ಪಿಯುಸಿ ಓದಲು ತುಮಕೂರಿಗೆ ಹೊರಟಾಗ ಹಲವು ಬದಲಾವಣೆಗಳಾದವು.  ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು. 

‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹದಿಮೂರನೆಯ ಕಂತು.

ಪಿಯುಸಿ ಓದಲು ತುಮಕೂರಿಗೆ

ಯಾವ ವಿಷಯಗಳನ್ನು ತೆಗೆದುಕೊಳ್ಳಬೇಕೆಂಬುದರಲ್ಲಿ ಇದ್ದ ಗೊಂದಲ ಯಾವ ಊರಿನಲ್ಲೆಂಬುದಕ್ಕಿರಲಿಲ್ಲ. ಈ ಮೊದಲೆ ನಿರ್ಧರಿಸಿದಂತೆ ಒಂದು ದಿನ ನನ್ನನ್ನು ಮತ್ತು ಭಗತ್‌ನನ್ನು ಕಾಲೇಜಿಗೆ ಅರ್ಜಿ ಹಾಕಿ ಬರಲು ನಾಗೇಂದ್ರಣ್ಣನ ಜೊತೆ ಮಾಡಿ ತುಮಕೂರಿಗೆ ಕಳುಹಿಸಿದರು. ನಾವು ಮುಂದಿನ ಎರಡು ವರ್ಷ ಓದಲಿರುವ ಕಾಲೇಜು ಬಿ.ಹೆಚ್. ರಸ್ತೆ ಪಕ್ಕದಲ್ಲಿದ್ದ ಗೌರ್ಮೆಂಟ್ ಜೂನಿಯರ್ ಕಾಲೇಜ್ ಆಗಿತ್ತು. ಅದರ ಕಟ್ಟಡ ಬ್ರಿಟೀಷರ ಕಾಲದ್ದಾಗಿದ್ದು ವಿಶಾಲವಾದ ಮೈದಾನದಲ್ಲಿ ಸುಭದ್ರವಾಗಿ ಹರಡಿಕೊಂಡಿತ್ತು. ಮುಂಭಾಗದ ಕೊಠಡಿಯೊಂದರಲ್ಲಿ ಅರ್ಜಿ ಕೊಡುತ್ತಿದ್ದರು. ಅರ್ಜಿ ಪಡೆದ ನಂತರ ಹಿಂಬದಿಯಲ್ಲಿ ದೊಡ್ಡ ದೊಡ್ಡ ಮರಗಳ ನೆರಳಲ್ಲಿ ಕೊನೆ ಮೊದಲಿಲ್ಲದಂತೆ ಹಬ್ಬಿಕೊಂಡಿದ್ದ ತರಗತಿ ಕೊಠಡಿಗಳನ್ನ ನಾಗೇಂದ್ರಣ್ಣ ತೋರಿಸಿತು. ಕಾಲೇಜಿಗೆ ಹೊಂದಿಕೊಂಡಂತೆಯೇ ಇದ್ದ ಡಿ.ಡಿ.ಪಿ.ಐ. ಆಫೀಸ್ ಪಕ್ಕ ನಮಗೆ ಆಶ್ರಯ ಕೊಡಲಿರುವ ಸಮಾಜ ಕಲ್ಯಾಣ ಇಲಾಖೆಯ ಕಾಲೇಜ್ ಹಾಸ್ಟೆಲ್ ಇತ್ತು. ಅದನ್ನು ಪರಿಚಯಿಸಿದ ನಾಗೇಂದ್ರಣ್ಣ, ಅಲ್ಲಿ ಹಾಸ್ಟೆಲ್ ಪ್ರವೇಶಾತಿಗೆ ಕೊಡುತ್ತಿದ್ದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಿತು.

ಅರ್ಜಿ ಸಲ್ಲಿಸಿದ ಎಷ್ಟೋ ದಿನಕ್ಕೆ ಕಾಲೇಜಿನಲ್ಲಿ ಸೀಟ್ ಅನೌನ್ಸ್‌ ಆದವು. ಆರ್ಟ್ಸ್‌, ಸೈನ್ಸ್ ಎಂಬ ಎರಡು ಭಾಗ ಮಾತ್ರ ತಿಳಿದಿದ್ದ ನಮಗೆ ಅದರೊಳಗಿನ ಇತರೆ ಕವಲುಗಳ ಪರಿಚಯವಿರಲಿಲ್ಲ. ರಾಜ್ಯಶಾಸ್ತ್ರವಿದ್ದ ಕಾಂಬಿನೇಷನ್‌ಗೆ ಹೆಚ್ಚು ಬೇಡಿಕೆ ಇತ್ತು. ಆ ಬೇಡಿಕೆಗನುಸಾರವಾಗಿಯೇ ಸರ್ಕಾರಿ ಕಾಲೇಜಿನಲ್ಲಿ ಎ ಮತ್ತು ಬಿ ಸೆಕ್ಷನ್‌ಗಳನ್ನ ಸೈನ್ಸ್‌ಗೆಂದು ಮೀಸಲಿರಿಸಿ ನಂತರದ ಸಿ. ಡಿ. ಇ. ಎಫ್. ಗಳನ್ನ ಹೆಚ್.ಇ.ಪಿ.ಎಸ್‌.ಗೆ ಇಟ್ಟಿದ್ದರು. ಸೀಟ್ ಅನೌನ್ಸ್‌ ಆದಾಗ, ಅಂದುಕೊಂಡಂತೆ ಭಗತ್‌ಗೆ ಹೆಚ್.ಇ.ಪಿ.ಎಸ್ ಜೋಡಣೆ ಇರುವ ‘ಸಿ’ ಸೆಕ್ಷನ್‌ಗೆ ಸೀಟ್ ಸಿಕ್ಕರೆ, ನನ್ನ ಅಂಕಕ್ಕನುಗುಣವಾಗಿ ಐಚ್ಚಿಕ ಕನ್ನಡವಿದ್ದ ‘ಹೆಚ್’ ಸೆಕ್ಷನ್‌ಗೆ ನನ್ನನ್ನು ಬಿಸಾಕಿದ್ದರು. ಇದು ಬೇಡವೆಂದು ತುಂಬ ದಿನ ಪ್ರಯತ್ನ ಪಟ್ಟರೂ.. ಏನೂ ಪ್ರಯೋಜನಕ್ಕೆ ಬರಲಿಲ್ಲ.

ರೈಲು ಪ್ರಯಾಣ

ಕಾಲೇಜಿಗೆ ಅಡ್ಮಿಷನ್ ಆಗಿ ಬಂದರೂ ತಿಂಗಳುಗಟ್ಟಲೆ ಊರಲ್ಲೇ ಉಳಿಯಬೇಕಾಗಿತ್ತು. ನಮ್ಮ ಸರ್ಕಾರಿ ಕಾಲೇಜಿನ ಪದ್ಧತಿಯೇ ಹಾಗಿತ್ತು. ಕಾಲೇಜ್ ಸ್ಟಾರ್ಟ್ ಆದರೂ ಹಾಸ್ಟೆಲ್ ಶುರುವಾಗುತ್ತಿದ್ದುದು ತಿಂಗಳುಗಳು ಉರುಳಿದ ನಂತರವೆ. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಊರಲ್ಲಿರುತ್ತಿದ್ದ ನಮ್ಮನ್ನು ಕಂಡು ಅಕ್ಕ ಪಕ್ಕದವರು ‘ಎಲ್ಲೋ ಫೇಲ್ ಆಗವೆ ಅದ್ಕೆ ಇಲ್ಲೆ ಕುಂತವೆ’ ಎಂದು ಒಳೊಳಗೆ ಖುಷಿಪಟ್ಟುಕೊಳ್ಳುತ್ತಿದ್ದಂತಿತ್ತು. ಅಂತೆಯೆ ಒಂದು ದಿನ ಕಾಲೇಜೇನೊ ಶುರುವಾಯಿತು. ಹಾಸ್ಟೆಲ್ ಪ್ರಾರಂಭವಾಗುವ ತನಕ ಪಾಠ ಕಳ್ಕಣಕಾಗುತ್ತ ಎಂದು ಊರಿಂದಲೇ ತುಮಕೂರಿಗೆ ಓಡಾಡುವ ತೀರ್ಮಾನಕ್ಕೆ ಬಂದೆವು. ಕಡಿಮೆ ವೆಚ್ಚದ ರೈಲು ಪ್ರಯಾಣದ ವ್ಯವಸ್ಥೆ ಕುಂದೂರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬಾಣಸಂದ್ರದಿಂದ ಇತ್ತು. ರೈಲಿನಲ್ಲೆ ಓಡಾಡುವುದೆಂದು ತೀರ್ಮಾನಿಸಿದ ನಂತರ ಬೆಳಗಿನ ಜಾವ 5:30ಕ್ಕೆ ಬರುತ್ತಿದ್ದ ಪುಷ್ಪುಲ್ ಟ್ರೈನನ್ನು ಹಿಡಿಯಲೇಬೇಕಿತ್ತು. ಕುಂದೂರಿನಲ್ಲಿದ್ದ ನಾವು 4:30ಕ್ಕೆಲ್ಲ ಎದ್ದು ಸಿದ್ಧರಾಗಿ ನಡೆದುಕೊಂಡು ಬಂದು ಬಾಣಸಂದ್ರ ತಲುಪುತ್ತಿದ್ದೆವು. ಆ ಮಂಜು ಕವಿದ ಕತ್ತಲ ದಾರಿಯಲ್ಲಿ ಬಿರುಬಿರನೆ ಕಾಲಾಕಿ ನಡೆಯುತ್ತಿದ್ದರೆ, ಕೆಲವೊಮ್ಮೆ ದಾರಿ ಮಧ್ಯದಲ್ಲೆ ಟ್ರೈನಿನ ಕೂಗು ಕೇಳಿಬಿಡುತ್ತಿತ್ತು. ನಾವು ಎದ್ನೊ ಬಿದ್ನೊ ಎಂದು ಓಡಿ ಟ್ರೈನ್ ಹಿಡಿಯುತ್ತಿದ್ದೆವು.

ಏಳು ಗಂಟೆಗೆಲ್ಲ ಟ್ರೈನ್ ತುಮಕೂರು ತಲುಪುತ್ತಿತ್ತು. ರೈಲ್ವೇ ಸ್ಟೇಷನ್ನಲ್ಲಿ ಇಳಿದ ನಮಗೆ ಕಾಲೇಜು ತಲುಪಲು ನಾಗೇಂದ್ರಣ್ಣ ಒಂದು ರೂಟ್ ತೋರಿಸಿತ್ತು. ಟೌನ್ ಹಾಲ್‌ಗೆ ಬಂದು ನಂಜುಂಡೇಶ್ವರ ಹೋಟೆಲ್ ಹತ್ತಿರ ಬಲಕ್ಕೆ ತಿರುಗಿ ಬಿ.ಹೆಚ್. ರಸ್ತೆಯಲ್ಲಿ ನೇರವಾಗಿ ನಡೆದರೆ ಬಲಕ್ಕೆ ನಮ್ಮ ಜೂನಿಯರ್ ಕಾಲೇಜು ಸಿಗುತ್ತಿತ್ತು. ನಗರದೊಳಗೆ ತಪ್ಪಿಸಿಕೊಂಡುಬಿಟ್ಟರೆ ಎಂಬ ಭಯದಿಂದ ನಾಗೇಂದ್ರಣ್ಣ ತೋರಿಸಿಕೊಟ್ಟಿದ್ದ ಮಾರ್ಗವನ್ನೇ ಚಾಚೂತಪ್ಪದೆ ಅನುಸರಿಸಿ ಕಾಲೇಜು ತಲುಪುತ್ತಿದ್ದೆವು. ತಿಂಗಳಾನುಗಟ್ಟಲೆ ಇದೇ ದಾರಿ ಸವೆಸಿದ ನಾವು ಆಕಸ್ಮಿಕವಾಗಿ ಒಂದು ದಿನ ಕಾಲೇಜಿನ ಹಿಂಭಾಗಕ್ಕೆ ರೀಸಸ್ ಮಾಡಲು ಬಂದೆವು. ಅಲ್ಲಿ ರೈಲ್ವೆ ಟ್ರಾಕ್ ಇರುವುದು ಕಾಣಿಸಿತು. ಅನೇಕ ಸಲ ರೈಲು ಕೂಗುವ ಸದ್ದು ಕೇಳಿಸಿದ್ದರೂ ಉಪೇಕ್ಷಿಸಿದ್ದ ನಾವು, ಆದಿನ ಮಾತ್ರ ಟ್ರಾಕ್ ಪಕ್ಕದಲ್ಲೆ ಹೋದರೆ ಸ್ಟೇಷನ್ ಸಿಗಬಹುದು ಎಂಬ ಊಹೆಯ ಮೇರೆಗೆ ಹೊರಟೆವು. ಆಶ್ಚರ್ಯಕರವಾಗಿ ನಮಗೆ ಒಂದೆರೆಡು ನಿಮಿಷದಲ್ಲೇ ಸ್ಟೇಷನ್ ಸಿಕ್ಕಿಬಿಟ್ಟಿತು. ಅದು ಸಿಕ್ಕ ವೇಗಕ್ಕೆ ನಾವು ತಲುಪಿರುವುದು ಕೇಂದ್ರ ನಿಲ್ದಾಣವನ್ನೊ ಅಥವ ಬೇರೆ ಇನ್ಯಾವುದೋ ಎಂಬ ಗೊಂದಲಕ್ಕೆ ಬಿದ್ದು ಹಲವು ಬಗೆಯಲ್ಲಿ ಕನ್ಫರ್ಮ್ ಮಾಡಿಕೊಂಡೆವು. ನಂತರ ಇಷ್ಟು ಹತ್ತಿರದ ರೈಲ್ವೇ ಸ್ಟೇಷನ್‍ಗೆ ಎಷ್ಟೊಂದು ಪ್ರಯಾಸ ಪಟ್ಟುಕೊಂಡು ತಲುಪುತ್ತಿದ್ದೆವಲ್ಲ ಎಂದು ನಮ್ಮನ್ನೆ ನಾವು ಶಪಿಸಿಕೊಂಡೆವು.

ಉಂಡು ಹೋಗಿದ್ದರು

ಓಡಾಡಲು ಸ್ಟುಡೆಂಟ್ ರೈಲ್ವೆ ಪಾಸ್ ಮಾಡಿಸಿಕೊಂಡಿದ್ದ ನಾವು, ಕಾಲೇಜು ಮಧ್ಯಾಹ್ನ ಹನ್ನೆರಡಕ್ಕೆಲ್ಲ ಮುಗಿದರೂ ಊರಿಗೆ ವಾಪಾಸ್ ಆಗಲು ಬೇರೆ ಟ್ರೈನ್ ವ್ಯವಸ್ಥೆ ಇರದಿದ್ದರಿಂದ ಸಂಜೆ ಆರರವರೆಗೆ ಸ್ಟೇಷನ್ನಲ್ಲೆ ಕಾದಿರುತ್ತಿದ್ದೆವು. ತುಮಕೂರಿನಿಂದ ಹೊರಡುವ ಮಹಾಲಕ್ಷ್ಮಿ ಗಾಡಿ ಬಂದಾಗಲೇ ಹತ್ತಬೇಕಿತ್ತು. ಬೆಳಗ್ಗೆ ಅಷ್ಟೊತ್ತಿಗೆ ಏನೂ ತಿಂದು ಬಂದಿರದ ನಾವು ಬಹುತೇಕ ಹಸಿದುಕೊಂಡೇ ಕಾಲೇಜಿಗೆ ಹೋಗುತ್ತಿದ್ದೆವು. ತಿಂಡಿಗೆ ಶಾಂತಿನಗರದಲ್ಲಿದ್ದ ಸಣ್ಣಹೊನ್ನಣ್ಣನ ಮನೆಗೋಗುವ ಅವಕಾಶವಿದ್ದರೂ ಅಂಜಿಕೊಳ್ಳುತ್ತಿದ್ದ ನಾವು ಅಪರೂಪಕ್ಕೆ ಈ ಅವಕಾಶ ಬಳಸಿಕೊಳ್ಳುತ್ತಿದ್ದೆವು. ಮಧ್ಯಾಹ್ನದ ಊಟಕ್ಕೆ ಸದಾ ಹೋಟೆಲ್‌ಗೆ ದುಡ್ಡಿಕ್ಕಕಾಗಲ್ಲ ಎಂದು ಸಣ್ಣಹೊನ್ನಣ್ಣ ಒಂದು ದಾರಿ ತೋರಿಸಿತ್ತು. ಅಣ್ಣನ ಶಿಷ್ಯ ಆನಂದ್ ಎಂಬುವವನು ಸೆಕೆಂಡ್ ಪಿಯುಸಿಯಲ್ಲಿ ಕೆಲವು ಸಬ್ಜೆಕ್ಟ್ ಕಳೆದುಕೊಂಡು ಇತ್ತ ಊರಿಗೋಗಲಾಗದೆ ಒಂದು ರೂಮ್ ಮಾಡಿಕೊಂಡು ತುಮಕೂರಿನಲ್ಲೆ ಕೆಲಸಮಾಡಿಕೊಂಡಿದ್ದ. ಆತನ ರೂಮು ಸಾಧನಾ ಬಿಲ್ಡಿಂಗ್ ಎಂಬ ಮೂರು ಅಂತಸ್ಥಿನ ಹಳೆ ಕಟ್ಟಡದಲ್ಲಿತ್ತು. ಜಸ್ಟ್ ಮಿಸ್ ಎಂಬಂತೆ ಹತ್ತಾರು ರೂಮುಗಳಿಗಿದ್ದ ಒಂದೇ ಶೌಚಾಲಯಕ್ಕೆ ಅಂಟಿಕೊಂಡಂತಿತ್ತು. ಒಬ್ಬನೇ ಇದ್ದ ಆತನಿಗೆ ಅಣ್ಣ ನಮ್ಮನ್ನ ಪರಿಚಯಿಸಿ ‘ನೋಡಪ್ಪ, ಇವ್ರು ನಮ್ಮುಡುಗ್ರು. ಹಾಸ್ಟೆಲ್  ಸ್ಟಾರ್ಟಾಗತಕ ಮಧ್ಯಾನದ ಹೊತ್ತು ಬಂದು ಅನ್ನ ಮಾಡ್ಕೆಂಡು, ಸಾಂಬಾರ್ ತಂದ್ಕಂಡು ಉಂಡ್ಕಂಡು ಹೋಗ್ತರೆ, ಏನ್ ಬೇಕೊ ರೇಷನ್ ಎಲ್ಲ ತಂದ್ಕಂತರೆ’ ಎಂದು ಅಧಿಕಾರಯುತವಾಗಿ ಒಪ್ಪಿಸಿದ. ಸಣ್ಣಗೆ ಪ್ಯಾರಲನಂತಿದ್ದ ಆನಂದಣ್ಣ ‘ಅದ್ಕೇನಂತೆ ಮಾವ, ರೂಮಲ್ಲಿ ಯಾರು ಇರಲ್ಲ, ಕೀ ಇಟ್ಟಿರ್ತಿನಿ ಮಾಡ್ಕಂಡು ಉಂಡೋಗ್ಲಿ ತಗಳಿ’ ಎಂದು ಅನುಮತಿ ಕೊಟ್ಟ. ಅದರಂತೆ ಹಸಿದ ನಾಯಾಗಿರುತ್ತಿದ್ದ ನಾವು ಅಂಗಡಿಯಿಂದ ಅಕ್ಕಿ ತಂದು, ಪಾತ್ರೆ ತೊಳೆದು, ಸೀಮೆಎಣ್ಣೆ ಸ್ಟವ್ ಹಚ್ಚಿ ಅನ್ನ ಮಾಡುತ್ತಿದ್ದೆವು. ಭಗತ್‌ದು ನಂದು ಎಂಥ ಜೋಡಿ ಎಂದರೆ ನಾವಿಬ್ಬರೂ ಒಬ್ಬರಿಗೊಬ್ಬರು ಬಿಟ್ಟು ಏನನ್ನೂ ಮಾಡುತ್ತಿರಲಿಲ್ಲ. ಹೋಟೆಲ್ಗೆ ಸಾಂಬಾರ್ ತರಲೂ ಸಹ ಇಬ್ಬರೂ ಜೊತೆಯಲ್ಲೇ ಹೋಗುತ್ತಿದ್ದೆವು!

ಒಂದು ದಿನ ಕಾಲೇಜೇನೊ ಶುರುವಾಯಿತು. ಹಾಸ್ಟೆಲ್ ಪ್ರಾರಂಭವಾಗುವ ತನಕ ಪಾಠ ಕಳ್ಕಣಕಾಗುತ್ತ ಎಂದು ಊರಿಂದಲೇ ತುಮಕೂರಿಗೆ ಓಡಾಡುವ ತೀರ್ಮಾನಕ್ಕೆ ಬಂದೆವು. ಕಡಿಮೆ ವೆಚ್ಚದ ರೈಲು ಪ್ರಯಾಣದ ವ್ಯವಸ್ಥೆ ಕುಂದೂರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬಾಣಸಂದ್ರದಿಂದ ಇತ್ತು.

ಮೊದಲ ದಿನವೇನೋ ಸುಸೂತ್ರವಾಗಿ ನಡೆಯಿತು. ಹೊಟ್ಟೆ ಬಿರಿಯೆ ಉಂಡು ತೇಗಿದೆವು. ಎರಡನೇ ದಿನ ಹೀಗೆ ಅನ್ನ ಮಾಡಿ, ಸಾಂಬಾರ್ ತರಲು ಹೋಗಿದ್ದೆವು. ಬರುವಷ್ಟರಲ್ಲಿ ನಾವು ಮಾಡಿದ್ದ ಅನ್ನದಲ್ಲಿ ಅರ್ಧ ಯಾರೋ ಉಂಡು ಬಾಗಿಲನ್ನು ಮುಂದೆ ಬಿಟ್ಟುಕೊಂಡು ಹೋಗಿದ್ದರು. ಗಾಬರಿ ಬಿದ್ದ ನಾವು ಇದ್ದಷ್ಟನ್ನೆ ಉಂಡು ಸುಮ್ಮನಾದೆವು. ಮಾರನೆ ದಿನ ಅನ್ನ ಮಾಡಿ ಹೋಟೆಲ್‌ನಿಂದ ಸಾಂಬಾರ್ ತರಲು ಹೋಗಿ ವಾಪಾಸ್ಸಾಗುವಷ್ಟರಲ್ಲಿ, ನಾವು ಹಾಕಿಕೊಂಡು ಹೋಗಿದ್ದ ಬಾಗಿಲು ತೆರೆದಿತ್ತು. ಹೋಗಿ ನೋಡಿದರೆ ಕರ್ರಗೆ ಮತ್ತು ಬೆಳ್ಳಗಿದ್ದ ಇಬ್ಬರು ನಾವು ಮಾಡಿದ್ದ ಅನ್ನವನ್ನ ಚಟ್ನಿ ಪುಡಿಯೊಂದಿಗೆ ಕಲೆಸಿ ಉಣ್ಣುತ್ತಿದ್ದರು. ನಮ್ಮನ್ನೆ ಯಾರೊ ಎಂಬಂತೆ ನೋಡಿದ ಅವರಲ್ಲೊಬ್ಬ ‘ನೀವ ರೈಸ್ ಇಟ್ಟಿದ್ದು?’ ಅಂದ. ಚುರುಗುಡುತ್ತಿದ್ದ ಕರುಳ ಬೇನೆ ಇನ್ನೂ ಹೆಚ್ಚಿದಂತಾಗಿ ‘ಹೂಂ’ ಎಂದೆವು. ಮೂಲೆಯಲ್ಲಿದ್ದ ಅಕ್ಕಿ ಚೀಲದ ಕಡೆಗೆ ತೋರಿಸುತ್ತ, ‘ನಮ್ದು ಇಲ್ಲಿ ರೈಸ್ ಐತೆ, ನಾವುಂಡಾದ್ಮೇಲೆ ಆಕ್ಯಂಡು ಉಂಡ್ರಿ’ ಎಂದು ಹೇಳಿ ಎದ್ದು ಹೋದರು. ಹಸಿದಿದ್ದ ನಮಗೆ ಪಿತ್ತ ನೆತ್ತಿಗೇರಿಬಿಟ್ಟಿತು. ನಮ್ಮ ಆಕ್ರೋಶಕ್ಕೆ ಕಾರಣ ಹಸಿದದ್ದು ಒಂದಾದರೆ, ನಮ್ಮದು ಅಂಗಡಿ ಅಕ್ಕಿ ಅವರದು ಸ್ವಲ್ಪ ಕರ್ರಗಿದ್ದ ಸೊಸೈಟಿ ಅಕ್ಕಿಯಾಗಿತ್ತು. ಆಗಲೇ ನಮಗೆ ಈ ಬಂಡಾಟದ ಅನುಭವ ಕೊಟ್ಟ ಆ ಇಬ್ಬರು ಮಹಾನ್ ಚತುರರೆಂದರೆ, ಪಾವಗಡದಿಂದ ಬಂದಿದ್ದ, ಈಗ ಹೈಸ್ಕೂಲು ಶಿಕ್ಷಕನಾಗಿರುವ ತಿಪ್ಪೇಸ್ವಾಮಿ ಇನ್ನೊಬ್ಬ ಜಯಣ್ಣ. ಅವರಿಬ್ಬರೂ ನಮ್ಮ ಹಾಗೆಯೇ ನಮ್ಮ ಕಾಲೇಜಿಗೆ ಪ್ರಥಮ ಪಿಯುಸಿಗೆ ಅಡ್ಮಿಷನ್ ಆಗಿ ಹಾಸ್ಟೆಲ್ ಓಪನ್‌ಗಾಗಿ ಕಾಯುತ್ತಿದ್ದವರು. ಅದರಲ್ಲಿ ತಿಪ್ಪೆಸ್ವಾಮಿ ಐಚ್ಚಿಕ ಕನ್ನಡದ ನನ್ನ ಸೆಕ್ಷನ್ನಿನವನೇ ಎಂದು ತಡವಾಗಿ ತಿಳಿಯಿತು. ಫೇಲಾಗಿ ಕೇವಲ ಮುನ್ನೂರಕ್ಕೊ ಐನೂರಕ್ಕೊ ಕೆಲಸಕ್ಕೆ ಹೋಗುತ್ತಿದ್ದ ಆನಂದಣ್ಣ, ಹೀಗೆ ಹೊಸದಾಗಿ ಬಂದ ಹುಡುಗರಿಗೆ ಆಶ್ರಯ ಒದಗಿಸುವುದರೊಂದಿಗೆ ತಿಂಗಳು ತುಂಬುತ್ತಲೇ ಬಾಡಿಗೆಯನ್ನೂ ಪಡೆದುಕೊಳ್ಳುತ್ತಿದ್ದುದು ಆನಂತರ ನಮಗೆ ಬೆಳಕಿಗೆ ಬಂತು.

ರೂಮಿನಲ್ಲಿ ಸಿಕ್ಕ ಪೋಲಿ ಪುಸ್ತಕಗಳು

ಮಧ್ಯಾಹ್ನ ಬೇಗನೆ ಕಾಲೇಜು ಮುಗಿಯುತ್ತಿದ್ದುದರಿಂದ ಇನ್ನ ಸಂಜೆ ಐದು ಮೂವತ್ತರ ಟ್ರೈನ್ ಬರುವವರೆಗೂ ನಾವು ಖಾಲಿ ಇರುತ್ತಿದ್ದೆವು. ಹೊರಗಡೆ ಓಡಾಡುವುದನ್ನ ಆಗಿನ್ನು ರೂಢಿಸಿಕೊಂಡಿರಲಿಲ್ಲ. ಆದ್ದರಿಂದ ಸಂಜೆ ಆಗುವವರೆಗೆ ಆನಂದಣ್ಣನ ರೂಮಿನಲ್ಲೇ ಇರುತ್ತಿದ್ದೆವು. ಹಳದಿ ಬಣ್ಣಕ್ಕೆ ತಿರುಗಿ, ಪಾಚಿ ಕಟ್ಟಿದ್ದ ಗಬ್ ಎನ್ನುವ ಶೌಚಾಲಯದ ಪಕ್ಕದಲ್ಲೇ ಇದ್ದ ಆನಂದಣ್ಣನ ರೂಮು ಅತ್ಯಂತ ಕಿರಿದಾಗಿತ್ತು. ಸರಿಯಾಗಿ ಚಾಚಿದರೆ ಕಾಲುಗಳು ಬಾಗಿಲಾಚೆ ಇರುತ್ತಿದ್ದವು. ಇಬ್ಬರಾದರೆ ಒಂಚೂರು ಮಿಕ್ಕಿ ಮೂವರಾದರೆ ಅನಿವಾರ್ಯವಾಗಿ ಗೋಡೆಗೆ ಮಲಗಲೇಬೇಕಿತ್ತು. ಅಂಥ ರೂಮಿನ ಕಾಲಿನ ದಿಕ್ಕಿಗೆ ಸ್ಟವ್ವು ಪಾತ್ರೆಗಳಿದ್ದರೆ, ಮೂಲೆಯ ಗೂಟದಲ್ಲಿ ಒಂದು ಕೈಚೀಲ ನೇತಾಡುತ್ತಿತ್ತು. ಕುತೂಹಲಕ್ಕೆ ನಾವೊಂದು ದಿನ ಅದರೊಳಗೆ ಕೈಯಿಕ್ಕಿ ತೆಗೆದರೆ ನಾಕಾರು ಸಣ್ಣ ಸೈಜಿನ ಪುಸ್ತಕಗಳು ಸಿಕ್ಕವು. ‘ರತಿವಿಜ್ಞಾನ’ ‘ಯವ್ವನ’ ‘ಪೋಲೀಸ್ ನೀವ್ಸ್’ ಮುಂತಾದ ಶೀರ್ಷಿಕೆಯಲ್ಲಿದ್ದ ಅವುಗಳ ಮುಖ ಪುಟವೇ ಆಸಕ್ತಿದಾಯಕವಾಗಿದ್ದವು. ಮೊದಮೊದಲು ಮುಜುಗರದಿಂದಲೇ ಓದಲು ಪ್ರಾರಂಭಿಸಿದೆವು. ಯಾರಾದರೂ ಒಳಪ್ರವೇಶಿಸಿಬಿಟ್ಟರೆಂಬ ಭಯದಿಂದ ನಮ್ಮ ಲಾಂಗ್ ನೋಟ್ ಬುಕ್ ಒಳಗಿಟ್ಟುಕೊಂಡು ಓದುತ್ತ ಮುದಗೊಳ್ಳುತ್ತಿದ್ದೆವು. ಬಾಗಿಲ ಕಡೆ ಒಂದು ದೃಷ್ಟಿ ನೆಟ್ಟೆ ಇರುತ್ತಿದ್ದೆವು. ಆನಂತರ ಅನುಮಾನ ಬಾರದ ಹಾಗೆ ಮಡುಚಿಟ್ಟು ಹೋಗುತ್ತಿದ್ದೆವು. ಹಲವು ದಿನಗಳ ಕಾಲ ಹೀಗೆ ನಮ್ಮ ರಹಸ್ಯ ಓದು ಮುಂದುವರೆದಿತ್ತು.

ತಿಂಗಳಾನುಗಟ್ಟಲೆ ಓಡಾಡಿದ ನಂತರ ಕೊನೆಗೊಂದು ದಿನ ಹಾಸ್ಟೆಲ್ ಸೀಟ್ ಅನೌನ್ಸ್‌ ಆಗಿ ನಮಗೂ ಸೀಟ್ ಸಿಕ್ಕಿತು. ಡಿ.ಡಿ.ಪಿ.ಐ. ಆಫೀಸ್ ಪಕ್ಕದ ಹಾಸ್ಟೆಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು ರೂಮುಗಳು ಜಾಗವಿಲ್ಲದೆ ತುಂಬಿ ತುಳುಕುತ್ತಿದ್ದವು. ಆದ್ದರಿಂದ ಈ ಹಾಸ್ಟೆಲ್‌ನಲ್ಲಿ ಸೆಕೆಂಡ್ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರ ಅವಕಾಶಿಸಿ, ಹೊಸದಾಗಿ ದಾಖಲಾದವರಿಗೆ ಉಪ್ಪಾರಳ್ಳಿಯಲ್ಲಿ ಒಂದು ಮನೆ ಬಾಡಿಗೆ ಹಿಡಿದು ತಿಂಡಿ ಊಟಕ್ಕೆ ಅಲ್ಲಿ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ ಏಳು ಮೂವತ್ತಕ್ಕೆ ಕಾಲೇಜ್ ಶುರುವಾಗುತ್ತಿದ್ದುದರಿಂದ ಆರುವರೆಗೆಲ್ಲ ಎದ್ದು ಇರುವೆಗಳ ಸಾಲಿನಂತೆ ಆ ಸಂದಿ ಈ ಸಂದಿ ನುಸುಳಿ ಮೂರ್ನಾಲ್ಕು ಕಿಲೋಮೀಟರ್ ನಡೆದು ಬೋರ್ಡಿಂಗ್ ಹಾಸ್ಟೆಲ್ ತಲುಪಿ, ಕೊಟ್ಟಷ್ಟು ತಿಂಡಿ ತಿಂದು ಹಿಂತಿರುಗುತ್ತಿದ್ದೆವು.

ಈ ಅನನುಕೂಲತೆಯನ್ನ ತಪ್ಪಿಸಬೇಕೆಂದು ತೀರ್ಮಾನಿಸಿದ ಮಾವ ಕುಂದೂರು ತಿಮ್ಮಯ್ಯ, ಆಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ನಮ್ಮ ಗೌರತ್ತೆಯ ಅಳಿಯ ಓಬಣ್ಣನನ್ನು ಭೇಟಿ ಮಾಡಿ ‘ನಮ್ಮುಡುಗರಿಗೆ ಬಾಳ ತೊಂದ್ರೆ ಆಗಿದೆ. ಎಮ್.ಜಿ. ರೋಡ್‌ನಲ್ಲಿರೊ ಸೈನ್ಸ್‌ ಹಾಸ್ಟೆಲ್‌ನಲ್ಲಿ ಅವಕಾಶ ಮಾಡ್ಕೊಡಿ’ ಎಂದು ಕೇಳಿತು. ಬಿ.ಎಸ್.ಸಿ. ಓದುತ್ತಿದ್ದ ಹುಡುಗರಿಗೆಂದೆ ಇದ್ದ ಸೈನ್ಸ್‌ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿಗಳಿದ್ದರಾದರೂ ಅವರೆಲ್ಲರೂ ವಿಜ್ಞಾನ ವಿಷಯದವರಾಗಿದ್ದರು. ಓಬಣ್ಣನವರ ಶಿಫಾರಸ್ಸಿನ ಮೇರೆಗೆ ಕಲಾ ವಿಭಾಗದವರಾದ ನಮಗೆ ವಿಶೇಷವಾಗಿ ಎಮ್.ಜಿ. ರೋಡ್ ಸೈನ್ಸ್‌ ಹಾಸ್ಟೆಲ್‌ನಲ್ಲಿ ಸೀಟ್ ಸಿಕ್ಕಿತು.

ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು.


ಸಾಹೇಬ್ರು ಕಡೆ ಹುಡುಗ್ರು ಅವ್ರಿಗೆ ಒಳ್ಳೆ ರೂಮ್ ಬೇಕು ಎಂದು ಒತ್ತಡವಿದ್ದುದರಿಂದ, ನಮ್ಮ ತಾಲ್ಲೂಕ್ಕಿನವರೇ ಆದ ಬಿಎಸ್ಸಿ ಓದುತ್ತಿದ್ದ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿಯವರು ತಮ್ಮ ಹದಿಮೂರನೆ ರೂಮಿನಲ್ಲಿ ನಮಗೆ ಅವಕಾಶ ಮಾಡಿಕೊಟ್ಟರು. ಹೈಸ್ಕೂಲ್ ಹಾಸ್ಟೆಲ್‌ನಲ್ಲಿದ್ದಾಗ ನಮ್ಮ ತಟ್ಟೆ ನಾವೆ ತೊಳೆದುಕೊಳ್ಳುವುದರ ಜೊತೆಗೆ ಎತ್ತಿಟ್ಟುಕೊಳ್ಳಬೇಕಿತ್ತು. ಇಲ್ಲಿ ಅದು ತಪ್ಪಿ, ತೊಳೆದು ಹಸನಾಗಿರುವ ಅಗಲವಾದ ತಟ್ಟೆಗಳು ಕುಳಿತಲ್ಲಿಗೆ ಬರುತ್ತಿದ್ದುದರ ಜೊತೆಗೆ ಕೈಯಿಗೆ ಚುರುಗುಡುವ ಬಿಸಿನೀರು ಬೀಳುತ್ತಿತ್ತು. ಎಷ್ಟು ಬಾರಿ ಬೇಕಾದರೂ ತಿಂಡಿಯನ್ನು ಕೇಳಿ ಹಾಕಿಸಿಕೊಂಡು ತಿನ್ನಲು ಅವಕಾಶವಿದ್ದುದರಿಂದ ಎಲ್ಲ ಹುಡುಗರು ಹೊಟ್ಟೆ ಬಿರಿಯೆ ತಿಂದು ಕಾಲೇಜಿಗೆ ಹೋಗುತ್ತಿದ್ದರು.