ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು. ಕೆಲವೊಮ್ಮೆ ವೆಂಕು ಹೆಂಗ್ಸಿಗೆ ನೇರವಾಗಿಯಲ್ಲದಿದ್ದರೂ ಅಪರೋಕ್ಷವಾಗಿ ತಮ್ಮ ಇರಾದೆಯನ್ನು ಅವರು ತಿಳಿಸಿದ್ದರು. “ಹೀಗೆ ದುಡಿದು ನೀನು ಮುದುಕಿಯಾಗುವುದು ಯಾವ ಪುರುಷಾರ್ಥಕ್ಕೆ?” ಎಂಬುದು ಅವರ ಪ್ರಶ್ನೆ.
ಕಳೆದ ಎರಡೂವರೆ ವರ್ಷಗಳಿಂದ ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದ್ದ ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯಕಾಲದ ಕಥಾಸರಣಿಯ ಕೊನೆಯ ಕಂತಿನಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ “ಅರ್ಜಿ”

 

1

ಒಂದು ಮನೆ ಕಟ್ಟಿಸುವ ಸಲುವಾಗಿ ಅನುಮತಿಗಳನ್ನು ಪಡೆಯಲು ಸಂಬಂಧಪಟ್ಟ ಹಲವಾರು ಸರಕಾರೀ ಇಲಾಖೆಗಳಿಗೆ ಅಲೆದಾಡುತ್ತಿದ್ದಾಗ ನನಗೆ, ತುಂಬ ಮುದುಕರೇ ಆದ ಹಿರಿಯರೊಬ್ಬರ ಪರಿಚಯವಾಯಿತು. ನೋಡಲು ಆ ಹಿರಿಯರು ಅಷ್ಟು ಆಕರ್ಷಕ ವ್ಯಕ್ತಿಯಾಗಿರಲಿಲ್ಲ. ಬಿಳಿಯ ಪಂಚೆಯುಟ್ಟು, ಉದ್ದ ಕೈಯ ಕೊರಳಿಲ್ಲದ ಖಾದಿ ಶರಟು ತೊಟ್ಟು, ಕಾಲಿಗೆ ಚರ್ಮದ ಚಪ್ಪಲಿ ಮೆಟ್ಟಿ, ಕೈಯಲ್ಲಿ ಕಾಗದದ ಕಂತೆಗಳನ್ನು ತುಂಬಿದ ಕಪ್ಪು ಚರ್ಮದ ಚೀಲ ಹಿಡಿದು ಬರುವ ಅವರನ್ನು ಅನೇಕ ಸಲ ನೋಡಿದ್ದೆ. ಸಾಕಷ್ಟು ಪ್ರಾಯವಾದುದರಿಂದ ಕೆನ್ನೆಯ ಚರ್ಮ ಜೋಲುತ್ತಿತ್ತು. ಕಣ್ಣುಗಳು ಕೂಡಾ ಬೆಳ್ಳಗಾಗಿದ್ದುವು. ತಲೆ ಕೂದಲನ್ನು ಸಣ್ಣಗೆ ಕತ್ತರಿಸಿದ್ದರು. ಮೀಸೆ ಇಲ್ಲದ ನಯವಾದ ಮುಖ. ಓದುವಾಗ ಕನ್ನಡಕ ಹಾಕಿಕೊಳ್ಳುತ್ತಿದ್ದರೂ, ಉಳಿದ ಸಮಯದಲ್ಲಿ ಅದನ್ನು ತೆಗೆದು ಮಡಚಿ, ಕನ್ನಡಕದ ಗೂಡಿನೊಳಗೆ ತುಂಬ ಜಾಗ್ರತೆಯಿಂದ ಇಟ್ಟು ಖಾದಿ ಶರಟಿನ ಎಡ ಬದಿಯ ಸೊಂಟಕ್ಕೆ ತಗಲುವ ಚೀಲದೊಳಗೆ ಸೇರಿಸುತ್ತಿದ್ದರು. ಬೆನ್ನು ಗೂನಾಗಿರದಿದ್ದರೂ ಪ್ರಾಯ ತುಂಬ ಸಂದ ಹಿರಿಯರು ಅವರು ನನ್ನಂತೆಯೆ ಮನೆ ಕಟ್ಟಿಸುವುದಕ್ಕಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುತ್ತಿದ್ದರು. ಅವರ ಮಗ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿದ್ದು, ಆ ಬ್ಯಾಂಕು ಕೊಡುವ ಸಾಲದಿಂದ ಮನೆ ಕಟ್ಟಿಸುವ ಮನ ಮಾಡಿದ್ದರಿಂದ ಈ ಹಿರಿಯರು ಹೀಗೆ ಓಡಾಡುವ ಕೆಲಸ ಬಿದ್ದಿತ್ತು. ಅವರು ಜಾಗ ಕೊಂಡಂದಿನಿಂದ ಅಲೆದಾಡಿ ಸುಸ್ತಾಗಿದ್ದರು. ಸಿಟ್ಟನ್ನು ತೋರ್ಪಡಿಸಿಕೊಳ್ಳಲಾಗದ ಅಸಹಾಯಕತೆಯಿಂದ ವ್ಯಗ್ರರೂ ಆಗಿದ್ದರು. ಆ ಜಾಗದ ಬಗ್ಗೆ ಏನೋ ಗಲಾಟೆ ನಡೆದು ಒಂದು ಸಲ ಪೋಲೀಸು ಸ್ಟೇಶನಿಗೂ ಹೋಗಿ ಬರಬೇಕಾದ ಪರಿಸ್ಥಿತಿಯನ್ನು ಕುರಿತು ಅವರು ನನ್ನೊಂದಿಗೆ ಹೇಳುತ್ತಾ ನಮ್ಮ ಮಧ್ಯೆ ಪರಿಚಯ ಬೆಳೆದಿತ್ತು.

ಮಾರನೆಯ ದಿನ ಯಾವುದೋ ಕಚೇರಿಯ ಹಜಾರದಲ್ಲಿ ನಾವಿಬ್ಬರೂ ಕಾಯಬೇಕಾಗಿ ಬಂದಿತು. ಬೇರೆ ಕೇಲಸವಿಲ್ಲದಿದ್ದುದರಿಂದ ಹತ್ತಿರದ ಒಂದು ಕಾಫಿ ಹೋಟೇಲಿಗೆ ಹೋಗಿ ಕುಳಿತೆವು. ಸಹಜವಾಗಿ ಇಂಥ ಅನಿವಾರ್ಯ ಅಲೆದಾಟಗಳ ಬಗ್ಗೆ ಮಾತುಕತೆ ಬಂದಾಗ ಆ ಹಿರಿಯರಿಗೆ ತುಂಬ ಕಳೆ ಏರಿತು. ಸುಮಾರು ತೊಂಭತ್ತು ವರುಷಗಳ ಹಿಂದೆ ನಡೆಯಿತೆನ್ನಲಾದ ಒಂದು ಕಥಾನಕವನ್ನು ಅವರು ನನಗೆ ವಿವರಿಸಿ ಹೇಳಿದರು. ಅವರ ಮಾತುಗಳಲ್ಲೇ ಅದನ್ನು ಹೇಳುತ್ತೇನೆ.

2

ಹತ್ತೊಂಭತ್ತನೆಯ ಶತಮಾನದ ಕೊನೆಯಲ್ಲಿ ಪರ ಊರಿನಿಂದ ಮಂಗಳೂರು ಪೇಟೆಗೆ ಬಂದು ಇಳಿದರೆ ಕಾಣುವ ದೃಶ್ಯ ಈಗಿನ ಮಂಗಳೂರಿಗಿಂತ ತುಂಬ ಭಿನ್ನ. ಹಂಪನಕಟ್ಟೆಯಲ್ಲಿ ಆಗ ಇಷ್ಟು ದೊಡ್ಡ ಕಟ್ಟಡಗಳು ಇರಲಿಲ್ಲ. ಬರಬೇಕಾದರೆ ಬಸ್ಸುಗಳ ಸೌಕರ್ಯವಿದ್ದರೂ ಅವು ಈಗಿನ ಎತ್ತಿನ ಗಾಡಿಗಳಿಗಿಂತ ಜೋರು ಓಡುತ್ತಿದ್ದವು ಎಂದು ಹೇಳಲಾರೆ. ಬಸ್ಸುಗಳು ಮಸಿ ತುಂಬಿಸಿ ಬೆಂಕಿ ಹಾಕುವಂಥವು. ಅದಕ್ಕೊಂದು ಹೊಗೆ ಕೊಳವೆ. ಅದರಿಂದ ಯಾವಾಗಲೂ ಕಪ್ಪನೆಯ ಹೊಗೆ ಎದ್ದು ಪ್ರಯಾಣಿಕರ ಮುಖವನ್ನೂ ದಿರುಸುಗಳನ್ನೂ ಕಪ್ಪಾಗಿಸುತ್ತಿದ್ದುವು. ಆ ಬಸ್ಸುಗಳ ಕಾರ್ಯ ವಿಧಾನ ಇಲ್ಲಿ ಅಪ್ರಸ್ತುತ. ಆದರೆ ನೀವು ಅವನ್ನು ನೋಡಿರಲಿಕ್ಕಿಲ್ಲ. ನನಗೂ ಕೇಳಿ ಗೊತ್ತು. ಅವುಗಳ ನಂತರ ಗ್ಯಾಸ್ ಬಸ್ಸುಗಳು ಬಂದುವು. ಅವುಗಳನ್ನು ನಾನು ನೋಡಿದ್ದೇನೆ. ಆ ಮೇಲೆ ಪೆಟ್ರೋಲು ಬಸ್ಸುಗಳು. ಆ ಮೇಲೆ ರೈಲುಗಳು. ಅದು ಬಿಡಿ. ಆ ಕಾಲದ ಬಸ್ಸುಗಳು ಎಷ್ಟು ಜೋರಾಗಿ ಓಡುತ್ತಿದ್ದುವೆಂದರೇ ಒಳದಾರಿಯಾಗಿ ನಡೆದರೆ ಅದಕ್ಕಿಂತ ಮೊದಲು ಮುಟ್ಟಬಹುದಿತ್ತು ಎಂದು ನನ್ನ ಚಿಕ್ಕಂದಿನಲ್ಲಿ ಹೇಳುತ್ತಿದ್ದರು.

ಆಗ ಹಂಪನಕಟ್ಟೆಯಲ್ಲಿ ಬಸ್ಸು ನಿಲ್ದಾಣವಿರಲಿಲ್ಲ. ಅದು ಇದ್ದುದು ಈಗ ಮಂಗಳೂರಲ್ಲಿ ನವಭಾರತ ಕನ್ನಡ ದೈನಿಕದ ಕಚೇರಿ ಇದೆಯಲ್ಲ, ಅದರ ಎದುರಿನ ವೃತ್ತದಲ್ಲಿ. ಆ ಮೇಲೆ ಆ ಜಾಗವನ್ನು ಬೆಳತಂಗಡಿಯ ಬಾಳಿಗರೆಂಬುವರು ಕೊಂಡುಕೊಂಡರೆಂದು ನನಗೆ ನೆನಪು. ಬಾಳಿಗರಿಗೆ ಒಂದಷ್ಟು ಜನಸೇವೆಯ ಹುಚ್ಚಿತ್ತು. ಅವರ ವಕೀಲ ಮಕ್ಕಳು ನೇರ ರಾಜಕಾರಣಕ್ಕೆ ಇಳಿದು ತುಂಬ ಹೆಸರುವಾಸಿಯಾದರು. ಬಸ್ಸು ನಿಲ್ದಾಣ ಆ ವೃತ್ತದಲ್ಲಿರಲು ಬಾಳಿಗರು ಕಾರಣರಲ್ಲ. ಯಾಕೆಂದರೆ ಬಸ್ಸು ಓಡಿಸುತ್ತಿದ್ದ ಖಾಸಗೀ ಸಂಸ್ಥೆಯವರ ಗ್ಯಾರೇಜು ಮತ್ತು ಆಫೀಸು ಅಲ್ಲಿಯೇ ಪಕ್ಕದಲ್ಲಿದ್ದುದರಿಂದ ಬಸ್ಸುಗಳು ಅಲ್ಲಿಯೇ ನಿಲ್ಲುವುವು. ಕೋರ್ಟು ಕಚೇರಿಗಳಿಗೂ ಹತ್ತಿರ. ವಕೀಲರೂ ಅಲ್ಲಿಯೇ ಸಿಗುವರು. ಹಾಗಾಗಿ ಬಂಟವಾಳ, ಪಾಣೆ ಮಂಗಳೂರು ಕಡೆಗಳಿಂದ ಬರುವ ಜನರಿಗೆ ಅವೆಲ್ಲ ಅನುಕೂಲವಾಗಿಯೇ ಇದ್ದುವು!

ಈಗ ಬಸ್ ನಿಲ್ದಾಣವನ್ನು ಹಂಪನಕಟ್ಟೆಗೆ ಬದಲಾಯಿಸಿದ್ದು ರೈಲು ನಿಲ್ದಾಣ ಹತ್ತಿರವಿದೆಯೆಂಬ ಕಾರಣಕ್ಕೆ. ನೀವೇ ಹೇಳಿ, ಒಂದು ಊರಲ್ಲಿ ರೈಲು ಬಸ್ಸು ಮತ್ತು ನಗರಸಾರಿಗೆ ನಿಲ್ದಾಣ ಹತ್ತಿರದಲ್ಲಿಯೇ ಇರಬೇಕು. ರೈಲು ನಿಲ್ದಾಣ ಒಂದು ಕಡೆ, ಪರ ಊರುಗಳಿಂದ ಬರುವ ಬಸ್ಸುಗಳ ನಿಲುಗಡೆ ಇನ್ನೊಂದು ದಿಕ್ಕಿನಲ್ಲಿ, ನಗರ ಸಾರಿಗೆ ಬೇರೆಯೇ ಒಂದು ಕಡೆ ಇದ್ದರೆ ಯಾರಿಗೆ ಉಪಕಾರ? ಆಟೋಗಳಿಗೆ ದುಡ್ಡು ತೆತ್ತು ಕಷ್ಟಪಡುವ ಮಂದಿ ನಾವು. ಇದನ್ನೆಲ್ಲ ಗಣನೆಯಲ್ಲಿಟ್ಟು ಆಗಿನ ಡಿಸ್ಟ್ರಿಕ್ಟ್ ಕಲೆಕ್ಟರರು ಮಂಗಳೂರಿಗೆ ಬಂದು ಹೋಗುವ ಮಂದಿಗೆ ಅನುಕೂಲವಾಗಲಿ ಎಂಬ ದೂರದೃಷ್ಟಿಯಿಂದ ಬಸ್ಸು ನಿಲ್ದಾಣವನ್ನು ನವಭಾರತದ ವೃತ್ತದಿಂದ ಈಗಿನ ಸ್ಥಳಕ್ಕೆ ವರ್ಗಾಯಿಸಿದರು.

ಡಿಸ್ಟ್ರಿಕ್ಟ್ ಕಲೆಕ್ಟರರು ಒಬ್ಬ ಫರಂಗಿ ವ್ಯಕ್ತಿ. ಬಹು ಒಳ್ಳೆಯವರು. ಆಗ ಸರಕಾರೀ ಅಧಿಕಾರಿಗಳೆಲ್ಲ ಫರಂಗಿ ಜನರೇ ಆಗಿದ್ದರು. ಮಂಗಳೂರು ಆಗ ಹಳೆಯ ಮದರಾಸು ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು. ಈ ಬಿಳಿ ದೊರೆಗಳು ಅಲ್ಲಿಂದಲೇ ಬರಬೇಕು. ಬಂದವರು ದೊರೆಗಳಂತೆಯೇ ಬಾಳುವೆ ಮಾಡುವರು. ದೊಡ್ಡ ಬಂಗಲೆಯಲ್ಲಿ ಇರುವರು. ಕೈಗೆ ಕಾಲಿಗೆ ಆಳುಗಳು. ದಿನಕ್ಕೊಮ್ಮೆ ಕುದುರೆ ಹತ್ತಿ ವಾಯುವಿಹಾರಕ್ಕೆ ಹೋಗುವರು. ಜನರು ಬಗ್ಗಿ ನಿಂತು ವಂದಿಸಿದರೆ ಸಲಾಮು ಸ್ವೀಕರಿಸಿ ಮುಂದೆ ಹೋಗುವರು.

ಬಸ್ಸು ನಿಲ್ದಾಣವನ್ನು ಹಂಪನಕಟ್ಟೆಗೆ ವರ್ಗಾಯಿಸಿದಾಗ ಮೊದ ಮೊದಲು ಜನರಿಗೆ ಅನಾನುಕೂಲವಾದದ್ದುಂಟು. ದೊರೆಗಳು ರೈಲಿನಿಂದ ಇಳಿದರೆ ಅವರ ಆಳುಕಾಳುಗಳಿಗೆ, ಅವರಿಗೆ ಸಂಬಂಧಿಸಿದ ಸಾಮಾನುಗಳ ಸಾಗಣೆಗೆ ಅನುಕೂಲವಾಗಲಿ ಎಂದು ಬಸ್ಸು ನಿಲ್ದಾಣ ವರ್ಗಾಯಿಸಿದರು. ಜನರ ಅನುಕೂಲ ನೋಡಲಿಲ್ಲ ಎಂದು ಕೆಲವರು ಮಾತನಾಡಿದ್ದುಂಟು. ಬಸ್ಸು ನಿಲ್ದಾಣ ನವಭಾರತದ ಎದುರಿನ ವೃತ್ತಕ್ಕೆ ಬರುವ ಮೊದಲು ಈಗಿನ ಗಣಪತಿ ದೇವಸ್ಥಾನದ ವಠಾರದಲ್ಲಿದ್ದುದನ್ನು ನೋಡಿದ ಹಳಬರಿದ್ದರು. ಅದು ಗೊಲ್ಲರ ಕೇರಿಯ ಹತ್ತಿರ ಇರುವ ಮುಂಡಪ್ಪ ಬಂಗೇರರ ಬಂಗಲೆಗಳ ಎದುರು. ಅಲ್ಲಿಂದ ನವಭಾರತ ವೃತ್ತಕ್ಕೆ ಬದಲಾಯಿತು. ಜನರು ಗೊಣಗಿದರು. ಈಗ ಹಂಪನಕಟ್ಟೆಗೆ. ಈಗಲೂ ಜನ ಗೊಣಗುತ್ತಾರೆ. ನಾಳೆ ಹಂಪನಕಟ್ಟೆಯಿಂದ ಬೇರೆಡೆಗೆ ಬದಲಾಗಬಹುದು. ಆಗಲೂ ಜನ ಗೊಣಗುತ್ತಾರೆ, ಮತ್ತೆ ತೆಪ್ಪಗಾಗುತ್ತಾರೆ ಎಂದು ಆಳುವ ಜನರಿಗೆ ಗೊತ್ತು. ಅಲ್ಲವೇ?

ಜನರು ಆಗ ತೆಪ್ಪಗಿರಲು ಅದೊಂದೇ ಕಾರಣವಲ್ಲ. ಎಲ್ಲೇ ಆದರೂ ಮಂಗಳೂರಿನಲ್ಲೇ ತಾನೇ? ಅಲ್ಲದೇ ಬಸ್ಸು ನಿಲ್ದಾಣದ ಬದಲಾವಣೆಯ ಇಸ್ತಿಹಾರನ್ನು ಹಾಕಿದವರು ಬಿಳಿಯ ದೊರೆಗಳು. ಅವರು ಮಂಗಳೂರಿನ ಬಸ್ಸು ನಿಲ್ದಾಣವನ್ನು ಬಂಟವಾಳದಲ್ಲಿ ಹಾಕಿ ಎಂದರೂ ಆಗಿನ ಜನರು ಮಾತನಾಡುವ ಹಾಗಿರಲಿಲ್ಲ. ಹಾಗಾಗಿ ಇಸ್ತಿಹಾರು ಅಮಲಜಾರಿಯಾಯಿತು.

ಆದರೆ ನಾನು ಹೇಳುವ ಘಟನೆಯ ಸಮಯಕ್ಕೆ ಇನ್ನೂ ಬಸ್ಸು ನಿಲ್ದಾಣ ಹಂಪನಕಟ್ಟೆಗೆ ವರ್ಗವಾಗಿರಲಿಲ್ಲ. ಮಾತನಾಡುತ್ತಾ ನಾನು ಬೇರೆ ಯಾವುದೋ ವಿಚಾರಕ್ಕೆ ತಲುಪಿದೆ. ಇರಲಿ. ಆಗ ಹಂಪನಕಟ್ಟೆ ಎಂದು ಗುಡ್ಡದಂತಹ ಪ್ರದೇಶ. ಬಾವಟೆಗುಡ್ಡೆಯಷ್ಟು ಎತ್ತರವಾಗಿಲ್ಲದಿದ್ದರೂ ಸಮುದ್ರಕ್ಕೆ ಮುಖ ಮಾಡಿ ನಿಂತರೆ ಬಾವಟೆ ಗುಡ್ಡೆಯ ಎಡಗಡೆ ಇದ್ದ ವಿಶಾಲವಾದ ಪದವು ಪ್ರದೇಶ. ಜನ ಸಂಚಾರವೂ ಕಡಿಮೆ. ಮರಗಿಡಗಳೂ ಹೆಚ್ಚು. ಹಗಲಿನಲ್ಲೇ ಅಲ್ಲಿ ಕೊನೆಯಾದ ಘಟನೆಗಳಿದ್ದುವು. ಒಂಟಿ ಹೆಣ್ಣುಗಳು ಮಾನ ಉಳಿಸಿಕೊಳ್ಳುವುದಕ್ಕಾಗಿ ಆ ಕಡೆ ಎಂದೂ ಒಬ್ಬರೇ ಓಡಾಡಿದ್ದಿಲ್ಲ. ಕೊಡಗಿನ ಕಲ್ಯಾಣಪ್ಪನ ಕಥೆ ಕೇಳಿರಬೇಕು ನೀವು. ಅವನು ಅಲ್ಲಿಗೆ ಬಂದು ಗಲ್ಲುಕಂಭವೇರಿದ್ದು ಈ ಘಟನೆಗಿಂತ ಬರೇ ಅರವತ್ತು ವರ್ಷಗಳ ಮೊದಲು. ಅವನ ಕಾಟಕಾಯಿಯಿಂದ ಜನರಿಗೆ ಕಳ್ಳರ ಬಗ್ಗೆ, ದರೋಡೆಕಾರರ ಬಗ್ಗೆ ಹೆದರಿಕೆ ಇನ್ನೂ ಹಸಿಹಸಿಯಾಗಿತ್ತು.

ಅಂಥ ದಿನಗಳಲ್ಲಿ ಹಂಪನಕಟ್ಟೆಯಲ್ಲಿ ಒಂದು ಹೋಟೇಲಿತ್ತು. ಹೋಟೇಲು ಅಂದರೆ ನಾವೀಗ ಕುಳಿತು ಕಾಫಿ ಕುಡಿಯುವಂಥ ಹೋಟೇಲಲ್ಲಿ. ಕುರ್ಚಿ ಮೇಜುಗಳು ಆಗ ಸಂಸ್ಕೃತಿಯಲ್ಲ. ಅದು ಒಂದು ಮುಳಿ ಹುಲ್ಲಿನ ಗುಡಿಸಲು. ತಗ್ಗು ಮಾಡು. ಒಳಗೆ ಹೋಗಬೇಕಾದರೆ ಸಾಕಷ್ಟು ಬಗ್ಗಿಯೇ ಹೋಗಬೇಕು. ಒಳಗೋ, ಹೊಗೆಯಿಂದ ಕಪ್ಪಾದ ಸೂರು. ಅಂಥ ಸೂರುಗಳನ್ನು ನೀವು ನೋಡಿದ್ದೀರೋ ಇಲ್ಲವೋ? ಉದ್ದವಾದ ಬಿದಿರುಗಳ ಮೇಲೆ ಮಡಲಿನ ಹಾಸು ಹಾಕಿ ಮುಳಿ ಹುಲ್ಲನ್ನು ಪೇರಿಸುತ್ತಿದ್ದರು. ಕಟ್ಟುವಾಗ ಅವೆಲ್ಲ ಹಳದಿ ಬಣ್ಣದ್ದಿರಬೇಕು. ಆದರೆ ಸೌದೆಯ ಅಡುಗೆಯ ಕಾರಣದಿಂದ ಕಪ್ಪಗಾಗಿತ್ತು. ನೀರು ಕುಡಿಯಲು ಇಟ್ಟ ಹಂಡೆಯ ಕೆಳಗೆ ನಿಗಿನಿಗಿ ಕೆಂಡ ಪಕ್ಕದಲ್ಲಿಯೇ ದೋಸೆ ಕಾವಲಿ. ಒಲೆಯ ಬಳಿಪೋಡಿ, ಆಂಬೋಡೆ ಕರಿದು ಮಡ್ಡುಗಟ್ಟಿದ ಎಣ್ಣೆ ಇದ್ದ ಕಬ್ಬಿಣದ ಕಾವಲಿ. ಹಿಂದುಗಡೆ ಎಂಜಲು ಗ್ಲಾಸು ತಟ್ಟೆ ತೊಳೆದ ನೀರು ಹೋಗಲು ಮಾಡಿದ ಒಂದು ಕೆಸರು ತೋಡು!

ಹೋಟೇಲನ್ನು ವೆಂಕು ಹೆಂಗಸು ಎಂಬಾಕೆ ನಡೆಸುತ್ತಿದ್ದಳು. ಅವಳೊಬ್ಬಳು ವಿಧವೆ. ಅವಳ ಗಂಡ ಜಾರಪ್ಪಯ್ಯ ಎಂಬುವ ಇಪ್ಪತ್ತರ ವಯಸ್ಸಿನಲ್ಲೇ ತೀರಿಕೊಂಡಿದ್ದ. ಅವನಿಗೊಬ್ಬಳು ತಾಯಿ. ಆಗಿನ್ನೂ ಬದುಕಿದ್ದ ಆಕೆಯ ಹೆಸರು ಬಿಲ್ಲತಿ ಕೊರಪಳು ಎಂದು.

ಇದೇನು ಕೊರಪಳು ಅಂತ ಹೆಸರು. ಆಗಿನ ಸಮಾಜದ ನಿಮ್ಮ ವರ್ಗದವರಿಗಲ್ಲವೇ ಇರುವುದು ಅಂತ ನೀವು ಕೇಳಬಹುದು. ಅದು ನಿಜ. ನಮ್ಮವರು ಅಸ್ಪೃಶ್ಯರೆಂದು ಕರೆಯುತ್ತಿದ್ದ ಮಂದಿಯಲ್ಲಿ ಆ ಹೆಸರು ವಾಡಿಕೆಯಲ್ಲುಂಟು. ಬಿಲ್ಲತಿ ಕೊರಪಳು ದೀವರ ಜಾತಿಯವಳು. ಅವಳು ಚಿಕ್ಕವಳಿರುವಾಗ ಏನೋ ಕಾಯಿಲೆಯಿಂದ ನರಳುತ್ತಾ ಇದ್ದು, ಬದುಕುವುದು ಅಸಾಧ್ಯವಾದಾಗ ಹೆತ್ತವರು ಅವಳನ್ನು ಆಗಿನ ಸಂಪ್ರದಾಯದಂತೆ ಅಸ್ಪೃಶ್ಯರಿಗೆ ದಾನ ಮಾಡಿದರಂತೆ. ಆ ಮೇಲೆ ಅಕ್ಕಿ ಕಾಯಿ ಪಡಿ ಕೊಟ್ಟು ಹಿಂದಕ್ಕೆ ಪಡೆದರಂತೆ. ಆದುದರಿಂದ ಆ ಹೆಸರು ಬಂತಂತೆ!

ಆಗಿನ ಕಾಲಕ್ಕೆ ಬಿಲ್ಲತಿ ಕೊರಪಳು ಅಸಾಧ್ಯ ಹೆಂಗಸೇ. ಮಗ ಸತ್ತರೂ, ಸೊಸೆಯಾಗಿ ಬಂದ ವೆಂಕು ಹೆಂಗ್ಸಿನ ಮೂಲಕ ವಹಿವಾಟು ನಡೆಸಿದಳು. ಮರ್ಯಾದೆಯಿಂದ ಬಾಳಿದಳು. ಹೋಟೇಲಿಗೆ ವೆಂಕು ಹೆಂಗ್ಸಿನ ಹೋಟೇಲು ಎಂದೇ ಜನ ಕರೆಯುವುದು.

ಬಂದರಿಗೆ ಬಂದ ಮುಸಲಮಾನರು, ಪೇಟೆಗೆ ಬಂದ ಬಂಟ ಯಾ ನಾಡವರು, ಮೊಗವೀರರು, ಕಿರಿಸ್ತಾನರು, ಇನ್ನಿತರ ಪ್ರಯಾಣಿಕರು ವೆಂಕು ಹೆಂಗ್ಸಿನ ಹೋಟೇಲಿಗೆ ಬರುತ್ತಿದ್ದರು. ವೆಂಕು ಹೆಂಗ್ಸಿನ ದೋಸೆಯ ರುಚಿಗೆ ಅವರ ಬಾಯಿಯಲ್ಲಿ ನೀರೂರುತ್ತಿತ್ತು. ಒಳ್ಳೆಯ ಕೊಬ್ಬರಿ ಎಣ್ಣೆ ಹಾಕಿ ಮಾಡಿದ ಉದ್ದಿನ ದೋಸೆ, ಕಾಯಿ ಚಟ್ನಿ. ವೆಂಕು ಹೆಂಗ್ಸಿನ ಕೈ ಗುಣವೋ ಬಿಲ್ಲತಿ ಕೊರಪಳುವಿನ ದೆಸೆಯೋ, ಹೋಟೇಲಿಗೆ ಒಳ್ಳೆಯ ವ್ಯಾಪಾರ. ಅವರು ಇವರು ಎಂದೇಕೆ, ಕೆಲವು ಕೊಂಕಣಿ ಯುವಕರೂ ಗುಟ್ಟಾಗಿ ಬಂದು ಬಿಸಿ ಬಿಸಿ ದೋಸೆ ತಿಂದು, ತಟ್ಟೆಯಲ್ಲೆ ಕೈ ತೊಳೆದು ಹಿಂಬಾಗಿಲಲ್ಲಿ ಹೋಗುವ ಕ್ರಮವಿತ್ತು. ಬಿಲ್ಲತಿ ಕೊರಪಳು ಆಗಲೀ, ವೆಂಕು ಹೆಂಗ್ಸಾಗಲೀ ನಿಯತ್ತಿನ ಹೆಂಗಸರೇ. ತಮ್ಮ ಹೋಟೆಲಿಗೆ ಜನಿವಾರದ ಮಂದಿ ಬರುವುದನ್ನು ತಪ್ಪಿಯಾದರೂ ಇತರರೊಂದಿಗೆ ಹೇಳಿದವರಲ್ಲ.
ಆ ದೋಸೆಯ ರುಚಿಯನ್ನು ನೀವು ತಿಂದು ತಿಳಿಯಬೇಕು. ಇವರೇ! (ಈ ಮಾತು ಹೇಳುವಾಗ ನನ್ನ ಗೆಳೆಯರ ಬಾಯಿಯಲ್ಲಿ ನೀರೂರಿದ್ದನ್ನು ನಾನು ನೋಡಿದೆ. ಅವರು ಒಂದು ಗ್ಲಾಸು ನೀರು ಕುಡಿದು ಕತೆಯನ್ನು ಮುಂದುವರಿಸಿದರು) ಆಗಿನ ಕಾಲವೂ ಅಂಥಾದ್ದೇ ಕಲಬೆರಕೆಯ ಮ್ಹಾಲಿಲ್ಲ. ವ್ಯಾಪಾರದಲ್ಲಿ ಮೋಸವಿಲ್ಲ. ಬಂದವರು ದುಡ್ಡಾದರೂ ಕೊಡಲಿ, ಕಾಯಿ, ತರಕಾರಿ, ಅಕ್ಕಿ ಅಥವಾ ಇನ್ನೇನಾದರೂ ಕೊಡಲಿ, ವ್ಯಾಪಾರ ನೇರ. ಆ ದೋಸೆಯ ಖ್ಯಾತಿ ಎಷ್ಟು ವ್ಯಾಪಿಸಿತ್ತೆಂದರೆ ಕಲೆಕ್ಟರರ ಕಿವಿಗೆ ಕೂಡಾ ಮುಟ್ಟಿತ್ತು.

ಆಗಿನ ಡಿಸ್ಟ್ರಿಕ್ಟ್ ಕಲೆಕ್ಟರರ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ತೀರ ಚಿಕ್ಕಂದಿನಲ್ಲಿ ಅವರು ಕುದುರೆಯ ಸಾರೋಟಿನ ಮೇಲೆ ನನ್ನ ಊರಿಗೂ ಬಂದಿದ್ದಿದೆ. ಬಿಳಿಯ ಕುದುರೆಗಳು, ಕಪ್ಪು ಚರ್ಮದ ಜೀನುಗಳು, ಕಡು ಹಸುರಿನ ಸಾರೋಟು. ಅದರ ಮೇಲೆ ಕೆಂಪು ಮೂತಿಯ ಇಂಗ್ಲೀಷು ದೊರೆ ಬಂದರೆಂದರೆ ಊರನ್ನು ಬಡಿದೆಬ್ಬಿಸಿದ ವಾತಾವರಣವಿರುವುದು. ಹುಡುಗರಾದ ನಮಗೆಲ್ಲ ಭಯದಷ್ಟೇ ಕುತೂಹಲ. ನಮ್ಮೂರಿನ ಹಿರಿಯರಿಗೆ ದೊರೆಯಿರಲಿ, ಸಾರೋಟು ಓಡಿಸುವ ಮಸಲಮಾನ ಜವಾನನನ್ನು ನೋಡಿದರೂ ಭಯವೇ. ಬಹುಶಃ ನಾನು ನೋಡಿದ್ದ ದೊರೆಯೇ ಇರಬಹುದು. ಅಥವಾ ಅವನಿಗಿಂತ ಹಿಂದಿನವನೇ ಇರಬಹುದು. ಕೌಬ್ಮೆನ್ ಅಂತಲೋ, ಲಂಕೇನ್ ಶಯರ್ ಅಂತಲೋ ಇರಬೇಕು. ಯಾರೇ ಇರಲಿ, ದರ್ಪಗಡಸು ತುಂಬಿದ ಜನವಲ್ಲ. ತೆಳ್ಳಗೆ, ಕೆಂಪಗೆ ಇದ್ದರು. ಅವರು ಕುದುರೆಯ ಮೇಲೆ ಹೋಗುವುದು ಬೆಳಗಿನ ಹೊತ್ತು ಮಾತ್ರ. ಆ ಮೇಲೆ ಒಂದು ಇಜಾರ ಹಾಕಿ, ಶರಟು ಧರಿಸಿ, ಕೈಯಷ್ಟು ಅಗಲವಾದ ಟೈ ಧರಿಸಿ ಖಾಕಿ ಬಣ್ಣದ ಹ್ಯಾಟು ಇಟ್ಟು ಸೈಕಲ್ಲಿನಲ್ಲಿ ಕಛೇರಿಗೆ ಬರುತ್ತಿದ್ದರು.

ಕಲೆಕ್ಟರ್ ಸಾಹೇಬರಿಗೆ ವೆಂಕು ಹೆಂಗ್ಸಿನ ಹೋಟೇಲ್ ಬಗ್ಗೆ ಒಂದು ಮೂಗರ್ಜಿ ಮುಟ್ಟಿತ್ತು. ಪ್ರಪಂಚದಲ್ಲಿ ಒಳ್ಳೆಯವರ ಜೊತೆ ಕೆಟ್ಟವರೂ ಇರುತ್ತಾರೆ ನೋಡಿ. ವೆಂಕು ಹೆಂಗ್ಸಿಗೆ ಆಗದ ಮಂದಿ ಒಂದು ಮೂಗರ್ಜಿ ಬರೆದು ಕಲೆಕ್ಟರ್ ಆಫೀಸಿನಲ್ಲಿ ಹಾಕಿದ್ದರು. ಆ ಕಲೆಕ್ಟರ್ ಸಾಹೇಬರದ್ದು ಒಂದು ನಿಯಮ. ಬಂದ ಪತ್ರಗಳನ್ನೆಲ್ಲ ಅವರೇ ಒಡೆದು ನೋಡಿ, ಓದಿ ಷರಾ ಬರೆದು ಸಂಬಂಧಪಟ್ಟ ಕಾರಕಾನನಿಗೆ ಕಳುಹಿಸುತ್ತಿದ್ದರು. ಈ ಮೂಗರ್ಜಿಯನ್ನು ವಿತರಣೆ ಮಾಡುವ ಮುನ್ನ, ಅವರು ತಮ್ಮ ಕೋಣೆಯ ಬಾಗಿಲ ಹೊರಗೆ ಕುಳಿತಿದ್ದ ಜವಾನನ್ನು ಕರೆದು ವೆಂಕು ಹೆಂಗ್ಸಿನ ಹೋಟೇಲಿನ ಬಗ್ಗೆ ವಿಚಾರಿಸಿದರು. ಆ ಜವಾನನ ಹೆಸರು ಕೆಂಪನೆಂದು. ಅವನೂ ಆ ಹೋಟೇಲಿನ ಗಿರಾಕಿಯೇ. ಆದರೆ ಸಾಹೇಬರಿಗೆ ಆ ಹೋಟೇಲಿನ ಹೆಸರುವಾಸಿ ದೋಸೆಯ ಬಗ್ಗೆ ಹೇಳುವ ಧೈರ್ಯ ಅವನಿಗಿರಲಿಲ್ಲ. ಅವನು “ಹೋಟೇಲು ಅಂತ ಉಂಟು” ಎಂದಷ್ಟೇ ಜಾರುವ ಉತ್ತರ ಕೊಟ್ಟ. ಸಾಹೇಬರು ಮೂಲ ಬರೇ ಒಂದು ಮೂಗರ್ಜಿಯಾದುದರಿಂದ ಆ ವಿಚಾರವನ್ನು ಅಲ್ಲಿಯೇ ಬಿಟ್ಟರು. ಮೂಗರ್ಜಿಯನ್ನು ಮಾತ್ರ ತಮ್ಮ ಬಳಿಯೇ ಇಟ್ಟುಕೊಂಡರು.

ಆ ಸಂಜೆ ಕೆಂಪ ಹೆಂಗ್ಸಿನ ಹೋಟೇಲಿಗೆ ಹೋದ. ಸಾಹೇಬರು ಹೋಟೇಲು ಮುಚ್ಚಬೇಕೆಂದು ಹೇಳಿರುವುದಾಗಿ ಅವಳನ್ನು ಬೆದರಿಸಿದ. ಕೆಂಪ ಹೋಟೇಲಿಗೆ ಹೊಸಬನೇನಲ್ಲ. ಸಂಜೆ ಕಚೇರಿ ಮುಗಿಸಿ ಮನೆಗೆ ಮರುಳುವ ಹೊತ್ತಿನಲ್ಲಿ ಆ ಕಡೆ ಬರುವುದುಂಟು. ಎರಡು ದೋಸೆ ತಿಂದು, ಗ್ಲಾಸು ತೊಳೆಯುವ ಬೊಗ್ರನ ಕೈಯಿಂದ ಎರಡೆರಡು ಗ್ಲಾಸು ನೀರು ತರಿಸಿ ಕುಡಿಯುವುದುಂಟು. ಸರಕಾರೀ ನೌಕರನೆಂದು ಕೆಂಪನನ್ನು ವೆಂಕು ಹೆಂಗ್ಸು ಎದುರು ಹಾಕಿಕೊಳ್ಳುವಂತಿರಲಿಲ್ಲ. ಆಗಾಗ ಕಡ ಅಲ್ಲದೇ ವಾರಕ್ಕೊಮ್ಮೆ ಪುಗಸಟ್ಟೆ ಕೊಡುವ ಕ್ರಮವನ್ನು ಇಟ್ಟಿದ್ದಳು. ಕೆಂಪನ ಮಾತು ಕೇಳಿ ಅಲ್ಲಿಯೇ ಕೂತಿದ್ದ ಬಿಲ್ಲತಿ ಕೊರಪಳು “ಯಾಕೆ ಮುಚ್ಚುವುದು?” ಎಂದು ಕೇಳಿದಳು. ಕಾವಲಿಯ ಮೇಲೆ ದೋಸೆ ಮಗುಚಿ ಹಾಕುತ್ತಿದ್ದ ವೆಂಕು ಹೆಂಗ್ಸು ದನಿ ಎತ್ತರಿಸಿ “ನಾವು ಯಾರಿಗೂ ಚೆಪ್ಪುಡಿ ಮಾಡಿಲ್ಲ. ನಮ್ಮ ಮೇಲೆ ದೊರೆಗಳ ಕಣ್ಣು ಬೀಳಬೇಕಾದರೆ ಯಾರಾದರೂ ಹೇಳಿ ಕೊಡಬೇಕು. ಈ ಶಹರದಲ್ಲಿ ಹಾಗೆ ಹೇಳಿ ಕೊಡುವವರಿಗೇನೂ ಕಮ್ಮಿ ಇಲ್ಲವಲ್ಲ?” ಎಂದು ಹೇಳಿ ಮೂಗೊರಸಿಕೊಂಡಳು. ಏನೇ ಇದ್ದರೂ ಕೆಂಪ “ಇದು ಯಾರೋ ನಿಮಗೆ ಆಗದವರು ಚದಿ ಮಾಡಿದ್ದು” ಎಂದು ಹೇಳಿ ಆ ದಿನ ತಿಂದದ್ದಕ್ಕೆ ದುಡ್ಡು ಕೊಡದೇ ಹೊರಟು ಹೋದ.

ಕಲೆಕ್ಟರ್ ಸಾಹೇಬರು ಆ ಹಪ್ತೆಯಲ್ಲೊಮ್ಮೆ ವೆಂಕು ಹೆಂಗ್ಸಿನ ಹೋಟೇಲಿಗೆ ಭೇಟಿ ಕೊಡುವುದು ಮಾತ್ರ ಅನಿವಾರ್ಯವಾಯಿತು. ಯಾಕೆಂದರೆ ಆ ಮೂಗರ್ಜಿಯ ಹಿಂದೆ ಇನ್ನೆರಡು ಅಂಥವೇ ಅರ್ಜಿಗಳೂ ಅವರಿಗೆ ತಲುಪಿದ್ದುವು. ಅಲ್ಲದೇ ಬಂದ ಆ ಪತ್ರದಲ್ಲಿ ಒಂದು ವಿಶೇಷ ಮಾಹಿತಿ ಇತ್ತು. ಅದಕ್ಕವರು ತಮ್ಮ ನೇರಳೆ ಬಣ್ಣದ ಶಾಯಿಯಲ್ಲಿ ಕೆಳಗೆರೆ ಎಳೆದು ತಮ್ಮ ಬಳಿಯೇ ಇಟ್ಟುಕೊಂಡರು. ಅದು ವೆಂಕು ಹೆಂಗ್ಸಿನ ನಡತೆಗೆ ಸಂಬಂಧಪಟ್ಟುದಾದುದರಿಂದ ಯಾರಿಗೂ ಹೇಳುವಂಥದ್ದಲ್ಲ. ಆ ಮಧ್ಯಾಹ್ನ ಮೂರು ಘಂಟೆಗೆ ಅವರು ತಮ್ಮ ತಲೆಯ ಮೇಲೆ ಹ್ಯಾಟು ಇಟ್ಟು, ಸೈಕಲ್ ಹತ್ತಿ ನೇರ ಹಂಪನಕಟ್ಟೆಗೆ ಬಂದರು. ಹೋಟೇಲಿನ ಎದುರು ಸೈಕಲನ್ನು ಒರಗಿಸಿ, ಹ್ಯಾಟು ತೆಗೆದು ಎಡ ಕಂಕುಳಲ್ಲಿಟ್ಟು, ಬಲಗೈಯಿಂದ ಅದನ್ನು ಹಿಡಿದುಕೊಂಡೇ ಬಗ್ಗಿ ಒಳಗೆ ಬಂದರು.
ಹೋಟೇಲಿನಲ್ಲಿ ಆಗ ಏಳೆಂಟು ಗಿರಾಕಿಗಳು ಕುಕ್ಕರುಗಾಲಿನಲ್ಲಿ ಕುಳಿತು ದೋಸೆ ತಿನ್ನುತ್ತಿದ್ದರು. ಕಲೆಕ್ಟರರನ್ನು ನೋಡುತ್ತಲೇ ಅವರು ಗಾಬರಿಯಿಂದ ಎದ್ದು ನಿಂತರು. ಒಳ್ಳೆಯ ಕಳೆ ಏರಿದ್ದ ಅವರ ಸಂಭಾಷಣೆ ತಂತಿ ಕಿತ್ತ ಪಿಟೀಲಿನ ಸ್ವರದಂತೆ ಒಮ್ಮೆಗೇ ನಿಂತು ಹೋಯಿತು. ಕಲೆಕ್ಟರ್ ಸಾಹೇಬರು ಹೊಗೆ ತುಂಬಿದ ಹೋಟೇಲನ್ನು ನಿಂತಲ್ಲಿಂದಲೇ ಕಣ್ಣಾಡಿಸಿ ನಿರುಕಿಸಿದರು. ಅಲ್ಲಿ ತುಂಬಿದ ಅನಾರೋಗ್ಯಕಾರಿ ವಾತಾವರಣ ಆ ಫರಂಗಿ ದೊರೆ ಅಸಹ್ಯಗೊಳ್ಳುವಂತೆ ಮಾಡಿತಾದರೂ ಅವರು ಅದನ್ನು ತೋರಿಸಿಕೊಳ್ಳಲಿಲ್ಲ. ಬದಲಾಗಿ “ವೆಂಕು ಹೆಂಗ್ಸು ಯಾರು?” ಎಂದು ತಮ್ಮ ತನಿಖೆಗೆ ಕೈ ಹಾಕಿದರು. ವೆಂಕು ಹೆಂಗ್ಸು ಅವರೆದುರು ಬಂದಾಗಲೇ ಅವರು ಅವಳನ್ನು ಸರಿಯಾಗಿ ನೋಡಿದ್ದು.

ವೆಂಕು ಹೆಂಗ್ಸಿಗೆ ಆಗ ಮೂವತ್ತರ ವಯಸ್ಸು. ದುಡಿಯುತ್ತಿದ್ದುದರಿಂದ ಒಳ್ಳೆಯ ಮೈಕಟ್ಟು. ಸ್ನಾನ ಮಾಡದೇ ಇದ್ದು, ಮೈ ತುಂಬ ಬೆವರು ತುಂಬಿ, ಹೊಗೆಯಿಂದಾಗಿ ಮುಖ ಕಪ್ಪಾಗಿದ್ದರೂ ಅವಳು ಬೆಳ್ಳಗಿನ ಬಣ್ಣದವಳೇ ಎಂದು ಕಲೆಕ್ಟರ್ ಸಾಹೇಬರು ತಿಳಿಯುವುದು ಕಷ್ಟವಾಗಿರಲಿಲ್ಲ. ನೋಡಲು ಆಕರ್ಷಕ ಮುಖ, ಸುಮಾರು ಅರ್ಧ ಘಂಟೆ ಸಾಹೇಬರು ಅಲ್ಲಿದ್ದರು ಅಂತ ಮುಂದೆ ಬಿಲ್ಲತಿ ಕೊರಪಳು ಹೇಳಿದಿತ್ತು. ಎರಡು ದೋಸೆಯನ್ನು ತಿಂದರು ಎಂದು ಜಂಭ ಕೊಚ್ಚಿದ್ದೂ ಇತ್ತು. ಆದರೆ ಆ ದಿನ ಸಾಹೇಬರು ಮಾತನಾಡಿದ್ದು ಮಾತ್ರ ಶಹರದ ಆರೋಗ್ಯಕರ ವಾತಾವರಣದ ಬಗ್ಗೆಯೇ. ಕೊಳಚೆ ನೀರನ್ನು ಬಿಡಲು ಒಂದು ಅಡಿಯಾದರೂ ತಗ್ಗಿನ ತೋಡು ಮಾಡಬೇಕೆಂದರು. ಹೋಟೇಲಿನ ಒಳಗೆ ಹೊಗೆ ತುಂಬದಂತೆ ಕೊಳವೆ ಇಡುವಂಥ ಏನಾದರೂ ವ್ಯವಸ್ಥೆ ಮಾಡಬೇಕೆಂದರು. ಅಲ್ಲಿ ಕುಳಿತಿದ್ದ ಒಬ್ಬ ಗಿರಾಕಿಗೆ ಆನೆಕಾಲು ರೋಗ. ಎರಡೂ ಕಾಲುಗಳು ದಪ್ಪಗಾಗಿ ಗುಟು ಮೂಡಿತ್ತು. ಅದನ್ನು ಕಂಡು ಕುಡಿಯಲು ಬಳಸುವ ನೀರು ಯಾವುದು ಎಂದು ಕೇಳಿದರು. ಶಹರದಲ್ಲಿ ಆನೆ ಕಾಲು ರೋಗ ವಿಪರೀತ ಬಳಸುವ ನೀರು ಯಾವುದು ಎಂದು ಕೇಳಿದರು. ಶಹರದಲ್ಲಿ ಆನೆ ಕಾಲು ರೋಗ ವಿಪರೀತ ಇದೆ, ನೀರು ಬಿಸಿ ಮಾಡದೇ ಕುಡಿಯ ಕೊಡಕೂಡದು ಎಂದು ತಾಕೀತು ಮಾಡಿದರು. ಇಲ್ಲದೇ ಹೋದಲ್ಲಿ ಹೋಟೇಲು ಮುಚ್ಚಿಸಬೇಕಾಗುತ್ತದೆ ಎಂದು ಹೇಳಿ ಸೈಕಲು ಹತ್ತಿ ಹೊರಟು ಹೋದರು. ಅವರು ಬಂದ ಉದ್ದೇಶ ಬೇರೆ. ಆದರೆ ವೆಂಕು ಹೆಂಗ್ಸನ್ನು ನೋಡಿದ ಮೇಲೆ ಆಕೆ ಅಂಥವಳಿರಲಾರಳೆಂದು ಅವರಿಗೆ ಅನ್ನಿಸಿರಬೇಕು.

ಕೆಲವು ದಿನಗಳ ತನಕ ವೆಂಕು ಹೆಂಗ್ಸಿನ ಹೋಟೇಲಿಗೆ ಕಲೆಕ್ಟರ್ ಸಾಹೇಬರೇ ಖುದ್ದಾಗಿ ಬಂದು ಹೋದರು ಎಂದು ಘನತೆ ಹೆಚ್ಚಿತ್ತು. ಈ ಮಧ್ಯೆ ವೆಂಕು ಹೆಂಗ್ಸು ಸಾಹೇಬರು ಬಂದುದರ ನಿಜವಾದ ಕಾರಣ ತಿಳಿಯುವ ಪ್ರಯತ್ನ ಮಾಡಿದಳು. ಅವಳ ಹೋಟೇಲಿಗೆ ಮಾಬೆನ್ ಎಂಬ ಒಬ್ಬರು ಮಿಶನ್ ಜಾತಿಯವರು ಆಗಾಗ ಬರುತ್ತಿದ್ದರು. ಅವರಿಗೆ ಕಲೆಕ್ಟರರ ಕಚೇರಿಯಲ್ಲಿಯೇ ಕಾರಕೂನಿಕೆಯ ಕೆಲಸ. ತುಸು ಪ್ರಾಯ ಸಂದ ಜೀವ. ನಡೆಯುವಾಗ ಸ್ವಲ್ಪ ಬಗ್ಗಿಕೊಂಡ ನಡಿಗೆ. ತಲೆಗೊಂದು ಕರಿಯ ಟೊಪ್ಪಿಗೆ, ಬಣ್ಣ ಹೋದ ಇಜಾರ, ಮೇಲೆ ಒಂದು ಹತ್ತಿಯ ಕೋಟು, ದಪ್ಪ ಮೀಸೆ ಬಿಟ್ಟಿದ್ದ ವ್ಯಕ್ತಿ. ಮೀಸೆ ಹಣ್ಣಾಗಿದ್ದರೂ ಚೆನ್ನಾಗಿ ಕತ್ತರಿ ಆಡಿಸುತ್ತಿದ್ದುದರಿಂದ ಹರವಾಗಿತ್ತು. ದಪ್ಪನೆಯ ಹುಬ್ಬು, ಪ್ರಾಯ ಸಂದರೂ ನಾಲಿಗೆಯ ಚಪಲ ಜಾಸ್ತಿ. ಅವರು ಹೋಟೇಲಿಗೆ ಬಂದರೆ ಬೇಗ ಹೋಗುತ್ತಿರಲಿಲ್ಲ. ನಿಧಾನವಾಗಿ ದೋಸೆ ತಿನ್ನುತ್ತಾ, ಅದೂ ಇದೂ ಮಾತನಾಡಿ ಕತ್ತಲಾದ ಮೇಲೆಯೇ ಎದ್ದು ನಡೆಯುವರು. ವೆಂಕು ಹೆಂಗ್ಸು ಅವರನ್ನು ಎದುರಿಗೆ ಕುಳ್ಳಿರಿಸಿ, ಎರಡು ದೋಸೆಗಳನ್ನು ಒತ್ತಾಯ ಪೂರ್ವಕವಾಗಿ ತಿನ್ನಿಸಿ ವಿಚಾರಿಸಿಕೊಂಡಳು. ಇದು ತನಗಾಗದ ಮಂದಿಯೇ ಮಾಡಿದ ಕಿತಾಪತಿ ಎಂದು ಆಕೆಗೆ ಗೊತ್ತಾಯಿತು.

3

ನನಗೆ ಕಥೆ ಹೇಳುತ್ತಿದ್ದ ಆ ಹಿರಿಯರು ಮುಂದೆ ಏನೇನೋ ವಿಚಾರಗಳನ್ನು ಹೇಳಿದ್ದರು. ಅದರಲ್ಲಿ ಕೆಲವು ಮೇಲಿನ ಘಟನೆಗೆ ನೇರ ಸಂಬಂಧಿಸಿದುವಲ್ಲ. ಕೆಲವನ್ನು ಹೇಳುವುದೂ ಸಲ್ಲ. ಆದುದರಿಂದ ಮುಂದಿನದನ್ನು ನನ್ನ ಮಾತುಗಳಲ್ಲಿಯೇ ಹೇಳುತ್ತೇನೆ.

4

ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು. ಕೆಲವೊಮ್ಮೆ ವೆಂಕು ಹೆಂಗ್ಸಿಗೆ ನೇರವಾಗಿಯಲ್ಲದಿದ್ದರೂ ಅಪರೋಕ್ಷವಾಗಿ ತಮ್ಮ ಇರಾದೆಯನ್ನು ಅವರು ತಿಳಿಸಿದ್ದರು. “ಹೀಗೆ ದುಡಿದು ನೀನು ಮುದುಕಿಯಾಗುವುದು ಯಾವ ಪುರುಷಾರ್ಥಕ್ಕೆ?” ಎಂಬುದು ಅವರ ಪ್ರಶ್ನೆ. ಅವರು ಬಳಸಿದ ಪುರುಷಾರ್ಥ ಎಂಬ ಶಬ್ದ ಬಹಳ ಮುಖ್ಯ. ಆದರೆ ವೆಂಕು ಹೆಂಗ್ಸು ಆ ಬಗ್ಗೆ ತಲೆಕೆಡಿಸಿಕೊಂಡವಳಲ್ಲ. ವ್ಯಾಪಾರದ ದೃಷ್ಟಿಯಿಂದ ಆಕೆ ಅವರನ್ನೆದುರು ಹಾಕಿಕೊಳ್ಳುವಂತಿರಲ್ಲಿಲ. ಅಲ್ಲದೇ ಗಂಡು ದಿಕ್ಕಿಲ್ಲದ ಮನೆಯನ್ನು ನಡೆಸುವ ಕಷ್ಟ ಹೆಣ್ಣುಗಳಿಗೇ ಗೊತ್ತು.

ದೊರೆಗಳು ರೈಲಿನಿಂದ ಇಳಿದರೆ ಅವರ ಆಳುಕಾಳುಗಳಿಗೆ, ಅವರಿಗೆ ಸಂಬಂಧಿಸಿದ ಸಾಮಾನುಗಳ ಸಾಗಣೆಗೆ ಅನುಕೂಲವಾಗಲಿ ಎಂದು ಬಸ್ಸು ನಿಲ್ದಾಣ ವರ್ಗಾಯಿಸಿದರು. ಜನರ ಅನುಕೂಲ ನೋಡಲಿಲ್ಲ ಎಂದು ಕೆಲವರು ಮಾತನಾಡಿದ್ದುಂಟು. ಬಸ್ಸು ನಿಲ್ದಾಣ ನವಭಾರತದ ಎದುರಿನ ವೃತ್ತಕ್ಕೆ ಬರುವ ಮೊದಲು ಈಗಿನ ಗಣಪತಿ ದೇವಸ್ಥಾನದ ವಠಾರದಲ್ಲಿದ್ದುದನ್ನು ನೋಡಿದ ಹಳಬರಿದ್ದರು.

ಈಗ ಆಕೆ ಒಂದೇ ಬಾಣದಿಂದ ಎರಡು ಹಕ್ಕಿಗಳನ್ನುರುಳಿಸುವ ಒಂದು ಉಪಾಯ ಮಾಡಿದಳು. ಅದರಿಂದಾಗಿ ಈ ಪೋಕರಿಗಳ ಕೀಟಲೆಯೂ ತಪ್ಪುತ್ತದೆ. ಸಾಹೇಬರು ಹೋಟೆಲು ಮುಚ್ಚುವ ಆಜ್ಞೆ ನೀಡುವುದೂ ತಪ್ಪುತ್ತದೆ. ಈ ಸಂಚಿಕೆಗೆ ಆಕೆ ಮಾಬೆನ್ ರನ್ನೇ ಗಟ್ಟಿಯಾಗಿ ಹಿಡಿದುಕೊಂಡಳು. ಕಲೆಕ್ಟರರ ಕಚೇರಿಯಲ್ಲಿಯೇ ಗುಮಾಸ್ತರಾಗಿದ್ದುದರಿಂದ ಅವರಿಗೆ ಅರ್ಜಿಗಳನ್ನು ಬರೆಯುವುದು ಹೇಗೆಂದು ಗೊತ್ತು. ಕಚೇರಿಗೆ ತಲಪುವ ಎದುರು ನುಡಿ ಕ್ರಯ ಚೀಟು, ಆಡಳ್ತೆ ಕರಾರು, ದತ್ತು ಮಾಡುವರೇ ಅಧಿಕಾರ ಪತ್ರ, ಮತಾಂತರ ಗೊಂಡವರು ವಿವಾಹ ವಿಚ್ಚೇದನಕ್ಕೆ ಕೊಡಬೇಕಾದ ಅರ್ಜಿ ಹೀಗೆ ದಿನಾ ಓದಿ ಅವರಿಗೆ ಅರ್ಜಿಗಳ ಬಗ್ಗೆ ಖಚಿತವಾದ ಜ್ಞಾನ. ಆಗಾಗ್ಯೆ ಅವರು ಅರ್ಜಿದಾರನಿಗೆ ಬರೆಯಲು ಸಹಾಯವನ್ನು ಮಾಡುತ್ತಿದ್ದುದೂ ಉಂಟು.

ವೆಂಕು ಹೆಂಗ್ಸು ಓದು ಬರಹ ತಿಳಿದವಳಲ್ಲ. ಹಾಗಾಗಿ ಮಾಬೆನ್ ರು ಅರ್ಜಿಯ ನಕಲೊಂದನ್ನು ಬರೆದುಕೊಡಲು ಒಪ್ಪಿದರು. ಕೀಟಲೆ ಮಾಡುವ ಮಂದಿ ಯಾರೆಂದು ಅವರಿಗೆ ತಿಳಿದಿರಲಿಲ್ಲ. ಆದರೂ ಒಪ್ಪಿದರು. ಅದಕ್ಕೆ ಕಾರಣ ಆಕೆ ಕೊಟ್ಟ ಪುಗಸಟ್ಟೆ ದೋಸೆಗಳೆನ್ನಲಾಗುವುದಿಲ್ಲ. ಮಾಬೆನ್ ರು ಬಹು ಒಳ್ಳೆಯವರು. ಬರೆದುಕೊಟ್ಟುದರಿಂದ ನನ್ನ ಗಂಟು ಮುಳುಗಿಹೋಗುವುದೇನು ಎಂದುಕೊಂಡರು. (ಹೆಚ್ಚಿನ ಜನರಿಗೆ ಸರಿಯಾಗಿ ಒಂದು ಅರ್ಜಿ ಬರೆಯುವುದೂ ಗೊತ್ತಿಲ್ಲ ಸ್ವಾಮೀ. ಆಗಿನ ಕಾಲದಲ್ಲಿ ಹೆಚ್ಚು ವಿದ್ಯಾವಂತರಿರಲಿಲ್ಲವೆನ್ನುವ ಮಾತು ಬಿಡಿ. ಈಗಲೂ ಒಂದು ಅರ್ಜಿಯನ್ನು ಸರಿಯಾಗಿ ಬರೆಯಲಿ ನೋಡುವ- ಎಂದು ನನಗೆ ಹೇಳಿದ ಹಿರಿಯರು ಸವಾಲು ಹಾಕಿ ಭುಜ ಕುಣಿಸಿದರು!) ಒಂದು ಭಾನುವಾರ ಮಾಬೆನ್ ರು ಹೋಟೇಲಿಗೆ ಹಾಜರಾಗಿ, ವೆಂಕು ಹೆಂಗ್ಸು ತೆಗೆಯುವ ದೋಸೆಯ ಕಾವಲಿಯ ಪಕ್ಕದಲ್ಲಿಯೇ ಕುಳಿತು, ಉರಿಯುವ ಒಲೆಯಿಂದ ಕೆಂಡವೆತ್ತಿ ಬೀಡಿ ಉರಿಸಿ ಹೊಗೆ ಎಳೆಯುತ್ತಾ ತಮ್ಮ ಆಫೀಸಿನಿಂದಲೇ ತಂದ ಕಾಗದದ ಮೇಲೆ ಸೀಸದ ಕಡ್ಡಿಯಿಂದ ಎಲ್ಲೆಲ್ಲಿ ನೇರವಾಗಿ ಮುಟ್ಟಬೇಕೋ ಅಲ್ಲಲ್ಲಿ ಸರಿಯಾದ ಶಬ್ದಗಳು ಒದಗುವಂತೆ ಒಂದು ಅರ್ಜಿ ಬರೆದರು. ಬರೆದದ್ದು ಜಿಲ್ಲಾ ಪೋಲಿಸ್ ಸೂಪರಿಂಟೆಂಡೆಂಟ್ ದೊರೆಗಳನ್ನು ಉದ್ದೇಶಿಸಿ, ಅವರ ಸಹಾಯ ಕೇಳಿಯಾದರೂ ಅದರ ಒಂದು ನಕಲನ್ನು ಕಲೆಕ್ಟರ ಸಾಹೇಬರಿಗೆ ಕಳುಹಿಸುವ ಸೂಚನೆ ವೆಂಕು ಹೆಂಗ್ಸಿನದು. ಆ ಅರ್ಜಿಯ ಒಕ್ಕಣೆ ಹೀಗಿತ್ತು:

ಸನ್ನ 1896ನೇ ಇಸವಿ ಏಪ್ರಿಲ್ ತಾರೀಕು 27 ರಲ್ಲು ಮಂಗಳೂರು ಶಹರ ಹಂಪನಕಟ್ಟೆಯಲ್ಲಿರುವ ಬಿಲ್ಲತಿ ಕೊರಪಳು ಹೆಂಗಸಿನ ಸೊಸೆಯಾದ ವೆಂಕು ಹೆಂಗಸು ಬರಕೊಂಡ ಅರ್ಜಿ.

ಸದರಿ ಹಂಪನಕಟ್ಟೆಯಲ್ಲಿರುವ ಗುರಿಕಾರ ಅಣ್ಣುನಾಯಕನ ತೋಟದಲ್ಲಿರುವ ಮುನಿಸಿಪಲ್ ನಂಬ್ರ 12ನೇ ಹುಲ್ಲು ಛಾವಣಿ ಮನೆಯಲ್ಲಿ ಈ ಮೊದಲು ಹತ್ತು ವರುಷಗಳ ಲಾಗಾಯಿತು ದೋಸೆ ಕಾಫಿ ಮುಂತಾದ ತಿನಿಸಿನ ವ್ಯಾಪಾರವನ್ನು ಮಾಡುತ್ತಾ, ಒಬ್ಬಳೇ ವಾಸ ಮಾಡುತ್ತಾ ಬರುತ್ತಿದ್ದೇನೆ. ನಾನು 30 ವರ್ಷ ಪ್ರಾಯದವಳಾಗಿ ಗಂಡ ಮಕ್ಕಳು ಇಲ್ಲದವಳಾಗಿರುತ್ತೇನೆ.

ಇತ್ತಲಾಗೆ ಸುಮಾರು ಒಂದು ತಿಂಗಳಾರಭ್ಯ ಸದರಿ ಹಂಪನಕಟ್ಟೆಯಲ್ಲಿರುವ ಕೆಲವು ಪೋಕ್ರಿ ಜನರು ನನ್ನ ಸಹವಾಸ ಮಾಡಬೇಕೆಂಬ ಇರಾದೆಯಿಂದ ಆಗಾಗ ಹಗಲು ರಾತ್ರಿ ನನ್ನ ಮನೆಗೆ ಬಂದು, ದೋಸೆ ಮುಂತಾದ್ದು ಕ್ರಯಕ್ಕೆ ತೆಗೆದುಕೊಂಡು ತಿನ್ನುತ್ತಾ ಇರುವ ಸಮಯದಲ್ಲಿ ನನಗೆ ದುರ್ನಡತೆಯ ಮಾರ್ಗಕ್ಕೆ ಮನಸ್ಸು ಹುಟ್ಟಿಸುವ ರೀತಿ ನನ್ನ ಮೈ ಮೇಲೆ ಕೈ ಚಾಚುವುದಲ್ಲದೆ ಒಬ್ಬಳಾಗಿರುವ ನನ್ನ ಮನೆಯೊಳಗೆ ಬಂದು, ನನ್ನನ್ನು ಕೆಟ್ಟ ಇರಾದೆಯಿಂದ ಎಳೆಯುತ್ತಾ ಇರುತ್ತಾರೆ. ಈ ರೀತಿ ಮಾಡಬಾರದಾಗಿ ಅವರಿಗೆ ಎಷ್ಟು ದಫೆಗಳಿಂದ ಹಲಿಕಿ ಮಾಡಿ ಹೇಳಿದರೂ ಕೇಳದೆ, ಆಗಾಗ್ಗೆ ಉಪದ್ರವ ಕೊಡುತ್ತಾ ಇರುತ್ತಾರೆ.

ಅವರ ಇಚ್ಛೆಯನ್ನು ಪೂರೈಸಲಿಕ್ಕೆ ನಾನು ಒಪ್ಪದೆ ಇರುವುದರಿಂದಲೂ, ಯಾವ ರೀತಿಯಿಂದಲಾದರೂ ನಾನು ಕಬೂಲು – ವಾಗ್ದಾನ ಕೊಡದೆ ಇರುವುದರಿಂದಲೂ ಅವರಿಗೆ ಹಟಸಾಧನೆಯನ್ನು ಸಾಧಿಸುವ ಉದ್ದಿಶ್ಯ ನಿನ್ನೆ ರಾತ್ರಿ ದೊಡ್ಡ ಕಲ್ಲುಗಳನ್ನು ಹೊತ್ತು ಹಾಕಿ, ಮನೆ ಬಾಗಿಲು ಒಡೆದು, ಮನೆ ಹೊಕ್ಕು, ನನಗೆ ಜುಲುಮ್ ಮಾಡುತ್ತಿರುವಾಗ ನಾನು ಮಾಡಿದ ಬೊಬ್ಬೆಯಿಂದ ಕೂಡಿ ಬಂದ ಆಸಪಾಸ ಜನರನ್ನು ಅವರು ಕಂಡ ಕೂಡಲೇ ಓಡಿ ಹೋಗಿರುತ್ತಾರೆ. ಈ ದಿನ ನನ್ನ ಮನೆಯನ್ನು ಸುಟ್ಟು ಹಾಕುತ್ತೇವಂತ ನನ್ನ ಮನೆಯ ನೆರೆಕರೆಯ ಜನರ ಕೊಡೆ ಹೇಳಿ ಸಾರುತ್ತಾ ಬಂದಿರುತ್ತಾರೆ.
ಆದ್ದರಿಂದ ಆ ರೀತಿ ಅವರು ನನ್ನ ಮನೆಯನ್ನು ಸುಟ್ಟು ಹಾಕದಂತೆ ನನ್ನ ವ ನನ್ನ ಮನೆಯ ಭದ್ರತೆ ಬಗ್ಗೆ ಪೋಲೀಸ್ ಸಹಾಯ ದಯಪಾಲಿಸಬೇಕಾಗಿ ಪ್ರಾರ್ಥಿಸುತ್ತೇನೆ.

ವೆಂಕು ಹೆಂಗ್ಸಿನ ರುಜು

5

ವೆಂಕು ಹೆಂಗ್ಸು ಅರ್ಜಿಯ ಮೂಲ ಪ್ರತಿಯನ್ನು ಹನ್ನೆರಡು ಆಣೆಯ ಅರ್ಜಿ ಸ್ಟಾಂಪು ಹಚ್ಚಿ ಪೋಲೀಸು ಸುಪರಿಂಟೆಂಡೆಂಟರಿಗೂ, ಎರಡನೆಯ ಪ್ರತಿಯನ್ನು ಕಲೆಕ್ಟರ್ ಸಾಹೇಬರಿಗೂ ಮುಟ್ಟಿಸಿದಳು. ಕಲೆಕ್ಟರ್ ಸಾಹೇಬರು ಅದನ್ನು ಒಂದು ಸಲ ಅವಸರವಸರವಾಗಿ ಓದಿ ತಮ್ಮ ಮೇಜಿನ ಮೇಲೆಯೇ ಇಟ್ಟುಕೊಂಡರು. ಉಳಿದ ಪತ್ರಗಳನ್ನೆಲ್ಲ ಓದಿ ತಮ್ಮ ಷರಾ ಹಾಕಿ ವಿತರಣೆ ಮಾಡಿ ಮತ್ತೆ ವೆಂಕು ಹೆಂಗ್ಸಿನ ಅರ್ಜಿ ಕೈಗೆತ್ತಿಕೊಂಡರು. ತಮ್ಮ ಕುರ್ಚಿಗೆ ಒರಗಿ ಕೂಲಂಕಷವಾಗಿ ಎರಡನೆಯ ಬಾರಿ ಓದಿದರು. ಓದುತ್ತಾ ಅವರ ಮುಖದ ಮೇಲೆ ಒಂದು ನಗು ಮೂಡಿದ್ದನ್ನು ಬಾಗಿಲೆಡೆಯಿಂದ ನಿಂತ ಜವಾನ ಕೆಂಪ ಗಮನಿಸಿದನಂತೆ.

ಮರುದಿನ ವೆಂಕು ಹೆಂಗ್ಸಿಗೆ ಕರೆ ಹೋಯಿತು. ಕಲೆಕ್ಟರರ ಕೋಣೆಯಲ್ಲಿ ವೆಂಕು ಹೆಂಗಸೂ ಬಿಲ್ಲತಿ ಕೊರಪಳೂ ಅರ್ಧ ಘಂಟೆ ತಮ್ಮ ಅಹವಾಲುಗಳನ್ನು ಹೇಳಿದರು. ಅರ್ಜಿಯಲ್ಲಿ ಹೆಸರು ಬರೆದಿರುವ ಮಂದಿಯನ್ನು ಕಲೆಕ್ಟರರು ಕರೆಸಿ ಚೆನ್ನಾಗಿ ಛೀಮಾರಿ ಹಾಕಿದರು. ಮುಂದೆ ಇಂತಹ ದೂರುಗಳು ಬಂದಲ್ಲಿ ತಾನು ಕಠಿಣವಾಗಿ ವರ್ತಿಸಬೇಕಾಗಿ ಬರಬಹುದೆಂದು ತಾಕೀತು ಮಾಡಿದರು. ಅಲ್ಲದೆ ಪೋಲೀಸು ಇಲಾಖೆಯಿಂದ ಒಬ್ಬ ಪಗಡಿ ಮನುಷ್ಯನನ್ನು ಹಂಪನಕಟ್ಟೆಯ ಆವರಣದಲ್ಲಿ ಹಗಲು ರಾತ್ರಿ ಪಹರೆ ಮಾಡುವ ಬಂದೋಬಸ್ತು ಮಾಡಿದರು.

ವೆಂಕು ಹೆಂಗ್ಸಿನ ಹೋಟೇಲ ವ್ಯವಹಾರ ಮುಂದೆ ಎಷ್ಟೋ ಸಮಯ ಇತ್ತು. ಕಲೆಕ್ಟರ್ ಸಾಹೇಬರ ಕೃಪೆಗೆ ಪಾತ್ರವಾದ ಹೋಟೇಲೆಂದು ಅದರ ಘನತೆಯೂ ಹೆಚ್ಚಿತ್ತು. ಅವರು ನೇಮಕ ಮಾಡಿದ ಪೋಲೀಸ್ ಪಟೇಲನೊಬ್ಬ ಆ ಆವರಣದಲ್ಲಿ ನಿಂತುಕೊಂಡಿರುವುದನ್ನೂ ವರ್ಷಗಟ್ಟಲೆ ನೋಡಿದ ಜನರಿದ್ದಾರೆ. ಅಲ್ಲದೇ, ಹೋಟೇಲಿನಿಂದಾಗಿ ಶಹರದ ನೈರ್ಮಲ್ಯ ಕೆಡದಿರಲು, ಪೌರಾಡಳಿತ ಇಲಾಖೆಯಿಂದ ಕೊಳಚೆ ನೀರು ಹೋಗುವಂತೆ ಒಂದು ಚಿಕ್ಕ ತೋಡು ಮಾಡಿಸಿದ್ದಲ್ಲದೇ ಕುಡಿಯಲು ಬಿಸಿ ಮಾಡಿ ಆರಿದ ನೀರಿನ ವ್ಯವಸ್ಥೆ ಮಾಡಿಸಿದರು. ಹೋಟೇಲ ಒಳಗೆ ಹೊಗೆ ತುಂಬದಂತೆ ಒಂದು ಉಚಿತ ಹೊಗೆ ಕೊಳವೆಯನ್ನು ವೆಂಕು ಹೆಂಗ್ಸಿಗೆ ಕೊಡಿಸಿದನು.

ಇಷ್ಟೆಲ್ಲಾ ಆದ ಮೇಲೆ ಒಂದು ದಿನ ಕಲೆಕ್ಟರ್ ಸಾಹೇಬರು ವೆಂಕು ಹೆಂಗ್ಸಿನ ಹೋಟೇಲಿಗೆ ಬಂದು ಆ ಅರ್ಜಿ ಬರೆದುಕೊಟ್ಟವರು ಯಾರು ಎಂದು ವಿಚಾರಿಸಿದರು. ಹಾಗೆ ಅವರು ವಿಚಾರಿಸುವ ಸಮಯಕ್ಕೆ ದೈವವಶಾತ್ ಅವರ ಕಚೇರಿಯ ಕಾರಕೂನರಾಗಿದ್ದ ಶ್ರೀ ಮಾಬೆನ್ ರೂ ಅಲ್ಲಿಯೇ ಇದ್ದರು. ಮರುದಿನ ತನ್ನ ಕೋಣೆಗೆ ಬಂದು ನೋಡುವಂತೆ ಸ್ರೀ ಮಾಬೆನ್ ರಿಗೆ ಹೇಳಿ ಅವರು ಹೊರಟು ಹೋದರು. ಸಹಜವಾಗಿ ಮಾಬೆನ್ ರಿಗೆ ತಮ್ಮದು ಏನು ತಪ್ಪಾಗಿದೆಯೋ ಎಂದು ಗಾಬರಿಯಿಂದ ಆ ರಾತ್ರಿ ನಿದ್ದೆಯೂ ಬೀಳಲಿಲ್ಲ. ಆದರೆ ಕಚೇರಿಯಲ್ಲಿ ಅವರಿಗೆ ದೊರೆತ ದೊರೆಯ ಪ್ರತಿಕ್ರಿಯೆಯೇ ಬೇರೆಯದು. ಸಾಹೇಬರು ಅರ್ಜಿಯಲ್ಲಿದ್ದ ಕನ್ನಡ ಭಾಷೆಯನ್ನು ತುಂಬ ಹೊಗಳಿದರು. ಆ ಅರ್ಜಿಯ ಮಾದರಿಯನ್ನು ಕುರಿತು ಶ್ರೀ ಮಾಬೆನ್ ರ ಬೆನ್ನು ತಟ್ಟಿ “ಅರ್ಜಿ ಬರೆಯುವ ನಮೂನೆ ಅಂದರೆ ಹೀಗೆ ಕಣಯ್ಯ. ಓದಿದಾಗ ನಿಮ್ಮ ಭಾಷೆಯ ಸೊಗಸು ಕಂಡು ನನಗೆ ಕುಣಿಯುವ ಹಾಗಾಯಿತು. ನೀನು ಯಾಕೆ ಇದೇ ರೀತಿಯ ಪುಸ್ತಕ ಬರೆಯಬಾರದು? ಜನರಿಗೆ ಅರ್ಜಿ ಬರೆಯುವ ರೀತಿಯೇ ತಿಳಿಯದು. ಎಲ್ಲ ರೀತಿಯ ಅರ್ಜಿಗಳನ್ನು ಬರೆಯುವ ಕ್ರಮ ತಿಳಿಸಿ ಕೊಟ್ಟಂತಾಗುತ್ತದೆ” ಎಂದರು.

6

ನನಗೆ ಕತೆ ಹೇಳುತ್ತಿದ್ದ ಹಿರಿಯರು ಕಥೆಯನ್ನೇನೋ ಅಲ್ಲಿಗೇ ಮುಗಿಸಿದರು. ನಾವಿಬ್ಬರೂ ಆ ಬಗ್ಗೆ ಒಂದಿಷ್ಟು ಚರ್ಚಿಸಿದೆವು. ಆ ಹಿರಿಯರು “ಈ ಇತಿಹಾಸವನ್ನು ನೀವು ನಂಬಬೇಕೆಂದು ನಾನು ಹೇಳುವುದಿಲ್ಲ. ಆದರೆ ನೋಡಿ ಸ್ವಾಮೀ, ಆ ಕಲೆಕ್ಟರ್ ಸಾಹೇಬರ ಕಾರ್ಯ ವೈಖರಿ ಹೇಗಿತ್ತು ಎಂಬುದನ್ನು ಊಹಿಸಿ. ಒಂದು ಮೂಗರ್ಜಿಯ ಬಗ್ಗೆ ಕೂಡಾ ಅವರು ಕೈಗೊಂಡ ತನಿಖೆ, ಹೆಂಗಸೊಬ್ಬಳ ಜೀವನ ನಿರ್ವಹಣೆ ಕಷ್ಟಕರವಾಗಿದೆಯೆಂದು ತಿಳಿದು ಬಂದಾಗ ಕಲೆಕ್ಟರರಾಗಿ ತಾವು ಕೈಗೊಳ್ಳಬೇಕಾದ ಕ್ರಮ ನಾಗರೀಕ ಶುಚಿತ್ವದ ಬಗ್ಗೆ ಇದ್ದ ಕಳಕಳಿ, ಎಲ್ಲ ಶ್ಲಾಘನೀಯವಲ್ಲವೇ? ಅಲ್ಲದೇ, ತಮ್ಮ ಕೆಳಗಿನ ಗುಮಾಸ್ತರಲ್ಲೊಬ್ಬರಲ್ಲಿದ್ದ ಪ್ರತಿಭೆಯನ್ನು ಗಮನಿಸಿ ಜನರಿಗೆ ಸಹಾಯವಾಗುವ ಒಂದು ಕೈಪಿಡಿಯನ್ನು ಬರೆಸಿದ್ದು, ಬೆನ್ನು ತಟ್ಟಿದ್ದು ವಿಶೇಷವಲ್ಲವೇ?” ಎಂದು ಕೇಳಿದರು.

ಪೋಅಂದರೆ ಮಾಬೆನ್ ರು ಕೈಪಿಡಿ ಬರೆದೇ ಬಿಟ್ಟರಾ?” ಎಂದು ಕೇಳಿದೆ.

“ಒಂದಲ್ಲ, ಎರಡು. ನೀವು ನೋಡಿದ್ದೀರೋ ಇಲ್ಲವೋ? ನಾನು ಶಾಲೆಗೆ ಹೋಗುವಾಗ ಆ ಪುಸ್ತಕ ಪಾಠ ಪುಸ್ತಕವಾಗಿಯೂ ಇತ್ತು. ಎಷ್ಟು ಸುಂದರ ಪುಸ್ತಕ ಅಂತೀರಿ. ಬಾಸೆಲ್ ಮಿಶ್ಶನ್ ಬುಕ್ ಡಿಪೋದವರು ಪ್ರಕಟಿಸಿದ್ದು. ಐದು ಮುದ್ರಣ ಕಂಡಿತು. `ಲೋಕ ವ್ಯವಹಾರ ಬೋಧಿನಿ’ ಅಂತ. ಅದರ 179ನೇ ಪುಟದಲ್ಲಿ ವೆಂಕು ಹೆಂಗ್ಸಿಗೆ ಬರೆದುಕೊಟ್ಟ ಅರ್ಜಿಯೂ ಇದೆ.” ಎಂದು ಬಾಯಿ ತುಂಬ ಹೊಗಳಿದರು.

ಹೋಟೇಲಿನಿಂದ ಬೀಳ್ಕೊಡುವ ಮುನ್ನ ಆ ಹಿರಿಯರು ನನ್ನೊಡನೆ “ಆಗ ಆ ದೊರೆಗಳಿಗೆ ಸಿಬ್ಬಂದಿಗಳಿರಲಿಲ್ಲ. ಓಡಾಡಲು ಕಾರು ಇರಲಿಲ್ಲ. ಲಂಚ ರುಷುವತ್ತುಗಳ ಬಗ್ಗೆ ಕೇಳಬೇಡಿ. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಒಂದು ದಲಿತ ವರ್ಗದ ಹೆಣ್ಣು ಬರೆದ ಅರ್ಜಿ ಕೂಡಾ ಸಕಾಲದಲ್ಲಿ `ಪರಿಶೀಲಿಸಲಾಗಿದೆ’ ಎಂಬ ಷರಾದೊಂದಗೆ ರಿಕಾರ್ಡು ರೂಮು ಸೇರಿತು. ಇದಕ್ಕೇನನ್ನುತ್ತೀರಿ?” ಎಂದು ಕೇಳಿದರು.

ಏನನ್ನಲಿ? ನಾನು ವಿಷಾದದಿಂದ ನಕ್ಕೆ.

7

ಅಭ್ಯಂತರವಿಲ್ಲದಿದ್ದರೆ ನನ್ನ ದೊಡ್ಡಸ್ತಿಕೆಯ ಒಂದೆರಡು ಮಾತು ಸೇರಿಸುತ್ತೇನೆ. ಆ ಹಿರಿಯರು ಅಷ್ಟೊಂದು ಹೊಗಳಿದ ಪುಸ್ತಕವನ್ನು ನೋಡುವ ಕುತೂಹಲ ನನ್ನಿಂದ ತಡೆಯಲಾಗಲಿಲ್ಲ. ಅದಕ್ಕಾಗಿ ಹಳೆಯ ಪುಸ್ತಕ ಭಂಡಾರಗಳಲ್ಲಿ ತುಂಬ ಹುಡುಕಿದೆ. ಕೊನೆಗೂ ಅದರ ಒಂದು ಪ್ರತಿ ಉಡುಪಿಯ ಮಂ. ಗೋವಿಂದ ಪೈ ಸಂಶೋಧನಾಲಯದಲ್ಲೂ ಇನ್ನೊಂದು ಪ್ರತಿ ಸುರತ್ಕಲ್ಲಿನ ಶ್ರೀ ಶೇಖರ ಇಡ್ಯರವರ ಬಳಿಯೂ ನೋಡಲು ಸಿಕ್ಕಿತು. ನನಗೆ ಸಂತೋಷ ತರಿಸಿದ್ದು ಪುಸ್ತಕದಲ್ಲಿದ್ದ 179ನೆಯ ಪುಟದಲ್ಲಿ ಕಂಡ ವೆಂಕು ಹೆಂಗ್ಸಿನ ಅರ್ಜಿ. ಶ್ರೀ ಶೇಖರ ಇಡ್ಯರು ಮಾಬೆನ್ ರ ಇನ್ನೊಂದು ಪುಸ್ತಕ “ಕನ್ನಡ ವ್ಯಾಕರಣ ಬೋಧಿನಿ” ಬಗ್ಗೆ ತಿಳಿಸುತ್ತಾ ಅದು `ಗಣನೀಯ ವ್ಯಾಕರಣ ಗ್ರಂಥವೆಂದು’ ಡಾ. ಹಾವನೂರರ ಅಭಿಪ್ರಾಯ ಪಟ್ಟಿದ್ದಾರೆಂದು ನನಗೆ ತಿಳಿಸಿದರು.


ನನ್ನ ಮನೆಯನ್ನೂ ಕಟ್ಟಿ ಮುಗಿಸಲಾಗಲಿಲ್ಲ. ನಾನು ನನ್ನ ಕಾಗದ ಪತ್ರಗಳೊಂದಿಗೆ ಇನ್ನೂ ಅಲೆಯುತ್ತಲೇ ಇದ್ದೇನೆ. ಇತ್ತೀಚೆಗಂತೂ ಆ ಬಿಳಿಯ ಪಂಚೆಯ, ಉದ್ದ ಕೈಯ ಕೊರಳಿಲ್ಲದ ಖಾದಿ ಶರಟಿನ, ಕಣ್ಣೆವೆಗಳೂ ಬೆಳ್ಳಗಾದ, ಮೀಸೆ ಇಲ್ಲದ, ನಯವಾದ ಮುಖದ ಹಿರಿಯರು ಕಚೇರಿಯ ಕಾರಿಡಾರುಗಳಲ್ಲಿ ನನಗೆ ಕಾಣಲು ಸಿಗುತ್ತಾ ಇಲ್ಲ. ಬಹುಶಃ ಅವರು ಮನೆ ಕಟ್ಟಿಸಿಕೊಂಡು ಸುಖವಾಗಿ ಇದ್ದಿರಬಹುದೆಂದು ನಂಬುತ್ತೇನೆ.

******

ಟಿಪ್ಪಣಿ:
ಗೋಪಾಲಕೃಷ್ಣ ಪೈ: ಮೂಲತಃ ಕಾಸರಗೋಡಿನವರಾದ ಬಿ. ಗೋಪಾಲಕೃಷ್ಣ ಪೈಯವರು ನಿವೃತ್ತ ಬ್ಯಾಂಕ್ ಅಧಿಕಾರಿ. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ತಿರುವು’ ಮತ್ತು ‘ಈ ಬೆರಳ ಗುರುತು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಸಿದ್ಧ ಕಾದಂಬರಿ ‘ಸ್ವಪ್ನ ಸಾರಸ್ವತ’ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ.
ಹಿಂದಿರುಗಿ ನೋಡಿದಾಗ :
ಬ್ರಿಟಿಷರ ಕಾಲದಲ್ಲಿ ಬಂದ ಕತೆ ಕಾದಂಬರಿಗಳಲ್ಲಿ ವಸಾಹತು ಆಡಳಿತವನ್ನು ಶ್ಲಾಘಿಸುವ ಕತೆಗಳ ಸಂಖ್ಯೆ ಬಹಳಷ್ಟಿದೆ ಎನ್ನುವುದನ್ನು ಈಗಾಗಲೇ ಗಮನಿಸಿದೆ. ಕೊನೆಯದಾಗಿ ಸ್ವಾತಂತ್ರ್ಯಾನಂತರ, ಇತ್ತೀಚಿನ ದಶಕಗಳಲ್ಲಿ ಬರೆಯುತ್ತಿರುವ ನಮ್ಮ ಮುಖ್ಯ ಲೇಖಕರಾದ ಗೋಪಾಲಕೃಷ್ಣ ಪೈಯವರು ಬರೆದ ‘ಅರ್ಜಿ’ ಎಂಬ ಕತೆಯನ್ನು ಮುಖ್ಯವಾಗಿ ಗಮನಿಸಬೇಕು. ಬ್ರಿಟಿಷರ ಬಗ್ಗೆ ಈಗ ಬರೆಯುವ ಲೇಖಕ ಯಾವ ಮುಲಾಜನ್ನೂ ಇಟ್ಟುಕೊಳ್ಳಬೇಕಾಗಿಲ್ಲ. ಆದರೂ ಈ ಕತೆಯಲ್ಲಿ ಬ್ರಿಟಿಷರ ನ್ಯಾಯಪರತೆ, ಆಡಳಿತದ ವ್ಯವಸ್ಥೆ, ಪ್ರಜೆಗಳ ಬಗ್ಗೆ ಕಾಳಜಿ ಇವುಗಳನ್ನು ಹಿನ್ನೋಟದಿಂದ ಕಂಡು ಶ್ಲಾಘಿಸಿರುವ ಪಕ್ವ ತೀರ್ಮಾನ ಕಾಣಿಸುತ್ತದೆ.
ಬ್ರಿಟಿಷರ ನ್ಯಾಯಪರತೆ ಆಗ ಹೇಗೆ ಆದರ್ಶಪ್ರಾಯವಾಗಿತ್ತೋ, ಹಾಗೆಯೇ ಈಗಿನ ಆಡಳಿತಕ್ಕೆ ಹೋಲಿಸಿದರೂ ಸಾವಿರಪಾಲು ಉತ್ತಮವಾಗಿತ್ತು ಎನ್ನುವುದನ್ನು ಲೇಖಕರು ‘ಅರ್ಜಿ’ ಕತೆಯಲ್ಲಿ ಹೇಳುತ್ತಾರೆ. ಕತೆಯಲ್ಲಿ ಕಛೇರಿಯಿಂದ ಕಛೇರಿಗೆ ಅಲೆದಾಡಬೇಕಾಗಿ ಬಂದ ಮುದುಕರೊಬ್ಬರು 90 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನು ನಿರೂಪಕನಿಗೆ ಹೇಳುತ್ತಾರೆ. “ಕೊಡಗಿನ ಕಲ್ಯಾಣಪ್ಪನ ಕತೆ ಕೇಳಿರಬೇಕು ನೀವು. ಅವನು ಇಲ್ಲಿಗೆ ಬಂದು ಗಲ್ಲುಕಂಬವೇರಿದ್ದು ಈ ಘಟನೆಗಿಂತ ಬರೇ ಅರುವತ್ತು ವರ್ಷಗಳ ಮೊದಲು. ಅವನ ಕಾಟಕಾಯಿಯಿಂದ ಜನರಿಗೆ ಕಳ್ಳರ ಬಗ್ಗೆ ದರೋಡೆಗಾರರ ಬಗ್ಗೆ ಹೆದರಿಕೆ ಇನ್ನೂ ಹಸಿಹಸಿಯಾಗಿತ್ತು. ಅಂಥ ದಿನಗಳಲ್ಲಿ ಹಂಪನಕಟ್ಟೆಯಲ್ಲಿ ಒಂದು ಹೋಟೆಲಿತ್ತು…. ಅದು ಒಂದು ಮುಳಿ ಹುಲ್ಲಿನ ಗುಡಿಸಲು… ಹೋಟೆಲನ್ನು ವೆಂಕು ಹೆಂಗಸು ಎಂಬಾಕೆ ನಡೆಸುತ್ತಿದ್ದಳು…”
ಹೀಗೆ ನಿರೂಪಿಸುತ್ತಾ ಮುದುಕರು ವೆಂಕು ಹೆಂಗಸಿನ ಹೋಟೆಲಿನ ಬಗ್ಗೆ ಒಂದು ತಳ್ಳಿ ಅರ್ಜಿ ಬಿಳಿಯ ಕಲೆಕ್ಟರಿಗೆ ತಲುಪಿದ ಬಗ್ಗೆ ಹೇಳುತ್ತಾರೆ. ಅವರು ಒಂದು ದಿನ ಕುದುರೆ ಹತ್ತಿ ವೆಂಕು ಹೆಂಗಸಿನ ಹೋಟೆಲಿಗೆ ಬಂದು ತನಿಖೆ ಮಾಡುತ್ತಾರೆ. ಅರ್ಜಿ ಬಹುಶಃ ಮೂವತ್ತು ವರ್ಷದ ವಿಧವೆಯಾದ ಅವಳ ಚಾರಿತ್ರ್ಯದ ಬಗ್ಗೆ ಆಗಿತ್ತು. ಕಲೆಕ್ಟರು ಹೋಟೆಲಿನಲ್ಲಿ ನೈರ್ಮಲ್ಯ ಕಾಪಾಡಿಕೊಂಡು ಬರಬೇಕೆಂದು ವೆಂಕು ಹೆಂಗಸಿಗೆ ಆದೇಶ ಮಾಡಿ ಹೋಗುತ್ತಾರೆ. ಈ ತಳ್ಳಿ ಅರ್ಜಿಯನ್ನು ಯಾರು ಬರೆದಿರಬೇಕೆಂದು ಊಹಿಸಿದ ವೆಂಕು, ತನ್ನ ಹೋಟೆಲಿಗೆ ದೋಸೆ ತಿನ್ನಲು ಬರುತ್ತಿದ್ದ ಕಲೆಕ್ಟರ್ ಆಫೀಸಿನ ಗುಮಾಸ್ತರಾದ ಮಾಬೆನ್ ಎಂಬ ಹಿರಿಯರ ಬಳಿ ಒಂದು ಅರ್ಜಿ ಬರೆಸುತ್ತಾಳೆ. ಅದರಲ್ಲಿ ಕೆಲವು ಪೋಕರಿಗಳು ತನ್ನನ್ನು ಅಡ್ಡ ದಾರಿ ಹಿಡಿಯುವಂತೆ ಕಿರುಕುಳ ಕೊಡುತ್ತಾರೆ, ತನಗೆ ರಕ್ಷಣೆ ಬೇಕು ಎಂದು ಕೇಳಿಕೊಳ್ಳುತ್ತಾಳೆ. ಕಲೆಕ್ಟರ್ ಅವಳ ಹೋಟೆಲಿಗೆ ಪೋಲೀಸ್ ರಕ್ಷಣೆ ಕೊಟ್ಟು, ಆ ಪೋಕರಿಗಳನ್ನು ಕರೆಸಿ ಎಚ್ಚರಿಕೆ ನೀಡುತ್ತಾರೆ. ನಂತರ ಕಲೆಕ್ಟರ್ ಅವರು ಮಾಬೆನ್ ರನ್ನು ಕರೆಸಿ ಆ ಅರ್ಜಿಯನ್ನು ಶ್ಲಾಘಿಸಿ ಅವರಿಂದ ಅರ್ಜಿ ಬರೆಯುವ ಬಗ್ಗೆ ಒಂದು ಕೈಪಿಡಿ ಬರೆಸುತ್ತಾರೆ. (ಪಂಜೆ ಮಂಗೇಶರಾಯರು ಮತ್ತು ಎಂ. ಎನ್. ಕಾಮತರಲ್ಲಿ ಕಾಣುವ ಸೂಕ್ಷ್ಮವಾದ ಕತೆಗಾರಿಕೆ, ಧ್ವನಿ ಶಕ್ತಿ ಇತ್ಯಾದಿ ಶ್ರೇಷ್ಠ ಕಥನಗುಣಗಳನ್ನು ಗೋಪಾಲಕೃಷ್ಣ ಪೈಗಳಲ್ಲಿ ಕಾಣಬಹುದು).
ಈ ಕತೆ ಹೇಳಿದ ಮುದುಕರು ಬ್ರಿಟಿಷರ ಕಾರ್ಯವೈಖರಿಯನ್ನು ಶ್ಲಾಘಿಸುವುದು ಹೀಗೆ : “ಆ ಕಲೆಕ್ಟರ್ ಸಾಹೇಬರ ಕಾರ್ಯವೈಖರಿ ಹೇಗಿತ್ತು ಎಂಬುದನ್ನು ಊಹಿಸಿ. ಒಂದು ಮೂಗರ್ಜಿಯ ಬಗ್ಗೆ ಕೂಡಾ ಅವರು ಕೈಗೊಂಡ ತನಿಖೆ, ಹೆಂಗಸೊಬ್ಬಳ ಜೀವನ ನಿರ್ವಹಣೆ ಕಷ್ಟಕರವಾಗಿದೆಯೆಂದು ತಿಳಿದು ಬಂದಾಗ ಕಲೆಕ್ಟರರಾಗಿ ತಾವು ಕೈಗೊಳ್ಳಬೇಕಾದ ಕ್ರಮ, ನಾಗರಿಕ ಶುಚಿತ್ವದ ಬಗ್ಗೆ ಇದ್ದ ಕಳಕಳಿ ಎಲ್ಲ ಶ್ಲಾಘನೀಯವಲ್ಲವೆ? ಅಲ್ಲದೇ, ತಮ್ಮ ಕೆಳಗಿನ ಗುಮಾಸ್ತರಲ್ಲೊಬ್ಬರಲ್ಲಿದ್ದ ಪ್ರತಿಭೆಯನ್ನು ಗಮನಿಸಿ ಜನರಿಗೆ ಸಹಾಯವಾಗುವ ಒಂದು ಕೈಪಿಡಿಯನ್ನು ಬರೆಸಿದ್ದು, ಬೆನ್ನು ತಟ್ಟಿದ್ದು ವಿಶೇಷವಲ್ಲವೇ?”
ಈ ಕತೆ ಒಂದು ಸತ್ಯ ಕತೆ ಮತ್ತು ಮಾಬೆನ್ ಬರೆದ ಕೈಪಿಡಿಯ ಪ್ರತಿ ಉಡುಪಿಯ ಗೋವಿಂದ ಪೈ ಗ್ರಂಥಾಲಯದಲ್ಲಿದೆ ಮತ್ತು ಅದರಲ್ಲಿ ವೆಂಕು ಹೆಂಗಸಿನ ಅರ್ಜಿಯೂ ಇದೆ ಎಂದು ಪೈಗಳು ಕತೆಯಲ್ಲಿ ಸೂಚಿಸಿದ್ದಾರೆ.

 

ಕೃತಜ್ಞತೆಗಳು:
ಇದರೊಂದಿಗೆ ಈ ಕಥಾಮಾಲಿಕೆ ಮುಕ್ತಾಯವಾಗುತ್ತಿದೆ. ಇದನ್ನು ‘ಕೆಂಡಸಂಪಿಗೆ’ಯಲ್ಲಿ ಪ್ರಕಟಿಸಲು ಆಸಕ್ತಿ ತೋರಿಸಿದ ಸಂಪಾದಕರಾದ ಅಬ್ದುಲ್ ರಶೀದ್, ಸಹಾಯಕರಾದ ಶ್ರೀಮತಿ ರೂಪಶ್ರೀ ಕಲ್ಲಿಗನೂರ್ ಮತ್ತು ‘ಕೆಂಡಸಂಪಿಗೆ’ಯಲ್ಲಿ ಪ್ರಕಟಿಸಲು ಸಲಹೆ ನೀಡಿದ ಗೆಳೆಯ ಎನ್.ಎ.ಎಂ. ಇಸ್ಮಾಯಿಲ್ ಅವರಿಗೆ ಈ ಕೃತಿಯ ಸಂಪಾದಕನ ಕೃತಜ್ಞತೆಗಳು.
ಇಲ್ಲಿ ಸೇರಿರುವ ಕತೆಗಳನ್ನು ಪ್ರಕಟಿಸಲು ಅನುಮತಿ ನೀಡಿದ ಎಲ್ಲ ಲೇಖಕರಿಗೂ, ದಿವಂಗತ ಲೇಖಕರ ಹಕ್ಕುದಾರರಿಗೂ ಕೃತಜ್ಞತೆಗಳು.
ಡಾ. ಬಿ. ಜನಾರ್ದನ ಭಟ್