ಡೋಗ್ರಿ ಭಾಷೆಯ ಲೇಖಕರಾಗಿ, ರಂಗಭೂಮಿ ಕಲಾವಿದರಾಗಿರುವ ಮೋಹನ್ ಸಿಂಗ್ ಹೋರಾಟಗಾರ ವ್ಯಕ್ತಿತ್ವದವರು. ಗುಲಾಬಿ ಜುಬ್ಬಾ ಬಿಳಿ ಪೈಜಾಮಾ ಧರಿಸಿ ಹಳದಿ ಬಣ್ಣದ ನ್ಯಾನೋ ಕಾರು ಡ್ರೈವ್ ಮಾಡುತ್ತ ಅವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ವಿಶಾಲವಾದ ಹೊಲಗದ್ದೆಗಳ ನಡುವಿನ ದಾರಿಯಲ್ಲಿ ಈ ಬಣ್ಣದ ಕಾರು ಚಲಿಸುತ್ತಿರುವಾಗ, ಮೋಹನ್ ಸಿಂಗ್ ಅವರ ವ್ಯಕ್ತಿತ್ವವೂ ಅಷ್ಟೇ ತೀವ್ರತೆಯಿಂದ ಕೂಡಿದ್ದು ಎಂದು ಭಾವಿಸಿರಲಿಲ್ಲ. ಹಳ್ಳಿಯಲ್ಲಿದ್ದುಕೊಂಡೇ ದೇಶದ ಜ್ಞಾನವನ್ನು ಸೂತ್ರದಲ್ಲಿ ಬಂಧಿಸಿ, ಗ್ರಹಿಸಿಕೊಂಡವರು ಅವರು. ಮೋಹನ್ ಸಿಂಗ್ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.

ಭಾಷೆಯ ವಿಷಯಕ್ಕೆ ಬಂದರೆ ಜಮ್ಮುಕಾಶ್ಮೀರ ನಮ್ಮ ಕರ್ನಾಟಕ ರಾಜ್ಯದಂತೆಯೇ ಭಾಸವಾಗುವುದು. ನಮ್ಮಲ್ಲಿ ಕನ್ನಡ, ತುಳು, ಕೊಡವ ಭಾಷೆಗಳು ಪ್ರಧಾನವಾಗಿ ಗೋಚರಿಸಿದರೂ, ಉಪಭಾಷೆಗಳೋ ಲೆಕ್ಕವಿಲ್ಲದಷ್ಟು ಇವೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿಯೂ, ಕಾಶ್ಮೀರಿ, ಡೋಗ್ರಿ, ಲಡಾಕೀ ಭಾಷೆಗಳು ಪ್ರಧಾನವಾಗಿದ್ದರೂ ಉಪಭಾಷೆಗಳ ಸಂಖ್ಯೆ ಅನೇಕ.

ಕಾಶ್ಮೀರಿ ಭಾಷೆಗೆ ಸಂವಿಧಾನ ರಚನಾ ಕಾಲದಿಂದಲೂ ಮಾನ್ಯತೆ ದೊರೆತಿದೆ. ಆದರೆ ಡೋಗ್ರಿ ಭಾಷೆಯು ಹೋರಾಟದ ಮೂಲಕ ಈ ಮನ್ನಣೆಯನ್ನು ಗಿಟ್ಟಿಸಿಕೊಂಡಿದೆ. ಜಮ್ಮು ಹಾಗೂ ಪಂಜಾಬ್ ನ ಕೆಲವು ಭಾಗಗಳಲ್ಲಿ, ಹಿಮಾಚಲ ಪ್ರದೇಶದಲ್ಲಿ ಡೋಗ್ರಿ ಭಾಷೆ ಮಾತನಾಡುವ ಡುಗ್ಗರ್ ಸಮುದಾಯವಿದೆ. ಡೋಗ್ರಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ನಿರಂತರ ಹೋರಾಟವು, ಡುಗ್ಗರ್ ಸಮುದಾಯವನ್ನು, ಡೋಗ್ರಿ ಭಾಷಾ ಸಾಹಿತಿಗಳನ್ನು ಒಗ್ಗಟ್ಟಿನಲ್ಲಿ ಇರಿಸಿತ್ತು. ಹೋರಾಟವಷ್ಟೇ ಅಲ್ಲ, ಸುಮಾರು ಎರಡು ದಶಕಗಳವರೆಗೆ ಈ ಭಾಷಾಭಿಮಾನದ, ಆಗ್ರಹದ ಸಾಹಿತ್ಯ ಸೃಷ್ಟಿಯೂ ನಡೆಯಿತು.

ಜನರಲ್ಲಿ ಭಾಷಾಭಿಮಾನ ಮೂಡಿಸುವ ಸಲುವಾಗಿ ಮತ್ತು ಸಂಘಟನೆಯನ್ನು ಬಲಪಡಿಸಿ ಸರ್ಕಾರಗಳ ಮೇಲೆ ಒತ್ತಡ ಹೇರುವ ಉದ್ದೇಶಕ್ಕಾಗಿ ರಂಗಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡವರು ಕಲಾವಿದ, ಬರಹಗಾರ ಮೋಹನ್ ಸಿಂಗ್. ಅವರು ನಗರದ ಸಹವಾಸ ಬಿಟ್ಟು ಹಳ್ಳಿಯೊಂದರಲ್ಲಿ ನೆಲೆಸಿದ್ದರು ಎಂಬುದೇ ಅವರನ್ನು ಭೇಟಿಯಾಗಬೇಕು ಎನ್ನುವ ಕುತೂಹಲಕ್ಕೆ ಕಾರಣ. ಅಕಾರಣವಾದ ಈ ಪ್ರವಾಸದಲ್ಲಿ ಹಳ್ಳಿಯೊಂದನ್ನು ನೋಡಬಹುದಲ್ಲ ಎನ್ನುವ ಆಲೋಚನೆಯೂ ಹಾದು ಹೋಯಿತು.

ಹಾಗೆ ನಾನು ಜಮ್ಮುವಿನ ಬಸ್ ನಿಲ್ದಾಣದಲ್ಲಿ ವಿಜಯಪುರ ಕಡೆಗೆ ಹೋಗುವ ಬಸ್ಸಿಗಾಗಿ ಹುಡುಕಾಡುತ್ತಿದ್ದಾಗ, ಪೊಲೀಸಪ್ಪನೊಬ್ಬ ನನ್ನನ್ನು ತಡೆದು ನಿಲ್ಲಿಸಿದ. ಜಮ್ಮು ನಗರದಲ್ಲಿ ಪ್ರತಿಭಟನೆಯೊಂದು ನಡೆಯಲಿದ್ದುದರಿಂದ ಹಾಗೂ ಅದು ಬೈಸಾಕಿ ಹಬ್ಬದ ಸಂದರ್ಭವಾದುದರಿಂದ, ಬಸ್ ನಿಲ್ದಾಣ ತುಂಬ ಪೊಲೀಸರೇ ಕಾಣಿಸುತ್ತಿದ್ದರು. ಅಷ್ಟೇನೂ ಚೊಕ್ಕವಿಲ್ಲದ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಬೋರ್ಡುಗಳನ್ನು ನಿಧಾನಕ್ಕೆ ಓದುತ್ತ ಮುಂದೆ ಸಾಗುತ್ತಿದ್ದ ನನ್ನನ್ನು ನಿಲ್ಲಿಸಿದ ಆತ, ‘ಎತ್ತ ಹೋಗಬೇಕಾಗಿದೆ’ ಎಂದು ಪ್ರಶ್ನಿಸಿದ ಮತ್ತು, ವಿಜಯಪುರಕ್ಕೆ ಹೋಗುವ ಬಸ್ಸು ತೋರಿಸಿದ.

ಕಟುವಾ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರ ಎಂಬ ಹಳ್ಳಿಯಿದೆ. ರಂಗಭೂಮಿ ಕಲಾವಿದ ಮಾತ್ರವಲ್ಲ, ಹೋರಾಟಗಾರರೂ ಆಗಿರುವ ಮೋಹನ್ ಸಿಂಗ್ ನಗರದ ಜಂಜಡದಿಂದ ದೂರ ಮನೆಮಾಡಿಕೊಂಡಿದ್ದರೂ, ಅವರ ಕಾರ್ಯಕ್ಷೇತ್ರ ವಿಶಾಲವಾದುದು. ಡೋಗ್ರಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ರಚನೆಯಾದ ಡೋಗ್ರಿ ಸಂಘರ್ಷ ಮಂಚ್ ನ ಹೋರಾಟದ ನೇತೃತ್ವ ವಹಿಸಿದವರು. ಜಮ್ಮು ಕಾಶ್ಮೀರದ ಪ್ರಗತಿಪರ ಬರಹಗಾರರ ಸಂಘಟನೆ, ‘ಡುಗ್ಗರ್ ಮಂಚ್’ ನ ಅಧ್ಯಕ್ಷರಾಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆಯ್ಕೆ ಸಮಿತಿ, ಮುಂಬೈ ಸಿನಿಮಾ ಅಕಾಡೆಮಿ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಹಳದಿ ಬಣ್ಣದ ನ್ಯಾನೋಕಾರಿನಲ್ಲಿ ಅವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಹಳ್ಳಿಯ ಮಾರ್ಗ ಕೆಟ್ಟದಾಗೇನೂ ಇರಲಿಲ್ಲ. ಮನೆಗಳೇನೂ ಕಾಣಿಸದ, ಬರೀ ಹೊಲಗಳನ್ನೇ ದಾಟಿಕೊಂಡು ಕಾರು ಹೋಗುತ್ತಲೇ ಇತ್ತು. ದಾರಿಯಲ್ಲಿ ನಾಗ ದೇವರ ಗುಡಿಯೊಂದು ಸಿಕ್ಕಿತು. ಡುಗ್ಗರ್ ಸಮುದಾಯದ ಜನರ ಆರಾಧನಾ ಪದ್ಧತಿ, ನೀರಾವರಿ ಸಮಸ್ಯೆಯಿಂದಾಗಿ ಬೆಳೆಬೆಳೆಯಲು ರೈತರು ಪರದಾಡುತ್ತಿರುವ ಸಂಗತಿಗಳನ್ನು ಅವರು ಹೇಳುತ್ತಿದ್ದರು. ಗುರ್ಹ ಸಲಾತಿಯಾಂ ಎಂಬುದು ಅವರ ಮನೆಯಿರುವ ಊರಿನ ಹೆಸರು. ತಂದೆ ಸೇನೆಯಲ್ಲಿದ್ದುದರಿಂದ, ಬಾಲ್ಯವನ್ನು ಜಮ್ಮು ನಗರದಲ್ಲಿ ಕಳೆಯಬೇಕಾಯಿತು. ಆದರೆ ಹುಟ್ಟೂರಿನ ಪ್ರೀತಿ ಅವರನ್ನು ಮತ್ತೆ ಹಳ್ಳಿ ಕಡೆಗೆ ಎಳೆದಿತ್ತು.

ಗುರ್ಹ ಸಲಾತಿಯಾ ಜಮ್ಮುವಿನಿಂದ 30 ಕಿಮೀ ದೂರದಲ್ಲಿರುವ ಊರು. ಪಕ್ಕದಲ್ಲೇ ದೇವಕ್ ನದಿಯಿದೆ. ಊರಿನ ಜನಸಂಖ್ಯೆಯಲ್ಲಿ ಬಹುಪಾಲು ಜನರು ಯೋಧರು. ಕೃಷಿ ಅವರ ಮತ್ತೊಂದು ಆದಾಯ ಮೂಲ. ಮತ್ತೋರ್ವ ಹಿರಿಯ ಬರಹಗಾರ, ರಂಗಭೂಮಿ ಕಲಾವಿದ ಕೆಹ್ರಿ ಸಿಂಗ್ ಮಧುಕರ್ ಅವರು ಗುರ್ಹ ಸಲಾತಿಯಾ ಊರಿನವರೇ ಆಗಿದ್ದರಿಂದ, ರಂಗಭೂಮಿ ಕೆಲಸಗಳಿಗೆ ಹಾಗೂ ಬರವಣಿಗೆಗೆ ಮೋಹನ್ ಸಿಂಗ್ ಅವರಿಗೆ ಅವರ ಮಾರ್ಗದರ್ಶನ ದೊರೆಯಿತು. ಅವರು ಬರೆದ ‘ಉಸ್ ಲೋಕ್ʼ  ಎಂಬ ಮೊದಲ ಕವನ ಸಂಕಲನವೇ ಡೋಗ್ರಿ ಸಾಹಿತ್ಯ ವಲಯದಲ್ಲಿ ಅವರಿಗೆ ಮನ್ನಣೆ ನೀಡಿತು.

ತಮ್ಮ ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಂದ ಮೋಹನ್ ಸಿಂಗ್ ಅವರ ಮನೆ ಒಂದು ಸಣ್ಣಬಂಗಲೆಯಂತಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಕಾರು ಸಣ್ಣ ಕುಟೀರದ ಮುಂದೆ ನಿಂತಿತು. ಅಲ್ಲಿಂದ ತುಸು ದೂರಕ್ಕೆ ಮತ್ತೊಂದು, ಮಗದೊಂದು ಹೀಗೆ ಒಟ್ಟು ಮೂರು ಕುಟೀರಗಳಿದ್ದವು. ‘ಅರರೆ..ಈ ಮೂರೂ ಕುಟೀರಗಳುಸೇರಿದರೆ ಒಂದು ಮನೆಯಾ..’ ಅಂತ ಅಚ್ಚರಿಪಟ್ಟೆ. ಒಂದು ಕುಟೀರದಲ್ಲಿ ಲೈಬ್ರರಿಯಿತ್ತು, ಅಲ್ಲಿಯೇ ನಾವು ಮಾತಿಗೆ ಕುಳಿತೆವು.

ಡೋಗ್ರಿ ಸಾಹಿತ್ಯ ವಲಯದಲ್ಲಿ ಮೋಹನ್ ಸಿಂಗ್ ಬಗ್ಗೆ ಯಾರಾದರೂ ಕೇಳಿದರೆ, ‘ಓ ಕಾಲಾ ಸೂರಜ್ ಬರೆದವರಾ ?’ ಎಂದು ಅವರನ್ನು ನೆನಪಿಸಿಕೊಳ್ಳುತ್ತಾರೆ. ಸಮಕಾಲೀನ ಸಮಾಜದ ಹುಳುಕುಗಳನ್ನು ಕಲಾತ್ಮಕವಾಗಿ ಹೇಳುವ ಈ ಡೋಗ್ರಿ ನಾಟಕ ಅವರಿಗೆ ಬಹಳ ಪ್ರಸಿದ್ಧಿ ತಂದುಕೊಟ್ಟಿತು. ಈ ನಾಟಕವನ್ನು ಮತ್ತೋರ್ವ ಹಿರಿಯ ಸಾಹಿತಿ ಪದ್ಮಾಸಚ್ ದೇವ್ ಹಿಂದಿಗೆ ಅನುವಾದಿಸಿದರು. ‘ಅಪ್ನಿ ಡಾಫ್ಲಿ ಅಪ್ನಾ ರಾಗ್’, ‘ಪಿಂಜಾರ’ ಹೀಗೆ ಪ್ರಸಿದ್ಧ ನಾಟಕಗಳು ಅನೇಕ. 32 ಕ್ಕೂ ಹೆಚ್ಚು ಕೃತಿಗಳನ್ನು ಅವರು ಬರೆದಿದ್ದಾರೆ. ಮಲಯಾಳಂನ ಟಿ. ಶಿವಶಂಕರ್ ಪಿಳ್ಳೈ ಅವರ ‘ಚೆಮ್ಮೀನ್’ ಅನ್ನು ‘ಮಾಶೀರೆ’ ಎಂಬ ಶೀರ್ಷಿಕೆಯಡಿ ಡೋಗ್ರಿ ಭಾಷೆಗೆ ಅನುವಾದಿಸಿದವರು.

ಅಷ್ಟೇನೂ ಚೊಕ್ಕವಿಲ್ಲದ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಬೋರ್ಡುಗಳನ್ನು ನಿಧಾನಕ್ಕೆ ಓದುತ್ತ ಮುಂದೆ ಸಾಗುತ್ತಿದ್ದ ನನ್ನನ್ನು ನಿಲ್ಲಿಸಿದ ಆತ, ‘ಎತ್ತ ಹೋಗಬೇಕಾಗಿದೆ’ ಎಂದು ಪ್ರಶ್ನಿಸಿದ ಮತ್ತು, ವಿಜಯಪುರಕ್ಕೆ ಹೋಗುವ ಬಸ್ಸು ತೋರಿಸಿದ.

ಸಾಮಾಜಿಕ ಸಮಸ್ಯೆಗಳಿಗೆ ಬರಹಗಾರರು ಸಕ್ರಿಯವಾಗಿ ಸ್ಪಂದಿಸಬೇಕು ಎಂದು ನಂಬಿರುವ ಮೋಹನ್ ಸಿಂಗ್, ಡೋಗ್ರಿ ಭಾಷೆಯ ಮಹತ್ವವನ್ನು ಡೋಗ್ರಾ ಜನರಿಗೇ ತಿಳಿಸಲು ಮತ್ತು ಭಾಷೆಗೆ ಮಾನ್ಯತೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಲು ಬೀದಿ ನಾಟಕ ಪ್ರಕಾರವನ್ನು ಕೈಗೆತ್ತಿಕೊಂಡವರು. ಶಿಕ್ಷಣ ವ್ಯವಸ್ಥೆಯಲ್ಲಿ ಡೋಗ್ರಿ ಭಾಷೆಯ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕೆಲಸ ಮಾಡಿದ್ದಾರೆ. ಯಶಸ್ಸು ಕಂಡಿದ್ದಾರೆ ಕೂಡ. ಹಾಗೆ ನೋಡಿದರೆ 1976 ರಲ್ಲಿ ಅವರು ಆರಂಭಿಸಿದ ‘ಡುಗ್ಗರ್ ಮಂಚ್’ ಎಂಬ ವೇದಿಕೆಯ ಮೂಲಕ ಜಮ್ಮುವಿನ ಹಳ್ಳಿ ಹಳ್ಳಿಗೆ ಸಂಚರಿಸಿ, ಬೀದಿನಾಟಕವನ್ನು ಜನರಿಗೆ ಪರಿಚಯಿಸಿ ಜನಪ್ರಿಯಗೊಳಿಸಿದವರೇ ಮೋಹನ್ ಸಿಂಗ್ ಎನ್ನಬಹುದು. ಮೂವತ್ತಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಬರೆದು, ಪ್ರದರ್ಶಿಸಿ ರಂಗಭೂಮಿಯನ್ನುಜನರ ಬಳಿಗೆ ಕೊಂಡೊಯ್ದವರು. ಹೀಗೆ ಅವರ ಭಾಷಾ ಹೋರಾಟ ಮತ್ತು ಕಲಾಪಯಣ ಏಕಕಾಲಕ್ಕೆ ಸಾಗಿತ್ತು.

ಮೋಹನ್ ಸಿಂಗ್ ಅವರ ಮನೆಗೆ ತೆರಳುವಾಗ, ಅವರ ಬಗ್ಗೆ ಇಷ್ಟೆಲ್ಲ ತಿಳಿದೇ ಇರಲಿಲ್ಲ. ಕುಶಲ ಮಾತುಗಳ ಬಳಿಕ ಅವರ ಪ್ರಶ್ನೆ ‘ನಾಗಮಂಡಲ’ ಸಿನಿಮಾ ಮತ್ತು ಗಿರೀಶ್ ಕಾರ್ನಾಡರ ಕುರಿತಾಗಿತ್ತು. ಗಿರೀಶ್ ಕಾರ್ನಾಡ್ ಅವರ ‘ತುಘಲಕ್’ ನಾಟಕ ಮತ್ತು ನಾಗಮಂಡಲ ಸಿನಿಮಾದ ಬಗ್ಗೆ ತುಂಬ ಹೊತ್ತು ಮಾತನಾಡಿದರು. ಆ ಬಳಿಕ ನನ್ನ ಮಾತುಗಳನ್ನು ಅವರು ತಮ್ಮ ಹ್ಯಾಂಡಿಕ್ಯಾಮ್ ನಲ್ಲಿ ದಾಖಲಿಸಿಕೊಂಡರು. ನಮ್ಮ ಕನ್ನಡದ ಶಿವರಾಮ ಕಾರಂತ, ಅನಂತ ಮೂರ್ತಿ, ಲಂಕೇಶರನ್ನು ಅವರು ಅರಿತುಕೊಂಡಿದ್ದರು. ಕನ್ನಡ ಮಾತ್ರವಲ್ಲ, ಭಾರತದ ಇತರ ಭಾಷೆಗಳ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಮೋಹನ್ ಸಿಂಗ್ ಚೆನ್ನಾಗಿ ಅರಿತಿದ್ದರು ಕೂಡ.

ಸಾಹಿತಿಗಳು ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂಬುದು ಮೋಹನ್ ಸಿಂಗ್ ಅವರ ಅಸಮಾಧಾನ. ‘ಈ ಹಿಂಜರಿಕೆ ಎಲ್ಲ ಭಾಷೆಯಲ್ಲಿಯೂ ಕಾಣಿಸುತ್ತದೆ. ಹೋರಾಟವೆಂಬ ಒರಟು ವಿಚಾರ, ಅದು ತಮ್ಮ ಸಂವೇದನಾ ಶೀಲತೆಯನ್ನು ಕೂಡ ಒರಟು ಮಾಡಬಹುದು ಎಂಬ ಪೊಳ್ಳು ವಾದ ಅವರಲ್ಲಿರುತ್ತದೆ. ಆದರೆ ಸಾಹಿತಿಯಾದವನು ಬರೆಯುವುದು ಜನಸಾಮಾನ್ಯರು ಓದಲಿ ಎಂಬ ಆಶಯದಿಂದ ತಾನೇ. ಹಾಗಾದರೆ ಜನಸಾಮಾನ್ಯರಿಗೆ ಸಂಬಂಧಿಸಿದ ವಿಷಯಗಳು ಸಾಹಿತಿಗಳಿಗೂ ಅನ್ವಯವಾಗುತ್ತದೆ. ಸಾಹಿತಿ ಎಂಬ ಪಟ್ಟ ಗಿಟ್ಟಿಸುವ ಮೊದಲು ಅವನೊಬ್ಬ ಶ್ರೀಸಾಮಾನ್ಯನೇ ಆಗಿರುತ್ತಾನೆ. ಹಾಗಾಗಿ ಬರಹಕ್ಕಿಂತಲೂ ಹೋರಾಟವೇ ಮುಖ್ಯ ಎಂದು ನಂಬುವವನು ನಾನು’ ಎಂದು ಮೋಹನ್ ಸಿಂಗ್ ಹೇಳಿದರು.

ಅವರು ಅನುಭವದ ಮಾತುಗಳನ್ನು ಹೇಳಿದ್ದರೆನಿಸುತ್ತದೆ. ಯಾಕೆಂದರೆ 1976ರಲ್ಲಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಡೋಗ್ರಿ ಭಾಷೆಗೆ ಸಂವಿಧಾನದ ಮಾನ್ಯತೆ ಸಿಗಬೇಕು ಎಂದು ಆಗ್ರಹಿಸಿ, ಬಹಳ ಭಾವನಾತ್ಮಕವಾದ ಭಾಷಣ ಮಾಡಿದ್ದರೆಂದು ಆ ಬಳಿಕ ಓದಿದೆ . ಆ ಭಾಷಣವು ಡೋಗ್ರಿ ಸಮುದಾಯದ ಮೇಲೆ ಬಹಳ ಪ್ರಭಾವ ಬೀರಿತ್ತು. ಆ ಬಳಿಕ ಡೋಗ್ರಿ ಸಂಘರ್ಷ ಮೋರ್ಚಾದ ನೇತೃತ್ವವನ್ನೂಅವರು ವಹಿಸಿದ್ದರು. ಡೋಗ್ರಿಯಲ್ಲಿ ಬರೆದು ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ, ಭಾಷೆಯನ್ನು ಸಂವಿಧಾನ ಗುರುತಿಸಿಲ್ಲ ಎಂಬ ವಿಪರ್ಯಸವನ್ನು ಅವರು ತಮ್ಮ ಎಲ್ಲ ಭಾಷಣಗಳಲ್ಲಿಯೂ ಹೇಳುತ್ತಿದ್ದರು. ಬೀದಿ ನಾಟಕಗಳಲ್ಲಿಯೂ ಇದೇ ಆಗ್ರಹವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರತಿಪಾದಿಸುತ್ತಿದ್ದರು. ಎಲ್ಲ ರಾಜಕೀಯ ಪಕ್ಷಗಳೂ, ತಮ್ಮ ನಡುವಿನ ಭೇದ ಮರೆತು ಈ ಹೋರಾಟಕ್ಕೆ ಕೈ ಜೋಡಿಸಿದ್ದವು. ‘ಭಾಷೆಗೆ ಮನ್ನಣೆ ದೊರೆಯಬೇಕು ಎಂಬ ಹೋರಾಟ ಬೆಂಬಲಿಸಿ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿದ್ದು ನೆನಪಿದೆ’ ಎಂದು ಅವರು ಹೋರಾಟದ ದಿನಗಳನ್ನು ಸ್ವಲ್ಪ ಹೊತ್ತು ನೆನಪಿಸಿಕೊಂಡರು.

ಊಟದ ಹೊತ್ತಿಗೆ ಮತ್ತೊಂದು ಕುಟೀರಕ್ಕೆ ಹೋದೆವು. ಅಡುಗೆ ಮನೆ, ಊಟದ ಮನೆ ಇರುವ ಆ ಕುಟೀರದ ಹೊರಗೆ ಕೈಕಾಲು ತೊಳೆಯುವ ಸೌಕರ್ಯವಿತ್ತು. ಕಣ್ಣ ಮುಂದೆ ವಿಶಾಲವಾದ ಹೊಲಗಳು ಹರಡಿಕೊಂಡಿದ್ದವು. ಅಕ್ಕಿ, ಜೋಳ, ಧಾನ್ಯ ಬೆಳೆಯುವ ಹೊಲಗಳು, ಬಿರುಬಿಸಿಲಿಗೆ ಹಳದಿ ಛಾಯೆ ಹೊತ್ತಿದ್ದವು. ಅವರ ಪತ್ನಿ ಅಕ್ಕರೆಯಿಂದ ಬಡಿಸಿದರು. ಅರೆಬರೆ ಹಿಂದಿಯನ್ನು ಕೇಳಿ, ‘ದಕ್ಷಿಣದವರಿಗೆ ಇದೊಂದು ಕಷ್ಟವಪ್ಪಾ..ʼ ಎನ್ನುತ್ತ ಪ್ರೀತಿ ಮಾಡಿದರು.

ಆದರೆ ನನಗೆ ಹಿಂದಿ ಸರಿಯಾಗಿ ಬರುತ್ತಿಲ್ಲ ಎಂಬ ವಿಷಯದ ಬಗ್ಗೆ ಖುಷಿಪಟ್ಟವರು ಮೋಹನ್ ಸಿಂಗ್. ಭಾಷೆಯ ಬಗ್ಗೆ ಮಾತನಾಡುವುದೆಂದರೆ ಅವರಿಗೆ ಸ್ವಲ್ಪ ಹುಮ್ಮಸ್ಸು ಜಾಸ್ತಿಯೇ ಅನಿಸುತ್ತದೆ. ‘ ತಕ್ಕಮಟ್ಟಿಗೆ ಸಂವಹನ ನಡೆಸಲು ಹಿಂದಿ ಗೊತ್ತಿದೆಯಲ್ಲ..ಅಷ್ಟು ಸಾಕು. ಈಗ ನೋಡಿ, ಡೋಗ್ರಿ ಭಾಷೆಗೆ ಮಾನ್ಯತೆ ಬೇಕು ಎಂದು ಇಡೀ ಜೀವನವನ್ನೇ ಮುಡಿಪಾಗಿಟ್ಟು ನಮ್ಮ ತಲೆಮಾರಿನವರು ಹೋರಾಡಿದ್ದೇವೆ. ಬೀದಿ ಬೀದಿ ಅಲೆಯುತ್ತ ನಾನು, ಭಾಷೆಯ ಮಹತ್ವವನ್ನು, ಮಾನ್ಯತೆಯ ಅಗತ್ಯವನ್ನು ಹೇಳಿದ್ದೇನೆ. ಆಗೆಲ್ಲ ತಲೆಯಾಡಿಸಿದ, ಹೋರಾಟ ಮಾಡಿದ ಜನರು, ಈಗ ಮಕ್ಕಳನ್ನು ತಣ್ಣಗೆ ಇಂಗ್ಲಿಷ್ ಮೀಡಿಯಂಗೆ ಕಳಿಸುತ್ತಿದ್ದಾರೆ. ಮತ್ತೆ ನೋಡಿದರೆ ಹಿಂದಿ ಭಾಷೆಯನ್ನೇ ಮನೆಯಲ್ಲಿ ಮಾತನಾಡುತ್ತಿದ್ದಾರೆ. ಇದೆಲ್ಲ ನೋಡಿದರೆ ನನಗೆ ಅಚ್ಚರಿಯಾಗುತ್ತದೆ. ಬೇಜಾರೂ ಆಗುತ್ತದೆ. ಇಂಗ್ಲಿಷ್ ಮಾತ್ರ ತಮ್ಮ ಮಕ್ಕಳಿಗೆ ಜೀವನ ಕಲ್ಪಿಸುತ್ತದೆ ಎಂದು ಇವರೆಲ್ಲ ಯಾಕೆ ನಂಬಿದ್ದಾರೆ ಎಂದು ಅರ್ಥವಾಗುವುದಿಲ್ಲ’ ಎಂದು ಮುಖ ಚಿಕ್ಕದು ಮಾಡಿಕೊಂಡರು.

‘ಆಗಿನ ಕಾಲದಲ್ಲಿ ಭಾಷೆಗೆ ಮಾನ್ಯತೆ ನೀಡುವಂತೆ ಹೋರಾಡಿದ್ದಾಯಿತು. ಈಗ ನಮ್ಮ ಭಾಷೆಯನ್ನು ಉಳಿಸಲು ನಮ್ಮವರೊಡನೆಯೇ ಮತ್ತೊಂದು ಹೋರಾಟ ಮಾಡಬೇಕೇನೋ ಎಂದೆನಿಸುತ್ತದೆ. ಡೋಗ್ರಿ ಭಾಷೆಯಲ್ಲಿಯೇ ಬರವಣಿಗೆ, ಸಂಶೋಧನೆ ಮುಂತಾದ ಚಟುವಟಿಕೆಗಳು ಇನ್ನಷ್ಟು ನಡೆಯಬೇಕಲ್ಲವೇ’

ಹೊಲಗದ್ದೆಗಳ ನಡುವೆ ಕುಟೀರ ಸಮೂಹದಂತಹ ಮನೆಯಲ್ಲಿರುವ ಮೋಹನ್ ಸಿಂಗ್ ಅವರನ್ನುಹುಡುಕಿಕೊಂಡು ಪ್ರಶಸ್ತಿ-ಪುರಸ್ಕಾರಗಳು ಬಂದಿವೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನುವಾದ ಕ್ಕಾಗಿ ಅಕಾಡೆಮಿ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡುಗ್ಗರ್ ಸಾಹಿತ್ಯ ರತ್ನ ..ಹೀಗೆ ಹತ್ತು ಹಲವು ಗೌರವಗಳ ಸಾಲು.


ಆದರೆ ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಡೋಗ್ರಿ ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ದೊರೆತದ್ದೇ ನನಗೆ ದೊಡ್ಡ ಪ್ರಶಸ್ತಿ ಸಿಕ್ಕ ಖುಷಿ ಕೊಟ್ಟಿದೆ.’

2003ರಲ್ಲಿ ನಡೆದ ಸಂವಿಧಾನ ತಿದ್ದುಪಡಿಯಲ್ಲಿ, ಡೋಗ್ರಿ, ಮೈಥಿಲಿ, ಸಂತಾಲಿ ಮತ್ತು ಬೋಡೋ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲಾಯಿತು. 2003 ರ ಡಿಸೆಂಬರ್ 22 ಡುಗ್ಗರ್ ಸಮುದಾಯಕ್ಕೆ ಸ್ಮರಣಾರ್ಹ ದಿನ.