ಬಿಸಿಲಿನ ಮಟ್ಟಿಗೂ ನಿತ್ಯ ಬೀಳುವ ಊರಲ್ಲಿ ಸಿಗದ ಸ್ವಾಗತ ಇಲ್ಲಿ ದೊರೆಯುವಾಗ ಆನಂದ ಆಗಬಹದು. ಬ್ರಿಟಿಷರನ್ನು ಏನಾದರೂ ವರ ಬೇಕೋ ಎಂದು ಭಗವಂತ ಕೇಳಿದರೆ ತಮಗೆ ಬೆಚ್ಚಗಿನ ಬಿಸಿಲು ಅನವರತ ಕೊಡು ದೇವರೇ ಎಂದು ಕೇಳುವ ಸಾಧ್ಯತೆಯೇ ಹೆಚ್ಚು. ಬ್ರಿಟನ್ ಎಂದೆಂದಿಗೂ ಬಿಸಿಲಿಗಾಗಿ ಹಸಿದ ಪ್ರೇಮಿಗಳ ನಾಡು. ಬಿಸಿಲಿಗಾಗಿ ಕಾಯುವುದು, ಕಂಡು ಉತ್ಸಾಹಿಗಳಾಗುವುದು,ಉನ್ಮಾದದಲ್ಲಿ ತೇಲುವುದು, ಇನ್ನೆಂದು ಬರುವುದೋ ಎಂದು ಕನಸು ಕಾಣುವುದು ಎಲ್ಲವೂ ಸಂಭವ ಇಲ್ಲಿ
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್.

 

ಒಂದು ಒಳ್ಳೆಯ ಬಿಸಿಲು ಬಂದರೆ ಏನು ಮಾಡಬೇಕು ಏನು ಮಾಡಬಹುದು ಎನ್ನುವುದು ಯಾವ ಊರಲ್ಲಿ ಯಾವ ದೇಶದಲ್ಲಿ ಇದ್ದೇವೆ ಎನ್ನುವುದರ ಮೇಲೆಯೂ ನಿರ್ಧರಿತವಾಗುತ್ತದೆ. ಬಿಸಿಲನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಸಂಬೋಧಿಸುವವರು ಸಾಧಾರಣ ಯಾವ ಸೀಮೆಯವರು ಯಾವ ಭೂಭಾಗದವರು ಎಂದೂ ಊಹಿಸಬಹುದು. ದಿನಾ ಬಿಸಿಲಿರುವ ಊರಿನವರಿಗೆ ಬಿಸಿಲೆಂದರೆ ನಿತ್ಯ ಕಾಣುವ ಒಂದು ಪ್ರಾಕೃತಿಕ ಆಗುಹೋಗು ಅಥವಾ ನಿತ್ಯ ಕಂಡೂ ಕಾಣದ ರಸ್ತೆಯಂತೆಯೋ, ಮರದಂತೆಯೋ, ಕಟ್ಟಡದಂತೆಯೋ ಅಥವಾ ಅಂತಹ ಇನ್ನೆನರಂತೆಯೋ.

ಆದರೆ ಬಿಸಿಲು ಅತಿಥಿಯಂತೆ ಬಂದು ಹೋಗುವ ನಾಡಲ್ಲಿ ಬಿಸಿಲೆಂದರೆ ಕಾದು ಕಾದು ಅವತರಿಸುವ ಹಬ್ಬದಂತೆ. ಬ್ರಿಟನ್ ಅಲ್ಲಿ ಕಡು ಚಳಿಗಾಲದ ಕೊನೆಯ ದಿನಗಳೆಂದು ಹೆಸರು ಪಡೆದ ಫೆಬ್ರವರಿಯ ಕೊನೆಯ ವಾರದಲ್ಲಿ ಅಂದರೆ ಕಳೆದ ವಾರ ಹಿಂದೆಂದೂ ಕಾಣದಂತಹ ಬಿಸಿಲಿನ ದಿನಗಳು ಬಂದವು. ಸೊನ್ನೆಯ ಆಸುಪಾಸಿನ ತಾಪಮಾನ ಮತ್ತೆ ಅದಕ್ಕೆ ತಕ್ಕಂತೆ ಉಡುಪು ತೊಡಬೇಕಾದ ಕಾಲದಲ್ಲಿ ಅಚಾನಕ್ ಅರ್ಧ ತೋಳಿನ ಅಂಗಿ ತೊಟ್ಟು ಕಪ್ಪು ಕನ್ನಡಕ ಹಾಕಿ ಓಡಾಡುವ ಮನುಷ್ಯರು ಕಾಣಿಸುತ್ತಿದ್ದರು. ಫೆಬ್ರವರಿ ತಿಂಗಳಲ್ಲೇ ಇಂತಹ ಬಿಸಿಲು ಮೊದಲೆಂದೂ ಕಾಣಿಸಿದ್ದಿಲ್ಲ ಎಂಬ ದಾಖಲಾತಿಯೂ ಈ ಅಪೂರ್ವ ಬಿಸಿಲಿಗೆ ಸಿಕ್ಕಿತು. ಬಿಸಿಲಲ್ಲಿ ಏನಿದೆ ಎಂದು ದಿನಾ ಬಿಸಿಲಿರುವ ಊರಿನಲ್ಲಿ ವಾಸಿಸುವವರು ಅಥವಾ ಹೆಚ್ಚಿನ ದಿನ ಬಿಸಿಲಿರುವ ಪ್ರದೇಶಗಳಲ್ಲಿ ಇರುವವರು ಅಸಡ್ಡೆ ತಾಳಬಹುದು. ಒದ್ದೆ ಬಟ್ಟೆಗಳು ಬೇಗ ಗರಿಗರಿ ಒಣಗಬಹುದು, ಹಪ್ಪಳ ಸಂಡಿಗೆಗಳನ್ನು ಬಿಸಿಲಲ್ಲಿ ಹರಡಬಹುದು. ಇಷ್ಟನ್ನು ಬಿಟ್ಟು ಬಿಸಿಲಿನಲ್ಲಿ ಯಾವ ಮಹಾ ಸಾಧನೆಯಾದೀತು? ಸಹಾಯವಾದೀತು? ಎಂದೂ ವ್ಯಂಗ್ಯ ಮಾಡಬಹುದು. ಈ ಬಗ್ಗೆ ಬ್ರಿಟಿಷರನ್ನು ಕೇಳಿದರೆ, ಬಿಸಿಲೆಂದರೆ ಮನೆಯಿಂದ ನಗುಮೊಗದಲ್ಲಿ ಹೊರಬರುವ, ಬೇಕಾದ್ದನ್ನು ತೊಟ್ಟುಉಟ್ಟು ಖುಷಿಯಲ್ಲಿ ಓಡಾಡುವವ ಸಂಭ್ರಮ ಎಂದಾರು! ಸೂರ್ಯರಶ್ಮಿಯ ಜೀವಸತ್ವ ಎನ್ನುವ “ವಿಟಮಿನ್ ಡಿ” ದೊರಕುವುದೂ ಬಿಸಿಲಲ್ಲೇ ಎಂದು ಕೂಡ ಹೇಳಿಯಾರು . ಬಿಡಿ, ಅವರವ ಅನುಭವ ಅವರವರಿಗೆ.

ಬಿಸಿಲಿಗೆ ಬ್ರಿಟನ್ನಿನಲ್ಲಿ ಸಿಗುವ ಸ್ವಾಗತ, ಕಾಣುವ ಉತ್ಸಾಹ ಬಹಳ ಕಡೆ ಕಾಣಿಸಲಿಕ್ಕಿಲ್ಲ. ಹಾಗಾಗಿ ಬಿಸಿಲಿನ ಬಗ್ಗೆ ಉಮೇದಿನಲ್ಲಿ ಮಾತಾಡುವವರನ್ನು ನೀವು ಹುಡುಕುತ್ತಿದ್ದರೆ ಅವರು ಬ್ರಿಟನ್ನಲ್ಲಿ ಸಿಕ್ಕಾರು. ಇಲ್ಲಿನ ವರುಶವೊಂದು ಹೇಗೆ ಸಾಗಿತು, ಹೇಗೆಲ್ಲ ಕಳೆಯಿತು ಎನ್ನುವುದು ಆ ವರ್ಷದ ಬೇಸಿಗೆಯ ದಿನಗಳು ಹೇಗಿದ್ದವು ಅಥವಾ ಬಿಸಿಲಿನ ದಿನಗಳು ಎಷ್ಟಿದ್ದವು ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ. ಕಳೆದ ವರ್ಷ ಇಲ್ಲಿ ಎಡೆಬಿಡದೆ ಎರಡು ತಿಂಗಳು ಬಿಸಿಲು ಬಿದ್ದಿತ್ತು, ಮುಂದಿನ ಕೆಲವು ವರ್ಷಗಳೂ ಕಳೆದ ವರ್ಷದ ಬಿಸಿಲ ದಿನಗಳ ನೆನಪಲ್ಲೇ ಸಾಗುವ ಸಾಧ್ಯತೆ ಇದೆ.

ಬಿಸಿಲಿನ ಬಗ್ಗೆ ಜಗತ್ಪ್ರಸಿದ್ಧ ಸಾಲುಗಳು ಕವನಗಳು ಇಂಗ್ಲಿಷ್ ಕಾವ್ಯ ಪರಂಪರೆಯಲ್ಲಿ ಬರೆಯಲ್ಪಟ್ಟಿವೆ. ಬಿಸಿಲನ್ನು ಮನುಷ್ಯರ ಪ್ರೀತಿ ಪೇಮ ಸ್ನೇಹಗಳು ನೀಡುವ ಸಾಂತ್ವನ ಅಪ್ಯಾಯಮಾನ ಅನುಭೂತಿಗೆ ಹೋಲಿಸಿದ ಕವನಗಳೂ ಇಲ್ಲಿವೆ. ಅವೆಲ್ಲ ಇಲ್ಲಿನ ಸುಂದರ ಬೇಸಿಗೆಯ ಬಿಸಿಲಿನ ಬಗೆಗಿನ ಸಾಲುಗಳು. ಹೀಗೆ ಚಳಿಗಾಲದ ನಡುವೆ ಮೂತಿ ತೋರಿಸಿ ಹೋಗುವ ಸೂರ್ಯನ ಬಗ್ಗೆ ಕಾವ್ಯ ಮುಂದೆ ಬರೆಯಲ್ಪಡಬಹುದೇನೋ . ಖಾಯಂ ಬಿಸಿಲಿನ ಪ್ರದೇಶಗಳಲ್ಲಿ ಸುಡುಬಿಸಿಲು, ಬಿರು ಬಿಸಿಲು, ಝಳ, ಉರಿ, ಧಗೆ ಎಂದು ಕಂಡ ಕಂಡವರ ಹತ್ತಿರ ಮೂದಲಿಸಿಕೊಳ್ಳುತ್ತ ಕಳೆಯುವ ಬಿಸಿಲ ದಿನಗಳು ಬ್ರಿಟನ್ನಿನ ಮಂದ ವಾತಾವರಣಕ್ಕೊಂದು ಚೈತನ್ಯ ನೀಡಿ ಇಲ್ಲಿನ ಕವಿಪುಂಗವರಿಂದ ಮಾತ್ರವಲ್ಲದೇ ಸಕಲ ಜೀವರುಗಳಿಂದಲೂ ಶಹಭಾಸಿ ಪಡೆಯುತ್ತದೆ.

ಇಲ್ಲಿ ಬೇಸಿಗೆ ಎಂದು ಕರೆಸಿಕೊಳ್ಳುವ ಕಾಲದಲ್ಲೇ ಬಿಸಿಲು ಬಿದ್ದರೆ ಪುಳಕಿತರಾಗುವ ಜನರಿಗೆ ಚಳಿಗಾಲದ ಅಧಿಕಾರದ ಫೆಬ್ರವರಿ ಕೊನೆಯಲ್ಲಿ ಕಂಡ ಬಿಸಿಲು ಅತ್ಯಂತ ಖುಷಿ ತಂದಿದೆ. ಬಿಸಿಲಿನ ಮಟ್ಟಿಗೂ ನಿತ್ಯ ಬೀಳುವ ಊರಲ್ಲಿ ಸಿಗದ ಸ್ವಾಗತ ಇಲ್ಲಿ ದೊರೆಯುವಾಗ, ಎಲ್ಲೂ ಸಿಗದ ಸ್ವೀಕೃತಿ ಇಲ್ಲಿ ದೊರೆಯುವಾಗ ಆನಂದ ಆಗಬಹದು. ಬ್ರಿಟಿಷರನ್ನು ಏನಾದರೂ ವರ ಬೇಕೋ ಎಂದು ಭಗವಂತ ಕೇಳಿದರೆ ತಮಗೆ ಬೆಚ್ಚಗಿನ ಬಿಸಿಲು ಅನವರತ ಕೊಡು ದೇವರೇ ಎಂದು ಕೇಳುವ ಸಾಧ್ಯತೆಯೇ ಹೆಚ್ಚು. ಬ್ರಿಟನ್ ಎಂದೆಂದಿಗೂ ಬಿಸಿಲಿಗಾಗಿ ಹಸಿದ ಪ್ರೇಮಿಗಳ ನಾಡು. ಬಿಸಿಲಿಗಾಗಿ ಕಾಯುವುದು, ಕಂಡು ಉತ್ಸಾಹಿಗಳಾಗುವುದು ಉನ್ಮಾದದಲ್ಲಿ ತೇಲುವುದು ಇನ್ನೆಂದು ಬರುವುದೋ ಎಂದು ಕನಸು ಕಾಣುವುದು ಎಲ್ಲವೂ ಸಂಭವ ಇಲ್ಲಿ.

ಹೀಗೆ ಅಪೂರ್ವದ ಬಿಸಿಲೊಂದು ಸಂತಸದ ಅಲೆಯನ್ನು ಬ್ರಿಟನ್ನಿನಲ್ಲಿ ಎಬ್ಬಿಸಿದರೂ, ಇದು ಅಕಾಲದ ಹೊತ್ತಲ್ಲದ ಹೊತ್ತಿನದು ಎನ್ನುವುದು ಪರಿಸರ ವಿಜ್ಞಾನಿಗಳ ಕಳವಳಕ್ಕೆ ಮತ್ತೆ ಕಾರಣ ಆಗಿದೆ. ಎಂದೂ ಈ ಸಮಯಕ್ಕೆ ಬಾರದ ಬಿಸಿಲು ಹೀಗೆ ಚಳಿಗಾಲದ ಅಖೇರಿಗೆ ಪ್ರತ್ಯಕ್ಷ ಆದದ್ದು ಗ್ಲೋಬಲ್ ವಾರ್ಮಿಂಗ್ ಕಾರಣದಿಂದಲೇ ಎಂದೂ ತಜ್ಞರು ಚರ್ಚಿಸುತ್ತಾರೆ. ಇಂತಹ ಬಿಸಿಲೊಂದು ಹೀಗೆ ಧುತ್ತನೆ ಬ್ರಿಟನ್ನಿನ ಮೇಲೆ ಇಳಿಯುವ ತುಸು ಮೊದಲು, ಎರಡು ವಾರಗಳ ಹಿಂದಿನ ಶುಕ್ರವಾರ ಇಲ್ಲಿನ ಅನೇಕ ಶಾಲೆಗಳ ಮಕ್ಕಳು ವಾತಾವರಣದ ವೈಪರೀತ್ಯಗಳಿಗೆ ಸ್ಪಂದಿಸಲು ಸರಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಪ್ರಾಥಮಿಕ ಹಾಗು ಹೈಸ್ಕೂಲ್ ಮಕ್ಕಳು ಬ್ರಿಟನ್ನಿನ ಬೀದಿಗಳಲ್ಲಿ “ನಿಮ್ಮ ಲೋಭಗಳಿಗೆ ನಮ್ಮನ್ನು ಬಲಿಕೊಡಬೇಡಿ” ಎನ್ನುವ ಫಲಕಗಳನ್ನು ಹೊತ್ತು ಘೋಷಣೆ ಕೂಗಿದರು.

ಬರುವ ಮಾರ್ಚ್ 15ರಂದು ಜಗತ್ತಿನ ಐವತ್ತು ದೇಶಗಳ ಎಳೆಯ ಮಕ್ಕಳು ಜಾಗತಿಕ ವಾತಾವರಣ ವೈಪರೀತ್ಯದ ಬಗ್ಗೆ ಮುಷ್ಕರ ನಡೆಸಲಿದ್ದಾರೆ. ಎಳೆಯರು ಈ ಮುಷ್ಕರಕ್ಕಿಂತ ಮೊದಲು ತಮ್ಮ ಯೋಚನೆಗಳನೇನು ಇಂತಹ ಪ್ರತಿಭಟನೆ ಯಾಕೆ ಎಂದು ಬಹಿರಂಗ ಪತ್ರವನ್ನೂ ಬರೆದು ಪ್ರಕಟಿಸಿದ್ದಾರೆ. ಇಲ್ಲಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಈ ಪತ್ರದಲ್ಲಿ “ಮನುಕುಲದ ಭವಿಷ್ಯವನ್ನು ನಾವು ಬದಲಿಸುತ್ತೇವೆ, ನಿಮಗೆ ಇಷ್ಟ ಇರಲಿ ಇಲ್ಲದಿರಲಿ” ಎನ್ನುವ ಕಟು ಬಿಸಿ ವಾಕ್ಯಗಳಿವೆ. ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಚಳವಳಿ, ಸಾಂಸ್ಕೃತಿಕ ಲೋಕದಲ್ಲಿ “ಕಟ್ಟುವೆವು ನಾವು ಹೊಸ ನಾಡೊಂದನು… “, “ನಾವು ವಿಲಯರುದ್ರರು.. ನಾವು ನವ ವಿಧಾತರು…” ಎಂದು ಬರೆದು ಯುವಕರಲ್ಲಿ ಬಿಸಿ ರಕ್ತಸಂಚಯನ ಮಾಡಿಸಿದ, ಕ್ರಾಂತಿಯ ಬೀಜ ಬಿತ್ತಿದ, ಮಾರ್ಗಪ್ರವರ್ತಕ ಅಡಿಗರ ಪದಪುಂಜಗಳನ್ನು ನೆನಪಿಸುವ ಸಾಲುಗಳು ಬ್ರಿಟನ್ನಿನ ಎಳೆಯ ಮಕ್ಕಳ ಪ್ರತಿಭಟನಾ ಪತ್ರದಲ್ಲಿವೆ.

ಶಾಲೆಯ ಮಕ್ಕಳು ತರಗತಿಗಳಲ್ಲಿರಬೇಕು ಹೌದು, ಆದರೆ ಇಂದಿನ ತುರ್ತು ವಿಚಾರಗಳಾದ ಪರಿಸರದ ಕಾಳಜಿ ಹಾಗು ವಾತಾವರಣ ಹಾಳಾಗುತ್ತಿರುವುದರ ಬಗ್ಗಿನ ಎಚ್ಚರ ಮಕ್ಕಳ ಶಾಲೆಯ ಹಾಜರಿಯಷ್ಟೇ ಅಥವಾ ಅದಕ್ಕಿಂತ ಮಿಗಿಲಾದ ಮೂಲಭೂತ ಅಗತ್ಯತೆ ಅನಿವಾರ್ಯತೆ ಎಂದೂ ಹೇಳಿದ್ದಾರೆ . “ಭವಿಷ್ಯಕ್ಕಾಗಿ ಓದಿ ಎನ್ನುತ್ತೀರಿ, ಭೂಮಿಗೆ ಭವಿಷ್ಯವೇ ಇಲ್ಲದಿರುವಾಗ ತಾವ್ಯಾಕೆ ಓದಬೇಕು” ಎಂದು ಕೇಳಿ ಸರಕಾರಗಳನ್ನು, ಹೆತ್ತವರನ್ನು, ಸಮಾಜವನ್ನು ಎಚ್ಚರಿಸುವ ಪ್ರಯತ್ನದಲ್ಲಿದ್ದಾರೆ. ಮಕ್ಕಳೇ ಇಂತಹ ಒಂದು ಜಾಗತಿಕ ಹವಾಮಾನದ ಬಗೆಗಿನ ಹೋರಾಟದ ಮುಂಚೂಣಿಯಲ್ಲಿ ನಿಂತರೆ ಆದಕ್ಕೆ ಸಿಗಬಹುದಾದ ಸ್ಪಂದನೆ ಮತ್ತು ಪ್ರಚಾರ ಹೆಚ್ಚು ಎನ್ನುವುದೂ ಮಾರ್ಚ್ 15ರ ಚಳವಳಿಯ ಹಿಂದಿನ ಆಶಯ.

ಬ್ರಿಟನ್, ಭಾರತ, ಆಸ್ಟ್ರೇಲಿಯಾ, ಯುರೋಪ್, ಅಮೇರಿಕ, ಮಧ್ಯಪ್ರಾಚ್ಯ ಮತ್ತಿತರ ದೇಶಗಳ ಮಕ್ಕಳು ಪಾಲ್ಗೊಳ್ಳುವ, ಇಂದಿನವರೆಗಿನ ಅತಿ ದೊಡ್ಡ ಜಾಗತಿಕ ಮುಷ್ಕರ ಎಂದು ಕರೆಯಲ್ಪಡುವ ಈ ವಿದ್ಯಮಾನದ ಬಗ್ಗೆ ಕುತೂಹಲ ಇರುವವರು “FridayForFuture.Org” ಜಾಲತಾಣದಲ್ಲಿ ನೊಂದಾಯಿಸಬಹುದು, ಮಾಹಿತಿ ಪಡೆಯಬಹುದು, ಭಾಗವಹಿಸುವ ಸಂಕಲ್ಪ ಮಾಡಬಹುದು. ಶುಕ್ರವಾರದ ಪಾಠಗಳನ್ನು ಬಹಿಷ್ಕರಿಸಿ ಮನೆ, ರಸ್ತೆ, ಶಾಲೆ, ರಾಜಧಾನಿ, ಸಂಸತ್ತು ಎಲ್ಲೆಡೆ ಎಚ್ಚರ ಮೂಡಿಸುವುದು ಈ ಚಳವಳಿಯ ಉದ್ದೇಶ.

ಹೀಗೆ ಚಳಿಗಾಲದ ನಡುವೆ ಮೂತಿ ತೋರಿಸಿ ಹೋಗುವ ಸೂರ್ಯನ ಬಗ್ಗೆ ಕಾವ್ಯ ಮುಂದೆ ಬರೆಯಲ್ಪಡಬಹುದೇನೋ . ಖಾಯಂ ಬಿಸಿಲಿನ ಪ್ರದೇಶಗಳಲ್ಲಿ ಸುಡುಬಿಸಿಲು, ಬಿರು ಬಿಸಿಲು, ಝಳ, ಉರಿ, ಧಗೆ ಎಂದು ಕಂಡ ಕಂಡವರ ಹತ್ತಿರ ಮೂದಲಿಸಿಕೊಳ್ಳುತ್ತ ಕಳೆಯುವ ಬಿಸಿಲ ದಿನಗಳು ಬ್ರಿಟನ್ನಿನ ಮಂದ ವಾತಾವರಣಕ್ಕೊಂದು ಚೈತನ್ಯ ನೀಡಿ ಇಲ್ಲಿನ ಕವಿಪುಂಗವರಿಂದ ಮಾತ್ರವಲ್ಲದೇ ಸಕಲ ಜೀವರುಗಳಿಂದಲೂ ಶಹಭಾಸಿ ಪಡೆಯುತ್ತದೆ.

ಜಗತ್ತಿನೆಲ್ಲೆಡೆ ತಾಪಮಾನ ಹೆಚ್ಚಾಗುವ ಪ್ರಕ್ರಿಯೆಯ ಬಗ್ಗೆ, ಋತುಗಳು ತಮ್ಮ ಮೂಲಸ್ವರೂಪವನ್ನು ಬದಲಿಸುತ್ತಿರುವುದರ ಕುರಿತ ಈ ಕೂಗು ಬ್ರಿಟನ್ನಿನಲ್ಲಿ ಬಿಸಿಲನ್ನು ಪ್ರೀತಿಸುವವರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದೆ. ಬಿಸಿಲೆಂದರೆ ಇಲ್ಲಿ ಸಂತಸ ಸಂಭ್ರಮ ಹಬ್ಬ ಮೆರವಣಿಗೆ ಸಾಹಿತ್ಯ ಸಿರಿತನ ಬದುಕು ಜೊತೆಗೆ ಒಂದು ಚಳವಳಿಯೂ ಆಗುವ ಎಲ್ಲ ಲಕ್ಷಣಗಳಿವೆ.

ಹೀಗೆ ಬ್ರಿಟನ್ನಿನಲ್ಲಿ, ಬ್ರಿಸ್ಟಲಿನಂತಹ ಊರುಗಳಲ್ಲಿ ಬಿಸಿಲಿನ ಹಬ್ಬ ಮೆರವಣಿಗೆ ಚಳವಳಿ ನಡೆಯುತ್ತಿರುವ ಸಮಯದಲ್ಲೇ ಇಲ್ಲಿಂದ ಐದು ಸಾವಿರ ಮೈಲು ದೂರದ ಕನ್ನಡ ಕರಾವಳಿಯ ಬೈಂದೂರಿನ ಪರಿಸರದಲ್ಲಿ ಇಲ್ಲಿನಂತಹದೇ ಒಂದು ಬಿಸಿಲಿನ ದಿನ ಸಾಹಿತ್ಯದ ಮೆರವಣಿಗೆ ನಡೆದಿದೆ. ಕುಂದಾಪುರ ತಾಲೂಕು ವಿಭಜನೆಗೊಂಡು ಹುಟ್ಟಿದ ಬೈಂದೂರು ತಾಲೂಕಿಗೆ ಅದು ಚೊಚ್ಚಲ ತಾಲೂಕು ಸಾಹಿತ್ಯ ಸಮ್ಮೇಳನದ ಸಂಭ್ರಮದ ಸಂದರ್ಭ. ಕುಂದಾಪುರ ತಾಲೂಕಿನ ನೂರೊಂದು ಗ್ರಾಮಗಳ ಪೈಕಿ ಇಪ್ಪತ್ತಾರು ಗ್ರಾಮಗಳನ್ನು ಬೇರ್ಪಡಿಸಿ ಹುಟ್ಟುಪಡೆದ ಬೈಂದೂರು ತಾಲೂಕು, ಆಡಳಿತಾತ್ಮಕವಾದ ವಿಕೇಂದ್ರೀಕರಣದ ಜೊತೆ ಸಾಹಿತ್ಯ ಹಾಗು ಸಾಂಸ್ಕೃತಿಕ ವಿಕೇಂದ್ರೀಕರಣಕ್ಕೂ ಸಾಕ್ಷಿಯಾಗಿದೆ.

ಬ್ರಿಸ್ಟಲಿನಲ್ಲಿ ಬಿಸಿಲು ಹುಟ್ಟಿಸಿದ ಕಲರವದಂತೆ ಬೈಂದೂರಿನ ಮೊದಲ ಸಾಹಿತ್ಯದ ಉತ್ಸವವೂ ನವೋಲ್ಲಾಸದಿಂದ ತುಂಬಿತ್ತು . ಹೊಸ ತಾಲೂಕಿನ ಉತ್ಪತ್ತಿಯ ಜೊತೆಗೆ ಬೈಂದೂರು ಸೀಮೆಯಲ್ಲಿ ದಶಕಗಳಿಂದ ಶಿಕ್ಷಕ, ಸಾಹಿತಿ, ಸಂಘಟಕ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಹೀಗೆ ಹಲವು ಅವತಾರಗಳನ್ನು ಸಮರ್ಥವಾಗಿ ನಿಭಾಯಿಸಿದ “ಎಂಭತ್ತರ ಯುವಕ” ಮರವಂತೆಯ ಎಸ್ ಜನಾರ್ದನರ ಸಮ್ಮೇಳನಾಧ್ಯಕ್ಷತೆಯ ಆಯ್ಕೆಯೂ ಸಂಭ್ರಮದ ಕಾರಣಗಳಲ್ಲೊಂದಾಗಿತ್ತು. ಮರವಂತೆಯ ರಿಕ್ಷಾ ಚಾಲಕರು, ಕೊರಗ ತನಿಯ ಕಲಾವೇದಿಕೆಯವರು, ಊರಿನ ಸ್ನೇಹಿತರು, ಶಿಷ್ಯರು, ಪುಸ್ತಕ ಓದುವವರು, ಓದದವರು ಮರವಂತೆಯಿಂದ ಸಮ್ಮೇಳನ ನಡೆದ ಸ್ಥಳವಾದ ಬೈಂದೂರು ತಾಲೂಕಿನ ಕಂಬದಕೋಣೆ-ಕೆರ್ಗಾಲು ಗ್ರಾಮದ ವೇದಿಕೆಗೆ ಸ್ವಯಂಪ್ರೇರಣೆಯಿಂದ ಮೆರವಣಿಗೆಯಲ್ಲಿ ಜನಾರ್ಧನರನ್ನು ಕರೆದೊಯ್ದರು.

ಪುಸ್ತಕ ಪತ್ರಿಕೆಯ ಸಾಹಿತ್ಯವನ್ನು ಓದದವರೂ, ಕತೆ ಕವನಗಳಿಂದ ದೂರ ಇರುವವರೂ ಸಾಹಿತ್ಯ ಸಮ್ಮೇಳನವೊಂದರಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಚಂದದ ಬಿಸಿಲೊಂದು ಬ್ರಿಟನ್ನಿನ ಜನಮಾನಸದಲ್ಲಿ ಪುಳಕ ಉಂಟುಮಾಡುವಂತೆಯೇ ಬೈಂದೂರಿನ ಸಮ್ಮೇಳನ ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಟ್ಟಿತು; ಅಡಿಗರನ್ನು ನೆನಪಿಸುವ ಕೆಚ್ಚಿನ ರೊಚ್ಚಿನ ಸಾಲುಗಳು ಬ್ರಿಟನ್ನಿನ ಮಕ್ಕಳ ಘೋಷಣೆಯಾಗುತ್ತಿರುವಾಗಲೇ ಅಡಿಗರ ನೆನಪು ಬೈಂದೂರು ಸಮ್ಮೇಳನದಲ್ಲಿಯೂ ಸ್ಪಷ್ಟವಾಗಿ ಪಸರಿಸಿತ್ತು.

ಬೈಂದೂರು ತಾಲೂಕಿನ ಮೊದಲ ಸಮ್ಮೇಳನದ ವೇದಿಕೆಯಾದ ಹೊರಜಗತ್ತಿಗೆ ಅಪರಿಚಿತವಾದ ಕೆರ್ಗಾಲು ಅಡಿಗರ ಹುಟ್ಟು ಗ್ರಾಮ ಕೂಡ ಹೌದು. ಅಡಿಗರ ಮೂಲಕ ವಿಖ್ಯಾತಿಯನ್ನು ಪಡೆದ ಮೊಗೇರಿ ಇರುವುದು ಕೆರ್ಗಾಲು ಗ್ರಾಮದಲ್ಲೇ. ತನ್ನೂರಿನ ಚಂಡೆ ಮದ್ದಲೆಗಳ ಲಯವನ್ನು, ಮಣ್ಣಿನ ಸಾಹಿತ್ಯವನ್ನು ನವೋದಯ, ನವ್ಯ, ನವ್ಯೋತ್ತರ ಪ್ರಕಾರಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಹಿಡಿದಿಟ್ಟ ಅಡಿಗರಿಗೆ ಮೊಗೇರಿಯಲ್ಲೊಂದು ಸ್ಮಾರಕ ನಿರ್ಮಾಣವಾಗಲೇಬೇಕು, ಅದಕ್ಕಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದು ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿ ಕರೆಕೊಟ್ಟರು. ತಾನು ಶಿಕ್ಷಕನಾಗಿದ್ದಾಗ ತನ್ನಿಂದ ಪಠ್ಯ ಭೋದಿಸಿಕೊಂಡ ಶಿಷ್ಯರು ಈಗ ಜನಪ್ರತಿನಿಧಿಗಳಾದವರು, ಸರಕಾರಿ ಅಧಿಕಾರಿಗಳಾದವರು, ಸ್ನೇಹಿತರಾದವರು ಪ್ರೇಕ್ಷಕರಾಗಿ ಕುಳಿತ ಸಭೆಯಲ್ಲಿ ಅಡಿಗರ ಸ್ಮಾರಕ ನಿರ್ಮಾಣವೇ ತನಗೆ ಸಿಗಬಹುದಾದ ಗುರುದಕ್ಷಿಣೆ ಎಂದರು.

ಪುಟ್ಟಪ್ಪನವರಿಗೆ ಕುಪ್ಪಳಿಯಲ್ಲಿ, ಬೇಂದ್ರೆಯವರಿಗೆ ಧಾರವಾಡದಲ್ಲಿ, ಕಾರಂತರಿಗೆ ಕೋಟದಲ್ಲಿ ನಿರ್ಮಾಣವಾದ ಸ್ಮೃತಿಭವನಗಳು, ಥೀಮ್ ಪಾರ್ಕ್ ಗಳು ಅವರವರು ರಚಿಸಿದ ಅಮರ ಕಾವ್ಯಗಳ ಹೊರಗೂ ಒಂದು ನೆಲೆ ನೆನಪು ಕಟ್ಟಿಕೊಟ್ಟ ರೀತಿಯಲ್ಲಿಯೇ ಮೊಗೇರಿಯಲ್ಲೂ ಆಗಬೇಕು ಎಂದರು. ಅಡಿಗರ ಸ್ಮಾರಕದ ಬೇಡಿಕೆಯ ಜೊತೆ, ಸದ್ಯದ ಬಿಸಿ ಚರ್ಚೆಯ ವಿಷಯವಾದ ಕನ್ನಡ ಮಾಧ್ಯಮ ಶಾಲೆಗಳ ಸವಾಲುಗಳನ್ನು ಎದುರಿಸುವ ಬಗೆ, ಸಾಂಸ್ಕೃತಿಕ ವಿಕೇಂದ್ರೀಕರಣದ ಅಗತ್ಯತೆಯ ಬಗ್ಗೂ ತಮ್ಮ ಅಭಿಪ್ರಾಯ ತಿಳಿಸಿದರು. ಗ್ರಾಮ ಪಂಚಾಯತುಗಳು ಸಂಸ್ಕೃತಿ ಹಬ್ಬಗಳನ್ನು, ಕಲೆ ಸಾಹಿತ್ಯ ಪೋಷಕ ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆಗಳನ್ನು ನಡೆಸಿದ ಉದಾಹರಣೆಗಳನ್ನು ಉಲ್ಲೇಖಿಸಿದರು; ಸಮ್ಮೇಳನಗಳು ಜನಸಾಮಾನ್ಯರಿಗೆ ಹೇಗೆ ಆಪ್ತವಾಗಬಲ್ಲವು ಎಂಬ ವಿಚಾರವನ್ನೂ ತಿಳಿಸಿದರು.

ಇದೀಗ ಬೈಂದೂರಿನ ಚೊಚ್ಚಲ ಸಮ್ಮೇಳನವೂ ಆಗಿಹೋಗಿದೆ. ಬ್ರಿಟನ್ನಿನಲ್ಲಿ ವಾತಾವರಣ ವೈಪರೀತ್ಯದ ಬಗ್ಗಿನ ಮಕ್ಕಳ ಪೂರ್ವಭಾವಿ ಪ್ರತಿಭಟನೆಯೂ ಮುಗಿದಿದೆ. ಬೈಂದೂರಿನ ಪರಿಸರದಲ್ಲಿ ಅಡಿಗರ ಸ್ಮಾರಕದ ಬೇಡಿಕೆಯ ಚರ್ಚೆ ಜೀವಂತವಾಗಿದೆ. ವಾತಾವರಣದ ಎಚ್ಚರದ ಬಗ್ಗೆ ಜಗತ್ತಿನ ಹಲವು ದೇಶಗಳಂತೆ ಬ್ರಿಟನ್ನಿನಲ್ಲಿಯೂ ಮಕ್ಕಳ ಇನ್ನೊಂದು ಮುಷ್ಕರದ ತಯಾರಿ ನಡೆಯುತ್ತಿದೆ. ಅಡಿಗರ ಕಾವ್ಯವನ್ನು ನೆನಪಿಸುವ ಸಾಲುಗಳೂ ಶಕ್ತಿಪಡೆದು ಓಡಾಡುತ್ತಿವೆ. ಹಬ್ಬ ಕಲರವ ಸಾಹಿತ್ಯ ಸಲ್ಲಾಪ ಚಳವಳಿಗಳು ಬಿಸಿಲಲ್ಲಿ ಸೇರಿಕೊಂಡು ಬೆಚ್ಚಗಾಗಿವೆ.