ್ಲರೂ ತದೇಕಚಿತ್ತದಿಂದ ಕೇಳುತ್ತಿರುವುದನ್ನು ಗಮನಿಸಿ, ಕಾವ್ಯ, ತನ್ನ ಮಾತನ್ನು ಮುಂದುವರೆಸಿದಳು. “ಇನ್ನು ಮೂರನೆಯ ಹಂತ NREM 3. ಇದು ಡೀಪ್ ಸ್ಲೀಪ್ ಹಂತ. ನಾವು ಹೀಗೆ ಆಳವಾಗಿ ನಿದ್ದೆ ಮಾಡಿದಾಗ, ನಮ್ಮ ಮಾಂಸಖಂಡಗಳು ರಿಪೇರಿ ಆಗ್ತಾ ಇರತ್ವೆ, ನಮ್ಮ ಮೆದುಳಿನ ಸುತ್ತ ಒಂದು ಲಿಕ್ವಿಡ್ ಇರತ್ತಲ್ಲ. ಅದು ಮೆದುಳಿನ ಮತ್ತು ಸ್ಪೈನಲ್ ಕಾರ್ಡ್ ಸುತ್ತ ಓಡಾಡಿ, ಕೊಳೆಯಾದ ಪಾತ್ರೆ ತೊಳೆಯೋ ಹಾಗೆ ತೊಳೆದು, ಬೇಡದ ವೇಸ್ಟ್ ಅಂಶಗಳನ್ನ ತೆಗೆದು ಕ್ಲೀನ್ ಮಾಡತ್ತೆ. ಮಕ್ಕಳಂತೂ ನಿದ್ದೇಲೇ ಬೆಳೀತಾರೆ ಅಂತಾರಲ್ಲ ಹಿರಿಯರು? ಅದು ನಿಜಾನೇ. ನಿದ್ದೆಯ ಮೂರನೇ ಹಂತ ಇದ್ಯಲ್ಲ, ಆಗ ದೇಹದಲ್ಲಿ ಬೆಳವಣಿಗೆಗೆ ಬೇಕಾದ ಗ್ರೋಥ್ ಹಾರ್ಮೋನುಗಳು ಬಿಡುಗಡೆಯಾಗತ್ವೆ. ಅದರಿಂದಲೇ ನೀವು ಎತ್ತರವಾಗ್ತೀರ, ಅಂಗಾಂಗಗಳು ಬೆಳೆಯತ್ವೆ. ಜೊತೆಗೆ ನಮ್ಮ ದೇಹದಲ್ಲಿ ಕೋಟೆ ಇರತ್ತಲ್ಲ? ಇಮ್ಯುನಿಟಿ, ಅಂದ್ರೆ, ರೋಗ ನಿರೋಧಕ ಶಕ್ತಿಯ ಕೋಟೆ? ಅದನ್ನ ಕೂಡ ಗಟ್ಟಿ ಮಾಡಿ, ನಾವು ಆರೋಗ್ಯವಾಗಿ ಇರೋ ಹಾಗೆ ನೋಡಿಕೊಳ್ಳತ್ತೆ.” ಎಂದಳು.

ಅಷ್ಟರಲ್ಲಿ ಸಮುದ್ರತೀರ ಕಣ್ಣಿಗೆ ಕಾಣಲು ಪ್ರಾರಂಭವಾಯಿತು. ತನ್ನ ಮಾತನ್ನು ಮುಂದುವರೆಸಿದ ಕಾವ್ಯ, “ಇನ್ನು ನಿದ್ದೆಯ ೪ನೇ ಹಂತ, NREM ಅಲ್ಲ REM. ಅಂದ್ರೆ, ಇಲ್ಲಿ Rapid Eye movement ಇರತ್ತೆ. ನಮ್ಮ ಕಣ್ಣುಗಳು ಕನಸಿನ ರೂಪದಲ್ಲಿ ಸಿನೆಮಾ ನೋಡ್ತಾ ಇರತ್ತೆ, ಮೆದುಳಿನ ಪರದೆ ಮೇಲೆ! ಈ ಹಂತದಲ್ಲಿ ನಮ್ ಕನಸಲ್ಲಿ ಬರೋದನ್ನೆಲ್ಲಾ ನಿಜವೇನೋ ಅನ್ನೋ ಹಾಗೆ ಅನುಭವಿಸ್ತಾ ಇರ್ತೀವಲ್ಲ! ಆಗ ನಮ್ಮ ಕೈಕಾಲುಗಳ ಮಾಂಸಖಂಡಗಳನ್ನ ನಮ್ಮ ಮೆದುಳು ಲಾಕ್ ಮಾಡಿ ಬಿಟ್ಟಿರತ್ತೆ. ಇಲ್ಲಾಂದ್ರೆ ನಾವು ಕನಸಲ್ಲಿ ಮಾಡ್ತಾ ಇರೋ ಹಾಗೇ ನಿದ್ದೇಲೂ ನಿಜ್ವಾಗಿ ಹಾರೋದು, ಕುಣಿಯೋದು, ಎಗರೋದು ಮಾಡಿ ಬಿಟ್ರೆ ಏನು ಕಥೆ ಯೋಚ್ನೆ ಮಾಡಿ? ಕನಸಲ್ಲಿ ಯಾರಿಗೋ ಬಾರಿಸ್ತಾ ಇದ್ರೆ, ಇಲ್ಲಿ ನಮ್ ಪಕ್ಕದಲ್ಲಿ ಮಲಗಿರೋವ್ರನ್ನ ಝಾಡಿಸಿ ಒದ್ದಿರ್ತೀವಿ ಅಷ್ಟೇ!” ಎಂದಳು.

ಆಗ ವಿಭಾ, “ಹೌದು ಕಾವ್ಯಕ್ಕ! ಇಲ್ಲಾಂದ್ರೆ ನಮ್ ಸಮುದ್ರ ಹಗಲೂ ರಾತ್ರಿ ಆಡೀರೋ ಫುಟ್ಬಾಲನ್ನ, ಕನಸಲ್ಲೂ ಒದ್ದು, ಪಕ್ಕದಲ್ಲಿದ್ದವರನ್ನ ಕೆಳಗೆ ಬೀಳಿಸಿರ್ತಾನೆ ಆಮೇಲೆ” ಎಂದಳು ನಗಾಡುತ್ತಾ. ಎಲ್ಲರೂ “ಹೌದೌದು” ಎಂದು ತಲೆಯಾಡಿಸುತ್ತಾ ನಗುವಿನ ಹೊನಲಲ್ಲಿ ತೇಲಿದರು.

ಅಷ್ಟರಲ್ಲಿ ಬೀಚ್ ಹತ್ತಿರ ಕಾರು ನಿಲ್ಲಿಸುವ ಜಾಗ ತಲುಪಿ, ಎಲ್ಲರೂ ಇಳಿದರು. ಇಳಿದು ಸುಂದರ ಸಮುದ್ರದ ಕಡೆಗೆ ನಡೆಯುತ್ತಾ, ವರ್ಣ, “ಕಾವ್ಯಕ್ಕಾ, ನಮ್ಮ ನೆನಪುಗಳನ್ನೆಲ್ಲ, ಓದಿದ್ದನ್ನೆಲ್ಲಾ, ಪರ್ಮನೆಂಟ್ ಮೆಮೊರಿಗೆ ಸೇರಿಸೋದು ಯಾವ ಹಂತದಲ್ಲಿ?” ಎಂದು ಕೇಳಿದಳು. ಆಗ ಕಾವ್ಯ, “ಮೂರನೇ ಹಂತದಲ್ಲಿ ಪ್ರಾರಂಭವಾದ ಈ ಕೆಲಸ ಸಂಪೂರ್ಣವಾಗೋದು ನಿದ್ದೆಯ ಕೊನೇ ಹಂತದಲ್ಲಿ. ನಾವು ಕನಸು ಕಾಣೋದ್ರಲ್ಲಿ ಬ್ಯುಸಿ ಇರ್ತೀವಿ, ನಮ್ಮ ಮೆದುಳು ಹಳೇ ಸ್ಟಾಕ್, ಹೊಸಾ ಸ್ಟಾಕ್ ಅಂತ ಬಟ್ಟೆ ಜೋಡಿಸೋ ಹಾಗೆ, ಕಲಿತದ್ದನ್ನ, ಮರೆಯಬಾರದ್ದನ್ನ ಜೋಡಿಸಿ ಇಡ್ತಾ ಇರತ್ತೆ. ಈ ನಾಲ್ಕೂ ಹಂತಗಳು ಮುಗ್ಯಕ್ಕೆ ಒಟ್ಟಾರೆ ೧.೫ – ೨ ಘಂಟೆಗಳು ಬೇಕು. ಅಂದ್ರೆ ನಾವು ಸರಿಸುಮಾರು ೮ ಘಂಟೆ ನಿದ್ದೆ ಮಾಡಿದ್ರೆ, ೪ – ೫ ಸಲ ಪೂರ್ತಿ ನಿದ್ರೆಯ ಸೈಕಲ್ ರಿಪೀಟ್ ಆಗತ್ವೆ” ಎಂದಳು.

ಅಷ್ಟರಲ್ಲಿ, ಕಾವ್ಯಳ ಅಮ್ಮನ ಫೋನ್ ಕರೆ ಬಂತು. ಉಭಯ ಕುಶಲೋಪರಿಯ ನಂತರ, ಕಾವ್ಯಳ ಅಮ್ಮ, ತಮ್ಮ ಅಪಾರ್ಟ್ಮೆಂಟಿನ ಪುಟ್ಟ ಉದ್ಯಾನಕ್ಕೆ ಲಗ್ಗೆ ಇಟ್ಟ ಒಳಗಿನ ಕಳ್ಳರ ಬಗ್ಗೆ ವಿವರಿಸಿದರು. ಜೊತೆಗೆ ಕಾವ್ಯಳ ಅಪ್ಪ ಕಥೆಗಾರರಾಗಿದ್ದು, ಅವರೂ ಕೂಡ, ಸಿ.ಸಿ ಟಿವಿಗೂ ಕಾಣಿಸದೇ ಈ ಒಳಗಿನ ಕಳ್ಳರು ಹೇಗೆ ಉದ್ಯಾನದ ಕರಿಬೇವನ್ನು ಕದ್ದಿರಬಹುದು ಎಂದು ಪಕ್ಕದ ಮನೆಯವರು ಅಪಾರ್ಟ್ಮೆಂಟ್ ಗ್ರೂಪಿನಲ್ಲಿ ಏನೇನು ಮೆಸೇಜ್ ಹಾಕಿದ್ದರು ಎಂದು ಪದರಪದರವಾಗಿ ರಸವತ್ತಾಗಿ  ವಿಶ್ಲೇಷಿಸಿದರು. ಇದನ್ನು ಕೇಳಿದ ಕಾವ್ಯಳಿಗೆ ಮಾತುಕತೆ ಮಜವೆನಿಸಿ, ಆ ಗಿಡದ ಫೋಟೊ ಕಳಿಸಲು ಕೇಳಿದಳು. ಅರೆಕ್ಷಣದಲ್ಲಿ ವಾಟ್ಸಾಪಿಗೆ ಬಂದ ಫೋಟೋ ನೋಡಿ, ಜೊತೆಗೆ ಅಪಾರ್ಟ್ಮೆಂಟ್ ಗ್ರೂಪಿನ ಮೆಸೇಜುಗಳ ಸ್ಕ್ರೀನ್ ಶಾಟ್ ನೋಡಿ, ಕಾವ್ಯ ಬಿದ್ದೂ ಬಿದ್ದೂ ನಗಲಾರಂಭಿಸಿದಳು.

ಮಕ್ಕಳು ಮೂವರೂ ಸಮುದ್ರದಲ್ಲಿ ಆಡಲು ಹೋಗಿ, ಕಾವ್ಯ ಮತ್ತು ಪ್ರಕಾಶ್ ಇಬ್ಬರೇ ಸಮುದ್ರದಂಡೆಯ ಮೇಲೆ ಕೂತಿದ್ದಾಗ, ಕಾವ್ಯ ಹೀಗೆ ನಗುವುದನ್ನು ನೋಡಿ, ಪ್ರಕಾಶ್ “ಏನಾಯ್ತು ಕಾವ್ಯ? ನಂಗೂ ಹೇಳು” ಎಂದ. ಅದಕ್ಕೆ ತನ್ನ ವಾಟ್ಸಾಪಿಗೆ ಬಂದ ಗಿಡದ ಫೋಟೋ, ಜೊತೆಗೆ ಓತಪ್ರೋತ ಮೆಸೇಜುಗಳ ಸ್ಕ್ರೀನ್ ಶಾಟ್ ತೋರಿಸಿದಳು. ಆಗ ಪ್ರಕಾಶ್ “ಓಹ್ ನಂಗೆ ಗೊತ್ತಾಯ್ತು ಕಳ್ಳರು ಯಾರೂ ಅಂತ” ಎಂದ. ಆಗ ಕಾವ್ಯ, “Are you thinking what I am thinking?” ಎಂದಳು.

ಮತ್ತೊಮ್ಮೆ ಫೋಟೋ ಝೂಮ್ ಮಾಡಿ ನೋಡಿದ ಪ್ರಕಾಶ್, “ಖಂಡಿತ” ಎಂದ. ಇಬ್ಬರಿಗೂ ಮಾತಾಡದೇ ತಮ್ಮ ಮನಸಿನಲ್ಲಿ ಇದ್ದ ಉತ್ತರ ಗೊತ್ತಾಗಿ, ಕಾವ್ಯ ತನ್ನ ಅಮ್ಮನಿಗೆ ಕರೆ ಮಾಡಿದಳು. “ಅಮ್ಮಾ, ನಮಗೆ ಕಳ್ಳರು ಯಾರಂತ ಗೊತ್ತಾಯ್ತು.” ಎಂದಳು. ಆಗ ಅವಳ ಅಮ್ಮ, “ಯಾರು? ಯಾರು?” ಎಂದರು ಕುತೂಹಲದಿಂದ. ಪಕ್ಕದಲ್ಲೇ ಇದ್ದ ಕಾವ್ಯಳ ಅಪ್ಪನೂ, “ನಿಮಗೆ ಅದು ಹೇಗೆ ಗೊತ್ತಾಯ್ತು? ಹೌದೂ, ಯಾರು ಕದ್ದವರು? ಮೇಲಿನ ಮನೆಯವರ? ಬಿ ಬ್ಲಾಕ್ ತರಲೆ ಮಕ್ಕಳಾ?” ಎಂದು ಕೇಳುತ್ತಾ ತಮ್ಮ ಪತ್ತೇದಾರಿ ಕಥೆಗಾರರ ಮೆದುಳನ್ನೂ ಚುರುಕುಗೊಳಿಸಿದರು.

ಆಗ ಕಾವ್ಯ ಮತ್ತು ಪ್ರಕಾಶ್ ಏನೆಂದು ಉತ್ತರಿಸಿರಬಹುದು? ಅವರ ಅಪಾರ್ಟ್ಮೆಂಟ್ ಉದ್ಯಾನಕ್ಕೆ ದಾಳಿ ಮಾಡಿದ ಕಳ್ಳರು ಸಿಸಿಟಿವಿ ಕ್ಯಾಮೆರಾದಲ್ಲೂ ಕಾಣದೇ ಹೇಗೆ ತಪ್ಪಿಸಿಕೊಂಡರು? ಈ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಓದೋಣ. ಅಲ್ಲಿಯವರೆಗೂ ನೀವೂ ಶೆರ್ಲಾಕ್ ಹೋಮ್ಸ್ ಆಗಿ ಈ ಒಗಟು ಬಿಡಿಸಲು ಪ್ರಯತ್ನಿಸಬಹುದು. ಕಾವ್ಯಳ ಕುಟುಂಬವೂ ಸಮುದ್ರದಂಡೆಯಲ್ಲಿ ಮಜಾ ಮಾಡಬಹುದು.

ಸಮುದ್ರದ ದಂಡೆ ಎಂದಾಗ ನೆನಪಾಯಿತು, ಕಳೆದ ಸಂಚಿಕೆಯಲ್ಲಿ  ನಿಮಗೆಲ್ಲಾ ಒಂದು ಪ್ರಶ್ನೆಯಿತ್ತಲ್ಲ? ಭೂಮಿಯ ಮೇಲೆ ಮರಳ ಕಣಗಳೆಷ್ಟಿವೆ ಎಂದು? ಅದಕ್ಕೆ ಸರಿಯಾದ ಉತ್ತರ ನಿಗಧಿತವಾಗಿ ಹೇಳಲು ಕಷ್ಟವಿದ್ದರೂ, ವಿಜ್ಞಾನಿಗಳ ಪ್ರಕಾರ ಸರಿಸುಮಾರು ೭.೫ ಕ್ವಿಂಟಿಲಿಯನ್ ಕಣಗಳಂತೆ! ಮಿಲಿಯನ್, ಬಿಲಿಯನ್ ಕೇಳಿರುತ್ತೇವಲ್ಲಾ? ಹಾಗೇ, ೭.೫ ಕ್ವಿಂಟಿಲಿಯನ್ ಎಂದರೆ ೭.೫ರ ಪಕ್ಕ ೧೭ ಸೊನ್ನೆ ಹಾಕಬೇಕು. ಅಷ್ಟು ದೊಡ್ಡ ಸಂಖ್ಯೆ! ‘ಅಬ್ಬಬ್ಬ! ಇಷ್ಟೊಂದು ಮರಳ ಕಣಗಳಿವೆಯಾ?’ ಎನಿಸಿದರೆ, ಆ ಅಚ್ಚರಿಗಿಂತಲೂ ಮತ್ತೊಂದು ಅಚ್ಚರಿದಾಯಕ ವಿಷಯ ಗೊತ್ತೇ?

ಇಡೀ ‘ವಿಶ್ವ’, ಬೇಡ ಬಿಡಿ, ಇಡೀ ‘ವಿಶ್ವ’ವಿನ್ನೂ ನಮ್ಮ ಅರಿವಿಗೆ ನಿಲುಕೇ ಇಲ್ಲ. ನಮ್ಮ ಟೆಲಿಸ್ಕೋಪುಗಳನ್ನು ಬಳಸಿ ನಾವು ಕಾಣಬಹುದಾದ ಯೂನಿವರ್ಸ್ ಅಂದರೆ ‘ವಿಶ್ವ’ದ ಭಾಗದಲ್ಲಿ, ಇದಕ್ಕಿಂತಲೂ ಅಂದರೆ ‘೭.೫ ಕ್ವಿಂಟಿಲಿಯನ್’ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಕ್ಷತ್ರಗಳಿವೆಯಂತೆ! ಆಶ್ಚರ್ಯವಾಯಿತೇ? ಅದಕ್ಕಿಂತಲೂ ಮತ್ತಷ್ಟು ಆಶ್ಚರ್ಯವೆಂದರೆ, ಒಂದು ಟೀ ಸ್ಪೂನ್ ಮರಳಿನ ಕಣದಲ್ಲಿ, ಅಷ್ಟೆಲ್ಲಾ ನಕ್ಷತ್ರಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪರಮಾಣುಗಳಿವೆ!

ಇಂತಹ ಅದ್ಭುತ ವಿಶ್ವದಲ್ಲಿ ಇರುವ ಕೋಟ್ಯಂತರ  ಸೌರಮಂಡಲಗಳಲ್ಲಿ ಒಂದು ನಮ್ಮ ಸೌರ ಮಂಡಲ. ಈ ಮಂಡಲದ ಒಂದು ಗ್ರಹದಲ್ಲಿ ಮನುಷ್ಯನೊಬ್ಬನ ಜೀವಿತವು ತೃಣಕ್ಕೆ ಸಮ ಅಲ್ಲವೇ? ನಾವು ಅಂತಹ ಸನ್ನಿವೇಶದಲ್ಲಿ ಬದುಕಿರುವಾಗ, ಜಾತಿ, ಧರ್ಮ, ಬಣ್ಣ, ಭಾಷೆ, ಹಣ, ಅಂತಸ್ತು ಎನ್ನುವ ಅರ್ಥವಿರದ ಹುನ್ನಾರಕ್ಕೆ ಬದುಕನ್ನು ಬಲಿಕೊಡುವುದು ಎಷ್ಟು ಸರಿ? ಇರುವ ಕೆಲವೇ ವರ್ಷಗಳಲ್ಲಿ, ಇರುವ ಒಂದೇ ಭೂಮಿಯ ಪರಿಸರದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಂತೆ ಕಸ ಪಸರಿಸುತ್ತಾ, ದ್ವೇಷ ಒಸರಿಸುತ್ತಾ ಜೀವಿಸುವುದು ಎಷ್ಟು ಸರಿ? ಇದು ಪದೇ ಪದೇ ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಈ ಪ್ರಶ್ನೆಯೊಂದಿಗೆ ಕಾವ್ಯಳ ಕುಟುಂಬದ ಪ್ರವಾಸದ ಕಥೆಯೂ ಮುಗಿದಿದ್ದು, ಮುಂದಿನ ಸಂಚಿಕೆಯಲ್ಲಿ, ಊರಿಗೆ ಮರಳಿದ ಕಾವ್ಯಳ ಕುಟುಂಬದವರು ಏನು ಮಾಡಿದರು? ಅವರು ಪತ್ತೆಮಾಡಿದ ಕಳ್ಳರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಣ.

(ಹಿಂದಿನ ಕಂತು: ಮರಳಿ, ಹೊರಳಿ ಮರಳ ಕಡೆಗೆ)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ