ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತನೆಯ ಬರಹ
ಒಮ್ಮೆ ಕಿವಿನಾಡಿನಲ್ಲಿ ಅಕಸ್ಮಾತ್ತಾಗಿ ಸಿಕ್ಕಿದ್ದ ಒಬ್ಬ ಕನ್ನಡದ ಯುವಕನೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆತ ಕನ್ನಡದಲ್ಲಿ ಮಾತಾಡಲು ಕಷ್ಟಪಡುತ್ತಿದ್ದ ಅಂತನ್ನಿಸಿತ್ತು. ಯಾಕೆ ಅಂತ ಕೇಳಿದಾಗ ತಾನು ಕನ್ನಡದ ನೆಲದಿಂದ ತುಂಬ ವರ್ಷ ದೂರವಿದ್ದೆ ಅಂತ ನಿಜ ಹೇಳಿರಬಹುದಿತ್ತು. ಬದಲಿಗೆ ಉಡಾಫೆಯ ದನಿಯಲ್ಲಿ ‘I am more an Indian than a Kannadiga’ ಅಂತ ಹೇಳಿ ಸಿಕ್ಕಿಬಿದ್ದ. ನೀನೊಬ್ಬ ಮನುಷ್ಯ ಅಂತ ಮಾತ್ರವಾ? ಗಂಡಸೋ ಹೆಂಗಸೂ ಎಂಬ ಪ್ರಶ್ನೆಯೂ ಇದೆಯಲ್ಲಾ? ನಾನೊಬ್ಬ ಯುರೋಪಿಯನ್ ಅಂತ ಹೇಳಿಕೊಂಡರೆ ಸಾಕಾ? ಯಾವ ದೇಶದವ ಅಂತ ಕೇಳುತ್ತಾರೆ ತಾನೇ? ಯಾವುದೇ ರಾಜ್ಯಕ್ಕೆ ಸೇರದ ಇಂಡಿಯಾ ಎಂಬ ಪ್ರದೇಶ ಇದೆಯಾ? ಹಾಗಂತ ಒಂದು ಭಾಷೆ/ಸಂಸ್ಕೃತಿ ಇದೆಯಾ ಎಂದೆಲ್ಲ ಕೇಳಿ ಅವನ ತಲೆಯನ್ನ ರುಬ್ಬಿಬಿಟ್ಟೆ. ಪೆಚ್ಚಾಗಿ ಬ್ಬೆಬ್ಬೆ ಎಂದಿದ್ದ.
ಭಾಷಾವಾರು ಪ್ರಾಂತ್ಯಗಳು ಅಸ್ತಿತ್ವಕ್ಕೆ ಬಂದಿದ್ದು ಮೂಲಭೂತವಾಗಿ ಆಡಳಿತಾತ್ಮಕ ಮತ್ತು ಆರ್ಥಿಕ ಅಭಿವೃದ್ಧಿಯ ಕಾರಣಗಳಿಗೇ ಹೊರತು ಕೇವಲ ಭಾಷಿಕ/ಸಾಂಸ್ಕೃತಿಕ ಕಾರಣಗಳಿಗೆ ಮಾತ್ರವೇ ಅಲ್ಲ. ಹಾಗಾಗಿಯೇ ಪ್ರಾಂತ್ಯ ಎನ್ನುವುದು ರಾಜಕೀಯ-ಆರ್ಥಿಕ ನೆಲೆಗಳಲ್ಲಿ ರಾಷ್ಟ್ರದ ಚಿಕಣಿ (ಅಥವಾ ಪುಟಾಣಿ) ತದ್ರೂಪವೇ ಹೊರತು ಸಾಂಸ್ಕೃತಿಕ-ಚಾರಿತ್ರಿಕವಾಗಿ ಅಲ್ಲ. ಚಿಂತಕ ಪಿ. ಪೆರುಮಾಳ್ ಹೇಳುವಂತೆ ‘ಹೊಸಪೇಟೆಯಿಂದ ಕಬ್ಬಿಣದ ಅದಿರು, ಕೋಲಾರದಿಂದ ಚಿನ್ನದ ಅದಿರು, ಮಲೆನಾಡಿನಿಂದ ಕಾಫಿ, ಬಳ್ಳಾರಿ ಮತ್ತು ಮಂಗಳೂರಿನ ಉಕ್ಕು ಮತ್ತು ರಸಗೊಬ್ಬರ ಕಾರ್ಖಾನೆಗಳ ಆರ್ಥಿಕ ಅಧ್ಯಾಯಗಳನ್ನು ಒಟ್ಟಾಗಿ ಬೆಸೆಯುವ ಪ್ರಯತ್ನದಲ್ಲಿ ಕರ್ನಾಟಕ ರೂಪು ತಳೆಯಿತು.’
ಆದರೆ ಆರ್ಥಿಕ ಆಶಯಗಳು ಜನರನ್ನು ಭಾವನಾತ್ಮಕವಾಗಿ ಬೆಸೆಯಲಾರವು. ಅದಕ್ಕೆ ಭಾಷೆಯೆನ್ನುವುದು ನೇರವಾಗಿ ಒದಗಿ ಬರುತ್ತದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ಭಾಷೆಯ ಮೇಲೆ ಅಸ್ತಿತ್ವಕ್ಕೆ ಬಂದ ಗಾಢವಾದ ಉಪರಾಷ್ಟ್ರೀಯತೆಯಿದ್ದ ಪ್ರಾಂತ್ಯಗಳಲ್ಲಿ ಸಾಮಾಜಿಕ ಅಭಿವೃದ್ಧಿಯನ್ನು ಗುರುತರವಾದ ಪ್ರಮಾಣದಲ್ಲಿ ಸಾಧಿಸಲಾಗಿದೆ. ಆ ತರಹ ಬಲವಾದ ಭಾಷಿಕ ಅನನ್ಯತೆಯಿಲ್ಲದ ಉತ್ತರಪ್ರದೇಶದಂತಹ ಪ್ರಾಂತ್ಯಗಳಲ್ಲಿ ಅದು ಮುಗ್ಗರಿಸಿ ಬಿದ್ದಿದೆ. ಭಾಷೆಯೆನ್ನುವುದು ಬರಿಯ ಭಾವನೆಯಲ್ಲ. ಅದು ನಮ್ಮ ಹೊಟ್ಟೆಬಟ್ಟೆಯ ಪ್ರಶ್ನೆಯೂ ಹೌದು.
ಹಾಗಾಗಿ ಪ್ರಾಂತ್ಯವೆನ್ನುವುದು ಒಂದು ಸಮುದಾಯ ತನ್ನ ಆರ್ಥಿಕ ಸ್ವಾಯತ್ತತೆಯನ್ನು ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನವಾಗಿರುತ್ತದೆ. ಇಲ್ಲದಿದ್ದರೆ ರಾಷ್ಟ್ರವೆಂಬ ದೊಡ್ಡಣ್ಣನ ಔದಾಸೀನ್ಯಕ್ಕೋ ತಾತ್ಸಾರಕ್ಕೋ ಗುರಿಯಾಗುವ ಅಪಾಯವಿರುತ್ತದೆ. ರಾಷ್ಟ್ರದಂತೆಯೇ ಪ್ರಾಂತ್ಯವೂ ಸಹ ಗುದ್ದಾಡಿ ಗೆದ್ದುಕೊಂಡದ್ದೇ ಆಗಿರುತ್ತದೆ. ಅಲ್ಲಿ ಭಾಷೆಯೇ ತಳಪಾಯ. ಆ ಸಮುದಾಯಕ್ಕೆ ಸೇರಿದ ಸದಸ್ಯರಲ್ಲಿ ಮನೆಮಾತಿನ ಭಾಷಾಬಂಧ ಸಡಿಲವಾಗುತ್ತಾ ಹೋದರೆ ಬಯಲಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಬೇಕಾಗುತ್ತದೆ. ಬಯಲಲ್ಲಿ ನಿಲ್ಲುವುದೆಂದರೆ ಹೆಚ್ಚು ಅಭದ್ರತೆಗೆ ತೆರೆದುಕೊಂಡಂತೆ. ಯಾವ ಸಮುದಾಯ ಮತ್ತು ಪ್ರಭುತ್ವ ತನ್ನ ಭಾಷೆಯನ್ನು ರಕ್ಷಿಸಿಕೊಳ್ಳಲಾಗದೋ ಅದು ತನ್ನ ಭದ್ರತೆಯನ್ನು ಕಾಯ್ದುಕೊಳ್ಳಲಾರದು.
*****
ನನ್ನ ಪೀಳಿಗೆಯವರಿಗೆ ಕನ್ನಡ ಎಂಬ ಮನೆಮಾತಿನ ಬೇರುಗಳು ಬಲವಾಗಿಯೇ ಇವೆ. ನಾವು ಲೋಕದ ಕಣ್ಣಿಗೆ ತೆರೆದುಕೊಂಡಿದ್ದು ನಮ್ಮ ಭಾಷೆಯ ಮೂಲಕವೇ. ಶಾಲೆಗೆ ಹೋದಾಗ ಪದ್ಯಗಳನ್ನು ಬಾಯಿಪಾಠ ಮಾಡುವ ಒಂದು ಅದ್ಭುತ ಅಭ್ಯಾಸ ಆ ಪ್ರಜ್ಞೆಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು.
ಪದ್ಯಗಳನ್ನು ಬಾಯಿಪಾಠ ಮಾಡುವ ಅಭ್ಯಾಸ ಈಗಿನ ಶಿಕ್ಷಣ ಪದ್ಧತಿಯಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಮಗಂತೂ ಅದು ಬದುಕಿನ ಪಾಠಗಳನ್ನು ಕಲಿಸಿದಂಥ ಒಂದು ಶೈಕ್ಷಣಿಕ ವಿಧಿ. ಮೊದಲನೆಯ ತರಗತಿಯಲ್ಲಿ ಅಆಇಈ ತಿದ್ದಿದ ಮೇಲೆ ಕನ್ನಡ ಅಕ್ಷರ ಸಚಿತ್ರ ಪಠ್ಯಪುಸ್ತಕ ಕೈಗೆ ಬಂದಿತ್ತು. ಅದರ ಅ-ಅರಸ, ಆ-ಆನೆ, ಇ-ಇಲಿ, ಈ -ಈಶ ಇತ್ಯಾದಿಗಳು ಮೈಮರೆಸಿದ್ದವು. ವರ್ಷದುದ್ದಕ್ಕೂ ಚಿತ್ರಗಳನ್ನು ನೋಡುತ್ತಾ ಅದರ ಜೊತೆ ಅಕ್ಷರಗಳನ್ನು ತಾಳೆ ಹಾಕುತ್ತಾ ಕಳೆದ ಮೇಲೆ ಕನ್ನಡ ಎರಡನೆಯ ತರಗತಿಯ ಪಠ್ಯಪುಸ್ತಕ ಕೈಗೆ ಬಂದಾಗ ಖುಷಿಯೋ ಖುಷಿ.
ಮೊನ್ನೆ ಒಂದು ಸ್ಕೂಲಿಗೆ ಹೋಗುವ ಮಗು ಬಾಯಿಪಾಠ ಯಾಕೆ, ಅಂತರ್ಜಾಲದಲ್ಲಿ ಎಲ್ಲ ಇವೆಯಲ್ಲ ಎಂದಾಗ ವಿಷಾದವೆನ್ನಿಸಿತ್ತು. ಭಾಷೆಯ ಗೀತಗುಣ ಅರಿವಿಗೆ ದಕ್ಕುವುದು ಈ ಬಾಯಿಪಾಠ ಮಾಡುವ ಅಭ್ಯಾಸದಿಂದಲೇ ಇರಬೇಕು. ಪದಗಳನ್ನು ನೆನಪಿಟ್ಟುಕೊಳ್ಳಲು ಏಕಾಗ್ರತೆ ಇಲ್ಲದಿದ್ದರೆ ಹೇಗೆ ಸಾಧ್ಯ? ಅದು ಧ್ಯಾನಸ್ಥ ಸ್ಥಿತಿಯನ್ನು ಕಲಿಸಿದ ಒಂದು ಅಭ್ಯಾಸವೂ ಹೌದು. ಮನಸ್ಸನ್ನು ಕೀಲಿಸಿ ನಿಲ್ಲಿಸಿದ್ದು ಮತ್ತು ಹೇಳಹೇಳುತ್ತಲೇ ಅದರೊಳಗೆ ನಡೆದಿದ್ದನ್ನು ಊಹಿಸಿಕೊಳ್ಳುವ ಪಾಠ ಕಲಿಸಿದ್ದು ಈ ಪದ್ಯಗಳೇ. ಕಲ್ಪನಾಶಕ್ತಿ ಗರಿಗೆದರಿ ಹಾರಿದ್ದು ಅಲ್ಲಿಂದಲೇ.
ಬದುಕಲ್ಲಿ ಕಲಿತ ಮೊಟ್ಟಮೊದಲ ಪಾಠ ‘ತುತ್ತೂರಿ ಪದ’.
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ ಪ-ದ-ನಿ-ಸ ಊದಿದನು
ಸ-ನಿ-ದ-ಪ ಮ-ಗ-ರಿ-ಸ ಊದಿದನು
ಪದ್ಯ ಅಕ್ಷರಗಳನ್ನಷ್ಟೇ ಅಲ್ಲ, ಸಂಗೀತದ ಸ್ವರಗಳ ಪರಿಚಯವನ್ನು ಸಹ ಮಾಡಿಸಿತ್ತು. ಈ ಕಸ್ತೂರಿ ಬರಬರುತ್ತಾ ಜಂಬದ ಕೋಳಿಯಾಗಿಬಿಟ್ಟ! ಕೊನೆಗೆ ಏನಾಯ್ತು? ಕೊಳದ ಬಳಿಯಲ್ಲಿ ನಡೆದ ಕಸ್ತೂರಿಗೆ ಬದುಕು ಒಂದು ಅಮೂಲ್ಯ ಪಾಠವನ್ನೇ ಕಲಿಸಿತು!
ಜಾರಿತು ನೀರಿಗೆ ತುತ್ತೂರಿ;
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು;
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು;
ಜಂಭದ ಕೋಳಿಗೆ ಗೋಳಾಯ್ತು!
ಅಂದಿನಿಂದ ನಮ್ಮ ಪರಿಮಿತ ಪದಕೋಶ ಇನ್ನೊಂದು ಅಪರೂಪದ ಬೈಗುಳವನ್ನು ಸೇರಿಸಿಕೊಂಡು ಶ್ರೀಮಂತವಾಯಿತು. ‘ಅವನಿದಾನಲ್ಲ, ಮಹಾ ಜಂಭದ ಕೋಳಿ…!
***
ಬಾಲ್ಯದಲ್ಲಿ ಐನೋರು ಮನೆಗೆ ಬಂದಾಗ, ಇದ್ದದ್ದರಲ್ಲಿ ಸುಖಾಸೀನ ಎನ್ನಬಹುದಾದ ಆಸನವನ್ನು ಅವರಿಗೆ ಕೊಟ್ಟ ತಕ್ಷಣ ಅವರು ಕಾಲನ್ನು ನೀಡಿ ಕುಳಿತುಕೊಳ್ಳುವುದನ್ನು ನೋಡಿದ್ದೆ. ಬೇಕಾದವರು ಬಂದು ಅಡ್ ಬೀಳಲು ಅನುಕೂಲವಾಗುವಂತೆ. ಆಮೇಲೆ ಅದರ ಕಡೆಗೆ ಗಮನ ಕೊಡದೇ ಅಪ್ಪಾಮ್ಮರ ಜೊತೆ ಲೋಕಾಭಿರಾಮ ಶುರು ಹಚ್ಚಿಕೊಳ್ಳುತ್ತಿದ್ದರು. ಅಪ್ಪ ಊರಿನ ದೊಡ್ಡ ಕುಳಗಳಲ್ಲಿ ಒಬ್ಬರಾದ್ದರಿಂದ ಐನೋರು ಬಂದರೆ ಸಾಕಷ್ಟು ಸಮಯವಿಟ್ಟುಕೊಂಡೇ ಬರುತ್ತಿದ್ದರು. ಅಕ್ಕದ ಮನೆಯೋರು, ಪಕ್ಕದ ಮನೆಯೋರು, ಒತ್ತಿ ಮನೆಯೋರು, ಕೊತ್ತಿ ಮನೆಯೋರು (ಈ ಪಕ್ಕದವರು ಬೆಕ್ಕು ಸಾಕಿದ್ದರಿಂದ), ಹಿಂದಲ ಮನೆಯೋರು, ಮುಂದಲ ಮನೆಯೋರು, ಆಚೆ ಮನೆಯೋರು, ಈಚೆ ಮನೆಯೋರು ಹೀಗೆ ಎಲ್ಲರೂ ಬಂದು ಬಂದು ಅಡ್ ಬಿದ್ದು ಹೋಗುತ್ತಿದ್ದರು.
ಅದೇನೋ ಅಪ್ಪಾಮ್ಮರನ್ನು ಬಿಟ್ಟು ನನಗೆ ಯಾರ ಕಾಲಿಗೂ ಬೀಳಲು ಆಗುತ್ತಲೇ ಇರಲಿಲ್ಲ. ಪ್ಯಾರಿಸ್ ಚಾಕಲೇಟಿನ ಮೋಹವಿದ್ದ ನನಗೆ ಒಂದು ಸಂಜೆ ದೊಡ್ಡಣ್ಣ ಕೈ ತುಂಬ ಚಾಕಲೇಟು ತೋರಿಸಿ ಅಡ್-ಬಿದ್ದವರಿಗೆಲ್ಲ ಕೊಡ್ತೀನಿ ಅಂತ ಘೋಷಿಸಿದ್ದ. ದೊಡ್ಡ ಕುಟುಂಬದ ಜನವೆಲ್ಲಾ ಬಂದು ತುಪುತುಪನೆ ಬಿದ್ದರು. ರೊಟ್ಟಿ ತಟ್ಟಲು ಬರುತ್ತಿದ್ದ ಮುದುಕಿ ಪುಟ್ಟಕ್ಕಯ್ಯ ಸಹ ಬಿದ್ದಂತೆ ನಟಿಸಿದರು.
ನಾನು ಮೂಲೆಯಲ್ಲಿ ನಿಂತು ಈ ನಾಟಕವನ್ನೆಲ್ಲಾ ನೋಡಿದೆನೇ ಹೊರತು ಮುಂದೆ ಬರಲಿಲ್ಲ. ತೋಟದ ಮನೆಯಲ್ಲಿದ್ದ ವಿಶಾಲಮ್ಮ ಈಗ ಇಲ್ಲಿ ಇರಬಾರದಿತ್ತೆ ಅಂತನ್ನಿಸಿ ಅಳು ಬಂದಿತ್ತು. ಬಿಮ್ಮನೆ ಬಿಗಿದ ಮುಖದಲ್ಲಿ ನಿಂತಿದ್ದ ನಾಲ್ಕು ವರ್ಷದ ಹಟಮಾರಿಯೆದುರು ಸೋತು ಕೊನೆಯ ಚಾಕಲೇಟಿನ ಪೇಪರನ್ನು ನನಗೆ ಕೇಳಿಸುವಂತೆ ಪರಪರನೆ ಹರಿದು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸುತ್ತಾ ಹೋದ ದೊಡ್ಡಣ್ಣನನ್ನು ನೋಡಿದೆ ಅಷ್ಟೆ. ಯಾರನ್ನಾದರೂ ಕಣ್ಣಲ್ಲೇ ಢಮಾರ್ ಅನ್ನಿಸುವ ಹಾಗಿದ್ದಿದ್ದರೆ!
ಆ ರಾತ್ರಿಯ ನಿದ್ದೆಯಲ್ಲಿ ಕಣ್ಣೆದುರು ಬರೀ ಚಾಕಲೇಟುಗಳೇ ಕುಣಿಯುತ್ತಿದ್ದವು!
ಐನೋರು ಮನೆಗೆ ಬಂದಾಗೆಲ್ಲ ಗುಂಪಲ್ಲಿ ಗೋವಿಂದ ಎನ್ನುವಂತೆ ಅದು ಹೇಗೋ ತಪ್ಪಿಸಿಕೊಳ್ಳುತ್ತಿದ್ದೆ. ಅದು ಹೇಗೋ ವಿಶಾಲಮ್ಮ ಗಮನಿಸಿದ್ದರಲ್ಲ! ಒಂದು ಸಲ ಐನೋರು ಬಂದಾಗ ಹಜಾರದಲ್ಲೇ ಇದ್ದ ನನಗೆ ಕಾಲಿಗೆ ಬೀಳಲು ಹೇಳಿದರು. ಇನ್ನೂ ಗುಂಪೆದ್ದಿರಲಿಲ್ಲ.
ಪೆಕರಿಯ ತರ ಅಮ್ಮನ ಕಡೆ ನೋಡಿದೆ. ‘ಬಿಟ್ಟು ಬಿಡು ತಾಯೆ’ ಎಂಬ ದೈನ್ಯವನ್ನು ಆಕೆ ಗಮನಿಸಿದರೊ ಇಲ್ಲವೊ. ‘ಏನ್ ಕಣ್ ಬಿಡ್ತಾ ಇದೀಯಾ? ಅಡ್ ಬೀಳು ಅಂದ್ರೇ…’ ವಿಶಾಲಮ್ಮನ ಧ್ವನಿ ಸ್ವಲ್ಪ ಜೋರಾಗಿತ್ತು. ನಾನೇನಾದರೂ ಹೆದರುತ್ತಿದ್ದರೆ ಆಕೆಯ ಕಣ್ಣಿಗೆ ಮತ್ತು ಧ್ವನಿಗೆ ಮಾತ್ರ.
ಇನ್ನೂ ಕಲ್ಲಿನಂತೆ ನಿಂತಿದ್ದ ನನ್ನ ಹತ್ತಿರ ಬಂದು ಅಮ್ಮ ಕೈ ಹಿಡಿದುಕೊಂಡು ಹೆಚ್ಚು ಕಮ್ಮಿ ಎಳೆದುಕೊಂಡೇ ಹೋದರು. ಐನೋರೂ ಸಹ ತಮಾಷೆ ನೋಡ ಹತ್ತಿದ್ದರಲ್ಲ!
ಈಗ ನೆಲವನ್ನೇ ನೋಡಹತ್ತಿದ್ದ ನನ್ನ ಕಣ್ಣಿಗೆ ಐನೋರ ಪಾದಗಳು ಕಾಣಿಸಿದವು. ಏನೇ ಮಾಡಿದರೂ ಸೊಂಟ ಬಗ್ಗಲು ಗೋಳಾಡಿತು. ಕತ್ತೆತ್ತಿ ನೋಡಿದರೆ ಅಮ್ಮನ ಕಣ್ಣು!
‘ಮೊದ್ಲು ನಿಮ್ಮ ಕಾಲಿಗೆ ಬೀಳ್ತೀನಿ,’ ಮೆಲ್ಲಗೆ ಅಂದೆ.
‘ಸರಿ ಬೀಳು.’ ಅಮ್ಮನಿಗೆ ಈಗ ಐನೋರ ಎದುರು ಬಚಾವಾಗಬೇಕಿತ್ತು. ಏನು ಮಗಳನ್ನು ಹೀಗೆ ಬೆಳೆಸಿದಾರಾ ವಿಶಾಲಮ್ಮ ಅಂತ ಐನೋರು ಅಂದುಕೊಂಡುಬಿಟ್ಟರೆ! ತಾಯಿಯಾಗಲಾರದ ಗಂಡಸರು ತಾಯ್ತನದ ಮೇಲೆ ಭಾಷ್ಯ ಬರೆಯುವುದೂ ಒಂದು ಗೀಳೇ ಅಲ್ಲವಾ ನಮ್ಮಲ್ಲಿ?
ಅಮ್ಮನ ಕಾಲಿಗೆ ಹಣೆ ಮುಟ್ಟಿ ನಮಸ್ಕಾರ ಮಾಡಿದೆ. ಅಮ್ಮ ಎಂದಿನಂತೆ ತಲೆ ಮುಟ್ಟಿ ‘ಶಿವಶಿವಾ!’ ಅಂತ ಹರಸುವ ಮೊದಲೇ ಎದ್ದು ಪರಾರಿ!

ಆವತ್ತು ಸಂಜೆಯಾದರೂ ಮನೆಯ ಕಡೆ ಸುಳಿಯಲಿಲ್ಲ. ಎದುರು ಮನೆ ಅಮ್ಮಯ್ಯನ ಮನೆಗೆ ಹೋಗಿ ಅವರ ಹತ್ತಿರ ಬೇತುಕೊಂಡಿದ್ದಾಯ್ತು. ಅವರು ಮನೆಗೆ ‘ಏ ವಿಶಾಲಾ …’ ಅಂತ ರಾಗವೆಳೆಯುತ್ತಾ ಬಂದು ಸಮಾಧಾನ ಮಾಡಿ ಬಿಟ್ಟು ಹೋದ ನೆನಪಿದೆ. ಅವರು ಅತ್ತ ಹೋದ ತಕ್ಷಣ ದಡಬಡ ಹೋಗಿ ಮೂರನೆಯ ತರಗತಿಯ ಕನ್ನಡ ಪಠ್ಯ ಪುಸ್ತಕ ತಂದು ಓದಲು ಕುಳಿತೆ. ಮುಸ್ಸಂಜೆಯ ದೀಪ ಹಚ್ಚುವ ಹೊತ್ತಿನಲ್ಲಿ ಜೋರಾಗಿ ಓದಿಕೊಳ್ಳಬೇಕು ಅಂತ ಮನೆಯೊಳಗೆ ಕಟ್ಟಳೆಯೇ ಇತ್ತಲ್ಲ!
ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತುಕೊಂಡು
ಬಾಯಲಿದ್ದ ಮಾಂಸವನ್ನು ತಿನ್ನತೊಡಗಿತು …’
ಅಂತ ಭಯದಲ್ಲಿ ಸ್ವಲ್ಪ ಜೋರಾಗಿಯೇ ಅರಚಹತ್ತಿದ್ದೆ.
‘ಕಾಕರಾಜ ನೀನು ನಮ್ಮ
ವನಕೆ ಬಹಳ ದಿನಕೆ ಬಂದೆ
ನಿನ್ನ ಕಂಡು ನನ್ನ
ಮನಕೆ ಹರುಷವಾಯಿತು’ …
ಅಂತ ಒದರುತ್ತಿದ್ದರೂ ಮನಸೆಲ್ಲಾ ಹತ್ತಿರ ನಿಂತು ನೋಡುತ್ತಿದ್ದ ಅಮ್ಮನ ಮೇಲೇ. ಈಗ ನೆಲದ ಮೇಲೆ ಕೂತಿದ್ದ ನನ್ನ ಬೆನ್ನಿನ ಮೇಲೆ ಸಮಾ ನಾಲ್ಕು ತಪರಾಕಿ ಬೀಳಬಹುದಾ?
‘ದೊಡ್ಡವರಿಗೆ ಅಡ್ -ಬೀಳಕ್ಕಂತೂ ಆಗಲ್ಲ, ಪುಸ್ತಕನಾದ್ರೂ ನೆಟ್ಟಗೆ ಹಿಡಿದು ಓದುವುದನ್ನ ಕಲ್ತುಕೋ! ಎಂದು ವಿಶಾಲಮ್ಮ ತಣ್ಣಗೆ ಹೇಳಿ ಅಲ್ಲಿಂದ ಹೋದದ್ದು ಅರಿವಿಗೆ ಬಂತು. ಅಬ್ಬ! ಎಂದು ನಿಟ್ಟುಸಿರು ಬಿಡುತ್ತಾ ಹೋಗುವ ಮುಂಚೆ ಏನು ಹೇಳಿದರು ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಪುಸ್ತಕ ನೆಟ್ಟಗೆ ಹಿಡಿಯುವುದಾ?
ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಪುಸ್ತಕ ತಲೆಕೆಳಗಾಗಿದ್ದು ಕಾಣಿಸಿತು. ಮತ್ತೆ ಪದ್ಯವನ್ನ ತಪ್ಪಿಲ್ಲದೆ ವಾಚಿಸಿದ್ದು ಹೇಗೆ?
***
ಐದನೆಯ ತರಗತಿಗೆ ಬಂದ ಮೇಲೆಯೇ ನಾನು ಎಬಿಸಿಡಿ ಕಲಿತಿದ್ದು. ಸಣ್ಣ ಪುಟ್ಟ ಪದ್ಯಗಳೂ ಇರುತ್ತಿದ್ದವು.
Rose is red,
Violet is blue,
Honey is sweet and
So are you!
ಅಣ್ಣನೊಬ್ಬ ತಂಗಿಗೆ ಪ್ರೀತಿಯಿಂದ ನೀನು ಸಹ ಜೇನಿನಷ್ಟು ಸಿಹಿ ಎಂದು ಹೇಳುತ್ತಿರುವ ಚಿತ್ರವಿತ್ತು. ನನಗಿದ್ದಿದ್ದು ತಮ್ಮ. ಜೊತೆಗೆ ವಿಶೇಷ ಸವಲತ್ತುಗಳು ಸಿಕ್ಕುತ್ತಿದ್ದ ಅವನ ಮೇಲೆ ನನಗೆ ಪ್ರೀತಿಗಿಂತ ಹೆಚ್ಚಾಗಿ ಅಸೂಯೆ ಇತ್ತು. ಅವನಿಗೆ ಇಂಗ್ಲಿಷ್ ಇರಲಿ, ಇನ್ನೂ ಸ್ಕೂಲಿಗೇ ಸೇರಿಸಿಲ್ಲವಾದ್ದರಿಂದ ಶೈಕ್ಷಣಿಕ ಕನ್ನಡವೂ ಬರುತ್ತಿರಲಿಲ್ಲ. ಅವನ ಎದುರು ತಿರುಚಿದ ಇಂಗ್ಲಿಷ್ ಪದ್ಯದ ನನ್ನ ವಾಚನ ನಡೆಸುತ್ತಿದ್ದೆ:
Rose is red,
Violet is blue,
Honey is sweet,
But you are NOT!
ಪಾಪದ್ದು, ಪೆಕರನಂತೆ ಕೇಳಿಸಿಕೊಂಡು ತಲೆಯಾಡಿಸುತ್ತಿತ್ತು!
***
ಯಾರೋ ಮಹಾಶಯ ನಾನು ಚಿಕ್ಕವಳಿದ್ದಾಗ ಢಣಾ ಢಣ್ ಅಂತ ಭಗವದ್ಗೀತೆಯ ಭಾಗವನ್ನು ಉದ್ಧರಿಸಿದಾಗ ಆ ಠೀವಿಗೋ ಏನೊ, ನಾನೂ ಸಂಸ್ಕೃತವನ್ನು ಕಲಿಯಬೇಕು ಅಂತ ಅಂದುಕೊಂಡಿದ್ದಂತೂ ಹೌದು.
ಎಂಟನೆಯ ತರಗತಿಗೆ ಬರುವವರೆಗೂ ನಮಗೆ ಸ್ಕೂಲಿನಲ್ಲಿ ಮೊದಲ ಭಾಷೆಯಾಗಿ ಕನ್ನಡ ಮಾತ್ರ ಇತ್ತು. ಹೈಸ್ಕೂಲಿನಲ್ಲಿ ಬುದ್ಧಿವಂತರ ಕಣ್ಣೆಲ್ಲ ಸ್ಟೇಟ್ ರ್ಯಾಂಕ್ ಗಳಿಸುವ ಕಡೆ ಇದ್ದರಿಂದ, ಸುಲಭವಾಗಿ ಅಂಕ ಗಳಿಸುವ ಸಲುವಾಗಿ ಸಂಸ್ಕೃತ ಆಯ್ದುಕೊಂಡಿದ್ದರು.
ಮತ್ತೆ ನಾನು?
ಒಮ್ಮೆ ಎರಡೂ ಪಠ್ಯಪುಸ್ತಕಗಳ ಕಡೆ ಕಣ್ಣು ಹಾಯಿಸಿದೆ.
ಒಂದರಲ್ಲಿ ಅರ್ಥವೇ ಆಗದ ಊದ್ದುದ್ದ ಪದಗಳಿದ್ದರೆ ಇನ್ನೊಂದರಲ್ಲಿ ಮೈಮರೆಸುವ ಪದ್ಯಗಳಿದ್ದವು. ಕನ್ನಡವೆನೆ ಕುಣಿದಾಡುವುದೆನ್ನೆದೆ … ಕುಣಿಯೋಣು ಬಾರ, ಕುಣಿಯೋಣು ಬಾ… ಇಂದು ಕೆಂದಾವರೆಯು ನಳನಳಿಸಿ ದಾರಿಯಲಿ …
ಸಿಸ್ಟರ್ ಅಂಬ್ರೊಸಿಯ, ರಾಧಾಮಣಿ ಟೀಚರ್ ತುಂಬ ಚೆನ್ನಾಗಿ ಪಾಠ ಮಾಡ್ತಾರೆ ಅಂತ ಯಾರೊ ಹೇಳಿದ್ದರು. ಬೃಂದಾ ಟೀಚರ್ ಕ್ಲಾಸಿನಲ್ಲಿ ಪದ್ಯಗಳನ್ನ ರಾಗವಾಗಿ ಸಹ ಹಾಡ್ತಾರೆ ಅಂತಲೂ ಕೇಳಿದ್ದೆ.
ಮಾರ್ಕ್ಸ್ ಮನೆ ಹಾಳಾಗ! ಓದಿದರೆ ಕನ್ನಡವೇ ಅಂತ ಶಪಥ ಮಾಡಿದೆ. ಸಂಸ್ಕೃತ ಮೂಲೆ ಸೇರಿತು.
ಎಮ್ ಎ ಮುಗಿಸುವ ಹೊತ್ತಿಗೆ ಭಾಷಾ ರಾಜಕೀಯದಲ್ಲಿದ್ದ ಜಾತಿಯ ಆಯಾಮ ಅಲ್ಪಸ್ವಲ್ಪ ಅರ್ಥವಾಗಿತ್ತು. ಜೊತೆಗೆ ಸೆಮಿನಾರುಗಳಲ್ಲಿ ಪಾಂಡಿತ್ಯ ಪ್ರದರ್ಶನಕ್ಕೆಂದೇ ಸಂಸ್ಕೃತ ಬಳಸುವ ಖದೀಮರಿಗೇನೂ ಕೊರತೆ ಇರಲಿಲ್ಲ.
‘ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ …’ ಅಂತ ಯಾರಾದರೂ ಶುರು ಮಾಡಿದರೆ ಅಲ್ಲಿಂದ ಕಾಲು ಕೀಳುತ್ತಿದ್ದೆ. ಇನ್ನೂ ಹೆಚ್ಚು ಕೊರೆಯಹತ್ತಿದರೆ ಎಂಥ ಖೂಳನೂ ಸ್ವಸಮರ್ಥನೆಗೆ ಧರ್ಮಶಾಸ್ತ್ರಗಳನ್ನ ಬಳಸಿಕೊಳ್ಳಬಲ್ಲ ಎಂದ ಶೇಕ್ಸ್ಪಿಯರನನ್ನು ಕೋಟಿಸಿ (quote) ಬಾಯಿ ಮುಚ್ಚಿಸುತ್ತಿದ್ದೆ.
ಸಂಸ್ಕೃತ ಕಲಿಯಬೇಕೆಂಬ ಕೀರಲು ದನಿಯೂ ಅಲ್ಲಿಗೆ ಸ್ತಬ್ಧವಾಯಿತು. ವೇದ, ಸಂಸ್ಕೃತ ಇತ್ಯಾದಿಗಳು ಒಂದು ಜಾತಿಯ ಕೈಲಿ ಸಾಂಸ್ಕೃತಿಕ ಆಯುಧವಾಗಿ ಬದಲಾಗಿದ್ದರಿಂದ ನಾನೊಬ್ಬಳು ವೇದ-ಹೀನ, ಸಂಸ್ಕೃತ-ಹೀನ ಹೆಣ್ಣಾಗಿಯೇ ಉಳಿಯುತ್ತೇನೆ ಎಂದು ಶಪಥ ಮಾಡಿದೆ.
ನನಗೆ ಕ್ರಿಶ್ಚಿಯನ್ ಸ್ಕೂಲಿನ ಸಿಸ್ಟರಿನಿಯರು ಪ್ರೀತಿಯಿಂದ ಇಂಗ್ಲೀಷ್ ಕಲಿಸಿದ್ದರು. ತಪ್ಪಾಗಿ ಮಾತಾಡಿದಾಗಲೂ ‘ನಾಲಿಗೆ ಹೇಗೆ ತಾನೆ ಹೊರಳಬೇಕು ಶೂದ್ರಮುಂಡೆದಕ್ಕೆ?’ ಎಂದು ಹೀಯಾಳಿಸಿರಲಿಲ್ಲ.
ಹೀಗೆ ಹೃದಯದ ಭಾಷೆ ಕನ್ನಡವಾಗಿ ಬುದ್ಧಿಯ ಭಾಷೆ ಇಂಗ್ಲೀಷಾಯಿತು. ಮತ್ತೇನೂ ಬೇಕೆನಿಸಲಿಲ್ಲ.
ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ. ಮನೆಮಾತಿನ ಭಾಷೆ ಬೀದಿಯಲ್ಲಿ ಹರಿದಾಡಿ ಹಾಡಾಗಿ ಬದುಕನ್ನು ಸಂಪನ್ನಗೊಳಿಸಿದ ರೀತಿಗೆ ಕೃತಜ್ಞಳಾಗಿದ್ದೇನೆ.
***
ಇಷ್ಟೆಲ್ಲಾ ಆದರೂ ದೇವರಮನೆಯ ಹಾಡುಗಳು ಮಾತ್ರ ಹೃದಯವನ್ನು ತಟ್ಟಲಿಲ್ಲ. ಹಾಡುವವರ ರೀತಿಯೋ, ಅರ್ಥವಾಗದ ಸಾಹಿತ್ಯವೋ ಗೊತ್ತಿಲ್ಲ. ಹಬ್ಬ ಬೇರೆಬೇರೆಯಾದರೂ ಹಾಡುಗಳು ಮಾತ್ರ ಅವವೇ. ರಾಗವಿಲ್ಲ, ಭಾವವಿಲ್ಲ. ಮಾಧುರ್ಯವಿಲ್ಲ.
ಒಮ್ಮೆ ಯಾವುದೋ ಹಬ್ಬದಲ್ಲಿ ಒತ್ತಿ ಮನೆಯಾಕೆ ಬಂದು ‘ದಳ, ಕಮಲ, ಲಿಂಗ … ‘ ಅಂತೆಲ್ಲಾ ಗೊಂಯ್ ಅಂತ ಹಾಡಿದ್ದ ನೆನಪು. ಒಂದು ದಳದಿಂದ ಪ್ರಾರಂಭವಾಗಿ ಐದಕ್ಕೆ ಬಂದಿದ್ದರು: ‘ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ… ಸತ್ಯಶಾಂತಿ ಲಿಂಗವೇ… ಆತ್ಮಜ್ಯೊತಿ ಲಿಂಗವೇ …’ ಅಂತ ಹಾಡುತ್ತಿದ್ದಾಗ ಮೆತ್ತಗೆ ನನ್ನ ಅಕ್ಕನನ್ನು ‘ಇನ್ನೂ ಎಷ್ಟು ದಳಗಳಿವೆಯಂತೆ?’ ಅಂತ ಕೇಳಿದ್ದೆ.
ವಿಶಾಲಮ್ಮನ ಕಿವಿಗೆ ಬಿದ್ದು ಕಣ್ಣೆದುರು ನಿಜವಾದ ಹಬ್ಬ ಕಾಣಿಸಿದ್ದರು!
ಈ ನನ್ನ ಔದಾಸೀನ್ಯ ಬದಲಾದದ್ದು ಶ್ರೀರಾಮಕೃಷ್ಣಾಶ್ರಮದ ಸಂಧ್ಯಾರತಿಯಲ್ಲಿ ಕುವೆಂಪು, ಜಿ. ಎಸ್. ಶಿವರುದ್ರಪ್ಪರ ಕವನಗಳನ್ನು ಹಾಡುವುದನ್ನು ಕೇಳಿದಾಗ. ಒಮ್ಮೆ ಕುವೆಂಪು ಅವರ ಜನ್ಮದಿನದಂದು ಒಂದರ ಮೇಲೊಂದು ಕುವೆಂಪು ಅವರ ಕಾವ್ಯವನ್ನು ಬ್ರಹ್ಮಚಾರಿಯೊಬ್ಬರು ಮಧುರವಾಗಿ ಹಾಡಿದಾಗ ಕವಿಯೇ ಎದುರು ಬಂದು ನಿಂತಷ್ಟು ಖುಷಿಯಾಗಿತ್ತು. ಜಿ ಎಸ್ ಶಿವರುದ್ರಪ್ಪರ ಶಾರದಾದೇವಿಯ ಮೇಲಿನ ಒಂದು ಕವಿತೆ ಹೀಗಿದೆ:
ಗಿರಿಯ ದರಿಯ
ನೆಲವ ಜಲವ
ತಬ್ಬಿ ನಿಂತ ಕರುಣೆಯ
ವಾತ್ಸಲ್ಯ ವರಣೆಯೇ!
ಬಳಿಗೆ ಬಂದ ಹಣತೆಗಳಿಗೆ
ಬೆಳಕನಿಟ್ಟ ಕಿರಣವೇ
ಮೌನಪ್ರಭಾ ವಲಯವೇ!
ಹಾಡುವವರು ಸುಶ್ರಾವ್ಯವಾಗಿ ಹಾಡುತ್ತಾರೇನೋ ನಿಜ. ಹಿಂದೆ ಗಂಡಸರ ಕಡೆಯಿಂದ ಬರುವ ರಾಗಭಾವಗಳಿಲ್ಲದ ದನಿಯನ್ನು ಮಾತ್ರ ಕೇಳಿಸಿಕೊಳ್ಳಬಾರದು ಅಷ್ಟೆ!

