ಬಾದಾಮಿ ಚಾಲುಕ್ಯರ ತರುವಾಯ ಆಡಳಿತ ನಡೆಸಿದ ರಾಷ್ಟ್ರಕೂಟರೂ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಅಂತಹ ಒಂದು ವಿಶಿಷ್ಟ ದೇವಾಲಯ ಗದಗ ಜಿಲ್ಲೆಯ ಸವಡಿಗ್ರಾಮದಲ್ಲಿದೆ. ಮೇಲೆ ಹೇಳಿದಂತೆ, ರಾಷ್ಟ್ರಕೂಟರಿಂದ ನಿರ್ಮಾಣವಾಗಿ ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರಾದಿಯಾಗಿ ಕಾಲದಿಂದ ಕಾಲಕ್ಕೆ ಪುನಶ್ಚೇತನವನ್ನು ಕಂಡ ಗುಡಿಯನ್ನು ಇತ್ತೀಚೆಗೆ ಪುರಾತತ್ವ ಇಲಾಖೆ ಜೀರ್ಣೋದ್ಧಾರಮಾಡಿದೆ. ಗದಗದಿಂದ 28 ಕಿಮೀ ದೂರದಲ್ಲಿರುವ ಸವಡಿಗ್ರಾಮಕ್ಕೆ ತಲುಪಲು ತಾಲ್ಲೂಕುಕೇಂದ್ರವಾದ ರೋಣದಿಂದ ಹತ್ತು ಕಿಮೀ ಕ್ರಮಿಸಬೇಕು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ತನೆಯ ಕಂತು

 

ದಕ್ಷಿಣದಲ್ಲಿ ಹೊಯ್ಸಳರು ಹೇಗೋ ಹಾಗೆ ಉತ್ತರದಲ್ಲಿ ಚಾಲುಕ್ಯರು ಕನ್ನಡನಾಡಿನ ಕಲೆಸಂಸ್ಕೃತಿ ಪರಂಪರೆಗಳನ್ನು ಉಳಿಸಿಬೆಳೆಸಲು ಅಪಾರವಾಗಿ ಶ್ರಮಿಸಿದರು. ಚಾಲುಕ್ಯವಂಶದ ಎರಡು ಪ್ರಮುಖ ಕವಲುಗಳಾದ ಬಾದಾಮಿ ಹಾಗೂ ಕಲ್ಯಾಣದ ಅರಸರೆಲ್ಲರೂ ಕಲಾಭಿಮಾನಿಗಳೂ ಧರ್ಮಪೋಷಕರೂ ಆಗಿದ್ದು ಅನೇಕ ಗುಡಿಗೋಪುರಗಳ ನಿರ್ಮಾಣ-ನಿರ್ವಹಣೆಗಳನ್ನು ಕೈಗೊಂಡರು. ವಿಶೇಷವೆಂದರೆ, ಯಾವುದೇ ವಂಶದ ಯಾವ ರಾಜ ಕಟ್ಟಿದ ದೇವಾಲಯವೇ ಆಗಿದ್ದರೂ ಅದನ್ನು ಸಂರಕ್ಷಿಸಿ ಜೀರ್ಣೋದ್ಧಾರ ಮಾಡುವಲ್ಲಿ ಮುಂದಿನ ರಾಜವಂಶಗಳು ತೋರಿದ ಕಾಳಜಿ ಬಹು ಮಹತ್ವದ ಅಂಶ. ಹಾಗಾಗಿಯೇ ಸಾವಿರಾರು ವರ್ಷಗಳು ಕಳೆದರೂ ನಮ್ಮ ನಾಡಿನ ಗುಡಿಸ್ಮಾರಕಗಳು ಇತಿಹಾಸದ ವೈಭವದ ಸಾಕ್ಷಿಯಾಗಿ ಉಳಿದುಬರಲು ಸಾಧ್ಯವಾಗಿದೆ. ಚಾಲುಕ್ಯರೂ ಹೊಯ್ಸಳರೂ ಕಟ್ಟಿದ ಇಂತಹ ದೇವಾಲಯಗಳನ್ನೆಲ್ಲ ಜೀರ್ಣೋದ್ಧಾರಮಾಡಿ ನಮ್ಮ ಕಾಲದವರೆಗೆ ಉಳಿಸಿಡುವಲ್ಲಿ ವಿಜಯನಗರದ ಅರಸರ ಪಾತ್ರವನ್ನು ಮರೆಯುವಂತೆಯೇ ಇಲ್ಲ.


ಬಾದಾಮಿ ಚಾಲುಕ್ಯರ ತರುವಾಯ ಆಡಳಿತ ನಡೆಸಿದ ರಾಷ್ಟ್ರಕೂಟರೂ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಅಂತಹ ಒಂದು ವಿಶಿಷ್ಟ ದೇವಾಲಯ ಗದಗ ಜಿಲ್ಲೆಯ ಸವಡಿಗ್ರಾಮದಲ್ಲಿದೆ. ಮೇಲೆ ಹೇಳಿದಂತೆ, ರಾಷ್ಟ್ರಕೂಟರಿಂದ ನಿರ್ಮಾಣವಾಗಿ ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರಾದಿಯಾಗಿ ಕಾಲದಿಂದ ಕಾಲಕ್ಕೆ ಪುನಶ್ಚೇತನವನ್ನು ಕಂಡ ಈ ಗುಡಿಯನ್ನು ಇತ್ತೀಚೆಗೆ ಪುರಾತತ್ವ ಇಲಾಖೆ ಜೀರ್ಣೋದ್ಧಾರಮಾಡಿದೆ.

ಗದಗದಿಂದ 28 ಕಿಮೀ ದೂರದಲ್ಲಿರುವ ಸವಡಿಗ್ರಾಮಕ್ಕೆ ತಲುಪಲು ತಾಲ್ಲೂಕುಕೇಂದ್ರವಾದ ರೋಣದಿಂದ ಹತ್ತು ಕಿಮೀ ಕ್ರಮಿಸಬೇಕು. ಹುಲಿಕಟ್ಟುವ ಆಟದ ವಿರಾಮತಾಣವೂ ಆಗಿರುವ ತಮ್ಮ ಹಳ್ಳಿಯ ಗುಡಿಗಳು ರಾಷ್ಟ್ರಕೂಟರ ಕಾಲದ ಶಿಲ್ಪಕಲೆಯ ಮಹತ್ವದ ಪ್ರತಿನಿಧಿಗಳೆಂದು ಸ್ಥಳೀಯರ ತಿಳುವಳಿಕೆಗೆ ನಿಲುಕಿದೆಯೋ ಇಲ್ಲವೋ, ದೇಗುಲಗಳನ್ನು ಅರಸಿಕೊಂಡು ಹೋದ ನಮ್ಮನ್ನಂತೂ ಪ್ರೀತಿಯಿಂದ ಸ್ವಾಗತಿಸಿ ಗುಡಿ, ಶಿಲ್ಪ, ಶಾಸನಗಳನ್ನೆಲ್ಲ ಉತ್ಸಾಹದಿಂದ ತೋರಿಸಿಕೊಟ್ಟರು. ಸವಡಿಯ ಬ್ರಹ್ಮೇಶ್ವರ ದೇವಾಲಯವು 970 ರಲ್ಲಿ ರಾಷ್ಟ್ರಕೂಟ ಅರಸ ಖೊಟ್ಟಿಗನಿಂದ ನಿರ್ಮಾಣವಾದುದು. ಮುಂದೆ 1085ರಲ್ಲಿ ಕಲ್ಯಾಣ ಚಾಲುಕ್ಯ ಸತ್ಯಾಶ್ರಯನಿಂದ ದತ್ತಿಪಡೆದ ಈ ದೇಗುಲವು 1471ರಲ್ಲಿ ವಿಜಯನಗರದ ಅರಸ ಎರಡನೆಯ ದೇವರಾಯನ ರಾಜಪ್ರತಿನಿಧಿ ಚೌಡನಾಯಕನಿಂದಲೂ ದಾನದತ್ತಿಗಳನ್ನು ಪಡೆದ ಬಗೆಗೆ ಶಾಸನವಿವರಗಳಿವೆ. ಹೀಗೆ ಐದುನೂರಕ್ಕೂ ಹೆಚ್ಚು ವರ್ಷಗಳ ಕಾಲ ದೇವಾಲಯವೊಂದು ನಿರಂತರವಾಗಿ ರಾಜಮನ್ನಣೆ ಪಡೆದುದು ಸಾಮಾನ್ಯಸಂಗತಿಯಲ್ಲ. ಆ ವೈಭವವೇನೂ ವರ್ತಮಾನದಲ್ಲಿ ಕಾಣಿಸದೆ ಹೋದರೂ ಐತಿಹಾಸಿಕ ಮಹತ್ವದಿಂದಲೂ ರಾಷ್ಟ್ರಕೂಟ ಶಿಲ್ಪಕಲೆಯ ಮಾದರಿಯ ದೃಷ್ಟಿಯಿಂದಲೂ ಸವಡಿಯ ದೇಗುಲವು ಸಂದರ್ಶನಯೋಗ್ಯವಾಗಿದೆ.

ಕಾಲಾಂತರದಲ್ಲಿ ಪ್ರವೇಶದ್ವಾರವನ್ನೂ ಹೊರಾವರಣವನ್ನೂ ಕಳೆದುಕೊಂಡಿರುವ ದೇಗುಲವನ್ನು ಪ್ರವೇಶಿಸುವಾಗಲೇ ವಿಸ್ತಾರವಾದ ನವರಂಗಮಂಟಪ ಎದುರಾಗುತ್ತದೆ. ಬೃಹತ್ತಾದ ಹತ್ತು ಕಂಬಗಳ ಸಾಲು ನಿಮ್ಮನ್ನು ಸ್ವಾಗತಿಸುತ್ತದೆ. ಮಂಟಪವಿಡೀ ಅರವತ್ತಕ್ಕೂ ಹೆಚ್ಚು ಕಂಬಗಳು. ಮುಂದೆ ನಕ್ಷತ್ರಾಕಾರದ ಅಂತರಾಳ ಮತ್ತು ಗರ್ಭಗುಡಿ. ಗರ್ಭಗುಡಿಯಲ್ಲಿ ದೊಡ್ಡ ಪಾಣಿಪೀಠವಿರುವ ಶಿವಲಿಂಗ. ಅದರ ಎಡಬಲಗಳಲ್ಲಿ ಬ್ರಹ್ಮ ಹಾಗೂ ವಿಷ್ಣುವಿನ ನಾಲ್ಕಡಿ ಎತ್ತರದ ವಿಗ್ರಹಗಳು. ಆದ್ದರಿಂದಲೇ ಈ ಗುಡಿಗೆ ತ್ರಿಮೂರ್ತೇಶ್ವರನೆಂದೂ ಹೆಸರು. ಬ್ರಹ್ಮ ವಿಷ್ಣುಗಳಿಬ್ಬರೂ ಸಾಲಂಕೃತ ಚತುರ್ಭುಜರು; ಸ್ಥಾನಕ (ಎಂದರೆ, ನಿಂತಿರುವ) ಮೂರ್ತಿಗಳು. ವಿಗ್ರಹದ ಮೇಲ್ಗಡೆಗೆ ಸಿಂಹಮುಖದ ಪ್ರಭಾವಳಿ. ವಿಷ್ಣುವಿನ ಶಿಲ್ಪದ ಪ್ರಭಾವಳಿಯಲ್ಲಿ ದೇವತಾಪರಿವಾರದವರಿದ್ದಾರೆ. ಬ್ರಹ್ಮನ ಎಡ ಅಂಗೈಯಲ್ಲಿ ಶಿವಲಿಂಗವಿರುವಂತೆ ಕಾಣುತ್ತದೆ. ಎರಡೂ ವಿಗ್ರಹಗಳ ಪಾದದೆಡೆಗೆ ಅಕ್ಕಪಕ್ಕಗಳಲ್ಲಿ ದೇವಿಯರಿದ್ದಾರೆ. ಅಂತರಾಳದಲ್ಲಿ ಚಿಕ್ಕದೊಂದು ನಂದಿ. ಹೊರಗಡೆ ಸರ್ಪದ ಪ್ರಭಾವಳಿಯಿರುವ ಪಾರ್ಶ್ವನಾಥನ ವಿಗ್ರಹವೂ ಇದೆ.

(ಚಿತ್ರಗಳು: ಲೇಖಕರವು)

ದೇವಾಲಯದ ಪ್ರದಕ್ಷಿಣೆ ಬರುವಾಗ ಕಟ್ಟಡದ ನಕ್ಷತ್ರಾಕಾರದ ವಿನ್ಯಾಸವನ್ನು ಸುಸ್ಪಷ್ಟವಾಗಿ ಗುರುತಿಸಬಹುದು. ಶಿಖರದ ಭಾಗ ಈಗ ಉಳಿದಿಲ್ಲ. ಕೆಳಹಂತದಿಂದ ಮೇಲಿನವರೆಗೆ ಭಿತ್ತಿಯ ಮೇಲೆ ವಿವಿಧ ಅಲಂಕರಣಗಳಿವೆ. ಕೆಳಗೋಡೆಯಲ್ಲಿ ಕಿರುಗೋಫುರಗಳೂ ಕೀರ್ತಿಮುಖವಿನ್ಯಾಸಗಳೂ ಪ್ರಮುಖವಾಗಿವೆ. ಅದಕ್ಕೂ ಮೇಲೆ ಕಂಬಗಳ ನಡುವೆ ಚೌಕಾಕಾರದ ಹರವುಗಳಲ್ಲಿ ಗಂಧರ್ವದಂಪತಿಯರೂ ಅನೇಕ ದೇವತೆಗಳೂ ಚಿತ್ರಿತರಾಗಿದ್ದಾರೆ. ನೆಲಹಂತದಿಂದ ಮೇಲೆದ್ದ ಕಂಬಗಳು ಸೂರನ್ನು ಮುಟ್ಟುವಲ್ಲಿ ತಾವರೆಯ ಹೂವಿನಂತಹ ಅಲಂಕಾರವಿದೆ. ನಾಟ್ಯಶಿವ, ಹಿರಣ್ಯಕಶಿಪುವಿನ ಕರುಳನ್ನು ಮಾಲೆಮಾಡಿಕೊಂಡ ನರಸಿಂಹ, ತ್ರಿವಿಕ್ರಮ, ರತಿಮನ್ಮಥ, ಗಣಪತಿ, ವರಾಹಾವತಾರಿ ವಿಷ್ಣು ಮೊದಲಾದ ಶಿಲ್ಪಗಳನ್ನು ಇಲ್ಲಿ ಚಿತ್ರಿಸಿದೆ.

ಬ್ರಹ್ಮೇಶ್ವರ ದೇವಾಲಯದ ಸನಿಹದಲ್ಲೇ ಇನ್ನೊಂದು ಪುರಾತನ ಗುಡಿಯಿದ್ದು ಪುರಾತತ್ವ ಇಲಾಖೆಯ ಶ್ರಮದಿಂದಾಗಿ ಪುನಶ್ಚೇತನಗೊಂಡಿದೆ. ಇಲ್ಲಿಯೂ ಪುರಾತನ ವಿಷ್ಣುವಿನ ಮೂರ್ತಿಯೊಂದಿದೆ. ಅಲ್ಲದೆ, ಶಿವಪಾರ್ವತಿಯರು, ಗಣೇಶ, ನಂದಿ, ಸಪ್ತಮಾತೃಕೆಯರ ಭಗ್ನಶಿಲ್ಪಗಳನ್ನೂ ಇಲ್ಲಿ ಇರಿಸಿದೆ.

ನೂತನ ಶಿಲಾಯುಗದ ಅವಶೇಷಗಳೂ ಈ ಗ್ರಾಮದಲ್ಲಿ ಸಿಕ್ಕಿವೆಯೆಂದಮೇಲೆ ಸವಡಿಯ ಐತಿಹಾಸಿಕ ಮೌಲ್ಯ ಮಿಗಿಲಾದುದೆಂದು ಬೇರೆ ಹೇಳುವುದೇನಿದೆ?