ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಂದು ಪುಟ್ಟ ಪಟ್ಟಣದ ನಿಲ್ದಾಣವನ್ನೂ ಹೊಕ್ಕು, ಆತಿಥ್ಯ ಸ್ವೀಕರಿಸಿ, ಟಾಟಾ ಹೇಳಿಯೇ ಅದು ಹೊರಡುವುದು. ಅಂಥಾ ನಿಲ್ದಾಣಗಳಲ್ಲಿ ನುಗ್ಗಿ ಹತ್ತಿಕೊಳ್ಳುವ, ಉದ್ಯೋಗಕ್ಕಾಗಿ ಪಕ್ಕದೂರಿನ ಶಾಲೆಗೋ, ಆಚೆ ಪಟ್ಟಣಕ್ಕೋ ಹೋಗುವ ಉದ್ಯೋಗಿಗಳು. ಬೆಂಗಳೂರಿನಷ್ಟು ಕಿಕ್ಕಿರಿಯದ, ಬರೀ ಆಕಾಶ ಕಾಣುವಷ್ಟು ಗಗನಚುಂಬಿಗಳಿರುವ ಕಟ್ಟಡಗಳ ಸಮುದ್ರವಲ್ಲದ, ಎಲ್ಲವನ್ನೂ ಮಾರಾಟಕ್ಕಿಡದ, ಕೊಂಚ ಸಾಗಿದರೆ ಮುಗಿದು ಹೋಗಿ ಕಾಡು, ಮರಗಳ ಹಳ್ಳಿಯೊಂದು ಪ್ರತ್ಯಕ್ಷವಾಗುವ ಈ ಪುಟ್ಟ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಇವರೆಲ್ಲ ಎಷ್ಟು ಪುಣ್ಯಾತ್ಮರಲ್ಲವೇ ಎಂದುಕೊಳ್ಳುವಾಗಲೇ ಅವರು ಬಸ್ಸಿಳಿದು ಹೆದ್ದಾರಿಯಿಂದ ಕವಲೊಡೆದ ರಸ್ತೆಯೊಂದರಲ್ಲಿ ನಡೆಯುತ್ತ ಮರೆಯಾಗುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಬೆಂಗಳೂರಿನಿಂದ ಊರಿಗೆ ಬರುವಾಗ ರಾತ್ರಿ ಪ್ರಯಾಣಗಳಿಗಿಂತ ಹಗಲಿನ ಪ್ರಯಾಣವೇ ಹೆಚ್ಚು ಆಪ್ತ. ರಾತ್ರಿ ಪ್ರಯಾಣದಲ್ಲಿ ಬೆಂಗಳೂರಿನಿಂದ ತೀರ್ಥಹಳ್ಳಿ ತನಕದ ಮುನ್ನೂರಾ ಮೊವ್ವತ್ತೂ ಚಿಲ್ಲರೆ ಕಿಲೋಮೀಟರ್ಗಳ ಹಾದಿ ಕೇವಲ ಏಳೋ ಎಂಟೋ ಸಲ ಬಸ್ಸಿನ ಕಿಟಿಕಿಯಿಂದ ಇಣುಕಿದಾಗ ಕಂಡು ಮರೆಯಾದ ವೀಡಿಯೋ ತುಣುಕಾಗಿಯಷ್ಟೇ ದಾಖಲಾಗುತ್ತದೆ. ಈಗಷ್ಟೇ ಬಸ್ಸೇರಿ ಅಪ್ಪರ್ ಸೀಟಿನ ಮಾಳಿಗೆಯ ಹತ್ತಿ ಕುಳಿತು ಕಿಟಕಿಯ ಕರ್ಟನ್ ಸರಿಸಿದರೆ ಹೊರಗಡೆ ತಮ್ತಮ್ಮ ಬಸ್ಸಿನ ದಾರಿ ಕಾಯುತ್ತಿರುವ ನಿರೀಕ್ಷೆಗಣ್ಣಿನ ಪಯಣಿಗರು. ಗುಂಪಾಗಿ ನಿಂತು ರಸ್ತೆಯಲ್ಲಿ ಬರುತ್ತಿರುವ ಪ್ರತಿಯೊಂದು ಬಸ್ಸಿನ ಬೋರ್ಡನ್ನೂ ಕಣ್ಣು ಕಿರಿದಾಗಿಸಿ ಓದುತ್ತ, ಯಾವ್ಯಾವುದೋ ಬಸ್ಸಿಗೆ ಕೈ ಅಡ್ಡ ತಂದು ಸೀಟಿಲ್ಲ ಕಣ್ರೀ ಅನಿಸಿಕೊಳ್ಳುತ್ತ ಕೊನೆಗೆ ಯಾವುದೋ ಕಂಡಕ್ಟರ್ ಜೊತೆ ಒಪ್ಪಂದ ಮಾಡಿಕೊಂಡು ಸೀಟು ಗಿಟ್ಟಿಸಿ ಊರ ದಾರಿ ಹಿಡಿಯುವ ಅನಿವಾಸಿಗಳು. ಅವರನ್ನು ನೋಡ ನೋಡುತ್ತಲೇ ನಿದ್ರೆ ಆವರಿಸುತ್ತದೆ.
ಮಧ್ಯೆ ಎಲ್ಲೋ ಬಸ್ಸು ಹೀಯಾ ಎಂದು ಅರಚಿ ಎಡಕ್ಕೆ ಹೊರಳಿದ ವಾಲುವಿಕೆಗೆ ಎದ್ದು ಕಿಟಕಿಯಲ್ಲಿ ನೋಡಿದರೆ ಹೊರಗೆ ಸಿಟಿಯೆಂಬ ಸಿಟಿಯೇ ಮಾಯ! ಬಸ್ಸಿನ ಬೆಳಕು ಬಿದ್ದಷ್ಟೇ ಜಾಗದಲ್ಲಿ ಪ್ರತ್ಯಕ್ಷವಾಗುತ್ತಿರುವ ಪೊದೆ ಮರಗಳು. ಆಚೆ ಧಾಳಿಗೆ ತಯಾರಾಗಿ ನಿಂತ ಪಿಶಾಚ ಗಣದಂತೆ ಕಾಣುವ ಕಪ್ಪಗಿನ ಮರಗಿಡಗಳು. ಅದರಾಚೆಗೆಲ್ಲೋ ದೂರದಲ್ಲಿ ಆಕಾಶದ್ದೇ ಮುಂದುವರಿದ ಭಾಗದಂತೆ ಅಲ್ಲೊಂದು ಇಲ್ಲೊಂದು ಮಿಣುಕು ದೀಪ ಉರಿಸಿಕೊಂಡು ನಿಂತಿರುವ ಹೆಸರು ಗೊತ್ತಿಲ್ಲದ ಯಾವುದೋ ಶಹರ. ಈ ಕ್ಷಣಕ್ಕೆ ಅದರಲ್ಲಿ ಬೆಚ್ಚಗೆ ಮಲಗಿರುವ ಜೀವಗಳ ಕಲ್ಪನೆ ಮೂಡುತ್ತಿರುವಂತೆಯೇ ಜೊಂಪು ಏರಿ ಮತ್ತೆ ನಿದ್ರೆ.
ಮತ್ತೊಂದು ಗಂಟೆಯ ಬಳಿಕ ಇನ್ನೊಂದು ವಾಲುವಿಕೆಗೆ ಎಚ್ಚರಾಗಿ ಪರದೆ ಸರಿಸಿದರೆ ಹೊರಗಡೆ ಹಳದಿ ಬೆಳಕಿನ ಶಹರ. ಬೆಂಗಳೂರಿನಿಂದ ಹಾದು ಬರುವ ಹೆದ್ದಾರಿಯ ಪಕ್ಕದಲ್ಲಿರುವ ಒಂದೇ ಕಾರಣಕ್ಕೆ ಬೆಳೆದು ಪಟ್ಟಣವಾಗಿರುವ ಅದರ ಬೀದಿಗಳೆಲ್ಲ ಈಗ ನಿರ್ಜನವಾಗಿ ಬೇರೆಯದೇ ಲೋಕದಂತೆ ಕಾಣುತ್ತಿವೆ. ಮುಚ್ಚಿದ ಅಂಗಡಿಗಳ ಬಾಗಿಲುಗಳ ಮೇಲೆ ಹಾಗೂ ‘ಕಾರ್ತೀಕ್ ಎಂಟರ್ ಪ್ರೈಸಸ್’ ಎಂಬ ಅವುಗಳ ನಾಮಫಲಕಗಳ ಮೇಲೆ ಬೀದಿ ದೀಪದ ಹಳದಿ ಬೆಳಕು ಬಿದ್ದು ಅವೆಲ್ಲ ಈಗ ಯಾವುದೋ ಕಳೆದು ಹೋದ ನಾಗರೀಕತೆಯೊಂದರ ಪಳೆಯುಳಿಕೆಗಳಂತೆ ಭಾಸವಾಗುತ್ತಿವೆ. ಬೆಳಗಿನ ಹೊತ್ತಿನಲ್ಲಿ ಕಾಲು ಹಾಕಲೂ ಆಗದಷ್ಟು ಜನ ಓಡಾಡಿಕೊಂಡಿರುವ ಬೀದಿಗಳು ಇವೇನಾ ಎನ್ನುವ ಮಟ್ಟಿಗೆ ಅವೀಗ ನಿರ್ಜನ. ಇಲ್ಲೇನಾದರೂ ಬಸ್ಸು ನಿಂತು ಕೆಳಗಿಳಿದುಬಿಟ್ಟರೆ ಹಳದಿ ಬೆಳಕಿನ ಈ ಕಳೆದುಹೋದ ಶಹರದಲ್ಲಿ ನಾವೂ ಕಿನ್ನರರೋ, ಕಿಂಪುರುಷರೋ ಆಗುತ್ತೇವೆಂಬ ಚಂದದ ಭ್ರಮೆ.
ಶುಭ ವಿದಾಯ ಎಂದು ಬರೆದುಕೊಂಡ ಪಟ್ಟಣದ ಹೊರಗಿನ ಹೆಬ್ಬಾಗಿಲಿನಡಿ ಹಾದು ಹೊರಗೆ ಹೊರಟಿದೆ ಬಸ್ಸು. ಹೆದ್ದಾರಿಗಳ ದಾರಿಯಲ್ಲಿನ ಎಲ್ಲ ಶಹರಗಳ ಆಚೆಗೂ ಕಡ್ಡಾಯವಾಗಿ ನಿಂತಿರುವ ಹೋಟೆಲ್, ಢಾಬಾಗಳ ಸಾಲಿನಲ್ಲೀಗ ಅದು ಓಡುತ್ತಿದೆ. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ನಿಂತು ಬಣ್ಣ ಬದಲಿಸುವ ಬೆಳಕಿನ ಕೋಲು ಝಳಪಿಸುತ್ತಾ ನಮ್ಮ ಹೋಟೆಲ್ಗೆ ಬನ್ನಿ ಎಂದು ಆಹ್ವಾನಿಸುವ ಸೆಕ್ಯುರಿಟಿಗಳು. ಹಿಂದೆಂದೋ ಜಾತ್ರೆಯಲ್ಲಿ ಅಪ್ಪ ಕೊಡಿಸಿದ್ದ ಮಿಣಿ ಮಿಣಿ ಕೋಲನ್ನು ಹಿಡಿದು ಇನ್ನಾದರೂ ಆಡುತ್ತಲೇ ಇರುವ ಪೋರರಂತೆ ಕಾಣುವ ಅಂಥವರ ಪೈಕಿ ಯಾರದೋ ಕರೆಗೆ ಓಗೊಟ್ಟ ಬಸ್ಸು ಕೊನೆಗೂ ಒಂದು ಕಡೆ ನಿಲ್ಲುತ್ತದೆ. ಟೀ ಕಾಫಿಗೆ ಹತ್ ನಿಮಿಷ ಟೈಮಿದೆ ನೋಡ್ರೀ ಎಂದು ಕೂಗುತ್ತ ಸಾಲು ಸೀಟುಗಳ ನಡುವೆ ಹಾಯುವ ಕ್ಲೀನರ್ ಕೂಗಿಗೆ ಎದ್ದು ಆಕಳಿಸಿ ಬಸ್ಸಿಳಿದರೆ ಎದುರಿಗೆ ಸರ್ರೆಂದು ಹಾದು ಮರೆಯಾಗುವ ವಾಹನಗಳ ಹೆದ್ದಾರಿ. ಅದರಾಚೆಗೆ ಮಿಣುಕು ನಕ್ಷತ್ರಗಳು ತೇಲುತ್ತಿರುವ ಕಪ್ಪು ಸಮುದ್ರದಂತೆ ಕಾಣುವ ಕತ್ತಲು. ಪಕ್ಕದ ಗೂಡಂಗಡಿಯವನು ಬಗ್ಗಿಸಿ ಕೊಟ್ಟ ಬಿಸಿ ಬಿಸಿ ಕಾಫಿಯನ್ನು ಹೀರುತ್ತ ಹೆದ್ದಾರಿಯಂಚಿಗೆ ಬಂದು ನಿಂತರೆ ಸಾವಿರ ಹಳ್ಳಿಗಳನ್ನು ಒಂದು ಬೃಹತ್ ಶಹರಕ್ಕೆ ತಂದು ಪೋಣಿಸಿದ, ದಿನವಿಡೀ ಇಲ್ಲೇ ನಿಂತು ಶಹರವೂ ಅಲ್ಲದ, ಹಳ್ಳಿಯೂ ಅಲ್ಲದ ಈ ವಿನೂತನ ದೃಶ್ಯವನ್ನು ನೋಡುತ್ತಲೇ ಇರುವ ಈ ಹೆದ್ದಾರಿ ಎಂಥಾ ಪುಣ್ಯಾತ್ಮನಲ್ಲವೇ ಅನಿಸುತ್ತದೆ.
ಈ ನಡುವೆ ಬಸ್ಸಿಳಿದ ಪ್ರಯಾಣಿಕರಿಗೆ ಎಲ್ಲಿ ಬಸ್ಸು ತಮ್ಮನ್ನು ಬಿಟ್ಟು ಓಡುತ್ತದೋ, ಈ ಕತ್ತಲು-ಬೆಳಕಿನ ಹೆದ್ದಾರಿಯಲ್ಲಿ ತಾವು ಅನಾಥರಾಗಿ ನಿಲ್ಲಬೇಕಾಗುತ್ತದೋ ಎಂಬ ಭಯ. ಎಂದೋ, ಯಾರೋ ಹೀಗೆ ನಡುರಾತ್ರಿ ಎಲ್ಲೋ ಇಳಿದು ಬಸ್ಸು ತಪ್ಪಿಸಿಕೊಂಡ ಕಥೆಯೊಂದು ನೆನ್ನೆ ಮೊನ್ನೆ ಕೇಳಿದಂತೆ ನೆನಪಾಗಿ ಬಿಸಿ ಬಿಸಿ ಫ್ರೈಡ್ ರೈಸ್ ತಿನ್ನುವ ಮನಸ್ಸಿದ್ದರೂ ಆರ್ಡರ್ ಮಾಡದೆ ಬರಿದೆ ಕಾಫಿಗೇ ತೃಪ್ತರಾಗುತ್ತಾರೆ. ಆದಷ್ಟೂ ಡ್ರೈವರ್-ಕಂಡಕ್ಟರ್ಗೆ ಸಮೀಪದಲ್ಲೇ ಸೀಟು ಹಿಡಿಯುತ್ತಾರೆ. ಅವರು ತಿನ್ನುವ ಒಂದೊಂದೂ ತುತ್ತಿಗೆ ತಮ್ಮ ವೇಗವನ್ನು ಹೊಂದಿಸಿಕೊಂಡು, ಅವರಿಗಿಂತ ಮೊದಲು ಏಳಲೆಂದು ಬಿಸಿ ಬಿಸಿ ಟೀಗೆ ನಾಲಿಗೆ ಸುಟ್ಟುಕೊಳ್ಳುತ್ತಾರೆ. ನಡುರಾತ್ರಿಯ ಈ ವಿಚಿತ್ರ ಪಂದ್ಯ ಕೊನೆಗೂ ಮುಗಿಯುವುದು ತಮ್ಮ ಮೇಲೆ ಅಪರಿಚಿತರೊಬ್ಬರು ಹೂಡಿದ ರೇಸಿನ ಅರಿವೇ ಇಲ್ಲದ ಡ್ರೈವರ್-ಕಂಡಕ್ಟರ್ ಸಾವಕಾಶವಾಗಿ ತಿಂಡಿ ಮುಗಿಸಿ ಎದ್ದಾಗಲೇ. ಒಳಗಡಗಿದ ಚಳಿಯನ್ನು ಹೊರಗೆ ದಬ್ಬುತ್ತ ಗಂಟಲಿನೊಳಕ್ಕೆ ಹರಿದ ಕಾಫಿಯ ಕೊನೆಯ ಗುಟುಕನ್ನೂ ಹೀರಿ ಬಸ್ಸು ಹತ್ತಿದರೆ ಮತ್ತೆ ಎಚ್ಚರಾಗುವುದು ಊರು ಸಮೀಪಿಸಿದಾಗಲೇ. ಇದಕ್ಕಿಂದ ಹೆಚ್ಚಿನ ದೃಶ್ಯಗಳನ್ನು ರಾತ್ರಿಯ ಪ್ರಯಾಣ ಕಟ್ಟಿಕೊಡಲಾರದು.
ಆದರೆ ಹಗಲು ಪ್ರಯಾಣದ ಮಜವೇ ಬೇರೆ.
ರಾತ್ರಿ ಟ್ರೈನು ಸಿಕ್ಕದೇ ಶನಿವಾರ ಬೆಳಗ್ಗೆ ಬೇಗ ಎದ್ದು ಕೆಂಪು ಬಸ್ ಹತ್ತಿ ಹೊರಡುವಾಗ ಹೊರಗಡೆ ಶಹರ ಧಾವಂತದ ದಿನವೊಂದಕ್ಕೆ ತಯಾರಾಗುತ್ತ ಶೂ ಕಟ್ಟಿಕೊಳ್ಳುತ್ತಿದೆ. ಅಲ್ಲಲ್ಲಿ ಸಿಟಿ ಬಸ್ ನಿಲ್ದಾಣಗಳಲ್ಲಿ ನಿಂತು ಕಾಯುತ್ತಿರುವ, ಇಡೀ ಪಟ್ಟಣಕ್ಕೇ ಬದಿಗೆ ನಿಲ್ಲು ಎಂದು ಆದೇಶಿಸುವಂತೆ ಭೋಂ ಭೋಂ ಎಂದು ಹಾರನ್ ಹಾಕುತ್ತ ಕಾರೋಡಿಸುತ್ತಿರುವ, ಭೂಪಟದ ಎರಡು ಖಂಡಗಳ ನಡುವಿನ ಸಣ್ಣ ಅವಕಾಶದಲ್ಲಿ ನುಗ್ಗುವ ಖಂಡಾಂತರ ಕ್ಷಿಪಣಿಗಳಂತೆ ಇರುಕಿನಲ್ಲಿ ಬೈಕು ನುಗ್ಗಿಸುತ್ತ ಹೋಗುವ, ಶನಿವಾರ ರಜೆಯಿಲ್ಲದ ಉದ್ಯೋಗಿಗಳೆಡೆಗೆ ಕರುಣೆಯದೊಂದು ನೋಟ ಬೀರಿ ಸೀಟಿಗೆ ತಲೆಯಾನಿಸಿ ಅರ್ಧ ಗಂಟೆಯ ಬಳಿಕ ಕಣ್ತೆರೆದರೆ ಹೊರಗಡೆ ಕಟ್ಟಡಗಳೆಲ್ಲ ಮಾಯವಾದ ಕುರುಚಲು ಪೊದೆ, ಮರಗಳು. ಸೇರಲಿರುವ ಊರಿನ ಮೊದಲು ಝಲಕು ಹತ್ತಿಸುವುದೆ, ಇದೂ ಪ್ರತಿದಿನ ಮನೆಯಿಂದ ಆಫೀಸಿಗೆ ಹೋಗುವ ಬೋರಿಂಗ್ ಪ್ರಯಾಣವೇ ಅಲ್ಲ ಎಂದು ಸಾಬೀತು ಮಾಡುವುದೇ ಹೊರಗಿನ ಈ ಪೊದೆ, ಮರಗಳ ನೋಟ. ಪಟಪಟ ಹಿಂದಕ್ಕೋಡಿದ ಕಟ್ಟಡಗಳ ಜೊತೆ ಒಂದಿಡೀ ದೈತ್ಯ ಶಹರವೇ ಹಿಂದೆ ಉಳಿದು ಮರ, ಗಿಡ, ಕಾಲುದಾರಿ, ಹಂಚಿನ ಮನೆಗಳ ನೋಟ ಕಿಟಕಿಯ ಪರದೆಯಲ್ಲು ಪ್ರತ್ಯಕ್ಷವಾಗುತ್ತದೆ.
ಬೆಳಗಿನ ಬಸ್ಸಿಗೆ ಹತ್ತಾರು ನಿಲ್ದಾಣಗಳು. ರಸ್ತೆಯಲ್ಲಿ ಹೋಗುವಾಗ ಸಿಕ್ಕವರಿಗೆಲ್ಲ ಕೈ ಬೀಸಿ ಹೋ ಜನಾರ್ಧನಣ್ಣ! ಮತ್ತೆ ಅರಾಮಾ? ತಾಲೋಕಾಫೀಸಲ್ಲಿ ಕೆಲ್ಸ ಇತ್ತು ಅಂದ್ಯಲ ಅದು ಆಯ್ತಾ? ದನ ಗಬ್ಬ ಆಗಿತ್ತಲ್ಲ, ಕರು ಹಾಕ್ತಾ? ಎಂದೆಲ್ಲ ಕುಶಲ ವಿಚಾರಿಸುತ್ತ ಹೋಗುವ ಸಾಮಾಜಿಕ ಕಾರ್ಯಕರ್ತನಂತೆ ಅದು. ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಂದು ಪುಟ್ಟ ಪಟ್ಟಣದ ನಿಲ್ದಾಣವನ್ನೂ ಹೊಕ್ಕು, ಆತಿಥ್ಯ ಸ್ವೀಕರಿಸಿ, ಟಾಟಾ ಹೇಳಿಯೇ ಅದು ಹೊರಡುವುದು. ಅಂಥಾ ನಿಲ್ದಾಣಗಳಲ್ಲಿ ನುಗ್ಗಿ ಹತ್ತಿಕೊಳ್ಳುವ, ಉದ್ಯೋಗಕ್ಕಾಗಿ ಪಕ್ಕದೂರಿನ ಶಾಲೆಗೋ, ಆಚೆ ಪಟ್ಟಣಕ್ಕೋ ಹೋಗುವ ಉದ್ಯೋಗಿಗಳು. ಬೆಂಗಳೂರಿನಷ್ಟು ಕಿಕ್ಕಿರಿಯದ, ಬರೀ ಆಕಾಶ ಕಾಣುವಷ್ಟು ಗಗನಚುಂಬಿಗಳಿರುವ ಕಟ್ಟಡಗಳ ಸಮುದ್ರವಲ್ಲದ, ಎಲ್ಲವನ್ನೂ ಮಾರಾಟಕ್ಕಿಡದ, ಕೊಂಚ ಸಾಗಿದರೆ ಮುಗಿದು ಹೋಗಿ ಕಾಡು, ಮರಗಳ ಹಳ್ಳಿಯೊಂದು ಪ್ರತ್ಯಕ್ಷವಾಗುವ ಈ ಪುಟ್ಟ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಇವರೆಲ್ಲ ಎಷ್ಟು ಪುಣ್ಯಾತ್ಮರಲ್ಲವೇ ಎಂದುಕೊಳ್ಳುವಾಗಲೇ ಅವರು ಬಸ್ಸಿಳಿದು ಹೆದ್ದಾರಿಯಿಂದ ಕವಲೊಡೆದ ರಸ್ತೆಯೊಂದರಲ್ಲಿ ನಡೆಯುತ್ತ ಮರೆಯಾಗುತ್ತಾರೆ.
ಹಗಲು ಪ್ರಯಾಣದ ಬಸ್ಸಿನ ಕಿಟಕಿಯೆನ್ನುವುದು ಒಂದು ಚಂದದ ಓಟಿಟಿ ಪರದೆಯಂತೆ. ಇಲ್ಲಿ ಎದಿರಾಗುವ ಪಟ್ಟಣಗಳಾದರೂ ತನ್ನೊಳಗಿನ ಎಲ್ಲ ಮರಗಿಡಗಳನ್ನು ಕಡಿದು, ಕಾಲು ದಾರಿಗಳನ್ನೆಲ್ಲ ಕೊಂದು, ಹಂಚಿನ ಮನೆಗಳನ್ನೂ ಕೆಡವಿದ ನಿರ್ದಯಿಗಳಲ್ಲ. ಬೆಳಗಿನ ಪೂಜೆ, ವ್ಯಾಪಾರ, ಅಡುಗೆಗಳಿಗೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಬಸ್ಸು ಇಂಥಾ ಪಟ್ಟಣವನ್ನು ಹಾಯುತ್ತದೆ. ಮನೆಯಲ್ಲಿ ಕಾದು ಕುಳಿತಿರುವ ದೇವರಿಗೋಸ್ಕರ ಬಸ್ ಸ್ಟ್ಯಾಂಡಿನ ಪಕ್ಕದ ಸಂತೆಯಲ್ಲಿ ಮೊಳ ಮಲ್ಲಿಗೆ, ಸೇವಂತಿಗೆ ಖರೀದಿಸುತ್ತಿರುವ, ಗೂಡಂಗಡಿಯಲ್ಲಿ ನೇತಾಡುವ ಬಾಳೆ ಹಣ್ಣಿನ ಗೊನೆಯ ಪಕ್ಕ ನಿಂತು ಚಹಾ ಹೀರುತ್ತಿರುವ ಅಲ್ಲಿನ ವಾಸಿಗಳನ್ನು ಹಿಂದೆ ಬಿಟ್ಟು ಪಟ್ಟಣಕ್ಕೊಂದು ಬಾಯ್ ಹೇಳಿದರೆ ಎದಿರಾಗುವುದು ಗದ್ದೆ ತೋಟಗಳ, ಕಾಲುದಾರಿಗಳ ಹಳ್ಳಿಗಳು.

ಟಿವಿಎಸ್ ಎಕ್ಸೆಲ್ನ ಸೀಟು ಕಿತ್ತ ಹಿಂಭಾಗದಲ್ಲಿ ಹುಲ್ಲಿನ ಹೊರೆಯನ್ನಿಟ್ಟುಕೊಂಡ ರೈತನೊಬ್ಬ ಹೆದ್ದಾರಿಯ ಮೂಲೆಯಲ್ಲಿ ಸಾಗುತ್ತಿದ್ದಾನೆ. ಆ ಹುಲ್ಲು ಹೊರೆಯಲ್ಲಿ ಇನ್ನೇನು ಅಂಬಾ ಎನ್ನಲಿರುವ ದನದ ಕೂಗಿದೆ. ರಪರಪನೆ ಬಾಲ ಕುಣಿಸಿ ತಾನೂ ಕುಣಿಯುವ ಕರುವಿನ ಸಂಭ್ರಮವಿದೆ. ಅವುಗಳಿಗಾಗಿಯೇ ಕಟ್ಟಿದ ಕೊಟ್ಟಿಗೆಯಿದೆ. ಅದಕ್ಕಾತುಕೊಂಡ ಹಂಚಿನ ಮನೆಯಿದೆ. ಅದರೊಳಗೆ ಈಗಷ್ಟೇ ಹೊಯ್ಯುತ್ತಿರುವ ದೋಸೆಯ ಚುಂಯ್ ಶಬ್ಧವಿದೆ. ಆ ಘಮಲಿಗೆ ಆಸೆಯ ಮೂಗಾಗಿ ಆಚೆ ಕಾದು ಕುಳಿತ ನಾಯಿಯ ಕುಕ್ಕರುಗಾಲಿನ ನೋಟವಿದೆ.
ಆ ಒಂದು ಹುಲ್ಲು ಹೊರೆಯಲ್ಲಿ ಏನೇನೋ ಇದೆ!
ಒಂದಷ್ಟು ದೂರ ಹೆದ್ದಾರಿಯಲ್ಲೇ ಸಾಗಿ ಬರುವ ಆ ರೈತ ಅದೊಂದು ಕಡೆ ಥಟ್ಟನೆ ತಿರುಗಿ ಅದ್ಯಾವುದೋ ಕಾಲು ದಾರಿಯ ಪಾಲಾಗುತ್ತಾನೆ. ಇಷ್ಟು ಹೊತ್ತು ಜೊತೆಯಲ್ಲಿ ಸಾಗಿ ಬಂದ ಅವನ ಮೂಲಕ ಅವನ ಹಳ್ಳಿಯ ಬದುಕಿನ ಕ್ಷಣ ಭಂಗುರಗಳ ಪಾಲುದಾರರಾದ ನಾವು ಈಗ ಅವನ ಅಗಲಿಕೆಯಿಂದ ಮತ್ತೆ ಶಹರದವರಾಗಿ ಮುಂದಕ್ಕೆ ಸಾಗುತ್ತೇವೆ. ದೊಡ್ಡ ಶಹರ ಹಾಗೂ ಹಳ್ಳಿ, ಪುಟ್ಟ ಪಟ್ಟಣಗಳ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ಕಾಲುದಾರಿಗಳು. ಹಳ್ಳಿಗಳಲ್ಲಿ ಮೂರ್ನಾಲ್ಕು ಕಿಲೋಮೀಟರನ್ನು ಅನಾಮತ್ತು ಅರ್ಧಕ್ಕೆ ಕತ್ತರಿಸಿ ಒಂದೂವರೆ ಎರಡು ಕಿಲೋಮೀಟರ್ಗೇ ಗುರಿ ಸೇರಿಸಿಬಿಡುವ ಕಾಲುದಾರಿಗಳಿರುತ್ತವೆ. ದಟ್ಟ ಕಾಡಿನ ನಡುವೆ ಕಾಡೇ ದೊಡ್ಡ ಮನಸ್ಸು ಮಾಡಿ ಬಿಟ್ಟುಕೊಟ್ಟಂತೆ ಕಾಣುವ, ಹುಲ್ಲಿನಿಂದ ಆವೃತವಾದ ಕಾಲು ದಾರಿಗಳಿರುತ್ತವೆ. ಕಾಲ್ನಡಿಗೆಯ ಯಾತ್ರಿಗಳು ಮಾತ್ರವಲ್ಲದೇ ಕೆಲವೊಮ್ಮೆ ಸೈಕಲ್, ಬೈಕಿನವರನ್ನೂ ಇವು ತಮ್ಮ ಮೇಲೆ ಬಿಟ್ಟುಕೊಳ್ಳುತ್ತವೆ. ನಡೆ ನಡೆಯುತ್ತಾ ಅಚಾನಕ್ಕಾಗಿ ಸಣ್ಣ ಹಳ್ಳವೋ, ಝರಿಯೋ ಎದುರಾಗಿ ಕಾಲು ತಂಪು ಮಾಡುತ್ತದೆ.
ನಾವು ಹೈಸ್ಕೂಲಿಗೆ ಹೋಗುವಾಗ ಸಿರಿಗಾರು ಕೈಮರದ ಉದ್ದದ ಏರಿನ ನಡು ಮಧ್ಯದಲ್ಲೊಂದು ಕಾಲುದಾರಿಯಿತ್ತು. ಗುಡ್ಡದ ನೆತ್ತಿಯ ತನಕ ಹೋಗಿ ಯೂಟರ್ನ್ ಮಾಡಿಕೊಂಡು ಹಿಂದೆ ಬರುವ ವೃಥಾ ರಸ್ತೆಯನ್ನು ಮಧ್ಯದಲ್ಲೇ ಜೋಡಿಸಿದ್ದ ಇದು ಅರ್ಧ ದೂರವನ್ನು ಕಡಿಮೆ ಮಾಡುತ್ತಿತ್ತು. ಶಾಲೆಯಿಂದ ಸೈಕಲ್ ತುಳಿಯುತ್ತಾ ಬರುತ್ತಿದ್ದ ನಾವೆಲ್ಲ ಮುಖ್ಯ ರಸ್ತೆಯನ್ನು ಅದರ ಪಾಡಿಗೆ ಏರು ಹತ್ತಲು ಬಿಟ್ಟು ಈ ಕಾಲುದಾರಿಗೆ ಹೊರಳಿಕೊಳ್ಳುತ್ತಿದ್ದೆವು. ಯಾರೂ ಇಲ್ಲದ ಖಾಲಿ ದಾರಿಯಲ್ಲಿ ಟಿಂಗ್ ಟಾಂಗ್ ಎಂದು ಮರಗಿಡಗಳಿಗೇ ಹಾರನ್ ಹೊಡೆಯುತ್ತ ಹೋಗುತ್ತಿದ್ದ ಈ ಪಯಣದಲ್ಲಿ ಸಮೀಪದಲ್ಲೇ ಮನೆಯಿರುವ ಕಿರಿಯ ಗೆಳೆಯನೊಬ್ಬ ನನ್ನ ಸೈಕಲ್ ಕ್ಯಾರಿಯರ್ನಲ್ಲಿ ಕೂರುತ್ತಿದ್ದ. ಏರಿನ ಸೊಂಟದ ಬಳಿ ಎಡಕ್ಕೆ ತಿರುಗಿ ಕಾಡೊಳಗೆ ಕಣ್ಮರೆಯಾದ ಈ ಕಾಲುದಾರಿ ಆಚೆ ಕಡೆ ಇಳುಕಲಿನ ಎದೆಯ ಬಳಿ ಪುಳಕ್ಕನೆ ಆಚೆ ಬಂದಿತ್ತು. ಹೀಗೆ ಒಂದಿಡೀ ಬೆಟ್ಟದ ನೆತ್ತಿಯನ್ನು ಹತ್ತುವುದರಿಂದ ಪಾರಾಗಿ ಉಳಿಸಿದ ನಿಮಿಷಗಳು ಅದೆಷ್ಟೋ?
ಮಹಾನಗರಿ ಕಾಲುದಾರಿಗಳಿಲ್ಲದ ನಗರ. ಇಲ್ಲಿಗೆ ಬಂದ ಶುರುವಾತಿನಲ್ಲಿ ‘ಬಸವನಗುಡಿಯಿಂದ ನೆಟ್ಕಲ್ಲಪ್ಪ ಸರ್ಕಲ್ಲಿಗೆ ಒಂದು ಶಾರ್ಟ್ ಕಟ್ ಇದೆ’ ಎಂದೆಲ್ಲ ಯಾರ್ಯಾರೋ ಮಾತನಾಡುವುದನ್ನು ಕೇಳುವಾಗ ನಾನು ನಮ್ಮ ಹೈಸ್ಕೂಲಿನ ದಿನಗಳಲ್ಲಿ ಕಂಡಂಥದೇ ಕಾಲುದಾರಿಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಬೆಳವಣಿಗೆಗೆ ಸಿಕ್ಕಿ ಇಲ್ಲಿನ ಕಾಲುದಾರಿಗಳೂ ಬಸ್ಸುಗಳೆರಡು ಎದುರು ಬದುರಾಗಿ ಸಾಗಿ ಹೋಗುವಂಥಾ ದೈತ್ಯ ರಸ್ತೆಗಳೇ ಆಗಿವೆ ಎನ್ನುವುದು ಆಮೇಲೆ ಅರ್ಥವಾಯಿತು. ಯಾವುದೋ ಪಾರ್ಕಿನಲ್ಲೋ, ಖಾಲಿ ಸೈಟಿನಲ್ಲೋ, ಯೂನಿವರ್ಸಿಟಿ ಕಾಡಿನಲ್ಲೋ ಕಾಲುದಾರಿಗಳಿದ್ದರೂ ಅವೆಲ್ಲ ಕಸ ಎಸೆಯುವ, ಪ್ರಯಾಣಿಗರನ್ನು ನಿಲ್ಲಿಸಿ ಸುಲಿಗೆ ಮಾಡುವ, ಯಾರನ್ನೋ ಕೊಂದು ಎಸೆಯುವ ಅಪಾಯಕಾರಿ ಅಡ್ಡಾಗಳಾಗಿ ಹೋಗಿರುವ ಅವುಗಳಲ್ಲಿ ಕಾಲು ದಾರಿಯ ತಂಗಾಳಿಯಿಲ್ಲ. ಮುಂದೆಂದೋ ಒಂದು ದಿನ ನನ್ನ ಪ್ರೀತಿಯ ಬೆಂಗಳೂರೂ ಹೀಗೇ ಹೆದ್ದಾರಿಗಳ ಜೊತೆ, ಮುಖ್ಯ ರಸ್ತೆ, ಅಡ್ಡ ರಸ್ತೆಗಳ ಜೊತೆ ಒಂದಿಷ್ಟು ಕಾಲುದಾರಿಗಳನ್ನೂ ಸೃಷ್ಟಿಸಿಕೊಂಡು ಯಾವುದೇ ವಿದೇಶದ ಮಹಾನಗರಕ್ಕೂ ಸೆಡ್ಡು ಹೊಡೆಯುವಂತಾಗಬಹುದು ಎಂದು ಕನಸು ಕಾಣುವುದರ ಹೊರತಾಗಿ ಮತ್ತೇನೂ ಮಾಡಲಾಗದು ಸಧ್ಯಕ್ಕೆ.
ಮೊನ್ನೆ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ರೈಲು ಹತ್ತಿ ಬೀರೂರಿನಲ್ಲಿ ಇಳಿದು ಬಸ್ಸು ಹಿಡಿದು ಶಿವಮೊಗ್ಗಕ್ಕೆ ಬಂದೆವು. ಹಾಗೆ ಬರುವಾಗ ಬಹಳ ವರ್ಷಗಳ ನಂತರ ಬೀರೂರಿನ ರೈಲು ನಿಲ್ದಾಣವನ್ನು ಬಸ್ ಸ್ಟೇಷನ್ಗೆ ಸೇರಿಸುವ ಕಾಲು ದಾರಿಯಲ್ಲಿ ನಡೆದು ಬಂದೆ. ಮರಗಿಡಗಳ ನಡುವೆ ಯಾರದೋ ಮನೆಯ ಹಿತ್ತಲ ಬಾಗಿಲಿನೆದುರು ಸಾಗಿ ಬಂದ ಆ ದಾರಿಯಲ್ಲಿ ನಡೆಯುತ್ತ ಬೀರೂರಿನ ಬಸ್ ನಿಲ್ದಾಣ ತಲುಪಿ, ಸಮೀಪದ ಹೋಟೆಲೊಂದರಲ್ಲಿ ಇಡ್ಲಿ ಸಾಂಬಾರು ತಿಂದು, ಆಗಷ್ಟೇ ಅರಳಿದ ವ್ಯವಹಾರದ ದಿನದಲ್ಲಿ ತನ್ನದೇ ಓಘದಲ್ಲಿ ಚಲಿಸುತ್ತಿರುವ ಬೀರೂರನ್ನು ನೋಡುತ್ತ ಕಾಫಿ ಹೀರಿದೆವು. ಶಿವಮೊಗ್ಗದ ಬಸ್ಸು ಹತ್ತಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತರೆ ಹೊರಗೆ ಮನಸ್ಸನ್ನು ಎಲ್ಲೆಲ್ಲಿಗೋ ಒಯ್ದು ತಲುಪಿಸುವ ಕಾಲುದಾರಿಗಳು. ಸುರಿಯುವ ಮಳೆಯ ಹಿನ್ನೆಲೆಯಲ್ಲಿ ಕಿವಿಯೊಳಗೆ ರಾಘವೇಂದ್ರ ಬೀಜಾಡಿ ತನ್ಮಯರಾಗಿ ಹಾಡುತ್ತಿದ್ದರು:

ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಹೃದಯ ಕೇಳಲಿ ಈಗ ಬಳಿಯೆ ಕೂತು..
ಊರಿಗೆ ಹೋಗಿ ತಲುಪುವುದಕ್ಕಿಂತ ಹೋಗುತ್ತಿರುವ ಪ್ರಯಾಣವೇ ಸುಂದರವಾಗಿರುತ್ತದೆ. ಹೋಗುತ್ತಿದ್ದೇವೆ ಎಂಬ ಸಂಭ್ರಮ ಇನ್ನೂ ಚಂದವಾಗಿರುತ್ತದೆ. ಹೋಗಿ ತಲುಪಿದ ಮೇಲೆ ಮತ್ತದೇ ಮರಳುವ ಬೇಸರ, ಕಣ್ಮುಚ್ಚಿ ಬಿಡುವುದರೊಳಗೆ ಮುಳುಗುವ ನೇಸರ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
