ಜೀವನ್ಮುಕ್ತಿ

ನದಿಯಿಂದ ಮೀನ ಪಡೆದು ಹಾರುವ
ಹಕ್ಕಿಯ ರೆಕ್ಕೆಗಳಲಿ ಜೀವನ್ಮುಕ್ತಿಯ ನೆರಳು

ಕಣ್ಣು ಮುಚ್ಚಿ ಕುಳಿತವರೆಲ್ಲ ಧ್ಯಾನಿಸಲಾರರು
ಒಳಗಣ್ಣ ತೆರೆದು ಕೂರದವರೆಲ್ಲ ಧ್ಯಾನಿಸದಿರಲಾರರು
ವೀಣೆ ನುಡಿಸುವವಳ ಎಚ್ಚರದಲ್ಲಿ ನೇಯ್ಗೆಯೊಳು ಮಗ್ನನಾದವನಲ್ಲಿ
ಪ್ರೀತಿಯಲಿ ಮುಳುಗಿ ಹೋದವರಲ್ಲಿ ಮೊಳಗುವುದು ಧ್ಯಾನ

ಕೆರೆಯ ನೀರಿನ ತಾವರೆ ಹೊಂಬಾಳೆ ಬಿಟ್ಟ ತೆಂಗು
ಒಡಲ ತುಂಬಿಕೊಂಡ ಕಡಲು ಮಿಸುಕುವ ಭ್ರೂಣ ಧ್ಯಾನಸ್ತ ಬಿಳಿಲುಗಳು

ಮರದ ತೊಗಟೆಗಳೊಳಗೆ ನೆಲದ ಜೌಗಿನ ತಂಪು
ಹರಿವ ಝರಿಗಳಲಿ ಕಾಡುಹೂವಿನ ಘಾಟು
ಒಂದರೊಳು ಒಂದು ಕೂಡಿ ಬಿಡಿಸಿಕೊಳ್ಳುವ ಪರಿ
ಮೀನ ಮುಳ್ಳು ಸಿಲುಕಿಕೊಂಡ ಗಂಟಲು
ರೆಕ್ಕೆಗಳಿಂದ ಸುಖಾ ಸುಮ್ಮನೆ ಉದುರುವ ಪುಕ್ಕಗಳು

ದೇವರ ಜೊತೆ ಹೆಣ ಮಾತನಾಡಿ

 

 

 

 

 

ಲೋಕ ಜಂಗುಳಿಯಲ್ಲಿ ಏಕಾಂತವಾಗುವ ಸಾಯಂಕಾಲದ ಹೊತ್ತು
ಮಲಿನಗಳಿಂದ ತುಂಬಿದ ನರಕದಂತಿರುವ ಈ ಸುಡುಗಾಡಿನಲ್ಲಿ
ಕಣ್ಣೀರು ಸುರಿಸದೇ ಅಳುವ ಕಲೆ ಅದಕ್ಕೂ ಮತ್ತು ಎಲ್ಲರಿಗೂ ಸಿದ್ಧಿಸಿದೆ
ಗದ್ಗದಿಸಿ ಅತ್ತರೆ ಸಂತೆಯಲ್ಲಿ ಯಾಕಾಗಿ ಎಂದು ಕೇಳುವ ಒಬ್ಬನೂ ಇಲ್ಲ
ಹೀಗೆ ಅತ್ತು ಹಗುರಾಗುವುದು ಈ ಕಾಲದಲ್ಲಿ ಲಾಟರಿ ಹತ್ತಿದ ಹಾಗೆ
ಯಾರಿಗೂ ಹಂಚದೇ ಒಬ್ಬರೇ ಅನುಭವಿಸುವ ಚಪ್ಪರಿಸುವ ನೋವು

ನೋವು ಹಂಚಬಾರದು ನಗು ಹಂಚಬೇಕು
ಸಾಧ್ಯವಾದರೆ ಒಬ್ಬರ ನೋವನ್ನಾದರೂ ಕಿತ್ತುಕೊಳ್ಳಬೇಕು
ಕಿತ್ತುಕೊಳ್ಳುವುದರಲ್ಲಿ ಅಪರಿಮಿತ ಖುಷಿಯಿದೆ
ಅನುಭವಿಸಿದ್ದೀರಿ ಅಲ್ಲವೇ ಅದನ್ನು ಇಲ್ಲವೆಂದಾದರೆ
ನೋವನ್ನು ಕದಿಯುವ ಪ್ರೇಮಿಯಾಗಿ ಸಾಕು ಸಂತರಾಗುತ್ತೀರಿ

ಪ್ರೀತಿಯಿಂದ ನೇರ ಎದೆಗೆ ಒದ್ದರೂ ಹೊಟ್ಟೆಗೆ ಒದ್ದರೂ ಸಹಿಸಿಕೊಳ್ಳುತ್ತಾರೆ ಸಹನಾಮಯಿಗಳು ಸಂತರು
ಹೆಣದ ವಾಸನೆ ದೇವರು ಮಾತ್ರ ತಡೆಯುತ್ತಾನೆ ಮನುಷ್ಯರಲ್ಲ
ಮನುಷ್ಯ ಮನುಷ್ಯ ಮಾತನಾಡುವ ಪ್ರೀತಿ ಸೇತುವೆ ಕಡಿದು ಹೋದ ತರುವಾಯ ಹೆಣ ದೇವರ ಜೊತೆ ಮಾತನಾಡುತ್ತದೆ
ಅಲ್ಲಿ ಮನುಷ್ಯರಿಗೆ ಕಿಂಚಿತ್ತೂ ಜಾಗವಿಲ್ಲ ಹೆಣ ಹೆಣ ಸುಡುಗಾಡ ಹೆಣ
ದೇವರು ಮನುಷ್ಯರ ಮಾತನಾಡಿಸಲು ಪ್ರಯತ್ನಿಸಿ ಹೈರಾಣಾಗಿ
ಸ್ಮಶಾನವಾಸಿ ಭೈರವನಾದ ನಾನು ಹರಿಶ್ಚಂದ್ರನಾದೆ

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)