ಈ ಚಿತ್ರದಲ್ಲೊಮ್ಮೆ ಹಾಗೇ ನಿರುಕು ಹಾಕಿ. ನೀಲದಲ್ಲಿ ಬಿಳಿ ಬಳಿದಂತಿರುವ ಗುಡಿಯ ಶಿಖರವನ್ನು ಪೈಪೋಟಿಯಲ್ಲಿ ಮುತ್ತಿದಂತಿರುವ ಆಜುಬಾಜಿನ ಇತರೆಗಳನ್ನೂ ಒಮ್ಮೆ ನೋಡಿ. ಕೆಮೆರಾದ ಕಣ್ಣು ಪಿಳಕ್ಕೆಂದಿರುವಲ್ಲಿಂದ ಅದಿಬದಿಯ ಪದರಗಳನ್ನು ಗಮನಿಸಿ. ಎಲ್ಲವನ್ನೂ ಒಂದಕ್ಕೊಂದು ತಳುಕು ಹಾಕುವಂತೆ ಹಾಗೇ ಗಹನಗೊಳ್ಳಿ. ಊ..ಹ್ಞೂಂ…. ವಿಶೇಷವೇನಿಲ್ಲವಲ್ಲ! ಇದು ಅಖಂಡ ದೇಶದ ಯಾವುದೇ ಊರಿನ ಚಿತ್ರವೇ ಇದ್ದೀತು. ಹಳತು, ಹೊಸತುಗಳು ಗೊತ್ತುಗುರಿಯಿಲ್ಲದೆ ಬೆರಕೆಗೊಳ್ಳುವ ನಮ್ಮ ಊರುಗಳ ಮತ್ತೊಂದು ಸಾಮಾನ್ಯ ಮಗ್ಗುಲು ಇದಷ್ಟೆ.
ನಮ್ಮ ನೋಟಕ್ಕೆ ಒದಗುವ ಇಂತಹ ಸಾಧಾರಣ ದೃಶ್ಯಗಳಲ್ಲಿ ಸಾಮಾನ್ಯವಾಗಿ ನೋಡುವುದನ್ನು ದಾಟಿಯೂ ನೋಡುವುದಾದರೆ ಇದಕ್ಕೂ ಒಂದಿಷ್ಟು ಟಿಪ್ಪಣಿ ಬರೆಯಬಹುದು. ಈ ದೇಶದ ಊರುಗಳೆಲ್ಲ ಹೀಗೆಯೇ. ಹಳೆಯ ತಿರುಳಿನ ಆಚೆಗೆ ಹೊಸ ಹೊಸ ಸಿಪ್ಪೆಗಳು ಸುತ್ತುವರೆಯುತ್ತ ಊರಿಗೊಂದು ‘ಒಟ್ಟನ್ನು’ ಕಟ್ಟುತ್ತ ಒಟ್ಟಾಗುತ್ತವೆ ಮತ್ತು ‘ಒಂದು’ ಕಟ್ಟಾಗುತ್ತವೆ. ಊರಿನ ಈ ‘ಕಟ್ಟಡ’ದಲ್ಲಿ ಇಂತಹ ಹತ್ತಾರು ಸಿಪ್ಪೆಗಳಿವೆ. ಪದರಗಳಿವೆ. ತೀರ ಹಳತಾದ ಒಳ ತಿರುಳಿನ ಸುತ್ತ ಕಡಿಮೆ ಹಳೆಯ ಮತ್ತು ಇತ್ತೀಚಿನ ಪಕಳೆಗಳಿರುತ್ತವೆ. ಅಂದರೆ ಈ ಒಗ್ಗಟ್ಟಿನಲ್ಲಿ ಪುರಾಣವಿದೆ, ಪುರಾಣಕ್ಕೀಚಿನದೂ ಇದೆ ಮತ್ತು ಪುರಾಣವಾಗಲಿರುವ ಪ್ರಸ್ತುತವೂ ಇದೆ. ಧರ್ಮವಿದೆ. ಧರ್ಮಾತೀತವೂ ಇದೆ ಮತ್ತು ರಾಜಕೀಯವೂ ಇದೆ. ದೇವರನ್ನು ನಂಬುವ ಮತ್ತು ಅದಕ್ಕೆಂದೇ ಆದ ಕೇಂದ್ರಗಳಿವೆ. ಅದರ ಸುತ್ತ ನಾವು ಮನುಷ್ಯರ ಲೀಲೆ, ಲೋಲಗಳಿಗೆಂದೇ ಆಗಿರುವ ಇತರೆಗಳಿವೆ. ವಿಶಿಷ್ಟವೆಂದರೆ ಇವೆಲ್ಲವೂ ಒಂದಕ್ಕೊಂದು ಅಡಚಣೆಯಾಗದ ಹಾಗೆ ಮತ್ತು ಒಂದಕ್ಕೊಂದು ಪೂರಕವಾಗುವ ಹಾಗೆ ಘಟಿಸುತ್ತಿವೆ. ಎಲ್ಲಕ್ಕೂ ಒಳಗಿನ ಒಳಗುಡಿಯನ್ನು ಸುತ್ತು ಬರುವ ಪ್ರದಕ್ಷಿಣೆಯೆಂಬುದು ಅನೂಚಾನವಾಗಿ ಅನುದಿನ ಜರುಗುತ್ತಿದೆ. ಪ್ರತಿ ಪರಿಕ್ರಮದಲ್ಲೂ ಚರಿತ್ರೆ ಪುನಃ ಪುನಃ ಸಂಭವಿಸಿಕೊಳ್ಳುತ್ತದೆ. ಗುಡಿಯ ಹೊರಗಿನ ಲೌಕಿಕಗಳೆಲ್ಲ ಅದರ ತಿರುಳೊಳಗಿನ ಸಂಭವದಲ್ಲಿ ಸಂಬಂಧ ಹೊಂದಿ, ಒಮ್ಮೊಮ್ಮೆ ಸಂಬಂಧವೇ ಇರದೆ ನಡೆಯುತ್ತಲೇ ಇವೆ. ಇಲ್ಲಿ ಎಲ್ಲವೂ ತಮ್ಮಷ್ಟಕ್ಕೆ ತಾವಾಗಿವೆ. ಒಂದಾಗಿಯೂ ಇವೆ. ಸೆಕ್ಯುಲರ್ ಅನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ -ಅನಿಸುವಂತೆ.
ಆದರೆ ವಿಷಯ ಇದಲ್ಲ. ಚಿತ್ರದಲ್ಲಿರುವ ಗುಡಿಯಿದೆಯಲ್ಲ- ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹೊರಗಿನಿಂದ ನಾವು ನೋಡಿರುವ ಯಾವುದೇ ಇನ್ನೊಂದು ಗುಡಿಯಂತಿರುವ ಇದನ್ನೊಮ್ಮೆ ಹೊಕ್ಕು ನೋಡಿದರೆ ಹೊರಗಿನಿಂದ ಕಾಣದ ಅಪ್ಪಟ ಬೆರಗೊಂದು ತೆರೆದುಕೊಳ್ಳುತ್ತದೆ. ಇದು ಮೌಂಟ್ ಅಬೂನಲ್ಲಿರುವ ದೇಲ್‌ವಾರ ದೇಗುಲದ ಬಹಿರಂಗ ಮಾತ್ರ. ಸುತ್ತಲೂ ಗುಡ್ಡಗಳಿಂದ ಕವಿದುಕೊಂಡಿರುವ ಈ ಗುಡಿ ಒಟ್ಟು ಐದು ಗುಡಿಗಳ ಸಮುಚ್ಚಯ. ಅಬೂ ಪರ್ವತದ ಯಾವುದೇ ಉತ್ತಂಗದಿಂದ ಕೆಳಗೊಂದು ತಪ್ಪಲಿನಲ್ಲಿ, ಆಚೆಯ ಕಣಿವೆಯಲ್ಲಿ ಸಾಧಾರಣವೆಂಬಂತೆ ಕಾಣುವ ಈ ಗುಡಿಗಳನ್ನು ಕೆಲವು ಶತಮಾನಗಳಲ್ಲಿ ಕಟ್ಟಲಾಗಿರುವ ಛತ್ರಗಳು, ಧರ್ಮಶಾಲೆಗಳು, ಬಸತಿಗಳು, ಮತ್ತು ಈಚೀಚಿನ ಹಲವು ಅಂಗಡಿ-ಮುಂಗಟ್ಟುಗಳು, ಹೊಟೆಲುಗಳು ಸುತ್ತುವರೆದು, ಎಲ್ಲವೂ ಈ ಹೊತ್ತಿನ ಸಾಮಾನ್ಯ ಐಹಿಕದ ನಮೂನೆಯೆಂಬಂತೆ ಅನಿಸುತ್ತವೆ. ಒಳಹೊಕ್ಕರೆ- ಅಬ್ಬಾ! ಬಿಳಿಗಲ್ಲಿನಲ್ಲಿ ನಾಜೂಕಿನ ಕುಸುರಿ ತೆಗೆದ ಕಂಬ, ತೊಲೆ, ನವರಂಗ, ಭುವನೇಶ್ವರಿಗಳ ಅಂತರಾಳ ಒಮ್ಮೆಲೇ ವಿಸ್ಮಯಿಸುತ್ತದೆ. ಹನ್ನೊಂದನೆಯ ಶತಮಾನದಲ್ಲಿ ಗುಜರಾತಿನ ಅರಸೊತ್ತಿಗೆಯೊಂದು ಹದಿನಾಲ್ಕು ವರ್ಷಗಳ ಕಾಲ, ಕೆಲವು ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಸಾವಿರದೈನೂರು ಶಿಲ್ಪಿಗಳನ್ನು ಒಟ್ಟಿಗೆ ದುಡಿಸಿ ಕಟ್ಟಿತೆನ್ನಲಾಗುವ ಪ್ರತೀತಿಯಿರುವ ಈ ಗುಡಿಗಳು ‘ಅವತ್ತಿನ’ ಮನುಷ್ಯ ಪ್ರಯತ್ನವನ್ನು ಬೆರಗಿನಿಂದ ಮೆರೆಯುತ್ತವೆ. ಕಟ್ಟುವ ಪರಂಪರೆಯ ಬಗ್ಗೆ ಸ್ವಕಲ್ಪಿತ ‘ಉದ್ಧಟ’ ಧೋರಣೆಗಳಿರುವ ನನಗೆ ಇಂತಹ ‘ಗುಡಿ’ಗಾರಿಕೆಯ ಉದ್ದೇಶ ಎಷ್ಟೇ ‘ಉದಾತ್ತ’ವಿದ್ದರೂ ಏಕೋ- ಅಷ್ಟೇ ಉದ್ಧಟವೆನಿಸುತ್ತದೆ. ನಮ್ಮೆಲ್ಲ ಪೇಗನ್ ಸಂಸ್ಕೃತಿಗಳಲ್ಲಿನ ದೇಗುಲಗಳ ಬಗ್ಗೆ, ‘ಪೌರುಷೇಯ’ ವಾಡಿಕೆಗಳಲ್ಲಿನ ಚರ್ಚು, ಮಸೀದಿಗಳ ಬಗ್ಗೆ ನನಗೆ ಯಾವತ್ತಿಗೂ ಹೀಗನಿಸಿದ್ದಿದೆ. ಏಕೆಂದರೆ ಈ ‘ಕಟ್ಟಡ’ಗಾರಿಕೆಯನ್ನು ಆಗಿಸಿದ್ದೆಲ್ಲ ಪ್ರಭುತ್ವಗಳೇ. ಮತ್ತು ಇವನ್ನು ಕಟ್ಟಿದ್ದು ಯಾವತ್ತೂ ಧರ್ಮದ ಜತೆ ಆಯಾ ‘ರಾಜಕೀಯ’ಗಳು ಬೆರೆತುಕೊಂಡಾಗಲೇ. ಅಲ್ಲದೆ ಕಟ್ಟುವುದು ಮತ್ತು ಕೆಡಹುವುದು ಯಾವತ್ತಿಗೂ ಆಗಿರುವುದು ಧರ್ಮಪ್ರೇರಿತ ರಾಜಕೀಯದಿಂದಲೇ. ದೇಲ್‌ವಾರದ ಈ ಗುಡಿಗಳನ್ನು ನೋಡುತ್ತಲೇ ನನ್ನ ಮನಸ್ಸಿನ ‘ಸ್ಪೆಷಲ್ ಮೇಕಿಗೆ’ ಅನಿಸಿದ್ದೇ ಹೀಗೆ. ಅಮೃತಶಿಲೆಯಂತಹ ನುಣುಪುಗಲ್ಲಿನಲ್ಲಿ, ಅದೂ ಒಗ್ಗಲ್ಲಿನಿಂದ ಇಷ್ಟು ನಾಜೂಕಿನ ಕುಸುರಿಯನ್ನು ಕಟೆಯುವುದೆಂದರೆ ಸಾಮಾನ್ಯವೇನಲ್ಲ. ಅದಕ್ಕೆ ಸಲಾಮೆನ್ನುವುದು ಸರಿಯೆ. ಆದರೆ ಅತಿಯೆನ್ನುವಷ್ಟು, ನೋಡಿದರೆ ಕೆತ್ತನೆಯ ಆಮಶಂಕೆಯಾಗಿಸುವಷ್ಟು ಹೂಬಳ್ಳಿಗಳನ್ನು ಇಂಚಿಂಚಿಗೂ ಮೂಡಿಸುವುದೆಂದರೆ- ಅದಕ್ಕಿದ್ದ ಪ್ರಭುತ್ವದ ಕುಮ್ಮಕ್ಕು ಎಷ್ಟಿರಬಹುದು? ಆ ಪ್ರಭುತ್ವದ ಸಂಪತ್ತು ಎಷ್ಟಿದ್ದಿರಬಹುದು? ಎಷ್ಟಾದರೂ ಗುಜರಾತಿನ ಅರಸೊತ್ತಿಗೆ. ಎಷ್ಟೋ ಕಾಲದಿಂದ ಕಡಲಾಚೆಗಿನ ವಿನಿಮಯದಲ್ಲಿ ತೊಡಗಿಕೊಂಡಿದ್ದುದು. ಹಾಗಾಗಿಯೇ ಇಲ್ಲಿನ ಗುಡ್ಡಗಾಡಿನಲ್ಲೆಲ್ಲು ಕಾಣಸಿಗದ ಬಿಳಿಗಲ್ಲನ್ನು ನೂರಾರು ಮೈಲುಗಳಾಚೆಯ ನೆಲವನ್ನು ಬಗೆದು ತಂದು ಕಟ್ಟಿದ್ದು… ಇತ್ಯಾದಿ.
ಆರ್ಕಿಟೆಕ್ಚರನ್ನು ಓದುವಾಗ ದೇಲ್‌ವಾರದ ಗುಡಿಗಳ ಬಗ್ಗೆ ಪರೀಕ್ಷೆಗೆಂದು ಉರು ಹಚ್ಚಿ ಇಪ್ಪತ್ತು ಅಂಕಗಳ ಪ್ರಶ್ನೆಗೆ ತಯಾರಿ ನಡೆಸಿದ ನೆನಪು. ಜೈನರು ಮತ್ತು ಬೌದ್ಧರ ಕಟ್ಟಡ ಸಂಸ್ಕೃತಿ ವೈದಿಕ ಗುಡಿಗಾರಿಕೆಗೂ ಹಿಂದಿನದೇ ಸರಿ. ಇಲ್ಲಿನ ಗುಡಿಗಳನ್ನು ಕಟ್ಟಿದ್ದು ಗುರ್ಜರ ದೊರೆಗಳು. ಜೈನ ಪರಂಪರೆಯಲ್ಲಿ ಬರುವ ಕಲಾವಂತಿಕೆಯ ಉತ್ಕೃಷ್ಟ ಪುರಾವೆಗಳೆಂದರೆ ಈ ಗುಡಿಗಳು… -ಹೀಗೆ. ಇವನ್ನು ಈಗ ಖುದ್ದು ನೋಡಿದ ಮೇಲೇಕೋ, ನೋಡಿದ್ದು ಪುಟಗಟ್ಟಲೆ ಓದಿನ ಜತೆ ತಾಳೆಯಾಗದೆ ಇಷ್ಟು ಬರೆಯಬೇಕೆನಿಸಿದ್ದು. ಇರಲಿ, ಹಾಗೆ ನೋಡಿದರೆ ನಾವು ಮನುಷ್ಯರು ಈವರೆಗೆ ಕಟ್ಟಿರುವ ಭವ್ಯ ಭವಿತವ್ಯಗಳೆಲ್ಲ ಆಯಾ ಕಾಲದ ಹೆಗ್ಗಳಿಕೆಗಳು ಅಷ್ಟೆ. ತಂಜಾವೂರಿನ ದೊಡ್ಡಗುಡಿ ಅವತ್ತಿಗೆ, ಇಸ್ತಾನ್‌ಬುಲ್‌ನಲ್ಲಿರುವ ಹಾಜಿಯಾ ಸೋಫಿಯಾ ಆ ಕಾಲಕ್ಕೆ, ಫತೆಹ್‌ಪುರ್ ಸಿಖ್ರಿ ಅಕ್ಬರನ ಮಟ್ಟಿಗೆ, ಬೆಳಗೊಳದ ಗೊಮ್ಮಟ ನಮ್ಮ ಗಂಗರಸರ ನೇರಕ್ಕೆ ಭವ್ಯವಾದವುಗಳೇ. ಅವನ್ನು ಕಟ್ಟಿದ ಮನಸ್ಸು ಮತ್ತು ಇಚ್ಛೆಗೆ ನಾವು ಯಾವತ್ತೊ ಭೇಷ್ ಅನ್ನುವುದೇ ಸೈ. ಆದರೆ ಅದನ್ನು ಬಿಟ್ಟು ಇನ್ನೊಂದಿಲ್ಲವೆನ್ನುವ ಉದ್ಗಾರಗಳು, ಮತ್ತವನ್ನೇ ಬೀಗಿ ಮಾರುವ ನಮ್ಮ ಪ್ರವಾಸೋದ್ಯಮದ ಘೋಷಗಳು, ಆಗಾಗ್ಗೆ ಜಗತ್ತಿನ ವಿಸ್ಮಯಗಳನ್ನು ಆಯಿಸಿ ಪರಿಷ್ಕರಿಸುವ ಅಂತರ್ರಾಷ್ಟ್ರೀಯ ಹುನ್ನಾರಗಳೇಕೋ ಒಪ್ಪವೆನಿಸುವುದೇ ಇಲ್ಲ. ಮಿಗಿಲಾಗಿ ನಮ್ಮ ವಿಶ್ವಗಳ ಸೃಜನೆಗೇ ಸೆಡ್ಡಾಗಬಲ್ಲ ಹುಲು ಮಾನುಷ ‘ಯತ್ನ’ಗಳು ಬೆರಗೆನ್ನುವ ನಮ್ಮ ಧೋರಣೆಗಳು ಸೈಯೆನಿಸುವುದಿಲ್ಲ. ಈ ನಿಟ್ಟಿನಲ್ಲಿ ನಾವು ಇತಿಹಾಸವನ್ನು ನೋಡುವ ಮತ್ತು ಓದುವ ರೀತಿಯನ್ನು ನಾವು ಬದಲಿಸಿಕೊಳ್ಳಬೇಕೇನೋ. ನಮ್ಮದೇ ಆಸುಪಾಸಿನ ಭಾಕ್ರಾನಂಗಲ್‌ನಂತಹ ಯೋಜನೆಗಳನ್ನು ನಾವು ಹೊಸ ಕಾಲದ ಮಾನ್ಯುಮೆಂಟುಗಳೆಂದು ಈಚೆಗೆ ಘೋಷಿಸಿದ್ದಾಯಿತು. ಕನ್ನಂಬಾಡಿ ಕಟ್ಟೆಯನ್ನು, ಲಿಂಗನಮಕ್ಕಿಯನ್ನು ಅನುಪಮವೆಂದು ಬಣ್ಣಿಸಿಕೊಂಡಿದ್ದಾಯಿತು. ಒಂದರ ಮೇಲೊಂದು ಒಡ್ಡು ಕಟ್ಟಿ ಇನ್ನೂ ಸಾಲದೆಂದು ನೀರಿನ ಹಾದಿಗಳನ್ನು ಬದಲಿಸಿದ್ದಾಯಿತು. ಟರ್ಬೈನು ತಿರುವಿ ಬದುಕು ಬೆಳಗಿಕೊಂಡಿದ್ದಾಯಿತು. ಜೋಗವೇ ಸಿರಿಬೆಳಕೆಂದಿದ್ದು ಪದೇ ಪದೇ ಕ್ಲೀಷೆಯಾಯಿತು. ಇನ್ನೀಗ ಸ್ಥಾವರಗಳನ್ನು ಕಟ್ಟುವ ಕಾಲ. ಅದಕ್ಕೊಂದು ಖಂಡಾಂತರದ ನೆಲೆಯ ಪರವಾನಗಿ… ಇವುಗಳಲ್ಲಿ ಒಂದೊಂದೂ ಅಚ್ಚರಿಯೇ! ಯಾರಲ್ಲವೆಂದವರು? ಯಾರಲ್ಲಗಳೆದವರು?!
ದೇಲ್‌ವಾರ ದೇಗುಲವನ್ನು ದಾಟಿ ಅದೇ ಬಳುಕುದಾರಿಯಲ್ಲಿ ಕುಲುಕಿ ಸಾಗಿಸುವ ಟ್ರಾವೆಲ್ಸ್‌ನವನು ಅಬೂ ಶಿಖರಸ್ತೋಮದಲ್ಲಿನ ಅತಿ ಎತ್ತರದ ನೆತ್ತಿಗೆ ಕರೆದೊಯ್ಯುತ್ತಾನೆ. ಅದುವೇ ಗುರುಶಿಖರ. ಅಲ್ಲೊಂದು ದತ್ತಪೀಠವಿದೆ. ಮುನ್ನೂರು ಮೆಟ್ಟಿಲುಗಳನ್ನು ಉಸ್ಸಂತ ಏರಿದರೆ ಆ ಎತ್ತರವನ್ನು ಮೆಟ್ಟಿ ನಿಂತ ಹಮ್ಮು ತಲೆದುಂಬುತ್ತದೆ. ಸುತ್ತಲಿನದೆಲ್ಲ ತಗ್ಗೆನಿಸುತ್ತದೆ. ಬಂದ ದಾರಿಗಳು ಬರೇ ಡೊಂಕುಗೆರೆಗಳಾಗಿರುತ್ತವೆ. ಈ ತನಕ ಅಂತಿಂತಲ್ಲವೆನಿಸಿದ್ದ ‘ದೇಲ್‌ವಾರ’ ವಿಶಾಲ ಹಸಿರಿನ ನಡುವೆ ಬೊಟ್ಟಿನಂತಿರುತ್ತದೆ. ಕೂಡಲೇ ಡೀಜೀ-ಕ್ಯಾಮುಗಳು ಪಿಳಕುತ್ತವೆ. ಆ ಕ್ಷಣದ ಪುಳಕ ಡಿಜಿಟಲ್ ಮೆಮೊರಿಯಾಗುತ್ತದೆ. ದತ್ತಪೀಠದ ಹೆಬ್ಬಂಡೆ ನೆನಪಿನಲ್ಲುಳಿಯುವುದಿಲ್ಲ. ಅಲ್ಲೇ ಬದಿಯ ಗುಡ್ಡವನ್ನು ನೆಟ್ಟುಕೊಂಡಿರುವ ದೂರದಿಂದ ಕಟ್ಟಡಗಳಂತೆ ತೋರಿದ್ದ ಉಕ್ಕಿನ ಇನ್‌ಸ್ಟಲೇಷನುಗಳು ಗಮನ ಸೆಳೆಯುತ್ತವೆ. ಅಲ್ಲೇ ಗೋಪುರದ ಮೇಲಿನ ಡಿಷ್ ತರಹದ ತಟ್ಟೆಗಳು ಈ ಕಾಲದ ಸಂಕೇತಗಳಾಗುತ್ತವೆ. ಅವೇನೆಂದು ಕೇಳಿದರೆ ಅಶರೀರವಾಣಿಯೊಂದು ಮೊಳಗುತ್ತದೆ. ‘ಇಲ್ಲಿಂದ ಪಾಕ್ ಒಂದಿನ್ನೂರು ಮುನ್ನೂರು ಮೈಲಷ್ಟೆ. ಗಡಿಯ ಮೇಲೆ ನಿಗಾವಿಡುವ ಮಿಲಿಟರಿ ಬೇಸ್ ಅದು!!’ ಎಲ್ಲರಿಗೂ ರೋಮಾಂಚನವಾಗುತ್ತದೆ. ಗಡಿ ಮತ್ತು ಗಡುವುಗಳನ್ನು ಕೊರೆದಿರುವ ನಮ್ಮ ಹೊತ್ತುಗೊತ್ತುಗಳ ನಾಜೂಕು ತಕ್ಷಣದ ವಿಸ್ಮಯವೆನಿಸುತ್ತದೆ.