“ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು. ಇಂವ ಅಳು ಧ್ವನಿಯಿಂದ ‘ಇಲ್ಲ’ ಎಂದ. ‘ಮತ್ಯಾಕ ಸಪ್ಪಗದಿ. ಏನಾತು ಹೇಳು. ನನ್ನ ಮಗ ಶ್ಯಾಣೆ .. ’ ಎಂದು ನೀಲವ್ವ ರಮಿಸುವ ಧ್ವನಿಯಲ್ಲಿ ಕೇಳಿದಳು. ಮಲ್ಲ ಜೋರಾಗಿ ಅಳಹತ್ತಿದ. ಎಲ್ಲರೂ ಗಾಬರಿಗೆ ಬಿದ್ದರು. ಇಂವ ದುಃಖಿಸಿ ದುಃಖಿಸಿ ‘ನನಗ ಪೆಪ್ಪರುಮಂಟ ಬೇಕು..’ ಅಂದ. ಎಲ್ಲರೂ ನಗತೊಡಗಿದರು.”
ಹೊಸ ತಲೆಮಾರಿನ ಯುವ ಕಥೆಗಾರ ಟಿ.ಎಸ್. ಗೊರವರ ಬರೆದ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ..

ಹೊತ್ತು ಆಗಲೇ ನೆತ್ತಿ ಮ್ಯಾಲೆ ಬಂದಿತ್ತು. ಬಿಸಿಲು ದಳ ದಳ ಸುರಿಯತೊಡಗಿತ್ತು. ಅಂಗಳದ ಬೇವಿನಗಿಡದ ಮರದ ನೆರಳೊಳಗೆ ಹತ್ತು-ಹನ್ನೆರಡು ವರ್ಷದ ಮಲ್ಲ ತನ್ನ ಪಾಡಿಗೆ ತಾನು ಮಣ್ಣಾಟವಾಡತೊಡಗಿದ್ದ. ಕೋಳಿಯೊಂದು ಕಳ್ಳ ಹೆಜ್ಜೆ ಇಡುತ್ತಾ ಆ ಕಡೆ ಈ ಕಡೆ ಕತ್ತು ಹೊರಳಿಸಿ ನೋಡುತ್ತಾ ತೆರೆದ ಮನೆಯೊಳಗೆ ಹೊರಟಿತ್ತು. ಮಲ್ಲ ಕೋಳಿ ದಿಟ್ಟಿಸಿದ. ‘ಅವನೌನ್ ಹೊರ್ಗ ಮೇಯೋದು ಬಿಟ್ಟು ಒಳ್ಗ ಕಾಳು ತಿನ್ನಾಕ ಹೊಂಟೈತಿ’ ಎಂದುಕೊಂಡು ಮಣ್ಣಿನ ಸಣ್ಣ ಹೆಂಟೆಯೊಂದನ್ನು ಕೋಳಿ ಕಡೆ ಬೀಸಿದ. ಅದು ಪುಟು ಪುಟು ಹೆಜ್ಜೆ ಹಾಕುತ್ತ ಮಣ್ಣ ಹೆಂಟೆ ಬೀಳುವುದನ್ನು ತಪ್ಪಿಸಿಕೊಂಡು ಹೊರಗೋಡಿತು. ತುಸು ಹೊತ್ತು ಕ್ರಮಿಸಿರಬೇಕು. ಮತ್ತೆ ಕೋಳಿ ಕಳ್ಳ ಹೆಜ್ಜೆ ಹಾಕುತ್ತ ಮನೆಯೊಳಗೆ ಹೋಗಲು ಹೊಂಚು ಹಾಕುತ್ತಿರುವುದು ಮಲ್ಲನ ಕಣ್ಣಿಗೆ ಬಿತ್ತು. ‘ಇವತ್ತು ಹಿಂಗ್ಯಾಕ ಮಾಡತೈತಿ ಇದು. ಓಹೋ, ತತ್ತಿ ಹಾಕಾಕ ಮಾಡ್ತಿರ್ಬೇಕು..’ ಅಂದುಕೊಂಡು ಕೋಳಿ ಮನೆಯೊಳಗೆ ಹೋಗುವ ತನಕ ಸುಮ್ಮನಿದ್ದು ಅದು ಒಳ ಹೋದ ನಂತರ ತಾನೂ ಒಳ ಹೋಗಿ ಕದ ಹಾಕಿದ. ಕೋಳಿ ಅತ್ತಿತ್ತ ಓಡಾಡಿತು. ಇವನು ಹಾಗೂ ಹೀಗೂ ಮಾಡಿ ಹಿಡಿದ. ನಂತರ ಕೋಳಿಯ ಮುಕುಳಿಯೊಳಗ ಕಿರುಬೆರಳು ಹಾಕಿದ. ಬೆರಳಿಗೆ ತತ್ತಿ ತಾಗಿತು. ಅದು ತತ್ತಿ ಹಾಕಲು ಬಂದಿರುವುದನ್ನು ಖಬಲು ಮಾಡಿಕೊಂಡ ಮಲ್ಲ ಇಚಲು ಬುಟ್ಟಿಯಲ್ಲಿ ಮುಚ್ಚಿದ.

ಮತ್ತೆ ಬೇವಿನ ಮರದ ನೆರಳಿಗೆ ಬಂದ. ಬಾಜು ಮನಿಯ ಈರ ಬಲಗೈ ಮುಷ್ಟಿ ಮಾಡಿಕೊಂಡು ಇವನ ಕಡೆಗೆ ಬಂದ. ಮಲ್ಲ ಮುಚ್ಚಿದ ಆ ಮುಷ್ಟಿಯನ್ನು ಕುತೂಹಲದಿಂದ ಕಣ್ಣಾಡಿಸಿದ. ಈರ ಜಂಬದಿಂದ ಮುಚ್ಚಿದ ಮುಷ್ಟಿಯನ್ನೇ ಅವನಿಗೆ ತೋರಿಸಿದ. ನಿರುಪಾಯನಾದ ಮಲ್ಲ ‘ಏನದು’ ಎಂದು ಕೇಳಿದ. ಈರ ‘ನಮ್ಮಪ್ಪ ಪೆಪ್ಪರುಮಂಟ ಕೊಡಿಸ್ಯಾನ. ನೋಡಿಲ್ಲೆ..’ ಎಂದು ತೋರಿಸಿ ಮತ್ತೆ ಮುಚ್ಚಿಕೊಂಡ. ‘ಈರ ನನಗೊಂದು ಕೊಡ್ಲೆ..’ ಎಂದು ಮಲ್ಲ ದುಂಬಾಲು ಬಿದ್ದ. ‘ಒಲ್ಲೆಪಾ. ನೀನವತ್ತು ಶೇಂಗಾ ಕೊಟ್ಟೆನು ನನ್ಗ..’ ಎಂದು ಆಸೆ ತೋರಿಸುತ್ತಾ ಪೆಪ್ಪರುಮಂಟು ಚೀಪತೋಡಗಿದ. ಮಲ್ಲನ ಬಾಯೊಳಗೆ ನೀರೂರತೊಡಗಿತು. ಇವನು ಪೆಪ್ಪರುಮಂಟನ್ನು ಒಮ್ಮೆಯೂ ತಿಂದಿಲ್ಲ. ಅದರ ರುಚಿ ಹೇಗಿರುತ್ತೋ ತಿಳಿಯದು. ಕೆಂಪು ಬಣ್ಣದ ಚೆಂದನೆಯ ಪೆಪ್ಪರುಮಂಟು ಮಾತ್ರ ಮಲ್ಲನಿಗೆ ಕನಸಾಗಿ ಕಾಡತೊಡಗಿತ್ತು. ಈರ ಪೆಪ್ಪರುಮಂಟು ಚೀಪುತ್ತಾ ತನ್ನ ಮನೆಯ ಕಡೆ ಓಡಿದ.

ಮಲ್ಲನಿಗೆ ನಿರಾಸೆಯಾಯಿತು. ಪೇಚು ಮೋರೆ ಹಾಕಿದ. ಪೆಪ್ಪರುಮಂಟು ರುಚಿ ಹೇಗಿರಬಹುದೆಂದು ತಿಳಿಯದೆ ಗೊಂದಲ ಅನುಭವಿಸಿದ. ಇಚಲು ಬುಟ್ಟಿಯಲ್ಲಿ ಕೋಳಿ ಮುಚ್ಚಿರುವುದು ನೆಪ್ಪಾಯಿತು. ಕೋಳಿ ಹೊರ ಹೋಗದಂತೆ ಸ್ವಲ್ಪ ಬುಟ್ಟಿ ಎತ್ತಿ ನೋಡಿದ. ತತ್ತಿ ಕಾಣಿಸಿತು. ಬುಟ್ಟಿಯನ್ನು ಪೂರ್ತಿ ಎತ್ತಿದ. ಕೋಳಿ ಓಟ ಕಿತ್ತಿತು. ತತ್ತಿ ತೆಗೆದುಕೊಂಡ. ಇನ್ನೂ ಬಿಸಿ ಇತ್ತು. ತನ್ನೆರಡೂ ಕಣ್ಣಿಗೆ ತತ್ತಿಯ ಬಿಸಿ ತಾಗಿಸಿಕೊಂಡು ಪುಳಕಗೊಂಡ. ಆಮ್ಯಾಲೆ ತತ್ತಿ ಒಯ್ದು ಉಪ್ಪಿನ ಗಡಗಿಯಲ್ಲಿಟ್ಟು ಹೊರ ಬಂದ.

ಈರ ಮತ್ತೆ ಪೆಪ್ಪರುಮಂಟು ತಿನ್ನುತ್ತಾ ಇವನ ಕಡೆ ಬರತೊಡಗಿದ್ದ. ಈ ಸಲ ಮುಷ್ಟಿ ಮುಚ್ಚಿರಲಿಲ್ಲ. ಮೂರ್ನಾಲ್ಕು ಪೆಪ್ಪರುಮಂಟು ತಿಂದು ಉಳಿದ ಒಂದೇ ಪೆಪ್ಪರುಮಂಟು ಚೀಪುವುದು ಮತ್ತೆ ಕೈಯೊಳಗೆ ಹಿಡಿದುಕೊಳ್ಳುವುದು ಮಾಡತೊಡಗಿದ್ದ. ಈರ ಪೆಪ್ಪರುಮಂಟು ಚೀಪಿದ ಜಿಬಿ ಜಿಬಿಗೆ ನೊಣ ಮುಕ್ಕರತೊಡಗಿದ್ದವು. ಕೈ ಜಾಡಿಸಿದ ತಕ್ಷಣ ಅವು ಹಾರುತ್ತಿದ್ದವು. ಮಲ್ಲನಿಗೆ ಪೆಪ್ಪರುಮಂಟು ತಿನ್ನಲೇಬೇಕೆಂಬ ಬಯಕೆ ಉಕ್ಕತೊಡಗಿತು. ಇನ್ನೇನು ಅವನು ಚೀಪಿದ್ದನ್ನೇ ಕೇಳಬೇಕು ಎನ್ನುವಷ್ಟರಲ್ಲಿ ಈರ ಪೂರ್ತಿ ಬಾಯೊಳಗೆ ಹಾಕಿ ಕಡ್ರುಮು ಕುಡ್ರುಮು ತಿಂದು ಬಿಟ್ಟ. ಕೇಳಬೇಕೆಂದುಕೊಂಡ ಮಲ್ಲನ ಮಾತು ತುಟಿ ದಾಟಲಿಲ್ಲ. ಸುಮ್ಮನೆ ಉಗುಳು ನುಂಗಿದ.

****
ದಿನ ಪೂರ್ತಿ ಚಿಮಣಿ ಬುಡ್ಡಿಯ ಹಾಗೆ ಬೆಳಕು ಚೆಲ್ಲಿದ ಸೂರ್ಯ ತನ್ನ ಗುಡಿಸಲ ಕಡೆ ಪಾದವ ಬೆಳೆಸಿದ. ಕತ್ತಲು ಇಂಚಿಂಚು ಕವಿಯತೊಡಗಿತ್ತು. ಮಲ್ಲ ಅಂಗಳ ಕಸಗೂಡಿಸಿ, ನೀರು ಚಿಮುಕಿಸಿ, ಸೀಳಿದ ಕಟ್ಟಿಗೆಯ ತುಂಡುಗಳನ್ನು ಒಲೆಯ ಮುಂದಿಟ್ಟ. ಐದಾರಿದ್ದ ಕೋಳಿಗಳನ್ನು ಮನೆಯೊಳಗೆ ಓಡಿಸಿ ಒಂದೊಂದಾಗಿ ಹಿಡಿದು ಬುಟ್ಟಿಯಲ್ಲಿ ಮುಚ್ಚಿದ. ಇದು ಇವನ ನಿತ್ಯದ ಹ್ವಾರೆ. ಇಷ್ಟು ಮಾಡುವುದರೊಳಗೆ ಅದ್ಯಾರದೋ ಹೊಲಕ್ಕೆ ಕೂಲಿ ಹೋಗಿದ್ದ ಅವನ ಅಪ್ಪ, ಅವ್ವ, ಅಣ್ಣ, ಅಕ್ಕ ಎಲ್ಲ ಬಂದರು.

ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಅದೂ ಇದೂ ಮಾತಾಡುತ್ತಾ ಕುಳಿತಿರುವಾಗಲೇ ಮಲ್ಲನ ಅಕ್ಕ ರೇಣುಕಾ ಚಹಾ ಕಾಸಿ ತಂದು ಕೊಟ್ಟಳು. ಹೀಗೆ ಚಹಾ ಕುಡಿಯುತ್ತಾ ಕುಳಿತಾಗ ಮಲ್ಲ ಅವರಪ್ಪ ಫಕ್ಕೀರಪ್ಪನಿಗೆ ‘ಎಪ್ಪಾ ಎಂಟಾನೆ ಕೊಡು’ ಎಂದ. ಫಕ್ಕೀರಪ್ಪ ‘ಯಾಕಲೆ. ಎದುಕದು..’ ಎಂದ. ‘ ಪೆಪ್ಪರುಮಂಟು ತಗೋತಿನಿ’ ಎಂದು ವೈಯ್ಯಾರದಿಂದ ಹೇಳಿದ. ‘ಅಡ್ನ್ಯಾಡಿ ಸೂಳೆಮಗ್ನ. ಪೆಪ್ಪರುಮಂಟಂಥ ಇವಂಗ ಪೆಪ್ಪರುಮಂಟ. ಹೊಟ್ಟಿಗೆ ಹತ್ತಾಕಿಲ್ಲ ನೆತ್ತಿಗೆ ಹತ್ತಾಕಿಲ್ಲ. ಯಾಡು ರೊಟ್ಟಿ ತಿಂದು ತಣ್ಣಗ ಮಕ್ಕೊ ಹೋಗು’ ಎಂದು ಜಬರಿಸಿದ. ಮಲ್ಲ ಪೆಚ್ಚು ಮೋರೆ ಹಾಕಿ ಒಲ್ಲದ ಮನಸಿನಿಂದ ಉಂಡು ಅಂಗಳದಲ್ಲಿ ಹಾಸಿದ್ದ ಹಾಸಿಗೆಯಲ್ಲಿ ಅಡ್ಡಾದ. ಪೆಪ್ಪರುಮಂಟು ತಿನ್ನಲು ದುಡ್ಡು ಹ್ಯಾಗೆ ಹೊಂದಿಸಬೇಕೆಂದು ಯೋಚಿಸುತ್ತ ನಿದ್ದೆಗೆ ಜಾರಿದ.

ಈರ ಪೆಪ್ಪರುಮಂಟು ಚೀಪಿದ ಜಿಬಿ ಜಿಬಿಗೆ ನೊಣ ಮುಕ್ಕರತೊಡಗಿದ್ದವು. ಕೈ ಜಾಡಿಸಿದ ತಕ್ಷಣ ಅವು ಹಾರುತ್ತಿದ್ದವು. ಮಲ್ಲನಿಗೆ ಪೆಪ್ಪರುಮಂಟು ತಿನ್ನಲೇಬೇಕೆಂಬ ಬಯಕೆ ಉಕ್ಕತೊಡಗಿತು. ಇನ್ನೇನು ಅವನು ಚೀಪಿದ್ದನ್ನೇ ಕೇಳಬೇಕು ಎನ್ನುವಷ್ಟರಲ್ಲಿ ಈರ ಪೂರ್ತಿ ಬಾಯೊಳಗೆ ಹಾಕಿ ಕಡ್ರುಮು ಕುಡ್ರುಮು ತಿಂದು ಬಿಟ್ಟ.

ಕನಸು ಬಿತ್ತು. ಈರ ಪೆಪ್ಪರುಮಂಟು ತಿನ್ನತೊಡಗಿದ್ದ. ಮಲ್ಲ ನೋಡುತ್ತಲೇ ನೊಣವಾಗಿ ಈರನ ಮುಷ್ಟಿಯಲ್ಲಿ ಹಿಡಿದಿದ್ದ ಪೆಪ್ಪರುಮಂಟಗಳನ್ನು ಒಂದೊಂದೇ ತಿನ್ನ ತೊಡಗಿದ. ತನ್ನ ಕೈಯೊಳಗಿನ ಪೆಪ್ಪರುಮಂಟು ಖಾಲಿಯಾದಂತೆನಿಸಿ ಈರ ಮುಷ್ಟಿ ನೋಡಿಕೊಂಡ. ನೊಣ ಪೆಪ್ಪರುಮಂಟು ತಿನ್ನತೊಡಗಿತ್ತು. ಮುಷ್ಟಿ ಬಿಗಿ ಮಾಡಿ ಹಿಚುಕತೊಡಗಿದ. ನೊಣ ಹೊರ ಬರಲಾರದೆ ಮುಷ್ಟಿಯಲ್ಲೇ ವಿಲ ವಿಲ ಒದ್ದಾಡತೊಡಗಿತು. ಮಲ್ಲನಿಗೆ ದಢಗ್ಗನೆ ಎಚ್ಚರವಾಯ್ತು. ಮೈ ಪೂರ ಬೆವತು ಬಿಟ್ಟಿದ್ದ. ಬಾಯಿ ಆರಿತ್ತು. ಅವರಪ್ಪನ ತಲೆ ದಿಂಬಿನ ಹತ್ತಿರ ನೀರು ತುಂಬಿ ಇಟ್ಟಿದ್ದ ಚರಿಗೆ ತೆಗೆದುಕೊಂಡು ಗಟ ಗಟ ಕುಡಿದು ಮತ್ತೆ ಹಾಸಿಗೆಯಲ್ಲಿ ಅಡ್ಡಾದ.

ಮರುದಿನ. ಫಕ್ಕೀರಪ್ಪ ತನ್ನ ಅಂಗಿ ಗೂಟಕ್ಕೆ ನೇತು ಹಾಕಿ ಜಳಕಕ್ಕೆ ಹೋಗಿದ್ದ. ಅವನವ್ವ ನೀಲವ್ವ ರೊಟ್ಟಿ ಮಾಡತೊಡಗಿದ್ದಳು. ರೇಣುಕಾ ಹೊರಗೆ ಬಟ್ಟೆ ತೊಳೆಯತೊಡಗಿದ್ದಳು. ಇವನ ಅಣ್ಣ ಬಸ್ಯಾ ಅಂಗಳದಲ್ಲಿ ಒಡಗಟ್ಟಿಗೆ ಸೀಳತೊಡಗಿದ್ದ. ಇದೇ ಸರಿಯಾದ ಸಮಯವೆಂದು ಗೂಟಕ್ಕೆ ನೇತು ಹಾಕಿದ್ದ ಅಂಗಿಯ ಬಕ್ಕಣದಲ್ಲಿ ದುಡ್ಡು ಹುಡುಕಿದ. ಅದರಲ್ಲಿ ಚಪ್ಪಡಿ ಚುಟ್ಟಾದ ಕಟ್ಟೊಂದನು ಬಿಟ್ಟು ನಯಾಪೈಸೆಯೂ ಇರಲಿಲ್ಲ. ಪೆಪ್ಪರುಮಂಟು ತಿನ್ನುವ ಮಲ್ಲನ ಆಸೆಗೆ ಮತ್ತೆ ತಣ್ಣೀರು ಸುರಿದಂತಾಯ್ತು. ಏನೂ ಮಾಡದವನಂತೆ ಸೀದಾ ಹೊರಗೆ ಬಂದ.

ಇವರೆಲ್ಲಾ ಊಟಗೀಟ ಮಾಡಿಕೊಂಡು ಮತ್ತೆ ಕೂಲಿ ಹೋದರು. ಮಲ್ಲನಿಗೆ ಅದೇನೂ ಮಾಡಬೇಕೋ ತಿಳಿಯದಾಯಿತು. ಕಣ್ಣು ಮುಚ್ಚಿದರೂ, ತೆರೆದರೂ ಪೆಪ್ಪರುಮಂಟವೇ ಕಾಣಿಸಿದಂತಾಗಿ ತೀವ್ರ ಚಿಂತೆಗೀಡಾದ. ಮನೆಯೊಳಗೆ ಹೋಗಿ ಅವರವ್ವ ಅದೆಲ್ಲಾದರೂ ರೊಕ್ಕವಿಟ್ಟಿರಬಹುದೇ ಎಂದು ಉಪ್ಪಿನ ಗಡಗಿ, ಸಾಸಿವೆ, ಜೀರಿಗೆ ಡಬ್ಬಿ ಎಲ್ಲ ತಡಕಾಡಿದ. ಒಂದು ಬಿಲ್ಲೆಯೂ ಸಿಗಲಿಲ್ಲ. ಮಲ್ಲನಿಗೆ ಅಳುವೇ ಬಾಯಿಗೆ ಬಂದಂತೆನಿಸಿತು. ಕಣ್ರೆಪ್ಪೆ ತೇವಗೊಂಡವು. ಅಂಗಿಯಿಂದ ಒರೆಸಿಕೊಂಡು ನಿರುಪಾಯನಾಗಿ ಅಂಗಳದಲ್ಲಿನ ಬೇವಿನಗಿಡದ ಕೆಳಗೆ ಬಂದು ಕುಳಿತ. ತನ್ನಪ್ಪ ಊರೊಳಗೆ ಜಾತ್ರೆ ಇದ್ದಾಗಲೇ ರೊಕ್ಕ ಕೊಡದವನು. ಇನ್ನು ಪೆಪ್ಪರುಮಂಟ ತಿನ್ನಲು ಕೊಡಲಾರನೆಂಬುದು ಮಲ್ಲನಿಗೆ ನಿಕ್ಕಿಯಾಯಿತು. ಚಿಂತೆಯಲ್ಲಿ ಮುಳುಗಿದ. ಈರ ಬಂದ. ಮಲ್ಲ ಅವನ ಕೈಗಳನ್ನು ನೋಡಿದ. ಅವು ಖಾಲಿ ಇದ್ದವು. ರಾತ್ರಿ ತಾನು ನೊಣವಾಗಿದ್ದ ಕನಸು ನೆಪ್ಪಾಗಿ ಚೂರು ಭಯವಾಯಿತು.

‘ಇವತ್ತು ಪೆಪ್ಪರುಮಂಟ ತಂದಿಲ್ಲನು..’ ಎಂದ ಮಲ್ಲ. ‘ನಮ್ಮಪ್ಪ ದಿನಾ ರೊಕ್ಕ ಕೊಡಲ್ಲ ಯಾವಾಗಾದ್ರೊಮ್ಮೆ ಕೊಡ್ತಾನ. ಕೊಟ್ಟಾಗಷ್ಟೇ ನಾನು ಪೆಪ್ಪರುಮಂಟು ತಗೊಂತೀನಿ..’ ಎಂದ ಈರ. ಮಲ್ಲ ಕ್ಷಣ ಹೊತ್ತು ತಡೆದು ‘ಯಾರ ಅಂಗಡ್ಯಾಗ ತಗೊಂತಿ’ ಎಂದ. ‘ಅಲ್ಲೆತಲಾ ಬಸಪ್ಪನ ಅಂಗಡಿ. ಅಲ್ಲೇ ತಗೊಳ್ಳೋದು. ನೀನು ಒಮ್ಮಿನೂ ಪೆಪ್ಪರುಮಂಟು ತಗೊಂಡೇ ಇಲ್ಲನು..’ ಎಂದು ಈರ ಆಶ್ಚರ್ಯ ವ್ಯಕ್ತಪಡಿಸಿದ. ಮಲ್ಲನಿಗೆ ಮುಖದ ಮ್ಯಾಲೆ ಯಾರೋ ರಪ್ಪನೆ ಹೊಡೆದಂಗ ಅನಿಸಿತು. ಏನೂ ಮಾತಾಡದೇ ಮಲ್ಲ ಕಾಲಬೆರಳಿಂದ ನೆಲದ ಮ್ಯಾಲೆ ಚಿತ್ರ ಬಿಡಿಸುತ್ತ ನಿಂತ. ಈರ ತಮ್ಮಪ್ಪ ಬರುವ ಹೊತ್ತಾತೆಂದು ಮನೆಯ ಕಡೆ ಓಟ ಕಿತ್ತ.

ತುಸು ಹೊತ್ತು ಕಳೆದಿರಬೇಕು. ಮಲ್ಲ ತಮ್ಮ ಓಣಿಯ ಕೊನೆಗೆ ಇರುವ ಬಸಪ್ಪನ ಅಂಗಡಿ ಕಡೆ ಹೊರಟ. ಅದು ಅಂಗಡಿಯೆಂದರೆ ಅಂಗಡಿಯಲ್ಲ. ಕಟ್ಟಿಗೆಯ ಕಪಾಟು. ಅದರೊಳಗೆ ಬಸಪ್ಪ ತರೇಹವಾರಿ ತಿನಿಸು, ಚುಟ್ಟಾ, ಪಾನ್ ಪರಾಗ್, ಎಲೆ- ಅಡಿಕೆ, ಪಾಪಡಿ, ಚಾಕೊಲೆಟ್, ಗಾಜಿನ ಡಬ್ಬದಲ್ಲಿ ಪೆಪ್ಪರುಮಂಟ ಇಟ್ಟಿದ್ದ. ಮಲ್ಲನಿಗೆ ಆ ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟು ಬಾಯೊಳಗೆ ನೀರು ತರಿಸಿದವು. ಅವುಗಳನ್ನೇ ಕಣ್ತುಂಬಿಕೊಳ್ಳುತ್ತಾ ಅಲ್ಲೇ ಕಪಾಟಿನ ಎದುರಿಗಿದ್ದ ಹಾಸುಗಲ್ಲಿನ ಮ್ಯಾಲೆ ಕುಳಿತ. ಆ ಪೆಪ್ಪರುಮಂಟದ ಡಬ್ಬವನ್ನು ಕದ್ದು ಓಟ ಕೀಳಬೇಕೆನಿಸಿತವನಿಗೆ. ಆದರೆ ಅದು ಅಷ್ಟು ಸುಲಭವಲ್ಲವೆಂದು ಭಾವಿಸಿದ. ಮತ್ತೆ ತಾನು ರಾತ್ರಿ ಕನಸಿನಲ್ಲಿ ನೊಣವಾಗಿದ್ದು ನೆನಪಾಯಿತು. ನೊಣವಾಗಿದ್ದರೆ ಆ ಡಬ್ಬದೊಳಗೆ ಹೋಗಿ ಎಲ್ಲ ಪೆಪ್ಪರುಮಂಟ ತಿನ್ನಬಹುದಿತ್ತು ಅಂದುಕೊಂಡ. ಮರುಕ್ಷಣವೇ ತಾನು ಡಬ್ಬದಲ್ಲಿ ಹೋದಾಗ ಬಸಪ್ಪ ಡಬ್ಬ ಮುಚ್ಚಿಬಿಟ್ಟರೆ ಎಂದುಕೊಂಡು ಸಣ್ಣಗೆ ಬೆವರಿದ.

ಮಧ್ಯಾಹ್ನದ ಹೊತ್ತಾದ್ದರಿಂದ ಬಸಪ್ಪ ಊಟಕ್ಕೆ ಹೋಗಲು ಅಣಿಯಾದ. ಕಪಾಟಿಗೆ ಕದ ಹಾಕಿ ಕೀಲಿಪತ್ತಾ ಒತ್ತಿದ. ಅದು ಲಾಕ್ ಆಯಿತು. ಮಲ್ಲನಿಗೆ ಅಚ್ಚರಿಯಾಯಿತು. ತಮ್ಮ ಮನೆಯಲ್ಲಿ ಪತ್ತಾಕ್ಕೆ ಕೀಲಿ ಹಾಕಬೇಕು. ಇದು ಒತ್ತಿದರೆ ಲಾಕ್ ಆಗಿದ್ದು ಅವನೊಳಗೆ ಬಗೆಹರಿಯದ ಪ್ರಶ್ನೆಯೊಂದು ಒಡಮೂಡಿತು. ಬಸಪ್ಪ ಮನೆಗೆ ಹೋದ. ಇಂವ ಅಲ್ಲೇ ಹಾಸುಗಲ್ಲ ಮ್ಯಾಲೆ ಕುಳಿತು ಕಾಲಹರಣ ಮಾಡತೊಡಗಿದ. ತಾಸೊತ್ತು ಕಳೆದ ಮ್ಯಾಲೆ ಬಸಪ್ಪ ಮತ್ತೆ ಬಂದ. ಪತ್ತಾಕ್ಕೆ ಕೀಲಿ ಹಾಕಿ ತಿರುವಿ, ಕದ ತೆಗೆದ. ಬಸಪ್ಪ ಕೀಲಿ ತೆಗೆದು ಕದದಲ್ಲೇ ಬಿಟ್ಟಿದ್ದರಿಂದ ಮಲ್ಲ ಕುತೂಹಲದಿಂದ ಆ ಕೀಲಿ ಒತ್ತಿದ. ಲಾಕ್ ಆಯ್ತು. ಚಾವಿಯಿಂದ ತಿರುವಿದ. ಕೀಲಿ ತೆರೆಯಿತು. ಹೀಗೆ ಒಂದೆರಡು ಸಲ ಮಾಡಿದ. ಮಜಾ ಅನಿಸಿತು. ಬಸಪ್ಪ ಅದನ್ನು ನೋಡಿ ‘ಮೂರಾಬಟ್ಟಿ ಮಾಡಿಲೇ ಮಾರಾಯ. ಆಡಾಕ ಬ್ಯಾರೆ ಏನೂ ಇಲ್ಲನೂ ನಿನ್ಗ. ಕೀಲಿಗೆ ಗಂಟು ಬಿದ್ದಿಯಲ..’ ಅಂದ. ಇಂವ ಕಸಿವಿಸಿಯಿಂದ ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟವನ್ನು ಕಣ್ಣಲ್ಲೇ ತಿನ್ನುವವನಂತೆ ನೋಡುತ್ತಾ ಅಲ್ಲಿಂದ ಮೆಲ್ಲಗೆ ಜಾಗ ಖಾಲಿ ಮಾಡಿದ.
***
ರಾತ್ರಿ ಎಲ್ಲರೂ ಹುರಿದ ಶೇಂಗಾ ತಿನ್ನುತ್ತಾ ಕುಳಿತಿದ್ದರು. ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು. ಇಂವ ಅಳು ಧ್ವನಿಯಿಂದ ‘ಇಲ್ಲ’ ಎಂದ. ‘ಮತ್ಯಾಕ ಸಪ್ಪಗದಿ. ಏನಾತು ಹೇಳು. ನನ್ನ ಮಗ ಶ್ಯಾಣೆ .. ’ ಎಂದು ನೀಲವ್ವ ರಮಿಸುವ ಧ್ವನಿಯಲ್ಲಿ ಕೇಳಿದಳು. ಮಲ್ಲ ಜೋರಾಗಿ ಅಳಹತ್ತಿದ. ಎಲ್ಲರೂ ಗಾಬರಿಗೆ ಬಿದ್ದರು. ಇಂವ ದುಃಖಿಸಿ ದುಃಖಿಸಿ ‘ನನಗ ಪೆಪ್ಪರುಮಂಟ ಬೇಕು..’ ಅಂದ. ಎಲ್ಲರೂ ನಗತೊಡಗಿದರು. ನೀಲವ್ವ ‘ರಾಡ್ಯಾ ಪೆಪ್ಪರುಮಂಟಕ್ಕ ಅಳ್ತಾರನು ಯಾರರ. ನಾನು ಏನು ಆಗೇತಪಾ ಅಂತಾ ಗಾಬರಿ ಆಗಿದ್ದೆ. ನೋಡಪಾ ಅಂಗಡ್ಯಾಂದು ತಿನ್ನೋದು ರೂಢಿ ಮಾಡ್ಕೊಬಾರ್ದು. ಅಂಗಡ್ಯಾಂದು ಹೊಟ್ಟಿಗೆ ಹತ್ತಾಕಿಲ್ಲ ನೆತ್ತಿಗೆ ಹತ್ತಾಕಿಲ್ಲ. ಆರಾಮು ಮನಾಗ ಉಂಡು ಇರ್ಬೇಕಪಾ..’ ಎಂದು ಸಂತೈಸಿದಳು.

ತನ್ನಪ್ಪ ಊರೊಳಗೆ ಜಾತ್ರೆ ಇದ್ದಾಗಲೇ ರೊಕ್ಕ ಕೊಡದವನು. ಇನ್ನು ಪೆಪ್ಪರುಮಂಟ ತಿನ್ನಲು ಕೊಡಲಾರನೆಂಬುದು ಮಲ್ಲನಿಗೆ ನಿಕ್ಕಿಯಾಯಿತು. ಚಿಂತೆಯಲ್ಲಿ ಮುಳುಗಿದ. ಈರ ಬಂದ. ಮಲ್ಲ ಅವನ ಕೈಗಳನ್ನು ನೋಡಿದ. ಅವು ಖಾಲಿ ಇದ್ದವು. ರಾತ್ರಿ ತಾನು ನೊಣವಾಗಿದ್ದ ಕನಸು ನೆಪ್ಪಾಗಿ ಚೂರು ಭಯವಾಯಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

‘ಪೆಪ್ಪರುಮಂಟ ಕೊಡಿಸಂತ ನಿನ್ನಿಯಿಂದ ಗಂಟು ಬಿದ್ದಾನಿವ. ಅಂತಾವೆಲ್ಲಾ ತಿನ್ಬಾರದಪಾ ಅಂತ ಹೇಳೇನಿ. ಮತ್ತ ಅದ್ನ ಕೇಳಾಕತ್ಯಾನ ನೋಡಿಂವ’ ಎಂದ ಫಕ್ಕೀರಪ್ಪ. ರೇಣುಕಾ ಅವನ ಕಣ್ಣೀರು ಒರೆಸಿ ಹುರಿದ ಶೇಂಗಾ ಕೊಟ್ಟಳು. ಒಂದೊಂದೆ ತಿನ್ನತೊಡಗಿದ. ಆದರೂ ಅವನಿಗೆ ಸಮಾಧಾನ ಅನಿಸಲಿಲ್ಲ. ಕಣ್ಣೆದುರು ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟು ಗೋಚರವಾದಂತೆನಿಸಿ ಮತ್ತೆ ದುಗುಡಗೊಂಡ.
***
ಪೆಪ್ಪರುಮಂಟು ನೆನಪಾಗಿ ಮತ್ತೆ ಮಧ್ಯಾಹ್ನ ಮಲ್ಲ ಬಸಪ್ಪನ ಅಂಗಡಿ ಕಡೆ ಹೊರಟ. ಬಸಪ್ಪ ಗಲ್ಲೆಪೆಟ್ಟಿಗಿಯಿಂದ ರೊಕ್ಕ ತೆಗೆದು ಎಣಿಸಿ ಮತ್ತೆ ಗಲ್ಲೆ ಮುಚ್ಚಿದ. ಮಲ್ಲ ಅಲ್ಲೇ ಹಾಸುಗಲ್ಲ ಮ್ಯಾಲೆ ಕುಳಿತ. ಸಮಯ ಸರಿಯುತ್ತಲೇ ಇತ್ತು. ಊಟ ಮಾಡಿ ಬಂದಂತಿದ್ದ ಬಸಪ್ಪ ಕುಳಿತಲ್ಲೇ ತೂಕಡಿಸತೊಡಗಿದ್ದ. ಮಲ್ಲನಿಗೆ ಕದದಲ್ಲೇ ಬಿಟ್ಟಿದ್ದ ಕೀಲಿ ಕಾಣಿಸಿತು. ಅದರಲ್ಲಿ ಎರಡು ಚಾವಿ ಇದ್ದವು. ಹಗೂರ ಒಂದು ಚಾವಿ ಬಿಚ್ಚಿಕೊಂಡು ಏನೂ ಆಗೇ ಇಲ್ಲವೆನ್ನುವಂತೆ ಅಲ್ಲಿಂದ ಕಾಲ್ಕಿತ್ತ. ಅವನು ಪೆಪ್ಪರುಮಂಟು ತಿಂದಷ್ಟೇ ಖುಷಿಗೊಂಡಿದ್ದ.
ರಾತ್ರಿ ಊಟ ಮಾಡುವಾಗ ನೀಲವ್ವ ಮಲ್ಲನನ್ನು ಗಮನಿಸಿದಳು. ಅಂವ ಉಲ್ಲಸಿತನಾಗಿದ್ದ. ಆಕೆಯ ತುಟಿಯಲ್ಲಿ ಸಮಾಧಾನದ ನಗು ಅರಳಿತು. ಇಂವ ಖುಷಿಯಿಂದ ಇರುವುದನ್ನು ರೇಣುಕಾ ಕೂಡ ಗಮನಿಸಿದಳು. ‘ಏನು ಮಲ್ಲ ಖುಷಿ ಅದಿಯಲ. ಯಾರಾರ ಪೆಪ್ಪರುಮಂಟ ಕೊಡಿಸಿದ್ರನು..’ ಎಂದಳು. ‘ಯಾರೂ ಕೊಡಿಸಿಲ್ಲ. ದಿನಾ ಇರುವಂಗ ಅದೀನಿ..’ ಅಂತ ಮಲ್ಲ ರೇಣುಕಾಳ ಕಡೆ ನಗು ಚೆಲ್ಲಿದ. ‘ನಿಂದೇನೂ ಹಕೀಕತ್ತ ತಿಳಿಯಲ್ಲಪ ನನ್ಗ. ನಿನ್ನೆರ ಸಪ್ಪಗ ಇದ್ದಿ. ಈಗ ನೋಡಿದ್ರ ಖುಷಿಯಿಂದ ಅದಿ’ ಅಂತ ನೀಲವ್ವ ಮಲ್ಲನಿಗೆ ಲಟಿಗೆ ಮುರಿದಳು. ಊಟ ಮುಗಿಸಿ ಎಲ್ಲರೂ ಅಂಗಳದಲ್ಲಿ ಅಡ್ಡಾದರು.

ರೇಣುಕಾ ಮಲ್ಲನೊಂದಿಗೆ ಅದೂ ಇದೂ ಮಾತಾಡುತ್ತ ಮಲಗಿದಲ್ಲೇ ನಗೆಚಾಟಿಕೆ ಮಾಡತೊಡಗಿದ್ದಳು. ಇಂವ ಗೊಳ್ಳನೆ ನಗುತ್ತಿದ್ದ. ಫಕ್ಕೀರಪ್ಪ ಸಿಟ್ಟಿನಿಂದ ‘ಹೇ ಮಲ್ಕೊಬೇ. ನೀನು ಅವನಂಗ ಸಣ್ಣ ಹುಡುಗಿ ಆಗಿಯನು. ಹೊಲ್ದಾಗ ದಣ್ಕೊಂಡು ಬಂದಿಲ್ಲಾ. ಸುಮ್ನ ಮಲ್ಗಬಾರ್ದ..’ ಅಂದ. ತುಟಿಪಿಟಕ್ಕೆನ್ನದೆ ಸುಮ್ಮನೆ ಮಲಗಿದರು.

ಮಲ್ಲನಿಗೆ ಮಾತ್ರ ನಿದ್ದೆ ಕಣ್ಣ ಬಳಿ ಸುಳಿಯುತ್ತಿಲ್ಲ. ಚಡ್ಡಿಯ ಜೇಬಿನಲ್ಲಿ ಕೈಯಾಡಿಸಿದ. ಚಾವಿ ತಾಗಿತು. ಅಲ್ಪ ಸ್ವಲ್ಪ ಇದ್ದ ನಿದ್ದೆಯೂ ಓಟ ಕಿತ್ತಿತು. ಊರು ಆಗಲೇ ಮಲಗಿತ್ತು. ಇಂವ ಎದ್ದು ಆ ಕಡೆ ಈ ಕಡೆ ನೋಡಿದ. ಎಲ್ಲರೂ ನಿದ್ದೆಯ ವಶವಾಗಿದ್ದರು. ಎದ್ದವನೆ ಬಸಪ್ಪನ ಅಂಗಡಿ ಕಡೆ ಹೊರಟ. ಚಂದಿರನ ಹರಕು ಮುರುಕು ಬೆಳಕು ಚೆಲ್ಲಿತ್ತು. ದಾರಿಯಲ್ಲಿ ಒಂದೆರಡು ನಾಯಿ ಬೊಗಳಿದವು. ಹೆದರಿಕೆ ಅನಿಸಿತು. ನಂತರ ನಾಯಿ ಬಾಲ ಅಲ್ಲಾಡಿಸುತ್ತ ತೆಪ್ಪಗಾದವು. ಚೂರು ಧೈರ್ಯ ತಂದುಕೊಂಡು ಮತ್ತೆ ಹೆಜ್ಜೆ ಹಾಕಿದ. ಬಸಪ್ಪನ ಕಪಾಟಿನ ಹತ್ತಿರ ಬಂದ. ಅದು ಇವನಿಗಾಗಿಯೇ ಕಾದು ನಿಂತಂತೆ ಗೋಚರಿಸತೊಡಗಿತ್ತು. ಹಾಸುಗಲ್ಲ ಹತ್ತಿರ ನಿಂತು ಸುತ್ತಲೂ ದಿಟ್ಟಿಸಿದ. ನರಪಿಳ್ಳೆಯ ಸುಳಿವೂ ಇರಲಿಲ್ಲ. ಯಾರಾದರೂ ನೋಡಿಯಾರೆಂಬ ಭಯ ಅವನ ಕಣ್ಣುಗಳಲ್ಲಿ ಮಡುಗಟ್ಟಿತ್ತು. ಕೀಲಿ ತಗೆದು ಕದ ತರೆದ. ಕಪಾಟಿನ ಒಳ ಹೋಗಿ ಮತ್ತೆ ಕದ ಮುಚ್ಚಿಕೊಂಡ. ಕಪಾಟಿನ ತುಂಬಾ ಆವರಿಸಿದ ಗವ್ವನೆ ಕತ್ತಲು ಭಯ ತರಿಸಿತು. ಕಣ್ಣಿಗೆ ಏನೂ ಕಾಣುತ್ತಿಲ್ಲ. ಮತ್ತೆ ಹಗೂರ ಕದ ತೆರೆದ. ಕಪಾಟಿನೊಳಗೆ ಚಂದಿರನ ಬೆಳಕು ಚೆಲ್ಲಿತು. ಆ ಕಡೆ ಬುಡ್ಡಿ ಚಿಮಣಿ ಗೋಚರಿಸಿತು. ಅಲ್ಲೇ ಇದ್ದ ಕಡ್ಡಿ ಪೆಟ್ಟಿಗೆ ತೆಗೆದುಕೊಂಡು ಕದ ಮುಚ್ಚಿದ. ಮತ್ತೆ ಕತ್ತಲಾವರಿಸಿತು. ಕಡ್ಡಿ ಗೀರಿ ಬುಡ್ಡಿ ಚಿಮಣಿಗೆ ಹಚ್ಚಿದ. ಕಪಾಟಿನ ತುಂಬಾ ಬೆಳಕು ಪ್ರಜ್ವಲಿಸಿತು.

ಅಂಗಡಿ ತುಂಬಾ ತಿನಿಸುಗಳು ಗೋಚರಿಸಿದವು. ಯಾವುದು ತಿನ್ನಬೇಕು, ಯಾವುದು ತಿನ್ನಬಾರದು ತಿಳಿಯದಾಯಿತು. ಅಲ್ಲಿ ಆ ಕಡೆ ಪೆಪ್ಪರುಮಂಟದ ಡಬ್ಬಿ ಗೋಚರಿಸಿತು. ಆ ಡಬ್ಬಿ ತೆಗೆದುಕೊಂಡ. ಅವನ ಕಣ್ಣೊಳಗೂ ಬುಡ್ಡಿ ಚಿಮಣಿಯ ಬೆಳಕು ಮೂಡಿತು. ಒಂದು ಪೆಪ್ಪರುಮಂಟು ತೆಗೆದುಕೊಂಡು ಬಾಯೊಳಗಿಟ್ಟುಕೊಂಡ. ಅವನ ಸಂತಸಕ್ಕೆ ಪಾರವೇ ಇರಲಿಲ್ಲ. ಅದರ ರುಚಿಗೆ ಮನಸೋತ. ತಿಂದೇ ತಿಂದ. ಈರ ನೆನಪಾದ. ಅವನ ಮುಷ್ಟಿಯಲ್ಲಿದ್ದ ಐದಾರು ಪೆಪ್ಪರುಮಂಟುಗಳು ಕಂಡಂತಾದವು. ತನ್ನ ಕೈಯ್ಯೊಳಗೆ ಪೆಪ್ಪರುಮಂಟದ ಡಬ್ಬಿಯೇ ಇರುವುದು ಅವನೊಳಗೆ ಹೆಮ್ಮೆ ಮೂಡಿಸಿತು. ಪೆಪ್ಪರುಮಂಟ ತಿನ್ನಲು ತಾನು ನೊಣವಾಗಿದ್ದು ನೆಪ್ಪಾಗಿ ಅಧೀರಗೊಂಡ. ಕಪಾಟನ್ನು ಹೊರಗಿನಿಂದ ಯಾರಾದರೂ ಕದ ಹಾಕಿಕೊಂಡು ಹೋದಾರೆನಿಸಿ ಸಣ್ಣಗೆ ಬೆವರಿದ. ಹೊರಗೆ ಯಾರೋ ಕೆಮ್ಮಿದಂತೆನಿಸಿತು. ಕಪಾಟಿನೊಳಗಿನ ಬೆಳಕು ಕಂಡು ಈ ಕಡೆಗೆ ಬಂದಾರು ಎಂದುಕೊಂಡು ಬುಡ್ಡಿ ಚಿಮಣಿ ಆರಿಸಲು ಅವಸರಿಸಿದ. ಉಫ್ ಎಂದು ಊದಿದ. ಅವನು ಊದಿದಾಗ ಬುಡ್ಡಿ ಚಿಮಣಿಯ ದೀಪದ ಕುಡಿ ಹತ್ತಿರದ ಹಾಳೆಗಳಿಗೆ ತಾಗಿ ಸಣ್ಣಗೆ ಉರಿ ಹತ್ತಿಕೊಂಡಿತು. ಅದನ್ನು ಆರಿಸಲು ಹೋದ. ಉರಿ ಇವನಿಗೆ ಮಣಿಯಲಿಲ್ಲ. ಬುಡ್ಡಿಚಿಮಣಿಗೂ ಹತ್ತಿದ್ದರಿಂದ ಕಪಾಟು ದಿಂಗು ದಿಂಗು ಉರಿಯತೊಡಗಿತು. ಉರಿಯ ಕೆನ್ನಾಲಿಗೆಗೆ ರಕ್ತದ ರುಚಿಯೂ ತಾಗಿ, ಉರಿ ಆಕಾಶದೆತ್ತರ ಚಾಚಿಕೊಂಡಿತು.

(ಇತ್ತೀಚೆಗೆ ಬಿಡುಗಡೆಯಾದ ಲೇಖಕರ ‘ಮಲ್ಲಿಗೆ ಹೂವಿನ ಸಖ’ ಕಥಾ ಸಂಕಲನದಿಂದ ಆಯ್ದ ಕತೆ. ಈ ಸಂಕಲನದ ಕುರಿತ ಆಶಾ ಜಗದೀಶ್ ಅವರ ಬರಹ ನಾಳಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ)