Advertisement
ವೈ ಬಿ ಹಾಲಬಾವಿ ಅನುವಾದಿಸಿದ ಜಪಾನ್‌ ಭಾಷೆಯ ಕವಿ ನ್ಯಾನಾವೋ ಸಕಾಕಿ ಎರಡು ಕವಿತೆಗಳು

ವೈ ಬಿ ಹಾಲಬಾವಿ ಅನುವಾದಿಸಿದ ಜಪಾನ್‌ ಭಾಷೆಯ ಕವಿ ನ್ಯಾನಾವೋ ಸಕಾಕಿ ಎರಡು ಕವಿತೆಗಳು

೧. ಕನ್ನಡಿಯನ್ನು ಒಡೆಯಿರಿ

ಮುಂಜಾವಿನಲ್ಲಿ ತಣ್ಣನೆಯ ಸ್ನಾನಾನಂತರ
-ಎಂತಹ ತಪ್ಪು- ನೋಡಿದೆ ಕನ್ನಡಿಯನ್ನು.

ಅಲ್ಲೊಬ್ಬ, ಕುಶಾಗ್ರಮತಿ, ಬೂದುಕೂದಲು, ಬಿಳಿಯಗಡ್ಡ,
ಸುಕ್ಕುಗಟ್ಟಿದ ಚರ್ಮ, –ಎಂತಹ ಶೋಚನೀಯ-
ದೀನ, ಮಲೀನ, ವೃದ್ಧನು!
ಅವನು ನಾನಲ್ಲ, ಖಂಡಿತ ನಾನು ಅವನಲ್ಲ.

ಭೂಮಿ ಮತ್ತು ಜೀವನ
ಸಾಗರದಲ್ಲಿನ ಮೀನುಗಾರಿಕೆ
ನಕ್ಷತ್ರಗಳೊಂದಿಗೆ ಮರುಭೂಮಿಯಲ್ಲಿ ಮಲಗುವುದು
ಪರ್ವತಗಳಲ್ಲಿ ಕುಟೀರಗಳನ್ನು ನಿರ್ಮಿಸುವುದು
ತೋಳಗಳೊಂದಿಗೆ ಹಾಡುವುದು
ಪುರಾತನ ಮಾದರಿಯಲ್ಲಿ ಬೇಸಾಯ ಮಾಡುವುದು
ಪರಮಾಣು ಯುದ್ಧದ ವಿರುದ್ಧ ಹಾಡುವುದು-
ಜೀವನದಿಂದ ನಾನೆಂದಿಗೂ ಆಯಾಸಗೊಳ್ಳುವುದಿಲ್ಲ.

ನನಗೀಗ ಹದಿನೇಳು ವರ್ಷ,
ತುಂಬು ಆಕರ್ಷಕ ಯುವಕ.
ಕುಳಿತಿದ್ದೇನೆ ಶಾಂತ, ಪ್ರಶಾಂತವಾಗಿ ಪದ್ಮಾಸನದಲ್ಲಿ,
ಯಾವುದಕ್ಕೂ ಧ್ಯಾನಿಸುವುದು, ಧ್ಯಾನಿಸುವುದಕ್ಕೆಂದೇ.

ಇದ್ದಕ್ಕಿದ್ದಂತೆ ಧ್ವನಿಯೊಂದು ಕೇಳಿ ಬರುತ್ತದೆ ನನಗೆ:

“ಯುವಕರಾಗಿರಲು,
ಜಗತ್ತನ್ನು ಉಳಿಸಲು,
ಕನ್ನಡಿಯನ್ನು ಒಡೆಯಿರಿ.”

೨. ಓ ವಸಂತ, ಬಾ ಇಲ್ಲಿಗೆ!

ಹರೆಯದ ಕನಸುಗಳು ಮತ್ತೆ ಮರಳುವುದಿಲ್ಲ!
ಒಣ ಮರದ ಹೂಗಳು ಮತ್ತೆ ಅರಳುವುದಿಲ್ಲ!
-ಒಂದು ಜಪಾನಿ ಕವಿತೆ.

ಮ್ಯಾಗ್ನೋಲಿಯಾ ಹೂವನ್ನು ನಾನು
ಚುಂಬಿಸುತ್ತಿದ್ದಂತೆಯೇ-
ವಸಂತ ದೇವತೆಯು ಪರ್ವದ ತೊರೆಯಲ್ಲಿ
ಹಾರಿ, ತೇಲುತಾ ಸಾಗಿ ಹೋದಳು ಮುಂದೆ

ನಾನೂ ಮೇಲ್ಮುಖವಾಗಿ
ಹತ್ತುತ್ತಾ, ಕೂಗಿದೆ ಅವಳನ್ನು:

“ಓ ವಸಂತ ದೇವತೆಯೇ, ಬಾ ಇಲ್ಲಿಗೆ!”
“ಬಾ ಇಲ್ಲಿ, ನನ್ನ ಬಳಿಗೆ!”

ಮ್ಯಾಗ್ನೋಲಿಯಾ: ಅತ್ಯಂತ ಪ್ರಾಚೀನ ಹೂ ಗಿಡಗಳಲ್ಲಿ ಒಂದಾದ ಈ ಹೂಗಳು ವಸಂತ ಋತುವಿನ ಬೇಸಿಗೆಯಲ್ಲಿ ಅರಳುತ್ತವೆ. ಸ್ವಾಭಾವಿಕವಾಗಿ ಬೆಳೆಯುವ ಈ ಹೂಗಳು ವಿಶೇಷವಾಗಿ ಪರ್ವತ ಶ್ರೇಣಿಯ ಕಣಿವೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಆಕರ್ಷಕ ಬಣ್ಣ, ಶುದ್ಧತೆ, ಗೌರವದ ಸಂಕೇತವಾಗಿದ್ದು, ಇವು ಗಾಢವಾದ ಸುಗಂಧವನ್ನು ಹೊರ ಸೂಸುತ್ತವೆ.
ನ್ಯಾನಾವೋ ಸಕಾಕಿ ಜಪಾನಿನ ಪ್ರಮುಖ ಕವಿ, ಪರಿಸರ ಹೋರಾಟಗಾರ. ‘ಬೀಟ್’ ಚಳುವಳಿಯೊಂದಿಗೆ ಸಂಪರ್ಕ ಹೊಂದಿದ್ದ ಸೃಜನಶೀಲ ವ್ಯಕ್ತಿ. ಅವರು ೧೯೨೩ ರಲ್ಲಿ ಜಪಾನಿನಲ್ಲಿ ಜನಿಸಿ, ನಂತರ ಅಮೆರಿಕಕ್ಕೆ ತೆರಳಿ ಗ್ಯಾರಿ ಸ್ನೈಡರ್ ಮುಂತಾದ ಬೀಟ್ ಕವಿಗಳೊಂದಿಗೆ ಸಂಪರ್ಕ ಬೆಳೆಸಿದವರು. ಅವರ ಕವಿತೆಗಳು ಪ್ರಕೃತಿ, ಸರಳ ಜೀವನ, ಮಾನವ-ಭೂಮಿ ಸಂಬಂಧ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನೇ ಕೇಂದ್ರವಾಗಿಟ್ಟುಕೊಂಡಿವೆ. ಅಲ್ಲದೇ ತಂತ್ರಜ್ಞಾನ ಮತ್ತು ಅತಿಯಾದ ಅಭಿವೃದ್ಧಿಗೆ ವಿರೋಧವಾಗಿ, ಪರಿಸರ ಸಂರಕ್ಷಣೆ ಹಾಗೂ ಸ್ವಾಭಾವಿಕ ಜೀವನಶೈಲಿಯನ್ನು ಬೆಂಬಲಿಸಿದವರು. ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನವನ್ನು ಬದುಕಿ ತೋರಿಸಿದ ಚಿಂತಕರೂ ಆಗಿದ್ದರು. ವಿಶಿಷ್ಟ ಕಾವ್ಯಶೈಲಿಯ ಮೂಲಕ ಇವರ ಕವಿತೆಗಳು ಜಗತ್ತಿನ ಗಮನ ಸೆಳೆದಿವೆ.
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್‌ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ