ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಭತ್ತವನ್ನು ಶಂಭುಲಿಂಗ ಮಾವನ ಮನೆಗೆ ಸಾಗಿಸಿ ವಾಪಸ್ಸು ದಾಸನಕೊಪ್ಪಕ್ಕೆ ಹೊರಟಾಗ ಮಧ್ಯರಾತ್ರಿ! ಅಂತೂ ಮೊಟ್ಟ ಮೊದಲ ಬಾರಿಗೆ ಕಟಾವು ಮಾಡಿದ ನಿರಾಳತೆ ಇತ್ತಾದರೂ ಅದನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ತಲೆಯ ಮೇಲೆ ಇನ್ನೂ ಇತ್ತು. ದೇವರ ಮೇಲೆ ಆ ಭಾರವನ್ನು ವರ್ಗಾಯಿಸಿ ನಾನು ಅವತ್ತು ಕಣ್ಣು ತೆರೆದೆ ಮಲಗಿಕೊಂಡೆ! ಯಾಕಂದರೆ ತೀರಾ ದಣಿದಿದ್ದ ನಾಗಣ್ಣ ಅವತ್ತು ಸ್ವಲ್ಪ ಸ್ಪೆಷಲ್ ಎಫೆಕ್ಟ್ ಗೊರಕೆ ಹೊಡೀತಾ ಇದ್ದರಲ್ಲ!
ಹಾಗೆಯೇ ಗೊರಕೆಗಳ ಸದ್ದಿನಲ್ಲಿಯೆ ಮನದಲ್ಲಿ ಮುಂದೇನು ಮಾಡುವುದು ಎಂಬ ಯೋಚನೆ ಬಂತು. ಭತ್ತವನ್ನು ಬೆಳೆದಿದ್ದು ಸಧ್ಯಕ್ಕೆ ಹೊಲವನ್ನು ಖಾಲಿ ಬಿಡುವುದು ಬೇಡ ಹಾಗೂ ನಮಗೂ ಮೊದಲ ಅನುಭವ ಆದೀತು ಎಂಬ ಉದ್ದೇಶಕ್ಕೆ. ಮುಂದೊಮ್ಮೆ ತೋಟ ಅಂತ ಮಾಡಿದರೂ ಕೂಡ ನಮಗೆ ಬೇಕಾಗುವಷ್ಟು ವಿವಿಧ ಧಾನ್ಯಗಳನ್ನು ಬೆಳೆಯಬೇಕು ಎಂಬ ಯೋಚನೆ ಇತ್ತು. ನಮ್ಮ ಮನೆಯಲ್ಲಿ ಅಕ್ಕಿಗಿಂತ ಜೋಳ ಹಾಗೂ ಜವೆ ಗೋಧಿ ಬಳಕೆ ಹೆಚ್ಚು. ಹಾಗಂತ ಅದಕ್ಕಾಗಿ ತುಂಬಾ ಜಾಗ ಬೇಡ. ಒಂದು ಎಕರೆಯಷ್ಟು ಅದಕ್ಕೆ ಮೀಸಲಿಟ್ಟರು ಸಾಕಾಗಿತ್ತು. ಆದರೆ ಸಧ್ಯಕ್ಕೆ ತೋಟ ಮಾಡಲು ಆಗಲಿಲ್ಲ ಅಂತಾದರೆ ಮತ್ತೆ ಭತ್ತವನ್ನೇ ಬೆಳೆದರಾಯ್ತು ಎಂಬ ಯೋಚನೆ ಕೂಡ ಇತ್ತು.
ಭತ್ತವನ್ನು ಲಾಭಕ್ಕಾಗಿ ಮಾಡಿಲ್ಲವಾದರೂ ಅದರಲ್ಲೂ ಲಾಭ ಗಳಿಸುವುದು ಸಾಧ್ಯವೇ? ಯಾಕಿಲ್ಲ? ನಮಗೆ ಮಾರುವ ಕಲೆ ಗೊತ್ತಿದ್ದರೆ ಸಾಕು. ಬೆಂಗಳೂರಿನಲ್ಲಿ ಈಗಾಗಲೇ ನಾವು ಬೆಳೆಯುತ್ತಿದ್ದ ಸೊಪ್ಪು ತರಕಾರಿಗಳಿಗೆ ಒಂದಿಷ್ಟು ಖಾಯಂ ಗ್ರಾಹಕರು ಇದ್ದರು. ಅವರಿಗೆ ಯಾಕೆ ನಮ್ಮ ಅಕ್ಕಿಯನ್ನು ಮಾರಬಾರದು ಎಂದು ಯೋಚಿಸಿದೆ. ಎಲ್ಲಾ ಲೆಕ್ಕ ಹಾಕಿದಾಗ ಒಂದು ಕೇಜಿ ಅಕ್ಕಿ ಗೆ 60 ರುಪಾಯಿಯವರೆಗೆ ಖರ್ಚು ಬಂದಿತ್ತು. ಇದು ಬರಿ 25 ಚೀಲಕ್ಕೆ. ಅದನ್ನೇ ಮುಂದಿನ ಸಲ ಇನ್ನೂ ಮುತುವರ್ಜಿ ವಹಿಸಿ 50 ಚೀಲ ಬೆಳೆದರೂ ಕೆಜಿಗೆ ಖರ್ಚು ಅರ್ಧದಷ್ಟು ಕಡಿಮೆಯಾದಂತೆ ಅಲ್ಲವೇ?
ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ. ಯಾವುದೇ ಬೆಳೆ ಬೆಳೆದರೂ ಅದರ ಪ್ರತಿಯೊಂದು ತ್ಯಾಜ್ಯವು ಕೂಡ ಬೆಲೆ ಬಾಳುವುದು. ಹಾಗಂತ ಎಲ್ಲವನ್ನೂ ಮಾರಬೇಕು ಅಂತ ನಾನು ಹೇಳುತ್ತಿಲ್ಲ. ಒಟ್ಟಿನಲ್ಲಿ ಲಾಭ ಬರುವಂತೆ ಕೃಷಿ ಮಾಡಲು ಸಾಧ್ಯ ಎಂಬುದು ಮನವರಿಕೆ ಆಗಿತ್ತು.
ಬೆಳಿಗ್ಗೆ ಎದ್ದ ಮೇಲೆ ನಾಗಣ್ಣ ಅವರ ಜೊತೆಗೂ ಚರ್ಚಿಸಿ ಮುಂದೆ ಏನು ಬೆಳೆಯೋಣ ಅಂತ ಅವರ ಅಭಿಪ್ರಾಯವನ್ನೂ ಕೇಳೋಣ ಅಂತ ಸ್ವಲ್ಪ ಕಣ್ಣು ಮುಚ್ಚಿದೆ. ಗೊರಕೆ ಶಬ್ದ ಮಂದವಾಗಿತ್ತೋ ಅಥವ ನನಗದು ರೂಢಿಯಾಗಿತ್ತೋ ಒಟ್ಟಿನಲ್ಲಿ ನಿದ್ದೆಯ ವಶವಾಗಿದ್ದೆ.
*****
ಬೆಳಿಗ್ಗೆ ಎದ್ದ ಕೂಡಲೇ ಮಾವನ ಮನೆಗೆ ನಮ್ಮ ಸವಾರಿ ಹೊರಟಿತು. ಅಲ್ಲಿಗೆ ಹೋದಾಗ ಆಗಲೇ ಸ್ವಲ್ಪ ಬಿಸಿಲು ಕೂಡ ಇತ್ತು. ಮಾವ ಅದಾಗಲೇ ಭತ್ತವನ್ನು ಹರಡಿಸಿ ಇಟ್ಟಿದ್ದರು. ಅದನ್ನು ನೋಡಿ ಖುಷಿಯಾಯ್ತು. ಕೃಷಿಯಲ್ಲಿ ಅದೊಂದು ತುಂಬಾ ಮುಖ್ಯ. ಕೆಲವು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಲೇಬೇಕು. ಸೋಮಾರಿತನ ಮಾಡಿದರೆ ಅದರ ಫಲ ಅನುಭವಿಸಬೇಕು. ಭತ್ತವನ್ನು ಸರಿಯಾದ ಸಮಯಕ್ಕೆ ಒಣಗಿಸದಿದ್ದರೆ ಮೊಳಕೆ ಬಂದು ಬಿಡುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಬಿಸಿಲು ಇದ್ದರೂ ವಾತಾವರಣದಲ್ಲಿ ತುಂಬಾ ಆರ್ದ್ರತೆ ಇತ್ತು. ಒಂದೆರಡು ದಿನಗಳಾದರೂ ಬಿಸಿಲಲ್ಲಿ ಒಣಗಿಸಿ ಚೀಲ ತುಂಬಿ ಇಟ್ಟರೆ ದೊಡ್ಡ ಕೆಲಸ ಮುಗಿದಂತೆ. ಆದರೂ ಚೆಲ್ಲಾಟ ಆಡುತ್ತಿದ್ದ ಮಳೆರಾಯನಿಗೆ ಸ್ವಲ್ಪ ಬಿಡುವು ತೊಗೊ ತಂದೆ ಅಂತ ಬೇಡಿಕೊಳ್ಳುತ್ತಿದ್ದೆ. ನಾನು ಮಳೆಯ ಬಗ್ಗೆ ಜೀವನದಲ್ಲಿ ಇಷ್ಟು ತಲೆ ಕೆಡಿಸಿಕೊಂಡಿದ್ದು ಇದೆ ಮೊದಲ ಬಾರಿ ಆಗಿತ್ತು!
*****
ಒಂದೆರಡು ದಿನ ಹಾಗೂ ಹೀಗೂ ಗುದ್ದಾಡಿದ ಮೇಲೆ ಮಾವನಿಗೆ ಒಂದು ಅದ್ಭುತ ವಿಚಾರ ಹೊಳೆಯಿತು. ನಾವು ಮೊದಲು ಬಾಡಿಗೆ ಇದ್ದ ಅವರ ತೋಟದ ಮನೆ ಖಾಲಿ ಇತ್ತಲ್ಲ, ಎಲ್ಲಾ ಭತ್ತವನ್ನು ಅಲ್ಲಿಯ ಒಳಗಡೆ ಹರಡಿ ಬಿಡೋಣ ಎಂಬ ಯೋಚನೆ ಅವರಿಗೆ ಬಂತು. ಹಂಚಿನ ಮನೆಯಾಗಿತ್ತಾದರೂ ಮಳೆಯಿಂದ ರಕ್ಷಣೆ ಇತ್ತು. ಹೀಗಾಗಿ ಒಂದು ವಾರ ಅಲ್ಲಿಯೇ ಇದ್ದರೂ ಭತ್ತ ಪೂರ್ತಿ ಒಣಗಿ ಬಿಡುತ್ತದೆ ಎಂಬುದು ಅವರ ತರ್ಕ. ಸರಿ ಮತ್ತೇಕೆ ತಡ ಅಂತ, ಮನೆಯನ್ನೆಲ್ಲ ಚೊಕ್ಕವಾಗಿ ಗುಡಿಸಿ ಭತ್ತವನ್ನಲ್ಲಿ ಸುರಿದೆವು. ನಾವಿದ್ದ ಮನೆಯಲ್ಲಿ ಸಂಪೂರ್ಣವಾಗಿ ಭತ್ತ ಆವರಿಸಿಕೊಂಡಿದ್ದ ಆ ದೃಶ್ಯ ನನಗೆ ತುಂಬಾ ಖುಷಿ ಕೊಟ್ಟಿದ್ದು ಹೌದು. ಶಂಭುಲಿಂಗ ಮಾವನ ಸಹಾಯ ಇಲ್ಲದಿದ್ದರೆ ಏನು ಗತಿ ಆಗುತ್ತಿತ್ತು ಎಂಬ ವಿಚಾರ ಬಂದು ಮೈ ಝುಂ ಅಂತು. ಒಟ್ಟಿನಲ್ಲಿ ಅನಾಥರಿಗೆ ದೇವರು ಇದ್ದಾನೆ ಎಂಬ ಉಕ್ತಿ ನಿಜವಾಗಿತ್ತು!
ಈಗ ಸ್ವಲ್ಪ ಉಸಿರಾಡುವಂತೆ ಆಗಿತ್ತು. ಭತ್ತವನ್ನು ಒಣಗಿಸಿ ಆದ ಮೇಲೆ ನನಗೆ ಕೂಡಲೇ ಅಕ್ಕಿ ಮಾಡಿಸುವ ಉಮೇದು. ಆದರೆ ಹಾಗೆ ಮಾಡಿಸಲು ಸಾಧ್ಯವಾಗದು. ಭತ್ತ ಹಳೆಯದಾದಷ್ಟು ಅಕ್ಕಿ ಚೆನ್ನಾಗಿ ಆಗುತ್ತದೆ. ಹೀಗಾಗಿ ನಮ್ಮದೇ ಅಕ್ಕಿಯ ಅನ್ನ ಉಣ್ಣಲು ಇನ್ನೊಂದು ಮೂರು ತಿಂಗಳಾದರೂ ಕಾಯಬೇಕಿತ್ತು. ಇಷ್ಟು ವರ್ಷವೇ ಕಾದಿದ್ದೀವಿ, ಮೂರು ತಿಂಗಳೇನು ಮಹಾ!?
ಹಾಗೆಯೇ ನಮ್ಮ ಭತ್ತದ ಹಾಸಿಗೆಯ ಮೇಲೆ ಕುಳಿತು, ಹರಟೆ ಹೊಡೆಯುತ್ತಿದ್ದೆವು.
ಮುಂದಿನ ವರ್ಷ ಏನು ಬೆಳೆಯೋಣ ನಾಗಣ್ಣ? ಅಂತ ಕೇಳಿದೆ. ಅವರು ಗಹನವಾಗಿ ಯೋಚಿಸಿ, ಸರ್ ತಂಬಾಕು ಬೆಳೆದರೆ ಹೇಗೆ? ಅನ್ನಬೇಕೆ!?
ಭತ್ತವನ್ನು ಸರಿಯಾದ ಸಮಯಕ್ಕೆ ಒಣಗಿಸದಿದ್ದರೆ ಮೊಳಕೆ ಬಂದು ಬಿಡುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಬಿಸಿಲು ಇದ್ದರೂ ವಾತಾವರಣದಲ್ಲಿ ತುಂಬಾ ಆರ್ದ್ರತೆ ಇತ್ತು. ಒಂದೆರಡು ದಿನಗಳಾದರೂ ಬಿಸಿಲಲ್ಲಿ ಒಣಗಿಸಿ ಚೀಲ ತುಂಬಿ ಇಟ್ಟರೆ ದೊಡ್ಡ ಕೆಲಸ ಮುಗಿದಂತೆ. ಆದರೂ ಚೆಲ್ಲಾಟ ಆಡುತ್ತಿದ್ದ ಮಳೆರಾಯನಿಗೆ ಸ್ವಲ್ಪ ಬಿಡುವು ತೊಗೊ ತಂದೆ ಅಂತ ಬೇಡಿಕೊಳ್ಳುತ್ತಿದ್ದೆ. ನಾನು ಮಳೆಯ ಬಗ್ಗೆ ಜೀವನದಲ್ಲಿ ಇಷ್ಟು ತಲೆ ಕೆಡಿಸಿಕೊಂಡಿದ್ದು ಇದೆ ಮೊದಲ ಬಾರಿ ಆಗಿತ್ತು!
ವಿಷಮುಕ್ತ ಆಹಾರ ಬೇಳೆಯೋಣ ಎಂಬ ಉದ್ದೇಶದಿಂದ ನಾವು ಇಷ್ಟು ಕಷ್ಟ ಪಡುತ್ತಿದ್ದರೆ, ವಿಷವನ್ನೇ ಬೆಳೆಯೋಣ ಅಂತಿದ್ದಾರಲ್ಲ ಇವರು ಅಂತ ಆಶ್ಚರ್ಯ ಆಯಿತು. ನಾನೂ ಒಂದಾನೊಂದು ಕಾಲಕ್ಕೆ ತಂಬಾಕಿನ ದಾಸನಾಗಿದ್ದೆ. ಕಷ್ಟಪಟ್ಟು ಅದರಿಂದ ಹೊರಗೆ ಬಂದಿದ್ದೆ. ಅಂಥದ್ದು ಲಾಭಕ್ಕಾಗಿ ನಾನೇ ಅದನ್ನು ಬೆಳೆದು ಬೇರೆಯವರಿಗೆ ತಿನ್ನಿಸುವುದೇ?
ಅದನ್ನು ಬೆಳೆದರೆ ಇದಕ್ಕಿಂತ ಲಾಭ ಆದೀತು ಎಂಬುದು ಅವರ ಚಿಂತನೆ ಆಗಿತ್ತು. ಲಾಭ ಗಳಿಸಲು ತಂಬಾಕನ್ನು ಬಿಟ್ಟು ಬೇರೆ ಹಲವಾರು ಒಳ್ಳೆಯ ಆರೋಗ್ಯಕರ ಬೆಳೆಗಳೂ ಇವೆಯಲ್ಲ. ಇದು ತುಂಬಾ ಹೊಸಬರು ಮಾಡುವ ತಪ್ಪು ಕೂಡ. ಒಂದು ಬೆಳೆಯನ್ನು ಮೊದಲ ಸಲ ಬೆಳೆದಾಗ ನಷ್ಟ ಆದರೆ ಅದನ್ನು ಬಿಟ್ಟು ಬೇರೆಯದನ್ನೆ ಬೆಳೆಯುವ ತಯಾರಿಗೆ ತೊಡಗುತ್ತಾರೆ. ಮೊದಲ ಬೆಳೆ ಬೆಳೆದ ಅನುಭವ ಮುಂದಿನ ಬೆಳೆಗೆ ಸಹಾಯಕ ಆಗುವುದಿಲ್ಲ. ಎರಡನೇ ಸಲ ಹೊಸ ಬೆಳೆಯಲ್ಲಿ ಮತ್ತೆ ಎಡುವುತ್ತಾರೆ. ಮುಂದೆ ಮತ್ತೆ ಬೇರೆಯ ಬೆಳೆ ಆರಿಸಿಕೊಳ್ಳುತ್ತಾರೆ. ಅಲ್ಲಿಗೆ ಮೂರಕ್ಕೆ ಮುಕ್ತಾಯ!
“ನಾಗಣ್ಣ ಈ ಸಲ 25 ಚೀಲ ಬಂತು ಮುಂದಿನ ಸಲ 5೦ ಚೀಲ ಬಂದರೆ ಅದು ನಮ್ಮ ಸಾಧನೆ ಅಲ್ಲವೇ? ಅಥವಾ ಇದೆ 25 ಚೀಲದ ಇಳುವರಿ ಇನ್ನೂ ಕಡಿಮೆ ಜಾಗದಲ್ಲಿ ಬಂದರೂ ಒಳ್ಳೆಯ ಫಲಿತಾಂಶ. ಈಗ ಬೆಳೆದಿರುವ ಅನುಭವ ಮುಂದಿನ ಸಲ ನಮಗೆ ಖಂಡಿತ ಸಹಾಯ ಮಾಡುತ್ತೆ, ಅಲ್ವೇ?”
25 ಚೀಲ ಅನ್ನುವುದು ನಮ್ಮ baseline ಆಗಿತ್ತು. ಅದನ್ನೇ ಇಟ್ಟುಕೊಂಡು ಸುಧಾರಣೆ ಮಾಡಿಕೊಂಡು ಹೋಗಬೇಕು, ಎಂಬ Process improvement ನಂತಹ ಆಲೋಚನೆಗಳು ಬರಲು ನನ್ನ ಪೂರ್ವಾಶ್ರಮದ, ನನ್ನೊಳಗಿನ IT manager ಎದ್ದು ಕುಳಿತಿದ್ದ ಅಂತ ಕಾಣುತ್ತೆ!
ಅವರು ಓಕೆ ಗುರುಗಳೆ ಅಂದರಾದರೂ ಒಳಗೊಳಗೇ ಬೈಯುತ್ತಿದ್ದರೋ ಏನೋ ಅನಿಸಿತು. ಇದೊಳ್ಳೆ ಗುರುವಿನ ಜೊತೆಗೆ ತಗಲಾಕಿಕೊಂಡೆ ಅಂತ ಅವರಿಗೆ ಅನಿಸಿತೋ ಏನೋ.
ಒಂದಿಷ್ಟು ದಿನಗಳು ಭತ್ತವನ್ನು ಮನೆಯೊಳಗೆ ಒಣಗಿಸಿದೆವು. ಮೇಲಿನಿಂದ ಅದನ್ನು ತೂರಿದಾಗ ಧೂಳು ಬರಲು ಶುರುವಾಗಿತ್ತು. ಹಾಗೆ ಬಂದರೆ ಅದು ಒಣಗಿದೆ ಅಂತ ಅರ್ಥ. ಅದನ್ನೆಲ್ಲ ಚೀಲಗಳಲ್ಲಿ ತುಂಬಿಸಿ ಅಲ್ಲಿಯೇ ಅವರ ಮನೆಯಲ್ಲಿ ಇಟ್ಟೆವು.
*****
ಬೆಂಗಳೂರಿಗೆ ಹೋದ ಮೇಲೆ ಹೆಚ್ಚು ಕಡಿಮೆ ಮೂರು ತಿಂಗಳು ಆಗಿತ್ತು. ಶಂಭುಲಿಂಗ ಮಾವ ಫೋನ್ ಮಾಡಿ ಎಂತದೋ ಗುರುಪ್ರಸಾದ ಈ ಕಡೆಗೆ ಬರೋದೇ ಬಿಟ್ಟೆ ನೀನು. ಅಕ್ಕಿ ಮಾಡಿಸೋ ವಿಚಾರ ಇದ್ದ? ಅಂತ ಕೇಳಿದರು. ನಾನೂ ಅದನ್ನೇ ಕಾಯುತ್ತ ಇದ್ದೆನಲ್ಲ! ಮುಂದೆ ಒಂದೆರಡು ದಿನಗಳಲ್ಲೇ ನಾನು ಹಾಗೂ ನಾಗಣ್ಣ ಹಳ್ಳಿಗೆ ಬಂದೆಬಿಟ್ಟೆವು.
ಅಕ್ಕಿ ಮಾಡಿಸಲು ಅಲ್ಲಿ ಒಂದೆರಡು ಗಿರಣಿಗಳು ಇವೆ. ಕನಿಷ್ಠ ಒಂದು ಚೀಲವಾದರೂ ಒಯ್ಯಬೇಕು. ನಾವು ಎರಡು ಚೀಲ ಮಾಡಿಸಿದೆವು. ಅದು ಹೆಚ್ಚು ಕಡಿಮೆ 75 ಕೆಜಿ ಅಕ್ಕಿಯನ್ನು ಕೊಟ್ಟಿತು. ಪಾಲಿಶ್ ಮಾಡಿಸಿರಲಿಲ್ಲ. ಹೀಗಾಗಿ ತವಡು ಕಡಿಮೆ ಬಂದಿತ್ತು. ತವಡು ಕುಟ್ಟುವ ಕೆಲಸ ಇಲ್ಲ ಬಿಡಿ ಮಾವ ಅಂತ ನಾನು ತಮಾಷೆ ಮಾಡಿದೆ. ನಾವೇ ಬೆಳೆದ ಅಕ್ಕಿಯನ್ನು ಕೈಯಿಂದ ಮುಟ್ಟಿ ಮುಟ್ಟಿ ನೋಡುವ ಸುಖವೇ ಬೇರೆ. ನಮ್ಮಿಬ್ಬರಿಗೂ ಸ್ವರ್ಗಕ್ಕೆ ಮೂರೇ ಗೇಣು! ಅವತ್ತು ಅತ್ತೆ ನಮ್ಮದೇ ಅಕ್ಕಿಯ ಅನ್ನ ಮಾಡಿದ್ದರು. ಅದರ ಜೊತೆಗೆ ಬಟಾಟಿ ಹಸಿ, ಮಜ್ಜಿಗೆ ತಂಬುಳಿ, ಉಪ್ಪಿನಕಾಯಿ. ಆಹಾ ಅದೊಂದು ಮರೆಯಲಾಗದ ಊಟ!
ಮರುದಿನವೇ ಬೆಂಗಳೂರಿಗೆ ಓಟ! ಮೂರು ಮೂಟೆಯನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರೆ ಅದರ ಗಮ್ಮತ್ತೇ ಬೇರೆ! ಇಲ್ಲಿಯವರೆಗೂ ಇಂಥದೊಂದು ಸಾಧನೆ ಯಾರೂ ಮಾಡೆ ಇಲ್ಲವೇನೋ ಎಂಬಂತಹ ಸ್ಥಿತಿ. ಹೌದು ನಾವಂತೂ ಮೊದಲ ಬಾರಿಗೆ ಮಾಡಿದ್ದೇವಲ್ಲ ಈ ಸಾಧನೆ!
ಬೆಂಗಳೂರಿಗೆ ಹೊಸ ತಕ್ಷಣ facebook ನಲ್ಲಿ ನಾವು ಸಾವಯವ ಅಕ್ಕಿ ಬೆಳೆದ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ ತಡ ತುಂಬಾ ಸ್ನೇಹಿತರು ತಮಗೂ ಅಕ್ಕಿ ಬೇಕು ಅಂತ ವಿಚಾರಿಸತೊಡಗಿದರು. ಒಳ್ಳೆಯ ಆಹಾರವನ್ನು ಬೆಳೆದರೆ ಅದಕ್ಕೆ ಯಾವಾಗಲೂ ಒಂದು ಬೆಲೆ ಹಾಗೂ ಬೇಡಿಕೆ ಇದ್ದೇ ಇರುತ್ತದೆ. ಅದಂತೂ ಅವತ್ತು ಮನವರಿಕೆ ಆಯ್ತು.
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.