ಇವಳೊಟ್ಟಿಗೆ ಎಲ್ಲಾದರೂ ಹೋಗುವುದೆಂದರೆ ಇನ್ನಿಲ್ಲದ ಪಿರಿಪಿರಿ. ಅದೂ ನನಗಿಂತ ಇವಳಿಗೇ ಹೆಚ್ಚು! ಕೇಳುತ್ತಲೇ- ಹೋಗಲೇಬೇಕಾರೀ… ಅಂತ ಕಣಿ ಮಾಡುತ್ತಾಳೆ. ಒತ್ತಾಯಕ್ಕೆ ಜತೆಗೆ ಬಂದರೂ ನೀವೆಲ್ಲ ಯಾವತ್ತೂ ನೋಡಿರುವ ಹಾಗೆ ಇರುವುದಿಲ್ಲ. ಒಂದು ಮಟ್ಟಿಗೆ ಕೆಟ್ಟದಾಗಿ ಕಾಣುವ ಹಾಗೆ ಮಾರುವೇಷ ತೊಟ್ಟಿರುತ್ತಾಳೆ. ಆಚೆ ರೆಸ್ತುರಾದಲ್ಲಿ ಕೂತಾಗ ನಮ್ಮ ಸುತ್ತಲೇ ಹತ್ತಾರು ಕಣ್ಣು ಮುಸುರಿಕೊಂಡಿರುವ ಸೂಚನೆ ಕೊಡುತ್ತಾಳೆ. ಬದಿಯ ಮೇಜಿನವರು ನಮ್ಮ ಬಗ್ಗೆಯೇ ಮಾತಿನಲ್ಲಿದ್ದಾರೆ ಅಂತ ರೇಜಿಗೆ ಹಚ್ಚುತ್ತಾಳೆ. ಅತ್ತ ಕೂಡಲೇ ಗೋಣು ತಿರುಗಿಸಿದರೆ- ಹಾಗೆ ನೋಡಬೇಡಿ, ಗೊತ್ತಾಗುತ್ತೆ ಅಂತ ಗದರುತ್ತಾಳೆ.  ಮಲ್ಟಿಪ್ಲೆಕ್ಸ್‍ನಲ್ಲಿ ಕುಳಿತಾಗ- ಇಲ್ಲಿಂದ ಮೂರನೇ ಸಾಲಿನಲ್ಲಿ ಎಡದಿಂದ ನಾಲ್ಕನೇ ಸೀಟಿನಲ್ಲಿದಾನಲ್ಲ… ಎಂದು ಬಗ್ಗಿ ಅವನ ಬಗ್ಗೆ ಕಿವಿಯಲ್ಲಿ ಹೇಳುತ್ತಾಳೆ. ಸಡನ್ನಾಗಿ ಆ ಕಡೆ ತಿರುಗಬೇಡಿ, ಹಾಗೇ ಕಣ್ಣಾಡಿಸಿ ಅಷ್ಟೆ -ಅಂತ ಗೊಣಗುತ್ತಾಳೆ. ಮದುವೆಯ ಕೂಟದಲ್ಲಿ ಆ ನೇರಿಳೆ ಸೀರೆಯವಳು, ಈ ಕೆಂಪು ಕುರ್ತಾದವ ಅಂತ ಪರಿವಿಡಿಗಳನ್ನಿಟ್ಟು ಆ ಕುರಿತು ಹೇಳುತ್ತಾಳೆ. ‘ಹಾಗೆಲ್ಲ ಬೊಟ್ಟು ಮಾಡಬೇಡಿ. ಅವರ ಬಗ್ಗೆ ಅಂತ ಗೊತ್ತಾದರೆ ಕಷ್ಟ ಆಗುತ್ತೆ…’ ಅಂತ ಕೈ ಜಗ್ಗುತ್ತಾಳೆ. ಮೆಲ್ಲಗೆ ತಿವಿದು ತುಟಿಗಳಲ್ಲೇ ಪಿಟಿಪಿಟಿ ಬೈಯುತ್ತಾಳೆ. ಆಗೆಲ್ಲ ಈ ಸಲುವಾಗಿ ನಾನು ಸ್ವತಃ ನಾನಾಗಿರದ ಕೃತ್ರಿಮ ಮೊಹರು ತೊಡುವುದಾಗುತ್ತದೆ. ಏಕ್‍ದಮ್ ನಕಲಿಯೆನಿಸುವ ಮಂಪರೊಂದು ನಮ್ಮ ಸುತ್ತ ಅಡರಿಕೊಳ್ಳುತ್ತದೆ. ಹಾಳಾದ್ದು! ಇವಳನ್ನು ಯಾರೂ ಗುರುತು ಹಚ್ಚದ ಕಡೆಯೆಂದು ಒಂದು ಅಪ್ಪಟ ಕನ್ನಡೇತರ ತಾಣವೆಂದು ಕರೆದೊಯ್ದರೆ ಅಲ್ಲಿ ನನಗೆ ಖುದ್ದು ಗೊತ್ತಿರುವ ಮಂದಿ ನನಗಿಂತಲೂ ಇವಳನ್ನು ಹೆಚ್ಚು ವಿಚಾರಿಸಿಕೊಳ್ಳುತ್ತ ಮಾತಿಗಿಳಿದು ನಮ್ಮ ಏಕಾಂತವನ್ನು ಹೊಕ್ಕು ತಮ್ಮ ಅಭಿಮಾನದ ಖಯಾಲಿಗಳಲ್ಲಿ ವ್ಯಯವಾಗುತ್ತಾರೆ. ಹಾಗೆ ನೋಡಿದರೆ ಸುಮ್ಮನೆ ಅಂತ ಇರಲಿಕ್ಕೆ ನಮಗೆ ಮನೆಯ ಹೊರತಾಗಿ ಬೇರೆ ಜಾಗವೇ ಇಲ್ಲವೇನೋ. ನಮ್ಮ ಮಟ್ಟಿಗೆ ಮನೆಯೆಂದರೆ ನಿಜಕ್ಕೂ ಸುಮ್ಮನೆ-ಯೇ! ಅಲ್ಲೊಂದೇ ಕಡೆ ನಮ್ಮ ಪಾಡು ನಮ್ಮದು!!

ಹಾಗಂತ ಮನೆಯಲ್ಲೂ ನಮ್ಮ ನಡುವೆ ನಾವೇ ಹಾಕಿಕೊಂಡ ಗಡಿಯೂ, ಗಡುವೂ ಇಲ್ಲವಂತೇನಿಲ್ಲ. ಮೊಬೈಲು ದನಿಸಿದರೆ ಒಂದು ಕರೆಗೆ ಕಡಿಮೆಯೆಂದರೆ ಹತ್ತು ನಿಮಿಷಗಳ ಹೊತ್ತು ಇವಳದ್ದು. ಅಷ್ಟರಲ್ಲಿ ಇವಳನ್ನು ಕೇಳಿಕೊಂಡು ಡೀಓಟೀ ಲೈನು ಹತ್ತಾರು ಸರ್ತಿ ಬಡಿದುಕೊಂಡಿರುತ್ತದೆ. ರೇಗುತ್ತೇನೆ. ನಾನು ಮನೆಗೆ ಬಂದ ಮೇಲೆ ಉಳಿದ ಲೋಕವನ್ನು ಬಂದು ಮಾಡಲ್ಲಾ! ಕೇಳುವುದಿಲ್ಲ… ನಾನು ಯಾರೊಟ್ಟಿಗೋ ಮಾತಿಗಿಳಿದರೆ- ಅದೇನು ಬೀದಿವರೆಗೂ ಕೇಳೋ ಹಾಗೆ ಧ್ವನಿ ಎತ್ತರಿಸುತೀರಿ? -ಅಂತ ಮುನಿಯುತ್ತಾಳೆ. ಊಟಕ್ಕೆ ಕುಳಿತಾಗ ತಿಂದಿದ್ದು ಇನ್ನೊಬ್ಬರಿಗೆ ಗೊತ್ತಾಗದ ಹಾಗೆ ಇರಬೇಕು ಅಂತ ಫರ್ಮಾನು ಮಾಡುತ್ತೇನೆ. ಇಷ್ಟಿದ್ದೂ ನನ್ನಮ್ಮ ಜಗಿಯುವಾಗ ತುಟಿಗಳನ್ನು ಜೋಡಿಸದೆ ಲೊಚಲೊಚ ಸದ್ದಿಗೆ ತೊಡಗುತ್ತಾಳೆ. ಕನಲಿದೆನೆಂದು ಎದ್ದು ರೂಮಿಗೆ ಸರಿದರೂ ನನ್ನ ಎಚ್ಚರದ ಕಿವಿ ಮತ್ತೂ ನಿಮಿರಿಕೊಂಡು ಊಟದ ಮೇಜಿನವರೆಗೆ ಸೊರಬರ ಪಾಯಸ ಹೀರಿದ ಸದ್ದಾಗಿ ಮುಕ್ಕಳಿಸುವಂತಾಗುತ್ತದೆ. ಇಷ್ಟೊಂದು ಅಸಹನೆ ಒಳ್ಳೇದಲ್ಲ -ಅಂತ ಇವಳು ಪಟ್ಟಾಂಗಕ್ಕೆ ತೊಡಗುತ್ತಾಳೆ.

ಹೀಗೆ ನಮ್ಮ ಮೇಲೆ ನಾವೇ ಹೇರ್‍ಇಕೊಂಡ ರಿವಾಜುಗಳಲ್ಲಿ ಯಾವುದು ಎಷ್ಟು ಸರಿ? ಎಷ್ಟು ಹೆಚ್ಚು ಸರಿ? ಮತ್ತೆ ಎಷ್ಟು ಕಡಿಮೆ ತಪ್ಪು? ಒಮ್ಮೊಮ್ಮೆ ಯೋಚನೆಯಾಗುತ್ತದೆ. ಇಂತಹ ಪ್ರಶ್ನೆಗೆ ಉತ್ತರ ಸರಳವಲ್ಲ. ಊಟದ ಮೇಜಿನಲ್ಲಿ ಇಷ್ಟೆಲ್ಲ ಹಾರಾಡುವ ನನಗೆ ಅಪ್ಪಟ ಸ್ಪೂನು, ಫೋರ್ಕುಗಳ ನಾಜೂಕು ಚಪ್ಪರಿಕೆ ತ್ರಾಸೆನಿಸುತ್ತದೆ. ದೋಸೆಯಂತಹ ದೋಸೆಗೂ ಚಾಕು ಹಾಕಿ ಷೋಕಾಗಿ ಫೋರ್ಕಿನಿಂದೆಬ್ಬಿ ತಿನ್ನುವ ಮಂದಿ ಯಾರಾದರೂ ಔತಣಕ್ಕೆ ಕರೆದು ಸತ್ಕರಿಸಿದರೆ ಏನೋ ಒಂಥರ… ಏನೋ ಮುಜುಗರ. ಏನೂ ಆಸ್ವಾದವಿಲ್ಲ. ಅದಕ್ಕಿಂತ ಶಿಕ್ಷೆ ಇನ್ನೊಂದಿಲ್ಲ. ಚಮಚೆಯ ಮೊನೆ ಪಿಂಗಾಣಿಯನ್ನು ಠಣ್ಣಗೆ ಬಡಿದರೆ ಏನೇನೋ ಕಸಿವಿಸಿ… ಮನೆಯಲ್ಲಿನ ಆಟಾಟೋಪಕ್ಕೆ ಸರಿಯಾಯಿತು ಅನ್ನುತ್ತಾಳೆ!! ಒಟ್ಟಿನಲ್ಲಿ ನಮ್ಮ ಯಾವ ನಿಯತಿಗಳೂ ಸಾರ್ವತ್ರಿಕವಲ್ಲ. ನಮ್ಮ ಮನೆಯಲ್ಲಿ ಒಪ್ಪಗಳೆಲ್ಲ ಅವರಲ್ಲಿ ತಪ್ಪೇ ಸರಿ! ಇಲ್ಲಿಯದು ಅಲ್ಲಿ ಸಲ್ಲದೆ ಸಲ್ಲದ ಅವಾಂತರ. ದೇಶದ ಗಡಿ ಮೀರಿದರೆ ನಮ್ಮ ನೋಟಿಗೆ ಕಿಮ್ಮತ್ತು ತಪ್ಪುವ ಹಾಗೆ ಸಮಾಚಾರ. ಇವೆಲ್ಲ ನಾವು ಒಡ್ಡಿಕೊಂಡಿರುವ ಹೊಚ್ಚ ಹೊಸ ‘ನಾಗರಿಕತೆ’ಗೆ ತಕ್ಕಂತೆ ಸಾಪೇಕ್ಷವೇ ಸರಿ. ಇವಳು ಬಹುಶಃ ಇದನ್ನೇ ಒಂದು ಪುರಾತನ ನುಡಿಗಟ್ಟಿನಲ್ಲಿ ಅರ್ಥವತ್ತಾಗಿ ಹಿಡಿದಿಡುತ್ತಾಳೆ. ಯಾವತ್ತೂ ‘ಸಮಯ-ಸಂದರ್ಭ’ ನೋಡಿಕೊಂಡು ನಡೀಬೇಕೂ ರೀ…!

ಈ ಸಮಯ ಮತ್ತು ಸಂದರ್ಭದ ದೆಸೆಯಿಂದಾಗಿ ನಾನಂತೂ ಹೆಚ್ಚೂ ಕಡಿಮೆ ಪೆಚ್ಚಾಗಿರುವುದೇ ಹೆಚ್ಚು. ಇವಳು ಹೋದ ಅಕ್ಟೋಬರಿಗೆ ಮೊದಲು ಚೌಡಯ್ಯ ಭವನದಲ್ಲಿ ಮುಖ್ಯಮಂತ್ರಿಗಳ ಸಭೆಯನ್ನು ನಿರೂಪಿಸುತ್ತಿದ್ದ ಸಂದರ್ಭ. ರಾತ್ರಿ ಒಂಭತ್ತೂವರೆಯ ಸುಮಾರು. ನನಗೆ ಅವತ್ತು ಮಲ್ಲೇಶ್ವರಂ‍ನಲ್ಲೊಂದು ಮೀಟಿಂಗ್ ಇದ್ದ ಕಾರಣ ಇಬ್ಬರೂ ಜತೆಯಾಗಿ ವಾಪಸಾಗಬಹುದೆಂದು ಒಡಂಬಡಿಕೆಯಾಗಿತ್ತು. ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ. ಸುಮ್ಮನೆ ಶ್ರೋತೃವಾದೆ. ಬೀಳ್ಕೊಡುವಾಗ- ಸರ್, ಇವರು ನನ್ನ ಹಸ್ಬೆಂಡ್ ಅಂತ ಪರಿಚಯಿಸಿದಳು. ನನ್ನದೋ ಅಭ್ಯಾಸಬಲ- ಹಾಯ್! ಹೌ ಆರ್ ಯೂ? -ಎಂದು ಕೈ ಕುಲುಕಿಬಿಟ್ಟೆ!! ಅದು ಇವತ್ತಿಗೂ ನನಗೆ ತಪ್ಪು ಅನಿಸಿದ್ದಿಲ್ಲ. ಆದರೆ  ಕಾರು-ದಾರಿಯುದ್ದಕ್ಕೂ ಅವತ್ತು ನನಗೆ ಶಾಸ್ತಿ, ಪರಿತಾಪಗಳಾದವು. ಹೇ! ನಿಮ್ಮ ಕುಮಾರಸ್ವಾಮಿ ದೊಡ್ಡ ಹುದ್ದೆಯಲ್ಲಿರಬಹುದು. ಹಾಗಂತ ನಾನು ಹೇಳಿದ್ದರಲ್ಲಿ ತಪ್ಪೇನು? -ಅಂತ ಸಮರ್ಥಿಸಿಕೊಂಡೆ.

ನನಗೆ ಒಲ್ಲದಿದ್ದರೂ ಒಮ್ಮೊಮ್ಮೆ ವೃತ್ತಿಪರ ಮುಲಾಜಿನಲ್ಲಿ ರಾಜಕೀಯ ಧುರೀಣರ ಮನೆಯ ಮೆಟ್ಟಿಲು ಹತ್ತಬೇಕಾಗುತ್ತದೆ. ಅವರೇ ಬ್ರೇಕ್‍ಫಾಸ್ಟ್ ಮೀಟಿಂಗೆಂದು ಹೇಳಿ ಕರೆಸಿಕೊಂಡಿದ್ದರೂ ಅವರ ಸಾಕ್ಷಾತ್ ದರ್ಶನಯೋಗಕ್ಕೆ ಅರೆ-ಮುಕ್ಕಾಲು ತಾಸಾದರೂ ಕಾಯಬೇಕಾಗುತ್ತದೆ. ಅವರ ಮನೆಯ ಮೊದಲ ಮೆಟ್ಟಿಲಿನಿಂದ ನಡೆಯುವ ಎದುರಾಗುವ ಎಲ್ಲ ಗ್ರಹೋಪಗ್ರಹಗಳ ಕಕ್ಷೆಗಳನ್ನೂ, ಅಂಗೋಪಾಂಗ ಕೊಸರುಗಳನ್ನೂ ದಾಟುವಾಗ ಮತ್ತೆ ಮತ್ತೆ ಅದೇ ಪ್ರವರ ಹೇಳಿಕೊಂಡು ಕೊನೆಗೆ ಅವರ ಖಾಸಗೀ ದರಬಾರಿನ ದೊಡ್ಡ ಹಜಾರವನ್ನು ಹೊಕ್ಕರೆ- ನನ್ನಂತೆ ಅವರನ್ನು ಕಾಣಲು ಬಂದಿರುವ ಹತ್ತಾರು ಖಾಸ್ ಮೆಹಮಾನುಗಳು ಅಲ್ಲಿದ್ದು ಕಟ್ಟಾ ಗಿಲೀಟಿನ ಅನಿರ್ವಚನೀಯವೊಂದನ್ನು ಹೊದ್ದು ಕುಳಿತಿರುತ್ತಾರೆ. ಹೀಗೆ ಸಾಹೇಬರ ಖಾಸಗೀ ಆತಿಥ್ಯಕ್ಕೆ ಬಂದಿದ್ದೇ ಸಾರ್ಥಕ್ಯವೆನ್ನುವ ಒಂದು ಬೇಶಕ್ ಕೃತಾರ್ಥತೆಯ ಝಲಕು ಆ ಮೋರೆಗಳಲ್ಲಿ ತೊಟ್ಟಿಕ್ಕುತ್ತದೆ. ಮಿಸುಕಿದರೂ ಸದ್ದಾದೀತೋ ಎನ್ನುವ ಕಟ್ಟೆಚ್ಚರದ ಮೌನವೊಂದು ಆ ಅನಿರ್ವಚನೀಯವನ್ನು ಬೆಸೆದಿರುತ್ತದೆ. ಮೇಜಿನ ಮೇಲೆ ಖಾಲಿ ಪಿಂಗಾಣಿಗಳು, ತುಂಬಿದ ಬಿಸಲೇರಿಗಳು ಸಾಹೇಬರ ನಿರೀಕ್ಷೆಯಲ್ಲಿರುತ್ತವೆ. ಅವರು ಬಂದಿದ್ದೇ ಅಲ್ಲಿನ ಓರಣವನ್ನೆಲ್ಲ ಒಮ್ಮೆ ಕಣ್ಣಿನಲ್ಲೇ ಅಳೆದು ಬಡಿಸಲು ಹೇಳುತ್ತಾರೆ. ಆಗ ನೋಡಬೇಕು- ಅಲ್ಲಿನ ರಿವಾಜುಗಳ ಪರಿಯನ್ನು. ನೆತ್ತಿಗೆ ಹತ್ತಿದರೂ ಸರಾಗ ಕೆಮ್ಮಲಾಗದ ಬಿಗಿತವನ್ನು ಒಳಗಿನ ಆವೇಶವೊಂದು ಹಠಾತ್ತನೆ ಭೇದಿಸಿ ಈಚೆಯಾದರೂ ಕೂಡಲೇ ಆ ಮಹಾ ಅನಿರ್ವಚನೀಯದಲ್ಲಿ ಕಳೆದುಹೋಗುವ ವೈಖರಿಯನ್ನು…. ಕಷ್ಟ. ಬಲು ಕಷ್ಟ!!

ಓರಗೆಯವನೊಬ್ಬನಿದ್ದಾನೆ. ಇನ್‍ಫೊಸಿಸ್, ವಿಪ್ರೋದ ಕೆಲವು ಪ್ರಾಜೆಕ್ಟುಗಳನ್ನು ಮಾಡಿದ ಹೆಗ್ಗಳಿಕೆಯ ಪ್ರ್ಯಾಕ್ಟೀಸ್ ಇರುವವನು. ಮಾತು ಮಾತಿಗೂ ನಾರಾಯಣ ಮೂರ್ತಿ, ಪ್ರೇಮ್‍ಜೀ ಜತೆಗಿನ ಮೀಟಿಂಗುಗಳನ್ನು ಸುಮ್ಮನೆ ಉದಾಹರಿಸುವ ಖಾಯೀಷಿನವನು. ಇಷ್ಟಿದ್ದೂ ಆರಾಮಕ್ಕೆ ಸಿಕ್ಕಾಗ- ಏನೇ ಹೇಳೂ… ನಿಮ್ಮಗಳ ಜತೆ ಒಂದು ಬಿಯರು ಹಾಕಿ ಟೊಳ್ಳಾಗುವ ಮಜ ಅಲ್ಲಿರೋಲ್ಲ ಬಿಡು! -ಅನ್ನುತ್ತಾನೆ. ಉಸಿರು ಕಟ್ಟುತ್ತೆ ಮಾರಾಯ! ಬೇಕೂ ಅನಿಸಿದಾಗ ಜೇಬಿಗೆ ಕೈ ಹಾಕಿ ಕೆರಕೊಳ್ಳೋದೂ ಆ ಕ್ಷಣದ ತುರ್ತಿನಷ್ಟೇ ಮಜಾ ಅಲ್ಲವೇನು?!

ಇಷ್ಟೆಲ್ಲ ಹೇಳುವುದಕ್ಕೆ ಸಬೂಬೆಂಬಂತೆ ಈ ಸಂಜೆ ಏರೋಬಿಕ್ಸ್‍ಗೆ ಹೋದಾಗ ಘಟಿಸಿದ್ದರ ಪ್ರ್‍ಏರ್‍ಅಣೆ. ಐದನೆ ಮಹಡಿಯ ಟೆರ್‍ಏಸಿನಲ್ಲಿ ಆಕಾಶ ನಿಚ್ಚಳವಾಗಿ ಕಾಣುತ್ತಿತ್ತು. ಎಂಟೂವರೆಯ ಸುಮಾರು. ಎಡಕ್ಕೆ ಹೊರಳುವಾಗ ದೊಡ್ಡನೆ ಭರ್ತಿಚಂದ್ರ! ಇನ್ಸ್‍ಟ್ರಕ್ಟರ್ ಶಿವ ಯಾವುದೋ ಅಂಗ್ರ್‍ಏಜಿ ನಂಬರಿಗೆ ಕುಣಿಸುತ್ತಿದ್ದವನು ಚಂದ್ರವನ್ನು ಕಂಡಿದ್ದೇ ಪೂರ್ತಾ ದೇಸಿಗೊಂಡು ಟ್ರ್ಯಾಕ್ ಬದಲಿಸಿದ. ಆಧಾ ಹೇ ಚಂದ್ರಮಾ ರಾತ್ ಆಧೀ… ಅಲ್ಲಿದ್ದ ನಾವು ಹದಿನೆಂಟು ಮೈಗಳ ಗಂಡು ಹೆಣ್ಣು ಬೆರಕೆಗಳಿಂದ ಹಗಲೆಲ್ಲ ಹೊರುವ ಆರ್ಕಿಟೆಕ್ಟು, ಡಾಕ್ಟರು, ಸಾಫ್ಟ್‍ವೇರು… ಇನ್ನಿತರೆ ಸ್ಥಾನಮಾನಗಳನ್ನು ಮೆಲ್ಲಗೆ ಕಳಚಿಸಿಬಿಟ್ಟ. ಹೀಗೆ ಲಗತ್ತುಗಳನ್ನು ಅನಾಮತ್ತು ಬಿಚ್ಚಿದರೆ ಆಗುವ ಆಪ್ಯಾಯಮಾನಕ್ಕೆ ಬೇರೆ ಹೆಸರೇನಿದ್ದೀತು ಹೇಳಿ? ಎಲ್ಲರೂ ಬಾಯ ಬದಿಗೆ ಅಂಗೈಯಿಟ್ಟು ಕುಹೂ ಅಂದೆವು. ತಲೆಗೆ ಬೆರಳಿಟ್ಟು ಚಿಗರೆಗಳಂತೆ ಚಂಗೆಂದೆವು. ತೋಳುಗಳ ಪ್ರಭಾವಲಿ ಕಟ್ಟಿ ನವಿಲಾದೆವು. ಈಸ್ ಔಟ್ ಬಡೀ… ಈಸೌಟ್! -ಅಂತ ಶಿವ ಬಿಗುಮಾನ ಮಾಡಿದವರನ್ನು ಕುಂಡೆ ತಟ್ಟಿ ಹುರಿದುಂಬಿಸಿದ್ದ. ವಯಸ್ಸು, ಮನಸ್ಸುಗಳ ಭಾರ ಕಳಚಿ ಎಲ್ಲರೂ ಈ ಮಾಘಚಂದ್ರವನ್ನು ಮೆರೆದೆವು. ಹುಣ್ಣಿಮೆಗೆ ಹೊಸ ಅರ್ಥ ಕಟ್ಟಿತ್ತು.

ಬಳಿಕ ಇನ್‍ಸ್ವಿಂಗ್‍ನಲ್ಲಿ ಇವಳ ಜತೆ ದಾಲ್, ಚಾವಲ್ ಆದೇಶಿಸುವಾಗ ಕೌಂಟರಿನಿಂದ ಹೆಸರಿಟ್ಟು ಕರೆದೆ. ಕಣ್ಣಿನಲ್ಲೇ ಗದರಿದಳು. ಬೇಕೆಂದೇ ಜೋರಾಗಿ ಅಪರ್ಣೇ… ಎಂದು ಅರಚಿದಾಗ ಅದೇನನ್ನಿಸಿತೋ ಇವಳು ಹಾಗೇ ನಾಚಿ ಬೀದಿಯ ಕಡೆ ಮೋರೆಯಾದಳು.