Advertisement
ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಬಿಂದಿಗೆ-ಬಕೆಟ್‌ ಇಡಲು ಬಂದವರನ್ನು ಕಂಡು ಗೇಲಿ ಮಾಡುತ್ತಿದ್ದೆವು. ನಾಲ್ಕು ದಿನ ಸುಮ್ಮನೆ ಇರಲು ಬಂದಿದ್ದ ನಾವು ಕೂಡ ಈ ಗೇಲಿಯಲ್ಲಿ ದೊಡ್ಡಪ್ಪನ ಮಕ್ಕಳ ಜೊತೆ ಸೇರಿಕೊಳ್ಳುತ್ತಿದ್ದೆವು. ಇದಕ್ಕಾಗಿ ವಠಾರದ ಉಳಿದ ಮನೆಗಳವರಿಗೆ ಯಾವತ್ತೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಲ್ಲಿ ನೀರು ಬಂದಮೇಲೂ ನಿಲ್ಲುವ ತನಕವೂ ಜಗಳ, ಕಿತ್ತಾಟ. ಒಂದೊಂದು ಸಲ ದಿನ-ಎರಡು ದಿನಕ್ಕೊಮ್ಮೆ ನೀರು ಬರುವುದು ನಿಂತು ಹೋಗುತ್ತಿತ್ತು. ಮತ್ತೆ ನೀರು ಯಾವಾಗ ಬರುವುದು, ಯಾವಾಗ ಜಗಳ ಶುರುವಾಗುವುದು ಎಂದು ಕಾಯುತ್ತಿದ್ದೆವು.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ಜಗನ್‌ ಮೋಹನ್‌ ಪ್ಯಾಲೆಸ್‌ ಯಾರಿಗೆ ಗೊತ್ತಿಲ್ಲ? ಸುಪ್ರಸಿದ್ಧ ಕಲಾ ಗ್ಯಾಲರಿ. ವಾರ್ಷಿಕ ಸಂಗೀತ ಸಮ್ಮೇಳನ, ನೃತ್ಯ ಪ್ರದರ್ಶನ ನಡೆಯುವ ಜಾಗ. ಒಂದು ಕಾಲಕ್ಕೆ ಸಂಸ್ಥಾನದ ಮಹಾರಾಜರು ಸಕುಟುಂಬ ಪರಿವಾರ ಮತ್ತು ಸಾನಿಧ್ಯ ಸಮೇತರಾಗಿ ಇಲ್ಲಿಗೆ ಬಂದು ಸಂವತ್ಸರದ ಒಂದು ಭಾಗದಲ್ಲಿ ತಂಗುತ್ತಿದ್ದರು. ದೊಡ್ಡ ಅರಮನೆಯ ಸುಣ್ಣ-ಬಣ್ಣ, ರಿಪೇರಿ ಆಗುವಾಗ ತಿಂಗಳಾನುಗಟ್ಟಲೆ ಬೀಡು ಬಿಡುತ್ತಿದ್ದರು. ಕೆಲ ರಾಣಿಯರೊಂದಿಗೆ ಮುನಿಸು, ಇನ್ನು ಕೆಲವರ ಮೇಲೆ ಇದ್ದಕ್ಕಿದ್ದಂತೆ ಉಕ್ಕುವ ಅನುರಾಗ, ಎರಡಕ್ಕೂ ಇದೇ ಆಶ್ರಯ ತಾಣ. ಅರಮನೆಗೇ ಖುದ್ದು ಬೆಂಕಿ ಬಿದ್ದು ಹೊಸದಾಗಿ ಅರಮನೆ ಕಟ್ಟುವಾಗ ವರ್ಷಾನುಗಟ್ಟಲೆ ಇಲ್ಲಿಂದಲೇ ಸಂಸ್ಥಾನದ ಆಡಳಿತದ ನಿರ್ವಹಣೆ, ಕುಟುಂಬದ ಮೋಜುವಾನಿ, ಮೇಜುವಾನಿ.

ಆದರೇನಂತೆ?

ನಾನು ಒಂದೇ ಒಂದು ಸಲ ಕೂಡ ಅಲ್ಲಿಗೆ ಹೋಗಲಿಲ್ಲ. ವೈಯಕ್ತಿವಾಗಿ, ಪರಿವಾರ ಸಮೇತವಾಗಿ. ಕಲಾ ಪ್ರದರ್ಶನ ನೋಡಲಿಲ್ಲ. ವೆಂಕಟಪ್ಪ ಆದರೇನು, ಆರ್‌ ಎಸ್‌ ನಾಯಡು ಆದರೇನು? ರಾಜರ ಕುಟುಂಬದವರನ್ನು ಕೂಡ ದೂರದಿಂದ ಕಾಣಲಿಲ್ಲ, ಸಮೀಪಿಸಲಿಲ್ಲ. ನಮ್ಮ ‍ವಠಾರ ಜಗನ್ಮೋಹನ್‌ ಪ್ಯಾಲೆಸ್‌ ಎದುರಿಗೇ ಇತ್ತು. ನಮ್ಮ ವಠಾರ ಅಂದರೆ ನಮ್ಮ ದೊಡ್ಡಪ್ಪನ ಮನೆ ಅಲ್ಲೇ ಎದುರಿಗಿತ್ತು. ವಿಳಾಸವನ್ನು ಕೂಡ ನಂ. ೧೨೯೭, ಜಗನ್ಮೋಹನ್‌ ಪ್ಯಾಲೆಸ್‌ ಎಂದೇ ನೆಂಟರಿಷ್ಟರಿಗೆ ಕೊಡುತ್ತಿದ್ದೆವು.

ಆವಾಗ ನಮ್ಮ ತಂದೆ ಹಂಪಾಪುರದಲ್ಲಿ ಕೆಲಸ ಮಾಡುತ್ತಿದ್ದರು. ದೊಡ್ಡಪ್ಪನ ಕುಟುಂಬ ಜಗನ್ಮೋಹನ್‌ ವಠಾರದಲ್ಲಿತ್ತು. ನಮ್ಮ ತಂದೆಗೇನು ಮೈಸೂರಿಗೆ ಹೋಗಬೇಕು, ಅಲ್ಲಿ ಒಂದಷ್ಟು ದಿನ ಇರಬೇಕು ಎಂಬ ಆಸೆ ಇರಲಿಲ್ಲ. ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕು, ಯಾತ್ರಾ ತೀರ್ಥಗಳನ್ನು ಸಂದರ್ಶಿಸಬೇಕು ಎಂಬ ಆಸೆಯೂ ಇರಲಿಲ್ಲ. ಜೀವನದುದ್ದಕ್ಕೂ ಹಾಗೇ ಇದ್ದರು. ಇರುವ ಕಡೆ ಇದ್ದ ಹಾಗೆ ಇದ್ದ ರೀತಿಯಲ್ಲೇ ಇದ್ದುಬಿಡುವುದು ಅವರ ಮನೋಧರ್ಮವಾಗಿತ್ತು. ಯಾರೂ ನಮ್ಮ ಮನೆಗೆ ಬರಬಾರದು, ನಾವು ಯಾರ ಮನೆಗೂ ಹೋಗಬಾರದು ಎಂಬುದೊಂದು ನಿಯಮ. ದೊಡ್ಡಪ್ಪನವರು ಕೂಡ ಹೀಗೆಯೇ ಒಂದೇ ಒಂದು ಸಲ ಕೂಡ ನಮ್ಮ ಮನೆಗೆ ಬಂದವರಲ್ಲ, ಕುಳಿತು ಕಷ್ಟ ಸುಖ ಮಾತನಾಡಿದವರಲ್ಲ.

ನಮ್ಮ ತಾಯಿಗೆ ಪ್ರವಾಸದ ಆಸೆ. ಬಂಧು ಬಳಗದ ವ್ಯಾಮೋಹ. ನಾವು ನೆಂಟರಿಷ್ಟರ ಮನೆಗೆ ಹೋಗಬೇಕು, ತಂಗಬೇಕು. ಅವರೂ ಬಂದು ನಾಲ್ಕು ದಿನ ನಮ್ಮ ಮನೆಯಲ್ಲಿರಬೇಕು ಅನ್ನುವ ಬಯಕೆ. ನಂಜನಗೂಡು, ಎಡತೊರೆ, ಸಾಲಿಗ್ರಾಮ, ಹಲ್ಲೆಗೆರೆ, ಕೊತ್ತತ್ತಿ, ಎಲ್ಲೆಂದರಲ್ಲಿ ನಮಗೆ ನೆಂಟರು ಇರುವುದಾಗಿ ನಮ್ಮ ತಾಯಿ ಹೇಳುತ್ತಲೇ ಇದ್ದರು. ತುಂಬಾ ಬಲವಂತ ಮಾಡಿ ಮೈಸೂರಿಗೆ ಹೊರಡಿಸುತ್ತಿದ್ದರು. ಹೊರಡುವ ಮುಂಚೆಯೇ ತಗಾದೆ ಶುರುವಾಗೋದು. ನಾವು ಮೈಸೂರು ತಲುಪಿದ ತಕ್ಷಣ, ಮೈಸೂರಿನಲ್ಲಿ ಊಟ ಹಾಕುವರೋ ಇಲ್ಲವೋ, ಮುಕ್ಕಾಲು ಪಾಲು ಹಾಕದೆ ಇರಬಹುದು. ಹೋದ ತಕ್ಷಣ ಆದರಿಸದೇ ಇರಬಹುದು. ಹಾಗಾಗಿ, ಸುಮಾರು ಹನ್ನೊಂದು ಘಂಟೆಗೆ ಬೆಳಗಿನ ತಿಂಡಿಯನ್ನೇ ಹೊಟ್ಟೆ ಬಿರಿಯುವ ಹಾಗೆ ತಿಂದು, ಮೈಸೂರಿಗೆ ಹೊರಡುತ್ತಿದ್ದೆವು. ಮೈಸೂರು ಬಸ್‌ ಸ್ಟ್ಯಾಂಡಿನಿಂದ ಜಗನ್ಮೋಹನ್‌ ವಠಾರಕ್ಕೆ ನಡೆದುಕೊಂಡು ಬರುತ್ತಿದ್ದೆವು. ನಮ್ಮ ತಂದೆ ನಮ್ಮ ಜೊತೆ ಬರುತ್ತಿರಲಿಲ್ಲ. ನೀವು ಹೋಗಿ ನಾನು ಸಂತೆಪೇಟೆ, ಶಿವರಾಮಪೇಟೆಯಲ್ಲಿ ಓಡಾಡಿಕೊಂಡು ಬರುವೆ ಎಂದು ನಮ್ಮನ್ನು ಅಟ್ಟುಬಿಡುತ್ತಿದ್ದರು. ನಾವು ಸಾಮಾನು ಬ್ಯಾಗುಗಳು ಮತ್ತು ನಮ್ಮ ಕಾಲುಗಳನ್ನು ಎಳೆದುಕೊಂಡು ಮನೆ ತಲುಪಿದರೆ ದೊಡ್ಡಪ್ಪ ಮನೆಯಲ್ಲಿ ಇರುತ್ತಿರಲಿಲ್ಲ. ಮಕ್ಕಳು ನಮಗಾಗಿ ಕಾಯುತ್ತಿದ್ದವು. ಬಹುಬೇಗ ನಮ್ಮೊಡನೆ ಹೊಂದಿಕೊಂಡು ಆಟ ಆಡುವುದಕ್ಕೆ ಶುರು ಮಾಡಿಕೊಳ್ಳುತ್ತಿದ್ದವು. ಮೈಸೂರು ಹುಡುಗಿಯರು ಸ್ಕಿಪ್ಪಿಂಗ್‌ ಚೆನ್ನಾಗಿ ಕಲಿತಿದ್ದು, ನಮಗೂ ಹೇಳಿಕೊಡುತ್ತಿದ್ದರು. ಸ್ಕಿಪ್ಪಿಂಗ್‌ ಮಾಡಿ ಸುಸ್ತಾದರೆ, ಕುಂಟೋಬಿಲ್ಲೆ. ವಠಾರದ ಚಪ್ಪಡಿ ಕಲ್ಲಿನ ಮೇಲೇ ಸೀಮೆ ಸುಣ್ಣದಲ್ಲಿ ಮನೆಗಳನ್ನು ಬರೆದುಕೊಂಡು ಕುಂಟೋಬಿಲ್ಲೆ.

ಅಮ್ಮ ದೊಡ್ಡಮ್ಮನ ಮಾತುಕತೆ ಶುರುವಾಗೋದು. ವಿಶೇಷವೇನಿಲ್ಲ. ಅರಮನೆಯ ಸಮಾಚಾರವೂ ಅಲ್ಲ. ಇಬ್ಬರೂ ಸೇರಿಕೊಂಡು ನಮ್ಮಜ್ಜಿಯನ್ನು ಸಮಾ ಬೈಯ್ಯುತ್ತಿದ್ದರು. ಯಾವುದೋ ಯುಗದ ಕಾಷ್ಟ ವ್ಯಸನಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಒಬ್ಬರಿಗಿಂತ ಒಬ್ಬರು ವೇಗವಾಗಿ ಚರ್ಚಿಸುವರು. ಅಜ್ಜಿಯ ಹತ್ತಿರವಿರುವ ಬೆಳ್ಳಿಯ ಸಾಮಾನುಗಳನ್ನು ಮತ್ತೆ ಮತ್ತೆ ಲೆಕ್ಕ ಹಾಕುವರು. ಲೆಕ್ಕ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಮುದುಕಿ ಎಲ್ಲವನ್ನೂ ಮಗಳ ಮನೆಗೆ ಸಾಗಿಸಿಬಿಡುತ್ತಾಳೆ ಎಂದು ಇಬ್ಬರೂ ಭಯ ಬೀಳುವರು.


ಇಡೀ ವಠಾರಕ್ಕೆ ಇದ್ದುದು ಒಂದೇ ನಲ್ಲಿ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಹೊತ್ತು ನೀರು ಬರೋದು. ಅದಕ್ಕಾಗಿ ಕ್ಯೂ, ಪೈಪೋಟಿ, ಜಗಳ. ದೊಡ್ಡಮ್ಮ ಕೂಡ ಸಖತ್‌ ಫೈಟಿಂಗ್‌ ಮಾಡುತ್ತಿದ್ದರು. ಹೆಂಗಸರೆಲ್ಲ ಬಿಚ್ಚಿಕೊಂಡಿದ್ದ, ಹರಡಿಕೊಂಡಿದ್ದ ಕೂದಲನ್ನು ಗಂಟು ಹಾಕಿಕೊಂಡು ಕಾಳಗಕ್ಕಿಳಿದರೆ, ದೊಡ್ಡಮ್ಮ ಕೂದಲನ್ನು ಬಿಚ್ಚಿ ಹರಡಿಕೊಂಡು ಜಗಳಕ್ಕೆ ನಿಲ್ಲುವರು. ನಲ್ಲಿ ನಮ್ಮ ಮನೆ ಮುಂದೆಯೇ ಇದ್ದುದರಿಂದ, ನಮ್ಮ ಬಿಂದಿಗೆ, ಬಕೆಟ್‌ ಎಲ್ಲವನ್ನೂ ಕ್ಯೂನಲ್ಲಿ ಯಾವಾಗಲೂ ಮುಂದೆ ಇಟ್ಟು ಬಿಡುತ್ತಿದ್ದೆವು. ನಂತರ ಬಿಂದಿಗೆ-ಬಕೆಟ್‌ ಇಡಲು ಬಂದವರನ್ನು ಕಂಡು ಗೇಲಿ ಮಾಡುತ್ತಿದ್ದೆವು. ನಾಲ್ಕು ದಿನ ಸುಮ್ಮನೆ ಇರಲು ಬಂದಿದ್ದ ನಾವು ಕೂಡ ಈ ಗೇಲಿಯಲ್ಲಿ ದೊಡ್ಡಪ್ಪನ ಮಕ್ಕಳ ಜೊತೆ ಸೇರಿಕೊಳ್ಳುತ್ತಿದ್ದೆವು. ಇದಕ್ಕಾಗಿ ವಠಾರದ ಉಳಿದ ಮನೆಗಳವರಿಗೆ ಯಾವತ್ತೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಲ್ಲಿ ನೀರು ಬಂದಮೇಲೂ ನಿಲ್ಲುವ ತನಕವೂ ಜಗಳ, ಕಿತ್ತಾಟ. ಒಂದೊಂದು ಸಲ ದಿನ-ಎರಡು ದಿನಕ್ಕೊಮ್ಮೆ ನೀರು ಬರುವುದು ನಿಂತು ಹೋಗುತ್ತಿತ್ತು. ಮತ್ತೆ ನೀರು ಯಾವಾಗ ಬರುವುದು, ಯಾವಾಗ ಜಗಳ ಶುರುವಾಗುವುದು ಎಂದು ಕಾಯುತ್ತಿದ್ದೆವು.

ಹಸಿವಾಗಿ ಊಟ ತಿಂಡಿ ಬೇಕೆನಿಸಿದರೂ ನಾವು ಕೇಳಬಾರದೆಂದೂ, ದೊಡ್ಡಪ್ಪನ ಮನೆಯವರು ಕೊಟ್ಟಾಗ ಕೊಟ್ಟದ್ದನ್ನು, ಕೊಟ್ಟಷ್ಟು ತಿನ್ನಬೇಕೆಂದು ನಮಗೆ ಹಂಪಾಪುರದಲ್ಲೇ ನೂರಾರು ಸಲ ಪಾಠ ಹೇಳಿಕೊಟ್ಟಿದ್ದರು. ನಾವು ಉಭ ಶುಭ ಅನ್ನದೇ ಪರಿಪಾಲಿಸುತ್ತಿದ್ದೆವು.

ದೊಡ್ಡಪ್ಪ-ಅಪ್ಪ ಮಾತನಾಡುತ್ತಿರಲಿಲ್ಲ. ಆದರೆ ಊಟಕ್ಕೆ ಕುಳಿತಾಗ ಮಾತ್ರ ದೊಡ್ಡಪ್ಪ ಬಂದು ಕೊನೆಯಲ್ಲಿ ತಟ್ಟೆ ಮುಂದೆ ಕೂರುವರು. ಆಮೇಲೆ ಸಾರು ಹುಳಿ ಬಡಿಸಲು ಶುರು. ಅಲ್ಲಿಯ ತನಕ ಮಕ್ಕಳಂತೆ ನಮ್ಮ ತಂದೆ ಕೂಡ ಕಾಯಬೇಕಾಗಿತ್ತು. ದೊಡ್ಡಪ್ಪ ರೂಮೊಳಗಡೆ ಮಂಚದ ಮೇಲೆ ಯಾವಾಗಲೂ ಮಲಗಿಕೊಂಡು ಕಾಲು ಅಲ್ಲಾಡಿಸುತ್ತಿದ್ದರು. ನಮ್ಮ ತಂದೆ ಮನೆ ಹೊರಗೆ ಇರುವ ಕಲ್ಲು ಬೆಂಚಿನ ಮೇಲೆ ಕುಳಿತಿರುವರು. ಎದುರಿಗೆ ಒಣಗಿ ಹಾಕಿರುವ ಅಕ್ಕಿಯನ್ನೋ, ಕಾಳನ್ನೋ ತಿನ್ನುವರು. ಗುಬ್ಬಚ್ಚಿ ಬಂದರೆ ಕಿಟಾರ್‌ ಎಂದು ಕಿರುಚಿ ಓಡಿಸುವರು.

ನಲ್ಲಿ ನೀರಿಗೆ ಮಾತ್ರವಲ್ಲ, ವಠಾರದ ಎಲ್ಲ ಮನೆಗಳಲ್ಲೂ ಕಾಷ್ಟ, ವ್ಯಸನ, ಜಗಳ, ವರಾತ ಪ್ರಾರಂಭವಾಗುತ್ತಿದ್ದುದೇ ಮೆಟ್ಟಿಲುಗಳಿಂದ. ಮೆಟ್ಟಿಲುಗಳ ಮೇಲೆ ಯಾರಾದರು ಕುಳಿತಿದ್ದಾಗ ಎದುರು ಪಾರ್ಟಿಯವರು ಬಂದರೆ, ಎದ್ದು ಜಾಗ ಬಿಡುತ್ತಿರಲಿಲ್ಲ. ಇವರು ಏಳುವ ತನಕವೂ ಅವರು ಮೆಟ್ಟಿಲು ಏರಿ ವಠಾರದ ಒಳಗೆ ಬರುವ ಹಾಗಿಲ್ಲ. ಇಲ್ಲಿಂದಲೇ ಜಗಳ ಶುರು.

ವಠಾರದಲ್ಲಿ ಸಂಸಾರಸ್ಥರ ಮನೆಗಳಲ್ಲದೆ, ಒಂದೇ ಕೋಣೆಯ ಎರಡು ಮನೆಗಳಿದ್ದವು. ಅವುಗಳನ್ನು ಓದುವ ಕಾಲೇಜು ಹುಡುಗರಿಗೆ ಬಾಡಿಗೆಗೆ ಕೊಟ್ಟಿದ್ದರು. ಇಬ್ಬರೂ ಇತರೆ ಜನದವರಂತೆ. ಒಬ್ಬರು ಆಚಾರ್ರು, ಇನ್ನೊಬ್ಬರು ಮರಾಠಿಗಳು. ಹೀಗೆ ಇತರೆ ಜನರಿಗೆ ಬಾಡಿಗೆ ಕೊಡುವುದು ಸರಿಯಲ್ಲವೆಂದು, ಮಡಿ ಮೈಲಿಗೆಗೆ ತೊಂದರೆ ಆಗುವುದೆಂದು ಪ್ರತಿ ತಿಂಗಳ ಮೊದಲ ವಾರದಲ್ಲಿ ಬಾಡಿಗೆ ವಸೂಲು ಮಾಡಲು ಬರುತ್ತಿದ್ದ ಮಾಲೀಕ ವಿಶ್ವನಾಥಯ್ಯನ ಜೊತೆ ಜಗಳ. ಬಿರುಸಿನ ಮಾತುಕತೆ. ಆತ ಕ್ಯಾರೆ ಎನ್ನುತ್ತಿರಲಿಲ್ಲ. ಕಾಲೇಜು ಓದುವ ಹುಡುಗರಾದರೆ, ಪ್ರತಿ ವರ್ಷ ಖಾಲಿ ಮಾಡಿಸಬಹುದು, ಬಾಡಿಗೆ ಏರಿಸಬಹುದು. ನಿಮ್ಮ ಹಾಗೆ ದರಿದ್ರದೋರು ಬಂದು ಸೇರಿಕೊಂಡರೆ, ವರ್ಷಾನುಗಟ್ಟಲೆ ಒಂದೇ ಬಾಡಿಗೆ ಅಂತ ಅವನು ಹಂಗಿಸಿದಾಗ, ವಠಾರದವರೆಲ್ಲ ಅವನ ಮೈಮೇಲೆ ಬೀಳುತ್ತಿದ್ದರು.

ಮೆಟ್ಟಿಲ ಹತ್ತಿರವೇ ವಠಾರದ ಮುಂಭಾಗದಲ್ಲಿ ಒಂದು ನೆಲಮಾಳಿಗೆಯಂತಹ ಮನೆ. ಒಬ್ಬ ಹೈಸ್ಕೂಲ್‌ ಮೇಷ್ಟರು ಅಲ್ಲಿ ಬಾಡಿಗೆಗೆ ಇದ್ದರು. ವಿದ್ಯಾವಂತ ಕುಟುಂಬವೆಂದರೆ ಅದೊಂದೇ. ಇಡೀ ವಠಾರದಲ್ಲಿ, ಅವರೊಬ್ಬರ ಮನೇಗೇ ಪೇಪರ್‌ ಬರುತ್ತಿದ್ದುದು. ಮೇಷ್ಟರ ಹೆಂಡತಿ ಕೆಂಪಗೆ ನೋಡಲು ಚೆನ್ನಾಗಿದ್ದರು. ಅವರ ಇಬ್ಬರೂ ಹೆಣ್ಣಮಕ್ಕಳು ಕೂಡ ಚೆನ್ನಾಗಿದ್ದವು. ನಮ್ಮ ದೊಡ್ಡಪ್ಪನ ಎರಡನೇ ಮಗ ಅವರನ್ನು ಮಾತಾಡಿಸಲು ಪ್ರಯತ್ನಿಸಿದಾಗ, ಮಾನಭಂಗದ ಆಪಾದನೆ ಮಾಡಿ ದೊಡ್ಡ ರಾದ್ಧಾಂತವೇ ಆಯಿತು. ಮೇಷ್ಟರ ಹೆಂಡತಿ ನಡತೆ ಸರಿಯಿಲ್ಲ, ಅವಳು ಹೋಗುತ್ತಿರೋದು ಸಂಗೀತ ಪಾಠಕ್ಕಲ್ಲ. ಸಂಗೀತದ ಮೇಷ್ಟರ ಜೊತೆ ಚಕ್ಕಂದ ಆಡೋಕೆ ಎಂದು ದೊಡ್ಡಮ್ಮ ಪಿಸು ಮಾತಿನಲ್ಲೇ ವಠಾರದ ಆಚೆ ಇರುವವರಿಗೂ ಕೇಳಿಸುವಂತೆ ಆಲಾಪಿಸುತ್ತಿದ್ದರು. ಹೀಗೇ ಒಂದು ಸಲ ಕೂಗಾಡುತ್ತಿದ್ದಾಗ, ಮೇಷ್ಟರು ಮನೆಯಿಂದ ಹೊರಗೆ ಬಂದು, ದೊಡ್ಡಮ್ಮನ ಬಗ್ಗೆ ಕೇವಲವಾಗಿ ಮಾತನಾಡಿದಾಗ, ಯಾವಾಗಲೂ ಮಂಚದ ಮೇಲೇ ಪವಡಿಸಿರುತ್ತಿದ್ದ ದೊಡ್ಡಪ್ಪ ಮಂಚದಿಂದ ಜಂಪ್‌ ಮಾಡಿ ನೆಗೆದುಕೊಂಡು ಬಂದು ಮೇಷ್ಟರ ಮೇಲೆ ಕೈ ಮಾಡಲು ಹೋದಾಗ, ನಾನು, ದೊಡ್ಡಪ್ಪನ ಎಲ್ಲ ಮಕ್ಕಳೂ ಕೈ ಜೋಡಿಸಿದ್ದೆವು. ಮೇಷ್ಟರು ಹೆದರಿ ಮನೆ ಒಳಗಡೆ ಹೋಗಿ ರಪ್‌ ಅಂತ ಬಾಗಿಲು ಹಾಕಿಕೊಂಡರು. ಹಾಗೆ ಹಾಕಿದ ಬಾಗಿಲನ್ನು ಮತ್ತೆ ತೆರೆದದ್ದನ್ನು ನಾನು ಹತ್ತು ವರ್ಷಗಳ ನಂತರವೂ ನೋಡಲೇ ಇಲ್ಲ. ಆಮೇಲೆ ಬಾಡಿಗೆಗೆ ಬಂದವರು ಊದುಕಡ್ಡಿ ಜನ. ಯಾವಾಗಲೂ ವಠಾರದ ತುಂಬ ಊದುಕಡ್ಡಿಯನ್ನು ಒಣಗುವುದಕ್ಕೆಂದು ಹರಡುತ್ತಿದ್ದುದರಿಂದ ಕೈ ಕಾಲು ಆಡಿಸಲು ಜಾಗವೇ ಇಲ್ಲ. ಮತ್ತೆ ಜಗಳ.

ಒಂದೇ ಒಂದು ದಿವಸ ಕೂಡ ನಾನು ಕಲಾ ಗ್ಯಾಲರಿ ಒಳಗೆ ಹೋಗಲಿಲ್ಲ, ಸಂಗೀತ ಕೇಳಿಸಿಕೊಳ್ಳಲಿಲ್ಲ, ನೃತ್ಯ ನೋಡಲಿಲ್ಲ ಎಂದು ಕೂಡ ಹೇಳುವುದಿಲ್ಲ. ಇದ್ಯಾವುದರ ಪ್ರಸ್ತಾಪ ಕೂಡ ಮನೆಯಲ್ಲಿ ಬರುತ್ತಿರಲಿಲ್ಲ. ಇದನ್ನೆಲ್ಲ ನೋಡಲು, ಕೇಳಲು ಜನ ಸೇರಿದಾಗ, ಟಾಂಗಾ, ಸಾರೋಟು ಎಲ್ಲ ವಠಾರದ ಮುಂಭಾಗದಲ್ಲೇ ನಿಲ್ಲಿಸುತ್ತಿದ್ದರು. ಸರಿ ರಾತ್ರಿಯಾದರೂ ಇವರ ರಾಮಾಯಣ ಮುಗಿಯೋಲ್ಲ ಅಂತ ದೊಡ್ಡಪ್ಪನಿಗೆ ಸಿಟ್ಟು ಬಂದು, ದೊಡ್ಡಮ್ಮನ ಮೇಲೆ ರೇಗುತ್ತಿದ್ದರು.

ಮುಂದೆ ಹದಿನೈದು-ಇಪ್ಪತ್ತು ವರ್ಷಗಳ ನಂತರವೂ ಎಂ.ಎ ಓದುವಾಗ ನಾನು ಈ ವಠಾರದ ಮುಂದೆ ಓಡಾಡಿದ್ದು ಉಂಟು. ವಠಾರ ಇನ್ನೂ ಹಾಗೇ ಇತ್ತು. ಮೇಷ್ಟರಿದ್ದ ನೆಲಮಾಳಿಗೆಯ ಭಾಗದಲ್ಲಿ ಈಗ ಎರಡು ಅಂಗಡಿಗಳಿದ್ದವು. ಒಂದು ಹುರಿಗಾಳು ಮಾರುವ ಅಂಗಡಿ. ಇನ್ನೊಂದು ಹೆಂಗಸರ ಲಂಗ, ರವಿಕೆ ಹೊಲೆಯುವ, ಸೀರೆಗೆ ಫಾಲ್ಸ್‌ ಹಾಕುವ ಅಂಗಡಿ. ಈ ಮಧ್ಯೆ ಒಂದೇ ಒಂದು ಸಲ ಕೂಡ ಸುಣ್ಣ ಬಣ್ಣ ಮಾಡಿಸಿದ ಹಾಗೆ ಕಾಣಲಿಲ್ಲ. ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಕೆಲವು ಕಡೆ ಗಾರೆ ಕೂಡ ಹೊರ ಬಂದಿರುವುದು ಕಾಣಿಸಿತು.

ನಾನೇನು ವಠಾರದೊಳಗೆ ಹೋಗಲಿಲ್ಲ. ನನಗೆ ಜಗನ್ಮೋಹನ್‌ ಪ್ಯಾಲೆಸ್‌ ಒಳಗೆ ಹೋಗಬೇಕು ಎಂದು ಅನಿಸಲಿಲ್ಲ.

ಕಳೆದ ೫೦ ವರ್ಷಗಳಲ್ಲಿ ಕೂಡ ನಾನು ಒಂದು ಸಲವೂ ಹೋಗಿಲ್ಲ.

ಈಗ ಇದನ್ನು ಬರೆದಾದ ಮೇಲೆ ನಾನು ಹೋಗುವೆನೇ?

ನಾನು ಹೋಗಬೇಕೆಂದು ನಿಮಗೆ ಅನಿಸಿದರೆ ತಿಳಿಸಿ. ನಿಮಗೆ ಹಾಗನಿಸುವುದಕ್ಕೆ ಕಾರಣಗಳನ್ನು ಕೊಡಿ.

(ಹಿಂದಿನ ಕತೆ: ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ)

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ