ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಮೈಮೇಲೆ ಬಾಸುಂಡೆ ಬರೋ ಹಾಗೆ ಹೊಡೆತ ತಿಂದ ನಾನು ಮನೆಗೆ ಹೋಗಿ ನಡೆದ ಘಟನೆ ತಿಳಿಸಿದೆ. ನಮ್ಮಜ್ಜನೂ ಪಂಕ್ಚರ್ ಮಾಡಿದ ತಪ್ಪಿಗೆ ನನಗೇ ಬಯ್ದರು. ಪಂಕ್ಚರ್ ಎಂದರೇನೆಂದೇ ತಿಳಿಯದ ನಾನು ಅವರಿಂದಲೂ ಉಗಿಸಿಕೊಂಡೆ. ಇದರ ಪರಿಣಾಮ ಅಂದಿನಿಂದ ಶಾಲೆಗೆ ಹೋಗೋದನ್ನೇ ಬಿಟ್ಟೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎರಡನೆಯ ಕಂತು ನಿಮ್ಮ ಓದಿಗೆ
ಶಾಲಾ ದಾಖಲಾತಿಗೆ ಕೈ ಬೆರಳುಗಳನ್ನು ಕಿವಿಗೆ ಮುಟ್ಟಿಸೋಕೆ ವಿಫಲನಾದ ನಂತರ ನನ್ನಜ್ಜ ತುಂಬಾ ನಿರಾಸೆಯಿಂದ ಮನೆಗೆ ಕರೆದುಕೊಂಡು ಹೋದರು. ಮನೆಗೆ ಹೋದ ನಾನು, ಯಾಕೋ? ಏನೋ? ಶಿಶುವಿಹಾರಕ್ಕೂ ಸರಿಯಾಗಿ ಹೋಗದೇ ಮನೆಯಲ್ಲಿಯೇ ಆರಾಮಾಗಿ ಇರುತ್ತಿದ್ದೆ. ಮನುಷ್ಯನ ಮನಸ್ಸು ಅಷ್ಟೇ ಅಲ್ವಾ? ಯಾವತ್ತೂ ಆರಾಮಾಗಿ ಇರೋಕೆ ಇಷ್ಟಪಡುತ್ತೆ. ಅದರಲ್ಲೂ ಸಣ್ಣ ಮಕ್ಕಳು ಇನ್ನೂ ಸ್ವಲ್ಪ ಜಾಸ್ತೀನೇ ಆರಾಮಾಗಿ ಇರುತ್ತವೆ. ಮನೆಲಾದ್ರೂ ಸುಮ್ಮನಿದ್ದಿದ್ದರೆ ನನ್ನನ್ನು ಮನೆಯಿಂದ ಸ್ವಲ್ಪ ಸಮಯವಾದ್ರೂ ದೂರ ಅಟ್ಟಬೇಕು ಅಂತಾ ನಮ್ಮಜ್ಜ ಯೋಚಿಸ್ತಾ ಇರಲಿಲ್ಲವೇನೋ?! ಆದರೆ ಬರೀ ತರಲೆ ಮಾಡ್ತಿದ್ದೆ.
ಒಮ್ಮೆ ಅಟ್ಟದ ಮೇಲಿಂದ ಬಿದ್ದು ಗದ್ದ ಹೊಡೆದುಕೊಂಡು ರಕ್ತ ಸೋರುವಂತಹ ಗಾಯ ಮಾಡಿಕೊಂಡಾಗ, ಅಜ್ಜ ಊರಲ್ಲಿದ್ದ ಕರಿಬಸಪ್ಪ ಡಾಕ್ಟ್ರು ಹತ್ತಿರ ಹೋಗಿ ಬ್ಯಾಂಡೇಜ್ ಮಾಡಿಸ್ಕೊಂಡು ಬಂದಿದ್ದರು. ಆ ಡಾಕ್ಟರ್ ತನ್ನ ರೂಮಿನಲ್ಲಿ ಒಂದು ಸೀಮೆ ಎಣ್ಣೆ ಸ್ಟೌವ್, ಅದರ ಮೇಲೆ ಕುದಿಯುವ ನೀರಿನ ಪಾತ್ರೆ ಅದರಲ್ಲಿ ಸೂಜಿ ಇಟ್ಕೊಂಡು ಇರ್ತಾ ಇದ್ರು. ನಾವು ಆಸ್ಪತ್ರೆಗೆ ಹೋದಾಗ ಬಿಸಿನೀರಲ್ಲಿದ್ದ ಸೂಜಿಯನ್ನು ಇಕ್ಕಳದಿಂದ ಎತ್ತಿಕೊಂಡು ಅದನ್ನು ಸಿರೆಂಜ್ಗೆ ಸೇರಿಸಿ, ಅದರೊಳಗೆ ಔಷಧಿ ತುಂಬಿ ಕುಂಡೆ ಮೇಲೆ ಇಂಜಕ್ಷನ್ ಮಾಡ್ತಾ ಇದ್ರು. ಆಮೇಲೆ ಅದನ್ನು ಕ್ಲೀನ್ ಮಾಡಲು, ಅದರೊಳಗೆ ನೀರು ತುಂಬಿ ಕಾರಂಜಿಯಂತೆ ಹೊರಗೆ ಬಿಡುತ್ತಿದ್ದುದೇ ವಿಶೇಷ ರೀತಿ ಕಾಣ್ತಾ ಇತ್ತು. ಈಗಿನಂತೆ ಆಗ ಯೂಸ್ ಆಂಡ್ ಥ್ರೋ ಸಿರೆಂಜ್ ಇರಲಿಲ್ಲ. ನನಗೆ ಸೂಜಿ ಚುಚ್ಚಿಸಿಕೊಳ್ಳೋದು ಅಂದ್ರೆ ಯಮಹಿಂಸೆ! ಜೋರಾಗಿ ಚೀರುತ್ತಾ ಕಣ್ಣೀರ ಖೋಡಿ ಹರಿಸುತ್ತಿದ್ದೆ. ಇಂಜೆಕ್ಷನ್ ಕೊಡಲು ಬಂದಾಗ ಊರ ತುಂಬಾ ಕೇಳುವಂತೆ ಅಬ್ಬರಿಸಿ ಗೋಳಾಡಿದರೂ ಬಿಡದ ಕರಿಬಸಪ್ಪ ಡಾಕ್ಟ್ರು ಕುಂಡೆ ಮೇಲೆ ಚುಚ್ಚಿ ಬಿಡ್ತಾ ಇದ್ರು. ಇದಕ್ಕೆ ನಮ್ಮಜ್ಜನ ಸಾಥ್ ಬೇರೆ! ಆಮೇಲೆ ನನ್ನ ಸಮಾಧಾನಪಡಿಸಲು ಗ್ಲೂಕೋಸ್ ಬ್ರಾಂಡಿನ ಬಿಸ್ಕೆಟ್ಸ್ ಕೊಡಿಸಿಕೊಂಡು ಹೋಗುತ್ತಿದ್ದರು. ಅದು ಬೇಗ ಖಾಲಿಯಾಗಬಾರದು ಅಂತಾ ಒಂದೊಂದೇ ಬಿಸ್ಕತ್ತು ತೆಗೆದುಕೊಂಡು ಚೂರು ಚೂರೇ ಕಚ್ಚಿಕೊಂಡು ನಿಧಾನಕ್ಕೆ ಸೀಪುತ್ತಿದ್ದೆ!
ಹೀಗೆ ಒಂದೆಡು ಸಲ ನಾನು ತರಲೆ ಮಾಡಿ ನೋವು ಮಾಡಿಕೊಂಡಾಗ ಮನೆಯಲ್ಲಿದ್ದರೆ ನಾನು ಗತಿ ಮುಟ್ಟೋಲ್ಲ ಎಂದುಕೊಂಡು, ಅಜ್ಜ ಊರಲ್ಲಿ ಯಾರದೋ ಶಿಫಾರಸ್ಸು ಮಾಡಿಸಿ ಮತ್ತೆ ಶಾಲೆಗೆ ಬಿಟ್ಟು ಬಂದರು. ಆದರೆ ದಾಖಲು ಮಾಡಿಕೊಳ್ಳಲಿಲ್ಲದೇ ಹೋದರೂ ಕುಳಿತುಕೊಂಡು ಹೋಗಲು ಅನುಮತಿಸಿದರು. ಆ ಶಾಲೆಗೆ ಬರುತ್ತಿದ್ದ ಮೇಷ್ಟ್ರುಗಳಲ್ಲಿ ಬಸ್ಸಪ್ಪ ಮೇಷ್ಟ್ರು ಹಾಗೂ ಬುಡೆನ್ ಸಾಬ್ ಮೇಷ್ಟ್ರು ಮಾತ್ರ ಸೈಕಲ್ ತರುತ್ತಾ ಇದ್ದರು. ಉಳಿದವರು ಬಸ್ಸಿಗೆ, ಒಂದಿಬ್ಬರು ಅದೇ ಊರವರು ಆಗಿದ್ರಿಂದ ನಡೆದೇ ಬರುತ್ತಿದ್ದರು. ಬುಡೆನ್ ಸಾಬ್ ಮೇಷ್ಟ್ರು ಸೈಕಲ್ಲನ್ನ ಶಾಲೆಯ ಮುಂಬದಿಯ ವರಾಂಡದಲ್ಲಿ ಇಟ್ಟರೆ, ಬಸ್ಸಪ್ಪ ಮೇಷ್ಟ್ರು ಮಾತ್ರ ಒಂದನೇ ತರಗತಿಯ ಕೊಠಡಿಯ ರೂಮಿನ ಪಕ್ಕದಲ್ಲಿದ್ದ ಮಾಡಿನಲ್ಲಿ ಇಡುತ್ತಿದ್ದರು. ಬಸ್ಸಪ್ಪ ಮೇಷ್ಟ್ರಿಗೆ ಸೈಕಲ್ ಬಗ್ಗೆ ಎಷ್ಟು ವ್ಯಾಮೋಹ ಇತ್ತೆಂದರೆ ಅದನ್ನು ತರಗತಿಯ ವಿರಾಮದ ಅವಧಿಯಲ್ಲಿ ಒಂದೆರಡು ಬಾರಿ ಹಳೇ ಬಟ್ಟೆಯಿಂದ ಉಜ್ಜುತ್ತಿದ್ದರು. ಅವರು ಬೇರೆ ತರಗತಿಗೆ ಹೋದಾಗ ಅದರ ಉಸ್ತುವಾರಿಯನ್ನು ಎರಡನೇ ತರಗತಿಯ ಮಾನಿಟರ್ ರೆಹಮಾನ್ಗೆ ಕೊಟ್ಟು ಹೋಗ್ತಿದ್ರು. ಆಗ ನಮಗೆ ಒಂದು ಮತ್ತು ಎರಡನೇ ತರಗತಿಯ ಮಕ್ಕಳನ್ನು ಒಂದೇ ಕಡೆಗೆ ಕೂರಿಸುತ್ತಿದ್ದರು.
ಸೈಕಲ್ಲಿನ ಮುಂಭಾಗದ ರಿಮ್ಮಿನ ಮೇಲೆ ಕಾಣುವ ಹಾರುವ ಹುಲಿ ಚಿತ್ರ, ಹಿಡಿಕೆಯ ಮೇಲೊಂದು ಬೆಲ್ಲು, ಮುಂಭಾಗದಲ್ಲೊಂದು ಬಲ್ಬ್, ಸೈಕಲ್ ಸೀಟಿನ ಮೇಲೊಂದು ಕವರ್ರು, ಮುಂಭಾಗದಲ್ಲಿ ಸೀಟು, ಹಿಂಭಾಗದಲ್ಲೂ ವಸ್ತುಗಳನ್ನು ಇಟ್ಟುಕೊಂಡು ಹೋಗಬಹುದಾದ ವ್ಯವಸ್ಥೆ, ಸೈಕಲ್ಲಿನ ಬೆತ್ತಲೆ ದೇಹವು ಎಲ್ಲೂ ಕಾಣಬಾರದೆಂಬಂತೆ ಅದಕ್ಕೆ ಲೆದರ್ ಶೀಟಿನ ಹೊದಿಕೆ, ಸೈಕಲ್ಗೆ ಹಾಕಿದ ಪ್ಲಾಸ್ಟಿಕ್ ಹೂವಿನ ಹಾರ ಹೀಗೆ ಸೈಕಲ್ ಎಲ್ಲರ ಕಣ್ಣು ಕುಕ್ಕುವಂತೆ ಕಾಣುತ್ತಿತ್ತು. ಇದನ್ನು ಅವರ ಮಡದಿಯ ಮನೆಯವರು ಅವರಿಗೆ ಮದುವೆಯ ಉಡುಗೊರೆಯೆಂದು ಕೊಟ್ಟಿದ್ದರಂತೆ ಎಂದು ದೊಡ್ಡವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದ್ದೆ. ಅವರು ಅದನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಸೈಕಲ್ ಮೇಲೆ ಅವರಿಗೆ ತುಂಬಾ ಪ್ರೀತಿ. ಮಕ್ಕಳಿಗಿಂತಲೂ ತುಸು ಹೆಚ್ಚೇ!!!
ನಾವು ಆಸ್ಪತ್ರೆಗೆ ಹೋದಾಗ ಬಿಸಿನೀರಲ್ಲಿದ್ದ ಸೂಜಿಯನ್ನು ಇಕ್ಕಳದಿಂದ ಎತ್ತಿಕೊಂಡು ಅದನ್ನು ಸಿರೆಂಜ್ಗೆ ಸೇರಿಸಿ, ಅದರೊಳಗೆ ಔಷಧಿ ತುಂಬಿ ಕುಂಡೆ ಮೇಲೆ ಇಂಜಕ್ಷನ್ ಮಾಡ್ತಾ ಇದ್ರು. ಆಮೇಲೆ ಅದನ್ನು ಕ್ಲೀನ್ ಮಾಡಲು, ಅದರೊಳಗೆ ನೀರು ತುಂಬಿ ಕಾರಂಜಿಯಂತೆ ಹೊರಗೆ ಬಿಡುತ್ತಿದ್ದುದೇ ವಿಶೇಷ ರೀತಿ ಕಾಣ್ತಾ ಇತ್ತು.
ಇನ್ನು ಬಸ್ಸಪ್ಪ ಮೇಷ್ಟ್ರ ಬಗ್ಗೆ ಹೇಳಬೇಕೆಂದರೆ ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದವರು. ಹಳೇ ಫಿಲಂನಲ್ಲಿ ಇರುತ್ತಿದ್ದ ಮೇಷ್ಟ್ರು ರೀತಿ ಕಚ್ಚೆ ಪಂಜೆ, ಬಿಳಿ ಅಂಗಿ ಧರಿಸ್ತಾ ಇದ್ರು. ತಲೆಯೆಲ್ಲಾ ಬಿಳಿ ಕೂದಲಿನಿಂದ ತುಂಬಿದ್ದು ಅಲ್ಲಲ್ಲಿ ಕೂದಲು ಖಾಲಿಯಾಗಿ ಬೊಕ್ಕ ತಲೆ ಕಾಣುತ್ತಿತ್ತು. ಗಟ್ಟಿಮುಟ್ಟಾಗಿದ್ದ ದೇಹವನ್ನವರು ಹೊಂದಿದ್ದರು ಎಂದು ಅವರನ್ನು ನೋಡಿಯೇ ತಿಳಿಯಬಹುದಾಗಿತ್ತು. ತುಂಬಾ ಕೋಪಿಷ್ಠ ಸ್ವಭಾವದವರು. ಚಾಡಿ ಹೇಳೋದನ್ನು ಅವರು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುತ್ತಿರಲಿಲ್ಲ. ಶಾಲೇಲಿ ಯಾರಾದ್ರೂ ಹುಡುಗರು ಚಾಡಿ ಹೇಳಲು ಹೋದರೆ ಅವರು ಮೊದಲು ಹೊಡೀತಿದ್ದು ಚಾಡಿ ಹೇಳೋಕೆ ಹೋದವನನ್ನೇ ಹೊರತು ತಪ್ಪು ಮಾಡಿದವನನ್ನಲ್ಲ! ಹೀಗಾಗಿ ಎಲ್ಲಾ ಹುಡುಗರು ಅವರ ಬಳಿ ಯಾರ ಬಗ್ಗೆಯೂ ಹೇಳಲು ಹೋಗುತ್ತಿರಲಿಲ್ಲ. ಅವರ ಹೊಡೆತಗಳೂ ಅಷ್ಟೇ. ಹಸಿ ಕೋಲು( ಜುಳುಪಿ) ಗಳಲ್ಲಿ ಮೈಮೇಲೆ ಬಾರಿಸುತ್ತಿದ್ದರಿಂದ ಬಾಸುಂಡೆಗಳು ಎದ್ದು ಕಾಣುತ್ತಿದ್ದವು. ಕಂಚಿನ ಕಂಠ ಅವರದ್ದು. ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ’ ಎಂಬ ಪದ್ಯ ಮಾಡುತ್ತಿದ್ದರೆ ಹುಡುಗರ ಮನಸ್ಸನ್ನು ಅವರತ್ತ ಕೇಂದ್ರೀಕರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು.
ನಾನು ತರಗತಿಗೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಎಂಬಂತೆ ಆಗೊಮ್ಮೆ, ಈಗೊಮ್ಮೆ ಮಾತ್ರ ಹೋಗುತ್ತಿದ್ದೆ. ನನ್ನ ಗ್ರಹಚಾರಕ್ಕೆ, ಅಪರೂಪಕ್ಕೆ ಒಂದು ದಿನ ಶಾಲೆಗೆ ಹೋಗಿದ್ದಾಗ ಬಸ್ಸಪ್ಪ ಮೇಷ್ಟ್ರ ಸೈಕಲ್ಲನ್ನು ಯಾರೋ ಪಿನ್ ಚುಚ್ಚಿ ಪಂಕ್ಚರ್ ಮಾಡಿದ್ದರು. ಅದರ ಗಾಳಿಯೆಲ್ಲಾ ಹೋಗಿ ಟೈರು ನೆಲಕ್ಕೆ ಒತ್ತಿ ಕೂತಿತ್ತು. ತರಗತಿ ಮಾನೀಟರ್ ರೆಹಮಾನ್ ಸಮೇತ ತರಗತಿಯ ಹುಡುಗರು ಇದನ್ನು ನೋಡಿ ಅದರ ಗಾಳಿ ತುಂಬಿಸಲು ಶಾಲೆಯಲ್ಲಿ ಅವರು ಇಟ್ಟುಕೊಂಡಿದ್ದ ಗಾಳಿ ಪಂಪಿನಿಂದ ಪ್ರಯತ್ನ ಪಟ್ಟಿದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲಾ ವಿಫಲವಾಗಿ, ಸೈಕಲ್ ಉಸ್ತುವಾರಿಯ ಜವಾಬ್ದಾರಿ ವಹಿಸಿಕೊಂಡಿದ್ದವರು ಹೆದರಿದ್ದಾರೆ. ಈ ಕೆಲಸವನ್ನು ಯಾರ ಮೇಲಾದರೂ ಹೊತ್ತು ಹಾಕಿ ಅವರು ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿದ್ದರು ಎನಿಸುತ್ತೆ. ಆಗ ಅವರಿಗೆ ಸಿಕ್ಕವನೇ ನಾನು! ಪಂಕ್ಚರ್ ಎಂದರೇನು? ಎಂದು ತಿಳಿಯದ ನನಗೆ ‘ಸೈಕಲ್ ಪಂಕ್ಚರ್ ಮಾಡಿದ್ದು ನೀನಾ?’ ಎಂದು ಕೇಳಿದರು. ಏನೂ ಅರಿಯದ ವಯಸ್ಸು ಬೇರೆ.’ಹ್ಞೂ’ ಅಂದು ಬಕ್ರಾ ಆಗಿದ್ದೆ!
ಎಂದಿನಂತೆ ಬಸ್ಸಪ್ಪ ಮೇಷ್ಟ್ರು ಪಾಠ ಮಾಡಲು ಬಂದಾಗ ಸೈಕಲ್ ಪಂಕ್ಚರ್ ಅದ ವಿಷಯ ಕೇಳಿ ದೂರ್ವಾಸ ಮುನಿಯಂತೆ ಕಡು ಕೋಪಿಷ್ಟರಾಗಿದ್ದರು. ಇದೇ ಸಮಯಕ್ಕೆ ರೆಹಮಾನ್ ‘ಸರ್, ಸೈಕಲ್ ಪಂಕ್ಚರ್ ಮಾಡಿದವರು ಇವನೇ’ ಎಂದು ನನ್ನ ಕಡೆ ತೋರಿಸಿದನು. ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿ (ತೆಳ್ಳನೆಯ ಹಸಿ ಕೋಲು) ಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಮೈಮೇಲೆ ಬಾಸುಂಡೆ ಬರೋ ಹಾಗೆ ಹೊಡೆತ ತಿಂದ ನಾನು ಮನೆಗೆ ಹೋಗಿ ನಡೆದ ಘಟನೆ ತಿಳಿಸಿದೆ. ನಮ್ಮಜ್ಜನೂ ಪಂಕ್ಚರ್ ಮಾಡಿದ ತಪ್ಪಿಗೆ ನನಗೇ ಬಯ್ದರು. ಪಂಕ್ಚರ್ ಎಂದರೇನೆಂದೇ ತಿಳಿಯದ ನಾನು ಅವರಿಂದಲೂ ಉಗಿಸಿಕೊಂಡೆ. ಇದರ ಪರಿಣಾಮ ಅಂದಿನಿಂದ ಶಾಲೆಗೆ ಹೋಗೋದನ್ನೇ ಬಿಟ್ಟೆ! ಬಸ್ಸಪ್ಪ ಮೇಷ್ಟ್ರು ಶಾಲೆಗೆ ಬರುತ್ತಿಲ್ಲ ಎಂದು ತಿಳಿದ ಮೇಲೆ ಮಾರನೇ ವರ್ಷ ಒಂದನೇ ತರಗತಿಗೆ ಸೇರಿ ಹೋಗೋಕೆ ಶುರು ಮಾಡಿದೆ.( ಬಸ್ಸಪ್ಪ ಮೇಷ್ಟ್ರಿಗೆ ನಿವೃತ್ತಿ ಆದ ಕಾರಣ)
ಈಗ ಶಾಲೆಗೆ ಸೈಕಲ್ ತರೋ ಮೇಷ್ಟ್ರು ಯಾರೂ ಇಲ್ಲವೇನೋ? ನಾನೂ ಮೇಷ್ಟ್ರಾದ ಈ ಸಮಯದಲ್ಲಿ ಸೈಕಲ್ ಕಂಡ ಕೂಡಲೇ ಕೆಲವೊಮ್ಮೆ ಬಸ್ಸಪ್ಪ ಮೇಷ್ಟ್ರು ನೆನಪಿಗೆ ಬರ್ತಾರೆ. ಅದರಲ್ಲೂ ‘ಚಾಡಿ ಯಾವತ್ತೂ ಹೇಳಬಾರದು’ ಎಂದು ಹೇಳುತ್ತಾ ಚಾಡಿ ಹೇಳಿದವರಿಗೇ ಹೊಡೆಯುತ್ತಿದ್ದವರು ಅಂದೇಕೆ ಮಾನಿಟರ್ ಚಾಡಿ ಮಾತು ಕೇಳಿ ನನ್ನನ್ನು ಹೊಡೆದರು? ಎಂಬ ಪ್ರಶ್ನೆಯೂ ಮೂಡುತ್ತದೆ. ನಮ್ಮ ಕಿವಿ ಯಾವತ್ತೂ ಹಿತ್ತಾಳೆ ಕಿವಿ ಆಗ್ಬಾರ್ದು, ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು ಎಂಬ ಮೌಲ್ಯಗಳನ್ನು ಅವರಿಂದ ಕಲಿತೆ. ಬಸ್ಸಪ್ಪ ಮೇಷ್ಟ್ರು ಇಂದು ಇಲ್ಲ. ಆದರೆ ಚಾಡಿ ಮಾತಿನ ಬಗ್ಗೆ ಅವರು ತೋರಿಸುತ್ತಿದ್ದ ಪ್ರತಿಕ್ರಿಯೆಯನ್ನು ಇಂದಿಗೂ ಮರೆಯಲಾಗುತ್ತಿಲ್ಲ. ಇಂದು ಅವರು ಎಲ್ಲಿದ್ದಾರೋ? ಹೇಗಿದ್ದಾರೋ? ಗೊತ್ತಿಲ್ಲ. ಆದರೆ ಅವರ ಮುಖ ಮಾತ್ರ ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿ ಕುಳಿತಿದೆ. ‘ಅವರಂಗೆ ಮಾಡ್ತಾರೆ, ಇವರಿಂಗೆ ಮಾಡ್ತಾರೆ’ ಅಂತಾ ಯಾರಾದ್ರೂ ಚಾಡಿ ಮಾತು ಹೇಳೋಕೆ ಬಂದ್ರೆ ನನಗೆ ತಕ್ಷಣ ಬಸ್ಸಪ್ಪ ಮೇಷ್ಟ್ರು ನೆನಪಿಗೆ ಬರ್ತಾರೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Super 👏👏
ಬಸವನ ಗೌಡ್ರ ಬದುಕಿನ ಕುಲುಮೆಯಿಂದ ಒಂದೊಂದೆ ಅವ(ಹ)ತಾರಗಳು ಬರ್ಲಿ
ಸರ್, ನಿಮ್ಮ ಪ್ರಾಥಮಿಕ ಶಿಕ್ಷಣದ ಶಿಕ್ಷೆಯ ಅನುಭವ ಪಾಠದ ಬರಹ ಓದಿನ ಖುಷಿ ಕೊಟ್ಟಿತು. ಪುಣ್ಯ ನೀವು ಶಿಕ್ಷೆಗೆ ಅಂಜಿ ಶಾಲೆಯನ್ನೇ ಬಿಟ್ಟಿಲ್ಲ.ಅದೇ ಶಿಕ್ಷಕರಾಗಿ,ಅನುಭವ ಪಾಠ ಹೊತ್ತು,ಇವತ್ತು ಎಷ್ಟೋ ಸರ್ಕಾರಿ ಶಾಲೆಯ ಮಕ್ಕಳ ಬಾಳಿಗೆ ಬೆಳಕಾಗಿರುವದು ಅತ್ಯಂತ ಖುಷಿಯ ಸಂಗತಿ.