ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ.
ಜಿ.ವಿ.ಸಂಗಮೇಶ್ವರ ಬರೆದ ‘ಕಬ್ಬಿಣದ ಕಥೆ ವ್ಯಥೆ’ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

 

ಗಂಧದ ನಾಡು, ಚಿನ್ನದ ನಾಡು ಎಂಬ ಹೆಗ್ಗಳಿಕೆಯ ಹಿರಿಮೆಗೆ ಕರ್ನಾಟಕ ಪಾತ್ರವಾಗುವುದಕ್ಕೆ ಮೂಲ ಕಾರಣಕರ್ತರಾಗಿ, ದೂರದೃಷ್ಟಿಯ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಇಡಿಯ ವಿಶ್ವವೇ ನಿಬ್ಬೆರಗಾಗಿ ತಮ್ಮನ್ನು ನೋಡುವಂತೆ ಮಾಡಿದವರು ಸರ್ ಎಂ. ವಿಶ್ವೇಶ್ವರಯ್ಯನವರು. ಭದ್ರಾವತಿಯವರಾದ ರಂಗಕರ್ಮಿ, ಲೇಖಕ ಜಿ.ವಿ.ಸಂಗಮೇಶ್ವರ ಇವರ 2012 ರಲ್ಲಿ ಪ್ರಕಟವಾದ ಕೃತಿ “ಕಬ್ಬಿಣದ ಕಥೆ ವ್ಯಥೆ” ಇದರಲ್ಲಿ ಸ್ಫಟಿಕ ಶುಭ್ರ ವ್ಯಕ್ತಿತ್ವದ ದೇಶಭಕ್ತ ಆಡಳಿತಗಾರ ಸರ್ ಎಂ. ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಸ್ಥಾಪಿಸಿದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸ್ಥಾಪನೆಯ ಹಿಂದಿನ ವೇದನೆ ಸಂವೇದನೆಗಳನ್ನು ಅದರ ಏಳುಬೀಳುಗಳ ಚಿತ್ರಣಗಳೊಂದಿಗೆ ಮನೋಜ್ಞ ಕತೆಯೊಂದರಂತೆ ನಿರೂಪಿಸಿದ್ದಾರೆ.

ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ಅನುಗಾಲವೂ ಪ್ರಜಾಹಿತ ಚಿಂತನೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಈಗಾಗಲೇ ಮಹಾರಾಷ್ಟ್ರದಲ್ಲಿ ಸಲ್ಲಿಸಿದ್ದ ಸೇವೆಗಾಗಿ ದೇಶಾದ್ಯಂತ ಖ್ಯಾತರಾಗಿದ್ದ ವಿಶ್ವೇಶ್ವರಯ್ಯನವರನ್ನು ರಾಜ್ಯಕ್ಕೆ ಆಹ್ವಾನಿಸುತ್ತಾರೆ. ಆದರೆ ಅವರು ರಾಜ್ಯದಲ್ಲಿ ವಿಶಿಷ್ಟವಾದ ಕೈಗಾರಿಕೆಗಳ ಸ್ಥಾಪನೆ ಹಾಗೂ ತಾಂತ್ರಿಕ ಶಿಕ್ಷಣ ಆರಂಭಿಸುವ ಚಿಂತನೆಯ ಯೋಜನೆಗಳಿದ್ದಲ್ಲಿ ಮಾತ್ರ ತಾವು ಮೈಸೂರಿಗೆ ಬರುವುದಾಗಿ ಸೂಚಿಸಿದ್ದರಿಂದ ಮಹಾರಾಜರು ಆ ಕುರಿತು ಭರವಸೆ ನೀಡಿದಾಗ 1909ರಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸುತ್ತಾರೆ. ಮುಂದೆ 1912ರಲ್ಲಿ ಸಂಸ್ಥಾನದ ದಿವಾನರಾಗುತ್ತಾರೆ.

(ಸರ್ ಎಂ. ವಿಶ್ವೇಶ್ವರಯ್ಯ)

ಹಲವು ಅರ್ಹತೆಗಳೊಂದಿಗೆ ದಿವಾನ ಪದವಿಗೆ ಸ್ವಾಭಾವಿಕವಾಗಿ ಅರ್ಹರಾಗಿದ್ದ ಹೆಚ್.ವಿ. ನಂಜುಂಡಯ್ಯನವರು ತಮಗೆ ಈ ಪದವಿ ಕೈಜಾರಿದಾಗಲೂ ವಿಶ್ವೇಶ್ವರಯ್ಯನವರಂತಹ ಮೇಧಾವಿಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಿ, ಮೈಸೂರು ಮಾದರಿ ಸಂಸ್ಥಾನವಾಗುವುದೆಂಬ ಆಶಯ ವ್ಯಕ್ತಪಡಿಸಿ ವಿಶ್ವೇಶ್ವರಯ್ಯನವರನ್ನು ಬೆಂಬಲಿಸುವರು.  ಅವರ ಔದಾರ್ಯಪೂರ್ಣ ವ್ಯಕ್ತಿತ್ವವನ್ನು ಲೇಖಕರು ಇಲ್ಲಿ ತೆರೆದಿಡುತ್ತಾರೆ. ಹಾಗೆಯೇ ಮುಂದೆ ಪ್ರಜಾಪ್ರತಿನಿಧಿ ಸಭೆಯಲ್ಲಿ ವಿಶ್ವೇಶ್ವರಯ್ಯನವರ ಕಬ್ಬಿಣ ಮತ್ತು ಉಕ್ಕಿನ ಉದ್ಯಮದ ಪ್ರಸ್ತಾಪವನ್ನು ಭರವಸೆಯ ನಿರೀಕ್ಷೆಯೊಂದಿಗೆ ಮೊದಲಿಗೆ ಮಾಡುವ ನಂಜುಂಡಯ್ಯನವರ ಸಹೃದಯತೆಯನ್ನೂ ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ. ಮಾದರಿಗಳನ್ನು ಸಂಗ್ರಹಿಸುತ್ತಾರೆ. ಭದ್ರಾ ನದೀತೀರದ ಬೆಂಕೀಪುರ ಗ್ರಾಮದ ಆನೇಹಳ್ಳಿಯಲ್ಲಿ ಹಿಂದೆ ಕಮ್ಮಾರರೇ ಅಧಿಕ ಸಂಖ್ಯೆಯಲ್ಲಿದ್ದುದು, ಅವರು ರೈತರಿಗಾಗಿ ಕೃಷಿ ಉಪಕರಣಗಳನ್ನು ಮಾಡಿ ಕೊಡುತ್ತಿದ್ದುದು ಮೂಲತಃ ಅಲ್ಲಿನ ನಿವಾಸಿಯಾಗಿದ್ದ ಶಂಕರಾಚಾರಿಯಿಂದ ತಿಳಿಯುತ್ತದೆ. ಬ್ರಿಟಿಷರು ತಮ್ಮ ಸಾಮಗ್ರಿಗಳ ಮಾರಾಟ ಕುಗ್ಗೀತೆಂದು ಈ ಕಮ್ಮಾರರನ್ನು ಗುಂಡಿಕ್ಕಿ ಕೊಲ್ಲಲಾರಂಭಿಸಿದಾಗ ಅವರು ಗುಳೇ ಹೊರಡುತ್ತಾರೆ. ಅದೇ ಕಮ್ಮಾರರ ನೆಲೆಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸಲು ವಿಶ್ವೇಶ್ವರಯ್ಯ ನಿಶ್ಚಯಿಸುವಲ್ಲಿ ದೇಶಪ್ರೇಮಿ ಸ್ವಾಭಿಮಾನದ ಸೆಳಕು ಕಾಣುತ್ತೇವೆ.

ಹೆಚ್.ವಿ. ನಂಜುಂಡಯ್ಯನವರು ತಮಗೆ ಈ ಪದವಿ ಕೈಜಾರಿದಾಗಲೂ ವಿಶ್ವೇಶ್ವರಯ್ಯನವರಂತಹ ಮೇಧಾವಿಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಿ, ಮೈಸೂರು ಮಾದರಿ ಸಂಸ್ಥಾನವಾಗುವುದೆಂಬ ಆಶಯ ವ್ಯಕ್ತಪಡಿಸಿ ವಿಶ್ವೇಶ್ವರಯ್ಯನವರನ್ನು ಬೆಂಬಲಿಸುತ್ತಾರೆ. ಅವರ ಔದಾರ್ಯಪೂರ್ಣ ವ್ಯಕ್ತಿತ್ವವನ್ನು ಲೇಖಕರು ಇಲ್ಲಿ ತೆರೆದಿಡುತ್ತಾರೆ.

ಮುಂದೆ ಅಮೆರಿಕಾದಿಂದ ಉದ್ಯಮಕ್ಕೆ ಅಗತ್ಯವಿದ್ದ ಯಂತ್ರೋಪಕರಣಗಳನ್ನು ತರಿಸಿಕೊಳ್ಳುವ ಸಂದರ್ಭದಲ್ಲಿ ಮದ್ರಾಸಿನ ಬಂದರಿಗೆ ಬರಬೇಕಿದ್ದ ಅವು ಬಂಗಾಳದ ಬಂದರಿಗೆ ತಲುಪಿದಾಗ ಬಂಗಾಳದಲ್ಲೂ ಒಂದು ಬೆಂಕೀಪುರ ಇರುವುದು ಅರಿವಾಗುತ್ತದೆ. ಈ ಗೊಂದಲ ನಿವಾರಿಸಲು ಭದ್ರೆಯ ನೀರು ಕುಡಿವ ಜನರಿಂದಾಗಿ ಭದ್ರಾವತಿ ಎಂದು ಹೆಸರಿಸುತ್ತಾರೆ. ಹೀಗೆ ಆನೇಹಳ್ಳಿ ಭದ್ರಾವತಿಯಾಗತ್ತದೆ.

ಉದ್ದಿಮೆಯ ಕಾರ್ಯಗಳಿಗಾಗಿ ಮಾತ್ರ ಭದ್ರೆಯ ನೀರನ್ನು ಬಳಸಿಕೊಳ್ಳಬೇಕೆಂದೂ, ಕಾರ್ಖಾನೆಯ ಕಲುಷಿತ ನೀರು ನದಿಗೆ ಸೇರಕೂಡದೆಂದೂ ನಿರ್ಧರಿಸಿ, ಅದಕ್ಕಾಗಿ ಹಳ್ಳಿಗರ ನೆರವಿನಿಂದಲೇ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದರೆಂಬುದು ಇಂದಿನವರ ಕಣ್ತೆರೆಸಬೇಕಾದ ಸಂಗತಿ.

ಇಷ್ಟೆಲ್ಲಾ ಆಗುವಷ್ಟರಲ್ಲಿ ಸರ್ ಎಂ.ವಿಯವರಿಗೆ ತಮ್ಮ ಸ್ವಾಭಿಮಾನಕ್ಕೆ ಮುಕ್ಕಾಗುವಂತಹ ಸಂದರ್ಭವೊಂದು ಎದುರಾಗಿದೆ ಎನಿಸಿದಾಗ ತಕ್ಷಣವೇ ರಾಜೀನಾಮೆ ನೀಡುತ್ತಾರೆ. ಒಂಬತ್ತು ವರ್ಷಗಳ ತಮ್ಮ‌ ದಿವಾನಗಿರಿಯಲ್ಲಿ ನ್ಯಾಯದ ತಕ್ಕಡಿ ಅತ್ತಿತ್ತಾಗದಂತೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದ್ದೇನೆಂದು ಆತ್ಮವಿಶ್ವಾಸದಿಂದ ಹೇಳಿ ಮತ್ತೆ ಬೊಂಬಾಯಿಗೆ ಹಿಂದಿರುಗುತ್ತಾರೆ.

ಮುಂದೆ ಇವರ ಅನುಪಸ್ಥಿತಿಯಲ್ಲಿ ಭದ್ರಾವತಿಯ ಕಾರ್ಖಾನೆ ಪ್ರಾರಂಭವಾಗಿ ಕೆಲಸ ಪ್ರಾರಂಭಿಸಿದರೂ, ನಷ್ಟದ ಹಾದಿಯಲ್ಲಿ ಇರುತ್ತದೆ. ಮಳೆಗಾಲದ ನೀರಿಗೆ ಕಾಲುವೆ ವ್ಯವಸ್ಥೆ ಮಾಡುವವರಿಲ್ಲದೆ ನೀರು ಕಾರ್ಖಾನೆಯೊಳಗೆ ನುಗ್ಗಿ ಅದನ್ನು ಮುಚ್ಚಬೇಕಾಗುತ್ತದೆ. ಮುಂದೆ ದಿವಾನರಾದ ಸರ್ ಆಲ್ಬಿಯನ್ ಬ್ಯಾನರ್ಜಿ ವಿಶ್ವೇಶ್ವರಯ್ಯನವರ ಮನವೊಲಿಸಿ ಮೈಸೂರಿಗೆ ಕರೆತಂದು ಕಬ್ಬಿಣ ಕಾರ್ಖಾನೆಯ ಅಧ್ಯಕ್ಷರಾಗಿಸಿದಾಗ ಮಾಂತ್ರಿಕ ಶಕ್ತಿಯ ಅವರ ಉಸ್ತುವಾರಿಯಲ್ಲಿ ಕಾರ್ಖಾನೆ ಜೀವತಳೆಯುತ್ತದೆ. ದಿವಾನರಿಗೆ ಸರಿಸಮನಾದ ಐದು ಸಾವಿರ ರೂಪಾಯಿ ವೇತನದಲ್ಲಿ ಊಟತಿಂಡಿಗೆ ಮಾತ್ರ ಬಳಸಿ ಉಳಿದುದನ್ನು ಕಾರ್ಖಾನೆಗಾಗಿ ಬಳಸುತ್ತಾರೆ, ಸರ್ ಎಂ.ವಿ.. ಮುಚ್ಚಿ ನೆಲಕಚ್ಚಿದ್ದ ಕಂಪನಿ ಹೆಮ್ಮೆಯಿಂದ ಎದೆಯುಬ್ಬಿಸಿ ನಿಲ್ಲುತ್ತದೆ.

ಸ್ವತಃ ಮೂವತ್ತಾರು ವರ್ಷಗಳು ಇದೇ ಕಾರ್ಖಾನೆಯಲ್ಲಿ ದುಡಿದವರು ಲೇಖಕ ಜಿ.ವಿ.ಸಂಗಮೇಶ್ವರರವರು. ಅಲ್ಲಿನ ವಸ್ತುಸಂಗ್ರಹಾಲಯವನ್ನು ಐದು ವರ್ಷಗಳು ಸಂಬಳವಿಲ್ಲದೆ ಜತನ ಮಾಡಿದವರು. ತಮ್ಮ ತಂದೆಯವರಿಂದ ವಚನ ಸಾಹಿತ್ಯ, ಸರ್ ಎಂ.ವಿ.ಯವರ ಜೀವನ ನಿಷ್ಠೆ, ಸಾಧನೆಗಳು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚರಿತ್ರೆಯನ್ನು ಕೇಳಿ ಮೈಮನ ತುಂಬಿಕೊಂಡಿದ್ದವರು‌. ಭದ್ರಾವತಿ ಕಾರ್ಖಾನೆ ಸ್ಥಾಪನೆಯ ಹಿಂದಿನ‌ ದೇಸೀ ಕರಕುಶಲಕರ್ಮಿಗಳ ವೃತ್ತಿಪರತೆ, ಪರಿಣತಿ ಕಲಾವಂತಿಕೆ, ಅಂದಿನ ಅವರ ನಿಃಸ್ಪೃಹತೆ, ಈ ಉಕ್ಕಿನ ಉದ್ಯಮ ಸರ್ ಎಂ.ವಿ.ಯವರ ಹಲವು ಉದ್ಯಮಗಳಂತೆಯೇ ಭಾರತೀಯರ ಸ್ವಾಭಿಮಾನದ ದ್ಯೋತಕವಾದುದು ಎಲ್ಲವೂ ತುಂಬ ಪರಿಣಾಮಕಾರಿಯಾಗಿ ನಿರೂಪಣೆಗೊಂಡಿದೆ.

ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯರ ಮುನ್ನುಡಿಯ, ಸಾಗರ್ ಪ್ರಕಾಶನದ ಕೃತಿ ವಿಶ್ವೇಶ್ವರಯ್ಯನವರ ವ್ಯಕ್ತಿತ್ವ, ಸಾಧನೆ, ಹಿರಿಮೆ ಗರಿಮೆಗಳನ್ನು ಸಮಂಜಸವಾಗಿ ಕಂಡರಿಸಿ ಅವರಿಗೆ ಸಲ್ಲಿಸಿರುವ ನಮನವಾಗಿದೆ.