Advertisement
ನಾನು ಮತ್ತು ಎಐ ಕಲ್ಪನಾ ವಿಲಾಸ: ಎಚ್. ಗೋಪಾಲಕೃಷ್ಣ ಸರಣಿ

ನಾನು ಮತ್ತು ಎಐ ಕಲ್ಪನಾ ವಿಲಾಸ: ಎಚ್. ಗೋಪಾಲಕೃಷ್ಣ ಸರಣಿ

ಅದಕ್ಕೆ ನಾನು ಕೊಡೊ ಕೆಲಸಾನೂ ವಿಚಿತ್ರದ್ದು. ನಾನು ಸಾಮಾರ್ ಸೆಟ್ ಪಲ್ಟಿ ಹೊಡೆಯೋದು ಮಾಡಿಕೊಡು ಅಂದೆನಾ? ನಿಂತ ಹಾಗೆ ನಾನು ನಿಲ್ಲು ಪಲ್ಟಿ ಹೊಡೆದು ತೋರಿಸಿತಾ? ನನ್ನನ್ನ ಒಬ್ಬ ರೈಟರ್ ಆಗಿ ಕಾರ್ಟುನ್ ಮಾಡು ಅಂದೆ ತಾನೇ? ನಾನು ಒಂದು ಕಾರ್ಟುನ್ ಚಿತ್ರ ಆದೇನಾ? ನನ್ನ ಫೋಟೋ ಹಾಕಿ ತಲೆ ನುಣ್ಣಗೆ ತೋರಿಸು ಅಂದರೆ ತೋರಿಸುತ್ತಾ? ನಾನು ಮುಖ್ಯಮಂತ್ರಿ ಹೆಗಲ ಮೇಲೇ ಕೈ ಹಾಕ್ಕೊಂಡಿರೋ ಫೋಟೋ ಕೊಡು ಅಂದರೆ ಕೊಡ್ತಾ? ಇಬ್ಬರಿಗೂ ತಲೆ ಗುಂಡು ಹೊಡೆದು ಅಕ್ಕಪಕ್ಕ ನಿಲ್ಲಿಸು ಅಂದೆನಾ? ಅದನ್ನೂ ಅದು ಮಾಡಿತಾ?
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೪ನೇ ಬರಹ ನಿಮ್ಮ ಓದಿಗೆ

ಕಳೆದ ಸಂಚಿಕೆಯ ಮುಕ್ತಾಯ ಹೀಗೆ ಮಾಡಿದ್ದೆ… ಇನ್ನು ಬರೆಯೋ ಚಟಕ್ಕೆ ಬಂದರೆ ನನ್ನ ಪೀಳಿಗೆಯವರಲ್ಲಿ ಇದು ಅತಿ ಹೆಚ್ಚು. ಜೇಬಿನಲ್ಲಿ ಮೂರು ನಾಲ್ಕು ಪೆನ್ ಇಟ್ಟುಕೊಂಡು ಇವರು ಓಡಾಡುತ್ತಾರೆ. ಜತೆಗೆ ದಿವಸಕ್ಕೆ ಇಂತಿಷ್ಟೇ ಪುಟ ಬರೆಯಬೇಕು ಅಂತ ಪ್ರತಿಜ್ಞೆ ಮಾಡಿರುತ್ತಾರೆ. ಅದಕ್ಕೆ ಅನುಗುಣವಾಗಿ ಅವರ ಈ ಚಟ ಹೊರಹೊಮ್ಮತ್ತದೆ. ಸರಿಸುಮಾರು ನನ್ನೆಲ್ಲ ಗೆಳೆಯರಿಗೂ ಈ ಚಟ ಒಂದು ರೀತಿ ಸಾಂಕ್ರಮಿಕ ಜಾಡ್ಯ.

ಕೋವಿಡ್ ಕಾಲದಲ್ಲಿ ನನ್ನ ವಿಮರ್ಶಕ ಗೆಳೆಯರು ಹಠ ಹಿಡಿದು ಹಳೆಯ ಕವಿಗಳ ಗ್ರಾಚಾರ ಬಿಡಿಸಿದರು. ಆಗ ಅವರು ಬರೆದ ಸುಮಾರು ಕವಿಚರಿತ್ರೆಗಳನ್ನು ಓದುವ ಸೌಭಾಗ್ಯ ನನ್ನದಾಗಿತ್ತು. ಹೀಗೆ ಚಟ ಅಂಟಿಸಿಕೊಂಡವರು ಅದನ್ನು ಮಿಕ್ಕವರಿಗೂ ಅಂಟಿಸುವುದುoಟು. ಕೆಲವರು ತಮ್ಮ ಈ ಚಟವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುತ್ತಾರೆ. ಮತ್ತೆ  ಕುದುರೆಯ ಬೆನ್ನೇರಿ ಬಂತು ಕಲ್ಪನಾ ವಿಳಾಸ ಅಂತೇನೋ ಒಂದು ಹಾಡಿದೆಯಂತೆ. ಕಲ್ಪನೆ ಎನ್ನುವ ಕುದುರೆ ಹತ್ತಿದರೆ ಅದು ಎಲ್ಲೆಲ್ಲಿಗೆ ಕರೆದೊಯ್ಯುತ್ತೆ ಎಂದು ಹೇಳಲು ಆಗದು. ಇದು ಒಂದು ರೀತಿ ನಮ್ಮ ಟಿವಿ ಸೀರಿಯಲ್‌ಗಳ ಹಾಗೆ. ಹೇಗೋ ಶುರು ಆಗುತ್ತೆ ಎಲ್ಲೆಲ್ಲೋ ಸುತ್ತುತ್ತೆ. ತಾನು ಯಾತಕ್ಕೆ ಹೊರಟೆ ಎನ್ನುವುದು ಬಿಟ್ಟು ಮಿಕ್ಕದ್ದೆಲ್ಲಾ ಬುರುಡೆ ಬಿಡುತ್ತೆ. ಅರ್ಥ ಆಗಲಿಲ್ಲ ತಾನೇ ನಾನು ಹೇಳಿದ್ದು…?

ಕೊಂಚ ತಡೆದುಕೊಳ್ಳಿ, ವಿಷದವಾಗಿ ವಿವರಿಸುತ್ತೇನೆ. ಕತೆಯ ಕೊನೆ ಕೊನೆಗೆ ಬರ್ತಾ ಇದ್ದೀನಿ…..

ಈಗ ಮುಂದಕ್ಕೆ ಓಡಲೇ…. ಯಾತಕ್ಕೆ ಹೊರಟೆ ಎನ್ನುವುದು ಕುದುರೆಯ ಬೆನ್ನೇರಿ ಕಲ್ಪನಾ ಲೋಕಕ್ಕೆ ಹೊರಟ ಪಾಮರರಿಗೆ ಗೊತ್ತಿರುವುದಿಲ್ಲವಂತೆ. ಅದೇರೀತಿ ಅಪಾಮರರಿಗೂ ಗೊತ್ತಿರುಲ್ಲ. ಅಪಾಮರ ಅಂದರೆ ಪಾಮರನಿಗೆ ವಿರುದ್ಧ ಪದ. ಇದಕ್ಕೆ ಯಾಕೆ ಬಂದೆ ಅಂದರೆ ನಮ್ಮೆಲ್ಲರಲ್ಲೂ ಈ ಅಪಾಮರ ಪಾಮರ ಅಂಶಗಳು ಹೇರಳವಾಗಿ ತುಂಬಿರುತ್ತಂತೆ. ಕೆಲವರು ಸುಮಾರು ಸಲ ಹೇಳಿದ್ದನ್ನೇ ಹೇಳೋದು ಕೇಳೇ ಇರ್ತೀರಿ, ಮುರಿದಿರೋ ಗ್ರಾಮಫೋನ್ ರೆಕಾರ್ಡ್ ಹಾಗೆ ಅವರ ಮಾತು ಸುತ್ತಿಸುತ್ತಿಸುತ್ತಿ ಮೊದಲಿಗೆ ಬರುತ್ತೆ. ಗ್ರಾಮಫೋನ್ ರೆಕಾರ್ಡ್ ಅಂದರೆ ನಿಮಗೆ ಎಂಬತ್ತು ತೊಂಬತ್ತಕ್ಕೆ ಮುನ್ನ ಸೂರ್ಯ ಭಗವಾನನನ್ನು ನೋಡಿರುವವರಿಗೆ ಗೊತ್ತಿದೆ. ನಂತರ ಉದಯಿಸಿದವರಿಗೆ ಇದು ತಿಳಿದಿರಲಾರದು. ಅವರಿಗೋಸ್ಕರ ಚಿಕ್ಕದಾಗಿ ಗ್ರಾಮಫೋನ್ ವಿವರಿಸಿಬಿಡ್ತೇನೆ!

ಹಾಡು ಭಾಷಣ ಮೊದಲಾದ ಈಗ pendrive ಅಥವಾ ಕ್ಯಾಸೆಟ್‌ನಲ್ಲಿ ಬರುವ ಶಬ್ದಗಳನ್ನು ಆಗ ಒಂದು ಮಣ್ಣಿನ ತಟ್ಟೆ ಮೇಲೇ ಮೂಡಿಸುತ್ತಿದ್ದರು. ಸದರಿ ತಟ್ಟೆ ನಿಮಿಷಕ್ಕೆ ಇಷ್ಟು ಸುತ್ತು ತಿರುಗಬೇಕು ಎನ್ನುವ ಲೆಕ್ಕದoತೆ ಅದರ ಮೇಲೆ ಶಬ್ದದ ಕಂಪನ ಹುಟ್ಟಿಸುತ್ತಿದ್ದರು. ಈ ತಟ್ಟೆಯನ್ನು ಒಂದು ಸುತ್ತುವ ಯಂತ್ರದ ಮೇಲಿಟ್ಟು ಅದಕ್ಕೆ ಸೂಕ್ತ ಮೊಳೆಯನ್ನು ಇಡುತ್ತಿದ್ದರು. ತಟ್ಟೆ ಇಟ್ಟಿರುವ ಚಕ್ರ ಸುತ್ತಿದಾಗ ಧ್ವನಿ ತರಂಗಗಳು ಹುಟ್ಟಿ ಹಾಡು ಸಂಗೀತ ಭಾಷಣ ಮೊದಲಾದವುಗಳು ಕಿವಿಗೆ ಬೀಳುತ್ತಿತ್ತು! ಕೆಲವು ಸಲ ಈ ತಟ್ಟೆ ಹಳೆಯದಾಗಿ ಮುಳ್ಳು ಕೂಡುವ ಜಾಗ ಕ್ರ್ಯಾಕ್ ಬಂದಿದ್ದರೆ ಅದು ಅದೇ ಧ್ವನಿಯನ್ನು ಮತ್ತೇಮತ್ತೆ ಹೇಳುತ್ತಿತ್ತು. (ಇದು ನಾನು ಅರ್ಥ ಮಾಡಿಕೊಂಡಿರುವ ತಟ್ಟೆ ವಿಜ್ಞಾನ ಅಂದರೆ ಗ್ರಾಮಫೋನ್ ರೆಕಾರ್ಡ್ ಸೈನ್ಸ್. ಇದಕ್ಕಿಂತ ಉತ್ತಮವಾಗಿ ವಿವರಿಸಬಲ್ಲ ಸುಮಾರು ಸಾಹಿತಿ ಮಿತ್ರರು ನನಗೆ ಗೊತ್ತು, ಆದರೆ ಇಂತಹ ಸಣ್ಣ ಪುಟ್ಟ ವಿಷಯಗಳನ್ನು ಅವರ ಬಳಿ ಚರ್ಚಿಸಲು ನನಗೆ ನಾಚಿಕೆ ಇವರೇ. ರಾಕೇಟ್ ಸೈನ್ಸ್ ಬಗ್ಗೆ ಬೇಕಾದರೆ ಕೇಳಿಯೇನು, ಪರಪ್ಪನ ಅಗ್ರಹಾರ ಮತ್ತು ಸೆಲ್ ಫೋನ್ ಬಗ್ಗೆ ಕೇಳಿಯೇನು, ಮನುಷ್ಯ ಆರೋಗ್ಯವಾಗಿರಲು ಪುಲಾವ್ ಒಳ್ಳೆಯದೋ ಬಿಸಿಬೇಳೆ ಬಾತ್ ಒಳ್ಳೆಯದೋ ಎನ್ನುವ ಗಹನವಾದ ಪಾರಮಾರ್ಥಿಕ ಸಂಗತಿಗಳು ನನಗೆ ಅಪ್ಯಾಯಮಾನ. ಆದರೆ ಗ್ರಾಮಪೋನ್ ಬಗ್ಗೆ..? ಉಹೂಂ ಇಲ್ಲ ಅಂದರೆ ಇಲ್ಲ)

ಗ್ರಾಮಫೋನ್ ಬಗ್ಗೆ ನನಗೆ ತಿಳಿದಿರುವ ವಿಜ್ಞಾನ ನಿಮಗೆ ತಿಳಿಸಿದೆ. ಇನ್ನೂ ನಿಮಗೆ ಸ್ಪಷ್ಟವಾಗಿಲ್ಲ ಅಂದರೆ ಅದಕ್ಕೂ ನನ್ನ ಹತ್ತಿರ ಒಂದು ಖಡಕ್ ಉಪಾಯ ಇದೆ. ಸರಕಾರದ ದೂರದರ್ಶನ ಟಿವಿಯನ್ನು ರಾತ್ರಿ ಹತ್ತರ ನಂತರ ಹಾಕಿ, ಅದರಲ್ಲಿ ಬರುವ ಓಬೀರಾಯನ ಕಾಲದ ನಿಮ್ಮ ಮುತ್ತಾತನ/ಮುತ್ತಜ್ಜಿಯ ಕಾಲದ ಕಪ್ಪು ಬಿಳುಪು ಸಿನಿಮಾ ನೋಡಿ. ಕೆಲವು ಸಿನಿಮಾಗಳಲ್ಲಿ ಈ ಗ್ರಾಮಫೋನ್ ಕಾಣಿಸುತ್ತೆ. ಮೊನ್ನೆ ಹೀಗೇ ಯಾವುದೋ ಸಿನಿಮಾ ನೋಡುತ್ತಿದ್ದೆ, ದೂರದರ್ಶನದಲ್ಲಿ. ಆ ಕಾಲದ ಒಂದು ಹಾಡು ಗ್ರಾಮಫೋನ್‌ನಲ್ಲಿ ಹಾಕಿ ಅದನ್ನು ಚಿತ್ರೀಕರಿಸಿದ್ದರು. ಕೂಡಲೇ ನನಗೆ ನಮ್ಮ ಮೊಮ್ಮಕ್ಕಳ ನೆನಪು ಒದ್ದುಕೊಂಡು ಬಂತು ಇವರೇ. ಪಾಪ ಸುಭಿಕ್ಷದಲ್ಲಿ ಹುಟ್ಟಿರುವ ಈ ಮುಂಡೇವು ಈ ಗ್ರಾಮಫೋನ್ ನೋಡಿಲ್ಲವೇ ಇವು? ಅಂತ ಪೆಚ್ಚಾಗಿ ಕೂತೆ. ಜೀವನ ಪೂರ್ತಿ ಬೇಸರದಿಂದ ಅಮಾವಾಸ್ಯೆ ಕತ್ತಲು ಕವಿದ ಹಾಗೆ ಅನಿಸಿಬಿಡ್ತು. ಎಂಥ ಸುಖದಿಂದ ಇವರು ವಂಚಿತರು ಅಂತ ಇಡೀ ರಾತ್ರಿ ನಿದ್ದೆ ಇಲ್ಲದೇ ಹಾಸಿಗೆಯಲ್ಲೇ ಅತ್ತಿತ್ತ ಹೊರಳಿ ಹೊರಳಿ ಇಡೀ ರಾತ್ರಿ ಕಳೆದೆ ಇವರೇ…

ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸರಿಗೆ ಮುರಿದಿರುವ ಗ್ರಾಮಫೋನ್ ರೆಕಾರ್ಡ್ ಹೋಲಿಕೆ ಮಾಡುತ್ತಿದ್ದರು. ಅದರಲ್ಲೂ ನೀವು ವೊಡ್ ಹೌಸ್ ಓದುಗರಾಗಿದ್ದಾರೆ ನಿಮಗೆ ಇಂತಹ ಉಪಮೆಗಳು ಸಹಸ್ರಾರು ಗೊತ್ತಿರುತ್ತೆ.ವೊಡ್ ಹೌಸ್ ನ ಸುಮಾರು ಕಾದಂಬರಿಗಳಲ್ಲಿ ಈ ಮುರಿದ ರೆಕಾರ್ಡ್ ಪ್ರಸಂಗ ಬಂದೇ ಬರುತ್ತೆ. ಅದನ್ನು ಓದಿಯೇ ಸವಿಯಬೇಕು, ನಾನು ಹೇಳಿದರೆ ನಿಮಗೆ ಮನದಟ್ಟಾಗುವ ಸಾಧ್ಯತೆ ನೂರಕ್ಕೆ ಐದು ಅಷ್ಟೇ!

ಕಥಾನಕದ ಅಂಚಿಗೆ ಬರ್ತಾ ಇದೀನಿ ಅಂತ ಹೇಳಿ ನಿಮಗೆ ಖುಷಿ ಹುಟ್ಟಿಸಿದ್ದೆ ತಾನೇ… ಕೊನೆಯ ಒಂದೆರೆಡು ಎಪಿಸೋಡು ಮುಗಿಸಿ ಮುಂದಿನ ಮತ್ತಾವುದಾದರೂ ಕೊರವಣಿಗೆಗೆ ಮುಂದುವರೆಯೋಣ ಅಂತ ಮನಸಿನಲ್ಲೇ ಕಜ್ಜಾಯ ಸವಿಯುತ್ತಿದ್ದೆ.

ಕೊರವಣಿಗೆ ಪದ ಪ್ರಯೋಗ ನಿಮಗೆ ಮೊದಲು ವಿವರಿಸಿಬಿಡುತ್ತೇನೆ. ಇದರ ಜನಕ ಮಹಾರಾಜ ನಾನೇ..

ಬರವಣಿಗೆ ಪದಕ್ಕೆ ಇದು ವಕ್ರನೋಟ. ವಕ್ರನೋಟ ಅಂದರೆ ವಕ್ರ ಪದ. ವಕ್ರಪದ ಅಷ್ಟೇ ವಿರುದ್ಧ ಪದ ಅಲ್ಲ! ವಕ್ರ ಏಕೆ ಅಂದರೆ ಕೆಲವರು ಅಂದರೆ ನಮ್ಮ ಕವಿಗಳು, ಅಕಾಡೆಮಿ ಪ್ರಶಸ್ತಿ ವಿಜೇತರು, ಪ್ರಬಂಧಕಾರರು, ಕಾದಂಬರಿಕಾರರು ಮುಂತಾದ ಜನೋಪಯೋಗಿ ಸಾಹಿತಿಗಳು ಬರೆಯುವುದು ಬರವಣಿಗೆ. ಅದರಿಂದ ಸಮಾಜದ ಸ್ವಾಸ್ತ್ಯ, ಆರೋಗ್ಯ ಮತ್ತು ಅದರ ಸರ್ವತೋಮುಖ ಬೆಳವಣಿಗೆ ನಮ್ಮಿಂದ ನಡೀತವೆ ಅಂತ ಈ ಸ್ಪೆಷಲ್ ಮಂದಿ ಗಾಢವಾಗಿ ನಂಬಿರುತ್ತವೆ ಮತ್ತು ಇವರ ಈ ನಂಬಿಕೆಗೆ ಕೆಲವರು ಹಾಲು ತುಪ್ಪ ಬೀರು ಗೀರು ಹಾಕಿ ನಂಬಿಕೆಯನ್ನು ಆಳವಾಗಿ ಬೇರೂರಿಸಿ ಬಿಂಬಿಸಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ನನ್ನಂತಹ ಎಡಬಿಡಂಗಿ ಗುಂಪು ಒಂದಿದೆ. ಇದಕ್ಕೆ ಸಾಹಿತ್ಯದ ಯಾವ ರೂಲ್ ಆಫ್ ಲಾ ಸಹ ಇಲ್ಲ. ಅರಸನ ಅಂಕೆಯಾಗಲಿ ದೆವ್ವದ ಕಾಟವಾಗಲಿ ಇಲ್ಲದೇ ಕಾಡು ಮರದ ಹಾಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮೈಕೈ ತುಂಬಿಕೊಂಡ ಗುಂಪಿದು. ಆನೆ ನಡೆದ ಹಾದಿ, ಇವರದ್ದು! ನೀತಿನಿಯಮ ಇಲ್ಲದೇ ತಲೆಗೆ ಬಂದಿದ್ದು ಕಾಗದಕ್ಕೆ ಕಕ್ಕುತ್ತಾ ಹೋಗುತ್ತಾರೆ. ಈಗ ಕಾಗದದ ಬದಲು ಮೊಬೈಲ್ ಅಥವಾ ಕಂಪ್ಯೂಟರ್‌ಗೆ ತುಂಬುತ್ತವೆ. ಇದಕ್ಕೆ ಪರ್ಯಾಯ ಪದ ಇದೆಯಾ? ಇದೆ, ಅದೇ ಕೊರವಣಿಗೆ.

ಹೀಗೆ ಬರೆದು ಒಂದೆರೆಡು ಸೆಕೆಂಡ್ ಕಣ್ಣು ಮುಚ್ಚಿದೆನಾ… ಆಗೊಂದು ಜ್ಞಾನೋದಯ ಆಯಿತು. ಬುದ್ಧ ಮಹಾಮುನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಆಯಿತ್ತಂತೆ. ನಮ್ಮ ಸುತ್ತ ಮುತ್ತ ಸಾವಿರಾರು ಮೈಲಿ ಫಾಸಲೆಯಲ್ಲಿ ಬೋಧಿವೃಕ್ಷ ಇಲ್ಲ, ಅಥವಾ ಇದ್ದರೂ ಅದು ಬೋಧಿವೃಕ್ಷ ಅಂತ ನನಗೆ ತಿಳಿದಿಲ್ಲ. ಅದರಿಂದ ನಾನು ಅದರ ಕೆಳಗೆ ಕುಳಿತಿಲ್ಲ!

ಈಗ ನನಗೆ ಜ್ಞಾನೋದಯ ಆದ ಕಥೆಗೆ… ಈಚೆಗೆ ನೀವು ನನ್ನ ಪೀಳಿಗೆಯವರಾಗಿದ್ದರೆ, ಒಂದು ವಿಷಯ ಖಂಡಿತ ಗಮನಿಸಿರುತ್ತೀರಿ.

ಅದೇನು ಅಂದರೆ AI ಎನ್ನುವ ಹೊಸಾ ಪೆಡಂಭೂತ. ಇದಕ್ಕೆ ನಮ್ಮ ಭುವನೇಶ್ವರಿ ನಾಲಿಗೆಯಲ್ಲಿ ಕೃತಕ ಬುದ್ಧಿಮತ್ತೆ ಅಂತ ಹೆಸರಿಟ್ಟರಾ? ಮೊದಮೊದಲು ಇದು ಮಿಕ್ಕ ನೂರರ ತರಹ ಇದೂ ಸಹ ಒಂದು ಆಪ್ ಅಂದರೆ ಅಪ್ಲಿಕೇಶನ್ ಅಂತ ಅಂದುಕೊಂಡಿದ್ದೋ. ಈಗ ನೋಡಿದರೆ ಅಮೇರಿಕಾದ ಅಧ್ಯಕ್ಷನಿಂದ ಹಿಡಿದು ಕರ್ನಾಟಕದ ಮುನಿನ್ಸಿಪಾಲಿಟಿ ಮೆಂಬರೂ ಇದರ ಬಗ್ಗೆ ಮಾತಾಡಿದ್ದೇ ಆಡಿದ್ದು. ಅವರೆಲ್ಲರೂ AI ಬಗ್ಗೆ ಮಾತಾಡ ಬೇಕಾದರೆ ನಾವು, ಕಲಿತಿರೋ ಓಲ್ಡ್ ಪೀಪಲ್ಲು ಸುಮ್ಮನೆ ಕೂತಿರೋಕ್ಕೆ ಆಗ್ತದಾ? ರೇಸ್‌ನಲ್ಲಿ ಇರಬೇಕು ಅಂದರೆ ನೀನೂ ಶೂ ಕಟ್ಟಿಕೊಂಡು, ಪ್ಯಾಂಟ್ ಹಾಕಿಕೊಂಡು ಟೀ ಶರ್ಟು ನೇತು ಹಾಕಿಕೊಂಡು ಓಡಬೇಕು ಅಂತ ತಾನೇ ನಿಮಗೆ ಪಾಠ ಆಗಿರೋದು?

ಇದರಿಂದ ಅಂದರೆ ಇಂತಹ ಒತ್ತಡದಿಂದ ಆಚೆ ಇರುವುದಕ್ಕೆ ಯಾವ ಹುಲುಮಾನವನಿಂದ ಸಾಧ್ಯ? ಸರಿ ನಾನೂ ಈ AI ಹಳ್ಳಕ್ಕೆ ಬಿದ್ದೆನಾ? ಅಲ್ಲಿಂದ ನನ್ನ ಹೊಸಾ ಟೈಮ್ ಪಾಸ್ ಹವ್ಯಾಸ ಹೆಚ್ಚಾಯಿತು. ಅದನ್ನ ನಿಮಗೆ ಸೊಲ್ಪ ಚಿಕ್ಕದಾಗಿ ಹೇಳಿ ಮುಂದಕ್ಕೆ ಹೋಗ್ತೀನಿ. ಎರಡು ವರ್ಷ ಹಿಂದೆ ಅಥವಾ ಅದಕ್ಕೂ ಈಚೆಗೆ. ಈ AI ನ ಕೆಲವು ಹೆಸರು ನನಗೆ ನನ್ನ ತರಹವೇ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದು ಕೂತಿರುವ ವೃದ್ಧರಿಂದ ಪರಿಚಯವಾಯಿತು.

ಮೊದಲು ಒಂದು AI ಮೊಬೈಲ್ ಒಳಗೆ ತೂರಿಸಿದೆ. ಅದು ಇನ್ನೂ ನಾನು ನಿಮ್ಮ ಭಾಷೆ ಕಲಿತಿಲ್ಲ, ಕಲಿತಮೇಲೆ ನಿಮಗೆ ಹೇಳ್ತಿನಿ ಅಂತ ನಾನು ಕೇಳಿದ ಪ್ರಶ್ನೆಗೆ ಇಂಗ್ಲಿಷ್‌ನಲ್ಲಿ ಹೇಳಿತು! ಎರಡನೆಯದಕ್ಕೆ ಹೋದನಾ? ಅದಕ್ಕೆ ಕನ್ನಡ ಬರುತ್ತೆ, ಆದರೆ ಇನ್ನೂ ಪೂರ್ತಿ ಇಲ್ಲ. ಮೊಬೈಲ್‌ನಲ್ಲೇ ಒಂದು ಹೊಸಾ ಚಿಹ್ನೆ ಬಂತಾ? ಇದೂ ಸಹ ಒಂದು AI ಅಂತ ಗೊತ್ತಾಯ್ತಾ?

ಅದರ ಕೈಲಿ ಏನೇನೋ ಕೆಲಸ ಮಾಡಿಸ್ಕೊಬೋದು ಅಂತ ತಿಳೀತಾ? ನಾವು ಸಾಹಿತಿಗಳು(ಒಂದು ವಿಷಯ ಇಲ್ಲಿ ಕ್ಲಿಯರ್ ಮಾಡಿಬಿಡಲಾ? ನಾನು ಯಾವತ್ತೂ ಸಾಹಿತಿ ಅಂತ ಹೇಳಿಕೊಂಡಿಲ್ಲ, ಇದು ಸರ್ವೇ ಸಾಮಾನ್ಯವಾಗಿ ಆಡಿದ್ದು ಅಂತ ಮಡಿಕ್ಕೊಳ್ಳಿ) ಅಂದರೆ ಬುದ್ಧಿಜೀವಿಗಳು ನಮ್ಮ ಮೈಂಡ್ ಹೇಗೆ ಓಡಿಸುತ್ತೇವೆ ಅಂತ ಹೇಳಲು ಈ ಸಂಗತಿ ವಿವರಿಸುತ್ತಾ ಇದೀನಿ.

ನಾನು ಹಿಂದೆ ಬರೆದ ಲೇಖನ ಇದಕ್ಕೆ ತುರುಕಿ ಹೇಗಿದೆ ಸರ ಅಂತ ಪ್ರಶ್ನೆ ಎಸೆದೆ! ಅದನ್ನ ಈ AI ಸಖತ್ತಾಗಿ ಹೊಗಳಿ ಹೊಗಳಿ ನನ್ನನ್ನು ಮೋಡದ ಮೇಲೇ ಕೂಡಿಸಿತಾ? ಮರದ ತುತ್ತ ತುದಿಯಲ್ಲಿ ಲಗಾಟ ಹಾಕುತ್ತಿದ್ದ ಮಾರುತಿಗೆ ಮದ್ಯ ಸೇವನೆ ಮಾಡಿಸಿದ ಹಾಗೇ ಆಗಿದ್ದು. ನಾನು ಹಿಂದೆ ಗೀಚಿದ್ದ ಒಂದೊಂದೇ ಆರ್ಟಿಕಲ್ ತೆಗೆಯೋದು, ಇದರ ಹೊಟ್ಟೆಗೆ ಹಾಕೋದು, ಹೆಂಗೈತೆ ಸರ ಅಂತ ಕೇಳೋದು… ಹೀಗೆ ನನ್ನ ಅದರ ಬಾಂಧವ್ಯ ಬೆಳೀತು ಬೆಳೀತು ಬೆಳೀತು ಮತ್ತು ಒಂದು ವಾಕ್ಯ ಅದಕ್ಕೆ ಇಟ್ಟರೆ ಹಳೇ ಪುರಾಣ ನೆನೆಸಿಕೊಂಡು ನೆನೆಸಿಕೊಂಡು ಅದ್ಯಾರೋ ಅಜ್ಜಮ್ಮ ತುರುಬು ನೆನಸಿಕೊಂಡ ಹಾಗೇ ಪುರಾಣ ಬಿಡುತ್ತೆ. ನನ್ನ ಔಷಧಿ, ಮಾತ್ರೆ, ಇನ್ಸೂಲಿನ್.. ಮೊದಲಾದ ಎಲ್ಲವನ್ನೂ ಅದರ ಒಡಲಲ್ಲಿ ತುಂಬಿಕೊಂಡು ಹೇಳುತ್ತೆ. ಸರ ನಿಮಗೆ ಶುಗರ್ ಇದೇರಿ, ಈ ಮಾತ್ರೆ ಬೇಡ್ರಿ ಅಂತ ಸಲಹೆ ಕೇಳಿದರೆ ಉಪದೇಶ ಸಹ ಮಾಡುತ್ತೆ.

ಅದಕ್ಕೆ ನಾನು ಕೊಡೊ ಕೆಲಸಾನೂ ವಿಚಿತ್ರದ್ದು. ನಾನು ಸಾಮಾರ್ ಸೆಟ್ ಪಲ್ಟಿ ಹೊಡೆಯೋದು ಮಾಡಿಕೊಡು ಅಂದೆನಾ? ನಿಂತ ಹಾಗೆ ನಾನು ನಿಲ್ಲು ಪಲ್ಟಿ ಹೊಡೆದು ತೋರಿಸಿತಾ? ನನ್ನನ್ನ ಒಬ್ಬ ರೈಟರ್ ಆಗಿ ಕಾರ್ಟುನ್ ಮಾಡು ಅಂದೆ ತಾನೇ? ನಾನು ಒಂದು ಕಾರ್ಟುನ್ ಚಿತ್ರ ಆದೇನಾ? ನನ್ನ ಫೋಟೋ ಹಾಕಿ ತಲೆ ನುಣ್ಣಗೆ ತೋರಿಸು ಅಂದರೆ ತೋರಿಸುತ್ತಾ? ನಾನು ಮುಖ್ಯಮಂತ್ರಿ ಹೆಗಲ ಮೇಲೇ ಕೈ ಹಾಕ್ಕೊಂಡಿರೋ ಫೋಟೋ ಕೊಡು ಅಂದರೆ ಕೊಡ್ತಾ? ಇಬ್ಬರಿಗೂ ತಲೆ ಗುಂಡು ಹೊಡೆದು ಅಕ್ಕಪಕ್ಕ ನಿಲ್ಲಿಸು ಅಂದೆನಾ? ಅದನ್ನೂ ಅದು ಮಾಡಿತಾ?

ಇಲ್ಲೇ ನನಗೆ ಪುಕ್ಕಲು ಶುರುವಾಗಿದ್ದು. ಮಸಲಾ ಈ ಮುಖ್ಯಮಂತ್ರಿ ಜತೆ ತಲೆ ನುಣ್ಣಗೆ ಮಾಡಿಸಿಕೊಂಡಿರುವ ಫೋಟೋ ಯಾವುದಾದರೂ ಪತ್ರಿಕೆ ಅವರಿಗೆ ಸಿಕ್ಕಿದರೆ ಏನು ಗತಿ? ನಾನು ಹಿಂದೆ ರೌಡಿ ಆಗಿದ್ದವ ಅಂತ ಟಿವಿ ಲಿ ಪೇಪರ್‌ನಲ್ಲಿ ಬಂದರೆ ಮಾನವಾಗಿ ಮರ್ಯಾದೆಯಿಂದ ಈ ಎಪ್ಪತ್ತೈದು ವರ್ಷ ಸಮಾಜದಲ್ಲಿ ಒಂದು ಘನತೆ ಗೌರವದಿಂದ ಬದುಕಿದ ನನ್ನ ಬಾಳು ನಾಯಿ ಪಾಡು ಆದರೆ, ಸಮಾಜ ಛಿ ತೂ ಅಂದರೆ…. ಅನ್ನುವ ಭಯ ಹುಟ್ಟಿದ್ದು.

ಜತೆಗೆ ಏನಾಯಿತು ಅಂದರೆ ನಮ್ಮ ಬಾಸು ಅಂದರೆ ನನ್ನ ಲೈಫ್ ಓನರ್ ಈ ಫೋಟೋ ನನ್ನ ಮೊಬೈಲ್‌ನಲ್ಲಿ ನೋಡಿಬಿಟ್ಟಳು. ಅವಳಿಗೆ AI ಅಪ್ ಡೇಟ್ ಆಗಿಲ್ಲ ಇನ್ನೂ. ನಮ್ಮ ಮದುವೆ ಪೂರ್ವದ ಪೂರ್ಣ ಕತೆ ಅವಳಿಗೆ ಗೊತ್ತಿದೆ ಅಂತ ನಂಬಿದ್ದವಳು ಅವಳು. ಈಗ ಈ ಫೋಟೋ ನೋಡಿ ಕೋರ್ಟ್ ಮಾರ್ಷಲ್ ಶುರು ಮಾಡಿದಳಾ? ಇದು AI ಚಿತ್ರ, ಖಂಡಿತಾ ನಾನು ಆ ಕಾಲದಲ್ಲಿ ರೌಡಿ ಆಗಿರಲಿಲ್ಲ ಅಂತ ಪ್ರೂವ್ ಮಾಡೋ ಅಷ್ಟ್ರಲ್ಲಿ ನಾನು ಅರ್ಧ ಹೆಣವಾಗಿದ್ದೆ. ಕೊನೆಗೆ ಇನ್ನೇನು ನಾನು ಆ ಕಾಲದಲ್ಲಿ ರೌಡಿ ಆಗಿದ್ದೆ ಅಂತ ಒಪ್ಪುವ, ಜೀವನ ಸುಗಮ ಮಾಡಿಕೊಳ್ಳುವ ಮಾಮೂಲಿ ಗಂಡಸರ ಐಡಿಯಾ ನಾಲ್ಕು ದಿವಸದ ಕದನದ ನಂತರ ತಲೆಯಲ್ಲಿ ಬಂತಾ? ಬುದ್ಧಿಜೀವಿಗಳ ತಲೆಗಳು ನೋಡಿ ಕ್ರೈಸಿಸ್(crisis) ಸಮಯದಲ್ಲಿ ತುಂಬಾ ಶಾಣ್ಯಾ ಆಗಿಬಿಡ್ತವೆ, ನಿಮಗೇ ಗೊತ್ತಿಲ್ಲದ ಹಾಗೆ. ಐಡಿಯಾ ಬಂತಾ? ಐಡಿಯಾ ನ AI ಗೆ ತುಂಬಿದೆ. ನನ್ನಾಕೆ ಜರತಾರಿ ಸೀರೆ ಉಟ್ಟಿರೋ ಫೋಟೋ ಅದರ ಹೊಟ್ಟೆಗೆ ಹಾಕಿದೆ. ಈ ಫೋಟೋ ದಲ್ಲಿರುವವರು ಸಾಮಾರ್ ಸೆಟ್ ಪಲ್ಟಿ ಹೊಡೆಯೋ ಫೋಟೋ ಕೊಡಿ ಸರ ಅಂದೆ. ಅದು ಫೋಟೋ ಕೊಡ್ತಾ? ಜರತಾರಿ ಸೀರೆ ಉಟ್ಟ ಹೆಣ್ಣು ನಿಂತಲ್ಲೇ ನಿಂತಹಾಗೆ ಪಲ್ಟಿ ಹೊಡೆಯಿತು!

ಬಾಸು ಹತ್ತಿರ ಮೊಬೈಲ್ ಹಿಡಿದು ಓಡಿದೆ. ನನ್ನನ್ನು ನೋಡಿ ಅದು ಅಂದರೆ ಬಾಸು ಓಪನ್ ಮ್ಯಾನ್ ಹೋಲ್ ಪಕ್ಕ ನಿಂತವರ ಹಾಗೆ ಮುಖ ಮಾಡಿತು. ನನಗೆ ಅದು ಗೊತ್ತಾಯಿತಾ? ಗಂಡಸು ಇಂತಹ ಎಂತೆಂತಹ ಅವಮಾನಗಳನ್ನು ಜೀವನದಲ್ಲಿ ಸಹಿಸಿರುತ್ತಾನೆ? ಅವಮಾನ ನುಂಗಿದೆ.

“ಇದು ನೋಡಿ..” ಅಂತ ಮೊಬೈಲ್ ಎದುರು ಹಿಡಿದೆ. ನಾನು ನಮ್ಮ ಬಾಸು ಜಗಳ ಆಡಿದರೆ ಹೀಗೆ ಬಹುವಚನಕ್ಕೆ ಬದಲಾಗುತ್ತೇವೆ. ಇಲ್ಲ ಅಂದರೆ ಬಾಸು ನನಗೆ ಹೋಗೋ ಬಾರೋ ಎನ್ನುತ್ತೆ. ನಾನು ಅದಕ್ಕೆ ಹೋಗು ಬಾ ಅನ್ನುಲ್ಲ, ಹೋಗಿರಿ ಬನ್ನಿರಿ ಎನ್ನುತ್ತೇನೆ, ಗಂಡು ಕುಲದ ಮರ್ಯಾದೆ ಕಾಪಾಡುತ್ತೇನೆ!

ಅದು ಮೊಬೈಲ್ ನೋಡ್ತಾ? ಕುಸಿದು ಬೀಳೋದು ಒಂದು ಬಾಕಿ. ರಾತ್ರಿ ಹನ್ನೊಂದರಿಂದ ಒಂದರವರೆಗೆ ಪಕ್ಕದಲ್ಲಿ ಕೂಡಿಸಿಕೊಂಡು AI ಬಗ್ಗೆ ಒಂದು ಗಂಟೆ ಪಾಠ ಮಾಡಿದೆ ಮತ್ತು ತಲೆ ಗುಂಡಾಗಿರುವ ಕತೆ ಹೇಳಿದೆ. ಕೊನೆಗೂ ಬಾಸು ಕಂನ್ವಿನ್ಸ್ ಆಯಿತು!

ಇದು ಯಾಕೆ ಹೇಳಿದೆ ಅಂದರೆ ನನ್ನ ಹೊಸಾ ಚಟದ ಬಗ್ಗೆ ಹೇಳುವುದಕ್ಕೆ ಪೀಠಿಕೆ ಹಾಕಿದ್ದೆ.

AI ನಿಂದ ಕತೆ ಬರೆಸಬಹುದು ಅಂತ ಗೊತ್ತಾಯ್ತಾ? ಅದಕ್ಕೆ ಒಂದು ಟಾಸ್ಕ್ ಕೊಟ್ಟೆ. ಟಾಸ್ಕ್ ಇದು..

ರಿಂಗ್ ರೋಡ್ ಮೊದಲಿನ ಬೆಂಗಳೂರು, ಏನು ಕಳೆಯಿತು..

ಕಳೆದು ಕೊಂಡದ್ದು.. Sslc ರಿಸಲ್ಟ್, puc admn, bsc course, tutorials, ಜತೆಗೆ ಕನ್ನಡ ಇಂಗ್ಲಿಷ್ ಮೇಷ್ಟ್ರ ಪಾಠ, socials, chem, phys lab, geography, astronomy GTN ಕತೆ…. Law ಪಾಠ

ಇದರ ಬಗ್ಗೆ ಹೇಳಿ ಸರ ಅಂತ

AI ಉತ್ತರ ಹೀಗಿತ್ತು

ಸರ, ನಿಮ್ಮ ಕೊನೆಯ ಪ್ಯಾರಾದಲ್ಲಿರುವ ನೆನಪುಗಳನ್ನು ಹಿಡಿದು, ಗ್ರಾಮಫೋನ್‌ನಿಂದ ಹಳೆಯ ಬೆಂಗಳೂರಿಗೆ ಸಾಗುವಂತೆ ಲೇಖನವನ್ನು ವಿಸ್ತರಿಸಿದ್ದೇನೆ. ನಿಮ್ಮ ಹಾಸ್ಯಮಿಶ್ರಿತ ನೆನಪಿನ ಓಟ ಉಳಿಯುವಂತೆ ನೋಡಿಕೊಂಡಿದ್ದೇನೆ.

ರಿಂಗ್ ರೋಡ್ ಮೊದಲಿನ ಬೆಂಗಳೂರು, ಏನು ಕಳೆಯಿತು…

ಕಳೆದುಕೊಂಡದ್ದು… ಎಸ್‌ಎಸ್‌ಎಲ್‌ಸಿ ರಿಸಲ್ಟ್, ಪಿಯುಸಿ ಅಡ್ಮಿಷನ್, ಬಿಎಸ್‌ಸಿ ಕೋರ್ಸ್, ಟ್ಯುಟೋರಿಯಲ್ಸ್, ಜತೆಗೆ ಕನ್ನಡ ಇಂಗ್ಲಿಷ್ ಮೇಷ್ಟ್ರ ಪಾಠ, ಸೋಷಿಯಲ್ಸ್, ಕೆಮ್, ಫಿಸಿಕ್ಸ್ ಲ್ಯಾಬ್, ಜಿಯೋಗ್ರಫಿ, ಆಸ್ಟ್ರಾನಮಿ, ಜಿಟಿಎನ್ ಕತೆ…. ಲಾ ಪಾಠ.

ಹೀಗೆ ಒಂದೊಂದಾಗಿ ನೆನಪಿಗೆ ಬಂದಾಗ, ನನ್ನ ಕಣ್ಣ ಮುಂದೆ ಹಳೆಯ ಬೆಂಗಳೂರು ನಿಂತುಕೊಂಡುಬಿಡುತ್ತದೆ. ಈಗಿನ ಬೆಂಗಳೂರಿನವರಿಗೆ ರಿಂಗ್ ರೋಡ್ ಅಂದರೆ ಏನು ಎಂದು ವಿವರಿಸುವ ಅಗತ್ಯವಿಲ್ಲ. ಆದರೆ ನಮ್ಮ ಕಾಲದ ಬೆಂಗಳೂರಿನಲ್ಲಿ ರಿಂಗ್ ರೋಡ್ ಇರಲಿಲ್ಲ. ರಸ್ತೆಗಳಿಗೆ ತಮ್ಮದೇ ಆದ ಗತ್ತು ಇತ್ತು. ವಾಹನಗಳಿಗಿಂತ ಜನರೇ ಹೆಚ್ಚು. ಜನರಿಗಿಂತ ಸೈಕಲ್‌ಗಳೇ ಹೆಚ್ಚು. ಸೈಕಲ್‌ಗಳಿಗಿಂತಲೂ ನಡೆದುಕೊಂಡು ಹೋಗುವವರೇ ಹೆಚ್ಚು. ಇಷ್ಟೆಲ್ಲ ಇದ್ದರೂ ಯಾರಿಗೂ ಆತುರವಿರಲಿಲ್ಲ.

ಈಗ ರಸ್ತೆಯಲ್ಲಿ ವಾಹನಗಳು ಓಡುತ್ತವೆ. ಆಗ ರಸ್ತೆಯಲ್ಲಿ ಜನರು ಓಡುತ್ತಿದ್ದರು. ಓಡುತ್ತಿದ್ದರೆ ಏನೋ ಕೆಲಸ ಇರುತ್ತಿತ್ತು. ಇಲ್ಲದಿದ್ದರೆ ನಿಧಾನವಾಗಿ ನಡೆಯುತ್ತಿದ್ದರು. ಇವತ್ತಿನಂತೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು, ಕಿವಿಗೆ ಇಯರ್‌ಫೋನ್ ಹಾಕಿಕೊಂಡು, ಎದುರಿಗೆ ಬರುವವನನ್ನು ನೋಡದೆ ನಡೆಯುವವರಿರಲಿಲ್ಲ. ಆಗ ಎದುರಿಗೆ ಬರುವವನು ಪರಿಚಯದವನೋ ಅಲ್ಲವೋ ಎಂದು ನೋಡುವುದು ಒಂದು ಅಭ್ಯಾಸ. ಪರಿಚಯದವನಾಗಿದ್ದರೆ ನಿಂತು ಮಾತನಾಡುವುದು ಮತ್ತೊಂದು ಅಭ್ಯಾಸ. ಮಾತನಾಡುವುದಕ್ಕೆ ವಿಷಯವಿಲ್ಲದಿದ್ದರೂ ಮಾತನಾಡುವುದು ನಮ್ಮ ಬೆಂಗಳೂರಿನವರ ಸ್ವಭಾವ.

ನಮ್ಮ ಕಾಲದಲ್ಲಿ ಬೆಂಗಳೂರು ಇಷ್ಟೊಂದು ದೊಡ್ಡದಾಗಿರಲಿಲ್ಲ. ಒಂದು ಕಡೆ ಮಲ್ಲೇಶ್ವರ, ಮತ್ತೊಂದು ಕಡೆ ಸುತ್ತಮುತ್ತಲಿನ ಬಡಾವಣೆಗಳು. ಬೆಂಗಳೂರಿನ ಗಡಿ ಎಲ್ಲಿದೆ ಎಂದು ಕೇಳಿದರೆ, ಅದಕ್ಕೆ ಉತ್ತರ ಕೊಡುವುದಕ್ಕಿಂತ ಮೊದಲು ಬೆಂಗಳೂರಿನ ಗಡಿ ಎಷ್ಟು ಸಲ ಬದಲಾಗಿದೆ ಎಂದು ಹೇಳಬೇಕಾಗುತ್ತಿತ್ತು. ಆಗ ಒಂದು ಕಡೆ ಹೋಗಬೇಕೆಂದರೆ ಅಲ್ಲಿಗೆ ಹೋಗಿ ಬರುವುದೇ ಒಂದು ಕಾರ್ಯಕ್ರಮ. ಈಗ ಒಂದು ಕಡೆ ಹೋಗಬೇಕೆಂದರೆ ಗೂಗಲ್ ಮ್ಯಾಪ್‌ನಲ್ಲಿ ದಾರಿ ನೋಡಿಕೊಂಡು ಹೊರಡುತ್ತಾರೆ. ನಮ್ಮ ಕಾಲದಲ್ಲಿ ದಾರಿ ಗೊತ್ತಿಲ್ಲದಿದ್ದರೆ ಯಾರನ್ನಾದರೂ ಕೇಳುವುದು. ಕೇಳಿದವನಿಗೆ ಗೊತ್ತಿಲ್ಲದಿದ್ದರೆ ಇನ್ನೊಬ್ಬನನ್ನು ಕೇಳುವುದು. ಹೀಗೆ ಹೋಗಿ ಹೋಗಿ ತಲುಪಿದ ಮೇಲೆ, ಹಿಂದಿರುಗುವ ದಾರಿ ಗೊತ್ತಿಲ್ಲದೆ ಮತ್ತೆ ಯಾರನ್ನಾದರೂ ಕೇಳುವುದು.

ಆಗ ರಿಂಗ್ ರೋಡ್ ಇರಲಿಲ್ಲ. ಆದರೆ ರಸ್ತೆಗಳಲ್ಲಿ ರಿಂಗ್ ರೋಡ್‌ನಷ್ಟು ವಾಹನಗಳಿರಲಿಲ್ಲ. ಇವತ್ತು ಬೆಂಗಳೂರಿನಲ್ಲಿ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಹೋಗಬೇಕೆಂದರೆ ಮೊದಲು ಯಾವ ರಸ್ತೆಯಲ್ಲಿ ಟ್ರಾಫಿಕ್ ಕಡಿಮೆ ಇದೆ ಎಂದು ನೋಡಬೇಕು. ನಮ್ಮ ಕಾಲದಲ್ಲಿ ಯಾವ ರಸ್ತೆಯಲ್ಲಾದರೂ ಹೋಗಬಹುದಿತ್ತು. ಟ್ರಾಫಿಕ್ ಕಡಿಮೆ ಇತ್ತು ಎಂಬ ಕಾರಣಕ್ಕಲ್ಲ. ಟ್ರಾಫಿಕ್ ಎಂಬ ಪದವೇ ಅಷ್ಟೊಂದು ಪರಿಚಿತವಾಗಿರಲಿಲ್ಲ.

ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಂದ ದಿನಗಳ ನೆನಪು ಇನ್ನೂ ಇದೆ. ಈಗಿನಂತೆ ಮೊಬೈಲ್‌ನಲ್ಲಿ ರಿಸಲ್ಟ್ ಬರುವ ಕಾಲವಲ್ಲ. ಶಾಲೆಯ ಮುಂದೆ ಫಲಿತಾಂಶ ಹಾಕಿದರೆ ಅದನ್ನು ನೋಡಲು ವಿದ್ಯಾರ್ಥಿಗಳು, ಪೋಷಕರು, ನೆರೆಹೊರೆಯವರು ಎಲ್ಲರೂ ಸೇರುತ್ತಿದ್ದರು. ತಮ್ಮ ಹೆಸರು ಹುಡುಕುವುದಕ್ಕಿಂತ ಮೊದಲು ಗೆಳೆಯನ ಹೆಸರು ಹುಡುಕುವುದು. ಅವನು ಪಾಸಾಗಿದ್ದಾನೋ, ಫೇಲಾಗಿದ್ದಾನೋ ಎಂದು ನೋಡಿದ ಮೇಲೆ ತಮ್ಮ ಹೆಸರನ್ನು ನೋಡುವುದು. ಯಾರಾದರೂ ಒಬ್ಬರು ಪಾಸಾಗಿದ್ದರೆ ಎಲ್ಲರೂ ಸಂತೋಷಪಡುತ್ತಿದ್ದರು. ಫೇಲಾಗಿದ್ದರೆ ಸಮಾಧಾನ ಹೇಳುತ್ತಿದ್ದರು. ಈಗಿನಂತೆ ರಿಸಲ್ಟ್ ಬಂದ ಕೂಡಲೇ ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದು ಎಲ್ಲರಿಗೂ ಕಳುಹಿಸುವ ವ್ಯವಸ್ಥೆ ಇರಲಿಲ್ಲ.

ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ಪಿಯುಸಿ ಅಡ್ಮಿಷನ್. ಅಡ್ಮಿಷನ್ ಎಂಬ ಪದವೇ ಒಂದು ದೊಡ್ಡ ಕೆಲಸದಂತೆ ಅನಿಸುತ್ತಿತ್ತು. ಯಾವ ಕಾಲೇಜಿಗೆ ಹೋಗಬೇಕು, ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಕ್ಕಿಂತ ಮೊದಲು ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ, ನೆರೆಮನೆಯವರು, ಎಲ್ಲರೂ ಸೇರಿ ಅಭಿಪ್ರಾಯ ಹೇಳುತ್ತಿದ್ದರು. ಈಗಿನಂತೆ ವಿದ್ಯಾರ್ಥಿಯೇ ತನ್ನ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದ್ದಿತೋ ಇಲ್ಲವೋ ಗೊತ್ತಿಲ್ಲ. ಆದರೆ ಸಲಹೆ ಕೊಡುವವರು ಮಾತ್ರ ಬಹಳ ಮಂದಿ ಇದ್ದರು.

ಪಿಯುಸಿ ಮುಗಿದ ಮೇಲೆ ಬಿಎಸ್‌ಸಿ ಕೋರ್ಸ್. ಬಿಎಸ್‌ಸಿ ಎಂದರೆ ದೊಡ್ಡ ವಿಷಯ. ಸೈನ್ಸ್ ಓದಿದವನು ಎಂದರೆ ಮನೆಯಲ್ಲಿ ಒಂದು ರೀತಿಯ ಗೌರವ. ಸೈನ್ಸ್ ಓದದವನು ಎಂದರೆ ಅವನಿಗೆ ಬೇರೆ ರೀತಿಯ ಗೌರವ. ಓದುತ್ತಿದ್ದ ಕೋರ್ಸ್‌ಗಿಂತ ಓದುತ್ತಿದ್ದ ಕಾಲೇಜಿನ ಹೆಸರು ಮುಖ್ಯವಾಗಿದ್ದ ಕಾಲವೂ ಇತ್ತು. ಕಾಲೇಜಿಗೆ ಹೋಗುವುದು ಎಂದರೆ ಓದುವುದಷ್ಟೇ ಅಲ್ಲ. ಗೆಳೆಯರನ್ನು ಭೇಟಿ ಮಾಡುವುದು, ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುವುದು, ತರಗತಿ ಮುಗಿದ ಮೇಲೆ ಮನೆಗೆ ಹೋಗುವ ದಾರಿಯಲ್ಲಿ ಮಾತನಾಡುವುದು, ಇವೆಲ್ಲವೂ ಕಾಲೇಜು ಜೀವನದ ಭಾಗ.

ನಮ್ಮ ಕಾಲದ ಟ್ಯುಟೋರಿಯಲ್ಸ್‌ಗೂ ಒಂದು ವಿಶೇಷತೆ ಇತ್ತು. ಈಗಿನಂತೆ ಆನ್‌ಲೈನ್ ಕ್ಲಾಸ್, ವೀಡಿಯೊ ಲೆಕ್ಚರ್, ರೆಕಾರ್ಡ್ ಮಾಡಿದ ಪಾಠ ಯಾವುದೂ ಇರಲಿಲ್ಲ. ಟ್ಯುಟೋರಿಯಲ್ಸ್‌ಗೆ ಹೋಗಬೇಕು ಎಂದರೆ ನಿಗದಿತ ಸಮಯಕ್ಕೆ ಹೋಗಬೇಕು. ಮೇಷ್ಟ್ರು ಬರುವವರೆಗೆ ಕಾಯಬೇಕು. ಮೇಷ್ಟ್ರು ಬಂದ ಮೇಲೆ ಪಾಠ ಕೇಳಬೇಕು. ಅರ್ಥವಾಗದಿದ್ದರೆ ಕೇಳಬೇಕು. ಕೇಳಲು ಧೈರ್ಯವಿಲ್ಲದಿದ್ದರೆ ಗೆಳೆಯನನ್ನು ಕೇಳಬೇಕು. ಅವನಿಗೂ ಅರ್ಥವಾಗದಿದ್ದರೆ ಇಬ್ಬರೂ ಸೇರಿ ಇನ್ನೊಬ್ಬನನ್ನು ಕೇಳಬೇಕು.

ಕನ್ನಡ ಮೇಷ್ಟ್ರು ಪಾಠ ಹೇಳುವ ರೀತಿ ಬೇರೆ. ಇಂಗ್ಲಿಷ್ ಮೇಷ್ಟ್ರು ಪಾಠ ಹೇಳುವ ರೀತಿ ಬೇರೆ. ಕೆಲವರು ಪಾಠ ಹೇಳುವಾಗಲೇ ಕತೆ ಹೇಳುತ್ತಿದ್ದರು. ಕೆಲವರು ಕತೆ ಹೇಳುವಾಗ ಪಾಠ ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೆ ಯಾವುದು ಪಾಠ, ಯಾವುದು ಕತೆ ಎಂಬುದು ಗೊತ್ತಾಗದಿದ್ದರೂ ತರಗತಿ ಮುಗಿಯುವವರೆಗೆ ಕುಳಿತುಕೊಳ್ಳುತ್ತಿದ್ದರು. ಇವತ್ತು ಯಾರಾದರೂ ಪಾಠವನ್ನು ಅರ್ಥ ಮಾಡಿಕೊಳ್ಳದಿದ್ದರೆ ವೀಡಿಯೊವನ್ನು ಮತ್ತೆ ನೋಡಬಹುದು. ಆಗ ಮೇಷ್ಟ್ರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದಿದ್ದರೆ, ಮುಂದಿನ ದಿನ ಮತ್ತೆ ಕೇಳಬೇಕು. ಮೇಷ್ಟ್ರು ಕೇಳಿದರೆ “ಅರ್ಥ ಆಯಿತು ಸಾರ್” ಎಂದು ಹೇಳಬೇಕು. ಅರ್ಥವಾಗದಿದ್ದರೂ ಅರ್ಥ ಆಯಿತು ಎಂದು ಹೇಳುವುದು ನಮ್ಮ ಕಾಲದ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾದ ವಿದ್ಯೆ.

ಸೋಷಿಯಲ್ಸ್ ಪಾಠದಲ್ಲಿ ಇತಿಹಾಸ, ಭೂಗೋಳ, ನಾಗರಿಕಶಾಸ್ತ್ರ ಎಲ್ಲವೂ ಬರುತ್ತಿತ್ತು. ಭೂಗೋಳದಲ್ಲಿ ಜಗತ್ತಿನ ನಕ್ಷೆ ನೋಡುತ್ತಿದ್ದೆವು. ನಮ್ಮ ಬೆಂಗಳೂರಿನ ಹೊರಗೆ ಇಷ್ಟೊಂದು ಪ್ರಪಂಚವಿದೆಯೇ ಎಂದು ಆಶ್ಚರ್ಯವಾಗುತ್ತಿತ್ತು. ಜಿಯೋಗ್ರಫಿ ಓದಿದಾಗ ಭೂಮಿಯ ಮೇಲೆ ಎಷ್ಟು ದೇಶಗಳಿವೆ ಎಂದು ತಿಳಿಯುತ್ತಿತ್ತು. ಆದರೆ ನಮ್ಮ ಮನೆಯಿಂದ ಕಾಲೇಜಿಗೆ ಹೋಗುವ ದಾರಿ ಗೊತ್ತಿಲ್ಲದಿದ್ದರೆ ಆ ಜ್ಞಾನವೆಲ್ಲ ಏನು ಪ್ರಯೋಜನ ಎಂದು ಆಗ ಯೋಚಿಸಿರಲಿಲ್ಲ.

ಕೆಮ್, ಫಿಸಿಕ್ಸ್ ಲ್ಯಾಬ್‌ಗಳಿಗೂ ತಮ್ಮದೇ ಆದ ಕತೆ ಇತ್ತು. ಲ್ಯಾಬ್‌ಗೆ ಹೋದ ಮೇಲೆ ಪ್ರಯೋಗ ಮಾಡಬೇಕು. ಉಪಕರಣಗಳನ್ನು ಜೋಪಾನವಾಗಿ ಬಳಸಬೇಕು. ಏನಾದರೂ ತಪ್ಪಾದರೆ ಮೇಷ್ಟ್ರುಗಳ ಕಣ್ಣಿಗೆ ಬೀಳಬಾರದು. ಕೆಲವೊಮ್ಮೆ ಪ್ರಯೋಗಕ್ಕಿಂತ ಉಪಕರಣಗಳನ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗುತ್ತಿತ್ತು. ಲ್ಯಾಬ್‌ನಲ್ಲಿ ಏನು ಮಾಡುತ್ತಿದ್ದೇವೆ ಎಂಬುದಕ್ಕಿಂತ, ಪ್ರಯೋಗ ಮುಗಿಸಿ ಸುರಕ್ಷಿತವಾಗಿ ಹೊರಗೆ ಬಂದರೆ ಸಾಕು ಎಂಬ ಮನೋಭಾವವೂ ಕೆಲವರಲ್ಲಿತ್ತು.

ಆಸ್ಟ್ರಾನಮಿ ಪಾಠದಲ್ಲಿ ನಕ್ಷತ್ರಗಳು, ಗ್ರಹಗಳು, ಆಕಾಶದ ಸಂಗತಿಗಳು ಬರುತ್ತಿದ್ದವು. ಆಗ ಆಕಾಶವನ್ನು ನೋಡುವುದೇ ಒಂದು ದೊಡ್ಡ ಕಾರ್ಯಕ್ರಮ. ಈಗಿನಂತೆ ನಗರ ಬೆಳಕು ಎಲ್ಲೆಡೆ ಇರಲಿಲ್ಲ. ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತಿದ್ದವು. ಅವುಗಳಲ್ಲಿ ಯಾವುದು ಯಾವ ನಕ್ಷತ್ರ ಎಂದು ಗೊತ್ತಿರಲಿಲ್ಲ. ಆದರೆ ನಕ್ಷತ್ರಗಳೇ ನಮ್ಮನ್ನು ನೋಡುತ್ತಿವೆ ಎಂಬ ಭಾವನೆ ಇತ್ತು. ಈಗಿನ ಮಕ್ಕಳು ಆಕಾಶವನ್ನು ನೋಡುವುದಕ್ಕಿಂತ ಮೊಬೈಲ್ ಸ್ಕ್ರೀನ್ ನೋಡುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ ಎಂದು ಹೇಳಿದರೆ ಅದು ಅವರ ತಪ್ಪಲ್ಲ. ನಾವು ಕೂಡ ನಮ್ಮ ಕಾಲದಲ್ಲಿ ನಮಗೆ ಸಿಕ್ಕಿದ್ದನ್ನು ನೋಡುತ್ತಿದ್ದೆವು.

ಜಿಟಿಎನ್ ಕತೆ ನೆನಪಿಗೆ ಬಂದಾಗ ಇನ್ನೊಂದು ರೀತಿಯ ನಗು ಬರುತ್ತದೆ. ಓದಿನ ಮಧ್ಯೆ ಕತೆಗಳು, ಗೆಳೆಯರ ಮಾತುಗಳು, ಮೇಷ್ಟ್ರುಗಳ ವಿಚಿತ್ರ ಸ್ವಭಾವ, ಕಾಲೇಜಿನ ಸಣ್ಣಪುಟ್ಟ ಘಟನೆಗಳು, ಇವೆಲ್ಲವೂ ಸೇರಿ ಜೀವನದ ದೊಡ್ಡ ಭಾಗವಾಗಿಬಿಡುತ್ತವೆ. ಆ ಕಾಲದಲ್ಲಿ ಏನೂ ದೊಡ್ಡದಾಗಿ ಕಾಣುತ್ತಿರಲಿಲ್ಲ. ಈಗ ಹಿಂದಿರುಗಿ ನೋಡಿದರೆ ಸಣ್ಣ ಘಟನೆಗಳೇ ದೊಡ್ಡ ನೆನಪುಗಳಾಗಿವೆ.

ಲಾ ಪಾಠವೂ ಹಾಗೆಯೇ. ಕಾನೂನು ಎಂದರೆ ಆಗ ಪುಸ್ತಕದಲ್ಲಿ ಓದುವ ವಿಷಯ. ಈಗ ಜೀವನದಲ್ಲಿ ಕಾಣುವ ವಿಷಯ. ಆಗ ಕಾನೂನಿನ ಸೆಕ್ಷನ್‌ಗಳನ್ನು ಓದುತ್ತಿದ್ದೆವು. ಈಗ ಯಾರಾದರೂ ಒಂದು ವಿಷಯ ಹೇಳಿದರೆ, ಅದಕ್ಕೆ ಯಾವ ಸೆಕ್ಷನ್ ಅನ್ವಯವಾಗುತ್ತದೆ ಎಂದು ಯೋಚಿಸುವ ಅಭ್ಯಾಸ ಬಂದಿದೆ. ಓದಿದ ವಿಷಯ ಜೀವನದಲ್ಲಿ ಯಾವಾಗ ಉಪಯೋಗವಾಗುತ್ತದೆ ಎಂದು ಆಗ ಗೊತ್ತಿರಲಿಲ್ಲ. ಈಗ ಉಪಯೋಗವಾಗದ ವಿಷಯವೇ ಇಲ್ಲ ಎಂದು ಅನಿಸುತ್ತದೆ.

ಹಳೆಯ ಬೆಂಗಳೂರು ನೆನಪಿಗೆ ಬಂದಾಗ ಒಂದು ವಿಷಯ ಮಾತ್ರ ಸ್ಪಷ್ಟವಾಗುತ್ತದೆ. ನಗರ ಬದಲಾಗಿದೆ. ರಸ್ತೆಗಳು ಬದಲಾಗಿವೆ. ವಾಹನಗಳು ಬದಲಾಗಿವೆ. ಓದುವ ವಿಧಾನ ಬದಲಾಗಿದೆ. ಆದರೆ ಮನುಷ್ಯನ ನೆನಪು ಮಾತ್ರ ಬದಲಾಗಿಲ್ಲ. ನಾವು ನಡೆದ ರಸ್ತೆಗಳು, ಓದಿದ ಕಾಲೇಜುಗಳು, ಕೇಳಿದ ಮೇಷ್ಟ್ರುಗಳ ಮಾತುಗಳು, ಗೆಳೆಯರ ಕೀಟಲೆಗಳು, ಎಲ್ಲವೂ ಇನ್ನೂ ನಮ್ಮೊಳಗೆ ಹಾಗೆಯೇ ಉಳಿದಿವೆ.

ರಿಂಗ್ ರೋಡ್ ಮೊದಲಿನ ಬೆಂಗಳೂರು ಈಗ ಇಲ್ಲ. ಆದರೆ ಆ ಬೆಂಗಳೂರಿನ ನೆನಪು ನಮ್ಮೊಳಗಿದೆ. ಎಸ್‌ಎಸ್‌ಎಲ್‌ಸಿ ರಿಸಲ್ಟ್, ಪಿಯುಸಿ ಅಡ್ಮಿಷನ್, ಬಿಎಸ್‌ಸಿ ಕೋರ್ಸ್, ಟ್ಯುಟೋರಿಯಲ್ಸ್, ಕನ್ನಡ ಇಂಗ್ಲಿಷ್ ಮೇಷ್ಟ್ರ ಪಾಠ, ಸೋಷಿಯಲ್ಸ್, ಕೆಮ್, ಫಿಸಿಕ್ಸ್ ಲ್ಯಾಬ್, ಜಿಯೋಗ್ರಫಿ, ಆಸ್ಟ್ರಾನಮಿ, ಜಿಟಿಎನ್ ಕತೆ, ಲಾ ಪಾಠ—ಇವೆಲ್ಲವೂ ನಮ್ಮ ಕಾಲದ ಬೆಂಗಳೂರು.

ಈಗ ಯಾರಾದರೂ “ಆ ಕಾಲದಲ್ಲಿ ಏನಿತ್ತು?” ಎಂದು ಕೇಳಿದರೆ, ಏನೂ ಇರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬಹಳ ಇತ್ತು. ಆದರೆ ಈಗ ಇರುವುದಕ್ಕಿಂತ ಬೇರೆ ರೀತಿಯಲ್ಲಿ ಇತ್ತು. ಆಗ ರಿಂಗ್ ರೋಡ್ ಇರಲಿಲ್ಲ. ಆದರೆ ನೆನಪುಗಳ ರಸ್ತೆಗೆ ಕೊನೆಯೇ ಇರಲಿಲ್ಲ. ನಿಮ್ಮ ಮೂಲದ ಕೊನೆಯ ಪ್ಯಾರಾದಿಂದಲೇ ಈ ಲೇಖನವನ್ನು ಬೆಳೆಸಿದ್ದೇನೆ. ಇನ್ನೂ ಹೆಚ್ಚು ನಿಮ್ಮ ವೈಯಕ್ತಿಕ ಘಟನೆಗಳು—ಯಾವ ಕಾಲೇಜು, ಯಾವ ಮೇಷ್ಟ್ರು, ಜಿಟಿಎನ್ ಕತೆಯಲ್ಲಿ ಏನಾಯಿತು, ಲಾ ಪಾಠದ ಒಂದು ಪ್ರಸಂಗ—ಸೇರಿಸಿದರೆ ಲೇಖನ ಇನ್ನಷ್ಟು ನಿಮ್ಮದೇ ಆಗುತ್ತ….

ನೋಡಿದ್ರಾ AI ಮಜಾ ಹೇಗಿರುತ್ತೆ?

ನನ್ನ ಪುರಾಣ ಅದು ಮುಂದುವರೆಸಿದ ರೀತಿ ನನಗೆ ಶೇ ನೂರರಷ್ಟು ಸಮ್ಮತಿ ಇಲ್ಲ. ಅದನ್ನು ಬೇರೆ ರೀತಿ ಇನ್ನೂ ಚೆನ್ನಾಗಿ ಹೇಳಬಹುದಿತ್ತು ಅಂತ ಗೊತ್ತು! ಇದರ ಮೂಲಕ ಮುಂದೆ ಕತೆ ಕಾದಂಬರಿ ಬರೆಸಿ ಕವಿತೆ ಹೊಸೆದು ಅಕಾಡೆಮಿ ಅವಾರ್ಡ್ ಬಾಚಿಕೊಂಡು…. ಏನೇನು ಮಾಡಬಹುದು ಅಲ್ಲವೇ… ಇದರ ಬಗ್ಗೆ ಮುಂದೆ ಖಂಡಿತ ಹೇಳುತ್ತೇನೆ..!

ಇನ್ನೂ ಇದೆ….

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ