ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಲಗುಬಗೆಯಿಂದ ದಾಸನಕೊಪ್ಪಕ್ಕೆ ಮರಳಿ, ಕೂಡಲೇ ಗುಡ್ಡಪ್ಪನಿಗೆ ಫೋನಿಸಿದೆ. ಎರಡು ಮೂರು ರಿಂಗ್ ಆದರೂ ಅವನು ಫೋನ್ ತೆಗಿಯಲಿಲ್ಲ. “ಎಲ್ಲಿ ಅದಿರಿ” ಅಂತ ಕೇಳಿ, ನನ್ನ ಜಮೀನಿನಿನಲ್ಲಿ ಯಾರೋ ಬೋರು ಹೊಡೀತಾ ಇದಾರೆ ನೋಡ್ರಿ ಅಂತ ತಲೆಯಲ್ಲಿ ಹುಳು ಬಿಟ್ಟು ಈಗ ಇವನೇ ನಾಪತ್ತೆಯಾಗಿದ್ದ! ಬಹುಶಃ ಹೊಲದಲ್ಲೆ ಇದ್ದಾನೇನೋ ಅಂತ ಅಲ್ಲಿಗೆ ಹೊರಟೆ. ಮುಖ್ಯ ದಾರಿಯಿಂದ ನನ್ನ ಹೊಲಕ್ಕೆ 4 ಕಿಲೋಮೀಟರು ದೂರ. ಪೂರ್ತಿ ಹೊಲದವರೆಗೆ ಡಾಂಬರು ರಸ್ತೆ ಆಗಿಲ್ಲ. ಕೊನೆಯ ಒಂದು ಕಿಲೋಮೀಟರು ಕಚ್ಚಾ ಮಣ್ಣಿನ ರಸ್ತೆ. ಮಳೆ ಆದರೆ ಅಲ್ಲಿ ಅಡ್ಡಾಡೋದು ಕಷ್ಟ. ಸಧ್ಯ ಮಳೆ ಇರಲಿಲ್ಲವಾದ್ದರಿಂದ ಬೇಗನೆ ಅಲ್ಲಿಗೆ ತಲುಪಿದೆ. ಹೊಲದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಬೋರ್ ಗಾಡಿ ಕಾಣಲಿಲ್ಲ. ಸಮಾಧಾನವಾಯಿತಾದರೂ ಈ ಗುಡ್ಡಪ್ಪ ಯಾಕೆ ಹಾಗೆ ಸುಳ್ಳು ಹೇಳಿದ ಅಂತ ಕೋಪ ಬಂತು. ಮತ್ತೆ ಫೋನ್ ಮಾಡಿದೆ. ಈಗ ಅವನ ಫೋನು ಸ್ವಿಚ್ ಆಫ್ ಆಗಿತ್ತು!
ಮುಂದೆ ಯಾವಾಗಲೋ ಒಂದಿನ ಅವನು ಸಿಕ್ಕಾಗ, ಯಾಕರಿ ಗುಡ್ಡಪ್ಪ ಫೋನ್ ಎತ್ತಲಿಲ್ಲ ಅಂತ ಕೇಳಿದರೆ ಅವನು ಹೇಳುವ ಉತ್ತರಗಳು ನನಗೆ ಬಾಯಿಪಾಠ ಆಗಿದ್ದವು. ಹಾಗೆ ಕೇಳಿದಾಗ ಅಲ್ಲಿನ ಹಲವರು ಹೇಳುವ ಉತ್ತರಗಳು ತುಂಬಾ ಮಜವಾಗಿರುತ್ತವೆ.
“ಹೌದ? ನೀವು ಫೋನ್ ಮಾಡಿದ್ರಿ?! ಏ ಇಲ್ಲ ಬಿಡ್ರಿ..” – ನಾನೇ ಸುಳ್ಳು ಹೇಳಿರಬಹುದು ಅನ್ನೋ ಹಾಗೆ!
ಇಲ್ಲವೇ “ನನ್ನ ಫೋನ್ ನೀರಾಗ ಬಿದ್ದು ಹಾಳಾಗೈತಿ.. ಕೇಳಂಗೇ ಇಲ್ಲ ಬಿಡ್ರಿ..”
ಅಥವಾ “ಫೋನ್ ನನ್ನ ಹೆಂಡತಿ ಕಡೆ ಇರತೈತಿ. ಗೊತ್ತ ಆಗಂಗಿಲ್ಲ!”
ಇನ್ನೂ ಅದ್ಭುತ ಕಾರಣ, “ಫೋನ್ ಬಿದ್ದು blast ಆಗಿ ಬಿಟ್ಟಯಿತಿ.. “ – ಅದೊಂದು ಬಾಂಬ್ ಏನೋ ಅನ್ನೋ ತರಹ!
ಹೀಗಾಗಿ ಅಲ್ಲಿ ಯಾರಿಗೂ ಫೋನ್ ಯಾಕೆ ಎತ್ತಿಲ್ಲ ಅಂತ ಕೇಳೋದನ್ನೇ ಬಿಟ್ಟಿದ್ದೆ.
ಆದರೂ ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು! ಎಷ್ಟೋ ಸಲ ಹಳ್ಳಿಗಳಲ್ಲಿ ನಡೆದ ಹಳೆಯ ಘಟನೆಗಳು ನಮ್ಮ ತಲೆಯಲ್ಲಿ ಯಾವಾಗಲೂ ಗಿರಕಿ ಹೊಡೆಯುತ್ತಿರುವ ಕಾರಣ, ಏನೇ ಪ್ರಸ್ತುತ ಘಟನೆಗಳಿಗೂ ನಮ್ಮ ತಲೆ ಬೇರೆಯದೇ ಒಂದು ಅರ್ಥ ಕಲ್ಪಿಸಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ, ಗಡಿಬಿಡಿಯಲ್ಲಿ ಕೆಟ್ಟ ಯೋಚನೆಗಳೆ ಬರುತ್ತವೆ.
ಹಿಂದೊಮ್ಮೆ ನಾನು ಬೆಂಗಳೂರಿನಲ್ಲಿ ಇದ್ದಾಗ ಯಾವನೋ ಫೋನ್ ಮಾಡಿದ್ದ. ತಾನು ದಾಸನಕೊಪ್ಪದಿಂದ ಫೋನ್ ಮಾಡುತ್ತಿದ್ದೇನೆ ಅಂತಲೂ ನಿಮ್ಮ ಹೆಸರೇನು ಅಂತ ಕೇಳಿದ. ಅವನೇ ಫೋನ್ ಮಾಡಿದ್ದರಿಂದ ಸಹಜವಾಗಿ ನೀವು ಯಾರು ಮೊದಲು ಹೇಳಿ ಅಂತ ವಿಚಾರಿಸಿದೆ. ತಾನು ಫಾರೆಸ್ಟ್ ಡಿಪಾರ್ಟ್ಮೆಂಟ್ ನವನು ಅಂತ ಹೇಳಿದ. ಓಹ್ ಅವರು ಯಾಕೆ ಮಾಡಿರಬಹುದು ಅಂತ ಯೋಚನೆ ಸುತ್ತಿಕೊಂಡಿತು. ಕಾಡುಗಳ್ಳರು ಕೂಡ ಅವರಿಗೆ ಅಷ್ಟು ಹೆದರೋಲ್ಲ, ನಾವು ಏನೂ ಮಾಡದೆ ಇಷ್ಟು ತಲೆ ಕೆಡೆಸಿಕೊಳ್ಳುತ್ತೇವೆ! ಅವನಿಗೆ ಕೇಳಿದಾಗ ಏನೋ ಒಂದು ಚೆಕ್ ಮಾಡಬೇಕಿತ್ತು ಅಂದ. ನನ್ನ ಹೆಸರು ಕೂಡ ಹೇಳಿದೆ. ಆದರೆ ನಂತರ ಡಿಪಾರ್ಟ್ಮೆಂಟ್ನಲ್ಲಿ ಆ ಹೆಸರಿನನವರು ಯಾರೂ ಇಲ್ಲ ಅಂತ ತಿಳಿಯಿತು. ಅವನು ಯಾಕೆ ಮಾಡಿದ್ದನೋ? ತಾನು ಅಲ್ಲಿ ಇಲ್ಲ ಅಂತ ತಿಳಿಯಲೇ? ಅಥವಾ ಬೇರೆ ಏನೋ ಮಾಹಿತಿ ಬೇಕಿತ್ತೆ? ನಾನು ಅವನಿಗೆ ಹೆಸರು ಹೇಳಬಾರದಿತ್ತೇನೋ?.. ಎಂಬಿತ್ಯಾದಿ ಯೋಚನೆಗಳು ಸುತ್ತಿಕೊಂಡವು. ಇಂತಹ ಘಟನೆಗಳು ಒಮ್ಮೊಮ್ಮೆ ನಮ್ಮ ಯೋಚನಾ ಲಹರಿಯನ್ನೇ ಬದಲಿಸಿಬಿಡುತ್ತವೆ. ವಿನಾಕಾರಣ ಎಲ್ಲರ ಮೇಲೂ ಸಂಶಯ ಪಡುವಂತೆ ಮಾಡುತ್ತವೆ!
*****
ಮನೆಗೆ ಮರಳಿ ಒಂದಿಷ್ಟು ಅಳಿದುಳಿದ ಕೆಲಸಗಳನ್ನು ಪೂರೈಸಿದೆ. ಸಂಜೆ ಚಾ ಕುಡಿಯಬೇಕು ಅಂತ ಹೋದಾಗ ಹಾಲು ಇಲ್ಲ ಎಂಬುದು ಅರಿವಾಯ್ತು. ಬೆಂಗಳೂರಿನಲ್ಲಿ ಯಾವತ್ತೂ ಮನೆಯಲ್ಲಿ ಏನಿದೆ ಏನಿಲ್ಲ ಎಂಬ ಯೋಚನೆಯನ್ನೇ ನಾನು ಮಾಡಲ್ಲ. ಎಲ್ಲವನ್ನೂ ಆಶಾ ನಿರ್ವಹಿಸಿರುತ್ತಾಳೆ. ಟೈಮ್ಗೆ ಸರಿಯಾಗಿ ಊಟ ತಿಂಡಿ ಚಾ ಸವಿಯುವುದು ಅಷ್ಟೇ ನನ್ನ ಕೆಲಸ! ಇಲ್ಲಿ ಹಳ್ಳಿಯಲ್ಲಿ ಒಬ್ಬಂಟಿಯಾಗಿದ್ದಾಗ ಅವಳು ಮನೆಯನ್ನು ಎಷ್ಟು ಅಚ್ಚು ಕಟ್ಟಾಗಿ ನೋಡಿಕೊಳ್ಳುತ್ತಾಳೆ ಅಂತ ಜ್ಞಾನೋದಯ ಆಯ್ತು! ನನಗೆ ಕೇಳಿದರೆ ಎಲ್ಲಾ ಮದುವೆಯಾದ ಗಂಡಸರು ಆಗಾಗ ಹೀಗೆ ಒಬ್ಬಂಟಿಯಾಗಿ ಇದ್ದು ಬರಬೇಕು ಆಗಲೇ ಹೆಂಡತಿಯ ಮಹತ್ವ ಗೊತ್ತಾದೀತೇನೋ?! ಆದರೆ ಹಾಗಂತ ಹೋದ ಎಷ್ಟೋ ಗಂಡಸರು ಹೆಂಡತಿ ಇಲ್ಲದೇನೆ ಚೆನ್ನಾಗಿದೆ ಅಂತ ವಾಪಸ್ಸು ಬರದೇ ಹೋದರೆ ಕಷ್ಟ! ಹೀಗಾಗಿ ಈ ಸಲಹೆಗೆ conditions apply!
ಹೊರಗಡೆ ಹೋಗಿ ಅಂಗಡಿಯಲ್ಲಿ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಬಂದೆ. ಈಗೀಗ ಹಲವಾರು ಹಾಲಿನ ಕಂಪೆನಿಗಳು ನಾಯಿಕೊಡೆಯಂತೆ ಎದ್ದಿವೆ (ಈಗೀಗ ನಾಯಿಕೊಡೆಗಳೇ ಅಪರೂಪ, ಆ ಮಾತು ಬೇರೆ)! ಕೆಲವು ಹಾಲುಗಳನ್ನು ಕೆಮಿಕಲ್ನಲ್ಲೇ ಮಾಡಿರುತ್ತಾರೆ. ಅವುಗಳನ್ನು ಹೆಪ್ಪು ಹಾಕಿದರೆ ಮೊಸರು ಕೂಡ ಆಗೋದಿಲ್ಲ. ಹೀಗಾಗಿ ನಂದಿನಿ ಹಾಲು ನಮ್ಮ ಆದ್ಯತೆ. ಅದೂ ಸಿಕ್ಕಿಲ್ಲ ಅಂದರೆ ಹಾಲಿನ ಪುಡಿ ತಂದೇನು, ಕೆಮಿಕಲ್ ಹಾಲಂತೂ ಊಹೂಂ.
“ಅಲ್ಲಿ ಎಲ್ಲಾದರೂ ಹಾಲಿನ ಡೇರಿ ಇರಬೇಕು, ಹಳ್ಳಿಯಲ್ಲಿ ಇದ್ದು ತಾಜಾ ಹಾಲು ಕೂಡಿಯೋದು ಬಿಟ್ಟು ಪ್ಯಾಕೆಟ್ ಹಾಲು ಯಾಕೆ ತರ್ತಿ?” ಅಂತ ಆಶಾ ಬೈದಿದ್ದರೂ ಕೂಡ ಇನ್ನೂ ಆ ಡೈರಿಯನ್ನು ಹುಡುಕುವ ಗೋಜಿಗೆ ಹೋಗಿರಲಿಲ್ಲ. ನಂದಿನಿಯವರ ಕಲೆಕ್ಷನ್ ಪಾಯಿಂಟ್ ಅಲ್ಲಿ ಹತ್ತಿರದಲ್ಲೇ ಇದೆ ಎಂಬ ಸಂಗತಿ ಗೊತ್ತಿತ್ತು. ಪ್ರತಿ ದಿನ ಸ್ಥಳೀಯ ರೈತರು ತಾವು ಕರೆದ ಹಾಲನ್ನು ಅಲ್ಲಿಗೆ ಕೊಟ್ಟು ಹೋಗುತ್ತಾರೆ. ಅಲ್ಲಿ ಹಾಲಿನ ಬೆಲೆ ಪ್ಯಾಕೆಟ್ ಹಾಲಿಗಿಂತ ಕಡಿಮೆಯೇ. ಅದೂ ಅಲ್ಲದೆ ತಾಜಾ ಬೇರೆ! ಆದರೆ ಮೈಗಳ್ಳತನಕ್ಕೆ ಔಷಧಿ ಎಲ್ಲಿದೆ?!
ನಾನು ಸ್ಕೂಟರ್ನ ಸ್ಟ್ಯಾಂಡ್ ಹಾಕಿ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಇನ್ನೇನು ಒಳಗೆ ಹೋಗಬೇಕು ಎಂಬುವಷ್ಟರಲ್ಲಿ ಯಾರೋ ನನ್ನ ನೋಡಿ ನಗೆ ಬೀರಿದರು. ನಮಸ್ಕಾರ ಅಂದೆ. ಅಲ್ಲಿ ಹೊಸಬರು ಸಿಕ್ಕರೆ ಮಾತಾಡಲು ಹಿಂದೆಮುಂದೆ ನೋಡುತ್ತಿದ್ದೆ. ಅದಕ್ಕೆ ಕಾರಣ ಹಿಂದಿನ ಕೆಲವು ಘಟನೆಗಳೆ. ಅಕ್ಕಿ ಎಷ್ಟು ಬಂತು? ಯಾಕೆ ಇಲ್ಲಿಗೆ ಬಂದೀರಿ? ತಲೆಗಿಲೆ ಸರಿ ಇದೆಯಾ ಎಂಬಂತಹ ತಲೆಹರಟೆ ಪ್ರಶ್ನೆಗಳನ್ನು ಉತ್ತರಿಸಿ ಸಮಯ ಹಾಳು ಮಾಡುವ ಬದಲು ಯಾರೇ ಹೊಸಬರನ್ನು ಮಾತನಾಡಿಸುವಾಗ ಸ್ವಲ್ಪ ಯೋಚಿಸುವುದನ್ನು ಕಲಿತಿದ್ದೆ.
ಬೆಂಗಳೂರಿನಲ್ಲಿ ಯಾವತ್ತೂ ಮನೆಯಲ್ಲಿ ಏನಿದೆ ಏನಿಲ್ಲ ಎಂಬ ಯೋಚನೆಯನ್ನೇ ನಾನು ಮಾಡಲ್ಲ. ಎಲ್ಲವನ್ನೂ ಆಶಾ ನಿರ್ವಹಿಸಿರುತ್ತಾಳೆ. ಟೈಮ್ಗೆ ಸರಿಯಾಗಿ ಊಟ ತಿಂಡಿ ಚಾ ಸವಿಯುವುದು ಅಷ್ಟೇ ನನ್ನ ಕೆಲಸ! ಇಲ್ಲಿ ಹಳ್ಳಿಯಲ್ಲಿ ಒಬ್ಬಂಟಿಯಾಗಿದ್ದಾಗ ಅವಳು ಮನೆಯನ್ನು ಎಷ್ಟು ಅಚ್ಚು ಕಟ್ಟಾಗಿ ನೋಡಿಕೊಳ್ಳುತ್ತಾಳೆ ಅಂತ ಜ್ಞಾನೋದಯ ಆಯ್ತು!
“ಸರ್ ಅವತ್ತು ಭತ್ತ ಒಣಗಿಸುತ್ತಿದ್ರಿ ನೀವ ಅಲ್ಲಾ?” ಅಂತ ಕೇಳಿದರು. ಅಯ್ಯೋ ಯಪ್ಪ ಮತ್ತೆ ಇವರೂ ಕೂಡ ಆವೇ ಪ್ರಶ್ನೆಗಳನ್ನು ಕೇಳುತ್ತಾರೆ ಅಂದುಕೊಳ್ಳುತ್ತಾ “ಹೌದು ಹೌದರಿ..” ಅಂದೆ. ಆದರೆ ಆ ಮನುಷ್ಯ ಆ ತರಹದ ತರಲೆ ಪ್ರಶ್ನೆಗಳನ್ನು ಕೇಳಲಿಲ್ಲ. ಓದಿಕೊಂಡವರು ಅಂತ ಗೊತ್ತಾಯ್ತು. ಇವರು ಅಡ್ಡಿ ಇಲ್ಲ ಅನಿಸಿತು. ಅವರ ಹೆಸರು ಸುನಿಲ್ ಅಂತ ಹೇಳಿದರು. ಅವರ ತೋಟ ಹತ್ತಿರದಲ್ಲೇ ಇತ್ತು. ನಾಲ್ಕು ಎಕರೆಯಲ್ಲಿ ಅಡಿಕೆ ಹಾಕಿದ್ದೇನೆ, ಈಗ ಮೂರು ವರ್ಷ ಆಯ್ತು ಅಂದರು. ತೋಟದ ಹತ್ತಿರ ಆಗುತ್ತೆ ಅಂತ ನಾನು ಇದ್ದ ಚಾಳಿನಲ್ಲೇ ಅವರೂ ಬಾಡಿಗೆಗೆ ಅಂತ ಇದ್ದರು ಅಂತ ಗೊತ್ತಾಯ್ತು. ಸಧ್ಯ ನನಗೆ ಇನ್ನೊಬ್ಬರು ಕಂಪೆನಿ ಸಿಕ್ಕರು ಅನಿಸಿತು. ಆದರೂ ಸ್ವಲ್ಪ ಹುಷಾರಾಗಿಯೇ ಇದ್ದೇ.
ಹಾಗೆಯೇ ಮಾತುಗಳು ಮುಂದುವರೆದಾಗ ಅವರ ಬಗ್ಗೆ ಇನ್ನಷ್ಟು ವಿಷಯಗಳು ತಿಳಿದವು. ಅವರು ಈಗಾಗಲೇ ಹೊಟೇಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಕೃಷಿ ಮಾಡುತ್ತಿದ್ದರು. ಅವರ ತೋಟ ಅಲ್ಲಿಯೇ ಹತ್ತಿರ ಇದ್ದಿದ್ದರಿಂದ ಹೋಗಿ ಬರೋಣ ಬರ್ರಿ ಸರs ಅಂತ ಆತ್ಮೀಯತೆಯಿಂದ ಕರೆದರು. ನಡೀರಿ ಅಂತ ಹೊರಟೆ ಬಿಟ್ಟೆ.
ಅವರ ಅಡಿಕೆ ತೋಟ ಸಧ್ಯ ಮೂರು ವರ್ಷ ಹಳೆಯದಾಗಿತ್ತು. ಚೆನ್ನಾಗಿ ಬೆಳೆದಿದ್ದವು. ಆದರೂ ಬಿಸಿಲಿನ ತಾಪಕ್ಕೆ ಸ್ವಲ್ಪ ಹಳದಿ ಅನಿಸುತ್ತಿದ್ದವು. ಅದ್ಯಾಕೆ ಅಂದರೆ ಅಡಿಕೆ ಜೊತೆಗೆ ಬಾಳೆಯಂತಹ ನೆರಳು ಕೊಡುವ ಗಿಡಗಳನ್ನು ಅವರು ಹಾಕಿರಲಿಲ್ಲ. ಅಡಿಕೆ ಗಿಡಕ್ಕೆ ಒಂದೆರಡು ವರ್ಷಗಳಾದರೂ ನೆರಳು ಬೇಕು ಅಂತ ಹೇಳ್ತಾರೆ. ಆದರೆ ಹೀಗೆ ಬಿಸಿಲನ್ನು ತಡೆದುಕೊಂಡು ಬೆಳೆಯುವ ಅಡಿಕೆ ಗಿಡಗಳು ತುಂಬಾ ಬಲಿಷ್ಟವಾಗಿ ಬೆಳೆಯುತ್ತವೆ ಹಾಗೂ ಬೇಗನೆ ಫಲ ಕೊಡುತ್ತವೆ ಅಂಬುದು ಅವರ ತರ್ಕವಾಗಿತ್ತು. ಇದ್ದರೂ ಇದ್ದೀತು.. ಅಡಿಕೆ ಗಿಡ ಬೆಳೆದಂತೆ ಅದರ ಕಾಂಡದ ಮೇಲೆ ಆಗುವ ರಿಂಗ್ಗಳಿಗೆ ಗಣ್ಣು ಅಂತಾರೆ. ಅವರ ತೋಟದಲ್ಲಿ ಆ ಗಿಡಗಳ ಗಣ್ಣುಗಳ ಎತ್ತರ ಕಡಿಮೆ ಇತ್ತು. ಒಂದು ವೇಳೆ ನೆರಳಿದ್ದರೆ ಆ ಗಣ್ಣುಗಳ ಎತ್ತರ ಹೆಚ್ಚು ಇರುತ್ತದೆಯಂತೆ. ಗಿಡಗಳು ಬೆಳಕು ಹುಡುಕಿಕೊಂಡು ಹೋಗುವಾಗ ಉದ್ದವಾಗುವುದು ಸಹಜ ಅಲ್ಲವೇ? ಅವತ್ತು ಒಂದು ಹೊಸ ವಿಷಯ ಗೊತ್ತಾಗಿತ್ತು. ಗಿಡಗಳ ಸಾಲಿನ ನಡುವೆ ಟ್ರ್ಯಾಕ್ಟರ್ ಹೊಡಿಸಿದ್ದು ಕಂಡುಬಂತು. ಯಾಕೆ ಅಂತ ಕೇಳಿದಾಗ ಕಳೆಗಳು ಬೆಳೆದಿದ್ದಕ್ಕೆ ಹಾಗೆ ಮಾಡಿಸಿದೆ ಅಂದರು. ಆದರೆ ಹಾಗೆ ಟ್ರ್ಯಾಕ್ಟರ್ ಹೊಡೆದರೆ ಅಡಿಕೆ ಬೇರುಗಳಿಗೆ ಹಾನಿಯಾಗುತ್ತೆ ಅಂತ ನಾನು ವಿವರಿಸಿ ಹೇಳಿದೆ. ಅವರಿಗೂ ಅದು ಹೌದು ಅನಿಸಿತು. ಮತ್ತೆ ಏನು ಮಾಡಬೇಕು ಸಾರ್ ಕಳೆಗೆ ಅಂದರು. ಹಾಗೆಯೇ ಬಿಡಿ ತುಂಬಾ ಅಡ್ಡಾಡಲು ಕಷ್ಟ ಆದರೆ ಕತ್ತರಿಸಿ ಅಲ್ಲಿಯೇ ಮುಚ್ಚಿಗೆ ಮಾಡಿ, ಮತ್ತದೇ ಗೊಬ್ಬರ ಆಗುತ್ತೆ ಅಂದೆ.
ಹಾಗೆಯೇ ತೋಟದ ಸುತ್ತಲೂ ಅಡ್ಡಾಡುತ್ತಿದ್ದೆವು. ಸಹಜವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಇಳಿಜಾರು ಇದ್ದದ್ದು ಗಮನಿಸಿದೆ. ತುಂಬಾ ನೀರು ಅಲ್ಲಿಂದ ಹರಿದು ಮಣ್ಣನ್ನು ಕೂಡ ಕೊಚ್ಚಿಕೊಂಡು ಪೋಲಾಗುವ ಸಂಗತಿ ಅವರಿಗೆ ತಿಳಿಸಿದೆ. ಅದಕ್ಕೆ ಏನು ಮಾಡೋದು ಅಂತ ಕೇಳಿದರು. ನೀರಿನ ಹರಿವಿಗೆ ಅಡ್ಡಾಗಿ, ಅಡಿಕೆ ಸಾಲುಗಳ ಮಧ್ಯ trench / ಕಾಲುವೆಗಳನ್ನು ಮಾಡಿಸಿ ಅಂದೆ. ಆ ಕಾಲುವೆ ಒಳಗೆ ನಿಮ್ಮ ತೋಟದ ಯಾವುದೇ ತ್ಯಾಜ್ಯ, ಕಳೆ ಇದ್ದರೂ ತಂದು ಸುರಿದರೆ ಅದೇ ಕ್ರಮೇಣ ಕಳಿತು ಗೊಬ್ಬರ ಆಗುತ್ತೆ. ಜೊತೆಗೆ ಹರಿಯುವ ನೀರನ್ನು ಹಿಡಿದು ಇಂಗುವಂತೆ ಮಾಡುವ ಸಾಮರ್ಥ್ಯ ಆ ಕಾಲುವೆಗೆ ಬರುತ್ತೆ ಅಂತ ತಿಳಿಸಿದೆ. ಅದರ ಪಕ್ಕದಲ್ಲೇ ಇರುವ ಅಡಿಕೆ ಮರಗಳ ಬೇರುಗಳಿಗೆ ಅಲ್ಲಿಯೇ ಆಹಾರ ಸಿಗುತ್ತೆ. ಅದು ಅವರಿಗೆ ಸರಿ ಕಂಡಿತು. ಅವರಿಗೆ ನನ್ನ ಮೇಲೆ ಸ್ವಲ್ಪ ನಂಬಿಕೆ ಬಂತು ಅನಿಸುತ್ತೆ. ನಾನು ಬೆಂಗಳೂರಿನಲ್ಲಿ ಮಣ್ಣು ರಹಿತ ಕೃಷಿ ಮಾಡುತ್ತಿರುವ ವಿಷಯ ಕೂಡ ಅವರಿಗೆ ತಿಳಿಸಿದೆ. ಇಲ್ಲೂ ಮಾಡೋಣ ಸರ ಅಂತ ಉತ್ಸಾಹ ತೋರಿದರು. ನಾನು ನೋಡೋಣ ಅಂತ ಮುಗುಳುನಕ್ಕೆ!
ನನ್ನ ಮನೆಯ ಪಕ್ಕದಲ್ಲೇ ಒಬ್ಬರು ರೈತಾನಂದರು ಸಿಕ್ಕಿದ್ದು ನನಗೆ ಖುಷಿ ಕೊಟ್ಟಿತ್ತು. ಅಂದಹಾಗೆ ಅವರಿಗೆ ಹಾಲಿನ ಡೇರಿ ಎಲ್ಲಿದೆ ಅಂತ ಗೊತ್ತಿತ್ತು. ಅವತ್ತೇ ಅವರ ಜೊತೆಗೆ ಹೋಗಿ ನಂದಿನಿಯ ತಾಜಾ ಹಾಲನ್ನು ತಂದು ಚಾ ಕುಡಿದೆ. ಡೇರಿ ಸಿಕ್ಕ ವಿಷಯ ಆಶಾಳಿಗೆ ತಿಳಿಸಿದಾಗ ಖುಷಿಪಟ್ಟಳು. ಅವಳ ವಿಲ್ ಪವರ್ ಭಾರಿ strong ಕಣ್ರೀ!
(ಮುಂದುವರಿಯುವುದು..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ಸರ್, ಕಡೆಗೂ ತಮಗೆ ಜ್ಞಾನೋದಯ ಆದ ವಿಷಯ ತಿಳಿದು ನಮಗೆ ಖುಷಿ ಆಯ್ತು. ಇನ್ನು ಮುಂದಿನ ಎಲ್ಲ ಕಂತುಗಳು ನಮಗೆ ಪ್ರವಚನಗಳೆ ????????
ಗದಗ ಸರ್, ನಾನು ಒಬ್ಬ ದೊಡ್ಡ ಅಜ್ಞಾನಿ, ದಿನವೂ ನನಗೆ ಜ್ಞಾನೋದಯವೇ! ಅನುಭವದಲ್ಲಿ ಅಮೃತ ಇದೆ ಅಂತ ಹಂಚಿಕೊಳ್ಳುವ ಪ್ರಯತ್ನ ಅಷ್ಟೇ. ತಮಗೆ ಅವು ಪ್ರವಚನ ಅನಿಸಿದರೆ ತಮ್ಮನ್ನು ನನ್ನ ಶಿಷ್ಯನನ್ನಾಗಿ ಮಾಡಿಕೊಳ್ಳಲು ನಾನು ready 🙂
ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುವ ತಮಗೆ ಧನ್ಯವಾದಗಳು !
ಸರ್, ಜ್ಞಾನೋದಯ ಪದ ನಗೆ ತರಿಸಿತು, ಅಷ್ಟೇ ???? ,ಪ್ರತಿಕ್ರಿಯೆಗೆ ಧನ್ಯವಾದಗಳು. ದಾಸನಕೊಪ್ಪಕ್ಕೆ ಒಮ್ಮೆ ಬೆಟ್ಟಿಗೆ ಬರುವೆ.????????