ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

“ಹುಲಿ ಎದುರು ಬಂದ್ರೆ ಎಂತ ಮಾಡೂದು?”

ಬೆಸಗರಹಳ್ಳಿ ರಾಮಣ್ಣ ಟ್ರಸ್ಟು ಕುಪ್ಪಳಿಯಲ್ಲಿ ನಡೆಸುವ ಕಮ್ಮಟದ ಮೊದಲ ದಿನದ ಸಂಜೆ. ಟೀ ಕುಡ್ಕೋತಾ ಸುಮ್ನೆ ಬಜ್ಜಿ ತಿಂದು ಕೈ ಒರೆಸಿಕೊಳ್ಳುವುದನ್ನು ಬಿಟ್ಟು, ಬಾಂಬಿನಂಥ ಈ ಕೇಳ್ವಿಯನ್ನು ಎಲ್ಲರ ತಲೆಯೊಳಗೂ ಇಟ್ಟು ಸ್ಫೋಟಿಸಿದ್ದರು ಯಾರೋ ಮಹಾನುಭಾವರು. ಎಲ್ರೂ ಮಖ-ಮಖ ನೋಡ್ಕೊಂಡ್ರು. ಒಳಗೊಳಗೆ ಬೇಡ ಅಂದ್ಕೊಂಡ್ರೂ, ಎದೆಯೊಳಗಿನ ಭೀತಿಯನ್ನು ಕಂಗಳಿಗೆ ತಂದುಕೊಂಡು ಗಾಬರಿಯಾದದ್ದು ಸ್ಪಷ್ಟವಾಗಿ ಕಾಣಿಸ್ತಿತ್ತು. ಯಾಕಂದ್ರೆ, ಅಲ್ಲಿದ್ದ ಬಹುತೇಕರು ಅವತ್ತು ರಾತ್ರಿಯ ಊಟವಾದ ಮೇಲೆ ಕವಿಶೈಲಕ್ಕೆ ನಡೆಯುವ ಪ್ಲಾನಿನಲ್ಲಿದ್ರು. ಅವರಲ್ಲಿ ನಾನೂ ಒಬ್ಬ.

ಹುಲಿಯ ಮಾತು ಬಂದದ್ದೇ ತಡ, ಒಬ್ಬೊಬ್ರೂ ತಮಗೆ ಕೇಳಿ-ಓದಿ ಗೊತ್ತಿದ್ದ ಹುಲಿಯ ರೋಚಕ ಕತೆಗಳನ್ನೆಲ್ಲ ತಲೆಯಿಂದ ಬಾಯಿಗೆ ಕೊಡವಿಕೊಂಡು ಕುಂತ್ರು. ಕೆಲವರಂತೂ ಬೇಕೆಂದೇ ಭಯಂಕರ ಭಯ ನಟಿಸಿ ಹುಲಿಯನ್ನು ಖಳನನ್ನಾಗಿ ಮಾಡಿದ್ರು. ಇದೇ ಮಾತಿನ ದಾರಿಯಲ್ಲಿ, ಪುಟ್ಟಪ್ಪನವರ ಶಿಕಾರಿಯ ಕತೆಯೂ ಮುಖ ಕಾಣಿಸಿ ಹೋಯ್ತು. “ಅದೆಲ್ಲಾ ಸರಿ, ಹುಲಿ ಬಂದ್ರೆ ಏನ್ ಮಾಡದು ಹೇಳ್ರಪ್ಪ…?” ಗಾಬರಿಗೊಂಡವರಲ್ಲೇ ಒಬ್ರು ಮತ್ತದೇ ಕೇಳ್ವಿಯಲ್ಲಿ ಕುಂತು ಜೀಕಿದರು.

ಇಳಿಸಂಜೆಯ ಹರಟೆಯ ವೇಳೆ ಬಾಯಿಮಾತಿನ ಹುಲ್ಲಾಗಿ ಹುಟ್ಟಿ ಬೆಟ್ಟವಾಗಿ ಬೆಳೆಯುತ್ತಿದ್ದ ಈ ಭೀತಿಗೆ ಕತ್ತರಿ ಹಾಕಿದ್ದು ಕೆ ವೈ ನಾರಾಯಣಸ್ವಾಮಿ. “ಹುಲಿ ಬಂದ್ರೇನ್ ಮಾಡಕ್ಕಾಗುತ್ತೆ? ಹ್ಞಾಂ? ‘ಹೇಯ್ ಹುಲಿಯೇ, ಇಲ್ಲಿ ಕೇಳು… ಎಷ್ಟಾದರೂ ನೀನು ಎರಡೇ ಅಕ್ಷರದ ಪ್ರಾಣಿ. ನಾನೋ ಮೂರಕ್ಕಿಂತ ಜಾಸ್ತಿ’ ಅಂತ ಹೇಳಿದ್ರೆ ಸಾಕು. ಇವ್ನೇನೋ ಹೊಸ ವಿಷ್ಯ ಹೇಳ್ತವ್ನೇಂತ ಯೋಚಿಸ್ತಾ ಹುಲಿ ಹೊಂಟೋಗುತ್ತೆ,” ಅಂತ ಚಟಾಕಿ ಹಾರಿಸಿದ್ರು. ಎಲ್ಲರ ಕಂಗಳಲ್ಲಿದ್ದ ಭೀತಿ ತುಸು ಹಿಂದಕ್ಕೆ ಸರಿದು ನಗುವಿಗೆ ದಾರಿ ಮಾಡಿಕೊಟ್ಟಿತು. ನಾನೂ ಹಗುರಾದೆ.
ಏನೇ ರಿಪೇರಿಯಾಯ್ತು ಅಂದ್ಕೊಂಡ್ರೂ, ಕತ್ತಲಾಗುತ್ತಲೇ ಎಲ್ಲರ ತಲೆಯೊಳಗೂ ಮೆತ್ತಗೆ ಹುಲಿ ಸವಾರಿ ನಡೆದು, ಕವಿಶೈಲಕ್ಕೆ ಹೊರಡುವ ಹೊತ್ತಿಗೆ ಅರ್ಧಕ್ಕರ್ಧ ಜನ ಚಕ್ಕರ್! “ಹೆಹೇಯ್… ಪುಕ್ಕಲುಗಳು,” ಅಂತ ಗೇಲಿ ಮಾಡಿದ ನಾವೊಂದಷ್ಟು ಮಂದಿ, ಕಗ್ಗತ್ತಲನ್ನೇ ಹಿಡಿದು ಕವಿಶೈಲದ ಬೆಟ್ಟ ಹತ್ತತೊಡಗಿದೆವು. ಬೆಳಗ್ಗೆ ಸ್ವಾಗತಿಸಿದ್ದ ನವಿಲಿನ ಕೂಗು, ನಾನಾ ಬಗೆಯ ಖಗಗಳ ಉಲಿಯ ಜೋಕಾಲಿ ಎಲ್ಲ ಸೂರ್ಯನ ಜೊತೆಯೇ ನಾಪತ್ತೆ. ಇದ್ದದ್ದು ತರಹೇವಾರಿ ಜೀರಿಂಬೆಯ ವಾದ್ಯಗೋಷ್ಠಿ ಮಾತ್ರ: ಅದೂ, ಗಾಳಿಯ ಏರಿಳಿತಕ್ಕೆ ತಕ್ಕಂತೆ ಸದ್ದು ಹತ್ತಿರಕ್ಕೆ ಬಂದಂತಾಗೋದು, ಮತ್ತೆ ಧಡಕ್ಕನೆ ದೂರಕ್ಕೆ ಹೊಂಟೋಗೋದು ಮಾಡ್ತಿತ್ತು. ಗಾಳಿಯೋ, ಒಮ್ಮೆ ಬೆಚ್ಚಗೆ ಅಪ್ಪುತ್ತ, ಮತ್ತೊಮ್ಮೆ ಥಂಡಿಯಲ್ಲಿ ತೋಯಿಸುತ್ತ ತನ್ನ ಪಾಡಿಗೆ ತಾನು ಕಣ್ಣಾಮುಚ್ಚಾಲೆ ಆಡ್ತಿತ್ತು. ದಿನವಿಡೀ ಬಿಸಿಲಿನ ತುಳಿತಕ್ಕೆ ಸಿಕ್ಕಿದ್ದ ಎಲೆಗಳು, ತಮ್ಮನ್ನು ಯಾರಾದರೂ ತಬ್ಬಿ ಮುದ್ದಿಸಿ ಖುಷಿಪಡಿಸಲಿ ಎಂದು ಕಾಯುತ್ತಿದ್ದವೇನೋ. ಅಲ್ಲಲ್ಲಿ ಆಗಾಗ ಒಣ ಎಲೆ ನುಲಿಯುವ ಸಂಗೀತ. ಹುಲಿ ನಡೆದುಬರಬಹುದಾದ ಸದ್ದಿಗಾಗಿಯೇ ಕಾಯುತ್ತ, ಒಂದು ವೇಳೆ ಅದು ಧುತ್ತನೆ ಎದುರಾದರೆ ಎತ್ತೆತ್ತ ಓಡಬೇಕೆಂಬ ಹಂಚಿಕೆ ಮೆಲ್ಲುತ್ತ, ಸದ್ದೇ ಆಗದಂತೆ ಉಸಿರಾಡುತ್ತ, ಹಳೇ ಕಾಲದ ಡಿಟೆಕ್ಟಿವ್‌ಗಳಂತೆ ದಿಬ್ಬ ಹತ್ತಿದೆವು. ಎರಡಕ್ಷರದ ಹುಲಿ ಕೊನೆಗೂ ಬರಲಿಲ್ಲ!

ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.

ಒಳಗೊಳಗೆ ಬೇಡ ಅಂದ್ಕೊಂಡ್ರೂ, ಎದೆಯೊಳಗಿನ ಭೀತಿಯನ್ನು ಕಂಗಳಿಗೆ ತಂದುಕೊಂಡು ಗಾಬರಿಯಾದದ್ದು ಸ್ಪಷ್ಟವಾಗಿ ಕಾಣಿಸ್ತಿತ್ತು. ಯಾಕಂದ್ರೆ, ಅಲ್ಲಿದ್ದ ಬಹುತೇಕರು ಅವತ್ತು ರಾತ್ರಿಯ ಊಟವಾದ ಮೇಲೆ ಕವಿಶೈಲಕ್ಕೆ ನಡೆಯುವ ಪ್ಲಾನಿನಲ್ಲಿದ್ರು. ಅವರಲ್ಲಿ ನಾನೂ ಒಬ್ಬ.

ಅದೇ ಪುಳಕ ಎದೆಯಲ್ಲಿಟ್ಟುಕೊಂಡು ಕವಿಶೈಲಕ್ಕೆ ವರ್ಷಕ್ಕೆರಡು ಬಾರಿಯಾದ್ರೂ ಹೋಗುವ ಪರಿಪಾಠ ಶುರುವಾಯ್ತು. ಈಗಲೂ ಕಣ್ಮುಚ್ಚಿಕೊಂಡು ಕಲ್ಪಿಸಿಕೊಂಡರೆ, ಬೆಟ್ಟದ ಬುಡದ ಗೇಟಿನಿಂದ ಶುರುವಾಗಿ, ಎರಡೂ ಬದಿ ಸಿಗುವ ಗಿಡ-ಮರಗಳು, ತಿರುವುಗಳು, ಕೊರಕಲು, ನೆಲಕ್ಕೊರಗಿದ ‘ಕುಪ್ಪಳಿ’ ಹೆಸರಿನ ಕಿಲೋಮೀಟರ್ ಕಲ್ಲು, ಬಿದಿರಿನ ಮೆಳೆ… ಪ್ರತಿಯೊಂದೂ ಕೈ ಹಿಡಿದು ಬೆಟ್ಟದ ತುದಿಗೆ ಕರೆದೊಯ್ದು ನಿಲ್ಲಿಸಿದಂತೆ ಭಾಸ.

ಒಂದೊಮ್ಮೆ ಬಿದಿರು ಮೆಳೆಗಳಿಂದ ಮೆರೆದ ಕವಿಶೈಲದ ಕಾಡಲ್ಲೀಗ ಅದೆಲ್ಲ ಚರಿತ್ರೆ. ಮತ್ತೆ ಕುಡಿಯೊಡೆದು ಬಿದಿರು ಅಷ್ಟೆತ್ತರಕ್ಕೆ ತಲೆ ಎತ್ತೋವರೆಗೂ ಸೋರ್‌ವುಡ್ ಮರಗಳ ರಾಜ್ಯಭಾರ. ದೀಪಾವಳಿ ಹೊತ್ತಿಗೆ ನಸುಗೆಂಪು ಕಾಯಿಗಳ ಗೊಂಚಲಿಂದ ಶೃಂಗರಿಸಿಕೊಳ್ಳುವ ಈ ಮರಗಳ ಚಂದಕ್ಕೆ ಸರಿಸಾಟಿ ಕೇಳಲೇಬೇಡಿ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಆರ್ಕಿಡ್‌ ಹೂಗಳ (ಸೀತಾಳೆ ದಂಡೆ) ಅಂದದ ಬಗ್ಗೆ ಎಂತ ಹೇಳುವುದು! ಆಂಜೆಲೋನಿಯಾ ಬೈಫ್ಲೋರ ಎಂಬ ಅತ್ಯಪರೂಪದ ಹಳ್ಳದ ಸಾಲಿನ ಹೂವಿನ ಗಿಡ, ಏಳಕ್ಕೂ ಹೆಚ್ಚು ಬಗೆಯ ಫರ್ನ್ ಚಿತ್ತಾರ, ದೊಡ್ಡ ಮರಗಳನ್ನೇ ಹಿಡಿದ್ಹಿಡಿದು ಹಬ್ಬಿ ಚಿತ್ರವಿಚಿತ್ರ ಹೂವು ಬಿಟ್ಟು ಬೆರಗುಗೊಳಿಸುವ ಪರಾವಲಂಬಿ ಸಸ್ಯಗಳು, ಬಂಡೆಗಳ ಹೊಕ್ಕುಳಗಳಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಳ್ಳುವ ತರಹೇವಾರಿ ಹಾವಸೆಗಳೂ ಅವುಗಳ ಚಂದಾತಿಚಂದ ಪುಟಾಣಿ ಹೂವುಗಳೂ, ಇದೆಲ್ಲದರಿಂದ ಸೆರೆಹೊಡೆದು ಗಾಳಿಯೊಟ್ಟಿಗೆ ಸರಸವಾಡುವ ಘಮ, ಎಂಟಕ್ಕೂ ಹೆಚ್ಚು ಪ್ರಭೇದದ ಹುಲ್ಲುಗಳು, ಸಂಜೆಗಿರಿಯ ಕಡೆಯಿಂದ ಶುರುವಾಗಿ ಕವಿಶೈಲ ತಾಕಿಕೊಂಡೇ ಕುದುರೆಮುಖ ಶ್ರೇಣಿ ಕಡೆಗೆ ಪಯಣಿಸುವ ಸುಳಿಗಾಳಿ. ಕಳೆದುಹೋಗಲು ಇನ್ನೇನು ಬೇಕು?

ಕವಿಶೈಲದ ಕುರಿತು ಕುವೆಂಪು ಮೂಕವಿಸ್ಮಿತರಾದಂತೆ ಬರೆದಿರುವುದನ್ನು ಕಂಡು ಹುಬ್ಬೇರಿಸಿದ್ದವನಿಗೆ, ಕವಿಶೈಲದ ಸೋಜಿಗಗಳನ್ನು ಕಂಡು ಕುವೆಂಪು ಬೆರಗಾದದ್ದು ಏನೇನೂ ಅಲ್ಲ ಎನ್ನುವಷ್ಟು ಅಚ್ಚರಿ. ಯಾಕಂದ್ರೆ, ಕವಿಶೈಲದ ಬಂಡೆ ಮೇಲೆ ನಿಂತು ಕಣಿವೆಯ ಕಡೆಗೆ ದಿಟ್ಟಿಸಿದರೆ ಪ್ರತಿ ಬಾರಿಯೂ ಒಂದಲ್ಲ ಒಂದು ಹೊಸ ಬೆಟ್ಟ ಕಣ್ಕಟ್ಟುತ್ತದೆ! ಇತ್ತೀಚೆಗೆ (2021ರ ಆಗಸ್ಟ್) ಹೋಗಿದ್ದಾಗ ಎಣಿಕೆಗೆ ಸಿಕ್ಕಿದ್ದು ಬರೋಬ್ಬರಿ ಹನ್ನೊಂದು ಬೆಟ್ಟಗಳ ಶ್ರೇಣಿ! ಅದೂ, ಚದುರಿದ ಸಾಲಲ್ಲ. ಬದಲಿಗೆ, ಒಂದರ ಹಿಂದೊಂದರಂತೆ ಕಣ್ಣ ಸರಳರೇಖೆಯಲ್ಲಿ ಕಂಡ ಬೆಟ್ಟಗಳ ಸಾಲು. ಸರಿಸುಮಾರು ಶುಂಠಿಹಕ್ಲುವಿನಿಂದ ಶುರುವಾಗಿ, ಆಗುಂಬೆ ಘಾಟಿ, ಕೂಡ್ಲುತೀರ್ಥ, ಗಂಗಾಮೂಲ ದಾಟಿ, ಕುರಿಂಜಾಲ ಬೆಟ್ಟದವರೆಗೂ ಕುದುರೆಮುಖ ಶ್ರೇಣಿಯ ಅಂದಚಂದ ಕಣ್ತುಂಬಿಕೊಳ್ಳಬಹುದಾದ ಏಕೈಕ ವೀವ್ ಪಾಯಿಂಟ್ ಏನಾದ್ರೂ ಇದ್ದರೆ ಅದು ಕವಿಶೈಲ ಮಾತ್ರ.

ಸ್ಯಾರಸ್ಯ ಅಂದ್ರೆ, ಕವಿಶೈಲಕ್ಕೆ ಹೋಗಿ ನಿಂತಾಗ್ಲೆಲ್ಲ ಈ ಹನ್ನೊಂದು ಬೆಟ್ಟಗಳ ವಿಶಿಷ್ಟ ಶ್ರೇಣಿ ಕಾಣ್ಸೋಲ್ಲ! ಕಂಡರೂ ತೀರಾ ಅಸ್ಪಷ್ಟ. ಕೆಲವೊಮ್ಮೆ, ಕುದುರೆಮುಖ ಶ್ರೇಣಿ ಮಾತ್ರವೇ ಕಂಡು, ಹತ್ತಿರದ ಇತರ ಬೆಟ್ಟಗಳು ಮಾಯವಾಗಿರುತ್ತವೆ. ಮತ್ತೆ ಕೆಲವೊಮ್ಮೆ, ಇತರ ಬೆಟ್ಟಗಳು ಮಾತ್ರವೇ ಕಂಡು ಕುದುರೆಮುಖ ಶ್ರೇಣಿ ಕಳೆದುಹೋಗಿರುತ್ತೆ. ಹಾಗಾಗಿ, ಪಶ್ಚಿಮ ಘಟ್ಟದ ಈ (ಕವಿಶೈಲದಿಂದ ಕುದುರೆಮುಖವರೆಗಿನ) ವಿಶಿಷ್ಟ ಬೆಟ್ಟಶ್ರೇಣಿಯನ್ನು ಕಣ್ತುಂಬಿಕೊಳ್ಳಲು ಮಾಯದಂಥ ಗಳಿಗೆಗಾಗಿ ಕಾಯಬೇಕು. ಹೆಚ್ಚು ಮಂಜೂ ಇಲ್ಲದ, ಹೆಚ್ಚು ಬಿಸಿಲೂ ಇಲ್ಲದ ಬೆಳ್ಳಂಬೆಳಗಿನ ಮುತ್ತಿನ ಗಳಿಗೆ ಅದು.

ಮಂಜು ಹೆಚ್ಚಾದರೆ ಕಣಿವೆಯ ಕಾಡೆಲ್ಲ ಅದರೊಳಗೆ ಮುಳುಗಿ, ಶ್ರೇಣಿಯೂ ಆಕಾಶದೊಳಗೆ ಕರಗಿಹೋಗುತ್ತದೆ. ಏನೇನೂ ಕಾಣದು. ಇನ್ನು, ಬಿಸಿಲು ಹೆಚ್ಚಾದರೆ, ಝಳಕ್ಕೆ ಹತ್ತಿರದ ಬೆಟ್ಟಗಳಷ್ಟೇ ಎದ್ದು ಕಾಣಲು ಶುರುವಾಗಿ, ಕುದುರೆಮುಖ ಶ್ರೇಣಿ ಪ್ರಖರ ಬೆಳಕಿನ ಮುಸುಕು ಹೊದ್ದು ಮಲಗುತ್ತದೆ. ಈ ಎರಡೂ ಅತಿರೇಕವನ್ನು ಬಾಗಿಸಿ, ಹದವಾಗಿ ಬೆರೆಸಿ, ಸೂರ್ಯನಿಗೂ ಸ್ವಲ್ಪ ಮಟ್ಟಿಗೆ ಮೋಡ ಹೊದಿಸಬೇಕು. ಆಗ, ಬಿಸಿಲು ಹೆಚ್ಚೂಕಮ್ಮಿ ಸಮಪ್ರಮಾಣದಲ್ಲಿ ತಾಕಿ, ಬೆಟ್ಟಗಳ ಮೇಲಿನ ಮಂಜನ್ನೆಲ್ಲ ಸಾಧ್ಯವಾದಷ್ಟು ನುಂಗಿ, ಹತ್ತಿರದಲ್ಲಿ ದಟ್ಟಾತಿದಟ್ಟ ಕಾಡಿನ ಬೆಟ್ಟಗಳೂ, ದೂರಕ್ಕೆ ನುಣ್ಣನೆಯ ಕುದುರೆಮುಖ ಶ್ರೇಣಿಯೂ ಕಾಣಿಸಿಕೊಳ್ಳುತ್ತದೆ. ಎಣಿಸಿದರೆ, ಬರೋಬ್ಬರಿ ಹನ್ನೊಂದು ಬೆಟ್ಟಗಳ ಸಾಲು! ಕುದುರೆಮುಖ ಶ್ರೇಣಿಯೋ ಖುಷಿಯ ಮೂಟೆ. ಇದೆಲ್ಲ ಅಂದಾಜು ಹತ್ತು ನಿಮಿಷದ ನೋಟವಷ್ಟೇ. ಬಿಸಿಲೇರಿದಂತೆ ಬೆಟ್ಟಗಳ ಕಣ್ಣಾಮುಚ್ಚಾಲೆ ಶುರು.

ಥರಗುಟ್ಟಿಸುವ ಮುಂಜಾವು, ಮಳೆಯಲ್ಲಿ ತೊಯ್ದ ಮುಂಜಾವು, ಬೆಚ್ಚನೆ ಗಾಳಿಯಲ್ಲಿ ಆಟವಾಡುತ್ತ ಕುಂತ ಮುಂಜಾವು, ಮಸುಕು ಬೆಳಕಿನ ಬೆಳಗ್ಗೆ, ತಿಳಿಬೆಳಕಿನ ಬೆಳಗ್ಗೆ, ಎಳೆಬಿಸಿಲಿನ ಬೆಳಗ್ಗೆ, ತೆಳುಬಿಸಿಲಿನ ಮಧ್ಯಾಹ್ನ, ಸುಡುಬಿಸಿಲಿನ ಮಧ್ಯಾಹ್ನ, ಮೋಡದಾಟದ ಮಧ್ಯಾಹ್ನ, ಸಂಜೆ, ಇಳಿಸಂಜೆ, ನಸುಗತ್ತಲ ಸಂಜೆ, ರಾತ್ರಿ, ಬೆಳದಿಂಗಳ ರಾತ್ರಿ, ಕಗ್ಗತ್ತಲ ರಾತ್ರಿ… ಹೀಗೆ ಥರಥರದ ಹೊತ್ತುಗಳಲ್ಲಿ ಕವಿಶೈಲದ ನೆತ್ತಿ ಮೇಲೆ ನಿಂತು ಕುದುರೆಮುಖ ಶ್ರೇಣಿ ಕಡೆಗೆ ಬೆರಗಿನಿಂದ ನೋಡುತ್ತ ಹಕ್ಕಿಯಾಗಿದ್ದಿದೆ. ಆದರೆ, ಹುಲಿ ಮಾತ್ರ ಒಮ್ಮೆಯೂ ಸಿಕ್ಕಿಲ್ಲ. ಅಕಸ್ಮಾತ್ ಸಿಕ್ಕಿದರೆ, ಎರಡಕ್ಷರದ ಕತೆಯನ್ನಂತೂ ಹೇಳೋಲ್ಲ. ಬದಲಿಗೆ, ಕುದುರೆಮುಖದ ಆಸೆ ತೋರಿಸಿ ಅದನ್ನು ಕಣಿವೆಯತ್ತ ಕಳಿಸುವ ಅಂದ್ಕೊಂಡಿದ್ದೇನೆ.