ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು. ಏನೇ ಆದರೂ ಬೇರೆಯದೇ ಒಂದು ದೇಶಕ್ಕೆ ಹೋದಾಗ ಅಲ್ಲಿ ಮಾಡುವ ನಮ್ಮ ಸಾಹಸಗಳು, ಎಷ್ಟೇ ಚಿಕ್ಕದಾಗಿಯೇ ಇರಲಿ, ನಮ್ಮ ಆತ್ಮವಿಶ್ವಾಸವನ್ನು ಮೌಂಟ್ ಎವರೆಸ್ಟ್ ನಷ್ಟು ಎತ್ತರಕ್ಕೆ ಏರಿಸಿಬಿಡುತ್ತವೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಎಂಟನೆಯ ಬರಹ
ಕಾರ್ ಕಾರ್ ಕಾರ್ ಎಲ್ನೋಡಿ ಕಾರ್.. ಎಂಬ ಅಮೆರಿಕೆಯಲ್ಲಿ ಚಿತ್ರಿತವಾದ ಕನ್ನಡ ಚಲನಚಿತ್ರದ ಹಾಡು ಕೇಳಿದ್ದೆನಾದರೂ ಪ್ರತ್ಯಕ್ಷವಾಗಿ ಆ ಕಾರ್-ಬಾರನ್ನು ನೋಡಲು ಅಮೆರಿಕೆಗೇ ಹೋಗಬೇಕಿತ್ತೆ? ಬೆಂಗಳೂರಿನಲ್ಲಿ ಕಾರುಗಳ ಭರಾಟೆ ಏನು ಕಡಿಮೆ ಇದೆಯೇ! ಆದರೂ ಅಲ್ಲಿ ನೋಡಿದ car ಗಳು ವಿಧವಿಧವಾಗಿದ್ದವು. 5 seat ಕಾರು, 12 ಸೀಟಿನ ಕಾರ್, ತರ ತರಹದ ಬಣ್ಣಗಳು, ಅನನ್ಯ ವಿನ್ಯಾಸಗಳು ಹೀಗೆ.. ಅಲ್ಲಿ ಕಾರ್‌ಗಿಂತ ತುಸು ದೊಡ್ಡದಾದ ಸರಕು ಸಾಗಾಣಿಕೆಯ ವಾಹನಗಳಿಗೆ ಟ್ರಕ್ ಅಂತ ಕರಿತಾರೆ. ಹಿಂದೆ carrier ತರಹ ಇರುವ, ಮುಂದೆ ಕಾರ್ ನಂತೆಯೇ ಕಾಣುವ ವಾಹನಗಳು ಅವು. ಆದರೆ ನಮ್ಮಲ್ಲಿ ಟ್ರಕ್ ಎಂದರೆ ಬಹು ದೊಡ್ಡ ಸರಕು ಸಾಗಿಸುವ ವಾಹನಗಳು ಮಾತ್ರ. ಕಾರ್ ಕಂಪೆನಿಗಳೂ ಕೂಡ ಹಲವಾರು. ಬೇರೆ ಬಹುತೇಕ ವಸ್ತುಗಳನ್ನು ಚೈನಾದಿಂದಲೇ ಆಮದು ಮಾಡಿಕೊಳ್ಳುವ ಅಮೆರಿಕೆ, ಕಾರುಗಳನ್ನು ಮಾತ್ರ ಅಲ್ಲಿಂದ ತರಿಸಲಿಕ್ಕಿಲ್ಲವೇನೋ!
ಅಲ್ಲಿನ ಬಹುತೇಕ ದೇಸಿಗಳು ಕಾರುಗಳನ್ನು ಹೊಸದೇ ಕೊಂಡುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಕಂಪನಿಯವರು Lease ಮೇಲೆ ಕೂಡ ಕೊಡುತ್ತಾರೆ. ಕಂಪೆನಿಯಿಂದಲೇ ಕಾರು ಖರೀದಿಗೆ ದುಡ್ಡು ಸಿಗುತ್ತದೆ. ಯಾವುದೇ ಬಡ್ಡಿ ಇಲ್ಲದೆ ತಿಂಗಳಿಗೆ ಇಷ್ಟು ಅಂತ EMI ಕಟ್ಟಿಸಿಕೊಳ್ಳುತ್ತಾರೆ. ಎಲ್ಲ ಕಂತುಗಳು ಮುಗಿಯುವವವರೆಗೆ ಆ ಕಾರು ಕಂಪೆನಿ ಹೆಸರಿನಲ್ಲೇ ಇರುತ್ತದೆ. ಆಮೇಲೆ ಮಾಲೀಕನ ಹೆಸರಿಗೆ ಬದಲಾಗುತ್ತದೆ. ಇನ್ನೂ ಕೆಲವರು ಭಾರತದಲ್ಲಿರುವಂತೆಯೇ ಬ್ಯಾಂಕ್‌ನಿಂದ ಸಾಲ ಪಡೆದು ಕಾರ್ ಕೊಂಡುಕೊಳ್ಳುತ್ತಾರೆ. ಇನ್ನುಳಿದವರು ಸೆಕಂಡ್ ಹ್ಯಾಂಡ್ ಕೊಳ್ಳುತ್ತಾರೆ. ಅಲ್ಲಿ ಅಂತಹ ಕಾರ್‌ಗೆ ಸಾಮಾನ್ಯವಾಗಿ used car ಅಂತ ಹೇಳುತ್ತಾರೆ. ನನಗೆ ಓಡುವ ಸ್ಥಿತಿಯಲ್ಲಿ ಇರುವ ಬಳಸಿದ (ಹಳಸಿದ!?) ಕಾರು ಸಾಕಿತ್ತು. ಅವತ್ತು ಬೆಳಿಗ್ಗೆ ಅಂತಹ ಒಂದು car ಲಭ್ಯ ಇದ್ದ ಜಾಗಕ್ಕೆ ಕರೆದುಕೊಂಡು ಹೋಗಲು ಚಂದ್ರು ನಮ್ಮ ಮನೆಗೆ ಬಂದಿದ್ದ. ಶಂಕರ ಅಜ್ಜಂಪುರ ಅವರನ್ನೂ ಬರುವಿರೋ ಅಂತ ಕೇಳಿದ್ದೆ. ಅಲ್ಲಿನ ಕಾರಿನ ವ್ಯವಹಾರ ಹೇಗೆ ನಡೆಯುತ್ತೆ ಅಂತ ನೋಡುವ ಕುತೂಹಲ ಅವರಿಗೂ ಇತ್ತು. ನಡೀರಿ ಬರ್ತೀನಿ.. ಬೇರೆ ಏನು ಕೆಲಸ ಇಲ್ಲಿ? ಅಂತ ತಮಾಷೆ ಮಾಡುತ್ತಾ ಹೇಳಿದ್ದರು.
ಭಾಳ ಛಂದ ಆಗ್ಯದ ನೋಡಲಾ ಚಾ ಅಂತ ಆಶಾ ಮಾಡಿದ್ದ ಚಾ ಕುಡಿದು ಹೊಗಳಿದ ಚಂದ್ದು. ಅವನಿಗೆ ನನ್ನಷ್ಟೇ ಚಹಾದ ಹುಚ್ಚು. ನಡು ರಾತ್ರಿ ಎಬ್ಬಿಸಿ ಚಾ ಬೇಕಾ ಅಂದರೆ ಎದ್ದು ಕುಡಿದು ಮತ್ತೆ ಗಡದ್ದು ನಿದ್ದೆ ಹಿಡಿಯುವಷ್ಟು! ಚಾ ಕುಡಿದರೆ ನಿದ್ದೆ ಬರೋದಿಲ್ಲ ಎನ್ನುವವರನ್ನು ಕಂಡು ನಮ್ಮಿಬ್ಬರಿಗೂ ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ಚಾ ಗೂ ನಿದ್ದೆಗೂ ಏನು ಸಂಬಂಧ!? ಅಲ್ಲವೇ! ಒಮಾಹಾದ ಕಾಂಕ್ರೀಟ್ ರಸ್ತೆಯ ಮೇಲೆ ಚಂದ್ರು ಜೊತೆಗೆ ಅಜ್ಜಂಪುರ ಸರ್ ಮನೆಯ ಕಡೆಗೆ ಹೊರಟೆವು. ಮೊದಲೇ ಫೋನ್ ಮಾಡಿದ್ದರಿಂದ ತಮ್ಮ ಅಪಾರ್ಟ್ಮೆಂಟ್ ಹೊರಗೆಯೆ ನಿಂತಿದ್ದ ಅವರನ್ನು ಹತ್ತಿಸಿಕೊಂಡು ಹದಿನೈದು ನಿಮಿಷದಲ್ಲಿ ಒಂದು ಗ್ಯಾರೇಜ್ ಮುಂದೆ ಹೋಗಿ ನಿಂತೆವು.
ಅದು ಹೆಚ್ಚುಕಡಿಮೆ ನಮ್ಮ ದೇಶದ ಗ್ಯಾರೇಜ್ ತರಹವೇ ಅನಿಸಿದರೂ ತುಸು ಹೆಚ್ಚು ವಿಶಾಲವಾಗಿತ್ತು. ಅಲ್ಲಿ ಕೆಲಸ ಮಾಡುವ ಕೆಲವರು ಭಾರತೀಯರಂತೆ ಕಂಡರೂ ಅವರು ಮೆಕ್ಸಿಕನ್ನರು ಅಂತ ಚಂದ್ರು ಹೇಳಿದ. ಮೆಕ್ಸಿಕನ್ನರಿಗೂ ನಮಗೂ ಏನೋ ಬಾದರಾಯಣ ಸಂಬಂಧ ಖಂಡಿತ ಇದೆ ಅಂತ ಅವರನ್ನು ನೋಡಿದಾಗೆಲ್ಲ ಅನಿಸುತ್ತಿತ್ತು. ಅವರಲ್ಲಿ ಬಹಳಷ್ಟು ಜನರು ಹೆಚ್ಚು ಕಡಿಮೆ ನಮ್ಮ ತರಹವೆ ಕಾಣುತ್ತಾರೆ. ಎಷ್ಟೋ ಸಲ ನನ್ನ ಹೆಂಡತಿಯನ್ನು ನೋಡಿ ಕೆಲವರು ನೀನು ಮೆಕ್ಸಿಕನ್ನಾ ಅಂತ ಕೇಳುತ್ತಿದ್ದುದು ಉಂಟು.
ಚಂದ್ರುಗೆ ಪರಿಚಯದವನೊಬ್ಬ ಗರಾಜಿನಿಂದ ಹೊರಗೆ ಬಂದು ನಮಗೆಲ್ಲರಿಗೂ ಹಸ್ತಲಾಘವ ಮಾಡಿ ತನ್ನನ್ನು ಪರಿಚಯಿಸಿಕೊಂಡ. ಅವನ ಹೆಸರು ಏಂಜಲ್ (Angel). ಅಂತ ಹೇಳಿದ. ಇದೇನು ಹುಡುಗಿಯರ ಹೆಸರಿನ ತರಹ ಇದೆ ಅಂದಾಗ, ಮೆಕ್ಸಿಕನ್‌ರಲ್ಲಿ ಹುಡುಗಿಯರ ಹೆಸರಿನಂತೆಯೇ ಅನಿಸುವ ಕೆಲವು ಹೆಸರುಗಳನ್ನು ಗಂಡಸರಿಗೆ ಇಡುತ್ತಾರೆ ಎಂಬ ವಿಷಯ ಚಂದ್ರುನಿಂದ ತಿಳಿಯಿತು. ಇದು ನಮ್ಮಲ್ಲಿಯೂ ಇರುವಂತಹ ಲಿಂಗ ತಟಸ್ಥ ಹೆಸರುಗಳಂತೆಯೇ, ಮೆಕ್ಸಿಕನ್ನರಲ್ಲಿ ಒಂದು ತುಂಬಾ ಪ್ರಸಿದ್ಧ ಹೆಸರಂತೆ.
ಅವನು ತನ್ನ ಬಳಿ ಮಾರಾಟಕ್ಕೆ ಇದ್ದ ಒಂದು ಹಳೆಯ 2002 ನೆಯ ಮಾಡೆಲ್ ಕಾರ್ ಅನ್ನು ನಮಗೆ ತೋರಿಸಿದ. ಅದು ಚನ್ನಾಗಿಯೇ ಇತ್ತು. ಓಡುತ್ತಿತ್ತು ಕೂಡ! ಅಷ್ಟು ಹಳೆಯದಾದರೂ ಅದರಲ್ಲಿ Automatic transmission ಇತ್ತು. ಅಲ್ಲಿನ ಬಹುತೇಕ ಕಾರುಗಳಿಗೆ ಕ್ಲಚ್ಚು ಇರೋದಿಲ್ಲ. ಬರಿ accelerator ಹಾಗೂ brake ಅಷ್ಟೇ. ಭಾರತದಲ್ಲಿ ಕೂಡ ಆ ತರಹದ ಕಾರುಗಳು ಆಗ ತಾನೇ ಬರಲು ಶುರುವಾಗಿದ್ದವು. ಆದರೂ ಅಲ್ಲಿನ ಹಾಗೆ ಸಾಮಾನ್ಯ ಅನಿಸುವಷ್ಟು ಇರಲಿಲ್ಲ. ಇವೆಲ್ಲ ಕಾರಣಗಳಿಂದ ದೇಸಿಗಳಿಗೆ ಅಮೆರಿಕೆ ಅಂದರೆ ಪ್ರಾಣ! ಎಲ್ಲದಕ್ಕಿಂತ ಪ್ರಾಣ ಅಲ್ಲಿನ ಡಾಲರು! ಅಮೆರಿಕನ್ನರು ಹಾಗೊಂದು ಭ್ರಮೆ ಸೃಷ್ಟಿ ಮಾಡಿಬಿಟ್ಟಿದ್ದಾರಲ್ಲ!
ಕಾರ್ ಟೊಯೋಟ ಕಂಪೆನಿಯದಾಗಿತ್ತು. ಓಡಿಸಿ ನೋಡಿದೆವು. ಚೆನ್ನಾಗಿಯೇ ಇತ್ತು. ಒಳಗಡೆ ತುಂಬಾ ಸ್ಥಳ ಇತ್ತು. ಏಂಜಲ್ ಜೊತೆಗೆ ವ್ಯವಹಾರ ಮಾತನಾಡಲು ಕೂತಾಗ 3000 ಬಕ್ಸ (bucks) ಅಂದ. ಡಾಲರ್‌ಗೆ ಅಲ್ಲಿನ ಸ್ಥಳೀಯರು ಹಾಗೆ ಕರೆಯುತ್ತಾರೆ. ನಾವೂ ಚೌಕಾಶಿ ಮಾಡಿ 2800 bucks ಗೆ ಇಳಿಸಿದೆವು. ನನ್ನ ಬೊಕ್ಕಸಕ್ಕೆ ತಕ್ಕನಾದ ಬಕ್ಸ್‌ಗೆ ನನಗೊಂದು ಕಾರ್ ಸಿಕ್ಕಿತ್ತು.
ಬರಿ 2800 ಡಾಲರ್ ಅಷ್ಟೇ ಅಂತ ಯಾರಿಗಾದರೂ ಅನಿಸುತ್ತದೆ, ಅಲ್ಲವೇ? ಉದಾಹರಣೆಗೆ ಭಾರತದಲ್ಲಿ 2800 ರೂಪಾಯಿಗೆ ಒಂದು ಹಳೆಯ ಕಾರ್ ಸಿಗುವ ಕಾಲ ಬಂದರೆ ಹೇಗಿರುತ್ತದೆ?! ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ, ಡಾಲರ್ ಅನ್ನು ರೂಪಾಯಿಗೆ convert ಮಾಡಿದಾಗ ಅದು ತುಂಬಾ ದುಬಾರಿ ಅನಿಸುತ್ತದೆ. ಹಾಗೆ ತುಲನೆ ಮಾಡಬಾರದು ಅಂತ ತುಂಬಾ ಜನ ದೇಸಿಗಳು ಹೇಳ್ತಾರೆ. ಆದರೆ ಯಾಕೆ ಮಾಡಬಾರದು ಅನ್ನೋದು ನನ್ನ ಪ್ರಶ್ನೆ. ಅಲ್ಲಿನ ನಮ್ಮ ಮನೆಯ ಬಾಡಿಗೆ 1100 ಡಾಲರ್, ಅಂದರೆ ಆಗಿನ ಡಾಲರ್ rate ಹಿಡಿದರೂ ಕೂಡ 70,000 ರೂಪಾಯಿ. ಅದು ಬೆಂಗಳೂರಿನ ಒಂದು ಒಳ್ಳೆಯ ಅಪಾರ್ಟ್ಮೆಂಟ್ ಬಾಡಿಗೆಗೆ ಹೋಲಿಸಿದರೆ ಹೆಚ್ಚೇ ಅಲ್ಲವೇ? ಪೆಟ್ರೋಲ್ ಒಂದು gallon ಗೆ 3 ಡಾಲರ್. ಅಂದರೆ ಲೀಟರಿಗೆ ಹೆಚ್ಚು ಕಡಿಮೆ 55 ರೂಪಾಯಿ! ನಮಗಿಂತ ಸ್ವಲ್ಪ ಕಡಿಮೆ ಅಷ್ಟೇ. Broadband ಗೆ ತಿಂಗಳಿಗೆ 45 ಡಾಲರ್ ಕೊಡುತ್ತಿದ್ದೆ. ಅದು ಹೆಚ್ಚು ಕಡಿಮೆ 3000 ರೂಪಾಯಿ.. ಅರೆ ಇದನ್ನೆಲ್ಲಾ ಗಮನಿಸಿದಾಗ ನಮ್ಮ ದೇಶದಲ್ಲೇ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತದೆ ಅನಿಸಿತು. ಹಾಗಿದ್ದೂ ಡಾಲರ್ rate ಮಾತ್ರ ಜಾಸ್ತಿ. ಹೀಗಾಗಿ ನನಗೆ ಅನಿಸಿದ್ದು, ಅಲ್ಲಿಯೇ ಇದ್ದರೆ ಲಾಭವಿಲ್ಲ. ಅಲ್ಲಿ ಒಂದಿಷ್ಟು ದುಡ್ಡು ಮಾಡಿ ಮರಳಿ ಸಾಧ್ಯವಾದಷ್ಟು ಬೇಗ ಭಾರತಕ್ಕೆ ಬಂದರೆನೆ ಲಾಭ. ಆದರೆ ಒಂದಿಷ್ಟು ಅಂದರೆ ಎಷ್ಟು ಎಂಬ calculation ನಲ್ಲೇ ಕಾಲ ಕಳೆದು ಹೋಗುತ್ತದಲ್ಲ. ನಾನಂತೂ ಆ ಒಂದಿಷ್ಟನ್ನೂ ಆಗಲೇ ನಿರ್ಧರಿಸಿದ್ದೆ!
ಭಾಳ ಛಂದ ಆಗ್ಯದ ನೋಡಲಾ ಚಾ ಅಂತ ಆಶಾ ಮಾಡಿದ್ದ ಚಾ ಕುಡಿದು ಹೊಗಳಿದ ಚಂದ್ದು. ಅವನಿಗೆ ನನ್ನಷ್ಟೇ ಚಹಾದ ಹುಚ್ಚು. ನಡು ರಾತ್ರಿ ಎಬ್ಬಿಸಿ ಚಾ ಬೇಕಾ ಅಂದರೆ ಎದ್ದು ಕುಡಿದು ಮತ್ತೆ ಗಡದ್ದು ನಿದ್ದೆ ಹಿಡಿಯುವಷ್ಟು! ಚಾ ಕುಡಿದರೆ ನಿದ್ದೆ ಬರೋದಿಲ್ಲ ಎನ್ನುವವರನ್ನು ಕಂಡು ನಮ್ಮಿಬ್ಬರಿಗೂ ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ಚಾ ಗೂ ನಿದ್ದೆಗೂ ಏನು ಸಂಬಂಧ!?
ನಗದಿನಲ್ಲೇ ನಮ್ಮ ವ್ಯವಹಾರ ಮುಗಿಯಿತು. ಕಾರ್ ನನ್ನದಾಯ್ತು. ಏನಾದರೂ ತೊಂದರೆ ಆದರೆ ನಾನಿದ್ದೇನೆ ಅಂತ ಏಂಜಲ್ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದನಾದರೂ, ಅವನು ಹಾಗೇಕೆ ಹೇಳಿರಬಹುದು? ಅದರಲ್ಲೇನಾದರೂ ಐಬು ಇರಬಹುದೇ? ಅಂತ ನಾನು ಒಂದು ಕ್ಷಣ ಯೋಚನೆಗೆ ಬಿದ್ದೆ.
ಏನ ಲಾ, ಗುರು. Chance ಹೊಡದೆ ಬಿಡು. ಚೊಲೋ ಡೀಲ್ ಆತ್ ನೋಡ. ಪಾರ್ಟಿ ಯಾವಾಗೋ ಪಾ.. ಅಂತ ಚಂದ್ರು ನನ್ನನ್ನು ಎಚ್ಚರಿಸಿದ. ನನ್ನ ಚಿಂತೆಯ ಕಾರಣವನ್ನು ಹೇಳಿದಾಗ, 2002 ನೇ ಮಾಡಲ್ ಅಂದ್ರ ಅದರಾಗ ಸಣ್ಣ ಪುಟ್ಟ ಪ್ರಾಬ್ಲಂ ಇದ್ದ ಇರತಾವೂ ಬಿಡಲಾ, ಏಂಜಲ್ ಅದಾನಲ್ಲ! ಅಂತ ಸಮಾಧಾನ ಮಾಡಿದ. ನನ್ನ ಜೀವನದಲ್ಲೇ ಮೊದಲ ಬಾರಿ ಯಾರೋ ಬಳಸಿದ ವಸ್ತುವೊಂದನ್ನು ಖರೀದಿಸಿದ್ದೆ. ಹೀಗಾಗಿ ಸ್ವಲ್ಪ ಅಳುಕು ಇತ್ತು.
*****
ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು. ಏನೇ ಆದರೂ ಬೇರೆಯದೇ ಒಂದು ದೇಶಕ್ಕೆ ಹೋದಾಗ ಅಲ್ಲಿ ಮಾಡುವ ನಮ್ಮ ಸಾಹಸಗಳು, ಎಷ್ಟೇ ಚಿಕ್ಕದಾಗಿಯೇ ಇರಲಿ, ನಮ್ಮ ಆತ್ಮವಿಶ್ವಾಸವನ್ನು ಮೌಂಟ್ ಎವರೆಸ್ಟ್ ನಷ್ಟು ಎತ್ತರಕ್ಕೆ ಏರಿಸಿಬಿಡುತ್ತವೆ. ಅದೂ ಅಮೆರಿಕೆಯಂತೂ ಇನ್ನೂ ಹಲವು ಸಾಹಸಗಳನ್ನು ಮಾಡಲು ಸೆಡ್ಡು ಹೊಡೆದು ಆಹ್ವಾನಿಸುತ್ತದೆ. ನಮ್ಮ ಹಿರಿಯರು, ದೇಶ ಸುತ್ತಿ ನೋಡು ಕೋಶ ಓಡಿ ನೋಡು ಅಂತ ಅದೇ ಕಾರಣಕ್ಕೆ ಹೇಳಿರಬೇಕು.
ಕಾರ್ ಸಿಕ್ಕ ಮೇಲೆ ಓಡಿಸಲು ಲೈಸೆನ್ಸ್ ಬೇಕಲ್ಲ. ಮೊದಲ ಕೆಲವು ತಿಂಗಳುಗಳು, ಅಲ್ಲಿನ ಕೆಲವು ರಾಜ್ಯಗಳಲ್ಲಿ ಭಾರತದ ಲೈಸೆನ್ಸ್ ನಡೆಯುತ್ತದೆ. ಆದರೂ ಆದಷ್ಟು ಬೇಗ ಅಲ್ಲಿನ ಲೈಸೆನ್ಸ್ ತೆಗೆದುಕೊಂಡರೆ ಅದು ಒಂದು ಅಧಿಕೃತ ದಾಖಲೆಯಾಗಿ ಕೂಡ ಸಹಾಯ ಆಗುತ್ತೆ ಎಂಬ ಕಾರಣಕ್ಕೆ ಅಪಾರ್ಟ್ಮೆಂಟ್‌ನ ಸಮೀಪದಲ್ಲೇ ಇದ್ದ DMV (Department Of Motor Vehicles) ಆಫೀಸ್‌ಗೆ ಹೋದೆ. ಅಲ್ಲಿನ ಕಾರ್ಯವಿಧಾನ ತುಂಬಾ ಸರಳವಾಗಿತ್ತು. ಆಗ ತಾನೇ ಬಂದಿದ್ದರಿಂದ ಪಾಸ್ಪೋರ್ಟ್, SSN ಹಾಗೂ ನನ್ನ ಅಪಾರ್ಟ್ಮೆಂಟ್‌ನ ಕೆಲವು ದಾಖಲೆಗಳನ್ನು ಮಾತ್ರ ಪಡೆದು Learners ಲೈಸೆನ್ಸ್ ಕೊಟ್ಟರು. ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗೆ ಅಂತ ಒಂದು ದಿನ ನಿಗದಿ ಮಾಡಿದರು. SSN ಅಂದರೆ Social Security Number. ಅದು ನಮ್ಮ ಆಧಾರ ಇದ್ದಂತೆ. ಈಗಾಗಲೇ ಅಲ್ಲಿ ಕಾರನ್ನು ಓಡಿಸಿ ಗೊತ್ತಿದ್ದರೂ ಪರೀಕ್ಷೆಯಲ್ಲಿ ಏನೆಲ್ಲಾ ಗಮನಿಸುತ್ತಾರೆ ಎಂಬುದು ತಿಳಿದಿರಲಿಲ್ಲ. ಅದಕ್ಕೆ ಸಹಾಯ ಮಾಡಲು ಚಂದ್ರು ಇದ್ದನಲ್ಲ! ಒಂದು ದಿನ ಮನೆಗೆ ಬಂದು, ಅವರು ಯಾವ ದಾರಿಯಲ್ಲಿ test drive ಗೆ ಕರೆದುಕೊಂಡು ಹೋಗುತ್ತಾರೋ ಅದೇ ದಾರಿಯಲ್ಲಿ ನನ್ನನ್ನು ನನ್ನದೇ ಕಾರ್‌ನಲ್ಲಿ ಕರೆದುಕೊಂಡು ಹೋಗಿ ಏನೇನೆಲ್ಲ ಪರೀಕ್ಷೆ ಮಾಡುತ್ತಾರೆ ಅಂತ ತಿಳಿಸಿದ. ಎಲ್ಲೋ ಒಂದು ಕಡೆ ಪಾರ್ಕ್ ಅಂತ ಹೇಳುತ್ತಾರೆ, ಆಗ ಹೇಗೆ ನಿಲ್ಲಿಸಬೇಕು, ಆಂಬ್ಯುಲೆನ್ಸ್ ಬಂದಾಗ ಎಲ್ಲಿದ್ದೀವೋ ಅಲ್ಲೇ ನಿಂತು ಬಿಡಬೇಕು, ಯಾವ ರಸ್ತೆಯಲ್ಲಿ ಎಷ್ಟು ವೇಗ ಅಂತ ಮೊದಲೇ ನಮೂದಿಸಿರುತ್ತಾರೋ ಅದಕ್ಕಿಂತ ಜಾಸ್ತಿ ವೇಗದಲ್ಲಿ ಹೋಗಲೇ ಕೂಡದು.. ಹೀಗೆ ಹಲವಾರು ವಿಷಯಗಳನ್ನು ತಿಳಿಸಿದ.
ಟೆಸ್ಟ್‌ನ ದಿನ ನನ್ನ ಜೊತೆಗೆ ಒಬ್ಬ inspector ಪಕ್ಕದ ಸೀಟಿನಲ್ಲಿ ಬಂದು ಕುಳಿತರು. All the best ಹೇಳಿದರು ಕೂಡ. ನಾನು ಎಷ್ಟು ಅತಿ ಆತ್ಮವಿಶ್ವಾಸದಲ್ಲಿ ಇದ್ದೆ ಅಂದರೆ ಒಂದೇ ಕೈಯಲ್ಲಿ steering ಹಿಡಿದು ಓಡಿಸಲು ತೊಡಗಿದೆ. ಅದನ್ನು ಗಮನಿಸಿದ ಅವರು ಕೂಡಲೇ ಆಕ್ಷೇಪಿಸಿ ಎಂದಿಗೂ ಒಂದೇ ಕೈಯಲ್ಲಿ ಕಾರ್ ಓಡಿಸಬೇಡ ಅಂದರು. ಛೇ ಅವರೆದುರಿಗೆ ತಪ್ಪು ಮಾಡಿದೆನಲ್ಲ ಅಂತ ಸ್ವಲ್ಪ ಹಳಹಳಿ ಆಯಿತಾದರೂ ಮುಂದಿನ ಪರೀಕ್ಷೆಗಳನ್ನೆಲ್ಲ ಅವರು ಹೇಳಿದಂತೆ ಮಾಡಿ ಮುಗಿಸಿದೆ. ಚಂದ್ರು ನನಗೆ ತೋರಿಸಿದ್ದ ಹಾದಿಯಲ್ಲೇ ಅವರು ಕರೆದುಕೊಂಡು ಹೋಗಿದ್ದು ಕೂಡ ನನಗೆ ತುಂಬಾ ಅನುಕೂಲ ಆಗಿತ್ತು.
Congratulations! You passed the test. You were very close though. ಅಂತ inspector ಹೇಳಿದರು. ಅಂದರೆ? ಇನ್ನೂ ಒಂದೋ ಎರಡೋ ತಪ್ಪು ಮಾಡಿದ್ದರೂ ಸಾಕಿತ್ತು, ತಯಾರಿ ಮಾಡಿಕೊಂಡು ಇನ್ನೊಮ್ಮೆ ಬಾ ಗುರು ಅಂತ ಕಳಿಸಿಬಿಡುತ್ತಿದ್ದರೋ ಏನೋ. ಮೂರು ಸಲ ಹಾಗೆ ಅವಕಾಶ ಕೊಡುತ್ತಾರೆ. ಅಂತೂ SSN ಜೊತೆಗೆ ಅಮೆರಿಕೆಯ ಇನ್ನೊಂದು ಅಧಿಕೃತ ಗುರುತಿನ ಚೀಟಿ ನನಗೆ ಸಿಕ್ಕಿತ್ತು. ಅದೂ ಒಂದು ಪೈಸೆ ಲಂಚವನ್ನೂ ಕೊಡದೇನೇ!
ಹಿಂದಿನ ಕಂತು: ಒಮಾಹಾದಲ್ಲಿ ಟೊಮೆಟೋ ಸಾರು!
(ಮುಂದುವರಿಯುವುದು..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.