ಆತ್ಮದ ಪರಿಮಳವ ಅವಿಸಿಟ್ಟು!
ವಾಟ್ಸಪ್ -ಫೇಸ್ಬುಕ್
ಡಿಪಿ, ಸ್ಟೇಟಸ್ಗಳಲ್ಲಿ
ಅಪರೂಪಕ್ಕೆ ಫೋಟೋ ಹಾಕುವಾಗ
ಸಾಧಾರಣದ್ದನ್ನೇ ಹುಡುಕುತ್ತಾಳೆ
ಗಂಡನ ನೆರಳಲ್ಲೇ ನಿಂತಿರುತ್ತಾಳೆ!
ರೇಷ್ಮೆ ಸೀರೆಯುಟ್ಟು
ಮಲ್ಲಿಗೆ ಮುಡಿದು
ಅಪರೂಪಕ್ಕೊಮ್ಮೆ
ಮದುವೆ ಮನೆಗಳಲ್ಲಿ
ಚಂದವಾಗಿ ಕಾಣಿಸಿದ
ಚಿತ್ರಗಳನ್ನು ಗ್ಯಾಲರಿಯಲ್ಲಿ
ನೋಡಿಯೂ ನೋಡದಂತೆ
ದಾಟಿ ಹೋಗುತ್ತಾಳೆ!
ಅವಳ ಅತಿಶಯ ಸೌಂದರ್ಯ
ಯಾರದ್ದೋ ಕಣ್ಣು ಕುಕ್ಕಿ
ಇನ್ಯಾವುದೋ ಅನಾಹುತ
ಸಂಭವಿಸಬಾರದೆಂದು
ಹಿತೈಷಿಗಳೆಲ್ಲ ಆಗಾಗ ತಿದ್ದಿ
ಬುದ್ಧಿವಾದ ಹೇಳಿದ್ದಾರೆ!
ಡಿಪಿಯಲ್ಲಿ ಚೆಲುವು
ಮೇಳೈಸಿದರೆ
ಗಂಡನ ಕಣ್ಣುಗಳೂ
ಕಿಡಿ ಕಾರುತ್ತವೆ
ಅವನ ಸಹೋದ್ಯೋಗಿಗಳೂ
ಹೆಂಡತಿಗೆ ಹೆದರಿಕೆ
ಇರಿಸುವಂತೆ
ಕಿವಿ ತುಂಬುತ್ತಾರೆ!
ಅವಳು ಸಿಂಗರಿಸಿಕೊಂಡು
ಹೊರ ಹೋಗುವುದಿಲ್ಲ
ಫೋಟೋ ತೆಗೆಸುವುದಿಲ್ಲ
ತೆಗೆಸಿದರೂ ಪ್ರದರ್ಶಿಸುವುದಿಲ್ಲ
…
ಮಾರುದ್ದ ಕೂದಲನ್ನು
ಹರಡಿಕೊಳ್ಳುವುದೂ ಇಲ್ಲ!
ಐವತ್ತಕ್ಕೆ ಕಾಲಿಟ್ಟಿರುವ ಅವಳು
ದಿನವೂ ಆಫೀಸಿಗೆ ಹೋಗುವಾಗ
ಮೈತುಂಬ ಸೆರಗು ಹೊದ್ದು
ತಲೆಬಗ್ಗಿಸಿ ನಡೆಯುತ್ತಾಳೆ
ಆತ್ಮದ ಪರಿಮಳವ ಅವಿಸಿಟ್ಟು
ನಿಸ್ತೇಜ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತಾಳೆ
ಆ
ಎಡಬಿಡಂಗಿ
ಬೀದಿಗಳಲ್ಲಿ!

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

