ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಅವಳ ವಯಸ್ಸು ಕೂಡ ಅಷ್ಟೇ. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಇಲ್ಲ.. ಇಲ್ಲ.. ಆ ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!
ಎ.ಬಿ. ಪಚ್ಚು ಬರೆದ ಕಥೆ “ಪೌರ್ಣಮಿ” ನಿಮ್ಮ ಈ ಭಾನುವಾರದ ಓದಿಗೆ

ಬಹುಶಃ ಅವತ್ತು ಹುಣ್ಣಿಮೆಯೇ ಇರಬೇಕು. ಹೊರಗಡೆ ಚಂದ್ರ ಎಲ್ಲೆಲ್ಲಿ ಬೆಳಕು ಚೆಲ್ಲಿದ್ದಾನೆ ಎಂದು ನನಗೆ ಗೊತ್ತಿರಲಿಲ್ಲ, ಆದರೆ ಒಳಗಡೆ ಮಾತ್ರ ಎಂದಿನಂತೆ ದೀಪ ಉರಿವ ಸೊಬಗಿರಲಿಲ್ಲ.

ಎದುರಿಗಿದ್ದ ಗೋಡೆ ಗಡಿಯಾರ ಹಾಗೇ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಎರಡು ಸಲ “ಡಾಂಯ್.. ಡಾಂಯ್.. ” ಎಂದು ಬಡಿದುಕೊಳ್ಳುವ ಮೂಲಕ ಎಷ್ಟು ಗಂಟೆಯಾಗಿದೆ ಎಂದು ಸರಿಯಾದ ಸಮಯವನ್ನೇ ಹೇಳಿತ್ತು.

ನಾನು ಮಂಚದಲ್ಲಿ ಮಲಗಿದ್ದೆ, ನನ್ನ ಪಕ್ಕದಲ್ಲಿ ಎಂದಿನಂತೆಯೇ ಅವಳು. ಹೆಸರು ಜಾನಕಿ.

ಒಮ್ಮೆ ಆವರಿಸಿಕೊಂಡಿದ್ದ ನಿದ್ದೆ ಅವತ್ತೂ ಕೂಡ ನಡುವಲ್ಲಿಯೇ ಕೈ ತಪ್ಪಿ ಹೋಗಿತ್ತು. ನಡುರಾತ್ರಿ ನಿದ್ದೆಯೊಂದು ಹಾಗೆಲ್ಲಾ ಹಕ್ಕಿಯಂತೆ ಪುರ್ರೆಂದು ಎಲ್ಲೆಲ್ಲಿಗೋ ಹಾರಿ ಹೋಗಬಾರದು. ಆಮೇಲೆ ಏನೇನೋ ಆಲೋಚನೆಗಳು ಸುಳಿದಾಡಿ ಮತ್ತೆ ನಿದ್ದೆ ನಮ್ಮ ಕೈ ಹಿಡಿಯುವುದೇ ಇಲ್ಲ.

ಒಂದೂವರೆ ಗಂಟೆಯ ಹೊತ್ತಿಗೆ ಎದ್ದು, ಬಾತ್ ರೂಮಿನ ಕಡೆಗೆ ಹೋಗಿ ಬಂದಿದ್ದೇ ಈ ರೀತಿಯಾಗಿ ಮತ್ತೆ ನನಗೆ ಸರಿಯಾಗಿ ನಿದ್ದೆ ಬಾರದಿರಲು ಮುಖ್ಯ ಕಾರಣವಾಗಿತ್ತು.

ಮಲಗಿದ್ದಲ್ಲಿಂದ ನೇರವಾಗಿ ಕಣ್ಣೆದುರಿಗೇ ಇದ್ದ ಆ ಗೋಡೆ ಗಡಿಯಾರವನ್ನು ಆ ಕತ್ತಲಿನಲ್ಲಿಯೇ ಕಣ್ಣು ಹಿಗ್ಗಿಸಿಕೊಂಡು ತೀಕ್ಷ್ಣವಾಗಿ ನೋಡಿದೆ. ಆಗಷ್ಟೇ ಎರಡು ಸಲ ಬಡಿದುಕೊಂಡಿದ್ದ ಅದು ಹೆಚ್ಚು ಕಡಿಮೆ ಎರಡು ಗಂಟೆಯನ್ನೇ ನನ್ನ ಕಣ್ಣಿಗೂ ಅಸ್ಪಷ್ಟವಾಗಿ ತೋರಿಸುತ್ತಿತ್ತು.

ಅದೆಷ್ಟೋ ವರ್ಷಗಳಿಂದ ಪ್ರತೀ ರಾತ್ರಿ ನಡುವಲ್ಲಿ ಒಮ್ಮೆ ಎದ್ದು ಬಾತ್ ರೂಮಿನ ಶೌಚಾಲಯಕ್ಕೆ ಹೋಗುವಾಗ ರೂಮಿನ ಲೈಟ್ ಆನ್ ಮಾಡಿಕೊಂಡು ಗಡಿಯಾರವನ್ನೊಮ್ಮೆ ನೋಡುವುದು ನನ್ನ ಎಂದಿನ ವಾಡಿಕೆ. ಆ ನಂತರ ಬಾತ್ ರೂಮಿನಿಂದ ತಿರುಗಿ ಬಂದು ನಮ್ಮ ರೂಮಿನ ಬಾಗಿಲು ಹಾಕಿಕೊಂಡ ಮೇಲೆ ಮತ್ತೊಮ್ಮೆ ಗಡಿಯಾರವನ್ನು ನೋಡಿಯೇ ರೂಮಿನ ಲೈಟ್ ಆಫ್ ಮಾಡಿಕೊಂಡು ಮಲಗುವುದು ಕೂಡ ಆ ವಾಡಿಕೆಯ ಇನ್ನೊಂದು ಭಾಗವಾಗಿ ಬಿಟ್ಟಿತ್ತು.

ಈ ರೀತಿಯಾಗಿ ಪ್ರತೀ ರಾತ್ರಿ ಎರಡು ಸಲ ಗಡಿಯಾರದಲ್ಲಿ ಸರಿಯಾದ ಸಮಯವನ್ನೇ ನೋಡಿ ನೋಡಿ, ಎಷ್ಟೋ ವರ್ಷದಿಂದ ಆ ಗಡಿಯಾರವನ್ನು ಒಂದೇ ಕಡೆ ಮಲಗಿದ್ದಲ್ಲಿಂದ ಕೂಡ ನೋಡಿ ನೋಡಿ, ಮಲಗಿದ ಮೇಲೆ ರೂಮಿನಲ್ಲಿ ಬೆಳಕೇ ಇರದಿದ್ದರೂ, ಕಣ್ಣು ಮುಚ್ಚಿಯೇ ಮಲಗಿದ್ದರೂ, ನಾನು ನನ್ನ ಮನಸ್ಸಿನಲ್ಲಿಯೂ, ಕನಸಿನಲ್ಲಿಯೂ ಆ ಗಡಿಯಾರದ ಮುಳ್ಳುಗಳು ಈಗ ಇಷ್ಟೇ ಗಂಟೆ ತೋರಿಸುತ್ತಿದೆ ಎಂದು ಮಲಗಿದ್ದಲ್ಲಿಂದಲೇ ನಿಖರವಾಗಿ ಊಹಿಸಬಲ್ಲವನಾಗಿದ್ದೆ.

ಅದೆನೋ ಅಂತಹ ದೊಡ್ಡ ಇಂದ್ರಜಾಲ ವಿದ್ಯೆಯಲ್ಲ. ಅಭ್ಯಾಸ ಬಲ ಅಷ್ಟೇ. ಅದನ್ನು ನಾನು ಎಷ್ಟೋ ಸಲ ಪರೀಕ್ಷಿಸಿ ಕೂಡ ನೋಡಿದ್ದೆನೆ. ಅಂದ ಹಾಗೆ ನನ್ನ ಈ ಊಹೆ ಯಾವತ್ತೂ ತಪ್ಪಾಗಿದ್ದೇ ಇಲ್ಲ. ಕಣ್ಣು ಮುಚ್ಚಿ ಮಲಗಿದ್ದಲ್ಲಿಂದ ಮನಸ್ಸಿನಲ್ಲಿ ಎಷ್ಟು ಗಂಟೆಯಾಗಿದೆ ಎಂದು ಒಮ್ಮೆ ಊಹಿಸಿ, ಆಮೇಲೆ ಕಣ್ಣು ತೆರೆದು ಸುಮ್ಮನೆ ಗಡಿಯಾರದತ್ತ ದೃಷ್ಟಿ ಬೀರಿದ ಪ್ರತಿ ಸಲವೂ ನನ್ನ ಊಹೆ ನೂರಕ್ಕೆ ನೂರು ನಿಜವಾಗಿರುತ್ತಿತ್ತು.

ಕೆಲವರಿಗೆ ಸಮಯ ಕಳೆಯಲು ಏನೇನೋ ಆಟವಾಡುವ ಅಭ್ಯಾಸವಿರುತ್ತದೆ, ಆದರೆ ನನ್ನ ಜೀವನದಲ್ಲಿ ಈ ನಡುರಾತ್ರಿಗಳ ಸಮಯವೇ ಒಂದು ಆಟವಾಗಿ ಹೋಗಿತ್ತು.

ಮತ್ತೊಮ್ಮೆ ಬಲವಂತವಾಗಿ ಕಣ್ಣು ಮುಚ್ಚಿಕೊಂಡು ನಿದ್ದೆಗೆ ಜಾರುವ ಪ್ರಯತ್ನ ಮಾಡಿದೆ.

ಆಗಲೇ ಜಾನಕಿ ಮಾತಾಡಲು ಆರಂಭಿಸಿದ್ದು!!

ರೀ.. ಆಗಲಿಂದ ನಿಮಗೆ ಹೇಳುತ್ತಲೇ ಇದ್ದೇನೆ, ಯಾವುದೋ ಒಂದು ಹಕ್ಕಿ ಒಂದೇ ಸಮನೆ ಆವಾಗದಿಂದ ಚೀರಾಡುತ್ತಲೇ ಇದೆ, ನಿಮಗೆ ಕೇಳಿಸುತ್ತಿಲ್ಲವೇ. ಈ ಮಟ ಮಟ ಮಧ್ಯಾಹ್ನದ ಹೊತ್ತಲ್ಲಿ ಈ ರೀತಿಯಾಗಿ ಹಕ್ಕಿ ಕೂಗುವುದು ಅಪಶಕುನದ ಸಂಕೇತ, ಹೋಗಿ.. ಹೋಗಿ.. ಬೇಗ ಅದನ್ನೊಮ್ಮೆ ಅಲ್ಲಿಂದ ಈಗಲೇ ಓಡಿಸಿ ಬಿಡಿ…!!

ನನಗೆ ಆಶ್ಚರ್ಯವಾಯಿತು!

ಅರೇ.. ಇವಳೇಕೆ ಹೀಗೆ ಮಾತಾಡುತ್ತಿದ್ದಾಳೆ. ಈ ನಡುರಾತ್ರಿ ಎಲ್ಲಿಯ ಮಧ್ಯಾಹ್ನ? ಯಾವುದದು ಚೀರಾಡುವ ಹಕ್ಕಿ?!

ಮಲಗಿದ್ದಲ್ಲಿಂದಲೇ ಕಣ್ಣು ತೆರೆದು ಮೆಲ್ಲಗೆ ಅವಳತ್ತ ತಿರುಗಿ ಅವಳನ್ನೇ ನೋಡಿದೆ.

ಅವಳು ಕಣ್ಣು ಮುಚ್ಚಿಕೊಂಡು ಹಾಯಾಗಿ ನಿದ್ರಿಸುತ್ತಿದ್ದಳು!!

ಅಂದರೆ.. ಅಂದರೆ ಇವಳು ಕನಸಿನಲ್ಲಿ ಮಾತಾಡುತ್ತಿದ್ದಾಳೆಯೇ..? ನನಗೆ ನಾನೇ ಹೇಳಿಕೊಂಡೆ.

ನನ್ನ ಊಹೆ ಸರಿಯಾಗಿಯೇ ಇತ್ತು, ಜಾನಕಿ ಕನಸಿನಲ್ಲಿಯೇ ಮಾತಾಡಿದ್ದಳು.

ಆದರೆ ಯಾರಾದರೂ ಪುಟ್ಟ ಮಕ್ಕಳು ಇದ್ದಿದ್ದರೆ ಈ ರೀತಿಯಾಗಿ ಇವಳ ಮಾತನ್ನು ಕೇಳಿಸಿಕೊಂಡಿದ್ದರೆ ಅದೆಷ್ಟು ಹೆದರಿ ಬಿಡುತ್ತಿದ್ದರು.

ಇದ್ದಿದ್ದರೆ ಅವಶ್ಯವಾಗಿ ಹೆದರುತ್ತಿದ್ದರು. ಆದರೆ ನಮ್ಮಿಬ್ಬರಿಗೆ ಮಕ್ಕಳೇ ಇಲ್ಲ, ಹಾಗಾಗಿ ಮೊಮ್ಮಕ್ಕಳು ಕೂಡ ಇಲ್ಲ.

ನಮ್ಮ ಮನೆಯಲ್ಲಿ ನಾವಿಬ್ಬರೇ ಇರುವುದು, ಒಂದು ವೇಳೆ ಹೆದರುವುದೇ ಆದರೆ ಆ ನಡುರಾತ್ರಿ ನಾನೊಬ್ಬನೇ ಹೆದರಬೇಕಿತ್ತು.

ನಾವಿಬ್ಬರೂ ಪ್ರೀತಿಸಿಯೇ ಮದುವೆಯಾದವರು. ಹಾಗಾಗಿ ಈ ವೃದ್ಧಾಪ್ಯದ ಹೊಸ್ತಿಲಿನಲ್ಲಿ, ಬದುಕಿನ ಕೊನೆಯ ದಿನಗಳಲ್ಲಿ ನನಗೆ ಅವಳು, ಅವಳಿಗೆ ನಾನು ಪರಸ್ಪರ ಮಗುವೇ ಆಗಿ ಬಿಟ್ಟಿದ್ದೆವು.

ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಅವಳ ವಯಸ್ಸು ಕೂಡ ಅಷ್ಟೇ. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಇಲ್ಲ.. ಇಲ್ಲ.. ಆ ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ.

ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!

ಏಕೆ..?

ಅದೂ ಕೂಡ ಅಷ್ಟೊಂದು ವಿಚಿತ್ರವಾಗಿಯೇ ಏಕೆ ?!

ನೀನು ಕನಸಿನಲ್ಲಿ ಮಾತಾಡುತ್ತಿದ್ದಿ ಜಾನಕಿ.. ಎಂದು ನಾನು ಹೇಳಿದರೆ ಅವಳು ಖಂಡಿತಾ ಬೇಜಾರು ಮಾಡಿಕೊಳ್ಳಬಹುದು, ಮಾತ್ರವಲ್ಲ ಅರುವತ್ತರ ನಂತರ ನಿನಗೆ ಅರಳು ಮರಳು ಆಗಿರಬಹುದು ಎನ್ನುವುದನ್ನು ಎಪ್ಪತ್ತರ ನಾನು ಹೇಳುವುದಾದರೂ ಹೇಗೆ? ಇಲ್ಲ.. ಇಲ್ಲ.. ಇದು ಸರಿಯಾಗುವುದಿಲ್ಲ ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿದೆ ನಾನು.

ಆದರೆ ಅವಳು ಕನಸಿನಲ್ಲಿ ಮುಂದೆ ಇನ್ನೇನು ಮಾತಾಡಬಹುದು ಎಂಬ ಸಣ್ಣ ಕುತೂಹಲವೊಂದು ಆ ನಡುರಾತ್ರಿ ನನ್ನಲ್ಲಿ ಏತಕ್ಕಾಗಿ ಹುಟ್ಟಿಕೊಂಡಿತು..?!

ಅದೂ ಅವಳ ಅಂತಹ ವಿಚಿತ್ರ ಮಾತುಗಳನ್ನು ಕೇಳಿದ ಮೇಲೆಯೂ? ಅದು ನನಗೆ ಗೊತ್ತಿಲ್ಲ!

ಆದರೆ ನಾನು ಅವಳ ಕನಸಿನ ಮಾತಿಗೆ ನನಗರಿವಿಲ್ಲದೆಯೇ ಪ್ರತಿಕ್ರಿಯಿಸಿ ಬಿಟ್ಟಿದ್ದೆ!

ಅವಳ ಮಾತಿಗೆ ಅವಳಂತೆಯೇ ನಿದ್ದೆಗಣ್ಣಿನಲ್ಲಿ ಉತ್ತರಿಸಲು ನಾನು ಮತ್ತೆ ಕಣ್ಣು ಮುಚ್ಚಿಕೊಂಡು ಮಲಗಿದೆ, ಮತ್ತು ನಾನು ಮಾತಾಡಲು ಶುರು ಮಾಡಿದೆ…

ಇರಲಿ ಬಿಡೇ ಜಾನಕಿ.. ಪಾಪದ ಹಕ್ಕಿ ಅದು. ಅದರ ಸಂಕಷ್ಟ ಅದಕ್ಕೆ. ಅದು ಹೇಗೆ ನಮ್ಮಂತಹ ತುಂಬು ವೃದ್ಧರಿಗೆ ಸಂಕಟ ತರಬಲ್ಲದು ಹೇಳು. ನನಗಂತು ಕಾಲು ನೋವು, ಈ ವಯಸ್ಸಿನಲ್ಲಿ ಹಕ್ಕಿಗಳ ಹಿಂದೆ ನಾನು ಬೀಳಲಾರೆ. ನನಗಿಸುತ್ತದೆ ಬಹುಶಃ ಆ ಹಕ್ಕಿಯ ಕುಟುಂಬವೇ ಯಾವುದೋ ಒಂದು ದೊಡ್ಡ ಆಪತ್ತಿನಲ್ಲಿ ಸಿಲುಕಿಕೊಂಡಿರಬಹುದು ಎಂದು. ಯಾಕೆ ಯಾವುದೋ ದುಷ್ಟ ಹಾವೊಂದು ಅದರ ಗೂಡು ಹೊಕ್ಕಿ ಮೊಟ್ಟೆ ಕಬಳಿಸುವ ಪ್ರಯತ್ನ ಮಾಡಿರಬಾರದು ಹೇಳು?.. ಎಂದು ಹೇಳಿ ನಾನು ಮಾತು ಮುಗಿಸಿದೆ!

ನನಗವಳು ಮತ್ತೆ ಕನಸಿನಲ್ಲಿ ನನ್ನ ಆ ಪ್ರತಿಕ್ರಿಯೆಗೆ ಉತ್ತರಿಸುತ್ತಾಳೋ ಇಲ್ಲವೋ ಎಂಬ ತೀವ್ರವಾದ ಕುತೂಹಲವಿತ್ತು. ಹಾಗಾಗಿಯೇ ನನ್ನ ಕಿವಿಗಳೆರಡೂ ಮತ್ತಷ್ಟು ನೆಟ್ಟಗಾದವು.

ಜಾನಕಿ ನಿಜವಾಗಿಯೂ ಮತ್ತೆ ಮಾತಾಡುತ್ತಾಳಾ? ಒಂದು ವೇಳೆ ಮಾತಾಡಿದರೂ ಅವಳು ಇನ್ನೇನು ವಿಚಿತ್ರವಾದದ್ದನ್ನು ಮಾತಾಡಬಹುದು ಎಂದು ನಾನು ಮನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ.. ಜಾನಕಿ ನನ್ನ ಮಾತಿಗೆ ಉತ್ತರಿಸಿಯೇ ಬಿಟ್ಟಿದ್ದಳು!

ಹೌದು, ಅವಳು ಮತ್ತೆ ಕನಸಿನಲ್ಲಿಯೇ ನನ್ನದೊಂದು ಮಾತಿಗೆ ಪ್ರತಿಕ್ರಿಯಿಸಿದ್ದಳು!!

– ಅದೂ ಹೌದು.. ನೀವು ಹೇಳಿದ್ದು ಕೂಡ ಸರಿಯೇ, ಆದರೆ ನನ್ನಮ್ಮ ಮಾತ್ರ ಹಕ್ಕಿಗಳು ಈ ರೀತಿ ವಿಚಿತ್ರವಾಗಿ ಕೂಗಿದರೆ ನಮಗೆನೋ ದೊಡ್ದ ಗಂಡಾಂತರವೇ ಆಗುವುದಿದೆ ಎಂದು ಬಲವಾಗಿ ನಂಬುತ್ತಿದ್ದಳು. ಆ ಭಯದಿಂದ ಅವಳು ಒಂದು ಕಡ್ಡಿ ಹಿಡಿದುಕೊಂಡು ಹಕ್ಕಿಯನ್ನು ದೂರಕ್ಕೆ ಓಡಿಸಲು ಮನೆ ಎದುರಿನ ಗುಡ್ಡಕ್ಕೆಯೇ ನೇರವಾಗಿ ಬಹಳಷ್ಟು ವೇಗವಾಗಿ ಓಡಿ ಬಿಡುತ್ತಿದ್ದಳು.

ಅವಳು ಮತ್ತೆ ಮಾತಾಡಿದರೆ ಬೇರೆ ಏನೋ ವಿಚಿತ್ರವಾದ್ದದ್ದನ್ನೇ ಮಾತಾಡಬಹುದು ಎಂದು ನಿರೀಕ್ಷಿಸಿದ್ದೆ ನಾನು. ಆದರೆ ಅವಳ ಆ ಮುಗ್ಧ ಮಾತಿನಿಂದಾಗಿ ನನ್ನ ಅತ್ತೆ ಪುಟ್ಟ ಕಡ್ಡಿಯೊಂದನ್ನು ಹಿಡಿದುಕೊಂಡು ಗುಡ್ಡದಲೆಲ್ಲಾ ಹಕ್ಕಿ ಓಡಿಸುತ್ತಾ ಹೋಗುವ ಆ ಕಾಲ್ಪನಿಕ ದೃಶ್ಯವೇ ಕಣ್ಣೆದುರು ಬಂದಂತಾಗಿ ನನಗೆ ಹಾಗೇ ಜೋರು ನಗು ಬಂತು.

ನಾನು ಮಲಗಿಕೊಂಡು ಕಣ್ಣು ಮುಚ್ಚಿಕೊಂಡು ನಗುತ್ತಲೇ ಹೇಳಿದೆ..

– ಹಹ್ಹಾ…ಹಹ್ಹಾ .. ಪಾಪದ ಅತ್ತೆ, ಅವರು ಮನೆಯ ಮಕ್ಕಳಿಗೆ ಕೂಡ ಒಂದು ಮಾತು ಬೈದಿದ್ದು ನಾನಂತು ಇಲ್ಲಿಯವರೆಗೆ ನೋಡಿಲ್ಲ. ಇನ್ನು ಆ ಪಾಪದ ಹಕ್ಕಿಗೆ ಅವರು ಈ ರೀತಿ ಎಲ್ಲಾ ಕಡ್ಡಿಯಿಂದ ಹೊಡೆಯಲು ಎಂದಾದರೂ ಸಾಧ್ಯವೇ… ಹಹ್ಹಾ. ತಮಾಷೆಯಾಗಿದೆ. ನಿಜಕ್ಕೂ ಬಹಳ ತಮಾಷೆಯಾಗಿದೆ ನಿನ್ನ ಈ ಮಾತುಗಳು… ಎಂದು ಹೇಳಿದೆ.

– ಹೊಡೆಯುತ್ತಿದ್ದಳೋ ಇಲ್ಲವೋ ಅದು ನನಗೆ ಗೊತ್ತಿಲ್ಲ, ಆದರೆ ಹೊಡೆಯಲು ಅವಳಿಗೆ ಮರದ ಮೇಲಿನ ಹಕ್ಕಿ ಅವಳ ಕೈಗೆ ಸಿಕ್ಕಿ ಬೀಳಬೇಕಲ್ಲಾ.. ಹಹ್ಹಾ… ಹಹ್ಹಾ…

ಅಷ್ಟನ್ನು ಹೇಳಿದ್ದ ಜಾನಕಿ ಅವಳ ಕನಸಿನ ಮಾತಿನಲ್ಲಿಯೂ ಕೂಡ ಹಾಗೇ ಒಮ್ಮೆ ನಕ್ಕು ಬಿಟ್ಟಿದ್ದಳು.

ಏಕೋ ಗೊತ್ತಿಲ್ಲ. ನಾವಿಬ್ಬರು ನಿಜ ಜೀವನದಲ್ಲಿ ಈ ರೀತಿ ನಕ್ಕು ಅದೆಷ್ಟೋ ವರ್ಷಗಳಾಗಿತ್ತು.

ಆ ರಾತ್ರಿ ನಮ್ಮಿಬ್ಬರ ನಡುವೆ ಕತ್ತಲು ಇದ್ದರೂ ನಮ್ಮಿಬ್ಬರ ಮಾತುಗಳ ಒಳಗೂ, ಹೊರಗೂ ಬರೀ ಸುಖ ನೀಡುವ ಬೆಳದಿಂಗಳೇ ಆವರಿಸಿಕೊಂಡಿತ್ತು.

ನನಗೆ ಅವಳ ಕನಸಿನ ಮಾತು ನಿಜಕ್ಕೂ ಖುಷಿ ಕೊಡತೊಡಗಿತು.

ಆ ದಿನದಿಂದ ನಾನು ನಡುರಾತ್ರಿ ಅವಳು ಏನಾದರೂ ಕನಸಲ್ಲಿ ಮಾತಾಡಲಿ ಎಂದೇ ಕಾಯುತ್ತಿದ್ದೆ.

ವಿಚಿತ್ರ ಎಂಬಂತೆ ಆ ದಿನದಿಂದ ಪ್ರತೀ ರಾತ್ರಿ ಗೋಡೆ ಗಡಿಯಾರ ಎರಡು ಗಂಟೆಯನ್ನು ಹೊಡೆದ ನಂತರ, ನಾನು ತೆರೆದ ಕಣ್ಣು ಮತ್ತೆ ಮುಚ್ಚಿದ ಕೂಡಲೇ ಅವಳು ಅವಳದ್ದೊಂದು ಆ ಕನಸಿನಲ್ಲಿ ಮಾತು ಶುರುಮಾಡಿ ಬಿಡುತ್ತಿದ್ದಳು. ಹೌದು, ಅವಳು ಅವಳಿಗರಿವಿಲ್ಲದಂತೆಯೇ ಮಾತಾಡುತ್ತಿದ್ದಳು; ಅದು ಯಾವುದೋ ಮಾಯೆಗೆ ಒಳಗಾದಂತೆಯೇ ಉತ್ತರಿಸುತ್ತಿದ್ದಳು.

ಆದರೆ ಅವಳದ್ದೊಂದು ಈ ಕಾಯಿಲೆ ನನ್ನ ನೀರಸ ಬದುಕಿಗೆ ವರವಾಗಿ ಬಿಟ್ಟಿತು. ಆ ದಿನದಿಂದ ಅವಳು ಕನಸಲ್ಲಿ ಮಾತಾಡಿದಾಗಲೆಲ್ಲ ನಾನು ಮಲಗಿಕೊಂಡು ಕಣ್ಣು ಮುಚ್ಚಿಕೊಂಡು ಹೆಚ್ಚು ಕಡಿಮೆ ಅವಳಂತೆಯೇ ಪ್ರತಿಕ್ರಿಯಿಸಿ ಆ ಒಂದು ಸಂವಹನವನ್ನು ನಿರಂತರವಾಗಿ ಮುಂದುವರಿಸುತ್ತಲೇ ಹೋದೆ!

ಹೌದು ದಿನಾಲೂ..!!

ಅವಳ ಮಾತು ನನ್ನ ಕಿವಿಗೆ ಬೀಳುತ್ತಿದ್ದವು, ನನ್ನ ಮಾತುಗಳು ಅವಳ ಕನಸಿಗೆ ಬಿದ್ದು ಅವಳ ಕನಸಿನೊಳಗಿನ ಮನಸ್ಸನ್ನು ತಟ್ಟುತ್ತಿದ್ದವು. ಇಬ್ಬರೂ ಬಹಳ ಸಹಜವಾಗಿಯೇ ಒಬ್ಬರಾದ ನಂತರ ಒಬ್ಬರು ಮಾತಾಡುತ್ತಿದ್ದೆವು. ಪ್ರತೀ ಮಾತಿಗೂ ಪ್ರತಿಕ್ರಿಯಿಸುತ್ತಿದ್ದೆವು. ಈ ರೀತಿಯಾಗಿ ನಮ್ಮದೊಂದು ನಡು ರಾತ್ರಿಯ ಸಂಭಾಷಣೆ ನಿರಂತರವಾಗಿ ಮುಂದುವರಿದಿತ್ತು!

ಅವಳಾಡಿದ ಎಲ್ಲಾ ಮಾತುಗಳು ನನಗೆ ನೆನಪಿದೆ. ಆದರೆ ಅವಳಿಗೆ?.. ಅದು ನನಗೆ ಗೊತ್ತಿಲ್ಲ!

ಏಕೆಂದರೆ ರಾತ್ರಿ ಕಳೆದು ಬೆಳಗೆ ಆದರೆ ಅವಳು ನಾವು ಮಾತಾಡಿದ ಯಾವ ವಿಷಯದ ಬಗ್ಗೆಯೂ ನನ್ನಲ್ಲಿ ಕೇಳುತ್ತಿರಲಿಲ್ಲ, ಅದರ ಬಗ್ಗೆ ಚರ್ಚಿಸುತ್ತಲೂ ಇರಲಿಲ್ಲ!!

ಕನಸಿನಲ್ಲಿ ಅಷ್ಟೇ ಅದು ಯಾವುದೋ ಮಾಯೆಯೊಳಗೆ ಸಿಲುಕಿಕೊಂಡಂತೆ ಅವಳು ಅಂತಹದ್ದೊಂದು ಮಾತುಗಳನ್ನು ಆಡುತ್ತಿದ್ದಳು.

ಒಂದು ದಿನ ಅವಳು ರಾತ್ರಿ ಎರಡು ಗಂಟೆಯ ಕನಸಿನ ಮಾತಲ್ಲಿ ಈ ರೀತಿಯಾಗಿ ಹೇಳಿ ಬಿಟ್ಟಳು.

– ಅಯ್ಯೋ.. ನಿಮಗೆ ಎಷ್ಟು ಬಾರಿ ಹೇಳಬೇಕು, ಈ ಉರೂಟಿನ ಗುಂಡಗಿನ ಸೌಟು ಇಡ್ಲಿಗೆ ಸಾಂಬಾರು ಬಡಿಸಲು, ಆ ಚಟ್ಟೆಯ ಸೌಟು ಶೀರಾ(ಕೇಸರಿ ಬಾತ್) ಬಡಿಸಲು. ಅಬ್ಬಾ, ಅದೆಂತಹ ಮರೆವು ನಿಮಗೆ. ಅಳಿಯಂದಿರು, ಗಂಡಿನ ಕಡೆಯವರು ಎಲ್ಲರೂ ಬರುವ ಹೊತ್ತಾಯಿತು. ಬೇಗ ಬೇಗ ಆಯಾಯ ಪಾತ್ರೆಗಳಿಗೆ ಅದಕ್ಕೊಪ್ಪುವ ಸೌಟುಗಳನ್ನು ಈಗಲೇ ಹಾಕಿ ಬಿಡಿ.

ನಾನು ಮಲಗಿದ್ದಲ್ಲಿಂದಲೇ ಕಣ್ಣು ಮುಚ್ಚಿಯೇ ಯೋಚಿಸಿದೆ. ಅರೇ.. ನಮಗೆ ಮಕ್ಕಳೇ ಇಲ್ಲ, ಇನ್ನು ಮಗಳು ಎಲ್ಲಿ, ಅಳಿಯ ಎಲ್ಲಿ. ಆದರೂ ಅವಳದ್ದೊಂದು ಆ ಕನಸಿನ ಮಾತಿಗೆ ನನ್ನಲ್ಲೊಂದು ಖುಷಿಯ ಹೂವು ಹಾಗೇ ಅರಳಿಕೊಂಡಿತು.

-ಹೌದಲ್ಲವೇ.. ಪುನಃ ಮರೆತೆ ನೋಡು ಜಾನಕಿ. ನಿಜ ಹೇಳಬೇಕೆಂದರೆ ಇದೆಲ್ಲಾ ನನಗೆ ಗೊತ್ತೇ ಆಗುವುದಿಲ್ಲ ಹಾಗೂ ಪಕ್ಕನೆ ನೆನಪಿಗೂ ಬರುವುದಿಲ್ಲ. ಊಟದ ವಿಷಯ ಬಂದಾಗಲಂತು ಪ್ರತೀ ಸಲ ಇಂತಹ ತಪ್ಪುಗಳು ನನ್ನಿಂದ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಸಾರಿನ ಬಾಲ್ದಿಯನ್ನು ಹಿಡಿದುಕೊಂಡು ಎಲೆಗೆ ಅನ್ನ ಬೀಳುವುದಕ್ಕಿಂತ ಮೊದಲೇ ನಾನು ಊಟದ ಪಂಕ್ತಿಗೆ ದೌಡಾಯಿಸಿದರೆ, ಈ ಅಲಸಂಡೆ ಪಲ್ಯವನ್ನು ಎಲ್ಲಕ್ಕಿಂತ ಕೊನೆಯಲ್ಲಿ ಬಡಿಸುವುದಕ್ಕಾಗಿ ಹಾಗೇ ಪಕ್ಕದಲ್ಲಿ ಇಟ್ಟಿರುತ್ತೀನಿ ನೋಡು. ಹಹ್ಹಾ.. ಹಹ್ಹಾ. ಅಷ್ಟು ಮಾತ್ರವಲ್ಲ ಎಲೆಯ ಯಾವ ಯಾವ ಜಾಗಗಳಲ್ಲಿ ಈ ಪಲ್ಯ, ಗಶಿ, ಉಪ್ಪುಕರಿ, ಕೊದ್ದೆಲ್ ಹಾಗೂ ಮೆಣಸ್ಕಾಯಿಗಳನ್ನು ಹಾಕಬೇಕು ಎಂಬುವುದು ಸಹ ನನಗೆ ಗೊತ್ತೇ ಆಗುವುದಿಲ್ಲ.

– ಹಹ್ಹಾ… ಹಹ್ಹಾ… ಅದು ನನಗೆ ಗೊತ್ತಿಲ್ಲವೇ. ನಿಮಗೆ ಊಟದ ಸಭೆಗೆ ಸರಿಯಾಗಿ ಬಡಿಸಲೇ ಬರುವುದಿಲ್ಲ ಎನ್ನುವುದು ನನಗೆ ಮಾತ್ರವಲ್ಲ ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ. ಬಹಳ ಸುಲಭ ಆದಂತಹ ಎಲೆಯ ಮೇಲಿನ ಅನ್ನಕ್ಕೆ ಮಿಳ್ಳೆ ತುಪ್ಪ ಸೀದಾ ಸುರಿದುಕೊಂಡು ಹೋಗುವ ಕೆಲಸವನ್ನು ಸಹ ನೀವು ಸರಿಯಾಗಿ ಮಾಡಿದ್ದನ್ನು ನಾನಂತು ನೋಡಿಲ್ಲ. ಬಗ್ಗಿ ಬಗ್ಗಿ ಈ ಹಪ್ಪಳ, ಸಂಡಿಗೆ, ಪೋಡಿಗಳನ್ನು ಹಾಕಿಕೊಂಡು ಹೋಗುವಂತೆ ತುಪ್ಪವನ್ನು ಸಹ ಅನ್ನದ ಮೇಲೆ ಬಗ್ಗಿಯೇ ಹಾಕುತ್ತೀರಿ ನೀವು. ನಮ್ಮ ಮದುವೆಯಾದ ಆರಂಭದಲ್ಲಿ ನನ್ನ ಅಪ್ಪನೇ ನಿಮಗೆ ಹೇಳಿದ್ದರು “ಓ.. ರಾಮಚಂದ್ರ, ಈ ರೀತಿ ಬಗ್ಗಿಕೊಂಡು ಅನ್ನಕ್ಕೆ ತುಪ್ಪ ಹಾಕಬಾರದಪ್ಪಾ. ಆಮೇಲೆ ಜೀವನದಲ್ಲಿ ಮುಂದೆ ನೀನು ಮೇಲೆಳುವುದೇ ಇಲ್ಲ, ಸದಾ ಬಗ್ಗಿಕೊಂಡೇ ಇರಬೇಕಾಗುತ್ತದೆ ನೋಡು. ಇದನ್ನು ಅದೆಷ್ಟು ಬಾರಿ ನಿನಗೆ ಹೇಳಿದ್ದೆ ಎಂದು ಸ್ವತಃ ನನಗೆಯೇ ನೆನಪಿಲ್ಲ. ಇದನ್ನೆಲ್ಲಾ ಮರೆಯಬೇಡ ರಾಮಚಂದ್ರ. ಏಕೆಂದರೆ ಈ ರೀತಿಯಾದ ಒಂದು ನಂಬಿಕೆಯೇ ನಮ್ಮಲ್ಲಿ ಹಿಂದಿನಿಂದ ಉಂಟು ನೋಡು, ಇನ್ನಾದರೂ ನೆಟ್ಟಗೆ ನಿಂತುಕೊಂಡು ಹಾಗೇ ಅನ್ನಕ್ಕೆ ತುಪ್ಪ ಸುರಿಯುತ್ತಾ ಹೋಗು ..” ನನ್ನ ಅಪ್ಪ ಹೇಳಿದ್ದ ಆ ಮಾತು ನನಗೀಗಲೂ ನೆನಪಿದೆ…ಹಹ್ಹಾ .. ಹಹ್ಹಾ.

ಅವಳು ಪೌರ್ಣಮಿಯ ಚಂದಿರನಂತೆಯೇ ಆ ಕನಸಿನಲ್ಲಿಯೂ ನಕ್ಕು ಬಿಟ್ಟಳು.

ಅವಳ ಆ ಮಾತು ಕೇಳಿ ನಾನೂ ನಕ್ಕೆ. ನನಗೆ ನನ್ನ ಮಾವ ನೆನಪಾದರು ಜೊತೆಗೆ ನಮ್ಮ ಮದುವೆಯ ಆರಂಭದ ದಿನಗಳೂ ನೆನಪಾಗಿ ಬಿಟ್ಟವು.

– ಹಹ್ಹಾ… ಹಹ್ಹಾ.. ಹಾಗಾದರೆ ತುಪ್ಪವನ್ನು ಎಲೆಗೆ ನೆಟ್ಟಗೆ ನಿಂತುಕೊಂಡು ಸುರಿಯುವವರು ಮುಂದೆ ವಯಸ್ಸಾದರೂ ಸಹ, ಹಣ್ಣು ಹಣ್ಣು ಮುದುಕ ಮುದುಕಿಯಾದರೂ ಕೂಡ ಯಾವುದಕ್ಕೂ ಬಗ್ಗುವುದಿಲ್ಲ, ಅವರ ಬೆನ್ನು ಹುರಿಯು ಕೂಡ ಬಾಗುವುದಿಲ್ಲ ಎಂದೇ ಆಯಿತು.. ಹಹ್ಹಾ.. ಹಹ್ಹಾ..

ಅವಳೂ ಆ ಮಾತಿಗೆ ಮತ್ತಷ್ಟು ನಕ್ಕಳು.

ರಾತ್ರಿಗಳು ನನಗೆ ಹಿತವಾಗತೊಡಗಿದವು.

ಪ್ರತೀ ದಿನವೂ ನಮ್ಮ ನಡುವೆ ಕನಸಿನದ್ದೊಂದು ಸಂಭಾಷಣೆ ಇರುತ್ತಿತ್ತು. ಅದರಲ್ಲಿ ನನ್ನ ಮತ್ತು ಅವಳ ಬದುಕಿನ ಸಂಭ್ರಮದ ಘಳಿಗೆಗಳು ಇರುತ್ತಿದ್ದವು. ಎಂದಿಗೂ ಸಂಭವಿಸದಂತಹ ಕೇವಲ ಅವಳ ಮನಸ್ಸಿಗೆ ಬಂದಂತಹ ಕಾಲ್ಪನಿಕ ಘಟನೆಗಳೂ ಇರುತ್ತಿದ್ದವು, ಸಂಭವಿಸಿಯೂ ಪರಸ್ಪರರಿಗೆ ಗೊತ್ತಿರದ ನಮ್ಮಿಬ್ಬರ ಮನದಾಳದ ಮಾತುಗಳು ಕೂಡ ಅಲ್ಲಿರುತ್ತಿದ್ದವು.

ಒಟ್ಟಿನಲ್ಲಿ ನಮ್ಮ ಕನಸಿನ ಮಾತುಗಳಲ್ಲಿ ನಾವು ಕಾಲನೌಕೆ ಏರಿ ಪ್ರಯಾಣಿಸಿದಂತೆಯೇ ನಮ್ಮ ಯೌವನಕ್ಕೆ, ಬಾಲ್ಯಕ್ಕೆ, ಮುಪ್ಪಿಗೆ ಹೀಗೆ ಯಾವ ಕಾಲಕ್ಕೆ ಹೋಗಿ ಬರಲು ನಮಗೆ ಮನಸ್ಸಾಗುತ್ತದೆಯೋ ಆ ಕಾಲಕ್ಕೆ ಆವಾಗವಾಗ ಹೋಗಿ ಬರುತ್ತಿದ್ದೆವು.

ನನಗದು ನಿಜಕ್ಕೂ ಖುಷಿ ನೀಡುತ್ತಿತ್ತು. ಆದರೆ ಜಾನಕಿಗೆ? ಗೊತ್ತಿಲ್ಲ! ಏಕೆಂದರೆ ಅವಳು ಕನಸಿನಲ್ಲಿ ಏನು ಮಾತಾಡಿದ್ದಾಳೆ, ನಾನದಕ್ಕೆ ಏನು ಪ್ರತಿಕ್ರಿಯಿಸಿದ್ದೆ ಎನ್ನುವುದೇ ಗೊತ್ತಿಲ್ಲದಂತೆ ಇರುತ್ತಿದ್ದಳು!

ಮತ್ತೊಂದು ದಿನ ರಾತ್ರಿ ಎರಡರ ಕನಸಿನಲ್ಲಿ ಜಾನಕಿ ಈ ಮಾತುಗಳನ್ನು ಹೇಳಿದ್ದಳು..

– ಅದು ಹೌದು… ನೀವು ಕಾಲೇಜಿನಲ್ಲಿ ನನಗೊಂದು ನವಿಲುಗರಿ ಕೊಟ್ಟಿದ್ದೀರಿ ಅಲ್ಲವೇ. ಹೇಳಿ ಅದನ್ನು ಏತಕ್ಕಾಗಿ ನೀವು ನನಗೆಯೇ ಕೊಟ್ಟಿರಿ?

ಅವಳೀಗ ನೇರವಾಗಿ ಕಾಲೇಜಿನ ಕಾರಿಡಾರಿಗೆನೇ ಬಂದು ನಿಂತು ಬಿಟ್ಟಿದ್ದಳು. ನನ್ನ ಮನಸ್ಸು ಹಾಗೇ ಹರೆಯಕ್ಕೆ ಜಾರಿತು.

– ಅದು… ಅದು ನವಿಲುಗರಿ ಮರಿ ಹಾಕುತ್ತದೆಯಂತೆ, ಅದಕ್ಕಾಗಿಯೇ ಕೊಟ್ಟಿದ್ದೆ.. ಅಂದೆ ನಾನು.

ಅವಳು ನಕ್ಕಳು.

ಅವಳು ನನ್ನಿಂದ ಅದೊಂದು ಪ್ರೇಮದ ಕಾಣಿಕೆ, ಪ್ರೀತಿಯ ಸಂಕೇತ ಎಂಬಂತಹ ಉತ್ತರಗಳನ್ನು ನಿರೀಕ್ಷಿಸಿದ್ದಳು ಎಂದು ಕಾಣುತ್ತದೆ.

ನಾನು ಪುನಃ ನಗುತ್ತಲೇ… ಏಕೆ, ಅದು ಮರಿ ಹಾಕಲಿಲ್ಲವೇ? ಎಂದು ಕೇಳಿದೆ.

– ಅವಶ್ಯವಾಗಿ ಮರಿ ಹಾಕಿತ್ತು. ಅದನ್ನು ನಾನು ಮದುವೆಯಾಗಿ ಈ ಮನೆಗೆ ಬಂದಾಗ ಇಲ್ಲಿಗೂ ತಂದಿದ್ದೆ. ಕಪಾಟಿನಲ್ಲಿ ನನ್ನ ಸೀರೆಗಳ ನಡುವೆಯೇ ಅದನ್ನು ಇರಿಸಿದ್ದೆ.

– ಏನು ಹೇಳುತ್ತಿದ್ದಿ ಜಾನಕಿ… ಹೌದೇ? ನಿಜವಾಗಿಯೂ ನಾನು ಕಾಲೇಜಿನಲ್ಲಿ ಆ ದಿನ ಕೊಟ್ಟ ನವಿಲುಗರಿ ಈಗಲೂ ನಿನ್ನ ಬಳಿಯೇ, ಅದೂ ನಮ್ಮ ಮನೆಯಲ್ಲಿಯೇ ಇದೆಯೇ.. ಹಾಗಾದರೆ ಅದನೊಮ್ಮೆ ನಾನು ನೋಡಬೇಕಲ್ಲಾ.

– ಆದರೆ ಈಗ ಅದು ಇಲ್ಲ..!

– ಇಲ್ಲವೇ.. ಏಕೆ? ಏನಾಯಿತದು.

– ಹೇಳಿದೆನಲ್ಲಾ ಅದು ಮರಿ ಹಾಕಿತು. ಆದರೆ ಆ ಮರಿಗಳು ಮತ್ತೆ ಗರಿಗಳಾಗಲಿಲ್ಲ. ಅವುಗಳು ನವಿಲು ಮರಿಗಳೇ ಆದವು. ನೋಡಿ ನಮ್ಮ ತೋಟಕ್ಕೆ ಆ ಗುಡ್ಡದಿಂದ ಹಿಂಡು ಹಿಂಡು ನವಿಲುಗಳು ಬರುತ್ತದೆಯಲ್ಲವೇ. ಅದೆಲ್ಲಾ ಮೂಲತಃ ಎಲ್ಲಿಂದ ಬಂದಿದ್ದು ಎಂದು ನೀವು ತಿಳಿದಿದ್ದೀರಿ. ಅದೆಲ್ಲವೂ ಹುಟ್ಟಿದ್ದೇ ನೀವೂ ಕೊಟ್ಟ ಆ ಒಂದು ನವಿಲುಗರಿ ಮರಿ ಹಾಕುವ ಮೂಲಕವೇ. ನಿಮ್ಮ ಆ ನವಿಲುಗರಿ ಕಪಾಟಿನಲ್ಲಿಯೇ ಮರಿ ಹಾಕಿದ್ದಾಗ, ಆ ಎಲ್ಲಾ ಪುಟ್ಟ ಪುಟ್ಟ ನವಿಲು ಮರಿಗಳನ್ನು ನಾನೇ ನನ್ನ ಕೈಯಾರೆ ಎತ್ತಿಕೊಂಡು ಹೋಗಿ ಆ ಎದುರಿನ ಗುಡ್ಡಕ್ಕೆ ಬಿಟ್ಟು ಬಂದಿದ್ದೆ.. ಅಂದಳು ಜಾನಕಿ.

– ಹಹ್ಹಾ. . ಹಹ್ಹಾ… ನಾನು ಹಾಗೇ ಜೋರಾಗಿ ನಕ್ಕೆ.

ಅವಳ ಆ ಕುಶಾಲಿನ ಮಾತು ಕೇಳಿ ಅದಕ್ಕೆ ನಕ್ಕು ನಕ್ಕು ನನ್ನ ಹೃದಯ ಹಾಗೇ ಹತ್ತಿಯಷ್ಟು ಹಗುರವಾಯಿತು..

ಅವಳು ಕೂಡ ಹಾಗೇ ಕನಸಿನಲ್ಲಿ ಮೆಲುವಾಗಿಯೇ ನಕ್ಕಳು. ನಕ್ಕು ಮತ್ತೆ ಹೇಳಿದಳು..

– ಕಾಲೇಜು ದಿನಗಳಲ್ಲಿ ನಿಮ್ಮ ಮೇಲೆ ನನಗೊಂದು ಕೋಪವಿತ್ತು..

ಇದನ್ನು ಹೇಳುವಾಗ ಅವಳ ಆ ಮಾತಿನಲ್ಲಿ ತುಸು ಮುನಿಸಿತ್ತು.

– ಏನದು..?

ನನಗೆ ಗೊತ್ತಾಗಲಿಲ್ಲ. ಅದಕ್ಕಾಗಿ ಅವಳಲ್ಲಿಯೇ ಕೇಳಿದೆ.

ನೀನು ಕನಸಿನಲ್ಲಿ ಮಾತಾಡುತ್ತಿದ್ದಿ ಜಾನಕಿ.. ಎಂದು ನಾನು ಹೇಳಿದರೆ ಅವಳು ಖಂಡಿತಾ ಬೇಜಾರು ಮಾಡಿಕೊಳ್ಳಬಹುದು, ಮಾತ್ರವಲ್ಲ ಅರುವತ್ತರ ನಂತರ ನಿನಗೆ ಅರಳು ಮರಳು ಆಗಿರಬಹುದು ಎನ್ನುವುದನ್ನು ಎಪ್ಪತ್ತರ ನಾನು ಹೇಳುವುದಾದರೂ ಹೇಗೆ?

– ಎಲ್ಲಾ ಪ್ರೇಮಿಗಳು ಪ್ರೇಮ ಪತ್ರ ಬರೆಯುತ್ತಾರೆ. ಆದರೆ ನೀವು ನನಗೆ ಬರೆಯಲೇ ಇಲ್ಲ. ನಾನು ಅದೆಷ್ಟು ಆಸೆಯಿಂದ ಕಾದಿದ್ದೇ ಗೊತ್ತೇ.. ನನ್ನ ರಾಮಚಂದ್ರ ಕೂಡ ನನಗೊಂದು ಪತ್ರ ಬರೆಯುತ್ತಾನೆ ಎಂದು.

ಬಹುಶಃ ಅವಳು ಕನಸಿನೊಳಗೆಯೇ ಈಗ ಆಳವಾದ ಪ್ರೀತಿಗೆನೇ ಜಾರಿದ್ದಳು. ನಾನು ಮತ್ತಷ್ಟು ಪ್ರೇಮ ಖೈದಿಯಾದೆ.

ಈಗ ನಾನು ಏನಾದರೂ ಹೇಳಬೇಕಿತ್ತು. ಇಲ್ಲದಿದ್ದರೆ ಅವಳು ನೊಂದುಕೊಳ್ಳುತ್ತಾಳೆ.

ಅದಕ್ಕಾಗಿ ನಾನು ಇದನ್ನೇ ಹೇಳಿದೆ..

– ಅದು ಹಾಗಲ್ಲ ಜಾನಕಿ. ಈ ಪ್ರೇಮ ಪತ್ರ ಎಲ್ಲಾ ಎಲ್ಲರೂ ಸಾಮಾನ್ಯವಾಗಿ ಬರೆಯುತ್ತಾರೆ. ಆದರೆ ನಾನು ನಮ್ಮಿಬ್ಬರ ಹೆಸರು ಬೇರೆ ರೀತಿಯಲ್ಲಿ ಸದಾ ಒಟ್ಟಿಗೆಯೇ ಇರಬೇಕೆಂದು ನಮ್ಮ ಕಾಲೇಜಿನಲ್ಲಿರುವ ಆ ದೊಡ್ಡ ಹಾಳೆ ಮರವನ್ನು ಕಲ್ಲಿನಿಂದ ಕೆತ್ತಿ ಕೆತ್ತಿ “ಜಾನಕಿ ರಾಮ” ಎಂದು ಶಾಶ್ವತವಾಗಿಯೇ ನಮ್ಮಿಬ್ಬರ ಹೆಸರು ಮೂಡಿಸಿದ್ದೆ ಗೊತ್ತೇ. ಏಕೆ, ನೀನದನ್ನು ನೋಡಿರಲ್ಲವೇ?

ಅವಳಿಗೆ ಅದೇನೋ ನೆನಪಾಯಿತು. ಅವಳು ನೆನಪಾದ ಅದನ್ನೇ ನನಗೂ ಹೇಳಿದಳು.

– ಅದು ನನಗೆ ನೆನಪಿದೆ, ಆದರೆ ಅದು ನೆನಪಾದಾಗಲೆಲ್ಲಾ ನನಗೆ ನೀವು ಕೆಲಸದಿಂದ ನಿವೃತ್ತರಾದ ನಂತರ ಊರಲ್ಲಿ ಪ್ರತೀ ಸಲವೂ ವನಮಹೋತ್ಸವದ ದಿನ ಗಿಡ ನೆಟ್ಟು ಭಾಷಣ ಬಿಗಿಯುವಾಗ ಹೇಳುತ್ತಿದ್ದ “ಯಾರೂ ಕೂಡ ಗಿಡ ಮರಗಳನ್ನು ಕಡಿಯಬಾರದು, ಮರಗಳ ಮೇಲೆ, ಬಂಡೆಯ ಮೇಲೆ, ಪ್ರಕೃತಿಯ ಮೇಲೆ ಮಾನವ ಎಂದಿಗೂ ವಿಕೃತಿ ಮೆರೆಯಬಾರದು..” ಎಂಬ ನಿಮ್ಮ ಪರಿಸರ ಪ್ರೇಮಿ ಭಾಷಣದ ಈ ಒಂದು ಸಾಲು ಕೂಡ ಅಷ್ಟೇ ನೆನಪಾಗುತ್ತದೆ ನೋಡಿ ನನಗೆ.. ಹಹ್ಹಾ.. ಹಹ್ಹಾ..

ಅವಳ ಕುಹಕ ಅರ್ಥವಾಗಿ ನಾನು ಸಹ ಮನಸ್ಸಿಂದಲೇ ಬಹಳಷ್ಟು ಹೃದಯದಿಂದಲೇ ಜೋರಾಗಿ, ಅವಳಿಗಿಂತಲೂ ಜೋರಾಗಿ ನಕ್ಕು ಬಿಟ್ಟೆ… ಹಹ್ಹಾ… ಹಹ್ಹಾ..

ಅದೇನೋ ವಿವರಿಸಲಾಗದ ಉಲ್ಲಾಸ ನಮ್ಮಿಬ್ಬರಲ್ಲಿಯೂ ಹಾಗೇ ತುಂಬಿಕೊಂಡು ಬಿಟ್ಟಿತ್ತು..

ಹಾಗಾಗಿ ಇಬ್ಬರೂ ಸ್ವಲ್ಪ ಹೊತ್ತು ಏನನ್ನೂ ಮಾತಾಡದೇ ಆ ಕ್ಷಣವನ್ನು ಆಸ್ವಾದಿಸುತ್ತಾ ಮೌನಕ್ಕೆ ಜಾರಿ ಬಿಟ್ಟೆವು.

“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
ನೀ ದೇಹದೊಳಗೊ ನಿನ್ನೊಳು ದೇಹವೋ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೋ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ…”

ಆವರಿಸಿದ್ದ ಕ್ಷಣ ಕಾಲದ ಮೌನ ಮುರಿಯುವುದಕ್ಕಾಗಿ ಜಾನಕಿ ಅವಳಿಷ್ಟದ ದೇವರ ನಾಮವನ್ನು ಹಾಗೇ ಮಧುರವಾಗಿಯೇ ಹಾಡಿದ್ದಳು.

– ನೀನಿದನ್ನು ಕಾಲೇಜಿನಲ್ಲಿ ಕೂಡ ತುಂಬಾ ಸಲ ಹಾಡಿದ್ದೆ ಅಲ್ಲವೇ ಜಾನಕಿ? ಹೌದೌದು.. ನನಗೆ ಸರಿಯಾಗಿ ನೆನಪಿದೆ.. ಎಂದು ಹೇಳಿದೆ.

– ಹಹ್ಹಾ… ಹಹ್ಹಾ.. ಅವಳು ಹಾಗೇ ನಕ್ಕಳು.

– ಏನಾಯಿತು .? ಕೇಳಿದೆ.

– ಕಾಲೇಜಿನಲ್ಲಿ ಮಾತ್ರವಲ್ಲ, ಶಾಲೆಯಲ್ಲಿ ಕೂಡ ಹಾಡಿದ್ದೆ.. ಹಹ್ಹಾ.. ಹಹ್ಹಾ..

ಮತ್ತೆ ಅದು ನೆನಪಾಗಿ.. ಓಹ್.. ಹೌದಲ್ಲವೇ.. ಶಾಲೆಯಲ್ಲೂ ಕೂಡ ಇದನ್ನು ಹಾಡುತ್ತಿದ್ದೆ. ಈಗ ನೀನು ಹೇಳಿದ ಕೂಡಲೇ ನೆನಪಾಯಿತು ನೋಡು.. ಹಹ್ಹಾ.. ಹಹ್ಹಾ.. ಎಂದು ನಾನು ಸಹ ಅವಳ ನಗುವಿಗೆ ಇನ್ನಷ್ಟು ನಗು ಬೆರೆಸಿ ಬಿಟ್ಟೆ.

ವೃದ್ಧಾಪ್ಯ ಇಷ್ಟು ಚೆನ್ನಾಗಿ ಅರಳಬಲ್ಲದು ಎಂದು ನನಗೇ ಗೊತ್ತೇ ಇರಲಿಲ್ಲ. ಕನಸಿನ ಲೋಕದಲ್ಲಿ ನಾನು ಮತ್ತೆ ಮದುಮಗನಾಗಿದ್ದೆ, ಯುವಕನಾಗಿದ್ದೆ, ಕಾಲೇಜು ದಿನಗಳ ಆ ಪ್ರಿಯಕರ ಕೂಡ ಆಗಿ ಹೋದೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಎಂದಿಗೂ ಹುಟ್ಟದ ಮಗಳೊಬ್ಬಳು ನಮ್ಮ ಕನಸಿನಲ್ಲಿ ಹುಟ್ಟಿದ್ದಳು, ನಮಗೊಬ್ಬ ಒಳ್ಳೆಯ ಅಳಿಯನೂ ಸಹ ನಮ್ಮ ಕನಸಿನಲ್ಲಿಯೇ ಸಿಕ್ಕಿದ್ದ.

ಒಟ್ಟಿನಲ್ಲಿ ನಾನಂತು ಸುಖವಾಗಿದ್ದೆ. ನನ್ನ ರಾತ್ರಿಗಳು ಸಹ ಸುಖಕರವಾಗಿದ್ದವು. ಈ ರೀತಿಯಾಗಿ ಹೆಚ್ಚು ಕಡಿಮೆ ಒಂದು ತಿಂಗಳೇ ಕಳೆದು ಹೋಯಿತು.

“ಡಾಂಯ್….. ಡಾಂಯ್…..”

ಅದೊಂದು ರಾತ್ರಿ ಮತ್ತೊಮ್ಮೆ ಎಂದಿನಂತೆ ಎರಡು ಗಂಟೆಯ ಸಮಯ.

ಗೋಡೆ ಗಡಿಯಾರ ಕೂಡ ಎರಡು ಸಲ ಎಂದಿನಂತೆ ಬಡಿದೇ ಸಮಯ ಹೇಳಿತ್ತು.

ನನ್ನ ಕಿವಿಗಳು ಕೂಡ ಸಹಜವಾಗಿಯೇ ಜಾನಕಿಯ ಎಂದಿನ ಕನಸಿನ ಮಾತುಗಳಿಗಾಗಿ ನೆಟ್ಟಗಾಗಿದ್ದವು, ಹರಿತವಾಗಿದ್ದವು,..

ಇಲ್ಲ…!

ಕೇಳಲಿಲ್ಲ..!

ಜಾನಕಿಯ ಮಾತು ಆ ದಿನ ಕೇಳಲಿಲ್ಲ!!

ಹೌದು ಆ ದಿನ ಜಾನಕಿ ಕನಸಿಗೆ ಬಂದು ಮಾತಾಡಲೇ ಇಲ್ಲ…!

ನಾನು ಮತ್ತೂ ಕಾದೆ..

ಸಮಯ ಹಾಗೇ ಉರುಳಿತು.

ಟಿಕ್.. ಟಿಕ್ ಎಂದು ಮೆಲ್ಲಗೆ ಚಲಿಸುತ್ತಿದ್ದ ಗಡಿಯಾರದ ಮುಳ್ಳುಗಳ ಸದ್ದು ಕೂಡ ನನಗೆ ಬಹಳ ಜೋರಾಗಿ ಸ್ಪಷ್ಟವಾಗಿ ಕೇಳುವ ಮೂಲಕ ಅದು ನನಗೆ ಗಡಿಯಾರದ ಉಚ್ಛ್ವಾಸ ನಿಶ್ವಾಸದಂತೆಯೇ ಕಂಡಿತು.

ಆದರೂ ಜಾನಕಿಯದ್ದೊಂದು ಎಂದಿನ ಮಾತಿಲ್ಲ!

“ಡಾಂಯ್… ಡಾಂಯ್….. ಡಾಂಯ್… ”

ಸಮಯ ಸರಿದು ಹಾಗೇ ಗಂಟೆ ಮೂರಾಯಿತು!

ಉಹೂಂ…. ಜಾನಕಿ ಕನಸಿಗೆ ಬರುತ್ತಿಲ್ಲ..ಅವಳು ಎಂದಿನಂತೆ ಮಾತಾಡುತ್ತಿಲ್ಲ!

ನನಗೆ ನನ್ನ ಜಾನಕಿ ಮಾತಾಡಬೇಕಿತ್ತು. ಆದರೆ.. ಆದರೆ ಏಕೆ ಈ ದಿನ ಹೀಗೆ ಆಗುತ್ತಿದೆ..!!

ಹೌದು ಏಕೆ?!

ಅವಳಿಗೇನಾದರೂ…?

ಇಲ್ಲ.. ಇಲ್ಲ… ನನ್ನ ಜಾನಕಿಗೆ ಏನೂ ಆಗಲು ಸಾಧ್ಯವಿಲ್ಲ!

ಅದು ನೆನಪಾಗಿ ಮಲಗಿದ್ದಲ್ಲಿಂದಲೇ ರಪ್ಪನೇ ಕಣ್ಣು ತೆರೆದು ಕೂಡಲೇ ಅವಳತ್ತ ತಿರುಗಿ ನೋಡಿದೆ.

ಅವಳು ಮಲಗಿದ್ದಳು!

ಅವಳ ಮೂಗಿನ ಬಳಿ ಕೈ ಹಿಡಿದು ನೋಡಿದೆ.

ಉಸಿರಿತ್ತು!

ಹೌದು… ಜಾನಕಿ ಸಹಜವಾಗಿಯೇ ಉಸಿರಾಡುತ್ತಿದ್ದಳು.

ನನಗೆ ನನ್ನ ಉಸಿರೇ ಆ ಕ್ಷಣ ಮರಳಿ ಬಂದಂತಾಯಿತು.

ಮತ್ತೆ ಬಹಳಷ್ಟು ನೆಮ್ಮದಿಯೊಂದಿಗೆ ಹಾಗೇ ಕಣ್ಣು ಮುಚ್ಚಿ ಮಲಗಿದೆ..!!

ಆದರೆ ಈ ಬಾರಿ ನಾನೇ ಅವಳನ್ನು ಕನಸಲ್ಲಿ ಮಾತಾಡಿಸುವ ಪ್ರಯತ್ನವೊಂದನ್ನು ಮಾಡಲು ನಿರ್ಧರಿಸಿದೆ; ಹೌದು ಮೊದಲ ಬಾರಿಗೆ!

ಮತ್ತೆ ಸರಿಯಾಗಿ ಮಲಗಿಕೊಂಡು ಹಾಗೇ ಮಲಗಿದ್ದಲ್ಲಿಂದ ಕಣ್ಣು ಮುಚ್ಚಿಕೊಂಡೇ ನಾನು ಹೇಳಿದೆ…

– ಜಾನಕಿ… ಏನಾಯಿತು?

ಅವಳು ನಿಜವಾಗಿಯೂ ಪ್ರತಿಕ್ರಿಯಿಸುತ್ತಾಳೆ ಎಂದು ನನಗೇನು ಅಂತಹ ನಿರೀಕ್ಷೆಗಳಿರಲಿಲ್ಲ. ನಾನು ಸುಮ್ಮನೆ ಕುತೂಹಲದಿಂದ ಆ ಒಂದು ಪ್ರಯತ್ನ ಮಾಡಿದ್ದು ಅಷ್ಟೇ.

ಆದರೆ ಜಾನಕಿ ನಿಜವಾಗಿಯೂ ಪ್ರತಿಕ್ರಿಯಿಸಿದ್ದಳು!!

– ಏನು? ಎಂದು ತಣ್ಣಗೆ ಕೇಳಿದ್ದಳು ಜಾನಕಿ!

ಆದರೆ ಅವಳ ಮಾತು ಎಂದಿನಂತೆ ಕನಸಿನಲ್ಲಿ ಮಾತಾಡುವ ಶೈಲಿಯಲ್ಲಿ ಇರದೇ ಇರುವುದನ್ನು ನೋಡಿ ನಾನು ಪುನಃ ಮಲಗಿದ್ದಲ್ಲಿಂದಲೇ ಕಣ್ಣು ತೆರೆದು ಅವಳತ್ತ ತಿರುಗಿ ನೋಡಿದೆ.

ಜಾನಕಿ ಎಚ್ಚರವಾಗಿಯೇ ಇದ್ದಳು!

ಅದರಲ್ಲೂ ಈ ಬಾರಿ ಅವಳು ನನ್ನತ್ತ ತಿರುಗಿ, ಕಣ್ಣು ತೆರೆದುಕೊಂಡೇ ತೀಕ್ಷ್ಣವಾಗಿ ನನ್ನನ್ನು ನೋಡುತ್ತಿದ್ದಳು!!

ನಾನು ಅವಳತ್ತ ತಿರುಗಿದ್ದನ್ನು ನೋಡಿ ಜಾನಕಿ ಮತ್ತೆ ನನ್ನನ್ನು ಕೇಳಿದ್ದಳು..

– ಏನು?!

-ಅದು…ಅದು ಇವತ್ತೇಕೆ ಮಾ..ತಾ..ಡು..ತ್ತಿ..ಲ್ಲ ನೀನು ಜಾನಕಿ? ತಡವರಿಸುತ್ತಲೇ ಕೇಳಿದ್ದೆ ನಾನು.

– ನಿಮಗೊಂದು ಹೇಳಲೆ?… ಅಂದಳು ಜಾನಕಿ.

– ಹೇಳು.. ಅಂದೆ.

– ನೀವು ಅದೆಷ್ಟೋ ವರ್ಷಗಳಿಂದ ಒಬ್ಬರೇ ನಿರಂತರವಾಗಿ ಕನಸಿನಲ್ಲಿ ಮಾತಾಡುತ್ತಿದ್ದೀರಿ.. ನಿಮಗಿದು ಗೊತ್ತೇ?! ಅಂದಳು ಜಾನಕಿ.

ನನಗೆ ಅರ್ಥವಾಗಲಿಲ್ಲ!

ಅವಳನ್ನೇ ಮತ್ತಷ್ಟು ತೀಕ್ಷ್ಣವಾಗಿ ನೋಡಿದೆ.

ಇಲ್ಲ… ಇಲ್ಲ, ಕನಸಲ್ಲ. ಅವಳು ಎಚ್ಚರದಲ್ಲಿದ್ದುಕೊಂಡೇ ಆ ಮಾತುಗಳನ್ನು ಹೇಳುತ್ತಿದ್ದಳು. ಮಲಗಿದ್ದಲ್ಲಿಂದ ನನ್ನನ್ನೇ ನೋಡುತ್ತಾ ಮತ್ತೆ ತನ್ನ ಮಾತು ಮುಂದುವರಿಸಿದಳು..

– ತುಂಬಾ ವರ್ಷಗಳ ಹಿಂದೆ ಮೊದಲ ಬಾರಿಗೆ ನೀವು ಕನಸಿನಲ್ಲಿ ಮಾತಾಡಿದಾಗ ನಾನು ನಿಜವಾಗಿಯೂ ಹೆದರಿದ್ದೆ.! ನೀವು ಕನಸಿನಲ್ಲಿ ಹೇಳುತ್ತಿದ್ದ ಮಾತುಗಳು, ಭಯಾನಕ ಕಥೆಗಳು, ವಿಚಿತ್ರ ಸಂಗತಿಗಳು ನಿಜಕ್ಕೂ ನನಗೆ ಇನ್ನಿಲ್ಲದ ಭಯ ಹುಟ್ಟಿಸುತ್ತಿತ್ತು.. ಮನೆಯ ಹೊರಗೆ ಯಾರೋ ಒಬ್ಬರು ಬಿಳಿಯ ವ್ಯಕ್ತಿ ನಿಂತಿದ್ದಾರೆ ಎಂದು ಹೇಳುತ್ತಿದ್ದಿರಿ! ನಮ್ಮ ಮನೆ ಏಕೆ ಇಂದು ಗಾಳಿಯಲ್ಲಿ ತೇಲುತ್ತಿದೆ ಎಂದು ಕೇಳುತ್ತಿದ್ದಿರಿ..! ನಮ್ಮ ಮನೆಯೊಳಗೆ ಒಂದು ಹುಲಿ ಬಂದು ಸೇರಿದೆ, ಹುಶಾರಾಗಿರು ಜಾನಕಿ ಎಂದು ಸಹ ಹೇಳುತ್ತಿದ್ದಿರಿ..! ಹಕ್ಕಿ ವಿಕಾರವಾಗಿ ಕೂಗುತ್ತಿದೆ, ಇವತ್ತು ಈ ಮನೆಯಲ್ಲಿ ಒಂದು ಹೆಣ ಖಂಡಿತಾ ಬೀಳುತ್ತದೆ..! ಎಂದೆಲ್ಲಾ ನೀವು ಹೇಳುತ್ತಿದ್ದಿರಿ. ನನಗೆ ನಿಜಕ್ಕೂ ತುಂಬಾ ಹೆದರಿಕೆಯಾಗುತ್ತಿತ್ತು!!

..ಹೌದು, ನೀವು ದಿನಾಲೂ ಬರೀ ಇಂತಹದ್ದೇ ಸಂಗತಿ ಹೇಳುತಿದ್ದಿರಿ! ಆಮೇಲೆ ಪ್ರತೀ ದಿನ ಇಂತಹದ್ದು ಕೇಳಿ ಕೇಳಿ ನನಗೆ ಅಭ್ಯಾಸವಾಗಿ ಬಿಟ್ಟಿತು!! ನಿಮಗೆ ಇದನ್ನೆಲ್ಲಾ ಹೇಳಿ ಬಿಟ್ಟರೆ ನಿಮಗೆ ಬೇಜಾರು ಆಗಬಹುದು ಎಂದು ನಾನು ಯಾವುದನ್ನೂ ನಿಮ್ಮಲ್ಲಿ ಹೇಳಲಿಲ್ಲ. ಅದರ ಬದಲಿಗೆ ನಾನು ನನ್ನ ಭಯ ಕಳೆಯುವುದಕ್ಕಾಗಿ ಪ್ರತೀ ದಿನ ಎರಡು ಗಂಟೆಯ ನಂತರ ನಿಮ್ಮ ಎಲ್ಲಾ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ಹೋದೆ… ಹೌದು ಅದೆಷ್ಟೋ ವರ್ಷಗಳಿಂದಲೂ; ನಿರಂತರವಾಗಿ ಪ್ರತಿಕ್ರಿಯಿಸಿದೆ!!

….ನೀವು ಏನೇ ಭಯಾನಕವಾಗಿ ಮಾತಾಡಲು ಶುರು ಮಾಡಿದರೂ ನಾನು ಕೇವಲ ಮನಸ್ಸು ಅರಳುವ ನಮ್ಮದೇನಿಜ ಕಥೆಗಳ ಬಗ್ಗೆಯೇ ಮಾತಾಡಲು ಶುರು ಮಾಡಿದೆ. ನೀವು ಕನಸಿನಲ್ಲಿ ಹೇಳಲು ಶುರು ಮಾಡುವ ಆ ಎಲ್ಲಾ ಭಯಾನಕ ಸಂಗತಿಗಳನ್ನು ಪುಟ್ಟ ಮಕ್ಕಳು ಏನಾದರೂ ಕೇಳಿದಿದ್ದರೆ ಅದೆಷ್ಟು ಹೆದರುತ್ತಿದ್ದರು ಗೊತ್ತೇ?

ನನ್ನ ನಿದ್ದೆ ಇದ್ದಕ್ಕಿದ್ದಂತೆಯೇ ಹಾಗೇ ಹಾರಿ ಹೋಯಿತು!!

ಏನು..? ನಾನು… ನಾನು ಕನಸಿನಲ್ಲಿ ಮಾತಾಡುವೆನೇ?! … ಮಲಗಿದ್ದಲ್ಲಿಂದ ಎದ್ದು ಕುಳಿತು ಜಾನಕಿಯನ್ನೇ ನೋಡುತ್ತಾ ಕೇಳಿದೆ.

ಹೌದು… ನೀವೇ ಪ್ರತೀ ದಿನ ಮಾತು ಶುರು ಮಾಡುತ್ತಿದ್ದಿರಿ. ಆದರೆ ಎರಡು ಗಂಟೆಗೆ ಅಲ್ಲ. ನಿಮ್ಮ ಮೊದಲ ಮಾತು ಶುರುವಾಗುವುದೇ ಸರಿಯಾಗಿ ಒಂದು ಮುಕ್ಕಾಲು ಗಂಟೆಗೆ!!

ಇಲ್ಲ… ಇಲ್ಲ… ಹೀಗಾಗಲು ಸಾಧ್ಯವೇ ಇಲ್ಲ. ಅದು ನೀನು.. ನೀನು ಮಾತಾಡಿದ್ದು… ನೀನು ಕನಸಿನಲ್ಲಿ ಮಾತಾಡಿದ್ದು ಜಾನಕಿ. ನಿನಗೆ ಬೇಸರ ಆಗಬಾರದೆಂದೇ ನಾನು ಈ ವಿಷಯ ನಿನಗೆ ತಿಳಿಸಲಿಲ್ಲ ಹಾಗೂ ನಿನ್ನ ಪ್ರತೀ ಕನಸಿನ ಮಾತಿಗೆ ನಾನು ಪ್ರತಿಕ್ರಿಯೆ ನೀಡುತ್ತಾ ಹೋಗಿದ್ದೆ.

ಅದಕ್ಕೆ ಜಾನಕಿ ಅಂದಳು..

– ರಾತ್ರಿ ವೇಳೆ ಬಾಗಿಲು ಮುಚ್ಚಿದ ಈ ನಮ್ಮ ಕೋಣೆಯಲ್ಲಿ ನಮ್ಮಿಬ್ಬರ ನಡುವೆ ಯಾರಾದರೊಬ್ಬರು ಸಾಕ್ಷಿಗೆ ಅಂತ ಮಲಗಿದ್ದಿದ್ದರೆ, ಕನಸಲ್ಲಿ ನಿಜವಾಗಿಯೂ ಮಾತಾಡುತ್ತಿದ್ದುದು ಯಾರೆಂದು ಅದರಲ್ಲೂ ನಮ್ಮಿಬ್ಬರಲ್ಲಿ ಮೊದಲು ಕನಸಲ್ಲಿ ಭಯಾನಕವಾಗಿ ಮಾತಾಡುತ್ತಿದ್ದುದು ಯಾರೆಂದು ಖಂಡಿತವಾಗಿಯೂ ಹೇಳುತ್ತಿದ್ದರು.!!!

.. ಹಾನ್, ಅಂದ ಹಾಗೆ ನೀವು ಮಾತಾಡುವಾಗ ಪ್ರತೀ ಬಾರಿಯೂ ಕಣ್ಣು ಮುಚ್ಚಿಕೊಂಡು ನಿದ್ರೆಗೆ ಜಾರಿ ಕನಸಿನಲ್ಲಿಯೇ ಮಾತಾಡುತ್ತಿದ್ದಿರಿ.. ಎಚ್ಚರವಾಗಿ ಅಲ್ಲ!! ಎಂದು ಹೇಳಿಬಿಟ್ಟಳು ಜಾನಕಿ.

ನಿಜವಾಗಿಯೂ ಅವಳು ನನಗೆ ಏನು ಹೇಳುತ್ತಿದ್ದಾಳೆ ಎಂದೇ ಅರ್ಥವಾಗಲಿಲ್ಲ!!

ಜಾನಕಿ ಮತ್ತೆ ಸೌಮ್ಯವಾಗಿಯೇ ಮಾತು ಮುಂದುವರಿಸಿದಳು..

– ರೀ.. ಆರೋಗ್ಯದ ಬಗ್ಗೆ ವಹಿಸಿ ಕಾಳಜಿ.. ನಾನು ಸಹ ಇನ್ನು ಎಷ್ಟೂಂತ ಹೀಗೆಯೇ ನಿಮ್ಮೊಂದಿಗೆ ಮಾತಾಡುತ್ತಿರಲಿ… ಎಂದು ಹೇಳಿ ಮಂಚದ ಮೇಲೆ ಕುಳಿತಿದ್ದ ನನ್ನ ಕೆನ್ನೆಯನ್ನು ಅವಳ ಕೈಯಿಂದ ಬಹಳ ಪ್ರೀತಿಯಿಂದ ನೇವರಿಸಿ ಹಾಗೇ ಮತ್ತೆ ನಿದ್ದೆಗೆ ಜಾರಿ ಬಿಟ್ಟಳು.

“ನಾನು ಸಹ ಇನ್ನು ಎಷ್ಟೂಂತ ಹೀಗೆಯೇ ನಿಮ್ಮೊಂದಿಗೆ ಮಾತಾಡುತ್ತಿರಲಿ…..!” ಹಾಗೇಕೆ ಅವಳು ಹೇಳಿದ್ದಳು?!

ಏಕೆಂದು ನನಗೆ ಮರುದಿನವೇ ಗೊತ್ತಾಯಿತು.

ಹೌದು… ಮರುದಿನ ಮಂಚದಿಂದ ಜಾನಕಿ ಮೇಲೆಳಲೇ ಇಲ್ಲ!!

ಮಲಗಿದ್ದಲ್ಲಿಯೇ ಶಾಶ್ವತವಾಗಿ ಚಿರನಿದ್ರೆಗೆ ಜಾರಿದ್ದಳು ನನ್ನ ಜಾನಕಿ. ಈ ರಾಮಚಂದ್ರನ ಜಾನಕಿ!!

ಆ ದಿನದಿಂದ ಕನಸಿನ ಮಾತಿನಲ್ಲಿ ಜಾನಕಿ ಬರಲಿಲ್ಲ.

ಆದರೆ ನಿಜವಾಗಿಯೂ ನಮ್ಮಿಬ್ಬರಲ್ಲಿ ಯಾರು ಕನಸಿನಲ್ಲಿ ಮಾತಾಡುತ್ತಿದ್ದರು…? ಅದರಲ್ಲೂ ಮೊದಲು ಯಾರು ಮಾತು ಶುರು ಮಾಡುತ್ತಿದ್ದರು? ಅದಕ್ಕೆ ಆಮೇಲೆ ಯಾರು ಪ್ರತಿಕ್ರಿಯಿಸುತ್ತಿದ್ದರು? ಎನ್ನುವ ವಿಷಯದ ಸರಿಯಾದ ಚರ್ಚೆಯೇ ನಮ್ಮಿಬ್ಬರ ನಡುವೆ ಕೊನೆಗೂ ನಡೆಯದೆಯೇ ಹೋಯಿತು. ಅದರ ಬಗ್ಗೆ ಮತ್ತೊಮ್ಮೆ ಇಬ್ಬರೂ ಕುಳಿತು ಮಾತಾಡೋಣ ಎಂದರೆ ನನ್ನ ಜಾನಕಿಯೇ ನನ್ನ ಬಳಿ ಇರಲಿಲ್ಲ.

ಅವಳು ಸಾಯುವ ಹಿಂದಿನ ರಾತ್ರಿ ಏನೋ ಹೇಳಿದ್ದಳು. ನಾನು ಅದೆಷ್ಟೋ ವರ್ಷಗಳಿಂದ ನಡುರಾತ್ರಿ ಒಂದು ಮುಕ್ಕಾಲು ಗಂಟೆಗೆ ಕನಸಿನಲ್ಲಿ ಭಯಾನಕವಾಗಿ ಮಾತಾಡಲು ಶುರು ಮಾಡುತ್ತೇನೆ ಎಂದು. ಆದರೆ ನನಗದು ಅರ್ಥವಾಗಲಿಲ್ಲ. ಏಕೆಂದರೆ ಅವಳು ಹೇಳಿದಂತೆ ಪ್ರತೀ ರಾತ್ರಿ ಎರಡು ಗಂಟೆಗೆ ನನ್ನ ಜೊತೆಗೆ ಸಂವಹನಕ್ಕೆ ಅವಳು ಇಳಿದರೂ, ಮೊದಲ ಬಾರಿಗೆ ಹುಣ್ಣಿಮೆಯ ರಾತ್ರಿ ಅವಳು ಕನಸಿನಲ್ಲಿ ಆ ಹಕ್ಕಿಯ ಕಥೆ ಹೇಳಲು ಶುರು ಮಾಡಿದ್ದು… ರಾತ್ರಿ ಎರಡು ಗಂಟೆಗಲ್ಲ..!

ಹೌದು.. ಆ ಕಥೆ ಅವಳು ನನ್ನಲ್ಲಿ ಹೇಳಲು ಶುರು ಮಾಡಿದ್ದೇ.. ಒಂದು ಮುಕ್ಕಾಲು ಗಂಟೆಯ ರಾತ್ರಿಗೆ.!!

“ಮಟ ಮಟ ಮಧ್ಯಾಹ್ನ ಹಕ್ಕಿ ಕೂಗುತ್ತಿದೆ, ಅದನ್ನು ಈಗಲೇ ಓಡಿಸಿ..” ಎಂದು ಅವಳು ಆ ರಾತ್ರಿ ನನಗೆ ಎರಡು ಗಂಟೆಗೆ ಹೇಳುವ ಮೊದಲೇ, ಸರಿಯಾಗಿ ಒಂದು ಮುಕ್ಕಾಲು ಗಂಟೆಗೆ” ಹಕ್ಕಿ ವಿಕಾರವಾಗಿ ಕೂಗುತ್ತಿದೆ, ಇವತ್ತು ಈ ಮನೆಯಲ್ಲಿ ಒಂದು ಹೆಣ ಖಂಡಿತಾ ಬೀಳುತ್ತದೆ..!” ಎನ್ನುವುದನ್ನು ಸಹ ಸ್ವತಃ ಅವಳೇ ನನಗೆ ಹೇಳಿದ್ದಳು!!

ಕೇವಲ ಆ ಕಥೆ ಮಾತ್ರವಲ್ಲ… ಆ ನಂತರದ ಎಲ್ಲಾ ಭಯಾನಕ ಕಥೆಗಳನ್ನು, ಸಂಗತಿಗಳನ್ನು ಪ್ರತೀ ದಿನ ಅವಳೇ ಹೇಳಿದ್ದು, ಅದರಲ್ಲೂ ಸರಿಯಾಗಿ ಒಂದು ಮುಕ್ಕಾಲು ಗಂಟೆಗೆಯೇ ಅವಳು ಹೇಳಿದ್ದು.!!. ನಾನಲ್ಲ..!

ಏನು ಮರೆತರೂ ಅದನ್ನು ನಾನು ಮರೆಯಲಾರೆ, ಏಕೆಂದರೆ ನನಗೆ ಅದೆಷ್ಟೋ ವರ್ಷಗಳಿಂದ ರಾತ್ರಿ ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ನಡುವೆ ನಿದ್ದೆಯೇ ಬರುವುದಿಲ್ಲ!!

ಹೇಗೆ ಅವಳು ಹಕ್ಕಿಯ ಕಥೆ ಹೇಳುವ ದಿನ ನಾನು ಒಂದೂವರೆ ಗಂಟೆಗೆ ಎದ್ದು ಬಾತ್ ರೂಮಿಗೆ ಹೋಗಿ ಬಂದು ನಿದ್ದೆಯಿಲ್ಲದೆ ಮಲಗಿದ್ದೆನೋ.. ಅದೇ ರೀತಿ ಅದರ ನಂತರವೂ ಸಹ ಹಾಗೂ ಆ ಮೊದಲ ಹಕ್ಕಿ ಕಥೆಯ ಹಿಂದಿನ ಅದೆಷ್ಟೋ ವರ್ಷಗಳಿಂದಲೂ ಕೂಡ ನಾನು ನಿರಂತರವಾಗಿ ಪ್ರತೀ ದಿನ ಒಂದೂವರೆ ಗಂಟೆಗೆ ಎದ್ದು ಬಾತ್ ರೂಮಿಗೆ ಹೋಗಿ ಬಂದು ಎರಡು ಗಂಟೆಯವರೆಗೆ ನಿದ್ದೆಯಿಲ್ಲದೆ ಮಲಗುತ್ತಿದ್ದೆ. ಹೌದು ಆ ಅರ್ಧ ಗಂಟೆಯ ಸಮಯ ನನಗೆ ಎಂದಿಗೂ ನಿದ್ದೆ ಬರುವುದಿಲ್ಲ ಹಾಗೂ ಬಂದಿದ್ದೇ ಇಲ್ಲ!

ನಾನು ಹೇಳಿದ್ದೆ ಎಂದು ಜಾನಕಿ ಹೇಳಿದ ಅಷ್ಟೂ ಭಯಾನಕ ಸಂಗತಿ, ಘಟನೆ ಹಾಗೂ ಕಥೆಗಳನ್ನು ಸರಿಯಾಗಿ ಒಂದು ಮುಕ್ಕಾಲು ಗಂಟೆಗೆ ಪ್ರತೀ ದಿನ ಹೇಳಲು ಶುರು ಮಾಡುತ್ತಿದ್ದುದೇ ಸ್ವತಃ ಜಾನಕಿ! ಒಂದು ತಿಂಗಳು ನಿರಂತರವಾಗಿ ಅವಳು ಆ ರೀತಿ ಮಾತಾಡುತ್ತಿದ್ದಳು!! ಅದೆಷ್ಟೋ ವರ್ಷಗಳಿಂದ ನಾವು ಪರಸ್ಪರ ಸಂಭಾಷಿಸಿದ್ದೇವೆ ಎನ್ನುವುದು ಸುಳ್ಳು!!

ಆದರೆ ಅವಳು ಪ್ರತೀ ದಿನವೂ ಒಂದು ಮುಕ್ಕಾಲು ಗಂಟೆಯಿಂದ ಎರಡು ಗಂಟೆಯವರೆಗೆ ಭಯಾನಕ ಹಾಗೂ ವಿಚಿತ್ರ ವಿಷಯಗಳನ್ನು ಕನಸಿನಲ್ಲಿ ಒಬ್ಬಳೇ ನಿರಂತರವಾಗಿ ಹೇಳಿ ಹೇಳಿ, ಕೊನೆಗೆ ಸುತ್ತಲಿನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ, ಯಾವಾಗ ಗೋಡೆ ಗಡಿಯಾರ ಎರಡು ಗಂಟೆ ಬಡಿಯುತ್ತದೋ ಆಗ ಹಾಗೇ ಮೆಲ್ಲಗೆ ಸೌಮ್ಯ ಮಾತುಗಳನ್ನು, ತಮಾಷೆ ಮಾತುಗಳನ್ನು ಆಡಲು ಶುರು ಮಾಡುತ್ತಿದ್ದಳು!

ಹುಣ್ಣಿಮೆಯ ರಾತ್ರಿ ಮೊದಲ ಬಾರಿಗೆ ಅವಳು ಹಕ್ಕಿಯ ಕಥೆಯನ್ನು ಹೇಳಲು ಶುರು ಮಾಡಿದಾಗ ನನಗೆ ತುಂಬಾ ಭಯವಾಗಿತ್ತು. ಹಾಗಾಗಿ ಅವಳ ಮಾತಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆ ದಿನ ಹೆಚ್ಚು ಕಡಿಮೆ ಕಾಲು ಗಂಟೆ ನಿರಂತರವಾಗಿ ವಿಚಿತ್ರವಾಗಿ ಅವಳು ಮಾತಾಡುತ್ತಲೇ ಇದ್ದಳು. ಗಡಿಯಾರ ಎರಡು ಗಂಟೆ ಹೊಡೆದಾಗ ನಾನು ಕುತೂಹಲಕ್ಕೆ ಅಷ್ಟೇ ಆ ದಿನ ಅವಳ ಮಾತಿಗೆ ಪ್ರತಿಕ್ರಿಯಿಸಿದ್ದು. ಆದರೆ ಆ ನಂತರ ಯಾವಾಗ ನಮ್ಮ ಮಾತಿನಲ್ಲಿ ಕಳೆದು ಹೋದ ಕಾಲದ ಸಂಗತಿಳಿದ್ದವೋ, ನಮ್ಮ ಜೀವನದಲ್ಲಿ ನಡೆಯದೇ ಇದ್ದ ಚಂದದ ವಿಷಯಗಳಿದ್ದವೋ ಅದರಿಂದಾಗಿ ನನ್ನ ಜೀವನದ ಖುಷಿ ಹೆಚ್ಚಾಗತೊಡಗಿತ್ತು. ಅದಕ್ಕಾಗಿ ಅವಳು ಒಂದು ಮುಕ್ಕಾಲು ಗಂಟೆಯಿಂದ ಎರಡು ಗಂಟೆಯವರಗೆ ಏನೇ ಚಿತ್ರ ವಿಚಿತ್ರ ವಿಷಯ ಹೇಳಿದರೂ ಅದಕ್ಕೆ ಪ್ರತಿಕ್ರಿಯಿಸದೇ ಸುಮ್ಮನೆ ಇದ್ದು, ಯಾವಾಗ ಅವಳ ಮಾತು ಎರಡು ಗಂಟೆಯ ನಂತರದ ಸೌಮ್ಯ ಮಾತುಗಳಿಗೆ ತಿರುಗುತ್ತಿತ್ತೋ, ಅದಕ್ಕೆಂದೇ ಕಾದು ಕುಳಿತುಕೊಂಡು ನಾನು ಪ್ರತಿಕ್ರಿಯೆ ನೀಡಲು ಶುರು ಮಾಡುತ್ತಿದ್ದೆ. ಅದನ್ನೇ ನಾನು ಮುಂದೆ ಪ್ರತಿ ದಿನ ನಿರಂತರವಾಗಿ ಮಾಡುತ್ತಿದ್ದೆ ಅನ್ನುವುದು ಸಹ ಸತ್ಯವೇ.

ಮಂಚದಲ್ಲಿ ಮಲಗಿದ್ದರು, ಮಲಗದೇ ಇದ್ದರೂ, ರೂಮ್ ನಲ್ಲಿ ಲೈಟಿನ ಬೆಳಕು ಇದ್ದರೂ ಇಲ್ಲದೇ ಇದ್ದರೂ, ಕಣ್ಣು ಮುಚ್ಚಿದ್ದರೂ, ಕಣ್ಣು ತೆರದೇ ಇದ್ದರೂ, ಸ್ವತಃ ಕನಸಿಗೆ ಜಾರಿದ್ದರೂ ಎದುರು ಇರುವ ಗಡಿಯಾರ ಎಷ್ಟು ಗಂಟೆ ತೋರಿಸುತ್ತದೆ ಎಂದು ನಾನು ನಿಖರವಾಗಿ ಊಹಿಸಬಲ್ಲೆ. ಆದರೆ ಈ ರೀತಿ ಎಲ್ಲಾ ಊಹಿಸಲು ಸಾಧ್ಯವಿಲ್ಲದ ಜಾನಕಿಗೆ, ಲೈಟ್ ಆಫ್ ಆಗಿರುವ ಆ ರೂಮಿನಲ್ಲಿ ಒಂದು ಮುಕ್ಕಾಲು ಗಂಟೆಯೇ ಆಗಿದೆ ಎಂದು ಹೇಗೆ ಗೊತ್ತು?.. ಅವಳೇ ಹೇಳಿದಂತೆ ಪ್ರತೀ ದಿನದ ಆ ನಿಖರವಾದ ಒಂದು ಮುಕ್ಕಾಲಿನ ಸಮಯ ಅವಳಿಗೆ ನಿಜವಾಗಿಯೂ ಹೇಗೆ ಗೊತ್ತು?.

ಇದು ನನಗೆ ಗೊತ್ತಾಗಲಿಲ್ಲ!!

ಆ ದಿನದಿಂದ ರಾತ್ರಿ ಒಬ್ಬನೇ ಮಂಚದಲ್ಲಿ ಮಲಗಿಕೊಂಡಾಗ ಜಾನಕಿ ಮತ್ತೆ ಮತ್ತೆ ನೆನಪಾಗುತ್ತಿದ್ದಳು.

ಅದೆಷ್ಟು ಸೌಮ್ಯವಾಗಿ ನನ್ನನ್ನು ಪ್ರೀತಿಸಿದ್ದಳು ನನ್ನ ಜಾನಕಿ.

ಅವಳು ಸತ್ತು ಎರಡು ವಾರ ಆದ ನಂತರ ಒಂದು ರಾತ್ರಿ ಎಂದಿನಂತೆ ಒಂದೂವರೆ ಗಂಟೆಗೆ ಎದ್ದು ಬಾತ್ ರೂಮಿಗೆ ಹೋಗಿ ಬಂದವನೇ ಮಲಗಿಕೊಂಡು ಕನಸಿಗೆ ಜಾರಿದವನು ನನ್ನ ಜಾನಕಿಯನ್ನೊಮ್ಮೆ ನನ್ನ ಕನಸಿಗೂ ಕರೆದುಬಿಟ್ಟೆ..!!

” ನಾನು ಸಹ ಎಷ್ಟು ಅಂತ ಹೀಗೆ ಮಾತಾಡಲಿ…” ಎಂದು ಕೊನೆಯದಾಗಿ ಹೇಳಿದ್ದ ಜಾನಕಿ ನನ್ನ ಕನಸಿಗೆ ಮತ್ತೆ ಬರಲಾರಳು ಎಂದು ನಾನು ಅಂದುಕೊಂಡಿದ್ದೆ.

ಆದರೆ ಅವಳು ಈ ರಾಮಚಂದ್ರನ ಜಾನಕಿ. ನಾನು ಹೋದಲ್ಲಿ ಬಂದಲ್ಲಿ ಅವಳು ಬರದೇ ಇರುತ್ತಾಳೆಯೇ..

ಕನಸಿಗೂ ಅವಶ್ಯವಾಗಿಯೇ ಬಂದಳು..

ಆದರೆ ಕರೆದ ಕೂಡಲೇ ಒಂದೂವರೆ ಗಂಟೆಗೆ ಅವಳು ಬರಲಿಲ್ಲ.

ಸರಿಯಾಗಿ ಒಂದು ಮುಕ್ಕಾಲು ಗಂಟೆ ಆದ ಮೇಲೆಯೇ ಅವಳು ನನ್ನ ಕನಸಿಗೆ ಬಂದಿದ್ದಳು!!

ಕನಸಿಗೆ ಬಂದವಳು ನನ್ನನು ನೋಡಿ ಕನಸ್ಸಿನೊಳಗೆ ಹಾಗೇ ನಕ್ಕಳು..

ಆ ಕನಸಲ್ಲಿಯೂ ಎಂದಿನಂತೆ ಅವಳೇ ಮೊದಲು ಮಾತು ಶುರು ಮಾಡಿದ್ದಳು. ಆಗಲೂ ಯಾವುದೋ ಮೋಹಕ್ಕೆ ಒಳಗಾದಂತೆಯೇ ಜಾನಕಿ ಮಾತಾಡುತ್ತಿದ್ದಳು !!

ಆ ನಂತರ ದಿನಾಲೂ ನಾನು ಕನಸಲ್ಲಿ ಕರೆದಾಗಲೆಲ್ಲ ಅವಳು ಬರುತ್ತಿದ್ದಳು. ಒಂದು ಮುಕ್ಕಾಲು ಗಂಟೆ ಆದ ಕೂಡಲೇ ಮಾತು ಶುರು ಮಾಡುತ್ತಿದ್ದಳು.

ಅದೊಂದು ದಿನ ಕನಸಿಗೆ ಬಂದವಳೇ ಕೇಳಿದ್ದಳು..

– ಎಲ್ಲಿದ್ದಾಳೆ ಅವಳು..ಮತ್ತೆ ಅಂಗಳಕ್ಕೆ ಬರುವ ಆ ಪುಟ್ಟ ಪುಟ್ಟ ಬಿಜಕ್ರೆ ಪಕ್ಕಿಗಳನ್ನು ಹಿಡಿಯಲು ಹೋದಳೇ. ಹಹ್ಹಾ… ಹಹ್ಹಾ… ಅವಳಿಗೆ ಅದೇ ಒಂದು ಆಟ. ಕೆರೆ..ಕೆರೆ..ಚೆರೆ..ಚೆರೆ ಎನ್ನುತ್ತಾ ಸದಾ ತಲೆಹರಟೆ ಮಾಡುವ ಆ ಹಕ್ಕಿಗಳಿಗೂ ಕೂಡ ಅವಳ ಬಳಿ ಸುಳಿದಾಡುವುದೆಂದರೆ ಅದೇನು ಗಮ್ಮತ್ತೋ..

ಜಾನಕಿ ಎಂದಿನಂತೆ ಇನ್ನೊಂದು ಯಾವುದೋ ಹೊಸ ಕಥೆಯನ್ನೇ ಕಲ್ಪಿಸಿಕೊಳ್ಳುವ ಉತ್ಸಾಹದಲ್ಲಿ ಇದ್ದಳು.

ಆದರೆ ನನಗೆ ಅರ್ಥವಾಗಲಿಲ್ಲ. ಅರ್ಥವಾಗದೇ ಹೇಗೆ ಪ್ರತಿಕ್ರಿಯಿಸುವುದು, ಹಾಗಾಗಿ ಈ ಬಾರಿ ಅಂತು ವಿಷಯದ ಸ್ಪಷ್ಟತೆಗಾಗಿ ಅವಳಲ್ಲಿಯೇ ಕೇಳಿದೆ..

– ಯಾರು ಜಾನಕಿ?

– ಅಯ್ಯೋ.. ನಿಮಗೆ ಎಲ್ಲವನ್ನೂ ಬಿಡಿಸಿ ಬಿಡಿಸಿಯೇ ಹೇಳಬೇಕು. ಮೊಮ್ಮಗಳು ಪೌರ್ಣಮಿ ಕಣ್ರಿ. ಅವಳು ಮತ್ತೆ ಎಲ್ಲಿಗೆ ಹೋದಳು? ಆ ಹಕ್ಕಿಗಳಂತೆಯೇ ನಿಂತಲ್ಲಿ ನಿಲ್ಲದೇ, ಕೂತಲ್ಲಿ ಕೂರದೇ ಜಿಗಿಯುತ್ತಾ ಎಗರುತ್ತಾ ಪ್ರತಿಯೊಂದನ್ನು ಆಶ್ಚರ್ಯದಿಂದಲೇ ನೋಡುತ್ತಾ, ಜೊತೆಗೆ ಏನಾದರೊಂದು ಪಿರಿ ಪಿರಿ ಮಾಡುತ್ತಾ ಮಾತಾಡುತ್ತಾ ಇರುವ ಪೌರ್ಣಮಿ ಕೂಡ ಒಂದು ರೀತಿಯಲ್ಲಿ ನಮ್ಮ ಮನೆಯ ಮರಿ ಬಿಜಕ್ರೆ ಪಕ್ಕಿಯೇ ಬಿಡಿ. ಹಹ್ಹಾ…ಹಹ್ಹಾ.. ಹೇಗೆ ಈ ಬಾರಿ ಆದರೂ ಅವುಗಳಲ್ಲಿ ಒಂದು ಹಕ್ಕಿ ನಮ್ಮನೆಯ ಈ ಬಿಜಕ್ರೆ ಪಕ್ಕಿಯ ಕೈಗೆ ಸಿಕ್ಕಿ ಬೀಳಬಹುದೇ..?

ಮಕ್ಕಳೇ ಇಲ್ಲದ ನಮ್ಮ ನಡುವೆ ಈಗ ಜಾನಕಿ ಮೊಮ್ಮಗಳನ್ನೇ ತಂದು ಆಟವಾಡಲು ಬಿಟ್ಟಿದ್ದಳು.

ಆಹಾ.. ಈ ಕನಸು ನನಗೆ ಅದೆಂತಹ ಸುಖ ನೀಡುತ್ತಿದೆಯಪ್ಪಾ ಎಂದು ಹೇಳಿಕೊಂಡ ನನ್ನ ಮನಸ್ಸು ಪೌರ್ಣಮಿಯಂತೆಯೆ ಹಾಗೇ ಅರಳಿಕೊಂಡಿತು. ನಾನು ಈ ಹಿಂದಿನಂತೆಯೇ ಅವಳ ಮಾತಿಗೆ ಪ್ರತಿಕ್ರಿಯಿಸುತ್ತಾ ಹೋದೆ.

– ಹಹ್ಹಾ.. ಹಹ್ಹಾ…ಜಾನಕಿ, ಈ ಚಿಕ್ಕ ಚಿಕ್ಕ ಬಿಜಕ್ರೆ ಪಕ್ಕಿ ಎಲ್ಲಾ ಏನು, ಒಂದಲ್ಲ ಒಂದು ದಿನ ದೊಡ್ಡ ನವಿಲನ್ನೇ ನಮ್ಮ ಪೌರ್ಣಮಿ ಹಿಡಿಯುತ್ತಾಳೆ ನೋಡುತ್ತಿರು ನೀನು..

– ನವಿಲೇ..?

– ಹಾನ್.. ನವಿಲು. ಅದೇ ನಿನ್ನ ಕಪಾಟಿನ ಸೀರೆಗಳ ನಡುವೆ ಇದ್ದ ನಾನು ಕೊಟ್ಟಿದ್ದ ನವಿಲು ಗರಿ ಕಪಾಟಿನಲ್ಲಿ ನವಿಲಿನದ್ದೇ ಮರಿಗಳನ್ನು ಹಾಕಿದಾಗ ಮುಂದೆ ನಮ್ಮ ಗುಡ್ಡದ ತುಂಬಾ ಅದರದ್ದೊಂದು ವಂಶ ನಿನ್ನಿಂದಾಗಿಯೇ ಬೆಳೆಯುತ್ತಾ ಹೋಯಿತಲ್ಲಾ, ಆ ವಂಶದ ಒಂದು ಪುಟ್ಟ ಕುಡಿಯನ್ನೇ ಹಿಡಿದು ಒಂದಲ್ಲ ಒಂದು ದಿನ ನಮ್ಮ ಪೌರ್ಣಮಿ ಆಟವಾಡುತ್ತಾಳೆ ನೋಡುತ್ತಿರು ಜಾನಕಿ.. ಹಹ್ಹಾ.. ಹಹ್ಹಾ.

– ಹಹ್ಹಾ… ಹಹ್ಹಾ.. ಎಷ್ಟಾದರೂ ನಿಮ್ಮ ಮೊಮ್ಮಗಳಲ್ಲವೇ..ಜಾನಕಿ ಅಂದಳು.

– ನಮ್ಮಿಬ್ಬರದ್ದೂ ಮೊಮ್ಮಗಳೂ..ಎನ್ನುತ್ತಾ ನಾನು ಸಹ ಕನಸಲ್ಲಿಯೇ ಹಾಗೇ ನಕ್ಕು ಬಿಟ್ಟೆ.

ಗೋಡೆ ಗಡಿಯಾರ ಹಾಗೇ ಜೋರಾಗಿ ಎರಡು ಬಾರಿ ಬಡಿಯಿತು.

“… ಡಾಂಯ್… ಡಾಂಯ್!!!! ”

ನಾನು ಕನಸಲ್ಲಿ ಅವಳೊಂದಿಗೆ ಏನೇನೋ ಮಾತಾಡುತ್ತಾ ಮಾತಾಡುತ್ತಾ ಹಾಗೇ ಗಾಢ ನಿದ್ದೆಗೆ ಜಾರಿದೆ.

“…ಡಾಂಯ್..ಡಾಂಯ್..ಡಾಂಯ್..ಡಾಂಯ್.. ಡಾಂಯ್..ಡಾಂಯ್..ಡಾಂಯ್..ಡಾಂಯ್..ಡಾಂಯ್..”

ಗೋಡೆ ಗಡಿಯಾರ ಒಂಬತ್ತು ಬಾರಿ ಬಡಿದುಕೊಂಡಿತ್ತು. ಹೌದು ಮರುದಿನ ಏಳುವಾಗ ಬಹಳಷ್ಟು ತಡವಾಗಿತ್ತು. ಎದ್ದವನೇ ಮಂಚದಲ್ಲಿಯೇ ಸ್ವಲ್ಪ ಹೊತ್ತು ಕುಳಿತುಕೊಂಡು ಹಾಗೇ ಗಡಿಯಾರ ನೋಡಿದೆ. ಗಡಿಯಾರ ಕೂಡ ತಾನು ಬಾರಿಸಿದ್ದಷ್ಟೇ ಗಂಟೆಯನ್ನು ತೋರಿಸುತ್ತಿತ್ತು. ಸೂರ್ಯ ಹುಟ್ಟಿ ಅದಾಗಲೇ ಹೊರಗಡೆ ಹಕ್ಕಿಗಳ ಕಲರವ ಕೂಡ ಜೋರಾಗಿಯೇ ಕೇಳುತ್ತಿತ್ತು. ಮುಚ್ಚಿದ ನನ್ನ ಕೋಣೆಯ ಬಾಗಿಲು ತೆರೆದು ಹಾಗೆ ಕುಂಟುತ್ತಾ ಮನೆಯ ಹಾಲಿಗೆ ನಡೆಯುತ್ತಾ ಬಂದೆ.

ದೇವರ ಕೋಣೆಯಲ್ಲಿ ಅದಾಗಲೇ ಉರಿಸಿದ್ದ ಊದುಬತ್ತಿಯ ಪರಿಮಳವೊಂದು ಆ ಕ್ಷಣದಲ್ಲಿ ಹಾಗೇ ಅಲೆ ಅಲೆಯಾಗಿ ಬಂದು ನನ್ನ ಮೂಗಿಗೆ ಬಡಿಯಿತು..!!

“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
ನೀ ದೇಹದೊಳಗೊ ನಿನ್ನೊಳು ದೇಹವೋ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೋ

ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
ನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ….”

ಮನೆಯ ಮಹಡಿಯ ಮೇಲಿನ ಕೊಣೆಯ ಒಳಗಿನಿಂದ ಬಹಳ ಮೆಲುವಾಗಿ ಹಾಡುತ್ತಿರುವುದು ಕೇಳಿ ಬಂದಿದ್ದು ಕೂಡ ಆಗಲೇ..!!

ಅದರ ಜೊತೆಗೆಯೇ ಮೇಲಿನ ಆ ಕೋಣೆಯೊಳಗಿಂದ ಒಂದು ಹೆಣ್ಣು ಧ್ವನಿ ಕೂಡ ಕೇಳಿ ಬಂದಿತ್ತು.!!

– ಈ ಪೌರ್ಣಮಿ ಮತ್ತೆ ಎಲ್ಲಿ ಹೋದಳು. ಅವಳಿಗೆ ಒಂದು ಕಡೆ ನಿಂತಲ್ಲಿ ನಿಲ್ಲಲ್ಲೂ ಆಗುವುದಿಲ್ಲ, ಕೂತಲ್ಲಿಯೇ ಕೂರಲೂ ಆಗುವುದಿಲ್ಲ; ಅಜ್ಜಿ ಮನೆಗೆ ಬಂದರೂ ಅಷ್ಟೇ. ಜಿಗಿಯುತ್ತಾ ಪಿರಿ ಪಿರಿ ಮಾತಾಡುತ್ತಾ ಮತ್ತೆ ಎಲ್ಲಿಗೋ ಹೋಗಿಬಿಟ್ಟಿದೆ ಆ ಬಿಜಕ್ರೆ ಪಕ್ಕಿ.. ಪೌರ್ಣಮಿ.. ಓ ಪೌರ್ಣಮಿ… ಎಲ್ಲಿದ್ದಿಯೇ? ”

ಅದೇ ಸಮಯದಲ್ಲಿ ಮನೆಯ ಹೊರಗಿನ ಅಂಗಳದಿಂದಲೂ ಒಂದು ಪ್ರತಿಕ್ರಿಯೆ ಕೇಳಿಬಂದಿತ್ತು..!!

– ” ಅಮ್ಮಾ.. ನಾನಿಲ್ಲಿ ಅಂಗಳದಲ್ಲಿಯೇ ಆಟವಾಡುತ್ತಿದ್ದೇನೆ ಅಮ್ಮ.. ಅಯ್ಯೋ, ಈ ಹೊತ್ತಲ್ಲಿ ಹೀಗೆ ಜೋರಾಗಿ ಸದ್ದು ಮಾಡಬೇಡಮ್ಮ ನೀನು..”

ಅದನ್ನು ಕೇಳಿದ ನಾನು ವೇಗವಾಗಿ ಮನೆಯ ಮುಂಬಾಗಿಲಿನತ್ತಲೇ ಕುಂಟುತ್ತಾ ಕುಂಟುತ್ತಾ ನಡೆದು ಬಿಟ್ಟೆ.

ಮುಂಬಾಗಿಲ ಬಳಿ ಬಂದವನೇ ಅರ್ಧ ತೆರೆದಿದ್ದ ಬಾಗಿಲನ್ನು ಸಂಪೂರ್ಣವಾಗಿ ಸರಿಸಿ ಅಂಗಳದತ್ತ ನೋಡಿದೆ.

ಆಗ ಅಲ್ಲಿ ಹೆಣ್ಣು ಮಗುವೊಂದು ಅಂಗಳಕ್ಕೆ ಬಂದಿದ್ದ ಈ ಗುಡ್ಡದ ಬಿಜಕ್ರೆ ಪಕ್ಕಿಗಳನ್ನು ಹಿಡಿಯಲು, ಆ ಹಕ್ಕಿಗಳ ಹಿಂಡಿನ ಹಿಂದೆ ಹಿಂದೆಯೇ ಸ್ವಲ್ಪವೂ ಸದ್ದಾಗಬಾರದೆಂದು ಬಹಳ ಮೆಲ್ಲಗೆ ಹಾಗೂ ಅಷ್ಟೇ ಎಚ್ಚರಿಕೆಯಿಂದ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಹೋಗುತ್ತಿತ್ತು..!!!

ನಾನು ಆ ಮಗುವನ್ನೇ ಹಾಗೇ ನೋಡಿದೆ.

ನಾನು ಮನೆಯ ಮುಂಬಾಗಿಲನ್ನು ತೆರೆದಾಗ ಆದಂತಹ ಸಣ್ಣ ಶಬ್ಧವನ್ನು ಗಮನಿಸಿದ ಆ ಮಗು, ಆ ಕೂಡಲೇ ಒಂದು ಕ್ಷಣ ಇದ್ದಲ್ಲಿಯೇ ನಿಂತುಕೊಂಡು, ಹಾಗೇ ಮೆಲ್ಲಗೆ ನನ್ನತ್ತ ತಿರುಗಿ ಮೂಗಿನ ಮೇಲೆ ತನ್ನ ಬೆರಳಿಟ್ಟು ನನಗಷ್ಟೇ ಕೇಳಲಿ ಎಂದು ಬಹಳ ಮೆಲ್ಲಗೆ ಹೇಳಿತು….

“ಅಜ್ಜಾ…ಸದ್ದು ಮಾಡಬೇಡ, ಹಕ್ಕಿಗಳು ಹಾರಿ ಹೋಗುತ್ತವೆ “!!!!