ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ.
‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ ಇಲ್ಲಿದೆ.

ದಿನಾಂಕ 26 ತಿಂಗಳು ಜುಲೈ, ಇಸವಿ ಯಾವುದಾದರೇನಂತೆ, ಈ ದೇಶ ಮರೆಯಲಾರದ ದಿನ. ನನ್ನ ತಲೆಮಾರು ನೋಡಿದ ನಮ್ಮ ದೇಶದ ಮೊದಲ ಯುದ್ಧ. ನೆನಪಾದಾಗಲೆಲ್ಲಾ ಭಯಂಕರ ಭಾವ ಸ್ಫುರಣ. ಆ ದಿನ ನಾನು ಇಂಡೋ-ಪಾಕ್ ಹಿಮ ಸರಹದ್ದು ಕಾರ್ಗಿಲ್ ಪ್ರದೇಶದಿಂದ ಕೇವಲ 120 ಕಿಲೋಮೀಟರ್ಗಳ ದೂರದಲ್ಲಿ ಇದ್ದೆ. ಭಾರತದೆಡೆಗೆ ಪಾಕಿಸ್ತಾನದ ಮತ್ಸರ ಜಗಜ್ಜಾಹೀರಾದದ್ದೇ. ಅವಕಾಶ ಸಿಕ್ಕಾಗಲೆಲ್ಲ ತನ್ನ ಕನಿಷ್ಠ ಮಟ್ಟವನ್ನು ತೋರಿಸಲೇಬೇಕೆಂಬ ಆತುರ ಪಡುವ ಪಾಕ್. ಆ ದೇಶದೊಂದಿಗೆ ಭೂಸರಹದ್ದನ್ನು ಹಂಚಿಕೊಂಡಿರುವ ಭಾರತ. ನಮ್ಮ ಮೇಲಿನ ಆಕ್ರಮಣಕ್ಕಾಗಿ ಪಾಕಿಸ್ತಾನ ಆರಿಸಿಕೊಂಡಿದ್ದು ಕಾರ್ಗಿಲ್ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಯಾವ ಭೂಗೋಳ ಪುಸ್ತಕದಲ್ಲೂ ಸಿಗುವುದಿಲ್ಲ. ಸ್ವತಃ ಕಂಡಾಗ ಮಾತ್ರ ತಿಳಿಯುವುದೇನೋ!

ಕಾಶ್ಮೀರದ ಶ್ರೀನಗರದಿಂದ 205 ಕಿಲೋಮೀಟರ್ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಎತ್ತರ ಪರ್ವತಗಳಿಂದ ಕೂಡಿದ ಲಡಾಕ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಒಂದೊಮ್ಮೆ ಹಸುರಿನ ಹೆಸರೇ ಇಲ್ಲದಿದ್ದ ಜಾಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಭಾಗ -45 ಡಿಗ್ರಿ ಸೆಲ್ಷಿಯಸ್ ತಾಪಮಾನವಿರುವ ಶೀತಲ ಮರುಭೂಮಿ. 160 ಕಿಲೋಮೀಟರ್ಗಳ ಹಿಮಾಚ್ಛಾದಿತ ಪರ್ವತ ಬೆಟ್ಟೇಣು ಹೊಂದಿರುವ ಊಹಾತೀತ ಸ್ಥಳ. 16 ರಿಂದ 18 ಸಾವಿರ ಅಡಿಗಳ ಮೇಲಷ್ಟೇ ಸೇನಾ ಅಟ್ಟಣಿಗೆಗಳನ್ನು ಹೊಂದಲು ಸಾಧ್ಯವಾಗುವ ಜಾಗ.

ರಸ್ತೆಯುದ್ದಕ್ಕೂ ಇಷ್ಟಿಷ್ಟೇ ದೂರದಲ್ಲಿ ಸ್ಥಾಪಿಸಿರುವ ಮಿಲಿಟರಿ ಬೇಸ್ ಕ್ಯಾಂಪುಗಳು, ಅಟ್ಟಣಿಗೆಗಳು ಅಲ್ಲಿನ ಸ್ಥಿತಿಯನ್ನು ವಿವರಿಸುತ್ತವೆ. ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕು, ಸಿಯಾಷಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಮಾಡಿದ ಸಂಚು, ಈ ಪ್ರದೇಶಕ್ಕೆ ತನ್ನ ಸೇನಾಪಡೆಯಿಂದ ಕ್ರಮೇಣಾಕ್ರಮಣ ಮಾಡಿಸಿದ್ದು. ಈ ಕ್ರಿಯೆಗೆ ಪಾಕಿಸ್ತಾನಿ ಸೇನೆ ಕೊಟ್ಟ ಹೆಸರು “ಆಪರೇಷನ್ ಬದ್ರ್. ನೆರೆಹೊರೆಯ ಭಾಂದವ್ಯ ನಿರ್ವಹಣೆಗಾಗಿ ನಮ್ಮೊಡನೆ 1971ರಲ್ಲಿ ಮಾಡಿಕೊಂಡಿದ್ದ ಶಿಮ್ಲಾ ಒಪ್ಪಂದಕ್ಕೆ ಸೊಪ್ಪು ಹಾಕದೆ ಪಾಕಿಸ್ತಾನ 1999ರಲ್ಲಿ ಯುದ್ಧಘೋಷಣೆ ಮಾಡಿಯೇಬಿಟ್ಟಿತ್ತು. ಭಾರತೀಯ ಸೇನಾಪಡೆ ವಿಶ್ವದಲ್ಲಿ ಉತ್ಕೃಷವಾದ ಪಡೇಗಳಲ್ಲಿ ಒಂದು. ಭಾರತೀಯ ಯೋಧನ ದೇಶನಿಷ್ಠೆ ಪ್ರಶ್ನಾತೀತ ಎನ್ನುವ ಸತ್ಯವನ್ನು ಪಾಕೀಸ್ತಾನ ಮನಗಾಣಲೇಯಿಲ್ಲ.

ಸಿಯಾಷಿನ್ ನೀರ್ಗಲ್ಲು ಭಾರತ ಮತ್ತು ಪಾಕಿಸ್ತಾನವನ್ನು ಅಕ್ಷರಶಃ ಬೇರ್ಪಡಿಸುವ ಪ್ರದೇಶ. ಕಾರಕೊರಂ ಹಿಮ ಪರ್ವತ ಶ್ರೇಣಿಯ ಅತ್ಯಂತ ಎತ್ತರವಾದ ಶಿಖರ. ಸಮುದ್ರಮಟ್ಟದಿಂದ 18665 ಅಡಿಗಳ ಎತ್ತರದಲ್ಲಿ, ವರ್ಷವಿಡೀ -58 ಡಿಗ್ರಿ ತಾಪಮಾನ ಹೊಂದಿದ್ದು, 35 ಅಡಿಗಳ ಹಿಮಪಾತ ಎದುರಿಸುವ ಭರತ ಭೂಮಿ. ಈ ಸುಂದರ ಸರಹದ್ದನ್ನು ಕಬಳಿಸಲು ಸದಾ ಸಜ್ಜಾಗಿ ನಿಂತಿವೆ ಪಾಕಿಸ್ತಾನ ಮತ್ತು ಚೀನ.

(‘ಹಾಲ್ ಆಫ್ ಫೇಂ’ ನ ಒಳಗೆ)

ಸಿಂಧು ಮತ್ತು ಝನ್ಸ್ಕಾರ್ ನದಿಗಳ ಸಂಗಮದಿಂದಿನಿತು ದೂರದಲ್ಲೇ ಕಾರ್ಗಿಲ್ ಯುದ್ಧದ ಮಹತ್ತ್ವವನ್ನು ತೋರುವ, ನಮ್ಮ ಯೋಧರ ತ್ಯಾಗ ಬಲಿದಾನಗಳನ್ನು ನೆನಪಿಸುವ ಸಂಗ್ರಹ ಮನೆ (ಮ್ಯೂಸಿಯಮ್) ‘ಹಾಲ್ ಆಫ್ ಫೇಂ’ ಇದೆ. ಈ ಹೆಸರಿನ ಮೋಡಿಗೆ ಒಳಗಾಗಿದ್ದ ನಾನು ಉತ್ಸಾಹದಿಂದ ಒಳಹೊಕ್ಕೆ. ಅಲ್ಲಿದ್ದ ಯುವ ಯೋಧ ಬಿಹಾರದ ಅಜಯ್ ನನ್ನ ಕುತೂಹಲ ತಣಿಸಲು ಆ ಜಾಗದ ಎಲ್ಲ ವಿವರಗಳನ್ನು ನೀಡುತ್ತಿದ್ದ. ಎಲ್ಲಿ ಯಾವುದಾದರೂ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳದೆ ನಮ್ಮ ಸೇನಾಪಡೆಯ ಬಗ್ಗೆ ಅಗೌರವ ತೋರಿಬಿಡುತ್ತೇನೋ ಎನ್ನುವ ಕಾಳಜಿಯಿಂದ ಪದಕ್ಕೊಮ್ಮೆ “ಮತ್ತೊಮ್ಮೆ ಹೇಳಲೇ?“ ಎಂತಲೂ ಕೇಳುತ್ತಿದ್ದ. ಪ್ರಕೃತಿ ಅತೀ ಪ್ರೀತಿಯಿಂದ, ಅಕ್ಕರೆ ಮಮತೆಗಳಿಂದ ಸೃಷ್ಟಿ ಮಾಡಿರುವಂತ್ತಿದ್ದ ಆ ಜಾಗದ ಬಗ್ಗೆ ಸಿಪಾಯಿ ಅಜಯ್ ಹೇಳಿದ್ದು ಇಷ್ಟು.

(ಸಿಂಧು ಮತ್ತು ಝನ್ಸ್ಕಾರ್ ನದಿಗಳ ಸಂಗಮ)

ಖ್ಯಾತ ತಾರೆ ಹೃತಿಕ್ ರೋಷನ್ ನಟಿಸಿರುವ ಪ್ರಸಿದ್ಧ ‘ಲಕ್ಷ್’ ಹಿಂದಿ ಚಲನಚಿತ್ರವನ್ನು ಚಿತ್ರೀಕರಿಸಿರುವುದು ಈ ಜಾಗದ ಸುತ್ತಮುತ್ತಲಿನಲ್ಲೇ. ಸಮುದ್ರಮಟ್ಟದಿಂದ 11333 ಅಡಿ ಮೇಲಿರುವ ಪ್ರಪಂಚದ ಅತೀ ಎತ್ತರದ ಸ್ಕೌಟ್ ತರಬೇತಿ ರೆಜಿಮೆಂಟ್ ಕೇಂದ್ರವೂ ಇಲ್ಲಿಯೇ ಇರುವುದು. ವಿಶ್ವದ ಏಕೈಕ ಹೈ ಆಲಿಟ್ಯೂಡ್ ರಿಸರ್ಚ್ ಸೆಂಟರ್ ಇರುವ ಭಾರತದ ಅಭಿಮಾನದ ಜಾಗ. ಮಿಲಿಟರಿಯಿಂದ ನಿರ್ವಹಿಸಲ್ಪಡುವ ಹಾಲ್ ಆಫ್ ಫೇಂ ಪ್ರವಾಸಿಗಳ ಭೇಟಿಗಾಗಿ ತೆರೆದಿದೆ. ಕೇವಲ 10 ರೂಪಾಯಿಗಳ ಪ್ರವೇಶ ಶುಲ್ಕಮತ್ತು ಚಿತ್ರೀಕರಣಕ್ಕಾಗಿ 50 ರೂಪಾಯಿಗಳ ಶುಲ್ಕವಿರುವ ಇಲ್ಲಿನ ಆದಾಯವೆಲ್ಲ ಸೇನಾಪಡೆಯ ಕ್ಷೇಮಾಭಿವೃದ್ಧಿಗಾಗಿ ಉಪಯೋಗಿಸಲಾಗುತ್ತದೆ.

(‘ಹಾಲ್ ಆಫ್ ಫೇಂ’ ನ ಮುಂಭಾಗ)

ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕು, ಸಿಯಾಷಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಮಾಡಿದ ಸಂಚು, ಈ ಪ್ರದೇಶಕ್ಕೆ ತನ್ನ ಸೇನಾಪಡೆಯಿಂದ ಕ್ರಮೇಣಾಕ್ರಮಣ ಮಾಡಿಸಿದ್ದು. ಈ ಕ್ರಿಯೆಗೆ ಪಾಕಿಸ್ತಾನಿ ಸೇನೆ ಕೊಟ್ಟ ಹೆಸರು “ಆಪರೇಷನ್ ಬದ್ರ್.

ಯುದ್ಧದಲ್ಲಿ ಉಪಯೋಗಿಸಿದ ಸಾಮಗ್ರಿಗಳು, ವಿಧಾನಗಳನ್ನು ತೋರಿಸುವ ಚಿತ್ರಪಟಗಳು, ದೃಶ್ಯ ರೂಪಕಗಳು, ದ್ವನಿಸುರಳಿಗಳು, ಬಳಸಿದ ಸಮವಸ್ತ್ರ ಬೂಟುಗಳು, ಗೆದ್ದ ಪದಕಗಳು, ಸೇನಾಪಡೆಯ ಬಾವುಟಗಳು, ಪ್ರಾಣತ್ಯಾಗ ಮಾಡಿದ ಯೋಧರ ಹೆಸರುಗಳುಳ್ಳ ಫಲಕ, ಕಾರ್ಗಿಲ್ ಮತ್ತು ಸುತ್ತಮುತ್ತ ಪ್ರದೇಶಗಳ ಭೌಗೋಳಿಕ ಸ್ಥಿತಿಯನ್ನು ತೋರಿಸುವ ಛಾಯಚಿತ್ರಗಳು, ಅಲ್ಲಿನ ಜೀವ ಪರಿಸ್ಥಿತಿ ಶಾಸ್ತ್ರದ ಬಗ್ಗೆ ವಿವರಣೆ ನೀಡುವ ದೃಶ್ಯರೂಪದ ಡಾಕ್ಯೂಮೆಂಟರಿ, ಸೇನಾ ಮುಖ್ಯಸ್ಥರುಗಳ ಜೀವನಗಾಥೆ, ಶತ್ರುಗಳಿಂದ ವಶ ಪಡಿಸಿಕೊಂಡ ಸಾಮಾನುಗಳು, ಯುದ್ಧದಲ್ಲಿ ಸಹಾಯಕ್ಕೆ ಬಂದು ನಂತರ ಅವಶೇಷಗಳಾಗಿ ಉಳಿದ ಶಸ್ತಾಸ್ತ್ರಗಳು, ಕದನದಲ್ಲಿ ನಾಶವಾಗಿ ಅರ್ದಂಬರ್ಧ ಉಳಿದುಕೊಂಡಿರುವ ಬಿಡಿ ಭಾಗಗಳು, ಹೀಗೆ ಒಂದೇ ಎರಡೇ? ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಲು, ನಮ್ಮ ಯೋಧರ ಬಗ್ಗೆ ಹೆಮ್ಮೆಯೆನಿಸಲು ಏನೆಲ್ಲ ಬೇಕೋ ಅವೆಲ್ಲವೂ ಚೊಕ್ಕಟವಾಗಿ ಇಲ್ಲಿ ಪ್ರದರ್ಶನಕ್ಕಿದೆ.

(“ಆಪರೇಷನ್ ವಿಜಯ್” ಗ್ಯಾಲರಿ)

ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ 1999ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ “ಆಪರೇಷನ್ ವಿಜಯ್” ಸಾರ್ಥಕವಾಯ್ತು. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯ. ಪರಮಾಣು ಶಸ್ತಾಸ್ತ್ರವನ್ನು ಹೊಂದಿರುವ ಎರಡು ದೇಶಗಳ ನಡುವೆ ನಡೆದ ಅತ್ಯಂತ ದೊಡ್ಡದಾದ ಭೂಕದನ ಕಾರ್ಗಿಲ್ ಯುದ್ಧ. ಸಮುದ್ರಮಟ್ಟದಿಂದ ಅತೀಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು. 60 ಅಹರ್ನಿಶೆಗಳ ಸತತ ಕಾದಾಟದ ನಂತರ 572 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣತೆತ್ತಿದ್ದಕ್ಕೆ1999ರ ಜುಲೈ 26ರಂದು ವಿಜಯ ಸಿಕ್ಕಿತ್ತು. ನಮ್ಮ ಭೂಮಿ ಮತ್ತೆ ನಮ್ಮ ವಶಕ್ಕೆ ದಕ್ಕಿತ್ತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ ’ಕಾರ್ಗಿಲ್ ವಿಜಯ ದಿವಸ’ ಎಂದಾಚರಿಸಲಾಗುತ್ತದೆ. ಒಂದೊಮ್ಮೆ ಈ ವಿಜಯ ನಮ್ಮದಾಗಿರದಿದ್ದರೆ ಇಂದು ಕಾಶ್ಮೀರ ನಮ್ಮದಾಗಿ ಉಳಿಯುತ್ತಿರಲಿಲ್ಲ. ಇಂಚಿಂಚೇ ಭಾರತವನ್ನು ಕಬಳಿಸಬೇಕೆನ್ನುವ ಪಾಕಿಸ್ತಾನದ ಹುನ್ನಾರಕ್ಕೆ ಗೆಲುವು ಸಿಕ್ಕಿಬಿಡುತ್ತಿತ್ತು. ಆದರೆ ಭಾರತೀಯ ಯೋಧನಿಗೆ ಗೆಲ್ಲುವುದು ಬಿಟ್ಟು ಬೇರೆಯೇನು ತಾನೆ ತಿಳಿದಿದೆ? ಅವರುಗಳಿಂದಾಗಿಯೇ ಇಂದು ಭಾರತ ನಮ್ಮ ಹೆಮ್ಮೆಯ ಸುರಕ್ಷಿತ ತಾಣವಾಗಿದೆ.

451 ವರ್ಷಗಳ ಸುದೀರ್ಘ ಪೋರ್ಚಿಗೀಸ್ ಆಡಳಿತವನ್ನು ಕೊನೆಗೊಳಿಸಿ 1961ರಲ್ಲಿ ಗೋವಾ ಮತ್ತು ಡಿಯು-ದಮನ್ ದ್ವೀಪಗಳನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡಿತು. 36 ಗಂಟೆಗಳ ಕಾಲ ಸತತವಾಗಿ ಭೂ, ವಾಯು ಮತ್ತು ಜಲ ಸೇನೆಗಳು ನಡೆಸಿದ ಈ ಯುದ್ಧ ಪ್ರಕ್ರಿಯೆಗೂ ಕೊಟ್ಟಿದ್ದ ಹೆಸರು ’ಆಪರೇಷನ್ ವಿಜಯ್’. ಈ ಯುದ್ಧದಲ್ಲಿ 34 ಭಾರತೀಯ ಯೋಧರ ಬಲಿದಾನವಾಗಿತ್ತು.

ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ.

ತಾನು ಯುದ್ಧಕ್ಕೆ ಹೊರಡುವ ಎರಡು ದಿನಗಳ ಮೊದಲು 22ರ ಹರೆಯದ ಲೆಫ್ಟಿನೆಂಟ್. ಕರ್ನಲ್. ವಿಜಯ್ ಥಾಪರ್ ತನ್ನ ಕುಟುಂಬಕ್ಕೆ ಬರೆದ ಪತ್ರವನ್ನು ಮತ್ತು ಅದಕ್ಕೆ ಆತನ ತಂದೆ ಕರ್ನಲ್ ಥಾಪರ್ ಬರೆದಿರುವ ಉತ್ತರವನ್ನು “ಕೊನೆಯ ಪತ್ರ” ಎನ್ನುವ ತಲೆ ಬರಹದಡಿ ಪ್ರದರ್ಶನಕ್ಕೆ ಇಡಲಾಗಿದೆ. “ಪ್ರೀತಿಯ ಅಪ್ಪ ಅಮ್ಮ ನೀವು ಈ ಪತ್ರ ಓದುತ್ತಿರುವಾಗ ನಾನು ಇಲ್ಲವಾಗಿರುತ್ತೇನೆ. ಈ ದೇಶಕ್ಕಾಗಿ ನನ್ನ ಎಲ್ಲವನ್ನೂ ಕೊಟ್ಟಿರುತ್ತೇನೆ. ಅದನ್ನೇ ಅಲ್ಲವೇ ನೀವು ಬಯಸಿದ್ದು? ಅಪ್ಪ, ಮುಂದಿನ ಜನ್ಮದಲ್ಲೂ ನಿಮ್ಮ ಮಗನಾಗೇ ಹುಟ್ಟಿಬರಬೇಕು, ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧನಾಗಿರುವ ಯೋಧನೇ ಆಗಬೇಕೆಂದು ಬಯಸುವ ನನ್ನ ಬಯಕೆ ಈಡೇರಲಿ ಎಂದು ಆಶೀರ್ವಾದ ಮಾಡಿ. ನಿಮ್ಮ ನಾಳೆಗಳಿಗಾಗಿ ನಮ್ಮ ಯೋಧರು ಹೋರಾಡಿದ ಈ ಜಾಗವನ್ನು ಒಮ್ಮೆ ಬಂದು ನೋಡಿ. . . .” ಎನ್ನುವ ಸಾಲುಗಳನ್ನು ಓದುತ್ತಾ ಎಷ್ಟೊ ಹೊತ್ತು ನಾನು ಕಣ್ಣೀರಾಗಿದ್ದೆ. ನನ್ನ ನಾಳೆಗಳಿಗಾಗಿ ತಾನು ನೆನ್ನೆಯ ಪುಟಗಳಲ್ಲಿ ಸೇರಿಹೋದ ವಿಜಯ್ ಥಾಪರ್ ಹಾಗೂ ಜೊತೆಗಾರರಿಗಾಗಿ ಒಂದೆರಡು ಕಣ್ಣೀರ ಹನಿಗಳನ್ನು ಬಿಟ್ಟು ಇನ್ನೇನೂ ಕೊಡಲಾರದ ಯಕಃಶ್ಚಿತ್ ನಾನು.

16 ಉಪನದಿಗಳಿರುವ ಸಿಂಧು ನದಿ ಅತೀ ಹೆಚ್ಚು ಉಪನದಿಗಳಿರುವ ಅತ್ಯಂತ ಪ್ರಾಚೀನವಾದ ಸುಂದರವಾದ ನದಿಗಳಲ್ಲೊಂದು. ಟಿಬೇಟಿಯನ್ ಪ್ರಸ್ಥಭೂಮಿಯ ಮಾನಸ ಸರೋವರದ ಬಳಿ ಉಗಮವಾಗುವ ಈ ನದಿಯ ಉದ್ದಳತೆ 3180 ಕಿಲೋಮೀಟರ್ಗಳು. ಭಾರತದ ಲಡಾಕ್, ಜಮ್ಮು ಕಾಶ್ಮೀರಗಳ ಕಣಿವೆ, ಹಿಮಾಚ್ಛಾದಿತ ಪರ್ವತಶ್ರೇಣಿಗಳ ನೀರ್ಗಲ್ಲುಗಳು, ಪ್ರಪಾತಗಳ ಮೂಲಕ ಹರಿದು ಪಂಜಾಬ್ ಭೂಮಿಯ ಹೊಟ್ಟೆ ತುಂಬಿಸಿ ಬಲೂಚಿಸ್ತಾನದಿಂದ ಪಾಕಿಸ್ತಾನದೆಡೆಗೆ ಹರಿವನ್ನು ಬದಲಿಸುವ ಈ ನದಿಯನ್ನು ನಾಗರೀಕತೆಯ ತೊಟ್ಟಿಲು ಎನ್ನಲಾಗಿದೆ. ಹಾಗೆಯೇ ಇದು ಪಾಕಿಸ್ತಾನದ ದೊಡ್ಡ ನದಿಯೂ ಹೌದು. ಆಂಗ್ಲ ಭಾಷೆಯಲ್ಲಿ ಇಂಡಸ್ ನದಿ ಎಂದು ಕರೆಸಿಕೊಳ್ಳುವ ಈ ನದಿಯ ಹೆಸರಿನಿಂದಲೆ ಇಂಡಿಯ ಪದೋತ್ಪತ್ತಿಯಾಗಿದ್ದು ಎನ್ನುತ್ತಾರೆ ತಜ್ಞರು. ಲಡಾಕ್ನಲ್ಲಿ ಜನವರಿ 24 ರಂದು ಸಿಂಧು ದರ್ಶನ ಮೇಳ ನಡೆಯುತ್ತದೆ. ಧರ್ಮ ಸಹಿಷ್ಣತೆ, ಶಾಂತಿ ಪ್ರಿಯ ಬಾರತೀಯ ಸ್ವಭಾವಗಳ ಧ್ಯೋತಕವಾಗಿ ಈ ಉತ್ಸವ ನಡೆಸಲಾಗುತ್ತದೆ.

(‘ಹಾಲ್ ಆಫ್ ಫೇಂ’ ನ ಮುಂಭಾಗದಲ್ಲಿ…)

ಝನ್ಸ್ಕಾರ್ ನದಿ ಸಿಂಧು ನದಿಯ ಉಪನದಿಗಳಲ್ಲೊಂದು. ಭಾರತದ ಉತ್ತರ ಭಾಗದಲ್ಲಿ 4000 ಮೀಟರ್ ಉದ್ದಕ್ಕೆ ಶೀತಲ ಮರುಭೂಮಿಯ ಪರ್ವತ-ಪ್ರಪಾತಗಳಲ್ಲಿ ಮತ್ತೊಂದಷ್ಟು ಉಪನದಿಗಳ ಜೊತೆಯಲ್ಲಿ ಹರಿದು ಬಂದು ಲಡಾಕ್ ಪ್ರದೇಶದಲ್ಲಿ ಸಿಂಧು ನದಿಯೊಡನೆ ಒಂದಾಗಿ ಪಾಕಿಸ್ತಾನದ ಕಡೆಗೆ ಹರಿಯುತ್ತದೆ. ಬೇಸಿಗೆಯಲ್ಲಿ ಜಲ ಸಾಹಸ ಕ್ರೀಡೆಗಳಿಂದ ಕಂಗೊಳಿಸಿದರೆ, ಚಳಿಗಾಲದಲ್ಲಿ ಹೆಪ್ಪುಗಟ್ಟುವ ಈ ನದಿಯ ಮಡುವಿನಲ್ಲಿ ಚಾರಣಪ್ರಿಯರು ತಮ್ಮ ಸಾಹಸ ತೋರುತ್ತಾರೆ. ಸಿಂಧು-ಝನ್ಸ್ಕಾರ್ ನದಿಗಳ ಸಂಗಮದಿಂದ 120 ಕಿಲೋಮೀಟರ್ಗಳ ದೂರದಲ್ಲಿ ಇದೆ ಕಾರ್ಗಿಲ್.

ಹಾಲ್ ಆಫ್ ಫೇಂ ನೋಡಿ ಕಾರ್ಗಿಲ್ಲಿನ ಕಡೆ ಪಯಣಿಸಬೇಕಿದ್ದ ನಮ್ಮ ಮಾರ್ಗವನ್ನು ತಡೆದದ್ದು ತೀಕ್ಷ್ಣ ಹಿಮಪಾತ ಮತ್ತು ಆ ದಿನವೇ “ಕಾಶ್ಮೀರದ ಭಯೋತ್ಪಾದಕರು ಲೇಹ್ನಲ್ಲಿ” ಎಂಬುದಾಗಿ ಗೂಢಾಚಾರ ವಿಭಾಗ ತಿಳಿಸಿದ್ದರಿಂದ ಮುಂದಿನ ಪ್ರಯಾಣಕ್ಕೆ ಮಿಲಿಟರಿ ಪಡೆಯಿಂದ ತಡೆ ಬಂದಿತ್ತು. ನಿರಾಸೆಯಂತೂ ಹೇಳತೀರದು. ಕಾರ್ಗಿಲ್ ಒಂದು ವಿಶೇಷ ಮತ್ತು ಪವಿತ್ರ ಪ್ರದೇಶ. ಅದರ ಅನುಭೂತಿ ಪಡೆಯಲು ಸಾಮಾನ್ಯ ಪ್ರವಾಸಿಯಾಗಿ ಹೋದರೆ ಸಾಲದು. ಅದಕ್ಕೆಂದೇ ಮನಸ್ಸು ಸಮಯ ಎರಡನ್ನೂ ಮೀಸಲಾಗಿರಿಸಿಕೊಂಡು ಹೋಗಬೇಕು. “ಮತ್ತೊಮ್ಮೆ ಖಂಡಿತಾ ಬರುತ್ತೇನೆ” ಎನ್ನುವ ಸ್ವಗತದೊಂದಿಗೆ “ದೇಶ ದೇಶಗಳ ನಡುವಿನ ಯುದ್ಧಕ್ಕೆ ಧಿಕ್ಕಾರವಿರಲಿ” ಎನ್ನುವ ಮೌನವನ್ನು ಬೊಗಸೆಯಲ್ಲಿ ಹಿಡಿದು, ಯುದ್ಧದ ನಾಶಕ್ಕೆ ಆಸೆ ಪಡುತ್ತಾ, ಸೈನಿಕರುಗಳಿಗೆ ಸೆಲ್ಯೂಟ್ ಮಾಡುತ್ತಾ ಬೆಂಗಳೂರಿನ ಕಡೆ ಮುಖ ಮಾಡಿದ್ದೆ.